“ಛೇ! ಹೀಗಾಗಬಾರದಿತ್ತು; ಅದು ಆಗಿಯೇ ಹೋಯಿತು…” “ಆಗಿರುವುದೇನು; ಅವರೇ ಮಾಡಿಕೊಂಡಿದ್ದು?”
“ಏನೇ ಆದರೂ ಇದು ದುರಂತವೇ!” “ಅದಕ್ಕೇ ಹೇಳೋದು ಮರಣಭೂಮಿ ಇಂಥಾ ಕಡೆ ಎಂದು ಹೇಳೋಕಾಗೋಲ್ಲ. ಎಲ್ಲಿಯ ಮಲೆನಾಡು, ಎಲ್ಲಿಯ ಒಡಿಶಾ ಹೇಳಿ?”
“ಈಗ ಇಂತಹ ನರ್ಸಿಂಗ್ಹೋಂನಲ್ಲೇ ಅಂತ ಜನನವನ್ನಾದರೂ ನಿರ್ಧರಿಸಬಹುದು. ಎಲ್ಲೊ ಒಂದೊಂದು ಅಪವಾದ ಇರಬಹುದು. ಆದ್ರೆ ಮೃತ್ಯು ಮಾತ್ರ ಯಾವ ರೂಪದಲ್ಲಿ ಬರತ್ತೋ ಹೇಳೋಕಾಗೊಲ್ಲ.”
“ಎಷ್ಟೋ ಆಸ್ಪತ್ರೇಲಿ ಇದ್ದಲ್ಲೆಲ್ಲಾ ಟ್ಯೂಬ್ ತೂರಿಸಿ, ಮೂಗಿಗೆ ಆಮ್ಲಜನಕ ನಳಿಕೆ ಹಾಕಿ, ಕೃತಕ ಉಸಿರಾಟದ ಮೂಲಕ ಸಾವನ್ನೂ ಎಳೆದಾಡೋಲ್ವೆ?”
“ಅದು ಕೆಲವರಿಗೆ. ಈ ಆದಿತ್ಯನ ವಿಷಯ ಹೇಳಿ. ಸಾಯೋ ಕಾರಣವಾ? ಬೇಕಿತ್ತಾ ಅವ್ರಿಗೆ. ಎಂತಹ ಆರೋಗ್ಯ. ಎಂತಹ ವ್ಯಕ್ತಿತ್ವ.”
“ಅದೇ ಹೇಳ್ತಾ ಇರೋದು. ಕಾಯಿಲೆಯಾಗಿ, ನರಳಾಡಿ ಸತ್ತಾಗ, ಮನೆಯವರೆಲ್ಲಾ ಅದಕ್ಕೆ ಸ್ವಲ್ಪವಾದರೂ ಸಿದ್ಧರಾಗಿರ್ತಾರೇನೋ. ಇನ್ನು ಮಲಗಿದ್ದಲ್ಲೇ ಎಲ್ಲವೂ ಆಗುತ್ತಾ ಹಾಸಿಗೆ ಹುಣ್ಣಾಗಿ. ಇವರಿಗೆ ಸಾವು ಬರಬಾರದೆ ಅಂತ ಕಾಯ್ತಾ ಇದ್ದವರು ಉಸಿರಾಡ್ತಾನೇ ಇದ್ದಾರೆ ಸ್ವಾಮಿ. ಹೃದಯ ಅನ್ನೋದು ಅಷ್ಟು ಗಟ್ಟಿಯಾಗೇ ಇರುತ್ತೆ. ನೋಡಿ ಇವರದು ಎಂತಹ ಅನ್ಯಾಯ.
“ಪಾಪ, ಅವರ ಹೆಂಡತಿ ಕೃಷಿ, ವ್ಯವಹಾರ, ಒಂದೂ ಗೊತ್ತಿಲ್ಲದವರು. ಮುಂದೆ ಹೇಗೋ. ಅಂತೂ ಜವಾಬ್ದಾರಿ ಎಲ್ಲಾ ಕಳೆದುಕೊಂಡಿದ್ದರು. ಎರಡು ಹೆಣ್ಣುಮಕ್ಕಳೂ ಒಳ್ಳೆಯ ಮನೆ ಸೇರಿ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದಾರೆ. ಸುಖವಾಗಿರೋ ಕಾಲದಲ್ಲಿ ಇವರಿಗೆ ಹೀಗೆ ಆಗಿಹೋಯ್ತಲ್ಲ.”
ಹೀಗೆ ಇಲ್ಲವಾದ ಆದಿತ್ಯರ ಸುತ್ತ ನಾನಾ ರೀತಿಯಲ್ಲಿ ನಾಲಿಗೆಗಳು ಹರಿದಾಡುತ್ತಿದ್ದುದು ಸಹಜವೆ ಆಗಿತ್ತು.
ಏಕೆಂದರೆ ಅವರದು ಸಹಜ ಸಾವಾಗಿರಲಿಲ್ಲವಲ್ಲ.
* * * *
ಮಲೆನಾಡಿನ ಒಡಲಿನ ಸಂಪಿಗೆಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಆದಿತ್ಯ ಶ್ರಮಜೀವಿ. ಯಾವ ಕೆಲಸದಲ್ಲೂ ಕೀಳರಿಮೆಯೆಂಬುದಿಲ್ಲ. ಯಾರ ಮನೆಯಲ್ಲಿ ಏನೇ ಸಮಾರಂಭವಾದರೂ ಸರಿಯೆ. ಬಡಿಸುವುದು, ಸಾಮಾನು ಸಾಗಿಸುವುದು, ಜೀಪಿನಲ್ಲಿ ಯಾರನ್ನಾದರೂ
ಕರೆದುಕೊಂಡು ಬರುವುದು, ಮೈಲಿಗಳ ದೂರದ ಬಸ್ಸ್ಟ್ಯಾಂಡಿಗೆ ಬಿಟ್ಟುಬರುವುದು, ಯಾವುದೂ ಆಗಬಹುದು. ಗದ್ದೆ-ತೋಟದ ಕೆಲಸವೂ ಹಾಗೆಯೇ! ತಾವೂ ಆಳುಗಳ ಜೊತೆಜೊತೆಗೇ ಕೆಲಸ ಮಾಡುತ್ತಾ, ಅವರನ್ನು ಹುರಿದುಂಬಿಸುತ್ತಾ ಅಲ್ಲಿ ಮೈಗಳ್ಳತನಕ್ಕೆ ಅವಕಾಶವೇ ಇಲ್ಲದಂತೆ, ಹಾಗೆಂದು ಕೆಲಸದವರಿಗೆ ಕೊಡುವುದಕ್ಕೂ ಹಿಂದೆಮುಂದೆ ನೋಡದ ಸ್ವಭಾವ. ಹೀಗಾಗಿಯೇ ಸುಖಾಸುಮ್ಮನೆ ಹಳ್ಳಿಯಲ್ಲಿ ಕೂಲಿ ಹೆಚ್ಚಿಸಿದ ಆರೋಪ.
ಒಂದು ಸಲ ಒಬ್ಬರು ಹೆಚ್ಚು ಸಂಬಳ ಕೊಟ್ಟು ಕಲಿಸಿದ ಮೇಲೆ ಆಳುಗಳು ಕಡಮೆ ಕೂಲಿಗೆ ಒಪ್ಪಿ ಕೆಲಸಕ್ಕೆ ಬರುತ್ತಾರೆಯೆ? ಒಳ್ಳೆ ಮಹಾರಾಯರು ಎಂದು ಒಳಗೊಳಗೇ ಸಿಡಿಮಿಡಿ. ಆದರೆ ಎದುರಿಗೆ ಹೇಳಲು ಬಾಯಿಬಾರದು. ಧೈರ್ಯವಿಲ್ಲವೆಂದಲ್ಲ, ಒಂದಲ್ಲ ಒಂದು ಬಾರಿ ಅವರ ದಾಕ್ಷಿಣ್ಯಕ್ಕೆ ಕಟ್ಟುಬಿದ್ದವರೇ ಅವರೆಲ್ಲಾ. ಕೃಷಿ ಚೆನ್ನಾಗಿ ಮಾಡಿ ಪೈರು ಬಂದ ಮೇಲೆ, ಅಡಿಕೆ ಕೊಯಿಲಾದ ಮೇಲೆ ಒಂದಿಷ್ಟು ದಿನವಾದರೂ ಪ್ರವಾಸ ಮಾಡಬೇಕು. ಪ್ರವಾಸಕ್ಕೆ ಹಳ್ಳಿಯಲ್ಲಿರುವವರು, ದಿಲ್ಲಿಯಲ್ಲಿರುವವರು ಎಂಬ ಅಂತರವೇಕೆ? ಹಳ್ಳಿಯಲ್ಲಿದ್ದವರಿಗೆ ಮನೆಬಿಟ್ಟು ಹೋಗಲಾಗದು ಎಂಬ ಮಾತಿಗೆ ಆದಿತ್ಯ ಅಪವಾದ. ತಕ್ಕಂತೆ ಹೊಂದಿಸಿಕೊಳ್ಳುವಂತಹ ಮನಃಸ್ಥಿತಿ ಬೇಕಷ್ಟೆ.
ನಂಬಿಕೆಯ ಜನ ಮನೆಯಲ್ಲಿರಬೇಕು ಎನ್ನುವುದು ಒಂದು ನೆವವಾದರೆ, ಕೊಡುವುದಕ್ಕೆ ಕೈಹಿಡಿತ ಮಾಡಿದರೆ, ಕೊಡುವ ಒಂದೊಂದು ಪೈಸೆಗೂ ಲೆಕ್ಕಾಚಾರ ಮಾಡುತ್ತಾ ಹೋದರೆ, ಕುಡಿಯುವ ಒಂದು ಲೋಟ ಕಾಫಿಯನ್ನು ಕಲಗಚ್ಚಿನಂತೆ ಮಾಡಿಕೊಟ್ಟರೆ, ಮಾಡಿದ ಕೆಲಸದಲ್ಲಿ ಬುಡದಿಂದ ತುದಿಯವರೆಗೂ ತಪ್ಪನ್ನೇ ಹುಡುಕುತ್ತಾ ಹೋದರೆ, ಕೆಲಸಮಾಡುವುದಕ್ಕೂ ಮನಸ್ಸು ಎಲ್ಲಿಂದ ಬರಬೇಕು. ಅವರೂ ನಮ್ಮಂತೆಯೇ ಮನುಷ್ಯರಲ್ಲವೆ? ಏನೋ ಅವರ ಸ್ಥಿತಿ ಹಾಗಿದೆ; ಬೇರೆಯವರ ಗೇಯ್ಮೆ ಮಾಡಬೇಕಾಗಿದೆ. ಹಂಗಂತ ಅವರನ್ನು ಹಗುರವಾಗಿ ನಡೆಸಿಕೊಳ್ಳುವುದು ಸರಿಯೇ? ಎಂಬಂತಹ ಔದಾರ್ಯ.
ಆದರೆ ಕೆಲಸಕ್ಕೆ ಕಳ್ಳತನ ಮಾಡುವ ಹಾಗೆ ಇಲ್ಲವೇ ಇಲ್ಲ. ಅವರಿಗೆ ಸಮನಾಗಿ ಅಂತೇನು, ಒಂದು ಪಟ್ಟು ಹೆಚ್ಚಾಗಿಯೇ ಕೆಲಸಮಾಡುತ್ತಾ, ಅವರ ತರಹವೇ ಬಿಸಿಲಲ್ಲಿ ಬೆವರುತ್ತಾ, ಮಳೆಯಲ್ಲಿ ನೆನೆಯುತ್ತಾ, ಅವರಾದರೂ ಮೈಗಳ್ಳತನ ಮಾಡುವುದಕ್ಕೆ ಹೇಗೆ ಸಾಧ್ಯ?
ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಎಂಬಂತೆ ಚಹ, ಕಾಫಿ, ಮಜ್ಜಿಗೆ, ಎಳನೀರು ಸರಬರಾಜು ಮಾಡುತ್ತ ಒಂದಷ್ಟು ಹೆಚ್ಚು ಕೆಲಸ ಮಾಡಿದ್ದೂ ಅವರಿಗೆ ಗೊತ್ತಾಗದಂತೆ, “ಓ, ಆಗ್ಲೇ ಚಂಜಿ ಆಗೋಯ್ತ್ ಕಾಣಿ. ಸೂರ್ಯ ಮುಳುಗೂ ಹೊತ್ತಾಗೋಯ್ತು ದಣ್ಯೇರಾ” ಎಂದಾಗ “ಹೌದಲ್ಲವೆ? ಬನ್ನಿ, ಬನ್ನಿ. ಕೈ ಕಾಲು ತೊಳ್ಕಳ್ಳಿ. ಚಾ ಕುಡಿದು ಹೋಗೀರಂತೆ” ಎನ್ನುತ್ತ ಕೆಲಸ ಮುಗಿಸುವ ತರಾತುರಿ.
ಇಂತಹ ಆದಿತ್ಯ, ಕೆಲಸದವರ ಕಷ್ಟಕಾರ್ಪಣ್ಯಗಳಿಗೆ ಕರಗಿ ಸಾವಿರಗಟ್ಟಲೆ ಸಾಲ ಕೊಟ್ಟು, ಒಂದಷ್ಟು ವಾಪಸು ಬಂದು, ಒಂದಷ್ಟು ಮರಳಿ ಬಾರದೇ ಇದ್ದದ್ದೂ ಇದೆ. ಇಂಥದ್ದೆಲ್ಲಾ ಸಾಮಾನ್ಯವೆ! ಕುಡಿತಕ್ಕೆ ಹಾಕದೆ ಕಷ್ಟಕ್ಕೆ ಖರ್ಚುಮಾಡಿದ್ರೆ ಯೋಚನೆ ಯಾಕೆ!
