ಎಲ್ಲಾ ಹೂವುಗಳು ದೇವರಿಗಾಗಿಯೇ ಎಂಬಂತಿದ್ದರೂ ನಮ್ಮ ಪುರಾಣ ಪುಣ್ಯ ಕತೆಗಳಲ್ಲಿ ಉಲ್ಲೇಖವಿರುವ ಪಾರಿಜಾತಕ್ಕೆ ವಿಶೇಷ ಮರ್ಯಾದೆ. ಎಷ್ಟೆಲ್ಲ ಕತೆಗಳು ಪಾರಿಜಾತದೊಂದಿಗಿದೆ ಬೆಸೆದುಕೊಂಡಿದೆ. ಸುರ-ಅಸುರರು ಸಮುದ್ರ ಮಂಥನ ನಡೆಸಿದಾಗ ಪಾರಿಜಾತದ ಮರವೂ ಸಿಕ್ಕಿತ್ತು. ಸೀತೆ ವನವಾಸದಲ್ಲಿದ್ದಾಗ ತನ್ನ ಪ್ರಿಯವಾದ ಪಾರಿಜಾತದ ಹೂವುಗಳನ್ನು ಸರ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದಳಂತೆ. ಸ್ವರ್ಗದ ಅಪ್ಸರೆಯರು ಈ ಮರದ ನೆರಳಿನಲ್ಲೇ ನಿಂತು ತಮ್ಮ ಆಯಾಸ ಪರಿಹರಿಸಿಕೊಳ್ಳುತ್ತಿದ್ದರಂತೆ.
ಬೆಂಗಳೂರಿನ ನಮ್ಮ ಮನೆಯ ಕಾಂಪೌಂಡಿನ ಪಕ್ಕದಲ್ಲೆ ನೆಟ್ಟ ಪಾರಿಜಾತ ಗಿಡದ ಎಲೆಗಳು ಬಿಳಿಯಾಗಿ ಒಣಗಿ ಸೊರಗತೊಡಗಿತು. ಪ್ರತಿ ಚಳಿಗಾಲದಲ್ಲೂ ಗಿಡ ಸೊರಗಿದರೂ ಈ ಸಲ ಸತ್ತೇ ಹೋಗುತ್ತದೆ ಎನಿಸಿತು, ಎಷ್ಟು ನೀರುಣಿಸಿದರೂ ಚಿಕ್ಕ ಮಕ್ಕಳು ಹಠ ಹಿಡಿದಂತೆ ಮತ್ತೂ ಸೊರಗಿತೆ ಹೊರತು ಚಿಗುರಲಿಲ್ಲ.
ಕೆಂಪು ತೊಟ್ಟಿನ ೭-೮ ಎಸಳಿನ ಕೃಷ್ಣನ ಪ್ರಿಯ ಪಾರಿಜಾತ ಯಾರಿಗಿಷ್ಟವಿಲ್ಲ, ನಸುಕಿನಲ್ಲೇ ಅರಳಿ, ಸೂರ್ಯ ಉದಯಿಸುತ್ತಿದ್ದಂತೆ ಇನ್ನು ಗಿಡದ ಋಣ ತೀರಿತು ಎನ್ನುವಂತೆ ನೆಲಕ್ಕುರುಳುವ ಹೂಗಳು, ಕೆಲವು ಮಾತ್ರ ಇನ್ನೂ ಇಹಲೋಕದ ಕೆಲಸ ಬಾಕಿ ಇದೆ ಎನ್ನುವಂತೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ನೀನು ಎಲ್ಲಿದ್ದರೂ ಶ್ರೇಷ್ಠ ನೆಲದಲ್ಲುರುಳಿದರೂ, ಗಿಡದಲ್ಲಿದ್ದರೂ ಎಂದು ಎತ್ತಿ ದೇವರ ಪಾದಗಳಲ್ಲಿರಿಸುತ್ತೇವೆ.
