ಮಗುವು ಮನುಜನ ತಂದೆ ಎಂದ ಇಂಗ್ಲಿಷ್ ಕವಿ ವಿಲಿಯಮ್ ವಡ್ರ್ಸ್ವರ್ತ್. ಮಗುವೊಂದು ಜನಿಸಿದಾಗಲೇ ಅದರ ಹೆತ್ತವರಿಗೆ ಮಾತೃತ್ವವೋ ಪಿತೃತ್ವವೋ ಉದಿಸಿಕೊಳ್ಳುವುದು ತಾನೇ! ಹಾಗೆಂದು ಆ ಭಾವವೊಂದು ನಮ್ಮಲ್ಲಿ ಎಳೆಯವರಿದ್ದಾಗಿನಿಂದಲೂ ಸದಾ ಜಾಗೃತವಾಗಿರುತ್ತದೆ. ಹಾಗಾಗಿಯೇ ಮೂರು ವರ್ಷದ ಪುಟ್ಟ ಕಂದಮ್ಮನೂ ತನ್ನ ಗೊಂಬೆಗೆ ಅಮ್ಮನಾಗುತ್ತಾಳೆ, ಲಾಲಿ ಹಾಡುತ್ತಾಳೆ. ಹೆಚ್ಚೇನು, ತನ್ನಮ್ಮ ತನಗೆ ಮಾಡುವ ಎಲ್ಲವನ್ನೂ ಅವಳು ಗೊಂಬೆಗೆ ಮಾಡುತ್ತಾಳೆ. ಹಾಗೆಯೆ ಗಂಡುಮಗು ತನ್ನ ಸುತ್ತಲಿನ ಸಮಸ್ತರನ್ನು ಕಾಪಾಡುವ ಜವಾಬ್ದಾರಿ ಹೊರುತ್ತದೆ; ಅಮ್ಮನ ಕಣ್ಣಂಚು ಕೊಂಚ ನೆನೆದರೂ ಅಮ್ಮನ ನೋವಿಗೆ ಕಾರಣರಾದವರನ್ನು ದಂಡಿಸುವ ಹೊಣೆ ವಹಿಸುತ್ತದೆ. ಈ ಭಾವಗಳೆಲ್ಲ ಹಾಗೆಯೆ ಮುಂದುವರಿದರೆ ಚೆನ್ನ. ಆದರೆ ಹಾಗೆಯೇ ಉಳಿಯಬೇಕೆಂದೇನೂ ಇಲ್ಲ ಎಂಬುದೂ ಸತ್ಯವೇ!
ಮಗುವಿನಲ್ಲಿ ಹಿರಿತನದ ಪ್ರಜ್ಞೆ ಇರುವ ಹಾಗೆ ಪ್ರಬುದ್ಧರಲ್ಲಿಯೂ ಮಗುವಿನ ಮನಸ್ಸೊಂದು ಸದಾ ಹಸಿರಾಗಿರುತ್ತದೆ. ಅದು ಹಸಿರಾಗಿದ್ದಷ್ಟೂ ನಮ್ಮ ಬದುಕೂ ಕೂಡಾ ಹಸಿರಾಗಿಯೇ ಇರುತ್ತದೆ. ಸಣ್ಣಪುಟ್ಟ ಸಂಗತಿಗಳಲ್ಲೂ ಮಗುವಿನ ಮನಸ್ಸು ಸಂತೋಷವನ್ನು ಕಾಣಬಲ್ಲ್ಲದು. ಕೈಯಲ್ಲಿರುವ ಪುಟಾಣಿ ಆಟಿಕೆಯನ್ನು ಎತ್ತಿಯೋ ಉರುಳಿಸಿಯೋ ನಗಬಲ್ಲದು, ಮಾತ್ರವಲ್ಲ, ತನ್ನನ್ನು ಕೂಡಾ ಆಡಿಸುವವರು ಎತ್ತಿ ಮೇಲಕ್ಕೆಸೆದರೆ ನಿರ್ಭಿಡೆಯಿಂದ ನಗಬಲ್ಲದು. ಅಲ್ಲಿ ಭಯವಿಲ್ಲ, ನಂಬಿಕೆಯಷ್ಟೇ ಇರುತ್ತದೆ. ಮಗು ಹೊಟ್ಟೆತುಂಬಾ ನಕ್ಕಂತೆ ನಗುವುದು ದೊಡ್ಡವರಿಂದಾಗದೇ ಹೋದರೂ (ಅಥವಾ ಹೆಚ್ಚಿನ ಸಂದರ್ಭ ಹಾಗಿದ್ದರೆ ಅಂಥವರನ್ನೂ ಕೊಂಚ ಮಾನಸಿಕ ರೋಗಿ ಎಂದಾರು ಜನ!) ಸಣ್ಣಪುಟ್ಟ ವಿಚಾರಗಳಲ್ಲೂ ಸಂತೃಪ್ತಿಯನ್ನು ಕಾಣುವುದು ಖಂಡಿತ ಸಾಧ್ಯವಾಗುವಂಥದ್ದೇ. ಈ ಬಗೆಯ ಚೈಲ್ಡ್ ಇಗೋವನ್ನು ನಾವು ಕಾಪಾಡಿಕೊಂಡಷ್ಟೂ ನಮ್ಮ ಮನಸ್ಸು ಉಲ್ಲಸಿತವಾಗಿರುತ್ತದೆ.
