- ಮನುಷ್ಯನ ನಾಲ್ಕು ವಯೋಮಾನಗಳು
ಯುದ್ಧ ಹೂಡಿದ ಅವನು ದೇಹದ ವಿರುದ್ಧ
ದೇಹ ಗೆದ್ದಿತು, ಎದೆ ಸೆಟೆಸಿ ನಡೆಯಿತು.
ಆ ಬಳಿಕ ಹೋರಾಡಿದ ಹೃದಯದ ವಿರುದ್ಧ
ಬಿಟ್ಟುಹೊರಟವು ಅವನ ಮುಗ್ಧತೆ, ಶಾಂತಿ
ಅನಂತರ ಹೋರಾಡಿದ ತನ್ನ ಮನಸಿನ ವಿರುದ್ಧ
ಹಿಂದೆ ಬಿಟ್ಟುನಡೆದ ತನ್ನ ಹೆಮ್ಮೆಯ ಹೃದಯ
ಈಗ ಶುರು ಅವನ ಯುದ್ಧ ದೇವರ ವಿರುದ್ಧ
ಮಧ್ಯರಾತ್ರಿ ದೇವರು ಗೆಲ್ಲುವುದು ಶತಸ್ಸಿದ್ಧ
(ಇಂಗ್ಲಿಷ್ ಮೂಲ : ಡಬ್ಲ್ಯು.ಬಿ. ಯೇಟ್ಸ್)
- ಗೋಡೆ ರಿಪೇರಿ
ಗೋಡೆಯನ್ನು ಇಷ್ಟಪಡದ ಏನೋ ಒಂದಿದೆ. ಅದು
ಹಿಮಗಟ್ಟಿದ ನೆಲದಿಂದುಬ್ಬಿ, ಗೋಡೆಯ ಮೇಲಕ್ಕೆಬ್ಬಿ,
ಒಂದರ ಮೇಲೊಂದು ಪೇರಿಸಿಟ್ಟ ಕಲ್ಲುಗುಂಡುಗಳನ್ನು
ಉರುಳಿಸುತ್ತೆ ಚೆಲ್ಲಾಪಿಲ್ಲಿ ಹಗಲ ಬಿಸಿಲಿಗೆ. ಹೀಗೆ
ಇಬ್ಬರು ಆರಾಮವಾಗಿ ಹಾದುಹೋಗಬಹುದಾದಂಥ
ಬಿರುಕುಗಳು ಮೂಡುತ್ತವೆ ಗೋಡೆಯಲ್ಲಿ ಅಲ್ಲಲ್ಲಿ. ಇನ್ನು
ಬೇಟೆಗಾರರದ್ದೋ ಅದು ಬೇರೆ ಸಂಗತಿ. ಅವರು
ಕೆಡವಿಹೋದ ಕಲ್ಲುಗಳನ್ನು ನಾನೇ ಜೋಡಿಸಿದ್ದೇನೆ
ಈ ಕಡೆ ಬಂದಾಗ. ಅವರು ಗೋಡೆಯ ಸಂದಿಗಳಲ್ಲಿ
ಅವಿತುಕೂತ ಮೊಲಗಳನ್ನು ಬೆದರಿಸಿ ಹೊರಗಟ್ಟುತ್ತಾರೆ
ಬೊಗಳುತ್ತ ಬೆನ್ನಟ್ಟುವ ತಮ್ಮ ನಾಯಿಗಳ ಖುಷಿಗೆ.
ಇಷ್ಟಾಗಿ ಈ ಬಿರುಕು ಹೇಗಾದವು ಎಂಬುದನ್ನು
ಕಂಡುಕೇಳಿದವರಿಲ್ಲ ಯಾರೂ ಈ ತನಕ. ನಾವು
ಕಾಣುವುದು ಅವನ್ನು ವಸಂತದ ರಿಪೇರಿ ವೇಳೆಗೆ.
ಹೇಳಿಕಳಿಸುತ್ತೇನೆ ನಾನು ಬೆಟ್ಟದಾಚೆಗಿರುವ ನನ್ನ
ನೆರೆಯಾತನಿಗೆ. ಹೀಗೆ ನಿಗದಿಯಾದ ಒಂದು ದಿನ
ನಾವು ಭೇಟಿಯಾಗುತ್ತೇವೆ, ಸರಹದ್ದಿನ ಉದ್ದಕ್ಕೂ
ಹೆಜ್ಜೆಹಾಕಲು, ಹಾಗೂ ಗೋಡೆಯ ನೇರ್ಪಡಿಸಲು.
