ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ
ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ
– ಅಡಿಗ
ಅಂದು ಆಗಸದ ಹಂಡೆಗಳಿಗೆ ತೂತುಬಿದ್ದಂತೇ ಬೆಳಗ್ಗಿನಿಂದಲೇ ಜೋರುಮಳೆ ಸುರಿಯತೊಡಗಿತ್ತು. ಬಾಳೂರಿನ ಕರುಣಾನದಿಯು ಸೊಕ್ಕಿ ಹರಿಯುವ ಹುಮ್ಮಸ್ಸಿನಲ್ಲಿದ್ದಳು. ಸಂಜೆ ನಾಲ್ಕರ ಸುಮಾರಿಗೆ ಲೈಟುಕಂಬಕ್ಕೆ ಬಡಿದ ಸಿಡಿಲಿನ ನೆಪದಲ್ಲಿ ಮತ್ತೆ ವಿದ್ಯುತ್ ಕೈಕೊಟ್ಟಿತ್ತು. ಲಾಟೀನು ಹೊತ್ತಿಸಿಟ್ಟುಕೊಂಡು ಹೊರಜಗುಲಿಯಲ್ಲಿ ಕುಳಿತು ಅಂಗಳದಲ್ಲಿ ಕತ್ತಲು ಸುರಿಯುವುದನ್ನೇ ನೋಡುತ್ತಿದ್ದರು ಮೋನಪ್ಪ ಮಾಸ್ತರರು. ಮಾಡಿನಿಂದ, ಎಲೆಗಳಿಂದ ಹನಿಯುತ್ತಿದ್ದ ಚಿಟಪಟ ನೀರಿನ ಶಬ್ದವನ್ನು ಬಿಟ್ಟರೆ ಮತ್ತೇನೂ ಸದ್ದಿರಲಿಲ್ಲ. ಆ ದಿನದ ತನ್ನ ಕೋಟ ಭರ್ತಿ ಮಾಡಿ ನಿದ್ದೆಗೆ ಜಾರಿದ್ದ ಮಳೆಯು ಹನಿಯರೂಪದಲ್ಲಿ ಸಣ್ಣ ಗೊರಕೆಯನ್ನು ಹೊರಡಿಸುತ್ತಿರುವಂತೆ ಅವರಿಗದು ಭಾಸವಾಯಿತು. ಹೊಟ್ಟೆ ಸಣ್ಣದಾಗಿ ಚುರ್ರ್ ಎನ್ನಲು, ರಾತ್ರಿಯ ಊಟಕ್ಕೆ ಗಂಜಿಯನ್ನಿನ್ನೂ ಬೇಯಿಸಿಲ್ಲ ಎಂಬುದು ನೆನಪಿಗೆ ಬಂತು. ಸಾಮಾನ್ಯವಾಗಿ ಮಧ್ಯಾಹ್ನ ಮಾಡಿದ್ದನ್ನೇ ರಾತ್ರಿ ಬಿಸಿಮಾಡಿಕೊಳ್ಳುತ್ತಿದ್ದ ಮಾಸ್ತರರು ಕಳೆದೆರಡು ದಿನಗಳಿಂದ ಊರಲ್ಲಿರದಿದ್ದುದ್ದರಿಂದ ಅಡುಗೆಮನೆಯೊಳಗಿನ ಪಾತ್ರೆಗಳೆಲ್ಲ ಒಣಗಿ ಒಪ್ಪಾಗಿ ಕುಳಿತಿದ್ದವು. ‘ಛೇ, ಸಂಜೆ ಮನೆಗೆ ಬಂದ ತಕ್ಷಣವೇ ಗಂಜಿಯನ್ನು ಬೇಯಿಸಲು ಇಟ್ಟುಬಿಡಬೇಕಿತ್ತು. ಈಗ ಈ ಲಾಟೀನು ದೀಪದಲ್ಲಿ ಪರದಾಡಬೇಕಾಗಿದೆ? ಹಾಳು ಹೊಟ್ಟೆಯಿದು. ತುಂಬಿದಷ್ಟೂ ಬಾಯ್ತೆರೆಯುವುದನ್ನಂತೂ ನಿಲ್ಲಿಸದು. ಇಷ್ಟಕ್ಕೂ ಹೊಟ್ಟೆಯದೇನು ತಪ್ಪು? ಎಲ್ಲ ಕಿತಾಪತಿ ಈ ಮನಸ್ಸಿನದು… ಇಷ್ಟೊತ್ತಿಗೆ ತಿಂಡಿ, ಅಷ್ಟೊತ್ತಿಗೆ ಊಟ, ಈಗ ಚಾ, ಕಾಪಿಯ ಸಮಯ ಎಂದು ದೇಹಕ್ಕೆ ಆಗಾಗ ನೆನಪಿಸಿ ತನ್ನ ಚಪಲ ತೀರಿಸಿಕೊಳ್ಳುತ್ತಿರುತ್ತದೆ. ನಾನೋ ಹೊಟ್ಟೆಯ ಕುಣಿತಕ್ಕೆ ನಾಲ್ಕು ಲೋಟ ನೀರು, ಎರಡು ಬಾಳೆಹಣ್ಣು ಕಾಣಿಸಿ ಸುಮ್ಮನಾಗಿಸಿಯೇನು? ಆದರೆ ಪಾಪದ ಆ ಎರಡು ನಾಯಿಗಳ ಹೊಟ್ಟೆಪಾಡಾದರೂ ನೋಡಬೇಕಲ್ಲ? ತುತ್ತು ಗಂಜಿಗಾಗಿ ಬಾಲ ಅಲ್ಲಾಡಿಸುತ್ತ ಸರಿಯಾದ ಹೊತ್ತಿಗೆ ಹಿತ್ತಲ ಕಡೆಗೆ ಬಂದೇ ಬಿಡುತ್ತವೆ ಬಡಜೀವಿಗಳು.. ಸಾವಿತ್ರಿಯಿದ್ದಿದ್ದರೆ?’ ಮನಸು ಗತಕಾಲದತ್ತ ಹೊರಳಿದ್ದೇ, ಎಚ್ಚೆತ್ತುಕೊಂಡು ತಲೆಕೊಡವಿಕೊಳ್ಳುತ್ತ ಬಾಯೊಳಗೊಂದು ಸಣ್ಣ ಅಡಿಕೆಹೋಳನ್ನು ಹಾಕಿಕೊಂಡವರೇ ಅಡುಗೆಮನೆಯತ್ತ ದಾಪುಗಾಲಿಕ್ಕಿದರು.
ಅರ್ಧಗಂಟೆಯಲ್ಲಿ ಬಿಸಿಬಿಸಿ ಗಂಜಿಯ ಜೊತೆಗೆ ಕೆಂಪುಮೆಣಸಿನ ಕಾಯಿಚಟ್ನಿಯೂ ತಯಾರಾಗಿಬಿಟ್ಟಿತ್ತು. ಮೊದಲು ರೂಬಿ ಮತ್ತು ಟಾಮಿಗೆ ಊಟವನ್ನಿತ್ತು ತಾವೂ ಉಂಡು, ಅಡುಗೆಕಟ್ಟೆಯನ್ನೆಲ್ಲ ಒರೆಸಿಟ್ಟರು. ಪಾತ್ರೆಗಳನ್ನು ತೊಳೆಯಲು ಅವರಿಗೆ ಅಂದೇಕೋ ಉದಾಸೀನವೆನ್ನಿಸಿ ಅವುಗಳಿಗೆ ನೀರು ಸುರಿದು ಹಿತ್ತಲಿನ ಬುಟ್ಟಿಗೆ ಹಾಕಿದವರೇ ಎಲ್ಲ ಬಾಗಿಲುಗಳನ್ನೂ ಜಡಿದು, ದೊಡ್ಡ ಬ್ಯಾಟರಿಯನ್ನು ಹಿಡಿದು ತಲೆಯಿಂದ ಮೈಯವರೆಗೂ ಇಳಿಯುವಂತೆ ಕಂಬಳಿಯನ್ನು ಹೊದ್ದುಕೊಂಡು ತೋಟ ಕಾಯಲು ಹೊರಟುಬಿಟ್ಟರು.
ಮೋನಪ್ಪರ ಪಾಲಿಗೆ ಇದ್ದಿದ್ದು ಎರಡೆಕೆರೆ ತೋಟವಷ್ಟೇ. ಆದರೆ ಅದನ್ನೇ ಅವರು ನಾಲ್ಕು ಜನ ಆಳುಗಳನ್ನು ಜೊತೆಗೂಡಿಸಿಕೊಂಡು ತಾವೂ ಸಾಕಷ್ಟು ತಮ್ಮ ಕೈ ಕೆಸರು ಮಾಡಿಕೊಳ್ಳುತ್ತ ಬಾಳೆಗಿಡ, ತೆಂಗು, ಹಲಸು, ಒಂದಿಷ್ಟು ಅಡಿಕೆಮರಗಳಿಂದ ಸಿಂಗರಿಸಿ ಫಲವತ್ತಾಗಿಸಿದ್ದರು. ಇತ್ತೀಚೆಗೆ ತೋಟದ ಸೆರಗಿನಲ್ಲೇ ಇದ್ದ ಪುಟ್ಟ ಕಾಡಿನಿಂದ ಬಾಳೆಗೊನೆಯ ವಾಸನೆ ಹಿಡಿದು ಹಾರಿ ಬರುತ್ತಿದ್ದ ಮಂಗ, ಹಂದಿ, ನರಿಗಳ ಕಾಟವಲ್ಲದೇ, ಊರಿನ ಒಂದಿಷ್ಟು ಕಿಡಿಗೇಡಿಗಳ ಕಳ್ಳತನದ ಉಪದ್ರವವೂ ಸೇರಿಕೊಂಡಿದ್ದರಿಂದ ರಾತ್ರಿಯ ಹೊತ್ತು ತಾವೇ ಖುದ್ದಾಗಿ ಕಾಯಲು ಮಾಳಕ್ಕೆ ಹೋಗುತ್ತಿದ್ದರು. ಎಂದಿನಂತೇ ಇಂದೂ ಬಿರಬಿರನೆ ಹೆಜ್ಜೆ ಹಾಕುವಾಗಲೇ ಟಾಮಿ ತನ್ನೊಡೆಯನನ್ನು ಕಾಯಲೆಂದು ಹಿಂಬಾಲಿಸಿದರೆ, ರೂಬಿ, ಮನೆಯೊಡೆಯನಿಲ್ಲದ ಮನೆಯನ್ನು ಕಾಯಲು ಬಾಗಿಲ ಬಳಿ ಇದ್ದ ತನ್ನ ಗೂಡನ್ನು ಹೊಕ್ಕಿ ಕುಳಿತಳು.
*****
ಮೋನಪ್ಪರು ಇನ್ನೇನು ತೋಟಕ್ಕಿಳಿಯಬೇಕೆಂದು ದಣಪೆ ಕೋಲನ್ನು ಸರಿಸಬೇಕೆನ್ನುವಾಗಲೇ ಹಿಂದಿನಿಂದ ಯಾರೋ ಇಬ್ಬರು ತಮ್ಮ ಹೆಸರನ್ನು ಜೋರಾಗಿ ಕೂಗಿದ್ದು ಕೇಳಿಬರಲು ಸರಕ್ಕನೆ ಹಿಂದಿರುಗಿದರೆ, ಮಕ್ಕಿಗದ್ದೆ ಶ್ರೀಧರ ಮತ್ತು ಅವನ ತಮ್ಮ ವೆಂಕಟೇಶ ಬ್ಯಾಟರಿ ಬೀಸುತ್ತ ಬರುತ್ತಿದ್ದರು. “ಸದ್ಯ ಮೇಷ್ಟೇ ಇಲ್ಲೇ ಸಿಕ್ಕಿದ್ರಿ ನೀವು, ಮಾಳ ಹತ್ತಿದ್ದಿದ್ರೆ ಅಲ್ಲಿವರೆಗೆ ಬಂದು ಕರೆದುಕೊಂಡು ಹೋಗ್ಬೇಕಾಗಿತ್ತು. ಅಷ್ಟರಲ್ಲಿ ನಮ್ಮ ರಾಜೀವನ ಸ್ಥಿತಿ ಏನಾಗ್ತಿತ್ತೋ ಏನೋ.. ಬನ್ನಿ ಬೇಗ ಹೊರಡುವ” ತಲೆಬುಡ ಇಲ್ಲದೇ ಗಡಿಬಿಡಿ ಮಾಡಿದ್ದ ವೆಂಕಟೇಶ. ಅವನು ಯಾವತ್ತೂ ಹಾಗೆಯೇ, ಸ್ವಲ್ಪ ಅವಸರದ ಮನುಷ್ಯನೇ. ಆದರೆ ಇಂದು ಅವರಿಬ್ಬರ ಮುಖದಲ್ಲೂ ಗಾಬರಿ ಎದ್ದು ಕಾಣುತ್ತಿತ್ತು. ಬ್ಯಾಟರಿ ಬೆಳಕಲ್ಲೂ ಅವರಿಬ್ಬರ ಹಣೆಯಲ್ಲಿ ಬೆವರು ಮೂಡಿದ್ದನ್ನು ಗಮನಿಸಿ, ಮೋನಪ್ಪರಿಗೆ ಅಚ್ಚರಿಯ ಜೊತೆ ಆತಂಕವಾಯಿತು.