ಏಕಮುಖೀ ಪ್ರಕ್ರಿಯೆ
ಆದರೆ ಬದುಕಿನ ಎಲ್ಲ ಸಂದರ್ಭ, ಸನ್ನಿವೇಶ, ಸಮಯ ಒಂದೇ ತೆರನಾಗಿ ಇರುವುದಿಲ್ಲ. ಎಷ್ಟೋ ಸಲ ನಮ್ಮೊಳಗಿನ ಮಗುತನವನ್ನು ಮರೆತುಬಿಡಬೇಕಾಗುತ್ತದೆ. ಜೀವನ ನಮ್ಮ ಮೇಲೆ ಹೊರಿಸುವ ಹಲವು ಹೊಣೆಗಾರಿಕೆಗಳ ನಡುವೆ ಮಗುಮನಸ್ಸು ಕಳೆದುಹೋಗುತ್ತದೆ. ಜಂಜಾಟಗಳಿಂದಾಗಿಯೇ ಇರಬೇಕೆಂದೇನೂ ಇಲ್ಲ, ಕೆಲವೊಮ್ಮೆ ನಮ್ಮ ಸುತ್ತಲಿನವರ ಪ್ರತಿಕ್ರಿಯೆಗಳಿಂದಾಗಿಯೂ ನಗುನಗುತ್ತಾ, ಸಣ್ಣಪುಟ್ಟದ್ದಕ್ಕೂ ಖುಷಿಯನ್ನು ವ್ಯಕ್ತಪಡಿಸುತ್ತಾ ಇರುವುದೇ ತಪ್ಪು ಎಂಬ ಭಾವನೆಯೊಂದು ನಮ್ಮಲ್ಲಿ ಭದ್ರವಾಗಿ ಬೆಳೆದುಬಿಡಬಹುದು. ಅದೇ ಭಾವ ಬೆಳೆಯುತ್ತಾ ಬೆಳೆಯುತ್ತಾ ನಾವು ನಮಗಾಗಿಯೇ ಬದುಕುವುದನ್ನು ಮರೆತೇಹೋಗುತ್ತೇವೆ. ಕೇವಲ ನಮ್ಮ ಸುತ್ತಲಿನ ಜನರಿಗೆ ಬೇಕಾದ ಹಾಗೆ ನಮ್ಮ ಅಭಿವ್ಯಕ್ತಿಗಳನ್ನು ಬದಲಾಯಿಸಿಕೊಂಡು ಬಿಡುತ್ತೇವೆ. ಆರಂಭದಲ್ಲಿ ಇದು ತನ್ನವರ ಖುಷಿಗಾಗಿಯೇ ಅಲ್ಲವೇ ಎಂಬ ತ್ಯಾಗದ ಅನುಭೂತಿ ನಮ್ಮಲ್ಲಿದ್ದರೂ ಕೊನೆಯಲ್ಲಿ ತನಗಾಗಿ ಸ್ಪಂದಿಸುವ ಯಾರೂ ಉಳಿಯದೆ ಹೋದಾಗ ನಾವು ಕಳೆದುಕೊಂಡದ್ದರ ಮೌಲ್ಯವೇನು ಎಂಬುದು ನಮಗೆ ಅರಿವಾಗುತ್ತದೆ. ಬೇರೆಯವರಿಗಾಗಿ ಬದಲಾಗುವ ನಾವು, ಅಥವಾ ನಮ್ಮನ್ನು ಬದಲಾಯಿಸುವ ಇತರರು ನಮಗಾಗಿ ತಾವು ಒಂದಿಷ್ಟಾದರೂ ಬದಲಾದಾರೇ? ಹೆಚ್ಚಿನ ಸಂದರ್ಭಗಳಲ್ಲಿ ಇದು ಏಕಮುಖೀ ಪ್ರಕ್ರಿಯೆಯೇ ಆಗಿರುತ್ತದೆ.
