೧. ಖಿಲ (ಕಾದಂಬರಿ)
ಲೇಖಕರು: ಶಶಿಧರ ವಿಶ್ವಾಮಿತ್ರ
ಪ್ರಕಾಶಕರು: ಸಾಹಿತ್ಯ ಭಂಡಾರ, ಜಂಗಮಮೇಸ್ತ್ರಿ ಗಲ್ಲಿ, ಬಳೇಪೇಟೆ, ಬೆಂಗಳೂರು – ೫೬೦ ೦೫೩
ಬೆಲೆ ರೂ. ೨೧೦.
ಭೂಮಿಯಲ್ಲಿ ದೊರಕುವ ಸಂಪನ್ಮೂಲಗಳಿಗೆ ಮಿತಿಯುಂಟು; ಇವು ಅಮಿತ ಎನ್ನುವಂತೆ ಯಂತ್ರಸಂಸ್ಕೃತಿ ಬಳಸಿಕೊಂಡು ಸಂವರ್ಧಿಸುತ್ತಿದೆ. ಪರಿಣಾಮವಾಗಿ ತ್ಯಾಜ್ಯ ಮತ್ತು ವಿಷಪೂರಿತ ಮಾಲಿನ್ಯಗಳ ಪರಿಣಾಮಗಳು ಹೆಚ್ಚುತ್ತಿವೆ. ನೆಲ, ನೀರು ಮತ್ತು ಗಾಳಿಯ ಜೀವಸೆಲೆಯಾಸರೆಗಳು ಕ್ಷೆಭೆಗೊಂಡಿವೆ. ಮನುಷ್ಯನ ಶಾಂತಿ ನೆಮ್ಮದಿಗಳು ಕಳೆಗುಂದಿವೆ ಎನ್ನುವ ಆತಂಕ ಹುಟ್ಟಿಸುವ ತಿಳಿವಳಿಕೆ ಹುಟ್ಟಿದ ಮೇಲೂ ಮನುಷ್ಯನ ಚರ್ಯೆ ಹೆಚ್ಚು ಬದಲಾಗಲಿಲ್ಲ. ಈ ರೀತಿಯ ವಿಪರ್ಯಾಸ ಪ್ರಪಂಚದ ಎಲ್ಲ ಕಡೆಯೂ ಕಾಣಸಿಗುತ್ತವೆ. ನಮ್ಮ ಬೃಹತ್ ರಾಷ್ಟ್ರದ ಒಂದು ನಗರದ ಸಮೀಪ ಒಂದು ತಾಲೂಕು ಕೇಂದ್ರದ ಬಳಿಯ ಸಣ್ಣ ಗ್ರಾಮದಲ್ಲೂ ಈ ಆತಂಕ ಹೇಗೆ ಮರುವರ್ತಿಸುತ್ತದೆ; ಪ್ರಗತಿ ಎನ್ನುವ ಬಲವಂತದಡಿ ಹೊಲ, ಮನೆ, ಹಾದಿ-ಬೀದಿ, ಕೆರೆ-ಕಟ್ಟೆ, ಜನ-ಜಂತುಗಳು ಹೇಗೆ ಕಳೆಗುಂದುತ್ತವೆ ಎನ್ನುವ ೧೯೯೦ರ ದಶಕದ ಆಸುಪಾಸಿನ ಚಿತ್ರಣವನ್ನು ಶಶಿಧರ ವಿಶ್ವಾಮಿತ್ರ ಅವರ `ಮುಸ್ಸಂಜೆ’ ಮತ್ತು `ಶಿಥಿಲ’ ಕಾದಂಬರಿಗಳು ಈಗಾಗಲೇ ಪ್ರಕಟಗೊಂಡು (ಭಾಗ್ಯಲಕ್ಷ್ಮಿ ಪ್ರಕಾಶನ, ಬೆಂಗಳೂರು) ಪರಿಚಯಿಸಿವೆ. ಈ ಕಥಾನಕಗಳ ಮುಂದುವರಿದ ಭಾಗವಾಗಿ, ಅವರ `ಖಿಲ’ ಕಾದಂಬರಿ ಹೊರಬಂದಿದೆ.
