ಅಂದಿನ ದಿನಗಳೇ ಅಂಥವು. ಫೋನು-ಮೊಬೈಲ್ಗಳಿಲ್ಲದ ಕಾಲ. ಅಂಚೆಯಣ್ಣನೇ ಗತಿ. ಅವನೂ ಹಂಸದಷ್ಟೇ ನಿಧಾನ. ಆಗ ಅನಿರೀಕ್ಷಿತ ಅತಿಥಿಗಳು ಬಂದರೆ ಮಾಡಲು ವಿವಿಧ ಭಕ್ಷ್ಯಭೋಜ್ಯಗಳ ಪಟ್ಟಿ ಇರುತ್ತಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಲ್ಲಿದ್ದುದು ಪುರಿ.. ಖೀರು , ಬಾಸುಂದಿ ಶ್ರೀಖಂಡ.. ಇತ್ಯಾದಿಗಳು. ಆಗ ಹೊರಗಿನಿಂದ ಕೊಂಡು ತರುವ ಪರಿಪಾಠವಿರಲಿಲ್ಲ. ಅಲ್ಲದೆ ಹಾಗೆ ತರುವುದು ತಮಗೆ ತಮ್ಮ ಪಾಕಪ್ರಾವೀಣ್ಯಕ್ಕೆ ಅವಮಾನವೆಂದು ಹೆಂಗಳೆಯರು ಭಾವಿಸುತ್ತಿದ್ದ ದಿನಗಳು…
ಮಮ್ಮಾ.. ತೇಜಾ ಮನೇಲಿ ಹಾಲಿನವನೊಬ್ಬ ಕ್ಯಾನ್ನಲ್ಲಿ ಹಾಲನ್ನು ಡೈರೆಕ್ಟಾಗಿ ಮನೆಗೇ ತಂದು ಕೊಡ್ತಿದಾನೆ. ನೋ ಪ್ಲಾಸ್ಟಿಕ್.. ಎಷ್ಟು ಚೆನ್ನ ಅಲ್ವಾ? ನಾವೂ ತೊಗೊಳ್ಳೋಣ್ವಾ?” ಎಂದು ಮಗಳು ಕಣ್ಣರಳಿಸಿ ಕೇಳಿದಳು. ಒಂದು ಕ್ಷಣ ನಗು ಬಂತು. ಶ್ರೀಮಂತೆ ತೇಜಾಳ ಮನೆಯಲ್ಲಿ ಏನು ಮಾಡಿದರೂ ಅನುಕರಿಸುವಾಸೆ ಮಗಳಿಗೆ. “ಯಾಕಮ್ಮಾ ನಗ್ತಿದೀಯಾ?” ಎಂದಾಗ “ಚಕ್ರ ಸುತ್ತುತ್ತಾನೇ ಇರುತ್ತೆ.. ಅನ್ನೋದಕ್ಕೆ ಇದೊಂದು ಪುರಾವೆ ನಿಯತಿ. ನಾವೆಲ್ಲ ಚಿಕ್ಕವರಿರುವಾಗ ಯಾವ ಪ್ಯಾಕೆಟ್ ಹಾಲೂ ಇರಲಿಲ್ಲ. ಹಾಲಿನವರು ಮನೆಗೆ ಹಾಲಿನ ಕ್ಯಾನ್ ತಂದು ಹಾಲು ಹಾಕಿ ಹೋಗೋರು. ಎಷ್ಟೋ ಬಾರಿ ಎಮ್ಮೇನ ಮನೆ ಮುಂದೆ ಹೊಡಕೊಂಡು ಬಂದು ಅಲ್ಲೇ ಹಾಲು ಕರೆದುಕೊಟ್ಟಿದ್ದಿದೆ. ನಂತರ ಪ್ಯಾಕೆಟ್ಟುಗಳು ಬಂದವು. ಈಗ ಬೆಂಗಳೂರಿನ ಅತ್ಯಾಧುನಿಕ ಬಡಾವಣೆಯಲ್ಲಿರುವ ನೀವು ಅವನ್ನೆಲ್ಲ ಕಂಡಿಲ್ಲ. ಈಗ ಮತ್ತೆ ಚಕ್ರ ತಿರುಗ್ತಾ ಹಳೇದೇ ಬರ್ತಾ ಇದೆ” ಎಂದೆ. “ಹೌದಾ? ಎಮ್ಮೇನ ಮನೆಮುಂದೆ ನಿಲ್ಲಿಸಿ ಹಾಲು ಕರೆಯೋದಾ? ವಾವ್! ನಾನು ಸ್ಕೂಲ್ ಮುಗಿಸಿ ಬಂದ ಮೇಲೆ ನನಗೆಲ್ಲ ಹೇಳಬೇಕು” ಎನ್ನುತ್ತ ಶಾಲೆಗೆ ಓಡಿದಳು. ನಗುತ್ತಲೇ ‘ಹ್ಞೂಂ’ಗುಟ್ಟಿ ಟಾಟಾ ಮಾಡಿದೆ.
ಬರೀ ‘ಹ್ಞೂಂ’ಗುಟ್ಟಿದರಾಯಿತೆ? ನಾನು ಹಳೆಯ ದಿನಗಳಿಗಿಳಿಯಬೇಕಲ್ಲ.. ಕೈ ಕೆಲಸ ಮಾಡುತ್ತಿದ್ದರೂ, ಮನಸು ಬೆಳಗಾವಿಗೆ.. ನನ್ನ ಬಂಗಾರದ ಬಾಲ್ಯಕ್ಕೆ ತೇಲಿಹೋಯಿತು. ಪರದೆಯ ಮೇಲೆ ಹಾಲಿನ ನಿಂಗಪ್ಪ ವಿರಾಜಮಾನನಾದ. ತನ್ನ ಮೂವರು ಮಕ್ಕಳು ತಮ್ಮಣ್ಣ, ಸೋಮಣ್ಣ, ತಿಪ್ಪಣ್ಣರನ್ನು ತನ್ನ ಪ್ರೀತಿಯ ಎಮ್ಮೆ ಗಂಗಾಳ ಮೇಲೆ ಕೂರಿಸಿಕೊಂಡು ಸವಾರಿ ಹೊರಡುತ್ತಿದ್ದ. ಮಕ್ಕಳು ಕರ್ನಾಟಕದ ಹಿಟ್ಸಾಂಗ್ ಎನಿಸಿದ “ಯಾರೇ ಕೂಗಾಡಲಿ.. ಊರೇ ಹೋರಾಡಲಿ” ಹಾಡನ್ನು ಅಣ್ಣಾವ್ರ ಧಾಟಿಯಲ್ಲಿ ಹೇಳುತ್ತಿದ್ದರೆ, ನಿಂಗಪ್ಪ ಖುಷಿಯಿಂದ “ಎಮ್ಮೇ.. ನಿನಗೆ ಸಾಟಿಯಿಲ್ಲ” ಎಂದು ಸೇರಿಸುತ್ತ ಅವಳ ಬೆನ್ನ ಮೇಲೆ ಕೈಯಾಡಿಸುತ್ತಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ನಿಜ.. ಅಂದಿನ ದಿನಗಳಲ್ಲಿ ನಮಗೆ ಬೆಳಗಾಗುತ್ತಿದ್ದುದೇ ‘ಟ್ರಿನ್..ಟ್ರಿನ್..’ ಎನ್ನುವ ನಿಂಗಪ್ಪನ ಸೈಕಲ್ ಗಂಟೆಯಿಂದ. ಬೆಳಗ್ಗೆ ಐದೂವರೆ.. ಹೆಚ್ಚೆಂದರೆ ಆರಕ್ಕೆಲ್ಲ “ಹಾಲು.. ದೂಧ.. ಹಾಲರೀ.. ದೂಧವಾಲಾ” ಎಂದು ಕನ್ನಡ, ಮರಾಠಿಗಳಿಗೆ ಸಮಾನ ಸ್ಥಾನ ಕೊಟ್ಟು ಸಮನ್ವಯಗೊಳಿಸುತ್ತಿದ್ದ. ತನಗೆ ಅರಿವಿಲ್ಲದೇ ಏಕೀಕರಣದ ಹರಿಕಾರನಾಗುತ್ತಿದ್ದ. ಅಮ್ಮ ರಾತ್ರಿಯೇ ಹಾಲಿನ ಪಾತ್ರೆ ತೊಳೆದು ಹಾಕಿದ್ದರೂ ಅವನಿಗೆ ಸಮಾಧಾನವಿಲ್ಲ. “ತೊಳಕೊಂಡು ರ್ರಿ ಆಯಿ. ಆಮ್ಯಾಲೆ ಹಾಲು ಕೆಡ್ತು ಅನಬ್ಯಾಡ್ರಿ” ಎಂದಾಗ ಅಮ್ಮ ಮತ್ತೊಮ್ಮೆ ಗಲಬರಿಸಿ ತುಸು ನೀರಿದ್ದಂತೆ ತಂದು ಅವನ ಮುಂದೆ ಹಿಡಿಯುತ್ತಿದ್ದಳು. ತನ್ನ ಅಳತೆ ಮಾಪಕದಿಂದ ಹಾಲನ್ನು ತುಂಬಿ ಸುರಿದು.. ಮೇಲೊಂದಿಷ್ಟು ಕೊಸರು ಹಾಕಿ “ಬೊರೊಬ್ಬರಿ ನೋಡಕೊರಿ. ನಿದ್ದಿಗಣ್ಣಾಗಿದ್ದೀರಿ. ಆಮ್ಯಾಲೆ ಕಡಿಮಿ ಕೊಟ್ಟಾ ಅನಬ್ಯಾಡ್ರಿ” ಎನ್ನುತ್ತ ಸಣ್ಣಗೆ ಚುಚ್ಚುತ್ತಿದ್ದ. ಅದೆಲ್ಲಿರುತ್ತಿದ್ದವೋ.. ಎರಡು ಬೆಕ್ಕುಗಳು ಸರಿಯಾದ ಸಮಯಕ್ಕೆ ಬಂದು ‘ಮ್ಯಾಂವ್..ಮ್ಯಾಂವ್..’ ಎನ್ನುತ್ತ ಅವನ ಕಾಲ ಬಳಿ ಸುಳಿದಾಡುತ್ತಿದ್ದವು. ಅವುಗಳಿಗಾಗೇ ಇಟ್ಟ ಪಿಂಗಾಣಿ ಬಶಿಯಲ್ಲಿ ಒಂದಷ್ಟು ಹಾಲು ಸುರಿಯುತ್ತಿದ್ದ. ಅವು ಕುಡಿಯಲು ಧಾವಿಸುತ್ತಿದ್ದಂತೆ ನಸುನಗುತ್ತ ಸೈಕಲ್ಲೇರಿ ‘ಟ್ರಿನ್..ಟ್ರಿನ್..’ ಮಾಡುತ್ತ ಮುಂದಿನ ಮನೆಯತ್ತ ಧಾವಿಸುತ್ತಿದ್ದ.