ಇದಕ್ಕೊಂದು ಸಣ್ಣ ಉದಾಹರಣೆ ಕೊಡಬಹುದಾದರೆ: ಎರಡು ಮೂರು ವರ್ಷದ ಪುಟ್ಟ ಮಗುವಿನ ಜತೆಗೆ ಆಟವಾಡುತ್ತಾ ತಾಯಿಯೂ ಮಗುವೂ ಜೋರಾಗಿ ನಕ್ಕರೆಂದಿಟ್ಟುಕೊಳ್ಳೋಣ. ಕೊಂಚ ದೂರದಲ್ಲಿ ಮಗುವಿನ ತಂದೆ ಸಾಮಾಜಿಕ ಜಾಲತಾಣದಲ್ಲಿ ತನಗೆ ಮುಖ್ಯವಾದ ಏನನ್ನೋ ನೋಡುತ್ತಿದ್ದಾನೆ. ತಾಯಿ-ಮಗುವಿನ ನಗೆಯಿಂದ ಅವನ ಏಕಾಗ್ರತೆಗೆ ಭಂಗ ಬಂತೆಂದು ಅವನು ಗ್ರಹಿಸಿ, ‘ಥತ್, ಏನು ಗಲಾಟೆ ನಿಮ್ಮದು? ಮನೆಯಲ್ಲಿ ಮೂರನೆಯ ಜೀವವೂ ಒಂದಿದೆ ಅನ್ನುವ ಪ್ರಜ್ಞೆ ಬೇಡವಾ?’ ಎಂದು ಪ್ರತಿಕ್ರಿಯಿಸಿದರೆ ಅಲ್ಲಿನ ಒಟ್ಟೂ ಸನ್ನಿವೇಶ ಹೇಗೆ ಬದಲಾದೀತು? ಮಗುವಿಗೆ ಅಪ್ಪ ಏನೋ ಗದರಿದರು ಎಂದಷ್ಟೇ ಅರ್ಥವಾದೀತು. ಕಣ್ತುಂಬಿಕೊಂಡು ಮೌನವಾದೀತು. ಅಲ್ಲಿ ಘಾಸಿಯಾಗುವುದು ಆ ತಾಯಿಗೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅದರಲ್ಲೂ ಆ ಮಗುವಿನೊಂದಿಗೆ ಹೊಟ್ಟೆತುಂಬಾ ನಗುವ ಸ್ವಾತಂತ್ರ್ಯವೂ ತನಗಿಲ್ಲವೇ ಎಂಬ ಮುಳ್ಳೊಂದು ಎದೆಯಲ್ಲಿ ನೆಟ್ಟರೆ ಅವಳೆಂದೂ ಮತ್ತೆ ಮನೆಯೊಳಗೆ ತನ್ನ ಆ ನಗುವನ್ನು ಕಾಪಿಟ್ಟುಕೊಳ್ಳಲಾರಳು. ಗಂಡನಾದವನು ಅಷ್ಟೊಂದು ಕಠಿಣವಾಗಿ ಪ್ರತಿಕ್ರಿಯಿಸುವ ಬದಲು ಒಂದೆರಡು ನಿಮಿಷ ಅವರೊಂದಿಗೆ ನಕ್ಕಿದ್ದರೆ ಮನೆಯ ದೃಶ್ಯವೇ ಬೇರೆ ಆಗುತ್ತಿತ್ತು ಅಲ್ಲವೇ? ಆ ಸಂದರ್ಭದಲ್ಲಿ ಮನೆಯೊಡತಿ ತನ್ನ ಭಾವಗಳು ಪುಡಿಗಟ್ಟದಂತೆ ಜಾಗ್ರತೆ ವಹಿಸಿಕೊಳ್ಳುವುದು ಬಹಳ ಪ್ರಯಾಸದ ಕೆಲಸವೇ ಹೌದು. ಈ ಬಗೆಯ ಅನುಭವಗಳು ದಿನದಿಂದ ದಿನಕ್ಕೆ ಹೆಚ್ಚಿದರಂತೂ ಅವಳು ಶಾಶ್ವತವಾಗಿ ತನ್ನ ಅಂತರಂಗದಲ್ಲಿರುವ ಮಗುತನವನ್ನು ಸಂಪೂರ್ಣ ಹೊರದೂಡಿ ಕೇವಲ ಪತ್ನಿಯಾಗಿ, ತಾಯಿಯಾಗಿ ಉಳಿದುಬಿಡುತ್ತಾಳೆ.
