ಅಮೆಜಾನ್ ಮಳೆಕಾಡಿಗೆ ಬೆಂಕಿ!
ಜಗತ್ತಿನ ಶ್ವಾಸಕೋಶಕ್ಕೆ ಬೆಂಕಿ ಬಿದ್ದಿದೆ! ಹೌದು, ವಿಶ್ವದ ಅತಿ ಹೆಚ್ಚು ವಿಶಾಲವಾದ ಮಳೆಬೀಳುವ ಕಾಡು, ‘ಭೂಮಂಡಲದ ಶ್ವಾಸಕೋಶ’ ಎಂದೆಲ್ಲ ಖ್ಯಾತಿ ಪಡೆದಿರುವ ಅಮೆಜಾನ್ ಮಳೆಕಾಡು ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿರುವ ಸುದ್ದಿ ಕಳೆದ ಕೆಲವು ವಾರಗಳಿಂದ ಜಗತ್ತಿನೆಲ್ಲೆಡೆ ಚರ್ಚೆಯಾಗುತ್ತಿದೆ. ಅಮೆಜಾನ್ ಮಳೆಕಾಡು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದು ಇದೇ ಮೊದಲಲ್ಲ. ಕಳೆದ ನಾಲ್ಕೈದು ದಶಕಗಳಿಂದ ಪ್ರತಿ ಬೇಸಿಗೆಯಲ್ಲಿ ಅಮೆಜಾóನ್ ಹೊತ್ತಿ ಉರಿಯುವುದು ಸರ್ವೇಸಾಮಾನ್ಯವಾದ ಸಂಗತಿ. ಆದರೆ ಈ ಬಾರಿ ಇದರ ಪ್ರಮಾಣ ಗಣನೀಯವಾಗಿ ಏರಿದೆ, ಕಳೆದ ವರ್ಷಕ್ಕಿಂತ ಶೇ. 80ರಷ್ಟು ಹೆಚ್ಚಳವಾಗಿದೆ, ಸುಮಾರು 1700 ಚದರಮೈಲಿಗಳಷ್ಟು ಮಳೆಕಾಡು ಈ ವರ್ಷ ಬೆಂಕಿಗೆ ಆಹುತಿಯಾಗಿದೆ. ಮಾನವನು ತನ್ನ ಚಪಲಗಳನ್ನು ತೀರಿಸಿಕೊಳ್ಳಲು ಹೇಗೆ ಪ್ರಕೃತಿಯನ್ನು ಬಳಸಿಕೊಳ್ಳುತ್ತಿದ್ದಾನೆ ಎನ್ನುವುದಕ್ಕೆ ಅಮೆಜಾóನ್ ಮಳೆಕಾಡು ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ.
ಅಮೆಜಾನ್ ಮಳೆಕಾಡಿನ ಬಹುಭಾಗ (ಅಂದರೆ ಶೇ. 60ರಷ್ಟು) ಹೊಂದಿರುವ ಬ್ರೆಜಿಲ್ನಲ್ಲಿಯೇ ಈ ವರ್ಷ ಸುಮಾರು 80,000 ಪ್ರದೇಶಗಳಲ್ಲಿ ಬೆಂಕಿ ಬಿದ್ದಿದೆ. ಆದರೆ ಬೆಂಕಿ ನಿಯಂತ್ರಿಸಬೇಕಿದ್ದ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೋ ಅಮೆರಿಕ ಮೊದಲಾದ ವಿಶ್ವದ ರಾಷ್ಟ್ರಗಳ ಕಳಕಳಿಯನ್ನು ‘ಇದು ನಮ್ಮ ಆಂತರಿಕ ವಿಷಯ’ ಎಂದು ಟೀಕಿಸಿ, ‘ಬಲಾಢ್ಯ ದೇಶಗಳು ಈ ನೆಪದಲ್ಲಿ ನಮ್ಮ ದೇಶದ ಆರ್ಥಿಕ ಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿವೆ. ಬ್ರೆಜಿಲ್ನ್ನು ಒಂದು ವಸಾಹತು ಎಂಬಂತೆ ಪರಿಗಣಿಸುತ್ತಿವೆ. ಇದನ್ನು ನಾನು ಒಪ್ಪುವುದಿಲ್ಲ’ ಎಂದು ಜಾಗತಿಕ ಒತ್ತಡಕ್ಕೆ ತಿರುಗೇಟು ನೀಡಿ ಉರಿಯುತ್ತಿರುವ ಬೆಂಕಿಗೆ ಪ್ರೋತ್ಸಾಹ ನೀಡಿದರು. ಜಾಗತಿಕ ಒತ್ತಡದ ಪರಿಣಾಮವಾಗಿ ಕೊನೆಗೆ ಬ್ರೆಜಿಲ್ ಬೆಂಕಿ ನಿಯಂತ್ರಿಸುವ ಮಾತನಾಡಿದ್ದು, ಆಗಸ್ಟ್ ಎರಡನೇ ವಾರದ ನಂತರ, ಅಂದರೆ 80,000ಕ್ಕೂ ಅಧಿಕ ಬೆಂಕಿ ಪ್ರಕರಣಗಳ ನಂತರ, ಅದೂ ಷರತ್ತುಗಳೊಂದಿಗೆ!
