–ಪ್ರೊ. ಜಿ.ಎಚ್. ಹನ್ನೆರಡುಮಠ
ನೆನಪಿದೆಯಾ ಆ ನಮ್ಮ ಹಳ್ಳಿಯ ಹಳ್ಳ-ಕೊಳ್ಳ-ಹಳವು-ಕೊನ್ನಾರುಗಳ ಹಸಿರು ಕಾಡು?
ನಮ್ಮ ಅಜ್ಜಿ-ಅಮ್ಮ-ಮುತ್ತಜ್ಜಿ ಹರೆಯದವರಾಗಿದ್ದಾಗ ಎಲ್ಲೆಂದರಲ್ಲಿ ಹುಲುಸಾಗಿ ಹುಚ್ಚೆದ್ದು ಬೆಳೆದ ಹೊಲಗಳೇ ತಪೋವನಗಳಾಗಿದ್ದವು; ಹೊಲದಲ್ಲಿ ಹುಲುಸಾಗಿ ಬೆಳೆದ ಕರ್ಕಿ-ಕಣಗಿಲೆಯೇ ಲಿಂಗಾರ್ಚನೆಯ ಪತ್ರಪುಷ್ಪವಾಗಿದ್ದವು.
ಚೆಲ್ಲುಲ್ಲಿಗೋ ಚೆಲ್ಲಾಟ
ಆ ಗಿಡ-ಮರ ಗುಲ್ಮಗಳಲ್ಲಿ ಗಿಡಮಂಗನಾಟ, ಆ ಅಮೃತ ನೆರಳಲ್ಲಿ ಖಾಯಂ ನಡೆಯುತ್ತಿದ್ದ ಗುಂಡ, ಗಜಗ, ಚಿಣಿಪಣಿ, ವಟ್ಟಪ್ಪಾ, ಕುಂಟಾಟ, ಆಣಿಕಲ್ಲು ಆಟಗಳು; ಬೆಚ್ಚಗೆ ಮಲಗಿದ ಬಣ್ಣಬಣ್ಣದ ಹಾವುಗಳು, ಮುಂಗಲಿಗಳು, ಚೇಳುಗಳು, ಡೊಣ್ಣಿಕಾತಗಳು, ಚೆಲ್ಲುಲ್ಲಿಗೋ ಚೆಲ್ಲಾಟವಾಡುತ್ತಿದ್ದ ಗುಬ್ಬಚ್ಚಿಗಳು, ಹಿಂಡುಹಿಂಡು ಮೊಲಗಳು-ಹರಿಣಗಳು, ಗಿಡದಿಂದ ಗಿಡಕ್ಕೆ ಜಿಗಿಯುವ ಕೆಂಪು-ಕರಿ ಜಾತಿಯ ಮಂಗಗಳು…. ಇವುಗಳ ಮಧ್ಯದಲ್ಲಿ ಹಳೇಗುಡಿಯಲ್ಲಿ ಕುಳಿತ ಬೋಳು ಬಸವಣ್ಣ, ಹಾಳುಹಳೆ ಲಿಂಗಯ್ಯ, ಎಣ್ಣೆ ಜಿಡ್ಡಿನಲ್ಲಿ ಗಂಡೋ-ಹೆಣ್ಣೋ ಎಂದೂ ಗೊತ್ತಾಗದ ಹನುಮಂತ…. ಎಲ್ಲ ಸಹಜ ಸುಂದರ.
ಆ ಕಾಲದಲ್ಲಿ ಪ್ರಕೃತಿಯೇ ನಮ್ಮ ತಾಯಿ-ತಂದೆಯಾಗಿತ್ತು. ಒಂದರ್ಥದಲ್ಲಿ ಅರಣ್ಯವೇ ನಮ್ಮ ತಣ್ಣನೆಯ ತವರುಮನೆಯಾಗಿತ್ತು.
