ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್ |
ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ ||
– ಸುಭಾಷಿತ ರತ್ನಭಾಂಡಾಗಾರ
“ಮನಸ್ಸಿನ ಸ್ವಭಾವ ಉನ್ಮಾದಕ್ಕೊಳಗಾದ ಆನೆಯಂತೆ ಎತ್ತೆತ್ತಲೋ ಓಡುತ್ತಿರುವುದು. ಬುದ್ಧಿಯಾದರೋ ಜ್ಞಾನದ ಅಂಕುಶವಿದ್ದಂತೆ; ಅದರಿಂದ ಮನಸ್ಸು ಸ್ತಿಮಿತಕ್ಕೆ ಬರುತ್ತದೆ.”
ಮನಸ್ಸಿನ ಚಂಚಲತೆಯನ್ನು ಅರಿತಿದ್ದರೂ ಅನೇಕ ಸಮಯಗಳಲ್ಲಿ ಅದರ ಸೂಚನೆಗಳನ್ನು ಪರೀಕ್ಷಣೆಗೊಳಪಡಿಸದೆ ಯಾಂತ್ರಿಕವಾಗಿ ಅನುಸರಿಸುವುದು ಒಂದು ಮಾನವದೌರ್ಬಲ್ಯ. ಅದರಿಂದ ಎಷ್ಟೋ ಸಂದರ್ಭಗಳಲ್ಲಿ ಹಾನಿಯಾಗುವ ಸಂಭವವಿರುತ್ತದೆ. ಅದು ಜೀವದ ಆಂತರಿಕ ಪಯಣಕ್ಕೂ ಅಪಕರ್ಷಕವಾದೀತು. ಮನೋನಿಯಂತ್ರಣದ ಅಭ್ಯಾಸವು ಅಧ್ಯಾತ್ಮಸಾಧನೆಯ ಒಂದು ಮುಖ್ಯ ಮಜಲು. ಅಂತರ್ವೀಕ್ಷಣೆಯೂ ಆತ್ಮಾವಲೋಕನವೂ ಸಾಧಕರಿಗೆ ಅನಿವಾರ್ಯಗಳು. ಇದನ್ನು ರೂಢಿಸಿಕೊಂಡಲ್ಲಿ ಎಷ್ಟೋ ದೈನಂದಿನ ಸನ್ನಿವೇಶಗಳಿಗೆ ವ್ಯಕ್ತಿಯ ಸ್ಪಂದನ ಭಿನ್ನರೀತಿಯದೇ ಆಗಬಹುದು.
ಈಗ್ಗೆ ಎಪ್ಪತ್ತು ವರ್ಷಕ್ಕೂ ಹಿಂದೆ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿದ್ದವರು ಸ್ವಾಮಿ ತ್ಯಾಗೀಶಾನಂದರೆಂಬ ಯತಿಶ್ರೇಷ್ಠರು. ನಿರ್ಲೇಪ, ತ್ಯಾಗಪ್ರವೃತ್ತಿಗಳಿಂದ ತಮ್ಮ ಹೆಸರನ್ನು ಅನ್ವರ್ಥಗೊಳಿಸಿದ್ದ ಮಹಾನುಭಾವರು ಅವರು. ಒಮ್ಮೆ ಆಶ್ರಮವಾಸಿಗಳೊಡನೆ ಮಾತನಾಡುವಾಗ ಅವರು ಹೇಳಿದರು: “ಮೊನ್ನೆ ಒಂದು ಸ್ವಾರಸ್ಯ ನಡೆಯಿತು, ಕೇಳಿರಿ. ರಾತ್ರಿ ತುಂಬಾ ಚಳಿ ಇತ್ತು. ಒಂದು ಶಾಲು ಇದ್ದಿದ್ದರೆ ಹೊದ್ದುಕೊಳ್ಳಬಹುದಾಗಿತ್ತು – ಎಂಬ ಭಾವನೆ ಕ್ಷಣಕಾಲ ಮನಸ್ಸಿನಲ್ಲಿ ಹಾದುಹೋಯಿತು. ವಿಚಿತ್ರವೆಂದರೆ ನಿನ್ನೆ ಇಲ್ಲಿಗೆ ಆಕಸ್ಮಿಕವಾಗಿ ಬಂದ ಭಕ್ತರೊಬ್ಬರು ಒಂದು ಶಾಲುವನ್ನು ನನಗೆ ಕೊಟ್ಟು ಹೋದರು. ಇದನ್ನು ದೈವಲೀಲೆ ಎಂದುಕೊಂಡೆ….
“ಆದರೆ ಆ ಸಂತೋಷ ಇದ್ದದ್ದು ಕ್ಷಣಮಾತ್ರ! ಮರುಘಳಿಗೆ ಯೋಚಿಸತೊಡಗಿದೆ. ಒಂದು ವೇಳೆ ನಮ್ಮ ಮನಸ್ಸಿಗೆ ಅನಿಸಿದ್ದೆಲ್ಲ ಈಡೇರಿಬಿಡುವ ಸ್ಥಿತಿ ಇದ್ದಿತೆಂದು ಇಟ್ಟುಕೊಳ್ಳೋಣ. ಈಗೇನೊ ಹಾನಿಕಾರಕವಲ್ಲದ ಒಂದು ಭಾವನೆ ಮನಸ್ಸಿನಲ್ಲಿ ಮೂಡಿ ನೆರವೇರಿಬಿಟ್ಟಿತು. ಆದರೆ ಒಂದು ವೇಳೆ ಅತ್ಯಂತ ಅಪಾಯಕಾರಿ ಭಾವನೆಯೊಂದು ಮೂಡಿದ್ದಿದ್ದರೆ ಅದೂ ಕಾರ್ಯಗತವಾಗಿಬಿಡುತ್ತಿತ್ತು, ಅಲ್ಲವೆ? ಆಗ ಎಂತಹ ಭಯಾನಕ ಪರಿಸ್ಥಿತಿ ಏರ್ಪಡುತ್ತಿತ್ತು! ಆದ್ದರಿಂದ ನಿಮಗೆ ನಾನು ಹೇಳಬಯಸುವುದು ಇದು: ನಾವು ಭಗವಂತನಲ್ಲಿ ಅದು ಕೊಡು ಇದು ಕೊಡು ಎಂದೆಲ್ಲ ಬೇಡಬಾರದು. ‘ಭಗವಂತ, ನಮಗೆ ಯಾವುದು ಹಿತವೆಂದು ನೀನೇ ಯೋಚಿಸಿ ಹಾಗೆ ನಮ್ಮನ್ನು ಅನುಗ್ರಹಿಸು’ ಎಂಬುದೇ ನಾವು ಸಲ್ಲಿಸಬೇಕಾದ ಸರಿಯಾದ ಪ್ರಾರ್ಥನೆ.”