“ಅಲ್ಲಾ ಮಾರಾಯಾ, ನೀ ಹೀಂಗೆ ಹಿಂದೆ, ಮುಂದೆ ಏನೂ ಹೇಳದೇ ಹೊರಡಿ ಅಂದ್ರೆ ಎಂತ ಮಾಡೋದು ನಾನು? ಎಲ್ಲಿಗೆ, ಯಾಕಾಗಿ ಅಂತಾದ್ರೂ ಹೇಳ್ರಪ್ಪ… ಹೌದು, ರಾಜೀವನಿಗೆಂತ ಆಯ್ತು? ಎರಡು ದಿನದ ಹಿಂದೆಯಷ್ಟೇ ಶಾಸ್ತ್ರಿಗಳು ಮಕ್ಕಿಗದ್ದೆ ಅಡಿಕೆಮಂಡಿಯಲ್ಲಿ ಸಿಕ್ಕಿದ್ದರಲ್ಲಾ? ಆರಾಮಾಗಿ ಮಾತಾಡಿದ್ದರು. ನಾನು ನನ್ನ ಸೀತಕ್ಕನಿಗೆ ಹುಶಾರಿಲ್ಲ ಅಂತ ನೋಡ್ಕೊಂಡು ಬರೋದಿಕ್ಕೆ ಹರಿಪುರಕ್ಕೆ ಮೊನ್ನೆ ಬೆಳಗ್ಗೆ ಹೋಗಿದ್ದೆ. ಈವತ್ತು ಸಂಜೆಯೊಳಗೆ ಅಂಥದ್ದೇನಾಯ್ತಪ್ಪಾ?” ಅವರು ತಲೆಕೆರೆದುಕೊಳ್ಳುತ್ತ ಇನ್ನೂ ಏನನ್ನೋ ಕೇಳಲು ಹೊರಟಂತೆಯೆ, ಮಧ್ಯೆ ಬಾಯಿಹಾಕಿದ ಶ್ರೀಧರ, “ಮೇಸ್ಟ್ರೇ ಎಲ್ಲ ವಿವರಿಸ್ತೇವೆ.. ಮೊದ್ಲು ನೀವು ನಮ್ಮ ಜೊತೆಗೆ ಬನ್ನಿ… ಕಾರು ತಂದಿದ್ದೇನೆ… ಆದಷ್ಟು ಬೇಗ ಹೊರಡುವ”ಅಸಹನೆಯಿಂದ ಅಕ್ಷರಶಃ ಅವರ ಕೈಯನ್ನೆಳೆದುಕೊಂಡೇ ಮುನ್ನಡೆಯಲು, ತುಸು ಅಸಮಾಧಾನವಾದರೂ, ಪರಿಸ್ಥಿತಿ ಏನೋ ಗಂಭೀರವೇ ಇದ್ದಿರಬೇಕು, ಇಲ್ಲದಿದ್ದರೆ ಈ ಹುಡುಗರು ಹೀಗೆ ಮಾಡುವವರಲ್ಲ ಎಂದು ಸಮಾಧಾನಿಸಿಕೊಂಡ ಮೋನಪ್ಪರು ತನ್ನನ್ನೇ ಹಿಂಬಾಲಿಸತೊಡಗಿದ ಟಾಮಿಗೆ ಜೋರಾಗಿ ಗೂಡಿನೊಳಗೆ ಹೋಗಲು ಆದೇಶಿಸಿ, ಅದು ಹಿಂದಿರುಗಿದ್ದನ್ನು ಖಾತ್ರಿಮಾಡಿಕೊಳ್ಳುತ್ತ ತಲೆಯನ್ನೇರಿದ್ದ ಕಂಬಳಿಕೊಪ್ಪೆಯನ್ನು ಅಲ್ಲೇ ಮಾಡಿನ ತುದಿಗೆ ಸಿಕ್ಕಿಸಿಟ್ಟು ಅವಸರದಲ್ಲಿ ಗಾಡಿಯನ್ನೇರಿ ಕುಳಿತರು.
ಕಾರು ಮಣ್ಣುರಸ್ತೆಯನ್ನು ಬಿಟ್ಟು, ಟಾರುರಸ್ತೆಗೆ ತಿರುಗಿದ್ದೇ ವೇಗ ಪಡೆಯಿತು. ಇನ್ನು ತಡೆಯಲಾಗದು ಎಂದುಕೊಂಡ ಮೋನಪ್ಪರು “ವೆಂಕ್ಟ, ನೀನಾದ್ರೂ ಏನಾಯ್ತು ಅಂತ ಹೇಳೋ.. ನಂಗೆ ಆತಂಕವಾಗ್ತಿದೆ ನಿಮ್ಮಿಬ್ರ ಹುಚ್ಚಾಟ ನೋಡಿ..” ಎಂದು ತುಸು ಗಟ್ಟಿಯಾಗಿ ಹೇಳಲು, ಅವರ ಧ್ವನಿಯಲ್ಲಿದ್ದ ಗಾಭರಿಯನ್ನು ಗುರುತಿಸಿದ ವೆಂಕಟೇಶ, ಹಿಂದಿನ ಸೀಟಿನ ನಡುವಿಗೆ ಬಂದು, ಅವರತ್ತ ತುಸು ಬಾಗಿದವನೇ ಆ ಒಂದು ಸುದ್ದಿಯನ್ನು ಆಸ್ಫೋಟಿಸಿದ!
“ಮೇಷ್ಟ್ರೇ ಎಂತ ಹೇಳೂದ್ರ? ನಮ್ಮ ರಾಜೀವಂಗೆ ಅದೆಂತ ಗ್ರಹಚಾರ ವಕ್ಕರಿಸಿದ್ಯೋ ಏನೋ? ಮೊನ್ನೆ ರಾತ್ರಿ ಶಾಸ್ತ್ರಿಮಾವ, ವಿಶಾಲತ್ತೆ ಊಟ ಮುಗ್ಸಿದ್ರೋ ಇಲ್ವೋ, ಹೊಳೆಯಾಚೆಯ ಪಕ್ರುದ್ದೀನ್ ಕಾಲೊನಿಯ ಕೆಲವರು ಬಂದು ಮೆತ್ತಿಯ ಮೇಲೆ ಏನೋ ಕೆಲಸದಲ್ಲಿದ್ದ ರಾಜೀವನ ಜೋರಾಗಿ ಕರೆದು ಬೊಬ್ಬೆ ಹಾಕಿ ಬೈದು, ಭಯಂಕರ ಗಲಾಟೆ ಎಬ್ಬಿಸಿಬಿಟ್ಟಿದ್ರು. ವಿಷಯ ಪಟೇಲ್ರ ತನಕನೂ ಹೋಗಿ, ಕೊನೆಗೆ ಪರಿಸ್ಥಿತಿ ಬಿಗಡಾಯ್ಸಿದ್ದು ನೋಡಿ ಎಲ್ಲರೂ ಒಟ್ಟಾಗಿ ರಾತ್ರೋರಾತ್ರಿ ನಮ್ಮ ಎಸ್ಸೈ ಸತೀಶ್ ಸಾಹೇಬ್ರನ್ನೂ ಕರೆಸಿ, ಶಾಲೆ ಚಾವಡಿಯಲ್ಲಿ ಸಭೆ ಸೇರ್ಸಿದ್ದಾಯ್ತು. ನಮ್ಗಂತೂ ಕೈಕಾಲೇ ಆಡ್ಲಿಲ್ಲ ಆವತ್ತು. ಕಡೆಗೆ ನೋಡಿದ್ರೆ ಅದೆಲ್ಲಾ ಆ ಲತೀಫನ ಲೋಫರ್ ಗೆಳೆಯ ಸೈಫನ ಕರಾಮತ್ತು! ಆಗಿದ್ದಿಷ್ಟೇ… ಮೊನ್ನೆ ಬೆಳಗ್ಗಿನಿಂದ ನಮ್ಮ ಬಾಳೂರಲ್ಲಿ ಮೋಡ ಕಡ್ಕೊಂಡು ಬಿದ್ದಿದ್ದು ನಿಮ್ಗೂ ಗೊತ್ತು? ಜೋರುಮಳೆಯಲ್ಲಿ ಹರಿಪುರದಿಂದ ಬರುತ್ತಿದ್ದ ಬಸ್ಸು ಮೊನ್ನೆ ಸಂಜೆ
ಕೆಟ್ಟು ಅರ್ಧದಲ್ಲಿ ನಿಂತಿತ್ತಾ. ಲತೀಫನ ಅಕ್ಕಾ, ಅದೇ ನಿಮ್ಮ ಸ್ಟುಡೆಂಟಾಗಿದ್ದೋಳು ಸಕೀನಾ. ಒದ್ದೆಮುದ್ದೆಯಾಗಿ ಬಸ್ಸ್ಟಾಂಡಿನಲ್ಲಿ ನಿಂತಿದ್ಳಂತೆ. ಆಕೆ ಹೈಸ್ಕೂಲಿನಲ್ಲಿ ನಮ್ಮ ರಾಜೀವನ ಕ್ಲಾಸ್ಮೇಟೂ ಆಗಿದ್ಳಂತಲ್ಲ.. ಅದೂ ಅಲ್ದೇ ಅವಳ ಅಪ್ಪ ರಿಜ್ವಾನ್ ಸಾಹೇಬರೂ ಎಲ್ಲರಿಗೂ ಗೊತ್ತು ಬಿಡಿ. ಅವ್ರ ವಾಚ್ರಿಪೇರಿ ಅಂಗ್ಡಿಗೆ ನಾವೆಲ್ಲ ನಮ್ಮ ವಾಚು ತಗೊಂಡು ಹೋಗ್ತಿರ್ತೇವೆ. ರಾಜೀವಂಗೂ ಪರಿಚಯ ಇತ್ತಲ್ಲಾ. ಹೀಗಾಗಿ ಅದೇ ಸಲಿಗೆಯಲ್ಲಿ ಅಂವ ಸಕೀನಾಳಿಗೆ ಮನೆಗೆ ಬಿಡ್ತೀನಿ ಬಾ ಅಂತ ಕರೆದ್ನಂತೆ. ಯಾರಿಗಾದ್ರೂ ಫೆÇೀನ್ ಮಾಡಿ ಕರ್ಸೋಣ ಅಂದ್ರೆ ಆ ಜಾಗ್ದಲ್ಲಿ ಸಿಗ್ನಲ್ ಬೇರೆ ಸಿಗಲ್ವಲ್ಲ… ಸರಿ, ಅವ್ಳೂ ಮೊದ್ಲು ಅನುಮಾನ ಮಾಡಿದ್ಲಂತೆ.. ರಾಜುನೇ ಆಮೇಲೆ ‘ಒಬ್ಳೇ ಎಷ್ಟೊತ್ತು ಇಲ್ಲಿ ನಿಲ್ತೀಯಾ… ಬೇರೆ ಬಸ್ಸು ಬರೋದು ಡೌಟು… ಈ ಮಳೆಯಂತೂ ಸದ್ಯಕ್ಕೆ ನಿಲ್ಲೋದಲ್ಲ. ನದಿ ಉಕ್ಕಿ ಹರೀತಿದೆ. ಸೇತುವೆ ಏನಾದ್ರೂ ಮುಳ್ಗೋದ್ರೆ ಮನೆ ಕಡೆ ಹೋಗೋಕೆ ಆಗಲ್ಲ. ನಿನ್ನ ಮನೆ ಮುರ್ಕಿವರೆಗೆ ಬಿಟ್ಟೋಗ್ತೀನಿ ಬಾ’ ಎಂದು ಒತ್ತಾಯಿಸಿ ಕರೆದಿದ್ದಂತೆ. ಆಮೇಲೆ ಅವ್ಳಿಗೂ ಅದು ಹೌದು ಅನ್ನಿಸಿರ್ಬೇಕು? ಹೇಗೂ ತನಗೆ
