ಬೆಳಗ್ಗೆ ಎದ್ದ ಕೂಡಲೆ ಹತ್ತಾರು ಸೀನುವುದು ನನಗೆ ನನ್ನ ಅಮ್ಮನಿಂದಲೇ ನೇರವಾಗಿ ಬಂದ ಬಳುವಳಿ. ಅಮ್ಮನ ಆಕ್ಷಿಗೆ ಹತ್ತು ಹಲವು ರಾಗಗಳಿದ್ದಂತೆ ಕೆಲವೊಮ್ಮೆ ನನಗೂ ಕೀರಿದ ಹಾಗೋ ಕಿರುಚಿದ ಹಾಗೋ ಸೀನು ಬರುವುದಿದೆ. ಯಾವಾಗಲೂ ನಾನು ಸೀನು ಶುರುವಿಟ್ಟ ಕೂಡಲೇ ‘ಅಯ್ಯೋ ಅಮ್ಮಾ.. ನೀನು ನಿಜವಾಗಿಯೂ ಸೀನುವುದಾ ಅಲ್ಲಾ ಬರಿಸಿಕೊಳ್ಳುವುದಾ ಅಂತ ನನಗೆ ಡೌಟು’ ಎನ್ನುವ ಮಗ ನನ್ನ ಬದಲಾಗುವ ಭಾವಭಂಗಿಗಾಗಿ ಕಾಯುತ್ತಾನೆ. ನನಗೆ ಮೂಗೇ ಹರಿದುಹೋಗುವಂತೆ ಬರುವ ಆಕ್ಷಿಗಿಂತ ಹೆಚ್ಚು ಆಪ್ಯಾಯಾನವಾಗುವುದು ಅವನ ಮುಖದಲ್ಲಿನ ಪ್ರತಿಕ್ರಿಯೆ!
ಮೊನ್ನೆ ಎಂದಿಗಿಂತ ತಡವಾಗಿ ಎದ್ದ ಅವನನ್ನು ಶಾಲೆಗೆ ಹೊರಡಿಸುವ ಗಡಿಬಿಡಿಯಲ್ಲಿ ನನ್ನ ಕೆಲಸ ಬದಿಗಿಟ್ಟು ಅವನನ್ನು ಸ್ನಾನ ಮಾಡಿಸಲು ಎಳೆದುಕೊಂಡು ಹೋಗಿ ರಪರಪನೆ ಸಾಬೂನು ಹಾಕಿ ಉಜ್ಜುತ್ತಿದ್ದೆ…. ‘ಇದೆಂಥ ನನ್ನ ಮೈ ಅಂದುಕೊಂಡಿದ್ದೀಯಾ, ಇಲ್ಲಾ ಉಜ್ಜುವ ಪಾತ್ರೆ ಅಂದುಕೊಂಡಿದ್ದೀಯಾ? ಸ್ವಲ್ಪ ಮೆಲ್ಲಗೆ ಸ್ನಾನ ಮಾಡಿಸಬಾರದಾ?’ ಸಾಬೂನು ಕಣ್ಣಿಗೆ ಹೋಗದಂತೆ ಕಣ್ಮುಚ್ಚಿ ನಿಂತಿದ್ದವನು ಕೊಸರಿಕೊಂಡ. ಅಷ್ಟರಲ್ಲಿ ನನಗೆ ಮೂಗು ಸುಂಯಿಗುಡಲು ಆರಂಭಿಸಿತ್ತು. ಅವನಿಗೆ ಮೈಯುಜ್ಜಿಕೊಳ್ಳಲು ವಸ್ತ್ರ ಕೊಟ್ಟವಳೇ ಸೀನತೊಡಗಿದೆ. ಅವನು ಆಗ ಪ್ರತಿಕ್ರಿಯಿಸಲಿಲ್ಲ. ಅರ್ಧಂಬರ್ಧ ಮೈಯುಜ್ಜಿಕೊಂಡು ತಡವಾಯ್ತೆಂಬಂತೆ ಓಡಿದ. ಅವನ ಪಾಡಿಗೆ ಸಮವಸ್ತ್ರ ಧರಿಸಿ ಬಂದು ತಿಂಡಿಗೆ ಕುಳಿತವನನ್ನು ನೋಡುತ್ತೇನೆ, ಮಾಸ್ಕ್ ಧರಿಸಿ ಕೂತಿದ್ದಾನೆ. ‘ಮಾರಾಯಾ, ಅದನ್ನು ಹಾಕ್ಕೊಂಡು ತಿಂಡಿ ತಿನ್ನುವುದಾದರೂ ಹೇಗೆ? ಅವತಾರ ಇವನದ್ದು. ಶಾಲೆಯಲ್ಲಿ ತರಲು ಹೇಳಿದರಂತೆ. ಇವನು ನೋಡಿದರೆ ಮನೆಯಲ್ಲೂ ಹಾಕ್ಕೊಂಡು ಕೂತಿದ್ದಾನೆ.’ ತಡವಾದದ್ದಕ್ಕೂ, ಮಕ್ಕಳು ಅರೆಹೊಟ್ಟೆ ತಿಂದು ಬಸ್ ಬಂತೆಂದು ಓಡುವುದಕ್ಕೂ, ಮತ್ತೆ ಸಂಜೆಯವರೆಗೆ ಹಾಗೇ ಇರುವುದಕ್ಕೂ ನಮ್ಮಂಥ ತಾಯಂದಿರಿಗೆ ಕಾಡುವ ಅಸಹಾಯಕತೆಗೆ ರೇಗಿದ್ದೆ. ನನ್ನ ಆತಂಕ ಅರ್ಥವಾದಂತೆ ಮಗ ಮಾಸ್ಕ್ ಕೊಂಚವೇ ಸರಿಸಿ ತಿಂಡಿ ತಿನ್ನಲಾರಂಭಿಸಿದ. ‘ಯಾಕೋ ಕಷ್ಟ ಪಡುತ್ತಿದ್ದೀಯಾ? ಆ ದರಿದ್ರ ಮಾಸ್ಕ್ ತೆಗೆದು ಆರಾಮವಾಗಿ ತಿನ್ನು’ ಎಂದರೆ ಅವನ ಉತ್ತರ ಬೇರೆಯೇ ಇತ್ತು.. ‘ಅಲ್ಲಮ್ಮಾ, ಅಷ್ಟೊಂದು ಸೀನುತ್ತಿದ್ದೆಯಲ್ಲ! ಎಲ್ಲಾದರೂ ಕೊರೋನಾ ಬಂದುಬಿಟ್ಟರೆ!’ ಅಮ್ಮನಿಗೆ ಕೊರೋನಾ ದಾಳಿಯಿಟ್ಟಿದ್ದರೂ ತನಗದು ಬರದೇ ಇರಲಿ ಎಂಬ ಅವನ ಮುಂಜಾಗ್ರತೆ ಕಂಡು, ಮಕ್ಕಳಿಗೆ ತಡವಾಗುತ್ತಿದೆ ಎಂಬುದನ್ನು ಮರೆತು ಹೊಟ್ಟೆ ಹುಣ್ಣಾಗುವಂತೆ ನಕ್ಕೆ. ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಶಾಲೆಯ ಟೀಚರ್ ಚೆನ್ನಾಗಿಯೇ ಮಾಡಿದ್ದಾರೆ ಎಂಬುದು ಸ್ಪಷ್ಟವಾಯ್ತು, ಜೊತೆಗೆ ತಮ್ಮ ತಮ್ಮ ಕಾಳಜಿ ಮುಖ್ಯ ಎಂಬುದು ಎಳೆಯ ಮಕ್ಕಳಲ್ಲೂ ಅದೆಷ್ಟು ಚೆನ್ನಾಗಿ ಪಡಿಮೂಡಿರುತ್ತದೆ ಎಂಬ ಪರಿಗೆ ಅಚ್ಚರಿಯಾಯ್ತು.