ನಡೆಯುತ್ತೇವೆ ನಮ್ಮ ನಡುವೆ ಗೋಡೆ ಇರಿಸಿಕೊಂಡು.
ಎತ್ತಿಡುತ್ತೇವೆ ಉರುಳಿಬಿದ್ದ ಕಲ್ಲುಗುಂಡುಗಳನು ಮತ್ತೆ
ಅವುಗಳ ಸ್ವಸ್ಥಾನದಲ್ಲಿ. ಆ ಕಲ್ಲುಗಳೋ ಕೆಲವು
ಉರುಟುರುಟು, ಕೆಲವು ವಕ್ರ, ಕೆಲವು ಚಪ್ಪಟೆ.
ಅವುಗಳ ಸಮತೋಲದಲ್ಲಿ ನಿಲ್ಲಿಸಲು ಛೂಮಂತ್ರ ಬೇಕು:
“ಹೀಗೇ ನಿಂತಿರಿ ನಾವು ಹಿಂತಿರುಗುವ ವರೆಗೂ, ಛೂ!”
ದರಗಾಗಿವೆ ಕೈಬೆರಳು ಅವುಗಳ ಹಿಡಿದೆತ್ತಿ. ಓ
ಇದೊಂದು ಬಗೆಯ ಹೊರಾಂಗಣ ಕ್ರೀಡೆಯಂತೆ ನಮಗೆ.
ಒಬ್ಬೊಬ್ಬರು ಒಂದು ಬದಿಗೆ. ಇಲ್ಲ, ಇನ್ನೂ ಹೆಚ್ಚಿನದಿದೆ:
ಗೋಡೆಯಿರುವ ಇಲ್ಲಿ ನಮಗೆ ಅದರ ಅಗತ್ಯವೇ ಇಲ್ಲ,
ಅವನದ್ದೋ ಪೈನ್ತೋಪು, ನನ್ನದು ಸೇಬಿನ ತೋಟ.
ಈ ಸೇಬಿನ ಮರಗಳು ಗಡಿರೇಖೆಯನ್ನು ದಾಟಿಹೋಗಿ
ತಿನ್ನಲಾರವು ಅವನ ಪೈನ್ಮರದ ಕೋನ್ಗಳನ್ನು.
ಹೀಗೆಂದರೆ ನಾನು ನನ್ನ ನೆರೆಯಾತನದೊಂದೇ ಮಾತು:
“ಒಳ್ಳೆ ಬೇಲಿ ಇದ್ದರೆ ಅದು ಒಳ್ಳೆ ನೆರೆಹೊರೆ”
ವಸಂತದ ಕುಚೇಷ್ಟೆ ನನಗೆ, ಅವನ ಮಿದುಳಿಗೆ ಒಂದು
ಹುಳ ಬಿಟ್ಟರೆ ಹೇಗೆ, ಅನಿಸಿ ಹೀಗೆ ಹೇಳುತ್ತೇನೆ:
“ಹೇಗೆ ತಾನೆ ಮಾಡೀತು ಅದು ಒಳ್ಳೆ ನೆರೆಹೊರೆ?
ಇಲ್ಲಿ ಹಸುಗಳಿದ್ದರೆ ಅದು ಸರಿ, ಹಸುಗಳಿಲ್ಲವಲ್ಲ?
ತಿಳಿಯಬೇಕಿದೆ ನನಗೆ ನಾ ಗೋಡೆ ಕಟ್ಟುವ ಮೊದಲು,
ಯಾಕೆ ಗೋಡೆ? ಯಾವುದನ್ನು ಒಳಗಡೆಗಿಡಲು?
ಯಾವುದ ಹೊರಗೆ? ಯಾರಿಗೆ ತೊಂದರೆ ನನ್ನಿಂದ?”
ಗೋಡೆಯನ್ನು ಇಷ್ಟಪಡದ ಏನೋ ಒಂದಿದೆ. ಅದು
ಬಯಸುತ್ತೆ ಗೋಡೆಯನ್ನು ಕೆಡವಿಹಾಕಲು.
