ಕಷ್ಟವೆಂದು ಅವರ ಬಳಿ ಬಂದವರಿಗೆ ಅವರು ವಿಶೇಷ ಜಪ ಮಾಡಿ ಸಮರ್ಪಣೆ ಮಾಡಿಬಿಡುತ್ತಿದ್ದರು. ಕಷ್ಟಗಳು ಮಂಜಿನಂತೆ ಕರಗಿಹೋಗುವುದನ್ನು ನೋಡಿ ಆನಂದಿಸುತ್ತಿದ್ದರು. ಸ್ವತಃ ತಮಗೇ ಕಷ್ಟ ಬಂದಾಗ ಗುರುವಿನ ಮುಂದೆ ಹೋಗಿ ಕಣ್ಣೀರಾಗಿಬಿಡುತ್ತಿದ್ದರು.
ಸ್ವಾಮಿ ಹರ್ಷಾನಂದಜೀಯವರನ್ನು ‘ಇವರು ಹೀಗೇ’ ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ಹೀಗೆಂದು ನಿಶ್ಚಯಿಸುವ ವೇಳೆಗೆ ಅವರ ಮತ್ತಾವುದೋ ಗುಣ ನಿಮ್ಮನ್ನು ಆಕರ್ಷಿಸಿರುತ್ತದೆ. ಅದೇ ಸತ್ಯವೆಂದು ಭಾವಿಸಿ ಮುಗಿಸುವ ವೇಳೆಗೆ ಮತ್ತೊಂದೆಡೆಗೆ ಸೆಳೆಯಲ್ಪಟ್ಟಿರುತ್ತೀರಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರು ವಿವೇಕಾನಂದರು ಕಟ್ಟಿಕೊಟ್ಟ ಸಂನ್ಯಾಸತ್ತ್ವದ ಮೌಲ್ಯಗಳ ಒಟ್ಟು ಮೊತ್ತ.
ಹಳ್ಳಿಯ ಶಾಲೆಯ ಓದನ್ನು ಮುಗಿಸಿ ಬೆಂಗಳೂರಿನ ಬದುಕಿಗೆ ತೆರೆದುಕೊಂಡ ದಿನಗಳವು. ‘ರಾಮಕೃಷ್ಣ ವಿದ್ಯಾರ್ಥಿ ಮಂದಿರಂ’ – ರಾಮಕೃಷ್ಣ ಮಂದಿರಕ್ಕೆ ಹೊಂದಿಕೊಂಡ ಹಾಸ್ಟೆಲ್ಗೆ ಮುಂದಿನ ಓದಿಗೆಂದು ಸೇರಿಕೊಂಡಿದ್ದೆ. ಈ ಹಾಸ್ಟೆಲ್ ಶಿಸ್ತಿನ ಆಗರ. ಆ ವಯಸ್ಸಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಚೌಕಟ್ಟು ಎನಿಸುವಂತಹ ವಾತಾವರಣ. ಪ್ರತಿ ದಿನ ಬೆಳಗ್ಗೆ-ಸಂಜೆ ಪ್ರಾರ್ಥನೆ, ಕಡ್ಡಾಯ ಆಟ, ಪಾಠ, ಊಟ ಇವೆಲ್ಲವೂ ಆ ಹಂತದಲ್ಲಿ ಕಿರಿಕಿರಿ ಹುಟ್ಟಿಸುವಂಥದ್ದೇ. ಜೊತೆಗೆ ಭಾನುವಾರ ರಾಮಕೃಷ್ಣ ಆಶ್ರಮದಲ್ಲಿ ಕಡ್ಡಾಯ ತರಗತಿ ಬೇರೆ. ಆರಂಭದಲ್ಲಿ ನಿದ್ದೆಯ ಕೊರತೆಯಿಂದ ಬಳಲುತ್ತಿದ್ದ ನಾವು ಈ ತರಗತಿಗಳಲ್ಲೆಲ್ಲ ಕಣ್ಮುಚ್ಚಿಕೊಂಡೇ ಕೂರುತ್ತಿದ್ದುದು.
ಕಾಲಕ್ರಮೇಣ ಅಲ್ಲಿನ ವಿಷಯಗಳಲ್ಲಿ ಆಸಕ್ತಿ ಮೂಡಲಾರಂಭಿಸಿತು. ಉಪನ್ಯಾಸಕರು ಹೇಳುತ್ತಿದ್ದ ವಿಚಾರವನ್ನು ಇನ್ನೂ ಹೆಚ್ಚು ಕೇಳಬೇಕೆಂಬ ಹಂಬಲ, ತುಡಿತಗಳು ಉಂಟಾದವು. ಜೊತೆಗೆ ಉಪನ್ಯಾಸಕರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಆಸಕ್ತಿ ಕೂಡ ಹೆಚ್ಚಿತು. ಆಗ ಪರಿಚಯವಾದವರು ಸ್ವಾಮಿ ಹರ್ಷಾನಂದಜೀ. ಅವರ ಮಾತಿನ ಶೈಲಿ ಅಂದಿನಿಂದ ಕೊನೆಯ ದಿನಗಳವರೆಗೂ ಬದಲಾಗಲೇ ಇಲ್ಲ. ಬರವಣಿಗೆಯ ಶೈಲಿಯೂ ಅಷ್ಟೆ. ಅವರು ಮೊದಲ ಲೇಖನ ಬರೆದಾಗ ಎಷ್ಟು ಪಕ್ವವಾಗಿದ್ದರೋ ಕೊನೆಯ ದಿನಗಳಲ್ಲಿ ಬರೆಯುವಾಗಲೂ ಅಷ್ಟೇ ಪಕ್ವತೆಯಿತ್ತು. ಒಂದು ರೀತಿಯಲ್ಲಿ ಪರಿಪೂರ್ಣತೆಯ ಅಖಂಡ ಸಂಕೇತವಾಗಿದ್ದವರು ಅವರು. ಅವರಿಂದ ಬಲು ಪ್ರಭಾವಿತನಾಗಿದ್ದ ನಾನು ಅದೊಮ್ಮೆ ಪತ್ರವನ್ನು ಬರೆದೆ. ಹಿಂದೂ ಸಮಾಜದ ದುಃಸ್ಥಿತಿಯನ್ನು ವಿವರಿಸಿ, ಇದರ ರಕ್ಷಣೆಗೆ ಸಂಘಟನೆಯೊಂದನ್ನು ಮಾಡಬೇಕೆಂಬ ಕುರಿತಂತೆ ಅವರ ಅಭಿಪ್ರಾಯವನ್ನೂ ಕೇಳಿದ್ದೆ. ಈ ಪತ್ರವನ್ನು ಕೆಲಸಕ್ಕೆ ಬಾರದವನೊಬ್ಬನ ಪತ್ರವೆಂದು ಕಸದಬುಟ್ಟಿಗೆಸೆಯದೇ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ವಾಮಿಜೀ ಉತ್ತರಿಸಿದ್ದರು. ಧರ್ಮರಕ್ಷಣೆಗೆಂದು ಅದಾಗಲೇ ಇರುವ ಸಂಘಟನೆಗಳಿಗೆ ಶಕ್ತಿ ತುಂಬುವ ಮೂಲಕ ನಿನ್ನ ಶಕ್ತಿಯನ್ನು ಸದುಪಯೋಗ ಪಡಿಸಿಕೊ – ಎಂಬ ಹಿತನುಡಿ ಅದರಲ್ಲಿತ್ತು.
ಮುಂದಿನ ನಾಲ್ಕು ವರ್ಷಗಳ ಕಾಲ ನನ್ನ ಅಧ್ಯಯನದ ಕಾರಣಕ್ಕೆ ಅವರ ಸಂಪರ್ಕವಿರಲಿಲ್ಲ. ಆದರೆ ಹಾಸ್ಟೆಲ್ನಲ್ಲಿ ವಾರ್ಡನ್ ಆಗಿದ್ದ ಸ್ವಾಮಿ ಸ್ವಾತ್ಮಾರಾಮಾನಂದಜೀ ಆಶ್ರಮದ ಅನೇಕ ಪುಸ್ತಕಗಳನ್ನು ಕೊಟ್ಟು ಓದಿಸುವ ಮೂಲಕ ನಮ್ಮಲ್ಲಿದ್ದ ದೇಶ-ಧರ್ಮಗಳ ಆಸಕ್ತಿಯನ್ನು ಜೀವಂತವಾಗುಳಿಸಿದರು. ಆಗ ತಮ್ಮ ಸಾಹಿತ್ಯದ ಮೂಲಕ ದೂರವಿದ್ದರೂ ಹತ್ತಿರವಾದವರು ಹರ್ಷಾನಂದಜೀಯವರೇ. ಅವರ ಅಸ್ಖಲಿತ ಬರವಣಿಗೆ, ಓತಪ್ರೋತ ವಿಚಾರಧಾರೆಯ ಪ್ರವಾಹ ನಿಜಕ್ಕೂ ಅಚ್ಚರಿ ತರಿಸುವಂತಿತ್ತು.
