ಗಾಂಧಿಯವರು ಭಾರತೀಯ ಅರ್ಥವ್ಯವಸ್ಥೆಯಲ್ಲಿ ಅತಿ ನವಿರಾದ ತಂತ್ರಜ್ಞಾನದ ಉಪಯೋಗವನ್ನು ವಿರೋಧಿಸಿದ್ದರು. ಎಲ್ಲಿ ಅಮಿತವಾದ ’ಮಾನವಶಕ್ತಿ’ ಇರುವುದೋ ಅಲ್ಲಿ ಜಟಿಲವಾದ ಯಂತ್ರಗಳನ್ನು ದೊಡ್ಡಪ್ರಮಾಣದಲ್ಲಿ ಬಳಸಲು ಅವಕಾಶ ಇಲ್ಲ. ಪ್ರತಿಯೊಂದು ದೇಶವೂ ತನಗೆ ಅಗತ್ಯವಾದ ಯಂತ್ರಗಳ ಬಳಕೆಯನ್ನು ಮಾತ್ರ ಮಾಡಬೇಕು. ಭಾರತವೇನಾದರೂ ಪಾಶ್ಚಿಮಾತ್ಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿದರೆ ನಿರುದ್ಯೋಗದ ಪ್ರಮಾಣವು ಹೆಚ್ಚುವುದು. ಅಗತ್ಯವಿಲ್ಲದಿದ್ದರೂ ಯಂತ್ರಗಳು ಮಾನವರನ್ನು ತನ್ನ ಸಹಜ ನಿಯಮದ ಪ್ರಕಾರ ಸ್ಥಾನಪಲ್ಲಟ ಮಾಡುತ್ತದೆ (Man vs
Machine, cover page).
ಪ್ರತಿಯೊಂದು ದೇಶವೂ ತನಗೆ ಸೂಕ್ತವಾದ ’ಬಂಡವಾಳ ಸಾಂದ’ (Capitil Intensive) ಅಥವಾ ’ಶ್ರಮಸಾಂದ್ರ’ (Labour Intensive) ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವಿಶೇಷ ಪರಿಸರದಲ್ಲಿರುವ ಒಂದು ದೇಶಕ್ಕೆ ಒಳ್ಳೆಯದಾದ ತಂತ್ರಜ್ಞಾನವು ಇನ್ನೊಂದು ವಿಶೇಷ ಪರಿಸರದಲ್ಲಿರುವ ಇನ್ನೊಂದು ದೇಶಕ್ಕೆ ಸರಿಹೊಂದದು. ಏಕೆಂದರೆ ಒಬ್ಬ ಮನುಷ್ಯನ ಆಹಾರ ಇನ್ನೊಬ್ಬನಿಗೆ ವಿ?ವಿದ್ದಂತೆ. ಆಯಾ ದೇಶದ ಭೌಗೋಳಿಕ ಪರಿಸ್ಥಿತಿ ಅಲ್ಲಿನ ಸಂಸ್ಕೃತಿಯನ್ನು ನಿರ್ಧರಿಸುತ್ತದೆ (Ibid, p. 43).
ಭಾರತದ ಭೌತಿಕ ಪರಿಸರ ವಿಭಿನ್ನವಾಗಿದ್ದರೂ ಪಾಶ್ಚಿಮಾತ್ಯ ದೇಶಗಳಿಗೆ ಅನ್ವಯವಾಗುವುದೆಲ್ಲವೂ ಈ ದೇಶಕ್ಕೆ ಅನ್ವಯವಾಗುತ್ತದೆ ಎಂಬ ಆತುರದ ನಿರ್ಧಾರಕ್ಕೆ ಪಾಶ್ಚಿಮಾತ್ಯ ವೀಕ್ಷಕರು ಬಂದಿದ್ದಾರೆ. ಆದರೆ ನಿಜವಾಗಿ ಅರ್ಥಶಾಸ್ತ್ರದ ನಿಯಮಗಳನ್ನು ಆಯಾದೇಶದ ಪರಿಸರಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.
ಸರ್ ಎಂ. ವಿಶ್ವೇಶ್ವರಯ್ಯನವರಿಗೆ ದಿನಾಂಕ ೧೦.೧೨.೧೯೩೪ರಲ್ಲಿ ಬರೆದ ಪತ್ರದಲ್ಲಿ ಗಾಂಧಿಯವರು “ಬೃಹತ್ ಕೈಗಾರಿಕೆಗಳಿಗೆ ನನ್ನ ಸಮರ್ಥನೆ ನೀಡಲು ಯಾವ ಅಭ್ಯಂತರವೂ ಇಲ್ಲ. ಆದರೆ ನನ್ನ ಪ್ರಕಾರ ಬೃಹತ್ ಕೈಗಾರಿಕೆಗಳನ್ನು ವಿದ್ಯುತ್ಚಾಲಿತ ಶಕ್ತಿಯ ಬಳಕೆ ಇಲ್ಲದೆ ಪ್ರಾರಂಭಿಸಲು ಸಾಧ್ಯವಿಲ್ಲ. ಅಂತಹ ಯಂತ್ರಗಳ ಬಳಕೆಗೆ ನನ್ನ ವಿರೋಧವಿಲ್ಲ. ಆದರೆ ಯಾವ ಯಂತ್ರಗಳ ಬಳಕೆಯಿಂದ ’ಮಾನವ ಶಕ್ತಿಯ ಬಳಕೆ’ ಸ್ಥಾನಪಲ್ಲಟಗೊಂಡು ಮಾನವನ ಕೈಗಳಿಗೆ ಯಾವುದೇ ಪರ್ಯಾಯ ಉದ್ಯೋಗ ದೊರಕುವುದಿಲ್ಲವೋ ಅಂತಹ ಯಂತ್ರಗಳ ಬಳಕೆಗೆ ನನ್ನ ವಿರೋಧವಿದೆ” ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಯಂತ್ರಗಳ ಸ್ಥಾನ
ಮಾನವರ ಕಲ್ಯಾಣಕ್ಕಾಗಿ ಮಾಡಿದ ಎಲ್ಲ ರೀತಿಯ ಸಂಶೋಧನೆಗಳನ್ನು ನಾನು ಪುರಸ್ಕರಿಸುತ್ತೇನೆ. ಸಂಶೋಧನೆ ಮತ್ತು ಆವಿಷ್ಕಾರಗಳ ನಡುವೆ ಅಂತರವಿದೆ. ಸಾಮೂಹಿಕವಾಗಿ ಜನರನ್ನು ಕೊಲ್ಲಲು ಉಪಯೋಗಿಸುವ ಉಸಿರುಗಟ್ಟಿಸುವ ಅನಿಲಗಳ ಸಂಶೋಧನೆಗೆ ಧಿಕ್ಕಾರವಿರಲಿ.
ಕೆಲವು ಸಂದರ್ಭಗಳಲ್ಲಿ ಮಾನವಕೈಗಳಿಂದ ಕೆಲವು ಕೆಲಸಗಳನ್ನು ಮಾಡಲು ಸಾಧ್ಯವಿಲ. ಉದಾಹರಣೆಗೆ ಮುದ್ರಣಯಂತ್ರಗಳು, ಶಸ್ತ್ರಚಿಕಿತ್ಸೆ ಮಾಡಲು ಉಪಯೋಗಿಸುವ ಸಾಧನಸಲಕರಣೆಗಳು ಇತ್ಯಾದಿ. ಇಂತಹ ಸಂದರ್ಭದಲ್ಲಿ ಬೃಹತ್ಯಂತ್ರಗಳ ಬಳಕೆ ಅನಿವಾರ್ಯ. ಬೃಹತ್ಯಂತ್ರಗಳು ಸಾರ್ವಜನಿಕ ವಲಯದಲ್ಲಿ ಕಾರ್ಯಮಾಡಬೇಕು. ಅವುಗಳು ಸರ್ಕಾರದ ಒಡೆತನಕ್ಕೆ ಸೇರಿ ಎಲ್ಲರ ಒಳಿತಿಗಾಗಿ ಉಪಯೋಗವಾಗಬೇಕು (ಹರಿಜನ, ೨೨-೬-೧೯೩೫ ಪು. ೧೪೬).