* * *
೨. ಸೇಕ್ರೆಡ್ ಪ್ಲಾಂಟ್ಸ್ ಆಫ್ ಇಂಡಿಯ (ಇಂಗ್ಲಿಷ್)
ಲೇಖಕರು: ನಂದಿತಾ ಕೃಷ್ಣ ಮತ್ತು ಎಂ. ಅಮ್ರಿತಲಿಂಗಮ್
ಪ್ರಕಾಶಕರು: ಪೆಂಗ್ವಿನ್ ಬುಕ್ಸ್ ಇಂಡಿಯ ಪ್ರೈವೇಟ್ ಲಿ.
೭ನೇ ಮಹಡಿ, ಇನ್ಫಾಂಟ್ರಿ ಟವರ್ `ಸಿ’, ಡಿಎಲ್ಎಫ್ ಸೈಬರ್ ಸಿಟಿ
ಗುರ್ಗಾಮ್ – ೧೨೨ ೦೦೨, ಹರಿಯಾಣ
ಬೆಲೆ ರೂ. ೩೯೯.
ಅನಾದಿ ಕಾಲದಿಂದಲೂ ಮರ-ಗಿಡಗಳನ್ನು ಪವಿತ್ರವಾಗಿ ಕಾಣುವ, ಪೂಜಿಸುವ ಜನಾಂಗಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಭಾರತದಲ್ಲಿ, ನಮ್ಮ ಇತಿಹಾಸ-ಪುರಾಣಗಳಲ್ಲಿ, ಆಚಾರ-ಆರಾಧನೆಗಳಲ್ಲಿ ಮತ್ತು ದೈನಂದಿನ ಬದುಕಿನಲ್ಲಿ ಅದು ಹಾಸುಹೊಕ್ಕಾಗಿರುವುದನ್ನು ಕಾಣಬಹುದು. ಅದು ಬುದ್ಧನಿಗೆ ಜ್ಞಾನೋದಯವಾದ ಬೋಧಿವೃಕ್ಷವಿರಬಹುದು, ದೇವತೆಗಳ ನೆಲೆಯಾದ ಅಶ್ವತ್ಥವಿರಬಹುದು, ರಾವಣನ ಲಂಕೆಯಲ್ಲಿ ಸೀತಾಮಾತೆ ಆಶ್ರಯ ಪಡೆದ ಅಶೋಕ ವೃಕ್ಷವಿರಬಹುದು ಮತ್ತು ಪ್ರತಿಯೊಬ್ಬ ಹಿಂದುವಿನ ಮನೆಯ ಮುಂದೆ ಇರಲೇಬೇಕಾದ ತುಳಸಿಯೇ ಇರಬಹುದು. ದೇವಾಲಯಗಳ ಕಲ್ಪನೆಗೂ ಮೊದಲು ಮರಗಿಡಗಳ ಬುಡವೇ ಬಯಲು ಆಲಯವಾಗಿ ಪೂಜಾಸ್ಥಳಗಳಾಗಿದ್ದವು. ಕೆಲವು ಮರ-ಗಿಡಗಳು ಇಂದಿಗೂ ಧಾರ್ಮಿಕ ಮಹತ್ತ್ವವನ್ನು ಹೊಂದಿವೆ. ನಂದಿತಾ ಕೃಷ್ಣ ಮತ್ತು ಎಂ. ಅಮ್ರಿತಲಿಂಗಮ್ ಅವರ `ಸೇಕ್ರೆಡ್ ಪ್ಲಾಂಟ್ಸ್ ಆಫ್ ಇಂಡಿಯ’ (ಇಂಗ್ಲಿಷ್) ಭಾರತೀಯ ಸಸ್ಯವೈವಿಧ್ಯಗಳ ಸಾಮಾಜಿಕ-ಸಾಂಸ್ಕೃತಿಕ ಮಹತ್ತ್ವದ ಮೂಲವನ್ನೂ ಜೊತೆಜೊತೆಗೇ ಅವುಗಳ ಪಾರಿಸಾರಿಕ ಮಹತ್ತ್ವವನ್ನೂ ವಿಷದಪಡಿಸುತ್ತದೆ. ಮಾಹಿತಿಪೂರ್ಣವಾದ, ಚಿಂತನೆಗೆ ಹಚ್ಚುವ ಮತ್ತು ಆಳವಾದ ಅಧ್ಯಯನದಿಂದ ಕೂಡಿದ ಈ ಪುಸ್ತಕ ಪೌರಾಣಿಕವಾಗಿ, ಸಸ್ಯಶಾಸ್ತ್ರೀಯವಾಗಿ ಮತ್ತು ಭಾರತದ ಪ್ರಾಚೀನ ಧಾರ್ಮಿಕ ಪರಂಪರೆಯ ದೃಷ್ಟಿಯಿಂದಲೂ ಅತ್ಯಂತ ಗಮನಾರ್ಹವಾಗಿದೆ.
