ಭಾರತೀಯ ಜನತಾ ಪಕ್ಷ ತಾನೇ ಯು.ಪಿ.ಎ.-ಪ್ರವರ್ತಿತ ಈ ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿತ್ತು. ಈಗ ಭಾರತೀಯ ಜನತಾ ಪಕ್ಷದ ಸರ್ಕಾರವೇ ಭಿನ್ನ ನಿಲವನ್ನು ತಳೆದಿರುವುದು ವಿಸ್ಮಯಕರ. ಭಾಜಪ ಬೆಂಬಲದಿಂದಲೇ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದ್ದ ಶಾಸನವೊಂದು ಕೆಲವೇ ತಿಂಗಳಲ್ಲಿ ಅಲ್ಪಕಾಲದಲ್ಲಿ ಭಾಜಪಕ್ಕೆ ದೋಷಪೂರ್ಣವೆನಿಸಿದುದು ಕೌತುಕ.
ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ವಿಷಯ ಜಮೀನು ಅಧಿಗ್ರಹಣ ಕಾಯ್ದೆಗೆ ಕಳೆದ (೨೦೧೪) ಡಿಸೆಂಬರಿನಲ್ಲಿ ಕೇಂದ್ರಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಘೋಷಿಸಿದ ತಿದ್ದುಪಡಿಗಳು. ಅದು ಸಂಸತ್ತಿನ ಅಂಗೀಕಾರ ಪಡೆಯಬೇಕಾಗಿದೆ. ಬಜೆಟ್ ಅಧಿವೇಶನ ಆರಂಭವಾದೊಡನೆ ಕೇಂದ್ರಸರ್ಕಾರದ ಧೋರಣೆಯನ್ನು ಎಲ್ಲ ಅಧಿಕಾರೇತರ ಪಕ್ಷಗಳೂ ತೀಕ್ಷ್ಣವಾಗಿ ವಿರೋಧಿಸಿದವು. ಇದೊಂದು ವಿಕಟ ಸನ್ನಿವೇಶ. ಒಂದುಕಡೆ ತಿದ್ದುಪಡಿಯನ್ನು ವಿರೋಧಿಸುತ್ತಿರುವವರೆಲ್ಲ ರಾಜಕೀಯ ದೃಷ್ಟಿಯಿಂದಷ್ಟೆ ಮಾತನಾಡುತ್ತಿದ್ದಾರೆ. ಇನ್ನೊಂದುಕಡೆ ಕೇಂದ್ರಸರ್ಕಾರದ ಕಡೆಯಿಂದ ಒಂದಷ್ಟುಮಟ್ಟಿನ ಶಿಷ್ಟತೆಯ ಉಲ್ಲಂಘನೆಯಾಗಿದೆ ಎಂಬ ಟೀಕೆ ನಿರಾಧಾರವೆನಿಸದು. ಹೀಗಾಗಿ ಬಹುತೇಕ ಚರ್ಚೆಗಳು ಪ್ರತಿಷ್ಠೆಯ ಆಧಾರದ ಮೇಲೆ ನಡೆಯುತ್ತಿವೆಯೇ ಹೊರತು ವಸ್ತುನಿಷ್ಠ ಪರಾಮರ್ಶನೆಯ ಆಧಾರದ ಮೇಲಲ್ಲ.
ಇಡೀ ಪ್ರಕರಣದ ಹಿನ್ನೆಲೆಯನ್ನು ಸಂಕ್ಷೇಪವಾಗಿ ನೋಡೋಣ.
