ಸರ್ವಸ್ವದಕ್ಷಿಣಯಜ್ಞವರ್ಣನೆ ಎಂಬ ಮೂರನೆಯ ಕಥೆ
ಮತ್ತೆ ಭೋಜರಾಜನು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಹೋದಾಗ ಇನ್ನೊಂದು ಗೊಂಬೆಯು ‘ಎಲೈ ರಾಜನೆ, ಯಾರಲ್ಲಿ ವಿಕ್ರಮಾದಿತ್ಯನಿಗೆ ಸರಿಸಮಾನವಾದ ಔದಾರ್ಯ ಇದೆಯೋ ಅವನು ಮಾತ್ರ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಬಹುದು’ ಎಂದು ಹೇಳಿತು.
ಆಗ ಭೋಜರಾಜನು, ‘ಎಲೈ ಗೊಂಬೆಯೆ, ಅವನ ಔದಾರ್ಯದ ಕಥೆಯನ್ನು ಹೇಳು’ ಎಂದನು.
ಆಗ ಗೊಂಬೆಯು ಹೇಳಿತು – ‘ಎಲೈ ರಾಜನೆ, ಕೇಳು. ವಿಕ್ರಮನಿಗೆ ಸರಿಸಮನಾದ ರಾಜನು ಭೂಮಂಡಲದಲ್ಲಿ ಎಲ್ಲಿಯೂ ಇಲ್ಲ, ಅವನು ಒಮ್ಮೆ ‘ಸರ್ವಸ್ವದಕ್ಷಿಣೆ’ ಎಂಬ ಯಜ್ಞವನ್ನು ಮಾಡಲು ಬಯಸಿದನು. ಬಳಿಕ ಶಿಲ್ಪಿಗಳನ್ನು ಕರೆಸಿ ಅದಕ್ಕೆಂದು ಅತ್ಯಂತ ಮನೋಹರವಾದ ಮಂಟಪವೊಂದನ್ನು ಮಾಡಿಸಿದನು. ದೇವತೆಗಳನ್ನೂ, ಋಷಿಗಳನ್ನೂ, ಗಂಧರ್ವ-ಯಕ್ಷ-ಸಿದ್ಧ ಮೊದಲಾದವರನ್ನೂ ಆ ಯಜ್ಞಕ್ಕೆ ಆಹ್ವಾನಿಸಿದನು. ಅದೇ ಸಮಯದಲ್ಲಿ ಸಮುದ್ರರಾಜನ ಆಹ್ವಾನ ಮಾಡುವುದಕ್ಕಾಗಿ ಒಬ್ಬ ಬ್ರಾಹ್ಮಣನನ್ನು ಸಮುದ್ರತೀರಕ್ಕೆ ಕಳಿಸಿದನು. ಅವನು ಸಮುದ್ರದ ತೀರಕ್ಕೆ ಹೋಗಿ ಅಲ್ಲಿ ಷೋಡಶೋಪಚಾರಪೂರ್ವಕವಾಗಿ ಸಮುದ್ರವನ್ನು ಪೂಜೆ ಮಾಡಿ ‘‘ಎಲೈ ಸಮುದ್ರರಾಜನೆ, ಮಹಾರಾಜ ವಿಕ್ರಮಾರ್ಕನು ಯಜ್ಞವನ್ನು ಮಾಡುತ್ತಿದ್ದಾನೆ. ನಿನ್ನನ್ನು ಆಮಂತ್ರಿಸುವುದಕ್ಕಾಗಿ ನನ್ನನ್ನು ಕಳಿಸಿದ್ದಾನೆ. ಇದೋ, ನಿನಗೆ ನನ್ನ ಆಹ್ವಾನ” ಎಂದು ಹೇಳಿ ಸಮುದ್ರದ ನೀರಿಗೆ ಹೂವುಗಳನ್ನು ಸಮರ್ಪಿಸಿ ಕ್ಷಣಕಾಲ ನಿಂತನು.