ಪಾಶ್ಚಿಮಾತ್ಯ ವಿಧಾನಗಳು, ಪಾಶ್ಚಿಮಾತ್ಯ ಯಂತ್ರಗಳು ಮತ್ತು ಪಾಶ್ಚಿಮಾತ್ಯ ನಾಗರಿಕತೆಯನ್ನು ನಾನು ಒಪ್ಪುವುದಿಲ್ಲ. ಭಾರತದೇಶ ಯಾಂತ್ರೀಕರಣವಾಗುವುದನ್ನು ನಾನು ಒಪ್ಪುವುದಿಲ್ಲ. ಪಾಶ್ಚಿಮಾತ್ಯ ಯಂತ್ರಗಳ ಸಹಾಯವಿಲ್ಲದೆಯೇ ಭಾರತದ ಗ್ರಾಮೀಣ ಅಭಿವೃದ್ಧಿ ಮತ್ತೆ ಸಾಧ್ಯ ಎನ್ನುವುದು ನನ್ನ ಖಚಿತ ಅಭಿಪ್ರಾಯ. ಭಾರತ ಸ್ವತಂತ್ರಗೊಂಡ ನಂತರ ಯುದ್ಧತಂತ್ರದ ಭಾಗವಾಗಿ ಅಭಿವೃದ್ಧಿಗೊಂಡ ಮತ್ತು ಈಗ ಸಾರ್ವತ್ರಿಕವಾಗಿ ಬಳಸುತ್ತಿರುವ ರೈಲ್ವೇ ವಿಭಾಗವನ್ನು ಸಾರಾಸಗಟಾಗಿ ತೆಗೆದುಹಾಕುವುದರ ಬದಲಿಗೆ ರಾ?ಹಿತಕ್ಕಾಗಿ ಅದನ್ನು ನಾವು ಇಂದು ಬಳಸಬೇಕು (Harijan, 3-7-1937, Conversation
with Cap. Strunk).
ಯಂತ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಅವು ನಮ್ಮ ಜೀವನದ ಭಾಗವಾಗಿ ಹೋಗಿವೆ. ಆದರೆ ಯಾವುದೇ ಕಾರಣಕ್ಕೂ ಯಂತ್ರಗಳು ಮಾನವನ ಶ್ರಮವನ್ನು ಸ್ಥಾನಪಲ್ಲಟ ಮಾಡಬಾರದು. ಸುಧಾರಿತ ನೇಗಿಲು ನಿಜವಾಗಿಯೂ ಒಳ್ಳೆಯದು. ಆದರೆ ಯಾರಾದರೊಬ್ಬ ಮನು? ತನ್ನ ಯಾಂತ್ರಿಕ ಸಂಶೋಧನೆಯಿಂದ ಕಂಡುಹಿಡಿದ ಹೊಸ ನೇಗಿಲಿನ ಮೂಲಕ ಭಾರತದ ಸಂಪೂರ್ಣ ಭೂಮಿಯನ್ನು ಉಳುಮೆ ಮಾಡುವಂತಾದರೆ ಮತ್ತು ಇಡೀ ಕೃಷಿ ಉತ್ಪನ್ನಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡರೆ ಆಗ ಲಕ್ಷಾಂತರ ರೈತರು ಉದ್ಯೋಗವಿಲ್ಲದೆ ಹಸಿವಿನಿಂದ ಸಾಯುತ್ತಾರೆ ಮತ್ತು ಅನೇಕರು ಮಂದಮತಿಗಳಾಗುತ್ತಾರೆ. ನಿರುದ್ಯೋಗದ ಕಾರಣದಿಂದ ಪ್ರತಿ ಗಂಟೆಗೂ ಅನೇಕರು ಈ ಸ್ಥಿತಿಯನ್ನು ತಲಪುವ ಗಂಡಾಂತರವಿದೆ. ಮಾನವನ ’ಹಸ್ತಶ್ರಮ’ವನ್ನು ಪಲ್ಲಟಗೊಳಿಸಿ ಲಕ್ಷಾಂತರ ರೈತರಿಗೆ ಬದಲಿ ಉದ್ಯೋಗಗಳನ್ನು ಅವರ ಮನೆಗಳಲ್ಲಿ ನಿರ್ಮಿಸದೆ ಶಕ್ತಿಚಾಲಿತ ಯಂತ್ರಗಳ ಉಪಯೋಗ ಮಾಡಿದರೆ ನನ್ನ ದೃಷ್ಟಿಯಲ್ಲಿ ಅದು ಅಪರಾಧ ಮಾಡಿದ ಹಾಗಾಗುತ್ತದೆ. ಆದ್ದರಿಂದ ಇಂತಹ ಪರಿಸರದಲ್ಲಿ ಗುಡಿಕೈಗಾರಿಕೆಗಳಲ್ಲಿ ಉಪಯೋಗಿಸುವ ಎಲ್ಲ ರೀತಿಯ ಉಪಕರಣಗಳ ಸುಧಾರಣೆಯನ್ನು ನಾನು ಸ್ವಾಗತಿಸುತ್ತೇನೆ (ಯಂಗ್ ಇಂಡಿಯಾ, ೫-೧-೧೯೨೫, ಪು. ೩೭೭).
ಅತ್ಯಂತ ವಿಸ್ತೃತವಾದ ಯಂತ್ರಗಳು ನಮ್ಮ ದೇಶದ ನಿರ್ಗತಿಕಸ್ಥಿತಿಯನ್ನು ಮತ್ತು ಅದರಿಂದ ಉಂಟಾದ ಸೋಮಾರಿತನವನ್ನು ದೂರಮಾಡುವ ಹಾಗಿದ್ದರೆ ಅವುಗಳ ಬಗ್ಗೆ ನನ್ನ ಒಲವನ್ನು ತೋರುತ್ತೇನೆ. ನಮ್ಮ ದೇಶದಿಂದ ಕಡುಬಡತನವನ್ನು, ಕೆಲಸದ ಬರವನ್ನು ದೂರಮಾಡಿ ಸಂಪತ್ತನ್ನು ಹೆಚ್ಚಿಸುವ ಏಕೈಕ ಸಾಧನವೆಂದರೆ ಕೈಗಳಿಂದ ನೂಲುತೆಗೆಯುವುದು ಎಂಬ ಸಲಹೆಯನ್ನು ನಾನು ಈಗಾಗಲೆ ನೀಡಿದ್ದೇನೆ. ನೂಲುವ ಯಂತ್ರವೇ ಒಂದು ಬೆಲೆಬಾಳುವ ಯಂತ್ರದ ಭಾಗವಾಗಿದೆ. ಭಾರತದ ವಿಶೇ? ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನನ್ನದೇ ಆದ ನಮ್ರಭಾವದಿಂದ ಅದರ ಸುಧಾರಣೆ ಮಾಡುವ ಪ್ರಯತ್ನ ಮಾಡಿದೆ (ಯಂಗ್ ಇಂಡಿಯಾ, ೩-೧೧-೧೯೨೧, ಪು. ೩೫೦).
ಅಸಹಕಾರ ಚಳವಳಿಯ ಸಂದರ್ಭದಲ್ಲಿ ಬ್ರಿಟಿ? ಸರ್ಕಾರ ರಾಷ್ಟ್ರೀಯ ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸಿದಾಗ ಗಾಂಧಿಯವರು ’ಯಂಗ್ ಇಂಡಿಯಾ’ದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಈ ರೀತಿ ಇದೆ: “ನಾವು ಯಂತ್ರ ಮತ್ತು ಸೀಸದ ಅಚ್ಚಿನ ಮೊಳೆಗಳ ಮೇಲಿನ ಪ್ರೀತಿಯನ್ನು ಮೋಹವನ್ನು ತೊಡೆದುಹಾಕೋಣ. ಲೇಖನಿ ನಮ್ಮ ಎರಕವಾಗಲಿ. ಅದನ್ನು ಪ್ರತಿಮಾಡಲು ಬಯಸುವ ಕೈಗಳು ಅಚ್ಚುಯಂತ್ರಗಳಾಗಲಿ. ವ್ಯಕ್ತಿಪೂಜೆ ಯಾವುದೇ ಧ್ಯೇಯದ ಸಾಧನೆಗೆ ಪೂರಕವಾಗಿದ್ದರೆ ಅದಕ್ಕೆ ಹಿಂದೂಧರ್ಮದಲ್ಲಿ ಅವಕಾಶವಿದೆ. ಆದರೆ ವ್ಯಕ್ತಿಯೇ ಧ್ಯೇಯವಾಗಿಬಿಟ್ಟರೆ ಅದು ಅಂಥ ಭಕ್ತಿಯ ಪಾಪವಾಗುತ್ತದೆ. ನಮ್ಮ ಆಲೋಚನೆಗಳನ್ನು ಉಪಯೋಗಿಸೋಣ. ಆದರೆ ನಮ್ಮ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುವ ’ಪರಕೀಯ ಸರಕಾರ’ ಯಂತ್ರಗಳನ್ನು ವಶಪಡಿಸಿಕೊಂಡರೆ ಮಾತ್ರ ನಾವು ವಿವಶರಾಗುವುದು ಬೇಡ.”
