ಧೋನಿ ಉಳಿದ ಕಪ್ತಾನರಂತೆ ಯಾವುದೇ ಅಧಿಕೃತ ವಿದಾಯ ಬಯಸಲಿಲ್ಲ. ಸರಣಿ ನಡುವೆಯೇ ವಿದಾಯ ಹೇಳಿದರು. ಅದು ಕೂಡ ತನ್ನ ವಿದಾಯವನ್ನು ಮೊದಲು ತಿಳಿಸಿದ್ದು ಬಿಸಿಸಿಐಗೆ. ಸೋಲು-ಗೆಲವುಗಳ ಸಂದರ್ಭದಲ್ಲಿ ಹೇಗೋ, ಹಾಗೇ ನಿವೃತ್ತಿಯಲ್ಲೂ ಧೋನಿಯದು ಅದೇ ನಿರ್ಲಿಪ್ತ, ನಿರುಮ್ಮಳ ಭಾವ.
ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲೊಬ್ಬರಾದ ಮಹೇಂದ್ರಸಿಂಗ್ ಧೋನಿ ಈ ಪರಿ ಟೆಸ್ಟ್ ಕ್ರಿಕೆಟ್ನಿಂದ ನಿರ್ಗಮಿಸುವ ಹಠಾತ್ ನಿರ್ಧಾರ ಕೈಗೊಳ್ಳುತ್ತಾರೆಂದು ಯಾವ ಕ್ರಿಕೆಟ್ ತಜ್ಞರೂ ಊಹಿಸಿರಲಾರರು. ಕ್ರಿಕೆಟ್ ಹುಚ್ಚಿನ ಈ ದೇಶದಲ್ಲಿ ೨೦೧೪ರ ವರ್ಷಾಂತ್ಯದ ಬಹಳ ದೊಡ್ಡ ಬ್ರೇಕಿಂಗ್-ಶಾಕಿಂಗ್ ಸುದ್ದಿ ಇದು. ತಂಡದ ನಾಯಕನಾಗಿರುತ್ತಾ ವಿದೇಶೀ ಸರಣಿಯೊಂದರ ನಡುವೆಯೇ ನಾನಿನ್ನು ಟೆಸ್ಟ್ ಆಡುವುದಿಲ್ಲ ಅನ್ನುವ ಧೋನಿ ಶಸ್ತ್ರಸಂನ್ಯಾಸ ಅಭಿಮಾನಿಗಳಿಗೆ, ಕ್ರಿಕೆಟ್ಪ್ರಿಯರಿಗೆ ದಿಗ್ಭ್ರಮೆ ಉಂಟುಮಾಡಿದೆ. ಆತನ ಬ್ಯಾಟಿಂಗ್ ಇನ್ನೂ ಹೊಳಪು ಕಳೆದುಕೊಂಡಿರಲಿಲ್ಲ. ನಾಯಕತ್ವದ ಛಾಪು ಮಸುಕಾಗಿರಲಿಲ್ಲ. ಹೇಳಿಕೊಳ್ಳುವಂತಹ ಯಾವುದೇ ಗಂಭೀರ ವಿವಾದ ಆತನನ್ನು ಸುತ್ತಿಕೊಂಡಿರಲಿಲ್ಲ. ಹೀಗಿರುವಾಗಲೇ ಒಬ್ಬ ಕಪ್ತಾನ ಏಕಾಏಕಿ ವಿದಾಯ ಹೇಳುತ್ತಾನೆಂದರೆ, ಅದು ಅಚ್ಚರಿ, ಊಹಾಪೋಹ ಸೃಷ್ಟಿಸದೇ ಇರುತ್ತದೆಯೇ?
