ನನ್ನ ಸ್ನೇಹಿತೆ ಒಬ್ಬರು ಹೇಳಿದ ಘಟನೆಯಿದು. “ನಾನು ನನ್ನ ಸ್ನೇಹಿತೆಯ ಮನೆಗೆ ಹೋಗಿದ್ದೆ. ಟೇಬಲ್ ಮೇಲೆ ಸುಮಾರು ಬಾಕ್ಸ್ಗಳು ಇದ್ದವು. ಆನ್ಲೈನಿನಲ್ಲಿ ಬಂದ ಆರ್ಡರ್ಗಳು. ಅವಳು ಉತ್ಸಾಹದಿಂದ ಬಿಡಿಸಿ ನೋಡುತ್ತ ಕುಳಿತಿದ್ದಳು. ಚಪ್ಪಲಿ, ಬಟ್ಟೆ, ಮಕ್ಕಳ ಬಟ್ಟೆಗಳು, ಅಲಂಕಾರಿಕ ಸಾಮಗ್ರಿಗಳು ಇದ್ದವು. “ಏನೇ ಇದು, ಇಷ್ಟೆಲ್ಲ ಯಾಕೆ ತರಿಸಿದೆ” ಎಂದು ಕೇಳಿದೆ. “ಕಳೆದವಾರ 1 ದಿನ ಆಫೀಸಿಗೆ ರಜೆ ಹಾಕಿದ್ದೆ. ಮಾಡುವುದಕ್ಕೆ ಏನೂ ಕೆಲಸ ಇರಲಿಲ್ಲ. ಒಂದು ಒಂದು ಎನ್ನುತ್ತ ಆರ್ಡರ್ ಮಾಡುತ್ತ ಮಾಡುತ್ತ ಇಷ್ಟೆಲ್ಲ ಮಾಡಿಬಿಟ್ಟೆ. ಒಂದುಸಲ ಶುರು ಮಾಡಿದರೆ ನಿಲ್ಲಿಸುವುದಕ್ಕೇ ಮನಸ್ಸಾಗುವುದಿಲ್ಲ. ಹಬ್ಬದ ಸೇಲ್ ಬೇರೆ ಇತ್ತು” ಅಂದಳು. “ಇಷ್ಟೆಲ್ಲ ಸರಿ, ಕಣ್ಣಾರೆ ನೋಡದೇ, ಮುಟ್ಟಿ ನೋಡದೇ ತೆಗೆದುಕೊಳ್ಳುತ್ತೀಯಲ್ಲ, ಸರಿಯಾಗಿರುವುದು, ಇಷ್ಟ ಆಗಿರುವುದು ಸಿಗುತ್ತವೆಯೇ?” ಎಂದು ಕೇಳಿದ್ದಕ್ಕೆ “ಕೆಲವು ಸಲ ಮೋಸ ಹೋಗಿದ್ದೇನೆ. ಆದ್ರೆ ತುಂಬಾ ಲಾಸ್ ಆಗಿಲ್ಲ” ಎಂದಳು. ನಾನು ಏನೋ ಹೇಳಬೇಕು ಎನ್ನುವಷ್ಟರಲ್ಲಿ ಅವಳ ಗಂಡ ಬಂದರು. “ಮತ್ತೆ ತರಿಸಿದ್ಯಾ” ಎಂದು ಅಸಹನೆಯಿಂದ ಹೇಳಿ ಹೋದರು. ನಾನಿದ್ದ ಕಾರಣ ಅವರಿಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಲಾಗಲಿಲ್ಲ. ನನಗೆ ಯಾಕೋ ಅಲ್ಲಿ ಇರುವುದು ಸರಿ ಅಲ್ಲ ಎನ್ನಿಸಿ, ಏನೋ ನೆಪ ಹೇಳಿ ಹೊರಟುಬಿಟ್ಟೆ.”
ನಾನು ಒಬ್ಬರ ಮನೆಗೆ ಹೋಗಿದ್ದಾಗ ಆ ಮನೆಯ ತಾಯಿ “ಇವಳ ಆನ್ಲೈನ್ ಆರ್ಡರ್ಗಳ ಕಾರಣದಿಂದಾಗಿ ಮನೆತುಂಬ ಬೇಕಾದ್ದೋ ಬೇಡದ್ದೋ ತುಂಬಿಕೊಂಡು, ಮನೆ ಕಸದರಾಶಿ ಥರ ಎನಿಸುತ್ತಿದೆ. ರಾಶಿರಾಶಿ ಬಟ್ಟೆ ತೆಗೆದುಕೊಳ್ಳುತ್ತಾಳೆ. ಒಂದೆರಡು ಸಲ ಹಾಕಿದರೆ ಮುಗಿಯಿತು. ಮತ್ತೆ ಹಾಕುವುದಿಲ್ಲ. ಅದು ಹೇಗೆ ಸಂಸಾರ ಮಾಡುತ್ತಾಳೋ ಮುಂದೆ. ಇವಳಿಗೊಂದು ಕೆಲಸ ಸಿಗಲಿ ಎಂದು ಎಂದುಕೊಂಡಿದ್ದೆವು. ಕೆಲಸ ಸಿಕ್ಕ ಮೇಲೆ ಈ ಹುಚ್ಚು ಶುರು ಆಗಿದೆ. ಅದ್ಯಾಕೆ ಈ ಮೊಬೈಲಿನವರು ಇದನ್ನೆಲ್ಲಾ ಶುರು ಮಾಡಿದರೋ ದೇವರೇ!” ಎಂದು ಹಣೆಚಚ್ಚಿಕೊಂಡರು.
