ಈಗ್ಗೆ ನಾಲ್ಕು ದಶಕಗಳ ಹಿಂದೆ ದೇಶದ ರಾಜಕೀಯ ಪರಿಸರವನ್ನು ಪರಾಮರ್ಶಿಸಿದ ವಿಶ್ಲೇಷಕರನೇಕರು ದೇಶದಲ್ಲಿ ಏಕಪಕ್ಷಸರ್ಕಾರಗಳ ಕಾಲ ಮುಗಿದಿದೆಯೆಂದೂ ಇನ್ನು ಮುಂದೆ ಸಮ್ಮಿಶ್ರಸರ್ಕಾರಗಳಿಗಷ್ಟೆ ಅವಕಾಶ ಇರುತ್ತದೆಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲಿಂದೀಚೆಗೆ ಬಗೆಬಗೆಯ ಪಕ್ಷಮಿಶ್ರಣಪ್ರಯೋಗಗಳು ನಡೆದಿರುವುದನ್ನು ಜನ ನೋಡಿದ್ದಾರೆ. ಮಿಶ್ರಸರ್ಕಾರಗಳ ಸಾಧಕಬಾಧಕಗಳ ಹಲವಾರು ರೀತಿಯ ಅನುಭವಗಳು ಆಗಿವೆ. ಕರ್ನಾಟಕದಲ್ಲಿಯೇ ಈ ಹಿಂದೆ ಮೈತ್ರಿಸರ್ಕಾರ ಪ್ರಯೋಗ ಹೇಗೆ ಸಾಗಿತ್ತೆಂಬುದನ್ನು ಜನ ಮರೆತಿರಲಾರರು. 1999ರಲ್ಲಿ ಪ್ರಧಾನಿಯಾದ ವಾಜಪೇಯಿಯವರು ನಾಲ್ಕಾರು ಪಕ್ಷಗಳನ್ನು ಸೇರಿಸಿಕೊಂಡು ಪೂರ್ಣಾವಧಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸಿದುದು ಮೈತ್ರಿಸರ್ಕಾರಗಳ ಇತಿಹಾಸದ ಸುವರ್ಣಾಧ್ಯಾಯವೆಂದು ಅಂಕಿತಗೊಂಡಿತ್ತು. ಅದಕ್ಕೆ ಪೂರ್ಣ ವ್ಯತಿರಿಕ್ತವಾಗಿ ಮೈತ್ರಿಸರ್ಕಾರ ಹೇಗೆ ಇರಬಾರದೆಂಬುದಕ್ಕೆ ಪರಮೋಜ್ಜ್ವಲ ನಿದರ್ಶನವಾಗಿ ಕಳೆದೊಂದು ವರ್ಷದ ಕರ್ನಾಟಕದ ಜೆ.ಡಿ.(ಎಸ್)-ಕಾಂಗ್ರೆಸ್ ಕೂಟ ಗಮನ ಸೆಳೆದಿದೆಯೆಂಬುದು ಶೋಚನೀಯ.
