ಏನು ಮಾಡಿದರೂ ಜೀರ್ಣಿಸಿಕೊಂಡೇವು ಎಂಬ ಸ್ಥಿತಿ ಇರುವುದೇ ಇವರಿಗೆಲ್ಲ ಶ್ರೀರಕ್ಷೆಯಾಗಿರುವುದು.
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಹದಿನೆಂಟು ವರ್ಷಗಳು ದಾಟಿವೆ. ಲಾಲೂಪ್ರಸಾದ ಮಹಾಶಯರನ್ನು ವಿಚಾರಣೆಗೊಳಪಡಿಸಲು ಇಪ್ಪತ್ತು ವರ್ಷಗಳೇ ಹಿಡಿದಿದ್ದು ಇದೀಗ `ಜಾಮೀನುದಾರ’ರಾಗಿದ್ದರೂ ರಾಜಕೀಯ ಕಲಾಪವನ್ನು ನಿರಂತರ ನಡೆಸಿದ್ದಾರೆ. ಭ್ರಷ್ಟ ಮುಖ್ಯಮಂತ್ರಿಯ ಭ್ರಷ್ಟ ಪುತ್ರ ಜಗನ್‌ಮೋಹನ ರೆಡ್ಡಿ `ಬೇಲ್’ ಪಡೆದು ಹೊರಗಿದ್ದರೂ ಆಂಧ್ರ ವಿಧಾನಸಭೆಯಲ್ಲಿ ವಿರೋಧಪಕ್ಷ ನಾಯಕರೆನಿಸಿ ಕ್ಯಾಬಿನೆಟ್ ಸ್ಥಾನಮಾನಕ್ಕೆ ಭಾಜನರಾಗಿದ್ದಾರೆ.
ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿ ಜಯಲಲಿತಾ ಜಯರಾಮನ್ ಅವರು ತಮ್ಮ ಘೋಷಿತ ನ್ಯಾಯಾನು ಗುಣ ಗಳಿಕೆಗೆ ಬಹುಪಾಲು ಮೀರಿದ ಸಂಪತ್ತನ್ನೂ ಆಸ್ತಿ ಗಳನ್ನೂ ಶೇಖರಿಸಿಕೊಂಡಿದ್ದುದರ ವಿರುದ್ಧ ಮೊಕದ್ದಮೆ ದಾಖ ಲಾಗಿದ್ದುದು ೧೮ ವರ್ಷ ಹಿಂದೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಂತಿಮ ನಿರ್ಣಯ ಸ್ಥಾನವಾಗಿರುವಂಥದು ನ್ಯಾಯಾಲಯ. ನ್ಯಾಯಾಂಗದ ನಡವಳಿಗಳಲ್ಲಿ ಋಜುತೆಯ ಕೊರತೆ ಕಂಡರೆ ಅದು ವಿಶೇಷ ಆತಂಕಕ್ಕೆ ಕಾರಣವಾಗುತ್ತದೆ. ಜಯಲಲಿತಾ ವಿರುದ್ಧದ ನ್ಯಾಯಾಂಗ ಕಲಾಪಗಳು ಹುಸಿಕಾರಣಗಳಿಂದ ಕುಂಟುತ್ತಿದ್ದುದು ಈಗಿನ ವ್ಯವಸ್ಥೆಗಳಲ್ಲಿನ ಅಸಮರ್ಪಕತೆಯ ಸೂಚಕವೆನ್ನದೆ ವಿಧಿಯಿಲ್ಲ. ಅವರಿಗೆ ಸವೊನ್ಯಾಯಾಲಯ ಜಾಮೀನನ್ನು ನೀಡಿರುವುದರ ಸಿಂಧುತ್ವವು ನ್ಯಾಯಾಂಗತಜ್ಞ ವಲಯಗಳಲ್ಲಿಯೆ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೂ ಜಯಲಲಿತಾರಿಗೆ ನಾಲ್ಕು ವರ್ಷಗಳ ಜೈಲುವಾಸವನ್ನೂ ರೂ. ೧೦೦ ಕೋಟಿ ಜುಲ್ಮಾನೆಯನ್ನೂ ವಿಧಿಸಿದ (೨೭-೯-೨೦೧೪) ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಾನ್ ಮೈಕೇಲ್ ಕುನ್ಹಾರವರ ದಿಟ್ಟತನಕ್ಕೆ ಅಭಿನಂದನೆ ಸಲ್ಲಲೇಬೇಕು. “ಸ್ವಾತಂತ್ರ್ಯದ ಇತಿಹಾಸದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ವಚ್ಛಂದತೆಗಳ ನಡುವೆ ಸೋದರಸಂಬಂಧವಿದೆ. ಹಣವೂ ಅಧಿಕಾರವೂ ಅನೈತಿಕವಾಗಿ ಸಂಲಗ್ನಗೊಳ್ಳುವುದು ಪ್ರಜಾಪ್ರಭುತ್ವದ ಉಳಿವಿಗೆ ಅತಿಗಂಭೀರ ಹಾನಿಯನ್ನು ತರುತ್ತದೆ” ಎಂಬ ಅಮೆರಿಕದ ಹಿಂದಿನ ಉಪಾಧ್ಯಕ್ಷ ಆಲ್ ಗೋರ್ ಅವರ ವಿಶ್ಲೇಷಣೆಯನ್ನು ನ್ಯಾಯಮೂರ್ತಿ ಡಿಕುನ್ಹಾ ತಮ್ಮ ತೀರ್ಪಿನಲ್ಲಿ ಉದ್ಧೃತ ಮಾಡಿರುವುದು ಮಾರ್ಮಿಕವಾಗಿದೆ.