* * *
೩. ಕೌಟಿಲ್ಯ ಕಾ ಅರ್ಥಶಾಸ್ತ್ರ – ಏಕ್ ಐತಿಹಾಸಿಕ್ ಅಧ್ಯಯನ್ (ಹಿಂದಿ)
ಲೇಖಕರು: ಡಾ| ಓಮ್ ಪ್ರಕಾಶ್ ಪ್ರಸಾದ್
ಪ್ರಕಾಶಕರು: ರಾಜಕಮಲ್ ಪ್ರಕಾಶನ್ ಪ್ರೈ.ಲಿ., ೧-ಬಿ, ನೇತಾಜೀ ಸುಭಾಷ್ ಮಾರ್ಗ, ದರಿಯಾಗಂಜ್, ನವದೆಹಲಿ – ೧೧೦ ೦೦೨
ಬೆಲೆ ರೂ. ೮೦೦.
ಅರ್ಥಶಾಸ್ತ್ರ ಕೇವಲ ರಾಜನೀತಿಯನ್ನಷ್ಟೆ ವಿವರಿಸುವ ಗ್ರಂಥವಲ್ಲ; ಇದರಲ್ಲಿ ರಾಜತಂತ್ರಾತ್ಮಕ ಆಡಳಿತಪದ್ಧತಿಗಳ ಒಂದು ಐತಿಹಾಸಿಕ ಅಧ್ಯಯನವೂ ಕೂಡ ಇದೆ. ಕೌಟಿಲ್ಯನಾದರೋ ಅರ್ಥಶಾಸ್ತ್ರದ ಪ್ರತಿಯೊಂದು ಮಗ್ಗುಲನ್ನೂ ಪರಾಮರ್ಶಿಸಿ ಇದನ್ನು ಒಂದು ರಾಜನೀತಿಯ ವಿಜ್ಞಾನವೆಂದೇ ನಂಬಿದ್ದಾನೆ. ಆದ್ದರಿಂದಲೇ ಕೌಟಿಲ್ಯನ ಎಲ್ಲ ಆಸಕ್ತಿಯೂ ಶಕ್ತಿಯೂ ರಾಜ, ರಾಜಕೋಶ, ಪ್ರಜೆಗಳು ಮತ್ತು ಆಡಳಿತದ ಕೇಂದ್ರೀಕರಣದಲ್ಲೇ ಇತ್ತು.
ಕೌಟಿಲ್ಯನ ಅರ್ಥಶಾಸ್ತ್ರವನ್ನು ಕುರಿತ, ಕಾಲಾನುಕ್ರಮದ ಅಭಿಪ್ರಾಯಗಳನ್ನೂ ಅಭಿಪ್ರಾಯ ಭೇದಗಳನ್ನೂ ಪರಿಗಣಿಸುತ್ತಲೇ, ಸಮಕಾಲೀನವಾದ ಹೊಸದೊಂದು ದೃಷ್ಟಿಯಿಂದ ಆಳವಾದ ಮತ್ತು ಗಂಭೀರವಾದ ಚಿಂತನೆಯನ್ನು ಕಟ್ಟಿಕೊಡುವುದರಿಂದಾಗಿ – `ಕೌಟಿಲ್ಯ ಕಾ ಅರ್ಥಶಾಸ್ತ್ರ – ಏಕ್ ಐತಿಹಾಸಿಕ್ ಅಧ್ಯಯನ್’ ಗಮನ ಸೆಳೆಯುತ್ತದೆ.?