ಯಥಾ ನದೀನಾಂ ಪ್ರಭವಃ ಸಮುದ್ರಃ
ಯಥಾssಹುತೀನಾಂ ಪ್ರಭವೋ ಹುತಾಶನಃ |
ಯಥೇಂದ್ರಿಯಾಣಾಂ ಪ್ರಭವಂ ಮನೋsಪಿ
ತಥಾ ಪ್ರಭುರ್ನೋ ಭಗವಾನುಪೇಂದ್ರಃ ||
– ಭಾಸ : ಮಧ್ಯಮವ್ಯಾಯೋಗ
“ಎಲ್ಲ ನದಿಗಳ ಹರಿವೂ ಸಮುದ್ರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಲ್ಲ ಆಹುತಿಗಳೂ ಯಜ್ಞೇಶ್ವರನನ್ನು ಸೇರುತ್ತವೆ. ಎಲ್ಲ ಇಂದ್ರಿಯಕಾರ್ಯಗಳೂ ಮನಸ್ಸಿನಿಂದಲೇ ಸಂಚಾಲಿತವಾಗುವವು. ಅದರಂತೆ ಮನುಷ್ಯರ ಎಲ್ಲ ಚಟುವಟಿಕೆಗಳೂ ಸಫಲಗೊಳ್ಳುವುದು ಉಪೇಂದ್ರ ಎಂದರೆ ವಿಷ್ಣುವಿನ ಅನುಗ್ರಹದಿಂದ.”
ಬೇರೆಯವರು ಮೆಚ್ಚಲಿ ಎಂಬ ದೃಷ್ಟಿಯೇ ಸರ್ಜನಶೀಲತೆಗೆ ಘಾತಕ
ಒಂದು ದೇವಾಲಯದ ದ್ವಾರವನ್ನು ಅಸಾಧಾರಣವಾಗಿಯೂ ಅತ್ಯಂತ ಸುಂದರವಾಗಿಯೂ ನಿರ್ಮಿಸಬೇಕೆಂದು ವ್ಯವಸ್ಥಾಪಕರು ನಿರ್ಧರಿಸಿದರು. ಅದಕ್ಕೆ ತುಂಬಾ ವಿಶೇಷವಾದ ನಮೂನೆಯನ್ನು ಸಿದ್ಧಪಡಿಸಿಕೊಡಲು ಆ ಪ್ರಾಂತದ ವಿಖ್ಯಾತ ಕಲಾವಿದನನ್ನು ಕರೆಯಿಸಿದರು. ಚಿತ್ರಕಾರನದು ತನ್ನ ಪ್ರಮುಖ ಶಿಷ್ಯನನ್ನು ಸಂಗಡ ಇರಿಸಿಕೊಂಡು ಚಿತ್ರಗಳನ್ನು ರಚಿಸುವುದು ರೂಢಿ. ಅದರಂತೆ ಕೆಲಸವನ್ನು ಆರಂಭಿಸಿದ. ಶಿಷ್ಯನು ಅನುಮೋದಿಸಿದ ಮೇಲೆ ಕಲಾವಿದ ಚಿತ್ರಣವನ್ನು ಮುಂದುವರಿಸುತ್ತಿದ್ದ. ಆದರೆ ಈಗ ಹಲವು ಚಿತ್ರಾಕೃತಿಗಳನ್ನು ರಚಿಸಿದರೂ ಅವು ಯಾವುದೂ ಶಿಷ್ಯನ ದೃಷ್ಟಿಯಲ್ಲಿ ಸಮರ್ಪಕವೆನಿಸದೆ ಅವನ್ನು ವಿಸರ್ಜಿಸಿ ಹೊಸದಾಗಿ ಆರಂಭಿಸಬೇಕಾಯಿತು. ಹೀಗೆ ಹಲವು ಬಾರಿ ನಡೆಯಿತು. ನಿಗದಿಯಾದ ಸಮಯ ಮುಗಿಯುತ್ತ ಬಂದಿತ್ತು.
ಆ ಹಂತದಲ್ಲಿ ಒಮ್ಮೆ ಚಿತ್ರರಚನೆಗೆ ಅವಶ್ಯವಿದ್ದ ವಿಶೇಷ ಬಣ್ಣಗಳನ್ನು ಸಿದ್ಧಪಡಿಸಿಕೊಡುವಂತೆ ಶಿಷ್ಯನಿಗೆ ಕಲಾವಿದನು ಆದೇಶಿಸಿದ. ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿ ತರಲು ಶಿಷ್ಯನು ನೆರೆಯೂರಿಗೆ ಹೋದ.
