ಇತ್ತೀಚೆಗೆ ಸ್ನೇಹಿತರೊಬ್ಬರು ತಮ್ಮ ವಾಟ್ಸ್ಆಪ್ ಸ್ಟೇಟಸ್ಸಿನಲ್ಲಿ ಚಿತ್ರವೊಂದನ್ನು ಹಾಕಿಕೊಂಡಿದ್ದರು. ನಿದ್ರಿಸುತ್ತಿರುವ ಹುಲಿ, ಮತ್ತು ತನ್ನ ಪಾಡಿಗೆ ನಡೆದು ಹೋಗುವ ಬದಲು ಆ ಹುಲಿಯನ್ನು ಹೊಡೆದು ಎಬ್ಬಿಸುತ್ತಿರುವ ಮನುಷ್ಯ. ಅದಕ್ಕೆ ಅವರು ಕೊಟ್ಟಿದ್ದ ಶೀರ್ಷಿಕೆ, ‘ನಾನು ಸಮಸ್ಯೆಗಳನ್ನು ಮೈಮೇಲೆ ತಂದುಕೊಳ್ಳುವ ರೀತಿ’ ಎಂಬುದಾಗಿ. ಎಲ್ಲರ ಬದುಕಿನ ಕಥೆಯೂ ಸರಿಸುಮಾರು ಹಾಗೆಯೇ! ಬದುಕಿನ ಹಳಿಯಲ್ಲಿ ನಾವು ನಮ್ಮ ಪಾಡಿಗೆ ಸಾಗಿ ಹೋಗುತ್ತಿದ್ದರೆ ಏನೂ ತೊಂದರೆಯಿಲ್ಲ. ಆದರೆ ಒಂದೊಮ್ಮೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕೆ ಶುರು ಮಾಡಿದೆವೆಂದಾದರೆ ಅವುಗಳಿಂದ ಬಿಡುಗಡೆ ಸುಲಭಸಾಧ್ಯವಲ್ಲ.
ಇಂದಿನ ಯುವಜನಾಂಗದ ವೈವಾಹಿಕ ಸಮಸ್ಯೆಗಳನ್ನು ನೋಡಿದರೆ ಜಗಳ ಮಾಡಬೇಕೆಂದೇ ಅಥವಾ ವಿಚ್ಛೇದನ ಪಡೆಯಬೇಕೆಂದೇ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಂಡಂತೆ ಇರುತ್ತಾರೆ. ಕೆಲವರ ಜೀವನದ ಕಥೆಗಳನ್ನು ಕೇಳಿದರೆ ನಿಜಕ್ಕೂ ನಗಬೇಕೊ ಅಳಬೇಕೊ ಎಂಬುದೇ ಅರ್ಥವಾಗುವುದಿಲ್ಲ. ತನ್ನ ಸಂಗಾತಿಯಾದವನು ತನಗಿಷ್ಟದ ತುಂಬುತೋಳಿನ ಶರ್ಟ್ ತೊಡುವುದರ ಬದಲಾಗಿ ಯಾವಾಗಲೂ ಅವನಿಷ್ಟದಂತೆ ಟಿ-ಶರ್ಟ್ ಧರಿಸುತ್ತಾನೆ ಎಂಬುದು ಇಪ್ಪತ್ತನಾಲ್ಕರ ಹರೆಯದ ವಿವಾಹಿತೆ ವಿಚ್ಛೇದನ ಬಯಸಿದ್ದಕ್ಕೆ ಕಾರಣ. ಮನೆಯಲ್ಲಿರುವ ಸ್ನಾನದ ಮನೆ, ಶೌಚಾಲಯಗಳನ್ನು ಎಲ್ಲರೂ ಬಳಸುತ್ತಾರೆ, ತನಗದು ಇಷ್ಟವಿಲ್ಲ, ಬೇರೆಯದೇ ಬೇಕು ಎಂಬುದು ಇನ್ನೊಬ್ಬಳು ಹುಡುಗಿಯ ಕಾರಣ.