“ಭೂತಚೇಷ್ಟೆ” ಎನ್ನಲೆ ಅವನಿಗೆ? ಅದು ಖಚಿತವಲ್ಲ.
ಅಂದುಕೊಳ್ಳಲಿ ಹಾಗೆ ಅವನೇ ಬೇಕಿದ್ದರೆ.
ಈಗ ಅವನು ತರುತ್ತಿದ್ದಾನೆ ತನ್ನ ಎರಡೂ ಕೈಗಳಲ್ಲಿ
ಎರಡು ಕಲ್ಲುಬಂಡೆ, ಹಿಡಿದು ತುದಿಗಳನ್ನು ಭದ್ರವಾಗಿ,
ಶಿಲಾಯುಗದ ಸಶಸ್ತ್ರ ಅನಾಗರಿಕ ಮನುಷ್ಯನಂತೆ.
ಕತ್ತಲಲ್ಲಿ ಚಲಿಸುತ್ತಿರುವ ಹಾಗೆ ತೋರುತ್ತಿದ್ದಾನೆ.
ಅದು ಕೇವಲ ಕಾಡಿನ ಅಥವಾ ದಟ್ಟ ಮರಗಿಡಗಳ
ನೆರಳಿನ ಕತ್ತಲೆಯಲ್ಲ. ದ್ರೋಹ ಬಗೆಯಲಾರ ಅವನು
ತಂದೆಯ ಮಾತಿಗೆ, ಜೊತೆಗೆ ಮನದಟ್ಟಾಗಿದೆ ಸ್ವಂತ
ಚಿಂತನೆಯಿಂದ. ಹೀಗಾಗಿ ಮತ್ತೆ ಅದೇ ಹೇಳುತ್ತಾನೆ:
“ಒಳ್ಳೆ ಬೇಲಿ ಇದ್ದರೆ ಅದು ಒಳ್ಳೆ ನೆರೆಹೊರೆ”
(ಇಂಗ್ಲಿಷ್ ಮೂಲ: ರಾಬರ್ಟ್ ಫ್ರಾಸ್ಟ್)
- ಸಾರೋಟು
ನಿಲ್ಲಲಾಗಲಿಲ್ಲವೆಂದು ನಾನು ಅವನಿಗಾಗಿ,
ತಾನೇ ನನಗಾಗಿ ನಿಂತ, ಮೃತ್ಯು ಕರುಣೆಯಿಂದ.
ಸಾರೋಟಿನಲ್ಲಿ ಇದ್ದವರು ನಾವಿಬ್ಬರೇ,
ಜೊತೆಗೆ ಅಮರತೆ.
ನಿಧಾನವಾಗಿ ಸಾಗಿತ್ತು ನಮ್ಮ ಪ್ರಯಾಣ:
ಇರಲಿಲ್ಲ ಅವನಿಗಾತುರ.
ನಾನೂ ಬದಿಗಿರಿಸಿದ್ದೆ ನನ್ನ ದುಡಿಮೆ, ಬಿಡುವು,
ಅವನ ಸಜ್ಜನಿಕೆಗೆ ಸೋತು.
ಹಾದುಹೋದೆವು ನಾವು ಊರಶಾಲೆಯನ್ನು,
ನೋಡುತ್ತ ಮಕ್ಕಳ ಆಟೋಟ.
ಹಾದೆವು ತೆನೆ ತೂಗಿದ ಹೊಲಗಳನ್ನು, ಹಾಗೂ
ಮುಳುಗು-ಸೂರ್ಯನನ್ನು.
ಸಂಜೆಯ ಕಾವಳದೊಡನೆ ಇಬ್ಬನಿ ಸುರಿದು
ಗಡಗಡ ನಡುಗಿಸುವ ಚಳಿ!
ನನ್ನ ಗೌನೋ ಜೇಡರಬಲೆಯಂತೆ ತೆಳು:
ಅಷ್ಟೇ ತೆಳು ಹೆಗಲ ಶಾಲು.
ನಾವು ನಿಂತದ್ದೊಂದು ಮನೆಯ ಮುಂದೆ:
ಅದೊ ನೆಲದ ಒಂದು ಉಬ್ಬು.
ಅದರ ತಾರಸಿಯಿತ್ತು ನೆಲಮಟ್ಟದಲ್ಲಿ:
ಅಸ್ಪಷ್ಟ ಅದರ ಸೂರು.