ಗೊತ್ತಿರೋ ಜನ ಎಂದು ಹತ್ತಿದ್ದಾಳೆ. ಅಂವ ಅವ್ಳನ್ನು ಮನೆಗಿಂತ ಸ್ವಲ್ಪ ದೂರವೇ ಇಳ್ಸಿ ಹೋಗಿದ್ರೂ ಅದು ಹೇಗೋ ಆ ಸೈಫನ ಕಣ್ಣಿಗೆ ಬಿತ್ತಾ. ಹಾಳಾದವ ಅದ್ಕೆ ಉಪ್ಪು ಖಾರ ಎಲ್ಲ ಹಾಕಿ ಲತೀಫನಿಗೆ ಹೇಳಿ, ಅದೇ ರಾತ್ರಿಹೊತ್ತಿಗೆ ಜೋರು ಗಲಾಟೆ ಆಗೋಯ್ತು. ‘ಲೋ ರಾಜೀವ.. ನಿಮ್ಮ ಕಡೆ ಮನೇಲಿರೋ ಹುಡುಗ್ರ ಶಾದಿಗೆ ಹುಡ್ಗಿ ಸಿಕ್ಕುದಿಲ್ಲ ಅಂತ ನಮ್ಮ ಕಡೆ ಹುಡ್ಗೀರಿಗೆ ಕಣ್ಣು ಹಾಕ್ತಿದ್ದೀಯೇನೋ ಬದ್ಮಾಶ್? ಸಕೀನಾಗ್ ತಲಾಕ್ ಆದ್ರೆ ಅವ್ಳು ಬಿಟ್ಟಿ ಸಿಕ್ತಾಳೆ ಅಂದ್ಕೊಡ್ರಾ ಹರಾಮ್ಕೋರ್’ ಅಂತೆಲ್ಲಾ ಸೈಫ್ ಕಡೆಯವರು ಕೂಗಾಡಿದ್ರು. ಪಾಪ ಶಾಸ್ತ್ರಿಮಾವ, ವಿಶಾಲತ್ತೆ ಪರಿಸ್ಥಿತಿ ಕೇಳೋದೇ ಬ್ಯಾಡ. ರಾಜೀವನ ಜೊತೆ ಜಟಾಪಟಿಯಾಗಿ ಕಡೆಗೆ ನಮ್ಮ ಇನ್ಸ್ಪೆಕ್ಟ್ರು ಸಾಹೇಬರು ಗರಂ ಆಗಿ, ಬಾಯಿ ಜೋರುಮಾಡಿದ್ದೇ ಎಲ್ಲಾ ಸ್ವಲ್ಪ ಹೊತ್ತು ತೆಪ್ಪಗಾದ್ರು. ಅಂತೂ ಇಂತೂ ಅವ್ರನ್ನೆಲ್ಲಾ ಒತ್ತಾಯಿಸಿ, ಸಕೀನಾಳನ್ನೇ ಕರೆದು ಕೂರಿಸ್ಕೊಂಡು ವಿಷ್ಯವನ್ನೆಲ್ಲಾ ಹೊರಹಾಕ್ಸಿದ್ದಾಯ್ತು. ಅಲ್ಲಿವರೆಗೂ ರಾಜೀವ ಎಷ್ಟು ಹೇಳಿದ್ರೂ ಅವ್ರು ನಂಬ್ತಿರ್ಲಿಲ್ಲ. ಅಂತೂ ಬೆಳಗಿನ ಜಾವದ ಹೊತ್ತಿಗೆ ಎಲ್ಲ ತೆಪ್ಪಗೆ ಮನೆಗೆ ಹೋಗಿದ್ದಾಯ್ತು. ಪಾಪ, ಸಕೀನಾಳಿಗೂ ಸಮಾ ಹೊಡ್ದು ಬಡ್ದು ಮಾಡಿ ಅವ್ಳನ್ನ ಈವತ್ತು ವಾಜೂರಿನಲ್ಲಿರೋ ಅವ್ಳ ಸೋದರತ್ತೆ ಮನೆಗೆ ಕಳ್ಸಿಬಿಟ್ಟಿದ್ದಾರಂತೆ. ರಾಜೀವ ಆ ಘಟನೆಯಾದ್ಮೇಲೆ ತುಂಬಾ ಬೇಜಾರಲ್ಲಿದ್ದಾನೆ. ನಾವೆಲ್ಲಾ ನಿನ್ನೆ ಸಂಜೆವರೆಗೂ ಅವನ ಜೊತೆಗೇ ಇದ್ದು ಧೈರ್ಯ ಕೊಟ್ಟಿದ್ದೆವು ಸಾರ್. ಆದರೆ ಈಗ ಎರಡು ತಾಸಿನ ಹಿಂದೆ ವಿಶಾಲತ್ತೆ ಅಳ್ತಾ ಫೋನ್ ಮಾಡಿದ್ರು. ‘ನೀವಿಬ್ರೂ ಬೇಗ ಬನ್ನಿ, ರಾಜು ಊಟಕ್ಕೂ ಕೆಳಗೆ ಬಂದಿಲ್ಲ, ಮಾತೂ ಆಡ್ತಿಲ್ಲ.. ಬಾಗ್ಲು ಜಡ್ಕೊಂಡು ಕೂತಿದ್ದಾನೆ’ ಅಂತ ಆತಂಕದಲ್ಲಿ ಕರೆದ್ರು. ನಾವೂ ತಕ್ಷಣ ಅಲ್ಲಿಗೆ ಹೋಗಿ ಬಾಗಿಲು ಬಡ್ದು ಸಾಕಷ್ಟು ಕೂಗಿ ಕರ್ದದ್ದಾಯ್ತು. ಸುದ್ದಿನೇ ಇಲ್ಲಾ ಪುಣ್ಯಾತ್ಮಂದು! ಕಡೆಗೆ ತಲೆ ಓಡ್ಸಿ, ಬಾಲ್ಕನಿ ಹತ್ತಿ ಆ ಕಡೆಯಿದ್ದ ಸಣ್ಣ ಕಿಟಕಿಯಿಂದ ಇಣಿಕಿ ನೋಡಿದ್ರೆ ಸದ್ಯ ಅನಾಹುತ ಏನೂ ಮಾಡ್ಕೊಂಡಿರ್ಲಿಲ್ಲ. ಮಂಚದ ಮೇಲೆ ಅಂಗಾತ ಮಲಗಿ ತಾರಸಿ ನೋಡ್ತಿದ್ದಾನೆ ಭೂಪ. ಸಮಾ ಉಗೀಬೇಕು ಅಂತ ಸಿಟ್ಟುಕ್ಕಿ ಬಂತು ನಮ್ಗೆ. ಆದ್ರೆ ಗಟ್ಟಿ ಬೈದು ಮತ್ತೆನಾದ್ರೂ ಎಡವಟ್ಟಾಗೋದ್ರೆ ಅಂತ ಬಹಳ ಗೋಗರೆದ್ವಿ.. ಊಹೂಂ.. ಜಗ್ತಿಲ್ಲ. ಅವಂಗೆ ನೀವು ಅಂದ್ರೆ ಬಹಳ ಗೌರವ ಅಲ್ವಾ? ನಿಮ್ಮ ಮಾತು ಮೀರೋನಲ್ಲ ಅಂತ ವಿಶಾಲತ್ತೆನೇ ನಿಮ್ಮನ್ನ ಬೇಗ ಕರ್ಕೊಂಡ್ಬರೋಕೆ ಹೇಳಿದ್ರಾ, ಸೀದಾ ಇಲ್ಲಿಗೆ ಬಂದ್ವಿ?’’ ಎಂದವನೇ ಅಷ್ಟು ಹೊತ್ತು ಒಂದೇ ಉಸರಿನಲ್ಲಿ ಎಲ್ಲವನ್ನೂ ಬಡಬಡಿಸಿದ್ದರಿಂದ ಆಯಾಸವಾಗಿ, ಹಾಗೇ ಸೀಟಿಗೆ ಒರಗಿ ನಿಟ್ಟುಸಿರಿಟ್ಟ.
ವೆಂಕಟೇಶನ ಮಾತುಗಳನ್ನು ಕೇಳುತ್ತಿದ್ದಂತೆಯೇ ಮೋನಪ್ಪರಿಗೆ ತಲೆ ಒಂದುಕ್ಷಣ ಗಿರ್ರನೆ ತಿರುಗಿದಂತಾಯಿತು. ರಾಜೀವ ಮತ್ತು ಸಕೀನ ಇಬ್ಬರೂ ಹೈಸ್ಕೂಲಿನಲ್ಲಿ ಅವರ ಶಿಷ್ಯರಾಗಿದ್ದವರೇ. ರಾಜೀವನಿಗೆ ಗಣಿತ ಅಂದರೆ ಕಬ್ಬಿಣದ ಕಡಲೆಯಾಗಿದ್ದರೆ, ಅವಳಿಗೋ ಅದು ಸುಲಿದ ಬಾಳೆಹಣ್ಣಿನಂತಾಗಿತ್ತು. ಅದೆಷ್ಟು ಸಲ ಅವಳನ್ನು ಹೊಗಳಿ, ಇವನಿಗೆ ಕಿವಿ ತಿರುಪಿದ್ದಿದೆಯೇನೋ! ಕಡೆಗೆ ಸಂಜೆ ಹೊತ್ತು ಮನೆಗೆ ಕರೆಸಿಕೊಂಡು ಪಾಠವನ್ನೆಲ್ಲ ಹೇಳಿಕೊಟ್ಟು, ತಿದ್ದಿ, ಅಂತೂ ಹತ್ತನೆಯ ತರಗತಿಯಲ್ಲಿ ಪಾಸುಮಾಡಿಸಿದ್ದಾಗಿತ್ತು. ಹಾಗೂ ಹೀಗೂ ಕುಂಟುತ್ತಾ ಬಿ.ಎ. ಮುಗಿಸಿದ ರಾಜೀವ ಅದೇನೋ ಸಾವಯವ ವ್ಯವಸಾಯದ ಕೋರ್ಸೊಂದನ್ನು ಮಾಡಿಕೊಂಡು ಅಪ್ಪ, ಅಮ್ಮನ ಜೊತೆಗಿದ್ದು ತೋಟ, ಗದ್ದೆ ನೋಡಿಕೊಂಡಿದ್ದರೆ, ಓದಿನಲ್ಲಿ ಬಹಳ ಚುರುಕಾಗಿದ್ದ ಸಕೀನಾಳನ್ನು ಹೆಚ್ಚು ಓದಿಸಿ ಎಂದು ಮೋನಪ್ಪರೇ ಒತ್ತಾಯಿಸಿದರೂ, ಸ್ವತಃ ಸಕೀನಾಳೇ ಗೋಳಾಡಿದರೂ ಬಿಲ್ಕುಲ್ ಒಪ್ಪದ ರಿಜ್ವಾನ್ ಸಾಹೇಬರು ಪಿ.ಯು.ಸಿ. ಮುಗಿಸಿದ್ದೇ ಮಗಳ ಮದುವೆಯನ್ನು ಮಾಡಿಬಿಟ್ಟಿದ್ದರು. ಆದರೆ ಅವಳ ನಸೀಬು ಅಲ್ಲೂ ಕೈಕೊಟ್ಟು, ಮಕ್ಕಳಾಗಿಲ್ಲ ಎನ್ನುವ ನೆಪದಲ್ಲೇ ತಲಾಕ್ ಆಗಿ ಎರಡು ವರುಷದ ಹಿಂದೆ ಮನೆಗೆ ಮರಳಿದವಳು ಈಗ ಅಂತೂ ಅಪ್ಪನ ಮನವೊಲಿಸಿ ಹರಿಪುರದಲ್ಲಿದ್ದ ಕಂಪ್ಯೂಟರ್ ಕೋರ್ಸ್ ಒಂದಕ್ಕೆ ಸೇರಿಕೊಂಡಿದ್ದಾಳೆಂದು ಮೋನಪ್ಪರಿಗೆ ಸುದ್ದಿ ತಿಳಿದಿತ್ತು.