ಎಲ್ಲ ಹೂವುಗಳು ದೇವರಿಗಾಗಿಯೇ ಎಂಬಂತಿದ್ದರೂ ನಮ್ಮ ಪುರಾಣ, ಪುಣ್ಯಕತೆಗಳಲ್ಲಿ ಉಲ್ಲೇಖವಿರುವ ಪಾರಿಜಾತಕ್ಕೆ ವಿಶೇಷ ಮರ್ಯಾದೆ. ಎಷ್ಟೆಲ್ಲ ಕತೆಗಳು ಪಾರಿಜಾತದೊಂದಿಗಿದೆ ಬೆಸೆದುಕೊಂಡಿದೆ. ಸುರ, ಅಸುರರು ಸಮುದ್ರ ಮಂಥನ ನಡೆಸಿದಾಗ ಪಾರಿಜಾತದ ಮರವೂ ಸಿಕ್ಕಿತ್ತು; ಸೀತೆ ವನವಾಸದಲ್ಲಿದ್ದಾಗ ತನ್ನ ಪ್ರಿಯವಾದ ಪಾರಿಜಾತದ ಹೂವುಗಳನ್ನು ಸರ ಮಾಡಿಕೊಂಡು ಹಾಕಿಕೊಳ್ಳುತ್ತಿದ್ದಳಂತೆ. ಸ್ವರ್ಗದ ಅಪ್ಸರೆಯರು ಈ ಮರದ ನೆರಳಿನಲ್ಲೇ ನಿಂತು ತಮ್ಮ ಆಯಾಸ ಪರಿಹರಿಸಿಕೊಳ್ಳುತ್ತಿದ್ದರಂತೆ. ಕೃಷ್ಣ ಸತ್ಯಭಾಮೆಗೋಸ್ಕರ ಇಂದ್ರನೊಡನೆ ಹೋರಾಡಿ ತಂದ ಮರವಿದು ಎನ್ನುತ್ತಾರೆ. ಇನ್ನೂ ಒಂದು ಕತೆಯ ಪ್ರಕಾರ ಪಾರಿಜಾತ ಎನ್ನುವ ಕನ್ಯೆಯೊಬ್ಬಳು ಸೂರ್ಯನನ್ನು ಪ್ರೀತಿಸಿ ಸೂರ್ಯನಲ್ಲಿ ಪ್ರೇಮಭಿಕ್ಷೆ ಬೇಡಿದಳಂತೆ, ಸೂರ್ಯ ನಿರಾಕರಿಸಿದಾಗ ತನಗೆ ತಾನೇ ಸುಟ್ಟುಗೊಂಡು ಬೂದಿಯಾದಳಂತೆ. ಅವಳ ಚಿತಾಭಸ್ಮದಿಂದ ಹುಟ್ಟಿದ ಗಿಡದ ಹೂವು ಮತ್ತೆಂದೂ ಸೂರ್ಯನ ಮುಖ ನೋಡಬಾರದೆಂದು ರಾತ್ರಿಯೇ ಅರಳಿ, ಸೂರ್ಯ ಮೂಡುವುದರೊಳಗೆ ಧರೆಗೆ ಉರುಳುತ್ತದೆ.
