ಅಜ್ಜಿಮನೆಯಲ್ಲಿ ಕಳೆಯುವ ಅವಕಾಶ ಬೇಸಿಗೆರಜೆಯಲ್ಲಿ ಮಾತ್ರ. ಹೈಸ್ಕೂಲಿಗೆ ಸೇರುವವರೆಗೂ ಬೇಸಿಗೆರಜೆ ಶುರುವಾಗುತ್ತಿದ್ದಂತೇ ನನ್ನದು ಅಜ್ಜಿಮನೆಗೆ ಸವಾರಿ. ರಜೆ ಸಿಕ್ಕ ಮರುದಿನವೇ ಅಜ್ಜಿ ನಮ್ಮ ಮನೆಗೆ ದೊಡ್ಡಮಾವನನ್ನು ಕಳಿಸುತ್ತಿದ್ದರು. ಮಾವ ಕೆಂಪು ಬಸ್ಸಿನಲ್ಲಿ ನನ್ನನ್ನು ಕೂರಿಸಿಕರೆದುಕೊಂಡು ಹೋಗುತ್ತಿದ್ದರು. ಅಜ್ಜಿಮನೆಗೆ ಹೋಗುವಾಗ ಹಾಕಲೆಂದೇ ಅಮ್ಮ ಹಾಲು ಮಾರಿದ ದುಡ್ಡನ್ನು ಅಪ್ಪನಿಗೆ ಕಾಣದಂತೆ ತೆಗೆದಿರಿಸಿ ನನಗೆ ಹೊಸಬಟ್ಟೆ ಹೊಲಿಸಿ ಕೊಡುತ್ತಿದ್ದಳು.
ಅದನ್ನು ಧರಿಸಿ ಸಂಭ್ರಮದಿಂದ ನಾನು ಅಜ್ಜಿಮನೆಗೆ ಹೋಗುತ್ತಿದ್ದೆ.
ಈ ಬೇಸಿಗೆರಜೆಯಲ್ಲಿ ಅಜ್ಜಿಮನೆಗೆ ಹೋಗು. ಅಜ್ಜಿ ಕಾಯುತ್ತಿರುತ್ತಾಳೆ. ಕಳೆದ ಬೇಸಿಗೆರಜೆಯಲ್ಲೂ ಹೋಗಿಲ್ಲ. ಕಂಪ್ಯೂಟರ್, ಮೊಬೈಲ್ ಎಂದು ಇಲ್ಲಿ ಕಾಲಕಳೆಯಬೇಡ’ ಮಗನಿಗೆ ಹೇಳಿದೆ. ಅವನು ‘ಒಲ್ಲೆ’ ಎಂದ. ‘ಏಕೆ?’ ಎಂದು ಕೇಳಿದೆ. ‘ಅಲ್ಲಿ ತುಂಬ ಬೋರ್’ ಎಂದು ಹೇಳಿದ. ಮನಸ್ಸು ಹಿಂದಕ್ಕೋಡಿತು. ನನ್ನ ಬಾಲ್ಯದ ದಿನಗಳು ನೆನಪಾದವು.
ಅಜ್ಜಿಮನೆಯ ಅಕ್ಕರೆಯಲ್ಲಿ ಬೆಳೆದವಳು ನಾನು. ಹನ್ನೆರಡು ಜನ ಮೊಮ್ಮಕ್ಕಳಲ್ಲಿ ಅಜ್ಜಿಮನೆಯ ಪ್ರೀತಿ ಅತೀ ಹೆಚ್ಚು ಪಡೆದವಳು ನಾನೇ ಎಂದು ಹೇಳಲು ಸಂತೋಷ, ಹೆಮ್ಮೆ. ನಾನು ಅಜ್ಜಿಮನೆಯ ಕಣ್ಮಣಿಯಾಗಲು ಕಾರಣವೂ ಇದೆ. ಉಳಿದ ಎಲ್ಲ ಮೊಮ್ಮಕ್ಕಳಿಗಿಂತ ನಾನು ಮೊದಲು ಹುಟ್ಟಿದವಳು. ಅಜ್ಜಿ, ಸೋದರಮಾವಂದಿರು, ಚಿಕ್ಕಮ್ಮ ಹೇಳುವಂತೆ ಬಾಲ್ಯದಲ್ಲಿ ನಾನು ಬಹಳ ಮುದ್ದಾಗಿದ್ದೆನಂತೆ ಮತ್ತು ಬುದ್ಧಿವಂತಳಿದ್ದೆನಂತೆ. ನನಗೆ ಸಹನಾ ಎಂಬ ಹೆಸರನ್ನು ಚಿಕ್ಕಮ್ಮನೇ ಅಂತೆ ಇಟ್ಟದ್ದು. ನಾನು ಹುಣ್ಣಿಮೆಯ ದಿನ ಹುಟ್ಟಿದ್ದರಿಂದಾಗಿ ಪೂರ್ಣಿಮಾ ಎಂದು ಹೆಸರಿಡೋಣ ಎಂದು ನನ್ನ ತಂದೆ ಹಾಗೂ ಸೋದರತ್ತೆಯರು ಹೇಳಿದ್ದಕ್ಕೆ ಚಿಕ್ಕಮ್ಮ, ‘ಪೂರ್ಣಿಮಾ ಎಂಬುದು ಹಳೆಯ ಹೆಸರು. ಅದು ಬೇಡ. ಸಹನಾ ಎಂಬ ಹೊಸ ಹೆಸರನ್ನಿಡೋಣ’ ಎಂದರಂತೆ. ತಂದೆ ಒಪ್ಪದಿದ್ದುದಕ್ಕೆ ಅತ್ತೂ ಕರೆದು, ಒಂದು ದಿನವಿಡೀ ನಿರಶನಮಾಡಿ ‘ಸಹನಾ’ ಎಂದು ಹೆಸರಿಡಿಸುವುದರಲ್ಲಿ ಯಶಸ್ವಿಯಾದರಂತೆ.