ಕೂಡಿಕೆಯಲ್ಲಿ ಕಿರಿಯ ಭಾಗೀದಾರ ಪಕ್ಷವಾದ ಜೆ.ಡಿ.(ಎಸ್.) ಅಧಿಕಾರಗ್ರಹಣ ಮಾಡುವ ಪರಿಸ್ಥಿತಿಯೊದಗಿದಾಗಿನಿಂದಲೇ ದಾಂಪತ್ಯವಿರಸ ಉಪಕ್ರಮಗೊಂಡಿತು. ಆದರೂ ಈ ಕೂಡಿಕೆ ರಾಷ್ಟ್ರಮಟ್ಟದ ‘ಗಠಬಂಧನ’ಕ್ಕೆ ನಾಂದಿಯಾಗುತ್ತದೆಂದೆಲ್ಲ ಗಟ್ಟಿದನಿಯಲ್ಲಿ ಸಾರಲಾಯಿತು. ಆದರೆ ಒಂದು ವರ್ಷದ ಸತತ ತ್ವಂಚಾಹಂಚಗಳ ತರುವಾಯವೂ ಮಿಶ್ರಸರ್ಕಾರವು ದಿನಗಳನ್ನೆಣಿಸುತ್ತಿದೆ. ಈಗ ಚುಕ್ಕಾಣಿ ಹಿಡಿದಿರುವ ಪಕ್ಷವೇ ಅಲ್ಲವೆ ‘ಯುನೈಟಡ್ ಫ್ರಂಟ್’ ಏರ್ಪಾಡಿನ ಅವಧಿಯಲ್ಲಿ ಕಾಂಗ್ರೆಸಿನ ಅವಿಶ್ವಸನೀಯತೆಯನ್ನು ಅನುಭವಿಸಿದ್ದುದು?
ವರ್ಷಗಳುದ್ದಕ್ಕೂ ಪ್ರತಿಕಕ್ಷಿಗಳಾಗಿದ್ದ ಪಕ್ಷಗಳು ಈಗ ರಾತ್ರೋರಾತ್ರಿ ತಮ್ಮ ಜಾಯಮಾನಗಳನ್ನು ಬದಲಾಯಿಸಿಕೊಂಡುಬಿಡುತ್ತವೆಂದು ನಿರೀಕ್ಷಿಸಲು ಆಧಾರವೇನಿತ್ತು? ಅಧಿಕಾರ ವಹಿಸಿಕೊಂಡ ಹಲವೇ ದಿನಗಳಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ‘ನಾನು ವಿಷಕಂಠನಾಗಿಬಿಟ್ಟಿದ್ದೇನೆ’ ಎಂದು ಹೇಳಬೇಕಾಯಿತು. ಒಮ್ಮೆ ಮೈತ್ರಿಧರ್ಮ ಪಾಲನೆಯಾಗುತ್ತಿಲ್ಲವೆಂದು, ಇನ್ನೊಮ್ಮೆ ಅಭಿವೃದ್ಧಿಪ್ರಕಲ್ಪಗಳೆಲ್ಲ ಧರಾಶಾಯಿಯಾಗಿವೆಯೆಂದು… ಕಾಂಗ್ರೆಸ್ ಶಾಸಕರ ಅಪಲಾಪಪ್ರವಾಹ ಮಿತಿಯಿಲ್ಲದೆ ಅಹರ್ನಿಶಿ ಸಾಗಿತು. ಸಿದ್ದರಾಮಯ್ಯನವರೇ ಮತ್ತೆ ಗಾದಿಯನ್ನೇರಲೆಂಬ ಆಗ್ರಹ ಹೊಮ್ಮಲು ತಡವಾಗಲಿಲ್ಲ. ಒಂದಷ್ಟು ಸಂಯಮದಿಂದಿರಿ ಎಂಬ ಕಾಂಗ್ರೆಸ್ ಪ್ರಾಂತಾಧ್ಯಕ್ಷರ ಮತ್ತು ಉಪಾಧ್ಯಕ್ಷರ ಹಿತವಾದ ಕೇಳಿಸಿಕೊಳ್ಳುವ ವ್ಯವಧಾನ ಯಾರಲ್ಲಿಯೂ ಇರಲಿಲ್ಲ. ಈಗಂತೂ ಅಸಮಾಧಾನ ಕುದಿಬಿಂದು ತಲಪಿದೆ.
