ಭಾರತದೊಳಗಡೆ ಇಸ್ರೇಲಿನ ನಿಲವುಗಳನ್ನು ಭಾರತ ಸಮರ್ಥಿಸಿದ ಸಂದರ್ಭಗಳಲ್ಲಿ ಅದನ್ನು ‘ಬಲಪಂಥೀಯತೆ’ ಎಂದೂ ‘ರಾಷ್ಟ್ರವಾದದ ಅತಿರೇಕ’ ಎಂದೂ ಟೀಕಿಸುತ್ತ ಬಂದ ವಲಯ ಒಂದಿದೆ. ಆದರೆ ದಶಕಗಳುದ್ದಕ್ಕೂ ಇಸ್ರೇಲನ್ನು ಧ್ವಂಸ ಮಾಡಬಯಸಿದ್ದ ಅರಬ್ ದೇಶಗಳೊಡನೆ ಭಾರತ ನಂಟಸ್ತಿಕೆ ತಳೆದಿದ್ದುದು ಈ ವಲಯಗಳಿಗೆ ಅತಾರ್ಕಿಕವೆನಿಸಿರಲಿಲ್ಲ.
ದೊಡ್ಡ ಸಮಸ್ಯೆಗಳಿರುವ ಪುಟ್ಟ ದೇಶವಾದ ಇಸ್ರೇಲ್ ಈಚಿನ ದಿನಗಳಲ್ಲಿ ಎರಡು ಕಾರಣಗಳಿಂದ ಸುದ್ದಿಯಲ್ಲಿದೆ. ಮೊದಲನೆಯದಾಗಿ ಕಳೆದ (೨೦೨೧) ಮೇ ಅಂತ್ಯದಲ್ಲಿ ಇಸ್ರೇಲಿನ ಗಾಜಾ, ಪಶ್ಚಿಮ ಗಡಿ, ಪ್ಯಾಲೆಸ್ಟೀನ್ ಪ್ರದೇಶದ ‘ಮಾನವಹಕ್ಕು’ ಉಲ್ಲಂಘನೆಗಳ ಪರೀಕ್ಷಣೆಗಾಗಿ ಸ್ಥಾಯೀ ಆಯೋಗವೊಂದು ಏರ್ಪಡಬೇಕೆಂಬ ಪ್ರಸ್ತಾವವು ವಿಶ್ವಸಂಸ್ಥೆಯಲ್ಲಿ ಮಂಡಿತವಾದದ್ದು. ಆ ಪ್ರಸ್ತಾವವನ್ನು ಭಾರತ ಸಮರ್ಥಿಸಲಿಲ್ಲವೆಂಬುದು ಗೌರವಾಸ್ಪದವಾಗಿದೆ.
ಎರಡನೆಯದಾಗಿ ಇಸ್ರೇಲಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಅಧಿಕಾರದಲ್ಲಿದ್ದ ಬೆಂಜಮಿನ್ ನೆಟನ್ಯಹು ಆಡಳಿತ ಕಳೆದ ಜೂನ್ ೧೩ರಂದು ಕೊನೆಗೊಂಡಿದೆ. ಸಂಸತ್ತಿನಲ್ಲಿ ನಫ್ತಾಲಿ ಬೆನ್ನೆಟ್ ನೇತೃತ್ವದ ವಿಪಕ್ಷ ಮೈತ್ರಿಕೂಟ ಒಂದು ಮತದ ಅಂತರದಿಂದ ಜಯಗಳಿಸಿದೆ. (ಆ ಎಂಟು ಪಕ್ಷಗಳಲ್ಲಿ ಒಂದು ಇಸ್ಲಾಮೀ-ಅರಬ್ ಪಕ್ಷವೂ ಸೇರಿದೆ.) ಸಂಖ್ಯಾತ್ಮಕವಾಗಿ ಇದು ಕೂದಲೆಳೆಯಷ್ಟರ ತಾಂತ್ರಿಕ ಜಯವಾದರೂ ಜಯವು ಜಯವೇ ತಾನೆ.