ವಿಕೇಂದ್ರೀಕರಣಕ್ಕೆ ಸಹಕಾರ
“ಯಂತ್ರಗಳು ಮನುಕುಲದ ಎಲ್ಲ ಅಗತ್ಯಗಳನ್ನು ಪೂರೈಸಬಲ್ಲವು ಎಂದು ಒಂದು ಕ್ಷಣ ಮನಸ್ಸಿನಲ್ಲಿ ಅಂದುಕೊಂಡರೂ ಸಹ, ಉತ್ಪಾದನೆ ಕೆಲವು ಸ್ಥಳಗಳಲ್ಲಿ ಕೇಂದ್ರೀಕರಣಗೊಂಡು ಅದರ ವಿತರಣೆಯನ್ನು ನಿಯಂತ್ರಣಗೊಳಿಸಲು ಸುತ್ತಿಬಳಸುವ ಪ್ರಯತ್ನ ಮಾಡಬೇಕಾಗುತ್ತದೆ. ಬದಲಿಗೆ ಯಾವ ಭಾಗದಲ್ಲಿ ಉತ್ಪಾದನೆ ಮತ್ತು ವಿತರಣೆಯ ಅಗತ್ಯ ಒಂದೇ ಜಾಗದಲ್ಲಿ ಇರುತ್ತದೆಯೋ, ಆಗ ಅವುಗಳು ಸ್ವಯಂಚಾಲಿತವಾಗಿ ನಿಯಂತ್ರಣಗೊಳ್ಳುತ್ತದೆ. ಆಗ ಯಾವುದೇ ರೀತಿಯ ಮೋಸ ಮತ್ತು ಸಟ್ಟಾಬಾಜಿಗಳಿಗೆ ಅವಕಾಶವಿರುವುದಿಲ್ಲ.
ಉತ್ಪಾದನೆ ಮತ್ತು ಅನುಭೋಗ ಇವೆರಡೂ ಸ್ಥಳೀಯವಾದರೆ ಯಾವುದೇ ಬೆಲೆ ತೆತ್ತು ಉತ್ಪಾದನೆಯ ವೇಗವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕೆಂಬ ಕಲ್ಪನೆ ದೂರವಾಗುತ್ತದೆ. ನಮ್ಮಲ್ಲಿರುವ ಇಂದಿನ ಆರ್ಥಿಕ ವ್ಯವಸ್ಥೆಯಿಂದಾಗಿ ಉದ್ಭವಿಸಿರುವ ಅನೇಕ ತೊಂದರೆಗಳು ಮತ್ತು ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇಂದು ಕೆಲವರ ಕೈಯಲ್ಲಿ ಅಪಾರ ಪ್ರಮಾಣದ ಸಂಗ್ರಹ ಮತ್ತು ಉಳಿದವರಿಗೆಲ್ಲ ಸಮೃದ್ಧಿಯ ನಡುವೆಯೂ ಅಭಾವದ ಪರಿಸ್ಥಿತಿ ಇದ್ದು, ಈ ಅಸ್ವಾಭಾವಿಕ ಸ್ಥಿತಿ ಉದ್ಭವಿಸದು.
ನನ್ನ ವ್ಯವಸ್ಥೆಯಲ್ಲಿ ಪರಿಶ್ರಮವೇ ನಡೆಯುವ ನಾಣ್ಯ, ಲೋಹವಲ್ಲ. ದುಡಿಮೆಯ ಶಕ್ತಿಯನ್ನು ಉಪಯೋಗಿಸ ಬಲ್ಲವನ ಬಳಿಯೆಲ್ಲ ಆ ನಾಣ್ಯ ಇದ್ದೀತು. ಅವನು ತನ್ನ ದುಡಿಮೆಯನ್ನು ಬಟ್ಟೆಯಾಗಿ ಅಥವಾ ಧಾನ್ಯರೂಪಕ್ಕೆ ಪರಿವರ್ತಿಸಬಹುದು. ಅವನಿಗೆ ತಾನು ತಯಾರಿಸಲಾಗದ ಪ್ಯಾರಾಫಿನ್ ಎಣ್ಣೆ ಬೇಕಿದ್ದರೆ ತಾನು ಉತ್ಪಾದಿಸಿದ ಹೆಚ್ಚುವರಿ ಧಾನ್ಯ ಕೊಟ್ಟು ಅದನ್ನು ಪಡೆಯಬಹುದು. ಅದು ನಿಜವಾದ, ನ್ಯಾಯವಾದ, ಸಮಾನವಾದ ಮತ್ತು ಸ್ವತಂತ್ರವಾದ ಪರಿಶ್ರಮ- ವಿನಿಮಯ, ಅರ್ಥಾತ್ ಅದು ದರೋಡೆಯಲ್ಲ. ಇದು ಹಳೆಯ ಕಾಲದ ವಿನಿಮಯ ಪದ್ಧತಿ ಎಂದು ನೀವು ಆಕ್ಷೇಪಿಸಬಹುದು. ಗಮನಿಸಿ. ಇದೇ ಅಂತಾರಾಷ್ಟ್ರೀಯ ವಿನಿಮಯದ ಆಧಾರ (ಹರಿಜನ, ೨-೧೧-೧೯೩೪, ಪು. ೩೦೨).
ನಾವು ಉತ್ಪಾದನೆಯ ಪದ್ಧತಿಯಲ್ಲಿ ಮಾನವಶ್ರಮಕ್ಕೆ ಹೆಚ್ಚಿನ ಮಹತ್ತ್ವ ನೀಡಿದರೆ ಉದ್ಯೋಗಗಳು ಹೆಚ್ಚಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಹುಡುಕಬಹುದು. ಈ ಪದ್ಧತಿಯ ಮೂಲಕ ಉತ್ಪಾದನೆಯನ್ನು ಆವಶ್ಯಕತೆಗೆ ತಕ್ಕಂತೆ ಎ? ಬೇಕಾದರೂ ಹೆಚ್ಚಿಸಬಹುದು. ಆದರೆ ಉತ್ಪಾದನೆ ಯಂತ್ರಗಳ ಸಹಾಯದಿಂದ ಕೇಂದ್ರೀಕೃತವಾದರೆ ನಿರುದ್ಯೋಗದ ಪ್ರಮಾಣ ಹೆಚ್ಚುತ್ತದೆ. ಯಾವುದೇ ದೇಶದಲ್ಲಿ ಉದ್ಯೋಗಾವಕಾಶ ಸೀಮಿತ ಪ್ರಮಾಣದಲ್ಲಿರುವ ಕಾರಣ ಸುಧಾರಿತ ಯಂತ್ರಗಳ ದೆಸೆಯಿಂದ ಉಚ್ಚಾಟನೆಗೊಂಡವರಿಗೆ ಬೇರೆಡೆ ಉದ್ಯೋಗ ಸಿಗುವುದು ಬಹಳ ವಿರಳ. ಕೆಲಸಗಾರರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಕ್ಷಮತೆ ಮತ್ತು ಕೌಶಲಗಳನ್ನು ಗಳಿಸುವ ಕಾರಣ ಬೇರೆ ಕ್ಷೇತ್ರಗಳಲ್ಲಿ ಉದ್ಯೋಗ ಸಿಗುವುದು ಬಹು ಕಠಿಣ. ಹಾಗಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾದೀತು. ಇಂಗ್ಲೆಂಡಿನಲ್ಲಿ ೩೦ ಲಕ್ಷಕ್ಕೂ ಮೀರಿರುವ ನಿರುದ್ಯೋಗಿಗಳನ್ನು ಒಂದೇ ದಿನದಲ್ಲಿ ಕಾರ್ಖಾನೆಗಳಿಂದ ಹೊಲಕ್ಕೆ ಅಟ್ಟಲು ಸಾಧ್ಯವಿಲ್ಲ.
ಶೋಷಣೆಗೆ ಅವಕಾಶವಿಲ್ಲ.
