ಅವಳೊಂದು ನಗೆ. ಅಷ್ಟು ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಹೆಣ್ಣಿನ ನಗೆಯ ಅರ್ಥಗಳನ್ನು ಹುಡುಕಹೋಗಿ ಸೋತವರಲ್ಲಿ ನಾನೂ ನಿಲ್ಲಬೇಕಾದ ಸಂದರ್ಭದಲ್ಲಿ ಅವಳ ಬಗ್ಗೆ ಹೇಳದಿದ್ದರೆ ಹೇಗೆ? ಬದುಕಿಗೂ ನಗುವಿಗೂ ಜೋಡಿಸಿಕೊಂಡ ಕೊಂಡಿಗಳ ಕತೆ ಇದು!
ಅವಳಿಗೆ ಹೆಸರು ಬೇಡ, ತಿಳಿದಿದ್ದರೂ ಹೇಳಬಾರದು ಅಂದುಕೊಂಡಿದ್ದೇನೆ. ಈ ಸ್ವಚ್ಛ, ಮುಗ್ಧ ನಗೆಯ ಮೂಲಕವೇ ನನ್ನ ಮನಸ್ಸಿನ ಪದರಗಳಲ್ಲುಳಿದವಳು ಅಷ್ಟೇ, ಕೆಲವೊಮ್ಮೆ ಎಲ್ಲೋ ಕೂಡಿದ ಕೊಂಡಿಗಳು ಇನ್ನೆಲ್ಲೋ ಕಳಚಿಕೊಳ್ಳುತ್ತವಂತೆ…. ಹೊಗೆಯ ಮುಂದೆ ಹರಡಿದ ನಗೆಯಾಗಿ ಬೆನ್ನ ಹಿಂದಿನ ಬದುಕಿಗೆ ಬಣ್ಣದ ಹೊದಿಕೆಯೆಳೆದು ಆ ಮುಖವನ್ನಷ್ಟೇ ಹೊದ್ದು ನಕ್ಕವಳ ಸಂಗತಿಯೆಂದರೆ ಹೀಗಿರದೇ ಇನ್ನೇನಿರಲು ಸಾಧ್ಯ? ಆದರೂ ಅದೇಕೋ ಆ ಕ್ಷಣ ಮನಸು ಅವಳನ್ನು ‘ಆಯಿ’ ಅಂತ ಗುರುತಿಸಿಕೊಂಡಿತು.
ಎಂಟು ವರ್ಷಗಳ ಹಿಂದಿನ ಒಂದು ದಿನ. ಹಕ್ಕಿಗಳು ಗೂಡಿನ ಪಿರಿ ಪಿರಿಗಳ ಕೊಕ್ಕು ತುಂಬಲು ಕಾಳು ತರಲೆಂದು ಮೈ ಮುರಿದು ಹಾರಿ ಹೊರಡುವ ದರ್ದುಬಿದ್ದಂಥ ಮುಂಜಾವಿನ ಹೊತ್ತು. ಅಂಗಳದ ಮಲ್ಲಿಗೆ ಬಳ್ಳಿಯ ಹತ್ತಿರ ಅದು ಬಿಟ್ಟುಕೊಡುತ್ತಿದ್ದ ಘಮಲನ್ನು ಹೀರಿಕೊಳ್ಳುತ್ತ ನಿಂತ ನಾನು ಕೈಯಲ್ಲಿದ್ದ ಹಿಂದಿನ ವಾರದ ಮ್ಯಾಗಜೀನಿನ ಪುಟದಲ್ಲಿ ಅಗಲವಾಗಿ ನಗುತ್ತಿದ್ದ ಆ ದಂಪತಿಗಳ ಮುಖದಲ್ಲಿನ ಪುಷ್ಕಳ ನಗೆಗೆ ಏನಾದರೂ ವಿಶೇಷ ಅರ್ಥ ನನಗಷ್ಟೇ ಯಾಕೆ ಕಾಣಿಸುತ್ತಿದೆಯೋ? ಅಂತ ಕೆದಕಿ ಉತ್ತರ ಹುಡುಕುತ್ತಿದ್ದಾಗ ರಾಮ, ನನ್ನ ಪುಟ್ಟ ಅಂಗಳದ ಗಿಡಗಳ ಮಾಲಿ ಅವನು, ಹಾಗೂ ಅವನ ಬೆನ್ನ ಹಿಂದೆ ಗುಬ್ಬಿಯ ಹಾಗೆ ನಿಂತ ಅವಳನ್ನು ಮೊದಲ ಸಲ ಕಂಡಿದ್ದೆ. ಮೂಳೆಗಳ ಮೇಲೊಂದು ಬಣ್ಣದ ಕವುದಿಯ ಸುತ್ತಿದಂಥ, ದಪ್ಪ ಸೀರೆ, ತಲೆತುಂಬಿದ ಸೆರಗಿನ, ಗೊಂಬೆಯಂಥ ನಾಲ್ಕಡಿಯ ಮೂರ್ತಿ. ಮುಖದಲ್ಲಿ ಇನಿತು ನಗೆ, ಇನಿತು ಆತಂಕ, ಕೆಲಸ ಸಿಕ್ಕೀತೋ ಇಲ್ಲವೋ…
“ಎಂಥಾಕಿನ್ನ ಕರ್ಕೊಂಡು ಬಂದಿ? ಇದೇನು ಕೆಲಸಾ ಮಾಡ್ತದನೋ ರಾಮ್ಯಾ.. ಇಕಿನ್ನ ನೋಡಿದರ ನಾವೇ ಅಕೀಗೆ ಎರಡು ಚಾಪೀ ಹಾಸಿ ಮಲ್ಕೋ ಅಂತ ಹೇಳಬೇಕನಸತದಲ್ಲೋ” ಎಂದು ನಾನು ಆಕ್ಷೇಪದ ಸ್ವರ ಎತ್ತಿದ್ದೆ.
“ಇಲ್ರೀ ಮ್ಯಾಡಮ್ಮಾರ…. ಹಿಂಗ ಕಾಣ್ತಾಳಲ್ಲ, ದುಡದ್ರ ಎತ್ತಿನಂಗ ದುಡೀತಾಳ್ರೀ…. ನೀವು ನೋಡೆರೆ ನೋಡ್ರಿ” ಎನ್ನುವ ಶಿಫಾರಸಿನೊಂದಿಗೆ ರಾಮ್ಯಾ ಅವಳನ್ನು ನಮ್ಮ ಮನೆಯ ಎಂಟ್ರಿ ಮಾಡಿಸಿದ್ದ. ಅವನಿಗೆ ಯಾಕೋ ‘ಬ್ಯಾಡ ಬಿಡು’ ಅನ್ನಲು ಮನಸ್ಸೇ ಬರಲಿಲ್ಲ… ಅವಳ ಹಣ್ಣು ಮುಖದ ಗೆರೆಗಳಿಡೀ ತುಂಬಿ ನಿಂತ ಜೀವನಾನುಭವದ ವ್ಯಾಖ್ಯೆಗಳಿಗೆ ಅರ್ಥ ಹಚ್ಚುವ ಕ್ಷಣ ಅದಾಗಿರಲಿಲ್ಲವಾದರೂ ಬೊಚ್ಚು ಬಾಯಿಯಲ್ಲಿ ಅಲ್ಲೆಲ್ಲೋ ಬೀಳಲು ಮರೆತಂತೆ ಉಳಿದ ನಾಲ್ಕೇ ಹಲ್ಲುಗಳು ಇಷ್ಟ್ಯಾಕೆ ಬಿಳಿ ಅನಿಸಿಬಿಟ್ಟಿತು…. ಗುಲಗಂಜಿಯಂಥ ಕಣ್ಣುಗಳ ಹೊತ್ತಿದ್ದ ಆ ಗುಳಿಗಳು ಹೇಳುವುದು ಬಹಳವೇ ಇದ್ದೀತು. ಆದರೆ ಅದೆಲ್ಲವನ್ನೂ ಮೀರಿಸುವ ಮುದುಕಿಯ – ಆಯಿಯ – ಆ ನಗೆ ವಿಲಕ್ಷಣ ಅಂತೇನಲ್ಲ, ಆದರೆ ಬದುಕಿಗೆ ಬಂದು ಬಿದ್ದಿರಬಹುದಾದ ಕಷ್ಟಗಳಿಗೆಲ್ಲ ಬಾರಿಸಿ ಒಂದು ಒದ್ದಂಥ ಭಾವ ಅದರಲ್ಲಿ. ಏನೇನೋ ಯೋಚಿಸಿ ಪೂರಾ ನಿರ್ಧಾರಕ್ಕೆ ಬಾರದೆ ಸಹ ಒಳಗೆ ಬರಗೊಟ್ಟಿದ್ದ ಅವಳನ್ನು ನಾನೇನೂ ದೊಡ್ಡ ಕೆಲಸಗಳಿಗೆ ಹಚ್ಚಲೇ ಇಲ್ಲ. ಆರು ವರ್ಷಗಳಾಗಿದ್ದೀತು ತಮ್ಮ ಶಾಶ್ವತ ಸ್ಥಳವೇ ಅದು ಎಂಬಂತೆ ಹಾಸಿಗೆಯನ್ನು ಕಚ್ಚಿಕೊಂಡು ಮಲಗಿದ್ದರು ಎಂಬತ್ತೈದರ ನನ್ನ ಅತ್ತೆ, ಹಗಲಿರುಳು ಅವರ ಜೊತೆಯಲ್ಲಿರಲು ಒಂದು ಜೀವ ಬೇಕಿತ್ತು, ಉಂಡು ತಿಂದು ಅಲ್ಲೇ ಮಲಗಿ ಅವರ ಮಾತುಗಳಿಗೆ ತಕ್ಷಣ ಓಗೊಡುವ ಕೆಲಸ ಅಷ್ಟೇ. ಇನ್ನುಳಿದ ಮೆಡಿಕಲ್ ಅಗತ್ಯಗಳಿಗೆ ಅಂದರೆ ಬಿಪಿ ನೋಡಿ, ಡಯಾಬಿಟೀಸಿನ ಇಂಜೆಕ್ಷನ್ ಚುಚ್ಚಿ, ಇನ್ನೇನಾದರೂ ಆದರೆ ಡಾಕ್ಟರಿಗೆ ಸುದ್ದಿ ಕೊಡಲು ನರ್ಸ್ ಒಬ್ಬಾಕೆ ಇದ್ದೇ ಇದ್ದಳು. ಅವರ ಮಾತು ಕೇಳಿ, ತಾ ಅಂದದ್ದನ್ನು ತಂದು ಕೊಟ್ಟು ಗಿಟ್ಟು ಮಾಡಬೇಕು. ಅಷ್ಟಕ್ಕೆಲ್ಲ ಈ ಮುದುಕಿ ಸಾಕು. ಹತ್ತು ದಿನಕ್ಕೆ ಆಯಿಯ ನಗೆ ನನಗೂ ನನ್ನ ಮಾತುಗಳು ಆಯಿಗೂ ಅಭ್ಯಾಸವಾಗಿ ಬಿಟ್ಟವು.
