ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2020 > ಅಗ್ರರಾಷ್ಟ್ರದ ನೂತನಾಧ್ಯಕ್ಷ ಮತ್ತು ಭಾರತ

ಅಗ್ರರಾಷ್ಟ್ರದ ನೂತನಾಧ್ಯಕ್ಷ ಮತ್ತು ಭಾರತ

ಜಗತ್ತಿನಾದ್ಯಂತ ಹಿಂದೆಂದಿಗಿಂತ ಹೆಚ್ಚು ಕುತೂಹಲವನ್ನು ಮೂಡಿಸಿದ್ದ ಅಮೆರಿಕದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಇದೀಗ (ನವೆಂಬರ್ 7) ಹೊರಬಿದ್ದು ಡೆಮೊಕ್ರ್ಯಾಟಿಕ್ ಪಕ್ಷದ 77 ವರ್ಷ ವಯಸ್ಸಿನ ಜೋ ಬೈಡೆನ್ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‍ರನ್ನು ಹಿಂದಿಕ್ಕಿ ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಪರಿಣಾಮವಾಗಿ ಭಾರತಮೂಲ ಮನೆತನಕ್ಕೆ ಸೇರಿದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಲಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ. ಅಮೆರಿಕದ ಇತಿಹಾಸದಲ್ಲೇ ಮಹಿಳೆಯೊಬ್ಬರು ಉಪಾಧ್ಯಕ್ಷರಾಗುತ್ತಿರುವುದು ಮೊದಲ ಬಾರಿಗೆ ಎಂಬ ವೈಶಿಷ್ಟ್ಯವೂ ಇದೆ. ಅಧಿಕಾರಾವಧಿಯುದ್ದಕ್ಕೂ ವಿವಾದಗಳನ್ನು ಸೃಷ್ಟಿಸುತ್ತಿದ್ದ ಡೊನಾಲ್ಡ್ ಟ್ರಂಪ್‍ರ ತಮಗೆ ಜನಸಾಮಾನ್ಯರ ಬೆಂಬಲವಿದೆಯೆಂಬ ಭಾವನೆ ಸುಳ್ಳಾಗಿ ಅವರು ಪರಾಭವಕ್ಕೆ ಈಡಾಗಿದ್ದಾರೆ. ಅಧಿಕಾರಸ್ಥರಾದವರು ಎರಡನೇ ಬಾರಿಗೆ ಆಯ್ಕೆಯಾಗದಿರುವುದು ಅಮೆರಿಕದಲ್ಲಿ ವಿರಳ. ಟ್ರಂಪ್ ಸೋಲಿಗೆ ಕಾರಣಗಳು ಸ್ಪಷ್ಟವೇ ಆಗಿವೆ. ಉದ್ಯೋಗಾರ್ಥಿಗಳಾಗಿ ಅಮೆರಿಕಕ್ಕೆ ಹೋಗ ಬಯಸುವವರಿಗೆ ವೀಸಾ ನೀಡುವ ನಿಯಮಗಳನ್ನು ಟ್ರಂಪ್ ಬಿಗಿಗೊಳಿಸಿದ್ದುದು, ಪ್ಯಾರಿಸ್ ಒಡಂಬಡಿಕೆ ಮೊದಲಾದ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಧಿಕ್ಕರಿಸಿದ್ದುದು, ಕೊರೋನಾ ನಿಯಂತ್ರಣದಲ್ಲಿ ತೋರಿದ್ದ ಶಿಥಿಲತೆ, ವರ್ಣಭೇದ ನೀತಿಯನ್ನು ಪ್ರಚೋದಿಸುವ ದಿಕ್ಕಿನ ನಡವಳಿಗಳು – ಹೀಗೆ ಹಲವು ಕಾರಣಗಳಿಂದ ಟ್ರಂಪ್ ಜನಪ್ರಿಯತೆಯನ್ನು ಕಳೆದುಕೊಂಡಿದ್ದುದು ಜೋ ಬೈಡೆನ್‍ರಿಗೆ 284 ಎಲೆಕ್ಟೊರಲ್ ಕಾಲೇಜ್ ಮತಗಳನ್ನು ಗಳಿಸಿಕೊಟ್ಟು ಅವರ ಗೆಲವನ್ನು ಸುಗಮಗೊಳಿಸಿತ್ತು.

