‘ಮಣಿಕಾರಸಂವಾದ’ ಎಂಬ ಐದನೆಯ ಕಥೆ
ಅನಂತರ ಮತ್ತೆ ಸಿಂಹಾಸನವನ್ನು ಏರಲು ಬಂದ ಭೋಜರಾಜನನ್ನು ತಡೆದು ಇನ್ನೊಂದು ಗೊಂಬೆಯು ಒಂದು ಕಥೆಯನ್ನು ಹೇಳಿತು –
‘‘ವಿಕ್ರಮಾರ್ಕನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಒಮ್ಮೆ ಒಬ್ಬ ವ್ಯಾಪಾರಿಯು ಬಂದು ಅಮೂಲ್ಯವಾದ ಒಂದು ರತ್ನವನ್ನು ರಾಜನಿಗೆ ಸಮರ್ಪಿಸಿದನು. ಮಹಾರಾಜನು ಹೊಳೆಯುತ್ತಿರುವ ಆ ರತ್ನವನ್ನು ತೆಗೆದುಕೊಂಡು ರತ್ನಪರೀಕ್ಷೆ ಮಾಡುವವರನ್ನು ಕರೆದು ‘ಇದು ಯಾವ ರೀತಿಯ ರತ್ನ ಎಂದು ಪರೀಕ್ಷೆ ಮಾಡಿ ಇದರ ಬೆಲೆಯನ್ನು ನಿರ್ಣಯಿಸಿ’ ಎಂದು ಆಜ್ಞಾಪಿಸಿದನು. ಅವರು ರತ್ನವನ್ನು ಪರೀಕ್ಷಿಸಿ ‘ರಾಜನ್, ಅತ್ಯಂತ ಅಮೂಲ್ಯವಾದ ರತ್ನ ಇದು’ ಎಂದರು. ಈ ಮಾತನ್ನು ಕೇಳಿ ಮಹಾರಾಜನು ವ್ಯಾಪಾರಿಗೆ ಹೆಚ್ಚು ಹಣವನ್ನು ಕೊಟ್ಟು ಆ ರತ್ನವನ್ನು ಕೊಂಡುಕೊಂಡನು. ಅನಂತರ ‘ನಿನ್ನ ಬಳಿ ಈ ರೀತಿಯ ರತ್ನ ಇನ್ನೊಂದು ಇದೆಯಾ?’ ಎಂದು ಕೇಳಿದನು.
ವ್ಯಾಪಾರಿಯು ‘ಮಹಾರಾಜ, ಈ ರೀತಿಯ ಇನ್ನೂ ಹತ್ತು ರತ್ನಗಳು ನನ್ನ ಬಳಿ ಇವೆ. ಆದರೆ ನಾನು ಅವುಗಳನ್ನು ಇಲ್ಲಿಗೆ ತಂದಿಲ್ಲ. ನನ್ನ ಊರಿನಲ್ಲೇ ಇವೆ. ನಿಮಗೆ ಬೇಕಿದ್ದರೆ ಅವುಗಳ ಬೆಲೆಯನ್ನು ಕೊಟ್ಟು ಖರೀದಿಸಬಹುದು’ ಎಂದು ಹೇಳಿದನು. ರತ್ನಪರೀಕ್ಷಕರು ಒಂದೊಂದು ರತ್ನದ ಬೆಲೆ ಆರು ಕೋಟಿ ಬಂಗಾರದ ನಾಣ್ಯಗಳು ಎಂದು ತಿಳಿಸಿದರು. ಮಹಾರಾಜನು ಅಷ್ಟು ಬಂಗಾರವನ್ನು ಆ ವ್ಯಾಪಾರಿಗೆ ಕೊಟ್ಟನು. ಅವನೊಂದಿಗೆ ತನ್ನ ಅತ್ಯಂತ ವಿಶ್ವಾಸಪಾತ್ರನಾದ ಮಣಿಕಾರನೆಂಬ ಸೇವಕನನ್ನು ಕಳಿಸಿದನು. ಹೊರಡುವ ಮೊದಲು ಆ ಮಣಿಕಾರನಿಗೆ ‘ಎಂಟು ದಿನಗಳ ಒಳಗೆ ರತ್ನಗಳನ್ನು ತೆಗೆದುಕೊಂಡು ನೀನು ಹಿಂದಿರುಗಬೇಕು. ನಿನಗೆ ಅದಕ್ಕನುಗುಣವಾಗಿ ಉಡುಗೊರೆಯನ್ನು ಕೊಡುತ್ತೇನೆ’ ಎಂದು ಹೇಳಿದನು.
ಮಣಿಕಾರನು ‘ಮಹಾರಾಜ, ಎಂಟು ದಿನಗಳ ಒಳಗೆ ರತ್ನಗಳನ್ನು ತೆಗೆದುಕೊಂಡು ಬಂದು ನಿನ್ನ ಚರಣಾರವಿಂದಗಳ ದರ್ಶನ ಪಡೆಯುವೆನು, ಇಲ್ಲದಿದ್ದರೆ ನೀನು ನನಗೆ ಶಿಕ್ಷೆಯನ್ನು ಕೊಡಬಹುದು’ ಎಂದನು.
ಹೀಗೆ ಹೇಳಿ ಮಣಿಕಾರನು ಆ ವ್ಯಾಪಾರಿಯೊಂದಿಗೆ ಅವನ ಊರಿಗೆ ತೆರಳಿದನು. ಅಲ್ಲಿ ವ್ಯಾಪಾರಿಯು ಹತ್ತು ರತ್ನಗಳನ್ನು ಅವನಿಗೆ ಕೊಟ್ಟನು. ಅದನ್ನು ತೆಗೆದುಕೊಂಡು ಹೊರಡುವಾಗ ದಾರಿಯಲ್ಲಿ ತುಂಬಾ ಮಳೆಯಾಯಿತು. ದಾರಿಯ ನಡುವೆ ಒಂದು ನದಿಯನ್ನು ದಾಟಬೇಕಾಗಿತ್ತು. ಆದರೆ ಮಳೆಯ ಕಾರಣದಿಂದ ನದಿಯು ತುಂಬಿ ಹರಿಯುತ್ತಿದ್ದು ದಾಟುವುದೇ ಸಾಧ್ಯವಿಲ್ಲವಾಗಿತ್ತು.
ಹೇಗೆ ಈ ನದಿಯನ್ನು ದಾಟಲಿ ಎಂದು ಮಣಿಕಾರನು ಯೋಚಿಸುತ್ತಿದ್ದಾಗ ತೀರದಲ್ಲಿ ಓರ್ವ ನಾವಿಕ ಕಾಣಿಸಿದನು. ಅವÀನನ್ನು ನದಿ ದಾಟಿಸುವಂತೆ ಕೇಳಿದಾಗ ಅವನು, ‘ಎಲೈ ಪಥಿಕನೆ, ನದಿ ತುಂಬಿ ಹರಿಯುತ್ತಿದೆ. ಹೇಗೆ ದಾಟಿಸಲಿ? ನದಿ ತುಂಬಿ ಹರಿಯುವಾಗ ಬುದ್ಧಿವಂತನು ದಾಟಬಾರದು ಎಂಬ ಮಾತೇ ಇದೆ’ ಎಂದನು.
ಮಣಿಕಾರನು, ‘ನೀನು ಹೇಳಿದ್ದು ಸತ್ಯವೇ. ಆದರೆ ನನಗೆ ವಿಶೇಷ ಕಾರ್ಯ ಇದೆ. ಸಾಮಾನ್ಯಕಾರ್ಯಕ್ಕಿಂತಲೂ ವಿಶೇಷಕಾರ್ಯ ಹೆಚ್ಚಿನದು. ನದಿಯನ್ನು ದಾಟುವುದು ಸಾಮಾನ್ಯ ಕೆಲಸ, ಆದರೆ ರಾಜಕಾರ್ಯ ಅದಕ್ಕಿಂತ ಹೆಚ್ಚಿನದು’ ಎಂದನು.
ನಾವಿಕನು ‘ಯಾವುದು ಅದು ರಾಜಕಾರ್ಯ, ಅತ್ಯಂತ ಮಹತ್ತ್ವದ್ದು?’ ಎಂದು ಪ್ರಶ್ನಿಸಿದನು. ಮಣಿಕಾರನು ‘ಇಂದೇ ಈ ಹತ್ತು ರತ್ನಗಳನ್ನು ತೆಗೆದುಕೊಂಡು ಹೋಗಿ ಮಹಾರಾಜನಿಗೆ ಒಪ್ಪಿಸಬೇಕು. ಹೋಗದಿದ್ದರೆ ರಾಜನು ಆಶಾಭಂಗದಿಂದ ನನ್ನನ್ನು ಶಿಕ್ಷಿಸುತ್ತಾನೆ’ ಎಂದನು.