ನನ್ನನ್ನು ಆ ದಿನಗಳಲ್ಲಿ ಕಾಡಿದ ಅವರ ಪುಸ್ತಕ ‘ಇಂಟ್ರೊಡಕ್ಶನ್ ಟು ಹಿಂದೂ ಕಲ್ಚರ್’. ಹಿಂದುಗಳ ಸಾಧನೆಯನ್ನು ಅವರು ನಿರೂಪಿಸಿದ ರೀತಿ ಎಂಥ ತರುಣನನ್ನೂ ಆಕರ್ಷಿಸುವಂಥದ್ದೇ ಆಗಿತ್ತು ಮತ್ತು ಮುಲಾಜಿಲ್ಲದೆ, ಯಾವ ಸೆಕ್ಯುಲರಿಸಂನ ಭೂತವನ್ನೂ ತಲೆಗೆ ಏರಿಸಿಕೊಳ್ಳದೆ, ಆ ಪುಸ್ತಕದಲ್ಲಿ ಹಿಂದುಗಳ ವೈಜ್ಞಾನಿಕ ಮನೋಭೂಮಿಕೆಯ ಸಾಮಥ್ರ್ಯವನ್ನು ಅವರು ಬಿಚ್ಚಿಟ್ಟ ರೀತಿ ಅಮೋಘವೇ. ಅದನ್ನು ಓದಿದ ನಂತರವೇ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಬೆಳೆದದ್ದು.
ರಾಮಕೃಷ್ಣಾಶ್ರಮದಲ್ಲಿ ಸಂನ್ಯಾಸಿಯಾಗುವುದು ಸುಲಭದ ಸಂಗತಿಯಲ್ಲ. ಬಲ್ಲವರು ಅದನ್ನು ಅಹಂಕಾರ ಚಿವುಟುವ ಯಂತ್ರವೆಂದು ಕರೆಯುತ್ತಾರೆ. ಅಲ್ಲಿನ ವ್ಯವಸ್ಥೆಯೇ ಹಾಗೆ. ಸಂನ್ಯಾಸತ್ವ ತೆಗೆದುಕೊಳ್ಳುವುದು ಸಲೀಸಲ್ಲ. ಅಧ್ಯಯನ ಚೆನ್ನಾಗಿ ಆಗಿರಬೇಕು, ಮನೆಯವರನ್ನು ಒಪ್ಪಿಸಿರಬೇಕು, ಆರೋಗ್ಯವೂ ಚೆನ್ನಾಗಿಯೇ ಇರಬೇಕು. ಹಾಗಿದ್ದಾಗ ಮಾತ್ರ ಒಳಗೆ ಬರಲು ಅವಕಾಶ. ಆನಂತರವೂ ಏಳೆಂಟು ವರ್ಷಗಳ ಕಾಲ ಬಿಳಿಯ ಬಟ್ಟೆ ಧರಿಸಿ ಬ್ರಹ್ಮಚಾರಿಯಾಗಿರಬೇಕು. ಈ ಹೊತ್ತಿನಲ್ಲೇ ಶಾಸ್ತ್ರಾಧ್ಯಯನ ನಡೆಯುವುದು. ಈ ವೇಳೆಯಲ್ಲೇ ಜಪ-ತಪ ಸಾಧನೆಗಳಲ್ಲದೆ ಎಲ್ಲ ಬಗೆಯ ಕೈಂಕರ್ಯದಲ್ಲೂ ವ್ಯಕ್ತಿಯೊಬ್ಬನನ್ನು ತೊಡಗಿಸಿ ಅವನನ್ನು ಜೀರ್ಣವಾಗಿಸುವುದು. ಯಾವ ಪ್ರತಿಭೆ ನಿಮ್ಮೊಳಗಿದೆಯೋ ಅದಕ್ಕೆ ಪೂರಕವಾದ ಕೆಲಸ ನಿಮಗೆ ಕೊಡದೆ ನಿಮ್ಮೊಳಗಿರಬಹುದಾದ ಅಹಂಕಾರವನ್ನು ಛಿದ್ರಗೊಳಿಸುವುದು ಈ ಹೊತ್ತಿನಲ್ಲೇ. ಇಷ್ಟೆಲ್ಲಾ ಆದ ನಂತರವೂ ಸಾಧನೆಯ ಹಾದಿಯಲ್ಲಿ ಬಲವಾಗಿದ್ದೇವೆ ಎಂದು ಖಾತರಿಯಾದಾಗ ಕಾವಿ ಬಟ್ಟೆ ಕೊಟ್ಟು ಸಂನ್ಯಾಸ ದೀಕ್ಷೆ ನೀಡಲಾಗುತ್ತದೆ.
ಬಯಕೆಯ ಆಯ್ಕೆ
ಸ್ವಾಮಿ ಹರ್ಷಾನಂದಜೀಗೆ ಆಶ್ರಮಕ್ಕೆ ಸೇರಿಕೊಳ್ಳಬೇಕು ಎನ್ನುವ ಬಯಕೆ ಉಂಟಾಗಿದ್ದು ಸುಮ್ಮ-ಸುಮ್ಮನೇ ಅಲ್ಲ. ಹಿಂದೂಧರ್ಮವನ್ನು ಕುರಿತಂತೆ ಉತ್ತರಿಸದೇ ಉಳಿದ ಅನೇಕ ಪ್ರಶ್ನೆಗಳು ಅವರನ್ನು ಕಾಡುತ್ತಿದ್ದವು. ಒಂದೆಡೆ ಇವೆಲ್ಲಕ್ಕೂ ಉತ್ತರ ಸಿಗುವಂಥ ವ್ಯಕ್ತಿಯೊಬ್ಬ ಇರಬೇಕೆಂಬ ಬಯಕೆ ಅವರಲ್ಲುದಿಸಿತು. ಅದಕ್ಕೆ ಬೇಕಾಗುವಷ್ಟು ಅಧ್ಯಯನ, ಸಾಧನೆ ಮಾಡಲು ರಾಮಕೃಷ್ಣಾಶ್ರಮಕ್ಕಿಂತ ಸೂಕ್ತ ಜಾಗ ಮತ್ತೊಂದಿಲ್ಲ ಎಂದೆನಿಸಿತು ಅವರಿಗೆ. ಸಮಗ್ರಸ್ವರೂಪದಲ್ಲಿ ಹಿಂದೂಧರ್ಮವನ್ನರಿಯಲು, ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಇದು ಸಮರ್ಥವಾದ ಜಾಗ ಎಂಬುದನ್ನು ನಿಶ್ಚಯಿಸಿದೊಡನೆ ಮನಸ್ಸು ಸಂನ್ಯಾಸಕ್ಕೆ ಅಣಿಯಾಗಿಬಿಟ್ಟಿತು.
ಅಧ್ಯಯನದ ವಿಚಾರದಲ್ಲಿ ಚುರುಕುಮತಿಯಾಗಿದ್ದ ಅವರಿಗೆ ಮೇಲ್ನೋಟಕ್ಕೆ ತೊಂದರೆ ಏನೂ ಇರಲಿಲ್ಲ. ಆದರೆ ಅವರ ಹೊಟ್ಟೆಯ ಸಮಸ್ಯೆ ಎಷ್ಟು ತೀವ್ರವಾಗಿತ್ತೆಂದರೆ ಆಶ್ರಮದಿಂದ ಅವರನ್ನು ದೂರವಿಡಲು ಅದೊಂದು ಕಾರಣ ಸಾಕಿತ್ತು.