ಈ ಹಿನ್ನೆಲೆ ಇದ್ದರೂ ಡೊನಾಲ್ಡ್ ಟ್ರಂಪ್ ಅವರಿಗೆ 214ರಷ್ಟು ಮತಗಳು ದೊರೆತಿರುವುದು ಜನಾಂಗೀಯತೆ, ವರ್ಣಭೇದ ಮೊದಲಾದ ವಿಷಯಗಳಲ್ಲಿ ಗಣನೀಯ ಪ್ರಮಾಣದ ಅಮೆರಿಕನರ ಮಾನಸಿಕತೆ ಹೇಗಿದೆಯೆಂಬುದನ್ನು ಬಿಂಬಿಸುತ್ತದೆ.

ಅಧ್ಯಕ್ಷಸ್ಥಾನವನ್ನು ತಮ್ಮದಾಗಿಸಿಕೊಂಡಿರುವ ಜೋ ಬೈಡೆನ್ ಹಿಂದೆ ಬರಾಕ್ ಒಬಾಮಾ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದವರು; ಸೌಮ್ಯಮಾರ್ಗಿಗಳೆನಿಸಿಕೊಂಡವರು, ವಾಕ್ಸಂಯಮವುಳ್ಳವರು.

ಬೈಡೆನ್ ಗೆಲವಿನ ಪರಿಣಾಮ ಭಾರತದ ಮೇಲೆ ಏನಾದೀತೆಂಬ ಬಗೆಗೆ ಭಾರತೀಯರು ಕುತೂಹಲಗೊಂಡಿರುವುದು ಸ್ವಾಭಾವಿಕ. ಭಾರತದಿಂದ ಅಮೆರಿಕಕ್ಕೆ ಆಗುತ್ತಿದ್ದ ಆಮದುಗಳನ್ನು ಪ್ರತಿಬಂಧಿಸಿದ್ದ ಟ್ರಂಪ್ ಅವರೇ ಭಾರತ ತನ್ನ ಆಮದುನೀತಿಯನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿದ್ದರು. ಭಾರತ ರಷ್ಯಾದಿಂದ 2018ರಲ್ಲಿ SA-400 ಕ್ಷಿಪಣಿಗಳನ್ನು ಖರೀದಿಸಿದಾಗ ಟ್ರಂಪ್ ಸರ್ಕಾರ ಭಾರತದ ವಿರುದ್ಧ ಜಾರಿ ಮಾಡಿದ್ದ ಪ್ರತಿಬಂಧಗಳು ಈಗಲೂ ತೆರವಾಗಿಲ್ಲ. ಕಡಮೆ ಬೆಲೆಯ ಕಾರಣದಿಂದ ಇರಾನಿನಿಂದ ಭಾರತ ಇಂಧನ ತೈಲವನ್ನು ಖರೀದಿಸುತ್ತಿದ್ದುದಕ್ಕೂ ಟ್ರಂಪ್ ಸರ್ಕಾರದ ತೀಕ್ಷ್ಣ ವಿರೋಧವಿದ್ದಿತು. ಭಾರತ ರಫ್ತು ಮಾಡುತ್ತಿದ್ದ ಉಕ್ಕು-ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಅಮೆರಿಕ ಶೇ.70ರಷ್ಟು ಅಧಿಕ ಆಮದು ತೆರಿಗೆ ವಿಧಿಸಿದುದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಅನಿವಾರ್ಯವಾಗಿ ಅಮೆರಿಕ ಉತ್ಪನ್ನಗಳ ಆಮದಿಗೆ ಕಳೆದ ವರ್ಷವಷ್ಟೆ (2019) ಹೆಚ್ಚಿನ ತೆರಿಗೆ ವಿಧಿಸಬೇಕಾಗಿ ಬಂದದ್ದೂ ವಾಣಿಜ್ಯಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವಣ ವಿರಸಕ್ಕೆ ಕಾರಣವಾಗಿತ್ತು. ಭಾರತದ ವಿಷಯಗಳ ಬಗೆಗೆ ಟ್ರಂಪ್‍ರಿಗಿಂತ ಹೆಚ್ಚಿನ ಪರಿಜ್ಞಾನವಿರುವ ಬೈಡೆನ್ ಅಧ್ಯಕ್ಷತೆಯಲ್ಲಿ ವಾಣಿಜ್ಯ ಸಂಬಂಧಗಳು ಹಿಂದಿನ ಸೌಹಾರ್ದ ಸ್ಥಿತಿಗೆ ಮರಳುತ್ತವೆಯೆ ಎಂದು ಕಾದುನೋಡಬೇಕಾಗಿದೆ.