****
ರಾತ್ರಿ ಕಾಂತಿ ಫೋನು ಮಾಡ್ತಾಳೆ – “ಇನಫ್ ಆಫ್ ಇನಫ್ ಅಕ್ಕ, ಇನ್ನು ಮುಗೀತು.”
ಕಿರಣನ ಬಗ್ಗೆ ತಿಳಿಯದೇ ಮದುವೆ ಮಾಡಿಕೊಂಡವಳಲ್ಲ ಕಾಂತಿ. ಕಾರ್ಪೋರೇಟ್ ಜಗತ್ತಿನ ಸಾಫ್ಟ್ವೇರ್ ಉದ್ಯಮದ ನೌಕರಿಗಳು ಪ್ರವಾಹ ಉಕ್ಕಿ ಬಂದು ಎಡಬಲದವರನ್ನೆಲ್ಲ ಸೇರಿ ಕೊಚ್ಚಿಕೊಂಡು ಹರಿಯುತ್ತ ಯಾವಾವುದೋ ಕಡ್ಡಿಗಳನ್ನು ಸ್ವಲ್ಪ ಸಮಯ ಒಟ್ಟಿಗಿಟ್ಟು ಮತ್ತೆ ಬೇರೆಲ್ಲೋ ಒಯ್ದು ಬಿಸಾಕುತ್ತ ಪ್ರವಾಹ ಇಳಿದಾಗ ಆ ಕಡ್ಡಿಗಳು ಅನಾಥವಾಗಿ ದಂಡೆಗೆ ಬಿದ್ದು…. ಕಿರಣ್ ಇವಳಿಗೆ ಸಿಕ್ಕಿದ್ದು ಇಂಥದೇ ಒಂದು ಆನ್ ಸೈಟ್ ಪ್ರಾಜೆಕ್ಟಿನ ಹೊತ್ತಿನಲ್ಲಿ…. ಮೂರೆಂದರೆ ಮೂರೇ ತಿಂಗಳು ಹಗಲು ರಾತ್ರಿ ಒಟ್ಟಿಗೆ ನಿದ್ದೆಗೆಟ್ಟು ಕಂಪ್ಯೂಟರೆದುರು ಕೂತು ತೊಂಬತ್ತು ದಿನಗಳಾಗುವ ಹೊತ್ತಿಗೆ ಆ ಪ್ರಾಜೆಕ್ಟಿನ ಫಲಿತಾಂಶವೂ ಇವರಿಬ್ಬರ ರಿಜಿಸ್ಟರ್ಡ್ ಮದುವೆಯ ನಿರ್ಧಾರವೂ ಒಟ್ಟಿಗೇ ಹೊರಬಿದ್ದಿದ್ದವು.
ನಾನೇ ಹೇಳಿದ್ದೆ ಅವಳಿಗೆ “ಇಷ್ಟು ಅವಸರದಿಂದ ಮದುವೆ ಅಂತ ಯಾಕ್ ನಿರ್ಧಾರ ಮಾಡ್ತೀ ಕಾಂತೀ, ಮೂರೇ ತಿಂಗಳಲ್ಲಿ ಎಷ್ಟು ಅರ್ಥ ಮಾಡಿಕೊಂಡೀ ನೀ ಅವನ? ಎಲ್ಲಿಂದ ಬಂದವನೋ, ಅವನು ಯಾರೋ…. ಇನ್ನೂ ಸ್ವಲ್ಪ ಸಮಯ ಕೊಡಬಾರದೇನು ಇದಕ್ಕೆ?”
ನಕ್ಕಿದ್ದಳು ತಂಗಿ, “ಕಮಾನ್ ಸಿಸ್, ಯಾವ ಶತಮಾನದ ವಿಚಾರ ಕಟ್ಕೊಂಡೀ ಇನ್ನೂ…. ನೀನೇ ಹೇಳ್ತೀಯಲ್ಲಾ, ಅನ್ನ ಬೆಂದಿದ್ದು ನೋಡ್ಲಿಕ್ಕೆ ಒಂದೇ ಒಂದಗುಳು ಹಿಸುಕಿ ನೋಡಿದ್ರೆ ಸಾಕಂತ….”
ತಂಗಿ ನಕ್ಕಿದ್ದಳು, ನಾನಲ್ಲ…. ಒಂದಗುಳಿನ ಲೆಕ್ಕವನ್ನು ಯಾವಾವುದಕ್ಕೆಲ್ಲ ಅನ್ವಯಿಸಬಹುದೋ ಬದುಕಿನ ಲೆಕ್ಕಾಚಾರಕ್ಕೆ ಮಾನದಂಡಗಳೇ ಬೇರೆ ಹುಡುಗೀ…. ಎನ್ನಬೇಕೆನಿಸಿದ ನಾಲಿಗೆಯನ್ನು ತಡೆಯಬೇಕಾಯ್ತು. ಕಾಂತಿ ಕಿರಣ್ ಮದುವೆ ಮುಗಿಸಿಕೊಂಡು ಜರ್ಮನಿಯ ವಿಮಾನ ಏರಿ ಅಲ್ಲಿನ ಹತ್ತಿಪ್ಪತ್ತು ಫೋಟೋ ಕಳಿಸುತ್ತ ಆ ಮದುವೆಯ ಉತ್ತರಾರ್ಧದ ಮೊದಲ ಭಾಗದ ಖುಶಿಗಳನ್ನು ಜಗಜ್ಜಾಹೀರು ಮಾಡಿದ್ದು….
ನಾಲ್ಕು ವರ್ಷಕ್ಕೆ ತೊಡೆ ತುಂಬ ಮಲಗಿದ ಅವಳ ಅಲ್ಲ ಅವರಿಬ್ಬರ ಮಗು, ಬಹುಶಃ ಕಾಂತಿಯ ಸಾಫ್ಟ್ವೇರ್ ಜಗತ್ತು ಎಂಟು ಪರ್ಸೆಂಟಿಗಿಳಿದ ಬ್ಯಾಟ್ರಿಯ ಧಾಟಿಯಲ್ಲಿ ಮಂಕಾಗಿ ಕಣ್ಣು ಮಿಟುಕಿಸಲು ಶುರುವಾಗಿದ್ದೂ ಆಗಲೇ. ಎಲ್ಲವೂ ನನ್ನ ಕಣ್ಣೆದುರಿನಲ್ಲೇ ನಡೆಯದಿದ್ದರೂ ನನ್ನದೇ ಬದುಕಿನ ಭಾಗವೂ ಆಗಿದ್ದು ಖರೆ.
