ಕೈಗಾರಿಕಾಕ್ರಾಂತಿಯ ನಂತರ ಉದ್ಯಮಸಾಹಸಿಗಳು ತಮ್ಮ ಆಧುನಿಕ ಆರ್ಥಿಕ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಹೆಚ್ಚು ಸಮರ್ಪಕವಾಗಿ ನಡೆಸಿಕೊಂಡು ಹೋಗಲು ವಿವಿಧ ರೀತಿಯ ಪರ್ಯಾಯ ಉದ್ಯಮ ಸಂಘಟನೆಗಳನ್ನು ಕಟ್ಟಿ ಬೆಳೆಸಿದರು. ಏಕ-ಉದ್ಯಮ, ಪಾಲುದಾರಸಂಸ್ಥೆ, ಸಂಯುಕ್ತ ಬಂಡವಾಳ ಸಂಸ್ಥೆ, ನ್ಯಾಸಮಂಡಲಿ ಅಥವಾ ಟ್ರಸ್ಟ್, ಸಹಕಾರಿ ಸಂಘಗಳು, ಲಾಭಹಂಚಿಕೊಳ್ಳುವ ಸಂಸ್ಥೆಗಳು, ಮತ್ತು ಸರ್ಕಾರೀ ಉದ್ಯಮಗಳು ಇವು ಪ್ರಮುಖವಾದವು. ಈ ಮೇಲ್ಕಂಡ ಎಲ್ಲ ರೀತಿಯ ಸಂಘಟನೆಗಳು ಜೊತೆಜೊತೆಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಸಂಯುಕ್ತ ಬಂಡವಾಳ ಕಂಪೆನಿಯು ಬಂಡವಾಳಶಾಹೀ ಆರ್ಥಿಕವ್ಯವಸ್ಥೆಯಲ್ಲಿ ಬೃಹತ್ಪ್ರಮಾಣದಲ್ಲಿ ಉತ್ಪಾದನೆ ಮಾಡುವ, ಅತಿ ಹೆಚ್ಚು ಪ್ರಚಲಿತವಿರುವ ಮತ್ತು ಅತಿ ಹೆಚ್ಚು ಲಾಭಗಳಿಸುವ ಉದ್ದೇಶ ಹೊಂದಿದ ವ್ಯಾವಹಾರಿಕ ಸಂಘಟನೆಯಾಗಿ ಹೊರಹೊಮ್ಮಿತು. ಕೈಗಾರಿಕಾಕ್ರಾಂತಿಯ ಪೂರ್ವದಲ್ಲಿ ಸಣ್ಣಪ್ರಮಾಣದ ಉದ್ಯಮಗಳು ವಿರಳವಾಗಿದ್ದವು. ಆದರೆ ಈಗ ಪರಿಸ್ಥಿತಿ ತಿರುವುಮುರುವಾಗಿದೆ.
ಸಂಯುಕ್ತ ಬಂಡವಾಳ ಕಂಪೆನಿಗಳ (Joint Stock Company) ಪ್ರಾಬಲ್ಯ ಮತ್ತು ಬೆಳವಣಿಗೆಗೆ ಅನೇಕ ಕಾರಣಗಳನ್ನು ಕೊಡಲಾಗಿದೆ. ಅವುಗಳೆಂದರೆ ಹೊಸಹೊಸ ಯಂತ್ರಗಳ ಶೋಧನೆ, ಹೊಸ ಉತ್ಪಾದನಾಕ್ರಮಗಳು, ಹೊಸ ಸಂಪನ್ಮೂಲಗಳ ಕಂಡುಹಿಡಿಯುವಿಕೆ, ಶ್ರಮವಿಭಜನೆ, ವಸಾಹತುಶಾಹಿಯ ವಿಸ್ತರಣೆ, ಮಾರುಕಟ್ಟೆಯ ಗಾತ್ರದ ಬೆಳವಣಿಗೆ, ಸಾರಿಗೆ ಮತ್ತು ಸಂಪರ್ಕ ಕ್ಷೇತ್ರಗಳಲ್ಲಾದ ಕ್ರಾಂತಿಕಾರಕ ಬದಲಾವಣೆಗಳು ಮತ್ತು ಜನಸಂಖ್ಯೆಯ ಹೆಚ್ಚಳ ಇತ್ಯಾದಿ.
ಜೊತೆಜೊತೆಗೆ ಬೃಹತ್ಪ್ರಮಾಣದ ಉತ್ಪಾದನೆ ಅನೇಕ ರೀತಿಯ ಸಮಸ್ಯೆಗಳ ಉದ್ಭವಕ್ಕೂ ಕಾರಣೀಭೂತವಾಗಿದೆ. ಅವುಗಳಲ್ಲಿ ಪ್ರಮುಖವಾದುದು –
- ಆದಾಯ ಮತ್ತು ಸಂಪತ್ತು ಕೆಲವೇ ವ್ಯಕ್ತಿಗಳ ಅಥವಾ ಗುಂಪುಗಳ ಕೈಯಲ್ಲಿ ಸಂಚಯಿತವಾಗಿ ಆರ್ಥಿಕ ಅಸಮಾನತೆ, ಬಡತನ ಮತ್ತು ನಿರುದ್ಯೋಗಗಳಿಗೆ ಕಾರಣವಾಗಿದೆ.
- ಇದು ಕೇವಲ ಕೆಲವು ’ಹಣದ ಚೀಲವುಳ್ಳ ವ್ಯಕ್ತಿಗಳ’ ಸಂಘಟನೆಯಾಗಿ ಅನುಭೋಗಿಗಳ ಆವಶ್ಯಕತೆಯನ್ನು ಪರಿಗಣಿಸದೆ ಮಿತಿಮೀರಿದ ಉತ್ಪಾದನೆ ಅಥವಾ ಕೊರತೆಯುಳ್ಳ ಉತ್ಪಾದನೆಗೆ ಕಾರಣೀಭೂತವಾಗಿ ಆರ್ಥಿಕ ಆವರ್ತನಗಳಿಗೆ (Trade Cycles) ದಾರಿ ಮಾಡಿಕೊಡುತ್ತಿದೆ.
- ಯಂತ್ರಗಳ ಮೇಲೆ ಅತಿ ಅವಲಂಬನೆಯಾಗಿ ಶ್ರಮಿಕರ ಶೋಷಣೆ ಮತ್ತು ಸುಲಿಗೆಗೆ ದಾರಿ ಮಾಡಿಕೊಟ್ಟು ಬಡವರು ಮತ್ತು ಶ್ರೀಮಂತರು ಎಂಬ ಎರಡು ವರ್ಗಗಳ ಉದಯಕ್ಕೆ ಕಾರಣವಾಗಿದೆ.
- ಬೃಹತ್ಪ್ರಮಾಣದ ಉತ್ಪಾದನೆಯ ಯಶಸ್ಸು ಮಾರುಕಟ್ಟೆಯ ಗಾತ್ರದ ಬೆಳವಣಿಗೆಯ ಮೇಲೆ ಅವಲಂಬಿತವಾಗಿದೆ.
ಮೇಲಿನ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಪ್ರತಿಯೊಂದು ದೇಶವೂ ತನ್ನ ಮಾರುಕಟ್ಟೆಯ ಗಾತ್ರದ ವಿಸ್ತಾರ ಆಗಬೇಕು ಮತ್ತು ತನ್ನ ಮಾರುಕಟ್ಟೆಯ ಪ್ರಭಾವ ಇತರ ದೇಶಗಳ ಮಾರುಕಟ್ಟೆಯ ಮೇಲೆ ಆಗಬೇಕೆಂದು ವಸಾಹತುಶಾಹೀ, ಸಾಮ್ರಾಜ್ಯಶಾಹೀ ಮತ್ತು ಜನಾಂಗೀಯವಾದ ಇತ್ಯಾದಿಗಳ ಸೋಗಿನಲ್ಲಿ ಪ್ರಯತ್ನ ಮಾಡಿ ದೇಶದೇಶಗಳ ನಡುವೆ ಸಂಘರ್ಷವೇರ್ಪಟ್ಟು, ಅಂತಿಮವಾಗಿ ಪ್ರಪಂಚಯುದ್ಧಕ್ಕೆ ಕಾರಣವಾಗುತ್ತಿದೆ.