ನೆಟನ್ಯಹು ವಾರಸಿಕೆ
ಇಸ್ರೇಲಿನ ನಾಯಕತ್ವ ತಾಂತ್ರಿಕವಾಗಿ ಬದಲಾದರೂ ದೀರ್ಘಕಾಲದಿಂದ ಪ್ರಧಾನಿಯಾಗಿದ್ದ ಬೆಂಜಮಿನ್ ನೆಟನ್ಯಹುರವರ ನೆರಳಿನಿಂದ ಇಸ್ರೇಲ್ ಹೊರಬೀಳುವುದು ಸುಲಭವಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಇಸ್ರೇಲಿನ ಆರ್ಥಿಕತೆಯನ್ನು ಉನ್ಮುಖಗೊಳಿಸಿದ ನೆಟನ್ಯಹು ಕರ್ತೃತ್ವಶಕ್ತಿಯಂತೂ ಅಸಂದಿಗ್ಧವಾಗಿ ಸಾಬೀತಾಗಿದೆ. ೨೦೦೮ರ ಅಂತ್ಯದಲ್ಲಿ ಲೇಮನ್ ಬ್ರದರ್ಸ್ ಮುಳುಗಡೆಯ ಪರಿಣಾಮವಾಗಿ ಉಂಟಾಗಿದ್ದ ವಿಷಮ ಸ್ಥಿತಿಯಿಂದ ಇಸ್ರೇಲನ್ನು ಉಜ್ಜೀವಿಸುವುದು ಅಸಾಧ್ಯವೆಂದೇ ಅನಿಸತೊಡಗಿತ್ತು. ಹರಸಾಹಸದಿಂದ ಆ ದುರ್ಭರ ಸನ್ನಿವೇಶವನ್ನು ನೆಟನ್ಯಹು ನಿರ್ವಹಿಸಿದುದು ಜಗತ್ತನ್ನೇ ವಿಸ್ಮಯಗೊಳಿಸಿತು. ಅಮೆರಿಕ ಸರ್ಕಾರದ ಸಹಕಾರದಿಂದ ನೆಟನ್ಯಹು ಅರಬ್ ದೇಶಗಳೊಡನೆ ಇಸ್ರೇಲಿನ ಸಂಬಂಧಗಳನ್ನೂ ಒಂದಷ್ಟು ಸುಧಾರಿಸಿದರು; ಭಾರತದತ್ತಲೂ ಸ್ನೇಹಹಸ್ತ ಚಾಚಿದರು. ಇಸ್ರೇಲಿಗೆ ಮೊತ್ತಮೊದಲ ಅಧಿಕೃತ ಭೇಟಿ ನೀಡಿದ ಭಾರತ ಪ್ರಧಾನಿ ನರೇಂದ್ರ ಮೋದಿ.
ಹಾಗೆಂದು ನೆಟನ್ಯಹು ಇಸ್ರೇಲಿನ ಮೂಲ ಧೋರಣೆಯನ್ನೇನೂ ಸಡಿಲಗೊಳಿಸಲಿಲ್ಲ; ಗಾಜಾದ ಬಗೆಗಾಗಲಿ ಇರಾನಿನ ಬಗೆಗಾಗಲಿ ಮಾರ್ದವ ಮೆರೆಯಲೆಳಸಲಿಲ್ಲ. ಹೀಗಾಗಿ ಅಂತರರಾಷ್ಟ್ರ ಕಕ್ಷೆಯಲ್ಲಿ ಇಸ್ರೇಲ್ ಯುದ್ಧಪಿಪಾಸು ಎಂಬ ಪ್ರತಿಮೆಯೇ ಮುಂದುವರಿಯಿತು. ನೆಟನ್ಯಹು ತಮ್ಮ ಸ್ವನಿಶ್ಚಿತ ಪಥದಿಂದ ವಿಚಲಿತರಾಗಲಿಲ್ಲ; ಬರಾಕ್ ಒಬಾಮಾ ಸರ್ಕಾರದಿಂದ ವಿಮುಖರಾಗಲೂ ಹಿಂದೆಗೆಯಲಿಲ್ಲ. ಈ ಹಿನ್ನೆಲೆಯಲ್ಲಿ – ಹಾಗೂ ಹಲವು ಭ್ರಷ್ಟಾಚಾರ ಆಪಾದನೆ-ತನಿಖೆಗಳ ಹಿನ್ನೆಲೆಯಲ್ಲಿ – ನೆಟನ್ಯಹುರವರ ಪ್ರತಿಷ್ಠೆಗೆ ಒಂದಷ್ಟು ಭಂಗವೊದಗಿದುದನ್ನು ಅಲ್ಲಗಳೆಯಲಾಗದು. ಸದ್ಯಕ್ಕಂತೂ ನೆಟನ್ಯಹು-ವಿರೋಧಿ ಬಣಗಳೆಲ್ಲ ಒಟ್ಟುಗೂಡಿವೆ. ಹೀಗೆ ನಿಕಟ ಭವಿಷ್ಯದಲ್ಲಂತೂ ಒಂದಷ್ಟು ಅಸ್ಥಿರತೆಯನ್ನು ನಿರೀಕ್ಷಿಸಬಹುದು.