ಹುಚಪ್ಯಾಲಿ ಹಸಿರುಲಾನ್
ಇತ್ತಿತ್ತಲಾಗಿ ಕಳ್ಳು-ಕಕ್ಕುಲಾತಿಯ ಸಂಬಂಧವೇ ಇಲ್ಲದ ಪಾಶ್ಚಿಮಾತ್ಯರ ಪ್ರಭಾವದಿಂದಾಗಿ `ಗಾರ್ಡನಿಂಗ್’ ಎಂಬ ಬರೆಬತ್ತಲೆಯ ಶಬ್ದ ಬಂದು, ಕೈಯಲ್ಲಿ ಹೆಗ್ಗತ್ತಿ ಹಿಡಿದ ಕಟುಕರ ಪ್ರವೇಶವಾಯಿತು. ಇಂದು ಲಕ್ಷಾಂತರ ಹಣ ಸುರಿದು ಬೆಳೆಸಿದ ಈ ಎಲ್ಲ ಗಾರ್ಡನ್ಗಳಿಗೆ ಹೋಗಿ ನೋಡಿದರೆ ಕಂಡಕಂಡಲ್ಲಿ ಹೆಗ್ಗತ್ತರಿಗಳ ಹಾವಳಿ! ಹಾರ್ಟಿಕಲ್ಚರ್ ಬಂದು ಪಾರ್ಟಿಕಲ್ಚರ್ ಬಂತೆ? ಅಗ್ರಿಕಲ್ಚರ್ ಬಂದು ಅಗ್ಲಿಕಲ್ಚರ್ ಇಣುಕಿತೆ?
ಇಂದು ನಾವು ಯಾವ ಗಾರ್ಡನ್ಗೆ ಹೋದರೂ ಕತ್ತರಿಯ ಕಟುಕರು ಕತ್ತರಿಸಿದ ಚೌಕು ಪೆÇದೆಗಳು, ದುಂಡುಮರಗಳು, ಕೊಡೆ ಆಕಾರದ ಮರಗಳು, ಸಿಲಿಂಡರ್-ಡ್ರಮ್-ಹೂಜಿ-ಫುಟ್ಬಾಲ್ ಆಕಾರದ ಕಂಟಿಗಳು! ಇಂಥದ್ದರಲ್ಲಿ ಅದೆಂಥದ್ದೋ ವಿದೇಶೀ ಗ್ರಾಸ್ ಬಂದು ಅದನ್ನು ಮಶೀನ್ ಮೂಲಕ ಕತ್ತರಿಸಿ ನೈಸಾಗಿ ಗ್ರೀನ್ಲಾನ್ ಮಾಡುವ ಗಾರ್ಡನ್ ಶೈಲಿ ಬಂತು. ಈ ಹುಚಪ್ಯಾಲಿ ಹಸಿರು ಲಾನ್ಗಳಿಗಾಗಿಯೇ ಲಕ್ಷಾಂತರ ಖರ್ಚು. ಹಾಗೆ ಮಶೀನಿನಿಂದ ಗ್ರಾಸ್ ಕಟಿಂಗ್ ಮಾಡುವಾಗ ಹುಲ್ಲಿನಲ್ಲಿ ತಮ್ಮ ಮಕ್ಕಳೊಂದಿಗೆ ಬೆಚ್ಚಗೆ ಕುಳಿತ ಎಷ್ಟೋ ಮುಗ್ಧ ಕಪ್ಪೆಗಳು ಯಂತ್ರದ ಬಾಯಲ್ಲಿ ಸಿಕ್ಕು, ಕ್ಷಣಾರ್ಧದಲ್ಲಿ ಚೂರುಚೂರಾಗಿ ತುಂಡುತುಂಡಾಗಿ ಬಿದ್ದ ಕಪ್ಪೆಯ ಹೆಣಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಈ ಗಾರ್ಡನಿಂಗ್ ಶೈಲಿಯಿಂದಾಗಿ ಪ್ರಕೃತಿಗೂ ನಮಗೂ ಇರುವ ತಾಯಿ-ಮಕ್ಕಳ ಸಂಬಂಧ ತಪ್ಪಿಹೋಗಿ, ಈಗ ನಾವು ಈ ಗ್ರೀನ್ಗಾರ್ಡನಿನ ಒಡೆಯರು, ಧಣಿಗಳು ಎಂಬ ಸೈಕಾಲಜಿ ಬಂದುಬಿಟ್ಟಿದೆ. ಈಗ ಪ್ರಕೃತಿ ನಮ್ಮ ಚರಣದಾಸಿ, ಕೂಲಿ ಆಳು, ನೀರು-ಗೊಬ್ಬರ ಹಾಕಿ ನಾವು ಇಟ್ಟಂತೆ ಇರಲೇಬೇಕಾದ ನಮ್ಮ ವಿಕಟ ವಿಲಾಸದ ಚಲುವೆ!