‘ಚಿಕ್ಕವಳಿರುವಾಗ ನಿನ್ನನ್ನು ಕೊಂಡಾಟ ಮಾಡಿದಷ್ಟು ನಾವು ನಮ್ಮ ಮಕ್ಕಳನ್ನೂ ಮಾಡಿಲ್ಲ’ ಎಂದು ನನ್ನ ಚಿಕ್ಕಮ್ಮ, ಮಾವಂದಿರು ಆಗಾಗ ಹೇಳುತ್ತಾರೆ. ಅವರೆಲ್ಲ ಹೇಳುವ ಪ್ರಕಾರ ತಾಯಿ ನನ್ನ ಬಾಣಂತನಕ್ಕೆಂದು ಅಜ್ಜಿಮನೆಗೆ ಬಂದ ಸಮಯದಲ್ಲಿ ನನ್ನ ಇಬ್ಬರು ಚಿಕ್ಕಮಾವಂದಿರು ಹಾಸ್ಟೆಲ್ನಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದರೆ ದೊಡ್ಡಮಾವ ಬಿ.ಎಡ್. ಪರೀಕ್ಷೆಗೆ ಓದಿಕೊಳ್ಳಲೆಂದು ಮನೆಯಲ್ಲೇ ಇದ್ದರಂತೆ. ನಾನು ಹುಟ್ಟಿದ ಸಮಯದಲ್ಲಿ ನನ್ನ ಕಿರಿಯ ಸೋದರತ್ತೆಗೆÉ ಮಾನಸಿಕ ಅಸ್ವಸ್ಥತೆ ಇದ್ದುದರಿಂದ ಔಷಧಿ ಮಾಡಿಸಲು ಅವರÀ ಗಂಡ ನಮ್ಮ ಮನೆಗೆ ಅಂದರೆ ಅವರ ತಾಯಿಮನೆಗೆ ತಂದುಬಿಟ್ಟಿದ್ದರು. ಮನಸ್ಸಿನ ಒತ್ತಡ ವಿಪರೀತವಾದ ಸಂದರ್ಭದಲ್ಲಿ ಸೋದರತ್ತೆ ಭರಣಿ, ಪಾತ್ರೆ, ಸೌಟು, ತಲೆದಿಂಬು ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ಕೊಂಡುಹೋಗಿ ಬಾವಿಗೆ ಎಸೆಯುತ್ತಿದ್ದರಂತೆ. ಪುಟ್ಟ ಮಗುವಾದ ನನ್ನನ್ನೂ ಅವರು ಹಾಗೆ ಬಾವಿಗೆ ಎಸೆದರೇನು ಗತಿ ಎಂಬ ಹೆದರಿಕೆ ಎಲ್ಲರನ್ನೂ ಕಾಡತೊಡಗಿತಂತೆ! ಹಾಗಾಗಿ ತಾಯಿ ಬಾಣಂತನ ಮುಗಿಸಿ ನಮ್ಮ ಮನೆಗೆ ಹೋದರೂ, ನಾನು ಮಾತ್ರ ಅಜ್ಜಿಮನೆಯಲ್ಲೇ ಉಳಿದೆ. ದೊಡ್ಡಮಾವ, ಚಿಕ್ಕಮ್ಮನೇ ನನಗೆ ತಂದೆ-ತಾಯಿಯಾದರು. ಎರಡು-ಮೂರು ತಿಂಗಳಿಗೊಮ್ಮೆ ತಾಯಿತಂದೆಗೆ ತೋರಿಸುವುದಕ್ಕೋಸ್ಕರ ನಮ್ಮ ಮನೆಗೆ ನನ್ನನ್ನು ಕರೆದುಕೊಂಡು ಬಂದು ಎರಡು ದಿನ ಇದ್ದು ಮತ್ತೆ ಅಜ್ಜಿಮನೆಗೆ ಕರೆದೊಯ್ಯುತ್ತಿದ್ದರಂತೆ.