ತಮ್ಮ ಮಕ್ಕಳು ತಾವು ಪಟ್ಟಂತಹ ಕಷ್ಟಗಳನ್ನು ಪಡಬಾರದು, ಅವರಿಗೆ ಬೇಕುಬೇಕಾದ ಸೌಕರ್ಯಗಳನ್ನು ತಮಗೆಷ್ಟು ಕಷ್ಟವಾದರೂ ಸರಿ ಒದಗಿಸಿಕೊಡುತ್ತೇವೆ ಎಂಬುದು ಅನೇಕ ತಾಯ್ತಂದೆಯರ ಅಂಬೋಣ. ಆದರೆ ಹಾಗೆ ಬೆಳೆಸಿದ ರೀತಿಯೇ ಮುಂದೆ ಬದುಕಿನಲ್ಲಿ ಅವರು ಹೊಂದಾಣಿಕೆ ಮಾಡಿಕೊಳ್ಳದಂತೆ ತಡೆಯುತ್ತದೆ ಎಂಬುದು ವಾಸ್ತವವಲ್ಲವೆ? ಕೇವಲ ತನ್ನ ಮಾತೇ ನಡೆಯಬೇಕು, ತನ್ನ ಇಷ್ಟದಂತೆಯೇ ಮನೆಯಿರಬೇಕು ಎಂಬ ಹಟ ಯಾರಲ್ಲಿ ಇದ್ದರೂ ಅಲ್ಲಿ ಅಸಮಾಧಾನವೇ ಸುಳಿದಾಡಲಾರಂಭಿಸುತ್ತದೆ. ಇದು ಸಾಲದ್ದಕ್ಕೆ ಪರಸ್ಪರರಿಂದ ಕೊನೆಯಿರದ ನಿರೀಕ್ಷೆಗಳು ಈಡೇರದೆ ಉಳಿಯುವವು; ಇದು ಭಾವನೆಗಳನ್ನು ಮಸುಕಾಗಿಸುತ್ತದೆ. ಮಕ್ಕಳ ಮುಖ ನೋಡಿಕೊಂಡು ಹೊಂದಾಣಿಕೆ ಮಾಡಿಕೊಂಡು ಬದುಕುವವರಿರಬಹುದು. ಆದರೆ ಇರುವ ಒಂದು ಜೀವನ ಅಷ್ಟರಲ್ಲಿಯೇ ಮುಗಿದುಬಿಡುವುದಿಲ್ಲವೆ? ಹಾಗಿದ್ದರೆ ನಿಜಕ್ಕೂ ನಮ್ಮ ಮನಸ್ಸು ಇರಬೇಕಾದ ರೀತಿಯೇನು ಎಂಬುದಕ್ಕೆ ಖಲೀಲ್ ಗಿಬ್ರಾನ್ನ ಮದುವೆಯ ಕುರಿತಾದ ಪದ್ಯ ಮಾದರಿ.
