ವಿಮಾನದಲ್ಲಿ ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಲ್ಲಿ ಚದುರಿಹೋಗಿದ್ದ ತಳ ಸೇರಿದ್ದ ನೆನಪುಗಳೆಲ್ಲ ಒಂದೊAದಾಗಿ ಎದ್ದು ಬರಲಾರಂಭಿಸಿದವು. ತನ್ನ ಮಗ ತೊಟ್ಟಿಲ ಕೂಸಾಗಿದ್ದಾಗಿನಿಂದ ಹಿಡಿದು ಅವನಿಗೇ ಕೂಸಾಗುವವರೆಗೆ… ಅಪ್ಪ- ಅಮ್ಮಂದಿರ ಮುದ್ದಿನ ಕಣ್ಮಣಿಯಾಗಿದ್ದ ಏಕೈಕ ಪುತ್ರ ಮಧುಸೂದನ. ಮದುವೆಯಾಗಿ ಐದು ವರ್ಷ ಸತಾಯಿಸಿ ಕೊನೆಗೂ ಅವತರಿಸಿದ್ದ ಕುಮಾರ ಕಂಠೀರವ. ಆಗಿನ್ನೂ ಖಾಸಗಿ ಶಾಲೆಯಲ್ಲಿ ಟೆಂಪರರಿ ಶಿಕ್ಷಕಿಯಾಗಿದ್ದ ಶಾಲಿನಿ ಮಗನಿಗೋಸ್ಕರ ಕೆಲಸ ಬಿಟ್ಟಿದ್ದಳು.
ಶಾಲಿನಿಯ ಕಣ್ಣುಗಳಿಗೆ ನಿದ್ದೆ ಹತ್ತಿ ಎಷ್ಟು ದಿನವಾಯಿತೋ ಅವಳಿಗೇ ಗೊತ್ತಿಲ್ಲ. ಉದ್ಯೋಗದಿಂದ ನಿವೃತ್ತಿಯಾದ ಮೇಲೆ ಕಣ್ತುಂಬ ನಿದ್ರಿಸಬಹುದು ಎಂದುಕೊಂಡದ್ದು ಬರೇ ಭ್ರಾಂತು. ಹಾಗೆಂದು ಹೇಳಿಕೊಳ್ಳುವಂತಹ ದೈಹಿಕ ಆರೋಗ್ಯ ಸಮಸ್ಯೆಯೇನೂ ಅವಳಿಗಿಲ್ಲ. ಇತ್ತೀಚೆಗಂತೂ ಹಗಲೆಲ್ಲ ಬೇಕಾದ್ದಕ್ಕಿಂತಲೂ ಜಾಸ್ತಿಯೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾಳೆ. ಆದರೂ ರಾತ್ರಿ ನಿದ್ರೆ ಸುಳಿಯುತ್ತಿಲ್ಲ. ಈವತ್ತು ಏನಾದರಾಗಲಿ ನಿದ್ರೆ ಮಾಡಲೇಬೇಕೆಂದು ಮಗ್ಗಲು ಬದಲಿಸುವಾಗಲೇ ಹೊಡೆದುಕೊಳ್ಳಲಾರಂಭಿಸಿತ್ತು ಫೋನು. ಫೋನಿನ ಸದ್ದಿಗೂ ಎಚ್ಚರಾಗದೆ ನಿಸೂರಾಗಿ ಮಲಗಿದ್ದ ಪತಿಯನ್ನೇ ನೋಡಿ ನಿಟ್ಟುಸಿರು ಬಿಡುತ್ತಾ ಫೋನನ್ನು ಎತ್ತಿಕೊಂಡಳು. ಅತ್ತ ಕಡೆಯಿಂದ ಸೊಸೆ -‘ನಾನು ನಿರ್ಧಾರ ತೆಗೆದುಕೊಂಡಾಯಿತು ಅತ್ತೆ, ಇನ್ನು ಯಾರು ಏನಂದರೂ ಅಷ್ಟೇ…’ ಎನ್ನುತ್ತಿದ್ದಾಳೆ. ಶಾಲಿನಿ ‘ಅಷ್ಟೊಂದು ಆತುರ ಬೇಡವಮ್ಮಾ…’ ಅಂತೇನೋ ಹೇಳುವಷ್ಟರಲ್ಲೇ ಫೋನು ಕಡಿದಾಗಿತ್ತು. ಅಷ್ಟೇ… ಅವಳ ನಿದ್ದೆ ಹಾರಿ ಹೋಗಿತ್ತು ಗಾವುದ ದೂರ. ಕೂಡಲೇ ಮಗನಿಗೆ ಫೋನಾಯಿಸಿದ್ದಳು. ಎಷ್ಟು ರಿಂಗಾದರೂ ಅವನು ಕರೆ ಸ್ವೀಕರಿಸುತ್ತಿಲ್ಲ. ಏನು ಮಾಡಬೇಕೆಂದು ತೋಚದೇ ಅಲ್ಲೇ ಕುಸಿದು ಕುಳಿತಳು. ಒಮ್ಮೆ ಪತಿಯನ್ನೆಬ್ಬಿಸಿ ವಿಷಯ ಹೇಳಲೇ ಎಂದುಕೊಂಡಳಾದರೂ, ಮರುಕ್ಷಣವೇ ಏನುಪಯೋಗವೆನ್ನಿಸಿ ಸುಮ್ಮನಾದಳು. ರಾತ್ರೆಯೆಲ್ಲ ಏನೇನೋ ಆಲೋಚನೆಗಳು ಬಂದು ಬೆಳಗಾಗುವಾಗ ಇನ್ನೇನು ತಲೆ ಸಿಡಿದೇಹೋಗುತ್ತದೆ ಎನ್ನುವಷ್ಟರಲ್ಲಿ ಮಗನ ಫೋನು. ‘ಅಮ್ಮಾ, ನಿನ್ನಲ್ಲಿ ಮುಖತಃ ತುಂಬಾ ಮಾತನಾಡುವುದಿತ್ತು. ಒಂದು ಸಲ ಇಲ್ಲಿಗೆ ಬರಲಿಕ್ಕಾಗುತ್ತದಾ?’
‘ಅದು ಹೇಗೆ ನಾನು ಬರಲಿ, ಅಷ್ಟು ದೂರ? ನೀನೇ ಬಾ… ಇಲ್ಲವೆನ್ನಬೇಡ’ ಬಿಕ್ಕುತ್ತಿದ್ದಾನೆಯೇ? ಉಹೂಂ, ಏನೊಂದೂ ಗೊತ್ತಾಗುತ್ತಿಲ್ಲ. ‘ಯಾವುದಕ್ಕೂ ಅಪ್ಪನಲ್ಲಿ ಕೇಳಿ ಹೇಳುತ್ತೇನೆ’ ಎಂದಷ್ಟೇ ಹೇಳಿ ಫೋನಿಟ್ಟಳು.
‘ಈವತ್ತೇನು ಬೆಳಬೆಳಗ್ಗೇನೇ ಫೋನು? ಏನಂತೆ ನಿನ್ನ ಸುಪುತ್ರನಿಗೆ?’ ತೂರಿ ಬಂದಿತು ಪತಿಯ ಪ್ರಶ್ನೆ. ಮೊದಲೆಲ್ಲಾ ‘ನಿನ್ನ ಸುಪುತ್ರ’ ಎಂದಾಗಲೆಲ್ಲಾ ಹಾರಾಡುತ್ತಾ ‘ನಿಮ್ಮದಲ್ಲವೇನು?’ ಎಂದು ಸಿಟ್ಟಿನಿಂದ ಕೇಳುತ್ತಿದ್ದವಳು ಇತ್ತೀಚೆಗೆ ಪ್ರತಿಕ್ರಿಯಿಸುವುದನ್ನೇ ಬಿಟ್ಟಿದ್ದಳು. ‘ನಂಗ್ಯಾಕೋ ಮಗನಿದ್ದಲ್ಲಿಗೆ ಒಮ್ಮೆ ಹೋಗಿ ಬರಬೇಕು ಅನ್ನಿಸುತ್ತಿದೆ’ ಎನ್ನುವಾಗಲೇ ಆವೇಶ ಬಂದವನಂತೆ ಆಸ್ಫೋಟಿಸಿದ್ದ ಪದ್ಮನಾಭ. “ಅಲ್ಲಿಗೆ ಹೋಗಿ ಬಂದು ಇನ್ನೂ ವರ್ಷವೂ ತುಂಬಿಲ್ಲ. ನನ್ನಿಂದ ಸಾಧ್ಯವಿಲ್ಲ. ಇಲ್ಲಿ ಮನೆ, ತೋಟ ನೋಡಿಕೊಳ್ಳುವವರು ಯಾರು? ಕಳೆದ ಸಲವೇ ಸಾಕಾಗಿ ಹೋಗಿತ್ತು. ಬೇಕಾದಲ್ಲಿ ಹೋಗಲು ಗೊತ್ತಿಲ್ಲ, ನೆಂಟರಿಷ್ಟರು ಯಾರೂ ಇಲ್ಲ. ಉಸಿರು ಕಟ್ಟಿದಂತಾಗುತ್ತದೆ…” ಮಾತು ಮುಗಿಯುವ ಮೊದಲೇ ಶಾಲಿನಿ ಮೆತ್ತಗೆ ಹೇಳಿದಳು – ‘ನಿಮ್ಮನ್ನೆಲ್ಲಿ ಬರಲು ಹೇಳಿದೆ… ನಾನೊಬ್ಬಳೇ ಹೋಗುತ್ತೇನೆ ಎಂದದ್ದು.’
“ಏನು ಜೋಕಾ? ನಿನ್ನ ಮಗನ ಮನೆಯೇನು ಇಲ್ಲೇ ಮೈಸೂರು ಹತ್ತಿರವಾ ಇದೆ? ಅಷ್ಟು ದೂರ, ಕೆನಡಾಗೆ ನೀನೊಬ್ಬಳೇ ಹೇಗೆ ಹೋಗುತ್ತಿ?”
“ಇದೇನು ಮೊದಲ ಸಲ ಅಲ್ಲವಲ್ಲಾ… ಈಗಾಗಲೇ ಮೂರು ಸಲ ಹೋಗಿದ್ದೇವಲ್ಲಾ?”
“ನೀನೊಬ್ಬಳೇ ಹೋದದ್ದಾ? ನಾನೂ ಇರಲಿಲ್ಲವಾ? ಏನಂತಾ ಅರ್ಜೆಂಟು ಹೋಗುವುದಕ್ಕೆ? ನಾನು ನೋಡ್ತಾ ಇದ್ದೇನೆ. ಎರಡು ತಿಂಗಳಿಂದ ಅಮ್ಮ ಮಗನದ್ದು ದಿನಾಗ್ಲೂ ಫೋನು. ಆಗಾಗ್ಗೆ ಸೊಸೆಯದ್ದು. ಏನು ನಡೀತಾ ಇದೆ ಅಂತ ನಂಗೆ ಯಾರೂ ಹೇಳೋದಿಲ್ಲ. ಅವನ ಪ್ರಕರಣ ಇನ್ನೂ ಮುಗಿದಿಲ್ವಾ?”
“ಹೇಳುವುದಕ್ಕೆ ಇನ್ನೇನು ಉಳಿದಿದೆ? ನಿಮಗೇ ಎಲ್ಲ ಗೊತ್ತಲ್ವಾ? ಎಲ್ಲ ಗೊತ್ತಿದ್ದರೂ ನಿಮಗೆ ಗಂಡಸರಿಗೆ ಅದು ಹೇಗೆ ಅಷ್ಟೊಳ್ಳೇ ನಿದ್ದೆ ಬರುತ್ತದೋ ದೇವರಿಗೇ ಗೊತ್ತು. ನಂಗಂತೂ ನಿದ್ದೆಯಿಲ್ಲದೆ ತಲೆ ಎಲ್ಲ ಹಾಳಾಗಿದೆ.”
“ನೀನಿಲ್ಲಿ ನಿದ್ದೆಗೆಟ್ಟು ಕುಳಿತರೆ ಎಲ್ಲವೂ ಬದಲಾಗುತ್ತದಾ?”
“ಇಲ್ಲ. ಅದಕ್ಕೇ ಹೋಗಬೇಕೆಂದದ್ದು.”