‘ಪುಷ್ಪರಗಳೆ’
ಕನ್ನಡದ ಮಹಾಕವಿ ಹರಿಹರನು ಹೂವುಗಳನ್ನು ಹರಿಯುತ್ತಿರಲಿಲ್ಲ. ಅವುಗಳ ಮುಂದೆ ಕೈಮುಗಿದು ನಿಲ್ಲುತ್ತಿದ್ದ. ಅವುಗಳೊಂದಿಗೆ ಕಕ್ಕುಲಾತಿಯಿಂದ ಮಾತನಾಡುತ್ತಿದ್ದ. “ಜಾಜಿ ಸಕಲ ಪುಷ್ಪ ಜಾತಿಗೆ ಜಾತಿ…. ಭೂತೇಶ್ವರನ ಜಡೆಯ ಮುಡಿಗೇರಿದೊಡೆ ಜಾತಿ…. ಭೂತೇಶ್ವರನ ಪೂಜೆಗೆ ನಿನ್ನ ಹೂವು ತಾರವ್ವಾ….” ಎಂದು ಪುಷ್ಪ ಸಂಕುಲಕ್ಕೆ ಪ್ರಾರ್ಥಿಸುತ್ತಿದ್ದ. ಹೊನ್ನೆ, ಸುರಹೊನ್ನೆ, ಜಾಜಿ, ಬಕುಲ, ಮಲ್ಲಿಗೆಗಳು ಅವನಿಗೆ ಶಿವನ ಪೂಜೆಗಾಗಿ ಹೂವು ಸುರಿಯುತ್ತಿದ್ದವು. ಆ ಹೂವು ಮಾಲೆ ಮಾಡುವಾಗ ಅವುಗಳಿಗೆ ಸೂಜಿಯಿಂದ ಚುಚ್ಚಿ ಮಾಲೆ ಮಾಡಿದರೆ ಅವುಗಳಿಗೆ ನೋವಾಗುತ್ತದೆಯೆಂದು ಮನಸಿನ ದಾರದಿಂದಲೇ ಮಾಲೆ ಹೆಣೆಯುತ್ತಿದ್ದ. ಹೂವಿನೊಂದಿಗೆ ಹೂವಾಗಿ ಮಾತಾಡುವ ಹರಿಹರನ ‘ಪುಷ್ಪರಗಳೆ’ ಪುಷ್ಪಸಂಸ್ಕೃತಿಯಲ್ಲಿ ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಅಸಾಧಾರಣ ಅಮರ ಕೊಡುಗೆ.
ಬಸವಣ್ಣನವರ ಸಮಕಾಲೀನನಾಗಿ ದಸರಯ್ಯನೆಂಬ ಶರಣನಿದ್ದ. ಆತ ಅಹಿಂಸಾ ಸಿದ್ಧಾಂತದಲ್ಲಿ ಗಾಂಧಿಗಿಂತಲೂ ಸ್ವಲ್ಪ ಮಿಗಿಲೆಂದರೂ ನಡೆದೀತು. ಏಕೆಂದರೆ ಲಿಂಗಪೂಜೆಯೂ ಕೂಡ ಪರಿಸರಕ್ಕೆ ಒಂದು ಹಿಂಸೆ ಎಂದು ಅರಿತ ಆತ ಪರಿಸರಕ್ಕೆ ನೋವು ನೀಡಿ ಬಿಲ್ವಪತ್ರೆ ಪರಪರ ಹರಿಯುತ್ತಿರಲಿಲ್ಲ. ಒಂದು ಮಡಿ ಬಟ್ಟೆಯನ್ನು ಪತ್ರೆ ಗಿಡದ ಬುಡಕ್ಕೆ ಹಾಸಿ ಶಿವನ ಧ್ಯಾನ ಮಾಡುತ್ತ ಕೂಡುತ್ತಿದ್ದ. ಗಾಳಿ ಬೀಸಿದಾಗ ಸಹಜವಾಗಿ ಉದುರಿ ಬಿದ್ದ ಬಿಲ್ವಪತ್ರೆಯನ್ನೇ ಕೂಸಿನಂತೆ ಎತ್ತಿ ತಂದು ಲಿಂಗಯ್ಯನಿಗೆ ಏರಿಸಿದಾಗ ಆ ಲಿಂಗಯ್ಯ ಕುಲುಕುಲು ನಗುತ್ತಿದ್ದ.
