ಮಂತ್ರೋ ಹಿ ಭಾವೇನ ಯುತೋ ಫಲಪ್ರದಃ
ಮೌರ್ವ್ಯಾ ಸುಸಜ್ಜೀಕೃತಬಾಣವದ್ ಧ್ರುವಂ |
ಭಾವೇನ ಹೀನಸ್ತು ವಿನಿಷ್ಫಲೋ ಭವೇತ್
ಕೀರಸ್ಯವಾಗೀರಿತರಾಮಶಬ್ದವತ್ ||
“ಲಕ್ಷ್ಯವಾಕ್ಯದಲ್ಲಿ ಭಾವಸಾಂದ್ರತೆಯನ್ನು ಹೊಗಿಸಿದಲ್ಲಿ ಮಾತ್ರ ಅದು ಫಲಪ್ರದವಾದೀತು, ಆಗ ಅದು ಸರಿಯಾಗಿ ಸಂಧಾನ ಮಾಡಿದ ಬಾಣದಂತೆ ಗುರಿಯನ್ನು ಮುಟ್ಟೀತು. ಭಾವದ ದಟ್ಟಣೆಯ ಕೊರತೆಯಿದ್ದಲ್ಲಿ ಯಾಂತ್ರಿಕ ಆಚರಣೆ ಫಲ ಕೊಡಲಾರದು – ಗಿಣಿಪಾಠದಂತೆ.”
ಧ್ಯೇಯವಾಕ್ಯಗಳಿಗೋ ಆದೇಶಗಳಿಗೋ ಸಾಫಲ್ಯಸಾಧ್ಯತೆಯುಂಟಾಗುವುದು ಅವುಗಳಲ್ಲಿ ಭಾವಸಾಂದ್ರತೆಯ ಸಮಾಗಮವಾದಾಗ. ಭಾವನೆಯು ಗರ್ಭೀಕೃತವಾಗದಿದ್ದಲ್ಲಿ ಅನೂಚ್ಚಾರಣವೂ ಪುರಶ್ಚರಣವೂ ಯಾಂತ್ರಿಕಕ್ರಿಯೆಯಷ್ಟೆ ಆದೀತು. ‘ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ’ ಮೊದಲಾದ ಪ್ರಸಿದ್ಧ ವಾಕ್ಯಗಳ ಇಂಗಿತವೂ ಇದೇ. ಭಾವನಾಸ್ತರದ ಸ್ಪಂದನ ಏರ್ಪಟ್ಟಲ್ಲಿ ಪವಾಡಗಳೇ ಘಟಿಸಬಹುದು.
ಜಪಾನಿನಲ್ಲಿ ನೋಬುನಾಗಾ ಎಂಬ ಸೇನಾಧಿಪತಿ ಇದ್ದ. ಅವನಲ್ಲಿದ್ದ ಸೈನ್ಯ ಶತ್ರುಸೈನ್ಯದ ಕಾಲುಭಾಗಕ್ಕೂ ಕಡಮೆ. ಆದರೂ ಯುದ್ಧ ಮಾಡಲೇಬೇಕೆಂದು ನಿರ್ಧರಿಸಿದ. ಆದರೆ ಅವನ ಸೈನಿಕರು ಹಿಂದೆಗೆಯುತ್ತಿದ್ದರು. ಆತ ಒಂದು ತಂತ್ರ ಮಾಡಿದ. ದಾರಿಯಲ್ಲಿ ಒಂದು ದೇವಾಲಯ ಕಂಡಿತು. ಆತ ಸೈನಿಕರಿಗೆ ಹೇಳಿದ – “ನಾನೀಗ ಗುಡಿಯೊಳಕ್ಕೆ ಹೋಗಿ ಪೂಜೆ ಮಾಡಿ ಬರುತ್ತೇನೆ. ಆಮೇಲೆ ನಾಣ್ಯವೊಂದನ್ನು ಚಿಮ್ಮಿಸುತ್ತೇನೆ. ಆಗ ‘ರಾಜ’ ಮೇಲ್ಮುಖವಾದರೆ ಗೆಲವು ನಮ್ಮದಾಗುತ್ತದೆಂದು ಅದರ ಅರ್ಥ.” ಹಾಗೆಯೇ ನಡೆಯಿತು. ನಾಣ್ಯ ‘ರಾಜ’ನನ್ನು ತೋರಿಸಿದುದನ್ನು ನೋಡಿ ಸೈನಿಕರು ಉತ್ಸಾಹಿತರಾಗಿ ಮುನ್ನುಗ್ಗಿ ಹೋರಾಡಿದರು. ಯಶಸ್ಸು ಲಭಿಸಿತು. ಅನಂತರ “ನೀವು ಅದ್ಭುತವನ್ನು ಸಾಧಿಸಿದಿರಿ” ಎಂದು ಪ್ರಶಂಸಿಸಿದ ಮಿತ್ರನಿಗೆ ನೋಬುನಾಗಾ ಹೇಳಿದ – “ಹೌದು, ಅದು ಅದ್ಭುತವೇ. ಸೈನಿಕರಲ್ಲಿ ಮೂಡಿದ ಆತ್ಮವಿಶ್ವಾಸವೇ ಆ ಅದ್ಭುತ.” ಹೀಗೆಂದು ತಾನು ಬಳಸಿದ್ದ ನಾಣ್ಯವನ್ನು ತೋರಿಸಿದ. ಅದರ ಎರಡೂ ಬದಿಗಳಲ್ಲಿ ‘ರಾಜ’ ಇತ್ತು!