* * *
ಇತಿಹಾಸ ವೈಚಿತ್ರ್ಯ
ಹಲವು ಭೌಗೋಲಿಕ ವೈಚಿತ್ರ್ಯಗಳು ಇತಿಹಾಸಕ್ಕೇ ಅಂಟಿದ ಶಾಪವೆನಿಸುತ್ತದೆ. ಹಲವು ಭೂಗೋಲಭಾಗಗಳು ಯಾವಾವುದೊ ಅತಿಮಾನುಷ ದುಷ್ಟಶಕ್ತಿಗಳ ಪ್ರಭಾವಕ್ಕೆ ಸದಾ ಸಿಲುಕುತ್ತಿರುತ್ತವೆ ಎನಿಸುತ್ತದೆ. ಹಾಗೆ ಇಸ್ರೇಲನ್ನು ಅಪರಾಧಿ ಸ್ಥಾನದಲ್ಲಿ ಸದಾ ನಿಲ್ಲಿಸುವ ಒಂದು ಸಂಕಥನಪರಂಪರೆ ಬೆಳೆದುಬಂದಿದೆ – ವಿಶ್ವದ ಹಲವೆಡೆ ಅಲ್ಲಿಯ ‘ಅಲ್ಪಸಂಖ್ಯಾಕ’ರನ್ನು ಸದಾ ಪೀಡೆಗೊಳಗಾದವರೆಂದು ಚಿತ್ರಿಸುವಂತೆ. ಈ ಕಥನಗಳಿಗೆ ಪೂರಕವಾಗಿ ಒಂದು ವಿಶಿಷ್ಟ ಪರಿಭಾಷೆಯೇ ಬೆಳೆದಿದೆ. ‘ಸದ್ಗುಣವಿಕೃತಿ’ ಎಂದು ಕರೆಯಬಹುದಾದ ಇಂತಹ ಛದ್ಮ ಉದಾರತಾವಾದವನ್ನು ಮಾನವತೆಯ ಒಂದು ಘೋರ ಶಾಪವೆಂಬ ತಥ್ಯವನ್ನು ಅರಿತುಕೊಳ್ಳಲು ಇನ್ನೂ ಎಷ್ಟು ಕಾಲ ಬೇಕಾದೀತೊ!
ಭಾರತದೊಳಗಡೆ ಇಸ್ರೇಲಿನ ನಿಲವುಗಳನ್ನು ಭಾರತ ಸಮರ್ಥಿಸಿದ ಸಂದರ್ಭಗಳಲ್ಲಿ ಅದನ್ನು ‘ಬಲಪಂಥೀಯತೆ’ ಎಂದೂ ‘ರಾಷ್ಟ್ರವಾದದ ಅತಿರೇಕ’ ಎಂದೂ ಟೀಕಿಸುತ್ತ ಬಂದ ವಲಯ ಒಂದಿದೆ. ಆದರೆ ದಶಕಗಳುದ್ದಕ್ಕೂ ಇಸ್ರೇಲನ್ನು ಧ್ವಂಸ ಮಾಡಬಯಸಿದ್ದ ಅರಬ್ ದೇಶಗಳೊಡನೆ ಭಾರತ ನಂಟಸ್ತಿಕೆ ತಳೆದಿದ್ದುದು ಈ ವಲಯಗಳಿಗೆ ಅತಾರ್ಕಿಕವೆನಿಸಿರಲಿಲ್ಲ.