ಹಾಗೆಯೇ ಕೆಲವೊಂದು ಕೆಲಸಗಳನ್ನು ಯಂತ್ರಗಳಿಂದ ಮಾಡಿಸುತ್ತಿದ್ದುದೂ ಇದೆ. ಮನೆಯಲ್ಲಿ ಆಧುನಿಕ ಸೌಲಭ್ಯಗಳನ್ನೆಲ್ಲಾ ಅಳವಡಿಸಿಕೊಂಡಿದ್ದೂ ಆಗಿದೆ. ಚಿಕ್ಕ ವಾಚನಾಲಯವೂ ಇದೆ. ‘ದೇಶ ಸುತ್ತು, ಕೋಶ ಓದು’ ನಾಣ್ಣುಡಿ ಆದಿತ್ಯರಿಗೆ ಅತ್ಯಂತ ಪ್ರಿಯ. ಓದಬೇಕೆಂಬ ಮನಸ್ಸಾದರೆ ರಾತ್ರಿಯಿಡೀ ನಿದ್ದೆ ಬಿಟ್ಟಾದರೂ ಓದುವ ಸ್ವಭಾವ. ಸಮಯವನ್ನು ನಾವು ಹೇಳಿದಂತೆ ಕೇಳುವ ಹಾಗೆ ಮಾಡಿಕೊಂಡರಾಯಿತು ಎನ್ನುವ ತತ್ತ್ವ. ಮಡದಿ ಮಾನಸಳಿಗೋ, ರಾತ್ರಿ ದಿನಪತ್ರಿಕೆ ಹಿಡಿದು ಇನ್ನೂ ಒಂದು ಪ್ಯಾರಾ ಓದುವುದರಲ್ಲೇ ಕಣ್ಣು ತೂಕಡಿಸಿ ಯಾವ ಮಾಯದಲ್ಲಿಯೋ ನಿದ್ದೆ ಬಂದು ಪತ್ರಿಕೆ ಬೀಳುವುದೂ ಗೊತ್ತಾಗದೆ, “ಆ ಚಂದಕ್ಕೆ ಪೇಪರ್ ಯಾಕೆ? ನಿದ್ದೆ ಬರಲಿ ಎಂದು ಪೇಪರ್ ಹಿಡಿಯುವುದಾ? ಪುಣ್ಯಾತ್ಗಿತ್ತಿ, ನಿನಗೆ ಯಾವ ದಿನದ ಪತ್ರಿಕೆ ಕೊಟ್ಟರೂ ಆದೀತು” ಎಂದು ಆದಿತ್ಯ ತಮಾಷೆ ಮಾಡುವುದುಂಟು.
ಅದೇನು ಚಟುವಟಿಕೆ ಮಹಾರಾಯರದು. ಶಾಲೆಯ ಟ್ರಸ್ಟ್, ದೇವಸ್ಥಾನ, ಸಂಪಿಗೆ ಗ್ರಾಮೋತ್ಥಾನ ಸಂಘ… ಹೀಗೆ ಎಲ್ಲದರಲ್ಲೂ ಭಾಗವಹಿಸುವಿಕೆ. ಹಾಗೆಂದು ಮನೆ, ಮಡದಿ, ಮಕ್ಕಳನ್ನು ಯಾವತ್ತೂ ಉದಾಸೀನ ಮಾಡಿದ್ದಿಲ್ಲ. ಮಕ್ಕಳಿಬ್ಬರ ಓದಿಗೂ ಪ್ರೋತ್ಸಾಹವೆ! ಶಾಲೆ ಮಾತ್ರ ದೂರವೆ! ಪ್ರೈಮರಿ ಒಂದು ಮೈಲಿ ದೂರವಾದರೆ ಹೈಸ್ಕೂಲಿಗೆ ಪಾದಯಾತ್ರೆ ಮೂರು ಮೈಲಿ ಆಗುತ್ತಿತ್ತಾದರೂ, “ನಡೆಯೋದು ಒಳ್ಳೆಯದೆ! ಎಲ್ಲಾ ಮನೆಬಾಗಿಲಲ್ಲೇ ಇರೂಕಾಗತ್ತಾ?” ಎನ್ನುವ ಸಮಜಾಯಿಷಿ. ಕಾಲೇಜಿಗೆ ಮಾತ್ರ ಒಂದಷ್ಟು ನಡೆದು, ನಂತರ ಬಸ್ ಹಿಡಿದು, ತೀರ್ಥಹಳ್ಳಿಯಲ್ಲಿ ಪಿ.ಯು.ಸಿ. ಆಮೇಲೆ ಇಂಜನಿಯರಿಂಗ್ ಮಾತ್ರ ಬೆಂಗಳೂರಿಗೆ ಕಳಿಸಿದ್ದಾಗಿತ್ತು. ಅಷ್ಟೇ ಶ್ರದ್ಧೆಯಿಂದ ಓದುವ ನಿತ್ಯ ಹಾಗೂ ದಿಶಾ ಪ್ರತಿಭೆಯಿಂದಲೇ ಸೀಟ್ ಪಡೆದದ್ದು. “ಕಷ್ಟಪಟ್ಟು ಓದೋವ್ರಿಗೆ ಹಳ್ಳಿಯಾದರೆ ಏನು, ಪೇಟೆಯಾದರೆ ಏನು” ಎಂದು ಅಭಿಮಾನದಿಂದ ಮಡದಿಯ ಬಳಿ ನುಡಿದದ್ದುಂಟು.
ಇಂತಹ ಆದಿತ್ಯನಿಗೆ ವರ್ಷಕ್ಕೊಮ್ಮೆಯಾದರೂ ತುಸು ದೀರ್ಘ ಪ್ರವಾಸ ಮಾಡಲೇಬೇಕು. ಅದು ಅವರ ಹವ್ಯಾಸ. ಆದಾಗ, ಆದಷ್ಟನ್ನು ನೋಡಿ ಸಂತೋಷ ಪಡಬೇಕು ಎಂಬ ಇಚ್ಛೆ.
ಆ ಸಮಯದಲ್ಲಿ ದೂರದ ಸಂಬಂಧಿ ಜಲಜತ್ತೆ ಮನೆ, ಕೊಟ್ಟಿಗೆ, ನಾಯಿಯ ನಿಗ ನೋಡಿಕೊಳ್ಳುತ್ತಾರೆ; ಆದರೆ ಅವರಿಗೆ ಮೊದಲೇ ಹೇಳಿಟ್ಟಿರಬೇಕು. ಇಲ್ಲವೆಂದರೆ ಅವರಿಗೆ ಬೇಡಿಕೆ ಹೆಚ್ಚು. ಯಾರ ಮನೆಯಲ್ಲಿ ಮದುವೆ, ಮುಂಜಿ, ಟೂರ್, ಯಾತ್ರೆ ಎಂದರೆ ಮನೆ ನೋಡಿಕೊಳ್ಳಲು ಜಲಜತ್ತೆಗೆ ಬುಲಾವು. ಅದೆಷ್ಟೇ ದೊಡ್ಡದಿರಲಿ, ಮನೆಯ ನಿಗಾ ವಹಿಸಿ, ಕಸ-ಧೂಳು ವರೆಸಿ ಚೊಕ್ಕಟವಾಗಿಟ್ಟು, ಇನ್ನೂ ಮನೆಯವರು ಬರುವಾಗ ಒಂದು ಗೊಜ್ಜೋ, ಸಾರೋ ಮಾಡಿಡುವ ಚಾಕಚಕ್ಯತೆ. ನಂಬಿಕೆಯ ಹೆಂಗಸು, ಸ್ವರೂಪ ಮಾತ್ರ ತೆಳ್ಳಗೆ; ನಲವತ್ತೈದು ಕೆ.ಜಿ.ಯ ಆಸುಪಾಸೊಳಗೆ. “ನಾನು ಹಿಂಗಿದ್ರೂ ಗಂಟಲು ಜೋರಿದೆಯಲ್ಲ, ಹೃದಯ ಗಟ್ಟಿ; ಇನ್ನೆಂತಾಗೂಕು” ಎನ್ನುವ ದಾಷ್ಟ್ರ್ಯ.
“ಅದ್ಹೆಂಗೆ ಅತ್ತೆ? ಯಾರ ಮನೆಗೆ ಹೋದ್ರೂ ಸಾಮಾನು-ಸರಂಜಾಮು ನೋಡಿಕೊಂಡು, ಅಡುಗೆ-ತಿಂಡಿ ಮಾಡ್ಕಂತೀರಿ, ನಮ್ಮನೇಲಿ ನಾವು ಇಟ್ಟಿದ್ದೇ ಒಂದೊಂದು ಸಲ ಮರೆವು ಬಂದು ಎಲ್ಲ ಕಿತ್ತು ಮಗಚತೀವಿ. ಮತ್ತೆ ಒಬ್ಬರೇ ಬೇರೆಯವರ ಮನೆಯಲ್ಲಿ ಇರೂಕೆ ಭಯ ಆಗಲ್ವಾ?”
“ಅಯ್ಯೋ ಅದೆಂಥಾ ದೊಡ್ಡ ವಿದ್ಯೆಯಾ ಮಹಾರಾಯ್ತಿ. ಅಡುಗೆ ಸಂಗ್ತಿ. ಒಂಚೂರು ಆಚೀಚೆ ಇದ್ದೀತು. ಇನ್ನು ಭಯಕ್ಕೇನು? ಗುಮ್ಮ ಬರತ್ತಾ ಕಚ್ಚಿಕೊಂಡು ಹೋಗೋಕೆ. ಕಳ್ಳಕಾಕರು ಬಂದ್ರೆ ಬಾಗಿಲು ಮುರಿಯೋಕೆ ಅಂತ ಬಂದ್ರೋ, ಒನಕೇನೋ, ಸೌದೇನೋ ತಗಂಡು ಹಾಕೂಕೂ ಸರಿ. ದೇವರು ನಡೆಸಿ ಇಲ್ಲೀವರೆಗೂ ಹಂಗಾಗಿಲ್ಲ ಅಂತ ಇಟ್ಕಾ. ಹೊರಗೆ ನಾಯಿಗಳು ಬೊಬ್ಬೆ ಹೊಡಿತಾವಲ್ಲೆ ಮಾರಾಯ್ತಿ. ಇನ್ನು ದೆವ್ವ-ಭೂತ. ಇದಾವೆ ಅಂದ್ರೆ ಇದಾವೆ. ಇಲ್ಲಾ ಅಂದ್ರೆ ಇಲ್ಲ. ಈ ಮುದುಕೀಗೆ ಏನು ಕಾಡಿಸಿಯಾವು? ದೇವರೊಬ್ಬ ಇದ್ದಾನೆ ಅನ್ನೂ ನಂಬಿಕೆ. ಅದ್ಕೇ ಇಷ್ಟರಮಟ್ಟಿಗೆ ಆರೋಗ್ಯ ಕೊಟ್ಟಿದ್ದಾನೆ. ದುಡಿದು ತಿನ್ನೋ ಶಕ್ತಿ ಕೊಟ್ಟಿದ್ದಾನೆ. ಇಷ್ಟರಮೇಲೆ ಎಲ್ಲರೂ ಒಂದಿನ ಗೊಟಕ್ ಅನ್ನಲೇಬೇಕಲ್ಲ. ಒಬ್ಬ್ರೇ ಬಂದಿದ್ದು, ಒಬ್ಬ್ರೇ ಈ ಲೋಕದ ವ್ಯಾಪಾರ ಮುಗಿಸಿ ಹೋಗ್ತಿರೋದು.”
ಬಿಟ್ಟ ಬಾಯಿ ಬಿಟ್ಟಂತೆ ಅವರ ಮತುಗಳನ್ನು ಕೇಳುತ್ತಿದ್ದ ಮಾನಸಾಳಿಗೆ ಆ ಕ್ಷಣಕ್ಕೆ ಜಲಜತ್ತೆ ತತ್ತ್ವಜ್ಞಾನಿಯಂತೆ, ಅತ್ಯಂತ ಸರಳವಾಗಿ ಜೀವನದ ತತ್ತ್ವಗಳನ್ನು ನಿರೂಪಿಸುತ್ತಿರುವಂತೆ, ಫಲಾಪೇಕ್ಷೆಯಿಲ್ಲದೆ ಬಂದದ್ದನ್ನು ಬಂದಂತೆ ಸ್ವೀಕರಿಸುವ ಸ್ಥಿತಪ್ರಜ್ಞರಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಮನೆಯಲ್ಲಿ ಬಡತನ, ಊಟಕ್ಕೇ ತತ್ವಾರ. ಆಗ ಬಂದಿದ್ದು ಗೂರಲು ಹುಡುಗನ ಸಂಬಂಧ. ಧಾರೆ ಎರೆದು ಕೈತೊಳೆದುಕೊಂಡ ತಂದೆತಾಯಿ. ಹಾಗಲ್ಲದೆ ಬೇರೆ ದಾರಿಯೂ ಇರಲಿಲ್ಲವೇನೊ. ತುಸು ಚೇತರಿಕೆಯಿದ್ದಾಗ ಒಂದಿಷ್ಟು ಕೆಲಸ ಮಾಡುವ ಸೀನಪ್ಪ, ಕೆಮ್ಮುತ್ತಾ ನರಳುತ್ತಿದ್ದುದೇ ಹೆಚ್ಚು. ಪತಿಯ ಚಾಕರಿ, ಸೇವೆಯ ಜೊತೆಜೊತೆಗೆ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಅವರಿವರ ಕೈಕೆಲಸಕ್ಕೆ ಅರಳು, ಅವಲಕ್ಕಿ ಅಂತೆಲ್ಲಾ ಆಯುಸ್ಸು ಕಳೆಯುತ್ತಾ ಬಂದಿದ್ದ ಜಲಜತ್ತೆ, ಕೊನೆಗೊಮ್ಮೆ ಗೂರಲು ಹೆಚ್ಚಾಗಿ ಪತಿ ಕಣ್ಮುಚ್ಚಿದಾಗಲೂ ತವರಿನ ದಾರಿ ಹಿಡಿಯದೆ ಎರಡಂಕಣದ ಮಣ್ಣಿನ ಮನೆಯಲ್ಲೇ ಗಟ್ಟಿಯಾಗಿ ಕುಳಿತು ಮುಂದಿನ ಬದುಕು ಸಾಗಿಸತೊಡಗಿದ್ದರು. ಭಯವೋ, ದುಃಖವೋ ಎಂದೂ ಯಾರ ಬಳಿಯೂ ಹೇಳಿಕೊಂಡವರಲ್ಲ.