ನಾನು ಎಂಟು ತಿಂಗಳಲ್ಲಿ ಹುಟ್ಟಿದ್ದಕ್ಕೋ ಏನೋ ತಾಯಿಗೆ ಒಂದು ಬೊಟ್ಟು ಮೊಲೆಹಾಲು ಇರಲಿಲ್ಲ. ನನಗೆ ಚಮಚದಲ್ಲೇ ಹಾಲು ಕುಡಿಸುತ್ತಿದ್ದರು. ರಾತ್ರಿಯೆಲ್ಲ ನಾನು ಅಳುತ್ತಲೇ ಇದ್ದೆ. ತಾಯಿಯೋ ಹಸಿ ಬಾಣಂತಿ. ನನ್ನನ್ನು ಎಷ್ಟೂಂತ ನೋಡಬಹುದು? ಅಜ್ಜಿಗೂ ಹಗಲೆಲ್ಲ ಕೆಲಸ ಮಾಡಿ ರಾತ್ರಿ ದಿಂಬಿಗೆ ತಲೆಕೊಡುವುದೇ ತಡ ನಿದ್ರೆ ಬಂದುಬಿಡುತ್ತಿತ್ತು. ಅಮ್ಮನ ಬಾಣಂತನ ಮುಗಿಯುವ ನಾಲ್ಕು ತಿಂಗಳ ತನಕವೂ ರಾತ್ರಿ ಒಂಭತ್ತು ಗಂಟೆಯಿಂದ ನಡುರಾತ್ರಿ ಕಳೆಯುವವರೆಗೂ ದೊಡ್ಡಮಾವನೇ ನನ್ನನ್ನು ನೋಡಿಕೊಳ್ಳುತ್ತಿದ್ದುದು. ಅತ್ತಾಗ ರಮಿಸುತ್ತ ಪರೀಕ್ಷೆಗೆ ಓದುತ್ತಿದ್ದರು. ರಾತ್ರಿ ಸುಮಾರು ಒಂದು ಗಂಟೆಯ ನಂತರ ಅಮ್ಮನ ಹತ್ತಿರ ಕೊಟ್ಟು ತಾನು ಮಲಗಲು ಹೋಗುತ್ತಿದ್ದರು. ನಾನೆಂದರೆ ಅವರಿಗೆ ಅಷ್ಟು ಪ್ರೀತಿ. ‘ನನಗೆ ಯಾವ ಮಕ್ಕಳೂ ನೀನು ಕೊಟ್ಟ ಸಂತೋಷ ಕೊಡಲಿಲ್ಲ’ ಎಂದು ಈಗಲೂ ಹೇಳುತ್ತಾರೆ.
ದೊಡ್ಡಮಾವ ನನ್ನನ್ನು ಪ್ರೀತಿಯಿಂದ ‘ಪುಟ್ಟೂ’ ಎಂದು ಕರೆಯುತ್ತಿದ್ದರು. ನಾನೂ ಮಾವನನ್ನು ‘ಪುಟ್ಟೂ’ ಎಂದೇ ಕರೆಯುತ್ತಿದ್ದೆ. ನಾನು ಹೈಸ್ಕೂಲಿಗೆ ಹೋಗುವವರೆಗೂ ಹಾಗೆ ಕರೆಯುತ್ತಿದ್ದೆ. ಮಾವ ಮಲ್ಲಿಗೆಮೊಗ್ಗು ಕೊಯ್ದು, ಸ್ವತಃ ಮಾಲೆ ಕಟ್ಟಿ ನನ್ನ ಸಣ್ಣಕೂದಲಿಗೆ ಮುಡಿಸುತ್ತಿದ್ದರು. ‘ಪುಟ್ಟೂ, ನೀನೂ ಹೂ ಮುಡಿಯಬೇಕು’ ಎನ್ನುತ್ತಿದ್ದೆ. ಅವರು ಪುಟ್ಟ ಮಲ್ಲಿಗೆ ಮಾಲೆಯನ್ನು ಬಾಳೆಬಳ್ಳಿಯಿಂದ ಕಿವಿಗೆ
ಕಟ್ಟಿಕೊಂಡ ಮೇಲೆಯೇ ಸುಮ್ಮನಾಗುತ್ತಿದ್ದೆ. ಅಜ್ಜಿಮನೆ ಪಕ್ಕದವರ ಮನೆಯಲ್ಲಿ ಗೆಂಟಿಗೆಹೂವಿನ ಗಿಡ ಇತ್ತು. ‘ನನಗೆ ಆ ಹೂವು ಬೇಕು. ಕೊಡು’ ಎಂದು ಅಜ್ಜನನ್ನು ಒಮ್ಮೆ ಕೇಳಿದ್ದಕ್ಕೆ, ಅಜ್ಜ ಎಲ್ಲಿಂದಲೋ ನಾಮಗೆಂಟಿಗೆ, ಅಕ್ಕಚ್ಚುಗೆಂಟಿಗೆ, ಬಿಳಿ ಗೆಂಟಿಗೆ, ನೇರಳೆಗೆಂಟಿಗೆ… ಹೀಗೆ ಎಲ್ಲ ಜಾತಿಯ ಗೆಂಟಿಗೆಗಿಡ ತಂದು ಅಂಗಳದಲ್ಲಿ ನೆಟ್ಟಿದ್ದರು. ನನ್ನನ್ನು ಅಜ್ಜಿಮನೆಯಲ್ಲಿ ‘ಕೆಳಗೆ ಇಟ್ಟರೆ ಇರುವೆ ಕೊಂಡುಹೋಗಬಹುದು. ಮೇಲೆ ಇಟ್ಟರೆ ಕಾಗೆ ಕಚ್ಚಿಕೊಂಡು ಹೋಗಬಹುದು’ ಎಂಬಷ್ಟು ಮುಚ್ಚಟೆಯಿಂದ ಸಾಕಿದರು. ಐದುವರ್ಷ ಹಿಡಿಯುವವರೆಗೂ ಅಜ್ಜಿಮನೆಯಲ್ಲೇ ಇದ್ದ ನನ್ನನ್ನು ಅಜ್ಜಿ ಮದುವೆ, ಮುಂಜಿ, ಜಾತ್ರೆ, ಸಂತೆ ಹೀಗೆ ಎಲ್ಲಿಗೆ ಹೋಗುತ್ತಿದ್ದರೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದಲ್ಲೆಲ್ಲ ಎಲ್ಲರೂ ‘ಇವಳು ನಿನ್ನ ಕೊನೆಯ ಮಗಳಾ?’ ಎಂದು ಅಜ್ಜಿಯನ್ನು ಕೇಳುತ್ತಿದ್ದರಂತೆ!