ಉಳಿವಿಗಾಗಿ ಸೆಣಸಾಟ
ಇಸ್ರೇಲ್ ಸತತವಾಗಿ ಸೆಣಸುತ್ತ ಬಂದಿರುವುದು ಅದರ ಉಳಿವಿಗಾಗಿ. ಮೊದಲ (ಕ್ರೈಸ್ತ) ಸಹಸ್ರಾಬ್ದದ ಆರಂಭದ ವರ್ಷಗಳಲ್ಲಿ ರೋಮನರು ಯಹೂದ್ಯರನ್ನು ದಮನ ಮಾಡಿ ಉಚ್ಚಾಟಿಸಿದಾಗಿನಿಂದಲೇ ಇಸ್ರೇಲ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಸೆಣಸಾಟ ನಡೆಸಿದೆ. ತಮ್ಮ ನೆಲೆಯಿಂದ ಇಸ್ರೇಲ್ ಭಾಗವನ್ನು ಪ್ರತ್ಯೇಕಿಸಲಾಯಿತೆಂಬುದೂ ಕ್ರಿ.ಶ. ಆರನೇ ಶತಾಬ್ದದಲ್ಲಿ ಸಲಾದೀನ್ ಜೆರೂಸಲೆಮನ್ನು ವಶಪಡಿಸಿಕೊಂಡಾಗಿನಿಂದ ಆ ಭಾಗವೆಲ್ಲ ಮುಸ್ಲಿಮರಿಗೇ ಸೇರಿತ್ತೆಂಬುದೂ ಪ್ಯಾಲೆಸ್ಟೀನಿಯನರ ವಾದ. ಆದರೆ ಕ್ರಿ.ಪೂ. ೧೨೦೦ರಷ್ಟು ಹಿಂದಿನಿಂದ ಯಹೂದ್ಯರು ಅಲ್ಲಿ ನೆಲೆಗೊಂಡಿದ್ದರು. ಆ ಕಾಲಖಂಡದಲ್ಲಿ ಇಸ್ಲಾಂ ಆಗಲಿ ಅರಬ್ಬರಾಗಲಿ ಜನಿಸಿಯೇ ಇರಲಿಲ್ಲ. ಯಹೂದ್ಯ ಸಮುದಾಯದ ಉದ್ಗಮವಾಗಿದ್ದುದು ಕಂದುಕಂಚು ಯುಗದ (ಬ್ರಾನ್ಜ್ ಏಜ್) ಅಂತ್ಯದಲ್ಲಿ ಮೆಡಿಟರೇನಿಯನ್ ಕಡಲಿನ ಪೂರ್ವಭಾಗದಲ್ಲಿ (ಲೆವಾಂಟ್). ಅದಾದ ಎಷ್ಟೋ ಕಾಲದ ತರುವಾಯವೇ ಗ್ರೀಸ್ ಪ್ರಾಂತದಲ್ಲಿ ಪ್ಯಾಲೆಸ್ಟೀನಿಯನ್ ಸಮರಶೂರರು ಸಂಘಟಿತರಾಗಿ ಈಜಿಪ್ಟ್ ಮೊದಲಾದೆಡೆಗಳಿಗೆ ಹರಡಿದುದು. ಅವರ ವಿಸ್ತರಣೋದ್ಯಮಕ್ಕೆ ಯಹೂದ್ಯರು ತಡೆಯೊಡ್ಡಿದುದು ಕ್ರಿ.ಪೂ. ೧೦ನೇ ಶತಾಬ್ದದಲ್ಲಿ.
ಆದರೆ ಈಗ ತಥೋಕ್ತ ‘ಉದಾರತಾವಾದಿ’ಗಳು ಆಕ್ರಂದನ ಮಾಡುತ್ತಿರುವುದು ಇಸ್ರೇಲ್ ಆಕ್ರಮಕ ದೇಶವೆಂದು, ಅದು ‘ಮಾನವಹಕ್ಕು’ಗಳನ್ನು ಉಲ್ಲಂಘಿಸುತ್ತಿದೆಯೆಂದು.