ಆದರೆ ಯಾವುದೇ ಪ್ರತ್ಯುತ್ತರ ಬರಲಿಲ್ಲ. ಅವನು ನಿರಾಸೆಯಿಂದ ಉಜ್ಜಯಿನಿಗೆ ಹಿಂದಿರುಗಲು ಉದ್ಯುಕ್ತನಾದನು. ಆಗಲೇ ಹೊಳೆಯುತ್ತಿರುವ ಶರೀರವುಳ್ಳ ಓರ್ವ ಬ್ರಾಹ್ಮಣನ ರೂಪದಲ್ಲಿ ಎದುರಿಗÉ ಬಂದು ಸಮುದ್ರವು ಹೇಳಿತು – ‘ಎಲೈ ಬ್ರಾಹ್ಮಣನೆ, ವಿಕ್ರಮಾರ್ಕನು ನನ್ನನ್ನು ಆಮಂತ್ರಿಸಲು ನಿನ್ನನ್ನು ಕಳಿಸುವುದರ ಮೂಲಕ ನನ್ನನ್ನು ತುಂಬಾ ಸಂಮಾನಿಸಿ ಗೌರವಿಸಿದ್ದಾನೆ. ಆದರೆ ಕಾರಣಾಂತರಗಳಿಂದ ನಾನು ಅಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೂ ನಾನು ನನ್ನ ಸ್ನೇಹದ ಸಂಕೇತವಾಗಿ ರಾಜನಿಗೆ ಈ ನಾಲ್ಕು ರತ್ನಗಳನ್ನು ಕೊಡುವೆನು. ಇವು ಮಹಾಮಹಿಮೆಯುಳ್ಳ ರತ್ನಗಳು. ಇವುಗಳಲ್ಲಿ ಮೊದಲನೆಯ ರತ್ನವನ್ನು ಕೈಯಲ್ಲಿ ಹಿಡಿದು ರಾಜನು ಏನನ್ನು ನೆನಪಿಸಿಕೊಳ್ಳುತ್ತಾನೋ ಅದನ್ನು ಆ ರತ್ನ ಕೊಡುತ್ತದೆ. ಎರಡನೆಯ ರತ್ನವು ಅಮೃತಕ್ಕೆ ಸಮಾನವಾದ ಭೋಜನವನ್ನು ಕೊಡುತ್ತದೆ. ಮೂರನೆಯ ರತ್ನವು ಚತುರಂಗ ಬಲವನ್ನು ಕೊಡುತ್ತದೆ. ನಾಲ್ಕನೆಯ ರತ್ನವು ದಿವ್ಯಾಭರಣಗಳನ್ನು ಕೊಡುತ್ತದೆ. ನೀನು ಈ ರತ್ನಗಳನ್ನು ಸುರಕ್ಷಿತವಾಗಿ ಒಯ್ದು ಅವನಿಗೆ ಕೊಡು’ ಎಂದು ಹೇಳಿ ರತ್ನಗಳನ್ನು ಅವನ ಕೈಗೆ ಕೊಟ್ಟಿತು.
ಬಳಿಕ ಬ್ರಾಹ್ಮಣನು ಆ ರತ್ನಗಳನ್ನು ತೆಗೆದುಕೊಂಡು ಉಜ್ಜಯಿನಿಗೆ ಬಂದನು. ಆಗಷ್ಟೆ ಅಲ್ಲಿ ಯಜ್ಞವು ಮುಗಿದಿತ್ತು. ಮಹಾರಾಜನು ಮಂಗಲತೀರ್ಥದಿಂದ ಸ್ನಾನ ಮಾಡಿ ಎಲ್ಲ ಯಾಚಕರನ್ನೂ, ಬ್ರಾಹ್ಮಣರನ್ನೂ ಪೂಜಿಸಿ ಅವರು ಏನನ್ನು ಇಚ್ಛಿಸುತ್ತಾರೋ ಅವೆಲ್ಲವನ್ನೂ ಅವರಿಗೆ ಕೊಟ್ಟನು. ಈ ಬ್ರಾಹ್ಮಣನು ಮಹಾರಾಜನಿಗೆ ಸಮುದ್ರರಾಜನು ಅರ್ಪಿಸಿದ ನಾಲ್ಕು ರತ್ನಗಳನ್ನು ಕೊಟ್ಟು ಅವುಗಳ ಮಹಿಮೆಯನ್ನು ತಿಳಿಸಿದನು.