ಬೆಂಕಿ ಪ್ರಕರಣಗಳು ಈ ವರ್ಷದ ಜನವರಿಯಿಂದಲೇ ವರದಿಯಾಗುತ್ತಿದ್ದರೂ ಬೆಂಕಿ ನಿಯಂತ್ರಣಕ್ಕೆ ಬ್ರೆಜಿಲ್ ತುರ್ತುಕ್ರಮ ಕೈಗೊಳ್ಳದೇ ಇರುವುದೇಕೆ? ವಿದೇಶಗಳ ನೆರವನ್ನೂ ಆರಂಭದಲ್ಲಿ ನಿರಾಕರಿಸಿ ಕೈಕಟ್ಟಿ ಕುಳಿತದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಲ್ಲ. ಇದರ ಹಿಂದಿರುವುದು ಬ್ರೆಜಿಲ್ನ ಆರ್ಥಿಕ ಲಾಭ ಮತ್ತು ಬೀಫ್ ರಾಜಕಾರಣ!
ಅಮೆಜಾನ್ಗೇಕೆ ಜಾಗತಿಕ ಮಹತ್ತ್ವ?
‘ಅಲ್ಲೆಲ್ಲೋ ದೂರದಲ್ಲಿರುವ ಅಮೆಜಾನ್ ಕಾಡಿಗೆ ಬೆಂಕಿ ಬಿದ್ದರೆ ನಮಗೇನು?’ – ಎಂದು ನಮ್ಮಲ್ಲಿ ಕೆಲವರಿಗೆ ಎನ್ನಿಸಬಹುದು. ಆದರೆ ಸಾಮಾನ್ಯ ಪರಿಸರಾಸಕ್ತರಿಗೂ ಅಮೆಜಾóನ್ ಎಂದರೆ ಅದು ಕೇವಲ ಒಂದಷ್ಟು ಮರಗಳಿರುವ ಕಾಡಲ್ಲ; ಜಗತ್ತಿನ ಹವಾಮಾನ ಹಾಗೂ ಜೀವಜಗತ್ತಿನ ಮೇಲೆ ದಟ್ಟ ಹಸಿರು ಹೊದಿಕೆಯ ಈ ಮಳೆಕಾಡುಗಳ ಪಾತ್ರ ಮಹತ್ತ್ವದ್ದು ಎಂಬುದು ಚೆನ್ನಾಗಿಯೇ ತಿಳಿದಿದೆ.
ದಕ್ಷಿಣ ಅಮೆರಿಕದ ಒಂಬತ್ತು ದೇಶಗಳಲ್ಲಿ – ಬ್ರೆಜಿಲ್ (60%), ಪೆರು (13%), ಬೊಲಿವಿಯಾ (8%) ಕೊಲಂಬಿಯಾ (7%), ವೆನೆಜುವೆಲಾ (6%), ಗಯಾನಾ (3%), ಸುರಿನಾಮೆ (2%), ಫ್ರೆಂಚ್ ಗಯಾನಾ ಮತ್ತು ಈಕ್ವೆಡಾರ್(1%) – ಹರಡಿರುವ ಅಮೆಜಾನ್ ಮಳೆಕಾಡು ಸುಮಾರು 55 ಲಕ್ಷ ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಭಾರತದ ಈಗಿನ ವಿಸ್ತೀರ್ಣವೇ 32 ಲಕ್ಷ ಚದರ ಕಿ.ಮೀ. ಅಂದರೆ ಭಾರತದ ವಿಸ್ತೀರ್ಣದ ಎರಡು ಪಟ್ಟಿಗಿಂತ ಸ್ವಲ್ಪ ಕಡಮೆಯಷ್ಟೆ! ಇಂದು ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡಾಗಿರುವ (ಜಗತ್ತಿನ ಶೇ. 50ರಷ್ಟು ಮಳೆಕಾಡುಗಳಿರುವ ಪ್ರದೇಶ) ಅಮೆಜಾóನ್ ಮಳೆಕಾಡಿನಲ್ಲಿಯೇ ಜಗತ್ತಿನ ಪರಿಚಿತ ಪ್ರಾಣಿಪ್ರಭೇದಗಳ ಪೈಕಿ ಶೇ. 10ರಷ್ಟು ಹಾಗೂ ಜಗತ್ತಿನ ಶೇ. 20ರಷ್ಟು ಪಕ್ಷಿಪ್ರಭೇದಗಳು ನೆಲಸಿವೆ. ಸುಮಾರು 16,000 ಪ್ರಭೇದಗಳ ಮರಗಿಡಗಳು, 2.5 ಮಿಲಿಯನ್ ಪ್ರಭೇದಗಳ ಕೀಟಗಳು, 1294 ಪ್ರಭೇದಗಳ ಹಕ್ಕಿಗಳು, 427 ಸಸ್ತನಿ ಪ್ರಭೇದಗಳು, 2200 ಪ್ರಭೇದಗಳ ಮೀನುಗಳು, 378 ಜಾತಿಯ ಉರಗಗಳು, 428 ಉಭಯಜೀವಿ ಪ್ರಭೆದಗಳ ವಾಸಸ್ಥಳ ಈ ಮಳೆಕಾಡು ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಇಲ್ಲಿ ನಾಗರಿಕಜಗತ್ತಿನ ಸಂಪರ್ಕವೇ ಇಲ್ಲದ ಸುಮಾರು 3 ಲಕ್ಷ ಮೂಲನಿವಾಸಿಗಳು (ಬುಡಕಟ್ಟು) ನೆಲಸಿದ್ದಾರೆ ಎನ್ನುತ್ತವೆ ಕೆಲವು ವರದಿಗಳು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಪ್ರಕಾರ ಸಹರಾ ಮರುಭೂಮಿಯಲ್ಲಿ ಉತ್ಪತ್ತಿಯಾಗುವ 182 ಮಿಲಿಯನ್ ಟನ್ ಧೂಳಿನಲ್ಲಿ 27.7 ಮಿಲಿಯನ್ ಟನ್ (ಸುಮಾರು 15%) ಧೂಳನ್ನು ಅಮೆಜಾನ್ ಪ್ರತಿ ವರ್ಷ ತನ್ನ ಮಡಿಲಲ್ಲಿ ಜೀರ್ಣಿಸಿಕೊಳ್ಳುತ್ತಿದೆ. ಜಗತ್ತಿನ 25% ಇಂಗಾಲವನ್ನು ಹೀರಿಕೊಳ್ಳುವ ಮೂಲಕ ವಾತಾವರಣದಲ್ಲಿ ಕಾರ್ಬನ್ ಅಂಶ ವೃದ್ಧಿಯಾಗದಂತೆ ತಡೆಯುತ್ತಿರುವ ಈ ಅಮೆಜಾóನ್ ಕಾಡುಗಳೇ ಭೂಮಿಯ ಮೇಲೆ ಲಭಿಸುವ ಶೇ. 20ರಷ್ಟು ಆಮ್ಲಜನಕಕ್ಕೆ ಆಧಾರವಾಗಿವೆ. ಇದಕ್ಕಾಗಿಯೇ ಈ ಮಳೆಕಾಡನ್ನು ‘ಭೂಮಿಯ ಶ್ವಾಸಕೋಶ’ ಎಂದು ಕರೆಯುವುದು. ಹೀಗೆ ಜೀವಜಗತ್ತಿನ ದೊಡ್ಡಣ್ಣನಂತಿರುವ ಅಮೆಜಾóನ್ ಮಳೆಕಾಡು ಹೊತ್ತಿ ಉರಿಯುತ್ತಿರುವುದನ್ನು ‘ನಮ್ಮ ಮನೆಗೆ ಬೆಂಕಿ ಬಿದ್ದಿದೆ’ ಎಂಬ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮೇಕ್ರನ್ ಹೇಳಿಕೆಗಿಂತ ಹೆಚ್ಚು ಸಮರ್ಥವಾಗಿ ಹೇಗೆ ಹೇಳಬಹುದು?
ಸರ್ಕಾರೀ ನೀತಿಗಳೇ ಕಾರಣ!
ಭೂಮಂಡಲದ ವಾತಾವರಣವನ್ನು ಬದಲಿಸುವ ಸಾಮಥ್ರ್ಯವಿರುವ ಅಮೆಜಾóನ್ ಮಳೆಕಾಡಿನಲ್ಲಿ ಕಂಡುಬರುತ್ತಿರುವ ಬೆಂಕಿ ಪ್ರಕರಣಗಳ ಹಿಂದೆ ಮಾನವನ ಕೈವಾಡವಿರುವುದು ರಹಸ್ಯವೂ ಅಲ್ಲ, ಕದ್ದುಮುಚ್ಚಿ ನಡೆಯುವ ಕೆಲಸವೂ ಅಲ್ಲ. ನಾವು ನಮ್ಮ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಹಾಗೂ ಉದ್ಯೋಗಸೃಷ್ಟಿಗಾಗಿ ಕಾಡಿಗೆ ಬೆಂಕಿ ಇಡುತ್ತಿದ್ದೇವೆ ಎಂದು ಇಲ್ಲಿಯ ಕೃಷಿಕರು ಬೆಂಕಿ ಹಚ್ಚುವ ಪ್ರಕರಣಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೀಗಾಗಿ ಇದು ಅಲ್ಲಿಯ ಸರ್ಕಾರೀ ಕೃಷಿನೀತಿಯ ಒಂದು ಭಾಗವಾಗಿಯೇ ನಡೆಯುತ್ತಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