ಎಷ್ಟು ವೇಗದಿಂದ ಮದುವೆಯ ತೀರ್ಮಾನ ತೊಗೊಂಡಳೋ ಬಹುಶಃ ಅದೇ ಸ್ಪೀಡಿನಲ್ಲೇ ಕಾಂತಿ ವಿಚ್ಛೇದನಕ್ಕೂ ಅರ್ಜಿ ಹಾಕಿದ್ದಳು. ಕಾರಣ ಮತ್ತದೇ…. ಅವನೇ…. ಕಿರಣ್! ಹೆಣ್ಣು ಒಮ್ಮೆ ಹೆಂಡತಿ ಆದರೆ
ಏನನ್ನಾದರೂ ಸಹಿಸಬಹುದೇನೋ ಗಂಡನ ವ್ಯಭಿಚಾರವನ್ನಲ್ಲ….
****
ನಾನು ಮನೆಯಲ್ಲಿ ತುಪ್ಪ ಹಾಕಿ ಏನಾದರೂ ಹುರಿಯತೊಡಗಿದರೆ ನಮ್ಮನೆಯ ಆ ನಗುವಿನ ಮೂಗು ಮುಖ ಎರಡೂ ಅರಳುತ್ತಿತ್ತು…
“ಯಮ್ಮಾ, ಶ್ಯಾವಿಗೀ ಮಾಡಾಕತ್ತೀರೀ ಯಾನ್ ಸಜ್ಜಕಾ(ಸಜ್ಜಿಗೆ)?” ನಿಸ್ಸಂಕೋಚವಾಗಿ ಕೇಳಿ ನಾಲ್ಕಾರು ಸಲ ಅಡಿಗೆ ಮನೆಗೆ ಸುಳಿದಾಡಿ… ಅಲ್ಲ ಅವಳು ಹೇಳುವುದೇನೂ ಬೇಕಿರಲಿಲ್ಲ ನನಗೆ. ಅರವತ್ತೆಪ್ಪತ್ತರವರ ನಾಲಿಗೆಗಳು ಸಿಹಿಯತ್ತ ಬಲು ಹೆಚ್ಚು ಆಕರ್ಷಿತವಾಗುತ್ತವೆ ಎಂದು ನನ್ನ ಡಾಕ್ಟರ್ ಅಣ್ಣ ಎಂದೋ ಹೇಳಿದ ನೆನಪು. ಜಿಹ್ವೇಂದ್ರಿಯಕ್ಕೆ ಜೈ ಎನ್ನುತ್ತ ಮಾಡಿದ ಸಿಹಿಯಲ್ಲಿ ಅವಳದೊಂದು ದೊಡ್ಡ ಪಾಲು ಇಟ್ಟೇ ಇಡ್ತೀನಿ ನಾನು. ಆದರೂ ಅದು ನಾಲ್ಕಾರು ಸಲ ಅಡಿಗೆ ಮನೆಗೆ ಸುಳಿದಾಡಿ….
ಜೀವನ ಉಣ್ಣಿಸುವ ರುಚಿಗಳಲ್ಲಿ ಒಂಬತ್ತು ರಸಗಳನ್ನು ಕೂಡಿಸಿಯೇ ಕೊಟ್ಟಿರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಈ ನಗು ಕಹಿ, ಒಗರು, ಹುಳಿ, ಖಾರವನ್ನೇ ಉಂಡು ಸಿಹಿಯನ್ನು ಆಗೀಗ ಒಂದಿಷ್ಟು ನೆಂಚ್ಕೊಂಡಿತ್ತು. ಹೆಚ್ಚೇನಿಲ್ಲ, ಹನ್ನೆರಡಕ್ಕೆ ಕತ್ತಿನಲ್ಲಿ ತಾಳಿ, ಹದಿನಾರಕ್ಕೆ ಎರಡು ಕೂಸು – ಅವಳಿ ಜವಳಿ – ತೊಡೆ ತುಂಬ, ಹದಿನೇಳಕ್ಕೆ ಗಂಡ ಸತ್ತ! ಮುಗೀತು ಅವಳ ಬದುಕಿನ ಐದು ವರ್ಷದ ಪೂರ್ಣಾಧ್ಯಾಯದ ಸುದ್ದಿ. ಅಲ್ಲಿಂದ ಮುಂದೆ ರಾಮ್ಯಾ ಹೇಳಿದಂತೆ ಅವಳೊಂದು ದುಡಿಯುವ ಎತ್ತು ಅಷ್ಟೇ!
“ನನ್ನ ಸೊಸೀನೂ ಸಜ್ಜಕಾ (ಸಜ್ಜಿಗೆ) ಮಾಡ್ತಿದ್ದಳು.” ಅನ್ನುತ್ತ, ನಾನು ಕೊಟ್ಟ ಸಜ್ಜಿಗೆಯನ್ನು ಚಪ್ಪರಿಸಿ ತಿನ್ನುತ್ತ ನಗುತ್ತಿದ್ದಳು. ಕಣ್ಣಲ್ಲಿ ಹಳೆಯ ನೆನಪು ಸದಾ ಖುಷಿಯನ್ನೇ ತುಂಬುತ್ತದೆ ಎಂಬ ಗ್ಯಾರಂಟೀ ಎಲ್ಲಿದೆ? ಇವಳ ಕಣ್ಣಲ್ಲಂತೂ ಅದರ ಸೊಲ್ಲಿಲ್ಲ.
ತಿಂದು ಮುಗಿಸಿ ತಟ್ಟೆ ಕೆಳಗಿಡುವ ಮೊದಲು ಅವಳು ಹೇಳದೇ ಉಳಿದ ‘ಇನ್ನಷ್ಟು’ ಎಂಬ ಕೋರಿಕೆಯನ್ನರ್ಥ ಮಾಡಿಕೊಳ್ಳಲಾರದ ಪೆದ್ದಿ ನಾನೇನಲ್ಲ. ಪಾತ್ರೆಗೆ ಇನ್ನಷ್ಟು ತುಂಬಿಸಿಕೊಟ್ಟಾಗ ಅವಳಿಗಿಂತ ಹೆಚ್ಚಿನ ಖುಷಿ ನನಗೇ ಯಾಕೋ? ಎತ್ತಿ ಕೊಟ್ಟೆ ಎನ್ನುವ ಅಹಂಭಾವ ಅದಲ್ಲ. ತಿಂದು ಹಿಗ್ಗಿದವಳ ಖುಷಿಯ ಮರು ಅಲೆ ಅಷ್ಟೆ.
ಅವಳ ಗಂಡನಾಗಿದ್ದವನ ಸುದ್ದಿ ಹೇಳುತ್ತಿದ್ದಳು ಒಮ್ಮೊಮ್ಮೆ. “ಇಲ್ಲ ಬಿಡ್ರಿ ಭಾಳೇನು ಕೆಟ್ಟ ಇರಲಿಲ್ಲ ಅಂವಾ” ಎನ್ನುತ್ತಾ ಗತಜೀವನದ ಅಧ್ಯಾಯಕ್ಕಿಳಿದು ಏನೋ ಹೆಕ್ಕಿ ತಂದವರ ಥೇಟು ಧಾಟಿಯಲ್ಲಿ ತನ್ನ ಪುಟ್ಟ ಪ್ರಪಂಚದ ಮೊದಲ ಅಧ್ಯಾಯದ ಪುಟ ತೆರೆಯುವ ಅವಳ ಶಬ್ದಗಳಲ್ಲಿ ಗಂಡಸಿನಲ್ಲಿರುವ ಒಳ್ಳೆಯತನದ ವ್ಯಾಖ್ಯೆಗಳಿರುತ್ತಿದ್ದುವು…. ಅವಕ್ಕೆಲ್ಲ ಅವಳೂ ಕೊಟ್ಟ ಅರ್ಥವೇ ಬೇರೆಯಾಗಿರುತ್ತಿತ್ತು…. “ಹೂಂ, ಕುಡೀತಿದ್ದ, ಅದರಾಗ ಹುಣ್ಣಿವೀ…. ಅಮಾಶೀ ಹಬ್ಬ ಅಂದ್ರ ಕುಡಿಲಾರದ ಗಂಡಸರು ಎಲ್ಲಿರತಾರ ಹೇಳ್ರಿ?” ಅಬ್ಬ! ಇದಂತೂ ನನಗೇ ಇಟ್ಟ ಪ್ರಶ್ನೆ.
“ಅಂದ್ರ ಹಬ್ಬಾ ಹುಣ್ಣಿವೀ, ಜಾತ್ರೀ, ಜಾಪತ್ರೀ ಅಂತ ವರ್ಷದಾಗ ಎಂಟು ತಿಂಗಳು ಕುಡದರ ತಪ್ಪಿಲ್ಲ ಅಂತೀಯೇನು?” ಅಂತ ನಾ ಛೇಡಿಸಿದರೆ –
“ಅಲ್ಲ ಯವ್ವಾ…. ನಾಕ ತಿಂಗಳ ಕುಡಿಯೂದು ಗಿಡಿಯೂದು ಎಲ್ಲಾ ಬಿಡತಿದ್ದನಲಾ…. ಅದ ಹೇಳ್ರೀ…. ಇಡಿ ವರ್ಷ ಕುಡದು ಬಡಿಯೂದಕ್ಕಿಂತಾ ಅದು ಛೊಲೋ ಅಲ್ಲೇನು?” ಅಂತ ನಕ್ಕರೆ ನಗಬೇಕೋ ಅಳಬೇಕೋ ನಿರ್ಧರಿಸುವ ಸಂದಿಗ್ಧ ನನ್ನದು.
“ಹಂಗಾದರ ಇಡೀ ವರ್ಷ ಕುಡದು ಬಡಿಯಾವನಕಿಂತಾ ಎಂಟೇ ತಿಂಗಳು ಬಡಿಯಂವ ಶ್ರೇಷ್ಠ ಅನ್ನು” ನಾ ನಗುತ್ತಿದ್ದರೆ, “ಮಸ್ಕಿರೀ ಮಾಡತೀರೇನ್ರೀ ಬಾಯಾರ…. ನಮ್ಮ ಪದ್ದವ್ವನ ಗಂಡ ಇಡೀ ವರ್ಸ ಕುಡದು ಬಡೀತಿದ್ದ, ಅದಂತೂ ಬಿಡ್ರಿ ರಾತ್ರಿ ಸೂಳೀ ಮನೀ ಮುಗಿಸಿ ಬಂದ ಮತ್ತಿಕಿನ್ನ ಹಾಸಿಗ್ಗೆ ಕರದು ಜೀವಾ ಕೊಲ್ತಿದ್ದ…. ನಮ್ಮಾಂವ ಅದೇನಿಲ್ಲ ಬಿಡ್ರಿ. ನನ್ನ ಬಿಟ್ರ ಯಾರ್ನೂ ಕಣ್ಣೆತ್ತಿ ನೆದರು ಇಟ್ಟಾಂವಲ್ಲ. ಬೇಕಾದ್ದೆಲ್ಲಾ ನಡದೀತ್ರಿ ಖರೆ, ಗಂಡ ಮತ್ತೊಬ್ಬಾಕಿ ಮಗ್ಗಲ ಹೊಕ್ಕರ ಮುಗೀತ್ ನೋಡ್ರಿ ಅಲ್ಲೇ ಸಂಸಾರ ಮುರೀತು” ಏನಂಥ ಸ್ಮರಣೆಗಳೋ ಆ ಮುದಿ ಕಣ್ಣಿನಲ್ಲಿ ಅನಿಸಿಬಿಟ್ಟಿತು.
ಮಾತು ಮುಗಿದಾಕ್ಷಣ ಮತ್ತದೇ ನಗೆ!
ಅವಳ ಸುಖದ ವ್ಯಾಖ್ಯೆಗಳನ್ನು ಚಾಲೇಂಜ್ ಮಾಡುವ, ಯಾ ಅದಕ್ಕೊಂದು ಬೇರೆಯದೇ ರೂಪ ಕೊಡುವ ಅಧಿಕಾರ ನನ್ನದಾಗಿರಲಿಲ್ಲ…. ಅಂದಾಜು
ಎಪ್ಪತ್ತು ವರ್ಷದ ಹಿಂದೆ ಭೂಮಿಗಿಳಿದ ಜೀವ ಅದು. ಶತಮಾನ ತನ್ನ ನೂರರ ಹಾಳೆ ಬದಲಿಸುವುದನ್ನು ಕಂಡಾಕೆ. ಎರಡು ಊಟ, ಎರಡು ಸೀರೆ, ಮಕ್ಕಳ ನಗು, ಹೇಲು ಉಚ್ಚೆ, ಜಾತ್ರೆಯಲ್ಲೊಂದು ಬಳೆಯಂಗಡಿಯ ಖರೀದಿಗಳಲ್ಲಿ ಮನಸ್ಸಿನ ನೆಮ್ಮದಿಗೆ ಜಾಗ ಕೊಟ್ಟವಳು…. ಅವಳ ನೆಮ್ಮದಿಯ ಪರಿಧಿಗೂ ನಮ್ಮ ಅಕಾರಣ ಮಾನಸಿಕ ಅಸ್ವಸ್ಥತೆಯ ಇರುವಿಕೆಗೂ ತಾಳಮೇಳವಾಗಲಾರದ ವೈರುಧ್ಯ!
“ಅಲ್ಲ, ಐದೇ ವರ್ಷದಾಗ ಗಂಡನ ಎಷ್ಟು ಒಳ್ಳೆತನ ಕಂಡಿದ್ದೀಯಾದೀತು ನೀ? ಅದೆಲ್ಲಾ ಬಿಟ್ಟು ಇನ್ನೊಂದು ಮದಿವೀ ಮಾಡಿಕೊಂಡು ಇರಬಾರದಿತ್ತೇನು? ಹಿಂಗ ಮುಪ್ಪಿನತನದಾಗ ಕತ್ತೀ ಚಾಕ್ರೀ ಮಾಡೂದು ತಪ್ಪತಿತ್ತೇನೋ? ಯಾಕ?” ಅಂದೆ.
“ಯವ್ವಾ ಅನ್ನ ಬೆಂದದೇನು…. ಆಗೇದೇನು ಅಂತ ತಿಳೀಲಿಕ್ಕೆ ಇಡೀ ಗಡಿಗಿ ಕಿಂವಚೂದು ಬೇಕಾಗಿಲ್ಲರೀ ಒಂದೇ ಅಗಳು ಸಾಕಲ್ಲೇನ್ರೀ…. ಇರಬೇಕು…. ನನ್ನ ಪಾಲಿಗೆ ಶಿವ ಐದೇ ವರ್ಸಕ್ಕ್ ಅಂತ ಗಂಡನ ಹೆಸರು ಬರದಿದ್ದ, ಆದರ ಅವನ ಮನಸು ಹಾಲಿನಂಥಾದ್ದಿತ್ರೀ…. ಅದನ್ನ ಮರಿಯಾಣಿಲ್ಲರೀ…. ನಾ ಇನ್ನೊಂದು ಮದಿವೀ ಮಾಡಿಕೊಂಡಿದ್ರೂ ಅಂವಾ ಏನು ನನ್ನ ಹಾಲು ತುಪ್ಪದಾಗ ತೊಳೀತಿದ್ದ ಅಂತೀರೇನು? ದುಡತಾ,
ಚಾಕರೀ ಕೈಮ್ಯಾಲೆ ಮೆತ್ತಿ ಕಳಿಸಿರತಾನ ಶಿವ ನಮಗ….”
ಮತ್ತದೇ ಅನ್ನದಗುಳಿನ ಪ್ರಸ್ತಾಪ…. ಕಾಂತಿಯೂ ಇದನ್ನು ಹೇಳಿ ನಕ್ಕಿದ್ದಳು ಆದರೆ ಬೇರೆಯದೇ ಅರ್ಥದಲ್ಲಿ. ಇವರಿಬ್ಬರದೂ ಆಯ್ಕೆಯ ಪರಿಧಿಗಳಲ್ಲಿ ವ್ಯತ್ಯಾಸ ಅದು. ಮುದುಕಿಗೆ ಬೇರೆ ಆಯ್ಕೆ ಇರಲಿಲ್ಲ, ಕಾಂತಿಗೆ ಉಂಟು ವಿಚ್ಛೇದನ, ಸ್ವತಂತ್ರ ಬದುಕು, ಕೈತುಂಬ ಅವಳ ಸಾಫ್ಟ್ ವೇರ್ ನೌಕರಿ ತಂದು ಕೊಡುವ ಸಂಬಳ, ಪ್ಲಸ್ ಕೋರ್ಟು ಕೊಡಿಸಬಹುದಾದ ಅಲಿಮನಿ ಎಂಬ ಪರಿಹಾರದ ಮೊತ್ತ!
ಅಷ್ಟರಿಂದಲೇ ಬದುಕೇ? ಅದೇ ಬದುಕೇ?