“ನೀನು ಹೋದರೆ ನಿನ್ನ ಮಗರಾಯ ಬದಲಾಗುತ್ತಾನಾ?”
“ಗೊತ್ತಿಲ್ಲ. ಪ್ರಯತ್ನವನ್ನೇ ಮಾಡದೆ ಕಳೆದುಕೊಳ್ಳುವುದಕ್ಕಿಂತ ಪ್ರಯತ್ನಮಾಡಿ ಕಳೆದುಕೊಳ್ಳುವುದು ವಾಸಿ ಅಲ್ವಾ? ಏನಿಲ್ಲವೆಂದರೂ ಕಡೇಪಕ್ಷ ಪ್ರಯತ್ನವನ್ನಾದರೂ ಮಾಡಿದ್ದೆ ಎಂದು ಸಮಾಧಾನವಾದರೂ ಇರುತ್ತದಲ್ಲಾ?”
“ಸರಿ. ಅಷ್ಟಿದ್ದರೆ ನೀನೊಬ್ಬಳೇ ಹೋಗು. ನಾನು ನನ್ನ ಮನೆಯಲ್ಲಿ ಗಂಜಿಯಾದರೂ ಕುಡಿದುಕೊಂಡು ಇರಬಲ್ಲೆ. ಅಲ್ಲಿಯ ಅನ್ನ ನನಗೆ ಮೈಗೆ ಹತ್ತುವುದಿಲ್ಲ.”
ಇನ್ನು ಮಾತನಾಡಿ ಪ್ರಯೋಜನವಿಲ್ಲವೆಂದು ಎನ್ನಿಸಿ ಸುಮ್ಮನೇ ಹೂಂಗುಟ್ಟಿದ್ದಳು. ಅದಾಗಿ ಒಂದು ವಾರದಲ್ಲೇ ಮಗ ಟಿಕೇಟು ಮಾಡಿದ್ದ. ಅಷ್ಟು ದಿನವೂ ಮಗನ ಸಂಸಾರದ ಚಿತ್ರವೊಂದೇ ಕಣ್ಣಮುಂದೆ ಬಂದು ಅಲ್ಲಿಗೆ ಹೋಗುವ ಆತುರದಲ್ಲಿ ಇದ್ದವಳಿಗೆ ಹೋಗಲು ಇನ್ನೊಂದೇ ದಿನ ಬಾಕಿ ಎಂದಾಗ ತಾನೊಬ್ಬಳೇ ಅಲ್ಲಿತನಕ ಹೋಗುವುದನ್ನು ನೆನಸಿಕೊಂಡೇ ಅಂಜಿಕೆ ಶುರುವಾಗಿತ್ತು. ಹಾಗೆಂದು ಮೈಸೂರು ಬಿಟ್ಟು ಹೊರಗೆ ಕಾಲಿಟ್ಟೇ ಗೊತ್ತಿಲ್ಲದವಳೇನಲ್ಲ ಶಾಲಿನಿ. ಸರ್ಕಾರೀ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದವಳು ನಿವೃತ್ತಿಯಾಗುವವರೆಗೆ ನಾಲ್ಕಾರು ಊರು ಕಂಡವಳು. ಆದರೂ ಭಾಷೆ ಗೊತ್ತಿಲ್ಲದ ದೇಶವೆಂದರೆ ಏನೋ ಒಂದು ತರಹ ದುಗುಡ.
ಅಂತೂ ಹೋಗುವ ದಿನ ಬಂದಿತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಿಡಲು ಬಂದ ಪತಿಯನ್ನು ನೋಡಿ ಕಣ್ಣಾಲಿಗಳು ತುಂಬಿ ಬಂದಿದ್ದವು. ತಾನು ಒಬ್ಬಳೇ ಹೋಗಬೇಕಾದ ತಳಮಳದಿಂದಲೋ, ಗಂಡ ಒಬ್ಬನೇ ಇನ್ನೊಂದು ತಿಂಗಳು ಹೇಗಿರಬಲ್ಲನೆಂಬ ಕಳವಳವೋ, ತಾನು ಹೋಗುತ್ತಿರುವ ಉದ್ದೇಶವನ್ನು ನೆನೆದೋ, ಅಲ್ಲ, ಎಲ್ಲವೂ ಒಟ್ಟಾಗಿಯೋ ಶಾಲಿನಿಯನ್ನು ಮಾತನಾಡಲಾಗದಂತೆ ಮಾಡಿ, ಬರಿ ಕೈ ಸಂಜ್ಞೆಯಲ್ಲಷ್ಟೇ ‘ಬರುತ್ತೇನೆ’ ಎಂದಿದ್ದಳು. ಗಂಡ ಪದ್ಮನಾಭನೂ ತನಗೆಲ್ಲ ಅರ್ಥವಾಯಿತೆಂಬಂತೆ ಅವಳ ಕೈಯನ್ನು ಮೆತ್ತಗೆ ಅದುಮಿ, ಪಾಲಿಸಬೇಕಾದ ನಿಯಮಗಳನ್ನು ನೂರೊಂದನೇ ಬಾರಿ ನೆನಪಿಸಿಯೇ ಬೀಳ್ಕೊಟ್ಟಿದ್ದ. ಎಲ್ಲರೂ ಥಳುಕು ಬಳುಕಿನ ಇಂಗ್ಲಿಷಿನಲ್ಲೇ ಮಾತನಾಡುವಾಗ ಅರೇ ತಾನಿರುವುದು ಬೆಂಗಳೂರು ಏರ್ಪೋರ್ಟ್ನಲ್ಲೋ ಅಥವಾ ಟೊರೊಂಟೋದಲ್ಲೋ ಎನ್ನಿಸಿ ಮನಸ್ಸಿಗೆ ಕಸಿವಿಸಿಯಾಯಿತು. ಚೆಕ್ ಇನ್, ಬೋರ್ಡಿಂಗ್ ಮುಗಿಸಿ ಕೊನೆಗೂ ವಿಮಾನ ಹತ್ತಿ ಕುಳಿತಾಗ ಆಗಷ್ಟೇ ಶಾಲೆಗೆ ಸೇರಿಸಿದ್ದ ಮಗುವಿನಂತಾಗಿದ್ದಳು ಶಾಲಿನಿ. ಬೆಂಗಳೂರಿನಿಂದ ಅಬುಧಾಬಿಗೆ ನಾಲ್ಕು ಗಂಟೆ. ಅಲ್ಲಿಗೆ ತಲಪಿ ಮೂರು ಗಂಟೆಯ ಬಳಿಕ ಟೊರೊಂಟೋಗೆ ಇನ್ನೊಂದು ವಿಮಾನ. ಮತ್ತೆ ಹದಿನಾಲ್ಕು ಗಂಟೆಗಳ ಪ್ರಯಾಣ. ಒಬ್ಬಳೇ ಸುಮಾರು ೨೨ ಗಂಟೆಗಳಷ್ಟು ಕಾಲ ಹೇಗೆ ಕಳೆಯುವುದೆಂದು ಚಿಂತಿಸಿದ್ದರೂ ಸಮಯ ಹೋಗುವುದು ಅಷ್ಟೇನೂ ಕಷ್ಟವಾಗಲಿಲ್ಲ.
ವಿಮಾನದಲ್ಲಿ ಕುಳಿತ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಲ್ಲಿ ಚದುರಿಹೋಗಿದ್ದ ತಳ ಸೇರಿದ್ದ ನೆನಪುಗಳೆಲ್ಲ ಒಂದೊಂದಾಗಿ ಎದ್ದು ಬರಲಾರಂಭಿಸಿದವು. ತನ್ನ ಮಗ ತೊಟ್ಟಿಲ ಕೂಸಾಗಿದ್ದಾಗಿನಿಂದ ಹಿಡಿದು ಅವನಿಗೇ ಕೂಸಾಗುವವರೆಗೆ… ಅಪ್ಪ-ಅಮ್ಮಂದಿರ ಮುದ್ದಿನ ಕಣ್ಮಣಿಯಾಗಿದ್ದ ಏಕೈಕ ಪುತ್ರ ಮಧುಸೂದನ. ಮದುವೆಯಾಗಿ ಐದು ವರ್ಷ ಸತಾಯಿಸಿ ಕೊನೆಗೂ ಅವತರಿಸಿದ್ದ ಕುಮಾರ ಕಂಠೀರವ. ಆಗಿನ್ನೂ ಖಾಸಗಿ ಶಾಲೆಯಲ್ಲಿ ಟೆಂಪರರಿ ಶಿಕ್ಷಕಿಯಾಗಿದ್ದ ಶಾಲಿನಿ ಮಗನಿಗೋಸ್ಕರ ಕೆಲಸ ಬಿಟ್ಟಿದ್ದಳು. ಅಂಚೆಕಚೇರಿಯಲ್ಲಿ ಗುಮಾಸ್ತನಾಗಿದ್ದ ಪದ್ಮನಾಭನ ಸಂಬಳದ ಜೊತೆಗೆ ತೋಟದಿಂದ ಬರುತ್ತಿದ್ದ ಅಲ್ಪಸ್ವಲ್ಪ ಆದಾಯ ಅವರ ಪುಟ್ಟ ಕುಟುಂಬವನ್ನು ಸುಖವಾಗಿಡಲು ಸಾಕಿತ್ತು. ಮಧುಸೂದÀನ ಶಾಲೆಗೆ ಹೋಗಲು ಇನ್ನೇನು ಶುರುಮಾಡಬೇಕೆನ್ನುವಷ್ಟರಲ್ಲಿ ಶಾಲಿನಿಗೆ ಅನಾಯಾಸವಾಗಿ ಸರ್ಕಾರೀ ಶಾಲೆಯಲ್ಲಿ ಕೆಲಸ ಸಿಕ್ಕಿತ್ತು.