ಅನಂತರ ಮಹಾರಾಜನು, ‘ಎಲೈ ಬ್ರಾಹ್ಮಣನೇ, ನೀನು ಬರುವಾಗ ಯಜ್ಞ ಮುಗಿದುಹೋಗಿದೆ. ಯಜ್ಞದಕ್ಷಿಣೆಯ ಕಾಲವೂ ಕಳೆದುಹೋಗಿದೆ. ನಾನು ಎಲ್ಲ ಬ್ರಾಹ್ಮಣರನ್ನೂ ಪೂಜಿಸಿ ದಕ್ಷಿಣೆಕೊಟ್ಟು ಸಂತೋಷಪಡಿಸಿದೆ. ಆದರೆ ನೀನು ತಡವಾಗಿ ಬಂದದ್ದರಿಂದ ನಿನಗೆ ಏನನ್ನೂ ಕೊಡಲು ಸಾಧ್ಯವಾಗಲಿಲ್ಲ. ಹಾಗಾಗಿ ನೀನು ಈ ನಾಲ್ಕು ರತ್ನಗಳಲ್ಲಿ ನಿನಗೆ ಇಷ್ಟವಾದ ಒಂದನ್ನು ತೆಗೆದುಕೋ’ ಎಂದು ಅವನಿಗೆ ಹೇಳಿದನು.
ಬ್ರಾಹ್ಮಣನು, ‘ಮಹಾರಾಜ, ನಾನು ಮನೆಗೆ ಹೋಗಿ ನನ್ನ ಹೆಂಡತಿ, ಮಗ ಮತ್ತು ಸೊಸೆ ಇವರನ್ನು ಕೇಳಿ ಎಲ್ಲರಿಗೂ ಯಾವುದು ಇಷ್ಟವೋ ಅದನ್ನು ತೆಗೆದುಕೊಳ್ಳುವೆನು’ ಎಂದು ತಿಳಿಸಿದನು. ಮಹಾರಾಜನು, ‘ಹಾಗೆಯೇ ಮಾಡು’ ಎಂದನು.
ಬ್ರಾಹ್ಮಣನು ತನ್ನ ಮನೆಗೆ ಬಂದು ಎಲ್ಲ ವೃತ್ತಾಂತವನ್ನೂ ತಿಳಿಸಿದನು. ಅದನ್ನು ಕೇಳಿ ಮಗನು ‘ಚತುರಂಗ ಬಲವನ್ನು ಕೊಡುವ ರತ್ನವನ್ನು ತೆಗೆದುಕೊಳ್ಳೋಣ. ಯಾಕೆಂದರೆ ಅದರಿಂದ ಸುಖವಾಗಿ ರಾಜ್ಯವನ್ನು ಆಳಬಹುದು’ ಎಂದು ತನ್ನ ಅಭಿಪ್ರಾಯವನ್ನು ಹೇಳಿದನು.
ಆದರೆ ಬ್ರಾಹ್ಮಣನು ‘ಬುದ್ಧಿವಂತನಾದವನು ರಾಜ್ಯವನ್ನು ಬಯಸಬಾರದು. ಯಾಕೆಂದರೆ ರಾಜ್ಯವಾಳುವುದು ತುಂಬಾ ಕಷ್ಟ. ಆದ್ದರಿಂದ ನೆನಪಿಸಿಕೊಂಡಿದ್ದನ್ನೆಲ್ಲ ಕೊಡುವ ರತ್ನವಿದೆಯಲ್ಲ, ಅದನ್ನು ತೆಗೆದುಕೊಳ್ಳೋಣ’ ಎಂದು ಹೇಳಿದನು.
ಆದರೆ ಬ್ರಾಹ್ಮಣನ ಹೆಂಡತಿಯು, ‘ಅದು ಬೇಡ, ಅಮೃತಕ್ಕೆ ಸಮಾನವಾದ ಭೋಜನವನ್ನು ಕೊಡುವ ರತ್ನವನ್ನು ತೆಗೆದುಕೊಳ್ಳೋಣ. ಏಕೆಂದರೆ
ಎಲ್ಲ ಪ್ರಾಣಿಗಳೂ ಪ್ರಾಣಧಾರಣೆ ಮಾಡುವುದು ಆಹಾರದಿಂದಲೇ’ ಎಂದಳು.