‘ಅಮೆಜಾನ್ ಕಾಡುಗಳ ಸಂರಕ್ಷಣೆ ನಮ್ಮ ಸರ್ಕಾರದ ಮುಖ್ಯ ಆದ್ಯತೆಯಾಗಿರುವುದಿಲ್ಲ’ ಎಂಬ ಧೋರಣೆಯಿಂದಲೇ ಅಧಿಕಾರಕ್ಕೇರಿದ (2018 ಅಕ್ಟೋಬರ್) ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೊ ‘ಅಮೆಜಾóನ್ ಕಾಡುಗಳ ಮಾರಣಹೋಮಕ್ಕೆ ಅಮೆಜಾನ್ ಮಳೆಕಾಡು ಪ್ರದೇಶದಲ್ಲಿ ಕಾಳ್ಗಿಚ್ಚು ಹುಟ್ಟಿಕೊಳ್ಳುವುದಕ್ಕೆ ಆಡಳಿತ ಸರ್ಕಾರಗಳ ಪರಿಸರ ನೀತಿಗಳೇ ಕಾರಣ’ – ಎಂಬ ಸ್ವಯಂಸೇವಾ ಸಂಸ್ಥೆಗಳ ಪರಿಸರತಜ್ಞರ ವಾದವನ್ನು ಒಪ್ಪಿಕೊಳ್ಳಲು ಸುತರಾಂ ಸಿದ್ಧರಿಲ್ಲ. ಅವರ ಪ್ರಕಾರ ಇದು ಪ್ರತಿ ಬೇಸಿಗೆಯಲ್ಲಿ ಉಂಟಾಗುವ ಸಾಮಾನ್ಯ ಬೆಂಕಿಯಷ್ಟೆ. ‘ಜಾಗತಿಕ ಹಣಕಾಸು ನೆರವಿಗಾಗಿ ಈ ಸ್ವಯಂಸೇವಾ ಸಂಸ್ಥೆಗಳೇ ಬೆಂಕಿಹಾಕುತ್ತಿವೆ’ ಎಂದು ಸಾರ್ವಜನಿಕವಾಗಿ ಆಪಾದಿಸಲೂ ಜೈರ್ ಹಿಂದೆಮುಂದೆ ನೋಡಲಿಲ್ಲ. ಆದರೆ ಅವರು ಆರ್ಥಿಕ ಬೆಳವಣಿಗೆಗೆ ಉತ್ತೇಜನೆಯ ನೆಪದಲ್ಲಿ ಅಮೆಜಾóನ್ ಕಾಡುಗಳನ್ನು ಬಹುರಾಷ್ಟ್ರೀಯ ಕಂಪೆನಿಗಳ, ಗಣಿಗಾರಿಕೆ ಉದ್ಯಮಿಗಳ ಕೃಪಾಕಟಾಕ್ಷಕ್ಕೆ ಒಪ್ಪಿಸಿ, ಪರಿಸರ ಸಂರಕ್ಷಣೆಯ ನೀತಿಗಳನ್ನು ಕಂಪೆನಿಗಳ ಅನುಕೂಲಕ್ಕೆ ತಕ್ಕಂತೆ ಸಡಿಲಿಸಿದ್ದು ಮಾತ್ರ ಜಗಜ್ಜಾಹೀರಾಗಿಯೇ ಇದೆ. ಅರಣ್ಯಒತ್ತುವರಿ ಮಾಡಿಕೊಳ್ಳುವ ದೊಡ್ಡ ರೈತರಿಗೆ ಹಾಗೂ ಮರಗಳನ್ನು ಕಡಿಯುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ತಗ್ಗಿಸಿದರು. ಇದರ ಪರಿಣಾಮವಾಗಿಯೇ ಅರಣ್ಯ ಅತಿಕ್ರಮಣ ಮತ್ತು ಬೆಂಕಿ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾದದ್ದು. ಇತ್ತೀಚೆಗೆ, ಅಂತರರಾಷ್ಟ್ರೀಯ ಒತ್ತಡ ಹೆಚ್ಚಾದ ನಂತರವೂ, ಅಂದರೆ 2019ರ ಆಗಸ್ಟ್ ಮೊದಲ ವಾರ ಬ್ರೆಜಿಲ್ನ ಸ್ಥಳೀಯ ಪತ್ರಿಕೆಗಳಲ್ಲಿ ಬಹಿರಂಗವಾಗಿ ಸಾರ್ವತ್ರಿಕ ಬೆಂಕಿಗೆ ಕರೆ ನೀಡುವಂತೆ ‘ಕಾಡಿಗೆ ಬೆಂಕಿ ಇಡುವ ಕಾರ್ಯಕ್ರಮ’ದ ದಿನಾಂಕದ ಕುರಿತು ಜಾಹೀರಾತು ಕೂಡಾ ಪ್ರಕಟಗೊಂಡಿತ್ತು! ಇವುಗಳೆಲ್ಲ ಸರ್ಕಾರದ ಬೆಂಬಲವಿಲ್ಲದೆ ನಡೆಯಲು ಸಾಧ್ಯವೆ?
ಸರ್ಕಾರದ ಈ ನೀತಿಗೆ ಪ್ರಮುಖ ಕಾರಣ, ಪ್ರಸ್ತುತ ಬ್ರೆಜಿಲ್ ಸೇರಿದಂತೆ, ಅಮೆಜಾóನ್ ಮಳೆಕಾಡು ಪ್ರದೇಶ ವ್ಯಾಪ್ತಿಯ ದೇಶಗಳ ಸಂಪೂರ್ಣ ಆರ್ಥಿಕತೆ ನಿಂತಿರುವುದೇ ಬೀಫ್ ಮತ್ತು ಸೋಯಾ ರಫ್ತಿನಲ್ಲಿ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ.
ಬೀಫ್ ಆರ್ಥಿಕತೆ!