ಮಗನಿಗೂ ಅಪ್ಪನಿಗೂ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ ಎನ್ನುವಂಥದ್ದೆಲ್ಲ ಬರೇ ಪೊಳ್ಳು ಎಂದುಕೊಂಡಿದ್ದವಳಿಗೆ ಮಗ ಎದೆಯೆತ್ತರ ಬೆಳೆದಾಗ ಮಾತ್ರ ಎದೆಯಲ್ಲಿ ನಡುಕ ಶುರುವಾಗಿತ್ತು. ಸಣ್ಣವನಿದ್ದಾಗ ಅಪ್ಪನ ಬಾಲಂಗೋಚಿಯಂತಾಡುತ್ತಿದ್ದ, ಊಟ ಮಾಡಿಸಲೂ, ಸ್ನಾನ ಮಾಡಿಸಲೂ ಅಪ್ಪನೇ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ಮಗ ಹೈಸ್ಕೂಲು ಮೆಟ್ಟಿಲು ಹತ್ತಿದ್ದೇ ತಡ ಅಪ್ಪನೊಂದಿಗೆ ಸುಖಾಸುಮ್ಮನೆ ಶರಂಪರ ಕಿತ್ತಾಡತೊಡಗಿದ್ದ. ಮೊದಮೊದಲು ಅದೆಲ್ಲ ಆ ಪ್ರಾಯದಲ್ಲಿ ಸಾಮಾನ್ಯವೆಂದು ಕಡೆಗಣಿಸಿದ್ದವಳಿಗೆ ಬರಬರುತ್ತಾ ಇಬ್ಬರೂ ಪರಸ್ಪರ ಶುದ್ಧ ವೈರಿಗಳಂತಾಡುವುದನ್ನು ಕಂಡು ದಿಗಿಲು ಹುಟ್ಟಿತ್ತು. ಇಬ್ಬರಲ್ಲಿ ಯಾರಿಗೆ ಸಮಾಧಾನ ಹೇಳಲು ಹೋದರೂ ಕೇಳುವ ವ್ಯವಧಾನವಿಲ್ಲ. ಅದೊಂದು ಘಟನೆ ಮಾತ್ರ ಶಾಲಿನಿಯ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದ್ದಂತೆ ಕುಳಿತಿದೆ. ಮಗನಿಗೆ ಆ ಕಾಲದ ಎಲ್ಲ ಹುಡುಗರಂತೆ ಇಂಜಿನಿಯರ್ ಆಗುವ ಆಸೆ. ಅಪ್ಪನಿಗೆ ಮಗನನ್ನು ಬಿ.ಎಸ್ಸಿ. ಓದಿಸಿ ಐ.ಎ.ಎಸ್. ಅಧಿಕಾರಿಯಾಗಿಸುವ ಉಮೇದು. ಮಗ ಖಡಾಖಂಡಿತವಾಗಿ ಹೇಳಿದ್ದ – “ನನಗೆ ನನ್ನದೇ ಆದ ಕನಸುಗಳಿವೆ. ಇನ್ನೊಬ್ಬರ ಕನಸುಗಳ ಶಿಲುಬೆಯನ್ನು ನಾನು ಹೊರಲಾರೆ. ನಿಮ್ಮ ಆಸೆ-ಆಕಾಂಕ್ಷೆಗಳನ್ನು ನನ್ನ ಮೇಲೆ ಹೇರಬೇಡಿ.” ಅಷ್ಟಕ್ಕೇ ಸಿಟ್ಟಿಗೆದ್ದ ಅಪ್ಪ ಠೇಂಕರಿಸಿದ್ದ – “ಹಾಗಿದ್ದರೆ ನನ್ನ ಆಸ್ತಿಯ ಮೇಲಿನ ಆಸೆ ಬಿಟ್ಟುಬಿಡು. ನಿಂಗೊAದು ತುಂಡು ಭೂಮಿಯೂ ದಕ್ಕುವುದಿಲ್ಲ.” ಅದಕ್ಕಿಂತ ಎತ್ತರದ ಧ್ವನಿಯಲ್ಲಿ ಅಂದಿದ್ದ ಅಂಗಳದಲ್ಲಿ ಅಪ್ಪನ ಕೈ ಹಿಡಿದು ನಡೆಯಲು ಕಲಿತಿದ್ದ ಪೋರ – “ನನಗೆ ನಿಮ್ಮ ಆಸ್ತಿಯ ಒಂದಿಂಚೂ ಬೇಡ. ಆಸ್ತಿಯೇನು? ನಿಮ್ಮದೆನ್ನುವುದು ನನಗೆ ಏನೂ ಬೇಡ.” ಕೊನೆಗೂ ಅಮ್ಮನ ಮಧ್ಯಸ್ಥಿಕೆಯಿಂದ ಅಪ್ಪ-ಮಗನ ಜಗಳ ಮುಗಿದಿತ್ತು. ಮಧುಸೂದÀನ ಹಾಸ್ಟೆಲ್ಗೆ ಸೇರಿದ ನಂತರ ಪರಿಸ್ಥಿತಿ ಸ್ವಲ್ಪ ತಿಳಿಯಾದಂತೆ ಎನ್ನಿಸಿತ್ತಾದರೂ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು. ಮಗ ಅವನಂದುಕೊಂಡಂತೆ ಸಾಫ್ಟ್ ವೇರ್ ಇಂಜಿನಿಯರ್ ಆದರೂ ಅಪ್ಪನೆಡೆಗೆ ಯಾಕೋ ಸಾಫ್ಟ್ ಆಗಲೇ ಇಲ್ಲ.
ಆದರೂ ಶಾಲಿನಿಯ ಅದೃಷ್ಟ ಪೂರಾ ಖೊಟ್ಟಿಯಿರಲಿಲ್ಲ. ಅವರೊಳಗೆ ಎಷ್ಟೇ ವೈಮನಸ್ಸಿದ್ದರೂ ಅವಳನ್ನು ನೇರವಾಗಿ ತಟ್ಟುವಷ್ಟಿರಲಿಲ್ಲ. ಮಗನಿಗೆ ಅಮ್ಮನೊಂದಿಗೆ ಎಲ್ಲವನ್ನೂ ಹೇಳಿಕೊಂಡರಷ್ಟೇ ಸಮಾಧಾನ. ಪದ್ಮನಾಭನೂ ಅಷ್ಟೇ. ಮಗನೆದುರು ಗುಮ್ಮನಗುಸುಕನಾದರೂ ಹೆಂಡತಿಯಲ್ಲಿ ಮಾತು ಭರಪೂರ. ಅವಳ ದನಿಗೂ ಆಗಾಗ್ಗೆ ಕಿವಿಯಾಗುತ್ತಿದ್ದ. ಹೆಂಡತಿ, ಮಗನಿಗೆ ಬೇಕಾದ್ದನ್ನೆಲ್ಲಾ ಹೇಳುವ ಮೊದಲೇ ಮಾಡಿರುತ್ತಿದ್ದ. ಅದಕ್ಕೇ ಅಲ್ಲವೇ ತಂಗಿ ಅವಳನ್ನು ಆಗಾಗ್ಗೆ ಛೇಡಿಸುತ್ತಿದ್ದದ್ದು ‘ಭಾವಾ ಸಾಕ್ಷಾತ್ ಪದ್ಮನಾಭ ದೇವರೇ’ ಎಂದು. ಮಗನಿಗೆ ಮಧುಸೂದನನೆಂದು ಹೆಸರಿಟ್ಟಿದ್ದಕ್ಕೆ ಅವನೂ ಕೃಷ್ಣನಂತಾಡದಿದ್ದರೆ ಸಾಕು ಎಂದು ತಾನವಳಲ್ಲಿ ಕಣ್ಣು ಹೊಡೆದು ಹೇಳಿದ್ದು ಇನ್ನೂ ನಿನ್ನೆ ಮೊನ್ನೆಯಂತಿದೆ.
ಇಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ನಲ್ಲಿ ಇರುವಾಗಲೇ ಕೈತುಂಬಾ ಸಂಬಳದ ಕೆಲಸ ಸಿಕ್ಕಿ, ಎರಡೇ ವರ್ಷದಲ್ಲಿ ಕೆನಡಾಗೆ ಹಾರಿಹೋಗಿದ್ದ. ನಿನ್ನೆ ಮೊನ್ನೆವರೆಗೆ ಅಮ್ಮನನ್ನು ನೋಡದೆ ಇರಲಾರೆ ಎಂದು ತಿಂಗಳಿಗೆರಡು ಬಾರಿ ಬೆಂಗಳೂರಿನಿಂದ ಮೈಸೂರಿಗೆ ಓಡೋಡಿ ಬರುತ್ತಿದ್ದ ತನ್ನ ಮಧು. ಒಂದು ಸಲಕ್ಕೆ ಮನಸ್ಸಿಗೆ ಪಿಚ್ಚೆನಿಸಿದರೂ ರೆಕ್ಕೆ ಬಲಿತ ಮೇಲೆ ಒಂದಲ್ಲ ಒಂದು ದಿನ ಮರಿಹಕ್ಕಿ ಹಾರಲೇಬೇಕಲ್ಲವೇ ಎಂದು ತನ್ನಷ್ಟಕ್ಕೆ ಸಮಾಧಾನಗೊಂಡಿದ್ದಳು ಶಾಲಿನಿ. ಅಲ್ಲಿಗೆ ಹೋಗಿ ೨ ವರ್ಷವಾದ ಮೇಲೆ ಅಪ್ಪಅಮ್ಮಂದಿರಿಬ್ಬರನ್ನೂ ಕರೆಸಿ ಕೆನಡಾದ ಇಂಚಿಂಚನ್ನೂ ಸುತ್ತಿಸಿ, ಬೇಕು-ಬೇಡವಾದದ್ದೆಲ್ಲವನ್ನು ಕೊಡಿಸಿ ಪ್ರೀತಿಯ ಮಳೆಯನ್ನೇ ಸುರಿಸಿದ್ದ ಮಗನನ್ನು ಕಂಡು ಎಲ್ಲರಂತಲ್ಲ ತನ್ನ ಮಗ ಎಂದು ಒಳಗೊಳಗೇ ಖುಷಿಗೊಂಡಿದ್ದಳು; ಅಪ್ಪ-ಮಗ ಮೊದಲಿನಂತೆಯೇ ಬಿಗುವಾಗಿದ್ದದ್ದನ್ನು ಕಂಡು ಖೇದವೂ.
ಅಪ್ಪ-ಅಮ್ಮನಿಗೆ ತನಗಾಗಿ ಹುಡುಗಿ ಹುಡುಕುವ ಕಷ್ಟವನ್ನೇನೂ ಕೊಟ್ಟಿರಲಿಲ್ಲ ಮಗರಾಯ. ಅದೊಂದು ದಿನ ತಮಾಷೆಗೆಂಬಂತೆ ಕೇಳಿದ್ದ – ‘ಅಮ್ಮಾ, ನಿನಗೆ ಹೇಗಿರುವ ಸೊಸೆ ಬೇಕು ಹೇಳು?’ ಅವಳೂ ಅಷ್ಟೇ ತಮಾಷೆಯಾಗಿ ‘ನಂದು ಬಿಡು. ನಿನಗೆ ಹೇಗಿರುವ ಹುಡುಗಿ ಬೇಕು ಹೇಳು. ಮೂರೂ ಲೋಕ ಹುಡುಕಿ ತರುತ್ತೇನೆ’ ಎಂದಿದ್ದಳು. ‘ಈ ಪ್ರಾಯದಲ್ಲಿ ನಿಂಗೆ ಅಷ್ಟೆಲ್ಲಾ ತ್ರಾಸು ಕೊಡಲಾರೆ ಅಮ್ಮಾ. ಅದಕ್ಕೇ ನಾನೇ ಹುಡುಕಿಕೊಂಡೆ’ ಅಂದು ತನ್ನ ಹುಡುಗಿ ಮನೀಷಾಳ ವಿವಿಧ ಭಂಗಿಯ ಫೋಟೋಗಳನ್ನು ತೋರಿಸಿ ಉತ್ತರಕ್ಕೆಂಬಂತೆ ಅಮ್ಮನ ಮುಖ ನೋಡಿದ್ದ. ಮನೀಷಾ ಬೆಂಗಳೂರಿನ ಹುಡುಗಿ. ಮಧುವಿನಂತೆಯೇ ಉದ್ಯೋಗ ನಿಮಿತ್ತ ಕೆನಡಾ ಸೇರಿಕೊಂಡವಳು. ಅವನು ಪ್ರೀತಿಸಿದ ಹೆಣ್ಣನ್ನು ತಾನೂ ಒಪ್ಪಿ, ಪತಿಯನ್ನೂ ಒಪ್ಪಿಸಿ ಮನೆ-ಮನಗಳೆರಡನ್ನೂ ತುಂಬಿಸಿಕೊಂಡಿದ್ದಳು ಶಾಲಿನಿ. ಮದುವೆ ಆದ ಮೇಲೆ ಒಂದು ತಿಂಗಳು ಎಲ್ಲದಕ್ಕೂ ‘ಅತ್ತೆ ಅತ್ತೆ’ ಎನ್ನುತ್ತ ತನ್ನ ಹಿಂದೆ ಮುಂದೆ ಸುತ್ತುತ್ತಿದ್ದ, ಪ್ರತಿಯೊಂದು ಕೆಲಸದಲ್ಲೂ ಕೈಜೋಡಿಸುತ್ತಿದ್ದ ಸೊಸೆಯನ್ನು ಕಂಡು ಮನತುಂಬಿ ಬಂದಿತ್ತು. ಸೊಸೆ ಮಾವನೊಂದಿಗೂ ಅನ್ಯೋನ್ಯವಾಗಿದ್ದು ಕಂಡು ತೃಪ್ತಿಯಾಗಿತ್ತು. ಜೊತೆಗೆ ಮಗನ ಆಯ್ಕೆಯ ಬಗ್ಗೆ ಅಭಿಮಾನವೂ. ಹೊಸ ಮದುಮಕ್ಕಳ ಒಂದು ತಿಂಗಳ ರಜೆ ಮುಗಿದು ಮತ್ತೆ ಅವರು ಕೆನಡಾಗೆ ಹೊರಟುನಿಂತಾಗ ಈ ರಮ್ಯ ಚೈತ್ರಕಾಲ ಹೀಗೇ ಇರಬಾರದಿತ್ತೇ ಎನ್ನಿಸಿ ಖೇದಗೊಂಡದ್ದು ಶಾಲಿನಿ ಮಾತ್ರವಲ್ಲ ಪದ್ಮನಾಭನೂ. ಆದರೂ ತೋರಗೊಡದೆ ನಗುನಗುತ್ತಾ ಬೀಳ್ಕೊಟ್ಟಿದ್ದರು.