ಬೆಂಗಳೂರಿನ ಆಶ್ರಮದಲ್ಲಿ ಆಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದವರು ಸ್ವಾಮಿ ಯತೀಶ್ವರಾನಂದಜೀ. ಈ ತರುಣನ ಮೇಲೆ ವಿಶೇಷವಾದ ಪ್ರೀತಿ-ಮಮತೆಗಳಿದ್ದರೂ ಅದನ್ನವರು ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಸಂನ್ಯಾಸಿಯಾಗಬೇಕೆಂದು ಇವರು ಇಚ್ಛೆ ವ್ಯಕ್ತಪಡಿಸಿದಾಗಲೆಲ್ಲ ಅದನ್ನು ಹೇಗಾದರೂ ಮಾಡಿ ಸ್ವಾಮಿಗಳು ತಳ್ಳಿಹಾಕುತ್ತಲೇ ಬಂದರು. ಜೊತೆಗೆ ಈ ಹುಡುಗನನ್ನು ಸ್ವೀಕರಿಸುವ ಮುನ್ನ ಚೆನ್ನಾಗಿ ಪರೀಕ್ಷಿಸೆಂದು ರಾಮಕೃಷ್ಣರಲ್ಲಿ ಪ್ರಾರ್ಥನೆ ಕೂಡ ಮಾಡುತ್ತಿದ್ದರು. ಅದರ ಫಲವೋ ಏನೋ, ಸಂನ್ಯಾಸಿಯಾಗಬೇಕೆಂದು ಬಯಕೆ ಹುಟ್ಟಿದ ನಂತರವೇ ಹೊಟ್ಟೆಯ ಸಮಸ್ಯೆಯೂ ಅಷ್ಟೇ ತೀವ್ರಗೊಂಡಿತು. ಆದರೆ ಹುಡುಗನ ಮನಸ್ಸು ಮಾತ್ರ ಒಂದಿನಿತೂ ಕದಲಲಿಲ್ಲ. ಕೊನೆಗೆ ಈತನ ಕುರಿತ ಎಲ್ಲ ವಿವರವನ್ನು ಬೇಲೂರುಮಠಕ್ಕೆ ಕಳಿಸಿಕೊಟ್ಟರೆ ಅಲ್ಲಿಂದ ಕಾರ್ಯದರ್ಶಿಗಳು, ‘ಈತನೊಬ್ಬನ ಎಕ್ಸ್ರೇ ಕಾಣೆಯಾಗಿದೆ. ಆದರೂ ಪರವಾಗಿಲ್ಲ ಈತನನ್ನು ಆಶ್ರಮಕ್ಕೆ ಸೇರಿಸಿಕೊಳ್ಳಬಹುದು’ ಎಂದುಬಿಟ್ಟರು.
ಅನಾರೋಗ್ಯದ ದೃಷ್ಟಿಯಿಂದ ತಿರಸ್ಕರಿಸಲ್ಪಡಬೇಕಿದ್ದ ಸ್ವಾಮಿ ಹರ್ಷಾನಂದಜೀ ಮಾಯೆ ಎಂಬಂತೆ ರಾಮಕೃಷ್ಣಾಶ್ರಮಕ್ಕೆ ಸೇರ್ಪಡೆಗೊಂಡರು. ಸುದ್ದಿ ತಿಳಿದೊಡನೆ ಸಂತುಷ್ಟರಾದ ಯತೀಶ್ವರಾನಂದಜೀ ‘ರಾಮಕೃಷ್ಣರು ಅವನನ್ನು ಕದ್ದು ಆಶ್ರಮದೊಳಕ್ಕೆ ಸೇರಿಸಿಕೊಂಡುಬಿಟ್ಟರು’ ಎಂದಿದ್ದರಂತೆ. ಸ್ವಾಮಿ ಹರ್ಷಾನಂದಜೀ ಈ ಘಟನೆಯನ್ನು ಅನೇಕರ ಬಳಿ ಹೇಳಿಕೊಂಡು ನಗುತ್ತಿದ್ದರು. ರಾಮಕೃಷ್ಣರು ಈ ರೀತಿ ‘ಕದ್ದು’ ಒಳಗೆ ಸೇರಿಸಿದ್ದು ಸಾರ್ಥಕವೇ ಆಯ್ತು. ಬರಲಿರುವ ದಿನಗಳಲ್ಲಿ ರಾಮಕೃಷ್ಣ ವಿಚಾರಧಾರೆಯನ್ನು ಸಮಾಜಕ್ಕೆ ಸಮರ್ಥವಾಗಿ ಮುಟ್ಟಿಸುವಲ್ಲಿ ಹರ್ಷಾನಂದಜೀ ಗುರುದೇವರ ಸಮರ್ಥ ಆಯುಧವೇ ಆಗಿಬಿಟ್ಟರು.
ರಾಮಕೃಷ್ಣರೇನೋ ಒಳಗೆ ಸೇರಿಸಿಕೊಳ್ಳಲು ಒಪ್ಪಿಗೆ ಕೊಟ್ಟಾಗಿತ್ತು. ಮನೆಯವರನ್ನು ಒಪ್ಪಿಸುವುದು ಸುಲಭವಿರಲಿಲ್ಲವಲ್ಲ. ಕೋಲ್ಕತಾಕ್ಕೆ ಹೋಗಿ ಮಂತ್ರದೀಕ್ಷೆ ತೆಗೆದುಕೊಳ್ಳಲು ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಮನೆಯವರಿಗೆ ಗೊತ್ತಾಗದಂತೆ ದಿನಕ್ಕೊಂದು ಬಟ್ಟೆಯನ್ನು ತಂದು ಆಶ್ರಮದಲ್ಲಿಟ್ಟು, ಮೂರ್ನಾಲ್ಕು ದಿನಗಳ ನಂತರ ಕೋಲ್ಕತಾಗೆ ಹೋಗಿ ದೀಕ್ಷೆ ಪಡೆದು ಬಂದಿದ್ದರಂತೆ. ಅವರ ಗುರುಗಳಾದ ಸ್ವಾಮಿ ವಿರಜಾನಂದರ ಕುರಿತು ಅವರಿಗೆ ಅಪಾರ ಶ್ರದ್ಧೆಯಿತ್ತು. ಬಹುಶಃ ಬರವಣಿಗೆಯಲ್ಲಿ ಅದನ್ನು ಕಟ್ಟಿಕೊಡುವುದು ಅಸಾಧ್ಯವೇ ಸರಿ. ಗುರುಶ್ರದ್ಧೆ ಹೇಗಿರಬೇಕೆಂಬುದಕ್ಕೆ ನಮ್ಮ ಕಾಲದ ಜೀವಂತ ಉದಾಹರಣೆ ಅವರೇ. ಆಪ್ತ ಸಂನ್ಯಾಸಿಗಳ ಬಳಿ ತಮ್ಮ ಗುರುವಿನ ಕುರಿತು ಹೇಳುತ್ತಾ ಅವರು ಕಣ್ಣೀರು ಹಾಕಿಬಿಡುತ್ತಿದ್ದರು. ‘ನನ್ನನ್ನು ಬಲುಪ್ರೀತಿಯಿಂದ ಆರಿಸಿಕೊಂಡು ಅವರು ಉದ್ಧರಿಸಿದರು. ಆದರೆ ನಾನೇ ಅವರ ಆಶಯವನ್ನು ಪೂರ್ಣಗೊಳಿಸುವಲ್ಲಿ ಸೋಲುತ್ತಿದ್ದೇನೆ’ ಎಂದು ಅವರು ಯಾವಾಗಲೂ ಹೇಳಿಕೊಳ್ಳುತ್ತಿದ್ದರು.
ಹಾಗೆಂದು ಅವರು ಸಾಧನೆ ಮಾಡುತ್ತಿರಲಿಲ್ಲವೆಂದು ಭಾವಿಸಿಬಿಡಬೇಡಿ. ಒಂದು ದಿನವೂ ಅನುಷ್ಠಾನವನ್ನು ತಪ್ಪಿಸಿದವರಲ್ಲ ಅವರು. ಗುರುಗಳ ಆಜ್ಞೆಯಂತೆ, ಹೇಗೆ ಮರುದಿನ ಊಟ ಮಾಡಲಾಗದಿದ್ದರೆ ಇಂದೇ ಅದಕ್ಕೆ ಪೂರಕವಾಗಿ ಊಟದ ವ್ಯತ್ಯಯ ಮಾಡಿಕೊಳ್ಳುತ್ತೇವೋ ಹಾಗೆಯೇ ಅನುಷ್ಠಾನ ಸಾಧ್ಯವೇ ಇಲ್ಲ ಎನ್ನಿಸಬಹುದಾದ ಮುಂಚಿನ ದಿನವೇ ಮರುದಿನದ ಸಾಧನೆಯನ್ನೂ ಮಾಡಿ ಮುಗಿಸಿಬಿಡುತ್ತಿದ್ದರು ಅವರು. ಸುದೀರ್ಘ ಮೀಟಿಂಗ್ಗಳಿವೆ ಎಂದು ಗೊತ್ತಾದರೆ ಅಂದು ಬೇಗನೇ ಎದ್ದು ಸಾಧನೆಯನ್ನು ಮುಗಿಸಿಯೇ ಮುಂದಿನ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದವರು ಅವರು.