ಇಬ್ಬರನ್ನೂ ಎಳವೆಯಿಂದ ನೋಡಿ ಗೊತ್ತಿದ್ದುದರಿಂದ ಮೋನಪ್ಪರಿಗೆ ಎದೆಯೊಳಗೇನೋ ತಳಮಳ ಉಂಟಾಯಿತು. ರಾಜೀವನಿಗೆ ವರುಷ ಮೂವತ್ತರ ಆಸುಪಾಸಾಗಿದ್ದರೂ, ಮನೆಯಲ್ಲಿರುವ ಮಾಣಿಗೆ ಕೂಸು ಸಿಗದೇ ಶಾಸ್ತ್ರಿ ದಂಪತಿಗಳ ಆತಂಕ ದಿನೇದಿನೇ ಹೆಚ್ಚಾಗುತ್ತಿರುವುದನ್ನೂ ಅವರು ಅರಿತಿದ್ದರು. ಮೂರು ದಿನದ ಹಿಂದೆ ಏನೋ ಕಾರ್ಯದ ನಿಮಿತ್ತ ಮಕ್ಕಿಗದ್ದೆಗೆ ಹೋಗಿದ್ದಾಗ, ಆ ಕಡೆಯ ಯಾವುದೋ ಕೂಸಿನ ಪ್ರಸ್ತಾಪದ ಕುರಿತು ವಿಚಾರಿಸಲೋಸುಗವೇ ಶಾಸ್ತ್ರಿಗಳೂ ಬಂದಿದ್ದರು. “ಮಾಸ್ತರರೇ ಈಗೇನಿದ್ದರೂ ಹೆಣ್ಮಕ್ಕಳಿಗೇ ಡಿಮಾಂಡು ಜಾಸ್ತಿ ನೋಡಿ. ಇಲ್ಲಿ ನಮ್ಮ ನೆಂಟರ ಕಡೆಯ ಒಂದು ಪೈಕಿ ಒಂದೊಳ್ಳೆಯ ಸಂಬಂಧ ಇದೆ ಅಂತ ಗೊತ್ತಾಯ್ತು. ಹೀಗಾಗಿ ನಾನೇ ಜಾತಕ ಕೇಳಲು ಖುದ್ದಾಗಿ ಬಂದಿದ್ದು. ಈ ಸಲ ಜಾತಕ ಸುಮಾರಾಗಿ ಹೊಂದಿದರೂ ಸಾಕು, ಒಪ್ಪಿಬಿಡುವೆ” ಎಂದು ಹೇಳಲು, ನಸುನಕ್ಕಿದ್ದ ಮೋನಪ್ಪರು “ಶಾಸ್ತ್ರಿಗಳೇ, ಎಲ್ಲಕ್ಕಿಂತ ಮೊದಲು ಹೆಣ್ಣು, ಗಂಡಿನ ಮನಸ್ಸು ಕೂಡಿದರಾಯ್ತು… ಅದಾಗಿಬಿಟ್ಟರೆ ಬಾಕಿ ಎಲ್ಲವನ್ನೂ ಕೃಷ್ಣಾರ್ಪಣಮಸ್ತು ಮಾಡ್ಬಿಡಿ.. ಶುಭಮಸ್ತು” ಎಂದು ಹಾರೈಸಿ ಬಂದಿದ್ದರು. ಆದರೆ ಈಗ ನೋಡಿದರೆ ಇಷ್ಟೆಲ್ಲ ರಾಮಾಯಣ ಆಗಿ ಬಿಟ್ಟಿದೆ! ಇಳಿವಯಸ್ಸಿನ ವಿಶಾಲಮ್ಮ ಮತ್ತು ನಾರಾಯಣ ಶಾಸ್ತ್ರಿಗಳ ಪರಿಸ್ಥಿತಿಯನ್ನು ನೆನೆದು ಬಹಳ ಸಂಕಟಪಟ್ಟರು.
****
“ಅಲ್ವೋ ವೆಂಕ್ಟ, ಇಷ್ಟೆಲ್ಲಾ ಆಗಿದ್ರೂ ನಂಗೆ ಒಂದ್ಮಾತು ಹೇಳೋದಲ್ವಾ? ನಾನು ಎರಡು ದಿನದ ಮಾತಿಗಷ್ಟೇ ಸೀತಕ್ಕನ ನೋಡಲೆಂದು ಶೀರೂರಿಗೆ ಹೋಗಿದ್ದು.. ಫೆÇೀನ್ ಮಾಡಿದ್ರೆ ಕೂಡ್ಲೇ ಬರ್ತಿದ್ದೆ.. ನಾಲ್ಕು ತಾಸಿನ ಹಾದಿಯಪ್ಪಾ..” ಆಕ್ಷೇಪಿಸಿದರು ಮೋನಪ್ಪ. “ಚೆನ್ನಾಗಿದೆ ಸಾರ್, ನೀವು ಮೊಬೈಲ್ ಇಟ್ಕೊಂಡಿಲ್ಲ.. ಹೋಗಿದ್ದು ಎಲ್ಲಿಗೆ, ಯಾರ ಮನೆಗೆ ಅಂತಾನೂ ಸರಿಯಾಗಿ ನಮ್ಗೆ ಗೊತ್ತಿಲ್ಲ. ಆವತ್ತಿನಿಂದ ಅದೆಷ್ಟು ಸಲ ನಿಮ್ಮನೆಗೆ ಫೆÇೀನ್ ಮಾಡಿದ್ವೇನೋ ನಾವು! ಮೊನ್ನೆ ಗಲಾಟೆ ಜೋರಾದಾಗಲೇ ಶಾಸ್ತ್ರಿಮಾವ ಆಳು ಶೀನನ್ನು ನಿಮ್ಮನೆಗೆ ಕಳ್ಸಿದ್ರು. ಬೀಗ ಹಾಕಿದ್ದು ಕಂಡು ಕೆಳಗಿನ ಮನೆ ಪೂವಪ್ಪನನ್ನು ಕೇಳ್ದಾಗ ಅಂವ “ಮಾಷ್ಟ್ರು ಶೀರೂರಿಗೆ ಹೋಗವ್ರೆ. ನಾಯಿಗಳಿಗೆ ಎರಡು ದಿವ್ಸ ಊಟ ಹಾಕು, ನಾಳೆ ರಾತ್ರಿ ಒಳ್ಗೆ ಬರ್ತೀನಿ ಅಂದವ್ರೆ” ಅಂತಷ್ಟೇ ಹೇಳಿದ್ನಂತೆ. ಈವತ್ತು ಸಂಜೆಗಾದ್ರೂ ನೀವು ವಾಪಸ್ಸು ಬಂದಿರ್ಬಹುದು ಎಂದು ನಾವು ಸೀದಾ ಗಾಡಿ ತಗೊಂಡು ಬಂದ್ವಿ? ಇನ್ನಾದ್ರೂ ಒಂದು ಮೊಬೈಲ್ ಇಟ್ಕೊಳ್ಳಿ ಮೇಷ್ಟೇ… ನಿಮ್ಗೊಂದೇ ಅಲ್ಲಾ, ನಮ್ಗೂ ಉಪ್ಕಾರ ಆಗ್ತದೆ” ಎನ್ನುತ್ತಾ, ಕತ್ತಲೆಯಲ್ಲಿ ಕಾಡುನಾಯಿಯೊಂದು ಕಾರಿನತ್ತ ಬರುತ್ತಿರುವುದನ್ನು ಕಂಡು ಅಸಹನೆಯಿಂದ ಜೋರಾಗಿ ಹಾರ್ನ್ ಒತ್ತಿದ್ದ ಶ್ರೀಧರ. ಅವನ ಮಾತಿಗೆ ಮತ್ತೇನೂ ಉತ್ತರಿಸಲಾಗದೇ ಸುಮ್ಮನಾಗಿಬಿಟ್ಟರು ಮೋನಪ್ಪ ಮಾಸ್ತರರು.
*****
“ಅಲ್ವೋ ರಾಜು, ನನ್ನ ಶಿಷ್ಯ ಗಣಿತದಲ್ಲಿ ಮಾತ್ರ ವೀಕು, ಆದ್ರೆ ಬದುಕಲ್ಲಿ ತುಂಬಾ ಸ್ಟ್ರಾಂಗು ಅಂತ ಹೆಮ್ಮೆ ಪಡ್ತಿದ್ನಲ್ಲೋ. ಅಲ್ಲಾ ಮಾರಾಯ, ನಿನ್ನ ಅಪ್ಪ, ಅಮ್ಮನಿಗೆ ಹೇಗಾಗಿರ್ಬೇಡ ನಿನ್ನ ಈ ಹುಚ್ಚು ಅವತಾರ ನೋಡಿ ಹೇಳು. ನಿನ್ನಕ್ಕ ಬೇರೆ ಹತ್ರ ಇಲ್ಲ. ಗಂಡನ ಜೊತೆ ದೂರದ ಶಹರದಲ್ಲಿದ್ದಾಳೆ. ಇಲ್ಲಿಗೆ ಕೂಡಲೇ ಬರೋಕಾದ್ರೂ ಆಗ್ತದಾ? ಈ ವಯಸ್ಸಲ್ಲಿ ಅವ್ರಿಗೆ ನೀನು ಧೈರ್ಯ ತುಂಬಬೇಕಪ್ಪ. ನೀ ನೋಡಿದ್ರೆ ಊಟನೂ ಮಾಡ್ದೇ, ಹೀಗೆಲ್ಲಾ ಬಾಗ್ಲು ಹಾಕ್ಕೊಂಡು ಹೆದ್ರಿಸಿ. ಪಾಪ ವಿಶಾಲಮ್ಮನ ಅಳು ನಿಲ್ತಾ ಇಲ್ಲಾ ಗೊತ್ತೋ? ನೀನು ಬಾಗ್ಲು ತೆಗ್ದಿದ್ದು ನೋಡಿದ್ಮೇಲೆ ಅವ್ರು ಸುಮ್ನಾಗಿದ್ದು. ವಯಸ್ಸಿನ ಮುಲಾಜಿಲ್ದೇ ನಿನ್ನ ಬೆನ್ನಿಗೊಂದು ಸಮಾ ಲತ್ತೆ ಕೊಡ್ಬೇಕು ಅನ್ನಿಸ್ತಿದೆ.” ರಾಜೀವನ ಎದುರು ಕುರ್ಚಿಹಾಕಿಕೊಂಡು ಕುಳಿತ ಮಾಸ್ತರರು ತಮ್ಮ ಹಳೆಯ ಶೈಲಿಯಲ್ಲೇ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಶ್ರೀಧರ ಕಾರು ನಿಲ್ಲಿಸಿದ್ದೇ, ಗಡಿಬಿಡಿಯಲ್ಲಿ ಮನೆಯನ್ನು ಹೊಕ್ಕಿದ್ದ ಮಾಸ್ತರರು, ಗಾಬರಿಗೊಂಡಿದ್ದ ಶಾಸ್ತ್ರಿ ದಂಪತಿಗಳಿಗೆ ಸಮಾಧಾನ ಹೇಳುತ್ತ ಮಹಡಿ ಹತ್ತಿ ಬಾಗಿಲು ಬಡಿಯುತ್ತ ಗಟ್ಟಿಯಾಗಿ ರಾಜೀವನನ್ನು ಮೂರು ಸಲ ಜೋರಾಗಿ ಕರೆದಿದ್ದರು. ಅಂತೂ ನಾಲ್ಕನೆ ಬಾರಿಗೆ ಬಾಗಿಲನ್ನು ತೆರೆದಿದ್ದ ಆತ, ಮೌನವಾಗಿ ಹೋಗಿ ಸೀದಾ ಮಂಚದ ಮೇಲೆ ಕುಳಿತು ತಲೆತಗ್ಗಿಸಿಬಿಟ್ಟಿದ್ದ. ಅವನು ಸ್ವಸ್ಥನಾಗಿರುವುದು ಕಂಡಿದ್ದೇ ಎಲ್ಲರಿಗೂ ಜೀವ ಬಂದಂತಾಗಿತ್ತು. ಉಪ್ಪರಿಗೆಗೆ ಬರುವ ಮುನ್ನವೇ ಮೋನಪ್ಪರು ಎಲ್ಲರಿಗೂ ತುಸು ಹೊತ್ತು ತಮ್ಮಿಬ್ಬರನ್ನು ಒಂಟಿಯಾಗಿ ಬಿಡಬೇಕೆಂದು ವಿನಂತಿಸಿಕೊಂಡಿದ್ದರಿಂದ ಉಳಿದವರೆಲ್ಲ ಈಗ ಕೆಳಗಿಳಿದು ಹೋಗಿದ್ದರೆ ಕೋಣೆಯೊಳಗೆ ಗುರು-ಶಿಷ್ಯರು ಮಾತ್ರ ಉಳಿದಿದ್ದರು. ಎರಡು ನಿಮಿಷ ಮೌನವಾಗಿದ್ದ ರಾಜೀವ, ಆಮೇಲೆ ನಿಧಾನವಾಗಿ ತಲೆಯೆತ್ತಿದ್ದಾಗ ಅವನ ಕಣ್ಣುಗಳು ಕೆಂಪಡರಿದ್ದವು.