ಸೊಸೆಯಾದರೋ, ‘ಅದೂ ಬೇಡ. ದಿವ್ಯಾಭರಣಗಳನ್ನು ಕೊಡುವ ರತ್ನವನ್ನು ತೆಗೆದುಕೊಳ್ಳಬೇಕು’ ಎಂದು ತನ್ನ ಅಭಿಪ್ರಾಯವನ್ನು ಹೇಳಿದಳು. ಹೀಗೆ ನಾಲ್ಕು ಜನರ ಮಧ್ಯದಲ್ಲಿ ಪರಸ್ಪರ ಜಗಳವುಂಟಾಗಿ ಕೊನೆಗೂ ನಿರ್ಣಯ ಮಾಡುವುದಕ್ಕೇ ಸಾಧ್ಯವಾಗಲಿಲ್ಲ. ಆಗ ಬ್ರಾಹ್ಮಣನು ಮಹಾರಾಜನ ಸಮೀಪಕ್ಕೆ ಬಂದು ನಾಲ್ಕು ಜನರ ವಿವಾದವೃತ್ತಾಂತವನ್ನು ತಿಳಿಸಿದನು. ಮಹಾರಾಜನು ಅದನ್ನು ಕೇಳಿ ನಾಲ್ಕೂ ರತ್ನಗಳನ್ನು ಬ್ರಾಹ್ಮಣನಿಗೇ ಕೊಟ್ಟುಬಿಟ್ಟನು.
ಹೀಗೆ ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ ‘ಎಲೈ ರಾಜನೆ, ಔದಾರ್ಯವೆಂಬುದು ಸಹಜಗುಣ, ಪ್ರಯತ್ನದಿಂದ ಬರುವಂತಹುದಲ್ಲ. ನಿನ್ನಲ್ಲಿ ಈ ರೀತಿಯ ಔದಾರ್ಯವು ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ’ ಎಂದು ಹೇಳಿತು.
ಅದನ್ನು ಕೇಳಿ ಮಹಾರಾಜನು ಸುಮ್ಮನಾದನು.
‘ಕೃತಜ್ಞತೆಯ ಪರೀಕ್ಷಣೆ’ ಎಂಬ ನಾಲ್ಕನೆಯ ಕಥೆ
ಮತ್ತೆ ಸಿಂಹಾಸನವನ್ನು ಏರಲು ಬಯಸಿ ಬರುತ್ತಿರುವ ಭೋಜರಾಜನನ್ನು ತಡೆದು ನಾಲ್ಕನೆಯ ಮೆಟ್ಟಿಲಿನಲ್ಲಿದ್ದ ಗೊಂಬೆಯು ಹೇಳಿತು – ‘‘ಎಲೈ ರಾಜನೆ, ಕೇಳು, ವಿಕ್ರಮಾರ್ಕನು ರಾಜ್ಯವಾಳುತ್ತಿದ್ದ ಕಾಲದಲ್ಲಿ ಸಕಲವಿದ್ಯೆಗಳಲ್ಲೂ ಪಾಂಡಿತ್ಯವನ್ನು ಪಡೆದಿದ್ದ ಒಬ್ಬ ಬ್ರಾಹ್ಮಣನಿದ್ದನು. ಅವನು ಸರ್ವಗುಣಸಂಪನ್ನ. ಆದರೆ ಅವನಿಗೆ ಮಕ್ಕಳಿರಲಿಲ್ಲ. ಒಂದು ದಿನ ಅವನ ಹೆಂಡತಿಯು, ‘ಪ್ರಾಣೇಶ್ವರ, ಪುತ್ರನಿಲ್ಲದಿದ್ದರೆ ಈ ಮನೆಗೆ ಮುಂದೆ ಗತಿ ಏನು?’ ಎಂದು ಬಹಳ ದುಃಖದಿಂದ ಕೇಳಿದಳು.