ಅನುಪಮ ಸಾಧನೆ
ಜಾರ್ಖಂಡ್ ರಾಜ್ಯದ ರಾಂಚಿಯೆಂಬ ಪುಟ್ಟ ಪಟ್ಟಣದಿಂದ ಎದ್ದು ಬಂದು, ೬೦ ಟೆಸ್ಟ್ಗಳಲ್ಲಿ ‘ಟೀಂ ಇಂಡಿಯ’ವನ್ನು ಮುನ್ನಡೆಸಿ ೨೭ ಗೆಲವು, ೧೫ ಡ್ರಾಗಳನ್ನು ಸಾಧಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವನ್ನು ನಂ. ೧ ಸ್ಥಾನಕ್ಕೇರಿಸಿದ ಅಪರೂಪದ ಪ್ರತಿಭೆ. ವಿಕೆಟ್ ಹಿಂದೆ ನಿಂತು ೨೯೪ ಅತೀ ಹೆಚ್ಚು ಔಟ್ ಮಾಡಿದ ಭಾರತದ ನಂ. ೧ ವಿಕೆಟ್ ಕೀಪರ್. ವಿಶ್ವದ ಐದನೇ ವಿಕೆಟ್ ಕೀಪರ್. ವಿಕೆಟ್ ಹಿಂದೆ ೨೪೮ ಕ್ಯಾಚ್ ಗಳಿಸಿದ ಯಶಸ್ವಿ ಕೀಪರ್. ನಾಯಕನಾಗಿ ತಂಡ ಗೆದ್ದ ಪಂದ್ಯಗಳಲ್ಲಿ ಗರಿಷ್ಠ ೧೨ ಸ್ಟಂಪ್ ಮಾಡಿದ ವಿಶ್ವ ದಾಖಲೆ. ಪಾಕಿಸ್ತಾನದ ವಿರುದ್ಧ ೧೪೮ ಗರಿಷ್ಠ ರನ್ ಗಳಿಸಿದ ಏಕೈಕ ಭಾರತೀಯ ವಿಕೆಟ್ ಕೀಪರ್. ಸತತ ೧೧ ಟೆಸ್ಟ್ ಪಂದ್ಯಗಳಲ್ಲಿ ತಂಡಕ್ಕೆ ಗೆಲವು ತಂದುಕೊಟ್ಟ ನಾಯಕ. ಏಕದಿನ ಹಾಗೂ ಟಿ-೨೦ ವಿಶ್ವಕಪ್ಗಳೆರಡಲ್ಲೂ ಭಾರತ ತಂಡಕ್ಕೆ ಗೆಲವು ತಂದುಕೊಟ್ಟ ಏಕೈಕ ನಾಯಕ… ಹೀಗೆ ಧೋನಿಯ ಸುತ್ತ ಬಿಚ್ಚಿಕೊಳ್ಳುವ ದಾಖಲೆಗಳು ಹಲವಾರು. ಭಾರತದ ಇದುವರೆಗಿನ ಕಪ್ತಾನರ ಪೈಕಿ ಇಂತಹ ಅನುಪಮ ಸಾಧನೆ ಮಾಡಿದವರು ಯಾರೂ ಇಲ್ಲ.