ಆಗ ನಾವಿಕನು ‘ಈ ರತ್ನಗಳಲ್ಲಿ ಐದು ರತ್ನಗಳನ್ನು ನನಗೆ ಕೊಟ್ಟರೆ ಮಾತ್ರ ನಿನ್ನನ್ನು ನದಿ ದಾಟಿಸುತ್ತೇನೆ’ ಎಂದನು. ಬಳಿಕ ಮಣಿಕಾರನು ಉಪಾಯವಿಲ್ಲದೆ ನಾವಿಕನಿಗೆ ಐದು ರತ್ನಗಳನ್ನು ಕೊಟ್ಟು ನದಿಯನ್ನು ದಾಟಿ, ನಗರವನ್ನು ತಲಪಿ ಮಹಾರಾಜನಿಗೆ ಉಳಿದ ಐದು ರತ್ನಗಳನ್ನು ಕೊಟ್ಟನು.
ಮಹಾರಾಜನು ‘ಎಲೈ ಮಣಿಕಾರ, ಐದು ರತ್ನಗಳನ್ನು ಮಾತ್ರ ತಂದಿರುವೆಯಲ್ಲ? ಉಳಿದವುಗಳನ್ನು ಏನು ಮಾಡಿದೆ?’ ಎಂದು ಕೇಳಿದನು.
ಮಣಿಕಾರನು, ‘ಸ್ವಾಮಿ, ನಾನು ಈ ನಗರದಿಂದ ಹೊರಟು ಆ ವ್ಯಾಪಾರಿಯ ಹಳ್ಳಿಗೆ ತೆರಳಿದೆ. ಅವನು ಕೊಟ್ಟ ರತ್ನಗಳನ್ನು ತೆಗೆದುಕೊಂಡು ಬರುತ್ತಿರುವಾಗ ದಾರಿಯ ಮಧ್ಯದಲ್ಲಿ ಮಳೆಯಿಂದಾಗಿ ನದಿ ಎರಡೂ ಕಡೆ ತುಂಬಿ ಹರಿಯುತ್ತಿತ್ತು. ಎಂಟು ದಿನಗಳ ಒಳಗೆ ರಾಜನ ದರ್ಶನ ಮಾಡಬೇಕು, ಆದರೆ ನದಿಯನ್ನು ದಾಟಲು ಸಾಧ್ಯವಿಲ್ಲ, ಏನು ಮಾಡಲಿ? ಎಂದು ವಿಚಾರಿಸಿ ನದಿಯನ್ನು ದಾಟಿಸಲು ನಾವಿಕನಿಗೆ ಐದು ರತ್ನಗಳನ್ನು ಕೊಟ್ಟೆ. ಉಳಿದವುಗಳನ್ನು ತಂದಿದ್ದೇನೆ. ಎಂಟು ದಿನಗಳೊಳಗೆ ನಾನು ಬರದಿದ್ದರೆ ತಾವು ದುಃಖಿತರಾಗಬಹುದು ಎಂದು ಭಾವಿಸಿ ನಾನು ಹಾಗೆ ಮಾಡಿದೆ’ ಎಂದನು.
ರಾಜಾ ವಿಕ್ರಮನು ಅವನ ಮಾತುಗಳನ್ನು ಕೇಳಿ ಸಂತೋಷದಿಂದ ಆ ಐದು ರತ್ನಗಳನ್ನೂ ಮಣಿಕಾರನಿಗೇ ಕೊಟ್ಟನು” – ಎಂದು ಕಥೆಯನ್ನು ಹೇಳಿ ಗೊಂಬೆಯು ಭೋಜರಾಜನಿಗೆ, ‘ವಿಕ್ರಮನು ಈ ರೀತಿ ಔದಾರ್ಯಗುಣಶ್ರೇಷ್ಠನಾಗಿದ್ದ. ನಿನ್ನಲ್ಲಿ ಈ ರೀತಿಯ ಔದಾರ್ಯಗುಣ ಇದ್ದರೆ ಈ ಸಿಂಹಾಸನದಲ್ಲಿ ಕುಳಿತುಕೋ’ ಎಂದಿತು.
ರಾಜನು ಸುಮ್ಮನಾದನು.
(ಮುಂದುವರಿಯುವುದು)