ಅಜ್ಜಿ, ಚಿಕ್ಕಮ್ಮನಿಗೆ ಚಕ್ಕುಲಿ, ಕೋಡುಬಳೆ, ಕಡುಬು, ಕರ್ಜಿಕಾಯಿ, ಉಂಡ್ಳಕಾಳು ಇತ್ಯಾದಿ ಯಾವ ವಿಶೇಷ ಅಡುಗೆ ಮಾಡಲೂ ನಾನು ಬಿಡುತ್ತಿರಲಿಲ್ಲ. ಅದು ಇನ್ನೂ ತಯಾರಾಗುತ್ತಿದೆ ಎನ್ನುವಾಗಲೇ ತಿನ್ನಲು ಕೊಡಲು ಹಠ ಹಿಡಿಯುತ್ತಿದ್ದೆ. ಅಂಥ ಸಂದರ್ಭದಲ್ಲಿ ದೊಡ್ಡ ಮಾವ ನನ್ನನ್ನು ಉಪ್ಪರಿಗೆಗೆ ಎತ್ತಿಕೊಂಡು ಹೋಗಿ ತಿಂಡಿ ಆಗುವವರೆಗೂ ಆಟ ಆಡಿಸುತ್ತಿದ್ದರು. ತಿಂಡಿ ಬೇಯುತ್ತಿರುವ ಪರಿಮಳ ಉಪ್ಪರಿಗೆಗೆ ಬರುವಾಗ ನಾನು ಮೂಗರಳಿಸಿ ‘ಪುಟ್ಟೂ, ಯಾವುದೋ ಅಡುಗೆ ಪರಿಮಳ ಬರುತ್ತಿದೆ. ಅಜ್ಜಿ ತಿಂಡಿ ಮಾಡಿದ್ದಾರೆಂದು ಕಾಣುತ್ತದೆ. ನಾವು ಕೆಳಗೆ ಹೋಗುವ’ ಎನ್ನುತ್ತಿದ್ದೆ. ಕೆಳಗಿನಿಂದ ಅಜ್ಜಿ ಇಲ್ಲವೇ ಚಿಕ್ಕಮ್ಮ `ಇನ್ನು ಬರಬಹುದು’ ಎಂದು ಹೇಳಿದ ಮೇಲೆಯೇ ಮಾವ ನನ್ನನ್ನು ಕೆಳಗೆ ಇಳಿಸುತ್ತಿದ್ದುದು.
ನನಗೆ ನಾಲ್ಕು ವರ್ಷ ಕಳೆಯುವಷ್ಟರಲ್ಲಿ ಚಿಕ್ಕಮ್ಮನ ಮದುವೆಯಾಯಿತು. ಅಲ್ಲಿಯವರೆಗೆ ನಾನು ಚಿಕ್ಕಮ್ಮನ ಜೊತೆಯಲ್ಲೇ ಮಲಗುತ್ತಿದ್ದುದು. ಚಿಕ್ಕಮ್ಮನ ಮದುವೆಯ ದಿನ ರಾತ್ರಿ ನಾನು ಎಂದಿನಂತೆ ಅವರ ಜೊತೆಗೆ ಮಲಗಲು ಹೊರಟೆ. ಯಾವಾಗಲೂ ತನ್ನ ಬಳಿಯೇ ಮಲಗಿಸಿಕೊಳ್ಳುತ್ತಿದ್ದ ಚಿಕ್ಕಮ್ಮ ಅಂದು ನನ್ನನ್ನು ಸೇರಿಸಿಕೊಳ್ಳಲಿಲ್ಲ. ಅಜ್ಜಿ, ಅಜ್ಜ, ಮಾವಂದಿರು ತಮ್ಮ ಹತ್ತಿರ ಬರಲು ಕರೆದರು. ಆದರೆ ನಾನು ‘ನನಗೆ ಚಿಕ್ಕಮ್ಮನೇ ಬೇಕು. ಚಿಕ್ಕಮ್ಮನ ಜೊತೆಯೇ ನಾನು ಮಲಗುವುದು’ ಎಂದು ಏರುದನಿಯಲ್ಲಿ ಅಳುತ್ತಾ ಇಡೀ ರಾತ್ರಿ ಜಾಗರಣೆ ಮಾಡಿದೆ. ಚಿಕ್ಕಮ್ಮ-ಚಿಕ್ಕಪ್ಪ ಈಗಲೂ ಇದನ್ನು ಆಗಾಗ ನೆನಪಿಸಿಕೊಂಡು ನಗುತ್ತಾರೆ. ನನ್ನ ಮದುವೆಯ ದಿನ ರಾತ್ರಿ ಚಿಕ್ಕಮ್ಮ ತನ್ನ ಇಬ್ಬರು ಪುಟ್ಟ ಹೆಣ್ಣುಮಕ್ಕಳಲ್ಲಿ ‘ಸಹನಕ್ಕನ ಜೊತೆಯೇ ಮಲಗುವುದು ಎಂದು ಹಠಹಿಡಿಯಿರಿ ಮಕ್ಕಳೇ’ಎನ್ನುತ್ತ ನನಗೆ ತಮಾಷೆ ಮಾಡಿದ್ದನ್ನು ನೆನಪಿಸಿಕೊಂಡರೆ ನನಗೀಗಲೂ ನಗು.
ನನಗೆ ಐದು ವರ್ಷ ಆಗುವಾಗ ನನ್ನ ಅತ್ತೆಯ ಮಾನಸಿಕ ಅಸ್ವಸ್ಥತೆ ಹೊರಟುಹೋಗಿ ಅವರು ಎಲ್ಲರಂತೆ ಆದರು. ಹಾಗಾಗಿ ತಂದೆ ನನ್ನನ್ನು ಅಜ್ಜಿಮನೆಯಿಂದ ತನ್ನ ಮನೆಗೆ ಕರೆದುಕೊಂಡು ಬಂದು ಒಂದನೇ ತರಗತಿಗೆ ಸೇರಿಸಿದರು. ನನಗಾಗ ತಮ್ಮನೂ ಹುಟ್ಟಿದ್ದ. ಅಲ್ಲಿಗೆ ನನ್ನ ಬಾಲ್ಯದ ಸುವರ್ಣಕಾಲ ಮುಗಿಯಿತೆಂದೇ ಹೇಳಬೇಕು. ಅಜ್ಜಿಮನೆಯಲ್ಲಿ ಸಿಕ್ಕ ಪ್ರೀತಿ, ವಾತ್ಸಲ್ಯ, ಮಮತೆ ನನ್ನ ಮನೆಯಲ್ಲಿ ಸಿಗಲಿಲ್ಲ. ತಾಯಿಗೆ ವಾರ-ತಿಂಗಳುಗಟ್ಟಲೆ ಬಂದು ಉಳಿಯುವ ನನ್ನ ಸೋದರತ್ತೆಯಂದಿರ ಸೇವೆ, ಆಳವಾದ ಬಾವಿಯಿಂದ ನೀರು ಸೇದುವುದು, ಹಾಲು ಕರೆಯುವುದು, ತಮ್ಮನ ಲಾಲನೆಪಾಲನೆ ಹೀಗೆ ಬಿಡುವಿಲ್ಲದ ಕೆಲಸದ ಒತ್ತಡದಲ್ಲಿ ನನ್ನನ್ನು ಗಮನಿಸಲು ಪುರುಸೊತ್ತು ಸಿಗಲಿಲ್ಲ. ನಾನು ಹತ್ತರಲ್ಲಿ ಒಬ್ಬಳಾಗಿ ಹೋದೆ. ಇಲ್ಲಿ ನಾನು ಬಿದ್ದರೆ ಎತ್ತಿಕೊಳ್ಳುವವರಿರಲಿಲ್ಲ, ಅತ್ತರೆ ಸಮಾಧಾನ ಪಡಿಸುವವರಿರಲಿಲ್ಲ.
