ಪ್ರಜಾಪ್ರಭುತ್ವ ಪದ್ಧತಿಯಲ್ಲಿ ದೃಢವಾದ ವಿರೋಧಪಕ್ಷಕ್ಕೆ ಅವಕಾಶ ಇದ್ದೇ ಇರುತ್ತದೆ. ಅದರಲ್ಲಿ ಸತ್ತ್ವವೂ ಹೊಣೆಗಾರಿಕೆಯೂ ಇರಬೇಕಾದುದೂ ಆವಶ್ಯಕ. ಆದರೆ ಜನತೆಯೊಡನೆ ಸಂವಹನಸಂಪರ್ಕವನ್ನೇ ಕಳೆದುಕೊಂಡು ತಾವೇ ಅತಂತ್ರ ಸ್ಥಿತಿಯಲ್ಲಿರುವ ಪಕ್ಷಗಳಿಂದ ರಾಷ್ಟ್ರಮಟ್ಟದ ವಿರೋಧಪಕ್ಷ ಒಕ್ಕೂಟಕ್ಕೆ ಎಷ್ಟು ಬಲ ಬರಬಲ್ಲದು?
ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಪಶ್ಚಿಮಬಂಗಾಳ, ತಮಿಳುನಾಡು, ಕೇರಳಗಳಲ್ಲಿ ಭಾಜಪಾಕ್ಕೆ ಹಿನ್ನಡೆಯಾದುದರ ಹಿಂದುಗೂಡಿ ರಾಷ್ಟ್ರವ್ಯಾಪಿ ವಿರೋಧಪಕ್ಷ ಒಕ್ಕೂಟವೊಂದರ ರಚನೆಯ ಹಂಬಲ ಚಿಗುರೊಡೆಯಿತು – ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲಿಯೂ ಆಗುವಂತೆ. ೨೦೧೯ರ ಚುನಾವಣೆಗಳ ಮುಂಚೆಯೂ ಇಂತಹ ಪ್ರಯಾಸ ನಡೆದಿತ್ತು. ಈಗಲಾದರೋ ಅಂತಹ ಒಕ್ಕೂಟವೊಂದಕ್ಕೆ ಚಾಲನೆ ನೀಡಬಹುದಾಗಿದ್ದ ಮತ್ತು ದೆಹಲಿಯಲ್ಲಿ ಸೇರಿದ್ದ ಎಂಟು ಸಾದಿಲ್ವಾರುಗಳ ಪೈಕಿ ಏಕೈಕ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಖಭಂಗಗೊಂಡು ಅಂಗಾತ ಮಲಗಿದೆ. ಇದೀಗ ಒಕ್ಕೂಟ ರಚನೆಗೆ ಚಾಲನೆ ನೀಡಲು ಮುಂದಾಗಿರುವ ಎನ್.ಸಿ.ಪಿ. ನಾಯಕ ಶರದ್ ಪವಾರರ ಪ್ರಭಾವದ ಮರವಜ್ರ ಹಲವು ಪಕ್ಷಗಳನ್ನು ಬೆಸೆಯಬಲ್ಲಷ್ಟು ಗಟ್ಟಿಯಾಗಿಲ್ಲ. ರೈಲುಡಬ್ಬಿಗಳ ‘ಲೂಸ್ ಷಂಟಿಂಗ್’ ರೀತಿಯ ಮೇಳನವನ್ನು ಆಧರಿಸಿದ ಚಂದ್ರಶೇಖರ್, ದೇವೇಗೌಡ, ಗುಜ್ರಾಲ್ ಸರ್ಕಾರಗಳ ಪಾಡು ಏನಾಯಿತೆಂಬುದನ್ನು ಜನ ಮರೆತಿಲ್ಲ. ರಾಜ್ಯಗಳ ಮಟ್ಟದಲ್ಲಿ ಹಲವು ತಾತ್ಕಾಲಿಕ ಹೊಂದಾಣಿಕೆಗಳಿಗೆ ಅವಕಾಶವಿದೆಯೆನಿಸಬಹುದಾದರೂ ರಾಷ್ಟ್ರಮಟ್ಟದಲ್ಲಿ ಅದು ಶಕ್ಯವೆನಿಸುತ್ತಿಲ್ಲ.