ಒಮ್ಮೊಮ್ಮೆ ಯೋಚಿಸಿದಾಗ ರಕ್ತಸಂಬಂಧಗಳಿಲ್ಲದೆಯೂ ಹೆಣೆದುಕೊಂಡ ಈ ದಿನನಿತ್ಯದ ಬಂಧಗಳ ಬಗ್ಗೆ ಅಚ್ಚರಿಯಾಗುತ್ತಿತ್ತು. ಹಾಲಿನವ, ಪಾತ್ರೆಯವಳು, ಹಣ್ಣಿನವ, ತರಕಾರಿಯವಳು, ಇಸ್ತಿçಯವ.. ಕಳ್ಳುಬಳ್ಳಿಯಲ್ಲವಾದರೂ ಮಲ್ಲಿಗೆಬಳ್ಳಿಯಂಥ ಅನುಬಂಧ. ಅಷ್ಟೇ ಅಂದ.. ಚೆಂದ.. ಸುವಾಸನಾಯುಕ್ತ. ಅಪ್ಪ ಅಲಾರಾಂ ಇಟ್ಟುಕೊಂಡು ಐದಕ್ಕೇ ಏಳಲು ಪ್ರಯತ್ನಿಸುತ್ತಿದ್ದರು. “ಕೆಟ್ಟ ಗಡಬಡಿಯಾಂವಾ ಈ ನಿಂಗಪ್ಪಾ. ಎದ್ದ ಕೂಡ್ಲೆ ಬಚ್ಚಲಕ್ಕ ಹೋಗ್ಲಿಕ್ಕೆ ಬಿಡೂದಿಲ್ಲಾ. ದೇವರಿಗೆ ಕೈ ಮುಗೀಲಿಕ್ಕೆ ಸೈತ ಬಿಡೂದಿಲ್ಲಾ. ಇವನ ದೇವರು ನಮಗ” ಎಂದು ನಗುತ್ತಿದ್ದರು. ಅಷ್ಟೇ ಅಲ್ಲ.. ದಿನದ ಪ್ರಥಮ ಉಭಯ ಕುಶಲೋಪರಿಯೂ ಆರಂಭವಾಗುತ್ತಿತ್ತು. “ಎಲ್ಲಾ ಆರಾಮೇತಿಲ್ಲೋ ದಾದಾ.. ಆಯಿ?” ಎಂದು ಕೇಳುತ್ತಿದ್ದ. “ಹ್ಞೂಂ.. ಆರಾಮಪಾ. ನೀ ಆರಾಮೇನೋ..?” ಎಂದರೆ “ಆರಾಮ ದಾದಾ. ಅವ್ವಾಗ ಕೆಮ್ಮು ಬಂದೇತಿ. ಜರಾ ಅಗಸುದ್ದಿ(ಔಷಧ) ಇದ್ದರ ಕೊಡ್ರೀ” ಎನ್ನುವವ. ಪ್ರಥಮೋಪಚಾರವೂ ಇಲ್ಲಿಂದಲೇ ಆರಂಭವಾಗುತ್ತಿತ್ತು. ವರ್ಣಿಸಲು ಪದಗಳಿಲ್ಲದ ಸುಂದರ ಬಂಧವಾಗಿತ್ತು. ಮಾಮೂಲಿ ಕೊಡುವವರಿಗೆಲ್ಲ ಹಾಲು ಕೊಟ್ಟು ಅವನ ಸೈಕಲ್ ಪಾರಿಶ್ವಾಡದ ಹಾದಿ ತುಳಿಯುತ್ತಿತ್ತು. ಅಲ್ಲಿ ತನ್ನ ಪೂರ್ವಜರ ಮನೆಯಲ್ಲಿದ್ದ ಅಣ್ಣ, ತಮ್ಮಂದಿರ ಪರಿವಾರಕ್ಕೆ ಉಳಿದ ಹಾಲು ಕೊಟ್ಟು ಹೊಲದ ಕೆಲಸಕ್ಕೆ ನಿಲ್ಲುತ್ತಿದ್ದ. ಅಲ್ಲಿಂದ ಅವನಿಗೆ ವರ್ಷದ ಕಾಳು, ಕಡಿ, ಧಾನ್ಯಗಳು ಬರುತ್ತಿದ್ದವು. ಮಧ್ಯಾಹ್ನದವರೆಗೆ ಕೆಲಸ ಮಾಡಿ ಹುಲ್ಲಿನ ಹೊರೆ ಕಟ್ಟಿಕೊಂಡು ತಿರುಗಿ ಬೆಳಗಾವಿಯ ದಾರಿ ಹಿಡಿಯುತ್ತಿದ್ದ. ಅಪ್ಪ ತಮಾಷೆಯಾಗಿ “ಪಾರಿಶ್ವಾಡದ ಹಾದ್ಯಾಗ ಎಷ್ಟ ಕಲ್ಲವ ಅಂತ ಕೇಳಿದ್ರೂ ನಿಂಗಪ್ಪ ಹೇಳ್ತಾನ” ಎಂದು ಕಾಲೆಳೆದರೆ ದೊಡ್ಡದಾಗಿ ನಗುವ ನಿರಾಳ ಮನಸು ಅವನದು.
ಅಂದಿನ ದಿನಗಳೇ ಅಂಥವು. ಫೋನು, ಮೊಬೈಲ್ಗಳಿಲ್ಲದ ಕಾಲ. ಅಂಚೆಯಣ್ಣನೇ ಗತಿ. ಅವನೂ ಹಂಸದಷ್ಟೇ ನಿಧಾನ. ಆಗ ಅನಿರೀಕ್ಷಿತ ಅತಿಥಿಗಳು ಬಂದರೆ ಮಾಡಲು ವಿವಿಧ ಭಕ್ಷö್ಯಭೋಜ್ಯಗಳ ಪಟ್ಟಿ ಇರುತ್ತಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಲ್ಲಿದ್ದುದು ಪುರಿ.. ಖೀರು, ಬಾಸುಂದಿ, ಶ್ರೀಖಂಡ.. ಇತ್ಯಾದಿಗಳು. ಆಗ ಹೊರಗಿನಿಂದ ಕೊಂಡು-ತರುವ ಪರಿಪಾಠವಿರಲಿಲ್ಲ. ಅಲ್ಲದೇ ಹಾಗೆ ತರುವುದು ತಮಗೆ.. ತಮ್ಮ ಪಾಕಪ್ರಾವೀಣ್ಯಕ್ಕೆ ಅವಮಾನವೆಂದು ಹೆಂಗಳೆಯರು ಭಾವಿಸುತ್ತಿದ್ದ ದಿನಗಳು. ಯಾರಾದರೂ ಬಂದರೆ ನಾನು ನಿಂಗಪ್ಪನ ಮನೆಗೆ ಓಡುವುದೇ. ಅವನ ಚಾಳ(ವಠಾರ)ದ ಮುಂದೆ ನಿಂತು “ನಿಂಗಪ್ಪಾ, ನಮ್ಮ ಅತ್ಯಾ ಬಂದಾರ. ಎರಡು ಲೀಟರ್ ಹಾಲು ಬೇಕಂತ” ಎಂದರಾಯಿತು. ತಕ್ಷಣ ಅವನು ದೊಡ್ಡದಾಗಿ “ಸಾಹೇಬರ ಮನ್ಯಾಗ ಪೌಣ್ಯಾರು (ಅತಿಥಿಗಳು) ಬಂದಾರ. ಯಾರ ಕಡಿಗೆ ಹಾಲು ಉಳದಾವ?” ಎಂದು ಕೂಗು ಹಾಕುತ್ತಿದ್ದ. ಅನೇಕ ಪ್ರತ್ಯುತ್ತರಗಳು ಬರುತ್ತಿದ್ದವು. ಅಲ್ಲಿಯವರೆಗೂ “ಬಾ ಅವು (ಮಗು). ನಮ್ಮನಿ ಹೆಂಗದ ನೋಡಾಕೆಂತ..” ಎಂದು ಮುಖ್ಯ ಅತಿಥಿಯನ್ನು ಬರಮಾಡಿಕೊಳ್ಳುವಂತೆ ನನ್ನನ್ನು ಒಳಗೆ ಕರೆದೊಯ್ಯುತ್ತಿದ್ದ. ಅಲ್ಲಿ ಅವನ ಪ್ರಪಂಚದ ವಿಶ್ವರೂಪದರ್ಶನವಾಗುತ್ತಿತ್ತು.