ನನ್ನ ತವರಿನ ಕುಂದಾಪುರದ ಮನೆಯಲ್ಲೂ ಒಂದು ಪಾರಿಜಾತ ಗಿಡವಿತ್ತು, ನಾನು ಚಿಕ್ಕವಳಿರವಾಗಲೇ ಅದು ಮುದಿಯಾದಂತೆ ಕಾಣುತ್ತಿತ್ತು, ಯಾರು ನೆಟ್ಟರೋ ಗೊತ್ತಿಲ್ಲ, ಪ್ರಾಯದ ಕಾಲದಲ್ಲಿ ಹೇಗಿತ್ತೋ ತಿಳಿಯುತ್ತಿಲ್ಲ, ಹೂಬಿಡಲು ಮಾತ್ರ ಚೌಕಾಸಿ ಇಲ್ಲ, ಸಂಜೆಯಾಗುತ್ತಿದ್ದಂತೆ ಗೆಲ್ಲು, ಗೆಲ್ಲುಗಳಲ್ಲಿ ಎಲೆಗಳ ಮಧ್ಯೆ ಅಡಗಿದ ಪಾರಿಜಾತ ಮೊಗ್ಗುಗಳನ್ನು ಕೀಳುವ ಕೆಲಸ ನನ್ನದು, ಅದೂ ೬ ಗಂಟೆಯೊಳಗೆ ಕೀಳಬೇಕು, ಇಲ್ಲದಿದ್ದರೆ ಅರಳತೊಡಗುತ್ತದೆ, ಚಂದ್ರನನ್ನು ಕಾಣತ್ತಿದ್ದಂತೆ ಹಿಗ್ಗುವ ಅಭ್ಯಾಸ ಪಾರಿಜಾತದ್ದು, ಅದಕ್ಕಾಗಿಯೇ ಇರಬೇಕು ‘ಇರುಳು ಮಲ್ಲಿಗೆ’ ಎನ್ನುವ ಹೆಸರೂ ಇದೆ. ಪಾರಿಜಾತದ ಮೊಗ್ಗುಗಳನ್ನು ಬಾಳೆ ನಾರಿನಿಂದಲೋ, ಹಗ್ಗದಿಂದಲೋ ಕಟ್ಟಲು ಕಷ್ಟ, ನಾಜೂಕಾದ ಪುಟ್ಟ ತೊಟ್ಟನ್ನು ಸೂಜಿ ನೂಲಿನಲ್ಲಿ ಒಂದೊಂದಾಗಿ ಪೋಣಿಸಿ ಮಾಲೆ ಮಾಡಬೇಕು. ಇದು ಸುಲಭದ ಕೆಲಸ, ಆದರೂ ತಾಳ್ಮೆ ಬೇಕು, ಕಟ್ಟಿದ ಮಾಲೆಯನ್ನು ದೇವರಿಗಿಟ್ಟು ದೀಪ ಹಚ್ಚಿದಾಗ ಏನೋ ಸಾರ್ಥಕತೆ. ರಾತ್ರಿ ಮಲಗುವ ಮೊದಲು ದೇವರ ಫೋಟೋದಲ್ಲಿದ್ದ ಮಾಲೆಯನ್ನು ತುಳಸಿಕಟ್ಟೆಯ ಮೇಲೆ ಇರಿಸುತ್ತಿದ್ದಳು ಅಮ್ಮ. ರಾತ್ರಿ ಬೀಳುವ ಹನಿಗಳಲ್ಲಿ ಮಿಂದ ಮೊಗ್ಗುಗಳು ಗುಂಡಗಾಗಿ ಅರ್ಧಂಬರ್ಧ ಅರಳಿ ಬೆಳಗಾಗುತ್ತಿದ್ದಂತೆ ನಮ್ಮನ್ನು ನೋಡಿ ಮುಗುಳ್ನಗುತ್ತವೆ. ಅಂಗಳಕ್ಕೆ ಬಂದು ನೋಡಿದರೆ ಅಲ್ಲೆಲ್ಲ ಹರಡಿದ ಪೂರ್ತಿ ಅರಳಿದ ಪಾರಿಜಾತ ಹೂಗಳು. ಎಲಾ ಇದರ! ಎಲ್ಲಾ ಮೊಗ್ಗುಗಳನ್ನು ಕಿತ್ತೆ ಎಂದುಕೊಂಡರೂ ನನ್ನ ಕಣ್ಣುತಪ್ಪಿಸಿ ಮರದಲ್ಲೇ ಅರಳಿ ಮತ್ತೀಗ ನೆಲಕ್ಕುರುಳಿ ಚಿತ್ತಾರ ಬಿಡಿಸಿವೆ. ರಾತ್ರಿ ಸಣ್ಣದಾಗಿ ಮಳೆ ಬಂದಿದ್ದರಂತೂ ಹೂವಿಗೆ ಮುತ್ತಿಕ್ಕುತ್ತಿರುವ ಮಳೆ ಹನಿಗಳು. ಕೆಲವೊಂದು ಗಿಡದಲ್ಲೂ ಇವೆ, ಮತ್ತೆ ಹೂಗಳನ್ನು ಆರಿಸಿ ಬುಟ್ಟಿಯಲ್ಲಿ ಇಡುತ್ತಿದ್ದೆ, ಅಪ್ಪಯ್ಯ “ಕೃಷ್ಣಾಯ ನಮಃ” ಎನ್ನುತ್ತ ಕೃಷ್ಣನಿಗೆ ಅಲಂಕರಿಸುತ್ತಿದ್ದರು.