ಜಮೀನು ಅಧಿಗ್ರಹಣಕ್ಕೆ ಸಂಬಂಧಿಸಿದಂತೆ ಹಿಂದಿನ ನೂರು ವರ್ಷಗಳಲ್ಲಿ ಚಾಲ್ತಿಯಲ್ಲಿದ್ದುದು ಹಳೆಯ (೧೮೯೪ರಷ್ಟು ಹಿಂದಿನ) ಸಾಮ್ರಾಜ್ಯಶಾಹಿ ದಿನಗಳ ಕಾಯ್ದೆ. ಆ ಕಾಯ್ದೆಯಂತೆ ನಾಮಮಾತ್ರದ ಪರಿಹಾರ ನೀಡಿ ಸರ್ಕಾರವು ಯಾವುದೇ ಜಮೀನನ್ನು ವಶಪಡಿಸಿಕೊಳ್ಳಬಹುದಾಗಿತ್ತು. ಈ ಮತ್ತು ಇತರ ವಿಪರ್ಯಾಸಗಳನ್ನು ನೇರ್ಪಡಿಸುವ ಆಶಯದಿಂದ ೨೦೦೭ರಲ್ಲಿ ಯು.ಪಿ.ಎ. ಸರ್ಕಾರವು ಜಮೀನುಗಳ ಅಧಿಗ್ರಹಣಕ್ಕೂ ಪರಿಹಾರಕ್ಕೂ ಸಂಬಂಧಿಸಿದಂತೆ ಹೊಸ ಎರಡು ಕಾನೂನುಗಳನ್ನು ಮಾಡಲು ಉಪಕ್ರಮಿಸಿತ್ತು. ಆದರೆ ಅದು ಮುಂದೆ ಸಾಗಲಿಲ್ಲ. ೨೦೧೧ರಲ್ಲಿ ಯು.ಪಿ.ಎ. ಸರ್ಕಾರ ತನ್ನ ದ್ವಿತೀಯಾವಧಿಯಲ್ಲಿ ಹಿಂದಿನ ಪ್ರಯತ್ನವನ್ನು ಪುನರುಜ್ಜೀವಿಸಿತು. ಆ ಹೊಸ ಮಸೂದೆಯನ್ನು ಸಂಸತ್ತಿನ ಭಾಜಪಾ ಅಧ್ಯಕ್ಷತೆಯ ಸ್ಥಾಯೀಸಮಿತಿಗೆ ಪರಿಶೀಲನೆಗಾಗಿ ಕಳಿಸಲಾಯಿತು. ವಿವಿಧ ವಲಯಗಳೊಡನೆ ಸಮಾಲೋಚನೆ ನಡೆಸಿದ ನಂತರ ಸ್ಥಾಯೀಸಮಿತಿಯು ಮೇ ೨೦೧೨ರಲ್ಲಿ ವರದಿ ಸಲ್ಲಿಸಿತ್ತು. ತದನುಗುಣವಾದ ಮಸೂದೆಯು ೨೦೧೩ರ ಸೆಪ್ಟೆಂಬರಿನಲ್ಲಿ ಉಭಯ ಸದನಗಳ ಅಂಗೀಕಾರ ಪಡೆದಿತ್ತು.
ಡಿಸೆಂಬರ್ ೨೯ರ ತಿದ್ದುಪಡಿಯ ಕೆಲವು ಅಂಶಗಳು ಮೂಲ ಕಾಯ್ದೆಯ ಆಶಯಕ್ಕೆ ಹೊಂದುವಂತಿಲ್ಲ ಎಂಬ ಟೀಕೆ ಕೇಳಿ ಬಂದಿದೆ.
ಸರ್ಕಾರದ ವಾದ
3-ಎ ಎಂದು ಹೊಸದಾಗಿ ಸೇರ್ಪಡೆಯಾಗಿರುವ ಪರಿಚ್ಛೇದದಡಿ ಯಲ್ಲಿ ಭೂ-ಅಧಿಗ್ರಹಣಕ್ಕೆ ಪ್ರೇರಕವಾದ `ಸಾರ್ವಜನಿಕ ಉದ್ದೇಶ’ ಎಂಬುದನ್ನೇ ವಿಸ್ತರಿಸಲಾಗಿದೆ; ಇದೀಗ ಕೃಷಿಗೆ ಬಳಕೆಯಾಗುತ್ತಿರುವ ಫಲವತ್ತಾದ ಜಮೀನಿನ ಅಧಿಗ್ರಹಣವನ್ನು ಸುಲಭಗೊಳಿಸಲಾಗಿದೆ. ಜಮೀನುಗಳನ್ನು ಬಿಟ್ಟುಕೊಡುವುದಕ್ಕೆ ಹಿಂದೆ ವಿಧಿಸಿದ್ದ `ಪೂರ್ವ-ಪರಿಶೀಲನೆ’ (ಸೋಷಿಯಲ್ ಇಂಪ್ಯಾಕ್ಟ್ ಅಸೆಸ್ಮೆಂಟ್) ಷರತ್ತನ್ನೇ ಕೈಬಿಡಲಾಗಿದೆ. ಅಭಿವೃದ್ಧಿಕ್ರಮಗಳನ್ನು ವೇಗಗೊಳಿಸುವ ಮತ್ತು ದೇಶದ ಭದ್ರತೆಗೆ ಆದ್ಯತೆ ನೀಡುವ ಹೆಸರಿನಲ್ಲಿ ಈ ವ್ಯಾಪಕ ತಿದ್ದುಪಡಿಗಳನ್ನು ತರಲಾಗಿದೆ.