ಸಾಲಾಗಿದ್ದ ಚಿಕ್ಕ ಚಿಕ್ಕ ಮನೆಗಳ ಗೋಡೆಗಳೆಲ್ಲ ಬೆರಣಿಯಿಂದ ಚಿತ್ತಾರ ಬರೆದುಕೊಂಡು ನಮ್ಮನ್ನು ಸ್ವಾಗತಿಸುತ್ತಿದ್ದವು. ಒಂದು ಪಡಸಾಲೆ.. ಅಡಿಗೆಮನೆ ಇಷ್ಟೇ. ರೂಮು ಬೇಕೆಂದರೆ ಮಧ್ಯೆ ಗೋಣಿ ತಟ್ಟು ಕಟ್ಟಿದರಾಯಿತು. ಹಿಂದೆ ಕೊಟ್ಟಿಗೆಗಳಲ್ಲಿ ಸಾಲಾಗಿ ನಿಂತ.. ಮಲಗಿ ಮೆಲಕಾಡಿಸುತ್ತಿರುವ ಹಸು-ಎಮ್ಮೆಗಳು. ಕರುಗಳು ಅಮ್ಮನ ಮುಂದೆ ಬಾಲ ನಿಮಿರಿಸಿಕೊಂಡು ಛಂಗನೆ ನೆಗೆದಾಡುತ್ತಿದ್ದವು. ಅವುಗಳ ಎದುರಿಗೆ ಒಂದಷ್ಟು ಮೇವು. ಕಲ್ಲಿನ ಬಾನಿಯಲ್ಲಿ ಮುಸುರೆ ನೀರು. ಕೆಲವೊಂದು ಕೊಟ್ಟಿಗೆಗಳು ಶುದ್ಧವಾಗಿದ್ದರೆ ಕೆಲವೊಂದು ಸಗಣಿ, ಗಂಜಲುಮಯವಾಗಿರುತ್ತಿದ್ದವು. ತನ್ನ ಪಶುಸಂಪತ್ತಿನ ಬಗ್ಗೆ ಅಪಾರ ಹೆಮ್ಮೆ ಅವನಿಗೆ. ಗಂಗೆ, ಗೌರಿ.. ಎಂದೇ ಪ್ರೀತಿಯಿಂದ ಕರೆಯುತ್ತಿದ್ದ. ಹೊಸದಾಗಿ ಹುಟ್ಟಿದ ಕರುಗಳಿಗೆ ಅಂದಿನ ಆಧುನಿಕ ಹೆಸರುಗಳಾದ “ಜ್ಯೋತಿ, ಆರತಿ..” ಇತ್ಯಾದಿಯಾಗಿ ಹೆಸರಿಟ್ಟಿದ್ದ. ನಾನೆಲ್ಲ ಕಣ್ಣು ಹಾಯಿಸುವಷ್ಟರಲ್ಲಿ ತಿಪ್ಪಣ್ಣ ಹಾಲಿನ ಕ್ಯಾನ್ನೊಂದಿಗೆ ಸಿದ್ಧವಾಗಿರುತ್ತಿದ್ದ. ನಾನು “ನಿಂಗಪ್ಪಾ.. ನಿಮ್ಮನ್ಯಾಗ ಯಾವಾಗ್ಲೂ ಹಾಲಿರ್ತಾವ. ಎಮ್ಮಿ.. ಆಕಳ.. ಕರಗೊಳ ಹಿಂಡ ಅದ. ಛೊಲೊ ನೋಡು” ಎಂದಿದ್ದೆ. ಅವನು ನಗುತ್ತ “ಅವ್ವಾ.. ಚಿಂತಿ ಮಾಡಬ್ಯಾಡಾ. ನಿನ್ನ ಮದವಿಗೆ ಎಲ್ಲಾ ಆಕಳ.. ಎಮ್ಮಿಗೊಳ ಹಾಲ ಕೂಡಿಸಿ ನಾನ ಕೊಡಾಂವಾ. ಬೇಕಾದ್ರ ಅಲ್ಲೆ ತಂದು ಹಿಂಡತೇನಿ” ಎಂದಿದ್ದ. ಎಂಟರ ಪ್ರಾಯದ ಎಳೆಬಾಲೆ ನಾನು. ರಾತ್ರಿ ಕನಸಿನಲ್ಲೆಲ್ಲ ನಿಂಗಪ್ಪ ತನ್ನೆಲ್ಲ ಪಶುಪರಿವಾರದೊಂದಿಗೆ ಮದುವೆಗೆ ಬಂದು ಹಾಲು ಕರೆದುಕೊಟ್ಟ ಹಾಗೆ.. ಹಾಲು ತುಂಬಿ ಹರಿದ ಹಾಗೆ.. ಅಲ್ಲೆಲ್ಲ ಸಗಣಿ, ಗಂಜಲು ಹರಿದು ರಾಡಿಯಾದ ಹಾಗೆ.. ಮದುವೆಗೆ ಬಂದ ಜನ ತಮ್ಮ ಒಳ್ಳೆಯ ಸೀರೆಗಳು ಹಾಳಾಗುತ್ತವೆಂದು ತೆಗಳುತ್ತ ಎತ್ತಿ ಹಿಡಿದುಕೊಂಡು ಓಡಾಡಿದ ಹಾಗೆ.. ಕನಸಿನಿಂದ ಮನಸೆಲ್ಲ ಕಲಮಲ.
ಇಂದು ಬೃಹತ್ತಾಗಿ ಬೆಳೆದು ನಿಂತಿರುವ ‘ಕಸದ ವಿಲೇವಾರಿ’ ಅಂದು ಸಮಸ್ಯೆಯೇ ಅಲ್ಲ. ಬೆಳಗ್ಗೆ ಏಳು ಗಂಟೆಗೆಲ್ಲ ಕೈಯಲ್ಲೊಂದು ಅಲ್ಯೂಮಿನಿಯಮ್ ಬಕೆಟ್ ಹಿಡಿದು ತಿಪ್ಪನ ಸವಾರಿ ಬರುತ್ತಿತ್ತು. “ಏ ಆಯೀ” ಎಂದು ಬೀದಿಯಿಂದಲೇ ಕೂಗು ಹಾಕುತ್ತಿದ್ದ. ಅಮ್ಮ ಹಿಂದಿನ ದಿನದ ಮುಸುರೆ, ಹಳತಾದ ತರಕಾರಿ, ಸಿಪ್ಪೆಗಳು.. ಎಲ್ಲವನ್ನೂ ಅದಕ್ಕೆ ಸುರಿಯುತ್ತಿದ್ದಳು. ಹಾಗೆಯೇ ಅನೇಕ ಮನೆಗಳಿಗೆ ದೌಡಾಯಿಸಿ ಬರುವಾಗ ಬಕೆಟ್ ಅರ್ಧವೋ.. ಪೂರ್ತಿಯೋ ತುಂಬಿರುತ್ತಿತ್ತು. ಅದೆಲ್ಲ ದನಕರುಗಳ ಹೊಟ್ಟೆ ಸೇರುತ್ತಿತ್ತು. ಇನ್ನೂ ಮಿಕ್ಕದ್ದು ನಾಯಿಗಳಿಗಾಗುತ್ತಿತ್ತು. ಉದ್ಯಾನದ ಮಾಲಿಗಳೆಲ್ಲ ನಿಂಗಪ್ಪನ ಮಿತ್ರರು. “ಇಂಥಲ್ಲಿ ಹುಲ್ಲು ಕತ್ತರಿಸೋದ” ಎಂದರೆ ಸಾಕು.. ತಮ್ಮಣ್ಣ, ಸೋಮಣ್ಣರ ಸವಾರಿ ಸೈಕಲ್ ಮೇಲೆ ಹೊರಡುತ್ತಿತ್ತು. ಏಳರಿಂದ ಒಂಬತ್ತರವರೆಗೆ ಸುತ್ತು ಹೊಡೆದು ಹುಲ್ಲಿನ ಹೊರೆ ಕಟ್ಟಿಕೊಂಡು ಮನೆಗೆ ಮರಳಿ ನಂತರ ಹತ್ತು ಗಂಟೆಗೆ ಶಾಲೆಗೆ ಹೊರಡುತ್ತಿದ್ದರು. ನಂತರ ನಿಂಗಪ್ಪನೋ.. ಅವನಮ್ಮ ಸಂಕವ್ವನೋ.. ದನಗಳನ್ನು ಮೇಯಿಸಲು ಹೊರಡುತ್ತಿದ್ದರು. ಯಾರದೇ ಮನೆಯಲ್ಲಿ ಪೂಜೆ, ತಿಥಿ ಕಾರ್ಯಕ್ರಮಗಳು ಜರುಗಿದರೆ ಗಂಗೆ, ಗೌರಿಯರಿಗೆ ಬಾಳೆ ಕಂದು, ಎಲೆಗಳು ಸೇರಿದ ಸುಗ್ರಾಸ ಭೋಜನ. ಪ್ರಥಮ ಪ್ರಾಶಸ್ತ್ಯ ಅವರವರ ಹಾಲಿನವರಿಗೆ. ಮಿಕ್ಕುಳಿದರೆ ಬೇರೆಯವರಿಗೆ.. ಕಸದ ಮಾತೇ ಇಲ್ಲ ಬಿಡಿ.