ಒಂದು ರೂಪಾಯಿಯ `ಪರ್ಚೇಸಿಂಗ್ ಪವರ್’
೧೯೯೧ರಲ್ಲಿ ಮುಖ್ಯಮಂತ್ರಿಯಾದಾಗ ತಮ್ಮ ಆಸ್ತಿ ರೂ. ೨.೦೧ ಕೋಟಿ ಎಂದು ಘೋಷಿಸಿದ್ದರು ಜಯಲಲಿತಾ. ೧೯೯೬ ಏಪ್ರಿಲ್ ವೇಳೆಗೆ ಅವರ ಆಸ್ತಿ ರೂ. ೫೩.೬೦ ಕೋಟಿಗೆ ಏರಿತ್ತು. ತಾವು ಮುಖ್ಯಮಂತ್ರಿಯಾಗಿ ಕೇವಲ ರೂ. ೧ ವೇತನ ತೆಗೆದು ಕೊಳ್ಳುತ್ತಿರುವುದಾಗಿ ಅವರು ಸಾರಿದ್ದರು. ಈ ಒಂದು ರೂಪಾಯಿ ವೇತನಧಾರಿ ಅಲ್ಪಸಮಯದಲ್ಲಿ ಶೇಖರಿಸಿಕೊಂಡ ಆಸ್ತಿಗಳಲ್ಲಿ ಕೆಲವು:
- ೯೦೦ ಎಕರೆಯ ಕೊಡನಾಡ್ ತೋಪು, ರೂ. ೭.೫ ಕೋಟಿಗೆ (ಈಗಿನ ಮೌಲ್ಯ ಎಕರೆಗೆ ರೂ. ೩ ಕೋಟಿ).
- ಚೆನ್ನೈ ಬಳಿಯ ವಲಾಜಾಬಾದಿನಲ್ಲಿ ೧೦೦ ಎಕರೆ ಜಮೀನು (ಈಗಿನ ಮೌಲ್ಯ ಎಕರೆಗೆ ರೂ. ೪೦ ಲಕ್ಷ).
- ಚೆನ್ನೈಯ ಉಪನಗರ ಸಿರುದವೂರಿನಲ್ಲಿ ೨೫.೪ ಎಕರೆ ಜಮೀನು (ಈಗಿನ ಮೌಲ್ಯ ಎಕರೆಗೆ ರೂ. ೧.೭ ಕೋಟಿ).
- ನೀಲಂಕರೈ ಸಮುದ್ರತಟದಲ್ಲಿ ಎರಡು ಎಕರೆ ನಿವೇಶನ (ಈಗಿನ ಬೆಲೆ ಎಕರೆಗೆ ರೂ. ೫೦ ಕೋಟಿ).
- ಕಾಂಚಿಯಲ್ಲಿ ೨೦೦ ಎಕರೆ ಜಮೀನು (ಈಗಿನ ಬೆಲೆ ಎಕರೆಗೆ ರೂ. ೩೦ ಲಕ್ಷ).
- ತೂತ್ತುಕುಡಿಯಲ್ಲಿ ೧,೧೬೭ ಎಕರೆ ಜಮೀನು (ಈಗಿನ ಬೆಲೆ ಎಕರೆಗೆ ರೂ. ೧೫ ಲಕ್ಷ).
- ಚೆನ್ನೈ ಉಪನಗರ ಪಯ್ಯನೂರಿನಲ್ಲಿ ೫ ಎಕರೆ ಜಮೀನು (ಈಗಿನ ಬೆಲೆ ಎಕರೆಗೆ ರೂ. ೨ ಕೋಟಿ)
ಒಂದು ರೂಪಾಯಿ ವೇತನದಲ್ಲಿ ಒಬ್ಬ ವ್ಯಕ್ತಿ ಎಷ್ಟನ್ನೆಲ್ಲ ಕೊಳ್ಳಬಹುದು!
ಇವಲ್ಲದೆ ಅವರಿಗೆ ಹೈದರಾಬಾದಿನಲ್ಲಿ ತೋಟದ ಮನೆ, ನೀಲಗಿರಿಯಲ್ಲಿ ಚಹಾತೋಟ ಮೊದಲಾದ ಆಸ್ತಿಗಳು ಇರುವುದು ಜನಜನಿತ. ಅಲ್ಲದೆ ೨೮ ಕಿಲೋ ಚಿನ್ನ, ೮೦೦ ಕಿಲೋ ಬೆಳ್ಳಿ, ೧೦,೫೦೦ ಸೀರೆಗಳು, ೭೫೦ ಜೊತೆ ಪಾದರಕ್ಷೆಗಳು – ಮೊದಲಾದವು ಇದ್ದುದನ್ನೂ ವಿಚಾರಣೆಯು ಸಿದ್ಧಪಡಿಸಿತ್ತು. ಜಯಲಲಿತಾರವರ ಒಡನಾಡಿ ಶಶಿಕಲಾ, ದತ್ತಕ ಪುತ್ರ ಸುಧಾಕರನ್ ಮೊದಲಾದವರು ಕಪ್ಪುಹಣದ ಮೂಲದಿಂದಲೇ ೩೨ ಕಂಪೆನಿಗಳನ್ನು ನಡೆಸುತ್ತಿದ್ದರು. ಇವೆಲ್ಲ ವಿವಾದೀತವಾಗಿ ದಾಖಲೆಗೊಂಡಿದ್ದ ಸಂಗತಿಗಳು. ಆದರೂ ಇವೆಲ್ಲ ರಾಜಕೀಯಪ್ರೇರಿತ ಆರೋಪಗಳೆಂದೂ ತಮಗೆ ಈ ವಿಷಯಗಳಾವುವೂ ಗೊತ್ತೇ ಇಲ್ಲವೆಂದೂ ಮಂಡನೆ ಮಾಡಿ ಜಯಲಲಿತಾ ಉದ್ದಕ್ಕೂ ನ್ಯಾಯಾಂಗ ಕಾರ್ಯಾಚರಣೆಯನ್ನು ವಿಳಂಬಗೊಳಿಸಿದ್ದರು.