ವಿಪರೀತ ಹೆದರುಪುಕ್ಕಿಯಾಗಿರುವ ಮಡದಿಗೆ, “ಅವರನ್ನು ನೋಡಿ ಕಲಿತುಕೊ” ಎಂದು ಆದಿತ್ಯ ತಮಾಷೆ ಮಾಡುತ್ತಿದ್ದುದುಂಟು.
“ನಾನೆಂತಕ್ಕೆ ಕಲಿತ್ಕಂಬೇಕು. ಅವರ ಪರಿಸ್ಥಿತಿ ಹಂಗಿತ್ತು, ನೀವು ಹೆಂಗೂ ನನ್ನ ಜೊತೆ ಇದ್ದೀರಲ್ಲ. ಎಲ್ಲ ನೀವು ನೋಡ್ಕಂತೀರಿ. ಮತ್ತೆ ಚಿಂತೆ ಯಾಕೆ” ಎನ್ನುವ ನಿರಾಳಭಾವದ ಮಾತನಾಡಿಬಿಡುತ್ತಿದ್ದಳು ಮಾನಸ.
ಒಮ್ಮೆ ಟಿ.ವಿ.ಯಲ್ಲಿ ಪುರಿಯ ಜಗನ್ನಾಥ ರಥಯಾತ್ರೆಯನ್ನು ನೋಡುತ್ತಿದ್ದಾಗ, “ಅಬ್ಬಾ! ಮರದ ರಥ. ಆ ಜಾತ್ರೆಯ ಸಂಭ್ರಮ ನೋಡಿ” ಎಂದು ಮಾನಸ ಉದ್ಗರಿಸಿದ್ದೇ “ಈ ಸಲ ಟೂರ್ ಪುರಿ-ಜಗನ್ನಾಥಕ್ಕೆ” ಎಂದು ಗಟ್ಟಿಮಾಡಿಬಿಟ್ಟಿದ್ದರು ಆದಿತ್ಯ. ಹಾಗೆಯೇ ಟೂರ್ ಎಂದರೆ ದೇವರ ದರ್ಶನ, ಯಾತ್ರೆಗಷ್ಟೇ ಸೀಮಿತವಾಗದು. ಪ್ರವಾಸೀ ತಾಣವೂ ಆಗಿರಬೇಕು ಎಂಬ ಉದ್ದೇಶ. ಕಲ್ಕತ್ತ, ಸಿಕ್ಕಿಮ್, ಡಾರ್ಜಲಿಂಗ್ ಹೀಗೆಲ್ಲಾ ಪಟ್ಟಿ ಬೆಳೆಯುತ್ತಾ “ಎರಡು ವಾರ ಅಂದ್ರೆ ಉದ್ದ ಆಗಲ್ಲವಾ?” ಎಂದು ರಾಗ ತೆಗೆದಿದ್ದಳು.
“ನಾನು ಕರ್ಕಂಡು ಹೋಗ್ತೀನಿ ಅಂದ್ರೆ ನಿನ್ನದೇನು ಬಿಂಕ. ಆರಾಮಾಗಿ ಹೋಗಿಬರೋಣ” ಎಂಬ ಆದಿತ್ಯನ ಸದಾಶಯ.
“ನಾನು ಮನೆಯಲ್ಲಿರ್ತೀನಲ್ಲ. ಮನೆ ಚಿಂತೆ ನಿನಗೆಂತಕ್ಕೆ? ಹಾಯಾಗಿ ಹೋಗಿಬನ್ನಿ” ಜಲಜತ್ತೆಯ ಆಶ್ವಾಸನೆ.
ಯಾರಾದರೂ ಜೊತೆಗೂಡುತ್ತಾರಾ ಎಂದು ಮಕ್ಕಳನ್ನೂ ಕೇಳಿದ್ದಾಯಿತು. ಆಫೀಸು, ಚಿಕ್ಕಮಕ್ಕಳ ಸ್ಕೂಲು, ಅದೂ ಇದೂ ಜಂಜಾಟ. “ನೀವು ಫ್ರೀಯಾಗಿದ್ದೀರಲ್ಲ. ಸುಖವಾಗಿ ಟೂರ್ ಮಾಡಿಕೊಂಡು ಬನ್ನಿ” ಎಂದು ಹೇಳಿ ಮಕ್ಕಳು ಶುಭ ಹಾರೈಸಿದ್ದೂ ಆಗಿತ್ತು.
ಇವರ ಜೊತೆಗೆ ಹಳ್ಳಿಯ ಮತ್ತೊಂದು ಕುಟುಂಬ. ಹೆಸರುವಾಸಿಯಾಗಿರುವ, ನಂಬಿಕೆಗೆ ಅರ್ಹವಾಗಿರುವ ಪ್ರವಾಸೀ ಸಂಸ್ಥೆ. ಪ್ಯಾಕಿಂಗ್ ತರಾತುರಿ, ‘ಅಲ್ಲಿ ಸೆಖೆಗೆ ಹತ್ತಿ ಬಟ್ಟೆ, ಇಲ್ಲಿ ಚಳಿಗೆ ಉಣ್ಣೆ ಬಟ್ಟೆ’ ಎಂದು ಮಾನಸಾ ಬಟ್ಟೆಗಳನ್ನು ಜೋಡಿಸುವಾಗ ಗಾಬರಿ ನಟಿಸಿ, “ಏನು ಪರ್ಮನೆಂಟ್ ಪ್ಯಾಕಿಂಗಾ ಮಹರಾಯ್ತಿ. ಎರಡು ವಾರಕ್ಕೇ ವಾಪಸು ಬರೋಣ ಅಂದ್ಕಂಡಿದ್ದೀನಿ. ಜಲಜತ್ತೆಗೆ ಅಷ್ಟೇ ಹೇಳಿರೂದು” ಆದಿತ್ಯ ನುಡಿದಾಗ, ವಿಪರೀತ ಸಿಟ್ಟಿನಿಂದ, “ನಿಮ್ಮ ತಮಾಷೆಗೂ ಒಂದು ಮಿತಿ ಬೇಡವಾ? ಯಾತ್ರೆ ಮಾಡ್ತಾ ಇರೂವಾಗ ಇದೆಂತಹ ಅಪಶಕುನ ನಿಮ್ಮದು? ಬಿಡ್ತು ಅನ್ನಿ” ಎಂದು ಗುಡುಗಿದ್ದಳು. ಅವಳು ‘ಸಾಕು’ ಎನ್ನುವವರೆಗೂ ‘ಬಿಡ್ತು’ ಉರು ಹಾಕಿದ್ದೇ ಹಾಕಿದ್ದು.
ಪುರಿ ಜಗನ್ನಾಥನ ಮಂದಿರದ ಭವ್ಯತೆಗೆ ದಂಗಾಗಿ ಹೋಗಿದ್ದರು ಯಾತ್ರಿಕರು. “ಅತ್ಯಂತ ಪವಿತ್ರ ದೇವಸ್ಥಾನವಿದು. ವಿಪರೀತ ಜನಸಂದಣಿ ಇರುವುದರಿಂದ ತುಂಬಾ ಎಚ್ಚರಿಕೆಯಿಂದಿರಬೇಕು. ನಿಮ್ಮ ಹಣ, ಒಡವೆಗಳ ಬಗ್ಗೆ ಜಾಗ್ರತೆಯಿರಲಿ. ಏಕಾಂಗಿಯಾಗಿ ಎಲ್ಲೂ ಹೋಗಬೇಡಿ” ಎಂದೆಲ್ಲ ಸೂಚನೆಗಳನ್ನು ಕೊಡುತ್ತ, ಜಗನ್ನಾಥ, ಬಲಭದ್ರ, ಸುಭದ್ರಾರ ಮಂದಿರದೊಳಗೆ ಕರೆದುಕೊಂಡು ಹೋದರು ಟೂರ್ ಮ್ಯಾನೇಜರ್. ಅವರಿಗೆ ಅರ್ಚಕರ, ದೇವಸ್ಥಾನದ ಸಿಬ್ಬಂದಿಗಳ ಪರಿಚಯವಿದ್ದುದರಿಂದ ದರ್ಶನ ಸುಗಮವಾಗಿತ್ತು.
“ನಿಮ್ಮ ಪುಣ್ಯ. ಈವತ್ತು ದರ್ಶನ ಬೇಗ ಆಗಿದೆ” ಎಂದು ಹೇಳುತ್ತ ಸಂಸ್ಥೆಯ ವತಿಯಿಂದ ಮಾಡಿಸಿದ ಪೂಜಾಪ್ರಸಾದವನ್ನು ಎಲ್ಲರಿಗೂ ಹಂಚಿದ್ದರು ಮ್ಯಾನೇಜರ್. “ಇಲ್ಲಿ ಧ್ವಜ ಹಾಕುವುದು ಬಹಳ ವಿಶೇಷ. ಸಂಜೆ ಐದಕ್ಕೆ ಧ್ವಜ ಹಾಕುತ್ತಾರೆ. 214 ಅಡಿ ಎತ್ತರದ ಗೋಪುರವನ್ನು ಏರುತ್ತಾರೆ. ಪ್ರತಿದಿನವೂ ಧ್ವಜ ಹಾಕುತ್ತಾರೆ. ಈ ಧ್ವಜದರ್ಶನಕ್ಕೆ ದೇವರ ದರ್ಶನದಷ್ಟೇ ಮಹತ್ತ್ವವಿದೆ. ಇಷ್ಟವಿದ್ದವರು ಈ ಪ್ರಾಂಗಣದಲ್ಲಿ ಎಲ್ಲಾದರೂ ಕುಳಿತು ನೋಡಬಹುದು. ರೂಮ್ ಇಲ್ಲಿಂದ ಕಾಲ್ನಡಿಗೆಯಲ್ಲಿ ಬರಬಹುದಾದಷ್ಟು ಹತ್ತಿರ. ಪಕ್ಕದಲ್ಲೇ ಆನಂದ ವಿಹಾರವಿದೆ. ದೇವರಿಗೆ ನೈವೇದ್ಯವಾದ ಬಗೆಬಗೆಯ ಖಾದ್ಯಗಳು ಪ್ರಸಾದದ ರೂಪದಲ್ಲಿ ಹಣಕ್ಕೆ ಸಿಗುತ್ತದೆ. ದರ್ಶನ ಸಾಕೆನಿಸಿದವರು ರೂಮ್ಗೆ ಬಂದು ವಿಶ್ರಾಂತಿ ಪಡೆಯಬಹುದು” ಎಂದು ಹೇಳಿ ಹೊರಟಿದ್ದರು ಮ್ಯಾನೇಜರ್.
“ಎಷ್ಟು ನೋಡಿದರೂ ಅಷ್ಟೇ! ಮುಖ್ಯದರ್ಶನವಾಯಿತಲ್ಲ. ಇನ್ನು ಬೆಳಗ್ಗೆಯ ರೈಲಿನಲ್ಲಿ ಕಲ್ಕತ್ತಾಗೆ ಪ್ರಯಾಣ. ಇಲ್ಲಿ ಯಾರು ಹೇಗೆ ಸುಲಿಗೆ ಮಾಡುತ್ತಾರೋ ಎಂಬ ಭಯ” ಎಂದು ಅವರನ್ನು ಅನೇಕರು ಹಿಂಬಾಲಿಸಿದ್ದರು.
