ಸತ್ಯಧರ್ಮಾರ್ಯವೃತ್ತೇಷು ಶೌಚೇ ಚೈವಾರಮೇತ್ಸದಾ |
ಶಿಷ್ಯಾಂಶ್ಚ ಶಿಷ್ಯಾದ್ಧರ್ಮೇಣ ವಾಗ್ಬಾಹೂದರಸಂಯತಃ ||
– ಮನುಸ್ಮೃತಿ
“ಸತ್ಯಪಥದಲ್ಲಿ, ಧರ್ಮಾಚರಣೆಯಲ್ಲಿ, ಶುಚಿಯಾಗಿರುವುದರಲ್ಲಿಯೇ ಸದಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅನುಚರರನ್ನೂ ಧರ್ಮಮಾರ್ಗದಲ್ಲಿಯೆ ನಡೆಯುವಂತೆ ಪ್ರೋತ್ಸಾಹಿಸಬೇಕು. ಮಾತು, ತೋಳು, ಹೊಟ್ಟೆ – ಇವನ್ನು ಹತೋಟಿಯಲ್ಲಿರಿಸಿಕೊಂಡಿರಬೇಕು.”
ಹೊರಮೈಯನ್ನು ಸಾಬೂನಿನಿಂದಲೋ ಅಂಥ ಅನ್ಯ ಪರಿಕರಗಳಿಂದಲೋ ತಿಕ್ಕಿ ಶುಚಿಗೊಳಿಸಿಕೊಳ್ಳುತ್ತೇವೆ. ಅದರಂತೆ ನಮ್ಮ ಒಳಗಿನ ಅಂಗಗಳ ಪಾರಿಶುದ್ಧ್ಯವನ್ನೂ ಕಾಪಾಡಿಕೊಳ್ಳಬೇಕಲ್ಲವೆ? ಹೊರಗಿನ ಮೈಗೆ ಕೊಳೆ-ಕಸರು ತಗಲುತ್ತಿರುವಂತೆ ಒಳಗಿನ ಅಂಗಗಳಾದ ಮನಸ್ಸು-ಬುದ್ಧಿಗಳಿಗೂ ಮಾಲಿನ್ಯ ಮೆತ್ತಿಕೊಳ್ಳುವ ಅವಕಾಶಗಳಿಗೆ ಕೊರತೆಯಿಲ್ಲ. ಇವಾದರೋ ಸೂಕ್ಷ್ಮರೂಪದವು. ಯಾರನ್ನೋ ನಿಂದನೆ ಮಾಡುವುದು, ಅಹಿತಕರವಾಗಿ ವರ್ತಿಸುವುದು, ಒರಟು ಮಾತನ್ನಾಡುವುದು – ಇಂಥ ಒಂದೊಂದು ನಡೆಯೂ ಅಂತರಂಗವನ್ನು ಮಲಿನಗೊಳಿಸುತ್ತದೆ. ಎಷ್ಟೊ ಸಂದರ್ಭಗಳಲ್ಲಿ ಇದೆಲ್ಲ ವಿಕೃತಿ ಎಂಬ ಪರಿವೆಯೇ ನಮಗಿರುವುದಿಲ್ಲ; ಹಲವೊಮ್ಮೆ ಇಂಥ ವರ್ತನೆಯ ಬಗೆಗೆ ಹೆಮ್ಮೆಪಡುವುದೂ ಉಂಟು. ಅದನ್ನು ರಾಜಸಪ್ರವೃತ್ತಿಯೆಂದಷ್ಟೆ ಕರೆಯಬಹುದೇನೊ. ಇಂಥ ನಡವಳಿಯಿಂದ ಸಾತ್ತ್ವಿಕ ಸ್ವಭಾವದವರು ದೂರವಿರುತ್ತಾರೆ.
ಒಮ್ಮೆ ಪಂಡಿತರೊಬ್ಬರು ಮದನಮೋಹನ ಮಾಳವೀಯರಲ್ಲಿಗೆ ಬಂದು ಸವಾಲೊಡ್ಡಿದರು: “ನೀವು ನನ್ನ ಸ್ತಿಮಿತತೆಯನ್ನು ಪರೀಕ್ಷೆ ಮಾಡಿರಿ. ನೀವು ನೂರು ಬೈಗುಳ ಬೈದರೂ ನಾನು ವಿಚಲಿತನಾಗುವುದಿಲ್ಲ.” ಇದಕ್ಕೆ ಮಾಳವೀಯರು ಉತ್ತರಿಸಿದರು: “ಮಹಾಶಯರೆ, ನಿಮ್ಮ ಸಹನೆಯ ಪರೀಕ್ಷೆ ಆಗುವುದಕ್ಕೆ ಮೊದಲೇ ನನ್ನ ಬಾಯಿ ಮಲಿನವಾಗಿಬಿಟ್ಟಿರುತ್ತದಲ್ಲ! ಆ ಕೆಲಸವನ್ನು ನಾನೇಕೆ ಮಾಡಲಿ?”