ಲೋಕಸಭಾ ಚುನಾವಣೆ ಸಮೀಪಿಸಿದಾಗಲಾದರೂ ತಾತ್ಕಾಲಿಕವಾಗಿಯಾದರೂ ವಿರಸ ಒಂದಷ್ಟು ತಗ್ಗೀತೆಂಬ ಅನಿಸಿಕೆಯೂ ಹುಸಿಯಾಯಿತು. ಒಳಜಗಳ ಇನ್ನಷ್ಟು ಬಿಗಡಾಯಿಸುತ್ತಲೇ ಹೋಯಿತು: ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ಕಗ್ಗಂಟಾಯಿತು. ಈ ವ್ಯಗ್ರತೆ ಪ್ರಚಾರದಲ್ಲಿಯೂ ಬಿಂಬಿತವಾಯಿತು. ಜೆ.ಡಿ.(ಎಸ್.) ತನ್ನ ಭದ್ರಕೋಟೆಗಳೆಂದು ಭಾವಿಸಿದ್ದ ಹಾಸನ-ಮಂಡ್ಯಗಳೇ ಸಮಸ್ಯೆಯ ಹುತ್ತಗಳಾದವು; ಕಾಂಗ್ರೆಸಿನ ಪ್ರಭಾವವಲಯದ್ದೆನಿಸಿದ್ದ ತುಮಕೂರು-ಮಧುಗಿರಿಗಳಲ್ಲೂ ಅಸಮಾಧಾನ ಭುಗಿಲೆದ್ದಿತು. ಎಲ್ಲಿಯೂ ಎರಡೂ ಮೈತ್ರಿಪಕ್ಷಗಳು ಏಕಮುಖವಾಗಿ ಮತ ಹಾಕುವ ಸ್ಥಿತಿ ಕಾಣಲಿಲ್ಲ.
ವಿರಸ ತುಂಬಿದ ದಾಂಪತ್ಯ ಮುಂದುವರಿಯುವುದಕ್ಕಿಂತ ಮಧ್ಯಂತರ ಚುನಾವಣೆ ನಡೆಯುವುದೇ ಮೇಲೆಂಬ ಧ್ವನಿಗಳೂ ಈಗಾಗಲೆ ಕೇಳಿಬರತೊಡಗಿವೆ.
ಲೋಕಸಭಾ ಚುನಾವಣೆಯ ಫಲಿತ ಏನೇ ಆದರೂ ಕರ್ನಾಟಕ ರಾಜಕೀಯದಲ್ಲಿ ತೀವ್ರ ಬದಲಾವಣೆಗಳಾಗುವುದು ತಪ್ಪಲಾರದೆಂಬುದು ಸಮೀಕ್ಷಕರ ಅಭಿಪ್ರಾಯವಾಗಿದೆ. ಎರಡೂ ಶಿಥಿಲ ಮೈತ್ರಿಪಕ್ಷಗಳ ವಿಷಯ ಹಾಗಿರಲಿ; ಜೆ.ಡಿ.(ಎಸ್) ಮೈತ್ರಿಯಿಂದ 2006ರಲ್ಲಿ ಕೈಸುಟ್ಟುಕೊಂಡಿದ್ದ ಭಾಜಪಾ ಕೂಡಾ ಮಧ್ಯಂತರ ಚುನಾವಣೆಗೆ ವಿರೋಧ ತೋರಲಾರದೇನೊ.
ದೊಡ್ಡ ವಿಪರ್ಯಾಸವೆಂದರೆ: ಕುಮುಲುತ್ತಿದ್ದ ಸಮಸ್ಯೆಗಳಿಗೆ ರಾಜ್ಯ ಚುನಾವಣೆಯೂ ಲೋಕಸಭಾ ಚುನಾವಣೆಯೂ ಉಪಶಮನಕಾರಿಯಾದಾವೆಂದು ನಿರೀಕ್ಷಿಸಲಾಗಿತ್ತು. ಆದರೆ ಎರಡೂ ಚುನಾವಣೆಗಳು ಹೆಚ್ಚು ಜಟಿಲ ಸಮಸ್ಯೆಗಳಿಗಷ್ಟೆ ದಾರಿಮಾಡಿವೆ. “ಸ್ವಭಾವಸ್ತು ಪ್ರವರ್ತತೇ||”