ಇತರರ ನೋವಿಗೆ ಸ್ಪಂದಿಸುತ್ತಿದ್ದುದೂ ತಮ್ಮ ಸಾಧನೆಯ ಮೂಲಕವೇ. ಕಷ್ಟವೆಂದು ಅವರ ಬಳಿ ಬಂದವರಿಗೆ ಅವರು ವಿಶೇಷ ಜಪ ಮಾಡಿ ಸಮರ್ಪಣೆ ಮಾಡಿಬಿಡುತ್ತಿದ್ದರು. ಕಷ್ಟಗಳು ಮಂಜಿನಂತೆ ಕರಗಿಹೋಗುವುದನ್ನು ನೋಡಿ ಆನಂದಿಸುತ್ತಿದ್ದರು. ಸ್ವತಃ ತಮಗೇ ಕಷ್ಟ ಬಂದಾಗ ಗುರುವಿನ ಮುಂದೆ ಹೋಗಿ ಕಣ್ಣೀರಾಗಿಬಿಡುತ್ತಿದ್ದರು. ಹೀಗೆ ಮನದುಂಬಿ ಅತ್ತು ಮುಗಿದ ದಿನ ರಾತ್ರಿ ಕನಸಿನಲ್ಲಿ ಗುರುಗಳೇ ಬಂದುಬಿಡುತ್ತಿದ್ದರಂತೆ. ಕೈ ಹಿಡಿಯಲು ಸಾಕ್ಷಾತ್ ಗುರುವೇ ನಿಂತಿದ್ದಾಗ, ಹರನ ಹೆದರಿಕೆಯೇ ಇಲ್ಲವೆಂದ ಮೇಲೆ ಇನ್ನು ಹುಲುಮಾನವರ ಚಿಂತೆ ಏಕೆ?
ಶಾಸ್ತ್ರಪಾಂಡಿತ್ಯ
ಶಾಸ್ತ್ರ ವಿಚಾರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಸ್ವಾಮಿ ಹರ್ಷಾನಂದಜೀ ಕನ್ನಡ, ಸಂಸ್ಕೃತ, ಇಂಗ್ಲಿಷ್ಗಳಲ್ಲಿ ಅಸ್ಖಲಿತ ವಾಣಿಯನ್ನು ಹೊಂದಿದ್ದರು. ತೀರಾ ಕೊನೆಯ ದಿನಗಳವರೆಗೂ ಅವರ ಮಾತಿನಲ್ಲಿ ಗೊಂದಲವಿದ್ದುದನ್ನು ನೋಡಿದವರೇ ಇಲ್ಲ. ಅವರ ಆಲೋಚನೆ ನಿಖರವಾದ್ದು ಮತ್ತು ಪ್ರಖರವಾದ್ದು. ಅಷ್ಟು ಭಾಷಣಗಳಲ್ಲಿಯೂ ಒಮ್ಮೆಯಾದರೂ ತೊದಲಿದ್ದನ್ನು, ತಪ್ಪಿ ಪದಪ್ರಯೋಗ ಮಾಡಿದ್ದನ್ನು, ಅಥವಾ ತಪ್ಪು ಮಾಹಿತಿ ಕೊಟ್ಟಿದ್ದನ್ನು ಬಹುಶಃ ಕೇಳಿದವರು ಇರಲಿಕ್ಕಿಲ್ಲವೆನಿಸುತ್ತದೆ. ಮಾತಿಗೂ ಮುಂಚೆ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದರು. ಅದು ಪ್ರಬುದ್ಧರ ಮುಂದೆ ಮಾತನಾಡುವುದಿರಲಿ ಅಥವಾ ಶಿವನಹಳ್ಳಿಯ ಬಲು ಸಾಮಾನ್ಯ ಜನರ ಮುಂದೆ ವಿಚಾರ ಹಂಚಿಕೊಳ್ಳುವುದಿರಲಿ, ಶಾಲೆಯ ಮಕ್ಕಳಾಗಿರಲಿ ಅಥವಾ ವೈಜ್ಞಾನಿಕ ಸಂಸ್ಥೆಯೊಂದರ ವಿದ್ಯಾರ್ಥಿಗಳೇ ಆಗಿರಲಿ, ಸ್ವಾಮಿ ಹರ್ಷಾನಂದಜೀ ತಯಾರಿ ಮಾಡಿಕೊಳ್ಳದೇ ಮಾತನಾಡುತ್ತಲೇ ಇರಲಿಲ್ಲ. ಅವರ ಗುರುಗಳು ಹೇಳಿದ್ದರಂತೆ ‘ತಯಾರಿ ಮಾಡಿಕೊಳ್ಳದೇ ಮಾತನಾಡುವುದು ಮಹಾಪಾಪ’ ಎಂದು. ಆ ಮಹಾಪಾಪದ ಭಾಗಿಯಾಗಲು ಅವರೆಂದಿಗೂ ಇಚ್ಛಿಸಲೇ ಇಲ್ಲ.
ಅವರ ಬರವಣಿಗೆಗೆ ಶಕ್ತಿ ತುಂಬಿದ್ದು ತ್ಯಾಗೀಶಾನಂದರೆಂದು ಹೇಳುತ್ತಾರೆ. ಸಂಸ್ಕೃತವನ್ನು ಕಲಿಯುವ ಆಸಕ್ತಿ ಅವರಿಗೆ ಬಂದಿದ್ದೂ ಗುರುಮುಖದಿಂದಲೇ. ಸ್ವಾಮಿಜೀ ಸದಾ ಸಂಸ್ಕೃತ ಕಲಿಯುವ ಕುರಿತಂತೆ ತಾಕೀತು ಮಾಡುತ್ತಿದ್ದಾಗ ಆಶ್ರಮಕ್ಕೆ ಆಗತಾನೇ ಸೇರಿದ್ದ ಹರ್ಷಾನಂದಜೀ ಒಲ್ಲದ ಮನಸ್ಸಿನಿಂದ ಪ್ರತಿಕ್ರಿಯಿಸುತ್ತಿದ್ದರಂತೆ. ಒಮ್ಮೆಯಂತೂ ಮುಕ್ತಿ ಪಡೆಯಲು ಸಂಸ್ಕೃತ ಕಲಿಯಲೇಬೇಕೆ? – ಎಂದು ಪ್ರಶ್ನಿಸಿದಾಗ, ‘ಹಾಗೇನೂ ಇಲ್ಲ. ಆದರೆ ಕರ್ಮದಲ್ಲಿ ನಿರತವಾಗಿರುವಾಗ ಮನಸ್ಸು ಕೆಳಗಿಳಿಯುತ್ತಿರುತ್ತದೆ. ಸಂಸ್ಕೃತ ಕಲಿತು ಶಾಸ್ತ್ರಗ್ರಂಥಗಳನ್ನು ಮೂಲದಲ್ಲೇ ಅಧ್ಯಯನ ಮಾಡಿದಾಗ ಅದು ಸದಾ ಉನ್ನತ ಮಟ್ಟದಲ್ಲಿರುತ್ತದೆ’ ಎಂದರಂತೆ.
ಈ ಮಾತುಗಳನ್ನು ಕೇಳಿದ ಮೇಲೆ ಸುಮ್ಮನಿರುವುದುಂಟೇ? ಸ್ವಾಮಿಜೀ ತಾವೇ ಹಠಕ್ಕೆ ಬಿದ್ದು ಸಂಸ್ಕೃತವನ್ನು ಓದಲಾರಂಭಿಸಿದರು. ಅವರು ಪಡೆದ ಪರಿಣತಿ ಎಷ್ಟಿತ್ತೆಂದರೆ ಸಂಸ್ಕೃತ ಪಂಡಿತರ ಲಿಪಿಗಳನ್ನೂ ತಿದ್ದುವಷ್ಟರಮಟ್ಟಿಗೆ. ಸಂಸ್ಕೃತದಲ್ಲೇ ಕಾವ್ಯರಚನೆ ಮಾಡುವಷ್ಟರಮಟ್ಟಿಗೆ ಅವರು ಪಾಂಡಿತ್ಯವನ್ನು ಗಳಿಸಿಕೊಂಡರು. ಇದು ಗುರುವಾಕ್ಯದ ಮೇಲೆ ಅವರಿಗಿದ್ದ ಶ್ರದ್ಧೆಯ ಪರಿಣಾಮ.