ಆಬ್‌ಸ್ಟೆಕಲ್ ರೇಸ್
ಡಿ.ಎಂ.ಕೆ. ಪಕ್ಷದ ಅಂಬಳಗನ್ ಸರ್ವೋಚ್ಚ ನ್ಯಾಯಾಲಯದ ಮೊರೆಹೊಕ್ಕಿದ್ದರಿಂದಾಗಿ ಸರ್ವೋಚ್ಚ ನ್ಯಾಯಾಲಯ ಮೊಕದ್ದಮೆಯು ವಿಶೇಷ ನ್ಯಾಯಾಲಯದಲ್ಲಿ ನಡೆಯುವಂತೆ ಆದೇಶಿಸಿತು. ಕಾಗದಪತ್ರ ದಾಖಲೆಗಳನ್ನು ತಮಿಳಿನಿಂದ ಇಂಗ್ಲಿಷಿಗೆ ಅನುವಾದ ಮಾಡಿಸುವುದರಲ್ಲಿ ೩ ವರ್ಷಗಳು (೨೦೦೩-೦೫) ಕಳೆದವು. ಬೇರೆ ಅನುವಾದಗಳಾಗಬೇಕು ಎಂಬೆಲ್ಲ ವ್ಯಾಜ್ಯಗಳಲ್ಲಿ ಇನ್ನಷ್ಟು ಸಮಯ ಕಳೆಯಿತು. ಏತನ್ಮಧ್ಯೆ ಈ ಮೊಕದ್ದಮೆಗಳ ಪರಾಮರ್ಶೆಗಾಗಿಯೇ ವಿಶೇಷ ನ್ಯಾಯಾಲಯ ಆಯೋಜಿತವಾಗಬೇಕೆಂಬ ಬೇಡಿಕೆಗಳನ್ನು ಆಗಿಂದಾಗ ಸಲ್ಲಿಸಲಾಗಿತ್ತು.
ವಿಶೇಷ ನ್ಯಾಯಾಲಯ ಆಯೋಜನೆಯನ್ನು ಜಯಲಲಿತಾ ಪರ ನ್ಯಾಯವಾದಿಗಳು ವಿರೋಧಿಸುತ್ತಿದ್ದರು. ಸ್ಪಷ್ಟಪಡಿಸದ (ಆದರೆ ಯಾರು ಬೇಕಾದರೂ ಊಹಿಸಬಹುದಾದ) ಕಾರಣಗಳಿಂದ ನಿಯುಕ್ತ ವಕೀಲರ ರಾಜೀನಾಮೆ, ಬೇರೆ ವಕೀಲರ ನೇಮಕ – ಇದೆಲ್ಲ ನಡೆದಿತ್ತು.
ಜಯಲಲಿತಾರ ಪರವಾಗಿ ಸುರಕ್ಷಿತತೆಯ ವಾದದ ಮಂಡನೆಯಾಗಿ ಬೇರೆಯೇ ನಿವೇಶನದಲ್ಲಿ ನ್ಯಾಯಾಲಯ ಘಟಿತವಾದದ್ದು, ಅಲ್ಲಿಯ ವಿದ್ಯಮಾನಗಳು – ಇವೆಲ್ಲ ಈಚಿನ ಘಟನೆಗಳು.
ಜಯಲಲಿತಾರಿಗೆ ವಿಶೇಷ ನ್ಯಾಯಾಲಯ ನಾಲ್ಕು ವರ್ಷಗಳ ಜೈಲುವಾಸವನ್ನು ವಿಧಿಸಿದ ಮೇಲೆ ತಮಿಳುನಾಡಿನ ರಾಜ್ಯಾಂಗದಲ್ಲಿ ಏನಾದರೂ ವ್ಯತ್ಯಾಸ ಕಂಡಿದೆಯೇ?
“ಇಲ್ಲ” ಎಂಬುದೇ ವಿಚಿತ್ರವಾದರೂ ಸತ್ಯ.
ಇಷ್ಟು ದೀರ್ಘಕಾಲದ ನ್ಯಾಯಾಂಗ ಪ್ರಕ್ರಿಯೆ ನಡೆದು ಅಸಂದಿಗ್ಧ ಪುರಾವೆಗಳ ಕ್ರೋಡೀಕರಣವಾಗಿ ಪರಾಮರ್ಶೆ ನಡೆದು ಅಂತಿಮ ನಿರ್ಣಯ ಹೊರಪಟ್ಟಿದುದು
ರಾಜ್ಯವ್ಯವಸ್ಥೆಯ ಮೇಲೂ ಜನರ ಮಾನಸಿಕತೆಯ ಮೇಲೂ ಒಂದಷ್ಟು ಪರಿಣಾಮ ಬೀರಬೇಕಾಗಿತ್ತು. ಆದರೆ ಹೀಗೆ ಆಗಿಲ್ಲವೆಂಬುದು ರಾಜಕೀಯವಾಗಿ ತಮಿಳುನಾಡು ಎಷ್ಟು ಸತ್ತ್ವಶೂನ್ಯವಾಗಿದೆಯೆಂಬುದನ್ನು ಇನ್ನೊಮ್ಮೆ ಸಾಕ್ಷ್ಯಪಡಿಸಿದೆ.
ಮುಗ್ಧ ಜನತೆ “ಅಮ್ಮನಿಂದಾಗಿ ನಮಗೆ ಒಂದು ರೂಪಾಯಿಗೆ ಇಡ್ಲಿ ಸಿಗುತ್ತಿತ್ತು” ಮೊದಲಾದ ಸಂಗತಿಗಳನ್ನು ಜಯಲಲಿತಾರ `ನಿರಪರಾಧಿತ್ವ’ಕ್ಕೆ ಸಮರ್ಥನೆಯೆಂಬಂತೆ ಉದ್ಗರಿಸುತ್ತಿದೆ.