1960ರವರೆಗೆ ಅಮೆಜಾóನ್ ಕಾಡು ಮಾನವ ಹಸ್ತಕ್ಷೇಪದಿಂದ ಮುಕ್ತವಾಗಿತ್ತು ಎನ್ನಬಹುದು. 1970ರ ದಶಕದಲ್ಲಿ ಬ್ರೆಜಿಲ್ ತೀವ್ರ ಆರ್ಥಿಕ ಕುಸಿತಕ್ಕೆ ಒಳಗಾಯಿತು. ಆಗ ಹಸುಸಾಕಾಣಿಕೆ ಮತ್ತು ಸೋಯಾ ಉತ್ಪಾದನೆಯ ಮೂಲಕ ಆರ್ಥಿಕ ಚೇತರಿಕೆಗೆ ಮುಂದಾದ ಸರ್ಕಾರ ಇದಕ್ಕಾಗಿ ಅಮೆಜಾನ್ ಮಳೆಕಾಡನ್ನು ಬಲಿ ತೆಗೆದುಕೊಳ್ಳುವ ಸಂಪ್ರದಾಯಕ್ಕೆ ಅಡಿಗಲ್ಲು ಇಟ್ಟಿತು. ಆರ್ಥಿಕ ಚೇತರಿಕೆಯೇನೋ ಆಯಿತೆನ್ನಬಹುದು; ಆದರೆ ಇದಕ್ಕಾಗಿ ಅರಣ್ಯನಾಶ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಯಿತು.ನಮ್ಮಲ್ಲಿ ಹಸುಸಾಕಣೆ ಅಥವಾ ಹೈನುಗಾರಿಕೆ ಎಂದರೆ ಹಾಲು ಉತ್ಪತ್ತಿ, ಉಳುಮೆ, ಗೊಬ್ಬರ ತಯಾರಿ; ಆದರೆ ಅಮೆಜಾóನ್ ಸುತ್ತಮುತ್ತಲಿನ ದೇಶಗಳಲ್ಲಿ ಕ್ಯಾಟಲ್ ಕೇರಿಂಗ್ ನಡೆಸುವುದು ಬೀಫ್ ಉತ್ಪಾದನೆಗಾಗಿ! ವಿಶಾಲವಾಗಿ ಬೆಳೆದಿರುವ ಅಮೆಜಾóನ್ ಕಾಡಿಗೆ ಎಲ್ಲೆಂದರಲ್ಲಿ ಬೆಂಕಿಹಚ್ಚುವುದು ಪ್ರತಿ ಜುಲೈ ತಿಂಗಳ ಒಂದು ವಾರ್ಷಿಕ ಸಮಾರಾಧನೆಯಾಗಿ ಬದಲಾಯಿತು. ಕಾಡಿಗೆ ಬೆಂಕಿಹಚ್ಚಿ ಚೊಕ್ಕಟಗೊಳಿಸಿ ಅದನ್ನು ಹುಲ್ಲುಗಾವಲಾಗಿ ಪರಿವರ್ತಿಸುವುದು, ಅಲ್ಲಿ ಹಸು-ಕರುಗಳನ್ನು ಸಾಕುವುದು, ಅವುಗಳ ಮೂಲಕ ಬೀಫ್ ಉತ್ಪಾದಿಸಿ ಜಗತ್ತಿನ ವಿವಿಧ ದೇಶಗಳಿಗೆ ರಫ್ತುಮಾಡಿ ಹಣಗಳಿಸುವುದು. ತನ್ಮೂಲಕ ದೇಶಕ್ಕೆ ಅಗತ್ಯ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು – ಇದು ಬ್ರೆಜಿಲ್ನ ಆರ್ಥಿಕ ನೀತಿಯಾಯಿತು. ಹೀಗೆ ಬ್ರೆಜಿಲ್ ಸರ್ಕಾರವೇ ರೈತರನ್ನು ಉತ್ತೇಜಿಸಿ ಕಾಡಿಗೆ ಬೆಂಕಿ ಹಚ್ಚಿಸಲಾರಂಭಿಸಿತು. ಇದರ ಪರಿಣಾಮವಾಗಿ ಇಂದು ಬ್ರೆಜಿಲ್ ಬೀಫ್ ಉತ್ಪಾದಿಸಿ ಜಗತ್ತಿಗೆ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ. (ಭಾರತ ಬೀಫ್ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ.) ಸೋಯಾ ಉತ್ಪಾದಿಸಿ ಜಗತ್ತಿಗೆ ರಫ್ತು ಮಾಡುತ್ತಿರುವ ಅಮೆರಿಕ ನಂತರದ ದೇಶ ಕೂಡ ಬ್ರೆಜಿಲ್.
ಜಾಗತಿಕ ಒತ್ತಡಗಳ ಪರಿಣಾಮವಾಗಿ 2004ರಲ್ಲಿ ಅಮೆಜಾóನ್ ಮಳೆಕಾಡು ಸಂರಕ್ಷಣೆಗೆ ಗಮನಹರಿಸಿದ ಬ್ರೆಜಿಲ್, ಬೆಂಕಿಹಾಕುವವರ ವಿರುದ್ಧ ಒಂದಷ್ಟು ಕ್ರಮ ಕೈಗೊಳ್ಳಲು ಮುಂದಾಯಿತು. ಇದರ ಪರಿಣಾಮವಾಗಿ 2004ರಿಂದ 2014ರ ಅವಧಿಯಲ್ಲಿ ಅಮೆಜಾóನ್ ಮಳೆಕಾಡಿಗೆ ಬೆಂಕಿಬೀಳುವ ಪ್ರಮಾಣ ಕಡಮೆಯಾಗಿತ್ತು ಎನ್ನಬಹುದು. ಆದರೆ 2014ರಲ್ಲಿ ಬ್ರೆಜಿಲ್ ಮತ್ತೊಮ್ಮೆ ಆರ್ಥಿಕ ಹಿಂಜರಿತಕ್ಕೆ ಒಳಗಾಯಿತು. ಆಗ ಸರ್ಕಾರವೇ ಬಹಿರಂಗವಾಗಿ ಅಮೆಜಾóನ್ ಮಳೆಕಾಡಿಗೆ ಬೆಂಕಿಹಚ್ಚಿ ಬೀಫ್ ಉತ್ಪಾದಿಸುವಂತೆ ಪ್ರೋತ್ಸಾಹಿಸಿತು. ಜೈರ್ ಅಧ್ಯಕ್ಷರಾದ ನಂತರ ಈ ಪ್ರಯಾಸಗಳು ಗಣನೀಯವಾಗಿ ಏರಿಕೆಯಾದವು.