ನಮ್ಮ ದೇಶದಲ್ಲಿ ಖಾದಿ ಉದ್ಯಮದ ಬೆಳವಣಿಗೆ ಆದಾಗ ಇಂಗ್ಲೆಂಡಿನ ಲಂಕಾಶೈರ್ ಪಟ್ಟಣದವರು ಭಾರತ ಮತ್ತು ಇತರ ದೇಶಗಳ ಜನರನ್ನು ಶೋ?ಣೆ ಮಾಡುವಂತಹ ಯಂತ್ರಗಳ ಉಪಯೋಗವನ್ನು ನಿಲ್ಲಿಸಬಹುದು. ತದ್ವಿರುದ್ಧವಾಗಿ ಭಾರತದ ಹಳ್ಳಿಗಳಲ್ಲೇ ಬೆಳೆದ ಹತ್ತಿಯಿಂದ ಬಟ್ಟೆ ತಯಾರಿಸುವ ಸಾಧನಗಳ ಅಭಿವೃದ್ಧಿಗೆ ಸಹಕರಿಸಬಹುದು. ನಾನು ಕಲ್ಪನೆ ಮಾಡಿದ ವ್ಯವಸ್ಥೆಯಲ್ಲಿ ಅಮೆರಿಕ ದೇಶವೂ ಸಹ ತಾನು ಸಂಶೋಧನೆ ಮಾಡಿ ಉತ್ತಮಪಡಿಸಿದ ಕೌಶಲಗಳಿಂದ ಬೇರೆ ಜನಾಂಗಗಳನ್ನು ಶೋಷಣೆ ಮಾಡಿ ತಾನು ಶ್ರೀಮಂತ ದೇಶವಾಗದು (ಯಂಗ್ ಇಂಡಿಯಾ, ೨೭-೯-೧೯೨೫, ಪು. ೩೨೧).
ಗುಡಿಕೈಗಾರಿಕೆಗಳ ಬಗ್ಗೆ ಅಚಲ ನಂಬಿಕೆ
ಗುಡಿಕೈಗಾರಿಕೆಗಳು ಭಾರತದಲ್ಲಿ ಹಿಂದಿನಂತೆ ಬದುಕಿ, ಉಳಿದು ತಮ್ಮ ಕೆಲಸ ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗಿದ್ದರೆ, ಯಂತ್ರಯುಗದ ಈ ಎಲ್ಲ ಸಾಧನೆಗಳು ನಮ್ಮಿಂದ ದೂರವಾಗುತ್ತಿದ್ದುವು. ಸೇವೆ ಮತ್ತು ಪ್ರಾಮಾಣಿಕ ಶ್ರಮದಿಂದ ಎಲ್ಲ ರೀತಿಯ ಶೋಷಣೆ ನಿಂತು ಹೋಗುತ್ತಿತ್ತು. ಈ ಅಚಲ ನಂಬಿಕೆಯಿಂದಲೇ ನಾನು ನನ್ನ ಕರ್ತವ್ಯವನ್ನು ಇಂದೂ ಸಹ ಮುಂದುವರಿಸಿಕೊಂಡು ಹೋಗುತ್ತಿರುವೆ. ನಿರಾಶೆಗೆ ಕಾರಣಗಳೇ ಇಲ್ಲ. ಶಾಶ್ವತ ಯಶಸ್ಸು ಗಳಿಸುವ ಹಾದಿಯಲ್ಲಿ ಕೆಲವು ವರ್ಷಗಳ ಸಮಸ್ಯೆ ಏನು ಮಹಾ? ಅಚಲವಾದ ನಂಬಿಕೆಯಿಂದಲೇ ಕೊಲಂಬಸ್ ಮತ್ತು ಸ್ಟೀಫನ್ಸನ್ ಮುಂತಾದವರು ತಾಳ್ಮೆಯಿಂದ ಕೆಲಸಮಾಡಲು ಸಾಧ್ಯವಾಯಿತು. ನನ್ನ ನಂಬಿಕೆಯೇ ನನಗೆ ಕೆಲಸ ಮಾಡಲು ಪುಷ್ಟಿಕೊಡುತ್ತದೆ (ಹರಿಜನ, ೩೦-೧೧-೧೯೩೫, ಪು. ೩೨೯).
ನನ್ನ ಈ ನಂಬಿಕೆಗೆ ಆಹ್ವಾನ ಮತ್ತು ಸವಾಲು ಕೊಡುವ ಇತರೆ ಎಲ್ಲ ಸಂಗತಿಗಳೂ ಸಹ ನಶಿಸಿಹೋಗುತ್ತವೆ ಎಂದು ನಾನು ಭಾವಿಸಿದ್ದೇನೆ. ಭಾರತವೇನಾದರೂ ಕೈಗಾರಿಕೀಕರಣಗೊಂಡರೆ ನಾದಿರ್ಶಹನಂತಹ ಇನ್ನೊಬ್ಬ ವ್ಯಕ್ತಿ ಜಗತ್ತನ್ನು ಶೋ?ಣೆ ಮಾಡಲು ಬರಬಹುದು. ನಾವು ಬ್ರಿಟನ್, ಅಮೆರಿಕ, ರ?, ಜಪಾನ್, ಇಟಲಿ ಇತ್ಯಾದಿ ದೇಶಗಳ ನೌಕಾಪಡೆ ಮತ್ತು ಸೇನೆಯ ಬಲದಿಂದ ಹಳ್ಳಕ್ಕೆ ತಳ್ಳಲ್ಪಡುವುದಿಲ್ಲವೆ? ಈ ಎಲ್ಲ ದೇಶಗಳ ವಿರೋಧವನ್ನು ನಾನು ಯೋಚಿಸುವುದಿಲ್ಲವೆ? ಇಲ್ಲ. ನಾನು ಮಾನವನಿಗೆ ಅವನ ಮೊದಲಿನ ಸ್ಥಾನಮಾನವನ್ನು ಕಲ್ಪಿಸಲು ಕಂಕಣಬದ್ಧನಾಗಿದ್ದೇನೆ (ಹರಿಜನ, ೨೯-೮-೧೯೩೬, ಪು. ೨೨೮).
ಗಾಂಧಿಯವರ ಪ್ರಕಾರ ಯಂತ್ರಗಳಿಂದ ಇಂದು ಮನು?ನು ಏನು ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೋ ಆ ವ್ಯಕ್ತಿತ್ವವನ್ನು ಪುನಃ ಪಡೆದು ನಿಜವಾದ ಮನು?ನ ಉದಯವಾಗಬೇಕಾದರೆ ನಾವು ನಮ್ಮ ಗುಡಿಕೈಗಾರಿಕೆಗಳನ್ನು ಪುನರುತ್ಥಾನ ಮಾಡುವುದು ಅನಿವಾರ್ಯ. “ಯಾಂತ್ರೀಕರಣ ಮನುಕುಲಕ್ಕೆ ಅಂಟಿದ ಶಾಪ. ಯಂತ್ರಯುಗದ ಸಾಧನೆಗಳೆಲ್ಲ ಮುಗಿದ ಮೇಲೆ ಕರಕುಶಲತೆಯೊಂದೇ ಉಳಿಯುವುದು. ಎಲ್ಲ ರೀತಿಯ ಶೋ?ಣೆಯೂ ತೀರಿದ ನಂತರ ಸೇವಾ ಮನೋಭಾವ ಮತ್ತು ಪ್ರಾಮಾಣಿಕ ದುಡಿಮೆ ಮಾತ್ರ ಎಂದಿಗೂ ನಿಲ್ಲುತ್ತದೆ” ಎನ್ನುವುದು ಅವರ ವಾದವಾಗಿತ್ತು. ಯಂತ್ರಯುಗ ಕೇವಲ ತಾತ್ಕಾಲಿಕ. ಆದರೆ ಕರಕುಶಲ ಶಾಶ್ವತ. ಯಾವುದೇ ಕೆಲಸ ಮುಂದುವರಿಯಲು ನಂಬಿಕೆ ಮುಖ್ಯ. ಅದು ಇರುವವರೆಗೂ ಕರಕುಶಲ ಉದ್ಯಮದ ಉಳಿವಿನ ಬಗ್ಗೆ ಭಯ ಅಥವಾ ನಿರಾಸೆ ಪಡುವ ಅಗತ್ಯವಿಲ್ಲ ಎಂದು ಅವರು ನುಡಿದರು.
