ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ |
ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ ||
– ರಾಮಾಯಣ, ಕಿಷ್ಕಿಂಧಾಕಾಂಡ
ಬೇಸರಿಸದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪದ ದಾರ್ಢ್ಯ – ಇವು ಕಾರ್ಯಸಿದ್ಧಿಗೆ ಅನಿವಾರ್ಯವೆಂದು ತಿಳಿದವರು ಹೇಳುತ್ತಾರೆ. ಅದನ್ನೇ ನಾನು ನಿಮಗೂ ಹೇಳುತ್ತಿದ್ದೇನೆ.
ಅಂಗದನು ವಾನರರಿಗೆ ಹೇಳುವ ಪ್ರೇರಕ ವಚನ ಇದು. ಯಾರಲ್ಲಿ ಇಂತಹ ಕಾರ್ಯಮಗ್ನತೆ ಇರುತ್ತದೋ ಅವರು ಸಫಲರಾಗುವುದು ನಿಶ್ಚಿತ.
ಗ್ರೀಸ್ ದೇಶದ ಥ್ರೇಸ್ ಪ್ರಾಂತದಲ್ಲಿ ಒಬ್ಬ ಬಡ ಹುಡುಗ. ಕಾಡಿನಲ್ಲಿ ಕಟ್ಟಿಗೆಗಳನ್ನಾಯ್ದು ತಂದು ಹೊರೆಗಳಾಗಿ ಕಟ್ಟಿ ಮಾರಿ ಜೀವನ ನಡೆಸುತ್ತಿದ್ದ. ಆ ಹೊರೆಗಳು ಅತ್ಯಂತ ಆಕರ್ಷಕವಾಗಿದ್ದುದನ್ನು ಸಜ್ಜನನೊಬ್ಬ ಗಮನಿಸಿ ಕೇಳಿದ – ಈ ಹೊರೆಗಳನ್ನು ನೀನೇ ಕಟ್ಟಿದೆಯಾ? ಬಾಲಕ ಹೌದು ಎಂದ. ಹಾಗಾದರೆ ಇವನ್ನು ಬಿಚ್ಚಿ ಮತ್ತೆ ಹಾಗೆಯೆ ಕಟ್ಟಬಲ್ಲೆಯಾ? ಎಂದುದಕ್ಕೆ ಬಾಲಕ ಮಾಡಬಲ್ಲೆ ಎಂದು ಮಾಡಿ ತೋರಿಸಿದ. ಅವನ ಕೌಶಲ, ಏಕಾಗ್ರತೆಯಿಂದ ಪ್ರಭಾವಿತನಾದ ಸಜ್ಜನ ನೀನು ನನ್ನೊಡನೆ ಬರುವುದಾದರೆ ನಿನ್ನ ಕಲಿಕೆಯ ವೆಚ್ಚವನ್ನೂ ವ್ಯವಸ್ಥೆಯನ್ನೂ ನಾನು ನೋಡಿಕೊಳ್ಳುತ್ತೇನೆ ಎಂದ. ಬಾಲಕ ಒಪ್ಪಿದ; ಕಲಿಯುವ ಗುಣದಿಂದಲೂ ಏಕಾಗ್ರತೆಯಿಂದಲೂ ಉತ್ಸಾಹಶೀಲತೆಯಿಂದಲೂ ಅಲ್ಪಕಾಲದಲ್ಲಿ ಆ ಸೀಮೆಯಲ್ಲಿಯೆ ಅತ್ಯಂತ ಪ್ರತಿಭಾವಂತನೆನಿಸಿದ. ಆ ಹುಡುಗನೇ ಮುಂದೆ ಪೈಥಾಗೊರಸ್ ಎಂದು ವಿಖ್ಯಾತನಾದ. ಅವನಲ್ಲಿದ್ದ ತನ್ಮಯತೆ-ನಿಶ್ಚಲತೆಗಳನ್ನು ಎಳವೆಯಲ್ಲಿಯೆ ಗುರುತಿಸಿ ಪ್ರೋತ್ಸಾಹಿಸಿದವನು ತತ್ತ್ವಜ್ಞಾನಿ ಡೆಮಾಕ್ರಿಟಸ್.