ಅವರು ಯಹೂದ್ಯರೆಂಬ ಏಕೈಕ ಕಾರಣಕ್ಕಾಗಿ ಹಿಟ್ಲರ್ ಮಹಾಶಯ ಅದುವರೆಗೆ ಕಂಡು ಕೇಳದಿದ್ದ ಪ್ರಮಾಣದ ನರಮೇಧ ನಡೆಸಿ ಅರವತ್ತು ಲಕ್ಷ ನಿರಪರಾಧಿಗಳನ್ನು ಆಹುತಿ ತೆಗೆದುಕೊಂಡ ಇತಿಹಾಸವಾದರೂ ‘ಉದಾರವಾದಿ’ಗಳ ನೆನಪಿನಿಂದ ಮಾಸಬಾರದಿತ್ತು.
ಅಲ್ಪಕಾಲದ ಹಿಂದೆ ಹಾಮಾಸ್ ಪಡೆಗಳು ಯಹೂದ್ಯ ನೆಲೆಯ ಮೇಲೆ ಸಾವಿರಾರು ರಾಕೆಟ್ಗಳ ವರ್ಷಣ ಮಾಡಿದಾಗ ಈ ‘ಮಾನವಹಕ್ಕು’ ಪ್ರತಿಪಾದಕರು ಎಲ್ಲಿ ಅಡಗಿಕೊಂಡಿದ್ದರು? ತಮ್ಮ ಮೇಲಾಗುವ ಆಕ್ರಮಣಗಳಿಗೆ ಪ್ರತಿಕ್ರಿಯೆ ತೋರುವುದೂ ಅಪರಾಧವೆ?
ಪ್ರತಿಕ್ರಿಯೆ ತಪ್ಪು ಹೇಗಾದೀತು?
“ನ ಸಮಯಪರಿರಕ್ಷಣಂ ಕ್ಷಮನ್ತೇ ವಿಕೃತಿಪರೇಷು ಪರೇಷು ಭೂರಿಧಾಮ್ನಃ” (ಶತ್ರುವು ಹಾನಿ ಮಾಡುವುದರಲ್ಲಿಯೆ ಮಗ್ನನಾಗಿರುವಾಗ ಸಮಯ-ಸಂಧಿ-ಶಿಷ್ಟಾಚರಣ ಲೆಕ್ಕಾಚಾರಗಳಿಗೆ ಆಸ್ಪದವಿರಬಾರದು) – ಎಂದಿದ್ದಾನೆ, ಭಾರವಿ. ನಮ್ಮನ್ನು ನಾಶ ಮಾಡುವ ಉದ್ದೇಶದಿಂದಲೇ ಶತ್ರುವು ಎದುರಾಗಿರುವಾಗ ಒಂದು ಕ್ಷಣವೂ ವಿಳಂಬ ಮಾಡದೆ ಅವನನ್ನು ಹನನ ಮಾಡುವುದೇ ವಿಹಿತ ಧರ್ಮ (‘ಆತತಾಯಿನಮಾಯಾಂತಂ ಹನ್ಯಾದೇವ ಅವಿಚಾರಯನ್’) ಎಂಬುದು ಸ್ಮೃತಿನಿರ್ದೇಶ.