ಆಮೇಲೆ ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುವುದು ನಡೆದೇ ಇತ್ತು. ವಾರಕ್ಕೊಮ್ಮೆ ಫೋನು, ವರ್ಷಕ್ಕೊಮ್ಮೆ ಭೇಟಿ ಇರುವಾಗ ಅವರೆಲ್ಲೋ ದೂರದ ದೇಶದಲ್ಲಿ ಇದ್ದಾರೆಂದು ಎನಿಸುತ್ತಿರಲಿಲ್ಲ. ಮೂರು ವರ್ಷದ ಬಳಿಕ ಮಗ ಸಿಹಿಸುದ್ದಿ ಕೊಟ್ಟಿದ್ದ. ಸೊಸೆಯ ಹೆರಿಗೆ ಡೇಟು ಜನವರಿಯಲ್ಲಿ ಬಂದದ್ದೇ ಶಾಲಿನಿಗೆ ಫಜೀತಿಗಿಟ್ಟುಕೊಂಡಿತು. ಮಾರ್ಚ್ನಲ್ಲಾದರೆ ಒಂದು ತಿಂಗಳು ರಜೆ ಹಾಕಿ ಹೋಗಬಹುದು. ಏಪ್ರಿಲ್-ಮೇನಲ್ಲಿ ಹೇಗೂ ಶಾಲೆಗೆ ಭಾಗಶಃ ರಜೆ. ಜನವರಿಯಿಂದ ಮೂರು ತಿಂಗಳು ರಜೆ ಹಾಕುವುದು ಆಗದ ಮಾತು. ಸೊಸೆ ತಾಯಿಯಿಲ್ಲದ ಹುಡುಗಿ. ತಾನೊಬ್ಬಳೇ ಹೇಗೆ ನಿಭಾಯಿಸುವುದೆಂದು ತಲೆಕೆಡಿಸಿಕೊಂಡಿದ್ದಾಗ ಮಗನೇ ಎಲ್ಲದಕ್ಕೂ ವ್ಯವಸ್ಥೆ ಮಾಡಿರುವುದಾಗಿ ಹೇಳಿ ಹೆಗಲಭಾರ ಇಳಿಸಿದ್ದ. ಗಂಡ-ಹೆಂಡಿರಿಬ್ಬರೂ ಒಂದು ತಿಂಗಳ ಮಟ್ಟಿಗೆ ಹೋಗಿ ಮೊಮ್ಮಗನನ್ನು ಕಣ್ತುಂಬ ನೋಡಿ ವಾಪಸ್ಸಾಗಿದ್ದರೂ ಶಾಲಿನಿಗೆ ಸಮಾಧಾನವಾಗಿರಲಿಲ್ಲ. ಮಗುವಿಗೆ ಮೂರು ತಿಂಗಳಾಗುವವರೆಗಾದರೂ ತಾವಲ್ಲಿರಬೇಕಿತ್ತು ಎಂದು ಬಹಳಷ್ಟು ಸಲ ಅವಳಿಗನ್ನಿಸಿತ್ತು. ಅದಾಗಲೇ ನಿವೃತ್ತಿಗೊಂಡಿದ್ದ ಪದ್ಮನಾಭ ‘ನೀನೂ ರಿಟೈರ್ ಆಗು. ಆಮೇಲೆ ಬೇಕಾದಷ್ಟು ಸಮಯ ಮೊಮ್ಮಗನೊಂದಿಗೆ ಕಳೆಯುವಿಯಂತೆ’ ಎಂದು ಛೇಡಿಸಿದ್ದ. ಮತ್ತೆ ಕೆಲವು ವರ್ಷ ಮೊಮ್ಮಗುವನ್ನು ನೋಡುವ ಯೋಗ ಅವಳಿಗೆ ಬರಲೇಇಲ್ಲ. ಮಗು ಸಣ್ಣದೆಂಬ ನೆಪವೊಡ್ಡಿ ಊರಿಗೆ ಬರುವುದನ್ನು ಮುಂದೂಡುತ್ತಲೇ ಇದ್ದ ಮಧುಸೂದನ.
ಐದು ವರ್ಷಗಳ ಬಳಿಕ ಶಾಲಿನಿ ರಿಟೈರ್ ಆದಾಗ ಮತ್ತೆ ಕೆನಡಾಗೆ ಹೋಗಿದ್ದರು ಮೊಮ್ಮಗನನ್ನು ನೋಡುವ ತವಕದಿಂದ. ಮೊದಮೊದಲಿಗೆ ಮೊಮ್ಮಗನೊಂದಿಗೆ ಖುಷಿಯಲ್ಲೇ ಕಾಲ ಕಳೆದರೂ, ಹೋಗಿ ಸ್ವಲ್ಪ ದಿನದಲ್ಲೇ ಅವಳಿಗೆ ಎಲ್ಲವೂ ಮೊದಲಿನಂತಿಲ್ಲ ಎನ್ನಿಸಿ ಕಸಿವಿಸಿಯಾಗಿತ್ತು. ಹಿಂದೆಲ್ಲ ತನ್ನೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡುತ್ತಿದ್ದ ಮಗ ಈಗ ಎಷ್ಟು ಬೇಕೋ ಅಷ್ಟೇ ಮಾತು. ತಾನು ಹೇಳಿದ್ದಕ್ಕೆಲ್ಲಾ ಹೂಂಗುಡುತ್ತಿದ್ದ, ಅಕ್ಕರೆ ತೋರುತ್ತಿದ್ದ ಸೊಸೆಗೆ ಈಗ ತಮ್ಮ ಉಪಸ್ಥಿತಿ ಅಷ್ಟೇನೂ ಹಿತವಾಗಿಲ್ಲವೆಂದು ಎನಿಸಿತ್ತಾದರೂ ಪದ್ಮನಾಭನೇ ಸಮಾಧಾನ ಹೇಳಿದ್ದ. ಇಬ್ಬರಿಗೂ ಕೆಲಸದ ಒತ್ತಡ. ಅದಕ್ಕೇ ಹಾಗಾಡುತ್ತಾರೆಯೇ ಹೊರತು ಬೇರೇನಿಲ್ಲವೆಂದಿದ್ದ. ಹಾಗಿದ್ದರೆ ವಾರಾಂತ್ಯದಲ್ಲೂ ಯಾಕೆ ಹಾಗಿರುತ್ತಾರೆ? ಎಂಬ ಅವಳ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಮೊಮ್ಮಗ ಮನೆಗೆ ಬಂದ ಮೇಲೆ ಮಾತ್ರ ಮನೆಯಿಡೀ ಕಳೆಗಟ್ಟುತ್ತಿತ್ತು. ಅವರು ಹೋಗಿ ಒಂದು ತಿಂಗಳವರೆಗೆ ಅವರಿಬ್ಬರಿಗೆ ಇರುಸುಮುರುಸಾಗಬಾರದೆಂದೋ ಏನೋ ವಾರಾಂತ್ಯದಲ್ಲಿ ಯಾರನ್ನೂ ಮನೆಗೆ ಕರೆಯುತ್ತಿರಲಿಲ್ಲವಾದರೂ ಆಮೇಲಾಮೇಲೆ ಪ್ರತಿ ವಾರಾಂತ್ಯದಲ್ಲೂ ಮಗ-ಸೊಸೆಯ ಸ್ನೇಹಿತರು ಬಂದು ಹೋಗುವುದು ನಡೆದೇ ಇತ್ತು. ಅದಾಗಿ ಸ್ವಲ್ಪ ದಿನಗಳಲ್ಲಿ ಶಾಲಿನಿಯ ಮೂಗಿಗೆ ಏನೋ ವಾಸನೆ ಬಡಿದಿತ್ತು. ಸೊಸೆಯಲ್ಲಿ ಕೇಳುವುದೆ, ಬೇಡವೆ? ಎನ್ನುವ ಸಂದಿಗ್ಧತೆಯಲ್ಲೇ ಏಳು ಹಗಲು ಏಳು ರಾತ್ರಿ ಕಳೆದಿದ್ದಳು. ಕೊನೆಗೂ ಇನ್ನು ತನ್ನ ಹೊಟ್ಟೆಯೊಳಗೆ ಇಡುವುದು ಸಾಧ್ಯವಿಲ್ಲವೆಂದು ತೋರಿ ಕೇಳಿಯೇ ಬಿಟ್ಟಿದ್ದಳು.
“ಮನೀಷಾ, ಪ್ರತೀ ವಾರ ಬರುತ್ತಾಳಲ್ಲ ಆ ಬಾಬ್ಕಟ್ನ ಹುಡುಗಿ… ಅವಳ ಬಗ್ಗೆ ನಿನ್ನ ಅಭಿಪ್ರಾಯವೇನು?”
“ಓಹ್… ನೀವು ಅಮಲಾ ಬಗ್ಗೆ ಕೇಳುತ್ತಿದ್ದೀರಾ ಅತ್ತೆ? ಅವಳು ಮಧೂನ ಫ್ರೆಂಡ್. ಈಗ ನನಗೂ ತುಂಬಾ ಕ್ಲೋಸ್ ಫ್ರೆಂಡ್. ಯಾಕೆ ಹಾಗೆ ಕೇಳಿದ್ರಿ?”
“ಏನಿಲ್ಲಾ… ಯಾಕೋ ಮಧು ಅವಳ ಜೊತೆ ಸ್ವಲ್ಪ ಜಾಸ್ತಿಯೇ ಸಲುಗೆಯಿಂದಿರುವ ಹಾಗೆ ಕಾಣಿಸಿತು. ಆ ಹುಡುಗಿಯೂ ಸ್ವಲ್ಪ ಚೆಲ್ಲು ಚೆಲ್ಲು. ಯಾವುದಕ್ಕೂ ಸ್ವಲ್ಪ ಎಚ್ಚರದಿಂದಿದ್ದರೆ ಒಳ್ಳೆಯದಿತ್ತಮ್ಮಾ. ತಪ್ಪು ತಿಳಿದುಕೊಳ್ಳಬೇಡ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದು ನಿನಗೂ ಗೊತ್ತಲ್ವಾ?”
“ಅಯ್ಯೋ ಅತ್ತೆ ಅಂಥದ್ದೇನಿಲ್ಲ. ಅವಳು ಎಲ್ಲರೊಂದಿಗೂ ಹಾಗೆಯೇ ಮಾತಾಡೋದು. ಅಷ್ಟಕ್ಕೂ ನನಗೆ ನನ್ನ ಮಧು ಏನಂತ ಗೊತ್ತು.”