ಬ್ರಾಹ್ಮಣನು, ‘ಪ್ರಿಯೆ, ನೀನು ಸತ್ಯವನ್ನು ಹೇಳಿದೆ. ಆದರೆ ಪರಮೇಶ್ವರನ ಅನುಗ್ರಹವಿಲ್ಲದಿದ್ದರೆ ಪುತ್ರಪ್ರಾಪ್ತಿ ಆಗಲಾರದು’ ಎಂದನು. ಆಗ ಅವಳು, ‘ಹಾಗಾದರೆ ಪರಮೇಶ್ವರನ ಅನುಗ್ರಹಕ್ಕಾಗಿ ಯಾವುದಾದರೂ ವ್ರತವನ್ನು ನಡೆಸೋಣ’ ಎಂದಳು. ಬ್ರಾಹ್ಮಣನು ಅದನ್ನು ಒಪ್ಪಿ ಪರಮೇಶ್ವರನ ಪ್ರೀತಿಗಾಗಿ ರುದ್ರಾನುಷ್ಠಾನವನ್ನು ಮಾಡಿದನು. ಮುಂದೆ ಹಿರಿಯರ ಆದೇಶದಂತೆ ಮಾರ್ಗಶೀರ್ಷಮಾಸದ ಶುಕ್ಲಪಕ್ಷದ ತ್ರಯೋದಶಿಯಂದು ಶಾಸ್ತ್ರದಲ್ಲಿ ಹೇಳಿರುವಂತೆ ಪ್ರದೋಷವ್ರತವನ್ನೂ ಮಾಡಿದನು. ಅದರಿಂದ ಪರಮೇಶ್ವರನು ಪ್ರಸನ್ನನಾಗಿ ಆ ಬ್ರಾಹ್ಮಣನಿಗೆ ಪುತ್ರನನ್ನು ಅನುಗ್ರಹಿಸಿದನು.
ಮಗನು ಹುಟ್ಟಿದ ಮೇಲೆ ಬ್ರಾಹ್ಮಣನು ಅವನ ಜಾತಕರ್ಮಗಳನ್ನೆಲ್ಲ ಮಾಡಿ ಹನ್ನೆರಡನೆಯ ದಿನದಂದು ‘ದೇವದತ್ತ’ ಎಂದು ನಾಮಕರಣ ಮಾಡಿದನು. ಅನಂತರ ಕಾಲಕಾಲಕ್ಕೆ ತಕ್ಕಂತೆ ಅನ್ನಪ್ರಾಶನದಿಂದ ಉಪನಯನದವರೆಗೆ ಎಲ್ಲ ಸಂಸ್ಕಾರಗಳನ್ನೂ ಮಾಡಿಸಿದನು. ಉಪನಯನವಾದ ಮೇಲೆ ಅವನಿಗೆ ವೇದಶಾಸ್ತ್ರಗಳನ್ನು ಕಲಿಸಿ ಹದಿನಾರನೆಯ ವಯಸ್ಸಿಗೆ ಮದುವೆಯನ್ನೂ ಮಾಡಿಸಿದನು. ಅದಾದ ಮೇಲೆ ಮಗನಿಗೆ ಉಪದೇಶವನ್ನು ಮಾಡಿ ತಾನು ತೀರ್ಥಯಾತ್ರೆಗೆ ಹೊರಟುಹೋದನು. ದೇವದತ್ತನು ತಂದೆಯ ಉಪದೇಶವನ್ನು ಪಾಲಿಸುತ್ತ ಆ ನಗರದಲ್ಲೇ ವಾಸವಾಗಿದ್ದನು.
