ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2015 > ಮುಗಿಲಿನತ್ತ ಉಗುಳು

ಮುಗಿಲಿನತ್ತ ಉಗುಳು

ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ ಒಬ್ಬ ಕ್ರೈಸ್ತಪಾದರಿಯ ಮನೆಗೆ ಅಭ್ಯಾಗತರಾಗಿ ಹೋಗಿದ್ದರು. ಆತ ಒಂದು ಮೇಜಿನ ಮೇಲೆ ಬೈಬಲ್ ಮೊದಲಾದ ಗ್ರಂಥಗಳನ್ನು ಪೇರಿಸಿ ಅವೆಲ್ಲದರ ಕೆಳಗೆ ಭಗವದ್ಗೀತೆಯನ್ನು ಇಟ್ಟಿದ್ದ. ಅದರ ಕಡೆಗೆ ಅವಹೇಳನಕರವಾಗಿ ಬೊಟ್ಟುಮಾಡಿ ಆತ ಹೇಳಿದ: “ನೋಡಿ, ನಿಮ್ಮ ಭಗವದ್ಗೀತೆ ಎಲ್ಲಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.” ಸ್ವಾಮಿಜೀ ಕ್ಷಣಮಾತ್ರವೂ ತಡವರಿಸದೆ ಬಾಣದಂತೆ ಉತ್ತರಿಸಿದರು: “ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಗವದ್ಗೀತೆಯು ಎಲ್ಲಕ್ಕಿಂತ ಕೆಳಗೆ ಸ್ಥಿರವಾಗಿ ಇರುವುದರಿಂದಲೇ ಉಳಿದೆಲ್ಲ ಗ್ರಂಥಗಳೂ ಹೀಗೆ ನಿಲ್ಲುವುದು ಸಾಧ್ಯವಾಗಿದೆ.”

ಭಗವದ್ಗೀತೆಯನ್ನು ನಿಂದಿಸಿದರೆ ಮುಗಿಲಿನತ್ತ ಉಗುಳಿದಂತಷ್ಟೆ ಆದೀತು.

ಭಗವದ್ಗೀತೆಯನ್ನು ಸುಡಿರಿ ಎಂದು ಒಬ್ಬ ಬುದ್ಧಿಜೀವಿ ಹೇಳಿದರು. ಮನುಸ್ಮೃತಿಯನ್ನು ಮೊದಲು ಸುಡಿರಿ ಎಂದು ಜೀವಮಾನವೆಲ್ಲ ಹೇಳಿಕೆಗಳನ್ನು ನೀಡುವುದನ್ನೇ ಧಂದೆಯಾಗಿಸಿಕೊಂಡಿರುವ ಪ್ರೊಫೆಸರರು ಅಪ್ಪಣೆಕೊಡಿಸಿದರು. ಇಷ್ಟಕ್ಕೂ ಇವರ ಕೈಗೆ ಅಡ್ಡಿಯೇನು? ಐವತ್ತು ಪೈಸೆಗೆ ಬೆಂಕಿಪೊಟ್ಟಣ ಸಿಗುತ್ತದೆ. ಆದರೆ ಕೆಲವು `ಲಾಜಿಸ್ಟಿಕಲ್’ ಸಮಸ್ಯೆಗಳು ತೋರಬಹುದು. ಮನುಸ್ಮೃತಿಯನ್ನು ಹಿಂದೆಯೇ ಸುಟ್ಟದ್ದು ಆಗಿದೆಯಲ್ಲವೆ? ಒಮ್ಮೆ ಸುಟ್ಟ ಮೇಲೆ ಮತ್ತೆ ಸುಡಲು ಅದನ್ನು ಎಲ್ಲಿಂದ ತರುತ್ತೀರಿ?