ಭಾರತ ಈಗ ಅಮೆರಿಕಾವಲಂಬಿ ದೇಶವಾಗಿ ಉಳಿಯದೆ ಗಣನೀಯ ಎತ್ತರಕ್ಕೆ ಬೆಳೆದಿದೆ. ಹೀಗಾಗಿ ಅಮೆರಿಕ ತನ್ನ ಹಿರಿಯಣ್ಣನ ಸ್ಥಾನವನ್ನುಳಿಸಿಕೊಳ್ಳುವುದರಲ್ಲಿ ಭಾರತದ ನೆರವನ್ನು ಕಡೆಗಣಿಸುವಂತಿಲ್ಲವೆಂಬ ವಾಸ್ತವಸ್ಥಿತಿಯೂ ಇದೆ.

ರಕ್ಷಣಾಂಗದಲ್ಲಿ ಎರಡು ದೇಶಗಳ ನಡುವಣ ವ್ಯೂಹಾತ್ಮಕ ಸಂಬಂಧಗಳು (ಆಗೀಗ ಒಮ್ಮೊಮ್ಮೆ ಏರುಪೇರಾಗಿದ್ದರೂ) ಎರಡು ದಶಕಗಳಿಂದ ಘನಿಷ್ಠ ರೀತಿಯವಾಗಿದ್ದು. ಈ ಸನ್ನಿವೇಶದಲ್ಲಿ ಹಿನ್ನಡೆಯಾದೀತೆಂದು ಭಾವಿಸಲು ಕಾರಣವಿಲ್ಲ. ಬೈಡೆನ್‍ರಂತಹ ಮಧ್ಯಮಾರ್ಗಿಗಳ ನೇತೃತ್ವವಂತೂ ಪರಿಸ್ಥಿತಿಯನ್ನು ವ್ಯತಿರೇಕಗೊಳಿಸುವ ಸಂಭವವಿಲ್ಲ.

ಇನ್ನು ಚೀನಾ ವಿಷಯಕ್ಕೆ ಬಂದರೆ ಬೈಡೆನ್ ಟ್ರಂಪ್‍ರಷ್ಟು ಅಬ್ಬರ ತೋರದಿದ್ದರೂ ಚೀನಾದೊಡನೆ ಸ್ಪರ್ಧೆಯನ್ನು ದುರ್ಬಲಗೊಳಿಸುವ ಸ್ಥಿತಿಯಲ್ಲಿಲ್ಲದುದರಿಂದ ಚೀನಾ ನಿರ್ವಹಣೆಯಲ್ಲಿ ಭಾರತದ ನೆರವನ್ನು  ಬಳಸಿಕೊಳ್ಳಬೇಕಾಗುತ್ತದೆ. ಹೀಗೆ ಚೀನಾ ವಿಷಯದಲ್ಲಿ ಅಮೆರಿಕ-ಭಾರತಗಳ ಪಾರಸ್ಪರಿಕತೆ ಸತರ್ಕವೂ ಅನಿವಾರ್ಯವೂ ಆಗಿದೆಯೆಂಬುದು ಮೇಲ್ನೋಟಕ್ಕೆ ತೋರುವ ಚಿತ್ರ.