ರಕ್ತಬೀಜಾಸುರನ ವಂಶಕ್ಕೆ ಸೇರಿದ್ದಂತೆ ಈ ಕೊರೋನಾ ವೈರಸ್. ಒಂದು ಹನಿ ರಕ್ತ ಬಿದ್ದಲ್ಲಿ ಸಾವಿರ ಸಾವಿರ ರಾಕ್ಷಸರು ಹುಟ್ಟಿಕೊಳ್ಳುತ್ತಿದ್ದಂತೆ ಈ ವೈರಸ್ ಮುಟ್ಟಿದರೂ ತಟ್ಟಿದರೂ, ಕೆಮ್ಮಿದರೂ ಸೀನಿದರೂ ಬಂದು ಅಂಟಿಕೊಳ್ಳುತ್ತದಂತೆ. ಅದರ ಬಗೆಗಿನ ಕತೆ ಒಂದೇ ಎರಡೇ! ಎಲ್ಲರೂ ಭಯಭೀತರಾಗಿ ಮುದುಡಿಕುಳಿತಿರುವುದೂ ಅದೇ ಕಾರಣದಿಂದಲೇ ತಾನೇ! ರಕ್ತಬೀಜನ ವಧೆಗಾದರೂ ದೇವಿ ರಕ್ತೇಶ್ವರಿಯಾದಳು. ಈಗ ಈ ಕೊರೋನಾವನ್ನು ಸವರಲು ಆ ಜಗನ್ಮಾತೆ ಇನ್ನದಾವ ರೂಪ ತಾಳಿ ಬರುತ್ತಾಳೋ! ಸಾಲದ್ದಕ್ಕೆ ಶಾಲಾ ಕಾಲೇಜುಗಳಿಗೆ ಸರಕಾರ ರಜೆ ಘೋಷಿಸಿದೆ. ಸದಾ ಬ್ಯುಸಿಯಾಗಿರುವ ನಮ್ಮ ಟೆಕ್ಕಿಗಳು ಮನೆಯಿಂದಲೇ ಕೆಲಸ ಎಂಬ ಆಯ್ಕೆಗೆ ಜೋತುಬೀಳುವುದು ಅನಿವಾರ್ಯವಾಗಿದೆ. ಹಾಗೆಂದು ಅವರು ಮನೆಗೆಲಸಕ್ಕೆ ಒದಗುತ್ತಾರೋ ಎಂಬುದು ಡೌಟು.
ಆಟದ ಬಯಲು ಮಕ್ಕಳ ಹೆಜ್ಜೆಗಳನ್ನು ಕಂಡು ಬಹಳ ದಿನಗಳೇ ಕಳೆದಿವೆ, ಪರೀಕ್ಷೆಯ ನೆಪದಲ್ಲಿ. ಈಗ ಪರೀಕ್ಷೆಯೂ ಇಲ್ಲ. ಮನೆಯಿಂದಾಚೆ ಬರುವಂತೆಯೂ ಇಲ್ಲ. ಅನಿರ್ದಿಷ್ಟಾವಧಿ ಕಫ್ರ್ಯೂ ವಿಧಿಸಿದ ಪರಿಸ್ಥಿತಿ. ಆದರೂ ಮಕ್ಕಳಿಗೆ ಪರೀಕ್ಷೆಯಿಂದ ವಿನಾಯಿತಿ ಸಿಕ್ಕಿದ್ದು ದೊಡ್ಡ ಹಬ್ಬವೆಂಬಂಥ ಸಂಗತಿಯಾಯ್ತು. ‘ಅಮ್ಮಾ ಈ ಕೊರೋನಾ ಬಂದದ್ದು ಭಾರೀ ಒಳ್ಳೆಯದಾಯ್ತು ನೋಡು.. ಪರೀಕ್ಷೆ ಬರೆಯದೆ ನಾನಿನ್ನು ನಾಲ್ಕನೇ ಕ್ಲಾಸ್’ ಎಂದೋ ತಾನು ಏಳನೇ ಕ್ಲಾಸ್ ಎಂದೋ ಕುಣಿಯುತ್ತಾ ಕುಪ್ಪಳಿಸುತ್ತಾ ಸಡಗರ ಆಚರಿಸಿದ ಮಕ್ಕಳನ್ನು ನೋಡಿದರೆ ಯಾವ ಒತ್ತಡವನ್ನಾಗಲಿ
ನಿರೀಕ್ಷೆಯ ಭಾರವನ್ನಾಗಲಿ ಅವರ ಮೇಲೆ ಹೊರಿಸದಿದ್ದರೂ ಪರೀಕ್ಷೆಯೆಂದರೆ ಮಕ್ಕಳಿಗೇಕೆ ಜುಗುಪ್ಸೆಯೋ ಎನಿಸಿತು.