ಅರವತ್ತರ ಅಂಚಿನಲ್ಲಿದ್ದ ಆದಿತ್ಯ ಎಂದೂ ಉತ್ಸಾಹದ ಬುಗ್ಗೆಯೇ! ಅವಕಾಶವಿರುವಾಗ ಸಾಧ್ಯವಾದುದನ್ನೆಲ್ಲ ನೋಡಬೇಕು, ರೂಮಿನಲ್ಲಿ ಮಲಗುವಂತಹ ಆಯಾಸವೆಂತಹುದು? “ನೀವು ಹೇಳಿದ ಹಾಗೆ” ಮಾನಸಳೂ ಅನುಮೋದಿಸಿದ್ದಳು. ಹಾಗೆಯೇ ಅವರೊಂದಿಗೆ ಹೊರಟಿದ್ದ ಅದೇ ಹಳ್ಳಿಯ ಜೋಡಿ ಹಾಗೂ ಮೈಸೂರಿನ ತಾಯಿ-ಮಗ ಸುನೀತಾ ಮತ್ತು ಅಮಿತ್. ಈಗಷ್ಟೇ ಸಾಫ್ಟ್ವೇರ್ ಇಂಜಿನಿಯರ್ ಆಗಿ ಆರ್ಡರ್ ಪಡೆದಿದ್ದ ಅಮಿತ್ ತಾಯಿಯೊಂದಿಗೆ ದೇವರ ದರ್ಶನಕ್ಕೆಂದು ಬಂದಿದ್ದು, ತಂದೆ ಇಲ್ಲ ಅಮಿತ್ನಿಗೆ. ತಾಯಿಯ ಶ್ರಮ ಕೈಗೂಡಿದೆ. ಕಷ್ಟಪಟ್ಟು ಮಗನನ್ನು ಬೆಳೆಸಿ, ಓದಿಸಿ, ಈಗವನು ಒಂದು ಹಂತಕ್ಕೆ ಬಂದಿರುವ ಸಂತಸ. ಸಾಕಷ್ಟು ಬಿಸಿಲಿದ್ದುದರಿಂದ ನೆರಳನರಸಿ ಹೊರಟಿದ್ದರು ಎಲ್ಲರೂ. ವಿಶಾಲ ಪ್ರಾಂಗಣ. ಸ್ವಚ್ಛಗೊಳಿಸುತ್ತಲೇ ಇರುವ ಸಿಬ್ಬಂದಿ, ಅಷ್ಟೇ ಬೇಗ ಅಲ್ಲೇ ಉಗುಳುವವರು, ಕಸ ಹಾಕುವವರು, ದೇವಸ್ಥಾನದ ಆವರಣ ಎಂಬ ಪಾವಿತ್ರ್ಯದ ಭಯವೂ ಅವರಿಗಿರದು. ಹೊರಗಿನ ಉಗ್ರಾಣದಲ್ಲಿ ಮಡಕೆಗಳ ರಾಶಿ, ಮತ್ತಷ್ಟು ಲಾರಿಯಲ್ಲಿ ಬಂದು ಬೀಳುತ್ತಿರುವ ಮಡಕೆಗಳು. ಅಲ್ಲಿ ಮಡಕೆಯಲ್ಲೇ ನೈವೇದ್ಯ. ಪೇರಿಸಿಟ್ಟ ಸೌದೆಗಳು. ಒಂದರ ಮೇಲೊಂದರಂತೆ ಏಳು ಮಡಕೆಗಳಲ್ಲಿ ವ್ಯಂಜನ, ಖಾದ್ಯಗಳ ತಯಾರಿ. ಪ್ರತಿಯೊಂದರಲ್ಲೂ ಪೂರ್ಣಪ್ರಮಾಣದಲ್ಲಿ ತುಂಬಿದ ಚಿಕ್ಕ, ದೊಡ್ಡ ತರಹೇವಾರಿ ಖಾದ್ಯಗಳು. ಮೇಲಿನ ಮಡಕೆಯೇ ಮೊದಲು ಬೇಯುವ ಚಮತ್ಕಾರ. ಪಕ್ಕದ ಆನಂದ ವಿಹಾರದಿಂದ ತಮಗೆ ಬೇಕಾದ ಗಾತ್ರದ ಮಡಕೆ ಖರೀದಿಸಿ, ಅಲ್ಲೇ ಒಂದು ಕಡೆ ಸುತ್ತಲೂ ಕುಳಿತು ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸುವ ಮಂದಿ.
ದೇವಸ್ಥಾನದಿಂದ ತಾವಿರುವ ರೂಮಿಗೆ ಹೋಗುವ ದಾರಿಯಲ್ಲಿ ತುಸು ಮುಂದೆ ಹೋದರೆ ಸಮುದ್ರತೀರ. ಧ್ವಜಾರೋಹಣ ಆಗಿಬಿಟ್ಟರೆ ಬೇಗಬೇಗ ಒಂದಿಷ್ಟು ಹೊತ್ತು ಸಮುದ್ರದತ್ತ ಹೆಜ್ಜೆ ಹಾಕಬಹುದು. ಆ ಬೀಚ್ನ ಹೆಸರೇ ಸ್ವರ್ಗದ್ವಾರ. ಸೂರ್ಯಾಸ್ತವೂ ಬಹಳ ಸೊಗಸಂತೆ. ಇಂತಹುದಕ್ಕೆ ಆದಿತ್ಯ ಎಂದೂ ಒಂದು ಹೆಜ್ಜೆ ಮುಂದೆಯೆ.
ಕಾಯುತ್ತಿರುವಂತೆ ಐದು ಗಂಟೆಗೆ ಒಂದೆರಡು ನಿಮಿಷವಿರುವಾಗಲೆ ಆ ಕಾತುರದ ಕ್ಷಣ ಬಂದೇಬಿಟ್ಟಿತ್ತು. ಇದೇನು ನಿಜವೆ, ಭ್ರಮೆಯೆ? ಕಣ್ಣು ಕೀಲಿಸಿಕೊಂಡು ನೋಡತೊಡಗಿದ್ದವರು ಇವರಂತೆಯೇ ಅಲ್ಲಿ ನೆರೆದಿದ್ದ ನೂರಾರು ಮಂದಿ. ಚಕಚಕನೆ ಹತ್ತತೊಡಗಿದರು 214 ಅಡಿಗಳ ಎತ್ತರವಿರುವ ಆ ದೇವಸ್ಥಾನದ ಗೋಪುರವನ್ನು. ಎಲ್ಲರ ಎದೆಯಲ್ಲೂ ಕಂಪನ. ಏನಾದರೂ ಹೆಚ್ಚುಕಡಮೆಯಾದರೆ ಎಂಬ ಭಯ. ಹಾಗಾಗದು, ಅಭ್ಯಾಸ ಬಲ, ದೇವರ ಮಹಿಮೆ. ದೇವರಿಗೆ, ಧ್ವಜಕ್ಕೆ ವಂದಿಸುತ್ತಾ ಹಿಂದಿನದಿನ ಹಾಕಿದ ಧ್ವಜವನ್ನು ತೆಗೆದು ಇಂದಿನ ಧ್ವಜವನ್ನು ಏರಿಸಿಯೇಬಿಟ್ಟರು. ಎಲ್ಲರೂ ಜಗನ್ನಾಥನಿಗೆ ಮುಗಿಲು ಮುಟ್ಟುವಂತೆ ಜಯಕಾರ ಹಾಕಿದ್ದೂ ಆಯಿತು.
ಇದೀಗ ಗಂಗಾಸಮುದ್ರದ ತೀರಕ್ಕೆ ಹೋಗುವ ಉತ್ಸುಕತೆ, ಧಾವಂತ.
“ಹೀಗೆ ಹೋಗಿ ಹಾಗೆ ಬಂದ್ಬಿಡೋಣ. ಆಗ್ಲೇ ಹೊತ್ತಾಗ್ತಾ ಬಂತು. ನಾಳೆ ಬೆಳಗ್ಗೆಯೇ ಕಲ್ಕತ್ತಾಗೆ ಹೊರಡ್ಬೇಕು.” ಮಾನಸಳ ಗಡಿಬಿಡಿಗೆ ಜೋರಾಗಿ ನಕ್ಕುಬಿಟ್ಟಿದ್ದರು ಆದಿತ್ಯ. “ಹಾಜರಿ ಹಾಕಿ ಬರೋಕೆ ಹೋಗ್ತಿದ್ದೀವಾ? ಬೆಳಗ್ಗೆ ಹೋಗೋಕೆ ಇಲ್ಲಿ ನಾವೇನು ತಿಂಡಿ-ತೀರ್ಥ ತಯಾರು ಮಾಡ್ಬೇಕಾ? ಅವರು ಕೊಟ್ಟದ್ದು ತಿನ್ನೋದು ತಾನೆ? ಇಲ್ಲಿ ಒಂದಿಷ್ಟು ಚೆನ್ನಾಗಿ ಸುತ್ತಿದ್ರೆ, ಅಲೆಗಳ ಜೊತೆ ಆಟ ಆಡಿದ್ರೆ ರಾತ್ರಿ ಸುಖವಾದ ನಿದ್ರೆ ಬರುತ್ತೆ. ಬೆಳಗ್ಗೆ ಹೇಗೂ ಅವರೇ ಬೆಡ್ ಕಾಫಿ ಕೊಟ್ಟು ನಮ್ಮನ್ನು ಎಬ್ಬಿಸ್ತಾರಲ್ಲ, ಇನ್ನೇನು ಚಿಂತೆ.”
ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವ ಅಸಾಮಿ. ಒಂದು ವಿಧದಲ್ಲಿ ಇವರು ಹೇಳುವುದೂ ಸರಿಯೆ. ಇಲ್ಲಿಗೆ ಬಂದಾಗಲೂ ಯಾಕೆ ಅಂತಹ ಧಾವಂತ? ಮ್ಯಾನೇಜರ್ ಫ್ರೀ ಬಿಟ್ಟಿರುವಾಗ ಹಾಯಾಗಿ ಓಡಾಡಿಕೊಂಡಿದ್ದರಾಯಿತು.
ಎಲ್ಲರೂ ನಗುತ್ತ, ಹರಟುತ್ತ ಸ್ವರ್ಗದ್ವಾರಕ್ಕೆ ಬಂದು ತಲಪಿದ್ದರು. ದೂರದಿಂದಲೇ ಕೇಳುತ್ತಿರುವ ಸಮುದ್ರದ ಮೊರೆತ. ಮರಳರಾಶಿಯಲ್ಲಿ ಹೆಜ್ಜೆಹಾಕುತ್ತಾ ಸಮುದ್ರದ ಬಳಿ ಬಂದಂತೆ ಅಲೆಗಳ ತುಂಟಾಟ ಕೈಬೀಸಿ ಕರೆಯತೊಡಗಿತ್ತು. ತೀರದವರೆಗೂ ಬಂದು ಅಷ್ಟೇ ಬೇಗನೆ ಸಾಗರ ಸೇರಿಕೊಳ್ಳುವ ಅವುಗಳ ಬೇಸರವಿಲ್ಲದ ಆಟವನ್ನು ನೋಡುನೋಡುತ್ತಾ ಎಲ್ಲರ ಉತ್ಸಾಹ ಉಕ್ಕೇರಿತ್ತು. ಏಕತಾನತೆಯಲ್ಲೂ ಅದೆಂತಹ ಸೆಳೆತ, ಕಣ್ಣು ಕೀಳಲಾಗದ ಆಕರ್ಷಣೆ, ಸಣ್ಣ-ದೊಡ್ಡ ಅಲೆಗಳ ಭೋರ್ಗರೆತ, ಪೈಪೋಟಿಗೆ ಬಿದ್ದಂತೆ ಒಂದನ್ನು ಹಿಂಬಾಲಿಸಿಕೊಂಡು ಮತ್ತೊಂದು… ಮೆಲ್ಲಗೆ ಕತ್ತಲು ಆವರಿಸುತ್ತಿದ್ದಂತೆ ಮುಸ್ಸಂಜೆಯಲ್ಲಿ ಅರಳಿಕೊಂಡ ವಿದ್ಯುತ್ದೀಪಗಳು ಮಾಯಾಲೋಕವನ್ನೇ ಸೃಷ್ಟಿಸಿದ್ದವು. ಸುತ್ತಮುತ್ತಲಿನ ಅಂಗಡಿ-ಮುಂಗಟ್ಟಿನ ವ್ಯಾಪಾರಸ್ಥರು ಗಿರಾಕಿಗಳನ್ನು ಕೂಗಿಕೂಗಿ ಕರೆಯುವ ದೃಶ್ಯ, ನೈಜ ಮುತ್ತು-ಹವಳ ಎಂದು ಹೇಳುತ್ತಾ ಬಂದವರನ್ನು ಸೆಳೆಯುವ ತಂತ್ರ, ಕನ್ನಡಿಗರೆಂದು ಅರಿವಾದೊಡನೆ ಹರಕು- ಮುರುಕು ಕನ್ನಡದಲ್ಲೇ ಮಾತನಾಡುವ ವ್ಯವಹಾರದ ಗಿಮಿಕ್, ಎಲ್ಲವೂ ಸಾಗುತ್ತಿದ್ದಂತೆಯೇ ಅಲೆಗಳ ಅಬ್ಬರವೂ ಹೆಚ್ಚಾಗತೊಡಗಿತ್ತು. ಸಾಕುಸಾಕೆಂದರೂ ಮತ್ತಷ್ಟು ಮುಂದೆ ನುಗ್ಗುವ ಹುಮ್ಮಸ್ಸು, ಅಲೆಗಳಿಗೆ ಕಾಲೊಡ್ಡುತ್ತಾ ತುಸು ಮುಂದೆ-ಮುಂದೆ ಚಲಿಸುತ್ತಿದ್ದಂತೆ ಹೊತ್ತು ಜಾರುತ್ತಿರುವುದರ ಬಗ್ಗೆ ಮಾನಸ ಎಚ್ಚರಿಸುತ್ತಲೇ ಇದ್ದಳು.