`ಪಿ.ಪಿ.ಪಿ.’ (ಪಬ್ಲಿಕ್-ಪ್ರೈವೇಟ್-ಪಾರ್ಟ್ನರ್ಷಿಪ್)ವರ್ಗದ ಯೋಜನೆಗಳಿಗಾಗಿ ಜಮೀನನ್ನು ಅಧಿಗ್ರಹಣ ಮಾಡುವುದಕ್ಕೆ ಸಂಬಂಧಿತ ರೈತಕುಟುಂಬಗಳಲ್ಲಿ ಕನಿಷ್ಠ ಶೇ. ೭೦ರಷ್ಟು ಕುಟುಂಬಗಳಿಂದ ಪೂರ್ವಸಮ್ಮತಿ ಪಡೆಯಬೇಕೆಂದು ಕಾಯ್ದೆಯಲ್ಲಿ ವಿಧಿಸಲಾಗಿತ್ತು. (ಮೊದಲಿಗೆ ಶೇ. ೮೦ ಎಂದು ಇದ್ದದ್ದನ್ನು ಉದ್ಯಮಗಳ ಒತ್ತಡಕ್ಕೆ ಮಣಿದು ಶೇ. ೭೦ಕ್ಕೆ ಇಳಿಸಲಾಗಿತ್ತು); ಯುದ್ಧ, ಪ್ರಕೃತಿವಿಕೋಪಗಳಂತಹ ಸನ್ನಿವೇಶಗಳಿಗೆ ಇಂತಹ ಪೂರ್ವಸಮ್ಮತಿಯ ಷರತ್ತು ಅನ್ವಯಿಸದೆಂದು ಹೇಳಲಾಗಿತ್ತು. ಇದೀಗ ಜಾರಿಮಾಡಿರುವ ತಿದ್ದುಪಡಿಯಂತೆ `ಪಿ.ಪಿ.ಪಿ.’ ವರ್ಗದ ಯಾವುದೇ ಯೋಜನೆಗೆ ಬೇಕಾದರೂ ಸಂಬಂಧಿತರ ಪೂರ್ವಸಮ್ಮತಿ ಇಲ್ಲದೆಯೇ ಜಮೀನನ್ನು ವಶಪಡಿಸಿಕೊಳ್ಳಬಹುದಾಗಿದೆ. ಹಿಂದೆ ಇದ್ದ ನಿರ್ಬಂಧಗಳು ರೈತರ ಹಿತಕ್ಕಾಗಲಿ ಸಮಾಜಹಿತಕ್ಕಾಗಲಿ ಪೂರಕವಾಗಿರಲಿಲ್ಲ ಎಂದು ಸಮರ್ಥನೆ ನೀಡಲಾಗಿದೆ. ” These projects are essential for bringing in better economic opportunities for the people living in these areas and would also help in improving the quality of life ” ಎಂದು ಸರ್ಕಾರದ ಹೇಳಿಕೆ ಇದೆ.
೨೦೧೪ ಜನವರಿಯಲ್ಲಿ ಘೋಷಿತವಾಗಿದ್ದ ಶಾಸನದ ಕಾರ್ಯಾನ್ವಯದಲ್ಲಿ ವಿವಿಧ ರಾಜ್ಯಗಳು ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ವರದಿಯಾಗಿದೆ – ಎಂದು ಮೊಗುಮ್ಮಾಗಿ ಹೇಳಲಾಗಿದೆ. ಆದರೆ ಈ ನಿಯಮಗಳ ಸಾಧಕ-ಬಾಧಕಗಳ ಬಗೆಗೆ ಹಿಂದೆ ಸಂಸದೀಯ ಸ್ತರದಲ್ಲಿ ಕೂಲಂಕಷ ಚರ್ಚೆಗಳು ನಡೆದು ಉದಿಸಿದ್ದ ಸಮ್ಮತಿಯ ಆಧಾರದ ಮೇಲೆಯೇ ಈ ನಿಯಮಗಳನ್ನು ರೂಪಿಸಲಾಗಿದ್ದುದು. ಡಿಸೆಂಬರ್ ೨೯ರ ಅಧ್ಯಾದೇಶವು ಮೇಲಿನೆಲ್ಲ ಸಂಸದೀಯ ಪ್ರಕ್ರಿಯೆಯನ್ನು ಅಲಕ್ಷ್ಯಮಾಡಿದೆಯೆನ್ನಲಾಗಿದೆ.