ನಿಂಗಪ್ಪ ಬರೀ ಹಾಲಿನವನಾಗಿರದೇ ಸಂದೇಶ ವಾಹಕನಾಗಿಯೂ ಕೆಲಸ ಮಾಡುತ್ತಿದ್ದ. ಅನೇಕ ಆಪ್ತರ ಮನೆಗಲ್ಲದೇ ನಮ್ಮ ಸೋದರಮಾವನ ಮನೆಗೂ ಹಾಲು ಹಾಕುತ್ತಿದ್ದ. ಆಗೆಲ್ಲ ನಮ್ಮ ಮನೆಗಳಲ್ಲಿ ಮುಟ್ಟನ್ನು ಮೂರು ದಿನ ಪಾಲಿಸುವ ಅಭ್ಯಾಸ. ಸರಿ.. ಬೆಳಗ್ಗೆಯೇ ಅಮ್ಮ ಮೂಲೆಯ ಚಾಪೆಯ ಮೇಲೆ ಮುದುರಿ ಕುಳಿತು ಅಪ್ಪ ಕೊಟ್ಟ ಚಹಾ ಹೀರುತ್ತಿದ್ದುದನ್ನು ಅವನ ಸೂಕ್ಷ್ಮ ಕಣ್ಣುಗಳು ಗಮನಿಸುತ್ತಿದ್ದವು. ಅಪ್ಪನ ಕಾರುಭಾರು ಮನೆಯೆಲ್ಲ ವ್ಯಾಪಿಸಿರುತ್ತಿತ್ತು. “ಆಯಿ ಹೊರಗದಾರು..” ಎಂಬ ಸಂದೇಶ ಸೋದರಮಾವನ ಮನೆಯನ್ನು ಆರು ಗಂಟೆಗೆಲ್ಲ ತಲಪುತ್ತಿತ್ತು. ಎಂಟೂವರೆಗೆ ಮಾಮಾ ಕೈಯಲ್ಲಿ ಭಕ್ಕರಿ, ಪಲ್ಯ, ಹುಳಿಯ ಡಬ್ಬಿಯೊಡನೆ ಹಾಜರ್. “ನಿಂಗಪ್ಪಾ ಹೇಳಿದಾ..” ಎಂದರೆ ನೊರೆಹಾಲು ಸಕ್ಕರೆ. ಹಾಗೇ “ಅಜ್ಜಿಗೆ ಆರಾಮಿಲ್ಲರಿ. ನಿನ್ನೆ ರಾತ್ರಿಲಿಂದ ಹೊಟ್ಟಿ ನೂಸಾಕತ್ತೇತಿ” ಎಂದರೆ ಅಮ್ಮ ಹೊರಡುತ್ತಿದ್ದಳು. ಕೆಲವೊಮ್ಮೆ ಆಪದ್ಬಾಂಧವನಾಗಿದ್ದೂ ಇದೆ. ಒಮ್ಮೆ ಅಪ್ಪ ಊರಿಗೆ ಹೋದಾಗ ನನಗೆ ಜ್ವರ ಬಂದಿತ್ತು. ಅಮ್ಮ ಕೂಡಾ ಹುಷಾರಿಲ್ಲದೇ ಅದೇ ಚೇತರಿಸಿಕೊಂಡಿದ್ದಳು. ಆಗೆಲ್ಲ ಆಟೋ ತುಂಬ ದುಬಾರಿ ಸಾಧನ ನಮಗೆ. ದೂರವಿದ್ದರೆ ಮಾತ್ರ ಬಸ್ಸು ಹತ್ತುವುದು. ಇಲ್ಲವಾದರೆ ೧೧ ನಂಬರ್ ಬಸ್ಸೇ ಗತಿ. ಅಂದರೆ ಕಾಲ್ನಡಿಗೆ. ನಿಂಗಪ್ಪ “ಆಯೀ.. ಈ ಅವು ಎತಿಗೊಂಡು ಹೋಗಲಿಕ್ಕೆ ದೊಡ್ಡದೂ ಅಲ್ಲ.. ಸಾಣದೂ ಅಲ್ಲ. ಎಲ್ಲೆ ಹೊತಗೊಂಡು ಹೋಗ್ತೀ? ನಾ ಸೈಕಲ್ ಮ್ಯಾಲೆ ಡಾಗದರ ಕಡಿಗೆ ಕರಕೊಂಡು ಹೋಗಿಅಗಸುದ್ದಿ (ಔಷಧ) ಕೊಡಿಸಿಕೊಂಡು ಬರ್ತೇನಿ. ಕಳಸು” ಎಂದ. ಅಮ್ಮ ಅನಿವಾರ್ಯವಾಗಿ ಅವನ ಬಳಿ ದುಡ್ಡು ಕೊಟ್ಟು ಕಳಿಸಿದ್ದಳು. “ಅವು.. ಆರಾಮ ಕುಂಡ್ರು.. ಹ್ಞಾಂ..” ಎಂದವನೇ ನನ್ನನ್ನು ಮುಂದೆ ಕೂರಿಸಿಕೊಂಡು ಅಪ್ಪನಗಿಂತ ಜೋರಾಗಿ “ಭರ್..” ಎಂದು ಸೈಕಲ್ ತುಳಿದಿದ್ದ. ಡಾಕ್ಟರ್ ಬಳಿ “ನಿನ್ನಿಲಿಂತ್ರ ಜ್ವರಾ ಕಾಯಾಕತ್ತಾವ್ರಿ. ಲಗೂಟ ನೋಡ್ರಿ. ನನಗ ಪರತ ಹಾಲು ಕೊಡ್ಲಿಕ್ಕೆ ಹೋಗೋದೈತ್ರಿ” ಎಂದು ಅವಸರಿಸಿ ಔಷಧಿ ಕೊಡಿಸಿಕೊಂಡು ಬಂದಿದ್ದ ನೆನಪು ಅಚ್ಚಳಿಯದೇ ಉಳಿದಿದೆ.
“ನಿಂಗಪ್ಪಾ.. ಚೈತ್ರಾಗೌರಿ ಕೂಡಸ್ತೀವಿ. ಹಲಸಿನ ಎಲಿ ಬೇಕು” ಎಂದರಾಯಿತು. ನಿಂಗಪ್ಪ ಎರಡೋ.. ಮೂರೋ ಹಲಸಿನ ಟೊಂಗೆಗಳನ್ನೇ ತಂದಿಡುತ್ತಿದ್ದ. ಅವುಗಳನ್ನು ಚೆನ್ನಾಗಿ ತೊಳೆದು.. ಒರೆಸಿ ಕೋಸಂಬರಿ ಕೊಡುವುದಿತ್ತು. ಈಗಿನಂತೆ ಪ್ಲಾಸ್ಟಿಕ್ ಬಟ್ಟಲುಗಳ ಮಾತೇ ಇಲ್ಲ. ಪಾನಕಕ್ಕೂ ಸ್ಟೀಲಿನ ಲೋಟಗಳೇ. ತೊಳೆದು ತುಂಬಿಸಿಕೊಡಲು ಒಬ್ಬರು ನಿಂತುಬಿಡುವುದಿತ್ತು. ತಿಂದು ಚೆಲ್ಲಿದ ಹಲಸಿನ ಎಲೆಗಳೆಲ್ಲ ಮರುದಿನ ತಿಪ್ಪನ ಪಾಲಾಗುತ್ತಿದ್ದವು. ಇಂಥ ನಿಂಗಣ್ಣನಿಗೆ ಸಾಲ ಕೊಡುವುದೊಂದು ತಲೆನೋವೇ. ಪ್ರತಿಬಾರಿ ಲೆಕ್ಕ ಮಾಡುವಾಗ “ಎಷ್ಟ ನಾ ಕೊಡೂದೈತಿ ದಾದಾ?” ಎಂದು ಕೇಳುವವ. “ಈ ತಿಂಗಳ ಬ್ಯಾಡ.. ಮುಂದಿನ ತಿಂಗಳ ಹಿಡಕೋ..” ಎನ್ನುತ್ತಿದ್ದ. ಹಿರಿಯ ಮಗಳು ದೇವಿಯ ಮದುವೆಗೆ ನಾಲ್ಕಾರು ಹಾಲಿನ ಮನೆಗಳಲ್ಲಿ ಸಾಲ ಮಾಡಿದ್ದ. ಅದನ್ನು ಹತ್ತಾರು ವರ್ಷಗಳವರೆಗೆ ತೀರಿಸಿದ್ದ. ಅಪ್ಪ “ಬ್ಯಾಂಕಿನ್ಯಾಗಾಗಿದ್ರ ನೀ ಬಡ್ಡಿ ಕಟ್ಟಬೇಕಾಗ್ತಿತ್ತು. ನಿನ್ನ ಸಾಲಕ್ಕ ನಾ ಬ್ಯಾರೇ ಪುಸ್ತಕ ಮಾಡಬೇಕಾಗೇದ” ಎಂದು ಹೇಳಿದಾಗ “ನನಗ ನೀನ ಬ್ಯಾಂಕು” ಎಂದವನ ಜಾಣತನ ಮೆಚ್ಚಬೇಕಾದ್ದೇ.