ಮಾತಿನಲ್ಲಿ ಹೇಗೆ ನಿಖರತೆಯೋ ಬರವಣಿಗೆಯಲ್ಲೂ ಅಷ್ಟೇ ಸಾಮಥ್ರ್ಯ ತೋರಿದ್ದರು ಹರ್ಷಾನಂದಜೀ. ಅವರ ಬರವಣಿಗೆಯಲ್ಲಿ ಒಂದು ಸಾಲು ಹೆಚ್ಚು ನುಸುಳಿರುತ್ತಿರಲಿಲ್ಲ. ಇಂತಹ ಪದವೊಂದು ಅನಗತ್ಯ ಎಂದು ತೆಗೆದುಹಾಕುವಂತಿರಲಿಲ್ಲ. ತಪ್ಪುಗಳಂತೂ ಇಲ್ಲವೇ ಇಲ್ಲ.
ಒಮ್ಮೆ ಅವರು ಸಹಿ ಮಾಡಬೇಕಾಗಿದ್ದ ಪತ್ರವೊಂದನ್ನು ಹುಡುಗನೊಬ್ಬ ಕಛೇರಿಯಿಂದ ಹೊತ್ತು ತಂದಿದ್ದ. ಅದರಲ್ಲಿರುವ ತಪ್ಪುಗಳನ್ನು ಗುರುತಿಸಿ ತಿದ್ದಿ ಸರಿಮಾಡಿಕೊಂಡು ಬರುವಂತೆ ಸ್ವಾಮಿಜೀ ಹೇಳುತ್ತಿದ್ದರು. ಆ ವೇಳೆಗೆ ಅಲ್ಲಿಯೇ ಇದ್ದ ನನ್ನತ್ತ ತಿರುಗಿ ‘ಶಾರದಾಮಾತೆಯವರ ಸಂದೇಶವನ್ನು ಎಲ್ಲರಿಗೂ ಹೇಳುವ ನಾನೇ ಅದನ್ನು ಪಾಲಿಸುತ್ತಿಲ್ಲ’ ಎಂದರು. ಒಮ್ಮೆ ಗಾಬರಿ ಎನಿಸಿತು. ಸಣ್ಣಗೆ ನಗುತ್ತಾ ಸ್ವಾಮಿಜೀಯೇ ಮುಂದುವರಿಸಿದರು, ‘ಇತರರಲ್ಲಿ ದೋಷಗಳನ್ನು ನೋಡಬೇಡ ಎನ್ನುತ್ತಿದ್ದರು ಅಮ್ಮ. ನನಗಾದರೋ ಈ ಪತ್ರಗಳಲ್ಲಿ ದೋಷಗಳನ್ನು ಹುಡುಕುವುದೇ ಕೆಲಸ’ ಎಂದರು. ನಗುವ ಸರದಿ ನಮ್ಮದಾಗಿತ್ತು.
ವ್ಯಕ್ತಿತ್ವ ಬಹುಮುಖತೆ
ಸ್ವಾಮಿಜೀ ಬರಹಗಾರರಾಗಿ, ಭಾಷಣಕಾರರಾಗಿ ಎಷ್ಟು ಜನಮಾನಸವನ್ನು ತಟ್ಟಿದ್ದರೋ ಹಾಡುಗಾರರಾಗಿಯೂ ಅಷ್ಟೇ ಭಕ್ತಿಪರವಶರಾಗುತ್ತಿದ್ದರು. ಸ್ವಾಮಿ ಜಗದಾತ್ಮಾನಂದಜೀಯವರೊಂದಿಗೆ ಸೇರಿಕೊಂಡು
ದಿವ್ಯತ್ರಯರ ವಿಚಾರಧಾರೆಯನ್ನು ಜನಕ್ಕೆ ಮುಟ್ಟಿಸುವ ಮಾತು-ಗೀತೆಗಳ ಕಾರ್ಯಕ್ರಮವನ್ನು ಅವರು ಮಾಡುತ್ತಿದ್ದರಂತೆ. ಮುಂದೊಮ್ಮೆ ಜಾಗೋಭಾರತ್ ಮಾಡುವಾಗ ಅವರ ಆಶೀರ್ವಾದ ಪಡೆಯಹೋದವನಿಗೆ ‘ಮಾತನಾಡುವವರದ್ದೇನು ಸಲೀಸು. ಹಾಡುಗಾರರದ್ದೇ ಕಷ್ಟ. ಸ್ವಲ್ಪ ಗಮನವಿರಲಿ’ ಎಂದು ತಲೆಮೊಟಕಿ ಕಳಿಸಿದ್ದರು. ಆಗಲೇ ಅವರು ತಮ್ಮ ಅಂದಿನ ದಿನಗಳ ಅನುಭವವನ್ನು ಹಂಚಿಕೊಂಡಿದ್ದು. ಸ್ವಾಮಿ ಜಗದಾತ್ಮಾನಂದಜೀ ವಿಸ್ತಾರವಾಗಿ ಮಾತನಾಡಿ ತಕ್ಷಣಕ್ಕೆ ಹಾಡಿರೆಂದು ತಿರುಗಿ ಕುಳಿತುಬಿಟ್ಟಾಗ ಕಕ್ಕಾಬಿಕ್ಕಿಯಾಗಿಬಿಡುತ್ತಿತ್ತಂತೆ.
ಅವರು ಮಾಡದ ಪ್ರಯೋಗಗಳಿಲ್ಲ. ತಮ್ಮಲ್ಲಿರುವ ಅಷ್ಟೂ ಪ್ರತಿಭೆಯನ್ನು ದಿವ್ಯತ್ರಯರ ವಿಚಾರಧಾರೆಯನ್ನು ಸಮಾಜಕ್ಕೆ ಹಬ್ಬಿಸಲೆಂದೇ ಅವರು ಬಳಸಿಕೊಂಡರು. ಹಾಗೆಯೇ ಆಪ್ತ ಶಿಷ್ಯರಿಗೆ ಪ್ರೇರಣಾದಾಯಿಯಾಗಿ ನಿಂತರೂ ಕೂಡ. ಸಂಜೆ ಕೆಲವರು ಶಾಸ್ತ್ರಾಧ್ಯಯನಕ್ಕೆಂದು ಅವರ ಬಳಿ ಪಾಠ ಕೇಳಲು ಬರುತ್ತಿದ್ದರು. ಅನೇಕ ವರ್ಷಗಳ ಕಾಲ ವಿದೇಶೀ ಹೆಣ್ಣುಮಗಳೊಬ್ಬಳು ಅವರ ಬಳಿ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದುದನ್ನು ನೋಡಿದ ನೆನಪಿದೆ. ಆದರೆ ಈ ರೀತಿ ಅನ್ಯರು, ವಿಶೇಷವಾಗಿ ಹೆಣ್ಣುಮಕ್ಕಳು ಬಂದಾಗ ಅವರನ್ನೆಂದಿಗೂ ತಮ್ಮ ಕೋಣೆಗೆ ಬಿಟ್ಟುಕೊಂಡವರೇ ಅಲ್ಲ ಅವರು. ಸಾರ್ವಜನಿಕರು ಕುಳಿತುಕೊಳ್ಳಬಹುದಾದ ಕೋಣೆಯಲ್ಲೇ ಭೇಟಿ ಮಾಡಬೇಕಿತ್ತಲ್ಲದೇ ಹೆಣ್ಣುಮಕ್ಕಳು ಬಂದಾಗ ಮುಖ್ಯ ಬಾಗಿಲನ್ನು ತೆಗೆದು ಕುಳಿತುಕೊಳ್ಳುತ್ತಿದ್ದರು. ಅವರ ಬ್ರಹ್ಮಚರ್ಯ ಅತ್ಯಂತ ಕಠೋರವಾದದ್ದು ಮತ್ತು ಆದರ್ಶಪ್ರಾಯವಾದದ್ದು. ಬಹುಶಃ ಪ್ರತಿಯೊಬ್ಬರೂ ವಿಶೇಷವಾಗಿ ಸಂನ್ಯಾಸಿಗಳು ಸ್ವಾಮಿ ಹರ್ಷಾನಂದಜೀಯವರಿಂದ ಈ ವಿಚಾರದಲ್ಲಿ ಕಲಿಯಬೇಕಾದ್ದು ಬೆಟ್ಟದಷ್ಟಿದೆ. ಅವರು ಬಟ್ಟೆಯ ದೃಷ್ಟಿಯಿಂದಷ್ಟೇ ಬೆಂಕಿಯಾಗಿರಲಿಲ್ಲ. ಅಂತರಂಗದ ಧಗಧಗಿಸುವ ಬ್ರಹ್ಮಚರ್ಯದ ಜ್ವಾಲೆಯಿಂದಲೂ ಬೆಂಕಿಯೇ ಆಗಿದ್ದರು. ನಿಷ್ಕಳಂಕವಾದ ವ್ಯಕ್ತಿತ್ವ ಅವರದ್ದು.