ಕೇಂದ್ರವು ಈ ವಿಷಯದಲ್ಲಿ ಅಧ್ಯಾದೇಶದ ಮಾರ್ಗ ಅನುಸರಿಸಿ ರುವುದನ್ನು ಎಲ್ಲ ಅಧಿಕಾರೇತರ ಪಕ್ಷಗಳೂ ಟೀಕಿಸಿವೆ.
ಸಂದೇಹಾಸ್ಪದ ವಾದ
ಲಾಭಾಸಕ್ತ ಉದ್ಯಮಸಂಸ್ಥೆಗಳ ಕೈಗೆ ಸಾರ್ವಜನಿಕ ಜಮೀನು ವಶವಾಗುವ ಸಾಧ್ಯತೆಯನ್ನು ತಡೆಯುವ ದೃಷ್ಟಿಯಿಂದ ಜಮೀನುಗಳ ವ್ಯವಸ್ಥಿತ ವರ್ಗೀಕರಣ ಮೊದಲಾದ ಕ್ರಮಗಳನ್ನು ಸ್ಥಾಯೀ ಸಮಿತಿಯು ಸೂಚಿಸಿತ್ತು.
ಆದರೆ ಇದೀಗ ಘೋಷಿತವಾಗಿರುವ ತಿದ್ದುಪಡಿಯ ಮೂಲಕ ಈ ಕ್ರಮಗಳನ್ನು ಕೈಬಿಡಲಾಗಿದೆ. ಖಾಸಗಿ ಶಿಕ್ಷಣಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳು – ಮುಂತಾದವಕ್ಕೆ ಸರ್ಕಾರವು ತಾನು ಅಧಿಗ್ರಹಣ ಮಾಡಿಕೊಂಡ ನಿವೇಶನಗಳನ್ನು ನೀಡಬಹುದು – ಎಂದು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ. ಕೇಂದ್ರಸರ್ಕಾರವು ಉದ್ದೇಶಿಸಿರುವ `ಸ್ಮಾರ್ಟ್ ಸಿಟಿ’ ಯೋಜನೆಯ ಅನ್ವಯಕ್ಕೆ ಈ ಸವಲತ್ತುಗಳು ಅವಶ್ಯವೆಂದು ಹಣಕಾಸು ಮಂತ್ರಿ ಅರುಣ್ ಜೇಟ್ಲಿ ವಾದಿಸಿದ್ದಾರೆ. ಈ ವಾದಕ್ಕೆ ಗಟ್ಟಿ ಆಧಾರ ಇರುವುದು ಸಂದೇಹಾಸ್ಪದ. ಏಕೆಂದರೆ ಉದ್ದಿಷ್ಟ `ಸ್ಮಾರ್ಟ್ ಸಿಟಿ’ ರೂಪರೇಖೆಗಳು ಏನೆಂಬುದೇ ಇದುವರೆಗೆ ಸ್ಫುಟಗೊಂಡಿಲ್ಲ. `ಸ್ಮಾರ್ಟ್ ಸಿಟಿ’ಯ ಸ್ವರೂಪವೇನೆಂಬುದೇ ಅನಿಶ್ಚಿತವಿರುವಾಗ ಮುಕ್ತ ಜಮೀನು ಅಧಿಗ್ರಹಣವು ಅವೈಜ್ಞಾನಿಕವಾಗುವ ಸಂಭವ ಇಲ್ಲವೆ?
