ಸಂಪಾದಕೀಯ
ವಿಜ್ಞಾನ-ತಂತ್ರಜ್ಞಾನಗಳು ಮಾನವತೆಯ ಹಾಗೂ ಇಡೀ ಜೀವರಾಶಿಯ ಹಿತದ ಸಾಧನೆಗಾಗಿ ಮಾತ್ರ ನಡೆಯುವುದು ಆಪೇಕ್ಷಣೀಯ ಎಂದು ಹೇಳುವುದು ಚರ್ವಿತಚರ್ವಣವಾದೀತು. ಆದರೆ ಇಂದು ತದ್ವಿರುದ್ಧ ಸ್ಥಿತಿಯೇ ಇದೆ. ವೈಜ್ಞಾನಿಕ ಸಂಶೋಧನೆಯ ಸಿಂಹಪಾಲು ಸಮರಸಂಬಂಧಿತ ಆವಿಷ್ಕರಣಗಳಿಗೇ ಮೀಸಲಾಗಿರುತ್ತದೆ. ಎಲ್ಲ ಪ್ರಬಲ ದೇಶಗಳಲ್ಲಿಯೂ ಇದೇ ಸ್ಥಿತಿ ಇದೆ. ಸಮರೋಪಯೋಗಿ ಶೋಧಗಳು ಮುಂದುವರಿದಂತೆ ಸ್ವಯಂ ವಿಜ್ಞಾನಿಗಳಲ್ಲಿಯೂ ಅವುಗಳ ಪಶ್ಚಾತ್ಪರಿಣಾಮಗಳನ್ನು ನಿಯಂತ್ರಿಸುವ ಶಕ್ತಿ ಉಳಿದಿರುವುದಿಲ್ಲ. ವಿಜ್ಞಾನ-ತಂತ್ರಜ್ಞಾನ ನಿರತರು ಸಾಮಾಜಿಕ ಹೊಣೆಗಾರಿಕೆಯನ್ನು ಆಧಾರಮೌಲ್ಯವಾಗಿ ಸ್ವೀಕರಿಸಿ ವರ್ತಿಸುವುದನ್ನು ಬಿಟ್ಟು ಬೇರೆ ಪರಿಹಾರ ಇರದು; ‘ಮಹತೀವಿನಷ್ಟಿಃ’ ಎಂಬ ದುಷ್ಪರಿಣಾಮಸರಣಿಯಿಂದ ಯಾರಿಗೂ ವಿನಾಯತಿ ದೊರೆಯದು. ಇದೀಗ ಕೊರೋನಾ ಆಘಾತದಿಂದ ತತ್ತರಿಸುತ್ತಿರುವ ಅಮೆರಿಕವೇ ಇಪ್ಪತ್ತನೇ ಶತಮಾನದ ನಡುಭಾಗದಲ್ಲಿ ಜೈವ ಯುದ್ಧಾಸ್ತ್ರಗಳ ನಿರ್ಮಾಣವನ್ನು ತನ್ನ ಪ್ರಮುಖ ಶೋಧಕ್ಷೇತ್ರವಾಗಿಸಿಕೊಂಡಿತ್ತು: ಮೇರಿಲ್ಯಾಂಡ್ ಪ್ರಾಂತದ ಫೋರ್ಡ್ ಡೆಟ್ರಿಕ್ ಮೊದಲಾದೆಡೆ ಇದಕ್ಕಾಗಿಯೇ ಬೃಹತ್‍ಪ್ರಮಾಣದ ದುಬಾರಿ ಪ್ರಯೋಗಾಲಯಗಳನ್ನು ಸ್ಥಾಪಿಸಿತ್ತು. ‘ಆ್ಯಂತ್ರ್ರಾಕ್ಸ್’, ‘ಬ್ಯಾಟ್ಯುಲಿನಮ್’ ಸರ್ವನಾಶಕ ಮಾರಕಾಸ್ತ್ರಗಳೆಲ್ಲ ತಯಾರಾದದ್ದು ಅಲ್ಲಿಯೇ. ಸಿಡುಬು ಮೊದಲಾದ ಅಂಟುರೋಗಗಳನ್ನು