ಅವಳು ‘ನನ್ನ ಮಧು’ ಎನ್ನುವುದನ್ನು ತುಸು ಜಾಸ್ತಿಯೇ ಒತ್ತಿ ಹೇಳಿದ್ದು ಗೊತ್ತಾಗದಷ್ಟು ದಡ್ಡಿಯೇನಲ್ಲ ಶಾಲಿನಿ. ಸೊಸೆ ಮಾಡಿಕೊಟ್ಟ ಗುಲಾಬ್ ಜಾಮೂನ್ ಆ ದಿನ ಕಹಿಯೆನಿಸಿತ್ತು. ಮಗನಲ್ಲೂ ಮಾತಾಡಿ ನೋಡಿದ್ದಳು. “ನಾವೆಲ್ಲಾ ಬರೇ ಫ್ರೆಂಡ್ಸ್ ಅಮ್ಮಾ. ಅಷ್ಟಕ್ಕೂ ನನ್ನ ಪರ್ಸನಲ್ ವಿಚಾರದಲ್ಲಿ ಇನ್ನೊಬ್ಬರು ಮೂಗು ತೂರಿಸುವುದು ನಂಗಿಷ್ಟ ಆಗೋದಿಲ್ಲ” ಎಂದು ತುಸು ಖಾರವಾಗಿಯೇ ಹೇಳಿದ್ದು ಕೇಳಿ ಉಗುಳು ನುಂಗಿದ್ದಳು. ಪದ್ಮನಾಭ ಅದೆಲ್ಲವನ್ನೂ ಗಮನಿಸಿದ್ದನೋ ಇಲ್ಲವೋ ಎಂಬ ಸಂಶಯ ಅವಳ ತಲೆಯೊಳಗೆ ಹೊಕ್ಕಿ, ತನಗೆ ಅನ್ನಿಸಿದ್ದನ್ನು ಅವನಲ್ಲೂ ಹೇಳಿದ್ದಕ್ಕೆ ಅಲ್ಲಿಯ ಸಂಸ್ಕೃತಿ ಬಗ್ಗೆ ಭಾಷಣ ಕುಟ್ಟಿ ಅವಳನ್ನು ಸುಮ್ಮನಾಗಿಸಿದ್ದ. ಅದಕ್ಕಿಂತ ಹೆಚ್ಚಾಗಿ ಅವಳನ್ನು ತಟ್ಟಿದ್ದು ಆ ರಾತ್ರಿ ಮಗ-ಸೊಸೆಯಲ್ಲಿ ನಡೆದ ಮಾತುಕತೆ. ತಾನು ಅಂದದ್ದೆಲ್ಲವನ್ನೂ ಅವಳು ಮಧುವಿನಲ್ಲಿ ಹೇಳಿ ಕೊನೆಗೆ ಉಸುರಿದ್ದಳು ಮುತ್ತಿನಂಥಾ ಮಾತನ್ನು – “ಈ ಅತ್ತೆಯಂದಿರೇ ಹೀಗೆ. ಮಗ ಸೊಸೆ ನಡುವೆನೇ ಎತ್ತಿ ಕಟ್ಟೋ ಚಾಳಿ.” ತನಗೆ ಕೇಳಲೆಂದೇ ಹಾಗೆ ಹೇಳಿದ್ದೋ, ಅಲ್ಲಿಯ ಮರದ ಗೋಡೆ ದಾಟುವುದು ಶಬ್ದಗಳಿಗೆ ಸುಲಭವಾದದ್ದರಿಂದ ತನಗೆ ಕೇಳಿದ್ದೋ ಗೊತ್ತಿಲ್ಲ. ಕೇಳಿ ಎರಡು ರಾತ್ರಿ ನಿದ್ದೆಯಿಲ್ಲದೆ ಕಳೆದದ್ದಂತೂ ಹೌದು. ಅವರು ಅಲ್ಲಿರುವವರೆಗೂ ಅವರುಗಳ ವಾರಾಂತ್ಯದ ಭೇಟಿಗಳು, ಪಿಸುಪಿಸು ಮಾತು, ಕುಲುಕುಲು ನಗು ನಿಂತಿರಲಿಲ್ಲ. ಹೊಟ್ಟೆಯೊಳಗೆ ಸೂಜಿ ಚುಚ್ಚಿದಂತಾದರೂ, ತಾನೇನೂ ನೋಡಿಲ್ಲವೆಂಬಂತೆ ಸುಮ್ಮನಿದ್ದುಬಿಟ್ಟಳು.
ಆರು ತಿಂಗಳ ವೀಸಾ ಮುಗಿದು ಮೈಸೂರಿಗೆ ವಾಪಸ್ಸಾದ ಮೇಲೆ ಮಗ ಸೊಸೆಯ ಫೋನು ಬರುವುದೇ ಅಪರೂಪವಾಗಿತ್ತು. ಈಗೊಂದು ಎರಡು ತಿಂಗಳ ಹಿಂದೆ ಸೊಸೆ ಅಳುತ್ತಳುತ್ತಾ ಮಾತಾಡಿದ್ದಳು. ಅವಳ ಮಾತಿನ ಸಾರಾಂಶವಿಷ್ಟು – “ಮಧು ಮತ್ತು ಅಮಲಾಳ ನಡುವಿನ ಸಂಬAಧ ಈಗ ಗಾಢವಾಗಿದೆ. ಆವತ್ತು ಅತ್ತೆ ಹೇಳಿದ ಮಾತನ್ನು ಕಡೆಗಣಿಸಿದ್ದೇ ತಪ್ಪಾಯಿತು. ಅವರಿಬ್ಬರೂ ಈಗೀಗ ಮನೆಯಾಚೆಯೂ ಭೇಟಿಯಾಗುತ್ತಾರೆ. ಮನವೊಲಿಸಿ ನೋಡಿ ಆಯ್ತು, ಹೆದರಿಸಿ ನೋಡಿ ಆಯ್ತು. ಅವನು ಅವಳನ್ನು ಬಿಡಲು ಸಿದ್ಧನಿಲ್ಲ. ತನ್ನ-ಅವನ ನಡುವಿನ ಬಂಧ ಕಡಿಯುತ್ತ ಬಂದಿದೆ. ಹೇಗಾದರೂ ಮಾಡಿ ಅವನನ್ನು ಮತ್ತೆ ಮೊದಲಿನಂತಾಗಿಸಬೇಕು.”
‘ನಿನ್ನ ಮಧು ಏನಂತ ನಿನಗೆ ಗೊತ್ತಿಲ್ಲವಾ?’ ಕುಟುಕಬಹುದಿತ್ತು ಶಾಲಿನಿ. ಆದರೆ ಅವಳ ಅಂತಃಸತ್ತ್ವ ಅದಕ್ಕೊಪ್ಪಲಿಲ್ಲ. ಅವಳೀಗ ಹದಗೆಟ್ಟಿರುವ ಬದುಕನ್ನು ದುರಸ್ತಿಗೊಳಿಸುವ ಮೆಕ್ಯಾನಿಕ್ಕಾಗಬೇಕಿತ್ತು; ಮುರಿದು ಬೀಳುತ್ತಿರುವ ಸಂಬಂಧಕ್ಕೆ ಮುಲಾಮೋ, ಇಂಜೆಕ್ಷನ್ನೋ, ಆಪರೇಷನ್ನೋ ಮಾಡಿ ಮರುಜೀವ ಕೊಡುವ ವೈದ್ಯಳಾಗಬೇಕಿತ್ತು; ಹುಟ್ಟು ಮರೆತು ಗಾಳಿ ಬೀಸಿದ ಕಡೆಗೆ ಹೊಯ್ದಾಡುತ್ತಿರುವ ದೋಣಿಯನ್ನು ಮರಳಿ ದಡಕ್ಕೆ ಸೇರಿಸುವ ನಾವಿಕಳಾಗಬೇಕಿತ್ತು.
ನಂತರ ಎರಡು ತಿಂಗಳು ಎರಡು ಯುಗಗಳಂತೆ ಭಾಸವಾಗಿತ್ತು. ತನ್ನಲ್ಲಿರುವ ಬುದ್ಧಿವಂತಿಕೆಯನ್ನೆಲ್ಲ ಖರ್ಚು ಮಾಡಿ ಬೇರೆಬೇರೆ ರೀತಿಯಲ್ಲಿ ಹೇಳಿನೋಡಿದ್ದಳು ಎದೆಯೆತ್ತರ ಬೆಳೆದ ಮಗನಿಗೆ. ಪತಿಯಿಂದಲೂ ಹೇಳಿಸಿ ನೋಡಿದ್ದಳು. ಮೋಹಕ್ಕೆ ಬಿದ್ದವನಿಗೆ ಮಾತಿನ ಲೆಕ್ಕವೆಲ್ಲಿಯದು? ವಾರಕ್ಕೆ ನಾಲ್ಕು ದೀರ್ಘ ಫೋನು ಕಾಲ್ಗಳು, ಆರೋಪ ಪ್ರತ್ಯಾರೋಪಗಳು, ಮಾತಿನ ಬಿರುಸಿನ ಬಾಣಗಳು…. ಮೊದಲಿಗೆ ತನ್ನ ತಪ್ಪೆಂಬುದನ್ನೇ ಅವನು ಒಪ್ಪಿರಲಿಲ್ಲ. ಮನೀಷಾಳಿಗೆ ಎಲ್ಲಿಲ್ಲದ ಸಂಶಯವೆಂದು ಅವಳ ಮೇಲೆಯೇ ಗೂಬೆಕೂರಿಸುವ ವ್ಯರ್ಥ ಪ್ರಯತ್ನ. ಆಮೇಲಾಮೇಲೆ ತಾನು ತಪ್ಪು ಮಾಡಿದ್ದು ಹೌದು, ಆದರೆ ಈಗ ಬದಲಾಗಿದ್ದೇನೆಂಬ ನಂಬಿಕೆ ಹುಟ್ಟಿಸುವ ಮಾತು. ಮತ್ತೆರಡೇ ದಿನಕ್ಕೆ ಸೊಸೆಯ ಮುಸುಮುಸು ಅಳು. ಕೊನೆಗೂ ರೋಸಿ ಹೋಗಿದ್ದ ಸೊಸೆ ನಿರ್ಧರಿಸಿಯಾಗಿತ್ತು, ಅವನಿಂದ ಬೇರಾಗುವುದೆಂದು. ಅದಕ್ಕೇ ಹೊರಟಿದ್ದಳು ಶಾಲಿನಿ ತೇಪೆಹಚ್ಚಿಯಾದರೂ ಸಂಬAಧವನ್ನು ಹಿಡಿದಿಡುವ ಆಶಾವಾದದಿಂದ.
ನೆನಪುಗಳು ಅವಳನ್ನು ಬೆಂಗಳೂರಿನಿಂದ ಹಿಂಬಾಲಿಸಿಕೊಂಡು ಬಂದು ಅಬುಧಾಬಿಯಲ್ಲಿ ಇಳಿಸಿ, ಇದೀಗ ಅವಳನ್ನು ಟೊರೊಂಟೋದಲ್ಲಿ ತಂದುನಿಲ್ಲಿಸಿತ್ತು. ಭೂತ-ವರ್ತಮಾನ-ಭವಿಷ್ಯದ ತೊಳಲಾಟದಲ್ಲಿದ್ದಾಗಲೇ ಮಧುಸೂಧನ ಬಂದಿದ್ದ ವಿಮಾನನಿಲ್ದಾಣಕ್ಕೆ ಅಮ್ಮನನ್ನು ಕರೆದೊಯ್ಯಲು. ಅಲ್ಲಿಂದ ಅವನ ಮನೆಗೆ ಅರ್ಧಗಂಟೆಯ ಹಾದಿ. ಕಾರಲ್ಲಿ ಕೂತ ಇಬ್ಬರ ನಡುವೆಯೂ ನೀರವ ಮೌನ. ಒಂದು ಸಲ ಶಾಲಿನಿ ಮಗನನ್ನು ದಿಟ್ಟಿಸಿದಳು. ದೊಡ್ಡ ನಗೆಯ ಹುಡುಗ ಈವತ್ತು ನಗೆಯನ್ನೇ ಕಳೆದುಕೊಂಡು ಕುಳಿತಿದ್ದಾನೆ. ಮಾತಾಡಿಸಬೇಕೆಂದುಕೊಂಡರೂ ತುಟಿ ಬಿಚ್ಚಲಿಲ್ಲ. ಮನೆ ತಲಪಿದಾಗ ನೆನಪಾಗಿತ್ತು ಈ ಹಿಂದೆ ಬಂದಾಗ ಇದ್ದ ಸಂಭ್ರಮ. ಈಗ ಅದೇ ಮನೆಯಲ್ಲಿ ಸೂತಕದ ಛಾಯೆ. ಸೊಸೆಯ ಮುಖ ನಿರ್ಲಿಪ್ತ, ನಿರ್ವಿಕಾರ. ಮೊಮ್ಮಗ ಇದಾವುದರ ಪರಿವೆಯಿಲ್ಲದೆ ತನ್ನ ಪಾಡಿಗೆ ಆಡುತ್ತಿದ್ದವನು ಅಜ್ಜಿಯನ್ನು ಕಂಡು ಓಡಿ ಬಂದು ತಬ್ಬಿಕೊಂಡ. ‘ಸ್ನಾನ, ಊಟ ಮಾಡಿ ಸ್ವಲ್ಪ ವಿಶ್ರಾಂತಿ ತಗೋಮ್ಮ. ನಾಳೆ ಮಾತಾಡೋಣ’ ಎಂದ ಮಗ. ಶಾಲಿನಿ ಹೂಂಗುಟ್ಟಿದಳು. ರಾತ್ರಿಯಿಡೀ ಕುಳಿತು ಏನೆಲ್ಲ ತಾನು ಹೇಳಬೇಕೆಂದು ತಾಲೀಮು ನಡೆಸಿದ್ದಳು ಮನದಲ್ಲೇ.