ದರ್ಬಾರಿನ ವೈಖರಿ
ನೂತನ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂರಂತೂ ತಾವು ಜಯಲಲಿತಾರ ಆಜ್ಞಾಧಾರಕ ಮಾತ್ರವೆಂದು ಬಹಿರಂಗವಾಗಿಯೆ ಸಾರಿದ್ದಾರೆ; ಎಷ್ಟುಮಟ್ಟಿಗೆ ಎಂದರೆ ಜಯಲಲಿತಾ ಬಳಸುತ್ತಿದ್ದ ಮುಖ್ಯಮಂತ್ರಿ ಕಛೇರಿಯನ್ನು ಪ್ರವೇಶಿಸುವುದೂ ಅವಿನಯ ಎನಿಸುವಂತೆ ಅವರು ಅದರಿಂದ ದೂರ ಉಳಿದಿದ್ದಾರೆ. ಜಯಲಲಿತಾರ ಅಧಿಕಾರಾವಧಿಯಲ್ಲಿ ಸಚಿವಸಂಪುಟಕ್ಕಾಗಲಿ ಆಡಳಿತ ಯಂತ್ರಕ್ಕಾಗಲಿ ತಿಲಮಾತ್ರವೂ ಸ್ವತಂತ್ರ ಅಸ್ತಿತ್ವ ಇರಲಿಲ್ಲ. ಮುಖ್ಯಮಂತ್ರಿಯ ದರ್ಶನ ಪಡೆದು ಸರ್ಕಾರೀ ವ್ಯವಹಾರಗಳನ್ನು ಪ್ರಸ್ತಾವಿಸುವ `ಅಧಿಕಾರ’ವೂ ಸರ್ಕಾರದ ಪ್ರಧಾನ ಕಾರ್ಯದರ್ಶಿಯಂತಹ ಒಬ್ಬಿಬ್ಬರಿಗೆ ಮಾತ್ರ ಸೀಮಿತವಾಗಿತ್ತು.
ಮುಖ್ಯಮಂತ್ರಿಯ ಎಷ್ಟೇ ಆಭಾಸ ಫರ್ಮಾನನ್ನು ಯಾರೂ ಪ್ರಶ್ನಿಸುವ ಸಂದರ್ಭವೇ ಇರುತ್ತಿರಲಿಲ್ಲ. ಒಮ್ಮೆ ಕ್ಲಬ್‌ಗಳಲ್ಲಿ ಪಂಚೆ ಉಡುಗೆಗೂ ಜಯಲಲಿತಾ ನಿಷೇಧ ಹೇರಿದ್ದರು; ಎಲ್ಲರೂ ಸೂಟ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದರು. ಯಾವುದೇ ವಿಷಯ ಕುರಿತು ಜಯಲಲಿತಾರೊಡನೆ ಕಾನ್ವೆಂಟ್ ಇಂಗ್ಲಿಷಿನಲ್ಲಿಯೇ ಮಾತನಾಡಬೇಕೆಂಬುದು ಸಾಮಾನ್ಯ ನಿಯಮವಾಗಿತ್ತು. ಅಣ್ಣಾದೊರೈ ತರುವಾಯದ ರಾಜಕಾರಣಕ್ಕೆ ಆಧಾರಸ್ತಂಭಗಳಾಗಿದ್ದ ತಮಿಳುಪಾರಮ್ಯ ಮತ್ತು ದ್ರಾವಿಡವಾದಗಳ ಪೋಷಣೆಯೂ ಜಯಲಲಿತಾ ಅಧಿಕಾರಾವಧಿಯಲ್ಲಿ ಸೊರಗಿತ್ತು. ಆದರೆ ಇಂತಹ ಎಲ್ಲ ದಿಗ್‌ವ್ಯತ್ಯಯಗಳನ್ನೂ ಎಂಜಿಆರ್-ಜಯಲಲಿತಾ ವ್ಯಕ್ತಿಪೂಜೆಯ ಅಬ್ಬರ ಕೊಚ್ಚಿಹಾಕಿತ್ತು.
ದೀರ್ಘಸೂತ್ರತೆ
ನಮ್ಮ ನ್ಯಾಯಾಂಗವ್ಯವಸ್ಥೆಯ ಸಮರ್ಪಕತೆಯ ಬಗೆಗೆ ಜನಸಾಮಾನ್ಯರ ಮನಸ್ಸಿನಲ್ಲಿ ಸಂಶಯ ಮೂಡುವಂತಹ ಪ್ರಸಂಗಗಳು ಆಗಾಗ ಘಟಿಸುತ್ತವೆ. ಇದು ವಿಚಾರವಂತರ ಗಂಭೀರ ಚಿಂತನೆಗೆ ಅರ್ಹವಾದ ಸಂಗತಿ. ಇತರ ಹಲವು ಸ್ತರಗಳಲ್ಲಿಯೂ ವ್ಯವಹಾರಾಂಗಗಳಲ್ಲಿಯೂ ನಿಯಮೋಲ್ಲಂಘನೆಗಳೂ ಅಶಿಷ್ಟತೆಗಳೂ ಅಪರೂಪವಲ್ಲ. ಆದರೆ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಅಂತಿಮ ನಿರ್ಣಯಸ್ಥಾನವಾಗಿರುವಂತಹದು ನ್ಯಾಯಾಂಗ. ಹೀಗಿರುವುದರಿಂದ ನ್ಯಾಯಾಂಗದ ನಡವಳಿಗಳಲ್ಲಿ ಋಜುತೆಯ ನ್ಯೂನತೆ ತಲೆದೋರಿದಲ್ಲಿ ಅದು ವಿಶೇಷ ಆತಂಕಕ್ಕೆ ಕಾರಣವಾಗುತ್ತದೆ. ಇಂತಹ ಒಂದು ಇತ್ತೀಚಿನ ವಿಕಟ ಪ್ರಕರಣ ಜಯಲಲಿತಾ ಅವರ ವಿರುದ್ಧ ನಡೆದಿರುವ ಮೊಕದ್ದಮೆ. ಜಯಲಲಿತಾ ಅವರಿಗೆ ನ್ಯಾಯಾಲಯವು ಜಾಮೀನನ್ನು ನೀಡಿದ ಸಂಗತಿಯಂತೂ ನ್ಯಾಯಾಂಗತಜ್ಞ ವಲಯಗಳಲ್ಲಿಯೆ ಸಾಕಷ್ಟು ವಿವಾದವನ್ನು ಎಬ್ಬಿಸಿದೆ. ಜಯಲಲಿತಾರವರ ವಿರುದ್ಧದ ಆಪಾದನೆಗಳು ಸಂದೇಹಾತೀತವಾಗಿ ಸಿದ್ಧಪಟ್ಟಿವೆ. ಆದರೆ ಆಪಾದನೆಗಳು ಸಿದ್ಧಗೊಳ್ಳದೆಯೂ ಹತ್ತು ವರ್ಷಗಳಿಂದ ಎಳೆದಾಡುತ್ತಿರುವ ಸಾಧ್ವಿಯ ಪ್ರಕರಣದಲ್ಲಿಯೂ ಇತರ ಹಲವು ಪ್ರಕರಣಗಳಲ್ಲಿಯೂ ಇದೇ ನ್ಯಾಯಾಂಗ ಹೇಗೆ ವರ್ತಿಸಿದೆಯೆಂದು ಜನಸಾಮಾನ್ಯರೂ ಪ್ರಶ್ನಿಸಲೆಳಸುವುದು ಸಹಜ.