ಒಂದು ಮಠದಲ್ಲಿ ಒಬ್ಬ ಮಹಾಭಕ್ತನಿದ್ದ. ಆ ಮಠದ ತೋಟದ ಪತ್ರೆಗಿಡ ತುಂಬ ಎತ್ತರವಿತ್ತು. ಆ ಜಾಣ ಭಕ್ತ ಪತ್ರೆಗಿಡಕ್ಕೆ ಕಲ್ಲು ಬೀಸಿ ಒಗೆಯುತ್ತಿದ್ದ. ಕಲ್ಲಿನ ಏಟು ತಿಂದು ಉದುರಿಬಿದ್ದ ಪತ್ರೆದಲಗಳನ್ನು ಕಲ್ಲೇಶ್ವರ ಲಿಂಗಕ್ಕೆ ಏರಿಸುತ್ತಿದ್ದ ಆ ಕಲ್ಲುಭಕ್ತ.
ಇನ್ನೂ ಒಂದು ನೆನಪು ಬಂತು…. ಎಪ್ಪತ್ತು ವರ್ಷಗಳ ಹಿಂದೆ ಒಂದು ಮಠದ ಸ್ವಾಮಿಗಳಿಗೆ ಒಬ್ಬ ಮಹಾಭಕ್ತ ಒಂದು ಕೋಟಿ ಬಿಲ್ವಪತ್ರೆಗಳಿಂದ ಪೂಜೆ ಮಾಡುವ ಮಹಾ ಸಂಕಲ್ಪಯಜ್ಞ ಮಾಡಿದ. ಶಿವರಾತ್ರಿಯ ದಿನ ಸುತ್ತ ಎಂಟೂ ದಿಕ್ಕುಗಳಿಗೆ ಪತ್ರೆ ಸಂಗ್ರಹಕ್ಕಾಗಿ 20-30 ಟ್ರಕ್ಕು-ಟ್ರ್ಯಾಕ್ಟರುಗಳನ್ನು ಕಳಿಸಿ ಗುಡ್ಡದಷ್ಟು ಪತ್ರೆ ಹರಿಸಿ ತರಿಸಿದ. ಅಸಂಖ್ಯಾತ ಭಕ್ತರು ಭಕ್ತಿಯಿಂದ ‘ಓಂ ನಮಃ ಶಿವಾಯ’ ಎಂದು ಏಕಕಾಲಕ್ಕೆ ಕೈಲಾಸಕ್ಕೆ ಕೇಳುವಂತೆ ಕೂಗುತ್ತ …. ಸಹಸ್ರ ಸಹಸ್ರ ಪತ್ರೆದಲಗಳನ್ನು ಸ್ವಾಮಿಗಳ ತಲೆಯ ಮೇಲೆ ತೂರುತ್ತಿದ್ದರು. ಸ್ವಾಮಿಗಳಿಗೆ ಖುಶಿಯೋ ಖುಶಿ! ಮಹಾತಪಸ್ವಿಯಂತೆ ಧ್ಯಾನಮಗ್ನರಾಗಿ ಕುಳಿತರು. ಅವರ ಹೆಗಲೇರಿ ತಲೆಯೇರಿ ಪತ್ರೆಗಳು ಬಿದ್ದವು. ಸ್ವಾಮಿಗಳು ಮತ್ತಿಷ್ಟು ಧ್ಯಾನಮಗ್ನರಾದರು. ಆಗ ಏನಾಯಿತು ಗೊತ್ತೆ? ಆ ಪತ್ರೆದಲಗಳೊಂದಿಗೆ ಬಂದಿದ್ದ ಕೆಂಪು ಕೆಂಜಿಗ್ಯಾ ಹುಳುಗಳು ಸ್ವಾಮಿಗಳ ಬರಿಮೈಯನ್ನು ಕಡಿಯತೊಡಗಿದವು. ಕೆಂಜಿಗ್ಯಾಗಳ ಕಚ್ಚುವಿಕೆಯನ್ನು ತಡೆದುಕೊಳ್ಳುವುದು ಸ್ವಾಮಿಗಳಿಗೆ ಅಸಾಧ್ಯವಾಯಿತು. ಅವರ ಕಣ್ಣಲ್ಲಿ ಪಳಪಳ ಕಣ್ಣೀರು ಸುರಿಯತೊಡಗಿತು. ಕಡೆಗೆ ಉರಿಯೂತ ತಾಳಲಾರದೆ ಸ್ವಾಮಿಗಳು ಪೂಜೆಗೆ ಭಂಗ ಬಂದರೂ ಬರಲೆಂದು ಪೂಜೆ ಹಿಡಿದ ಶ್ರೀಮಂತನನ್ನು ಶಪಿಸುತ್ತ ಅಲ್ಲಿಂದ ಪರಾರಿಯಾಗಿಬಿಟ್ಟರು. [ನನಗೆ ಈ ಸ್ವಾರಸ್ಯಕರ ಘಟನೆಯನ್ನು 60 ವರ್ಷಗಳ ಹಿಂದೆ ಕಾಶಿಪಂಡಿತರಾದ ಲಿಂಗೈಕ್ಯ ನಾಗಭೂಷಣ ಶಾಸ್ತ್ರಿಗಳು ಹೇಳಿದ್ದರು.]
ಪುಷ್ಪ ಸಂಸ್ಕೃತಿ
ಆದ್ದರಿಂದಲೇ ದೇವರ ದಾಸಿಮಯ್ಯ ….. “ಇಳೆ ನಿಮ್ಮ ದಾನ…..ಬೆಳೆ ನಿಮ್ಮ ದಾನ….ಸುಳಿದು ಸೂಸುವ ಗಾಳಿ ನಿಮ್ಮ ದಾನ…. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ” – ಎಂದು ಹಾಡಿದ್ದಾನೆ. ಇಂದು ಮದುವೆ ಸಮಾರಂಭಗಳಲ್ಲಿ ಹಾಳುಮಾಡುವ ಹೂಗಳ ರಾಶಿಯಿಂದ, ರಾಜಕಾರಣಿಗಳಿಗೆ ಹಾಗೂ ಸಿನೆಮಾ ತಾರೆಯರ ಸಮ್ಮಾನಗಳಿಗೆ ನಾವು ಹಾಳುಮಾಡುತ್ತಿರುವ ಹೊರೆಗಟ್ಟಲೆ ಹೂವುಗಳಿಂದ ನಮ್ಮ ಪ್ರಾಚೀನ ಕಾಲದಿಂದ ಬಂದ ‘ಪುಷ್ಪಸಂಸ್ಕೃತಿ’ ಮಣ್ಣುಪಾಲಾಗಿ, `ಪುಷ್ಪಗಳ ಮಾರ್ಕೆಟಿಂಗ್’ ಆ ಸ್ಥಾನ ಗಿಟ್ಟಿಸಿದೆ. ಒಂದು ಮಲ್ಲಿಗೆಹೂವು ನೀಡುವ ಅಪಾರ ಪ್ರೀತಿಯನ್ನು ಕೋಟಿ ಪ್ಲಾಸ್ಟಿಕ್ಹೂಗಳು ಕೊಡಲಾರವು.
ಇಂದು ನಾವು ಪ್ರಕೃತಿಯ ಧಣಿಗಳು; ಪ್ರಕೃತಿ ನಮ್ಮ ಆಳು, ಗುಲಾಮಳು.
