ತೃಣಾನಿ ನೋನ್ಮೂಲಯತಿ ಪ್ರಭಂಜನೋ
ಮೃದೂನಿ ನೀಚೈಃ ಪ್ರಣತಾನಿ ಸರ್ವಶಃ |
ಸಮಚ್ಛ್ರಿತಾನೇನ ತನೂನ್ ಪ್ರಬಾಧತೇ
ಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ ||
– ಹಿತೋಪದೇಶ
“ಕೆಳಕ್ಕೆ ಬಗ್ಗಿ ತಗ್ಗಿರುವ ಹುಲ್ಲನ್ನು ಬಿರುಗಾಳಿ ಉತ್ಪಾಟನ ಮಾಡುವುದಿಲ್ಲ. ಬಿರುಗಾಳಿಯು ನಾಶಪಡಿಸಲೆಳಸುವುದು ಎತ್ತರದ ಮರಗಳನ್ನೇ. ಪ್ರಬಲರು ಪರಾಕ್ರಮ ಮೆರೆಯುವುದು ಪ್ರಬಲರಿಗೆದುರಾಗಿಯೇ.”
ಬೇರೆಯವರ ಗಮನಸೆಳೆಯದೆ ಸೌಮ್ಯವಾಗಿರುವುದರಲ್ಲಿ ಗುಣವಿದೆಯೆಂದು ಮೇಲಣ ಪದ್ಯದಲ್ಲಿ ಧ್ವನಿಸಲಾಗಿದೆ. ಗಾತ್ರ ಅಥವಾ ಬೃಹತ್ತ್ವದಿಂದ ಎಲ್ಲ ಸಂದರ್ಭಗಳಲ್ಲಿಯೂ ಅನುಕೂಲವಾಗಲಾರದು.
ಚೀಣೀ ತಾತ್ತ್ವಿಕ ಕನ್‍ಫ್ಯೂಶಿಯಸ್ ಉತ್ಕ್ರಮಣಾವಸ್ಥೆಯಲ್ಲಿದ್ದಾಗ ಅವನ ಅನುಯಾಯಿಗಳು ಆ ಮಹನೀಯನ ಅಂತಿಮ ಸಂದೇಶ ಬೇಕೆಂದು ಆಗ್ರಹಿಸಿದರು. ಕನ್‍ಫ್ಯೂಶಿಯಸ್ ತನ್ನ ಬಾಯನ್ನು ಅಗಲವಾಗಿ ತೆರೆದು ಅದನ್ನು ಗಮನವಿರಿಸಿ ನೋಡಲು ಸೂಚಿಸಿದ.
“ನನ್ನ ಬಾಯಲ್ಲಿ ನಿಮಗೆ ಏನು ಕಾಣುತ್ತಿದೆ?”
“ತಮ್ಮ ನಾಲಗೆ ಮಾತ್ರ ಕಾಣುತ್ತಿದೆ, ಹಲ್ಲುಗಳಿಲ್ಲ.”
“ದೇಹದಲ್ಲಿ ಮೊದಲು ಹುಟ್ಟಿಕೊಂಡಿದ್ದುದು ಯಾವುದು?”
“ನಾಲಗೆ ತಾನೆ! ಹಲ್ಲು ಆಮೇಲೆ ಬಂದದ್ದು.”
“ನಾಲಗೆ ಹಲ್ಲಿಗಿಂತ ಹೆಚ್ಚು ಕಾಲ ಬಾಳುವುದು ಏಕೆಂದು ಯೋಚಿಸಿರುವಿರಾ?”
ಶಿಷ್ಯರಿಗೆ ಉತ್ತರಿಸಲಾಗಲಿಲ್ಲ.
ಕನ್‍ಫ್ಯೂಶಿಯಸ್ ಮುಂದುವರಿಸಿದ:
“ನಾಲಗೆಯು ಸೌಮ್ಯವಾಗಿಯೂ ಮೃದುವಾಗಿಯೂ ಇರುವುದರಿಂದ ಬಹುಕಾಲ ಉಳಿದಿದೆ. ಹಲ್ಲುಗಳು ಗಡಸಾಗಿ ಕರ್ಕಶವಾಗಿರುವುದರಿಂದ ಬೇಗ ನಶಿಸಿವೆ. ಇದೇ ನನ್ನ ಅಂತಿಮ ಸಂದೇಶವೆಂದು ತಿಳಿಯಿರಿ!”