ಬ್ರೆಜಿಲ್ನಲ್ಲಿ ಪ್ರತಿ ವರ್ಷ ಉತ್ಪಾದನೆಯಾಗುವ ಬೀಫ್ನ ಬಹುಪಾಲು ರಫ್ತಾಗುತ್ತಿರುವುದು ಚೀಣಾ ಮತ್ತು ಹಾಂಕಾಂಗ್ ದೇಶಗಳಿಗೆ. 2018ರಲ್ಲಿ 20.25 ಲಕ್ಷ ಮೆಟ್ರಿಕ್ ಟನ್ ಬೀಫನ್ನು ಬ್ರೆಜಿಲ್ ರಫ್ತು ಮಾಡಿದೆ. ಆರ್ಥಿಕ ಅಭಿವೃದ್ಧಿಗಾಗಿ ಬೀಫ್ ರಫ್ತನ್ನು ಹೆಚ್ಚಿಸಲು ಮತ್ತು ಹೊಸ ಆಮದು ದೇಶವನ್ನು ಹುಡುಕಲು ಬ್ರೆಜಿಲ್ ಸತತ ಪ್ರಯತ್ನ ಪ್ರಯೋಗಗಳನ್ನು ನಡೆಸುತ್ತಲೇ ಇದೆ. ಇತ್ತ ಅಮೆಜಾನ್ ಕಾಡುಗಳು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ. ವರದಿಯೊಂದರ ಪ್ರಕಾರ, 1991ರಿಂದ 2000ದ ಅವಧಿಯಲ್ಲಿ 4.15 ಲಕ್ಷದಿಂದ 5.87 ಲಕ್ಷ ಚದರ ಕಿ.ಮೀ. ಅರಣ್ಯಭೂಮಿ ನಾಶವಾಗಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಶೇ. 80ಕ್ಕಿಂತ ಅಧಿಕ ಭಾಗ ಹುಲ್ಲುಗಾವಲು, ಹಸುಸಾಕಣೆಗಾಗಿ, ಅಂದರೆ ಬೀಫ್ ಉತ್ಪಾದನೆಗಾಗಿ ಬಳಕೆಯಾಗಿದೆಯಂತೆ.
ಭೂಮಿಗಾಗಿ ನಿರಂತರ ಪ್ರಯಾಸ!
ಗಮನಿಸಬೇಕಾದ ಮಹತ್ತ್ವದ ಸಂಗತಿಯೆಂದರೆ, ಜಗತ್ತಿನ ಮಳೆಕಾಡು ಎಂದು ಕರೆಯಲಾಗುವ ಈ ಭಾಗದ ವಾತಾವರಣದಲ್ಲಿ ಯಾವುದೇ ನಿಶ್ಚಿತತೆಯಿಲ್ಲ. ಹವಾಮಾನತಜ್ಞರ ಪ್ರಕಾರ 79 ಡಿಗ್ರಿ ವ್ಯತಿರಿಕ್ತ ಹವಾಮಾನ ಇಲ್ಲಿದೆ. ಯಾವುದೇ ಸಂದರ್ಭದಲ್ಲಿ ಬಿಸಿಯಾಗಲೂಬಹುದು, ತಣಿಯಲೂಬಹುದು. ಕಳೆದ ಹದಿನೈದು ವರ್ಷಗಳಲ್ಲಿ ಮೂರು ಬಾರಿ ಭೀಕರ ಬರಗಾಲಕ್ಕೆ ಅಮೆಜಾóನ್ ಮಳೆಕಾಡು ಪ್ರದೇಶ ಒಳಗಾಗಿತ್ತು. ಹೀಗಾಗಿ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳುವುದು ಇಲ್ಲಿಯ ರೈತರಿಗೆ ದೊಡ್ಡ ಸವಾಲು. ಒಮ್ಮೆ ಕಾಡಿಗೆ ಬೆಂಕಿಹಚ್ಚಿ ಹುಲ್ಲುಗಾವಲಾಗಿಸಿ ಪರಿವರ್ತಿಸಿದ ಭೂಮಿ ಕೆಲವೇ ಸಮಯದಲ್ಲಿ ಬಂಜರಾಗಿಬಿಡುವ ಸಾಧ್ಯತೆ ಇದೆ. ಹೀಗಾಗಿ ಇಲ್ಲಿಯ ರೈತರಿಗೆ ಕೃಷಿಗಾಗಿ ಅಥವಾ ಹಸುಸಾಕಣೆಗಾಗಿ ನಿರಂತರವಾಗಿ ಹೊಸ ಭೂಮಿ ಹುಡುಕಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಅಮೆಜಾóನ್ ಮಳೆಕಾಡಿಗೆ ಬೆಂಕಿಹಚ್ಚಿ ಹೊಸ ಕೃಷಿಭೂಮಿ ರೂಪಿಸುವುದು ನಿರಂತರವಾಗಿ ನಡೆಯುತ್ತಿದೆ.