ಮರುದಿನ ಮಧುಸೂದನ ಅಮ್ಮನ ಮಡಿಲಲ್ಲಿ ಮತ್ತೆ ಮಗುವಾಗಿದ್ದ. ಒಂದೇ ಸಮನೆ ಬಿಕ್ಕುತ್ತಿದ್ದ ಮಗನನ್ನು ಅತ್ತು ಹಗುರಾಗಲೆಂದು ಬಿಟ್ಟು ಆಮೇಲೆ ನಿಧಾನವಾಗಿ ಎಂದಳು –
“ಹೀಗಾಗಬಹುದೆಂದು ನಾನು ಮೊದಲೇ ಊಹಿಸಿದ್ದೆ ಮಧೂ…”
“ನಂಗೇನು ಮಾಡಬೇಕೆಂದೇ ತೋಚುತ್ತಿಲ್ಲ ಅಮ್ಮ. ನನ್ನ ತಾಕಲಾಟಗಳು ನಿನಗೆ ಅಷ್ಟು ಸುಲಭವಾಗಿ ಅರ್ಥವಾಗಲಾರದು.” ಅಮ್ಮನಿಂದ ಉತ್ತರ ಬಾರದ್ದು ನೋಡಿ ಮುಂದುವರಿಸಿದ –
“ನನ್ನ-ಅಮಲಾಳ ನಡುವೆ ಇರುವುದು ಏನು ಎಂಬುವುದು ನನಗಿನ್ನೂ ಅರ್ಥವಾಗಿಲ್ಲ. ನನ್ನ ಮತ್ತು ಮನೀಷಾಳ ನಡುವೆ ಇರುವುದಕ್ಕಿಂತ ಇನ್ನೇನೋ ಎಂದಷ್ಟೇ ಹೇಳಬಲ್ಲೆ. ಅವಳ ನೆನಪನ್ನು ಎಷ್ಟೇ ಕೊಡವಿಕೊಂಡು ಎದ್ದರೂ ಮತ್ತೆಮತ್ತೆ ಆ ಕಡೆಗೇ ವಾಲುತ್ತಿದ್ದೇನೆ. ವಿಚಿತ್ರವೆಂದರೆ ಅದು ತಪ್ಪೆಂದೂ ನನಗೆ ಎನಿಸುತ್ತಿಲ್ಲ.”
“ಮೋಹದ ಜಾಲದಲ್ಲಿ ಬಿದ್ದವರೆಲ್ಲರದ್ದೂ ಇದೇ ಸ್ಥಿತಿ. ನಿಜ ಹೇಳು ಮಧು, ಅಮಲಾಳಲ್ಲಿ ನೀನು ಅಂಥದ್ದೇನು ಕಂಡೆ? ದೈಹಿಕ ಆಕರ್ಷಣೆಯ ಹೊರತಾಗಿ?”
“ಅವಳ ಜೊತೆ ಗಂಟೆಗಟ್ಟಲೆ ಕೀಟ್ಸ್ನ ಬಗ್ಗೆ ಹರಟಬಲ್ಲೆ; ಮಿಲ್ಟನ್ನ ಕವಿತೆಗಳನ್ನು ಚರ್ಚಿಸಬಲ್ಲೆ; ಕಿಶೋರ್, ರಫಿಯ ಸಂಗೀತವನ್ನು ಆಸ್ವಾದಿಸಬಲ್ಲೆ. ಕಲೆ-ಸಾಹಿತ್ಯದ ಗಂಧಗಾಳಿಯಿಲ್ಲದ ಮನೀಷಾಳೊಟ್ಟಿಗೆ ಅದನ್ನು ಕಲ್ಪಿಸಲೂ ಸಾಧ್ಯವಿಲ್ಲ…”
“ನಾನು ಸಾಧ್ಯತೆಗಳ ಬಗ್ಗೆ ಕೇಳುತ್ತಿಲ್ಲ. ವಾಸ್ತವವಷ್ಟೇ ನನಗೆ ಮುಖ್ಯ. ನಿನ್ನನ್ನೇ ನೀನು ಕೇಳಿಕೋ. ಈ ಒಂದು ವರ್ಷದಲ್ಲಿ ಎಷ್ಟು ಗಂಟೆ ನೀವಿಬ್ಬರೂ ಸಾಹಿತ್ಯದ ಬಗ್ಗೆ ಮಾತಾಡಿದ್ದೀರಿ? ಎಷ್ಟು ಸಮಯ ಸಂಗೀತವನ್ನು ಧೇನಿಸಿದ್ದೀರಿ? ನಿನ್ನೊಳಗಿನ ತಾಕಲಾಟಗಳಿಗೆ ಉತ್ತರ ಸಿಗುತ್ತದೆ.”
ಸ್ವಲ್ಪ ಹೊತ್ತಿನ ಮೌನದ ಬಳಿಕ ಹೇಳಿದ –
“ಹೇಳಿದೆನಲ್ಲಾ, ನನ್ನ ಅಮಲಾಳ ನಡುವೆ ಪ್ರೀತಿಯೇ ಇದೆ ಎಂದು ಸ್ಪಷ್ಟವಾಗಿ ಹೇಳಲಾರೆ. ಬಹುಶಃ ಲೌಕಿಕತೆಗೂ ಮೀರಿದ್ದು, ಇನ್ನೇನೋ…”
“ನೀನೀಗ ಹದಿಹರೆಯದ ಹುಡುಗನಲ್ಲ ಮಧೂ… ಮೊದಲು ಈ ಕಲ್ಪನಾಲೋಕದಿಂದ ಹೊರಕ್ಕೆ ಬಾ. ಅವಳಿಗಾದರೋ ಇನ್ನೂ ಮದುವೆಯಾಗಿಲ್ಲ. ನಿನಗೆ ಮದುವೆಯಾಗಿದೆ. ಅದೂ ನೀನು ಪ್ರೀತಿಸಿದ್ದ ಹುಡುಗಿಯೊಂದಿಗೆ. ನಿಮ್ಮ ಪ್ರೀತಿಯ ಕುರುಹಾಗಿ ಒಂದು ಮಗುವೂ ಒಬ್ಬ ಜವಾಬ್ದಾರಿಯುತ ಗಂಡನಾಗಿ, ತಂದೆಯಾಗಿ ಯೋಚಿಸಿ ನೋಡು.”
“ಮನೀಷಾ ನಾನು ಪ್ರೀತಿಸಿದ ಹೆಣ್ಣೆಂಬುದು ನಿಜ. ಆದರೆ ಕಾಲ ಸರಿದಂತೆಲ್ಲ ನನ್ನೆಡೆಗಿನ ಅವಳ ಪ್ರೀತಿಯೂ ಬದಲಾಗಿದೆ. ನನ್ನ ಮಾತುಗಳು ಈಗೀಗ ಅವಳನ್ನು ತಾಕುವುದೇ ಇಲ್ಲ; ನನ್ನ ಮೌನ ಅವಳಿಗೆ ಅರ್ಥವಾಗುವುದಿಲ್ಲ; ನನ್ನ ಗೆಲವುಗಳಿಗೆ ಅವಳಲ್ಲಿ ಸಂಭ್ರಮವಿಲ್ಲ; ಸೋಲುಗಳು ಅವಳನ್ನು ತಟ್ಟುವುದಿಲ್ಲ. ಜೊತೆಯಲ್ಲೇ ಇದ್ದರೂ ಎಷ್ಟೊಂದು ಅಂತರವಿದೆ ನನ್ನ-ಅವಳ ನಡುವೆ…”
“ಮಧೂ, ನಿನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ಮನೀಷಾಳಲ್ಲಿ ಹುಳುಕು ಹುಡುಕಬೇಡ. ಅವಳ ಪ್ರೀತಿಯಲ್ಲೂ ಕೊರತೆ ಕಾಣಬೇಡ. ಇಷ್ಟು ವರ್ಷ ಕಾಣದ ಲೋಪಗಳು ಈಗ ಯಾಕೆ ನಿನಗೆ ಒಂದೊಂದಾಗಿ ಕಾಣುತ್ತಿವೆ? ನಿನ್ನಲ್ಲೂ ಇದೆ ಹತ್ತಾರು ದೋಷಗಳು… ಪಟ್ಟಿ ಮಾಡಲೇನು? ಈವತ್ತು ಇವಳಲ್ಲಿಲ್ಲದ್ದೇನೋ ಅಮಲಾಳಲ್ಲಿ ಕಂಡೆ. ನಾಳೆ ಅವಳಲ್ಲಿಲ್ಲದ್ದೇನೋ ಮತ್ತೊಬ್ಬಳಲ್ಲಿ. ಒಳಗೆ ಸಿಕ್ಕದ್ದನ್ನೆಲ್ಲ ಹೊರಗೆ ಹುಡುಕುವವನನ್ನು ಯಾರೂ ಮನುಷ್ಯ ಎನ್ನುವುದಿಲ್ಲ ಮಧೂ…
ನಿನ್ನ ಆತ್ಮಸಾಕ್ಷಿಯನ್ನೇ ಕೇಳು. ಇವೆಲ್ಲ ನಿನ್ನ ವಂಚನೆಯ ದಾರಿಯನ್ನು ಸಲೀಸಾಗಿಸಲು ನೀನೇ ಸೃಷ್ಟಿಸಿಕೊಂಡ ಒಣ ನೆಪಗಳೆಂದು ಒಪ್ಪದಿದ್ದರೆ ಹೇಳು.”
“ನಾನು ಮನೀಷಾಳನ್ನು ಈಗಲೂ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನಮ್ಮಾ. ಅವಳೆಷ್ಟೇ ನನ್ನೆಡೆಗೆ ಬದಲಾದರೂ ನನ್ನ ಪ್ರೀತಿ ಜೀವಂತವಾಗಿರುತ್ತದೆ. ಅವಳೇ ನನ್ನನ್ನು ತೊರೆಯುವ ಮಾತಾಡುತ್ತಿದ್ದಾಳೇ ಹೊರತು ನಾನಲ್ಲ.”
“ಹೌದು. ಯಾಕೆಂದರೆ ಅಮಲಾಳ ಅಮಲಿನಿಂದ ನೀನಿನ್ನೂ ಹೊರಬರಬಹುದಾದ ಲಕ್ಷಣವೇ ಅವಳಿಗೆ ಕಾಣುತ್ತಿಲ್ಲ. ನಿನಗೆ ಪ್ರೀತಿಯನ್ನು ಮೊಗೆಮೊಗೆದು ಕೊಟ್ಟವಳು ಇಂದು ಪ್ರೀತಿಗೆ ಅರ್ಥ ಹುಡುಕಿ ಸೋತಿರಬಹುದು. ಅವಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎನ್ನುವವನು ಅವಳನ್ನು ವಂಚಿಸಿದ್ದೇಕೆ? ಈ ಕ್ಷಣವೂ ವಂಚಿಸುತ್ತಿರುವುದೇಕೆ? ಅವಳೂ ಬೇಕು, ಇವಳೂ ಬೇಕು ಎನ್ನುವು ದ್ವಂದ್ವವೇಕೆ?”
“ಅಮ್ಮ ಒಂದAತೂ ನಿಜ. ಹೇಳಿದರೂ ಮನೀಷಾ ಒಪ್ಪುತ್ತಿಲ್ಲ. ನೀನಾದರೂ ನಂಬು. ನನ್ನ-ಅಮಲಾಳ ನಡುವಿನ ಸಂಬಂಧ ಕೇವಲ ಮನಸ್ಸಿಗಷ್ಟೇ ಸಂಬಂಧಿಸಿದ್ದು. ನಾವೆಂದೂ ಒಬ್ಬರನ್ನೊಬ್ಬರು ಸ್ಪರ್ಶಿಸಲಿಲ್ಲ. ನಾನು ಕನಸಲ್ಲೂ ಮನೀಷಾಳ ಹೊರತಾಗಿ ಯಾರೊಂದಿಗೂ ದೇಹಸುಖ ಹೊಂದಿದವನಲ್ಲ. ನನ್ನ ತನು ಕೇವಲ ಮನೀಷಾಳದ್ದು ಮಾತ್ರ.”