ಗಾಂಧಿಯವರು ಎಂದೂ ಯಂತ್ರವಿರೋಧಿಗಳಾಗಿರಲಿಲ್ಲ. ಬದಲಿಗೆ ಅವರ ಬಹುಮುಖ್ಯ ಕಾಳಜಿ ಎಂದರೆ ಯಂತ್ರಗಳು ಮಾನವನ ಆವಶ್ಯಕತೆಗಳನ್ನು ಪೂರೈಸಿ ಅವನ ಸೇವೆ ಮಾಡಬೇಕೇ ಹೊರತು ಮಾನವನ ಯಜಮಾನನಾಗಬಾರದು ಮತ್ತು ಮಾನವ ಯಂತ್ರಗಳ ದಾಸನಾಗಬಾರದು. ಮನು? ತನ್ನ ಅಧೀನದಲ್ಲಿರುವ ಯಂತ್ರಗಳನ್ನು ಸುಧಾರಿಸಿ ಅವು ಕಾರ್ಮಿಕರ ಸಮಯವನ್ನೂ ಉಳಿಸಿ ಉತ್ಪಾದನೆಯನ್ನೂ ಹೆಚ್ಚಿಸಬೇಕು. ಆದರೆ ಮಾನವ ಶಕ್ತಿಚಾಲಿತ ಯಂತ್ರಗಳ ಸೂತ್ರದ ಬೊಂಬೆಯಾಗಬಾರದು. ಕಾರ್ಖಾನೆ- ನಾಗರಿಕತೆಯು ತನ್ನ ಮೂಲಭೂತ ಇತಿಮಿತಿಗಳಿಂದ ಇತರರನ್ನು ಶೋ?ಣೆ ಮಾಡುವುದರೊಂದಿಗೆ ಯಂತ್ರಗಳು ಮಾನವನ ಯಜಮಾನನಾಗುವಂತೆ ಮಾಡಿದೆ. ಕಾರ್ಖಾನೆ-ನಾಗರಿಕತೆಯ ಯುಗದ ಪ್ರಾರಂಭದಲ್ಲಿ ಮನು? ಯಂತ್ರಗಳ ರೀತಿ ಕೆಲಸ ಮಾಡಬಹುದು. ಆದರೆ ಕಾರ್ಖಾನೆ-ನಾಗರಿಕತೆಯಲ್ಲಿ ಇಂದು ಕಂಡುಬರುವ ಕಡಮೆ ವೈವಿಧ್ಯದಿಂದ ಕೂಡಿದ, ನಿರಾನಂದಕರವಾದ ಮತ್ತು ಘನತೆ ಇಲ್ಲದೆ ಯಂತ್ರಗಳ ರೀತಿ ಹಿಂದೆ ಇರಲಿಲ್ಲ. ಈ ಒಂದು ಪರಿಸ್ಥಿತಿ ಕಾರ್ಖಾನೆ- ನಾಗರಿಕತೆಯ ಪೂರ್ವದ ಭಾರತದಲ್ಲಿ ಇತ್ತು. ನಾನು ಇಲ್ಲಿ ಭಾರತದ ಸುವರ್ಣಯುಗದ ಬಗೆಗಾಗಲಿ, ರಾಮಾಯಣ ಮಹಾಭಾರತ ಉಪನಿ?ತ್ತಿನ ಕಾಲದ ಬಗ್ಗೆ ಹೇಳದೆ, ಇತ್ತೀಚೆಗಿನ ಚಾರಿತ್ರಿಕ ವ?ಗಳ ಬಗ್ಗೆ ಹೇಳುತ್ತಿದ್ದೇನೆ. ಬಟ್ಟೆ ನೇಯುವ ಕಬೀರ, ರೈತಜನಾಂಗದ ತುಕಾರಾಮ್, ಹರಿಜನ ಗುಂಪಿಗೆ ಸೇರಿದ ಚಾಕವೇಲ, ಚಮ್ಮಾರ ಜನಾಂಗದ ರಾಮದಾಸ್, ಮಡಕೆ ಮಾಡುವ ಗೋರಾ, ಮರಗೆಲಸ ಮಾಡುವ ಗುಂಪಿಗೆ ಸೇರಿದ ಧನಾ ಇವರೆಲ್ಲ ಯಂತ್ರಗಳಂತೆ ಜೀವಿಸದೆ ದೈವೀಪುರು?ರಾಗಿ ಜೀವಿಸಿದ್ದರು.
ಪಾಶ್ಚಾತ್ಯ ಯಂತ್ರಗಳ ಕಾರಣದಿಂದಾಗಿ ನಮ್ಮ ಕರಕುಶಲ ಕೈಗಾರಿಕೆಗಳು ನಾಶವಾದವು. ಶಕ್ತಿಚಾಲಿತ ಯಂತ್ರಗಳು ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿಸಿತು. ಅವುಗಳು ಕೆಲವೇ ಕೆಲವರ ಜೀವನದ ಭಾಗ್ಯವನ್ನು ಬೆಳಗಿದರೆ, ಸಾವಿರಾರು ಜನರ ಭವಿ?ವನ್ನು ನಾಶಪಡಿಸಿದವು. ಆದಕಾರಣ ಮತ್ತೆ ಭಾರತದ ಗ್ರಾಮೀಣ ಆರ್ಥಿಕ ಪುನರುತ್ಥಾನವಾಗಬೇಕಾದರೆ ಗುಡಿಕೈಗಾರಿಕೆಗಳ ಅಭಿವೃದ್ಧಿ ಅನಿವಾರ್ಯವೆಂಬುದನ್ನು ಗಾಂಧಿಯವರು ಅರ್ಥಮಾಡಿಕೊಂಡಿದ್ದರು. ಸಣ್ಣಪ್ರಮಾಣದ ಗುಡಿಕೈಗಾರಿಕೆಗಳು ಬೃಹತ್ಪ್ರಮಾಣದ ಕೈಗಾರಿಕೆಗಳಿಗಿಂತ ಹೆಚ್ಚು ಉತ್ಪಾದನೆ ಮಾಡಿ ಉದ್ಯೋಗವನ್ನು ಸೃಷ್ಟಿಸುತ್ತವೆ ಎಂಬ ಸತ್ಯವನ್ನು ಇತರರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಗಾಂಧಿಯವರು ಬಹುಶಃ ಶ್ರಮವನ್ನು ಬಯಸುವ ಗ್ರಾಮೀಣ ಮತ್ತು ಗುಡಿಕೈಗಾರಿಕೆಗಳ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರು.
“ಯಾರಾದರೂ ಊಟ ಮಾಡುವುದಕ್ಕೆ ಯಂತ್ರವೊಂದನ್ನು ಕಂಡುಹಿಡಿದರೆ ತಿನ್ನುವ ಸಂತೋ?ವೇ ಹೋಗುತ್ತದೆ. ಅದೊಂದು ಶಿಕ್ಷೆಯಾಗಿ ಪರಿಣಮಿಸುತ್ತದೆ. ಗೃಹಕೈಗಾರಿಕೆಗಳು ನಾಶವಾದದ್ದೇ ನಮ್ಮ ನಿರುದ್ಯೋಗ ಮತ್ತು ದಾರಿದ್ರ್ಯಗಳಿಗೆ ಕಾರಣ” (ಹರಿಜನ, ೧೧.೫.೧೯೩೫).
ಗಾಂಧಿಯವರ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಒಂದು ವಿವೇಕಯುಕ್ತತೆ ಕಂಡುಬರುತ್ತದೆ. ಅದೇನೆಂದರೆ ಯುದ್ಧಾನಂತರದ ವ?ಗಳಲ್ಲಿ ಗುಡಿಕೈಗಾರಿಕೆಗಳನ್ನು ಉತ್ತೇಜಿಸಲು ಕೈಗೊಂಡ ಕಾರ್ಯಕ್ರಮಗಳು ಅವುಗಳ ಅಭಿವೃದ್ಧಿಗೆ ಮಾಡಿದ ಉದ್ದೇಶಪೂರ್ವಕ ಮತ್ತು ವಾಸ್ತವಿಕ ಯೋಜನೆಗಳೆಂದು ಕಂಡು ಬರುತ್ತದೆ (Ibid, p.1240).
ಪ್ರತಿಯೊಂದು ದೇಶವೂ ತನ್ನದೇ ಆದ ರೀತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅತ್ಯಂತ ಮುಂದುವರಿದ ದೇಶಗಳ ಆರ್ಥಿಕ ಯೋಜನೆಗಳನ್ನು ಕುರುಡಾಗಿ ಅನುಸರಿಸಬಾರದು. ನಾವು ಬೇರೆ ದೇಶಗಳ ಅನುಭವದಿಂದ ಪಾಠ ಕಲಿಯಬೇಕು ಮತ್ತು ಈಗಿರುವ ಉತ್ಪಾದನಾ ತಂತ್ರಗಳನ್ನು ಸುಧಾರಿಸಿಕೊಳ್ಳಬೇಕು. ನಾವು ಯಾವುದೇ ಕಾರಣದಿಂದ ಯಂತ್ರಗಳಿಂದಲೇ ಚಮತ್ಕಾರ ನಡೆಯುತ್ತದೆ ಎಂಬ ಭ್ರಮೆಯಲ್ಲಿ ಇರಬಾರದು. ಯಂತ್ರಗಳಿಂದ ಮನುಷ್ಯನ ಉದ್ದೇಶಗಳನ್ನು ಸಫಲಗೊಳಿಸುವಂತಿರಬೇಕು. ಮನುಷ್ಯನನ್ನು ಯಂತ್ರದ ಒಂದು ಭಾಗವನ್ನಾಗಿ ಮಾಡಬಾರದು.