ಇನ್ನು 1970ರಲ್ಲಿ ಪ್ರಾರಂಭವಾದ ಅಮೆಜಾóನ್ ಹೈವೇ ನಿರ್ಮಾಣದ ಕಾಮಗಾರಿಗಳು ಇಂದಿಗೂ ನಡೆಯುತ್ತಿವೆ. ಮರದ ವ್ಯಾಪಾರಕ್ಕೆ, ಗಣಿಗಾರಿಕೆಗೆ, (ಅಮೆಜಾóನ್ ಪ್ರದೇಶದಲ್ಲಿ ಜೈವಿಕಇಂಧನ ಮೂಲಗಳ ಶೋಧನೆ ನಡೆಯುತ್ತಿದ್ದು, ತೈಲೋದ್ಯಮವೂ ಗಣನೀಯವಾಗಿ ಏರಿಕೆಯಾಗುತ್ತದೆ), ಬೀಫ್ ಸೋಯಾಬೀನ್ ರಫ್ತಿಗೆ ಈ ಹೆದ್ದಾರಿಯೇ ಬೆನ್ನೆಲುಬಾಗಿ ನಿಂತಿದೆ. ಇದೆಲ್ಲದರ ಪರಿಣಾಮವಾಗಿ ಕಾಡಿನ ಸುತ್ತಮುತ್ತ ವಾಸಿಸುತ್ತಿರುವ ನಾನ್ನೂರಕ್ಕೂ ಅಧಿಕ ಬುಡಕಟ್ಟು ಜನಾಂಗಗಳ ಬದುಕು ವಿನಾಶದ ಅಂಚಿಗೆ ತಲಪಿದೆ. ಹತ್ತಾರು ಬುಡಕಟ್ಟು ನಾಯಕರ ಹತ್ಯೆಗಳೂ ನಡೆದಿವೆ. ಪ್ರಾಣಾಪಾಯದಲ್ಲಿ ನಲುಗುತ್ತಿರುವ ಇಂತಹ ಸಾವಿರಾರು ಬುಡಕಟ್ಟು ಮಹಿಳೆಯರು ಇತ್ತೀಚೆಗೆ ಬ್ರೆಜಿಲ್ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆಳುವ ಸರ್ಕಾರಕ್ಕೆ ಬಡವರ ಕೂಗು ಎಲ್ಲಿ ಕೇಳುತ್ತದೆ? ‘ಬಡವರ ಕೋಪ ದವಡೆಗೆ ಮೂಲ’ ಅಷ್ಟೆ.
ಜಾಗತಿಕ ಒತ್ತಡಕ್ಕೆ ಮಣಿದು ತಡವಾಗಿಯಾದರೂ ಇದೀಗ ಬ್ರೆಜಿಲ್ ಒಂದಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂಬುದು ಸಮಾಧಾನಕರ ಸಂಗತಿ. 60 ದಿನಗಳಲ್ಲಿ ಬೆಂಕಿ ನಿಯಂತ್ರಿಸುವ ಪಣತೊಟ್ಟಿರುವ ಬ್ರೆಜಿಲ್ ಸರ್ಕಾರ ಇದಕ್ಕಾಗಿ ವಿಶೇಷ ಸದನಸಮಿತಿಯನ್ನು ರಚಿಸಿದೆ. ಬೆಂಕಿ ನಂದಿಸುವ ಕಾರ್ಯಕ್ಕಾಗಿ ಸಾವಿರಾರು ಲೀಟರ್ ನೀರನ್ನು ಹೊತ್ತೊಯ್ಯಬಲ್ಲ 4 ಅಗ್ನಿನಿರೋಧಕ ವಾಯುವಿಮಾನಗಳನ್ನು ಬಳಸುತ್ತಿದೆ ಹಾಗೂ 44 ಸಾವಿರ ಸೈನಿಕರನ್ನು ನೇಮಿಸಿದೆ. ಅಮೆಜಾóನ್ ಮಳೆಕಾಡು ವ್ಯಾಪ್ತಿಯ ಎಲ್ಲ ದೇಶಗಳನ್ನು ಒಳಗೊಂಡ ‘ಅಮೆಜಾóನ್ ಮಳೆಕಾಡು ಸಂರಕ್ಷಣೆಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ’ವನ್ನು ನಡೆಸಲು ಮುಂದಾಗಿದೆ.