ಅವರು ಮುಖಸ್ತುತಿ ಮಾಡಿದ್ದನ್ನು ನಾನಂತೂ ನೋಡಿಯೇ ಇಲ್ಲ. ವ್ಯಕ್ತಿಯೊಬ್ಬರ ಬಗ್ಗೆ ಹಿಂದೆ ಸಾಕಷ್ಟು ಹೊಗಳಿಕೆ ಮಾಡಿದರೂ ಎದುರಿಗೆ ಬಂದಾಗ ಇನ್ನಷ್ಟು ಪ್ರೇರಣೆ ಕೊಟ್ಟೇ ಕಳಿಸುತ್ತಿದ್ದರು. ವೇದಿಕೆಯ ಮೇಲೂ ಅಷ್ಟೇ. ವ್ಯಕ್ತಿ ಎಷ್ಟೇ ದೊಡ್ಡವರಿರಲಿ, ಬಲುದೊಡ್ಡ ರಾಜಕಾರಣಿಯೇ ಆಗಿರಲಿ ಅವರು ಅನಾವಶ್ಯಕ ಮಾತುಗಳಿಂದ ಸ್ತುತಿ ಮಾಡಿದವರೇ ಅಲ್ಲ. ಪ್ರತ್ಯಕ್ಷವಾಗಿ ಭೇಟಿಯಾದಾಗಲೂ ಸಾಗಬೇಕಾದ ಎತ್ತರದ ಪರಿಚಯವನ್ನು ಮಾಡಿಕೊಟ್ಟು ಇನ್ನಷ್ಟು ಸಾಧನೆಗೆ ಪ್ರೇರಣೆ ಕೊಡುತ್ತಿದ್ದರು.
ಒಮ್ಮೆ ತುಂಬ ಸುಂದರವಾಗಿ ಹಾಡುವ ಪುಟ್ಟ ಮಗುವೊಂದನ್ನು ಅವರ ಬಳಿ ಕರೆದುಕೊಂಡು ಹೋಗಿದ್ದಾಗ ಆಕೆಯ ಪ್ರಶಸ್ತಿಗಳ ವಿವರವನ್ನೆಲ್ಲಾ ಪಡೆದುಕೊಂಡ ಸ್ವಾಮಿಜೀ ಆಕೆಯನ್ನು ಆಶೀರ್ವದಿಸಿ ಅವರ ತಂದೆಯತ್ತ ತಿರುಗಿ ಹೇಳಿದ್ದೇನು ಗೊತ್ತೇ?
‘ಇನ್ನು ಕಛೇರಿ ನಿಲ್ಲಿಸಿ. ಆಕೆಗೆ ಇನ್ನೂ ಹೆಚ್ಚಿನ ಅಧ್ಯಯನಕ್ಕೆ ಬೇಕಾದ ವ್ಯವಸ್ಥೆ ಮಾಡಿಸಿ’ ಎಂದು. ಗಾಬರಿಗೊಂಡವರನ್ನು ಸಂತೈಸಲು ಅನಂತರ ನಾವೆಲ್ಲ ಹರಸಾಹಸ ಮಾಡಬೇಕಾಯ್ತು. ಸ್ವಾಮಿಜೀ ಹೇಳಿದ್ದು ಸತ್ಯವೇ. ಒಮ್ಮೆ ವೇದಿಕೆಯ ರುಚಿ ಹತ್ತಿಬಿಟ್ಟರೆ ಅನಂತರ ಅದನ್ನು ಕಳೆದುಕೊಳ್ಳುವುದು ಬಲುಕಷ್ಟ. ಅಧ್ಯಯನ, ಸಾಧನೆ ನಿಂತೇಹೋಗಿಬಿಡುತ್ತದೆ. ಹೀಗಾಗಿ ಸಾಧನೆಯ ವಯಸ್ಸಲ್ಲಿ ಚೆನ್ನಾಗಿ ದುಡಿದರೆ ಉಳಿದದ್ದು ಸಹಜವಾಗಿಯೇ ಅನುಸರಿಸುತ್ತದೆ. ಟೇಬಲ್ ಟೆನಿಸ್ನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್ ಆಗಿದ್ದ ಹೆಣ್ಣುಮಗಳೊಬ್ಬಳಿಗೂ ಸ್ವಾಮಿಜೀ ಹೀಗೆಯೇ ಹೇಳಿಬಿಟ್ಟಿದ್ದರು. ಎಷ್ಟಾದರೂ ನಿಜಾರ್ಥದ ಸಂನ್ಯಾಸಿಯಲ್ಲವೇ? ಯಾವುದು ಒಳಿತೋ ಅದನ್ನು ಮುಲಾಜಿಲ್ಲದೇ ಹೇಳಿಬಿಡುವ ತಾಕತ್ತಿತ್ತು ಅವರಿಗೆ.
ಆಶ್ರಮಜೀವನ
ಬೆಂಗಳೂರಿಗೆ ಅಧ್ಯಕ್ಷರಾಗಿ ಬರುವುದಕ್ಕೂ ಮುಂಚಿನ ಅನೇಕ ವರ್ಷಗಳ ಕಾಲ ಕೋಲ್ಕತಾದಲ್ಲಿ ಬ್ರಹ್ಮಚಾರಿಗಳಿಗೆ ಶಿಕ್ಷಣ ನೀಡುವ ಆಚಾರ್ಯರಾಗಿ ಸೇವೆ ಸಲ್ಲಿಸಿದ್ದರು. ಆ ವೇಳೆಯಲ್ಲೇ ಮುಂದೆ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಭೂತೇಶಾನಂದಜೀಯವರನ್ನು ಹತ್ತಿರದಿಂದ ನೋಡಲು ಸಾಧ್ಯವಾಗಿದ್ದು. ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತಿದ್ದ, ತಮ್ಮ ಕೋಣೆಯನ್ನು ತಾವೇ ಸ್ವಚ್ಛಮಾಡಿಕೊಳ್ಳುತ್ತಿದ್ದ ಅವರ ಸರಳತೆಯಿಂದ ಅನನ್ಯ ಪ್ರಭಾವಕ್ಕೆ ಒಳಗಾಗಿದ್ದರು ಅವರು. ಬದುಕಿನುದ್ದಕ್ಕೂ ಅದೇ ಸರಳತೆಯನ್ನು ಉಳಿಸಿಕೊಳ್ಳಲು ನಿಸ್ಸಂಶಯವಾಗಿ ಪ್ರಯತ್ನಿಸಿದ್ದರು.
ಆದರೆ ಆರಂಭದಿಂದಲೂ ಅವರನ್ನು ಕಾಡುತ್ತಿದ್ದ ಆರೋಗ್ಯದ ಸಮಸ್ಯೆ ಮಾತ್ರ ಕೊನೆಯವರೆಗೂ ಅವರನ್ನು ಬಿಡಲೇ ಇಲ್ಲ. ಒಂದು ರೀತಿಯಲ್ಲಿ ಅದರೊಂದಿಗೆ ಹೊಂದಿಕೊಂಡು ಬದುಕುವ ಕಲೆಯನ್ನು ಅವರು ಸಿದ್ಧಿಸಿಕೊಂಡಿದ್ದರು. ‘ಆರೋಗ್ಯ ಹೇಗಿದೆ?’ ಎಂದು ಯಾರಾದರೂ ಕೇಳಿದರೆ ‘ಎರಡು ಅನಾರೋಗ್ಯಗಳ ನಡುವೆ ಒಂದು ಆರೋಗ್ಯ ಇದೆ’ ಎನ್ನುತ್ತಿದ್ದರು. ಆದರೆ ಆ ವಿಚಾರದಲ್ಲಿ ಎಂದಿಗೂ ಕಾಳಜಿ ತಪ್ಪಿದವರಲ್ಲ. ಸಮಯ ಮೀರಿದವರೂ ಅಲ್ಲ. ಸ್ವಲ್ಪ ಆರೋಗ್ಯದಲ್ಲಿ ಏರುಪೇರೆನಿಸಿದರೂ ಯಾರಿಗೆ ವಿಚಾರವನ್ನು ಮುಟ್ಟಿಸಿಬಿಡಬೇಕೋ ಅವರಿಗೆ ತಲಪಿಸಿಬಿಡುತ್ತಿದ್ದರು. ಬೆಂಗಳೂರಿನ ಆಶ್ರಮದಲ್ಲಿ ಸ್ವಾಮಿ ವiಹಾವಾಕ್ಯಾನಂದಜೀ ಈ ವಿಚಾರದಲ್ಲಿ ಅವರಿಗೆ ಬಲಗೈ. ಸ್ವಾಮಿಜೀಯವರ ಆರೋಗ್ಯದಲ್ಲಿ ಸಣ್ಣಮಟ್ಟದ ಬದಲಾವಣೆಯನ್ನೂ ಅವರು ಸೂಕ್ಷ್ಮವಾಗಿಯೇ ಗುರುತಿಸಬಲ್ಲವರಾಗಿದ್ದರು. ಅದಕ್ಕೆ ತಕ್ಕ ವ್ಯವಸ್ಥೆಯನ್ನು ತಕ್ಷಣವೇ ಮಾಡಲಾಗುತ್ತಿತ್ತು ಕೂಡ.