ಒಲವೆ ಬದುಕು
ನಮ್ಮ ಮನಸ್ಸು ಯಾವಾಗ ಮಕ್ಕಳಂತೆ ಚಂಡಿ ಹಿಡಿಯುತ್ತದೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಗಮನಿಸಿ ನೋಡಿದರೆ ಸಮಯ-ಸನ್ನಿವೇಶಗಳಿಗೆ ನಾವು ಪ್ರತಿಕ್ರಿಯಿಸುವ ರೀತಿ ಯಾವಾಗ ಹೇಗಿರುತ್ತದೆ ಎಂದೇ ಹೇಳಲಾಗದು. ಕೆಲವೊಮ್ಮೆ ಕಂಬನಿಯುಕ್ಕಿಸುವಷ್ಟು ಬೇಸರವೆನಿಸಿದ ಅದೇ ವಿಷಯ, ಎರಡು ದಿನ ಕಳೆದು ಯೋಚನೆ ಮಾಡಿದರೆ ‘ಅಷ್ಟೊಂದು ಭಾವುಕಳಾಗುವ ಅಗತ್ಯವೇ ಇರಲಿಲ್ಲ’ ಎನಿಸಿ ನಗು ತರಿಸೀತು. ಅಥವಾ ಕ್ಷಣಗಳ ಹಿಂದೆ ಗಹಗಹಿಸಿ ನಗುವಂತೆ ಮಾಡಿದ ವಿಷಯ, ‘ಛೇ, ಅಷ್ಟು ನಗಬಾರದಿತ್ತು!’ ಎಂದುಕೊಳ್ಳುವಂತೆ ಮಾಡೀತು. ಅದರರ್ಥ ನಮ್ಮ ಆ ಕ್ಷಣದ ಪ್ರತಿಕ್ರಿಯೆ ಒಂದೋ ಹೆಚ್ಚಾಗಿರುತ್ತದೆ, ಇಲ್ಲವೇ ವಿಭಿನ್ನವಾಗಿರುತ್ತದೆ. ಅದಕ್ಕೆ ಕಾರಣ ನಮ್ಮ ಮನಸ್ಸಿನಲ್ಲಿರುವ ಹಲವು ಸ್ತರಗಳು. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕೆಂದಿದ್ದರೂ ಈ ಅರಿವು ನಮಗೆ ನೆರವಾದೀತು. ಹೆಚ್ಚಿನ ಸಂದರ್ಭಗಳಲ್ಲಿ ಮನೆಯೊಳಗಿನ ವಾತಾವರಣ ಚೆನ್ನಾಗಿರುವುದಕ್ಕೂ ಹಾಳಾಗುವುದಕ್ಕೂ ಇದೇ ಕಾರಣವಲ್ಲವೇ? ನಾವು ಬಯಸಿದಂತಹ ಅಥವಾ ನಿರೀಕ್ಷಿಸಿದಂತಹ ಪ್ರತಿಕ್ರಿಯೆ ನಮ್ಮ ಆಪ್ತರಿಂದ ಬರದೆ ಹೋದಾಗ ಮನಸ್ಸಿನೊಳಗೆ ಕಾಡುವ ಶೂನ್ಯದ ಭಾರ ಅನುಭವಿಸಿದವರಿಗೇ ಅರ್ಥವಾದೀತು. ಕೆಲಸ ಮಾಡಿ ದಣಿದು ಬಂದ ಸಂಗಾತಿಗೆ ಕಾಫಿ ಮಾಡಿಕೊಡುವಲ್ಲಿನ ಕಾಳಜಿಯಲ್ಲೂ ಸಂದೇಶವೊಂದು ಹರಿದಿರುತ್ತದಲ್ಲ? ತಲೆನೋವೆಂದು ಮಲಗಿದವರಿಗೆ ಕೊಂಚ ಹಣೆ ನೀವಿದರೂ ಸಾಕು, ಔಷಧಿಗಿಂತ ಹೆಚ್ಚಿನ ಶಕ್ತಿ ಆ ಸ್ಪರ್ಶಕ್ಕಿರುತ್ತದೆ. ತರಕಾರಿ ಹೆಚ್ಚಿ ಕೈಗೆ ಗಾಯ ಮಾಡಿಕೊಂಡ ಹೆಂಡತಿ ತನ್ನ ಸಂಗಾತಿ ಅದಕ್ಕೆ ಬ್ಯಾಂಡೇಜ್ ಸುತ್ತಲಿ ಎಂದು ಆಶಿಸಿದರೂ, ಅಥವಾ ಅಪರೂಪಕ್ಕೊಮ್ಮೆಯಾದರೂ ಸಂಗಾತಿ ಅನಿರೀಕ್ಷಿತವಾಗಿ ಏನಾದರೂ ತಂದುಕೊಡಲಿ ಎಂದು ಅಪೇಕ್ಷಿಸಿದರೂ ಅದಕ್ಕೆ ಕಾರಣ ಅವಳಲ್ಲಿ ಅಂತರ್ಗತವಾಗಿರುವ ಮಗುಮನಸ್ಸು ಹೊರತು ಅವಳು ನೋಡಿರಬಹುದಾದ ಸಿನೆಮಾದ ಪ್ರಭಾವದಿಂದ ಆಗಿರಬೇಕಾಗಿ ಏನೂ ಇಲ್ಲ!