ಪಾರಿಜಾತ ಯಾವತ್ತೂ ನನ್ನೊಂದಿಗಿತ್ತು, ಶಾಲೆಗೆ ಹೊರಟಾಗ ಎಣ್ಣೆಹಚ್ಚಿ ಬಿಗಿಯಾಗಿ ಎರಡು ಜಡೆ ಕಟ್ಟಿ, ಎರಡು ಜಡೆಯನ್ನು ಸೇರಿಸಿ ದೇವರಿಗೇರಿಸಿದ ಪಾರಿಜಾತದ ದಂಡೆಯನ್ನು ಮುಡಿಸುತ್ತಿದ್ದಳು ಅಮ್ಮ. ಸೀತ, ಜ್ವರ ಬಂದಾಗ ಕಾಳುಮೆಣಸು, ಶುಂಠಿ, ಬೆಲ್ಲ, ಪಾರಿಜಾತದ ಎಲೆ ಸೇರಿಸಿ ಮಾಡಿದ ಬಿಸಿಬಿಸಿ ಕಷಾಯ ಕುಡಿಯುತ್ತಿದ್ದ ನೆನಪು. ಮದುವೆಯ ದಿನವೂ ಪಾರಿಜಾತದ ದಂಡು ಮುಡಿದೇ ಸಪ್ತಪದಿ ತುಳಿದೆ, ಬಸುರಿ ಸೀಮಂತದ ಶಾಸ್ತ್ರ ಮಾಡುವಾಗ ತಲೆ ಭಾರವಾಗುತ್ತಿದೆ ಎಂದರೂ ಅಮ್ಮ ಬಿಡದೆ ನಾಲ್ಕು ಹೂವನ್ನಾದರೂ ಮುಡಿದುಕೊ ಎನ್ನುತ್ತ ಬಿಡಿ ಹೂವನ್ನೇ ತಲೆಗೆ ಸಿಕ್ಕಿಸಿದ್ದಳು.
ಜೀವನದ ಓಟದ ದಿನಗಳು, ಮನೆ, ಮಕ್ಕಳು, ಕೆಲಸ, ಆಫೀಸು ಎನ್ನುತ್ತ ನನ್ನನ್ನೇ ನಾನು ಮರೆತಿದ್ದೆ, ಮರ, ಗಿಡ, ಹೂವು, ಪ್ರಕೃತಿಗೆಲ್ಲಿ ಸಮಯ? ಮತ್ತೆ ಎಲ್ಲವನ್ನೂ ನೆನಪು ಮಾಡಿಕೊಳ್ಳುವ ದಿನಗಳು ಬಂತು, ಓಟಕ್ಕೆ ಕಡಿವಾಣ ಬಿತ್ತು. ಬೆಂಗಳೂರಿನಲ್ಲಿ ಮನೆ ಕಟ್ಟಿ ಸೆಟ್ಲ್ ಆದಾಗ ಮರೆತುಹೋಗಿದ್ದ ಪಾರಿಜಾತ ಮತ್ತೆ ನೆನಪಾಯಿತು. ಬೆಂಗಳೂರಿನ ನರ್ಸರಿಗಳಲ್ಲಿ ಪಾರಿಜಾತದ ಗಿಡವಿತ್ತು, ಪಾರಿಜಾತದ ಪುಟ್ಟ ಗಿಡ ಮನೆಗೆ ಸಂತೋಷದಿಂದಲೇ ಬಂತು. ಕಾಂಪೌಂಡಿನ ಪಕ್ಕದಲ್ಲಿ ನೆಟ್ಟ ಗಿಡ ನೋಡುನೋಡುತ್ತಿದ್ದಂತೆ ದೊಡ್ಡದಾಯಿತು. ನನಗಿಂತಲೂ ಎತ್ತರವಾಯಿತು. ನೀರುಣಿಸಿದಾಗ ಖುಷಿಯಿಂದ ಓಲಾಡುತ್ತಿತ್ತು, ಇಲ್ಲದಿದ್ದರೆ ಬೇಜಾರು ಪಟ್ಟುಕೊಂಡಂತೆ ಬಾಡುತ್ತಿತ್ತು. ಪ್ರೀತಿಯಿಂದ ಎಲೆಗಳನ್ನು ಸವರಿದರೆ `ನೀವು ಮನುಷ್ಯರು ನಮ್ಮಿಂದ ಸ್ವಲ್ಪ ದೂರ ಇರಿ’ ಎನ್ನುವಂತೆ ಕೈತುರಿಸಿ ನಮ್ಮನ್ನು ದೂರವಿಡಲು ಪ್ರಯತ್ನಿಸುವ ಎಲೆಗಳು, ಇರಲಿ ಎನ್ನುತ್ತ ದೂರ ನಿಂತು ಮಾತಾಡಿಸುತ್ತಿದ್ದೆ. ೨-೩ ವರ್ಷಗಳಲ್ಲಿ ಚಿಗುರುಗಳಲ್ಲಿ ಮೊಗ್ಗುಗಳು ಕಾಣಿಸಿದವು, ಮನೆಮಗಳು ಬಸುರಿಯಾದ ಸಂಭ್ರಮ. ಇದನ್ನು ನೋಡಿ ನಮಗಿಂತ ಹೆಚ್ಚು ಸಂತೋಷ ಪಟ್ಟವರೆಂದರೆ ನೆರೆಮನೆಯವರು, ಅಕ್ಕಪಕ್ಕ ಕ್ರಾಸಿನವರು. ಒಂದು ಬೆಳಗ್ಗೆ ನೋಡಿದರೆ ಹೂವುಗಳೆಲ್ಲಾ ಅರಳಿ ಉದುರಿತ್ತು, ಅದರೊಂದಿಗೆ ಸಣ್ಣದಾಗಿ ಹರಡಿದ ಸುಗಂಧ. ಗಿಡದ ಬುಡದಲ್ಲಿ ಹೂ ಆಯ್ದುಕೊಳ್ಳುತ್ತಿರುವ ಹೆಂಗಸರು, ಬಿದ್ದ ಹೂವಾದರೂ ದೇವರಿಗಿಟ್ಟರೆ ಶ್ರೇಷ್ಠವೆನ್ನುತ್ತ ಚೀಲದಲ್ಲಿ ಹೂ ತುಂಬಿಸಿಕೊಂಡು ಹೊರಟರು. ನಮ್ಮ ಮನೆಯ ಅಂಗಳದ ಪಾರಿಜಾತವಾದರೇನಂತೆ ಸೇರುವುದು ದೇವರ ಕೋಣೆ ತಾನೇ? ದೇವರ ಕೋಣೆ ನಮ್ಮ ಮನೆಯದ್ದಾದರೇನು, ಬೇರೆಯವರದ್ದಾದರೇನು ಎಂದುಕೊಂಡು ನಾನೂ ಸುಮ್ಮನಿದ್ದೆ. ಕೊರೋನಾ ಬಂದಾಗ ಹೂ ಇರಲಿ ಎಲೆ, ಕುಡಿಯನ್ನೂ ಕಷಾಯಕ್ಕೆಂದು ಕಿತ್ತರು.