ಜಗತ್ತಿನಾದ್ಯಂತ ಹರಡಬಲ್ಲ ಮಾಧ್ಯಮಗಳನ್ನು ರಷ್ಯ ದೇಶ ತಯಾರಿಸಿತ್ತು. ಈ ವಿನಾಶಕಾರಿ ರಾಸಾಯನಿಕಗಳನ್ನು ತಾವು ನಾಶಪಡಿಸಿರುವೆವೆಂಬ ಆ ದೇಶಗಳ ಘೋಷಣೆಯನ್ನು ನಂಬಬಹುದಾದ ಸ್ಥಿತಿಯಿಲ್ಲ. ಇನ್ನು ಚೀಣಾದ ಬಗೆಗಂತೂ ಹೇಳಲೇಬೇಕಾಗಿಲ್ಲ. ಈಚಿನ ಇತಿಹಾಸದ ಪ್ರಮುಖ ಇನ್‍ಫ್ಲುಯೆಂಜಾ ಜಾತಿಯ ಸಾಂಕ್ರಾಮಿಕಗಳೆಲ್ಲ ಉದಿಸಿದುದು ಚೀಣಾದಲ್ಲಿ. ಇತ್ತೀಚೆಗೆ ಸುದ್ದಿಯಲ್ಲಿರುವ ‘ನಿಪಾ’ ವೈರಾಣು, ಹಳದಿಜ್ವರದ ನಮೂನೆಗಳು – ಇವೆಲ್ಲ ಮೇಲೆ ಸ್ಮರಿಸಿದಂತಹ ಜೀವವಿರೋಧಿ ಪ್ರಯೋಗಪ್ರಕಾರಗಳ ಕೂಸುಗಳೇ. ಸಾಲದೆಂಬಂತೆ ಪರಿಸರನಾಶದಿಂದಾಗಿ ಹಿಮಗಡ್ಡೆಗಳೂ ಕರಗತೊಡಗಿದ್ದು ಟಿಬೆಟ್ ಭಾಗದ ಹಿಮನದಿಯ ಕರಗುವಿಕೆಯೊಂದರಿಂದಲೇ ಇದುವರೆಗೆ ಅಂತರಾಳದಲ್ಲಿ ನಿಕ್ಷಿಪ್ತವಾಗಿದ್ದ ಮೂವತ್ತಮೂರು ಅಪರಿಚಿತ ವೈರಸ್‍ಗಳು ಹೊರಬಿದ್ದು ವಾತಾವರಣದಲ್ಲಿ ಸೇರಿಹೋಗಿವೆ ಎಂದು ತಿಳಿದುಬಂದಿದೆ. ಮಾನವನ ಹೊಣೆಗೇಡಿತನದ ಫಲಿತಗಳಾದ ಈ ವಿಶ್ವವ್ಯಾಪಿ ಆಘಾತಗಳನ್ನು ಯಾವ ಮುಖಾಚ್ಛಾದಕ ‘ಮಾಸ್ಕ್’ಗಳು ತಾನೆ ತಡೆಯಬಲ್ಲವು? ಇದನ್ನೆಲ್ಲ ಪ್ರಕೃತಿಯ ಸೇಡು ಎಂದುಕೊಂಡು ಅನುಭವಿಸಬೇಕಷ್ಟೆ. ಇನ್ನು ಮುಂದೆಯೂ ಇನ್ನಷ್ಟು ಕೊರೋನಾ ರೀತಿಯ ವ್ಯಾಧಿಗಳನ್ನು ನಿರೀಕ್ಷಿಸಬಹುದು. ಜನಸಾಮಾನ್ಯರು ಫ್ಯಾಶನ್‍ಗಳಿಂದ ದೂರ ಸರಿದು ಸಾತ್ತ್ವಿಕ ಜೀವನಕ್ರಮ ಮತ್ತು ಆಹಾರಾದಿಗಳಲ್ಲಿ ಅನುಶಾಸನ ರೂಢಿಸಿಕೊಂಡಲ್ಲಿ ಸ್ವಲ್ಪಮಟ್ಟಿಗಾದರೂ ಕ್ಷಮತೆ ಹೆಚ್ಚೀತು.