ವಾಸ್ತವೇತಿಹಾಸಕ್ಕೆ ಬೆಲೆಯೇ ಇಲ್ಲವೆ? ಇಸ್ರೇಲನ್ನು ನಾಶ ಮಾಡುವ ಏಕೈಕ ಗುರಿಯಿಂದ ಎರಡನೇ ಮಹಾಯುದ್ಧದ ತರುವಾಯ ಹುಟ್ಟಿಕೊಂಡದ್ದು ರಷ್ಯ-ಬೆಂಬಲದ ಪಿ.ಎಲ್.ಓ. – ಪ್ಯಾಲೆಸ್ಟೀನ್ ಲಿಬರೇಶನ್ ಆರ್ಗಾನಿಸೇಶನ್. ಇನ್ನೂ ಈಚಿನ ಘಟನೆಯೆಂದರೆ ಮ್ಯೂನಿಕ್ ಒಲಿಂಪಿಕ್ ಕ್ರೀಡಾವಳಿಯ ಸಂದರ್ಭದಲ್ಲಿ ಇಸ್ರೇಲಿ ಕ್ರೀಡಾಪಟುಗಳನ್ನು ಪಿ.ಎಲ್.ಓ. ಹತ್ಯೆ ಮಾಡಿದುದು. ಹಾಮಾಸ್ನ ‘ಸೂಯಿಸೈಡ್ ಬಾಂಬರ್’ ಹತ್ತಾರು ಇಸ್ರೇಲಿಗಳ ಹನನ ಮಾಡಿದ್ದು ೨೦೦೨ರಷ್ಟು ಈಚೆಗೆ. ಎರಡು ಪ್ರತ್ಯೇಕ ರಾಷ್ಟ್ರಗಳು ಇದ್ದುಕೊಂಡಿರಲಿ ಎಂಬ ರಾಜಿಸೂತ್ರವನ್ನು ೨೦೦೩ರಲ್ಲಿ ಧಿಕ್ಕರಿಸಿದವನು ಪಿ.ಎಲ್.ಓ. ಮುಖಂಡ ಯಾಸೆರ್ ಅರಾಫತ್. ಅರಬ್ ಉಗ್ರಗಾಮಿಗಳ ಒಂದು ಪ್ರಮುಖ ನೆಲೆಯಾಗಿರುವುದು ಪ್ಯಾಲೆಸ್ಟೀನ್.
ಹೀಗೆ ಇದರದು ತುಂಬಾ ದೀರ್ಘ ಇತಿಹಾಸ. ಎಷ್ಟು ಬೇಕಾದರೂ ವಿಸ್ತರಿಸುತ್ತ ಹೋಗಬಹುದು. ಸಂಕ್ಷೇಪದಲ್ಲಿ ಮೇಲಿನ ಹಲವು ಘಟನಾವಳಿಗಳನ್ನು ಸ್ಮರಿಸಿದ ಉದ್ದೇಶ, ‘ಸದ್ಗುಣವಿಕೃತಿ’ಯ ಮಾನಸಿಕತೆಯು ತಿರಸ್ಕಾರಾರ್ಹವೆಂಬುದಕ್ಕೆ ಗಮನ ಸೆಳೆಯುವುದು. ಈ ಎಚ್ಚರಿಕೆಯನ್ನು ನೀಡುವುದಕ್ಕಾಗಿಯೆ ಗುರುದೇವ ರವೀಂದ್ರನಾಥ ಠಾಕೂರರು ಒಂದು ಮಾರ್ಮಿಕ ಕವನವನ್ನು ಬರೆದಿದ್ದಾರೆ, ಹೀಗೆ:
ಕ್ಷಮಾ ಜೇಥಾ ಕ್ಷೀಣ ದುರ್ಬಲತಾ,
ಹೇ ರುದ್ರ, ನಿಷ್ಠುರ ಜೇನ್ ಹೋತೇ ಪಾರಿ ತಥಾ
ತೋಮಾರ ಆದೇಶೇ | ಜೇನ್ ರಸನಾಯ ಮಮ
ಸತ್ಯವಾಕ್ಯ ಝಲಿ ಓಠೇ ಖರಖಡ್ಗ ಸಮ
ತೋಮಾರ ಈಂಗಿತೇ |
(‘ನೈವೇದ್ಯ’ ಕವನಸಂಕಲನ)
“ಹೇ ರುದ್ರದೇವ! ಕ್ಷಮೆಯು ಎಲ್ಲಿ ದೌರ್ಬಲ್ಯವಾಗುತ್ತದೋ ಅಲ್ಲಿ ನಾನು ನಿನ್ನ ಆದೇಶದಂತೆ ನಿಷ್ಠುರನಾಗಿರುವಂತಾಗಲಿ. ಒರೆಯಿಂದ ಖಡ್ಗ ಹೊರಬೀಳುವಂತೆ ನನ್ನ ಬಾಯಿಂದ ರಾಜಿಯಿಲ್ಲದ ಅಸ್ಖಲಿತ ಸತ್ಯ ಹೊರಹೊಮ್ಮುವಂತೆ ಅನುಗ್ರಹಿಸು.”