ಈ ಪರಿಯ ದೈಹಿಕ ಅಸೌಕರ್ಯದ ನಡುವೆಯೂ ಸ್ವಾಮಿಜೀಯವರ ಬರವಣಿಗೆಯ ಮೆರವಣಿಗೆ ಮಾತ್ರ ನಿಲ್ಲಲೇ ಇಲ್ಲ. ನಿರಂತರ ಸಂಶೋಧನೆ, ಬರವಣಿಗೆ ನಡೆಯುತ್ತಲೇ ಇರುತ್ತಿತ್ತು. ಸುಮಾರು 30 ವರ್ಷಗಳ ಸುದೀರ್ಘ ಪ್ರಯತ್ನದ ಫಲವಾಗಿ ಅವರು ಬರೆದ ‘ಎನ್ಸೈಕ್ಲೊಪೀಡಿಯಾ ಆಫ್ ಹಿಂದುಯಿಸಂ’ ಮುಂದಿನ ಅನೇಕ ದಶಕಗಳ ಕಾಲ ಪ್ರತಿಯೊಬ್ಬ ಹಿಂದುವಿಗೆ ಆಕರಗ್ರಂಥವಾಗಿ ಉಳಿಯಲಿದೆ. ಅದು ಅವರ ಕಲ್ಪನೆಯ ಕೂಸು. ಅವರು ರಾಮಕೃಷ್ಣಾಶ್ರಮಕ್ಕೆ ಸೇರುವ ಉದ್ದೇಶ ಸ್ವಲ್ಪಮಟ್ಟಿಗೆ ಈಡೇರಿದ್ದು ಈ ಕೃತಿಯ ಮೂಲಕ. ವಿದ್ವದ್ವಲಯ ಈ ಕೃತಿಯನ್ನು ಆತ್ಮೀಯತೆಯಿಂದ ಸ್ವೀಕರಿಸಿತು, ಹೆಮ್ಮೆಯಿಂದ ಗೌರವಿಸಿತು. ನಾರದಭಕ್ತಿಸೂತ್ರದ ಮೇಲೆ, ಪತಂಜಲಿಯ ಯೋಗಸೂತ್ರಗಳ ಮೇಲೆ ಅವರು ಬರೆದಿರುವ ಪುಸ್ತಕಗಳೂ ಜನಮಾನಸವನ್ನು ಮುಟ್ಟಿದಂಥವೇ.
‘ಪ್ರಖರ ಹಿಂದುತ್ವವಾದಿ’ ಪಟ್ಟ
ಅವರ ಈ ಹಿಂದೂ ಪ್ರೇಮ ಮತ್ತು ಅಭಿಮಾನಗಳು ರಾಮಕೃಷ್ಣಾಶ್ರಮದೊಳಗೆ ಅವರಿಗೊಂದು ಪ್ರಖರ ಹಿಂದುತ್ವವಾದಿಯ ಪಟ್ಟವನ್ನು ಕೊಟ್ಟುಬಿಟ್ಟಿದ್ದವು. ಯಾವುದೇ ಹಿಂದೂ ಸಮಾಜಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿದ್ದರೂ ತಾವು ತಪ್ಪಿಸಿಕೊಳ್ಳುತ್ತಿರಲಿಲ್ಲ, ಹೋಗಲಸಾಧ್ಯವಾದರೆ ಆಶ್ರಮದ ಒಬ್ಬರಾದರೂ ಸಂತರನ್ನು ಕಳಿಸಿಕೊಡುತ್ತಿದ್ದರು. ಇಂತಹ ಚಟುವಟಿಕೆಗಳಿಗೆ ನಾವುಗಳಲ್ಲದೇ ಮತ್ತಾರು ಬೆಂಬಲಿಸಬೇಕು – ಎಂಬುದು ಅವರ ಧೋರಣೆಯಾಗಿತ್ತು.
ಈ ರಾಷ್ಟ್ರ ಮತ್ತು ಧರ್ಮಗಳ ಭಕ್ತಿ ಬಾಲ್ಯದಿಂದಲೂ ಅವರಿಗಿದ್ದದ್ದೇ. ಸ್ವಾತಂತ್ರ್ಯ ಬಂದ ಹೊಸ್ತಿಲಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಿದ್ದ ಪುಂಡಮಿತ್ರರನ್ನು ಲಾಠಿಯಿಂದ ಬಡಿದಿದ್ದನ್ನು ಅವರು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ದೇಶದ ಮತ್ತು ಹಿಂದುಗಳ ಸಂಕಟದ ಪರಿಸ್ಥಿತಿಯನ್ನು ನೆನಪಿಸಿಕೊಂಡು ಬಹಳ ದುಃಖಿತರಾಗುತ್ತಿದ್ದರು. ಅಂಬೇಡ್ಕರರ ‘ಥಾಟ್ಸ್ ಆನ್ ಪಾಕಿಸ್ತಾನ್’ ಓದಲು ಹೇಳಿದ್ದು ಅವರೇ. ಜೊತೆಗೆ ಅಂಬೇಡ್ಕರರ ಕುರಿತ ಪುಸ್ತಕವೊಂದನ್ನು ಕೊಟ್ಟು ಅವರ ವಿಚಾರಧಾರೆಯನ್ನು ಓದಿ ಪುಸ್ತಕವೊಂದನ್ನು ರಚಿಸುವಂತೆ ತಾಕೀತು ಕೂಡ ಮಾಡಿದ್ದರು.
ಮೋದಿ ಅಧಿಕಾರಕ್ಕೆ ಬರುವ ಕುರಿತು ಚರ್ಚೆಗೆ ಬಂದಾಗ ಅವರ ಕಣ್ಣಿನ ಮಿಂಚು ಹೇಳತೀರದ್ದು. ಆಗಾಗ ಕರೆದು ರಾಜಕೀಯ ನಡೆಗಳ ವಿವರ ಪಡೆದುಕೊಳ್ಳುತ್ತಿದ್ದರು. ಸದಾ ಹೊಸ ವಿಚಾರಗಳೊಂದಿಗೆ ಅಪ್ಡೇಟ್ ಆಗಿರುತ್ತಿದ್ದರು. ಅನೇಕ ಬಾರಿ ಅವರು ಕೇಳುವ ಪ್ರಶ್ನೆಗೆ ಉತ್ತರಿಸುವುದೇ ಕಷ್ಟವಾಗುತ್ತಿತ್ತು. ಅವರು ಮಾತನಾಡಬೇಕೆಂದು ಕರೆದಾಗಲೆಲ್ಲ ಹೊಸ ವಿಚಾರಗಳನ್ನು ತಿಳಿದುಕೊಂಡೇ ಹೋಗಬೇಕಾಗುತ್ತಿತ್ತು ಮತ್ತು ಹೇಳಿದ ಸಮಯಕ್ಕೂ ಹೋಗಬೇಕಾಗುತ್ತಿತ್ತು. ಸಮಯಪಾಲನೆಯಲ್ಲಿ ವ್ಯತ್ಯಯವಾದರೆ ಅವರು ಬಹಳ ನೊಂದುಕೊಳ್ಳುತ್ತಿದ್ದರು. ಒಮ್ಮೆಯಂತೂ ತಡವಾಗಿ ಹೋಗಿದ್ದಕ್ಕೆ ‘ನೀನು ಅಕಾಲಿ ದಳದವ’ ಎಂದು ಮೂದಲಿಸಿದ್ದರು. ನನಗೆ ಅರ್ಥವಾಗಲು ಸ್ವಲ್ಪ ಸಮಯ ಹಿಡಿದಿತ್ತು.