ಓ! ಅಷ್ಟರಲ್ಲಿ ಅಮಿತ್ಗೆ ಸೆಲ್ಫಿ ತೆಗೆದುಕೊಳ್ಳುವ ಬಯಕೆ. ದೈತ್ಯ ಅಲೆಯನ್ನು ಗಮನಿಸಲೇ ಇಲ್ಲ ಅಮಿತ್! ಇನ್ನೇನು ರಕ್ಕಸ ಅಲೆ ಅಮಿತ್ನನ್ನು ಕೊಚ್ಚಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಆದಿತ್ಯ ಮುನ್ನುಗ್ಗಿ ರಭಸದಿಂದ ಅಮಿತ್ನನ್ನು ಎಳೆದುಹಾಕಿದರು. ಅಮಿತ್ ಏನೋ ಉಳಿದುಕೊಂಡಿದ್ದ. ಆದರೆ ಆದಿತ್ಯ ಸೊಕ್ಕಿನ ಅಲೆಯ ಅಟ್ಟಹಾಸದಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟಿದ್ದರು. ಯಾರಿಗೂ ನಿಜವನ್ನು ಅರಗಿಸಿಕೊಳ್ಳಲಾಗದ ಸ್ಥಿತಿ. ಹೌದು ಆದಿತ್ಯ ಸಮುದ್ರದೊಳಗೆ ಎಲ್ಲರೂ ನೋಡನೋಡುತ್ತಿರುವಂತೆ, ಯಾರ ಕಣ್ಣಿಗೂ ಕಾಣಿಸದಂತೆ ಮಾಯವಾಗಿಬಿಟ್ಟಿದ್ದರು. “ಅಯ್ಯೋ” ಎಂದು ಚೀತ್ಕರಿಸಿ ದಂಡೆಯಲ್ಲಿ ಉರುಳಿದ ಮಾನಸಳನ್ನು ಉಪಚರಿಸತೊಡಗಿದ್ದರು ಜೊತೆಯವರು.
ಹೀಗಾಗಬಾರದಿತ್ತು…. ಅವರೇ ತಂದುಕೊಂಡ ದುರಂತವದು. ಅನೇಕರು ಹೇಳುತ್ತಿರುವುದೂ ಸರಿಯಿದ್ದೀತು. ಹೀಗಾದೀತು ಎಂದು ಆ ಸೆಕೆಂಡ್ನಲ್ಲಿ ಯೋಚಿಸದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮಹಾನುಭಾವರಾಗಿ ಯೋಚಿಸಿದ್ದು.
ಹೌದು, ಈಗಿನವರಂತೆ ಸೆಲ್ಫಿ ತೆಗೆದುಕೊಳ್ಳಲೆತ್ನಿಸಿ ಸಾವಿನ ದವಡೆಯಲ್ಲಿರುವವನ ದುಗುಡ, ಭಯ, ಆತಂಕಗಳನ್ನು ತಮ್ಮ ಸೆಲ್ಫಿಯಲ್ಲಿ ಜೀವಂತ ಸೆರೆ ಹಿಡಿಯುವ ಬದಲು ಆದಿತ್ಯ ಅಮಿತ್ನನ್ನು ಜೀವಂತವಾಗಿ ಉಳಿಸಿದ್ದರು. ಅದಕ್ಕೆ ತಮ್ಮ ಜೀವದ ಬೆಲೆ ತೆತ್ತಿದ್ದರು. ಯಾರಿಗೂ ಏನೂ ಮಾಡಲಾಗದು. ಇದು ಹೀಗೇ ಆಗಬೇಕೆಂದು ವಿಧಿನಿಯಮವಿತ್ತೇ ಎಂದರೆ ಇದೆಯೆಂದೇ ಭಾವಿಸಬೇಕೇನೊ. ಇಲ್ಲವೆಂದರೆ ಮೈಸೂರಿನಿಂದ ತಾಯಿಯ ಜೊತೆಯಲ್ಲಿ ಬಂದ ಆ ಅಮಿತ್ ತನ್ನ ತಂದೆಯ ಪ್ರಾಯದ ಆದಿತ್ಯರ ಸಾವಿಗೆ ಕಾರಣವಾಗಬೇಕೆಂದರೆ! ಇಬ್ಬರೂ ಈ ಪ್ರವಾಸದಲ್ಲಿಯೇ ಜೊತೆಯಾಗಿದ್ದು. ಒಂದು ವಾರದ ಪ್ರವಾಸ ಮುಗಿಸಿ ಮತ್ತೊಂದು ವಾರ ಮುಂದುವರಿಸುವುದಿತ್ತು.
ಪೂಜೆಯಲ್ಲಿ, ದೇವರ ದರ್ಶನದಲ್ಲಿ ಏನಾದರೂ ಅಚಾತುರ್ಯವಾಯಿತೆ? ಇನ್ನು ಯಾರಿಗೆ ಯಾವ ಕೇಡು ಕಾದಿದೆಯೊ? ಇನ್ನೆಲ್ಲಿಯ ಪ್ರವಾಸ? ಇಡೀ ತಂಡದವರಿಗೇ ಮಂಕು ಕವಿದಂತಾಗಿತ್ತು. ಹೆಸರಾಂತ ಪ್ರವಾಸಿ ಸಂಸ್ಥೆಯಾದುದರಿಂದ ಮಾನಸಳನ್ನು ಹಿಂತಿರುಗಿ ಕಳುಹಿಸಿಕೊಡುವ ಎಲ್ಲ ವ್ಯವಸ್ಥೆಯೂ ಆಯಿತು. ಅವರೊಂದಿಗೆ ಬಂದಿದ್ದ ಮತ್ತೊಂದು ಜೋಡಿಯೂ ಹೊರಟು ನಿಂತಿತ್ತು. ಅಮಿತ್ನ ತಾಯಿ ಮಾನಸಳನ್ನು ತಬ್ಬಿಕೊಂಡು ಅಳುತ್ತಿದ್ದರೆ, ಮಾನಸಾಳಿಗೆ ಇನ್ನೂ ಭ್ರಮಾಧೀನಸ್ಥಿತಿ. ಇದು ಸತ್ಯವಲ್ಲ, ಕನಸು. ಆದಿತ್ಯ ಮುಳುಗಿಲ್ಲ. ಅವರು ಈಜಿನಲ್ಲಿ ಪರಿಣತರು. ಹಾಗೆಲ್ಲಾ ಮುಳುಗುವುದಿಲ್ಲ.
“ನನ್ನ ಬದುಕು ಕಟ್ಟಿಕೊಟ್ಟು ಅವರು ಹೋಗಿಬಿಟ್ಟರು ಪುಣ್ಯಾತ್ಮರು. ನನಗೆ ಇವನೇ ದಿಕ್ಕು. ದೇವರ ದರ್ಶನಕ್ಕೆ ಎಂದು ಕರ್ಕೊಂಡುಬಂದ. ಕ್ಷಮೆ ಕೇಳೋ ಧೈರ್ಯವೂ ನನಗಿಲ್ಲ” ಅಳುವಿನಲ್ಲಿ ಶಬ್ದಗಳು ಹೊರಡದಷ್ಟು ಸ್ವರ ಹುದುಗಿ ಹೋಗಿತ್ತು ಸುನೀತಾರಿಗೆ.
ಅವರು ಕ್ಷಮೆ ಕೇಳಿದಾಗ ಮಾತನಾಡಲಾಗದ ಸ್ಥಿತಿ ಮಾನಸಾಗೆ. ಕೊಲೆಗಾರ ಅವರ ಮಗ, ದೂರದಲ್ಲಿ ಮುಖ ಮುಚ್ಚಿ ನಿಂತ ಅಮಿತ್ನನ್ನು ನೋಡಲೂ ಬಯಸದ ಮನಸ್ಸು. ಇವನ ಸೆಲ್ಫಿ ಹುಚ್ಚು ಪತಿಯನ್ನೇ ನುಂಗಿಹಾಕಿತಲ್ಲ. ಪ್ರವಾಸವೆಂದು ಎಷ್ಟೋ ದಿನಗಳಿಂದ ಏನೆಲ್ಲಾ ಸಿದ್ಧತೆ ನಡೆಸಿ, “ಕಲ್ಕತ್ತ ಭಾರತದಲ್ಲೇ ಅದು ವಿಶೇಷ ಮಾನಸ. ನಿನಗೆ ಗೊತ್ತಾ? ಅಲ್ಲಿ ಮಾತ್ರ ವಿಶೇಷ ಸಂಚಾರಿ ನಿಯಮಗಳು. ರಸ್ತೆಯಲ್ಲೇ ರೈಲು ಟ್ರಾಮ್… ಅದು ವಿಪರೀತ ಗಿಜಿಗಿಜಿ. ನಮ್ಮ ಬೆಂಗಳೂರಿಗಿಂತ. ಅಲ್ಲಿ ಯಾವ ಸರವೂ ಬೇಡ. ಮಂಗಳಸೂತ್ರಾನೂ ಕಿತ್ತುಬಿಟ್ಟಾರು ಹುಷಾರ್. ಏನೆಲ್ಲ ಮಾತನಾಡಿದ್ದರಲ್ಲ ಆದಿತ್ಯ. ಆದರೆ ಕಲ್ಕತ್ತಾಗೆ ಹೋಗುವ ಮೊದಲೇ ಮಂಗಳಸೂತ್ರವನ್ನು ಕಿತ್ತಿದ್ದು ಯಾರು? ಸಿಕ್ಕಿಮ್ ಅದೆಷ್ಟು ಚಂದವಂತೆ ಗೊತ್ತಾ? ಎಲ್ಲಾ ಶುಚಿ, ಸ್ವಚ್ಛ. ಅಲ್ಲಿ ಚೀನಾ-ಭಾರತ ಬಾರ್ಡರ್ ನಾಥುಲಾಪಾಸ್ಗೆ ಹೋಗಿ ಬರೋಣ. ಡಾರ್ಜಲಿಂಗ್ನಲ್ಲಿ ಸೂರ್ಯೋದಯವಾಗುವಾಗ ಬೆಳಗಿನ ಮೂರೂವರೆಗೆ ಕಾಂಚನಗಂಗಾ ಹೇಗೆ ಕಾಣಿಸುತ್ತದೆ ಗೊತ್ತಾ! ಹೀಗೆ ಒಂದೊಂದರ ಬಗ್ಗೆಯೂ ಅದೆಷ್ಟು ಮಾಹಿತಿಗಳನ್ನು ಕಲೆಹಾಕಿದ್ದರು. ಇಲ್ಲ, ಖಂಡಿತ ಅವರು ಮುಳುಗಿಲ್ಲ; ಬಂದೇ ಬರ್ತಾರೆ. ತುಂಬಿದ ಹೊಳೆಗಳಲ್ಲೆಲ್ಲ ಈಜಿದವರು, ಸಮುದ್ರದಲ್ಲೂ ಈಜುತ್ತಾ ಈಜುತ್ತಾ ಮತ್ತೆಲ್ಲೋ ತೀರ ಸೇರಿ ಮತ್ತೆ ಬಂದಾರು! ಅವರಿಗೆ ಶಕ್ತಿ ಇದೆ, ಈಜು ಗೊತ್ತಿದೆ. ಸೋಲು ಒಪ್ಪಿಕೊಳ್ಳುವವರಲ್ಲ ಆದಿತ್ಯ. ಹೀಗೆಲ್ಲ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಸಂಪಿಗೆಹಳ್ಳಿಗೆ ಹಿಂತಿರುಗುವಾಗ ಮಕ್ಕಳು, ಅಳಿಯಂದಿರು, ಅವರ ಮನೆಯವರು, ಸುತ್ತಲಿನ ಹಳ್ಳಿಯವರೆಲ್ಲರೂ ನೆರೆದಿದ್ದರು. “ಎರಡೇ ವಾರಕ್ಕೆ ಅಂತ ಹೇಳಿದ್ದೀಯಲ್ಲಪ್ಪ. ನಾನು ಮನೆ ಕಾಯ್ತಾ ಇದ್ದೀನಿ” ಮನೆಯಲ್ಲಿದ್ದ ಜಲಜತ್ತೆ ಹೇಳಿಯೂ ಹೇಳದಂತೆ ತಮ್ಮಷ್ಟಕ್ಕೆ ಎಂಬಂತೆ ಪಿಸುಗುಟ್ಟುತ್ತಾ ನಿಟ್ಟುಸಿರಿಟ್ಟಿದ್ದರು.
ಶವವೂ ಸಿಕ್ಕಿಲ್ಲವಾದದ್ದರಿಂದ ಅಂತ್ಯಕ್ರಿಯೆಯನ್ನೂ ನಡೆಸುವಂತಿರಲಿಲ್ಲ. ಮುಂದೇನು ಮಾಡಬಹುದು? ಅಂತ್ಯಕ್ರಿಯೆಯ ವಿಧಾನವೇನು ಎಂಬುದನ್ನು ಹಳ್ಳಿಯ ಹಿರಿಯರು ತಮ್ಮಲ್ಲಿಯೇ ಚರ್ಚಿಸಿಕೊಳ್ಳುತ್ತಿದ್ದರು.
ನಾಯಿಗಳು ಬೊಗಳುತ್ತಿದ್ದಂತೆ, ಕೊಟ್ಟಿಗೆಯಲ್ಲಿ ಹಸುಗಳು ಕೂಗುತ್ತಿದ್ದಂತೆ, ಪೆಚ್ಚಾದ ಬೆಕ್ಕು ಅತ್ತಿತ್ತ ಓಡಾಡುತ್ತಿದ್ದಂತೆ, “ನಿಮ್ಮ ಹಾಗೆ ನಾನೂ ಕಾಯ್ತಿದ್ದೀನಿ. ನಿಮ್ಮ ಧಣಿ ಬರ್ತಾರೆ. ಆದಿತ್ಯ ಬರ್ತಾರೆ. ನಿಮ್ಮನ್ನು ಮಾತನಾಡಿಸ್ತಾರೆ” ಎನ್ನುತ್ತ ಮತ್ತಷ್ಟು ಅಳತೊಡಗಿದಳು ಮಾನಸ.