ಆದರೂ ಅವಳ ಬೊಚ್ಚು ಬಾಯಿಯ ನಗೆ ಮತ್ತವಳ ಎಪ್ಪತ್ತು ವಯಸ್ಸು ನುಡಿಸಬಹುದಾದ ತತ್ತ್ವಜ್ಞಾನದ ಮುಂದೆ ಹೆಚ್ಚು ವಾದಿಸುವ ಮನಸ್ಸಾಗಲಿಲ್ಲ. ಸುಖ ಎಂದರೇನು…. ನೆಮ್ಮದಿ ಯಾವ ಬಣ್ಣದ್ದು ಎನ್ನುವ ಯಾವ ಅಳೆತ ಸುರಿತಕ್ಕೂ ಹೋಗದೆ ಸುಖವನ್ನು ತನಗಿಷ್ಟವಾದಂತೆ ಕಂಡುಕೊಂಡಿದ್ದಾಳಿವಳು. ನೆಮ್ಮದಿಯ ಪ್ಯಾರಾಮೀಟರುಗಳ ಬಗ್ಗೆ ಮಾನದಂಡಗಳ ಬಗ್ಗೆ ಯಾವ ಖಚಿತತೆಯ ಬಗ್ಗೂ ತಲೆಕೆಡಸಿಕೊಳ್ಳದೆ ನಗುವ ಈಕೆ ಯಾಕಿಷ್ಟು ನನ್ನ ಸನಿಹ ಬರುತ್ತಿದ್ದಾಳೆ ಎಂದು ಆಗುತ್ತಿದ್ದ ಕಿರಿಕಿರಿಗೆ ಪಟ್ಟನೆ ಹೊಳೆದ ಇನ್ನೊಂದು ಮಾತು ನಿನ್ನೆ ರಾತ್ರಿ ಮತ್ತೆ ಧುತ್ ಅಂತ ಕಣ್ಣಿಗೆ ಬಿದ್ದ ಆ ಇಬ್ಬರ ಫೋಟೋ!
ಹಳೆಯ ಮ್ಯಾಗಜಿನ್ಗಳ ಸಂಗ್ರಹದಿಂದ ಹೇಗೋ ಏನೋ ಎದ್ದು ಬಂದು ಮುಖ ತೆರೆದುಕೊಂಡು ಬಿದ್ದಿದ್ದ ಪುಟದಲ್ಲಿ ನಗುತ್ತಿದ್ದ ಅದೇ ಆ ದಂಪತಿಗಳು. ಅವರ ಬಗ್ಗೆ ಯಾಕಿಷ್ಟು ಮನಸ್ಸಿಗೆ ತ್ರಾಸು ಕೊಡಬೇಕು, ನನಗೇನಾಗಬೇಕು ಇವರಿಂದ ಎಂದು ಹೊರಳಿಸಲು ನೋಡಿದೆ; ಆದರೆ ಅದಲ್ಲ ಕಾರಣ…. ಅಣ್ಣ ಹೇಳಿದ್ದು ಆ ಫೋಟೋದ ಒಳಾವರಣದ ಸಂಗತಿಯನ್ನು ಬಿಚ್ಚಿಟ್ಟದ್ದೇ ಆ ದುಗುಡಕ್ಕೆ ಕಾರಣ… “ಅಂವ ಕೋಟಿಗಟ್ಲೆ ಟರ್ನ್ ಓವರ್ ಇರೂ ದೊಡ್ಡ ಕಂಪೆನಿಗೆ ಸೀ ಈ ಓ….” ಅಣ್ಣ ಹೇಳಿದ್ದ. “ಮತ್ತ ಆಕಿ ಜಜ್ ಇದ್ದಾಳ; ಇಬ್ಬರೂ ಜಬರ್ ದಸ್ತ್ ಜೋರಿನ ಕುಳಗಳು” ಅರ್ಥಾತ್ ಆಕೆ ನ್ಯಾಯಾಧೀಶಳು. ಇಬ್ಬರೂ ಬದುಕಿನ ಉನ್ನತ ಸ್ತರಗಳನ್ನು ಮುಟ್ಟಿದ ಪ್ರಗಲ್ಭರು… ಯಶಸ್ವೀ ಪುರುಷ, ಯಶಸ್ವೀ ಮಹಿಳೆ.
“ಅದು ಬಿಡು, ಹೊಸಾದೇನಿಲ್ಲ ಮುಂದ ಕೇಳು ಸಂಗತಿ, ಅಂವ ಇದ್ದಾನಲ್ಲ ಸೀ ಈ ಓ ಪ್ರತೀ ದಿನಾ ಅಕಿನ್ನ ಹೊಡೀಲಾರ್ದೇ ಮಲಗೂದಿಲ್ಲಂತ, ಸಿಕ್ಕಂಗ ಹೊಡೀತಾನಂತ….”
“ಏನಂದೀ?” ಬೆಚ್ಚಿದ್ದೆ ನಾನು…. “ಇದು ಇಪ್ಪತ್ತೊಂದನೇ ಶತಮಾನ, ಆಕಿ ಅಂವ ಇಬ್ಬರೂ ಹೈಲಿ ಎಜುಕೇಟೆಡ್. ಚಾಷ್ಟೀ ಮಾಡ್ತೀಯೇನು?”
“ಹೌದು ಈಗ, ಇವತ್ತಿಗೂ ಅದೇ ಕಥಿ ಅವರದು… ಪ್ರಪಂಚ ಎಷ್ಟು ವಿಚಿತ್ರ ಎಂದು ನಾವು ಅಳತೀ ಮಾಡಿದ್ದು ಎಲ್ಲಿಗೂ ಸಾಲೂದಿಲ್ಲ….” ಅಣ್ಣ ನಿರ್ಲಿಪ್ತವಾಗಿ ಹೇಳಿದ್ದ.
ಅಣ್ಣ ಹೇಳಿದ್ದು ಪ್ರತ್ಯಕ್ಷದರ್ಶಿಯ ಉವಾಚವನ್ನೇ ಅಂತ ನನಗೆ ಗೊತ್ತಿತ್ತು. ಸರಿ-ತಪ್ಪು ಸಮಾಜ, ಹೆಣ್ಣು, ಸ್ಥಾನಮಾನ, ಅಂದಿನ-ಇಂದಿನ ಬದಲಾವಣೆಗಳು ಯಾವುದೇ ಚರ್ಚೆ ಮತ್ತು ಅದರ ಪ್ರಸ್ತುತತೆಯ ಬಗ್ಗೆ ತಲೆಗೆ ತ್ರಾಸು ಕೊಡದೇ ಈ ಘಟನೆಗಳ ಹೊರಗೆ ನಿಂತು ನೋಡಿದರೆ ಇಲ್ಲೊಂದು ಕಹಿಯಾದ ಅಪ್ಪಟ ಸತ್ಯವಿತ್ತು ಅಷ್ಟೇ… ಕಾಲಮಾನದಲ್ಲಿ ಮಹಿಳೆಯ ಹೆಜ್ಜೆಗಳ ಬಗ್ಗೆ, ಸಾಧನೆ, ತುಡಿತ, ಕೀರ್ತಿ, ಎಲ್ಲವನ್ನೂ ಮೀರಿದ ಜೀವನ ಎಂಬ ಹಾಳೆಯಲ್ಲಿ ನಮೂದಿತವಾಗಿರುವ ಎಲ್ಲೋ ಒಂದು ಪುಟದ ಕತೆಯಿದು…. ಇದನ್ನು ಹೌದೆನ್ನುವವರು ಇರುವುದು ಎಷ್ಟು ಖಚಿತವೋ ಇಲ್ಲೆನ್ನುವವರೂ ಅಷ್ಟೇ ಪ್ರಮಾಣದಲ್ಲಿ ಸಿಕ್ಕಾರು…. ಇಲ್ಲೆನ್ನುವವವರು ಇಲ್ಲೇ ಇದ್ದಾರೆ.
ನಿಜ ಹೇಳಬೇಕೆಂದರೆ ನಾನೇ “ಛೇ, ಇಲ್ಲದ್ದೇನರೆ ಹೇಳಬ್ಯಾಡ ಅಣ್ಣಾ…. ಅವೆಲ್ಲಾ ಹಿಂದಿನ ಶತಮಾನದ ಮಾತು…. ಈಗ ಗಂಡ ಕೈ ಎತ್ತಿದರ ಅವನ ಕೈ ಮುರದುಹಾಕೂ ಹೆಂಡತಿಯರೇ ಇದ್ದಾರ…. ಮತ್ತ ಅಂಥಾ ಹೆಂಡತಿಯರು ತನ್ನ ಹೊಡಿಯೂ ಗಂಡನ ಕೈ ಮುರದರ ತಪ್ಪಿಲ್ಲ, ಕಾಲೂ ಮುರೀಬೇಕು ಅಂತೀನಿ ನಾನೂ” ಎಂದು ನಕ್ಕು ಈ ಪ್ರಸಂಗವನ್ನು ಹಗುರವಾಗಿ ಹಾಸ್ಯದಲ್ಲಿ ಮುಗಿಸಲು ನೋಡಿದ್ದೆ.