ಅಜ್ಜಿಮನೆಯಲ್ಲಿ ಕಳೆಯುವ ಅವಕಾಶ ಬೇಸಿಗೆರಜೆಯಲ್ಲಿ ಮಾತ್ರ. ಹೈಸ್ಕೂಲಿಗೆ ಸೇರುವವರೆಗೂ ಬೇಸಿಗೆರಜೆ ಶುರುವಾಗುತ್ತಿದ್ದಂತೇ ನನ್ನದು ಅಜ್ಜಿ ಮನೆಗೆ ಸವಾರಿ. ರಜೆ ಸಿಕ್ಕ ಮರುದಿನವೇ ಅಜ್ಜಿ ನಮ್ಮ ಮನೆಗೆ ದೊಡ್ಡಮಾವನನ್ನು ಕಳಿಸುತ್ತಿದ್ದರು. ಮಾವ ಕೆಂಪು ಬಸ್ಸಿನಲ್ಲಿ ನನ್ನನ್ನು ಕೂರಿಸಿ ಕರೆದುಕೊಂಡು ಹೋಗುತ್ತಿದ್ದರು. ಅಜ್ಜಿಮನೆಗೆ ಹೋಗುವಾಗ ಹಾಕಲೆಂದೇ ಅಮ್ಮ ಹಾಲು ಮಾರಿದ ದುಡ್ಡನ್ನು ಅಪ್ಪನಿಗೆ ಕಾಣದಂತೆ ತೆಗೆದಿರಿಸಿ ನನಗೆ ಹೊಸಬಟ್ಟೆ ಹೊಲಿಸಿ ಕೊಡುತ್ತಿದ್ದಳು. ಅದನ್ನು ಧರಿಸಿ ಸಂಭ್ರಮದಿಂದ ನಾನು ಅಜ್ಜಿಮನೆಗೆ ಹೋಗುತ್ತಿದ್ದೆ.
ಅಜ್ಜಿಮನೆಯೆಂದರೆ ಬರೀ ಆಟವಾಡುವ ತಾಣ ಎಂದು ನೀವು ಊಹಿಸಿದ್ದರೆ ಅದು ತಪ್ಪು. ನಾನು ಈಗ ಮೊದಲಿನಂತೆ ಚಿಕ್ಕ ಮಗು ಅಲ್ಲ, ಬೆಳೆದಿದ್ದೆ. ಆಟದ ಜೊತೆಗೆ ಕೆಲಸವೂ ಇರುತ್ತಿತ್ತು. ದೊಡ್ಡಮಾವ ಹೈಸ್ಕೂಲಿನಲ್ಲಿ ಪಾಠ ಮಾಡುವ ಮೇಷ್ಟ್ರಾಗಿದ್ದರು. ಆದರೂ ಕೃಷಿಕಾಯಕ ಬಿಟ್ಟಿರಲಿಲ್ಲ. ಗೇರುಹಣ್ಣು ಕೊಯ್ಯಲು ಹೋಗುವಾಗ ಹೆಕ್ಕಲು ನನ್ನನ್ನು ಕರೆಯುತ್ತಿದ್ದರು. ಆ ಉರಿಬಿಸಿಲಿನಲ್ಲಿ ನಾನು ಗೊಣಗಾಡದೆ ಇಡೀ ದಿನ ಮಾವ ದೋಟಿಯಲ್ಲಿ ಕೊಯಿದು ಹಾಕಿದ ಗೇರುಹಣ್ಣುಗಳನ್ನು ಹೆಕ್ಕುತ್ತಿದ್ದೆ. ಮನೆಗೆ ಬಂದ ಮೇಲೂ ಸುಮ್ಮನೆ ಕೂರುತ್ತಿರಲಿಲ್ಲ. ಗೇರುಹಣ್ಣಿಂದ ಬೀಜ ಬೇರ್ಪಡಿಸಿ ಹಣ್ಣನ್ನು ದನಗಳಿಗೆ ತಿನ್ನಲು ಕೊಡುತ್ತಿದ್ದೆ. ಮಾವಿನಹಣ್ಣಿನ ಸಮಯದಲ್ಲಿ ಅಜ್ಜಿ ನನ್ನನ್ನು ಬೆಳಗ್ಗೆ ಬೇಗನೆ ಏಬ್ಬಿಸಿ ಗದ್ದೆಯ ಒಂದು ಬದಿಯಲ್ಲಿ ಬೀಳುವ ಕಾಡುಮಾವಿನಹಣ್ಣು ಹೆಕ್ಕಿ ತರಲು ಹೇಳುತ್ತಿದ್ದಳು. ಬೇಗನೆ ಎಬ್ಬಿಸುವುದು ಏಕೆಂದರೆ ತಡವಾಗಿ ಹೋದರೆ ಊರಿನ ಮಕ್ಕಳೆಲ್ಲ ಬಂದು ಹೆಕ್ಕುತ್ತಿದ್ದರು. ನಮಗೆ ಒಂದೂ ಸಿಗುತ್ತಿರಲಿಲ್ಲ. ಅದಕ್ಕೆ ನಾನು ನಸುಕಿನಲ್ಲಿ ದಾರಿ ಕಾಣುತ್ತದೆ ಎನ್ನುವಾಗ ಎದ್ದು ಹಾಳೆಚಿಳ್ಳಿ ಹಿಡಿದು ಮರದಬುಡಕ್ಕೆ ಓಡುತ್ತಿದ್ದೆ. ಚಿಳ್ಳಿ ತುಂಬ ಹೆಕ್ಕಿ ತಂದು ಅಜ್ಜಿ ಜೊತೆ ಮಾಂಬಳ ಎರೆಯಲು ಸಹಕರಿಸುತ್ತಿದ್ದೆ. ಹಲಸಿನ ಸಮಯದಲ್ಲಿ ಅಜ್ಜ ಮರಕ್ಕೆ ಹತ್ತಿ ಹಲಸಿನಕಾಯಿ ಕಿತ್ತು ತಂದು ಮೆಟ್ಟುಗತ್ತಿಯಲ್ಲಿ ಕೂತು ತುಂಡು ಮಾಡುತ್ತಿದ್ದರು. ನಾನೂ, ಅಜ್ಜಿಯೂ ಸೊಳೆ ಬೇರ್ಪಡಿಸುತ್ತಿದ್ದೆವು. ನಂತರ ಅಜ್ಜಿ ಅದನ್ನು ಬೇಯಲಿಕ್ಕಿಟ್ಟು ರುಬ್ಬಿ ಹಪ್ಪಳ ಮಾಡುತ್ತಿದ್ದರು. ಉಂಡೆ ಮಾಡುವುದು, ಒತ್ತುವುದು ನನ್ನ ಮತ್ತು ಅಜ್ಜನ ಕೆಲಸವಾಗಿತ್ತು. ಈ ಎಲ್ಲ ಕೆಲಸಗಳೂ ಹೊರೆ ಎಂದು ನನಗೆ ಅನಿಸುತ್ತಿರಲೇ ಇರಲಿಲ್ಲ. ಖುಷಿಯಿಂದ ಮಾಡುತ್ತಿದ್ದೆ.