ಈವತ್ತು ಬಸ್ಸಿನಲ್ಲಿ ನನ್ನ ಪಕ್ಕ ಕುಳಿತಿದ್ದ ಮಹಿಳೆಯೊಬ್ಬರು ಮೊಬೈಲಲ್ಲಿ ಆರ್ಡರ್ ಮಾಡುತ್ತ ಇದ್ದರು. ಸುಮಾರು ಒಂದು ಗಂಟೆಗಳ ಕಾಲ ತಲೆಯನ್ನೇ ಎತ್ತದೇ ಮೊಬೈಲಿನಲ್ಲಿ ಮುಳುಗಿದ್ದರು. ನಾನು ಇಳಿಯಬೇಕಾಗಿದ್ದು ಅವರು ಇಳಿಯಬೇಕಾಗಿದ್ದು ಒಂದೇ ಊರಾಗಿರುವುದನ್ನು ಮೊದಲೇ ಖಾತ್ರಿ ಮಾಡಿಕೊಂಡು ನಾನು ಇಳಿಯುವುದಕ್ಕೆ ಎದ್ದಮೇಲೆ ಅವರೂ ಎದ್ದು ಇಳಿದರು.
ಈ ಆನ್ಲೈನ್ ಮೂಲಕ ವಸ್ತುಗಳನ್ನು ತರಿಸುವ ವಿಧಾನ ನನಗೆ ಈವತ್ತಿಗೂ ಇಷ್ಟ ಆಗುವುದಿಲ್ಲ. ನನ್ನ ಊರಿನಲ್ಲಿ ವಿಚಾರಿಸಿ ಸಿಗದೇ ಇರುವ ಒಂದೆರಡು ವಸ್ತುಗಳನ್ನು ತರಿಸಿದ್ದೇನೆಯೇ ಹೊರತು ಬಟ್ಟೆ, ಚಪ್ಪಲಿಗಳನ್ನು ಕಣ್ಣಾರೆ ನೋಡದೇ ಖರೀದಿಸುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ. 4-5-6 ಅಂಗಡಿ ಸುತ್ತಿ, ಬೇಕಾದ ವಸ್ತುಗಳನ್ನು ಖರೀದಿಸಿ, ಬೆಲೆಯ ಮೇಲೆ ಸ್ವಲ್ಪ ಚರ್ಚೆ ಮಾಡಿ ಅಂಗಡಿಯವರು 20-30ರೂ. ಗಳನ್ನು ಕಡಿತಗೊಳಿಸಿದಾಗ ಸಿಗುವ ಸಮಾಧಾನ ಮೊಬೈಲ್ ಪರದೆಯ ಮೇಲೆ ಬೆರಳೊತ್ತಿ ಆರ್ಡರ್ ಮಾಡುವಾಗ ನಾನು ಪಡೆಯಲಾರೆ. ಅಗತ್ಯವಸ್ತುಗಳನ್ನು ತರಿಸುವ ಬಗ್ಗೆ ನನ್ನ ತಕರಾರೇನೂ ಇಲ್ಲ. ಆದರೆ ಇತ್ತೀಚೆಗೆ ಇದು ಗೀಳಾಗಿ ಪರಿವರ್ತನೆ ಆಗುತ್ತಿರುವುದು ಕಾಣುತ್ತಿದೆ. ನನ್ನ ಪಕ್ಕ ಕುಳಿತಿದ್ದ ಆ ಮಹಿಳೆ ತುಂಬಾ ವಸ್ತುಗಳನ್ನು ಆರ್ಡರ್ ಮಾಡಿದರು ಎಂದು ಅನಿಸಿತು ನನಗೆ. ಅದು ಅವರಿಗೆ ಎಷ್ಟು ಅಗತ್ಯ ಇತ್ತೋ ಅವರೇ ಹೇಳಬೇಕು. ಉಳಿತಾಯ, ಯೋಚಿಸಿ ಖರೀದಿಸುವಿಕೆಯನ್ನು ಎಲ್ಲರೂ ಅಗತ್ಯವಾಗಿ ಮೈಗೂಡಿಸಿಕೊಳ್ಳಬೇಕಿದೆ. ‘ಕೊಳ್ಳುಬಾಕತನ’ದ ಭೂತ ನಮ್ಮನ್ನು ಇಡಿಯಾಗಿ ‘ಸ್ವಾಹಾ’ ಮಾಡುವ ಮೊದಲು ಅದರ ಹಿಡಿತದಿಂದ ತಪ್ಪಿಸಿಕೊಳ್ಳಬೇಕಿದೆ.