“ನೀ ಏನಂತೀಯೋ ಬಿಡತೀಯೋ…. ಬ್ಯಾರೇದವರು ಏನಂತಾರೊ ಇಲ್ಲಿ ಮುಖ್ಯ ಆಗೂದಿಲ್ಲ, ಆ ಹೆಣ್ಣು ಮಗಳು ಸ್ವತಂತ್ರವಾಗಿ ತಲೀ ಎತ್ತಿ ಬದುಕೂ ತಾಕತ್ತು, ಛಾತೀ, ಕಾಯದೇ ಅನುಕೂಲ, ಕೈಯೊಳಗ ಅಧಿಕಾರ ಎಲ್ಲಾ ಇದ್ದೂ ಈ ಗಂಡನ್ನ ಒದ್ದು ಜೇಲಿಗೆ ಹಾಕಿಸಿಲ್ಲ, ಮದುವೆ ವಿಚ್ಛೇದನಕ್ಕೂ ಮನಸ್ಸು ಮಾಡಿಲ್ಲ ಅಂದರ ಏನಿದ್ದೀತು ಇದರ ಮರ್ಮ…. ತಿಳೀಲಾರ್ದು, ಹೌದಲ್ಲೋ?” ಎಂದು ಮುಗಿಸಿದ್ದ ಅಣ್ಣ.
ಅಣ್ಣನ ‘ಹೌದಲ್ಲೋ?’ ಶಬ್ದವೇ ರಿಂಗಣಿಸತೊಡಗಿತ್ತು ತಲೆಯಲ್ಲಿ, ಕಾರಣ ಆ ಫೋಟೊ. ಅದೇ ದಿನ ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ಇದೇ ಸಿ ಇ ಓ ಮತ್ತು ನ್ಯಾಯಾಧೀಶೆ ದಂಪತಿಗಳು ಭಾಗವಹಿಸಿ ಬಹುಮಾನ ವಿತರಣೆ ಇತ್ಯಾದಿ ಮಾಡಿ ಹತ್ತಾರು ಫೋಟೋಗಳಿಗೆ ಫೋಸ್ಕೊಟ್ಟು ನಕ್ಕ ಸಮಯದ ಸಂಗತಿ. ವಿಷಯ – “ಮಹಿಳಾ ಸಮಾನತೆಯ ಬಗ್ಗೆ ಚರ್ಚಾಸ್ಪರ್ಧೆ!”
ಮತ್ತೆ ನಗು ಬಂತು. ವೈರುಧ್ಯ…. ವೈಪರೀತ್ಯ…. ವಿಪರ್ಯಾಸ? ಯಾವ ಹೆಸರಿಡಬೇಕು ಈ ಪರಿಗೆ? ಅಥವಾ ಬರೀ ಅವರವರ ಬದುಕು ಅಂದು ಮುಗಿಸಿಬಿಟ್ಟರೆ ಹೇಗೆ? ನಿರ್ಧರಿಸಲಾಗದೆ ತಲೆ ಕೊಡವಿಕೊಂಡೆನಷ್ಟೇ…. ತಾವು ಹೇಗೆ ಬದುಕಬೇಕು ಎನ್ನುವುದನ್ನು ನಿರ್ಧರಿಸುವವವರು ಇದೇ ದಂಪತಿಗಳೇ ಆಗಿದ್ದರೆ ಅದರಲ್ಲಿ ಪ್ರವೇಶಿಸಿ ಸರಿ ತಪ್ಪುಗಳ ಪಾಠ ಹೇಳುವ ಹಕ್ಕು ಯಾರಿಗೂ ಇಲ್ಲವಷ್ಟೆ? ಆದರೂ ಸಮಾಜದ ಎದುರಿನಲ್ಲಿರುವ ಅವರ ಈ ಮುಖಕ್ಕೂ ಮನೆಯೊಳಗಿನ ಹೊಡೆತದ ಸಂದರ್ಭಕ್ಕೂ ಯಾವ ತಾಳಮೇಳವಿರಲು ಸಾಧ್ಯ? ಎಂಬ ವಿಚಿತ್ರ ಆಲೋಚನೆಗಳಿಗೆ ಉತ್ತರ ಹುಡುಕುವುದಾಗದೆ ಚಪಡಿಸುವಾಗಲೇ ಈ ಸ್ವಚ್ಛ ನಗೆಯ ಮುದುಕಿ – ಆಯಿ – ನನ್ನನ್ನು ಇನ್ನಷ್ಟು ಪ್ರಶ್ನೆಗಳಿಗೆ ದೂಡಿದ್ದಳು.
ಸಮಾಜ ನಿಜಕ್ಕೂ ಬದಲಾಗುತ್ತಿದೆಯೆ? ಎಲ್ಲೆಲ್ಲೂ ಪುಂಖಾನುಪುಂಖವಾಗಿ ಕಂಡು ಕೇಳಿ ಬರುತ್ತಿರುವ ‘ಸ್ತ್ರೀ ಸ್ವಾತಂತ್ರ್ಯ’, ‘ಸ್ವಾವಲಂಬನೆ’ ಬರೀ ಟೊಳ್ಳು ಮಾತ್ರ ಹೌದೆ?
“ಅಲ್ಲ ಇದು ಮಹಿಳಾ ಹೋರಾಟಗಾರ್ತಿಯರ ಕಿವಿಗೆ ಬಿದ್ದಿಲ್ಲೇನು?” ಅಣ್ಣ ಹೇಳಿದ್ದ.
ತಾತ್ಪರ್ಯ ಇಷ್ಟೇ ನ್ಯಾಯಾಧೀಶೆಯಾಗಿ, ಹೆಂಡತಿಯನ್ನು ಬಡಿಯುವ ಎಷ್ಟೋ ಜನರನ್ನು ಸದಾ ಜೈಲಿಗೆ ಕಳಿಸುತ್ತಿರಬಹುದಾದ ಈಕೆ ಸಮಾಜವನ್ನು ಸರಿದಾರಿಯಲ್ಲಿ ತರುವ ಪಂಥದ ಅಧೀಕ್ಷಕಿ…. ತಪ್ಪಿತಸ್ಥರನ್ನು ಶಿಕ್ಷಿಸುವ ಒಬ್ಬ ಮಹಿಳೆಯೇ ಗಂಡ ಹೊಡೆಯುವ ಏಟುಗಳಿಗೆ ಪ್ರತಿರೋಧವಿಲ್ಲದೆ ತನ್ನನ್ನು ಒಡ್ಡಿಕೊಂಡಿದ್ದನ್ನು ಸರಿ ತಪ್ಪು ಅಥವಾ ಇನ್ನಾವುದೋ ಅನಿವಾರ್ಯಗಳಿರುವ ಬಗ್ಗೆ ವಿಷ್ಲೇಶಿಸಬೇಕೆ? ಅಥವಾ ಇಂಥದ್ದೆಲ್ಲ ಸುಳ್ಳಿನ ಕಂತೆ, ಯಾವಾಗ, ಹೇಗೆ ಹೊಡೆಯುತ್ತಿರಬಹುದು ಆ ನ್ಯಾಯಾಧೀಶೆಯನ್ನು ಅವಳ ಗಂಡ? ಹೆಚ್ಚಾಗಿ ರಾತ್ರಿ ತಾನೇ? ಅವಳ ಮಲಗುವ ಕೋಣೆಯಲ್ಲಿ ಏನು ನಡೆಯುತ್ತಿರಬಹುದು? ಎಷ್ಟು ಜಗಳಗಳಾಗುತ್ತಿರಬಹುದು ಎಂಬುದು ಯಾರಿಗಾದರೂ ಪ್ರತ್ಯಕ್ಷವಾಗಿ ಕಣ್ಣಿಗೆ ಬಿದ್ದೀತೇ? ಇಲಿ ಹೋದರೆ ಹುಲಿ ಹೋಯಿತು ಅಂತ ಬೆಳೆಸಿ ಕಥೆಕಟ್ಟುವ ಜನರಿಗೇನು ಕಡಿಮೆ ಇಲ್ಲಿ? ನಮ್ಮಲ್ಲಿ ಹೆಂಡತಿಯನ್ನು ಹೊಡೆಯುವ ದೊಡ್ಡಮನುಷ್ಯರು ಎಲ್ಲ ವರ್ಗಗಳಲ್ಲೂ ಸಿಗುತ್ತಾರೆ. ಹೆಂಡತಿಯನ್ನು ಹೊಡೆಯುವ ನಿರ್ದೇಶಕರು, ಕವಿಗಳು, ನಾಟಕಕಾರರು, ನಟರು, ಕಾರ್ಮಿಕರು, ಅಧಿಕಾರಿಗಳು, ಗೌರವಸ್ಥರು, ಮಹನೀಯರು – ಎಲ್ಲೆಲ್ಲೂ ಸಿಗುತ್ತಾರೆ. ಗಂಡು ಎತ್ತರಕ್ಕೇರಿದಷ್ಟೂ ಹೆಂಡತಿಯನ್ನು ದಂಡಿಸುವ ಬಲ ಪಡೆಯುವನೇ?