ಹೇಗಾಯಿತೆಂದು ಕೇಳುವವರು, ಮರಣದಲ್ಲೂ ಮಹಾತ್ಮರಾಗಿದ್ದನ್ನು ಕೊಂಡಾಡಿ ಗುಣಗಾನ ಮಾಡುವವರು, ಸಾಂತ್ವನ ಹೇಳುವವರು, ಸೆಲ್ಫಿಯ ಹುಚ್ಚನ್ನು ಶಪಿಸುತ್ತಾ, ಸ್ಮಾರ್ಟ್ಫೋನನ್ನೇ ನಿಷೇಧಿಸಬೇಕೆನ್ನುವವರು. ಒಟ್ಟಾರೆ ಸಾವಿನ ಮನೆಯ ಗೋಳು. ಪದೇ ಪದೇ ಅದೇ ಪ್ರಸ್ತಾಪ. ಛೇ! ಹೀಗಾಗಬಾರದಿತ್ತು. ಹಳ್ಳಿಗೇ ಬೇಕಾದವರು. ಇದು ಭ್ರಮೆಯಾಗಲಿ, ಕನಸಾಗಲಿ ಎಂಬುದೊಂದೇ ಮಾನಸಾಳ ಮೊರೆ.
* * * *
ಹದಿನಾರಂಕಣದ ಮನೆಯ ಹಿಂದೆ-ಮುಂದೆ ವಿಶಾಲವಾದ ಅಂಗಳ. ಬೇಸಿಗೆಯಲ್ಲಿ ಅಡಿಕೆ ಒಣಗಿಸುವ ಚಪ್ಪರಕ್ಕೆ ಅನುಕೂಲವಾಗುವಂತೆ ಕಲ್ಲುಕಂಬಗಳು, ತುಸು ದೂರದಲ್ಲೇ ತೋಟ ಗದ್ದೆಗಳು. ನಿಜ ಹೇಳಬೇಕೆಂದರೆ ಮಾನಸ ಇದುವರೆಗೂ ಕೃಷಿಯ ವಿಷಯದಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡವಳೇ ಅಲ್ಲ. ಕೆಲಸದವರಿಗೆ ಊಟ-ತಿಂಡಿ ಮಾಡುವಾಗಲೂ ಆದಿತ್ಯರ ನೆರವಿನ ಹಸ್ತ, ಹಸುಗಳ ಮೇಲ್ವಿಚಾರಣೆಯೂ ಅವರದ್ದೇ. ಎಲ್ಲ ಏರ್ಪಾಡು ಮಾಡಿ ಕೆಲಸದವರಿಗೆಲ್ಲಾ ಹೇಳಿ ಒಂದು ರಾತ್ರಿಯ ಮಟ್ಟಿಗೆ ತುರ್ತುಕೆಲಸದ ಮೇಲೆ ಆದಿತ್ಯ ಊರಿಗೆ ಹೋದರೂ ವಿಪರೀತ ಕಷ್ಟವಾಗಿ ತಾನೊಬ್ಬಳೇ ನಿಭಾಯಿಸಲಾಗದ ಸ್ಥಿತಿ ಮಾನಸಾಳಿಗೆ.
ನಿತ್ಯ, ದಿಶಾ ಇಬ್ಬರು ಹೆಣ್ಣು ಮಕ್ಕಳೂ ಬೆಂಗಳೂರು ಸೇರಿದ ಮೇಲಂತೂ ಮನೆ ಖಾಲಿಖಾಲಿಯೆ! ಬಾಣಂತನದಲ್ಲೇ ಹಾಗೂ ಹೀಗೂ ಆರು ತಿಂಗಳು ಇದ್ದಾಗ ಮನೆಗೆ ಮತ್ತೆ ಮೊದಲಿನ ಕಳೆ. ಮಗುವಿನ ಅಳು-ಕೇಕೆ, ಜೋಜೋ ಲಾಲಿ, ಜೋಗುಳ….. ಆದಿತ್ಯ ಕೂಡ ಮಗುವಿನ ಜೊತೆ ಮಗುವಾಗಿಬಿಡುತ್ತಿದ್ದ ಕಾಲ!
ಜವಾಬ್ದಾರಿಯನ್ನೆಲ್ಲಾ ನಿಭಾಯಿಸಿ ಇದೀಗ ನಿರಾಳವಾಗುತ್ತಿದ್ದ ಕಾಲದಲ್ಲಿ ಹೀಗಾಯಿತೆಂದು ಅವರಿವರು ಮಾತನಾಡಿಕೊಂಡರೂ, ಆದಿತ್ಯ ಮಾತ್ರ ಯಾವಾಗಲೂ ನಿರಾಳವಾಗಿಯೇ ಇರುತ್ತಿದ್ದುದು, ಜೀವನದ ಪ್ರತಿಯೊಂದು ಕ್ಷಣವನ್ನೂ ಆನಂದದಿಂದ ಅನುಭವಿಸುತ್ತಿದ್ದುದು. ಅಂತ್ಯವೂ ಹಾಗೆಯೇ. ಸಾಯುತ್ತೇನೆಂಬ ಸುಳಿವಿಲ್ಲದೆ, ಅರ್ಥೈಸಿಕೊಳ್ಳುವುದರೊಳಗಾಗಿ…
ಆದಿತ್ಯ ಇಂತಹ ದುಸ್ಸಾಹಸಕ್ಕೆ ಎಳಸಿದ್ದು ಇದೇ ಮೊದಲೇನಲ್ಲ. ಹಿಂದೆಯೂ ಎರಡು ಬಾರಿ ಈಜು ಕಲಿಯಲು ಹೋಗಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದುಂಟು. ಅದು ಇತಿಮಿತಿಗಳ, ಒಳಸುಳಿಗಳ ಬಗ್ಗೆ ಅರಿವಿರುವ ತಮ್ಮದೇ ಊರಿನ ಹೊಳೆ. ಆಗಲೇ ಮಾನಸ ಪರಿಪರಿಯಾಗಿ ಹೇಳಿದ್ದಳು, “ಅವರನ್ನೇನೋ ಉಳಿಸಿದ್ರಿ, ಒಂದ್ವೇಳೆ ನಿಮ್ಗೇನಾದ್ರೂ ಹೆಚ್ಚುಕಡಮೆಯಾಗಿದ್ರೆ ನಮ್ಮ ಗತಿಯೇನು? ಸ್ವಲ್ಪ ಹಿಂದೆ-ಮುಂದೆ ಯೋಚಿಸಿ ಮಾರಾಯ್ರೆ.”
“ಒಂದು ವೇಳೆ ಹಾಗೇನಾದ್ರೂ ಆದರೂ, ಯಾರದೇ ಅನುಕಂಪ, ಹಂಗು ಇಲ್ಲದೆ ನೀನು ಬದುಕೋ ಮಾರ್ಗ ಇಲ್ಲಿದೆ, ಸಾರಿ, ತಮಾಷೆಗಂದಿದ್ದು. ನನಗೂ ನಿನ್ನ ಜತೆ ನೂರಾರು ವರ್ಷ ಹಾಯಾಗಿ ಬದುಕಬೇಕು ಅನ್ನೋ ಆಸೆ ಖಂಡಿತ ಇದೆ. ಹಾಗೇ ಆ ಬ್ರಹ್ಮ ಒಂದು ಸಲ ಬರೆದ ಮೇಲೆ ಮತ್ತೆ ಅಳಿಸೋಕ್ಕಾಗತ್ತಾ?”
“ತಲೆ ಗಟ್ಟಿ ಇದೆ ಅಂತ ಗೋಡೆಗೆ ಚಚ್ಚಿಕೊಳ್ಳಬಾರದು” ಎಂದು ಬುಸಗುಡುತ್ತಲೇ ಒಳಹೋಗಿದ್ದುಂಟು.
“ಊರಿಗೆ ಸರದಾರ, ಮಹಾತ್ಮ ಅಂತ ನೀವು ಪಟ್ಟ ತಗೊಳೋದೇನೂ ಬೇಕಾಗಿಲ್ಲ. ನನ್ಗೆ ನೀವು ಬೇಕು ಅಷ್ಟೆ” ಎಂದು ಮುನಿಸು ತೋರಿದ್ದೂ ಇದೆ.
ಖಂಡಿಸುವಂತಹ ತಪ್ಪಲ್ಲ. ಪರೋಪಕಾರಿ. ಆದರೆ ಅದರಿಂದ ಸ್ವಂತಕ್ಕೆ ಕೇಡಾಗಬಾರದಷ್ಟೆ. ಯಾವುದು ಆಗಬಾರದೆಂದು ಮಾನಸ ನಿರಂತರ ಚಿಂತಿಸುತ್ತಿದ್ದಳೋ ಅದು ಆಗಿಯೇ ಹೋಗಿತ್ತು.
* * * *
ಕೃಷಿಯ ಬಗ್ಗೆ ಅಷ್ಟೇನೂ ಗೊತ್ತಿರದ ಮಾನಸ ಒಬ್ಬಳೇ ಆ ಹಳ್ಳಿಯಲ್ಲಿ ವ್ಯವಸಾಯ ಮಾಡಿಸಿಕೊಂಡಿರುವುದು ಸಾಧ್ಯವಾ? ಬೇರೆಯವರ ಮೇಲೆಯೇ ಅವಲಂಬನೆಯಾಗಿರುವುದು ಸರಿಯೆ? ಗಂಡು ದಿಕ್ಕಿಲ್ಲ ಎಂದು ಢಾಣಾಢಂಗುರವಾಗಿರುವಾಗ ಒಂಟಿ ಹೆಂಗಸು ಬಾಳ್ವೆ ನಡೆಸುವುದು ಕ್ಷೇಮವಾ? ನೆರೆಮನೆಗೆ ಬೆಂಕಿ ಬಿದ್ದರೆ ನೀರು ಕಾಯಿಸಿಕೊಳ್ಳುವಂತಹವರಿಗೇನೂ ನಮ್ಮಲ್ಲಿ ಕೊರತೆಯಿಲ್ಲ. ಆದಿತ್ಯ ಅವರಿವರೆನ್ನದೆ ಸಹಾಯ ಮಾಡಿದ್ದಿರಬಹುದು. ಆದರೆ ಕೆಲವರ ಬಣ್ಣ ಬಯಲಾಗುವುದು ಇಂತಹ ಸಂದರ್ಭಗಳಲ್ಲೆ…
ಕಿರಿಯವಳು ದಿಶಾಗೆ ಮದುವೆಯಾಗುತ್ತಲೆ ಇಬ್ಬರೂ ತಾಯಿ-ತಂದೆಯರಿಗೆ ಅನೇಕ ಬಾರಿ ಹೇಳಿದ್ದೂ ಆಗಿತ್ತು. “ಬೆಂಗಳೂರಿಗೇ ಬಂದ್ಬಿಡಿ ಅಪ್ಪ. ಈ ಹಳ್ಳಿಯಲ್ಲೇ ನೀವು ಒದ್ದಾಡ್ತಿರೋದು ಯಾಕೆ? ನಮಗೆ ಸದಾ ಅದೇ ಯೋಚನೆ ಆಗತ್ತೆ. ಇಷ್ಟು ದಿನ ಅಂತೂ ನಮಗಾಗಿ ಕಷ್ಟಪಟ್ಟಿರಿ. ಈಗ ನಮ್ಮ ಜೊತೆಗೆ ಬಂದಿದ್ದುಬಿಡಬಹುದು. ಇಲ್ಲವಾದ್ರೆ ನಮ್ಮಿಬ್ಬರ ಮನೆಗೂ ಹತ್ತಿರ ಆಗೋ ಹಾಗೆ ನಾವೇ ಮನೆ ನೋಡ್ತೀವಿ.”
ಆದಿತ್ಯ ಮಕ್ಕಳ ಮಾತನ್ನು ಎಂದೂ ಗಂಭೀರವಾಗಿ ತೆಗೆದುಕೊಂಡಿರಲೇ ಇಲ್ಲ. ತಾತ, ಅಪ್ಪನ ಕಾಲದಿಂದ ಇದ್ದ ಮನೆ, ತೋಟ, ಅದನ್ನೊಂದಿಷ್ಟು ವಿಸ್ತರಿಸಿದ್ದು ತಾವು. ಇದನ್ನೆಲ್ಲಾ ಬಿಟ್ಟು ಬದುಕುಂಟೆ? ಬೇಕೆನಿಸಿದ್ದನ್ನು ಹೋಗಿ ನೋಡಿ ಬರುವುದಷ್ಟೇ ಚಂದ. ದೂರದ ಬೆಟ್ಟದ ಕಥೆ ಸ್ವತಃ ಅನುಭವಿಸಿ ನೋಡಬೇಕೆ? ಈಗಿನ ಕಾಲದಲ್ಲಿ ವ್ಯವಸಾಯ ಕಷ್ಟ; ಕೆಲಸದವರೇ ಸಿಗೋದಿಲ್ಲ. ಲಾಭ ತುಂಬಾ ಕಡಮೆ. ಇಂತಹ ಒಂದಿಲ್ಲೊಂದು ತೊಂದರೆ ಯಾವ ವೃತ್ತಿಯಲ್ಲೂ ಇದ್ದದ್ದೇ! ಅವನ್ನೆಲ್ಲ ಸರಿಯಾಗಿ ನಿಭಾಯಿಸುವುದರಲ್ಲೇ ನಮ್ಮ ಚಾಕಚಕ್ಯತೆ. ಹಂತಹಂತವಾಗಿ ನೆಟ್ಟಿ, ಕೊಯಿಲಿಗೆ ಮೆಷಿನ್ ಬಳಕೆಯೂ ಆಗತೊಡಗಿದೆ.