ಶಿಷ್ಯನು ಹಿಂದಿರುಗುವಷ್ಟರಲ್ಲಿ ಕಲಾವಿದನು ಚಿತ್ರವನ್ನು ಪೂರ್ಣಗೊಳಿಸಿದ್ದ! ಈ ಸಲ ಚಿತ್ರ ಅತ್ಯಂತ ಸಮರ್ಪಕವಾಗಿದೆಯೆಂದು ಶಿಷ್ಯನು ಆನಂದದಿಂದ ಉದ್ಗರಿಸಿದ.
ಅನಂತರ ಶಿಷ್ಯನು ಗುರುವನ್ನು ಕುತೂಹಲದಿಂದ ಪ್ರಶ್ನಿಸಿದ:
“ಈ ರಚನೆಯನ್ನು ಇದಕ್ಕೆ ಮುಂಚೆಯೇ ಮಾಡಬಹುದಿತ್ತಲ್ಲ? ಹಾಗೆ ಏಕೆ ಆಗಲಿಲ್ಲ?”
ಗುರುವು ಮುಗುಳ್ನಕ್ಕು ಉತ್ತರಿಸಿದ:
“ಆಗಬಹುದಿತ್ತು. ಆದರೆ ಈ ಚಿತ್ರರಚನೆ ಬೇರೆ ಹಿಂದಿನ ಕೆಲಸಗಳಂತಲ್ಲದೆ ದೈವಸಂಬಂಧಿಯಾದದ್ದು,ಪಾವಿತ್ರ್ಯಭಾವನೆಯನ್ನು ಅಪೇಕ್ಷಿಸುವಂಥದು. ನೀನು ನನ್ನ ಸಂಗಡ ಪಕ್ಕದಲ್ಲಿ ಇರುತ್ತಿದ್ದುದೇ ಒಂದು ಆತಂಕವಾಗಿ ಪರಿಣಮಿಸಿತ್ತು. ನೀನು ಜೊತೆಯಲ್ಲಿ ಇದ್ದಷ್ಟು ಹೊತ್ತೂ ನಾನು ದೊಡ್ಡ ಕಲಾನಿಪುಣ ಎಂಬ ಅಹಂಕಾರವೂ ಚಿತ್ರವನ್ನು ಮುಗಿಸಬೇಕಾಗಿದೆಯೆಂಬ ಒತ್ತಡವೂ ಚಿತ್ರವು ನಿನಗೂ ಸಮ್ಮತವಾಗಬೇಕೆಂಬ ಭಾವನೆಯೂ ನನಗರಿವಿಲ್ಲದೆಯೇ ನನ್ನಲ್ಲಿ ತುಂಬಿರುತ್ತಿತ್ತು. ಹಾಗೆ ಪೂರ್ಣ ಸಮರ್ಪಣೆ ಸಾಧ್ಯವಾಗುತ್ತಿರಲಿಲ್ಲ, ಸ್ಫೂರ್ತಿಯ ಕೊರತೆಯಾಗುತ್ತಿತ್ತು. ನೀನು ಬಣ್ಣಗಳ ತಯಾರಿಗಾಗಿ ಹೊರಗೆ ಹೋದಾಗ ನಾನು ನಿನ್ನನ್ನೂ ಕೆಲಸದ ಒತ್ತಡವನ್ನೂ ಎಲ್ಲವನ್ನೂ ಮರೆತು ದೈವಕ್ಕೆ ನನ್ನನ್ನು ಪೂರ್ತಿ ಅರ್ಪಿಸಿಕೊಳ್ಳುವುದು ಸಾಧ್ಯವಾಗಿ ಸಹಜಸ್ಫೂರ್ತಿ ಏರ್ಪಟ್ಟು ನಾನು ಸಂಕಲ್ಪಿಸಿದ್ದ ಚಿತ್ರವು ರೂಪಗೊಂಡಿತು.”
ಬೇರೆಯವರು ಮೆಚ್ಚಲಿ ಎಂಬ ದೃಷ್ಟಿಯೇ ಸರ್ಜನಶೀಲತೆಗೆ ಘಾತಕವಾಗುತ್ತದೆ!