ವ್ಯಕ್ತಿಸ್ವಾತಂತ್ರ್ಯ, ಪ್ರಗತಿ ಮತ್ತು ಅಹಿಂಸೆಯ ತತ್ತ್ವಗಳ ಮೂಲಕ ಗಾಂಧಿಯವರು ಈ ಮೇಲ್ಕಂಡ ವಿವಿಧ ಉದ್ಯಮ ಸಂಘಟನೆಗಳಲ್ಲಿ ಏಕ-ಉದ್ಯಮ ಮತ್ತು ಅದಕ್ಕೆ ಪೂರಕವಾದ ಸಹಕಾರಿ ಮಾದರಿಯ ಉದ್ಯಮಶೀಲ ಸಂಘಟನೆಯನ್ನು ಮಾತ್ರ ಸಮರ್ಥಿಸಿದರು. “ಬೃಹತ್ಪ್ರಮಾಣದ ಉತ್ಪಾದನೆ ಪ್ರಪಂಚದ ಎಲ್ಲ ಸಂಕ?ಗಳಿಗೂ ಕಾರಣ” ಎಂದು ಅವರು ವಿಶ್ಲೇಷಿದರು. “ನಾನು ಅತ್ಯಂತ ಖಚಿತವಾಗಿ ನನ್ನ ನಂಬಿಕೆಯಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಬೃಹತ್ ಪ್ರಮಾಣದ ಉತ್ಪಾದನೆಯ ಹುಚ್ಚು ಪ್ರಪಂಚದಲ್ಲಿ ಅನೇಕ ಬಿಕ್ಕಟ್ಟು ಮತ್ತು ಸಂಕ?ಗಳಿಗೆ ಕಾರಣವಾಗಿದೆ” [N.K. Bose, Selections from Gandhi, sec. 245].
ಹೊಸ ಸೂತ್ರದ ಮಂಡನೆ
ಗಾಂಧಿಯವರು ಪ್ರಚಲಿತವಾಗಿದ್ದ ಸಾಮೂಹಿಕ ಉತ್ಪಾದನಾ ಪದ್ಧತಿಯನ್ನು ಸಮರ್ಥಿಸಲಿಲ್ಲ. ಬದಲಿಗೆ ’ಸಾಮೂಹಿಕ ಉತ್ಪಾದನೆಯಲ್ಲ; ಜನಸಮುದಾಯದಿಂದ ಉತ್ಪಾದನೆ’ ಎಂಬ ಹೊಸ ಪರ್ಯಾಯ ಸೂತ್ರವೊಂದನ್ನು ಮಂಡಿಸಿದರು. ನಿಜವಾಗಿಯೂ ಬೃಹತ್ಪ್ರಮಾಣದ ಉತ್ಪಾದನೆ ಭಾರತಕ್ಕೆ ಒಂದು ಆದರ್ಶ ಎಂಬ ನಂಬಿಕೆ ಅವರದು. ಆದರೆ ಅದು ದಂಡಶಕ್ತಿಯ ಆಧಾರದ ಮೇಲೆ ನಿಂತ ಉತ್ಪಾದನೆಯಲ್ಲ. “ನಮ್ಮ ರಾಟೆಯ ಸಂದೇಶವೂ ಬೃಹತ್ ಉತ್ಪಾದನೆಯೇ. ಚರಕಾದಿಂದ ತಯಾರಿಸುವ ಬಟ್ಟೆ ನಿಜವಾಗಿಯೂ ಜನಗಳ ಮನೆಮನೆಗಳಲ್ಲಿ ನಡೆಯುತ್ತಿರುವ ಸಾಮೂಹಿಕ ಉತ್ಪಾದನೆ. ಪ್ರತಿಯೊಬ್ಬ ಮನುಷ್ಯ ತನ್ನ ಮನೆಯಲ್ಲಿ ಉತ್ಪಾದಿಸುವ ಪ್ರಮಾಣವನ್ನು ಲಕ್ಷಗಳಿಂದ ಗುಣಿಸಲ್ಪಟ್ಟರೆ ಆಗ ನಿಜವಾಗಿಯೂ ಅದು ಬೃಹತ್ಪ್ರಮಾಣದ ಸಾಮೂಹಿಕ ಉತ್ಪಾದನೆ ಆಗುತ್ತದೆ. ನಿಮ್ಮ ಕಲ್ಪನೆಯ ಬೃಹತ್ ಉತ್ಪಾದನೆ ನನ್ನ ಕಲ್ಪನೆಗೆ ವಿರುದ್ಧವಾಗಿದೆ. ನಿಮ್ಮ ಪಾರಿಭಾಷಿಕ ಪದದ ಪ್ರಕಾರ ಕೇವಲ ಕೆಲವೇ ವ್ಯಕ್ತಿಗಳು ಬೃಹತ್ ಯಂತ್ರಗಳ ಸಹಾಯದಿಂದ ಉತ್ಪಾದಿಸುವ ಉತ್ಪನ್ನವನ್ನು ಸಾಮೂಹಿಕ ಉತ್ಪಾದನೆ ಎನ್ನುವಿರಿ. ಅದು ಸರಿಯಲ್ಲ. ಯಂತ್ರಗಳು ಸರಳ ಮತ್ತು ಸುಲಭವಾಗಿದ್ದು ಸಾಮಾನ್ಯಜನರು ಲಕ್ಷಾಂತರ ಮನೆಗಳಲ್ಲಿ ಉಪಯೋಗಿಸುವಂತಿರಬೇಕು. ಯಂತ್ರಗಳ ಬಳಕೆ ಅತಿ ಕಡಮೆ ಇದ್ದು ಕಾರ್ಮಿಕರ ಉದ್ಯೋಗ ಹೆಚ್ಚಾಗಿ ಅವರ ಶಾರೀರಿಕ ಶ್ರಮದ ಮೂಲಕ ಉತ್ಪಾದನೆ ಹೆಚ್ಚಾಗಬೇಕೇ ಹೊರತು ಕೆಲವೇ ಮಂದಿಯ ಬೃಹತ್ ಯಂತ್ರಗಳಿಂದ ಅಲ್ಲ. ಮಾನವರ ದುಡಿಮೆಯ ಶಕ್ತಿಯನ್ನು ಹೆಚ್ಚಿಸಿ ತನ್ಮೂಲಕ ಉತ್ಪಾದನೆ ಆದ ಹೆಚ್ಚುವರಿಯನ್ನು ಇತರ ವಸ್ತುಗಳನ್ನು ಕೊಳ್ಳಲು ಉಪಯೋಗಿಸುವಂತಿರಬೇಕು” (ಹರಿಜನ, ೨-೧೧-೧೯೩೪, ಪು. ೩೦೧, ೩೦೨).
“ಹೆಚ್ಚುವರಿ ದುಡಿಮೆಯ ಮೌಲ್ಯವನ್ನು ಅವನು ಬೇಕಾದರೆ ಬಟ್ಟೆ, ಧಾನ್ಯ ಅಥವಾ ತಾನು ತಯಾರಿಸಲಾಗದ ಪ್ಯಾರಾಫಿನ್ ಎಣ್ಣೆ ಪಡೆಯಲು ಉಪಯೋಗಿಸಬಹುದು. ಆಗಲೇ ಅದು ಸ್ವತಂತ್ರವಾದ, ನ್ಯಾಯವಾದ ಮತ್ತು ಸಮಾನವಾದ ಪರಿಶ್ರಮ ವಿನಿಮಯವಾಗುವುದು. ಅದರಿಂದ ನ್ಯಾಯೋಚಿತ ವಿನಿಮಯ ದೊರೆತು ಇಂದಿನ ಸಾಮೂಹಿಕ ಉತ್ಪಾದನೆಯ ಮೂಲಕ ಕೆಲವೇ ಮಂದಿ ಮಾಡುವ ಹಗಲುದರೋಡೆಯನ್ನು ನಿಲ್ಲಿಸಬಹುದು.
ಯಂತ್ರಗಳ ಬಳಕೆಯ ಅನುಕೂಲ ನೋಡಿ: ಉತ್ಪಾದನೆಯನ್ನು ಎ? ಬೇಕಾದರೂ ಹೆಚ್ಚಿಸಬಹುದು. ಆದರೆ ಉತ್ಪಾದನೆಯ ಅಪಾರ ಕೇಂದ್ರೀಕರಣದ ಪರಿಣಾಮ ನಿರುದ್ಯೋಗವೇ. ಸುಧಾರಿತಯಂತ್ರಗಳ ಬಳಕೆಯ ದೆಸೆಯಿಂದ ಉಚ್ಚಾಟನೆಗೊಂಡವರಿಗೆ ಬೇರೆ ಕೆಲಸ ಬೇರೆ ಕಡೆ ಸಿಗಬಹುದು ಎಂದು ನೀವು ಹೇಳಬಹುದು. ಆದರೆ ಒಂದು ಸುಸಂಘಟಿತವಾದ ರಾ?ದಲ್ಲಿ ಉದ್ಯೋಗಗಳು ನಿರ್ದಿ? ಮತ್ತು ಪರಿಮಿತವಾಗಿರುತ್ತವೆ. ಕೆಲಸಗಾರರಿಗೆ ಯಾವುದೋ ಒಂದು ಯಂತ್ರಕೌಶಲದಲ್ಲಿ ಪರಿಣತಿ ಇರುತ್ತದೆ; ಆದುದರಿಂದ ಬೇರೆ ಕಡೆ ಕೆಲಸ ಸಿಗುವುದು ಕ?ದಾಯಕ. ಇದು ನಮ್ಮ ಅನುಭವಕ್ಕೆ ಬಂದಂತಹ ಸಂಗತಿ. ಇಂದು ಇಂಗ್ಲೆಂಡಿನಲ್ಲಿ ೩೦ ಲಕ್ಷಕ್ಕೂ ಮೀರಿ ನಿರುದ್ಯೋಗಿಗಳಿದ್ದಾರೆ. ಅವರೆಲ್ಲರನ್ನೂ ಒಂದೇ ದಿನದಲ್ಲಿ ಕಾರ್ಖಾನೆಯಿಂದ ಉಳುಮೆಗೆ ಕಳಿಸುವುದು ಸಾಧ್ಯವಿಲ್ಲ. ನಿಜವಾಗಿಯೂ ಇದು ಒಂದು ಭಾರಿ ಸಮಸ್ಯೆ.”