“ಮಧೂ… ಯಾರೆಂದರು ನಿನಗೆ ವ್ಯಭಿಚಾರ ಎನ್ನುವುದು ಕೇವಲ ದೇಹಕ್ಕೆ ಸಂಬಂಧಿಸಿದ್ದು ಎಂದು?”
“ಅಮ್ಮಾ ಪ್ಲೀಸ್… ಇದನ್ನು ವ್ಯಭಿಚಾರ ಎನ್ನಬೇಡ. ನಮ್ಮ ನಡುವೆ ಅಂಥದ್ದೇನೂ ನಡೆದಿಲ್ಲ.”
“ನೀನೆಷ್ಟೇ ಬಣ್ಣ ಬಳಿದರೂ ಅನೈತಿಕ ಎನ್ನುವುದು ನೈತಿಕವಾಗುವುದಿಲ್ಲ. ನಿನ್ನ ಹೆಂಡತಿ ಪರಗಂಡಸಿನೊಂದಿಗೆ ಇಂಥದ್ದೇ ಸಂಬಂಧ ಹೊಂದಿದ್ದರೆ ನೀನು ಹೇಗೆ ಸ್ವೀಕರಿಸುತ್ತಿ ಮಧೂ? ದೈಹಿಕವಲ್ಲದ ಮಾತ್ರಕ್ಕೇ ದೈವಿಕವೆಂದೇ?”
ಒಂದುಕ್ಷಣ ವಿಚಲಿತನಾದಂತೆ ಕಂಡರೂ, ಮಧುಸೂದನ ಎಲ್ಲವನ್ನೂ ಒಪ್ಪುವಂತೆ ತೋರಲಿಲ್ಲ. ಶಾಲಿನಿ ಎಲ್ಲದಕ್ಕೂ ಸಿದ್ಧಳಾಗಿಯೇ ಬಂದಿದ್ದಳು. ಕೊನೆಯ ಅಸ್ತ್ರವೆಂಬಂತೆ ಎಂದಳು – “ಮಧೂ… ನೀನಂದಿದ್ದೆ ನಿನ್ನ ಹದಿಹರೆಯದ ದಿನಗಳಲ್ಲಿ ನೆನಪಿದೆಯಾ? ನಿನ್ನ ಅಪ್ಪ ಮಾಡಿಟ್ಟ ಆಸ್ತಿಯಲ್ಲಿ ಒಂದಿಂಚೂ ಬೇಡವೆಂದು…?”
ಗಹಗಹಿಸಿ ನಕ್ಕ ಮಗ.
“ಹೌದಮ್ಮ ನೆನಪಿದೆ. ಅದಕ್ಕೂ-ಇದಕ್ಕೂ ತಳಕು ಹಾಕಲು ನೋಡುತ್ತಿದ್ದೀಯಾ? ಆವತ್ತೂ ಅಂದಿದ್ದೆ, ಈವತ್ತೂ ನಾನು ನನ್ನ ಮಾತಿಗೆ ಬದ್ಧ. ಅದು ಈಗ ಲಕ್ಷಾಂತರ ರೂಪಾಯಿ ಬೆಲೆಬಾಳುವಂಥದ್ದು ಎನ್ನುವುದೂ ನನಗೆ ಗೊತ್ತು. ನಿನ್ನ ಮಗನಿಲ್ಲಿ ಎಷ್ಟು ಡಾಲರು ದುಡಿಯುತ್ತಾನೆಂಬುದು ನಿನಗೆ ಗೊತ್ತಾ?
ಮಗ ಪ್ರಶ್ನಿಸಿದ್ದು ತನಗಲ್ಲವೆಂಬಂತೆ ಕೇಳಿದಳು –
“ಇನ್ನೊಂದು ಮಾತೂ ಅಂದಿದ್ದೆ… ಅಪ್ಪನದ್ದೆನ್ನುವುದು ಏನೇನೂ ಬೇಡವೆಂದು… ನೆನಪಿದೆಯಾ?”
“ಆವತ್ತು ಆವೇಶದಲ್ಲಿ ಅದನ್ನೂ ಹೇಳಿದ್ದು ನೆನಪಿದೆ. ಅಷ್ಟಕ್ಕೂ ಅಪ್ಪನದ್ದು ನಾನೇನೂ ಕೊಂಡು ತರಲಿಲ್ಲವಲ್ಲ? ಈಗೇಕಮ್ಮಾ ಆ ಮಾತು?”
“ಮತ್ಯಾಕಪ್ಪಾ ಅಪ್ಪನ ಹೆಜ್ಜೆಗಳನ್ನೇ ನಿನ್ನದಾಗಿಸಿಕೊಂಡೆ?”
“ಅAದರೆ?” ಏನೊಂದೂ ಅರ್ಥವಾಗದೆ ಕೇಳಿದ.
ಶಾಲಿನಿಯು ಇಷ್ಟು ಕಾಲ ತನ್ನೊಡಲನ್ನು ಸುಡುತ್ತಿದ್ದ ನೋವೊಂದನ್ನು ಯಾವ ಭಾವಾತಿರೇಕವಿಲ್ಲದೆ ಹೊರಹಾಕಿದಳು.
“ನನಗಾಗ ಮೈಸೂರಿನಿಂದ ಹೊರಗೆ ವರ್ಗವಾಗಿತ್ತು. ನೀನಾಗ ನಾಲ್ಕನೇ ಕ್ಲಾಸು. ನಾವಿಬ್ಬರೂ ಪುಟ್ಟ ಬಾಡಿಗೆ ಮನೆಯಲ್ಲಿದ್ದದ್ದು ನಿನಗೆ ನೆನಪಿರಬಹುದು. ಮೈಸೂರಿನಲ್ಲಿ ಒಬ್ಬನೇ ಇದ್ದ ಅಪ್ಪನಿಗೆ ಆಫೀಸಿನಲ್ಲಿದ್ದ ವಯಸ್ಸಾದರೂ ಅವಿವಾಹಿತಳಾಗಿಯೇ ಉಳಿದಿದ್ದ ಸಹೋದ್ಯೋಗಿಯೊಂದಿಗೆ ಸ್ನೇಹ. ನನಗೆ ವಿಷಯ ಗೊತ್ತಾಗುವಾಗಲೇ ವರ್ಷ ಕಳೆದಿತ್ತು. ಗೊತ್ತಾದ ಮೇಲೂ ಮತ್ತೊಂದು ವರ್ಷ ಹಾಗೆಯೇ ಮುಂದುವರಿದಿತ್ತು. ರೊಟ್ಟಿ ಹಳಸಿತ್ತು ನಾಯಿ ಹಸಿದಿತ್ತು. ಹೇಗೋ ಮಾಡಿ ಮತ್ತೆ ಮೈಸೂರಿಗೆ ವರ್ಗವಾಗುವಷ್ಟರಲ್ಲಿ ಅರ್ಧಜೀವ ಹೋಗಿತ್ತು. ಆಣೆ ಭಾಷೆಗಳಾಯ್ತು. ಆ ಹೆಂಗಸು ವರ್ಗಾವಣೆ ತೆಗೆದುಕೊಂಡು ಮತ್ತೆಲ್ಲೋ ಹೋದಳು. ಅಲ್ಲಿಗೆ ಆ ಕಥೆ ಮುಗಿದಿತ್ತು.”
ಮಗ ಸ್ವಲ್ಪ ಹೊತ್ತು ದಿಗ್ಭ್ರಾಂತನಾಗಿ ಕೂತಿದ್ದ. ಆಮೇಲೆ ಮೆಲ್ಲನೆ ಅಮ್ಮನ ಕಣ್ಣನ್ನು ದಿಟ್ಟಿಸಿ ನೋಡಿದ. ಅಲ್ಲಿ ಯಾವ ಭಾವವೂ ಇರಲಿಲ್ಲ. “ಅಮ್ಮಾ, ಇಷ್ಟು ದಿನ ಇವೆಲ್ಲವನ್ನೂ ಯಾಕೆ ನನ್ನೊಂದಿಗೂ ಹೇಳಲಿಲ್ಲ?”
“ನಿನ್ನಪ್ಪನನ್ನು ನಿನ್ನೆದುರೇ ಬೆತ್ತಲಾಗಿಸುವುದು ಯಾವತ್ತಿಗೂ ನನಗೆ ಬೇಕಿರಲಿಲ್ಲ. ಆದರೆ ನೀನು ಅದನ್ನು ಅನಿವರ್ಯವಾಗಿಸಿದೆ.”
ಮಧುಸೂದನ ಹೇಳಲೋ ಬೇಡವೋ ಎಂಬಂತೆ ಹೇಳಿದ –
“ಅಮ್ಮಾ ನೀನು ಬಹಳಷ್ಟು ಸಲ ಕೇಳಿದ್ದಿ ನನ್ನನ್ನು ಅಪ್ಪನೊಂದಿಗಿನ ವೈಮನಸ್ಸಿನ ಕಾರಣವೇನೆಂದು. ಆದರೂ ಹೇಳಿರಲಿಲ್ಲ ನಾನು. ಈವತ್ತ್ಯಾಕೋ ಹೇಳಿ ಹಗುರಾಗಬೇಕೆನಿಸಿದೆ. ನಾನಾಗ ಹೈಸ್ಕೂಲಿನಲ್ಲಿದ್ದೆ. ನೀನು ಶಾಲೆಯಿಂದ ಬರುವಾಗ ಅಂದು ತಡವಾಗಿತ್ತು. ನಾನು ಮನೆಗೆ ಬಂದಾಗ ಅಪ್ಪ ಕೆಲಸದಾಳಿನೊಂದಿಗೆ ತೀರಾ ಸಲಗೆಯಿಂದ ಇದ್ದದ್ದನ್ನು ನೋಡಿದ್ದೆ. ಎಷ್ಟೇ ಬೇಡವೆಂದರೂ ಅದೊಂದು ಚಿತ್ರ ಮನಸ್ಸಿನಿಂದ ಮರೆಯಾಗಲೇ ಇಲ್ಲ. ವರ್ಷಗಳುರುಳಿದಂತೆಲ್ಲ ಚಿತ್ರ ಮಸುಕಾದರೂ ಅದು ಎಲ್ಲೋ ನನ್ನೊಳಗೇ ಉಳಿದುಬಿಟ್ಟಿದೆ ಎನ್ನಿಸುತ್ತದೆ…”
ಹತ್ತು-ಹದಿನೈದು ವರ್ಷಗಳ ಹಿಂದಾದರೆ ಶಾಲಿನಿಗೆ ವಿಷಯವನ್ನು ಅರಗಿಸಿಕೊಳ್ಳಲು ಸಮಯ ಹಿಡಿಯುತ್ತಿತ್ತೋ ಏನೋ. ಆದರೆ ಇಂದು ವರ್ತಮಾನದ ವಾಸ್ತವದ ಎದುರು ಅದು ಹಿಂದಿನ ಜನ್ಮದ ಪಳೆಯುಳಿಕೆಯಂತೆ ತೋರಿತಷ್ಟೇ.
“ಅಪ್ಪನ ವಂಚನೆಯನ್ನು ನೀನು ನಿಜವಾಗಲೂ ಮರೆತಿದ್ದೀಯಾ ಅಮ್ಮ? ಅಲ್ಲ… ನನ್ನಿಂದಲೇ ಮತ್ತೆ ನೆನಪಾಗುವಂತಾಯಿತೇ?” ಮಗ ಕೇಳುತ್ತಿದ್ದಾನೆ.
ನಿಜಕ್ಕೂ ಮರೆತಿದ್ದೇನೇ ತಾನು? ಮರೆಯಬಲ್ಲೆನೇ? ತನ್ನ ಗಂಡನನ್ನು ತಂಗಿ ಸಾಕ್ಷಾತ್ ಪದ್ಮನಾಭನೆನ್ನುವಾಗ ತಾನು ಅಹುದಹುದೆಂಬಂತೆ ನಕ್ಕರೂ, ಎಲ್ಲೋ ಒಂದು ನೋವಿನ ಎಳೆ ತನ್ನನ್ನು ಈವತ್ತಿಗೂ ಕಲಕುತ್ತಿಲ್ಲವೇ?