ಇದಾಗಿ ಶತಮಾನಗಳೇ ಕಳೆದಿದ್ದರೂ
ನಡೆದಂತಿದೆ ನಿನ್ನೆಯಷ್ಟೇ.
ನಾ ಮೊದಲಂದುಕೊಂಡಿದ್ದೆ ಕುದುರೆಗಳ ಕಂಡು
ನಮ್ಮ ನಡೆ ಅನಂತದೆಡೆಗೆ.
- ಚಿಗಟ
ಈ ಚಿಗಟವನ್ನು ಗಮನಿಸು, ಹಾಗೆಯೇ, ಚಿನ್ನಾ,
ನೀ ಒಲ್ಲೆ ಎನುವ ನನ್ನಾಸೆ ಎಷ್ಟು ಚಿಕ್ಕದೆಂಬುದನ್ನ:
ಇದು ಹೀರಿತು ಮೊದಲು ನನ್ನ ರಕ್ತ, ಬಳಿಕ ನಿನ್ನದು.
ಈಗ ಇದರ ಉದರದಲ್ಲಿ ಒಂದಾಗಿವೆ ಎರಡೂ.
ನೀ ಬಲ್ಲೆ ಇದಲ್ಲ ಪಾಪ, ಅಲ್ಲ ಅವಮಾನ,
ಅಥವಾ ಅನ್ನಲಾಗದು, ನಿನ್ನ ಕನ್ಯತ್ವದ ಹರಣ.
ಆದರೂ ಇದು ಸುಖಪಟ್ಟಿದೆ ನಿನ್ನ ಒಲಿಸುವ ಮೊದಲೇ.
ಉಬ್ಬಿದೆ ನಮ್ಮಿಬ್ಬರ ಒಂದಾದ ರಕ್ತ ಕುಡಿದು.
ಮಾಡಿಮುಗಿಸಿದೆ, ಅಯ್ಯೋ, ನಾವು ಮಾಡಲಾಗದ್ದನ್ನ!
ನಿಲ್ಲು, ಕೊಲ್ಲಬೇಡ, ಇದರಲ್ಲಿ ಪ್ರಾಣಗಳಿವೆ ಮೂರು.
ಆಗಿದ್ದೇವೆ ನಾವಿಲ್ಲಿ ಶಾಸ್ತ್ರೋಕ್ತ ವಿವಾಹಿತರು.
ಈ ಚಿಗಟ ಬರೀ ಚಿಗಟವಲ್ಲ, ನೀನು ಮತ್ತು ನಾನು.
ಇದೇ ನಮ್ಮ ನಿಷೇಕ ಮಂಚ, ವಿವಾಹ ದೇಗುಲ.
ನಮ್ಮಪ್ಪ ಅಮ್ಮ ಹಾಗೂ ನೀನು ಒಪ್ಪದಿದ್ದರೂ
ಕೂಡಿದ್ದೇವೆ ಈ ಜೀವಂತಕೋಟೆಯಲ್ಲಿ ನಾವು.
ಪದ್ಧತಿಯಂತೆ ನಾ ನಿನ್ನಿಂದ ವಧೆಗೆ ಅರ್ಹ, ಆದರೆ
ಸೇರಿಸಬೇಡ ಅದರ ಜೊತೆಗೆ ನಿನ್ನ ಆತ್ಮಹತ್ಯೆ.
ಧರ್ಮಬಾಹಿರ, ಮೂರು ಪಾಪ, ಮೂರು ಕೊಲೆ.
ಕ್ರೂರವಾಗಿ, ಹಠಾತ್ತನೆ, ನಿನ್ನ ಕೈಬೆರಳಿನ ಉಗುರ
ಕೆಂಪಾಗಿಸಿಕೊಂಡೆಯೇಕೆ ಮುಗ್ಧರಕ್ತದಿಂದ?
ಇಷ್ಟಕ್ಕೂ ಈ ಚಿಗಟ ಮಾಡಿದ ಮಹಾಪರಾಧವೇನು
ಒಂದು ಬಿಂದು ನಿನ್ನ ರಕ್ತ ಹೀರಿದ್ದನ್ನು ಬಿಟ್ಟು?