ಧೋನಿ ಮೊನ್ನೆಮೊನ್ನೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಂತೆ ಅನಿಸುತ್ತಿದೆ. ಧೋನಿ ಸ್ಟಂಪ್ನ ಹಿಂದೆ ಮತ್ತು ಮುಂದೆ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಧೋನಿಯನ್ನು ಶ್ಲಾಘಿಸಿದ್ದರೆ, ಆತನೊಬ್ಬ ಶ್ರೇಷ್ಠ ಸ್ಪರ್ಧಾಳು. ಭಾರತೀಯ ಕ್ರಿಕೆಟ್ ಧೋನಿಯಿಂದ ಬಹುದೊಡ್ಡ ಪ್ರಮಾಣದಲ್ಲಿ ಉಪಕೃತವಾಗಿದೆ – ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಬಿಸಿಸಿಐನ ನಿರ್ದೇಶಕ ರವಿಶಾಸ್ತ್ರಿಯಂತೂ ಎಂ.ಎಸ್. ಭಾರತ ಕಂಡ ಅತ್ಯಂತ ಯಶಸ್ವಿ ಕಪ್ತಾನ. ಮೂರೂ ಮಾದರಿಯ ಕ್ರಿಕೆಟ್ನಲ್ಲಿ ದೇಶವನ್ನು ಉನ್ನತಿಗೇರಿಸಿದ ಅಪರೂಪದ ನಾಯಕ – ಎಂದು ಹೊಗಳಿದ್ದಾರೆ. ಧೋನಿ ಚಾಂಪಿಯನ್ಸ್ ಟ್ರೋಫಿ, ಐಪಿಎಲ್, ಚಾಂಪಿಯನ್ಸ್ ಲೀಗ್ ಇತ್ಯಾದಿ ಎಲ್ಲ ಪಂದ್ಯಗಳನ್ನೂ ಗೆದ್ದುಕೊಟ್ಟಿದ್ದಾರೆ. ಇನ್ನು ಆತ ಗೆದ್ದು ಕೊಡುವಂತಹದು ಏನೂ ಉಳಿದಿಲ್ಲ ಎಂಬ ಮಾತನ್ನು ಹೇಳಿದವರೂ ಇದೇ ರವಿಶಾಸ್ತ್ರಿ.
ಇಷ್ಟೆಲ್ಲ ಗೆಲವುಗಳನ್ನು ತಂದುಕೊಟ್ಟ ಹೆಗ್ಗಳಿಕೆ ಇದ್ದರೂ ಧೋನಿ ಮಾತ್ರ ನಿರುಮ್ಮಳ, ನಿರ್ಲಿಪ್ತ, ನಿರುದ್ವಿಗ್ನ ವ್ಯಕ್ತಿ. ಅದು ಟಿ-೨೦ ವಿಶ್ವಕಪ್ ಗೆದ್ದಾಗಲಾಗಲಿ, ಏಕದಿನ ವಿಶ್ವಕಪ್ ಗೆದ್ದಾಗಲಾಗಲಿ ಧೋನಿಯ ವರ್ತನೆ ಅತ್ಯಂತ ಶಾಂತ, ಸಹಜವಾದುದಾಗಿತ್ತು. ಗಂಗೂಲಿಯಂತೆ ಗೆದ್ದಾಗ ಶರ್ಟ್ ಬಿಚ್ಚಿ ಗಾಳಿಯಲ್ಲಿ ಹಾರಾಡಿಸಲಿಲ್ಲ. ಕೊಹ್ಲಿಯಂತೆ ಕಿರುಚಾಡಲಿಲ್ಲ. ಕೊನೇ ಪಕ್ಷ ಜೋರಾಗಿ ನಗಲೂ ಇಲ್ಲ. ತಂಡ ಸೋತಾಗ ಮೌನವಾಗಿ ಹೇಗೆ ಪೆವಿಲಿಯನ್ಗೆ ಮರಳಿ ಬರುತ್ತಿದ್ದನೋ ಗೆದ್ದಾಗಲೂ ಅದೇ ನಿರ್ಲಿಪ್ತ ಭಾವದಿಂದ ಜೊತೆಗಾರರೊಂದಿಗೆ ಪೆವಿಲಿಯನ್ಗೆ ಮರಳುತ್ತಿದ್ದ ವ್ಯಕ್ತಿ. ಇಷ್ಟೊಂದು ಸಭ್ಯ ನಡವಳಿಕೆಯ ಕ್ರಿಕೆಟ್ ಕಪ್ತಾನ ಹುಡುಕಿದರೂ ಜಗತ್ತಿನಲ್ಲಿ ಸಿಗಲಿಕ್ಕಿಲ್ಲ. ಸೋಲು-ಗೆಲವು ಎರಡನ್ನೂ ಸಮಾನಭಾವದಿಂದ ಸ್ವೀಕರಿಸಿದ ನಾಯಕ ಆತ. ಅದಕ್ಕೇ ಭಾರತ ತಂಡದ ಕೋಚ್ ಆಗಿದ್ದ ಗ್ಯಾರಿ ಕಿರ್ಸ್ಟನ್ ಹೇಳಿದ್ದು: ಆತನಿಗೊಂದು ಗನ್, ಒಂದು ಬಾಣ ಅಥವಾ ಯಾವುದೇ ಆಯುಧ ಅಥವಾ ಮೀನು ಹಿಡಿಯುವ ಗಾಳ ಅಥವಾ ಯಾವುದಾದರೊಂದು ಮೋಟಾರ್ ಬೈಕ್ ಇಲ್ಲವೇ ಏರೋಪ್ಲೇನ್ ಕೊಟ್ಟು ನೋಡಿ, ಆತನ ಕಣ್ಣುಗಳು ಮಿಂಚಿನಂತೆ ಮಿನುಗುತ್ತವೆ. ಆದರೆ ಕ್ರಿಕೆಟ್ ಮ್ಯಾಚ್ ಗೆದ್ದಾಗ ಆತನ ಕಣ್ಣುಗಳು ಆ ಪರಿ ಮಿನುಗಿದ್ದನ್ನು ನಾನು ಕಂಡಿಲ್ಲ.
ಗ್ಯಾರಿ ಕಿರ್ಸ್ಟನ್ನ ಈ ಹೇಳಿಕೆ ನಿಜವೂ ಹೌದು. ಧೋನಿಯ ಬಳಿ ೩೫ ವಿವಿಧ ಮಾಡೆಲ್ನ ಬೈಕ್ಗಳಿವೆ. ಬೈಕ್ಗಳನ್ನು ಓಡಿಸುವುದೆಂದರೆ ಧೋನಿಗೆ ಬಲು ಇಷ್ಟ. ಕ್ರಿಕೆಟ್ಗಿಂತ ಮುಂಚೆ ಧೋನಿ ಫುಟ್ಬಾಲ್ ಆಟಗಾರನಾಗಿದ್ದ ಎಂಬುದು ಅನೇಕರಿಗೆ ಗೊತ್ತಿಲ್ಲ. ಆ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ ಮಾತ್ರ ಆ ವಿಷಯ ಬಿಟ್ಟುಬಿಡಿ. ಅದರ ಬಗ್ಗೆ ಹೇಳಲು ನನಗೆ ಬೋರ್ ಆಗುತ್ತದೆ ಎನ್ನುತ್ತಾರೆ ಧೋನಿ.
ಗುಣನಿಚ್ಚಳ