ಅಜ್ಜಿಯ ಮಲೆನಾಡಿನ ಹಳ್ಳಿಅಡುಗೆಯ ಘಮ ಈವತ್ತಿಗೂ ನೆನಪಿಂದ ಮಾಸಿಲ್ಲ. ಅಜ್ಜಿ ಗುಜ್ಜೆಪಲ್ಯ, ಮಾವಿನಹಣ್ಣಿನ ಗೊಜ್ಜು ಮಾಡಿ ಅಡಿಕೆಹಾಳೆಯಲ್ಲಿ ಬಡಿಸಿದರೆ ಹೊಟ್ಟೆ ತುಂಬಿದರೂ ಇನ್ನೂ ಉಣ್ಣಬೇಕು ಎನಿಸುತ್ತಿತ್ತು. ಆಗ ಅಜ್ಜನಮನೆಯಲ್ಲಿ ಬಟ್ಟಲು ಇರಲಿಲ್ಲ. ನಮ್ಮ ಮನೆಯಲ್ಲೂ ಇರಲಿಲ್ಲ. ತೋಟದಲ್ಲಿ ಬೀಳುವ ಅಡಿಕೆಹಾಳೆಯನ್ನೇ ಉಪಯೋಗಿಸುತ್ತಿದ್ದೆವು. ಮಳೆಗಾಲಕ್ಕೆ ಬೇಕಾದ ಹಾಳೆಯನ್ನು ಬೇಸಿಗೆಯಲ್ಲಿ ಸಂಗ್ರಹಿಸಿ ಇಡುತ್ತಿದ್ದೆವು. ನೆಂಟರು ಬಂದರೆ ಮಾತ್ರ ಬಾಳೆಎಲೆ. ಮಾವ ಕುಮೇರಿ ಅಂದರೆ ಬೆಟ್ಟದ ತಟ್ಟು ಜಾಗದಲ್ಲಿ ಮೆಣಸು, ಸಿಹಿಗೆಣಸು, ಸೋರೆಕಾಯಿ, ಬೂದುಗುಂಬಳ, ರಾಗಿ ಇತ್ಯಾದಿಗಳನ್ನು ಬೆಳೆಸುತ್ತಿದ್ದರು. ಅವರು ಸಂಜೆ ನೀರುಹಾಯಿಸಲು ಹೋಗುವಾಗ ನಾನೂ ಬಾಲದಂತೆ ಹೋಗುತ್ತಿದ್ದೆ. ಬೆಳೆದ ಬೆಳೆಗಳನ್ನೆಲ್ಲ ಸಂಗ್ರಹಿಸಿ ಬುಟ್ಟಿಯಲ್ಲಿ ಹೊತ್ತುಕೊಂಡು ಬಂದು ಅಜ್ಜಿಗೆ ಕೊಡುತ್ತಿದ್ದರು. ಮಾರಾಟ ಮಾಡುತ್ತಿರಲಿಲ್ಲ. ರಾಗಿಯನ್ನು ಅಜ್ಜಿ ರುಬ್ಬಿ ಸೋಸಿ ಅದಕ್ಕೆ ಬೆಲ್ಲ, ಹಾಲು ಸೇರಿಸಿ ಕುದಿಸಿ ರಾಗಿ ಕಾಫಿಯೆಂದು ನಮಗೆ ಕುಡಿಯಲು ಕೊಡುತ್ತಿದ್ದರು. ಅಮೃತಸಮಾನವಾದ ಅಂಥ ದಿವ್ಯಪೇಯವನ್ನು ನಾನು ಮತ್ತೆ ಕುಡಿಯಲಿಲ್ಲ. ಅಜ್ಜಿ ಮಧ್ಯಾಹ್ನ ಅಡುಗೆಯಾದ ಮೇಲೆ ಒಲೆಯಲ್ಲಿ ಉಳಿಯುವ ಕೆಂಡದಲ್ಲಿ ಗೆಣಸನ್ನು ಸುಟ್ಟು ತಿನ್ನಲು ಕೊಡುತ್ತಿದ್ದಳು. ಅದೇ ಕೆಂಡದಲ್ಲಿ ಹಲಸಿನ ಹಪ್ಪಳವನ್ನೂ ಸುಟ್ಟು ಕೊಡುತ್ತಿದ್ದಳು. ಅದೆಷ್ಟು ರುಚಿ ಇರುತ್ತಿತ್ತು!