ಪ್ರಜಾಪ್ರಭುತ್ವ ಪದ್ಧತಿಯಲ್ಲಿ ದೃಢವಾದ ವಿರೋಧಪಕ್ಷಕ್ಕೆ ಅವಕಾಶ ಇದ್ದೇ ಇರುತ್ತದೆ.ಆದರೆ ಅದರಲ್ಲಿ ಸತ್ತ್ವವೂ ಹೊಣೆಗಾರಿಕೆಯೂ ಇರಬೇಕಾಗುತ್ತದೆ. ಈಗ ಕಾಂಗ್ರೆಸ್ ಪಕ್ಷವೇ ಟ್ವಿಟ್ಟರ್ ಚಟುವಟಿಕೆಗೆ ಸೀಮಿತವಾಗಿದ್ದು ತನ್ನ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗದಷ್ಟು ನಿಸ್ತೇಜವಾಗಿದೆ; ಜನತೆಯೊಡನೆ ಸಂವಹನಸಂಪರ್ಕವನ್ನೇ ಕಳೆದುಕೊಂಡಿದೆ. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮಾಡಿದಂತೆ ಉತ್ತರಪ್ರದೇಶದಲ್ಲಿ ಮಾಯಾವತಿ, ಅಖಿಲೇಶ್ ಯಾದವ್ ಪಕ್ಷಗಳನ್ನು ಒಗ್ಗೂಡಿಸಬಲ್ಲ ಸೂತ್ರವಾವುದೂ ಇಲ್ಲ ಮತ್ತು ಮುಸ್ಲಿಂ ವಲಯಗಳನ್ನೆಲ್ಲ ಒಮ್ಮುಖಗೊಳಿಸಲಾಗುವ ಸಂಭವವೂ ಇಲ್ಲ. ಇಂತಹದೇ ಶೈಥಿಲ್ಯಗಳು ಆಂಧ್ರ ಮೊದಲಾದೆಡೆಗಳಲ್ಲೂ ಇದೆ; ಕರ್ನಾಟಕದಲ್ಲಂತೂ ಕಾಂಗ್ರೆಸಿನ ಸಿದ್ದರಾಮಯ್ಯ-ಡಿ.ಕೆ.ಶಿ. ಬಣಗಳೇ ಒಗ್ಗೂಡಲಾಗುತ್ತಿಲ್ಲ. ಕೇಂದ್ರ ಕಾಂಗ್ರೆಸಿಗೆ ಅವು ಹೇಗೆ ತಾನೆ ಬಲ ನೀಡಿಯಾವು? ತಾವೇ ಅತಂತ್ರ ಸ್ಥಿತಿಯಲ್ಲಿರುವ ಪಕ್ಷಗಳಿಂದ ರಾಷ್ಟ್ರಮಟ್ಟದ ವಿರೋಧಪಕ್ಷ ಒಕ್ಕೂಟಕ್ಕೆ ಎಷ್ಟು ಬಲ ಬರಬಲ್ಲದು? ಹೀಗೆ ಶರದ್ ಪವಾರರ ಸಾರಥ್ಯವಾಗಲಿ ಹತಪ್ರಭ ಯಶವಂತಸಿನ್ಹರ ಸಾಹಚರ್ಯವಾಗಲಿ ಪ್ರಶಾಂತಕಿಶೋರರ ತಂತ್ರಗಾರಿಕೆಯಾಗಲಿ ವಿರೋಧಪಕ್ಷ ಒಕ್ಕೂಟಕ್ಕೆ ದೋಹದ ನೀಡಲಾಗುವ ಸಂಭವ ಕಡಮೆ.