ಜಯಲಲಿತಾ ವಿಚಾರಣೆಯೊಡಗೂಡಿ ನಡೆದ ಮಾಧ್ಯಮ ಪ್ರಚಾರ ರೀತಿಯೂ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದೆಲ್ಲ ಒತ್ತಟ್ಟಿಗಿರಲಿ. ಜಯಲಲಿತಾರವರ ವಿರುದ್ಧದ ನ್ಯಾಯಾಂಗಕ್ರಮ ಸಾಗಿಬಂದಿರುವ ರೀತಿಯೇ ನ್ಯಾಯಾಂಗದ ಪ್ರತಿಷ್ಠೆಗೆ ಕೀರ್ತಿ ತರುವಂತಿದೆಯೆಂದು ಹೇಳುವುದು ಕಷ್ಟಕರ.
ಜಯಲಲಿತಾ ಸರ್ವಾಧಿಕಾರಕ್ಕೆ ಪ್ರತ್ಯಸ್ತ್ರವಾಗಬಹುದಾಗಿದ್ದ ಡಿ.ಎಂ.ಕೆ. ಕೂಡಾ ಈಗ ಸುಸ್ಥಿತಿಯಲ್ಲಿಲ್ಲ; ಮತ್ತು ಅದರ ಪ್ರಮುಖರನೇಕರೂ ಘೋಟಾಳಗಳಲ್ಲಿ ಸಿಲುಕಿದ್ದಾರೆ.
ಶೇಷಪ್ರಶ್ನೆಯೆಂದರೆ – ಸೂತ್ರದ ಗೊಂಬೆಯ ಆಧಿಪತ್ಯ ಎಷ್ಟುಕಾಲ ಉಳಿದೀತು ಮತ್ತು ಅದರ ಬಗೆಗೆ ಜನತೆಯ ಉತ್ಸಾಹ ಮುಂದುವರಿದೀತೆ ಎಂಬುದು.
ಏತನ್ಮಧ್ಯೆ ಜಯಲಲಿತಾರಿಗೆ ಬೆಂಬಲವನ್ನು ಶೇಖರಿಸುವ ಸೋಷಿಯಲ್ ಮೀಡಿಯಾ ಪ್ರಯತ್ನಗಳಂತೂ ರಭಸದಿಂದ ಸಾಗಿವೆ. ಆದರೆ ಈವರೆಗೆ ಪ್ರತಿಷ್ಠಿತಗೊಂಡಿದ್ದ ಈ ವ್ಯಕ್ತಿಪೂಜೆಯ ನಮೂನೆ ಈಗಿನ ತರುಣಪೀಳಿಗೆಗೆ ಎಷ್ಟು ಮಾತ್ರ ಹಿಡಿಸೀತು? ಹಿಂದಿನಂತೆ ಬಂಡಿಜಾಡಿನದನ್ನೆಲ್ಲ ಮುಗುಮ್ಮಾಗಿ ಸ್ವೀಕರಿಸುವ ಪ್ರವೃತ್ತಿ ಈಗಿನ ತರುಣಜನತೆಗೆ ಸಮ್ಮತವಾಗುವುದು ಸಂದೇಹಾಸ್ಪದ.
ಜಯಲಲಿತಾರ ಪ್ರಾಬಲ್ಯದ ಸದ್ಯದ ಮುಂದುವರಿಕೆಗೆ ಅವಲಂಬವಾಗಿರುವುದು ಎಐಎಡಿಎಂಕೆ-ಪೋಷಿತ ಕೌನ್ಸಿಲರುಗಳು, ಪಂಚಾಯತ್ ಮುಖಂಡರು, ಜಿಲ್ಲಾಸ್ತರದ ಕಾರ್ಯಕರ್ತರು, ಇತ್ಯಾದಿ. ಈ ಬೆಂಬಲಿಗರ ದೊಡ್ಡವರ್ಗವನ್ನು ಇದುವರೆಗೆ ಭೀತಿಯಲ್ಲಿಟ್ಟು ನಿಯಂತ್ರಿಸಲಾಗುತ್ತಿತ್ತು. ಈ ವ್ಯವಸ್ಥೆಯು ಕಳೆದ (೨೦೧೪) ಫೆಬ್ರುವರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಜಯಲಲಿತಾರ ಪರವಾಗಿ ಕೆಲಸ ಮಾಡಿತ್ತು.
ಮದೋನ್ಮತ್ತತೆ
ಇದೀಗ ಜನಪರ ಆಳ್ವಿಕೆಯ ಆಶಯವೇ ದೂರಗೊಂಡು ಸ್ವೀಯ ಅಧಿಕಾರಾಕಾಂಕ್ಷೆಯಷ್ಟೆ ಜಯಲಲಿತಾರಲ್ಲಿ ಉಳಿದಿದೆ. ಇದು ಅಲ್ಲಿಯ ಜನತೆಗೆ ಇನ್ನೆಷ್ಟು ಕಾಲ ಸಹನೀಯವಾದೀತೆಂಬುದನ್ನು ಭವಿಷ್ಯವೇ ಹೇಳಬೇಕು. ಸದ್ಯಕ್ಕಂತೂ ನಡೆದಿರುವುದು ಯಥಾಸ್ಥಿತಿಯೇ.