ದೇಶವೆಲ್ಲ ಗೌರವಿಸುವ ಗ್ರಂಥವನ್ನು ಟೀಕಿಸಿದರೆ ನಾನು ಅದಕ್ಕಿಂತ ಎತ್ತರದವನೆಂಬುದು ಸಿದ್ಧಪಡುತ್ತದೆ – ಎಂಬುದು ತರ್ಕವೆ? ಅಷ್ಟು ದೊಡ್ಡ ಕೃತಿಯನ್ನು ಟೀಕಿಸುವೆನೆಂದರೆ ನಾನು ಅದಕ್ಕಿಂತ ಉನ್ನತನೆನಿಸುತ್ತೇನೆ – ಎಂದೆ? ಸಮಾಜವನ್ನೆಲ್ಲ ಉದ್ರೇಕಗೊಳಿಸುವಂತಹ ಏನನ್ನಾದರೂ ಹೇಳುತ್ತಿರಬೇಕು – ಎಂಬುದು ಉದ್ದೇಶವೆ? ಇದೂ ನೆರವೇರದು;

ಏಕೆಂದರೆ ಉದ್ರೇಕವು ನೆಲೆಗೊಂಡಿರುವುದು ಇವರೊಳಗಡೆ ಮಾತ್ರ. ಇವರ ಅಪಲಾಪಗಳ ಬಗೆಗೆ ಉಳಿದವರದು ದಿವ್ಯನಿರ್ಲಕ್ಷ್ಯವಷ್ಟೆ. ಅವು ಉತ್ತರಕ್ಕೆ ಯೋಗ್ಯವೆಂದೂ ಹೆಚ್ಚುಮಂದಿಗೆ ಅನಿಸುವುದಿಲ್ಲ. ಆವೇಶದಿಂದಲೊ ಕೋಪದಿಂದಲೊ ಸ್ವಪ್ರತಿಷ್ಠಾಕಾಮನೆಯಿಂದಲೊ ಆಡುವ ಅಪದ್ಧಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.

ಕೋಪವನ್ನು ಕುರಿತು ವೇದಾಂತದಲ್ಲಿ ಒಂದು ಉಕ್ತಿಯಿದೆ: “ನಮೋsಸ್ತು ಕೋಪದೇವಾಯ ಸ್ವಾಶ್ರಯಜ್ವಾಲಿನೇ ಭೃಶಮ್” – ಎಂದು. ತನಗೆ ಆಸರೆ ನೀಡಿರುವವರನ್ನೇ ಸುಡುವುದು – ಎಂಬುದು ಕೋಪದ ಲಕ್ಷಣನಿರೂಪಣೆ.

ಭಗವದ್ಗೀತೆಯು ಮತ-ಧರ್ಮಾದಿಗಳಿಂದಲೂ ಅತೀತವಾದ ತಾತ್ತ್ವಿಕ ಎಂದರೆ `ಮೆಟಫಿಸಿಕಲ್’ ವಾಙ್ಮಯವೆಂಬ ಪ್ರಾಥಮಿಕ ತಥ್ಯವನ್ನೂ ಗ್ರಹಿಸದ ಮತ್ತು ಎಲ್ಲದರಲ್ಲಿಯೂ ಜಾತಿಯನ್ನೇ ಕಾಣುವ ಈ ವಿಚಾರವಾದಿಗಳ ಕೂಗಾಟಗಳು ವಿನೋದಕರವೆಂದಷ್ಟೆ ಹೇಳಬಹುದು. “ಗೀತೆಯ ವಿಚಾರ ತಡೆಯಲು ಸಾಧ್ಯವಿಲ್ಲ. ಬದಲಿಗೆ ಅದನ್ನು ನಿರ್ಲಕ್ಷ್ಯ ಮಾಡಬೇಕು, ಆಗ ಅದು ತಾನಾಗಿ ನಾಶವಾಗುತ್ತದೆ” ಎಂದಿದೆ `ನ್ಯಾಯಕ್ಕಾಗಿ ನಾವು’ ಎಂಬ ಸದ್ಯೋಜಾತ ವೇದಿಕೆ. ಆದರೆ ಏನು ಮಾಡೋಣ, ಇವರ ಈ ಮಾರ್ಗದರ್ಶನ ಐದಾರು ಸಾವಿರ ವರ್ಷ ತಡವಾಗಿ ಬಂದಿದೆ.?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