ಅಸ್ಸಾಮಿನಲ್ಲಿ ಮೂರು ತಿಂಗಳಷ್ಟೆ ಹಿಂದೆ ತರಾತುರಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಏರ್ಪಟ್ಟಿದ್ದ ಏಳು ವಿಪಕ್ಷಗಳ ಮಹಾಕೂಟದಿಂದ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಹೊರಬಂದಿದೆ. ಕೆಲವು ಪಕ್ಷಗಳಂತೂ ‘ಆಳುವ ಪಕ್ಷದ ಸಂಗಡ ಇರುವುದೇ ನಮ್ಮ ಧೋರಣೆ’ ಎಂದೇ ಸಾರಿವೆ! ಇಂತಹ ನಂಟಸ್ತಿಕೆಗಳಿಂದ ಕಾಂಗ್ರೆಸ್ ಬಲಗೊಂಡೀತೆ?
ಕಳೆದ ಜೂನ್ ಕೊನೆಯ ವಾರದಲ್ಲಿ ದೆಹಲಿಯ ಶರದ್ ಪವಾರರ ನಿವಾಸದಲ್ಲಿ ಯಶವಂತಸಿನ್ಹರ ‘ರಾಷ್ಟ್ರ ಮಂಚ್’ ಹೆಸರಿನಲ್ಲಿ ಕರೆಯಲಾಗಿದ್ದ ‘ಸಮಾನಮನಸ್ಕರ ಸಮಾವೇಶ’ವೆಂಬ ಅಷ್ಟಗ್ರಹಕೂಟದ ಫಲಿತಾಂಶ ಅಷ್ಟೇನು ಆಶಾದಾಯಕವಾಗದುದನ್ನು ಗಮನಿಸಿ ಈಗ “ಅದೊಂದು ಸ್ನೇಹಕೂಟವಾಗಿತ್ತೇ ಹೊರತು ರಾಜಕೀಯೋದ್ದೇಶದ ಸಭೆಯಾಗಿರಲಿಲ್ಲ” ಎಂದು ಆಯೋಜಕರು ಹೇಳತೊಡಗಿದ್ದಾರೆ.
ಎರಡು ಗಂಟೆಗಳ ಸಮಾವೇಶದಲ್ಲಿ ಆತಿಥೇಯ ಶರದ್ ಪವಾರರು ಒಮ್ಮೆಯೂ ತುಟಿ ಎರಡುಮಾಡದೆ ಮೌನವಾಗಿ ಉಳಿದಿದ್ದರು. ವಿಪಕ್ಷಗಳ ವೆಲ್ಡಿಂಗಿಗೆ ಯುಕ್ತ ಸಮಯ ಕೂಡಿಬಂದಿಲ್ಲವೆಂದು ಅವರಿಗೆ ಅನಿಸಿರಲೂಬಹುದು. ಇದೀಗ ವಿಪಕ್ಷ ಸಮುದಾಯರಥವನ್ನು ಎಳೆಯಬಲ್ಲವರು ಬಹುಶಃ ಶರದ್ ಪವಾರ್ ಮಾತ್ರ.