ಹೀಗಿರುತ್ತ ಒಮ್ಮೆ ದೇವದತ್ತನು ಹೋಮಕ್ಕೆ ಸಮಿತ್ತುಗಳನ್ನು ತರಲು ಮಹಾರಣ್ಯಕ್ಕೆ ಹೋಗಿ, ಅಲ್ಲಿ ಸಮಿತ್ತುಗಳನ್ನು ಸಂಗ್ರಹಿಸುತ್ತಿದ್ದನು. ಅದೇ ಹೊತ್ತಿಗೆ ಸರಿಯಾಗಿ ವಿಕ್ರಮಾರ್ಕನು ಬೇಟೆಗಾಗಿ ಅದೇ ಮಹಾರಣ್ಯಕ್ಕೆ ಬಂದನು. ಅವನು ಒಂದು ಹಂದಿಯನ್ನು ಹಿಂಬಾಲಿಸುತ್ತ ಅರಣ್ಯದ ಮಧ್ಯಭಾಗಕ್ಕೆ ಪ್ರವೇಶಿಸಿದ್ದನು. ಹಂದಿಯೇನೋ ತಪ್ಪಿಸಿಕೊಂಡು ಹೋಗಿತ್ತು. ಆದರೆ ವಿಕ್ರಮಾರ್ಕನು ನಗರಕ್ಕೆ ಹಿಂದಿರುಗುವ ದಾರಿ ತಿಳಿಯದೆ ಕಂಗಾಲಾಗಿದ್ದನು. ಆಗ ಅವನು ಎದುರಿಗೆ ಕಾಣಿಸಿದ ದೇವದತ್ತನನ್ನು ನೋಡಿ ಅವನ ಬಳಿ ನಗರಕ್ಕೆ ಹೋಗುವ ದಾರಿಯನ್ನು ಕೇಳಿದನು. ದೇವದತ್ತನು ಸಂತೋಷದಿಂದಲೇ ದಾರಿ ತೋರಿಸಿದುದು ಮಾತ್ರವಲ್ಲದೆ ತಾನೂ ಅವನ ಜೊತೆಗೆ ನಡೆಯುತ್ತ ಮಹಾರಾಜನನ್ನು ನಗರದವರೆಗೂ ತಲಪಿಸಿದನು. ಬಳಿಕ ಮಹಾರಾಜನು ದೇವದತ್ತನನ್ನು ಸಂಮಾನಿಸಿ ರಾಜಾಸ್ಥಾನದಲ್ಲಿ ಅವನನ್ನು ಯಾವುದೋ ಒಂದು ಕೆಲಸಕ್ಕೆ ನಿಯುಕ್ತಿಗೊಳಿಸಿದನು. ಬಳಿಕ ತುಂಬಾ ಕಾಲ ಕಳೆದುಹೋಯ್ತು.
ಹೀಗಿರಲು ಒಮ್ಮೆ ಮಹಾರಾಜನು, ‘ಈ ದೇವದತ್ತನು ನಗರದ ದಾರಿ ತೋರಿಸಿದ್ದು ಮಾತ್ರವಲ್ಲ, ಇಲ್ಲಿಯವರೆಗೂ ನನ್ನನ್ನು ಕರೆದು ತಂದು ಉಪಕಾರ ಮಾಡಿದ್ದಾನೆ. ಅವನ ಉಪಕಾರಕ್ಕೆ ಪ್ರತಿಯಾಗಿ ಯಾವುದನ್ನು ಕೊಟ್ಟು ನಾನು ಋಣಮುಕ್ತನಾದೇನು?’ ಎಂದು ಯಾರೊಡನೆಯೋ ಮಾತನಾಡುವಾಗ ಹೇಳಿದನು.
ಮಹಾರಾಜನ ಈ ಮಾತನ್ನು ಕೇಳಿಸಿಕೊಂಡ ದೇವದತ್ತನು ಮನಸ್ಸಿನಲ್ಲಿ, ‘ಅಬ್ಬ, ಎಂತಹ ಸತ್ಪುರುಷ ಇವನು! ನಾನು ಮಾಡಿದ ಅಷ್ಟು ಸಣ್ಣ ಉಪಕಾರವನ್ನೂ ಮರೆತಿಲ್ಲ. ಇರಲಿ, ಆದರೂ ಈತನು ಹೇಳುವುದು ನಿಜವೋ ಸುಳ್ಳೋ ಎಂದು ಪರೀಕ್ಷೆ ಮಾಡಿ ನೋಡುತ್ತೇನೆ’ ಎಂದು ಯೋಚಿಸಿ ಮಹಾರಾಜನ ಸಣ್ಣವಯಸ್ಸಿನ ಮಗನನ್ನು ಬೇರೆಯವರಿಗೆ ತಿಳಿಯದಂತೆ ತನ್ನ ಮನೆಗೆ ಕರೆತಂದನು. ಅಲ್ಲಿ ಅವನನ್ನು ರಹಸ್ಯವಾಗಿ ಇರಿಸಿ ಅವನ ಆಭರಣಗಳನ್ನು ಸೇವಕನ ಕೈಗೆ ಕೊಟ್ಟು ನಗರದಲ್ಲಿ ಮಾರಾಟ ಮಾಡುವಂತೆ ಹೇಳಿ ಕಳಿಸಿದನು.