ಎಲ್ಲೋ ಒಂದು ತಮಾಷೆಯ ಬರಹ ಓದಿದ ನೆನಪು, ಯಕ್ಷಗಾನದಲ್ಲಿ ಹಾಸ್ಯಗಾರನ ಪಾತ್ರ ಮಾತ್ರ ಹೆಂಡತಿಯಿಂದ ಏಟು ತಿನ್ನುತ್ತಿತ್ತು. ಒಂದು ಯಕ್ಷಗಾನದಲ್ಲಿ ಹಾಸ್ಯಗಾರ ಭೀಕರವಾಗಿ ಬೊಬ್ಬೆಯಿಡುತ್ತಾ ಓಡಿಬರುತ್ತಾನೆ. ಅವನನ್ನು ದಾರಿಹೋಕ ಪ್ರಶ್ನಿಸುತ್ತಾನೆ.
ಆಗ ಹಾಸ್ಯಗಾರ ಹೇಳುತ್ತಾನೆ. ಅಲ್ಲಿ ಭಯಂಕರ ಹೊಡೆದಾಟ ನಡೆಯಿತು. ನನ್ನ ಹೆಂಡತಿಗೂ ನನಗೂ ಯುದ್ಧವೇ ನಡೆದುಹೋಯಿತು. ಅವಳೂ ಹೊಡೆದಳು, ನಾನೂ ಹೊಡೆದೆ. ಅವಳು ನಾಲ್ಕೇಟು ಹೊಡೆದಳು. ನಾನು ಬೊಬ್ಬೆ ಹೊಡೆದೆ.
ಎತ್ತಲೂ ಹೋಗಲಾಗದ, ತಾರ್ಕಿಕ ಅಂತ್ಯವನ್ನು ಕಾಣಲಾಗದ ಹುಚ್ಚು ವಿಚಾರಗಳು ಎನಿಸಿಬಿಡುತ್ತದೆ, ಬೆನ್ನಹಿಂದೆಯೇ, ಇರಲಾರದು ಇದೆಲ್ಲ ಹುಚ್ಚು ವಿಚಾರ ಹೇಗಾದೀತು? ಸಮಸ್ಯೆಗಳನ್ನು ಜಮಖಾನದ ಅಡಿಯಲ್ಲಿ ತಳ್ಳಿ ಮೇಲೆ ರತ್ನಗಂಬಳಿ ಹೊಚ್ಚಿ ಮುಖವಾಡದ ನಗೆ ಪ್ರದರ್ಶಿಸುವವರಿಲ್ಲವೇ ಇಲ್ಲಿ? ‘ಸಂಸಾರ ಗುಟ್ಟು – ವ್ಯಾಧಿ ರಟ್ಟು’ ಎಂಬ ಸೂತ್ರಕ್ಕೆ ಬದ್ಧರಾಗಿರುವವರು ಇನ್ನೂ ಇದ್ದಿರಬಹುದಲ್ಲವೇ ಈ ಇಪ್ಪತ್ತೊಂದನೆಯ ಶತಮಾನದಲ್ಲಿ? ಅಥವಾ ತತ್ತ್ವಪ್ರಣಾಲಿಕೆಗಳಿಗೂ ಬದುಕಿಗೂ ಸಂಬಂಧವಿಲ್ಲದುದರ ನಿದರ್ಶನವೊ?
ಮುಂಜಾನೆ ಆಯಿ – ಆ ನಗೆಗೆ ಬೇರೆ ಹೆಸರು ಇಡಬೇಕೆನಿಸದೇ ನಾನೇ ಹಾಗೆ ಕರೆದುಕೊಳ್ಳುತ್ತಿದ್ದದ್ದನ್ನು ಹೇಳಿದ್ದೇನೋ ಇಲ್ಲವೋ, ಇರಲಿ, ಆಯಿ ಬಂದಾಗ ತಡವಾಗಿತ್ತು. ತಿಂಗಳಿಗೊಮ್ಮೆ ಮನೆ ಅಂದರೆ ಮಗನ ಮನೆಗೆ ಹೋಗಿ ಬರುವ ರಜೆ ನಾನೇ ಕೊಟ್ಟಿದ್ದೆ. ಮುಖ ಎಲ್ಲ ಅತ್ತತ್ತು ಕೆಂಪು ಕೆಂಪು, ಬಾತು ಗಡಿಗೆಯಾಗಿತ್ತು.
“ಏನಾತು ಆಯೀ?” ಕೇಳಿದೆ.
“ನನ್ನ ಸೊಸೀ ಹ್ವಾದಳ್ರೀ…” ಮುಗುಮ್ಮಾಗಿ ನುಡಿದಳವಳು. ಒಂದು ಕ್ಷಣ ಚಕಿತಳಾಗಿ… ‘ಹ್ವಾದಳು’ ಅಂದರೆ ‘ಸತ್ತು ಹೋದಳು’ ಎಂದಾಗಿ ಒಂದು ಅರ್ಥವೂ ಹಳ್ಳಿಕಡೆಗೆ ಇದೆಯಲ್ಲವೇ ಎನಿಸಿ, “ನೆಟ್ಟಗ ಏನು ಸುದ್ದಿ ಅಂತ ಹೇಳಬಾರದೇನು ನೀ?” ಅಪ್ರಯತ್ನವಾಗಿ ಕೂಗಿದ್ದೆ.
“ಅಲ್ಲರೀ ಎಂದೂ ಇಲ್ಲದ ಮಗಾ ಒಮ್ಮೆ ಕುಡದು ಬಂದು ಬಡದ ಅಂತ ಜಗಳಾ ತಗದು ಮನೀನೇ ಬಿಟ್ಟು ಹ್ವಾದಳ್ರೀ… ಕರೀಲಿಕ್ಕೆ ಹೋದ್ರೂ ಬರಂಗಿಲ್ಲ ಅಂತಾಳರೀ…. ಸೋಡಚೀಟಿ (ವಿಚ್ಛೇದನ) ಬೇಕಂತ ಆಕೀಗೆ ಈಗಿಂದೀಗಲೇ….”
ಆಯಿ ಎರಡೂ ಕೈ ತಲೆಗೆ ಹಚ್ಚಿ ಉಸ್ಸ್ ಎನ್ನುತ್ತ ಗೋಡೆಹಿಡಿದು ಕೂತೇಬಿಟ್ಟಾಗ ವಿಷಯ ನಿಜಕ್ಕೂ ಗಂಭೀರ ಆಗಿರುವುದರ ಅರಿವಾಯಿತು. ಅವಳಿಗೇನು ಹೇಳಬೇಕು ಅಂತ ಯೋಚಿಸುತ್ತಿದ್ದಾಗ ಫೋನ್ ಕರೆದಿತ್ತು, ಹೋಗಿ ಎತ್ತಿದರೆ ಅದೇ ಸಮಾಚಾರ, ಹಿಂದಿನ ತಿಂಗಳು ಸಹ ಹೇಳಿದ್ದೂ ಅದೇ ಮಾತು “ಇನ್ನೂ ತಡಕೋಬೇಕಾ ಅಕ್ಕಾ ನಾ… ಛೀ ನನ್ನ ಬಗ್ಗೆ ನನಗೇ ಜುಗುಪ್ಸೆ ಆಗ್ತಿದೆ. ಎಂಥ ಹುಳುವನ್ನು ನಂಬಿದೆ…. ಡೈವೋರ್ಸ್…. ಕಿರಣ್ ಒಮ್ಮೆಯಲ್ಲ ಐದು ಬಾರಿ ರೆಡ್ಹ್ಯಾಂಡ್ ಆಗಿ ಸಿಕ್ಕಿದ್ದ. ಮನೆಯ ಹಾಸಿಗೆಯಲ್ಲಿ…. ಜೊತೆಯಲ್ಲಿ ಬರಿಮೈ ಹೆಣ್ಣು ಗೆಳತಿ. ಕೇಳಿದರೆ ‘ಸೋ ವಾಟ್? ಐ ಲೈಕ್ ಹರ್, ನಿನಗಿಷ್ಟ ಇದ್ದರೆ ಇರು, ಬೇಡವಾದರೆ ಬಿಡು’ ಎಂಬ ಉಡಾಫೆ…”
‘ಮೊದಲೇ ಹೇಳಿದೆ’ ಎನ್ನಲು ಮನಸ್ಸು ಬರುತ್ತಿಲ್ಲ…. ‘ಹಾಸಿಗೆಯಲ್ಲಿ ಪಾಲು ಹಂಚಿಕೋ…. ಸಹಿಸಿಕೋ’ ಎನ್ನಬೇಕೇ? ಕೊಟ್ಟರೂ ಅವಳು ಒಪ್ಪಬೇಕೇ? ಮನೆ ಮುರಿದವನು ಕಿರಣ. ಸಹಿಸು ಎಂದು ಹೇಳಲೂ ನಾಚಿಕೆಯಾಗಬೇಕು!