ಮಾವನ ಜೊತೆಗೆ ರಾತ್ರಿ ಯಕ್ಷಗಾನಕ್ಕೆ, ಭೂತದ ಕೋಲಕ್ಕೆ, ಜಾತ್ರೆಗೆ ಹೋಗುವ ಗಮ್ಮತ್ತೇ ಬೇರೆ ಇತ್ತು. ಕಣ್ಣುಮುಚ್ಚದೆ ಬೆಳಗ್ಗೆ ವರೆಗೆ ನೋಡಿ ಆನಂದಿಸುತ್ತಿದ್ದೆವು. ಅಲ್ಲಿ ಮಾವ ಕೊಡಿಸುತ್ತಿದ್ದ ಸಕ್ಕರೆಮಿಠಾಯಿ ನೆನೆಸಿದರೆ ಈಗಲೂ ಬಾಯಿ ಸಿಹಿ ಆಗುತ್ತದೆ.
ಅಜ್ಜಿಮನೆ ಅಂಗಳದಲ್ಲಿ ದೊಡ್ಡ ರೆಂಜೆ ಮರ. ಅದರ ಬುಡದಲ್ಲಿ ಬಿದ್ದಿರುತ್ತಿದ್ದ ಹೂಗಳನ್ನು ಹೆಕ್ಕಿ ಬಾಳೆಬಳ್ಳಿಯಲ್ಲಿ ಸುರಿದು ಮಾಲೆ ಕಟ್ಟುತ್ತಿದ್ದೆ. ಅಜ್ಜಿ ನನಗೆ ಎರಡು ಜಡೆ ಹೆಣೆದು ಈ ಜಡೆಯಿಂದ ಆ ಜಡೆಗೆ ರೆಂಜೆಮಾಲೆಯನ್ನು ಮುಡಿಸುತ್ತಿದ್ದರು. ಗತದಿನಗಳಿಗೆ ಸಾಕ್ಷಿಯಾಗಿ ಆ ರೆಂಜೆಮರ ಈಗಲೂ ಇದೆ. ನಿತ್ಯ ಹೂವಿನಿಂದ ಕಂಗೊಳಿಸುತ್ತಿದೆ. ಅಂದು ಹೂ ಮುಡಿಸುತ್ತಿದ್ದ ಅಜ್ಜಿ ಇಂದು ತಾನೇ ಶಿಶುವಾಗಿದ್ದಾಳೆ. ಹಿಂದಿನದು ಯಾವುದೂ ಜ್ಞಾಪಕ ಇಲ್ಲದೆ ಹಾಸಿಗೆ ಮೇಲೆ ಮಲಗಿದ್ದಾಳೆ, ಬಾಯಿಗೆ ಚಮಚದಲ್ಲಿ ಕೊಟ್ಟದ್ದನ್ನು ನುಂಗುತ್ತಾ. ಅಜ್ಜ ಎಂದೋ ಕಾಲವಾಗಿದ್ದಾರೆ.
ಆದರೆ ಅಜ್ಜಿಮನೆಯಲ್ಲಿ ಕಲಿತ ಕೃಷಿಬದುಕು ನನ್ನನ್ನಿಂದು ಕೈಹಿಡಿದು ಸಲಹುತ್ತಿದೆ. ಅಜ್ಜಿ ಕಟ್ಟಿಕೊಟ್ಟ ಆ ಬುತ್ತಿ ನನ್ನ ಕೈಯಲ್ಲಿ ಇಂದೂ ಇದ್ದು ನನ್ನನ್ನು ಯಶಸ್ವಿ ಕೃಷಿ ಮಹಿಳೆಯನ್ನಾಗಿಸಿದೆ. ಸದಾ ಕೈಗೆ ಹತ್ತುವ ಕೆಲಸಗಳ ನಡುವೆ ಆಗೊಮ್ಮೆ ಈಗೊಮ್ಮೆ ಸಿಗುವ ಅರೆಗಳಿಗೆ ಬಿಡುವಿನ ಏಕಾಂತದಲ್ಲಿ ನನ್ನನ್ನು ಪ್ರಶ್ನೆಯೊಂದು ಕಾಡುತ್ತದೆ – ನಾನೀಗ ನಾನೋ ಅಥವಾ ನನ್ನ ಅಜ್ಜಿಯೋ?