ಯಂತ್ರಯುಗದ ಸವಾಲುಗಳು
ನಾವು ಯಂತ್ರಗಳ ಯುಗದಲ್ಲಿ ಜೀವಿಸುತ್ತಿದ್ದೇವೆ. ಅವು ನಮ್ಮ ಆರ್ಥವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿವೆ. ಮನುಷ್ಯನೇ ಒಂದು ಕುಶಲ ಮತ್ತು ಅದ್ಭುತ ಯಂತ್ರ. ಈ ಯಂತ್ರದ ಪ್ರತಿರೂಪವನ್ನು ಯಾರೂ ನಕಲು ಮಾಡಲಾರರು. ನಾನು ಯಂತ್ರ ಪದದ ಬಳಕೆಯನ್ನು ಅದರ ವಿಸ್ತೃತರೂಪದಲ್ಲಿ ಮಾಡದೆ, ಕೇವಲ ಅದು ಮಾನವ ಮತ್ತು ಪ್ರಾಣಿಗಳ ಶ್ರಮಕ್ಕೆ ಪೂರಕವಾಗಿ ಅವುಗಳ ಕ್ಷಮತೆಯನ್ನು ಹೆಚ್ಚಿಸುವುದರ ಬದಲಾಗಿ ಅವುಗಳನ್ನು ಪಲ್ಲಟಗೊಳಿಸುವ ಸಾಧನವಾಗುತ್ತಿದೆ ಎಂಬ ಅರ್ಥದಲ್ಲಿ ಬಳಸುತ್ತಿದ್ದೇನೆ.
ಇದು ಯಂತ್ರದ ಮೊಟ್ಟಮೊದಲ ಎದ್ದುಕಾಣುವ ಗುಣ. ಎರಡನೆಯದಾಗಿ ಯಂತ್ರದ ಬೆಳವಣಿಗೆಗೆ ಯಾವುದೇ ಮಿತಿ ಇಲ್ಲ. ಆದರೆ ಮಾನವಶ್ರಮದ ಬಗ್ಗೆ ಹೀಗೆ ಹೇಳಲಾಗದು. ಒಂದು ಮಿತಿಯ ನಂತರ ಅದರ ಕ್ಷಮತೆ ಹೆಚ್ಚಾಗದು. ಈ ಹಿನ್ನೆಲೆಯಲ್ಲಿ ನಾವು ಯಂತ್ರದ ಗುಣವಿಶೇಷತೆ ಅರಿಯಬೇಕು.
ಯಂತ್ರಕ್ಕೆ ತನ್ನದೇ ಆದ ಮನೋಬಲ ಅಥವಾ ಬುದ್ಧಿವಂತಿಕೆ ಇದೆ ಎಂದು ಎನಿಸುತ್ತದೆ. ಮಾನವಶ್ರಮಕ್ಕೆ ಅದು ವಿರುದ್ಧವಾದುದು. ಅದು ಹೀಗೆ ಮಾನವರ ಸ್ಥಾನವನ್ನು ಪಲ್ಲಟಗೊಳಿಸಿ ನಿರುದ್ಯೋಗಿಗಳ ಮತ್ತು ಅರೆನಿರುದ್ಯೋಗಿಗಳ ಪಡೆಯನ್ನು ಸಹಜವಾಗಿ ಹೆಚ್ಚಿಸುತ್ತದೆ. ಪ್ರಾಯಶಃ ಅಮೆರಿಕದಲ್ಲಿ ಅದು ತನ್ನ ಎಲ್ಲೆಯನ್ನು ಮೀರಿದಂತೆ ಕಾಣುತ್ತದೆ. ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಂದು ಪರಿಗಣಿಸುವಾಗ, ಲಕ್ಷಾಂತರ ಮಂದಿಯನ್ನು ಶೋಷಿಸಲು ಯಂತ್ರವಲ್ಲದೆ ಇನ್ನಾವುದೇ ಭಯಂಕರ ಪಿಶಾಚಿ ಇರಲಾರದು ಎನ್ನುವ ಅರಿವು ನನಗಾಯಿತು. ನನ್ನ ನಂಬಿಕೆಯ ಪ್ರಕಾರ ಯಂತ್ರಗಳು ಮನು?ನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿಲ್ಲ. ಅದನ್ನು ಸರಿಯಾದ ಜಾಗದಲ್ಲಿ ಇಡದಿದ್ದರೆ ಮಾನವಕೋಟಿಯ ಸೇವೆಗೆ ಅದು ಅಡ್ಡಿಪಡಿಸುತ್ತದೆ.
ನಾವು ಕೈಗಾರಿಕಾ ಯುಗದಲ್ಲಿ ಜೀವಿಸುತ್ತಿರುವುದರಿಂದ ಯಂತ್ರಗಳ ಉಪಯೋಗದಿಂದ ಸಂಪೂರ್ಣವಾಗಿ ಮುಕ್ತರಾಗಲು ಸಾಧ್ಯವಿಲ್ಲ. ಆದಕಾರಣ ಗಾಂಧಿಯವರು ಅವುಗಳ ಅನಿವಾರ್ಯ ಬಳಕೆಗೆ ಅನೇಕ ಮಾನದಂಡಗಳನ್ನು ಸೂಚಿಸಿದ್ದಾರೆ. ಜೊತೆಗೆ ಅವುಗಳ ಉಪಯೋಗಕ್ಕೆ ಈ ಕೆಳಗಿನ ?ರತ್ತುಗಳನ್ನು ವಿಧಿಸಿದ್ದಾರೆ:
- ಯಂತ್ರಗಳು ಮಾನವನಿಗೆ ಉದ್ಯೋಗವಿಲ್ಲದಂತೆ ಮಾಡಕೂಡದು.
- ಯಂತ್ರಗಳು ಗ್ರಾಮಗಳನ್ನು ಶೋಷಿಸಕೂಡದು ಮತ್ತು ಗ್ರಾಮೀಣ ಕುಶಲಕಲೆಗಳೊಡನೆ ಸ್ಪರ್ಧಿಸುವಂತಿರಬಾರದು.
- ಗ್ರಾಮೀಣ ಕುಶಲಕರ್ಮಿಗಳ ದಕ್ಷತೆಯನ್ನು ಹೆಚ್ಚಿಸಲು ಅವು ಸಹಕಾರಿಯಾಗಬೇಕು.
- ಅವುಗಳ ಏಕಸ್ವಾಮ್ಯಕ್ಕೆ ಮತ್ತು ಕೆಲವರ ಕೈಯಲ್ಲಿ ಸಂಪತ್ತಿನ ಕ್ರೋಢೀಕರಣಕ್ಕೆ ಎಡೆಮಾಡಿಕೊಡಬಾರದು.
- ಅವುಗಳು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಆರ್ಥಿಕಚಿಂತನೆ ಮಟ್ಟದಲ್ಲಿ ಶೋಷಣೆಗೆ ಎಡೆಮಾಡಕೂಡದು.
- ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯ ಅಥವಾ ಅನೇಕ ಜನ ಕಾರ್ಮಿಕರನ್ನು ಒಳಗೊಂಡಿರುವಂತಹ ಕೈಗಾರಿಕೆಯು ಪೂರ್ಣವಾಗಿ ಸರ್ಕಾರದ ಅಧೀನದಲ್ಲಿರಬೇಕು ಮತ್ತು ಸಾರ್ವಜನಿಕ ಹಿತರಕ್ಷಣೆಯ ದೃಷ್ಟಿಯಿಂದ ಸಂಪೂರ್ಣವಾಗಿ ಸರ್ಕಾರದ ಆಡಳಿತದಲ್ಲಿರಬೇಕು.
ಗಾಂಧಿಯವರು ಸಾಮಾಜಿಕನ್ಯಾಯದ ದೃಷ್ಟಿಯಿಂದ ಮಾತ್ರ ಬೃಹತ್ಪ್ರಮಾಣದ ಕೈಗಾರಿಕೆಗಳನ್ನು ವಿರೋಧಿಸಿದರು ಮತ್ತು ಅವುಗಳು ಸಾರ್ವಜನಿಕ ವಲಯದಲ್ಲಿ ಸ್ಥಾಪಿಸಲ್ಪಡಬೇಕು ಎಂದು ಹೇಳಿದರು.