ಒಂದೇ ಉತ್ತರ ಇದಕ್ಕೆ, ವಿಚ್ಛೇದನ.
“ಅವನ ಅಡಲ್ಟ್ರಿ ಅಥವಾ ವ್ಯಭಿಚಾರವನ್ನು ನಾವು ಕೋರ್ಟಿನಲ್ಲಿ ಪುರಾವೆ ಸಹಿತ ಸಿದ್ಧಪಡಿಸಬೇಕಾಗುತ್ತೆ, ಆಗ ಮಾತ್ರ ಅಲಿಮನಿ ಮತ್ತು ಅವನ ಅಪರಾಧಕ್ಕೆ ಶಿಕ್ಷೆ ಎರಡನ್ನೂ ಕ್ಲೇಮ್ ಮಾಡಬಹುದು….”
ಅಣ್ಣನೂ ಲಾಯರ್ ಹೇಳಿದ್ದಕ್ಕೆ ಒಪ್ಪಿದ್ದ. ಆದರೆ ಕಾಂತಿ ಒಂದೇ ವಾಕ್ಯದಲ್ಲಿ ಕಡಿದು ಹಾಕಿದ್ದಳು – “ನನ್ನ ಕೂಸಿಗೆ ಅವನ ಎಂಜಲ ದುಡ್ಡು ಬೇಕಾಗಿಲ್ಲ; ಇದನ್ನು ಸಾಕಿ ಬೆಳೆಸುವ ಶಕ್ತಿ ನನಗ ಇಲ್ಲ ಅಂತೀರೇನು? ಅವನ ಹಣೆಬರಹ ಅವನಿಗೆ… ನಥಿಂಗ್ ಡೂಯಿಂಗ್” ಇನ್ನುಳಿದಿದ್ದು ಮ್ಯೂಚುವಲ್ ಕನ್ಸೆಂಟ್…. ಪರಸ್ಪರ ಒಪ್ಪಿಗೆಯ ವಿಚ್ಛೇದನ.
****
ಅನುಮಾನಗಳ ಹುತ್ತ ಕಟ್ಟತೊಡಗಿದ್ದು ಕೋರ್ಟಿನ ಬಿಗಿ ವಾತಾವರಣದಲ್ಲಿ…. ಹೇಳಿಕೆ ಕೇಳಿಕೆಗಳನ್ನು ಮೀರಿ ತಂಗಿ ಡೈವೋರ್ಸಿನ ಮುದ್ರೆ ಒತ್ತಿದ ಎರಡು ಹಾಳೆಗಾಗಿ ಕೋರ್ಟಿಗೆ ಶರಣುಹೋದದ್ದನ್ನು ಸರಿ ತೂಗುಗಳ ತಕ್ಕಡಿಗೆ ಹಾಕದೆ ಅವಳ ಬೆಂಬಲಿಸಿದ್ದೆ. ವಿಚ್ಛೇದನ ಅದರ ಪರ್ಯವಸಾನ…. ಸಮಾಜ, ಮಾನಸಿಕ ಸ್ವಾಸ್ಥ್ಯ ಯಾವುದೂ ಈಗ ನಮ್ಮ ಪ್ರಾಮುಖ್ಯತೆ ಅಲ್ಲ. ಒಂದು ಕೊಳಕು ಬಂಧನದೊಳಗಿಂದ ಬಿಡುಗಡೆ ಅಷ್ಟೇ ಈಗಿನ ಪ್ರಶ್ನೆ.
ಮೊದಲ ಬಾರಿ ಫ್ಯಾಮಿಲಿ ಕೋರ್ಟ್ನ ಮೆಟ್ಟಿಲೇರಿ ಒಳಗೆ ಕಾಲಿಟ್ಟಾಗ ಬೆಚ್ಚಿಬಿದ್ದಿದ್ದೆ. ಎದುರಿನಲ್ಲಿ ಜಡ್ಜ್ ಕೂರುವ ಉನ್ನತಾಸೀನದಲ್ಲಿ ಆಕೆ! ಅದೇ ನ್ಯಾಯಾಧೀಶೆ. ಮನಸ್ಸು ಗೊಂದಲದ ಗೂಡಾಯ್ತು. ಇವಳ ಕತೆ ಗೊತ್ತೇ
ತಂಗಿಗೆ? ತನ್ನನ್ನು ಹೊಡೆಯವ ಗಂಡನಿಗೆ ಏನೂ ಮಾಡದ ಇವಳ ಮನೋಭಾವ ಇರಬಹುದಾದರೂ ಏನು? ಕಾಂತಿಗಿದು ಗೊತ್ತಿಲ್ಲ…. ಅಣ್ಣನನ್ನು ಕೇಳಿ ಇವಳಿಗೂ ಹೇಳು ಅನ್ನಲೇ? ಹೇಳಿ ಪ್ರಯೋಜನವೇನು? ಮನಸ್ಸಿಗೆ ಅದು ಇನ್ನಷ್ಟು ಗೊಂದಲ ಅಷ್ಟೇ ತಾನೇ?
ಛೇ…. ನಾನೂ ಏನೆಲ್ಲ ಹುಚ್ಚು ಆಲೋಚನೆಗಿಳಿದೆ? ಆಕೆಯ ವೈಯುಕ್ತಿಕ ಬದುಕಿಗೂ ನಮ್ಮ ಕೇಸಿಗೂ ನಾನೇಕೆ ಹೊಂದಿಸಿ ನೋಡಬೇಕು?
ಏನಾಗುತ್ತೋ ಕಾದು ನೋಡೋಣ. ಕಾನೂನು ಇವಳ ಮನೆಯದಲ್ಲವಲ್ಲ.
ಅಣ್ಣನದೂ ಅದೇ ಮಾತಾಯ್ತು. ಫಾಸ್ಟ್ ಟ್ರ್ಯಾಕ್ ವಿಚಾರಣೆ ಸಹ ಆರು ತಿಂಗಳು ಎಳೆದು, ತಾರೀಖಿನ ಮೇಲೆ ತಾರೀಕು ಬೀಳುತ್ತ ಹೋಗಿ ಅದಕ್ಕೂ ಒಂದು ಕೊನೆ ಆಗುವ ದಿನ ಬಂತು. ಕೌನ್ಸೆಲರ್ ಜೊತೆಗೆ ನ್ಯಾಯಾಲಯದ ಹೊರಗೆ ರಾಜಿಸೂತ್ರದ ಮಾತುಕತೆಗಳು, ಒಂದು ವರ್ಷ ಬೇರೆ ಬೇರೆ ಇರುವುದು, ಎಲ್ಲದಕ್ಕೂ ಅವಕಾಶ ಕೊಟ್ಟಾದ ನಂತರದ ದಿನ.
****
ತೀರ್ಮಾನದ ಸಮಯ.
ಮಧ್ಯಾಹ್ನದ ಒಂದು ಗಂಟೆ. ಎದೆ ಡವಡವಿಸುತ್ತಿದೆ…. ವಿಚ್ಛೇದನ ಸಿಗದೆಹೋಗುವ ಶಕ್ಯತೆ ಇಲ್ಲ. ಆದರೂ ಏನೋ ದಿಗಿಲು.
ಸೀಟಿನಲ್ಲಿ ಕುಳಿತ ನ್ಯಾಯಾಧೀಶೆ ನಮ್ಮೆಲ್ಲರ ಕಡೆ ತಮ್ಮ ಕನ್ನಡಕದೊಳಗಿಂದ ಬೀರಿದ ನೋಟಕ್ಕೆ ಅರ್ಥ ಹಚ್ಚಲು ಪ್ರಯತ್ನಿಸಿ ಸೋತೆ. ಎಂಥ ಮರುಳು ನನ್ನದು, ಆಕೆಯ ಬದುಕಿನ ಬಗ್ಗೆ ನನಗೆ ಗೊತ್ತೆಂದು ಅವರಿಗೆ ಗೊತ್ತೇ?
ಅಲ್ಲೆಲ್ಲೋ ಹಿಂದೆ ಆಯಿ ನಕ್ಕ ಹಾಗನಿಸಿತು!