’ಅಮೆರಿಕ ಮತ್ತು ಕೆನಡಾ ದೇಶಗಳಲ್ಲಿ ಯಂತೀಕೃತ ಬೇಸಾಯದಿಂದ ಆದಂತೆ ಭಾರತದಲ್ಲೂ ಲಾಭಕರವಾಗಬಹುದಲ್ಲವೇ?’ ಎಂಬ ಪ್ರಶ್ನೆಗೆ ಗಾಂಧಿಯವರ ಉತ್ತರ ಇದಾಗಿತ್ತು: “ಬಹುಶಃ ಆದೀತು. ಆದರೆ ಪೂರ್ಣ ಲಾಭವಾಗಬಹುದು ಎಂದು ಸ್ಪ?ವಾಗಿ ಮತ್ತು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಕಾರಣವೆಂದರೆ ಇಲ್ಲಿಯವರೆಗೆ ಭಾರತದಲ್ಲಿ ನೂತನ ಕೃಷಿಯಂತ್ರಗಳನ್ನು ಲಾಭಕರವಾಗಿ ಬಳಸಲು ಸಾಧ್ಯವಾಗಿಲ್ಲ. ಎಚ್ಚರಿಕೆ ಪ್ರಯೋಗ ನಮ್ಮಲ್ಲಿ ನಡೆಯುತ್ತಿದೆ. ಅಧಿಕ ಮಾನವಶಕ್ತಿ ಇರುವ ಕಾರಣ ’ಶಕ್ತಿ ಚಾಲಿತ ಯಂತ್ರ’ಗಳಿಂದ ನಾವು ಬೇಸಾಯ ಮಾಡಬೇಕು ಎಂದು ನನಗೆ ಅನಿಸುವುದಿಲ್ಲ” (ಹರಿಜನ, ೨-೧೧-೧೯೩೪).
ಗಾಂಧಿಯವರು ಏಕಸ್ವಾಮ್ಯ ಮತ್ತು ವಿಶೇಷ ಅಧಿಕಾರ ಮತ್ತು ಸವಲತ್ತುಗಳನ್ನು ದ್ವೇಷಿಸುತ್ತಿದ್ದರು. “ಯಾವುದರಲ್ಲಿ ಜನಸಾಮಾನ್ಯರು ತಮ್ಮ ಪಾಲು ಪಡೆಯಲು ಸಾಧ್ಯವಿಲ್ಲವೋ ಅಂತಹದು ನನಗೂ ಸಹ ನಿಷಿದ್ಧ” ಎಂದರು (Ibid).
ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆ ಜೊತೆಯಲ್ಲಿರಬೇಕು
ಗಾಂಧಿಯವರ ದೃಷ್ಟಿಯಲ್ಲಿ ಬೃಹತ್ಪ್ರಮಾಣದ ಉತ್ಪಾದನೆ ಒಂದಲ್ಲ ಒಂದು ದಿನ ಅದರ ಪರಾಕಾ?ಯನ್ನು ತಲಪಿದಾಗ ಹೊಸ ಮಾರುಕಟ್ಟೆಗಳು ಸಿಗದೇ ಇದ್ದರೆ ಉತ್ಪಾದನೆಯನ್ನು ನಿಲ್ಲಿಸಬೇಕಾದೀತು. ಬೃಹತ್ಪ್ರಮಾಣದ ಉತ್ಪಾದನೆಯ ಜೊತೆಗೆ ಅಷ್ಟು ದೊಡ್ಡಮಟ್ಟದಲ್ಲಿ ವಿತರಣಾವ್ಯವಸ್ಥೆ ಆಗದಿದ್ದರೆ ಪ್ರಪಂಚದಲ್ಲಿ ದೊಡ್ಡ ದುರಂತವೇ ನಡೆದೀತು – ಎಂದರು. ಉದಾಹರಣೆಗೆ ಫೋರ್ಡ್ ಕಾರುಗಳನ್ನೇ ತೆಗೆದುಕೊಳ್ಳಿ. ಕಾರುಗಳ ಉತ್ಪಾದನೆ ಅತ್ಯಂತ ಗರಿ?ಮಟ್ಟವನ್ನು ತಲಪಿದ ನಂತರ ಅದರ ಉತ್ಪಾದನೆಯನ್ನು ಮುಂದುವರಿಸಲು ಸಾಧ್ಯವಿಲ್ಲ. “ಬೃಹತ್ಪ್ರಮಾಣದ ಕಾರುಗಳ ಉತ್ಪಾದನೆಯ ಜೊತೆಗೆ ಬೃಹತ್ ಪ್ರಮಾಣದ ವಿತರಣೆಯ ವ್ಯವಸ್ಥೆ ಆಗದೆ ಹೋದ ಪಕ್ಷದಲ್ಲಿ ಉತ್ಪಾದನೆ ಆದ ಕಾರುಗಳು ಮಾರಾಟವಾಗದೆ ಭಯಂಕರ ಆರ್ಥಿಕ ಹಿನ್ನಡೆಯನ್ನು ಸೃಷ್ಟಿ ಮಾಡಬಹುದು” ಎಂದರು.
“ಬೃಹತ್ಪ್ರಮಾಣದ ಉತ್ಪಾದನಾ ವ್ಯವಸ್ಥೆಗೆ ಬಳಕೆದಾರನ ಆವಶ್ಯಕತೆಯ ಪರಿವೆಯೇ ಇರುವುದಿಲ್ಲ. ಅದು ಸ್ವತಂತ್ರ ಗುಣವನ್ನು ಹೊಂದಿದ್ದರೆ ಅಗಣಿತವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅದರಲ್ಲಿ ಅನೇಕ ಪರಿಮಿತಿಗಳು ಅಂತರ್ಗತವಾಗಿವೆ. ಎಲ್ಲ ದೇಶಗಳೂ ಏಕಕಾಲಕ್ಕೆ ಬೃಹತ್ಪ್ರಮಾಣದ ಉತ್ಪಾದನೆಯ ತಂತ್ರವನ್ನು ಅನುಸರಿಸಿದರೆ ಆಗ ಅವುಗಳ ಸರಕುಗಳಿಗೆ ಸಾಕಷ್ಟು ಪ್ರಮಾಣದ ದೊಡ್ಡ ಮಾರುಕಟ್ಟೆ ಇರುವುದಿಲ್ಲ. ಆಗ ಬೃಹತ್ ಪ್ರಮಾಣದ ಉತ್ಪಾದನೆ ನಿಲ್ಲಲೇಬೇಕು.”