ಸಂನ್ಯಾಸತ್ವಮೌಲ್ಯಗಳ ಮೊತ್ತ
2014ರ ಚುನಾವಣೆಗೆ ಮತ ಚಲಾವಣೆ ಮಾಡಲೇಬೇಕಂಬ ತುಡಿತ ಅವರಿಗೆ ಅದೆಷ್ಟಿತ್ತೆಂದರೆ ವೋಟರ್ ಐಡಿಕಾರ್ಡನ್ನು ಮಾಡಿಸಿಕೊಟ್ಟು ಮತಹಾಕಲು ಕರೆದೊಯ್ಯಬೇಕಾಗಿ ಬಂತು ಕೂಡ. ಸದಾ ಧರ್ಮಚಿಂತನೆಯಲ್ಲೇ ಇರುವ ಸಂತನೊಬ್ಬ ರಾಷ್ಟ್ರದ ವಿಚಾರದಲ್ಲಿ ಇಷ್ಟು ತೀಕ್ಷ್ಣಮತಿಯಾಗಿರಬಲ್ಲ ಎಂಬುದನ್ನು ನೋಡಲು ಸಾಧ್ಯವಾಗಿದ್ದು ಅವರಲ್ಲಿಯೇ. ಹೀಗಾಗಿ ಸ್ವಾಮಿ ಹರ್ಷಾನಂದಜೀಯವರನ್ನು ‘ಇವರು ಹೀಗೇ’ ಎಂದು ಹೇಳಲು ಸಾಧ್ಯವೇ ಇಲ್ಲ. ನೀವು ಹೀಗೆಂದು ನಿಶ್ಚಯಿಸುವ ವೇಳೆಗೆ ಅವರ ಮತ್ತಾವುದೋ ಗುಣ ನಿಮ್ಮನ್ನು ಆಕರ್ಷಿಸಿರುತ್ತದೆ. ಅದೇ ಸತ್ಯವೆಂದು ಭಾವಿಸಿ ಮುಗಿಸುವ ವೇಳೆಗೆ ಮತ್ತೊಂದೆಡೆಗೆ ಸೆಳೆಯಲ್ಪಟ್ಟಿರುತ್ತೀರಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರು ವಿವೇಕಾನಂದರು ಕಟ್ಟಿಕೊಟ್ಟ ಸಂನ್ಯಾಸತ್ತ್ವದ ಮೌಲ್ಯಗಳ ಒಟ್ಟು ಮೊತ್ತ.
ಕರೋನಾ ದೇಶವನ್ನು ಆಕ್ರಮಿಸಿದ ನಂತರ ಸ್ವಾಮಿಜೀ ಒಂದು ಬಗೆಯಲ್ಲಿ ಒಂಟಿಯೇ ಆದರು. ಹೊರಗಿನಿಂದ ಅವರನ್ನು ನೋಡಲು ಯಾರನ್ನೂ ಬಿಡುತ್ತಿರಲಿಲ್ಲ. ಸೀಮಿತ ವ್ಯಾಪ್ತಿಯಲ್ಲಿಯೇ ತಮ್ಮ ಚಟುವಟಿಕೆಗಳನ್ನು ನಡೆಸುತ್ತಾ ಸಹಜವಾಗಿಯೇ ಕಾಲಕಳೆಯಲಾರಂಭಿಸಿದ್ದರು. ಅನುಷ್ಠಾನ ಹೆಚ್ಚಾಯ್ತೇ ಹೊರತು ಕಡಮೆಯಾಗಲಿಲ್ಲ. ಆಗೊಮ್ಮೆ ಈಗೊಮ್ಮೆ ದೂರದಿಂದ ನೋಡಲು ಸಿಕ್ಕರೆ ಹೆಚ್ಚು ಎನಿಸುವಂತಿತ್ತು.
ಜನವರಿ 12ರಂದು ಬೆಳಗ್ಗೆ ತಮ್ಮ ಅನುಷ್ಠಾನವನ್ನೆಲ್ಲ್ಲ ಮುಗಿಸಿ, ಜಪ-ತಪ-ಪಾರಾಯಣಗಳ ನಂತರ ಧಾರ್ಮಿಕ ಕಾರ್ಯಕಲಾಪಗಳಲ್ಲೂ ಭಾಗವಹಿಸಿ ಕೋಣೆಗೆ ಮರಳಿದ ನಂತರವೇ ಅವರ ಹೃದಯ ಸ್ತಬ್ಧವಾಗಿದ್ದು. ವಿವೇಕಾನಂದರ ಮಾತುಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದ ಸಂತನೊಬ್ಬ ಹೀಗೆ ವಿವೇಕಾನಂದರ ಜಯಂತಿಯ ದಿನವೇ ದೇಹತ್ಯಾಗ ಮಾಡಿ ಮುಕ್ತನಾಗುವುದು ಸಾಮಾನ್ಯ ಸಂಗತಿಯಲ್ಲ. ಹಾಗೆಂದೇ ಸ್ವಾಮಿ ಹರ್ಷಾನಂದಜೀ ಬಹಳ ದೊಡ್ಡ ವ್ಯಕ್ತಿತ್ವದವರು ಎನಿಸಿಬಿಡುತ್ತದೆ. ನಿಜಾರ್ಥದಲ್ಲಿ ಅವರನ್ನು ಕಳೆದುಕೊಂಡಿದ್ದು ನಾಡಿಗೆ ಬಲುದೊಡ್ಡ ನಷ್ಟವೇ. ಮೂರು ದಶಕಗಳಷ್ಟು ಸುದೀರ್ಘಕಾಲ ಬೆಂಗಳೂರು ರಾಮಕೃಷ್ಣಾಶ್ರಮದ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅಸಾಧಾರಣ. ಸಾಮಾನ್ಯರಾಗಿ ನಾವು ಅವರನ್ನು ನೆನಪಿಸಿಕೊಂಡು ಶ್ರದ್ಧೆಯ ನಮನಗಳನ್ನು ಸಲ್ಲಿಸಬಹುದಷ್ಟೇ.
ಎರಡು ಮಹತ್ತ್ವಪೂರ್ಣ ಸಂಘಟನೆಗಳು
ಸ್ವಾಮಿ ಹರ್ಷಾನಂದಜೀಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅಪಾರವಾದ ಗೌರವ ಇತ್ತು. ವಿಶ್ವ ಹಿಂದೂ ಪರಿಷತ್ನ ಅನೇಕ ಪ್ರಮುಖರೊಂದಿಗೆ ನಿರಂತರ ಸಂಪರ್ಕವಿತ್ತಲ್ಲದೆ, ಅವರನ್ನು ತಮ್ಮ ಬಳಿಗೆ ಕರೆಸಿಕೊಂಡು ನಿತ್ಯದ ಆಗು-ಹೋಗುಗಳ ಕುರಿತಂತೆ ಚರ್ಚಿಸುವುದೂ ಇತ್ತು. ಅವರ ಪ್ರಕಾರ ವಿವೇಕಾನಂದರ ಎರಡು ಗುಣಗಳನ್ನು ಎರಡು ಸಂಘಟನೆಗಳು ಸಂಪೂರ್ಣವಾಗಿ ಸ್ವೀಕರಿಸಿವೆ. ರಾ.ಸ್ವ. ಸಂಘ ರಾಜಸಿಕ ಗುಣದ ಮೂರ್ತ ಸ್ವರೂಪವಾದರೆ, ರಾಮಕೃಷ್ಣಾಶ್ರಮ ವಿವೇಕಾನಂದರ ಸಾತ್ತ್ವಿಕ ಚಿಂತನೆಯ ಶಿಲ್ಪ ಎಂದಾಗಿತ್ತು. ಬಹುಶಃ ಈ ಎರಡೂ ಮಹತ್ತ್ವಪೂರ್ಣ ಸಂಘಟನೆಗಳನ್ನು ಇದಕ್ಕಿಂತಲೂ ಸುಂದರವಾಗಿ ಕಡೆದುಕೊಡುವುದು ಸಾಧ್ಯವಿಲ್ಲವೇನೋ! ಇವೆರಡೂ ಸೇರಿದಾಗಲೇ ರಾಷ್ಟ್ರದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವೆಂದೂ ಹೇಳಬಹುದೇನೋ!