ಸಣ್ಣ ಮಕ್ಕಳೆಂದೇನು, ಸೆಕೆಂಡ್ ಪಿಯುಸಿಯ ವಿಜ್ಞಾನ ಸಿಲಬಸ್ ಬಹಳ ವಿಸ್ತøತವಾಗಿರುವುದರಿಂದ ಮುಗಿಸುವುದು ಕಷ್ಟವೆಂದು ನಮ್ಮಲ್ಲಿ ಸ್ಪೆಷಲ್ ಕ್ಲಾಸುಗಳನ್ನು ಹಮ್ಮಿಕೊಂಡಿದ್ದರು. ಆ ಮಕ್ಕಳಿಗಾದರೋ ಬೇಸಗೆ ರಜೆಯ ಕನಸು. ಮೊನ್ನೆ ಸರಕಾರದ ಆದೇಶ ಬಂದ ಕಾರಣದಿಂದಾಗಿ ರಜೆ ಘೋಷಿಸುವುದು ಅನಿವಾರ್ಯವಾಯ್ತು. ಮಕ್ಕಳೆಲ್ಲ ‘ಕೊರೋನಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ಹೊರಟರು. ಆರೋಗ್ಯ ಇಲಾಖೆಗೆ ಇರುವ ಆತಂಕವೊಂದೆಡೆಯಾದರೆ ಈ ಮಕ್ಕಳು ವೈರಸ್ಸಿನ ನೆಪದಿಂದ ರಜೆ ಸಿಕ್ಕಿದ್ದಕ್ಕಾಗಿ ಸಂಭ್ರಮಿಸಿದರು. ‘ಹಾಸ್ಟೆಲ್ಲಿನಲ್ಲಿರುವ ಮಕ್ಕಳೆಲ್ಲ ಮನೆಗೆ ತೆರಳುವುದು’ ಎಂಬ ಒಕ್ಕಣೆ ಬೇರೆ ಇರುವುದರಿಂದ ಆ ಮಕ್ಕಳೂ ಬಂಧನದಿಂದ ಬಿಡುಗಡೆಗೊಂಡ ಹಕ್ಕಿಗಳ ಹಾಗೆ ಪುರ್ರನೆ ತಮ್ಮ ಊರ ದಾರಿ ಹಿಡಿದರು. ಬೇಸಗೆ ಸಮಯದಲ್ಲಿ ರಜೆ ಕೊಡಬೇಕೆಂಬ ವ್ಯವಸ್ಥೆ ನಿಜಕ್ಕೂ ಅದೆಷ್ಟು ಒಳ್ಳೆಯದು!
ಕಾಯಿಲೆಯೊಂದು ಊರಿಗೆ ಊರನ್ನೇ ಆವರಿಸಿಕೊಂಡು, ಬಲಿ ಪಡೆದುಕೊಂಡು ಸಾಗಿ ಬರುವಾಗ ಯಾರಾರು ಅದಕ್ಕೆ ಶರಣಾಗುತ್ತಾರೋ ಇನ್ನಾರಾರು ಅದನ್ನು ಮೀರಿ ಬದುಕನ್ನು ಆತುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಮನೆಯೊಳಗೆ ಹೊರಗೆ ಪರಿಸ್ಥಿತಿ ಬದಲಾಗಿರುವುದಂತೂ ನಿಜ. ಈವತ್ತಿನ್ನೂ ಯಾರೋ ಸಂದೇಶವೊಂದನ್ನು ಕಳುಹಿಸಿದ್ದರು: ‘ಮಕ್ಕಳಿಗೆ ರಜೆ, ಗಂಡನಿಗೆ ರಜೆ. ಮಾಲ್, ಥಿಯೇಟರ್ ಎಲ್ಲ ಬಂದ್. ಮಾರ್ಕೆಟ್ಟಿಗೆ ಹೋಗುವ ಹಾಗಿಲ್ಲ. ಈ ಸಂದರ್ಭದಲ್ಲಿ ಎಲ್ಲರನ್ನು ಸಂಭಾಳಿಸುವ ಶಕ್ತಿಯನ್ನು ಗೃಹಿಣಿಗೆ ಕೊಡು ತಾಯೀ’ ಎಂಬುದಾಗಿ.
