ಮಾತರ್ಮೇದಿನಿ ತಾತ ಮಾರುತ ಸಖೇ ತೇಜಃ ಸುಬಂಧೋ ಜಲ-
ಭ್ರಾತರ್ವ್ಯೋಮ ನಿಬದ್ಧ ಏವ ಭವತಾಮಂತ್ಯಃ ಪ್ರಣಾಮಾಂಜಲಿಃ|
ಯುಷ್ಮತ್ಸಂಗವಶೋಪಜಾತ-ಸುಕೃತೋದ್ರೇಕಃ ಸ್ಫುರನ್ನಿರ್ಮಲ-
ಜ್ಞಾನಾಪಾಸ್ತ-ಸಮಸ್ತಮೋಹಮಹಿಮಾ ಲೀಯೇ ಪರಬ್ರಹ್ಮಣಿ||
– ಭರ್ತೃಹರಿ : ವೈರಾಗ್ಯಶತಕ
“ಎಲೈ ಭೂಮಿತಾಯಿಯೆ, ತಂದೆಯಾದ ಗಾಳಿಯೆ, ಸ್ನೇಹಿತನಾದ ಅಗ್ನಿಯೆ, ಬಂಧುವಾದ ಜಲವೆ, ಸಹೋದರನಾದ ಆಕಾಶವೆ, ನಾನು ನಿಮಗೆಲ್ಲ ನನ್ನ ಕಟ್ಟಕಡೆಯ ಪ್ರಣಾಮವನ್ನು ಸಲ್ಲಿಸುತ್ತಿದ್ದೇನೆ. ನಾನು ಜೀವಿಸಿದ್ದಷ್ಟು ಕಾಲವೂ ನಿಮ್ಮೆಲ್ಲರ ಸಹವಾಸವು ಲಬ್ಧವಾಗಿದ್ದುದರ ಫಲವಾಗಿ ಉಂಟಾದ ನಿರ್ಮಲಜ್ಞಾನದಿಂದ ಮೋಹವನ್ನೆಲ್ಲ ಕಳೆದುಕೊಂಡು ಈಗ ಪರಬ್ರಹ್ಮನಲ್ಲಿ ಲೀನವಾಗುತ್ತಿರುವೆ.”
ಭರ್ತೃಹರಿಯು ತನ್ನ ಅವಸಾನ ಸಮೀಪಿಸಿದಾಗ ಈ ಬಗೆಯಲ್ಲಿ ಪಂಚಭೂತಾತ್ಮಕ ಪ್ರಕೃತಿಗೆ ವಂದನೆ ಸಲ್ಲಿಸಿದನೆಂದು ಆಖ್ಯಾನವಿದೆ.
ಯಾವುದರದೋ ಅಭಾವ ಉಂಟಾದಾಗಲೇ ಅದರ ಬೆಲೆ ತಿಳಿಯುವುದು ಎಂಬುದು ಎಲ್ಲರ ಅನುಭವ. ಉಳಿದ ಸಮಯದಲ್ಲಿ ಎಷ್ಟೇ ಸಮೃದ್ಧಿ ಇದ್ದರೂ ಅದನ್ನು ಮನುಷ್ಯನು ಗಮನಿಸುವುದೇ ಇಲ್ಲ. ಬಿಳಿಹಾಳೆಯ ನಡುವೆ ಕಪ್ಪುಚುಕ್ಕೆಯೊಂದನ್ನಿಟ್ಟು ‘ನಿಮಗೆ ಏನು ಕಾಣುತ್ತದೆ?’ ಎಂದು ಪ್ರಶ್ನಿಸಿದಾಗ ಎಲ್ಲರೂ ಕಪ್ಪುಚುಕ್ಕೆಯನ್ನು ಕುರಿತೇ ಹೇಳಿದರಂತೆ. ಚುಕ್ಕೆಯ ನೂರುಪಟ್ಟು ವಿಶಾಲವಾದ ಸುತ್ತಲ ಬಿಳಿಯ ಪ್ರಸರ ಯಾರಿಗೂ ಕಾಣಲೇ ಇಲ್ಲ! ಬೆಳಗ್ಗೆ ಏಳುವಾಗ ತಾನು ಜೀವಂತ ಇದ್ದೇನಲ್ಲ ಎಂದು ಕೃತಜ್ಞತಾಭಾವ ಹೊಮ್ಮಬೇಡವೆ? ಕಣ್ಣುಬಿಟ್ಟು ಸುತ್ತಲೂ ನೋಡಿ ವಸ್ತುಗಳನ್ನು ಗುರುತಿಸಲು ದೃಷ್ಟಿಪಾಟವ ಇರಬೇಡವೆ? ಜಡರನ್ನು ಕಳೆಯಲು ಕೈಗಳು ಕಣ್ಣಿನತ್ತ ಚಲಿಸಬೇಕಾದರೆ ಅದೆಷ್ಟು ಸಾವಿರ ವಿದ್ಯುತ್ಕಂಪನಗಳು ಅನಿವಾರ್ಯ? ಹಾಸಿಗೆಯಿಂದೆದ್ದು ಬಚ್ಚಲಮನೆಗೆ ಹೋಗುವ ಶಕ್ತಿಯನ್ನು ಕಾಲುಗಳಲ್ಲಿ ತುಂಬಿದವರಾರು? ಆಳವಾಗಿ ಯೋಚಿಸಿದಲ್ಲಿ ದೈನಂದಿನ ಬದುಕಿಗೆ ಅವೆಷ್ಟು ಭಗವಚ್ಛಕ್ತಿಗಳು ನಿರಂತರ ಅವಲಂಬನೆಯನ್ನು ನೀಡುತ್ತಿರುತ್ತವೆಂಬುದು ವಿಸ್ಮಯ ತರಬೇಕಾದ ಸಂಗತಿ. ಈ ಪೋಷಣೆಗೆ ಅನುದಿನವೂ ವಂದನೆ ಸಲ್ಲಬೇಕು. ಇಂತಹ ಸಂವೇದನಶೀಲತೆಯಿಂದ ಹೊಮ್ಮಿದುದು ಪ್ರಕೃತಿಮಾತೆಯ ಬಗೆಗೆ ಭರ್ತೃಹರಿ ಕವಿಯ ಪ್ರಣಮನೋದ್ಗಾರ.