ಕಳೆದ ಹದಿನೈದು ತಿಂಗಳಿಂದ ಕೊರೋನಾ ಸಾಂಕ್ರಾಮಿಕವನ್ನು ಎದುರಿಸಲು ದೇಶವೆಲ್ಲ ಸರ್ವಪ್ರಯತ್ನವನ್ನೂ ತೊಡಗಿಸಿ ಒಂದಷ್ಟುಮಟ್ಟಿನ ನಿಯಂತ್ರಣವನ್ನು ಸಾಧಿಸಿತ್ತು. ಆದರೆ ಎರಡನೇ ಅಲೆಯ ಆಘಾತದ ಪ್ರಮಾಣವೂ ವೇಗವೂ ಎಲ್ಲ ನಿರೀಕ್ಷೆಯನ್ನೂ ಮೀರಿಸಿದೆ. ಮೊದಲ ಅಲೆಯ ಅವಧಿಯಲ್ಲಿ 13 ತಿಂಗಳಲ್ಲಿ ಮೃತರ ಸಂಖ್ಯೆ 4,620ರಷ್ಟು ಇತ್ತು. ಈಗಿನ ಅಲೆಯಲ್ಲಾದರೋ ಒಂದೂವರೆ ತಿಂಗಳೊಳಗೇ ಅಷ್ಟು ಜನ ಅಸುನೀಗಿದ್ದಾರೆ. ಹಿಂದೆಯೇ ದೇಶದಲ್ಲಿ ಆರೋಗ್ಯಸೇವಾ ಲಭ್ಯತೆ ಜನಸಂಖ್ಯೆಗೆ ಪರ್ಯಾಪ್ತವಾಗುವಷ್ಟು ಇರಲಿಲ್ಲ. ಈಗಿನ ಸ್ಥಿತಿಯಂತೂ ಆತಂಕಕಾರಿಯೇ ಆಗಿದೆ. ಅವಶ್ಯ ಪ್ರಮಾಣದ ಲಸಿಕೆ ಪೂರೈಕೆಯಾಗುತ್ತಿಲ್ಲ. ಒಂದು ಹಂತದಲ್ಲಿ ವೆಂಟಿಲೇಟರುಗಳ ಕೊರತೆ ಸಮಸ್ಯೆಯಾಗಿತ್ತು. ಈಗ ಆಮ್ಲಜನಕದ ಕೊರತೆ ಭರಿಸಲಾಗದಷ್ಟಾಗಿದೆ. ಕೊರೋನಾ ಶ್ವಾಸಕೋಶಕ್ಕೆ ಸಂಬಂಧಿಸಿದುದೂ ಆಗಿರುವುದರಿಂದ ವೆಂಟಿಲೇಟರ್ ಮತ್ತು ಆಮ್ಲಜನಕದ ಅಧಿಕ ಬೇಡಿಕೆಯನ್ನು ಮುಂಬರುವ ದಿನಗಳಲ್ಲಿ ಸಮರ್ಥವಾಗಿ ಪೂರೈಸಲು ಸಮರೋಪಾದಿಯಲ್ಲಿ ಸಜ್ಜಾಗಬೇಕಾಗಿದೆ. ಎರಡನೇ ಅಲೆಯ ತೀವ್ರತೆಯೂ ವ್ಯಾಪಕತೆಯೂ ಪೂರ್ಣ ಅನಿರೀಕ್ಷಿತವಾಗಿದ್ದುದರಿಂದ ಸರ್ಕಾರದ ವಿವಿಧ ಅಂಗಗಳ ನಡುವೆ ಹಲವೊಮ್ಮೆ ಹೊಂದಾಣಿಕೆಯ ಕೊರತೆ ಕಂಡದ್ದು ಅಸಹಜವೇನಲ; ಹೆಚ್ಚಿನ ಆಮ್ಲಜನಕೋತ್ಪಾದಕ ಘಟಕಗಳ ಸ್ಥಾಪನೆಯ ಯೋಜನೆಯನ್ನು ಕೇಂದ್ರಸರ್ಕಾರ ಕಳೆದ ವರ್ಷವೇ ಘೋಷಿಸಿತ್ತಾದರೂ ಯೋಜನೆಯ ಕಾರ್ಯಾನ್ವಯ ಸ್ವಲ್ಪಮಟ್ಟಿಗೆ ಸೊರಗಿತ್ತು.
ಈಗಲಾದರೊ ಅಂತಹ ಆಗಂತುಕ ನ್ಯೂನತೆಗಳಿಗೆ ಅವಕಾಶ ನೀಡದೆ ದಾಢ್ರ್ಯದಿಂದ ಹೆಜ್ಜೆಹಾಕುವುದು ಅನಿವಾರ್ಯವೇ ಆಗಿದೆ. ಈಗಿನದನ್ನು ತುರ್ತುಪರಿಸ್ಥಿತಿಯೆಂದು ಪರಿಗಣಿಸಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವೂ ಎಚ್ಚರಿಸಿರುವುದು ಸಕಾಲಿಕವಾಗಿದೆ.
ಮೇ ನಡುಭಾಗದ ವೇಳೆಗೆ ತೀಕ್ಷ್ಣಕ್ರಮಗಳಿಂದಾಗಿ ಸಾಂಕ್ರಾಮಿಕ ಪ್ರಸರಣ ಇಳಿಮುಖವಾಗಿರುವುದು ಸ್ವಲ್ಪಮಟ್ಟಿಗೆ ಸಮಾಧಾನ ನೀಡಿದೆ.