ಈ ಸುಂದರ ಅನುಬಂಧಕ್ಕೆ ಹುಳಿ ಬಿದ್ದಿದ್ದೂ ಇತ್ತು. ವರ್ಗವಾಗಿ ಬಂದ ಮೂರನೇ ಮನೆ ಅಜ್ಜಿ “ನಮ್ಮಣ್ಣನ ಮನ್ಯಾಗನೂ ಇವನ ಹಾಲು ಕೊಡತಾನ. ಎಷ್ಟು ಘಟ್ಟಿ ಹಾಲಿರ್ತಾವ. ನಮಗೆಲ್ಲಾ ನೀರು ಕೂಡಿಸಿ ಕೊಡತಾನ” ಎನ್ನುತ್ತ ಕಡ್ಡಿ ಗೀರಿದ್ದರು. ಅಮ್ಮನ ಮನದಲ್ಲಿ ಅದು ಹೊತ್ತಿ ಉರಿದಿತ್ತೆನ್ನಿ. ಹಾಗೇ ಧಗೆ ಅಕ್ಕಪಕ್ಕದ ಮನೆಗಳಿಗೂ ವ್ಯಾಪಿಸಿತು. “ಆಯೀ.. ಎಷ್ಟು ದಿವ್ಸದಿಂದ ನಿಮ್ಮನಿಗೆ ಹಾಲು ಕೊಡಾಕತ್ತೀನಿ. ಹಂಗ್ಯಾಕ ಮಾಡ್ಲಿ? ನಮ್ಮೂರ ದ್ಯಾಮವ್ವನ ಆಣಿ” ಎಂದು ನಿಂಗಪ್ಪ ಆಣೆ ಇಟ್ಟರೂ ಯಾರಿಗೂ ಸಮಾಧಾನವಿಲ್ಲ. “ಆತು ಬಿಡು. ಮುಂಜಾಲಿಗಿ ಗಂಗಾನ್ನ ಇಲ್ಲೇ ಹೊಡಕೊಂಡು ಬಂದು ನಿನ್ನ ಮುಂದನ ಹಾಲ ಹಿಂಡಿ ಕೊಡತೇನಿ” ಎಂದ. ಅಮ್ಮ ಮತ್ತು ಮೂರನೇ ಮನೆ ಅಜ್ಜಿಯ ಮುಖ ಊರಗಲವಾಯಿತು. ಉಳಿದವರ ಮುಖದಲ್ಲೂ ಅದು ಪ್ರತಿಬಿಂಬಿತವಾಯಿತು. ಮರುದಿನದಿಂದಲೇ ಅಭಿಯಾನ ಆರಂಭವಾಯಿತು. ಬೆಳಗ್ಗೆ “ಟ್ರಿನ್..ಟ್ರಿನ್..” ಬದಲು ಗಂಗಾ ಬಂದು “ಓ..” ಎಂದು ಓಂಢ್ರಿಸಿದಳು. ಅಪ್ಪ ಗಡಗಡಿಸಿ ಎದ್ದು “ಇದು ಹೆಚ್ಚಿಂದಾತು. ಎದ್ದ ಕೂಡ್ಲೆ ಎಮ್ಮಿ ಮಾರಿ ನೋಡಬೇಕಾತು. ಎಲ್ಲಾ ಹೆಣಮಕ್ಕಳ ಕಾರಭಾರ” ಎಂದು ಗೊಣಗಿದರು.
ಆದರೆ ನಿಂಗಪ್ಪ ಸರ್ವಸನ್ನದ್ಧನಾಗೇ ಬಂದಿದ್ದ. ನೆರೆದ ಹೆಂಗಳೆಯರನ್ನು ಹಿಂದಕ್ಕೆ ಸರಿಸಿದ. ಗಂಗಾಳ ಮುಂದೆ ಹುಲ್ಲು ಹರಡಿದ. ಮುಖ, ಮೂತಿ ತಿಕ್ಕಿದ. ಬೆನ್ನ ಮೇಲೆ ಕೈಯಾಡಿಸಿದ. ಮೆತ್ತಗೆ ಕೆಚ್ಚಲಿಗೆ ಕೈಹಾಕಿ ಹಾಲು ಕರೆದ. ನೊರೆನೊರೆಯಾದ ಬೆಳ್ಳಗಿನ ಹಾಲು.. ಅವನ ಕ್ಯಾನ್ ತುಂಬುತ್ತಿತ್ತು. ಶಿವನ ಜಟೆಯಿಂದ ಗಂಗೆಯ ಹಾಲ್ನೊರೆ ಇಳಿದಂತೆ ಭಾಸ. ಅದನ್ನೇ ನಮ್ಮ ಪಾತ್ರೆಗೆ ಹಾಕಿದ. ಇದು ಮೂರು ದಿನ ಸುಸೂತ್ರವಾಗಿ ನಡೆಯಿತು. ಹಾಲಿನ ಜೊತೆ ಸಗಣಿ, ಗಂಜಲಗಳ ಪ್ರವಾಹವೂ ಇರುತ್ತಿತ್ತು. ಕಾರ್ಯಕ್ರಮ ಮುಗಿದ ನಂತರ ಅಂಗಳ ಗುಡಿಸಿ ಶುದ್ಧ ಮಾಡುವಷ್ಟರಲ್ಲಿ ಅಮ್ಮ ಸುಸ್ತಾಗಿ ಹೋಗುತ್ತಿದ್ದಳು. ಅಪ್ಪ “ಗಪ್ಪ ಕೂಡಲಾರ್ದ ಮೈಮ್ಯಾಲೆ ಇರವಿ ಬಿಟಗೊಂಡ್ಹಂಗ..” ಎಂದು ಸಿಡಿಮಿಡಿ ಮಾಡಿದರು. ಅವರಿಗೆ ನಿಂಗಪ್ಪನ ಪ್ರಾಮಾಣಿಕತೆಯ ಬಗ್ಗೆ ಅಪಾರ ನಂಬಿಕೆ. ನಾಲ್ಕನೇ ದಿನ ಮೂರನೇ ಮನೆ ಅಜ್ಜಿಗೆ ಹುರುಪು ಉಕ್ಕೇರಿತು. “ನಮ್ಮನ್ಯಾಗ ಎಂಟೆತ್ತಿನ ಕಮತ ಇತ್ತು. ಬೇಕಾದಷ್ಟು ಹಾಲು ಕರದೀನಿ ನಾನು. ಈವತ್ತ ನಾನ ಹಿಂಡಕೋತೀನಿ” ಎಂದಾಗ ನಿಂಗಪ್ಪ “ಬ್ಯಾಡ ಅಜ್ಜಿ. ಗಂಗಾಂದು ಹೇಳ್ಲಿಕ್ಕೆ ಬರೂದುಲ್ಲ. ಒಮ್ಮೊಮ್ಮೆ ಒದೀತಾಳ” ಎಂದು ಎಚ್ಚರಿಕೆ ನೀಡಿದ. ಆದರೆ ಅಜ್ಜಿ ಕೇಳಿಯಾಳೆ? ಗಂಗಾಳ ಬೆನ್ನಮೇಲೆ ಕೈಯಾಡಿಸಿ.. ಒಂದಷ್ಟು ಹುಲ್ಲು ತಿನ್ನಿಸಿ ಕೆಚ್ಚಲಿಗೆ ಕೈಹಾಕಿದಳು. ಒಂದು ಬಾರಿ ಕರೆದು ನೆರೆದ ಹೆಂಗಳೆಯರತ್ತ ತಿರುಗಿ ಜಂಬದ ನಗೆ ಬೀರಿದಳು. ಮತ್ತೊಂದೆರಡು ಬಾರಿ ಕರೆಯುವಷ್ಟರಲ್ಲೇ ಬೇರೆ ಕೈಯ ಸೂಕ್ಷ್ಮವನ್ನು ಗ್ರಹಿಸಿದ ಗಂಗಾ ಮುಂಗಾಲಿನಿಂದ ‘ಟಪ್..’ ಎಂದು ಒದ್ದರೆ, ಅಜ್ಜಿ ಹಾಲಿನ ಪಾತ್ರೆಯ ಸಮೇತ ಮಾರುದೂರಕ್ಕೆ ಹಾರಿ ಬಿದ್ದಿದ್ದಳು. ಸುತ್ತ ನೆರೆದವರಿಗೆಲ್ಲ ಹಾಲಭಿಷೇಕ. ಗಾಂಭೀರ್ಯ ಮೀರಿ ಕೆಲವು ಮುಖಗಳಲ್ಲಿ ನಗು ಹೊರಬಂದಿತ್ತು. ಅಜ್ಜಿಯ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ನೋವಿನಿಂದ ಮುಲುಗುಟ್ಟುತ್ತಿದ್ದವಳಿಗೆ ತಕ್ಷಣಕ್ಕೆ ಏಳಲಾಗಲಿಲ್ಲ. ನಿಂಗಪ್ಪ “ನಾ ಆವಾಗ ಹೇಳಿದ್ನಿ” ಎನ್ನುತ್ತ ಅಜ್ಜಿಯನ್ನೆತ್ತಿಕೊಂಡು ಅವಳ ಮನೆಯಲ್ಲಿ ಮಲಗಿಸಿ ಬಂದ. ಅಪ್ಪ “ಮೊದಲ ಮೈಯಾಗ ಬರೇ ಎಲುಬವ ಅಜ್ಜಿಗೆ. ಹಿಂಗ ಬಿದ್ದರ.. ಎದ್ದರ ಚೀಲದಾಗ ತುಂಬಕೊAಡು ಹೋಗಬೇಕಾದೀತು. ಯಾರು ಹೇಳಿದ್ದಾರು ನಿಮಗ..?” ಎಂದು ರೌದ್ರಾವತಾರ ತಾಳಿದರು. ಅಲ್ಲಿಗೆ ಮನೆಯ ಮುಂದೆ ಹಾಲು ಕರೆಯುವ ಕಾರ್ಯಕ್ರಮ ಮುಕ್ತಾಯವಾಗಿತ್ತು.