ರಾಂಚಿಯ ಮೆಕನ್ ಲಿಮಿಟೆಡ್ ಕಂಪೆನಿಯಲ್ಲಿ ಒಬ್ಬ ಸಾಧಾರಣ ಪಂಪ್ ಆಪರೇಟರ್ ಆಗಿದ್ದ ಧೋನಿಯ ತಂದೆ, ತನ್ನ ಮಗ ಈ ಮಟ್ಟಕ್ಕೆ ಮುಟ್ಟುತ್ತಾನೆಂದು ಖಂಡಿತ ನಿರೀಕ್ಷಿಸಿರಲಿಲ್ಲ. ಆದರೆ ಧೋನಿ ಒಂದೊಂದೇ ಮೆಟ್ಟಿಲು ಏರುತ್ತಾ ಕೊನೆಗೆ ಟೀಂ ಇಂಡಿಯಾದ ಕಪ್ತಾನಗಿರಿಗೇರಿದ್ದು ಒಂದು ದೊಡ್ಡ ಸಾಹಸಗಾಥೆಯೇ ಸರಿ. ಧೋನಿಯ ಈಗಿನ ವಾರ್ಷಿಕ ಆದಾಯ ಸುಮಾರು ೧೭೭ ಕೋಟಿ ರೂ. ಜಾರ್ಖಂಡ್ನಲ್ಲಿ ಅತೀ ಹೆಚ್ಚು ತೆರಿಗೆ ಪಾವತಿಸುವ ವ್ಯಕ್ತಿ ಈತನೇ. ಚಿಕ್ಕಂದಿನಲ್ಲಿ ಆತ ವಾಸವಾಗಿದ್ದುದು ಎರಡು ಕೋಣೆಗಳ ಚಿಕ್ಕ ಮನೆಯೊಂದರಲ್ಲಿ. ಆದರೀಗ ಪೆಪ್ಸಿ, ಏರ್ಸೆಲ್, ಟಿವಿಎಸ್ ಮೋಟಾರ್ಸ್, ಟೈಟಾನ್ ಮೊದಲಾದ ಒಂದು ಡಜನ್ಗಿಂತಲೂ ಹೆಚ್ಚು ಕಂಪೆನಿಗಳಿಗೆ ಆತ ಬ್ರಾಂಡ್ ಅಂಬಾಸಿಡರ್. ಕಳೆದ ವರ್ಷ ಫೋರ್ಬ್ಸ್ ಪತ್ರಿಕೆ ಧೋನಿಯನ್ನು ಕ್ರೀಡಾಕ್ಷೇತ್ರದ ಐದನೇ ಗಣ್ಯ ಕ್ರೀಡಾಪಟು ಎಂದು ಗುರುತಿಸಿತ್ತು. ಕ್ರಿಶ್ಚಿಯಾನೋ ರೊನಾಲ್ಡೋ ಮತ್ತು ರಾಫೆಲ್ ನಡಲ್ಗಿಂತ ಈ ಪಟ್ಟಿಯಲ್ಲಿ ಧೋನಿ ಅಗ್ರಗಣ್ಯನಾಗಿ ಮಿಂಚಿದ್ದು ವಿಶೇಷ. ಧೋನಿ ಇನ್ನಷ್ಟು ಕಂಪೆನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವ ಅವಕಾಶವಿತ್ತು. ಆದರೆ ಸಮಯಾಭಾವದಿಂದ ಅವರು ಅದನ್ನೆಲ್ಲ ನಿರಾಕರಿಸಿದರೆಂದು ಧೋನಿಯ ವ್ಯವಹಾರಗಳನ್ನು ನೋಡಿಕೊಳ್ಳುವ ಅರುಣ್ ಪಾಂಡೆ ಹೇಳುತ್ತಾರೆ. ಧೋನಿಗೆ ಹೆಚ್ಚು ಹಣ ಗಳಿಸುವ ವ್ಯಾಮೋಹ ಖಂಡಿತ ಇಲ್ಲ ಎನ್ನುವುದು ಪಾಂಡೆಯ ಅಭಿಮತ.