“ಬದುಕು ಎಂದಿಗೂ ಹಿಮ್ಮುಖವಾಗಿ ಚಲಿಸುವುದಿಲ್ಲ ಎಂದೇ ನಂಬಿದ್ದೆ ನಾನು. ನೀನದನ್ನು ಸುಳ್ಳಾಗಿಸಿದೆ. ನನ್ನದೇ ಗತಿ ನಾಳೆ ಮನೀಷಾಳಿಗೂ ಎದುರಾಗದಿರಲಿ, ಈ ವಂಚನೆಯ ಹೆಜ್ಜೆಗಳು ನಿನ್ನ ಕುಡಿಗಳಿಗೂ ದಾಟದಿರಲಿ ಎಂದಷ್ಟೇ ನಾನು ದೇವರಲ್ಲಿ ಬೇಡಿಕೊಳ್ಳಬಲ್ಲೆ…”
ಇನ್ನು ಮಾತಾಡಲು ತನ್ನಲ್ಲಿ ಏನೂ ಉಳಿದಿಲ್ಲವೆಂಬಂತೆ ಶಾಲಿನಿ ಎದ್ದಳು. ಮಧುಸೂದನ ಅವಳನ್ನು ತಡೆಯಲಿಲ್ಲ.
ರಾತ್ರಿ ನಿದ್ದೆ ಬಾರದೇ ಒಬ್ಬಳೇ ಹೊರಳಾಡುತ್ತಿರುವಾಗ ಮಧುಸೂದನ ಬಂದ. ಅವನ ಕಣ್ಣಾಲಿಗಳು ತುಂಬಿದ್ದದ್ದು ಆ ಮಂದಬೆಳಕಿನಲ್ಲಿಯೂ ಅವಳಿಗೆ ಕಂಡಿತು. ಅವಳ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಅಂದ –
“ಅಮ್ಮಾ, ನನಗೇನು ಬೇಕೆಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ. ನನಗೆ ನನ್ನ ಮನೀಷಾ ಬೇಕು, ಅವಳ ನಿಷ್ಕಲ್ಮಶ ಪ್ರೀತಿ ಬೇಕು. ನಮ್ಮಿಬ್ಬರ ಪ್ರೀತಿಯ ಕುಡಿ ಬೇಕು. ನನ್ನೆದುರು ಈಗ ಕವಲುದಾರಿಗಳಿಲ್ಲ; ಇರುವುದೊಂದೇ ದಾರಿ. ನನಗೊಂದೇ ಒಂದು ಅವಕಾಶ ಕೊಡು. ಮತ್ತೆ ಮೊದಲಿನಂತಾಗಬೇಕಿದೆ; ಮತ್ತೆ ಮನುಷ್ಯನಾಗಬೇಕಿದೆ, ನಿನ್ನ ಮಗನಾಗಬೇಕಿದೆ…”
“ಹೇಳು ಮಧೂ, ನಾನೇನು ಮಾಡಬಲ್ಲೆ?”
“ಮನೀಷಾಳಲ್ಲಿ ಒಂದೇ ಒಂದು ಸಲ ಮಾತಾಡು. ಅವಳ ದೃಢ ನಿರ್ಧಾರವನ್ನು ನೀನು ಮಾತ್ರವೇ ಸಡಿಲಿಸಬಲ್ಲೆ.”
“ಆಯ್ತು. ನಾನು ಮಾತಾಡಬಲ್ಲೆಯಷ್ಟೆ. ನಿರ್ಧಾರವೇನಿದ್ದರೂ ಅವಳದ್ದು.”
ಮಗ ತಲೆಯಾಡಿಸಿದ. ಶಾಲಿನಿಗೆ ಈಗ ಸ್ವಲ್ಪ ನಿರಾಳವಾಯಿತು.
ಮರುದಿನ ಮೊಮ್ಮಗನನ್ನು ಮಗನೊಂದಿಗೆ ಹೊರ ಕಳುಹಿಸಿ ನಿಧಾನವಾಗಿ ಸೊಸೆಯೊಂದಿಗೆ ಮಾತಿಗಿಳಿದಳು. ಮನೀಷಾ ನಿರ್ಭಾವುಕವಾಗಿ ಎಂದಳು –
“ನಾನಿವತ್ತು ಏನನ್ನೂ ಹೇಳುವ ಅಥವಾ ಕೇಳುವ ಸ್ಥಿತಿಯಲ್ಲಿಲ್ಲ ಅತ್ತೆ. ಯಾಕೋ ಎಲ್ಲರಿಂದ, ಎಲ್ಲದರಿಂದ ದೂರ ಹೋಗಬೇಕೆನ್ನಿಸಿದೆ.”
“ಹಾಗೆ ಬಂಧವನ್ನು ಕಳಚಿಕೊಳ್ಳುವುದು ಅಷ್ಟು ಸುಲಭವಾ ಮಗಳೇ?”
“ಮಧು ಎಷ್ಟಾದರೂ ನಿಮ್ಮ ಮಗ. ನೀವು ಅವನನ್ನು ವಹಿಸಿ ಮಾತಾಡಬಹುದು. ನಾನು ಇಂದು ಅನುಭವಿಸುತ್ತಿರುವುದನ್ನು ನೀವು ಎಂದಾದರೂ ಅನುಭವಿಸಿದ್ದರೆ ನಿಮಗೆ ಗೊತ್ತಾಗುತ್ತಿತ್ತು. ನನ್ನ ತುಮುಲಗಳು. ಮಾವ ಆ ವಿಷಯದಲ್ಲಿ ದೇವರಂಥವರು… ನನ್ನ ಎದೆಯ ನೋವು ನಿಮಗೆ ಗೊತ್ತಾಗುವುದಿಲ್ಲ ಬಿಡಿ…”
“ನಾನಿಲ್ಲಿ ಮಧುವಿನ ಅಮ್ಮನಾಗಿ ಬಂದಿಲ್ಲ… ಹೆಣ್ಣಾಗಿ ಬಂದಿದ್ದೇನೆ. ಒಬ್ಬ ಅತ್ತೆಯಾಗಿ ನಿನ್ನನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಆದರೆ ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣನ್ನು ಅರ್ಥಮಾಡಿಕೊಳ್ಳಲಾರೆನೇ?”
ಮನೀಷಾ ಕರಗಿದಳು… ನೀರಾದಳು. ಶಾಲಿನಿಯನ್ನು ತಬ್ಬಿಹಿಡಿದಳು ಆಸರೆಗಾಗಿ ಎಂಬಂತೆ. ಪಾಪ… ತಾಯಿಯಿಲ್ಲದ ಹುಡುಗಿ. ಅಂದು ಕನಸುಗಳನ್ನು ತುಂಬಿಕೊಂಡು ಬಂದಿದ್ದ ಹುಡುಗಿಯ ಕಂಗಳು ಇಂದು ತನ್ನ ಮಗನಿಂದಾಗಿ ಕಣ್ಣೀರು ಮಾತ್ರ ಕಾಣುವಂತಾಗಿದೆ ಅನ್ನಿಸಿ ಮನಸ್ಸಿಗೆ ಪಿಚ್ಚೆನ್ನಿಸಿತು. ಅವಳನ್ನು ಹೇಗೆ ಸಂತೈಸಬೇಕೆಂದು ತಿಳಿಯದೆ ಪದಗಳಿಗೆ ತಡಕಾಡುತ್ತಿರುವಾಗ ಮನೀಷಾಳೆಂದಳು –
“ಆವತ್ತು ನೀವು ನನ್ನನ್ನು ಎಚ್ಚರಿಸುವಾಗಲಾದರೂ ಎಚ್ಚೆತ್ತುಕೊಳ್ಳಬೇಕಿತ್ತು. ನಾನು ಮಧುವನ್ನು ಅತಿಯಾಗಿ ನಂಬಿದ್ದೇ ನನಗೆ ಮುಳುವಾಯಿತು… ಅಮಲಾಳನ್ನೂ ಅಷ್ಟೇ… ಜೀವದ ಗೆಳತಿಯಂತೆ ಕಂಡಿದ್ದೆ. ಇಬ್ಬರೂ ಸೇರಿ ಕತ್ತು ಕೊಯ್ದುಬಿಟ್ಟರು ಗೊತ್ತೇ ಆಗದಂತೆ…”
“ನಿನಗೆ ಹೆಚ್ಚೇನೂ ಹೇಳಲಾರೆ. ಮಧು ಮಾಡಿದ್ದು ಬರೇ ತಪ್ಪಲ್ಲ, ವಂಚನೆ. ನಿನ್ನ ಪ್ರೀತಿಗೆ ಮಾಡಿದ ದ್ರೋಹ. ಅವನನ್ನು ಕ್ಷಮಿಸುವುದು ಬಿಡುವುದು ನಿನಗೆ ಬಿಟ್ಟದ್ದು. ಆದರೆ ಒಂದು ಮಾತು. ವಂಚಿಸುವವನು ಕೆಲವಾದರೂ ಸುಳಿವುಗಳನ್ನು ಬಿಟ್ಟಿರುತ್ತಾನೆ… ನಾವು ಗಮನಿಸಿರುವುದಿಲ್ಲವಷ್ಟೆ. ಕಳ್ಳ ನಾವು ಮನೆಯಲ್ಲಿಲ್ಲದಾಗ ಬಂದು ದೋಚಿಕೊಂಡು ಹೋಗುವುದು ಬೇರೆ, ನಾವೇ ಕೀಯನ್ನು ಕೊಟ್ಟು ದೋಚು ಎನ್ನುವುದು ಬೇರೆಯಲ್ಲವೇನಮ್ಮಾ? ನಿನ್ನ ಅಲಮಾರಿನ ಕೀಲಿಕೈಯನ್ನು ನಿನ್ನಲ್ಲೇ ಇಟ್ಟುಕೊಳ್ಳಬೇಕಿತ್ತಲ್ಲ ಮಗಳೇ?”
ಮನೀಷಾ ಮಾತಾಡಲಿಲ್ಲ. ಮೆತ್ತಗೆ ಅತ್ತೆಯ ಕೈಹಿಡಿದು ಹಾಗೇ ತಬ್ಬಿ ಕೂತಿದ್ದಳು, ಬಹಳಷ್ಟು ಹೊತ್ತು. ಆಮೇಲೆ ನಿಧಾನವಾಗೆಂದಳು –
“ಮಧುವಿಗೆ ಇನ್ನೊಂದೇ ಒಂದು ಅವಕಾಶ ಕೊಡಬಲ್ಲೆ… ಈ ಬಾರಿ ಕೀಲಿಕೈಯನ್ನು ಬೇರೆಯವರಿಗೆ ಕೊಡುವ ತಪ್ಪು ಮಾಡುವುದಿಲ್ಲ…” ಶಾಲಿನಿ ಮೆಲುವಾಗಿ ನಕ್ಕಳು.
ಸ್ವಲ್ಪ ಹೊತ್ತಲ್ಲಿ ಹೊರಗೆ ಹೋಗಿದ್ದ ಮಧುಸೂದನ ಮತ್ತು ಮೊಮ್ಮಗ ವಾಪಸ್ಸಾದರು. ಇನ್ನೇನು ಮಗನಲ್ಲಿ ಮಾತನಾಡಬೇಕೆನ್ನುವಷ್ಟರಲ್ಲಿ ಮೊಮ್ಮಗ ಅವಳ ಸೆರಗನ್ನು ಜಗ್ಗಿ ಹೊರಗಡೆ ಆಟಕ್ಕೆ ಕರೆದ. ಮರಳಿ ಬಂದಾಗ ಮಧುಸೂದನ ಫೋನಲ್ಲಿ ನಗುತ್ತಾ ಹೇಳುತ್ತಿದ್ದ –
‘ಅಪ್ಪಾ, ನಿಮ್ಮ ಮೊಮ್ಮಗನಿಗೂ ನಿಮ್ಮದೇ ಗಿಣಿ ಮೂಗು ಮತ್ತು ಚೂರೇ ಚೂರು ಅಟ್ಟೆ ಕಾಲು.’
ಮೈಸೂರಿನ ಮನೆಯಲ್ಲಿ ಪದ್ಮನಾಭ ನಕ್ಕ ನಗು ಕೆನಡಾದ ಗಾಳಿಯನ್ನು ಸೋಕಿ ಶಾಲಿನಿಯ ಕಿವಿಯನ್ನು ತಲಪಿ ಕಚಗುಳಿಯಿಟ್ಟಿತು.