ಕಲ್ಲಿದ್ದಲನ್ನು, ಹಬೆಯನ್ನು ಬಳಸುವ ಬದಲು ಮೂಲೆಮೂಲಗಳಿಗೂ ತಂತಿಯ ಮೂಲಕ ವಿದ್ಯುತ್ತನ್ನು ಪೂರೈಸಿ ಕೈಗಾರಿಕೀಕರಣವನ್ನು ವಿಕೇಂದ್ರೀಕರಣಗೊಳಿಸುವ ಫೋರ್ಡರ ನೆಚ್ಚಿನ ಯೋಜನೆಯ ಬಗ್ಗೆ ಅಮೆರಿಕದ ಒಬ್ಬ ಪತ್ರಕರ್ತರು ಮಾಹಿತಿ ನೀಡಿದರು. ಈ ಯೋಜನೆಯು ಒಂದು ಸಾಧ್ಯವಾಗುವ ಪರಿಹಾರ ಎಂದು ಹೇಳಿ ನೂರಾರು, ಸಾವಿರಾರು ಸಣ್ಣಸಣ್ಣ, ಚೊಕ್ಕದಾದ, ಹೊಗೆ ಇಲ್ಲದ ಅಲ್ಲಲ್ಲಿ ಹಳ್ಳಿಜನ ಸಮುದಾಯ ನಡೆಸುವ ಅನೇಕ ಕಾರ್ಖಾನೆಗಳಿಂದ ಕೂಡಿದ ಹಳ್ಳಿಯ ಚಿತ್ರಣವನ್ನು ಗಾಂಧಿಯವರ ಮುಂದೆ ಇಟ್ಟರು. ಆಗ ಗಾಂಧಿಯವರು ’ಇವೆಲ್ಲ ಸಾಧ್ಯವೆಂದು ಭಾವಿಸೋಣ’ ಎಂದರು. ಪತ್ರಕರ್ತರು ಮುಂದುವರಿದು ಈ ಚಿತ್ರಣ ಎ?ರಮಟ್ಟಿಗೆ ನಿಮ್ಮ ಆಕ್ಷೇಪವನ್ನು ಪೂರ್ಣಗೊಳಿಸಬಹುದು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಗಾಂಧಿಯವರು “ನನ್ನ ವಿರೋಧವನ್ನು ಅವು ಎದುರಿಸಲಾರವು. ಏಕೆಂದರೆ ಅಸಂಖ್ಯ ಸ್ಥಳಗಳಲ್ಲೇನೋ ನೀವು ಉತ್ಪಾದನೆ ಮಾಡುವಿರಿ. ಆದರೆ ಅವಕ್ಕೆಲ್ಲ ವಿದ್ಯುಚ್ಚಕ್ತಿ ಒಂದು ಆರಿಸಿದ ಕೇಂದ್ರದಿಂದ ಬಂದೀತು. ಒಂದೇ ಒಂದು ಮಾನವನಿರ್ಮಿತ ವ್ಯವಸ್ಥೆಯ ಕೈಯಲ್ಲಿ ಇ?ಂದು ಅಪಾರ ಶಕ್ತಿಯ ಕೇಂದ್ರೀಕರಣವೇ? ಈ ಕಲ್ಪನೆಯೇ ನನಗೆ ಭೀತಿದಾಯಕ. ಪರಿಣಾಮವಾಗಿ ಬೆಳಕಿಗೆ, ಗಾಳಿಗೆ, ನೀರಿಗೆ ಮತ್ತು ಇನ್ನಿತರ ವಸ್ತುಗಳಿಗೆ ನಾನು ಈ ಶಕ್ತಿಗೆ ಅಧೀನವಾಗಬೇಕು. ಇದು ತೀರಾ ಭಯಂಕರವಾದ ಕಲ್ಪನೆ” ಎಂದು ನುಡಿದರು (D.G. Tendulkar, Mahatma, Vol II, p. 166).
ರಷ್ಯಾದ ಉದಾಹರಣೆ
ಜನಗಳ ಶೋಷಣೆಯನ್ನು ಮಾಡದೆ ಸಾಮೂಹಿಕ ಉತ್ಪಾದನಾ ಪದ್ಧತಿಯನ್ನು ಜಾರಿಗೆ ತಂದ ರಷ್ಯಾದ ಕಾರ್ಯಾಚರಣೆಯ ಬಗ್ಗೆ ಗಾಂಧಿ ಈ ರೀತಿ ಹೇಳಿದರು: “ಅಲ್ಲಿ ಉತ್ಪಾದನೆ ಮತ್ತು ವಿತರಣೆಯನ್ನು ಪ್ರಭುತ್ವ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ. ಇದು ಒಂದು ಹೊಸ ಪ್ರಯೋಗ. ಈ ಪ್ರಯೋಗ ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂದು ನನಗೆ ಅರಿವಿಲ್ಲ. ರಾಜ್ಯದ ಬಲವನ್ನು ಉಪಯೋಗ ಮಾಡದೆ ಈ ಪ್ರಯೋಗವನ್ನು ಮಾಡಿದ್ದರೆ ನಾನು ಅದಕ್ಕಾಗಿ ನನ್ನ ಬಾಯಿ ಬಿಡುತ್ತಿದ್ದೆನೋ ಏನೋ. ಆದರೆ ಅಲ್ಲಿ ಇಂದು ಸಾಮೂಹಿಕ ಉತ್ಪಾದನೆ ದಂಡಶಕ್ತಿಯ ಆಧಾರದ ಮೇಲೆ ನಡೆಯುತ್ತಿರುವ ಕಾರಣ ಅದು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಮತ್ತು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಹೇಳಲು ಬರುವುದಿಲ್ಲ.”
ಸಮಾಜವಾದಿ ಆರ್ಥಿಕವ್ಯವಸ್ಥೆಯಲ್ಲಿ ಬಲಪ್ರಯೋಗದ ಮೂಲಕ ಸಾಮೂಹಿಕ ಉತ್ಪಾದನೆ ಮತ್ತು ಸಮಾನ ವಿತರಣೆ ವ್ಯವಸ್ಥೆಯನ್ನು ಅಳವಡಿಸಿದರೂ ಸಹ ಆಗ ಅದು ಬಂಡವಾಳಶಾಹೀ ವ್ಯವಸ್ಥೆಗೆ ಪರ್ಯಾಯ ಪರಿಹಾರವಾಗಲಾರದು – ಎಂದರು ಗಾಂಧಿ. “ನಾನು ಯಾವ ಆರ್ಥಿಕವ್ಯವಸ್ಥೆಯಲ್ಲಿ ಬಲಪ್ರಯೋಗ ಇರುವುದಿಲ್ಲವೋ ಅಂತಹ ವ್ಯವಸ್ಥೆಯನ್ನು ಸ್ವೀಕರಿಸುತ್ತೇನೆ. ಆದರೆ ಇಂದು ಎಲ್ಲ ವ್ಯವಸ್ಥೆಗಳೂ ಬಲಪ್ರಯೋಗದ ಮೇಲೆ ನಿಂತಿರುವುದರಿಂದ ಮುಂದೆ ಅವು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತವೆ ಎಂದು ಹೇಳಲಾಗದು” ಎಂದು ಗಾಂಧಿ ನುಡಿದರು.
ಬೆಲೆ ಕಡಮೆ ಇಲ್ಲ
ಗಾಂಧಿಯವರ ಪ್ರಕಾರ ಉತ್ಪಾದಕರು ಲಾಭಗಳಿಸಲು ಯೋಚಿಸುವರೇ ವಿನಾ ಜನಸೇವೆ ಮಾಡಲು ಅಲ್ಲ. ಈ ಕಾರಣದಿಂದ ಅವರು ಅನುಭೋಗಿಗಳಿಗೆ ಅನುಕೂಲವಾಗಲಿ ಎಂದು ಬೆಲೆ ಕಡಮೆ ಮಾಡುತ್ತಾರೆಂಬುದು ಕೇವಲ ಭ್ರಮೆ. ಕೃಷಿ-ಆಧಾರಿತ ದೇಶಗಳು ಋತುಮಾನದ ಬದಲಾವಣೆಯಿಂದಾಗುವ ಏರುಪೇರುಗಳನ್ನು ಸರಿಮಾಡಲು ಸಹಾಯಕ ಉಪ- ಉದ್ಯಮಗಳನ್ನು ರೈತರು ಪ್ರಾರಂಭಿಸುವ ಅನಿವಾರ್ಯತೆ ಇದೆ ಎಂದು ಗಾಂಧಿಯವರು ಭಾವಿಸಿದ್ದರು. “ನಮ್ಮ ಗಿರಣಿಗಳು ನಮ್ಮ ಅಗತ್ಯಗಳನ್ನು ಪೂರೈಸುವ? ಬಟ್ಟೆ ಉತ್ಪಾದಿಸುತ್ತಿಲ್ಲ. ಅಕಸ್ಮಾತ್ ಅದನ್ನು ಉತ್ಪಾದಿಸಿದರೂ ಸಹ ಅದರ ಬೆಲೆಗಳು ನಾವು ಎಲ್ಲಿಯವರೆಗೆ ಒತ್ತಾಯ ಮಾಡುವುದಿಲ್ಲವೊ ಅಲ್ಲಿಯವರೆಗೆ ಕಡಮೆ ಆಗುವುದಿಲ್ಲ. ನಿಜವಾಗಿಯೂ ಅವರು ಹಣ ಸಂಪಾದನೆ ಮಾಡುವವರಾದ್ದರಿಂದ ದೇಶದ ಅಗತ್ಯಕ್ಕೆ ತಕ್ಕಂತೆ ಬೆಲೆಯನ್ನು ನಿಯಂತ್ರಿಸುವುದಿಲ್ಲ. ಚರಕದಿಂದ ನೂಲು ತೆಗೆಯುವ ಕೆಲಸ ಪ್ರಾರಂಭ ಮಾಡಿದರೆ ಆ ಲಕ್ಷಾಂತರ ಮಂದಿಯ ಕೈಯಲ್ಲಿ ಹಣದ ಚಲಾವಣೆ ಆದೀತು. ಪ್ರತಿ ಒಂದು ಕೃಷಿಕೇಂದ್ರಿತ ದೇಶ ತನ್ನ ರೈತರು ಬಿಡುವಿನ ವೇಳೆಯಲ್ಲಿ ಸಮಯದ ಸದುಪಯೋಗ ಮಾಡಲು ಸಹಾಯಕ ಉಪ-ಉದ್ಯಮಗಳ ಉಪಯೋಗ ಮಾಡುವ ಅಗತ್ಯವಿದೆ. ಭಾರತದಲ್ಲಿ ನೂಲುವ ಉದ್ಯಮ ಅಂತಹದು. ಇದು ನನ್ನ ಕನಸಿನ ಆದರ್ಶ. ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಅಸೂಯೆ ಪಡುವಂತಹ ಆಶ್ಚರ್ಯಚಕಿತಗೊಳ್ಳುವಂತಹ ಯಾವ ಅಪ್ರತಿಮ ಕಲಾಪ್ರತಿಭೆಗಳ ನಾಶವಾಗಿ ಭಾರತಕ್ಕೆ ಗುಲಾಮತನ ಮತ್ತು ದಾರಿದ್ರ್ಯ ಬಂದಿತೋ ಅಂತಹ ಉದ್ದಿಮೆಗಳ ಪುನರುತ್ಥಾನದ ಅಗತ್ಯವಿದೆ” (D.G. Tendulkar, Mahatma, Vol. III, p. 168).