ಧೋನಿ ಆಟದಲ್ಲೂ ಅಷ್ಟೆ. ಹಠಾತ್ ನಿರ್ಧಾರ ತೆಗೆದುಕೊಳ್ಳುವುದು ಅವರ ಶೈಲಿ ಅಥವಾ ಅವರ ವ್ಯಕ್ತಿತ್ವದ ಒಂದಂಶವಾಗಿತ್ತು. ಇನ್ಸ್ಟಂಟ್ ಆಗಿರುವುದು ಧೋನಿ ವ್ಯಕ್ತಿತ್ವದ ಒಂದು ಭಾಗ. ಏಕದಿನ ಕ್ರಿಕೆಟ್ನಲ್ಲಂತೂ ಅವರ ಈ ಕ್ಷಿಪ್ರ, ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ನಿಚ್ಚಳವಾಗಿ ಹೊಳೆಯುತ್ತದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಕೊನೆಯ ದಿನ. ಗೆಲ್ಲಲು ಭಾರತ ೬ ವಿಕೆಟ್ ಇನ್ನೂ ಗಳಿಸಬೇಕಿತ್ತು. ವೇಗಿ ಇಶಾಂತ್ ಶರ್ಮಾಗೆ ಬಾಲ್ ನೀಡಿದ ಧೋನಿ ಬ್ಯಾಟ್ಸ್ಮನ್ಗಳನ್ನು ಬೌನ್ಸರ್ ಎಸೆದು ಕಟ್ಟಿಹಾಕಲು ಸಲಹೆ ನೀಡಿದರು. ಆಶ್ಚರ್ಯ! ಇಂಗ್ಲೆಂಡ್ ನಾಟಕೀಯವಾಗಿ ಕುಸಿದು, ಭಾರತಕ್ಕೆ ೯೫ ರನ್ಗಳ ವಿಜಯ ಪ್ರಾಪ್ತಿ. ಇಶಾಂತ್ ಶರ್ಮಾ ಆ ಇನ್ಸಿಂಗ್ನಲ್ಲಿ ಜೀವನ ಶ್ರೇಷ್ಠ ೭೪ ರನ್ಗೆ ೭ ವಿಕೆಟ್ ಗಳಿಸಿ ದಾಖಲೆ ಸಾಧಿಸಿದ್ದರು. ಪಂದ್ಯ ಮುಗಿದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅವರು ಹೇಳಿದ್ದು: ಈ ಎಲ್ಲ ವಿಕೆಟ್ಗಳಿಕೆಯ ಕ್ರೆಡಿಟ್ ಸಲ್ಲಬೇಕಾಗಿದ್ದು ನನಗಲ್ಲ, ನನ್ನ ಕ್ಯಾಪ್ಟನ್ಗೆ.
ಧೋನಿ ಉಳಿದ ಕಪ್ತಾನರಂತೆ ಯಾವುದೇ ಅಧಿಕೃತ ವಿದಾಯ ಬಯಸಲಿಲ್ಲ. ಸರಣಿ ನಡುವೆಯೇ ವಿದಾಯ ಹೇಳಿದರು. ಅದು ಕೂಡ ತನ್ನ ವಿದಾಯವನ್ನು ಮೊದಲು ತಿಳಿಸಿದ್ದು ಬಿಸಿಸಿಐಗೆ. ಬಿಸಿಸಿಐ ಅನಂತರ ಧೋನಿಯ ನಿವೃತ್ತಿಯನ್ನು ಬಹಿರಂಗಪಡಿಸಿತು.
ಧೋನಿ ಹೀಗೇಕೆ ಮಾಡಿದರು? ಈ ದಿಢೀರ್ ನಿರ್ಗಮನದ ಹಿಂದೆ ದೊಡ್ಡ ಸಮಸ್ಯೆಯೇನಾದರೂ ಇತ್ತೆ? ಅಥವಾ ತಾನು ಸಾಕಷ್ಟು ಸಾಧಿಸಿದ್ದೇನೆ, ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಸಾಧಿಸುವುದೇನೂ ಇಲ್ಲ ಎಂದು ಅನಿಸಿತೆ? ಒಟ್ಟಾರೆ ಸೋಲು-ಗೆಲವುಗಳ ಸಂದರ್ಭದಲ್ಲಿ ಹೇಗೋ ಹಾಗೇ ನಿವೃತ್ತಿಯಲ್ಲೂ ಧೋನಿಯದು ಅದೇ ನಿರ್ಲಿಪ್ತ, ನಿರುಮ್ಮಳ ಭಾವ.
ಧೋನಿ ‘ಕೂಲ್ ಕಪ್ತಾನ’ ಎಂಬ ಮಾತು ಅದೆಷ್ಟು ನಿಜ, ಅಲ್ಲವೆ??