ಭ್ರಷ್ಟಾಚಾರದೊಡಗೂಡಿದ ಜಯಲಲಿತಾರವರ ದುರಹಂಕಾರ ಮದೋನ್ಮತ್ತತೆಗಳೂ ಜನರಿಗೆ ಹೇಸಿಗೆಯನ್ನು ತಂದಿದ್ದವು. ಕಾಂಚಿ ಪೀಠಾಧ್ಯಕ್ಷರ ಮೇಲೆ ಜಯಲಲಿತಾ ಹೊರಿಸಿದ ಆರೋಪಿಗಳ ವಿಷಯ ಹಾಗಿರಲಿ; ಪವಿತ್ರ ಮಠದೊಳಕ್ಕೆ ಬೂಟು ಧರಿಸಿದ ಪೊಲೀಸ್ ಪಡೆಗಳು ಹೊಕ್ಕು ಮೆರೆದ ವರ್ತನೆಯು ಯಾವ ಸಭ್ಯ ಸಮಾಜಕ್ಕೆ ಸಹ್ಯವಾದೀತು?
ಎಂ.ಜಿ. ರಾಮಚಂದ್ರನ್ ನಿಧನದಿಂದುಂಟಾದ ಸಹಾನುಭೂತಿಯ ತರಂಗಗಳನ್ನು ಯಶಸ್ವಿಯಾಗಿ ಬಳಸಿಕೊಂಡು ಜಯಲಲಿತಾ ತಮಿಳುನಾಡಿನ ರಾಜಕೀಯ ಕಣವನ್ನು ಪ್ರವೇಶಿಸಿದರು; ೧೯೯೧ರ ಜೂನ್ ೨೪ರಂದು ಮುಖ್ಯಮಂತ್ರಿಯೂ ಆದರು. ಒಂಟೆಯ ಸಂಗಡ ಡುಬ್ಬವೂ ಬರುವಂತೆ ಜಯಲಲಿತಾ ಬಂಟರಾದ ಶಶಿಕಲಾ ಮತ್ತು ನಟರಾಜನ್ ಕೂಡಾ ಮಿನಿ-ಸರ್ವಾಧಿಕಾರಿಗಳಾಗಿ ವಕ್ಕರಿಸಿದರು. ಮುಖ್ಯಮಂತ್ರಿಯಾದ ಅತ್ಯಲ್ಪ ಕಾಲದಲ್ಲಿಯೆ ಜಯಲಲಿತಾ ಶಶಿಕಲಾ ಜೋಡಿಯು ಅಸೀಮ ಭ್ರಷ್ಟಾಚಾರಕ್ಕೆ ನಾಂದಿ ಹಾಡಿತ್ತು. ಬೇರೆಬೇರೆ ಆಸ್ತಿಗಳ ಸಂಚಯದೊಡನೆ ಹಲವು ಕೊಲೆಗಳೂ ನಡೆದವೆಂಬ ಸಂಗತಿ ಜನಜನಿತವಾಗಿದ್ದರೂ ಸಹಜವಾಗಿ ಸಾಕ್ಷ್ಯಗಳು ದುರ್ಲಭವಾಗಿದ್ದವು. ಆಡಳಿತದಲ್ಲಿನ ಹಲವು ಅಕ್ರಮಗಳನ್ನು ಬೆಂಬಲಿಸದಿದ್ದುದಕ್ಕಾಗಿ ಒಬ್ಬ ಐಎಎಸ್ ಅಧಿಕಾರಿಯ ಮೇಲೆ ಆಸಿಡ್ ಅಭಿಷೇಕ ಆಗಿತ್ತು. `ಸಂಶಯಾಸ್ಪದ’ ಸನ್ನಿವೇಶಗಳಲ್ಲಿ ಮೃತರಾದವರೂ ಹಲವರು.
ದುಃಶಾಸನ
ಅಂತೂ ಈ ದುಃಶಾಸನ ಹತ್ತು ವರ್ಷಗಳೇ ನಿರ್ಭಿಡೆಯಾಗಿ ಮುಂದುವರಿಯಲು ಸಾಧ್ಯವಾದುದು ಈಗಿನ ರಾಜ್ಯಾಂಗಪದ್ಧತಿಯಲ್ಲಿ ಅಂತರ್ಗತವಾಗಿರುವ ಶೈಥಿಲ್ಯವನ್ನು ಎತ್ತಿ ತೋರಿಸುತ್ತದೆ. ೨೦೦೦ದ ಆರಂಭದಲ್ಲಿಯಷ್ಟೆ ಒಂದು ಮೊಕದ್ದಮೆಯಲ್ಲಿ ಜಯಲಲಿತಾರಿಗೆ ದಂಡನೆಯಾಯಿತು. `ಪ್ಲೆಸೆಂಟ್ ಸ್ಟೇ’ ಎಂಬ ಅಕ್ರಮ ಹೊಟೇಲ್ ಮೊಕದ್ದಮೆಯಲ್ಲಿ ಅಪರಾಧ ಸಾಬೀತಾಗಿದ್ದರೂ ಏನೇನೊ ತಾಂತ್ರಿಕ ವಾದಗಳನ್ನೊಡ್ಡಿ ಉಚ್ಚ ನ್ಯಾಯಾಲಯ ಜಯಲಲಿತಾರವರ ವಿರುದ್ಧದ ಆರೋಪಗಳನ್ನು ನಿರಾಧಾರವೆಂದಿತ್ತು. ಕಲರ್ ಟಿ.ವಿ. ಸ್ಕ್ಯಾಮ್, ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ನಿನ ಬಾಂಡ್‌ಗಳ ದುರುಪಯೋಗಕ್ಕೆ ಸಂಬಂಧಿಸಿದುದೂ ಸೇರಿದಂತೆ ಹಲವು ಮೊಕದ್ದಮೆಗಳ ಪಾಡು ಹೀಗೆಯೆ ಆಯಿತು.