ಆರ್ಥಿಕತೆಯ ಹೆಸರಿನಲ್ಲಿ ಕಳೆದ 50 ವರ್ಷಗಳಲ್ಲಿ ಅಮೆಜಾóನ್ ಪ್ರದೇಶದ ಶೇ. 17ರಷ್ಟು ದಟ್ಟ ಅರಣ್ಯ ನಾಶಗೊಂಡಿದೆ. ಕಳೆದ ಹದಿನೈದು ವರ್ಷಗಳಲ್ಲಿ ಅಮೆಜಾóನ್ ಮಳೆಕಾಡಿನ ಸಾವಿರಾರು ಎಕರೆ ಪ್ರದೇಶಗಳು ಮೂರು ಬಾರಿ (2005, 2010 ಮತ್ತು 2014ರಲ್ಲಿ) ತೀವ್ರ ಬರಗಾಲಕ್ಕೆ ತುತ್ತಾಗಿವೆ. ಹಾಗೆಂದು ಈ ಮಳೆಕಾಡುಗಳ ನಾಶ ಕೇವಲ ದಕ್ಷಿಣ ಅಮೆರಿಕಕ್ಕೆ ಸೀಮಿತವಲ್ಲ. ಆಫ್ರಿಕನ್ ದೇಶಗಳೂ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಹವಾಮಾನ, ಜಾಗತಿಕ ತಾಪಮಾನದ ಏರಿಕೆಯ ಮೇಲೂ ಇದು ನೇರ ಪ್ರಭಾವ ಬೀರಲಿದೆ. ಭೂಮಿಯ ವಾಯುಮಂಡಲಕ್ಕೆ ಶೇ. 6ರಷ್ಟು ಆಮ್ಲಜನಕ ನೀಡುವ, ಜಗತ್ತಿನ ಬಹುಭಾಗದಲ್ಲಿ ಮಳೆಯಾಗಲು ನೆರವಾಗುವ ಅಮೆಜಾóನ್ ಕಾಡುಗಳು ಇಂದು ಚೀಣಾ, ಇರಾನ್ ಮುಂತಾದ ಮಧ್ಯಪೂರ್ವ ದೇಶಗಳ ಆಹಾರಕ್ಕಾಗಿ ಬೀಫ್ ಉತ್ಪಾದಿಸುವ ಕೇಂದ್ರಗಳಾಗಿ ಬದಲಾಗಿರುವುದು ಚೋದ್ಯವೆನಿಸಿದರೂ ಕಟುವಾಸ್ತವ. ಅಮೆಜಾóನ್ ಮಳೆಕಾಡುಗಳ ಇಂಥ ಮಾರಣಹೋಮ ಆಧುನಿಕತೆ ಮತ್ತು ಆರ್ಥಿಕತೆಯ ಹೆಸರಿನಲ್ಲಿ ಜಗತ್ತಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಅತ್ಯಾಚಾರದ ಒಂದು ಘೋರ ಕಥನ.
ಅಮೆಜಾನ್ ಮಳೆಕಾಡು ಮತ್ತು ಆಹಾರ ರೂಪದ ಬೀಫ್ – ಇವೆರಡಲ್ಲಿ ಜಗತ್ತು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದರ ಮೇಲೆ ಭವಿಷ್ಯ ನಿರ್ಧಾರವಾಗುತ್ತದೆ. ಆಯ್ಕೆ ಬೀಫ್ ಎಂದಾದರೆ, ಕೆಲವೇ ದಶಕಗಳಲ್ಲಿ ಅಮೆಜಾóನ್ ಮಳೆಕಾಡು ಹುಲ್ಲುಗಾವಲಾಗಿಯೋ ಬರಗಾಲದಿಂದ ಬೆಂದ ಮರುಭೂಮಿಯಾಗಿಯೋ ಪರಿವರ್ತನೆಯಾಗುತ್ತದೆ. ಬೀಫ್ ಬಳಕೆಗೆ ಮಿತಿ ಹೇರಿ ಅಮೆಜಾóನ್ ಮಳೆಕಾಡು ಉಳಿಸಲು ಮುಂದಾಗುತ್ತೇವೆ ಎಂದಾದಲ್ಲಿ ಮಾತ್ರ ‘ಜಗತ್ತಿನ ಶ್ವಾಸಕೋಶ’ ಉಸಿರಾಡಬಹುದು. ಆದರೆ ಇದು ಸಾಧ್ಯವೇ ಎಂಬುದು ‘ಹೆಚ್ಚು ಉತ್ಪಾದಿಸು ಮತ್ತು ಹೆಚ್ಚು ಬಳಸು’ – ಎಂಬ ಜಗತ್ತಿನ ಆರ್ಥಿಕ ನೀತಿಯ ಮುಂದಿರುವ ಯಕ್ಷಪ್ರಶ್ನೆ. ಪರಿಸರದ ಬಗೆಗೆ ಜಗತ್ತಿನ ಎಲ್ಲ ದೇಶಗಳು ನಡೆದುಕೊಳ್ಳುತ್ತಿರುವುದಕ್ಕೂ ಬ್ರೆಜಿಲ್ನ ನಡವಳಿಕೆಗೂ ಯಾವುದೇ ವ್ಯತ್ಯಾಸವಿಲ್ಲ. ನಮ್ಮ ಪಶ್ಚಿಮಘಟ್ಟಗಳ ಸಂರಕ್ಷಣೆಯ ಹೆಸರಿನಲ್ಲಿ ಕಸ್ತೂರಿರಂಗನ್ ಆಯೋಗ, ಗಾಡ್ಗೀಳ್ ಆಯೋಗ ಎಂಬ ಸರ್ಕಾರೀ ಪ್ರಯಾಸಗಳು ಪರಿಸರ ಸಂರಕ್ಷಣೆಯ ಕುರಿತು ನಮ್ಮ ಸರ್ಕಾರಕ್ಕಿರುವ ಕಳಕಳಿ ಎಷ್ಟು ಎಂಬುದರ ದೃಷ್ಟ ನಿದರ್ಶನ. ಕೊಡಗು ಭೂಕುಸಿತದ ಮೂಲಕಾರಣ ಅರಿವಾದ ನಂತರವೂ ಅದನ್ನು ಒಪ್ಪಿಕೊಳ್ಳಲೂ ಸಿದ್ಧವಿಲ್ಲದಿರುವ ನಮ್ಮ ಸರ್ಕಾರಗಳು ಮತ್ತು ಆಧುನಿಕ ಮಾನವನಿಂದ ಏನನ್ನು ತಾನೆ ನಿರೀಕ್ಷಿಸಬಹುದು?