ಈ ಬಗೆಯ ಸಣ್ಣ ಪುಟ್ಟ ಭಾವಗಳಿಗೆ ಬೇಕಾದಂತಹ ಸ್ಪಂದನೆ ದೊರೆತರೆ ನಮ್ಮೊಳಗಿನ ಮನಸ್ಸು ಸದಾ ಸಂತೃಪ್ತವಾಗಿರುತ್ತದೆ, ಹೊರತು ಎಲ್ಲ ಸಂದರ್ಭಗಳಲ್ಲೂ ದುಬಾರಿ ಒಡವೆ, ಸೀರೆಗಳಿಂದ ಎಂದೇನೂ ಇಲ್ಲ. ಮನೆಯೊಡೆಯನಿಗಾದರೂ ಅಷ್ಟೇ, ದಣಿದು ಬಂದಾಗ ಮೆಲುನಗುವಿನೊಂದಿಗೆ ದೊರೆಯುವ ಸ್ವಾಗತ ಅವನೊಳಗಿನ ಮಗುತನವನ್ನು ಸಾಂತ್ವನಪಡಿಸುತ್ತದೆ. ಬದಲಾಗಿ ತಾನು ಕೊಟ್ಟ ಪಟ್ಟಿಯ ವಸ್ತುಗಳನ್ನು ತಂದಿರೋ ಇಲ್ಲವೋ ಎಂದು ಕ್ಲಾಸ್ ಶುರು ಮಾಡಿದರೆ ತಾನೊಂದು ದುಡಿದು ಇವರ ಹೊಟ್ಟೆ ತುಂಬಿಸುವ ಯಂತ್ರ ಎಂಬ ಭಾವ ಅವನನ್ನೂ ಕಾಡಬಹುದು. ಅಷ್ಟಕ್ಕೂ ‘ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು’ ಎಂದು ಬದುಕಬೇಕಾದರೆ ಅಗತ್ಯವಿರುವುದು ನಮ್ಮ ಮನಸ್ಸಿನ ಹಸಿರನ್ನು ಸದಾ ತೃಪ್ತಿಯ ಹೊನಲಿಂದ ನಳನಳಿಸುವಂತೆ ಇರಿಸಿಕೊಳ್ಳುವುದು.
ಇಂತಹ ಸಣ್ಣಪುಟ್ಟ ಸಂತೋಷಗಳು ಬದುಕಿನಿಂದ ಯಾವಾಗ ದೂರವಾಗುತ್ತವೋ ಅರ್ಥವಿಲ್ಲದ ಗಾಂಭೀರ್ಯತೆವೊಂದು ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ಅದರ ಮುಷ್ಟಿಯೊಳಗೆ ಸಿಲುಕಿಕೊಂಡರೆ ಹೊರಬರುವುದು ಬಲು ಕಠಿಣವಾದೀತು. ಯಾಕೆಂದರೆ ಹಲವು ಸಂದರ್ಭಗಳಲ್ಲಿ ನಮ್ಮೊಳಗೆ ಅಶಾಂತಿ ಕಾಡದಂತೆ ಕಾಪಾಡುವುದು ಅದೇ ಗಾಂಭೀರ್ಯ. ಅದರ ಭಾರವನ್ನು ಹೊತ್ತುಕೊಂಡಷ್ಟೂ ಮನದೊಳಗಿನ ಮಗು ಸೊರಗುತ್ತದೆ. ಬದುಕಿನ ಬಳ್ಳಿ ತಳಮಳಿಸುತ್ತದೆ. ಈಗ ಹೇಳಿ, ನಿಮ್ಮ ಅಂತರಂಗದ ಮಗುವನ್ನು ಹೇಗೆ ನೋಡಿಕೊಳ್ಳುತ್ತಿದ್ದೀರಿ?