ಆಧಾರಮೂಲವಿರದ ರೂ. ೬೬ ಕೋಟಿ ಹಣ ಶೇಖರಣೆಯ ಮೊಕದ್ದಮೆ ಮಾತ್ರ ಮನವಿದಾರರ ದೃಢಮನಸ್ಕತೆಯಿಂದಾಗಿ ಮುಂದುವರಿದು, ಹದಿನೆಂಟು ವರ್ಷಗಳಷ್ಟು ದೀರ್ಘಕಾಲದ ನಂತರ ಕಳೆದ ವರ್ಷ (೨೦೧೪) ಸೆಪ್ಟೆಂಬರ್ ೨೭ರಂದು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಮೈಕೇಲ್ ಡಿಕುನ್ಹಾರವರು ದಂಡನೆ ಘೋಷಿಸುವುದರೊಡನೆ ಮುಗಿದಿದೆ.
ಆದರೆ ಇಲ್ಲಿಗೆ ಕಥೆ ಮುಕ್ತಾಯಗೊಂಡಂತಾಗಲಿಲ್ಲ.
ವಿಶೇಷ ನ್ಯಾಯಾಲಯ ಜಯಲಲಿತಾರಿಗೆ ನಾಲ್ಕು ವರ್ಷದ ಬಂಧನವನ್ನೂ ರೂ. ೧೦೦ ಕೋಟಿ ದಂಡವನ್ನೂ ವಿಧಿಸಿರುವುದು ೧೯೯೧-೯೬ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಗೆ ಸಂಬಂಧಿಸಿದ ರೂ. ೬೬ ಕೋಟಿ ಪ್ರಕರಣದಲ್ಲಿ ಮಾತ್ರ. ಉಳಿದ ನಾಲ್ಕಾರು ಆರೋಪಗಳ ಕಥೆ ಏನು?
ಮುಂದೆಯಾದರೂ ಭ್ರಷ್ಟ ವ್ಯವಹಾರಗಳಲ್ಲಿ ಅಧಿಕಾರೋನ್ನತರು ತೊಡಗಲು ಸಾಹಸಕ್ಕೆಳೆಸದಂತಹ ಅತ್ಯಂತ ಕಠಿಣ ನಿವಾರಕ ಕ್ರಮಗಳ ಆವಶ್ಯಕತೆ ಇದೆ.
ಘನಪಂಕ್ತಿ
ಆಕಾರದಲ್ಲಿ ಶಾಸ್ತ್ರೀಯ ರೀತಿಯದಾಗಿದ್ದರೂ ಆಚರಣೆಯ ಸ್ತರದಲ್ಲಿ ನಮ್ಮ ಪ್ರಜಾಪ್ರಭುತ್ವ ಎಷ್ಟು ಘೋರ ದೌರ್ಬಲ್ಯಗಳಿಂದ ಕೂಡಿದೆ ಎಂಬುದನ್ನು ಪುರಾವೆಗೊಳಿಸಿರುವ ಸಂಗತಿಯೆಂದರೆ – ಒಂದೊಮ್ಮೆ ಅಜಿಂಕ್ಯರೆನಿಸಿದ್ದ ಹಲವರು ಮುಖ್ಯಮಂತ್ರಿ ಪದಾಧಿಷ್ಠಿತರು ಈಚಿನ ವರ್ಷಗಳಲ್ಲಿ ಕಂಬಿ ಎಣಿಸಬೇಕಾಗಿ ಬಂದಿರುವುದು; ಹರಿಯಾಣದ ಓಂಪ್ರಕಾಶ ಚೌತಾಲಾ, ಬಿಹಾರದ ಲಾಲೂಪ್ರಸಾದ ಯಾದವ್ ಮೊದಲಾದವರ ಘನಪಂಕ್ತಿಗೆ ಇತ್ತೀಚೆಗೆ ತಮಿಳುನಾಡಿನ ಜಯಲಲಿತಾ ಸೇರಿರುವುದು. ಈ ಪಂಕ್ತಿಗೆ ಸೇರುವ ಅರ್ಹತೆಯನ್ನು ಪಡೆದಿರುವ ಆದರೆ ಇನ್ನೂ ನ್ಯಾಯಾಲಯದ ಶೃಂಖಲೆಯಿಂದ ಸದ್ಯಕ್ಕೆ ಹೊರಗೆ ಉಳಿದಿರುವವರ ಪಟ್ಟಿಯೂ ದೊಡ್ಡದಿದೆ – ಉತ್ತರಪ್ರದೇಶದ ಮುಲಾಯಂಸಿಂಗ್ ಯಾದವ್ ಮತ್ತು ಮಾಯಾವತಿ, ಮಹಾರಾಷ್ಟ್ರದ ಅಶೋಕ ಚೌಹಾಣ್ ಮೊದಲಾದವರು. ಈ ಮಹನೀಯ ಪಂಕ್ತಿಗೆ ಕೊಡುಗೆ ಎಲ್ಲ ಪಕ್ಷಗಳಿಂದಲೂ ಸಂದಿದೆ. ಒಮ್ಮೆ ಕರಗತವಾದ ರಾಜ್ಯಾಧಿಕಾರವು ಜನರನ್ನು ಎಂತಹ ನೀಚಮಟ್ಟಕ್ಕೆ ಇಳಿಸಬಲ್ಲದು ಎಂಬ ಮಾನವಸ್ವಭಾವವೈಚಿತ್ರ್ಯವನ್ನು ಈ ಅಧಿಕಾರ ದುರುಪಯೋಗ ಪ್ರಸಂಗಗಳು ಸಾಬೀತುಪಡಿಸಿವೆ. ಒಂದುಕಡೆ ಚುನಾವಣೆಗಳಲ್ಲಿ ಗೆಲ್ಲುವುದೇ ಅಪಮಾರ್ಗಗಳಿಂದ. ಇನ್ನೊಂದು ಕಡೆ ಗೆದ್ದಮೇಲೆ ಸ್ಥಾನವನ್ನು ಬಳಸಿಕೊಳ್ಳುವುದೂ ಅಪಮಾರ್ಗಗಳಲ್ಲಿ. ಇದಕ್ಕೆ ಆಸ್ಪದವಾಗಿರುವ ಕಾರಣದಿಂದಲೇ ರಾಜಕೀಯವನ್ನೇ ಕಸಬನ್ನಾಗಿ ಮಾಡಿಕೊಂಡಿರುವ ಒಂದು ವರ್ಗ ಹರಡಿರುವುದು. ಈ ಹಂದರ ಇರುವುದರಿಂದಲೇ ರಾಜಕಾರಣಗಳಲ್ಲಿ ವಂಶವಾದವೂ ಬಲವಾಗಿ ಬೇರೂರಿರುವುದು. ಈ ವ್ಯವಸ್ಥೆಯಲ್ಲಿ ಗಾಢ ಅಭಿನಿವೇಶ ಇರುವುದರಿಂದಲೇ ಚುನಾವಣೆ ಇಷ್ಟು ದೊಡ್ಡ ದಂಧೆಯಾಗಿರುವುದು; ಸೀರೆ-ಗ್ರೈಂಡರುಗಳಿಂದ ಟಿ.ವಿ.-ಪಿ.ಸಿ.ವರೆಗೆ ಎಲ್ಲವೂ ಮತದಾರರಿಗೆ ಉಡುಗೊರೆಗಳಾಗಿ ವಿತರಣೆಯಾಗುವುದು; ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಬಗೆಯ ಕಲ್ಯಾಣಯೋಜನೆಗಳು ಘೋಷಿತವಾಗುವುದು; ಬಿಡಿ ದಿನಗಳಲ್ಲಿ ಕಣ್ಣೆತ್ತಿಯೂ ನೋಡದ ಧಾರ್ಮಿಕ ಸಂಸ್ಥೆಗಳಿಗೆ ಅನುದಾನಗಳನ್ನು ನೀಡುವುದು; ಗೌರವಸ್ಥರು ಸಂಕೋಚಿಸಬೇಕಾದಂತಹ `ಸಾಲ ಮನ್ನಾ’ ಭರವಸೆ ನೀಡುವುದು.
