ಯಃ ಪ್ರಾಪ್ಯ ದುಷ್ಪ್ರಾಪಮಿದಂ ನರತ್ವಂ
ಧರ್ಮಂ ನ ಯತ್ನೇನ ಕರೋತಿ ಮೂಢಃ |
ಕ್ಲೇಶಪ್ರಬಂಧೇನ ಸ ಲಬ್ಧಮಬ್ಧೌ
ಚಿಂತಾಮಣಿ ಪಾತಯತಿ ಪ್ರಮಾದಾತ್ ||
– ಸೋಮಪ್ರಭಾಚಾರ್ಯನ ‘ಸೂಕ್ತಿಮುಕ್ತಾವಲಿ’
“ತುಂಬಾ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದೂ ಯಾವನು ಧರ್ಮವನ್ನು ಆಚರಿಸುವುದಿಲ್ಲವೋ ಅವನದು ಮೂಢತನವೆಂದು ಹೇಳಬೇಕು. ಅಂಥವನ ಬದುಕು ಕಷ್ಟಪಟ್ಟು ಪಡೆದ ಅಮೂಲ್ಯ ಚಿಂತಾಮಣಿಯನ್ನು ಅಜಾಗರೂಕತೆಯಿಂದ ಸಮುದ್ರದಲ್ಲಿ ಬಿಸಾಡಿದ ಹಾಗೆ ಆಗುತ್ತದೆ.”
ಒಬ್ಬ ವ್ಯಕ್ತಿಗೆ ತನಗೆ ಲಭಿಸಿರುವ ಮನುಷ್ಯಜನ್ಮ ಎಷ್ಟು ಅಮೂಲ್ಯವೆಂಬುದರ ಮನವರಿಕೆ ಇದ್ದಲ್ಲಿ ಅವನು ಜೀವನವನ್ನು ವ್ಯರ್ಥ ಮಾಡದೆ ಉನ್ನತಾದರ್ಶಸಾಧನೆಯ ದಿಕ್ಕಿನಲ್ಲಿ ಉದ್ಯುಕ್ತನಾಗುತ್ತಾನೆ. ಇದಕ್ಕೆ ಪ್ರೇರಣೆ ಹಲವೊಮ್ಮೆ ಯಾವುದೊ ವಿಶಿಷ್ಟ ಸನ್ನಿವೇಶದಿಂದ ದೊರೆಯುವುದೂ ಉಂಟು. ಅಂತಹ ಪರಿವರ್ತಕ ಸಂದರ್ಭವನ್ನು ಸಾಧನೆಯ ಪರಿಭಾಷೆಯಲ್ಲಿ ‘ಅಮೃತ ಘಳಿಗೆ’ ಎನ್ನುವುದುಂಟು.
ಶ್ರಾವಸ್ತಿಯಲ್ಲಿ ಮೃಗಶ್ರೇಷ್ಠಿ ಎಂಬ ಧನಿಕನಿದ್ದ. ಅತುಲ್ಯ ಶ್ರೀಮಂತನಾಗಿದ್ದರೂ ಅವನ ಧನಸಂಗ್ರಹಾಕಾಂಕ್ಷೆ ಮಾತ್ರ ಹಿಂದಿನಂತೆಯೆ ಮುಂದುವರಿದಿತ್ತು; ಅವನ ಮನಸ್ಸನ್ನಷ್ಟೂ ಆವರಿಸಿತ್ತು. ದಾನಧರ್ಮಾದಿಗಳ ಮಾತೇ ಇಲ್ಲ. ಅವನಿಗೆ ವಿಶಾಖಾ ಎಂಬ ಸೊಸೆಯಿದ್ದಳು. ಅವಳಾದರೋ ಸುಸಂಸ್ಕೃತಳು, ಬುದ್ಧನ ಅನುಯಾಯಿ.
ಒಂದು ದಿನ ಮಾವ ಊಟ ಮಾಡುವಾಗ ಸೊಸೆ ಕೇಳಿದಳು:
ವಿ: “ಅಪ್ಪಾ, ಇವತ್ತು ಅಡಿಗೆ ಹೇಗಿದೆ?”
ಮೃ: “ಇದೇನು ವಿಶೇಷವಾಗಿ ಹೀಗೆ ಕೇಳುತ್ತಿದ್ದೀಯ ತಾಯಿ? ದಿನವೂ ಇರುವಂತೆ ರುಚಿಯಾಗಿಯೇ ಇದೆ.”
ವಿ:“ಅದು ನಿಮ್ಮ ಭ್ರಮೆ, ಅಪ್ಪಾ. ವಾಸ್ತವವಾಗಿ ನೀವು ಊಟ ಮಾಡಿದ್ದು ಹಳಸಲು ಅಡಿಗೆಯನ್ನು. ಉಗ್ರಾಣದಲ್ಲಿ ರುಚಿಕರ ಅಡಿಗೆ ತಯಾರಿಸಲು ಹೊಸ ಸಾಚಾ ಸಾಮಗ್ರಿಗಳೇ ಇರಲಿಲ್ಲ.”
ಮೃ: “ನನಗೆ ಹಾಗೆ ತೋರಲಿಲ್ಲವಲ್ಲ? ನಿನ್ನ ಮಾತು ಅರ್ಥವಾಗುತ್ತಿಲ್ಲ.”
ವಿ:“ಅಪ್ಪಾ, ಈ ಮನೆಯಲ್ಲಿ ಇರುವ ದವಸಧಾನ್ಯ, ನಿಮ್ಮಲ್ಲಿ ಶೇಖರವಾಗಿರುವ ಹಣ, ನಿಮ್ಮ ಕೊಟ್ಟಿಗೆಯಲ್ಲಿನ
ದನಗಳು – ಎಲ್ಲವೂ ನಿಮ್ಮ ಹಿಂದಿನ ಜನ್ಮದ ಪುಣ್ಯಕಾರ್ಯಗಳ ಫಲವಷ್ಟೆ. ಏಕೆಂದರೆ ಈ ಜನ್ಮದಲ್ಲಿ ನೀವು ಒಳ್ಳೆಯದೇನನ್ನೂ ಮಾಡಿಯೇ ಇಲ್ಲ. ಹಿಂದಿನ ಜನ್ಮದ್ದೆಂದ ಮೇಲೆ ಅದೆಲ್ಲ ಹಳೆಯದು, ಹಳಸಲು ತಾನೆ? ಅದನ್ನೇ ನಾನು ಹೇಳಿದ್ದು.”
ಸೊಸೆಯ ಸೂಚ್ಯ ಮಾತಿನಿಂದ ಶ್ರೇಷ್ಠಿಗೆ ಜ್ಞಾನೋದಯವಾಗಿ ಅಲ್ಲಿಂದಾಚೆಗೆ ಅವನ ಜೀವನ ಧರ್ಮಾಭಿಮುಖವಾಯಿತು.