ನಿಂಗಪ್ಪನ ಹೆಂಡತಿ ಈರಮ್ಮ ಮನೆಯಿಂದ ಹೊರಬೀಳುವುದೇ ಕಡಮೆ. ಯಾವಾಗಲೂ ತಲೆತುಂಬ ಸೆರಗು ಹೊದ್ದು ರೊಟ್ಟಿ ತಟ್ಟುವುದರಲ್ಲೋ.. ಬೆರಣಿ ತಟ್ಟುವುದರಲ್ಲೋ ನಿರತಳಾಗಿರುತ್ತಿದ್ದಳು. ದನಕಾಯುವ ಕೆಲಸ ನಿಂಗಪ್ಪ ಅಥವಾ ಅವನಮ್ಮ ಸಂಕವ್ವನದು. ಮಹಿಷ ಪರಿವಾರದ ಸಂರಕ್ಷಕಿ.. ಆಪ್ತ ಸಮಾಲೋಚಕಿ ಎಲ್ಲ ಸಂಕಮ್ಮನೇ. ತಾನು ತವರಿನಿಂದ ತಂದ ಎಮ್ಮೆ ಲಕ್ಷ್ಮಿಯ ಬಗ್ಗೆ ಬಲು ಹೆಮ್ಮೆ ಅವಳಿಗೆ. ಅಪಾರ ಸಂತಾನಫಲವನ್ನು ಕರುಣಿಸಿ ಅದೀಗ ಮುದಿಯಾಗಿತ್ತು. ಗಂಡು ಕರುಗಳನ್ನೆಲ್ಲ ಪಾರಿಶ್ವಾಡಕ್ಕೆ ಒಯ್ದು ಬಿಡಲಾಗುತ್ತಿತ್ತು. ರಾತ್ರಿಯೇ ಹಿಂಡಿ, ತೌಡು, ಮುಸುರೆ ನೀರು ಇತ್ಯಾದಿಗಳನ್ನು ಸೇರಿಸಿ ನೆನೆ ಇಡುವುದು ಸಂಕಮ್ಮನ ಕೆಲಸ. ಹಿಂಡಿ ಎಂದರೆ ಗೋವಿನ ಜೋಳ.. ಜೋಳದ ತೌಡು ಮುಂತಾದವನ್ನೆಲ್ಲ ಸೇರಿಸಿ ನುಚ್ಚು ಮಾಡಿಟ್ಟುಕೊಳ್ಳುವುದಿತ್ತು. “ಹತ್ತಿಕಾಳು ಹಾಕಬೇಕ್ರಿ.. ಅಂದ್ರನ ಬೆಣ್ಣಿ ಛೊಲೊ ಬರ್ತದ. ಮತ್ತ ತುಪ್ಪ ಘಮಘಮ ಆಗ್ತದ” ಎಂದು ಹೇಳುವುದಿತ್ತು. ನಮ್ಮಲ್ಲಿ ಯಾರ ಮನೆಯಲ್ಲಾದರೂ ಹಬ್ಬವಿದ್ದರೆ ಅಂದು ಲಕ್ಷ್ಮಿಗೂ ಹಬ್ಬವೇ. ಮಧ್ಯಾಹ್ನದ ವೇಳೆಗೆ ಅವಳನ್ನು ಕರೆತರುವುದಿತ್ತು. ಅಮ್ಮ ಕೊಟ್ಟ ಸಿಹಿ ತಿಂಡಿಯನ್ನೋ.. ಊಟವನ್ನೋ ಹೊಟ್ಟೆಗೆ ಸೇರಿಸಿ, ಚೀಲಕ್ಕೂ ತುಂಬಿಕೊಂಡು ಲಕ್ಷ್ಮಿಗೆ ಎಲೆಗಳ ಸಮೇತ ತಿನ್ನಿಸಿ ಸಂತೃಪ್ತಳಾಗಿ ಹೊರಡುತ್ತಿದ್ದಳು ಸಂಕವ್ವ. ಹೋಗುವಾಗ ಮರೆಯದೇ “ಆಯಿ.. ಗೌರಿ ಗಬ್ಬಾಗ್ಯಾಳ. ಗಿಣ್ಣದ ಹಾಲು ಸಿಗ್ತಾವ” ಎನ್ನುವಳು. ಹಾಗೆ ತಂದೂ ಕೊಡುತ್ತಿದ್ದಳು. ಅಮ್ಮನ ಗೆಳತಿಯೊಬ್ಬರು ಆ ಹಾಲನ್ನೇ ಒಣಗಿಸಿಟ್ಟುಕೊಂಡು ಎಷ್ಟೋ ದಿನಗಳವರೆಗೆ ಗಿಣ್ಣ ಮಾಡಲು ಬಳಸುತ್ತಿದ್ದರು.
ಅದೊಮ್ಮೆ ನಮ್ಮ ತಾತನ ತಿಥಿಯಂದು ತುಸು ಬೇಗನೇ ಹಸು ಮತ್ತು ಲಕ್ಷಿö್ಮಯನ್ನು ಹೊಡೆದುಕೊಂಡು ಬಂದಿದ್ದಳು ಸಂಕವ್ವ. ಆಗಿನ್ನೂ ಮನೆಯ ಮುಂದೆ ಟಾರ್ ರೋಡ್ ಕೂಡ ಆಗಿರಲಿಲ್ಲ. ಕಾಲ್ದಾರಿಯಲ್ಲಿ ಕೂರಿಸಿಬಿಟ್ಟಿದ್ದಳು. ವಿಪರೀತ ಪುಕ್ಕಲು ಸ್ವಭಾವದ ಭಟ್ಟರು ಲಕ್ಷಿö್ಮ ಓಂಢ್ರಿಸಿದಾಗ ಗಡಬಡಿಸಿ ಉಂಡರು. ಒಮ್ಮೆಯಲ್ಲ.. ಅವಳು ಆಗಾಗ ಕೂಗು ಹಾಕುತ್ತಲೇ ಇದ್ದಾಗ ಎಲ್ಲರೂ ಅವಸರಿಸಬೇಕಾಯಿತು. ಬ್ರಾಹ್ಮಣರ ಎಲೆಗಳು ಮತ್ತು ಪಿಂಡ ಹಸುವಿನ ಹೊಟ್ಟೆ ಸೇರಿದರೆ
ಉಳಿದ ಎಲೆಗಳೆಲ್ಲ ಲಕ್ಷ್ಮಿಯ ಪಾಲೇ. ಅಂತೂ ಎಲೆಗಳ ಸಮೇತ ರವೆ ಉಂಡೆ, ವಡೆ ಹೊಟ್ಟೆಗೆ ಬಿದ್ದಾಗಲೇ ಅವಳು ತೃಪ್ತಳಾಗಿ ಕೂಗು ನಿಲ್ಲಿಸಿದ್ದು. “ನಿಂಗಪ್ಪಾ.. ನಿಮ್ಮ ಲಕ್ಷ್ಮಿ ವದರಿ ಭಟ್ಟರನ್ನ ಹೆದರಿಸಿ ನಮ್ಮಪ್ಪನ್ನ ಲಗೂ ಸ್ವರ್ಗಕ್ಕ ತಿರಗಿ ಕಳಿಸಿಬಿಟ್ಟಳು” ಎಂದು ಅಪ್ಪ ನಿಂಗಪ್ಪನಿಗೆ ಹೇಳಿದಾಗ ಅವನಿಗೆಷ್ಟು ಅರ್ಥವಾಯಿತೋ.. ನಕ್ಕಿದ್ದಂತೂ ನಿಜ. ನಾವು ಊರಿಗೆ ಹೋದಾಗ ಮುದಿ ಎಮ್ಮೆ ಮರಣಿಸಿತಂತೆ. ಸಂಕವ್ವ ನಾವು ಮರಳಿದ ನಂತರ ಬಂದು ಅತ್ತಿದ್ದೇ ಅತ್ತಿದ್ದು. ತನ್ನ ತೌರಿನ ಬಳುವಳಿಯನ್ನು.. ನಿಧಿಯನ್ನು ಕಳೆದುಕೊಂಡ ದುಃಖ ಅವಳಿಗೆ. “ನಾವೆಲ್ಲಾ ಧಾರವಾಡದಾಗಿದ್ವಿ ಆಯಿ. ಅಲ್ಲೆ ಎಮ್ಮಿಕೇರಿ ಐತೆಲಾ.. ಕೆಳಗ ಇತ್ತು ಮನಿ. ದಿನಾ ಎಮ್ಮಿಗೊಳ್ನ ಕೆರಿಗೆ ಹೊಡಕೊಂಡ್ಹೋಗಿ ಛೋಲೊತ್ನಾಗಿ ತಿಕ್ಕಿ ತೊಳೀತಿದ್ವಿ. ಈ ಲಕ್ಷ್ಮಿಯಂತೂ ನೀರಿನ್ಯಾಗಿಂದ ಹೊರಗ ಬರ್ಲಿಕ್ಕೆ ವಲ್ಲೆ ಅಂತಿದ್ಲು. ಆಕಳಾ ಕೆರಿಗೆ ಹೊಡಕೊಂಡ್ಹೋಗೋದು ತ್ರಾಸಾಗ್ತಿತ್ತು. ಅವು ಬರದೇ ಓಡೋಡಿ ಹೋಗತಿದ್ದು. ಎಮ್ಮಿ ಮಾತ್ರ ಖುಷೀಲೆ ಬರ್ತಿದ್ದು. ಮನಿಗೆ ಹೊಡಕೊಂಡ ಬರೋಮುಂದ ಮಿರಿಮಿರಿ ಮಿಂಚತಿದ್ದು. ಮುಂದ ಕೆರಿ ಬತ್ತಲಿಕ್ಕತ್ಯು. ಸುತ್ತಲ ಅಂಗಡಿ, ಮನಿಗೊಳು ಆಗಾಕ ಹತ್ತಿದ್ವು. ಎಲ್ಲಾ ಬೆಳದು ಎಮ್ಮಿಕರ್ಯಾಗ ಎಮ್ಮಿಗೊಳಿಗಿ ಜಾಗ ಇಲ್ದಾಂಗಾತು. ಎಮ್ಮಿಕೆರಿ ಅನ್ನೋ ಹೆಸರಷ್ಟ ಉಳಿತು. ನಾ ಪಾರಿಶ್ವಾಡಕ್ಕ ಮದಿವಿ ಮಾಡಕೊಂಡು ಬಂದಾಗ ನನ್ನ ಗೂಡಾ ಲಕ್ಷ್ಮಿನ್ನ ಕೊಟ್ಟು ಕಳಿಸಿದ್ರು” ಎಂದು ಗೊಳೋ ಎಂದು ಅತ್ತಿದ್ದಳು. ಅಮ್ಮ ಸಂತೈಸಿದಳು. ಅವಳು ಹೊರಟ ನಂತರ ಅಪ್ಪ “ತನ್ನ ಗಂಡ ಸತ್ತಾಗೂ ಇಕಿ ಇಷ್ಟು ಅತ್ತಿರ್ಲಿಲ್ಲ ಅನಸ್ತದ” ಎಂದು ಬಾಣಬಿಟ್ಟಿದ್ದರು.