ಆದರೆ ಅಂತರರಾಷ್ಟ್ರೀಯ ಸಂಬಂಧಗಳು ಸರಳರೇಖೆಯಂತೆ ನಡೆಯುವವಲ್ಲ. ಅವು ಸದಾ ಬದಲಾಗುತ್ತಿರುತ್ತವೆ. ಒಂದೊಂದು ಕಾಲಖಂಡದಲ್ಲಿ ಹೊಸ ಪರಿಗಣನೆಗಳಿರುವಂತೆ ಹಿಂದಿನ ವಾರಸಿಕೆಯ ಭಾರಗಳೂ ಇರುತ್ತವೆ. ಬೈಡೆನ್‍ರಿಗೆ ಹಿಂದೆ ಡೆಮೊಕ್ರ್ಯಾಟಿಕ್ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಚೀನಾದ ಬಗೆಗೆ ಮೆದು ಧೋರಣೆ ತಳೆದಿದ್ದುದರಿಂದಾಗಿ – ವಿಶೇಷವಾಗಿ ಸೌತ್ ಚೈನಾ ಸೀ ಮೊದಲಾದೆಡೆ – ಚೀನಾ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿತ್ತು. ಆ ಅವಧಿಯಲ್ಲಿ ಒಬಾಮಾ ಆಧಿಪತ್ಯದಲ್ಲಿ ಉಪಾಧ್ಯಕ್ಷರಾಗಿದ್ದವರು ಬೈಡೆನ್‍ರವರೇ. ಇರಾನಿನ ಬಗೆಗೂ ಡೆಮೊಕ್ರ್ಯಾಟಿಕ್ ಪಕ್ಷದ್ದು ಮೃದುಧೋರಣೆಯೇ ಆಗಿತ್ತು. ಅದೇ ನಿಲವು ಮುಂದುವರಿದಲ್ಲಿ ಅದು ಇಂಧನತೈಲ ವಹಿವಾಟಿನ ಸಂದರ್ಭದಲ್ಲಿ ಭಾರತಕ್ಕೆ ಅನುಕೂಲಕರವಾಗಬಹುದು.

ಜಮ್ಮು-ಕಾಶ್ಮೀರ ಸಂಬಂಧದಲ್ಲಿ ಮೋದಿ ಸರ್ಕಾರದ 370ನೇ ವಿಧಿಯ ರದ್ಧತಿಯನ್ನು ಡೆಮೊಕ್ರ್ಯಾಟಿಕ್ ಪಕ್ಷ ಆಗ ವಿರೋಧಿಸಿತ್ತು. ಅಮೆರಿಕದ ಹೊಸ ಹಯಾಮಿನಲ್ಲಿ ಇದೊಂದು ಇರುಸುಮುರುಸು ವಿಷಯವಾಗುವ ಸಂಭವ ಇಲ್ಲದಿಲ್ಲ. ವಲಸಿಗ ಕಾರ್ಮಿಕರ ಹಾಗೂ ಅಮೆರಿಕದಲ್ಲಿ ವ್ಯಾಸಂಗನಿರತರಾಗಿದ್ದ ವಿದೇಶೀಮೂಲ ವಿದ್ಯಾರ್ಥಿಗಳ ಬಗೆಗೆ ಟ್ರಂಪ್ ಸರ್ಕಾರ ತೋರಿದ್ದ ಕಠಿಣತೆಯನ್ನು ಕಡಮೆ ಮಾಡುವೆವೆಂದು ಬೈಡೆನ್ ಘೋಷಿಸಿದ್ದಾರೆ. ಇದು ಎಷ್ಟುಮಟ್ಟಿಗೆ ಕಾರ್ಯಗತವಾಗುತ್ತದೆಂದು ಕಾದುನೋಡಬೇಕಾಗಿದೆ.

ಎಚ್-1-ಬಿ ವೀಸಾ ನೀತಿಯ ಉದಾರೀಕರಣದ ಬಗೆಗೆ ಡೆಮೊಕ್ರ್ಯಾಟಿಕ್ ಪಕ್ಷ ಹೆಚ್ಚು ಉತ್ಸಾಹ ತಳೆಯುವ ಸಂಭವ ಕಡಮೆಯೆಂದು ಬಹುತೇಕ ಪರಾಮರ್ಶಕರ ವಿಶ್ಲೇಷಣೆ ಇದೆ. ಹೀಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಲಸಿಗರ ಸ್ಥಿತಿ ನಿಕಟಭವಿಷ್ಯದಲ್ಲಿ ಉನ್ಮುಖಗೊಳ್ಳಲಾರದೆನಿಸುತ್ತದೆ. ಹಿಂದಿನಿಂದ ಡೆಮೊಕ್ರ್ಯಾಟಿಕ್ ಪಕ್ಷಕ್ಕೆ ಹಲವು ಭಾರತ ಧೋರಣೆಗಳ ಬಗೆಗೆ (ಉದಾ: ಕಲ್ಲಿದ್ದಲ ಬಳಕೆ) ಪೂರ್ಣ ಸಮಾಧಾನವಿರಲಿಲ್ಲ. ಇಂತಹ ಜಟಿಲ ಸಮಸ್ಯೆಗಳಿಗೆ ಕ್ಷಿಪ್ರ ಪರಿಹಾರ ಲಭಿಸಲಾರದು.