“ಸಾರ್, ನಿಮ್ಮ ಶಿಷ್ಯನಿಗೆ ಬದುಕೇ ಒಂದು ಬಿಡಿಸಲಾಗದ ಗಣಿತವಾಗಿಬಿಟ್ಟಿದೆ. ಹತ್ತನೆ ತರಗತಿಯನ್ನಂತೂ ಪಾಸು ಮಾಡ್ಸಿದ್ರಿ… ಆದ್ರೆ ಈ ಕಗ್ಗಂಟು ಬದುಕಿನ ಪರೀಕ್ಷೆಯ ಫಲಿತಾಂಶದಲ್ಲಿ ಶೂನ್ಯ ಸಿಗ್ತದೇನೋ ಅನ್ನಿಸ್ತಿದೆ. ವಿಷ್ಯ ನಿಮ್ಗೆ ಈಗಾಗ್ಲೇ ಗೊತ್ತಾಗಿರ್ಬಹುದು ಅಂದ್ಕೊಳ್ತೀನಿ. ಅಲ್ಲಾ ಸಾರ್? ನೀವೇ ಹೇಳಿ ನಿಮ್ಗೆ ನಾನು ಹೆಣ್ಣುಬಾಕನ ತರಹ ಕಾಣ್ತೀನಾ? ಹೌದು, ಅಪ್ಪ, ಅಮ್ಮಂಗೆ ನನ್ನ ಮದುವೆಯದೇ ಚಿಂತೆ. ನನಗೂ ಒಳ್ಳೆ ಸಂಗಾತಿ ಬೇಕು ಅಂತ ಅನ್ನಿಸ್ತದೆ… ಇಲ್ಲಾ ಅನ್ನಲ್ಲ. ಹಾಗಂತ ನಾನೇನು ಬೀದಿಲಿ ತಿರುಗೋ ಹೋರಿಯೋ, ಇಲ್ಲಾ ಬೆದೆ ಬಂದ ನಾಯಿಯೋ ಅಲ್ಲಾ ಅಲ್ವಾ? ಆ ಮೂರ್ಖ ಸೈಫು ಹೋದ ವರ್ಷವಷ್ಟೇ ಕಾಲೇಜಿನ ಯಾವುದೋ ಹುಡುಗಿಗೆ ಲವ್ಲೆಟರ್ ಬರದು ಸಿಕ್ಕಾಕೊಂಡು ಲತ್ತೆ ತಿಂದವ… ಮೊನ್ನೆ ನಂಗೆ ಉಪದೇಶ ಕೊಡ್ತಾನೆ, ಧಮ್ಕಿ ಬೇರೆ ಹಾಕ್ತಾನೆ. ಕಳ್ಳನ ಮನ್ಸು ಹುಳ್ಳುಳ್ಗೆ ಅಂತಾರಲ್ಲ? ಇನ್ನು, ಆ ಲತೀಫನಿಗೆ ನನ್ನ ಪರಿಚಯ ಹೊಸತಾ? ಎಲ್ಲರೂ ಸತ್ಯ ಗೊತ್ತಿದ್ದೋ, ಗೊತ್ತಿಲ್ದೇನೋ ನನ್ನ ಮೇಲೆ ತಪ್ಪು ಹೊರ್ಸಿ ಅವಮಾನ ಮಾಡ್ಬಿಟ್ರು. ಪರಿಸ್ಥಿತಿ ಹೇಗೆಲ್ಲ ತಿರುಗಿ ಹೋಗ್ತಿತ್ತೋ ಏನೋ. ಪುಣ್ಯ, ಎಸ್ಸೈ ಸತೀಶ್ ಜವಾಬ್ದಾರಿ ಇರೋ ಆಫೀಸರು. ನನ್ನ ಮಾತನ್ನೆಲ್ಲ ಕೇಳಿಸ್ಕಂಡು ಎಲ್ಲರನ್ನೂ ಬಾಯಿಮುಚ್ಸಿ, ಮೀಡಿಯಾ ಕಿವಿಗೂ ಸುದ್ದಿ ಬೀಳದಾಂಗೆ ಮಾಡಿ ಸತ್ಯ ಹೊರಗೆತಂದ್ರು. ಪಾಪ ಸಕೀನಾ ಅದೆಷ್ಟು ಹಿಂಸೆ ಪಟ್ಳೋ ಏನೋ. ತುಂಬಾ ಅಳ್ತಿದ್ಳು ಆವತ್ತು. ಸದ್ಯ, ಸತ್ಯವನ್ನೇ ಹೇಳಿದ್ಳು. ಈಗ ಅವ್ಳ ಪರಿಸ್ಥಿತಿ ಏನೋ ಗೊತ್ತಿಲ್ಲ. ಬಾವಿಕಟ್ಟೆ ನಂದಣ್ಣ ಈವತ್ತು ಹಿತ್ಲಲ್ಲಿ ಅಮ್ಮನ ಹತ್ರ ಹೇಳ್ತಿದ್ದ, ಅವ್ಳನ್ನ ವಾಜೂರಿನಲ್ಲೇ ಯಾರೋ ಮೂರುಮಕ್ಕಳ ಮುದುಕಪ್ಪಂಗೆ ಎರಡನೇ ಮದುವೆ ಮಾಡೋ ಪ್ಲಾನ್ನಲ್ಲಿದ್ದಾರೆ ಅಂತ. ನನ್ನ ಪರಿಸ್ಥಿತಿಯೂ ಇಲ್ಲಿ ಅಧ್ವಾನವಾಗಿ ಕೂತಿದೆ?” ಕೋಪದಿಂದ ಮುಷ್ಠಿಬಿಗಿದ ರಾಜೀವ.
ಅವನ ಉದ್ವೇಗ, ಆಕ್ರೋಶ ಎಲ್ಲ ಹೊರಗೆ ಬರಲಿ ಎಂದೇ ಏನೂ ಪ್ರತಿಕ್ರಿಯಿಸದೇ ಸುಮ್ಮನೇ ಕುಳಿತರು ಮೋನಪ್ಪ. ಎರಡು ನಿಮಿಷ ಸುಮ್ಮನಾದ ರಾಜೀವ, “ನೀವೇ ಹೇಳಿ ಮೇಷ್ಟ್ರೇ ಇದ್ಯಾವ ನ್ಯಾಯ? ನಂದೇನೂ ತಪ್ಪಿಲ್ಲ ಅಂದ್ರೂ ಯಾರೂ ನಂಬ್ಲೇ ಇಲ್ಲಾ ಆವತ್ತು ಗೊತ್ತಾ? ‘ಇನ್ನೂ ಮದ್ವೆಯಾಗಿಲ್ಲ, ಒಂಟಿ ಜೀವ ಏನೋ ಪರಾಮಶಿ ಆಗಿರ್ಬಹುದು ಬಿಟ್ಬಿಡಿ’ ಎಂದು ಪಟೇಲ್ರು ಅಂದಾಗ ನಂಗೆ ಹೇಗಾಗಿರ್ಬೇಡ! ಅಪ್ಪ ಬೇರೆ ಕಿವಿಯ ಹತ್ರ ಬಂದು ‘ಇದು ನಿಜ್ವೇನೋ? ತಪ್ಪಾಗಿದ್ದಿದ್ರೆ ಗುಟ್ಟಾಗಿ ನನ್ನ ಹತ್ರ ಹೇಳ್ಬಿಡು, ನಾನು ಹೇಗಾದ್ರೂ ಪರಿಹರಿಸೋಕೆ ನೋಡ್ತಿನಿ’ ಎಂದು ಹೇಳಿದಾಗ ನನಗಾದ ಸಂಕಟ ಹೇಗೆ ಹೇಳೋದು. ಆಮೇಲೆ ವಿಷ್ಯ ಎಲ್ಲ ಸರಿಯಾಗಿ ಗೊತ್ತಾದ್ಮೇಲೂ ನಿನ್ನೆ ಒಂದಿಬ್ರು ‘ಬೆಂಕಿ ಇಲ್ದೇ ಹೊಗೆ ಆಡಲ್ಲ ಬಿಡಿ’ಎಂದು ನನ್ನ ಹಿಂದೆ ಮಾತಾಡ್ಕೊಂಡಿದ್ದೂ ಕಿವಿಗೆ ಬಿತ್ತು. ಅಲ್ಲಾ, ಇವ್ರಿಗೆ ತಾವು ಕಂಡಿದ್ದು ಹೊಗೆನೇ ಆಗಿರ್ಲಿಲ್ಲ, ಅದೊಂದು ಭ್ರಮೆಯಾಗಿತ್ತು ಎನ್ನೋದು ಗೊತ್ತಾದ್ಮೇಲೆ ಬೆಂಕಿ ಎಲ್ಲಿಂದ ಕಂಡ್ತು ಗೊತ್ತಾಗ್ತಿಲ್ಲಾ! ಇದೆಲ್ಲದರ ಮಧ್ಯೆ ಅಮ್ಮನ ಸಂಕ್ಟವೇ ಬೇರೆ… ‘ಮೊದ್ಲೇ ನಿಂಗೆ ಮನೇಲಿದ್ದೋನು ಅಂತ ಜಾತ್ಕ ಕಮ್ಮಿ ಬರ್ತಿತ್ತಲ್ಲೋ, ಇನ್ನು ಮದ್ವೆಗೆ ಹೆಣ್ಣು ಸಿಕ್ದಾಂಗೇ’ ಎಂದು ಒಂದೇಸಮನೆ ಗೋಳಾಡ್ತಿದ್ದಾಳೆ? ಹುಚ್ಚು ಹಿಡ್ಯೋದೊಂದು ಬಾಕಿ ನಂಗೆ…” ಎಂದು ತಲೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಮೋನಪ್ಪ ಮಾಸ್ತರರು ಸುಮ್ಮನೇ ಅವನ ಬೆನ್ನನ್ನು ಸವರುತ್ತ ಕುಳಿತುಬಿಟ್ಟರು.
ತುಸು ಹೊತ್ತಿನ ನಂತರ, ಒಳಗಣ ಬಿಸಿ ಹೊರಬಿದ್ದು ಆವಿಯಾಗಿ ಶಾಂತನಾದ ರಾಜೀವ. ಮೋನಪ್ಪರು ಆ ಹೊತ್ತಿಗೆ ಹೆಚ್ಚು ಮಾತು ಬೇಡ ಎಂದುಕೊಂಡು, ಅವನ ಮಾತುಗಳಿಗೆಲ್ಲ ಕಿವಿಯಾಗುತ್ತ, ಒಂದೆರಡು ಧೈರ್ಯದ ಮಾತುಗಳನ್ನಷ್ಟೇ ಹೇಳಿ ಮೆಲ್ಲನೆ ಕೆಳಗಿಳಿಸಿಕೊಂಡು ಬರಲು ವಿಶಾಲಮ್ಮ, ನಾರಾಯಣಶಾಸ್ತ್ರಿಗಳಿಗೆ ಎಷ್ಟೋ ಸಮಾಧಾನವಾಯಿತು. ಅವರಿಬ್ಬರನ್ನೂ ಬದಿಗೆ ಕರೆದು, ಸೂಕ್ಷ್ಮವಾಗಿ ಅವನ ಮನಸ್ಥಿತಿಯನ್ನು ವಿವರಿಸಿದ ಮೋನಪ್ಪರು, ತುಸು ಕಾಲ ಯಾವುದನ್ನೂ ಕೆದಕದೆ ಹಾಗೇ ಬಿಡಲು ಸಲಹೆಯನ್ನಿತ್ತರು. ಮಧ್ಯಾಹ್ನದಿಂದ ಏನನ್ನೂ ತಿನ್ನದಿದ್ದ ರಾಜೀವನಿಗೆ ಒಂದು ಲೋಟ ಹಾಲನ್ನಾದರೂ ಕುಡಿಯಲು ಮನವೊಲಿಸಿ ಮನೆಗೆ ಹೊರಟುನಿಂತಾಗ ಶಾಸ್ತ್ರಿ ದಂಪತಿಗಳು ಅವರನ್ನು ಅಲ್ಲೇ ಉಳಿಯಲು ಒತ್ತಾಯಿಸಿದರೂ, ಮೋನಪ್ಪರು ನಯವಾಗಿ ನಿರಾಕರಿಸಲು, ಶ್ರೀಧರ ತಾನು ಅವರನ್ನು ಮನೆಗೆ ಬಿಟ್ಟು ಹೊರಡುವೆನೆಂದ.
***
ಮೋನಪ್ಪರು ಮನೆಗೆ ಹಿಂದಿರುಗಿದಾಗ ಬೆಳಗಾಗಲು ನಾಲ್ಕು ತಾಸಷ್ಟೇ ಉಳಿದಿತ್ತು. ಇನ್ನು ತೋಟಕಾಯಲು ಮಾಳಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ ಎಂದುಕೊಂಡು ಒಳಜಗುಲಿಯಲ್ಲೇ ಚಾಪೆ ಬಿಡಿಸಿ ಉರುಳುವುದಕ್ಕೂ ಹೊರಗೆ ಮತ್ತೆ ಜಿಟಿಜಿಟಿ ಮಳೆ ಶುರುವಾಗುವುದಕ್ಕೂ ಸಮನಾಯಿತು. ಗವ್ ಎನ್ನುವ ಕತ್ತಲೆಯ ಜೊತೆಗೆ ಪೈಪೋಟಿಗಿಳಿದ ಏಕಾಂತ. ಹದಿನೈದು ವರುಷದ ಹಿಂದೆ ಕಾಗದದಲ್ಲಿ ನಾಲ್ಕು ಸಾಲು ಬರೆದಿಟ್ಟು ತನ್ನನ್ನು ಬಿಟ್ಟು ಸೋದರಮಾವನ ಮಗನೊಂದಿಗೆ ಹೊರಟುಹೋಗಿದ್ದ ಮಡದಿ ಸಾವಿತ್ರಿಯನ್ನು ನೆನೆದು ಮನಸ್ಸು ಭಾರವಾಯಿತು. ಸೀತಕ್ಕ ತನಗೆ ವಹಿಸಿರುವ ಜವಾಬ್ದಾರಿಯಾದ ಜಾನಕಿಯ ನೆನಪೂ ಬಂತು. ಹುಡುಗಿ ಹೇಗಿದ್ದಾಳೋ ಹೊಸ ಜಾಗದಲ್ಲಿ… ವಠಾರದಲ್ಲಿ ಎಲ್ಲವೂ ಸರಿಯಾಗಿದೆಯೋ ಇಲ್ಲವೋ… ನಾಳೆ ಸಂಜೆಯಾದರೂ ಒಮ್ಮೆ ಹೋಗಿ ವಿಚಾರಿಸಬೇಕು ಎಂದುಕೊಂಡರು. ಪ್ರಯತ್ನಪಟ್ಟು ಕಣ್ಮುಚ್ಚಿದರೂ ಮತ್ತೆ ಗತಕಾಲದ ನೆನಪುಗಳ ತುಣುಕು ಕುಣಿದಾಡಲು ಮಗ್ಗಲು ಬದಲಾಯಿಸಿದರು.
ಯಾಕೋ ಮನದ ಭಾರ ಎದೆಯನ್ನು ಹಿಂಡಿದಂತಾಗಿ ಥಟ್ಟನೆದ್ದು ಕುಳಿತು, ರೆಪ್ಪೆಗಳನ್ನು ಮುಚ್ಚಿ, ತುಸು ಕಾಲ ಪ್ರಾಣಾಯಾಮ ಮಾಡುತ್ತ ಮೆಲುವಾಗಿ ಸೋಗೆಮಠದ ಶಿವಾನಂದಸ್ವಾಮಿಗಳು ಕಲಿಸಿಕೊಟ್ಟಿದ್ದ ಶಿವಮಾನಸ ಪೂಜೆಯ ಶ್ಲೋಕಗಳನ್ನು ಪಠಿಸತೊಡಗಿದರು.
~2~
ರಾತ್ರಿಯಿಡೀ ನಿದ್ದೆಯಿಲ್ಲದೇ ಹೊರಳಾಡಿ ಹೊತ್ತು ಕಳೆದಿದ್ದ ರಾಜೀವ, ಬೆಳಕು ಮೂಡಿದ್ದೇ, ಎದ್ದು ಬಡಬಡನೆ ಸ್ನಾನ ಮುಗಿಸಿ, ಅಮ್ಮನ ಸಮಾಧಾನಕ್ಕೋಸ್ಕರ ಲವಲವಿಕೆ ತೋರಿಸುತ್ತ ತಿಂಡಿ ತಿಂದು ಮನೆಯಿಂದ ಹೊರಬಿದ್ದವನೇ ಸೀದಾ ಮಾಸ್ತರರ ಮನೆಗೆ ಬಂದರೆ ಬಾಗಿಲಿಗೆ ಬೀಗ ಹಾಕಿತ್ತು. ಆದರೆ ಆ ಹೊತ್ತಿಗೆ ಸುಮಾರಾಗಿ ಅವರು ಬಾಳೆಯ ತೋಟದಲ್ಲೇ ಇರುವರೆಂದು ತಿಳಿದಿದ್ದರಿಂದ ದಣಪೆಯನ್ನು ದಾಟಿ ಅತ್ತ ಸಾಗಿದ.
“ಬಾರಪ್ಪಾ ರಾಜು… ಈಗ ಹೇಗಿದೆ ಮನಸ್ಸು? ನಿನ್ನೆ ಸ್ವಲ್ಪ ಹೊತ್ತಾದ್ರೂ ನಿದ್ದೆ ಮಾಡಿದ್ದೀಯಾ ತಾನೇ? ತಿಂಡಿ ಆಯ್ತಾ? ಇಲ್ಲಾ ಅಂದ್ರೆ ಹೇಳು ನಮ್ಮಲ್ಲಿ ಗಂಜಿ, ಉಪ್ಪಿನಕಾಯಿ ಇದೆ? ಆದ್ರೆ ಅದೆಲ್ಲ ನಿಂಗೆ ಸೇರ್ತದೋ ಇಲ್ವೋ ಗೊತ್ತಿಲ್ಲ” ಎಂದು ಸಹಜವಾಗಿ ಮಾತನಾಡಿಸಲು ತುಸು ಹಗುರಾದ ರಾಜೀವ.
“ಏನೂ ಬೇಡ ಸಾರ್, ಎಲ್ಲ ಮುಗ್ಸಿ ಬಂದೆ. ಯಾಕೋ ಮನೇಲಿ ಇರೋದು ಬೇಡ ಅನ್ನಿಸ್ತು.. ಅದ್ಕೇ ನಿಮ್ಮಲ್ಲಿಗೆ ಬಂದೆ. ಅಮ್ಮನಿಗೆ ಹೇಳಿಯೇ ಬಂದಿದ್ದೇನೆ. ಮಧ್ಯಾಹ್ನ ಊಟದ ಹೊತ್ತಿಗೆಲ್ಲ ಮುದ್ದಾಂ ವಾಪಸ್ಸು ಬರ್ತೀನಿ ಅಂತ ಸಮಾಧಾನ ಮಾಡಿಯೇ ಹೊರಟಿದ್ದು” ಎನ್ನುತ್ತ ಬಾಳೆಗಿಡದ ಬುಡವನ್ನು ಚೊಕ್ಕಮಾಡುತ್ತಿದ್ದ ಅವರಿಗೆ ಕೈಜೋಡಿಸಲು ಹೊರಟ.
“ಅಯ್ಯ, ಇದೆಲ್ಲ ಈಗ ಬಿಡು ಮಾರಾಯಾ? ನಾನೋ ಹೊತ್ತು ಹೋಗಲ್ಲ ಅಂತ ಮೂರು ಹೊತ್ತೂ ಇಲ್ಲಿ ಬಿದ್ದಿರ್ತೀನಿ ಅಷ್ಟೇ. ಯಾಕೋ ನನಗೆ ನೀನು ಸುಮ್ಮನೇ ಈ ಕಡೆ ಬಂದಿದ್ದಲ್ಲ ಅಂತನ್ನಿಸ್ತಿದೆಯಪ್ಪಾ? ನಿನ್ನೆ ನಾನು ಹೆಚ್ಚು ಮಾತಾಡಿಲ್ಲ ನಿನ್ನ ಹತ್ರ… ಏನಾದ್ರೂ ಹೇಳೋದಿತ್ತ ರಾಜು?” ಮೆಲುವಾಗಿ ಕೇಳಲು ಆತ ನೇರವಾಗಿ ನಿಂತು ಅಲ್ಲೇ ಪೈಪಿನಿಂದ ಹರಿಯುತ್ತಿದ್ದ ನೀರಿನಲ್ಲಿ ಕೈತೊಳೆದುಕೊಂಡ.
“ಸಾರ್ ಹೇಳೋದೇನೂ ಇಲ್ಲ, ಆದರೆ ನಿಮ್ಮಲ್ಲಿ ಒಂದು ಪ್ರಶ್ನೆ ಕೇಳೋದಿತ್ತು… ಆದ್ರೆ ಹೇಗೆ ಕೇಳಲಿ ಎಂದು ಅನುಮಾನವಾಗ್ತಿದೆ. ನಿಮಗೆ ಬೇಸರವಾಗ್ಬಾರ್ದಲ್ಲಾ. ಎಷ್ಟೆಂದರೂ ನಾನು ನಿಮ್ಮ ಶಿಷ್ಯ… ವಯಸ್ಸಿನಲ್ಲಿ ನಿಮಗಿಂತ ಇಪ್ಪತ್ತೈದು ವರುಷ ಚಿಕ್ಕವನು ಬೇರೆ… ಕೇಳುವುದು ಸರಿಯೋ ತಪ್ಪೋ ತಿಳಿಯೆ.” ಎಂದವನ ಪರದಾಟವನ್ನು ಕಂಡು ಮಾಸ್ತರರು ಕುತೂಹಲಗೊಂಡರು. ಗುದ್ದಲಿಯನ್ನು ಪಕ್ಕಕ್ಕಿಟ್ಟು ತಾವೂ ಕೈತೊಳೆದುಕೊಂಡು ಅಲ್ಲೇ ಇದ್ದ ಸಿಮೆಂಟಿನ ಕಟ್ಟೆಯನ್ನೇರಿ ಕುಳಿತರು.
“ರಾಜು, ಈ ಪೀಠಿಕೆ ಎಲ್ಲ ಬೇಕಾ? ನೀನ್ಯಾವಾಗ ನನ್ನ ಹತ್ರ ಸಂಕೋಚಕ್ಕೆ ಬೀಳೋಹಾಗಾದೆ ಮಾರಾಯಾ! `ನನಗೆ ಮತ್ತೆ ಗಣಿತ ಕಲ್ಸಿಕೊಡ್ತೀರಾ’ ಎನ್ನೊದೊಂದನ್ನು ಕೇಳುವುದು ಬಿಟ್ಟು ಮತ್ತಿನ್ನೇನು ಬೇಕಿದ್ರೂ ಕೇಳ್ಬಹುದಪ್ಪಾ” ಎಂದು ಹಾಸ್ಯ ಮಾಡಿ ಭರವಸೆ ತುಂಬಲು, ಅವನೂ ನಗುತ್ತಾ ನಿರಾಳನಾದ.