ಹೀಗೆಲ್ಲಾ ಹೇಳಿದ ಮೇಲೆ ಮಕ್ಕಳಿಗೆ, ‘ಇವರಿಗೆ ಹೇಳೋದು ಸುಮ್ಮನೆ’ ಎಂಬ ಅರಿವು ಉದಿಸಿತ್ತು. ಅಪ್ಪ ಹಳ್ಳಿಯಲ್ಲಿದ್ದರೂ ಅವರಿಗೆ ಬ್ರಹ್ಮಾಂಡ ಧೈರ್ಯ. ಅವರು ಆರಾಮವಾಗಿದ್ದಾರೆ; ಅಮ್ಮನ ಸೌಖ್ಯವೇ ಏನು, ಅವರು ಇಡೀ ಹಳ್ಳಿಯ ಸೌಖ್ಯವನ್ನೂ ಕಾಪಾಡ್ತಾರೆ ಎಂಬ ನಿಶ್ಚಿಂತ ಭಾವ. ಅಪ್ಪನಿಗೆ ಹೋಲಿಸಿದರೆ ಅಮ್ಮ ಆರೋಗ್ಯದಲ್ಲಿ ತುಸು ಸೂಕ್ಷ್ಮವೆ!
ಇದೀಗ ಇಂತಹ ಅಮ್ಮ ಒಬ್ಬರೇ ಹಳ್ಳಿಯಲ್ಲಿರುವುದು ಕ್ಷೇಮವಲ್ಲ. ಅಪ್ಪ ಬರ್ತಾರೆ ಎಂಬ ಅಮ್ಮನ ಅರ್ಥವಿಲ್ಲದ ಕಾಯುವಿಕೆ, ಆ ಭ್ರಮೆಯಿಂದ ಇನ್ನೂ ಹೊರಗೆ ಬಾರದಿರುವುದು ಇಬ್ಬರಿಗೂ ತಳಮಳ. ವಾಸ್ತವವನ್ನು ಅರಗಿಸಿಕೊಳ್ಳುತ್ತಿಲ್ಲ ಅಮ್ಮ. ಸಮುದ್ರದಲ್ಲಿ ಹೇಗೋ ಮುಳುಗಿ, ಇನ್ನೆಲ್ಲೋ ಸಿಕ್ಕು, ಸ್ಮøತಿ ಮರೆತು, ಮತ್ತೆಲ್ಲೋ ಜೀವಿಸುತ್ತ, ಮತ್ತೆ ಹೇಗೋ ಮನೆಯವರ ಭೇಟಿಯಾಗಿ, ಹೇಗೋ ನೆನಪು ಮರುಕಳಿಸಿ, ಮತ್ತೆಲ್ಲವೂ ಸುಖಾಂತವಾಗುವುದು ಸಿನೆಮಾಗಳಲ್ಲಷ್ಟೇ ಸಾಧ್ಯ! ಹಾಗೊಮ್ಮೆ ಆದರೆ ಅದಕ್ಕಿಂತ ಸಂತೋಷ ಬೇರೇನಿದ್ದೀತು. ಹಿರಿಯ ಮಗಳು ನಿತ್ಯ, ದಿಶಾಳೊಂದಿಗೆ ಇದೇ ವಿಷಯವಾಗಿ ಚರ್ಚಿಸಿದ್ದು ಅದೆಷ್ಟೋ ಬಾರಿ.
ಅದೇ ಸಮಯದಲ್ಲಾಗಲೆ ಅಮಿತ್ ತಾಯಿಯೊಂದಿಗೆ ಎರಡು ಬಾರಿ ಅಲ್ಲಿಗೆ ಬಂದದ್ದಾಗಿತ್ತು.
“ನಿಮ್ಮ ಬಾಳನ್ನು ಅತಂತ್ರ ಮಾಡಿದ್ದೀವಿ, ಪಶ್ಚಾತ್ತಾಪ ಆಗ್ತಿದೆ. ನಮ್ಮ ಜೊತೆಯಲ್ಲಿ ಬಂದ್ಬಿಡಿ” ಸುನೀತಾ ಕೇಳಿಕೊಳ್ಳುತ್ತಿರುವಾಗ ಅಮಿತ್ಗೆ ಮಾನಸಳನ್ನು ದೃಷ್ಟಿಸಲಾಗಿರಲಿಲ್ಲ. ಅಂದಿನಿಂದ ಅವನಿಗೆ ಸ್ಮಾರ್ಟ್ಫೋನ್ ಬಗ್ಗೆಯೇ ದ್ವೇಷ. ಅವರು ತಂದ ಹಣ್ಣು, ತಿಂಡಿ, ಏನನ್ನೂ ಮುಟ್ಟಲಿಲ್ಲ ಮಾನಸ.
ಅವರೇನು ನುಡಿಯದಿದ್ದರೂ ಒಳಗೊಳಗೆ ದಹಿಸುತ್ತಿರುವ ಅಪರಾಧೀ ಪ್ರಜ್ಞೆಯಿಂದ ಹೊರಬರಲಾರದ ಬೇಗುದಿ, ಆ ಕೊರಗಲ್ಲೇ ಮಗ ಏನಾದರೂ ಮಾಡಿಕೊಂಡುಬಿಟ್ಟರೆ ಎನ್ನುವ ಭೀತಿಯಲ್ಲಿ ಹೈರಾಣಾಗಿ ಹೋದ ಸುನೀತ. ಹೌದು, ಅದು ಅವನು ಮಾತನಾಡುವ ಧಾಟಿಯಲ್ಲೇ ವ್ಯಕ್ತವಾಗುತ್ತಿತ್ತಲ್ಲ. “ಅವರು ಯಾಕಾದ್ರೂ ಬಂದು ನನ್ನನ್ನು ಉಳಿಸಿದ್ರೋ….ಛೇ! ನಾನೇನು ಮಾಡಲಿ, ನಾನು ಕೊಲೆಗಾರ.” ಸದಾ ಕಣ್ಮುಂದೆ ಅದೇ ದೃಶ್ಯ. ಖಡ್ಗದಿಂದ ಕೊಚ್ಚಿಹಾಕದಿದ್ದರೂ ಅದೇ ಪರಿಣಾಮ. ಕೊಲೆ ಕೊಲೆಯೇ. ಹುಡುಗಾಟದ ಅತಿರೇಕ. ತಂದೆಯಿಲ್ಲದ ತಾನು ಇದ್ದ ಅಮ್ಮನ ಬಗ್ಗೆಯೂ ಯೋಚಿಸದ ಬೇಜವಾಬ್ದಾರಿ.
ಸುನೀತಾರ ದೈನ್ಯದ ವಿನಂತಿಯೋ, ತಿರಸ್ಕಾರದ ನೋಟಕ್ಕೂ ಬೇಸರಿಸದೆ ಕೇಳುವ ಪರಿಣಾಮವೋ, ಅಮಿತ್ನ ಪಶ್ಚಾತ್ತಾಪದ ಮುಖಭಾವವೋ, ಒಟ್ಟಾರೆ ಮಾನಸ, ‘ಅವರೇನೂ ಸಹಾಯಕ್ಕೇಂತ ಕರೆಯಲಿಲ್ಲ ಆದಿತ್ಯರನ್ನು. ಇವರಾಗಿಯೇ ಹೋಗಿದ್ದು ಉಳಿಸೋಕೆ. ಅದರಲ್ಲಿ ಅವನದೇನು ತಪ್ಪು?’ ಎಂಬ ಮನಃಸ್ಥಿತಿಗೆ ನಿಧಾನವಾಗಿ ಬರುವಂತಾಗಿತ್ತು.
ಗದ್ದೆಯಲ್ಲಿ ಕಾಳು ಉದುರುತ್ತಿದೆಯೆಂದು ಯಾರೋ ಕೊಯಿಲು ಮಾಡಿಸಿದ್ದರು. ಅಡಿಕೆ ಕೊಯಿಲು ಮಾಡಿಸಿದ್ದು ಮತ್ತೊಬ್ಬರು. ಈ ಅನುಕಂಪ, ಸಹಾನುಭೂತಿ ಇಲ್ಲಿರುವವರೆಗೂ. ಹಾಗಾದರೆ ಇದರಿಂದ ಪಾರಾಗುವುದು ಹೇಗೆ? ಮಕ್ಕಳ ಮಾತಿನಂತೆ ನಡೆಯುವುದೇ ಸರಿಯೆ? ತೀರದ ದ್ವಂದ್ವ ಮಾನಸಳ ಮನಸ್ಸಿನಲ್ಲಿ. ರಾತ್ರಿಯಿಡೀ ಹೊರಳಾಟ, ತಪ್ಪದ ಬೇಗುದಿ.
* * * *
ಇತ್ತೀಚಿಗೆ ಅಕ್ಕ-ತಂಗಿಯರಿಬ್ಬರಿಗೂ ಹೊಸದೊಂದು ಚಿಂತೆ ಕಾಡತೊಡಗಿತ್ತು. ಅಮಿತ್ ಹಾಗೂ ಅವರಮ್ಮ ಹೇಗೋ ಅಮ್ಮನನ್ನು ಮರಳು ಮಾಡುತ್ತಿದ್ದಾರೆಯೆ? ಅಪ್ಪನನ್ನು ಸಾವಿಗೆ ದೂಡಿದವರು ಮತ್ತೆ ಮತ್ತೆ ಮನೆಗೆ ಎಡತಾಕುತ್ತಿರುವುದಾದರೂ ಏತಕ್ಕೆ? ಮಗನೆಂದು ಭಾವಿಸಿ ತಮ್ಮಲ್ಲಿರುವಂತೆ ಕೇಳಿಕೊಳ್ಳುತ್ತಿರುವುದು, ಬರಿಯ ಪಾಪಪ್ರಜ್ಞೆಯಿಂದಷ್ಟೆ ಎಂದು ಉದಾಸೀನ ತೋರುವುದು ಸರಿಯಲ್ಲವೆನಿಸುತ್ತಿದೆ. ಇಬ್ಬರೇ ಹೆಣ್ಣುಮಕ್ಕಳಿರುವುದು ಗೊತ್ತಿರುವುದರಿಂದ ಏನೋ ಪಿತೂರಿ ಮಾಡುತ್ತಿದ್ದಾರೆಯೆ? ‘ವಿಧಿ ಅಲ್ಲಿ ಅವರಿಗೆ ಬರೆದಿರುವಾಗ ಪಾಪದ ಹುಡುಗನನ್ನು ಯಾಕೆ ದ್ವೇಷಿಸಬೇಕು?’ ಎಂಬ ಪರಿವರ್ತನೆ ಕಂಡಿರುವ ಅಮ್ಮ ಅವನಲ್ಲಿ ಮಗನ ಮಮತೆಯನ್ನು ತೋರತೊಡಗಿದ್ದಾಳೆಯೆ? ಕೊನೆಗೆ ಆಸ್ತಿಯ ವಿಚಾರದ ವರೆಗೂ ಹೋದೀತೆ; ಇದು ಈ ಕಾಲದಲ್ಲಿ ಯಾರನ್ನು ನಂಬುವುದು? ಹೇಗಿದ್ದರೂ ಈವತ್ತಲ್ಲ ನಾಳೆಯಾದರೂ ಆ ಜಮೀನು, ಮನೆಯ ವ್ಯವಹಾರವೆಲ್ಲಾ ನಮಗೇ ಸೇರಬೇಕು. ಆದಷ್ಟು ಬೇಗ ಎಲ್ಲವೂ ಅಮ್ಮನ ಹೆಸರಿಗೆ ವರ್ಗಾವಣೆಯಾದರೆ ಮತ್ತೆ ಮಾರುವುದು ಸುಲಭ. ಆಮೇಲೆ ಹಣವನ್ನು ಬ್ಯಾಂಕಿನಲ್ಲಿಟ್ಟು ನಮ್ಮಿಬ್ಬರ ಮನೆಗಳಲ್ಲೂ ಇರಬಹುದು.
“ನಿಮ್ಮ ಮನೆಯಲ್ಲಿ ಅತ್ತೆಯ ಪಿರಿಪಿರಿಯಾದ್ರೆ ನಮ್ಮ ಮನೆಯಲ್ಲೇ ಇರಲಿ ಬಿಡು. ಪ್ರಿಯಾನ್ನ ಬೇಬಿಕೇರ್ಗೆ ಬಿಡೋದಾದ್ರೂ ತಪ್ಪುತ್ತೆ. ಅಮ್ಮನೂ ಎಂಗೇಜ್ ಆಗಿರ್ತಾಳೆ.”