ಖಲೀಲ್ ಗಿಬ್ರಾನ್ ಮದುವೆಯ ಕುರಿತಾಗಿ ಬರೆದ ಕವನದಲ್ಲಿ ಬದುಕಿಗೆ ಬೇಕಾದ ಸಂದೇಶವನ್ನು ಬಹಳ ಸ್ಪಷ್ಟವಾಗಿ ನೀಡುತ್ತಾನೆ. ಹಿಂದೆ ಅನೇಕ ಸಂದರ್ಭಗಳಲ್ಲಿ ಈ ಪದ್ಯವನ್ನು ಪಾಶ್ಚಾತ್ಯರ ಮದುವೆಗಳಲ್ಲಿ ಓದಲಾಗುತ್ತಿತ್ತು. ಹಾಗೆಂದು ಎಲ್ಲರೂ ಅವನ ಪದ್ಯವನ್ನು ಅರ್ಥ ಮಾಡಿಕೊಂಡರೆಂದರಲ್ಲ. ಆ ಪದ್ಯವನ್ನು ಓದುವುದೇ ಅಪಶಕುನ ಎಂದು ಭಾವಿಸಿದವರೂ ಇದ್ದರಂತೆ. ಅವನ ಪದಗಳು ತೀರಾ ಸಹಜವಾಗಿ ಮದುವೆಯ ನಂತರದ ಬಾಂಧವ್ಯದಲ್ಲಿ ಮನಸ್ಸುಗಳು ಇಂತಿರಲಿ ಎಂಬ ಸೂಚನೆ ನೀಡುತ್ತವೆ. ಮದುವೆಯೆನ್ನುವುದು ಸ್ವರ್ಗದಲ್ಲಿಯೇ ನಡೆದಿರುತ್ತದೆ ಎಂಬ ಮಾತನ್ನು ಪುಷ್ಟೀಕರಿಸುವ ಹಾಗೆ ಜೊತೆಯಾಗಿ ಹುಟ್ಟಿದವರು ನೀವು ಜೊತೆಯಾಗಿಯೇ ಬಾಳಬೇಕು, ಸಾವಿನ ರೆಕ್ಕೆಗಳು ಬೀಸಿ ಬದುಕನ್ನು ಅಲ್ಲಾಡಿಸುವವರೆಗೂ – ಎನ್ನುವ ಕವಿ, ಆಯುಸ್ಸಿರುವವರೆಗೂ ಸಹಬಾಳ್ವೆಯೆಂಬುದು ಹೇಗಿರಬೇಕು ಎಂಬುದನ್ನು ಹಾರೈಸುತ್ತಾನೆ. ನಮ್ಮ ಬದುಕು ಅದೆಷ್ಟು ಸರಾಗವಾಗಿ ನಡೆಯಬೇಕೆಂದರೆ ದೇವರ ನೆನಪಿನಂಗಳದಲ್ಲಿ ಅದು ಅಚ್ಚೊತ್ತಿ ನಿಲ್ಲುವಂತಿರಬೇಕು. ತಾನು ನಿರ್ದೇಶಿಸಿದಂತೆ ನಟಿಸುವ ಕಲಾವಿದನನ್ನು ನಿರ್ದೇಶಕ ನಿಜಕ್ಕೂ ಮೆಚ್ಚಿಕೊಳ್ಳುತ್ತಾನಲ್ಲ!
ಆದರೆ ಸಹಬಾಳ್ವೆಯೆನ್ನುವುದು ಅಷ್ಟು ಸುಲಭವಲ್ಲ. ಮದುವೆಯೆಂದಾಕ್ಷಣ ನೂರೆಂಟು ಕನಸುಗಳು ಟಿಸಿಲೊಡೆದಿರುತ್ತವೆ. ಬದುಕಿನ ಪಥ ಬದಲಾಗುವ ಪರಿಗೆ ನಾವು ಬೆರಗಾಗಲೇಬೇಕು. ಹುಟ್ಟಿ ಬೆಳೆದ ಮನೆಯಿಂದ ದೂರವಿರುವ ಕಳವಳ ಹೆಣ್ಣಿಗಿದ್ದರೂ ಹೊಸ ಬದುಕೊಂದು ಅರಳಿಕೊಳ್ಳುವ ಖುಷಿಯಲ್ಲಿ ನೋವು ಮಾಸುತ್ತದೆ. ದಿನಗಳುರುಳಿದಂತೆ, ಹೊಸತು ಹಳೆಯದಾಗುತ್ತದೆ. ಅನುಭವಗಳು ನೆನಪಾಗಿ ಉಳಿಯುತ್ತವೆ. ದಂಪತಿಗಳ ನಡುವೆ ಪರಸ್ಪರ ಕಾಣಸಿಗದ ಭಿನ್ನಾಭಿಪ್ರಾಯಗಳು ಸಂಬಂಧಗಳು ಹಳತಾಗುತ್ತಾ ಬೆಳೆಯುತ್ತವೆ. ಅದಕ್ಕೆ ಗಿಬ್ರಾನ್ನ ಸುಲಭ ಪರಿಹಾರ ಇಷ್ಟೇ: ‘ಜೊತೆಯಾಗಿರುವುದೆಂದರೆ ಅಂಟಿಕೊಂಡಿರುವುದೆಂದಲ್ಲ. ಒಬ್ಬರೊಬ್ಬರ ನಡುವೆ ಸಣ್ಣ ಅವಕಾಶ ಇರಲಿ. ಹಾಗಿದ್ದಾಗ ಅಲ್ಲಿ ಸ್ವರ್ಗದ ತಂಗಾಳಿ ಸದಾ ಸುಳಿದಾಡಿಕೊಂಡಿದ್ದು ಬದುಕು ಹಿತವಾಗಿ ಸಾಗುತ್ತದೆ. ತಮ್ಮತನವನ್ನು ಬಲಿಕೊಡದೆ ಕಾಯ್ದುಕೊಂಡು ಸಂಗಾತಿಯೊಂದಿಗೆ ಬಾಳಿದರಷ್ಟೇ ಬದುಕಿನ ಯಶಸ್ಸು’ ಎನ್ನುತ್ತಾನೆ ಅವನು.
‘ಒಬ್ಬರನ್ನೊಬ್ಬರು ಅಗಾಧವಾಗಿ ಪ್ರೀತಿಸಿ. ಆದರೆ ಪ್ರೀತಿಯ ‘ಒಪ್ಪಂದ’ (ಕಾಂಟ್ರ್ಯಾಕ್ಟ್) ಬೇಡ. ಒಪ್ಪಂದದ ಮೂಲಕ ಮಾಡಿಕೊಂಡದ್ದೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ವ್ಯವಹಾರವೇ ಆಗುತ್ತದೆ. ದಂಪತಿಗಳ ನಡುವೆ ಪ್ರೀತಿ ಹೇಗಿರಬೇಕೆಂದರೆ ಆತ್ಮಗಳೆಂಬ ಎರಡು ದಡಗಳ ನಡುವೆ ಚಲಿಸುತ್ತಿದ್ದು ದಡಗಳನ್ನು ತೋಯಿಸುವ ಸಾಗರದಂತಿರಬೇಕು. ಒಬ್ಬರಿನ್ನೊಬ್ಬರ ಬಟ್ಟಲುಗಳನ್ನು ತುಂಬುತ್ತಾ ಇದ್ದರೂ ಒಂದೇ ಬಟ್ಟಲಿನಿಂದ ಇಬ್ಬರೂ ಕುಡಿಯಬೇಕೆಂಬ ಒತ್ತಡವಿರಕೂಡದು. ಬ್ರೆಡ್ ಹಂಚಿಕೊಂಡು ತಿನ್ನಬಹುದು; ಆದರೆ ಒಂದೇ ತುಂಡನ್ನು ಇಬ್ಬರೂ ಕಚ್ಚಿ ತಿನ್ನುವುದು ಒಳ್ಳೆಯದಲ್ಲ.’ ಕವಿ ಎಷ್ಟು ಸರಾಗವಾಗಿ ಹೇಳುತ್ತಾನೆ! ಇದನ್ನು ಕೇವಲ ವಾಚ್ಯಾರ್ಥವಾಗಿ ನೋಡಿದರೆ ಅದರಾಳ ತಿಳಿಯದು. ಊಟೋಪಚಾರದ ವಿಷಯದಲ್ಲೂ ವೈಮನಸ್ಯಗಳು ಮೂಡುವುದು ಸಾಧ್ಯವಿದೆಯಲ್ಲ. ನಿನಗೆ ಬೇಕಾದದ್ದನ್ನು ನೀನು ತಿನ್ನು, ನನಗೆ ಇಷ್ಟವಾದದ್ದನ್ನು ನಾನು ತಿನ್ನುತ್ತೇನೆ ಎಂಬುದು ಸರಿ. ಸಾಮಾನ್ಯವಾಗಿ ಪತಿಪತ್ನಿಯರಿಬ್ಬರಿಗೂ ಒಂದೇ ತಿನಿಸು ಇಷ್ಟವಾಗಬೇಕೆಂದೇನೂ ಇಲ್ಲವಲ್ಲ. ಆದರೆ ಪರಸ್ಪರರ ಇಷ್ಟಗಳನ್ನು ಗೌರವಿಸಲು ಕಲಿತ ಮನಸ್ಸುಗಳಿಗೆ ಹೊಂದಾಣಿಕೆಯೆಂಬುದು ಕಠಿಣವಲ್ಲ. ಆದರೆ ನೀರುದೋಸೆ ಇಷ್ಟವಿರುವವನಿಗೆ ಇಡ್ಲಿ ಇಷ್ಟವಿರುವ ಪತ್ನಿ ಸಿಕ್ಕಿದರೆ ಎರಡೂ ಆಹಾರಪದಾರ್ಥಗಳನ್ನು ಅವರು ಗೌರವಿಸಬೇಕೇ ಹೊರತು, ತನಗಿಷ್ಟವಿಲ್ಲ ಎಂಬ ಕಾರಣಕ್ಕೆ ಇನ್ನೊಂದನ್ನು ಕಡೆಗಣಿಸಬಾರದು. ನಮ್ಮ ಎಷ್ಟೋ ಮನೆಗಳಲ್ಲಿ ಹೇಳುವುದು ಕೇಳುತ್ತೇವೆ – ತಮಗಿಷ್ಟವಿಲ್ಲದ್ದನ್ನು ಮನೆಯಲ್ಲಿ ಮಾಡಲೇಕೂಡದು ಎಂಬ ಅಲಿಖಿತ ನಿಯಮ. ಹಾಗಾದ ಕೂಡಲೆ ಒಂದು ಬಗೆಯ ಸ್ಪರ್ಧೆ ಮೂಡಲಾರಂಭಿಸುತ್ತದೆ. ಅದು ಆರೋಗ್ಯಕರವಂತೂ ಅಲ್ಲ!
ಜೊತೆಯಾಗಿ ಹಾಡಿ ನರ್ತಿಸಿ. ಖುಷಿ ಪಡಿ. ಆದರೆ ನಮ್ಮಷ್ಟಕ್ಕೆ ನಾವು ಏಕಾಂಗಿಯಾಗಿರುವುದೂ ಅಷ್ಟೇ ಮುಖ್ಯ ಎನ್ನುವ ಕವಿ ಉದಾಹರಿಸುವುದು ಸಂಗೀತವಾದ್ಯಗಳ ತಂತಿಯನ್ನು. ಒಂದೇ ರಾಗವನ್ನು ನುಡಿಸಬೇಕಾದರೆ ಎಲ್ಲ ತಂತಿಗಳೂ ಬೇಕಾಗುತ್ತವೆ ನಿಜ, ಆದರೆ ಅವು ಒಂದಕ್ಕೊಂದು ತಾಗಿಕೊಂಡಂತಿದ್ದರೆ ಸರಿಯಾದ ನಾದ ಹೊಮ್ಮದು. ಅವು ನಿರ್ದಿಷ್ಟ ಅಂತರದಲ್ಲಿದ್ದರೆ ಮಾತ್ರ ರಾಗಕ್ಕೆ ಸ್ವರ, ಸ್ವರಕ್ಕೆ ತಾಳ, ಸಂಗೀತ. ಏಕಾಂಗಿಯಾಗಿರುವುದೆಂದರೆ ಇಲ್ಲಿ ಒಬ್ಬಂಟಿಯಾಗಿರುವುದೆಂದಲ್ಲ. ಪರಸ್ಪರರಿಗೆ ಪೂರಕವಾಗಿದ್ದುಕೊಂಡು ಬದುಕಿನ ಸಂಗೀತವನ್ನು ಮಾಧುರ್ಯದಿಂದ ನುಡಿಸುವುದು. ಹೀಗಿರುವುದನ್ನು ಕಲಿತುಕೊಂಡರೆ ನಿರೀಕ್ಷೆಗಳ ಕಾವಿಗೆ ಬದುಕು ಕರಕಲಾಗುವುದು ಖಂಡಿತ ತಪ್ಪೀತು, ಅಲ್ಲವೆ? ಅಂದುಕೊಂಡಷ್ಟು ಸರಳ ಇದಲ್ಲ ಎಂಬುದು ನಿಜ. ಆದರೆ ಅನುಸರಿಸುವುದನ್ನು ಕಲಿತರೆ ಬದುಕು ಹಗುರಾಗದೆ? ಪತಿ-ಪತ್ನಿಯರಾದವರು ಸದಾ ಜೊತೆಯಾಗಿರಬೇಕು, ಹೇಗೆಂದರೆ ದೇಗುಲದ ಕಂಬಗಳಂತೆ. ಅವು ದೂರದೂರವೇ ಇದ್ದರೂ ಅವುಗಳ ನಡುವೆ ಹೊಂದಾಣಿಕೆಯಿರುತ್ತದೆ, ಇರಲೇಬೇಕು. ಇಡಿಯ ದೇಗುಲದ ಭಾರವನ್ನು ಹೊರಬೇಕಾದರೆ ಅವು ಸಮಾನವಾಗಿರಬೇಕಾದಂತೆ ಬದುಕಿನ ದೇಗುಲವನ್ನು ಸುಸ್ಥಿತಿಯಲ್ಲಿ ಹೊತ್ತಿರಬೇಕಾದರೆ ಪತಿ-ಪತ್ನಿಯರು ಅನ್ಯೋನ್ಯವಾಗಿರಬೇಕು ಎಂಬುದು ಕವಿಯ ಆಶಯ. ಇಬ್ಬರೂ ಒಂದೇ ಕಡೆ ನಿಂತರೆ, ಅಥವಾ ಇಬ್ಬರೂ ತೀರಾ ದೂರ ನಿಂತರೆ ಬದುಕು ಕುಸಿಯುವ ಸಾಧ್ಯತೆಯೂ ಇರುತ್ತದೆ. ಸೀ-ಸಾ ಆಟವನ್ನಿಲ್ಲಿ ನೆನಪಿಸಿಕೊಳ್ಳಬಹುದು. ಇಬ್ಬರ ನಡುವೆ ಸಮಾನ ಮನಸ್ಸು ಇದ್ದರೆ ಮಾತ್ರ ಆ ಆಟ ಹಿತವಾಗಿದ್ದೀತು, ಇಲ್ಲವಾದಲ್ಲಿ ಒಬ್ಬರು ಬಿದ್ದು ಇನ್ನೊಬ್ಬರು ದೂರಕ್ಕೆಸೆಯಲ್ಪಟ್ಟಾರು. ಜೀವನವೆನ್ನುವುದು ಸೈಕಲ್ ಸವಾರಿಯಂತೆ, ಸಮತೋಲ ತಪ್ಪದಂತಿರಬೇಕಾದರೆ ಮುಂದೆ ಸಾಗುತ್ತಿರಬೇಕು ಎಂಬುದನ್ನೇ ಗಿಬ್ರಾನ್ ಮತ್ತೆ ನೆನಪಿಸುತ್ತಾನೆ!