ಈ ನಡುವೆ ರಾಜಭವನದಲ್ಲಿ ‘ರಾಜಕುಮಾರನನ್ನು ಕಳ್ಳರು ಅಪಹರಿಸಿದ್ದಾರೆ’ ಎಂದು ದೊಡ್ಡ ಹಾಹಾಕಾರ ಉಂಟಾಯಿತು. ಮಹಾರಾಜನು ಅವನನ್ನು ಹುಡುಕುವುದಕ್ಕೆ ಅಧಿಕಾರಿಗಳನ್ನು ಕಳಿಸಿದನು. ಅವರು ನಗರದ ಅಂಗಡಿಗಳಲ್ಲಿ ರಾಜಕುಮಾರನ ಆಭರಣಗಳನ್ನು ಮಾರಾಟಮಾಡಲು ತೊಡಗಿದ್ದ ದೇವದತ್ತನ ಸೇವಕನನ್ನು ಕಂಡರು. ಆ ಆಭರಣಗಳು ರಾಜಕುಮಾರನವೇ ಎಂದು ತಿಳಿದು ಅವರು ಅವನನ್ನು ಬಂಧಿಸಿ ಮಹಾರಾಜನ ಬಳಿಗೆ ಕರೆದೊಯ್ದರು. ಅಲ್ಲಿ ಅವರು ಅವನಿಗೆ, ‘ಎಲೈ ಪಾಪಿ, ಈ ಆಭರಣಗಳು ನಿನಗೆ ಹೇಗೆ ಸಿಕ್ಕವು?’ ಎಂದು ಕೇಳಿದರು. ಅವನು, ‘ನನ್ನ ಒಡೆಯನಾದ ದೇವದತ್ತನು ಈ ಆಭರಣಗಳನ್ನು ನಗರದಲ್ಲಿ ಮಾರಿ ಹಣವನ್ನು ತೆಗೆದುಕೊಂಡು ಬಾ ಎಂದು ನನಗೆ ಆದೇಶ ಮಾಡಿದ್ದಾನೆ’ ಎಂದನು.
ಬಳಿಕ ಮಹಾರಾಜನು ದೇವದತ್ತನನ್ನು ಕರೆಯಿಸಿ, ‘ಎಲೈ ದೇವದತ್ತನೆ, ಈ ಆಭರಣಗಳನ್ನು ನಿನಗೆ ಯಾರು ಕೊಟ್ಟರು?’ ಎಂದು ಕೇಳಿದನು.
ದೇವದತ್ತನು, ‘ಯಾರೂ ಕೊಟ್ಟಿಲ್ಲ, ನಾನೇ ಧನಲೋಭಿಯಾಗಿ ನಿನ್ನ ಮಗನನ್ನು ಕೊಂದು ಅವನ ಆಭರಣಗಳನ್ನು ಇವನ ಕೈಗೆ ಕೊಟ್ಟೆ, ನನ್ನ ಕರ್ಮವಶದಿಂದ ನನಗೆ ಈ ರೀತಿ ಬುದ್ಧಿಯುಂಟಾಯಿತು. ಈಗ ನಿನಗೆ ಹೇಗೆ ತೋರುತ್ತದೆಯೋ ಹಾಗೆ ಮಾಡು’ ಎಂದು ಹೇಳಿ ಮುಖ ಕೆಳಗೆ ಮಾಡಿ ನಿಂತನು. ಆ ಮಾತನ್ನು ಕೇಳಿ ರಾಜಾ ವಿಕ್ರಮನು ಸುಮ್ಮನೆ ಇದ್ದನು.
ಆಗ ಸಭಿಕರು, ‘ಮಹಾರಾಜ, ಇವನು ರಾಜಕುಮಾರನನ್ನು ಕೊಂದಿದ್ದಾನೆ. ಬಂಗಾರವನ್ನೂ ಕದ್ದಿದ್ದಾನೆ. ಇವನನ್ನು ಕರುಣೆಯಿಲ್ಲದೆ ಶೂಲಕ್ಕೆ ಏರಿಸಿ ಕೊಲ್ಲಬೇಕು’ ಎಂದರು. ಮಂತ್ರಿಗಳೂ, ‘ಇವನ ಶರೀರವನ್ನು ನೂರಾರು ತುಂಡುಮಾಡಿ ಮಾಂಸವನ್ನು ಹದ್ದುಗಳಿಗೆ ಬಲಿಕೊಡಬೇಕು’ ಎಂದರು.
ಅವರ ಮಾತುಗಳನ್ನು ಕೇಳಿ ಮಹಾರಾಜನು – ‘ಎಲೈ ಸಭಿಕರೆ, ಇವನು ನನ್ನ ಆಶ್ರಿತನು. ಅದೂ ಅಲ್ಲದೆ ಹಿಂದೆ ಒಮ್ಮೆ ನನಗೆ ನಗರದ ದಾರಿಯನ್ನು ತೋರಿಸಿ ಉಪಕಾರ ಮಾಡಿದ್ದಾನೆ. ಸತ್ಪುರುಷನು ಆಶ್ರಿತರಾದವರ ಬಗ್ಗೆ ಗುಣ-ದೋಷವನ್ನು ಲೆಕ್ಕಿಸುವುದಿಲ್ಲ’ ಎಂದು ಹೇಳಿ ಮತ್ತೆ ದೇವದತ್ತನಿಗೆ, ‘ವಿಪ್ರೋತ್ತಮ, ಭಯ ಪಡÀಬೇಡ. ನನ್ನ ಮಗನು ಹಿಂದೆ ಮಾಡಿದ ಪಾಪಕರ್ಮಗಳಿಂದಲೇ ಸತ್ತಿರಬಹುದು. ಇದರಲ್ಲಿ ನಿನ್ನದೇನೂ ತಪ್ಪಿಲ್ಲ.
ಯಾಕೆಂದರೆ ಯಾರೂ ಹಿಂದೆ ಮಾಡಿದ ಕರ್ಮದ ಫಲವನ್ನು ಅನುಭವಿಸದೇ ಮುಂದೆ ಹೋಗಲಾರರು. ಅದಲ್ಲದೆ ಮಹಾರಣ್ಯದಲ್ಲಿ ಬಿದ್ದ ನನ್ನನ್ನು ನಗರಕ್ಕೆ ತಂದು ನೀನು ದೊಡ್ಡ ಉಪಕಾರ ಮಾಡಿರುವಿ. ಅಂತಹ ನಿನಗೆ ಸಾವಿರಾರು ರೀತಿ ಪ್ರತ್ಯುಪಕಾರ ಮಾಡಿದರೂ ನಿನ್ನ ಋಣ ತೀರಿಸಲು ಸಾಧ್ಯವಿಲ್ಲ’ ಎಂದನು.
ಬಳಿಕ ಅನೇಕ ವಸ್ತ್ರಾಭರಣಗಳನ್ನು ಕೊಟ್ಟು ಅವನನ್ನು ಸಂಮಾನಿಸಿ ಕಳಿಸಿದನು. ದೇವದತ್ತನು ಮನೆಗೆ ಹೋಗಿ ರಾಜಕುಮಾರನನ್ನು ಮರಳಿ ಕರೆತಂದು ರಾಜನಿಗೆ ಒಪ್ಪಿಸಿದನು. ಮಹಾರಾಜನು ಆಶ್ಚರ್ಯದಿಂದ ‘ಇದೇನು?’ ಎಂದು ಕೇಳಲಾಗಿ ದೇವದತ್ತನು, ‘ನಿನ್ನ ಸ್ವಭಾವದ ಪರೀಕ್ಷೆಗಾಗಿಯೇ ನಾನು ಹೀಗೆ ಮಾಡಿದೆ. ನಿನ್ನಲ್ಲಿ ನನಗೆ ದೃಢವಿಶ್ವಾಸ ಇದೆ. ಕಾರಣವಿಲ್ಲದೆ ಎಲ್ಲ ಜನರಿಗೂ ಉಪಕಾರ ಮಾಡುವ ಸ್ವಭಾವ ನಿನ್ನದು. ಲೋಕದಲ್ಲಿ ನೀನೇ ಸಜ್ಜನನು’ ಎಂದನು.
– ಹೀಗೆ ಕಥೆಯನ್ನು ಹೇಳಿ ಗೊಂಬೆಯು ರಾಜನಿಗೆ ಈ ರೀತಿಯ ಪರೋಪಕಾರಗುಣ ನಿನ್ನಲ್ಲಿ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ” ಎಂದಿತು.
ಭೋಜರಾಜನು ಸುಮ್ಮನಾದನು.
(ಮುಂದುವರಿಯುವುದು)