“ಸಾರ್, ಆ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ ಎಂಬುದು ಸಾಬೀತಾದ ಮೇಲೂ ನನ್ನ ಮನೆಯವರು, ಊರಿನ ಒಂದಿಷ್ಟು ಜನ ನನ್ನನ್ನು ಅನುಮಾನದಿಂದ ನೋಡಿದ್ರಿಂದ ನಂಗೆ ತುಂಬಾ ಹಿಂಸೆಯಾಗೋಯ್ತು. ಹೀಗಾಗಿ ನಿನ್ನೆ ಯಾರೂ ಬೇಡ ಎಂದು ಬಾಗಿಲು ಜಡಿದು ಕುಳಿತುಬಿಟ್ಟಿದ್ದೆ. ಇನ್ನು ಬಡಪಾಯಿ ಆ ಸಕೀನಾಳ ಸ್ಥಿತಿ ಹೇಗಾಗಿರಬೇಡ? ಅವಳ ಕಡೆಯಂತೂ ಉಸಿರೆತ್ತಲೂ ಅಂಕೆಯಿರುವಾಗ. ಸತ್ಯ ಹೇಳಿದ ಅವಳ ಬದುಕು ಊಹಿಸುವುದು ಕಷ್ಟವೇ. ಕಂಪ್ಯೂಟರ್ ಕಲಿಯುತ್ತ ತುಸುವಾದರೂ ಹಾಯಾಗಿದ್ದವಳನ್ನು ನಾನೇ ಆವತ್ತು ಒತ್ತಾಯದಲ್ಲಿ ಕರ್ಕೊಂಡು ಹೋಗಿ ಘೋರ ಬಂಧನಕ್ಕೆ ಮತ್ತೆ ದೂಡಿಬಿಟ್ನೇನೋ ಅನ್ನಿಸ್ತಿದೆ.. ಆದರೆ ಈಗ ಎಷ್ಟೇ ಪೇಚಾಡಿಕೊಂಡ್ರೂ ಯಾರೇನೂ ಮಾಡೋಕಾಗಲ್ಲ ಬಿಡಿ. ಆದ್ರೆ ಸರ್, ನಿನ್ನೆ ನೀವು ಬಂದು ಹೋದಾಗಿನಿಂದ ಒಂದು ಪ್ರಶ್ನೆ ನನ್ನ ಕಾಡೋಕೆ ಶುರುವಾಯ್ತು. ಅದು, ನಿಮ್ಮ ಪತ್ನಿ ಸಾವಿತ್ರಮ್ಮ ನಿಮ್ಮನ್ನು ಬಿಟ್ಟು ಬೇರೆ ಮದ್ವೆ ಆದ್ಳು ಎಂದು ನಾವು ಶಾಲೆಯಲ್ಲಿರುವಾಗಲೆ ಜೋರು ಸುದ್ದಿಯಾಗಿತ್ತು. ಆದ್ರೆ ನೀವು ಮಾತ್ರ ಒಂದು ದಿನವೂ ಶಾಲೆ ತಪ್ಪಿಸಿದ್ದಿಲ್ಲ. ಆಗ ಜನ ನಿಮ್ಮ ಬಗ್ಗೆ ಏನೇನೆಲ್ಲ ಆಡ್ಕೊಂಡಿರ್ಬಹುದು? ಅದನ್ನೆಲ್ಲಾ ನೀವು ಹೇಗೆ ಎದುರಿಸಿ ಇಲ್ಲೇ, ಇದೇ ಊರಲ್ಲೇ ಗಟ್ಟಿಯಾಗಿ ಬದುಕು ಕಟ್ಟಿಕೊಂಡ್ರಿ? ಈ
ತೋಟ ಎಲ್ಲ ಮಾರಿ ನಿಮ್ಮ ಸೀತಕ್ಕನಿದ್ದ ಕಡೆಗೆ ಹೋಗದೇ ಉಳಿದ್ರಲ್ಲಾ, ಅದ್ಯಾವ ಶಕ್ತಿ ನಿಮ್ಗೆ ಧೈರ್ಯ ಕೊಡ್ತು ಅಂತ ಆಶ್ಚರ್ಯ ಆಗ್ತಿದೆ” ಎಂದವನೇ ಅವರನ್ನು ನೇರವಾಗಿ ನೋಡಲು ಮೋನಪ್ಪ ಮಾಸ್ತರರು ನಿಟ್ಟುಸಿರಿಟ್ಟು ಆಗಸದತ್ತ ನೋಟವನ್ನು ನೆಟ್ಟರು.
“ಮಾರಾಯ ನಿನ್ನೆಯಿಂದ ಯಾಕೋ ಅವಳ ನೆನಪಾಗ್ತಿತ್ತು. ತಪ್ಪಿಸ್ಕೊಂಡು ಓಡಾಡ್ತಿದ್ದೆ. ಈಗ ನೀನು ಜಗ್ಗಿ ನೇರವಾಗಿ ಕಟ್ಟಿಹಾಕ್ಬಿಟ್ಟೆ! ಸರಿ, ಇದೂ ಆಗೋಗ್ಲಿ ಈವತ್ತು. ರಾಜು, ಆ ಬಾಳೆ ಸಸಿಯನ್ನು ನೋಡು, ಇದು ಬೆಳೆದು ದೊಡ್ಡದಾಗಿ, ಒಂದು ಗೊನೆ ಬಿಟ್ಟು ಸಿಹಿಯಾದ ಹಣ್ಣನ್ನು ಎಲ್ಲರಿಗೂ ಕೊಟ್ಟು ಮಣ್ಣಾಗಿಬಿಡ್ತದೆ ಅಲ್ವಾ? ಆದರೆ ಅದು ಅದಕ್ಕೂ ಮುನ್ನ ತನ್ನದೇ ಒಂದೆರಡು ಮರಿಗಳಿಗೆ ತನ್ನ ಸುತ್ತಲೂ ಜೀವವನ್ನಿತ್ತು, ಆಮೇಲೆ ಗೊನೆ ನೀಡಿ ಕೊನೆಯಾಗ್ತದಲ್ಲಾ, ಯಾಕಾಗಿರ್ಬಹುದು ಹೇಳು?” ಎಂದು ಅವನತ್ತ ನೋಡಲು ಆತ ತುಸು ಹೊತ್ತು ಆಲೋಚಿಸಿ ಗೊತ್ತಿಲ್ಲ ಎಂಬಂತೆ ತುಟಿ ಕೊಂಕಿಸಿದ.
“ರಾಜು, ಈಗ ಬೇರೆ ಎಲ್ಲ ಮರಗಳನ್ನೇ ನೋಡು, ಅವುಗಳ ಬೀಜ ಪ್ರಸರಣಗೊಳ್ಬೇಕು… ಆ ಬೀಜ ನೆಲಕ್ಕೆ ಬಿದ್ದು ಚಿಗುರು ಬರೋದು ತಾನೇ… ಆದರೆ ಬಾಳೆಮರ ಹಾಗಲ್ಲ, ಅದ್ರ ಬೀಜ ಬಿದ್ದೋ, ಪರಾಗಸ್ಪರ್ಶದಿಂದಲೋ ಸಸಿ ಆಗೋದಲ್ಲ. ಬಾಳೆಮರದ ಮೂಲದಿಂದಲೇ ಅದರ ಸಸಿ ಹುಟ್ಟೋದು. ಅದು ತಾನು ಕಾಣುವ ಫಲದ ರುಚಿಯನ್ನು ತನ್ನ ಜೀವರಸದಿಂದ ಹುಟ್ಟಿದ ಸಸಿಗಳೂ ಅನುಭವಿಸಲಿ ಎಂಬ ಸದುದ್ದೇಶದಿಂದಲೇ ಮೊದಲು ಅವುಗಳಿಗೆ ಜನ್ಮವಿತ್ತು ಕೊನೆಗೆ ತಾನು ಸಾಫಲ್ಯ ಕಾಣೋದು. ಒಂಥರ ಈ ಬಾಳೆಮರವೊಂದು ಉತ್ತಮ ಗುರುವಿನ ಪ್ರತೀಕ. ತನ್ನ ಜೀವನದ ಸಾರ್ಥಕತೆ ತನ್ನ ಮೂಲದಿಂದ ಎಲ್ಲೆಡೆ ಹರಡಲಿ ಎಂಬಂತೇ ಸಸಿಗಳನ್ನಿತ್ತು, ಕೊನೆಗೆ ರಸವತ್ತಾದ ಗೊನೆಯಲ್ಲಿ ಸಾರ್ಥಕತೆ ಹೊಂದಿ ಮಣ್ಣಾಗಿಬಿಡುತ್ತದೆ. ಇದನ್ನೆಲ್ಲ ನನಗೆ ಹಲವು ವರುಷಗಳ ಹಿಂದೆ ಸೋಗೆಮಠದ ಸ್ವಾಮಿಗಳು ಹೇಳಿದಾಗ, ಅರೆರೆ, ಎಷ್ಟು ಸತ್ಯವಿದು ಅಂತನ್ನಿಸಿಬಿಡ್ತು! ಕಡೆಗೆ ಅದೇ ನನ್ನ ಬದುಕಿಗೊಂದು ಹೊಸ ಅರ್ಥವನ್ನು ಹೊಳೆಸಿದ್ದು ರಾಜು.
ನಾವು ಮನುಷ್ಯರು ನಮ್ಮ ಮನೆ, ನಮ್ದೇ ಮಕ್ಳು ಎಂದು ಒದ್ದಾಡ್ತೀವಿ.. ಸಾವಿತ್ರಿಗೂ ಅದೇ ಆಸೆ ಹೆಚ್ಚಾಗಿರಬಹುದು… ಅವಳ ಬದುಕಿನ ತುಡಿತ ತನ್ನದೇ ಆದ ಒಂದು ಕುಡಿಯಲ್ಲಿದ್ದಿರಬಹುದು. ನಮ್ಮ ಮನದೊಳಗಿನ ದೌರ್ಬಲ್ಯವನ್ನು ಥಟ್ಟನೆ ಹೇಳಲಾಗದಿದ್ದರೂ ದೇಹದೊಳಗಿನ ದೌರ್ಬಲ್ಯವನ್ನು ವೈದ್ಯಕೀಯ ಲೋಕ ಹೇಳಿಬಿಡುತ್ತದಲ್ಲಾ… ಸಂತಾನಹೀನತೆಯ ಹಿಂದಿನ ಸತ್ಯ ಗೊತ್ತಾದಮೇಲೆ ಅವಳು ಪರಿಹಾರ ಹುಡುಕಿಕೊಂಡು ಹೋಗಿದ್ದಿರಬಹುದು. ಮೊದಮೊದಲು ನಂಗೆ ಸಿಟ್ಟುಕ್ಕಿತ್ತು, ಕೂಗಾಡಿದ್ದೆ, ಅವಮಾನದಿಂದ ಕುಗ್ಗಿದ್ದೆ. ಆದರೆ ಆಮೇಲೆ ಅನ್ನಿಸಿತು, ಅವಳೂ ನನ್ನ ಹಾಗೇ ಒಂದು ಜೀವ.. ಅವ್ಳಿಗೆ ತನ್ನದೆ ಆದ ಆಸೆ ಇದ್ರೆ ಅದನ್ನ ತಡೆಯೋ ಹಕ್ಕು ನನಗಿಲ್ಲ. ಎಲ್ಲೇ ಇದ್ರೂ ಖುಶಿಯಾಗಿರ್ಲಿ ಎಂದು ಸುಮ್ನಾಗ್ಬಿಟ್ಟೆ. ಆವತ್ತಿಂದ ನನ್ನ ಬದುಕೇ ನನ್ನ ಶಿಷ್ಯರು ಮತ್ತು ಈ ನನ್ನ ತೋಟವಾಗೋಯ್ತು.