ಇಂಗ್ಲೆಂಡ್ ಅಮೆರಿಕ ಸಮಸ್ಯೆಗೆ ಉತ್ತರ
ಬೃಹತ್ಪ್ರಮಾಣದ ಉತ್ಪಾದನೆಯ ಸಂಕ?ಗಳನ್ನು ದೂರಮಾಡಲು ಗಾಂಧಿಯವರ ವಾದ ಹೀಗಿದೆ: “ಉತ್ಪಾದನೆ ಮತ್ತು ಅದರ ಉಪಯೋಗ ಒಂದೇ ಸ್ಥಳದಲ್ಲಿರಬೇಕು. ಆಗ ಉತ್ಪಾದನಾ ಪ್ರಮಾಣ ಉಪಯೋಗದ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಬಹುದು. ಆಗ ಹೆಚ್ಚಿನ ಪ್ರಮಾಣದ ಉತ್ಪಾದನೆ ಮಾಡಬೇಕೆಂಬ ಉತ್ಕಟ ಹಂಬಲವಿರುವುದಿಲ್ಲ. ಇದರಿಂದ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. ಉದಾಹರಣೆಗೆ ಇಂದು ಇಂಗ್ಲೆಂಡ್ ಇಡೀ ಪ್ರಪಂಚಕ್ಕೆ ಬಟ್ಟೆ ಮಾರುವ ಅಂಗಡಿ. ತನ್ನ ಮಾರುಕಟ್ಟೆಗಾಗಿ ಇಡೀ ಪ್ರಪಂಚವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಹಂಬಲ, ಪ್ರಯತ್ನ ಅದರದು. ತನ್ನ ದೇಶಕ್ಕೆ ಬೇಕಾದ ಪ್ರಮಾಣದ ಬಟ್ಟೆಯನ್ನು ಮಾತ್ರ ಉತ್ಪಾದನೆ ಮಾಡತೊಡಗಿದರೆ ಆಗ ಬೃಹತ್ಪ್ರಮಾಣದ ಬಟ್ಟೆ ಉತ್ಪಾದನೆ ನಿಂತೀತು, ಇತರ ದೇಶಗಳ ಶೋಷಣೆಯೂ ನಿಂತೀತು. ಜನಕ್ಕೆ ಅಗತ್ಯವಿರಲಿ ಬಿಡಲಿ, ಅವರನ್ನು ಬಡತನಕ್ಕೆ ದೂಡಿಯಾದರೂ ಬಂಗಾರವನ್ನು ತನ್ನ ದೇಶಕ್ಕೇ ತರೋಣ ಎಂದು ಬೃಹತ್ಪ್ರಮಾಣದ ಉತ್ಪಾದನೆಯನ್ನು ಅದು ಮುಂದುವರಿಸುವುದಿಲ್ಲ.
ಅಮೆರಿಕ ಬೃಹತ್ ಉತ್ಪಾದನೆಯ ಪರಾಕಾಷ್ಠೆಯನ್ನು ತಲಪಿದೆ. ಹೊಸಹೊಸ ತಳುಕಿನ ವಸ್ತುಗಳನ್ನು ತನ್ನ ಅಸಮಾನ ಕೌಶಲದಿಂದ ಉತ್ಪಾದಿಸಿ ಜಗತ್ತಿನಲ್ಲಿ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿದೆ. ಪರಿಣಾಮವೆಂದರೆ ಕೇವಲ ಕೆಲವರ ಕೈಯಲ್ಲಿ ಅಪಾರ ಪ್ರಮಾಣದ ಹಣಸಂಗ್ರಹವಾಗಿದೆ. ಇಷ್ಟಾದರೂ ಅದಕ್ಕೆ ತನ್ನ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಅಲ್ಲಿ ಲಕ್ಷಾಂತರ ಮಂದಿ ಇನ್ನೂ ಗೋಳಿನ ಬಾಳನ್ನೇ ನೂಕುತ್ತಿದ್ದಾರೆ; ಕೆಲವೇ ಮಂದಿಯ ಶ್ರೀಮಂತಿಕೆಯ ನಡುವೆಯೂ ಅಭಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅದರ ಬೃಹತ್ಪ್ರಮಾಣದ ಉತ್ಪಾದನೆಯಿಂದ ಆ ದೇಶಕ್ಕೇ ಒಟ್ಟು ಲಾಭವಾಗಿಲ್ಲ” (D.G. Tendulkar, Mahatma, Vol. III, p. 168).
ಅಮೆರಿಕನ್ ಪತ್ರಕರ್ತ ತಕ್ಷಣ – “ತಪ್ಪುಗಳು ವಿತರಣೆಯ ವ್ಯವಸ್ಥೆಯಲ್ಲಿವೆ. ಈಗ ಬೃಹತ್ಪ್ರಮಾಣದ ಉತ್ಪಾದನೆ ತನ್ನ ಪರಿಪೂರ್ಣತೆಯ ಔನ್ನತ್ಯವನ್ನು ತಲಪಿದೆ. ಆದರೆ ವಿತರಣೆಯಲ್ಲಿ ಇನ್ನೂ ಅನೇಕ ದೋಷಗಳಿವೆ. ವಿತರಣೆಯನ್ನು ಉತ್ಪಾದನೆಗೆ ಸರಿಸಮ ಮಾಡಿದರೆ ಆಗ ಬೃಹತ್ಉತ್ಪಾದನೆಯ ದೋ?ಗಳೂ ತಾವಾಗಿಯೇ ನಿವಾರಣೆ ಆಗುವುದಿಲ್ಲವೇ?” ಎಂದು ಕೇಳಿದಾಗ ಗಾಂಧಿಯವರು ಈ ರೀತಿ ಹೇಳುತ್ತಾರೆ: “ಸಾಮೂಹಿಕ ಉತ್ಪಾದನಾ ಪದ್ಧತಿಯಲ್ಲಿಯೇ ಅನಿಷ್ಠಗಳು ಇರುವ ಕಾರಣ ಕೇವಲ ವಿತರಣಾ ಪದ್ಧತಿಯನ್ನು ಸುಧಾರಣೆ ಮಾಡಿದರೆ ಪ್ರಯೋಜನವಿಲ್ಲ. ಸಮಾನ ವಿತರಣಾ ಪದ್ಧತಿ ಜಾರಿಯಾಗುವುದು ಉತ್ಪಾದನೆಯನ್ನು ಸ್ಥಳೀಯವಾಗಿ ಮಾಡಿದಾಗ ಮಾತ್ರ. ಅಂದರೆ ಉತ್ಪಾದನೆ ಮತ್ತು ವಿತರಣೆ ಎರಡನ್ನೂ ಸಹ ಜೊತೆ ಜೊತೆಯಾಗಿ ಮಾಡಿದಾಗ ಮಾತ್ರ. ನೀವು ನಿಮ್ಮ ದೇಶದಲ್ಲಿ ಉತ್ಪಾದನೆ ಮಾಡಿದ ವಸ್ತುಗಳನ್ನು ಮಾರಲು ಪರದೇಶದ ಮಾರುಕಟ್ಟೆಗಳನ್ನು ಹುಡುಕುತ್ತಿರುವಾಗ ಸಮಾನ ವಿತರಣೆ ಸಾಧ್ಯವಿಲ್ಲದ ಮಾತು. ಹೀಗಾಗಿ ಪಾಶ್ಚಿಮಾತ್ಯರು ಇತರ ದೇಶಗಳ ಅನುಭೋಗಿಗಳನ್ನು ಮತ್ತು ಮಾರುಕಟ್ಟೆಗಳನ್ನು ನಿಯಂತ್ರಣ ಮಾಡುವುದರ ಬದಲು ತಮ್ಮ ಜ್ಞಾನ ಮತ್ತು ಕೌಶಲಗಳನ್ನು ಮಾನವಹಿತದ ಉದ್ದೇಶಗಳಿಗಾಗಿ ಉಪಯೋಗ ಮಾಡಬೇಕಾದೀತು. ಉದಾಹರಣೆಗೆ ಅಮೆರಿಕ ತನ್ನ ಅತ್ಯಂತ ಆಧುನಿಕ ತಂತ್ರಶಾಸ್ತ್ರದ ಬಳಕೆಯಿಂದ ಒಂದು ತೆನೆ ಗೋಧಿ ಬೆಳೆಯುವ ಜಾಗದಲ್ಲಿ ಎರಡು ಸಾವಿರ ತೆನೆ ಗೋಧಿಯನ್ನು ತಾನೇ ಬೆಳೆಯತೊಡಗಿದರೆ ಅದು ಇಡೀ ಜಗತ್ತಿಗೆ ಅತ್ಯಂತ ದುರ್ದಿನ. ಬದಲಿಗೆ ಅಮೆರಿಕ ಹೊಸ ತಂತ್ರಜ್ಞಾನದ ಕಲೆಯನ್ನು ಕಲಿಯಬೇಕೆನ್ನುವ ಇತರರಿಗೆ ಕಲಿಸಿದರೆ ಎಲ್ಲರಿಗೂ ಹಿತವಾದೀತು, ಮಾನವ ಕಲ್ಯಾಣವಾದೀತು” (Ibid) ಎಂದರು.