ಈ ಮಧ್ಯೆ ನನ್ನ ನಂಬಿಗೆ ಅಲುಗಾಡಿಸುವ ಘಟನೆ ನಡೆಯಿತು, ನಮ್ಮ ಮನೆಗೆ ಬಂದಿದ್ದ ಮಹಿಳೆಯೊಬ್ಬರಿಗೆ ಅರಿಸಿನ, ಕುಂಕುಮದ ಜೊತೆಗೆ ಪಾರಿಜಾತ ಹೂ ಕೊಟ್ಟೆ “ಅಯ್ಯೋ ಈ ಹೂವನ್ನು ಮುಡಿಯಬಾರದು, ಇದಕ್ಕೆ ಸತ್ಯಭಾಮೆಯ ಶಾಪವಿದೆ, ದೇವರಿಗೆ ಮಾತ್ರ ಶ್ರೇಷ್ಠ” ಎಂದಾಗ ಬೇಜಾರಾಯಿತು. ಬಾಲ್ಯದಲ್ಲಿ ಉದ್ದುದ್ದ ಮಾಲೆ ಕಟ್ಟಿ ಮುಡಿಯುತ್ತಿದ್ದ ನೆನಪಾಯಿತು. ನಮ್ಮ ಕರಾವಳಿಯ ಕಡೆ ವರ್ಷದಲ್ಲಿ ಒಂದು ದಿನವಾದರೂ ಪಾರಿಜಾತವನ್ನು ಮುಡಿಯಬೇಕು ಎನ್ನುವ ನಂಬಿಕೆ. ಇಲ್ಯಾಕೆ ಹೀಗೆ? ಬೇಸರವಾಯಿತು, ಮತ್ತೇನು ಮಾಡಲು ಸಾಧ್ಯ? ಅವರವರ ನಂಬಿಕೆ ಅವರವರದ್ದು.
ಈಗ ನೋಡಿದರೆ ನಮ್ಮ ಮನೆಯ ಪಾರಿಜಾತ ಸೊರಗುತ್ತಿದೆ, ಗಿಡ ಕಟ್ಟಿಗೆಯಂತಾದಾಗ ನನ್ನ ಪತಿಯೆಂದರು “ಗಿಡ ಕಡ್ಸಿ ಬಿಡೋಣ, ಇದೇ ಜಾಗದಲ್ಲಿ ಮತ್ತೊಂದು ಗಿಡ ತಂದು ನೆಟ್ಟರಾಯಿತು” ಎಂದರು. ಆದರೂ ಪಾರಿಜಾತ ಸೊರಗಿದ್ದೇಕೆ ಎನ್ನುವ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು, ಕೆಲವರೆಂದರು “ಯಾರದ್ದೋ ಕಣ್ಣು ಬಿದ್ದಿರಬೇಕು”.
ಉರಿ ಬೇಸಿಗೆಯ ದಿನಗಳು, ಬೆಂಗಳೂರಿನಲ್ಲಿ ಗುಡುಗು ಸಿಡಿಲಿನ ಮಳೆ ಬಂತು, ಗಿಡಮರಗಳು ಮಳೆಯಲ್ಲಿ ಮಿಂದೆದ್ದವು, ಎರಡೇ ದಿನಕ್ಕೆ ಪಾರಿಜಾತ ಗಿಡದಲ್ಲಿ ಚಿಗುರು ಕಾಣಿಸಿತು. ಇಷ್ಟು ದಿನ ಮಳೆ ನೀರಿಗಾಗಿ ಕಾದಿತ್ತೇ ಪಾರಿಜಾತ? ಕಾರ್ಪೋರೇಷನ್ ನೀರು ಉಸಿರು ಗಟ್ಟಿಸುತ್ತಿತ್ತೇ ಪಾರಿಜಾತಕ್ಕೆ? ಏನೇ ಇರಲಿ ಚಿಗುರಿದ ಪಾರಿಜಾತದಲ್ಲಿ ಮತ್ತೆ ಹೂವರಳಿತು, ಸುತ್ತ ದುಂಬಿಗಳು ಹಾರಾಡಿದವು, ಹಕ್ಕಿಗಳೂ ಹತ್ತಿರ ಬಂದವು. ಹೂ ಆಯ್ದುಕೊಳ್ಳಲು ಅಕ್ಕಪಕ್ಕದ ಮನೆಯ ಹೆಂಗಸರೂ ಬಂದರು.