ನ್ಯಾಯ ಗೆದ್ದೀತೆ?
ಈಚೆಗೆ ನ್ಯಾಯಾಂಗ ತನಿಖೆಗಳನ್ನು ಎದುರಿಸಬೇಕಾಗಿ ಬಂದಿರುವ ಮಂತ್ರಿ ಮಹೋದಯರು ಮತ್ತಿತರ ದೊಡ್ಡಮನುಷ್ಯರೆಲ್ಲ ಸದಾ ತಾರಸ್ಥಾಯಿಯಲ್ಲಿ `ಸಾಮಾಜಿಕ ನ್ಯಾಯ’ದ ಪರವಾಗಿ ಹುಯಿಲಿಡುತ್ತಿದ್ದವರೇ ಎಂದು ನೆನಪಿಸಿಕೊಳ್ಳಬಹುದು. ಅಧಿಕಾರವನ್ನು ಸದಾ ಸ್ವಾರ್ಥಕ್ಕಾಗಿ ಬಳಸಿಕೊಂಡ ಈ ಮಂದಿ ಯಾವ `ನ್ಯಾಯ’ವನ್ನು ತಾನೆ ಗೌರವಿಸಿದ್ದಾರೆ?
ಏನು ಮಾಡಿದರೂ ಜೀರ್ಣಿಸಿಕೊಂಡೇವು ಎಂಬ ಸ್ಥಿತಿ ಇರುವುದೇ ಇವರಿಗೆಲ್ಲ ಶ್ರೀರಕ್ಷೆಯಾಗಿರುವುದು. ಜಯಲಲಿತಾ ಅಕ್ರಮ ಆಸ್ತಿ ಪ್ರಕರಣಕ್ಕೆ ಹದಿನೆಂಟು ವರ್ಷಗಳು ದಾಟಿವೆ. ಲಾಲೂಪ್ರಸಾದ ಮಹಾಶಯರನ್ನು ವಿಚಾರಣೆಗೊಳಪಡಿಸಲು ಇಪ್ಪತ್ತು ವರ್ಷಗಳೇ ಹಿಡಿದಿದ್ದು ಇದೀಗ `ಜಾಮೀನುದಾರ’ರಾಗಿದ್ದರೂ ರಾಜಕೀಯ ಕಲಾಪವನ್ನು ನಿರಂತರ ನಡೆಸಿದ್ದಾರೆ. ಭ್ರಷ್ಟ ಮುಖ್ಯಮಂತ್ರಿಯ ಭ್ರಷ್ಟ ಪುತ್ರ ಜಗನ್‌ಮೋಹನ ರೆಡ್ಡಿ `ಬೇಲ್’ ಪಡೆದು ಹೊರಗಿದ್ದರೂ ಆಂಧ್ರ ವಿಧಾನಸಭೆಯಲ್ಲಿ ವಿರೋಧಪಕ್ಷ ನಾಯಕರೆನಿಸಿ ಕ್ಯಾಬಿನೆಟ್ ಸ್ಥಾನಮಾನಕ್ಕೆ ಭಾಜನರಾಗಿದ್ದಾರೆ.
ನ್ಯಾಯಾಂಗಪ್ರಕ್ರಿಯೆಯು ಸ್ವಭಾವತಃ ನಿಧಾನಗತಿ ಯದೆಂಬುದು ದುರದೃಷ್ಟ. ರಾಜಕೀಯ ಮೂಲದ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚೆಂದರೆ ಏಳೆಂಟು ತಿಂಗಳೊಳಗೆ ಕಡ್ಡಾಯವಾಗಿ ತೀರ್ಮಾನವಾಗಬೇಕೆಂಬ ಮತ್ತು ಮೊಕದ್ದಮೆಯ ಮುಂದೂಡಿಕೆಗೆ (ಅಡ್‌ಜರ್ನ್‌ಮೆಂಟ್) ಅವಕಾಶವಿಲ್ಲದ ದಿಶೆಯ ವಿಶೇಷ ಕಾನೂನುಗಳನ್ನೂ ವಿಶೇಷ ನ್ಯಾಯಾಲಯಗಳನ್ನೂ ರೂಪಿಸಿದಲ್ಲಿ ಈಗಿನ ಆಭಾಸಗಳಿಗೆ ಸ್ವಲ್ಪವಾದರೂ ಪರಿಹಾರ ಕಂಡೀತೇನೊ.?
ಎಸ್.ಆರ್.ಆರ್.