ಜಗತ್ತಿನಲ್ಲಿ ಎಮ್ಮೆಗಳ ಪ್ರಭೇದಗಳೂ ಬಹಳಷ್ಟಿವೆ. ನದಿ ಪ್ರದೇಶಗಳ ಅಥವಾ ನೀರಿನ ಎಮ್ಮೆ ಮತ್ತು ಜೌಗು ಪ್ರದೇಶದ ಎಮ್ಮೆ ಎಂದು ಎರಡು ವಿಭಾಗಗಳಲ್ಲಿ ಇವನ್ನು ವರ್ಗೀಕರಿಸಲಾಗುತ್ತದೆ. ‘ಬ್ಯಾಬೇಲಸ್ ಬ್ಯುಬಾಲಿಸ್’ ಎಂದು ವೈಜ್ಞಾನಿಕವಾಗಿ ಗುರುತಿಸಲ್ಪಡುವ ಎಮ್ಮೆಗಳು ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕಾ, ದಕ್ಷಿಣ ಯೂರೋಪ್ ಮತ್ತು ಉತ್ತರ ಆಫ್ರಿಕಾ ಮುಂತಾದ ಸ್ಥಳಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಜಗತ್ತಿನಾದ್ಯಂತ ಇರುವ ವಿವಿಧ ತಳಿಯ ಎಮ್ಮೆಗಳು ಸುಮಾರು ೩೦೦ರಿಂದ ೬೦೦ ಕೆ.ಜಿ. ಯವರೆಗೂ ತೂಗುತ್ತವೆ. ಅವುಗಳ ಗರ್ಭಾವಸ್ಥೆಯೂ ಒಂಬತ್ತು ತಿಂಗಳಿನಿಂದ ಆರಂಭವಾಗಿ ಹತ್ತರಿಂದ ಹನ್ನೊಂದು ತಿಂಗಳವರೆಗೂ ಇರಬಹುದು. ಭಾರತದಲ್ಲಿ ಪ್ರಖ್ಯಾತವಾದ ತಳಿಗಳು ಮರ್ರಾ, ಜಾಫರಾಬಾದಿ, ನಿಲಿರಾವಿ, ಸುರ್ತಿ, ಬಡವಾರಿ, ನಾಗಪುರಿ, ತೋಡಾ, ಮೆಹಸಾನಾ.. ಮುಂತಾದವುಗಳು. ಇವುಗಳಲ್ಲಿ ಮರ್ರಾ ತಳಿಯ ಎಮ್ಮೆ ಹೆಚ್ಚು ಹಾಲು ಕೊಡುತ್ತದೆ. ನಿತ್ಯ ಸುಮಾರು ಹತ್ತರಿಂದ ಹದಿನಾರು.. ಲೀಟರ್ಗಳವರೆಗೆ ಕರೆಯುತ್ತವೆ. ಇವು ದಿಲ್ಲಿ, ಪಂಜಾಬ್, ಹರಿಯಾಣ ಮುಂತಾದೆಡೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಯಮನ ವಾಹನ ಕೋಣನ ಅರಸಿ.. ಈ ಮಹಿಷಿ. ಆದರೂ ಅದೇನೋ.. ಗೋಮಾತೆಗಿರುವ ಪೂಜ್ಯ ಸ್ಥಾನ ಎಮ್ಮೆಗಿಲ್ಲ. ವರ್ಣಭೇದನೀತಿಗೆ ಅದು ತುತ್ತಾಗಿದೆ ಎಂದು ಹೇಳಬಹುದು. ಆದರೆ ಆಕಳಿನ ಹಾಲಿಗಿಂತ ಎಮ್ಮೆ ಕೊಡುವ ಹಾಲಿನ ಪ್ರಮಾಣ ಹೆಚ್ಚು. ಹಾಲು, ಮೊಸರಿನ ರುಚಿಯೂ ಹೆಚ್ಚು. ಗಟ್ಟಿ ಜಾಸ್ತಿ. ಬೆಣ್ಣೆ, ತುಪ್ಪ ಎಲ್ಲವೂ ಉತ್ತಮವಾದದ್ದು. ಹೈನುಗಾರಿಕೆಗೆ ಎಮ್ಮೆಯೇ ಶ್ರೇಷ್ಠ. ಆದರೆ “ಎಮ್ಮೆ” ಗಾಢ ವರ್ಣದೊಂದಿಗೆ ದಡ್ಡತನದ, ಅಶಿಸ್ತಿನ ಸಂಕೇತವಾಗಿ ಗುರುತಿಸಲ್ಪಡುತ್ತದೆ. “ಕಾಲಾ ಅಕ್ಷರ.. ಭೈಂಸ್ ಬರಾಬರ್” (ಕಪ್ಪು ಅಕ್ಷರಗಳು ಎಮ್ಮೆಗೆ ಸಮ) ಎಂದು ಅನಕ್ಷರಸ್ಥರನ್ನು ಛೇಡಿಸುವುದಿದೆ. ದಪ್ಪಗಿರುವವರಿಗೆ.. ನೀಟಾಗಿಲ್ಲದಿರುವವರಿಗೆ “ಎಮ್ಮೆಯಂಥೋನು/ಳು” ಎಂಬ ಬಿರುದು ಕಟ್ಟಿಟ್ಟ ಬುತ್ತಿ. ಸೂಕ್ಷ್ಮ ಸಂವೇದನೆಗಳು ಕಡಮೆ ಇರುವವರಿಗೂ “ಎಮ್ಮೆ ಚರ್ಮದವರು” ಎಂಬ ಉಪಾಧಿ ಇದ್ದದ್ದೇ. ಅವರಿಗೆ ಬೈಗಳು ತಾಗುವುದೇ ಇಲ್ಲ. “ದನಾ ಕಾಯಾವ್ನ..” ಎಂಬ ಬೈಗುಳವೂ ಮಾಮೂಲಿ. ಇದಕ್ಕೆ ವಿವರಣೆಯನ್ನು ಕೊಡುತ್ತ ಗುರುಗಳು “ದನಾ ಕಾಯಾಂವಾ” ಎಂದರೆ ಗೋಪಾಲಕ.. ಕೃಷ್ಣ. ಬೈಗುಳದಲ್ಲೂ ನೀವು ದೇವರ ನಾಮಸ್ಮರಣೆಯನ್ನು ಮಾಡಬಹುದು”ಎನ್ನುತ್ತಾರೆ. ದನ.. ಗೋವುಗಳನ್ನು ಕಾಯ್ದ ಗೋಪಾಲ ದೇವರಾದ. ಗೋವು ಪೂಜ್ಯಸ್ಥಾನಕ್ಕೇರಿತು. ಎಮ್ಮೆಗಳು ಮಾತ್ರ ಅದೇ ಅನಾದರದಲ್ಲೇ ಬದುಕುತ್ತಿವೆ. ಹಾಲು.. ಹೈನವಷ್ಟೇ ಅಲ್ಲ.. ಸೆಗಣಿಯಿಂದ ಗೊಬ್ಬರ ಮಾಡಿ, ಬೆರಣಿ ತಟ್ಟಿ ಮನುಜ ದುಡ್ಡು ಮಾಡಿಕೊಳ್ಳುತ್ತಾನೆ. ಕೊನೆಗೆ ಅದರ ಚರ್ಮ, ಕೊಂಬು ಕೂಡ ಉಪಯೋಗಿಸಲ್ಪಡುತ್ತದೆ. ಇದನ್ನೆಲ್ಲ ನೋಡಿದರೆ ನನಗೆ ಎಮ್ಮೆಯ ಬಗ್ಗೆ ಏನೋ ಮೃದು ಭಾವನೆ. ಜಗದ ನಿರ್ಲಕ್ಷ್ಯಕ್ಕೆ ಒಳಗಾದರೂ ಹಾಲು ಕೊಟ್ಟು ನಮ್ಮನ್ನು ಸಲಹುತ್ತ ಯಾರೇನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನಿರುತ್ತದೆ. ಮಾನಾಪಮಾನಗಳ ಗೊಡವೆ ಇಲ್ಲದೇ ಸ್ಥಿತಪ್ರಜ್ಞೆಗೆ ಉದಾಹರಣೆಯಾಗುತ್ತದೆ. ಸೌಂದರ್ಯ.. ಅಲಂಕಾರಗಳ ಇಚ್ಛೆಯೇ ಇಲ್ಲದ ಸೀದಾಸಾದಾ ಪ್ರಾಣಿ. ಸಾಕಿದವ ಬಿಟ್ಟು ಬಂದರೂ.. ತಪ್ಪಿಸಿಕೊಂಡರೂ ಹುಡುಕಿಕೊಂಡು ಮನೆ ಸೇರುವ ನಿಯತ್ತು ಮೆಚ್ಚತಕ್ಕದ್ದು. ಕಾಯಕವೇ ಕೈಲಾಸ ಎನ್ನುತ್ತ ಮನುಜನಿಗಾಗಿ ಬಾಳು ಸವೆಸಿಬಿಡುತ್ತದೆ.