ನನಗೆ ತಿಳಿದಂತೆ ಮನುಷ್ಯ ಕೈಗಾರಿಕೆಗಳಿಲ್ಲದೆ ಬದುಕಲಾರ. ಆದ್ದರಿಂದ ನಾನು ಔದ್ಯೋಗೀಕರಣದ ವಿರುದ್ಧ ನಿಲ್ಲಲಾರೆ. ಆದರೆ ಕೈಗಾರಿಕೆಗಳಲ್ಲಿ ಯಾವ ರೀತಿಯ ಯಂತ್ರಗಳನ್ನು ಬಳಸಬೇಕೆಂಬುದರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ಯಂತ್ರಗಳು ಅತಿ ತ್ವರಿತವಾಗಿ ಉತ್ಪಾದನೆ ಮಾಡುವ ಕಾರಣ ನಾನು ಕಲ್ಪನೆಯನ್ನೂ ಮಾಡಲಾಗದ ಆರ್ಥಿಕವ್ಯವಸ್ಥೆ ನಿರ್ಮಾಣವಾಗುತ್ತದೆ. ಯಾವ ವ್ಯವಸ್ಥೆಯಿಂದ ಒಳ್ಳೆಯ ಪರಿಣಾಮಗಳಿಗಿಂತ ಕೆಟ್ಟ ಪರಿಣಾಮಗಳು ಹೆಚ್ಚು ಇರುತ್ತವೆಯೋ ಅದನ್ನು ನಾನು ಸ್ವೀಕಾರ ಮಾಡುವುದಿಲ್ಲ. ನಮ್ಮ ದೇಶದಲ್ಲಿರುವ ಲಕ್ಷಾಂತರ ಬಾಯಿಯಿಲ್ಲದ ಜನರು ಆರೋಗ್ಯವಾಗಿ ಮತ್ತು ಸಂತೋಷವಾಗಿ ಬದುಕಬೇಕೆಂಬುದು ನನ್ನ ಹಂಬಲ. ಜೊತೆಗೆ ಅವರು ಆಧ್ಯಾತ್ಮಿಕವಾಗಿ ಇನ್ನೂ ಹೆಚ್ಚು ಬೆಳೆಯಬೇಕೆಂದು ನಾನು ಆಶಿಸುತ್ತೇನೆ. ಇದಕ್ಕೆ ಯಂತ್ರಗಳ ಅಗತ್ಯವಿಲ್ಲ. ನಮ್ಮಲ್ಲಿ ಅನೇಕರು ಕೆಲಸವಿಲ್ಲದೆ ಇದ್ದಾರೆ. ನಮ್ಮ ಬೆಳವಣಿಗೆಯ ಜೊತೆ ಅರ್ಥಮಾಡಿಕೊಳ್ಳುವ ಶಕ್ತಿಯೂ ಹೆಚ್ಚುತ್ತದೆ. ನಮಗೆ ನಿಜವಾಗಿಯೂ ಯಂತ್ರಗಳ ಆವಶ್ಯಕತೆ ಇದ್ದರೆ ಅವುಗಳನ್ನು ಉಪಯೋಗಿಸೋಣ. ಕೈಗಾರಿಕಾ ಬೆಳವಣಿಗೆಯ ಜೊತೆಗೆ ನಾವು ದುಡಿಯುವಂಥವರಾಗಬೇಕು. ನಾವು ಹೆಚ್ಚು ಸ್ವಾವಲಂಬಿಗಳಾಗೋಣ. ಆಗ ಬೇರೆಯವರ ಮಾರ್ಗದರ್ಶನದ ಅಗತ್ಯ ಕಡಮೆಯಾಗುತ್ತದೆ. ಒಂದು ಸಾರಿ ನಾವು ನಮ್ಮ ಜೀವನವನ್ನು ಅಹಿಂಸೆಯ ಆಧಾರದ ಮೇಲೆ ರೂಪಿಸಿಕೊಂಡಲ್ಲಿ ಆಗ ಯಂತ್ರಗಳ ಉಪಯೋಗದ ನಿಯಂತ್ರಣವನ್ನು ಕಲಿಯಬಹುದು (Towards New Horizons, 1959, p. 45-46).
ಅಗತ್ಯದ ದೃಷ್ಟಿಯಿಂದ ಕೆಲವು ಯಂತ್ರಗಳ ಉಪಯೋಗ ಅನಿವಾರ್ಯವಾಗುತ್ತದೆ. ಆದರೆ ಆದರ್ಶದ ದೃಷ್ಟಿಯಿಂದ ಯೋಚಿಸಿದಾಗ ಎಲ್ಲ ಯಂತ್ರಗಳ ಬಳಕೆಯನ್ನು ಬೇಡ ಎನ್ನುವೆನು. ಮೋಕ್ಷಸಾಧನೆಗೆ ಅಡ್ಡಿ ಬಂದರೆ ಈ ಮೈಯನ್ನೇ ಬೇಡ ಎನ್ನುವೆನು. ಸಂಪೂರ್ಣ ಮೋಕ್ಷಗಳಿಕೆ ನನ್ನ ಉದ್ದೇಶ. ಈ ದೃಷ್ಟಿಯಿಂದ ಯಂತ್ರಗಳ ತ್ಯಾಜ್ಯ ಹೊರತಲ್ಲ. ನಿಜ, ದೇಹ ಇದ್ದಂತೆಯೆ ಯಂತ್ರ. ಬೇಡವೆಂದರೂ ಅಂಟಿಕೊಂಡಿರುತ್ತದೆ. ನಮ್ಮ ದೇಹವೂ ಸಹ ಒಂದು ಕುಶಲವಾದ ಮತ್ತು ಹಸನಾದ ಯಂತ್ರ. ಅದು ನಮ್ಮ ಆತ್ಮವಿಕಾಸಕ್ಕೆ ಅನುಕೂಲಕರವಾಗಿರಬೇಕು. ಈ ಉದ್ದೇಶಪೂರ್ತಿಗೆ ಅದು ಅಡ್ಡಿಯಾದರೆ ಅದು ತ್ಯಾಜ್ಯವೇ ಸರಿ (ಯಂಗ್ ಇಂಡಿಯಾ, ೧೩.೧೧. ೧೯೨೪).
ಗಾಂಧಿಯವರ ಕಲ್ಪನೆಗೆ ಪಾಶ್ಚಿಮಾತ್ಯರ ಸಮರ್ಥನೆ
ಗಾಂಧಿಯವರ ’ಯಾಂತ್ರೀಕರಣ’ದ ಕಲ್ಪನೆಯ ಇತಿಮಿತಿಗಳ ವಿಶ್ಲೇಷಣೆಯನ್ನು ಸಮರ್ಥನೆ ಮಾಡಿ ಅನೇಕ ಪಾಶ್ಚಿಮಾತ್ಯ ತಜ್ಞರು ತಮ್ಮ ವಿವಿಧ ಪುಸ್ತಕಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟ ಹಾಗೂ ನೇರ ಮಾತುಗಳಲ್ಲಿ ವ್ಯಕ್ತಪಡಿಸಿರುವುದನ್ನು ನಾವು ಕಾಣಬಹುದು.
ನಾವು ಗಮನಿಸಿದರೆ, ಅಮೆರಿಕದಂತಹ ಅತ್ಯಂತ ಸಮೃದ್ಧ ದೇಶದಲ್ಲಿಯೂ ಸಹ ೪೦ ಮಿಲಿಯನ್ ಜನರು ಬಡವರು ಮತ್ತು ಪ್ರತಿ ಇಪ್ಪತ್ತು ಶ್ರಮಿಕರಲ್ಲಿ ಒಬ್ಬರು ನಿರುದ್ಯೋಗಿಗಳು; ಅದರಲ್ಲೂ ನೀಗ್ರೋಗಳು ಮತ್ತು ಗ್ರಾಮೀಣಭಾಗದಲ್ಲಿ ವಾಸಿಸುವ ಜನಸಮೂಹದಲ್ಲಿ (The Age of Kaynes – by Robert Lackchman, 1966, p. 2) ಯಾಂತ್ರೀಕರಣ ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿದೆ. ಪ್ರೊ. ಗಾಲ್ಬ್ರೈತ್ ಅವರ ಪ್ರಕಾರ ಅಮೆರಿಕದ ಬಡತನ ಕೇವಲ ಪೀಡಿಸುವಂಥದ್ದಲ್ಲದೆ, ಅಪಕೀರ್ತಿ ತರುವಂತಹದ್ದಾಗಿದೆ (The Affective Society, p. 268).