ರಾಜು, ಈ ಊರು ಅಂತಲ್ಲಪ್ಪ… ಯಾವ ಊರಾದರೂ ಅಷ್ಟೆಯೇ… ಲೋಕವೇ ಹೀಗಿರುವಾಗ, ಜನರನ್ನು ಮೆಚ್ಚಿಸಲು ಬದುಕೋದೇ ತಪ್ಪು. ಹೀಗಾಗಿ ನಾವು ನಮ್ಮ ಬದುಕಿಗೆ ನಿಷ್ಠರಾಗಿದ್ರಾಯ್ತು… ಅಲ್ವೋ ಮಾರಾಯ, ಮಿಂಚಿನ ಬೆಳಕಲ್ಲಿ ಎಷ್ಟು ಕೆಲ್ಸ ಮಾಡ್ಬಹುದಪ್ಪಾ? ಅದು ಒಂದಿಷ್ಟು ಗುಡುಗಿ ಹಾಗೆ ಬಂದು ಹೀಗೆ ಹೋಗ್ತದೆ ಅಷ್ಟೇ. ನಾಲ್ಕು ದಿವ್ಸ ಒಂದಿಷ್ಟು ಜನ ನನ್ನನ್ನು ಷಂಡ ಅಂತೆಲ್ಲಾ ಆಡ್ಕೊಂಡ್ರು, ಮತ್ತೊಂದಿಷ್ಟು ಜನ ಇಂಥಾ ಒಳ್ಳೆಯ ಗಂಡನ್ನ ಬಿಟ್ಟು ಹೋದಳಲ್ಲಾ, ಅವ್ಳೆಂತ ಕುಲಟೆ ಅಂತ ಸಾವಿತ್ರಿಯನ್ನೂ ಜರೆದ್ರು. ತಮ್ಮ ಬದುಕಿನೊಳಗಿನ ಕೊರತೆಯನ್ನು ಮರೆಯೋಕೊ, ಕ್ಷಣಿಕ ಮನರಂಜನೆಗಾಗಿಯೊ ಇಂಥದ್ದೇನಾದ್ರೂ ಮಾಡ್ಬೇಕಲ್ಲ. ನಾನು ಅಷ್ಟಕ್ಕಾದ್ರೂ ಉಪಯೋಗಕ್ಕೆ ಬಂದ್ನಲ್ಲಾ ಅಂತ ಸಮಾಧಾನ ಪಟ್ಕೊಂಡೆ. ಕಡೆಗೆ ಅವರಿಗೂ ಸುಸ್ತಾಯ್ತು, ಹೇಳಿದ್ದನ್ನೇ ಹೇಳಿ ಸಾಕಾಗಿ ಸುಮ್ನಾಗ್ಬಿಟ್ರು. ನೀನೂ ಅಷ್ಟೆ, ಇದಕ್ಕೆಲ್ಲ ಜಾಸ್ತಿ ತಲೆ ಕೆಡ್ಸಿಕೊಳ್ಬೇಡ. ನಮಗೆ ಯಾರು ಆದರ್ಶ ಎಂದು ನಾವೇ ಆಯ್ದುಕೊಳ್ಬೇಕು.
ಹಾಗೆ ನೋಡಿದ್ರೆ ನನ್ನ ಬದುಕಿಗೆ ಸ್ಫೂರ್ತಿ ತುಂಬಿದ್ದೇ ಸೀತಕ್ಕ. ಅವ್ಳಿಗೆ ಮದ್ವೆಯಾಗಿ ವರ್ಷವಾಗಿತ್ತೋ ಇಲ್ವೋ, ಹಾವು ಕಚ್ಚಿ ಭಾವ ತೀರಿಹೋಗ್ಬಿಟ್ಟ. ಮತ್ತೆ ಮದ್ವೆ ಬೇಡಾ ಅಂತ ನಿರ್ಧಾರಮಾಡಿದ ಆಕೆ, ಶೀರೂರಿನ ಸರ್ಕಾರೀ ಹಾಸ್ಟೆಲ್ಲಿಗೆ ಕೆಲ್ಸಕ್ಕೆ ಸೇರ್ಕೊಂಡು ಅಲ್ಲಿಯ ಮಕ್ಕಳನ್ನೇ ತನ್ನ ಮಕ್ಕಳು ಅಂತ ಸೇವೆ ಮಾಡ್ಕೊಂಡಿದ್ಳು. ಈಗ ಅನಾರೋಗ್ಯ ಬಂದು ಮನೇಲಿದ್ದಾಳೆ. ಹಾಸ್ಟೆಲ್ಲಿನ ಮಕ್ಕಳೇ ಒಬ್ರಾದ್ಮೇಲೆ ಒಬ್ರು ಬಂದು ಸ್ವಂತ ಮಕ್ಕಳಂತೇ ನೋಡ್ಕೊಳ್ತಿದ್ದಾರಂತೆ. ಮೊನ್ನೆ ನನ್ನನ್ನು ಸೀತಕ್ಕ ಅರ್ಜೆಂಟಾಗಿ ಬಾ ಅಂತ ಕರೆಸಿದ್ಳು… ಕಳೆದ ತಿಂಗ್ಳು ನಮ್ಮ ಶಾಲೆಗೆ ಹೊಸ ಟೀಚರ್ ಒಬ್ರು ಬಂದಿದ್ದಾಳಲ್ಲ ಜಾನಕಿ ಅಂತ… ಅದೇ ನಿನ್ನ ಶಾರದತ್ತೆಯ ವಠಾರದಲ್ಲಿ ರೂಮು ಕೇಳಿದ್ದೆನಲ್ಲ ನಿನ್ನ ತಂದೆಯ ಬಳಿ, ಅದೇ ಹುಡ್ಗಿಯ ಬಗ್ಗೆ ಮಾತಾಡಲು ಹೋಗಿದ್ದಾಗಿತ್ತು. ಪಾಪ ಜಾನಕಿ, ಅನಾಥೆ.. ಸೀತಕ್ಕನ ಸರ್ಕಾರೀ ಹಾಸ್ಟೆಲ್ಲಿನಲ್ಲೇ ಇದ್ಳಂತೆ ಮೊದ್ಲು. ತುಂಬಾ ಒಳ್ಳೇ ಹುಡ್ಗಿ.. ಆದ್ರೆ ಬಹಳ ಅನುಭವಿಸಿದ್ಳು ಅಂತ ಬೇಜಾರು ಪಟ್ಕೊಂಡ್ಳು ಸೀತಕ್ಕ. ಅನಾಥರಿಗೆ ದೇವರೇ ರಕ್ಷಕನಂತೆ.. ಆದರೆ ದೇವರಿದ್ಮೇಲೆ ದೆವ್ವಗಳೂ ಇದ್ದೇ ಇರ್ತವಲ್ಲ ಭಕ್ಷಕರಾಗಿ.. ಯಾರೋ ರಕ್ಕಸ ಅವಳಿಗೆ ಕೊಡಬಾರದ ಹಿಂಸೆ ಕೊಟ್ಟು ಸಾಯೋ ಹಾಗೆ ಮಾಡ್ಬಿಟ್ಟಿದ್ದನಂತೆ. ಅಂತೂ ಸೀತಕ್ಕನಿಂದ ಬದುಕಿ ಬಂದು ಈಗ ಈ ಊರಲ್ಲಿ ನೆಲೆ ಕಾಣ್ತಿದ್ದಾಳೆ. “ಮೋನು, ಜಾನಕಿಯನ್ನು ಚೆನ್ನಾಗಿ ನೋಡ್ಕೋ… ನಾನು ಹೆಚ್ಚು ದಿವ್ಸ ಇರಲ್ವೇನೋ? ಆ ಕೂಸು ಬಹಳ ನೊಂದಿದೆ. ಒಬ್ಳೇ ಇದ್ರೆ ಮತ್ತೇನಾದ್ರೂ ಆದ್ರೆ ಅಂತ ನಂಗೆ ಚಿಂತೆ. ನಿನ್ನ ಮಗಳ ಹಾಗೇ ನಿಮ್ಮನೇಲಿ ಜೊತೆಲಿರ್ತಾಳೆ. ನೀನೇ ನೋಡ್ಕೊಳ್ಬೇಕು ಅವ್ಳನ್ನ” ಎಂದೆಲ್ಲಾ ಜ್ವರದ ತಾಪದಲ್ಲಿ ಬಡಬಡಿಸಿದ್ಳು. ಪಾಪ ಸೀತಕ್ಕನಿಗೆ ಈಗ ಬುದ್ಧಿ ಅಷ್ಟು ಸೂಚಿಸ್ತಿಲ್ಲ.. ಮೊದಲೇ ನೊಂದಿರುವ ಹುಡುಗಿಯನ್ನು, ಮಗಳ ಹಾಗೆ ನನ್ನ ಮನೇಲಿ ನಾನು ಇಟ್ಕೊಂಡ್ರೂ, ಈ ಜಗತ್ತು ಬೇರೆಯೇ ಕಥೆ ಕಟ್ತದೆ. ನನಗೇನೂ ಅದೆಲ್ಲ ಈಗ ತಾಗದಿರಬಹುದು.. ಆದರೆ ಆ ಹುಡುಗಿಯ ಪರಿಸ್ಥಿತಿ ನೋಡ್ಬೇಕಲ್ಲ. ಅದಕ್ಕೆ ಶಾಸ್ತ್ರಿಗಳಿಗೆ ಹೇಳಿ ಶಾರದಮ್ಮನ ವಠಾರದಲ್ಲಿ ರೂಮು ಕೊಡಿಸಿದ್ದು. ಅಕ್ಕನಿಗೆ ಏನೋ ಒಂದು ಸಮಾಧಾನ ಹೇಳಿ ಬಂದಿದ್ದೇನೆ.
ರಾಜು, ಈ ಜಗತ್ತೇ ಹಾಗಿದೆಯಪ್ಪಾ.. ಬೆಳ್ಳಗಿರುವುದೆಲ್ಲ ಹಾಲಲ್ಲ ಎನ್ನುತ್ತ ಎಷ್ಟೋ ಸಲ ಹಾಲನ್ನೇ ಪಾತ್ರೆಯ ಸಮೇತ ಎಸೆದುಬಿಡ್ತಾರೆ… ನಾವು ಬದಲಾಗಬೇಕಷ್ಟೇ” ಎಂದು ನಸುನಗುತ್ತ ಅವನತ್ತ ನೋಡಲು, ರಾಜೀವನೋ ಗಂಭೀರವಾಗಿ ಯಾವುದೋ ಆಲೋಚನೆಯಲ್ಲಿ ಮುಳುಗಿಬಿಟ್ಟಿದ್ದನು. ಅವನ ಮೌನವನ್ನು ಮುರಿಯಲು ಅವರಿಗೆ ಇಷ್ಟವಾಗದೆ, ಹಾಗೇ ಸುಮ್ಮನೆ ಬಾಳೆತೋಟದ ಸುತ್ತಲೂ ಒಂದು ನೋಟವನ್ನು ಹರಿಸಿದರು. ಥಟ್ಟನೆ ಅವರ ಕಣ್ಣಿಗೆ ಪುಟ್ಟ ಹಕ್ಕಿಮರಿಯೊಂದು ಬಾಳೆಮರದ ಮೇಲೆ ಕುಳಿತು ತನ್ನ ಕೊಕ್ಕಿನಿಂದ ಗೊನೆಯ ತುದಿಗೆ ಮೂಡಿದ್ದ ಬಾಳೆಕುಂಡಿಗೆಯೊಳಗಿನಿಂದ ಅದರ ರಸವನ್ನು ಹೀರುತ್ತಿರುವುದು ಕಾಣಿಸಲು, ಅದನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರು.
*****
ಆ ವರುಷದ ಮಳೆಗಾಲವು ಮುಗಿದು, ಶಿಶಿರನೂ ಬಂದು ಹೋಗಿ, ವಸಂತನಾಗಮನವಾಗಿತ್ತು. ಪೂಜೆಗೆಂದು ತೋಟದಲ್ಲಿ ಹೂ ಕೀಳುತ್ತಿದ್ದವರ ಜೇಬಿನಲ್ಲಿದ್ದ ಮೊಬೈಲ್ ರಿಂಗಾಗಲು ತಡಬಡಿಸಿ ಹೊರತೆಗೆದರು. ತಿಂಗಳ ಹಿಂದೆ ಶಿಷ್ಯನೇ ಒತ್ತಾಯಿಸಿ ಕೊಡಿಸಿದ್ದ ಹೊಸ ಮೊಬೈಲಿನ ಮೇಲೆ ಫೋನ್ ಮಾಡಿದವರ ನಂಬರಿನ ಜೊತೆಗೆ ನವದಂಪತಿಗಳಾದ ಜಾನಕಿ ಮತ್ತು ರಾಜೀವರ ನಗುವಿನ ಭಾವಚಿತ್ರ ಹೊಳೆಯುತ್ತಿತ್ತು. ಅದನ್ನು ಕಣ್ತುಂಬಿಕೊಳ್ಳುತ್ತ ನಗುಮೊಗದಿಂದ ಕರೆಯನ್ನು ಸ್ವೀಕರಿಸಿದರು ಮೋನಪ್ಪ ಮಾಸ್ತರರು.