“ಅಮೆರಿಕ ಪ್ರಪಂಚದಲ್ಲೆ ಅತ್ಯಂತ ಔದ್ಯೋಗೀಕರಣಗೊಂಡ ರಾ?. ಇ?ದರೂ ಅದು ನಿರುದ್ಯೋಗ ಮತ್ತು ಬಡತನದ ಸಮಸ್ಯೆಯನ್ನು ಪೂರ್ಣವಾಗಿ ಬಗೆಹರಿಸಲು ಅಸಮರ್ಥವಾಗಿದೆ. ಕಾರಣ ಸುಸ್ಪ?: ಬಹುಜನರ ಸುಲಿಗೆ ಮಾಡಿ ಕೆಲವೇ ಮಂದಿಯ ಕೈಯಲ್ಲಿ ಸಂಪತ್ತು ಮತ್ತು ಅಧಿಕಾರದ ಕೇಂದ್ರೀಕರಣ; ಜೊತೆಗೆ ಜನಸಮೂಹದ ನಿರ್ಲಕ್ಷ್ಯ. ಫಲಿತಾಂಶ ಅಲ್ಲಿನ ಬಡಜನ ಸೇವೆ ಮತ್ತು ಇಡೀ ಪ್ರಪಂಚಕ್ಕೆ ಕೈಗಾರಿಕೀಕರಣದಿಂದ ಆಪತ್ತು. ಆದಕಾರಣ ಭಾರತ ಇದರಿಂದ ಪಾಠಕಲಿಯಬೇಕು. ಬೇರೆ ದೇಶಗಳಿಂದ ಉತ್ತಮವಾದ ಅಂಶಗಳನ್ನು ಗುರುತಿಸಿ ವಿನಾಶಕಾರಿ ಆರ್ಥಿಕನೀತಿಗಳನ್ನು ಬಿಟ್ಟು ನಮ್ಮ ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡು ನಮ್ಮಲ್ಲಿ ದೊರೆಯುವ ಇತರ ಉತ್ಪಾದನಾಂಗಗಳನ್ನು ವಿದೇಶಗಳಿಗೆ ರಫ್ತುಮಾಡದೆ ನಮ್ಮಲ್ಲೇ ಸಂಪೂರ್ಣ ಉಪಯೋಗ ಮಾಡಿಕೊಳ್ಳುವ ವ್ಯವಸ್ಥೆಯನ್ನು ಬಲಪಡಿಸಬೇಕು” ಎಂದರು (ಹರಿಜನ, ೨೩-೨-೧೯೩೭).
ಗಾಂಧಿಯವರ ಚಿಂತನೆಯ ಪ್ರಕಾರ ಬೃಹತ್ಪ್ರಮಾಣದ ಉತ್ಪಾದನೆ ಸುತ್ತಿಬಳಸುವ ವಿತರಣೆಗೆ ನಾಂದಿಹಾಡಿ ಅದರ ಮೂಲಕ ಕೇವಲ ಕೆಲವು ವ್ಯಕ್ತಿಗಳು ಅಕ್ರಮ ಸಂಗ್ರಹಮಾಡಿ ಇತರರಿಗೆ ಸಮೃದ್ಧಿಯಲ್ಲಿ ಕೊರತೆಯ ಸ್ಥಿತಿಯನ್ನು ನಿರ್ಮಾಣ ಮಾಡುತ್ತಾರೆ. ಈ ಸಮಸ್ಯೆಯನ್ನು ದೂರ ಮಾಡಬೇಕಾದರೆ ಉತ್ಪಾದನೆ ಮತ್ತು ವಿತರಣೆಯನ್ನು ಜೊತೆಜೊತೆಯಾಗಿ ಮಾಡಬೇಕು – ಎಂದರು. “ಯಂತ್ರಗಳು ಮನು?ನ ಎಲ್ಲ ಅಗತ್ಯಗಳನ್ನು ಪೂರೈಸುತ್ತವೆ ಎಂದು ಒಂದು ಕ್ಷಣ ಯೋಚಿಸಿದರೂ ಸಹ ಉತ್ಪಾದನೆ ಕೆಲವೇ ಸ್ಥಳಗಳಲ್ಲಿ ಕೇಂದ್ರೀಕೃತಗೊಂಡರೆ ಆಗ ವಿತರಣೆಯನ್ನು ನಿಯಂತ್ರಿಸಲು ಸುತ್ತಿಬಳಸಿ ಹೋಗಬೇಕಾಗುತ್ತದೆ. ಬದಲಿಗೆ ವಸ್ತುಗಳ ಉತ್ಪಾದನೆ ಮತ್ತು ವಿತರಣೆಯ ಆವಶ್ಯಕತೆ ಒಂದೇ ಸ್ಥಳಗಳಲ್ಲಿ ಇದ್ದರೆ ಆಗ ವಿತರಣೆ ತನ್ನ?ಕ್ಕೆ ತಾನೇ ನಿಯಂತ್ರಣಗೊಳ್ಳುತ್ತದೆ. ಆಗ ಮೋಸಕ್ಕೆ ಮತ್ತು ಸಟ್ಟಾಬಾಜಿಗಳಿಗೆ ಅವಕಾಶವಿರುವುದಿಲ್ಲ. ಕೆಲವೇ ವ್ಯಕ್ತಿಗಳ ಅಕ್ರಮ ಸಂಗ್ರಹಣೆಗೆ ತಡೆ ಬಿದ್ದು ಎಲ್ಲರಿಗೂ ಸಾಕಷ್ಟು ಪ್ರಮಾಣದ ವಸ್ತುಗಳೂ ಸಿಗುವ ಹಾಗೆ ಆಗುತ್ತದೆ” (N.K. Bose, Selections from Gandhi, sec. 245).