ಯಾರ ಭಯವೂ ಇಲ್ಲದೆ ಬೆಳೆದು ಹೂ, ಹಣ್ಣು, ಹಸಿರು, ಹಕ್ಕಿಯ ಹಾಡು, ಸೊಂಪಾದ ತಂಗಾಳಿ ಕೊಡುತ್ತಿದ್ದ ನಮ್ಮ ನಾಡಿನ ಆ ತಂಪು ತಪೆÇೀವನಗಳು ಏನಾದವು? ಮಹಾಕವಿ ರಾಘವಾಂಕ ಪ್ರೀತಿಸಿದ ತಿಳಿಗೊಳದ ತಣ್ಣೆಳಲ ಮಳಲದಂಡೆಯ ಮಲ್ಲಿಗೆ-ಮಾಮರ ಎತ್ತ ಹೋದವು? ಕವಿಚೂತವನ ಚೈತ್ರಕೋಗಿಲೆಯಾದ ಮಹಾಕವಿ ಲಕ್ಷೀಶನ ಬಣ್ಣನೆ ಏನಾಯಿತು? ಚಿಲಿಮಿಲಿ ಎಂದೋದುವ ಗಿಳಿಗಳ, ಸ್ವರವೆತ್ತಿ ಪಾಡುವ ಕೋಗಿಲೆಗಳ ಗಿರಿಗಹ್ವರದೊಳಾಡುವ ನವಿಲುಗಳ ಮಧ್ಯದಲ್ಲಿ ಚೆÀಲುವ ಚನ್ನಮಲ್ಲನನ್ನು ಕೂಡಲೆಳಸಿದ ಅಕ್ಕ ಎತ್ತ ಕಾಣೆಯಾದಳು? ಮಂಜಿನ ಶಿವಾಲಯಕ್ಕೆ ಬಿಸಿಲ ಕಳಶ ಇಡುವ ಅಲ್ಲಮ ಇನ್ನೆಲ್ಲಿ? ಬಿದಿಗೆಯ ಚಂದ್ರನನ್ನೇ ಸೆರೆಯ ಬಟ್ಟಲು ಮಾಡಿ ಸುರಾಪಾನ ಮಾಡಿದ ಪಶ್ಚಿಮ ದಿಶಾವಲ್ಲಭೆಯ ಸುರಾಪಾನದ ನಶೆಯೇರಿದ ಗಲ್ಲದ ವರ್ಣನೆ ಮಾಡಿದ ಕನ್ನಡದ ಚಂಪೂ ಕವಿಗಳ ಪ್ರಕೃತ್ಯುಪಾಸನೆಯನ್ನು ಮರಳಿ ಕಾಣಬಲ್ಲೆವೇನು?
ಕಡಲಾಚೆಯಿಂದ ಕನ್ನಡ ಕಾಡಿಗೆ ಬನ್ನಿ. ಗುಲಗಂಜಿ ತುಟಿಯ ಚುಂಬನ ತನ್ನಿ. ಗಾರ್ಡನಿಂಗ್ ವಿಕೃತಿಯಿಂದ ಮರಳಿ ನಮ್ಮ ತಪೋವನ ಸಂಸ್ಕೃತಿ ಮರಳಿ ಬರಲಿ. ಹೆಗ್ಗತ್ತರಿಯ ಕ್ರೂರ ಬಾಯಿ ಕತ್ತರಿಸಿಹಾಕುವ ವಿದೇಶೀ ಗಾರ್ಡನಿಂಗ್ ಶೈಲಿ ಹೋಗಲಿ.
ಕಣ್ವಾಶ್ರಮದ ಆ ಮುಗ್ಧ ಮನೋಹರ ಶಕುಂತಲೆ ಹೂಬಳ್ಳಿಗಳನ್ನು ಮುದ್ದಿಸುತ್ತ, ಮಾತಾಡಿಸುತ್ತ ನಮ್ಮ ತಪೋವನಕ್ಕೆ ಮತ್ತೆ ಮರಳಿ ಬರಲಿ. ಶಕುಂತಲೆ ನಮ್ಮ ಮನೆಯಲ್ಲಿ ಹುಟ್ಟಲಿ.