ಆಯ್ತು, ನೀ ಗೆದ್ದೆ, ನೀನೇ ಅಂದ ಹಾಗೆ,
ಕಳೆದುಕೊಳ್ಳಲಿಲ್ಲ ನಾವು ಇದರಿಂದ ಏನೇನೂ.
ಅಂದ ಮೇಲೆ, ಕೂಡು ನನ್ನ, ಇನ್ನೂ ಯಾಕೆ ದಿಗಿಲು?
ಏನ ಕಳಕೊಳ್ಳುವುದಿದೆ ಕೊಂಚ ಮರ್ಯಾದೆಯ ಹೊರತು?
ಅದಲ್ಲ ಈ ಚಿಗಟದ ಸಾವಿಗಿಂತ ಮಿಗಿಲು.
(ಇಂಗ್ಲಿಷ್ ಮೂಲ: ಜಾನ್ ಡನ್)
- ಹೋಗಬೇಡ ತೆಪ್ಪಗೆ, ಶರಣಾಗಿ ಶುಭರಾತ್ರಿಗೆ
ಹೋಗಬೇಡ ತೆಪ್ಪಗೆ, ಶರಣಾಗಿ ಶುಭರಾತ್ರಿಗೆ
ಉರಿದೇಳಲಿ ಮುದಿತನ, ಮುಗಿಯುತ್ತಿರುವ ಹಗಲಿಗೆ
ಚೀರು, ಕುದಿ, ದಂಗೆಯೇಳು, ಸಾಯುತ್ತಿರುವ ಬೆಳಕಿಗೆ
ಕತ್ತಲೇ ಸರಿ, ಕೇವಲ ಹುಸಿಮಿಂಚು ತಮ್ಮ ನುಡಿಗಳು
ಎಂಬುದ ಕೊನೆಗಾಲದಲ್ಲಿ ಅರಿತರೂನು ಪ್ರಾಜ್ಞರು
ಹೋಗುವುದಿಲ್ಲ ತೆಪ್ಪಗೆ, ಶರಣಾಗಿ ಶುಭರಾತ್ರಿಗೆ
ಹಸಿರುಕೊಲ್ಲಿಯ ಕೊನೆಯ ಅಲೆಯಂತಹ ಸಜ್ಜನರು
ಪೂರೈಸದ ಪ್ರಯತ್ನಗಳ ನೆನೆದು ದುಗುಡಗೊಂಡರೂ
ಚೀರಿ, ದಂಗೆಯೇಳುತ್ತಾರೆ, ಸಾಯುತ್ತಿರುವ ಬೆಳಕಿಗೆ
ಓಡುವ ಸೂರ್ಯನ ಹಿಡಿದು, ಹಾಡಿ ನಲಿದ ಪುಂಡರು
ತೀರಾ ತಡವಾಗಿ ತಮ್ಮ ಜೊಳ್ಳನು ಮನಗಂಡರೂ
ಹೋಗುವುದಿಲ್ಲ ತೆಪ್ಪಗೆ, ಶರಣಾಗಿ ಶುಭರಾತ್ರಿಗೆ
ಮಾಗಿ, ಕುರುಡಾಗಿ, ಸಾವ ಸಮೀಪಿಸಿದ ವೃದ್ಧರೂ
ಧಿಗ್ಗನುರಿಸುತ್ತಾರೆ ಉಲ್ಕೆ ಕುರುಡು ಕಂಗಳಲ್ಲಿಯೂ
ಚೀರಿ, ದಂಗೆಯೇಳುತ್ತಾರೆ, ಸಾಯುತ್ತಿರುವ ಬೆಳಕಿಗೆ
ದುಃಖದ ಗಿರಿನೆತ್ತಿಗೇರಿ ಕೂತ ನನ್ನ ತಂದೆಯೇ
ಬೇಡುತ್ತೇನೆ ಶಪಿಸು, ಹರಸು ಸುರಿಸುತ ಸುಡುಕಂಬನಿ
ಹೋಗಬೇಡ ತೆಪ್ಪಗೆ, ಶರಣಾಗಿ ಶುಭರಾತ್ರಿಗೆ
ಚೀರು, ಕುದಿ, ದಂಗೆಯೇಳು, ಸಾಯುತ್ತಿರುವ ಬೆಳಕಿಗೆ
(ಇಂಗ್ಲಿಷ್ ಮೂಲ – ಡಿಲಾನ್ ಥಾಮಸ್)