ಪಶ್ಚಿಮ ರಾಷ್ಟ್ರಗಳ ನಿರಾಶೆ
“ಪಶ್ಚಿಮದ ರಾಷ್ಟ್ರಗಳಿಗೆ ಕೈಗಾರಿಕೀಕರಣದ ಸಫಲತೆಯ ಬಗ್ಗೆ ನಿರಾಶೆಯುಂಟಾಗಿದೆ. ಜರ್ಮನಿ, ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳಿಗೆ ಬೃಹತ್ ಉತ್ಪಾದನೆಯ ವ್ಯವಸ್ಥೆಯ ಬಗ್ಗೆ ಸಂದೇಹಗಳು ತಲೆದೋರಿವೆ. ನಾವು ಮಿತಿಮೀರಿ ಹೋಗಿದ್ದೇವೆ ಎಂಬ ಭಯ ಅವರನ್ನು ಕಾಡತೊಡಗಿದೆ. ಪ್ರಪಂಚದ ಎಲ್ಲ ದೇಶಗಳೂ ಈ ಒಂದೇ ನೀತಿಯನ್ನು ಪಾಲಿಸಿದರೆ ಬೃಹತ್ಪ್ರಮಾಣದ ಉತ್ಪಾದನೆ ಮರೆಯಾದೀತು” ಎಂದರು. ಯೂರೋಪ್ ಮತ್ತು ಅಮೆರಿಕ ದೇಶಗಳು ಜಗತ್ತಿನ ದುರ್ಬಲ ಎನಿಸಿದ ಮತ್ತು ಅಸಂಘಟಿತ ಜನಾಂಗಗಳನ್ನು ಶೋಷಿಸಲು ಸಮರ್ಥವಾಗಿವೆ. ಆ ಶೋಷಿತ ಜನಾಂಗಗಳಿಗೆ ಸಾಮಾನ್ಯಪ್ರಜ್ಞೆ ಮೂಡಿ ನಾವು ಇನ್ನು ಮುಂದೆ ಶೋಷಣೆಗೆ ಒಳಗಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದರೆ ಆಗ ಅವರು ತಮಗೆ ಬೇಕಾಗಿರುವ ವಸ್ತುಗಳೆಲ್ಲವನ್ನೂ ತಾವೇ ಉತ್ಪಾದಿಸಿ ಅವುಗಳಿಂದಲೇ ತೃಪ್ತಿಪಟ್ಟಾರು. ಆಗ ಬಹು ಮುಖ್ಯವಾದ ಅಗತ್ಯವಸ್ತುಗಳ ವಿಷಯಗಳಲ್ಲಂತೂ ಬೃಹತ್ಪ್ರಮಾಣದ ಉತ್ಪಾದನೆ ನಿಂತುಹೋದೀತು” (Ibid) ಎಂದರು.
ನ್ಯೂನತೆ ಮತ್ತು ಪರಿಹಾರ
ಬೃಹತ್ ಉತ್ಪಾದನೆಯಿಂದ ಆಗುವ ಒಂದು ಪ್ರಮುಖ ಲಾಭವೆಂದರೆ ಅಗ್ಗದ ವಸ್ತುಗಳ ಉತ್ಪಾದನೆ ಎಂಬುದು ಅನೇಕರ ಅಭಿಪ್ರಾಯ. (ಬಹಳಷಷ್ಟು ಅರ್ಥಶಾಸ್ತ್ರಜ್ಞರ ಪ್ರಕಾರ ಉತ್ಪಾದನಾ ಪ್ರಮಾಣ ಹೆಚ್ಚಾದಂತೆ ಉತ್ಪಾದನಾ ವೆಚ್ಚ (Product cost) ಕಡಮೆಯಾಗಿ ಬೆಲೆಗಳೂ ಇಳಿಮುಖವಾಗುವವು.) ಆದರೆ ದಾರಿ ತಪ್ಪಿಸುವ ಈ ವಾದವನ್ನು ಗಾಂಧಿಯವರು ಬಲವಾಗಿ ಖಂಡಿಸುತ್ತಾರೆ. ಅವರ ಪ್ರಕಾರ ಗಿರಣಿಗಳಿಂದ ತಯಾರಾದ ವಸ್ತುಗಳು ಅಗ್ಗವಾಗಿರದೆ ಬದಲಿಗೆ ದುಬಾರಿಯಾಗಿರುತ್ತವೆ. ಅವರು ಕೊಡುವ ಕಾರಣವನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕಷ್ಟು. ಒಂದು ದೊಡ್ಡ ಕಾರ್ಖಾನೆಯಲ್ಲಿ ಸಾವಿರಾರು ಕಾರ್ಮಿಕರನ್ನು ಕೆಲಸದಿಂದ ಹೊರಗೆ ಹಾಕಿ ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಕೇವಲ ಕೆಲವು ಕೆಲಸಗಾರರು ಹೆಚ್ಚು ವೇತನವನ್ನು ಪಡೆದು ಕೆಲಸ ಮಾಡುತ್ತಾರೆ. (ಹೀಗಾಗಿ ಉತ್ಪಾದನಾವೆಚ್ಚ ಕಡಮೆ ಮಾಡುವ ಸಾಧ್ಯತೆ ಬಹಳ ಕಡಮೆ.) ಕಲ್ಲಿದ್ದಲು ಮತ್ತು ಖಾದಿಯಂತಹ ವಸ್ತುಗಳನ್ನು ಸುತ್ತಿ ಬಳಸಿ ಉತ್ಪಾದಿಸಿ ವಿತರಣೆ ಮಾಡುವುದರಿಂದ ಅವುಗಳು ಸಹಜವಾಗಿ ದುಬಾರಿಯಾಗುತ್ತವೆ. ಆದರೆ ಅವೆರಡನ್ನೂ ಒಂದೇ ಕಡೆ ಉತ್ಪಾದಿಸಿ ವಿತರಣೆ ಮಾಡಿದರೆ ಅವುಗಳಿಗೂ ಸಹ ಅಗ್ಗವಾಗುತ್ತದೆ. ಹಳ್ಳಿಗಳಲ್ಲಿ ಪ್ರಾರಂಭವಾಗುವ ಪ್ರತಿಯೊಂದು ಕಾರ್ಖಾನೆಯೂ ಹಳ್ಳಿಗರಿಗೆ ಕೇಡಿನ ಸೂಚನೆ. ಈ ಮಾತು ನಿಮಗೆ ಆಶ್ಚರ್ಯವಾಗಿ ಕಾಣಬಹುದು. ನಾನು ಅಂಕಿಅಂಶಗಳನ್ನು ಸರಿಯಾಗಿ ಲೆಕ್ಕಹಾಕಿಲ್ಲ. ಆದರೂ ಸಹ ನನ್ನ ಅಂದಾಜಿನ ಪ್ರಕಾರ ಪ್ರತಿಯೊಂದು ಕಾರ್ಖಾನೆಯೂ ಕೊನೆಯಪಕ್ಷ ಹತ್ತು ಕೆಲಸಗಾರರು ತಮ್ಮ ಹಳ್ಳಿಯಲ್ಲಿ ಮಾಡುವ? ಕೆಲಸವನ್ನು ಮಾಡುತ್ತಿದೆ. ಅಂದರೆ ಗಿರಣಿಯಲ್ಲಿ ಕೆಲಸ ಮಾಡುವ ಪ್ರತಿ ಕೆಲಸಗಾರ ಹಳ್ಳಿಯಲ್ಲಿ ಹತ್ತು ಕೆಲಸಗಾರರಿಗೆ ಬರುವ ಸಂಬಳಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾನೆ. ಹೀಗೆ ನೂಲುವ ಮತ್ತು ನೇಯ್ಗೆ ಮಾಡುವ ಕಾರ್ಖಾನೆಗಳೂ ಹಳ್ಳಿಗರ ಸಾಕ? ಪ್ರಮಾಣದ ಜೀವನಾಧಾರಗಳನ್ನು ಕಿತ್ತುಕೊಳ್ಳುತ್ತಿವೆ. ಹಳ್ಳಿಗರು ಅಗ್ಗದ ಮತ್ತು ಶ್ರೇ?ಮಟ್ಟದ ವಸ್ತುಗಳನ್ನು ಉತ್ಪಾದನೆ ಮಾಡುತ್ತಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ. ಕಾರ್ಖಾನೆಗಳು ಹಳ್ಳಿಗರನ್ನು ಕೆಲಸದಿಂದ ವಂಚಿತರಾಗುವಂತೆ ಮಾಡಿ ನಿರುದ್ಯೋಗಿಗಳನ್ನು ಸೃಷ್ಟಿಸಿದರೆ ಆಗ ಕಾರ್ಖಾನೆಯಿಂದ ತಯಾರಾದ ಅಗ್ಗದ ಬಟ್ಟೆ ಹಳ್ಳಿಯಲ್ಲಿ ತಯಾರಾದ ಖಾದಿ ಬಟ್ಟೆಗಿಂತ ದುಬಾರಿಯಾಗಿರುತ್ತದೆ. ಕಲ್ಲಿದ್ದಲಿನ ಗಣಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಅದನ್ನು ಅಲ್ಲೇ ತನ್ನ ಸ್ವಂತಕ್ಕೆ ಉಪಯೋಗ ಮಾಡಿದರೆ ಹಾಗೂ ಖಾದಿ ಬಟ್ಟೆಯನ್ನು ಯಾರು ಉತ್ಪಾದಿಸಿ ತನಗೋಸ್ಕರ ಉಪಯೋಗ ಮಾಡಿಕೊಳ್ಳುತ್ತಾರೋ ಅವರಿಗೆ ಅದು ದುಬಾರಿಯಾಗಿರುವುದಿಲ್ಲ. ಬದಲಿಗೆ ಅಗ್ಗವಾಗಿರುತ್ತದೆ (D.G. Tendulkar, Mahatma, Vol. IV, p. 4).