ಉದ್ದಿಷ್ಟ ಒಕ್ಕೂಟ ರಚನೆಯ ಸಾಧ್ಯತೆಗೆ ಮೂಲಭೂತ ಪ್ರತಿಕೂಲತೆಗಳಿವೆ. ಎಲ್ಲಕ್ಕೂ ಮಿಗಿಲಾಗಿ ಈ ಅಷ್ಟಗ್ರಹಕೂಟದಲ್ಲಿ ಎಲ್ಲರೂ ಒಪ್ಪುವ ಮತ್ತು ರಾಷ್ಟ್ರಮಟ್ಟದ ನಾಯಕರೆಂದು ಬಿಂಬಿಸಲಾಗುವ ಎತ್ತರದ ವ್ಯಕ್ತಿ ಯಾರೂ ಇಲ್ಲ. ಪ್ರಾದೇಶಿಕ ಪಕ್ಷಗಳ ನಡುವೆಯೇ ಹಲವಾರು ವಿಷಯಗಳಲ್ಲಿ ತೀವ್ರ ಭಿನ್ನಾಭಿಮತಗಳಿವೆ. ರಾಷ್ಟ್ರಸ್ತರದಲ್ಲಿ ಅಂಗೀಕಾರ್ಯವಾಗಬಹುದಾದ ಪ್ರಣಾಳಿಕೆ-ಕಥನದ ಬಗೆಗೆ ಮಾತೇ ಇಲ್ಲ. ಹೇಗೋ ಪಕ್ಷಗಳನ್ನು ಒಟ್ಟು ಹಾಕಿದರೂ, ಹಿನ್ನೆಲೆಯಲ್ಲಿ ಗೌಣಸ್ಥಾನದಲ್ಲಷ್ಟೇ ಉಳಿಯಲು ಕಾಂಗ್ರೆಸ್ ಒಪ್ಪೀತೆ? ಇದೀಗ ದೇಶವಿಡೀ ಸಾಂಕ್ರಾಮಿಕದ ಆಘಾತದಿಂದಾಗಿ ತತ್ತರಿಸಿರುವಾಗ ಆರ್ಥಿಕತೆಯ ಪುನರುಜ್ಜೀವನಕ್ಕಾಗಲಿ ಉದ್ಯೋಗಸೃಷ್ಟಿಗಾಗಲಿ ಸಾಮಾಜಿಕ ಭದ್ರತೆಯ ದೃಢೀಕರಣಕ್ಕಾಗಲಿ ತಮ್ಮ ನೀಲನಕ್ಷೆ ಏನೆಂಬ ಬಗೆಗೆ ಒಂದು ಮಾತನ್ನೂ ಆಡದ ಒಕ್ಕೂಟವು ಜನರಲ್ಲಿ ಅಲ್ಪ ವಿಶ್ವಸನೀಯತೆಯನ್ನಾದರೂ ಗಳಿಸುವುದು ಶಕ್ಯವೆ?
ಹಿಂದಿನ ವರ್ಷಗಳ ಸೂತ್ರೀಕರಣಗಳು ಗತಾರ್ಥವಾಗಿವೆಯೆಂದೂ ಈಗ ಸಮಾಜ ಹೆಚ್ಚು ಜಾಗೃತವಾಗಿದೆಯೆಂದೂ ಮಾತಿನ ಮೋಡಿಗಳೂ ಕುಟಿಲೋಪಾಯಗಳೂ ಈಗ ಸಫಲಗೊಳ್ಳಲಾರವೆಂದೂ ಈಗಿನ ಅಗ್ರಣಿಗಳು ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಮುಂಬಯಿಯಲ್ಲಿ ಪ್ರಶಾಂತ ಕಿಶೋರ್-ಶರದ್ ಪವಾರ್ ಭೇಟಿಯ ತರುವಾಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯದ ಅಧ್ಯಕ್ಷರೂ ಪ್ರಾಸಪ್ರಿಯರೂ ಆದ ರಾಮದಾಸ ಆಠವಳೆ ಈ ಮುಕ್ತಕವನ್ನು ಹೊರಹಾಕಿದರು:
“ಪ್ರಶಾಂತಕಿಶೋರ್ ಕೋ ಮತ್ ಬನೋ ಆದಿ;
ನರೇಂದ್ರ ಮೋದಿ ಹೈ ಪಕ್ಕೇ ಅಂಬೇಡ್ಕರ್ವಾದೀ;
೨೦೨೪ ಪಿಎಂ ಫಿರ್ ಸೇ ಬನೇಗಾ ಮೋದಿ.”