ದಿಶಾಳ ಸಲಹೆ ಹೀಗಾದರೆ, “ಈ ದುಃಖದಲ್ಲಿ ಅಮ್ಮ ಆ ಮಗು ಹತ್ತಿರ ಏಗೋಕಾಗತ್ತಾ? ಅತ್ತೆ ಗೊಣಗಾಡಿದ್ರೆ ಮನು ಹತ್ತಿರ ಒಂದು ಮಾತು ಹೇಳಿಸಿದರೆ ಆಯ್ತು. ಅಮ್ಮನ ಆಸ್ತಿ ವಿಷಯ ನಮ್ಮತ್ತೆಗೆ ಗೊತ್ತೇ ಇದೆಯಲ್ಲ ಹೇಗೂ. ನೋಡೋಣ, ಮೊದಲು ಅಮ್ಮ ಇಲ್ಲಿಗೆ ಬರಲಿ. ಯಾವುದೂ ಬೇಡ ಅಂದ್ರೆ ಹತ್ತಿರದಲ್ಲೇ ಒಂದು ಸಣ್ಣ ಮನೆ ನೋಡಿ ಕೊಡೋಣ” ನಿತ್ಯಾಳದು ತೀರ್ಮಾನದ ದನಿ.
* * * *
ರಂಗಿಯೊಂದಿಗೆ ಬಂದ ಜಲಜತ್ತೆಯನ್ನು ಒಳಗೆ ಕರೆದು ಕುಳ್ಳಿರಿಸಿದಳು ಮಾನಸ. ಅದೇ ಜೀವಕಳೆ ಕುಂದಿದ ಮುಖ, ಕಾಂತಿಹೀನ ಕಣ್ಣುಗಳು. “ಗಂಟು-ಮೂಟೆ ಕಟ್ತೀಯ ಅಂತ ಕೇಳ್ದೆ, ಹೌದೆ?” ಜಲಜತ್ತೆಯ ಮಾತಿಗೆ ಮೌನವಾಗಿ ತಲೆಯಲುಗಿಸಿದ್ದಳು.
“ಅಂತೂ ನಿನ್ನ ಮಕ್ಕಳಿಗೆ ತವರಿಲ್ಲದಂತೆ ಮಾಡ್ತ್ತಿದ್ದೀಯಾ. ಅಂತೂ ನಿನ್ನ ಕೈಯಲ್ಲಿ ಏನೂ ಆಗೋಲ್ಲ ಅಂತ ಇಷ್ಟು ಸುಲಭವಾಗಿ ಒಪ್ಪಿಕೊಂಡುಬಿಟ್ಟೀಯಲ್ಲೆ. ಪಾಪ, ಗಂಡ ಅಷ್ಟು ಮಾಡಿಟ್ಟರೂ, ಪರಾಧೀನತೆಯೇ ನಿನಗೆ ಇಷ್ಟವಾಗಿರೋ ಹಾಗಿದೆ!” ಮಾನಸ ತಲೆಎತ್ತಿ ನಿಟ್ಟಿಸಿದ್ದಳು ಜಲಜತ್ತೆಯನ್ನು. ಅವರು ನೋಟಕ್ಕೆ ನೋಟ ಕೀಲಿಸಿದ್ದಾರೆ. ಗಂಟಿಕ್ಕಿದ ಕಾಠಿಣ್ಯದ ಮುಖಭಾವ.
ಮಾತು ಹೊರಡದೆ ಅಸಹಾಯಕ ದೃಷ್ಟಿ ಹರಿಸಿ, ಇನ್ನೇನು ಮಾಡೋಕಾಗತ್ತೆ, ಹುಟ್ಟಿದ ಮಕ್ಕಳಿಗಿಂತ ಇನ್ನು ಯಾರು ಹತ್ತಿರ ಆದಾರು? ಎಂಬ ಪ್ರಶ್ನೆ ಹೊರಬರದೆ ಚಡಪಡಿಸುತ್ತಿರುವಾಗ ದಳದಳನೆ ಸುರಿವ ಕಣ್ಣೀರು.
“ಇನ್ನೂ ನಿನ್ನ ಅಳು ಮುಗಿದಿಲ್ಲ. ಅತ್ತುಬಿಡು. ಅಲ್ಲಿ ಹೋದಮೇಲೆ ನಿನ್ನ ಅಳು ನೋಡೋಕಾಗೊದಿಲ್ಲವಲ್ಲ.” ಮಕ್ಕಳಿದ್ದೂ ಇಂತಹ ದುಃಖದಲ್ಲಿ ಒಬ್ಬಳೇ ಇರುವ ಕಷ್ಟ ಇವರಿಗೇಕೆ ಅರ್ಥವಾಗದು? ಇವರಿಗೂ ಮಕ್ಕಳಿದ್ದಿದ್ದರೆ ಹೀಗಿರಲು ಸಾಧ್ಯವಾಗುತ್ತಿತ್ತೆ? ಇವರ ಗಟ್ಟಿತನ, ಧೈರ್ಯ ತನಗೆಲ್ಲಿ ಬಂದೀತು! ಒಬ್ಬರಿದ್ದಂತೆ ಒಬ್ಬರಿರಲಾಗುತ್ತದೆಯೆ?
“ಈ ಹಳ್ಳಿ ಬಿಟ್ಟು ಓಗ್ತೀರಂತೆ, ನಿಜವಾ ಅಮ್ಮಾವ್ರೆ? ಕುಡುಕ ಗಂಡನ್ನ ಕಟ್ಕಂಡಿರೋ ನನ್ನಂಥ ಪರದೇಸಿನೇ ಹಸುಗೂಸುಗಳನ್ನು ಕಟ್ಕಂಡು ಬಾಳ್ವೆ ಮಾಡ್ತಿದ್ದೀನಿ. ನಿಮ್ಗೆ ಅಯ್ಯಾರು ಇಂತಾ ಚೆನ್ನಾಗಿರೋ ಭೂಮಿ, ಕಾಣಿ ಮಾಡಿಟ್ಟವ್ರಲ್ಲ ಅಮ್ಮಾವ್ರೆ. ಒಂದು ದಪ ಕೊಟ್ಟ ಮ್ಯಾಕೆ ಬೇಕು ಅಂದಾಗ ಸಿಕ್ಕಾತಾ?” ಕಕ್ಕುಲತೆಯಿಂದ ಕೇಳಿದ ರಂಗಿಯ ಪ್ರಶ್ನೆಗೆ ಉತ್ತರ ಅಷ್ಟು ಸುಲಭವೆ?
“ಕಾಫಿ ತರ್ತೀನಿ” ಎಂದು ಒಳಹೋದರೆ, “ಕೊಟ್ಬಿಡು. ಇನ್ನು ನಿನ್ನ ಕೈಯ ಕಾಫಿ ಯಾವಾಗಲೊ” ಎಂದು ನುಡಿದ ಜಲಜತ್ತೆಯ ಮಾತು ಕೊನೆಯ ಎಚ್ಚರಿಕೆಯ ಗಂಟೆಯಾಗಿ ಮಾನಸಾಳ ಕಿವಿಗೆ ಬಡಿದಿತ್ತು.
* * * *
ಪ್ರತಿದಿನವೂ ಒಂಟಿಯಾಗಿ ಮಲಗಲು ಹೆದರಿಕೆಯೆಂದು ರಾತ್ರಿ ಮಕ್ಕಳನ್ನು ಕಳುಹಿಸುವ ಆ ಮನೆ-ಈ ಮನೆಯವರು. ಬೇಡವೆಂದು ಗಟ್ಟಿಯಾಗಿ ಹೇಳಲೂ ಅಂಜಿಕೆ. ಎಷ್ಟರವರೆಗೆ ಈ ಅನುಕಂಪ. ಭಯದಲ್ಲಿ ರಾತ್ರಿ ನಿದ್ದೆ ಬಾರದೆಂಬ ಕಾರಣ. ಎಷ್ಟು ದಿನ ನಿದ್ದೆ ಬಾರದಿದ್ದೀತು? ಒಂದು ದಿನ ಕಾಣದೂರಿಗೆ ಒಬ್ಬಳೇ ಹೋಗಬೇಕಲ್ಲ. ಭಯವೆಂದರೆ ಬಿಟ್ಟೀತೆ ಸಾವು. ಈಗೀಗ ಅದೇ ಪ್ರಿಯವೆನಿಸುತ್ತಿದೆ. ಇಲ್ಲಿಯ ಎಲ್ಲ ಗೋಜಲುಗಳಿಗೆ ಅದೇ ಅಂತ್ಯವಿರಬಹುದು. ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲವಲ್ಲ, ಇದೀಗ ವಾಸ್ತವವನ್ನು ಒಪ್ಪಿಕೊಂಡು ಬಾಳಲೇಬೇಕು. ಇಲ್ಲಿಯ ನಂಟು ಕಡಿದುಕೊಂಡುಹೋದ ಮೇಲೆ, ಅಲ್ಲಿ ಸರಿಯಾಗದಿದ್ದರೆ ಮತ್ತಿಲ್ಲಿಗೆ ಬರುವಂತಿದೆಯೆ? ಆದಿತ್ಯನೊಂದಿಗೆ ಸಂಸಾರ ಮಾಡಿದ ಮನೆ; ಸುಖ-ನಲಿವು ಕಂಡ ಮನೆ. ಆದಿತ್ಯ ಇಲ್ಲಿಯೇ, ನನ್ನೊಡನೆಯೇ ಇದ್ದಾರೆಂಬ ಭಾವನೆಯೇ ಗಟ್ಟಿಯಾಗಬೇಕು!
ವ್ಯವಸಾಯ ಮಾಡಿಸುವ ಮನಸ್ಸಿದ್ದರೆ, ಛಲವಿದ್ದರೆ ಅವರಿವರ ನೆರವು, ಸಲಹೆ ಕೇಳಿದರಾಯಿತು; ಜಲಜತ್ತೆಯ ವ್ಯಂಗ್ಯ ಬೀರಿದ ಪರಿಣಾಮವಿದು.
ಹೆಣ್ಣುಮಕ್ಕಳಿಗೆ ತವರಿಲ್ಲದಂತಾಗುವುದು ಬೇಡ. ಹುಟ್ಟಿ ಬೆಳೆದ ಮನೆ. ಅಲ್ಲಿ ಹೆಣ್ಣುಮಕ್ಕಳ ಮನೆಯಲ್ಲಿ ಯಾರೇ ಬಂದರೂ, ತಲೆತಗ್ಗಿಸಿಕೊಂಡು, ನಡೆದ ಕಥೆಯನ್ನೆಲ್ಲಾ ತಿಳಿಸುತ್ತಾ… ಅನುದಿನವೂ ನೆನೆಗುದಿ, ಮಕ್ಕಳ ಸಮಜಾಯಿಷಿ, ಸಮರ್ಥನೆ, ಅತ್ತೆ ಮಾವಂದಿರ, ಅಳಿಯಂದಿರ ಮನಸ್ಸು ಹೇಗೋ? ಅವರಿಗೆಲ್ಲಾ ಅನಪೇಕ್ಷಿತ ಅತಿಥಿ. ಎಂದಿಗೂ ಪರಕೀಯಳೆ. ಅಲ್ಲಿಯೇ ಬೇರೆ ಇರುವುದೆಂದರೆ ಆಗಲೂ ಬೆಂಬಿಡದ ಒಂಟಿತನ. ಗಂಡನ ಮನೆಯ ಆಸ್ತಿಯನ್ನು ಮಾರಿದ ಅಪರಾಧೀ ಭಾವ.
ನಗರದ ಯಾಂತ್ರಿಕ ಬದುಕು ಬೇಸರವಾದಾಗ ಆಗಾಗ ಹಳ್ಳಿಯ ಬಾಲ್ಯದ ಸವಿ ಹಿತವೆನಿಸದಿದ್ದೀತೆ ಮಕ್ಕಳಿಗೆ? ಹಟ್ಟಿಯ ಹಸು-ಕರುಗಳ ಮೈದಡವಿ ಸಂತಸ ಪಡುವ ಭಾಗ್ಯ ಮೊಮ್ಮಕ್ಕಳಿಗೆ ಬೇಡವೆ? ಹಲಸು-ಮಾವುಗಳನ್ನು ಧಂಡಿಯಾಗಿ ಸವಿಯಬೇಡವೆ?
ಅರ್ಧ ಎಕರೆ ಬರಡುಭೂಮಿಯನ್ನೇ ಹಸನು ಮಾಡಿಕೊಂಡ ಜಲಜತ್ತೆ, ರಟ್ಟೆಯ ಕಸುವಿನಲ್ಲಿ ನಂಬಿಕೆ ಇಟ್ಟವರು. ಅವರಿವರ ಮನೆಗೆ ಕಾವಲಾಗಿ, ಹಪ್ಪಳ-ಸಂಡಿಗೆಯಂತೆ ಶರೀರವನ್ನೂ ಒಣಗಿಸಿಕೊಂಡು, ಅವರ ಅಂತರಂಗದಲ್ಲೂ ಹುದುಗಿಟ್ಟ ಜ್ವಾಲಾಮುಖಿಯಿಲ್ಲವೆ? ಅವರ ಜಾಡಿನಲ್ಲಿ ನಡೆವ ಪ್ರಯತ್ನ. ಜಲಜತ್ತೆ ನೀವೇ ನನಗೆ ಆದರ್ಶ. ಬ್ರೋಕರ್ ರಾಮಯ್ಯನವರಿಗೆ ನಿರ್ಧಾರ ತಿಳಿಸಲು ಕೈಗೆ ಫೋನ್ ತೆಗೆದುಕೊಂಡ ಮಾನಸಾಳ ಕಂಗಳಲ್ಲಿ ಇದೀಗ ಆತ್ಮವಿಶ್ವಾಸದ ಧೈರ್ಯ ಮಿನುಗುತ್ತಿತ್ತು.