ಈ ವಾದದಲ್ಲಿ ಇನ್ನೊಂದು ಪ್ರಮುಖ ಅಂಶವಿದೆ. ಕಾರ್ಖಾನೆಗಳು ಹಳ್ಳಿಗರ ಕೈಕೆಲಸಗಳನ್ನು ಪಲ್ಲಟ ಮಾಡುವುದಲ್ಲದೆ ಅವುಗಳು ಬಿಳಿಸಕ್ಕರೆ, ಗಿರಣಿಯಿಂದ ಮಾಡಿದ ವಿವಿಧ ರೀತಿಯ ಹಿಟ್ಟುಗಳು ಮತ್ತು ಪಾಲಿಶ್ ಮಾಡಿದ ಅಕ್ಕಿಯನ್ನು (ವಿವಿಧ ಪೋಷಕಾಂಶಗಳನ್ನು ಕಳೆದುಕೊಂಡಂತಹ) ಅನುಭೋಗಿಗಳು ಉಪಯೋಗಮಾಡುವುದರ ಮೂಲಕ ಅವರ ಶಾರೀರಿಕ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತವೆ. ಜೊತೆಗೆ ಕಾರ್ಖಾನೆಯಲ್ಲಿ ಉತ್ಪಾದನೆ ಆದ ಬಟ್ಟೆ ಹಳ್ಳಿಗರ ಕೈಕೆಲಸಗಳನ್ನು ಅಕ್ಕಿ ಮತ್ತು ಹಿಟ್ಟಿನ ಗಿರಣಿಗಳು ಸಾವಿರಾರು ಬಡ ಮಹಿಳಾ ಕಾರ್ಮಿಕರನ್ನು ಸ್ಥಳಾಂತರ ಹಾಗೂ ಪಲ್ಲಟ ಮಾಡುವುದಲ್ಲದೆ ಅವರೆಲ್ಲರ ಆರೋಗ್ಯವನ್ನು ಹದಗೆಡಿಸುತ್ತದೆ. ಎಲ್ಲಿ ಮಾಂಸಾಹಾರ ಸಿಗುತ್ತದೆಯೋ ಮತ್ತು ಅದರ ಉಪಯೋಗಕ್ಕೆ ವಿರೋಧವಿಲ್ಲವೋ ಅಂತಹ ಭಾಗಗಳಲ್ಲಿ ಸತ್ತ್ವಹೀನ ಬಿಳಿಹಿಟ್ಟು ಪಾಲಿಶ್ ಮಾಡಿದ ಅಕ್ಕಿಯ ಉಪಯೋಗ ಯಾವುದೇ ರೀತಿಯ ವಿರುದ್ಧ ಪರಿಣಾಮ ಬೀರುವುದಿಲ್ಲ. ಆದರೆ ಭಾರತದಲ್ಲಿ ಎಲ್ಲಿ ಸಾವಿರಾರು ಜನರಿಗೆ ಮಾಂಸಾಹಾರ ತಿನ್ನುವ ಅವಕಾಶವಿರುವುದಿಲ್ಲವೋ ಮತ್ತು ವಿರೋಧ ಇರುವುದೋ ಅಂತಹ ಕಡೆಗಳಲ್ಲಿ ಜನಸಾಮಾನ್ಯರಿಗೆ ಪೌಷ್ಟಿಕ ಆಹಾರವನ್ನು ಪಾಲಿಶ್ ಮಾಡದ ಅಕ್ಕಿ ಮತ್ತು ಪೂರ್ಣಪ್ರಮಾಣದ ಗೋಧಿಯ ಮೂಲಕ ಸತ್ತ್ವಯುತ ಆಹಾರವನ್ನು ಕೊಡದಿದ್ದರೆ ಆಗ ಅದು ಪಾಪಕರವಾಗುತ್ತದೆ. ಆರೋಗ್ಯದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರ ಅಧಿಕಾರಿಗಳು ಪಾಲಿಶ್ ಮಾಡಿದ ಅಕ್ಕಿ ಮತ್ತು ಗೋಧಿಯನ್ನು ಉಪಯೋಗ ಮಾಡಿದರೆ ಯಾವ ರೀತಿಯ ಹಾನಿ ಆರೋಗ್ಯದ ಮೇಲೆ ಆಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ (Ibid). ನಾನು ಆಹಾರದ ಪೌಷ್ಟಿಕಾಂಶಕ್ಕೆ ಸಂಬಂಧಪಟ್ಟಂತೆ ಬಹಳ ಮುಖ್ಯವಾದ ಕೆಲವು ಅಂಶಗಳ ಬಗ್ಗೆ ನಿಮ್ಮ ಗಮನ ಸೆಳೆದಿದ್ದೇನೆ, ಅ?. ಯಂತ್ರೀಕರಣದ ಮೂಲಕ ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅದು ಹಳ್ಳಿಗರು ಇಲ್ಲಿಯವರೆಗೆ ಉಳಿಸಿ ಬೆಳೆಸಿಕೊಂಡು ಬಂದಂತಹ ಗ್ರಾಮೀಣ ಕೈಗಾರಿಕೆಗಳ ಪುನರುತ್ಥಾನದ ಮೂಲಕ ಮಾತ್ರ ಸಾಧ್ಯ ಎನ್ನುವುದು ನನ್ನ ನಿಲವು (Ibid).
ಹೀಗೆ ಗಾಂಧಿಯವರು ಕೆಲವೇ ನಗರಗಳಲ್ಲಿ ಕೇಂದ್ರೀಕೃತವಾದ ಪಾಶ್ಚಿಮಾತ್ಯ ಬೃಹತ್ ಕೈಗಾರಿಕೆಗಳ ಸಾಮೂಹಿಕ ಉತ್ಪಾದನೆ ಮತ್ತು ಕೆಲವೇ ಸರಳ ಯಂತ್ರಗಳ ಸಹಾಯದಿಂದ ಲಕ್ಷಾಂತರ ಮನೆಗಳಲ್ಲಿ ನಡೆಯುವ ಬೃಹತ್ ಪ್ರಮಾಣದ ಉತ್ಪಾದನೆಯ ನಡುವಣ ವ್ಯತ್ಯಾಸವನ್ನು ಅತ್ಯಂತ ಸ್ಪ?ವಾಗಿ ತಿಳಿಸಿಕೊಟ್ಟಿದ್ದಾರೆ. ಹಳ್ಳಿಗಳ ಮಟ್ಟದಲ್ಲಿ ಉತ್ಪಾದನೆ ಹಾಗೂ ವಿತರಣೆಯ ವಿಕೇಂದ್ರೀಕರಣ ಆಗಬೇಕೆಂದು ಅವರು ಆಗ್ರಹಿಸುತ್ತಿದ್ದರು. ಹಳ್ಳಿಗಳಲ್ಲಿ ಪರಂಪರಾಗತವಾದ ಕಸುಬುಗಳ ಮತ್ತು ಕರಕುಶಲ ವಸ್ತುಗಳ ಉತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಹೊಸ ರೀತಿಯಲ್ಲಿ ಆರ್ಥಿಕ ಪ್ರಗತಿಯನ್ನು ಜನಗಳ ಆವಶ್ಯಕತೆಗೆ ತಕ್ಕಂತೆ ಮಾಡುವ ಅಗತ್ಯ ತಿಳಿಸಿದ್ದಾರೆ. ಅವರ ಪ್ರಕಾರ ಈಗಿರುವ ವ್ಯವಸ್ಥೆಗೆ ವಿರುದ್ಧವಾಗಿ ಹಳ್ಳಿಗಳೂ ’ಉತ್ಪಾದನಾ ಕೇಂದ್ರಗಳಾಗಿ’ ನಗರಗಳು ’ಮಾರಾಟಕೇಂದ್ರ’ ಅಥವಾ ’ತೆರವುಗೊಳಿಸುವ ಕೆಂದ್ರ’ಗಳಾಗಬೇಕು. ಯಾವ ಪ್ರಮುಖ ಮತ್ತು ಮೂಲಭೂತ ಕೈಗಾರಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಹಳ್ಳಿಗರು ಸ್ಥಾಪಿಸಿ ನಡೆಸಲು ಸಾಧ್ಯವಿಲ್ಲವೋ ಅಂತಹವುಗಳು ಸಾಧ್ಯವಾದಮಟ್ಟಿಗೆ ಸರ್ಕಾರದ ಅಧೀನದಲ್ಲಿದ್ದು ಅವರು ನಡೆಸುವಂತಿರಬೇಕು – ಎಂಬ ಸದಾಶಯವನ್ನು ಗಾಂಧಿಯವರು ವ್ಯಕ್ತಪಡಿಸಿದ್ದಾರೆ.
(ಸಶೇಷ)