ಸೋವಿಯತ್ ರಷ್ಯಾದಲ್ಲಿ ಯಾಂತ್ರೀಕರಣ ಮತ್ತು ಪ್ರಾವೀಣ್ಯದ ಬೆಳವಣಿಗೆಯ ಕಾರಣದಿಂದಾಗಿ ನಿರುದ್ಯೋಗದ ಸಮಸ್ಯೆ ಗಣನೀಯವಾಗಿ ಹೆಚ್ಚಿದ ಕಾರಣ ಈಗ ವ್ಯವಸ್ಥಿತವಾದ ಪ್ರಯತ್ನಗಳ ಮೂಲಕ ಕೃಷಿಗೆ ಸಹಾಯಕವಾದ ಉದ್ಯಮಗಳನ್ನು ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ (Employment Under Socialization, 1968, Soviet Review, p. 26).
ಪ್ರೊ. ಆರ್ಥರ್ ಲೆವಿಸ್ ಅವರು, ಆಧುನಿಕ ಕ್ಷೇತ್ರದಲ್ಲಿ ಹೆಚ್ಚು ಬಂಡವಾಳ ಸಾಂದ್ರತೆಯನ್ನು ವಿರೋಧಿಸಿ ಸಣ್ಣ ಘಟಕಗಳನ್ನು ಹೆಚ್ಚು ಕ್ರಿಯಾಶೀಲವನ್ನಾಗಿ ಮಾಡುವುದರ ಬದಲು, ತರ್ಕಹೀನರಾಗಿ ಇತ್ತೀಚೆಗಿನ ತಂತ್ರಜ್ಞಾನವನ್ನು ಉಪಯೋಗಿಸುವ ದೊಡ್ಡದೊಡ್ಡ ವಿನ್ಯಾಸಗಳಿಗೆ ಹೆಚ್ಚಿನ ಹಣವನ್ನು ಖರ್ಚುಮಾಡುವ ಪ್ರವೃತ್ತಿಯನ್ನು ಖಂಡಿಸಿದ್ದಾರೆ (Development Planning by Lewis, 1966, p. 77).
ಆಧುನಿಕೀಕರಣದ ’ಪ್ರಸರಣ ಪರಿಣಾಮ’ದಿಂದ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂಬ ಸಾಮಾನ್ಯ ನಿ??ಗೆ ಅನೇಕರು ಬಂದಿದ್ದಾರೆ. ಈ ಕಲ್ಪನೆಯನ್ನೂ ಸಹ ಪ್ರೊ. ಮಿರಾಲ್ಡ್ರವರು ನಿರಾಕರಿಸಿದ್ದಾರೆ. ಅವರ ದೃಷ್ಟಿಯಲ್ಲಿ ಬೃಹತ್ ಪ್ರಮಾಣದ ಉದ್ಯಮಗಳ ’ಹರಡುವಿಕೆಯ ಪರಿಣಾಮ’ ’ಹಿಂಮುಖ ಚಲನೆಯ ಪರಿಣಾಮ’ (Back wash Effects) ದಿಂದ ನಿಸ್ಸತ್ತ್ವಗೊಂಡು ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸಿದೆ. ಇಲ್ಲಿ ನಿಜವಾದ ಗಂಡಾಂತರ ಏನೆಂದರೆ ಆಧುನಿಕ ಉದ್ಯಮಗಳಲ್ಲಿ ಶ್ರಮಕ್ಕೆ ಅಲ್ಪಪ್ರಮಾಣದ ಬೇಡಿಕೆ ಹೆಚ್ಚಿದರೆ, ಸಾಂಪ್ರದಾಯಿಕ ಉದ್ಯಮಗಳಲ್ಲಿ ಅದರ ಬೇಡಿಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಡಮೆಯಾಗುವುದು ‘Asian Drama’ by Gunnar Myrdal, Part –II, p. 1175).
ಯಂತ್ರಗಳನ್ನು ಆವಶ್ಯಕತೆಗೆ ತಕ್ಕಂತೆ ವಿಶೇ? ರೀತಿಯಲ್ಲಿ ಉಪಯೋಗಿಸಿ ಮಧ್ಯಮ ಮತ್ತು ಮಧ್ಯವರ್ತಿ (Intermediary) ತಂತ್ರಜ್ಞಾನವನ್ನು ಬೆಳೆಸುವ ಪ್ರಯತ್ನ ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರಾತಿನಿಧಿಕ ರೂಪದಲ್ಲಿ ಈಗಾಗಲೇ ನಡೆಯತ್ತಿದೆ. ಇದರ ಜೊತೆಗೆ ನಗರ ಮತ್ತು ಗ್ರಾಮಗಳಲ್ಲಿರುವ ಲಕ್ಷಾಂತರ ಜನರ ದೈಹಿಕಶ್ರಮವನ್ನು ರಚನಾತ್ಮಕ ಶಕ್ತಿಯಾಗಿ ಪ್ರಜಾಸತ್ತಾತ್ಮಕ ಪರಿಸರದಲ್ಲಿ ಅಮೆರಿಕದ ಪ್ರಖ್ಯಾತ ಸಮಾಜಶಾಸ್ತ್ರಜ್ಞ ಲೆವಿಸ್ ಮುಂಫೋರ್ಡ್ ಹೇಳುವಂತೆ – ’ಮಹಾಯಂತ್ರ’ (Mega Machine) ಅಥವಾ ’ಶ್ರಮಯಂತ್ರ’ (Labour Machine)ವನ್ನು ಸಂಘಟಿಸಿ ಇಚ್ಛಾಪೂರ್ವಕವಾಗಿ ಬಳಸಲು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಸಾಕಷ್ಟು ಅವಕಾಶವಿದೆ (The Myth of the Machine, by Lewis Mumford, 1967, p. 188).
ಆಧುನಿಕ ಕೈಗಾರಿಕಾ ರಚನೆ ಬೃಹತ್ ಪ್ರಮಾಣದ ಯಾಂತ್ರೀಕರಣದ ಕಾರಣದಿಂದಾಗಿ ಕೆಲವು ದೈತ್ಯಾಕಾರದ ವ್ಯಾಪಾರಿ ಸಂಸ್ಥೆಗಳ ಉದಯಕ್ಕೆ ಕಾರಣವಾಗಿ, ಆ ಸಂಸ್ಥೆಗಳ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಪ್ರೊ. ಗಾಲ್ಬ್ರೈತ್ ಅವರು ಹೇಳುವಂತೆ, ವಿಶೇಷತಜ್ಞರಿಂದ, ಯೋಜಕರಿಂದ ಮತ್ತು ತಂತ್ರಜ್ಞರಿಂದ ಕೂಡಿದ ’ತಾಂತ್ರಿಕ ವಿನ್ಯಾಸ’ (Techno Structure) ವನ್ನು ನಿರ್ಮಿಸಿ, ಸರ್ಕಾರಗಳನ್ನು ತಮ್ಮ ಕೈಕೆಳಗೆ ಕೆಲಸ ಮಾಡುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಅಂತಹ ಯಂತ್ರೀಕೃತ ವ್ಯವಸ್ಥೆಗಳಿಂದ ಉಂಟಾಗುವ ಗಂಡಾಂತರಗಳಿಂದ ಪಾರಾಗಲು ಸಂಸ್ಥೆಯ ’ಇನ್ನಿತರ ಮಹತ್ತರ ಉದ್ದೇಶ’ಗಳನ್ನು ಬಲವಾಗಿ ಪ್ರತಿಪಾದನೆ ಮಾಡುವುದರಿಂದ, ಹೊಸದಾಗಿ ಉದಯಿಸಿದ ಕೈಗಾರಿಕಾ ರಾಜ್ಯವು ’ಸಮಾಜದ ಉದಾರವಾದ ಉದ್ದೇಶಗಳಿಗೆ ಸಮರ್ಪಕ ಸ್ಪಂದನೆ’ ಮಾಡುತ್ತದೆ. ಈ ಉದ್ದೇಶಗಳು ಗಾಂಧಿಯವರ ಆದರ್ಶ ಮತ್ತು ಕಾರ್ಯಕ್ರಮಗಳಂತೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕವಾಗಿರಬೇಕು (The New Industrial State, by Prof GalBraith, 1967, p. 399).
(ಮುಂದುವರಿಯುವುದು)