ಬೈಡೆನ್ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಪರಿಶೀಲಿಸುವಾಗ ತಾನು ದೇಶವನ್ನು ಒಗ್ಗೂಡಿಸಲು ಯತ್ನಿಸುವೆನೇ ವಿನಾ ವಿಭಜಿಸುವುದಿಲ್ಲ ಎಂಬ ಅವರ ಹೇಳಿಕೆಯ ಹಿಂದಿನ ಕಾಳಜಿಯನ್ನು ಶಂಕಿಸಲು ಕಾರಣವಿಲ್ಲ.

ಆದರೆ ಬೈಡೆನ್ ಪಯಣ ಸುಸೂತ್ರವಾಗಿ ನಡೆಯುತ್ತದೆನ್ನುವಂತಿಲ್ಲ. ಡೆಮೊಕ್ರ್ಯಾಟಿಕ್ ಪಕ್ಷದ ವಾರಸಿಕೆಗೂ ಸಾಂಪ್ರತ ಆವಶ್ಯಕತೆಗೂ ನಡುವೆ ಎಷ್ಟುಮಟ್ಟಿಗೆ ಮತ್ತು ಹೇಗೆ ಹೊಂದಾಣಿಕೆ ಕುದುರುತ್ತದೆಂಬುದೊಂದು ಯಕ್ಷಪ್ರಶ್ನೆ.

ಅಲ್ಲದೆ ಅಮೆರಿಕ ಸಂಸತ್ತಿನ ಮೇಲ್ಮನೆಯಲ್ಲಿ (ಸೆನೇಟ್) ಬೈಡೆನ್ ಪಕ್ಷಕ್ಕೆ ಬಹುಮತವಿಲ್ಲವಾದ್ದರಿಂದ ಅವರ ನಿರ್ಣಯಗಳು ಅಂಗೀಕಾರ ಪಡೆಯುವುದು ದುಷ್ಕರವಾಗಬಹುದು. ಎರಡನೆಯದಾಗಿ ಗಣಿತೀಯವಾಗಿ ಟ್ರಂಪ್ ಎಪ್ಪತ್ತು ಮತಗಳಷ್ಟು ಹಿನ್ನಡೆಯನ್ನನುಭವಿಸಿದ್ದರೂ ಟ್ರಂಪ್ ಪೆÇೀಷಿಸಿದ ವರ್ಣಭೇದ ಪಕ್ಷಪಾತಾದಿಗಳೂ ವಲಸಿಗರಿಂದ ದೇಸೀ ಅಮೆರಿಕನರ ಉದ್ಯೋಗಾವಕಾಶಗಳಿಗೆ ಕುತ್ತು ಒದಗಿದೆಯೆಂಬ ಜಾಡಿನ ಮಂಡನೆಗಳೂ ದೊಡ್ಡ ಪ್ರಮಾಣದ ಅಮೆರಿಕನರಲ್ಲಿ ರಕ್ತಗತವಾಗಿವೆಯೆಂಬ ವಾಸ್ತವವನ್ನು ಉದಾಸೀನ ಮಾಡಲಾಗದು. ಟ್ರಂಪ್ ನಿರ್ಗಮಿಸಿದ್ದರೂ ‘ಟ್ರಂಪಿಸಂ’ ಜೀವಂತವಿದೆಯೆಂದು ನೆನಪಿಡುವುದು ಆರೋಗ್ಯಕರ. ಈ ಎಲ್ಲ ಸಂಕೀರ್ಣತೆಗಳ ನಡುವೆಯೂ ಬೈಡೆನ್ ಸೂತ್ರಧಾರಿಕೆಯಲ್ಲಿ ಭಾರತದ ಆಸಕ್ತಿ ಕ್ಷೇತ್ರಗಳಿಗೆ ಧಕ್ಕೆಯಾಗದಿರಲೆಂದು ಆಶಿಸೋಣ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