“ನಿಂಗಪ್ಪನ ಹಾಲು, ನಿಂಗಪ್ಪನ ಸಗಣಿ, ನಿಂಗಪ್ಪನ ಬೆರಣಿ..” ಎಂದೆಲ್ಲಾ ಶಬ್ದಶಃ ಅರ್ಥ ಹುಡುಕಿ ನಗುತ್ತಿದ್ದ ದಿನಗಳು ತೆರೆಯ ಮರೆಗೆ ಸರಿದಿದ್ದವು. ಮದುವೆಯಾಗಿ ಬಾಣಂತನಕ್ಕೆಂದು ನಾನು ತವರಿಗೆ ಬಂದಿದ್ದೆ. ಆಗ ಕುಡಿದದ್ದು ಗೌರಿಯ ಹಾಲು. ಸಂಕವ್ವ ಚಿತ್ರಪಟದಲ್ಲಿ ಕುಳಿತಿದ್ದಳು. ನನ್ನ ಮಕ್ಕಳ ಮುಖ ನೋಡಿ ನಿಂಗಪ್ಪ ಸಂಭ್ರಮಿಸಿದ್ದ. “ದೊಡ್ಡಾಂವಾ ತಮ್ಮಣ್ಣಗ ಸರ್ಕಾರಿ ನೋಕರಿ ಸಿಕ್ಕೇತಿ. ಎರಡನೇದಾವಾ ಸಾಲ್ಯಾಗ ಮಾಸ್ತರ ಆಗ್ಯಾನ. ಇಬ್ಬರೂ ಮದಿವಿ ಮಾಡಕೊಂಡು ಆರಾಮ ಇದ್ದಾರ. ಆದರ ನಮ್ಮ ತಿಪ್ಪಣ್ಣಂದು ತ್ರಾಸ ಬಂದೇತಿ. ಮೆಟ್ರಿಕ್ ಆಗಾಣಾ ಮುಂದ ಕಲೀಲಿಲ್ಲ. ನಾವೂ ದನಕರುಗಳೊಳ ಕಡೆ ಬಿಟ್ಟಬಿಟ್ವಿ. ಆ ಕೆಲಸಾ ಛೊಲೊ ಮಾಡತಾನ. ಬೇಕಾದಷ್ಟು ರೊಕ್ಕಾನೂ ಘಳಸತಾನ. ಖರೆ ಕನ್ಯಾನ ಹತ್ತವಲ್ಲು. ದನಾ ಕಾಯಾವನ್ನ ಮದಿವಿ ಮಾಡಕೊಳ್ಲಿಕ್ಕೆ ಯಾರೂ ತಯಾರಿಲ್ಲ. ಸಾಲಿ ಮಾರಿ ನೋಡಿಲ್ದಿರೋ ಹಳ್ಳಿ ಹುಡಿಗ್ಯಾರು ಸೈತ ದೊಡ್ಡೂರಿನ ನೌಕರಿ ವರಾ ಬೇಕಂತಾರ. ಮ್ಯಾಲಾಗಿ ಈಗೆಲ್ಲಾ ನಮ್ಮ ದಿವಸ ಮುಗದು. ಪಾಕೀಟ ಹಾಲಿನ ದಿನಗೋಳು ಬಂದು. ಅವೇನು ಅಷ್ಟ ಛೊಲೊ ಅಲ್ಲ ಖರೆ ಏನ ಮಾಡೂದೈತಿ. ಕಾಲ ಬಂದಾಂಗ ಹೋಗಬೇಕಲಾ.. ಅದಕ್ಕ ಎಲ್ಲಾ ದನಾಕರಾ ಮಾರಿ ಅಂವಗೊಂದು ಉದ್ಯೋಗ ಹಾಕಿಕೊಡಬೇಕು ಅಂತೀನಿ” ಎಂದಿದ್ದ. ಮತ್ತದೇ ತಿರುಗುವ ಚಕ್ರ. ಬದಲಾಗುತ್ತಿರುವ ಪರಿಸ್ಥಿತಿ.. ಆಸೆ.. ಆಕಾಂಕ್ಷೆ.. ಒತ್ತಡಗಳು ಬಾಳನ್ನು ಹಂಚಿನ ಮೇಲೆ ಮೊಗಚಿ ಹಾಕುತ್ತ ಬೇಯಿಸುತ್ತಿದ್ದವು. ಮುಂದೆ ನಿಂಗಪ್ಪ ತನ್ನೆಲ್ಲ ಪಶುಸಂಪತ್ತನ್ನು ಮಾರಿ ತಿಪ್ಪಣ್ಣನಿಗೆ ಹಿಟ್ಟಿನ ಗಿರಣಿ ಹಾಕಿ ಕೊಟ್ಟನಂತೆ. ಆನಂತರ ಅವನ ಮದುವೆಯಾಗಿ ಹಿಟ್ಟು ಬೀಸುತ್ತ ಹಾಯಾಗಿದ್ದಾನೆ ಎಂದು ಅಮ್ಮನಿಂದ ತಿಳಿದು ಬಂದಿತ್ತು.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್ನಿಂದ ಒಂದು ಫೋನ್ ಬಂದಿತ್ತು. “ನಾ ನಿಖಿಲ್ ಗೌಳಿ ಬೆಳಗಾವಿಯಿಂದ ಮಾತಾಡ್ಲಿಕ್ಕತ್ತೇನ್ರಿ” ಎಂದ. ಮನದಾಳಕ್ಕಿಳಿದು ಹೆಕ್ಕಿದರೂ ನೆನಪಾಗುತ್ತಿಲ್ಲ. “ಹಾಲಿನ ನಿಂಗಪ್ಪನ ಮೊಮ್ಮಗಾರಿ” ಎಂದ. “ಹ್ಞಾಂ..” ಎಂದವಳಿಗೆ ತಲೆಯಲ್ಲಿ ಜಗ್ಗನೆ ನೂರು ವೋಲ್ಟಿನ ಬಲ್ಬು ಬೆಳಗಿತ್ತು. “ಹೆಂಗಿದ್ದೀಯಪಾ..? ನಿಮ್ಮಜ್ಜಾ ಹೆಂಗಿದ್ದಾರ?”ಎAದು ಕೇಳಿದೆ. “ಭಾಳ ಹಣ್ಣಾಗ್ಯಾರ. ನನಗ ಬೆಂಗಳೂರಾಗ ನೌಕರಿ ಆತ್ರಿ. ಬರಾಕತ್ತೇನಿ. ನಿಮಗ ಫೋನ್ ಹಚ್ಚಾಕ ಅವರ ಹೇಳಿದ್ರಿ” ಎಂದ. “ಛೊಲೊ ಆತಪಾ. ಬಾ. ಏನ ಬೇಕಾದ್ರೂ ಕೇಳು. ಅಲ್ಲಪಾ..ಆವಾಗ ನಿಮ್ಮ ಅಡ್ಡಹೆಸರು ಗೌಳಿ ಅಂತಿತ್ತೇನು? ನನಗ ಗೊತ್ತ ಇಲ್ಲ ಬಿಡು” ಎಂದೆ. ಅವನೂ “ಇಲ್ಲರಿ.. ನಾವ ಮೊಮ್ಮಕ್ಕಳು ಈಗ ಕುಲದ ಕಸಬು ಅಂತ್ಹೇಳಿ ಇಟಗೊಂಡೇವ್ರಿ. ಅಷ್ಟ ರಿಕಗ್ನಿಷನ್ ಇರ್ತದ್ರಿ” ಎಂದ. ವಿಷಾದದ ನಗು ಮೂಡಿತ್ತು. ವಿಪರ್ಯಾಸವೆಂದರೆ ದನಕರುಗಳನ್ನೆಲ್ಲ ಮಾರಿದ ಮೇಲೆ ಮೊಮ್ಮಕ್ಕಳಿಗೆ ಗೌಳಿತನ ನೆನಪಾಗಿತ್ತು.
ಸಂಬಂಧಿಗಳನ್ನು ಬಿಟ್ಟರೂ ಮಲ್ಲಿಗೆಬಳ್ಳಿಯ ಈ ಅನುಬಂಧಗಳ ಅಗತ್ಯ ನಮಗೆ ಹೆಚ್ಚು. ಇವರೊಡನೆ ಅನೂಹ್ಯವಾದ ಭಾವಬಂಧ ಬೆಸೆಯಲ್ಪಟ್ಟಿರುತ್ತದೆ. ನಮ್ಮ ಬಾಳಿನ ಬಂಡಿಯಲ್ಲಿ ಇವರ ಹೆಸರಿನ ಕೀಲುಗಳಿರುತ್ತವೆ. ಅವರಿಗೆ ನಾವು.. ನಮಗೆ ಅವರು.. ಈ ಕೊಡುಕೊಳ್ಳುವಿಕೆಯೇ ಸುಂದರ ಬಂಧವಾಗಿ.. ಮಾನವೀಯತೆಯ ಅನುಬಂಧವಾಗಿ ನಮ್ಮ ಸಮಾಜವನ್ನು ಸ್ವಸ್ಥವಾಗಿ ಮುನ್ನಡೆಸುತ್ತಿದೆ. ಇದು ಹೀಗೇ ಹಸಿರಾಗಿದ್ದು.. ಮಲ್ಲಿಗೆಬಳ್ಳಿಯ ಅಚ್ಚಮಲ್ಲಿಗೆ ಹೂಗಳಾಗಲಿ ಎಂಬುದೇ ಸದಾಶಯ.