ಅದಾವುದೋ ಸಾಂಬಾರ್ ಮಸಾಲೆಗಳ ಜಾಹೀರಾತು ಟಿವಿಯಲ್ಲಿ ಬರುತ್ತದೆ. ಗಂಡ ಒಂದು ಕೇಳಿದರೆ ಮಕ್ಕಳಿಬ್ಬರು ಮತ್ತಿನ್ನೇನೋ ಕೇಳಿರುತ್ತಾರೆ. ಅತ್ತೆ ಮಾವ ಬೇರೆಯದೇ ಬಗೆಯ ಅಡುಗೆ ಕೇಳುತ್ತಾರೆ. ಚಕಚಕನೆ ಆ ಹೆಣ್ಣುಮಗಳಿಗೆ ಎಂಟೋ ಹತ್ತೋ ಕೈಗಳು ಬಂದು ಅವಳು ಅವರು ಕೇಳಿದ್ದನ್ನೆಲ್ಲ ಮಾಡಿಕೊಡುತ್ತಾಳೆ. ಬಹುಶಃ ಇಂದಿನ ಸಂದರ್ಭಕ್ಕೆ ನೋಡುವುದಾದರೆ ಮನೆಯೊಳಗಿನ ಎಲ್ಲ ಕೆಲಸಗಳನ್ನು ನಿಭಾಯಿಸಿಕೊಳ್ಳಬೇಕಾದರೆ ಅವಳಿಗೂ ಈ ಬಗೆಯ ಮ್ಯಾಜಿಕ್ ಬರಬೇಕಿದೆ. ಮಕ್ಕಳಾದರೋ ಶಾಲೆಯಿಂದ ಬಂದ ಕೂಡಲೇ ಕೈಕಾಲು ಮುಖ ತೊಳೆದುಕೊಂಡು ಸಮವಸ್ತ್ರ ತೆಗೆದಿರಿಸಿ ಮನೆಯ ಬಟ್ಟೆ ಹಾಕಿಕೊಳ್ಳಲೂ ಹತ್ತು ಸಲ ನೆನಪಿಸಬೇಕಾದಂತೆ ಆಡುತ್ತಿದ್ದವರು ಈಗ ಶಿಸ್ತಿನ ಸಿಪಾಯಿಗಳಾಗಿದ್ದಾರೆ. ತಿಂಡಿ ತಿನ್ನುವುದಕ್ಕೆ ಮುಂಚೆ ಮರೆಯದೆ ಕೈ ತೊಳೆಯುತ್ತಿದ್ದಾರೆ. ಇಷ್ಟು ದೊಡ್ಡ ಶರೀರ ಹೊತ್ತ ನನ್ನ ಮಾತಿಗಿಲ್ಲದ ಬೆಲೆ ಕಣ್ಣಿಗೆ ಕಾಣದ ವೈರಸ್ಸಿಗಿದೆ!
ಎಲ್ಲವೂ ಸರಿಯೇ, ನಮ್ಮ ಬಾಲ್ಯಕಾಲದಲ್ಲಿ ಇದ್ದಂತೆ ಸಂಜೆಯ ಹೊತ್ತು ಮನೆಮಂದಿಯೆಲ್ಲ ಹೊರಜಗುಲಿಯಲ್ಲಿ ಕುಳಿತುಕೊಂಡು, ಬಿರುಬೇಸಿಗೆಯ ಸೆಕೆಗೆ ಬೈಯುತ್ತಾ ಊರ ಸುದ್ದಿಯೆಲ್ಲ ಮಾತಾಡುತ್ತಾ ನಗುತ್ತಾ ಮನಸ್ಸು ಮನಸ್ಸುಗಳನ್ನು ಬೆಸೆದಿರಿಸುವ ಕಾಲವೊಂದಿತ್ತಲ್ಲ… ಈಗ ಬಯಸದೇ ಬಂದ
ರಜೆಯ ನೆಪದಿಂದ ಪಾರ್ಟಿ, ಶಾಪಿಂಗ್, ಬೇಸಗೆ ಟೂರ್ ಯಾವುದೂ ಇಲ್ಲದ ಈ ಸನ್ನಿವೇಶ ಮತ್ತೆ ಅಂತಹ ದಿನಗಳನ್ನು ನಮ್ಮೆದುರು ತರಬಹುದೇ? ತಂದರೂ ತರಬಹುದು, ಒಂದು ವೇಳೆ ಮೊಬೈಲ್ ಫೋನಿನ ಟವರುಗಳ ವೈಬ್ರೇಷನ್ನಿಂದ ವೈರಸ್ ಸಂಖ್ಯೆ ಹೆಚ್ಚಾಗುತ್ತದೆ ಎಂದೇನಾದರೂ ಅಧ್ಯಯನ ಹೇಳಿದರೆ, ಎಲ್ಲ ನೆಟ್ವರ್ಕ್ಗಳೂ ಜಾಮ್ ಆದರೆ ಮನೆಯೊಳಗಿನ ಮನಗಳ ನಡುವೆ ಜಾಮ್ ಆಗಿರುವ ಸಂವಹನ ಮತ್ತೆ ತೆರೆದುಕೊಳ್ಳಬಹುದು. ಕೊರೋನಾ ತಂದಿರುವ ಮಾಸ್ಕ್ ಮನೆಮನೆಗಳೊಳಗೆ ಬೇರೊಂದು ಸನ್ನಿವೇಶ ಸೃಷ್ಟಿಸಬಲ್ಲುದೇ!?