`ಸಾರ್ವಜನಿಕ ಉದ್ದೇಶ’ ಎಂಬ ಪರಿಭಾಷೆಯ ವ್ಯಾಪ್ತಿಯನ್ನು ಬೇಕೋಬಿಟ್ಟಿಯಾಗಿ ವಿಸ್ತರಿಸುವುದಕ್ಕೆ (ಈಗಿನ ಲೋಕಸಭೆಯ ಅಧ್ಯಕ್ಷರಾದ ಸುಮಿತ್ರಾ ಮಹಾಜನ್ ಅಧ್ಯಕ್ಷತೆಯ) ಸಂಸದೀಯ ಸ್ಥಾಯೀಸಮಿತಿಯು ವಿರೋಧಿಸಿತ್ತು. ಹೀಗೆ ಯುಪಿಎ ಸರ್ಕಾರಾವಧಿಯಲ್ಲಿ ಅಂಗೀಕೃತವಾಗಿದ್ದ ಜಾಗ್ರತೆಯ ಕ್ರಮಗಳು ಎನ್.ಡಿ.ಎ. ಹಯಾಮಿನಲ್ಲಿ ನಿರಸ್ತಗೊಂಡಿವೆ. ಅವಶ್ಯವಿರುವ ಸಂದರ್ಭಗಳಲ್ಲಿ ಸರ್ಕಾರದ ಯೋಜನೆಗಳಿಗಾಗಿ ಮಾತ್ರ ಸಾರ್ವಜನಿಕ ಜಮೀನಿನ ಅಧಿಗ್ರಹಣ ಆಗಬಹುದೆಂದೂ `ಪಿ.ಪಿ.ಪಿ.’ಗಳಿಗಾಗಲಿ ಖಾಸಗಿ ಉದ್ಯಮಿಗಳಿಗಾಗಲಿ ನೀಡುವ ಉದ್ದೇಶದಿಂದ ಜಮೀನು ಅಧಿಗ್ರಹಣ ಆಗಬಾರದೆಂದೂ ಯು.ಪಿ.ಎ. ಸರ್ಕಾರಾವಧಿಯ ಗ್ರಾಮೀಣಾಭಿವೃದ್ಧಿ ಸ್ಥಾಯೀಸಮಿತಿಯ ೩೧ನೇ ವರದಿಯು ನಿಲವನ್ನು ತಳೆದಿತ್ತು; ಜಮೀನಿನ ಅಧಿಗ್ರಹಣವೂ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಗ್ರಾಮಸಭೆಗಳೊಡನೆ ಸಮಾಲೋಚನೆ ನಡೆಯಬೇಕೆಂದೂ ನಿಗದಿಗೊಳಿಸಲಾಗಿತ್ತು.
ಆ ಸ್ಥಾಯೀಸಮಿತಿಯ ಹಲವಾರು ಶಿಫಾರಸುಗಳನ್ನು ಜನವರಿ ೨೦೧೪ರ LARRA ಶಾಸನ (Land Acquisition, Rehabilitation and Resettlement Act ೨೦೧೪) ತಿರಸ್ಕರಿಸಿತ್ತು. ಉಳಿದುಕೊಂಡಿದ್ದ ಹಲವು ಪ್ರಮುಖ ಜಾಗ್ರತೆ ಕ್ರಮಗಳನ್ನು ಡಿಸೆಂಬರ್ ೨೯ರ ತಿದ್ದುಪಡಿ ಕೈಬಿಟ್ಟಿದೆ. ಈಗ ಉಂಟಾಗಿರುವ ಪರಿಸ್ಥಿತಿಗಿಂತ ಹಿಂದಿನ ೧೮೯೪ರ ಕಾಯ್ದೆಯೇ ಹೆಚ್ಚು ಜನಹಿತಪರವಾಗಿತ್ತು – ಎಂಬ ವ್ಯಂಗ್ಯೋಕ್ತಿ ಕೇಳಬಂದಿದೆ.
`ಪಿಪಿಪಿ’ ವರ್ಗದ ಮತ್ತಿತರ ಉಪಕ್ರಮಗಳ ಫಲವಾಗಿ ರೈತರ ಜಮೀನುಗಳ ಮೌಲ್ಯ ಹೆಚ್ಚುತ್ತದೆ, ಉದ್ಯೋಗ ಹೆಚ್ಚುತ್ತದೆ, ಒಳಹಂದರ ಅಭಿವೃದ್ಧಿಯಿಂದ ಎಲ್ಲರಿಗೂ ಹೆಚ್ಚು ಸೌಕರ್ಯಗಳು ಲಭಿಸುತ್ತವೆ – ಎಂಬ ಜಾಡಿನಲ್ಲಿ ಕೇಂದ್ರ ಹಣಕಾಸು ಸಚಿವರು ಹೊಸ ತಿದ್ದುಪಡಿಗೆ ಸಮರ್ಥನೆ ನೀಡಿದ್ದಾರೆ.
ಭದ್ರತೆಗೆ ಸಂಬಂಧಿಸಿದ ಯೋಜನೆಗಳು ಮೊದಲಾದವಕ್ಕೆ ಪರವಾನಗಿಯನ್ನು ಕ್ಷಿಪ್ರವಾಗಿ ನೀಡಲು ಅವಕಾಶವಿರಬೇಕು – ಮೊದಲಾದ ಪರಿಗಣನೆಗಳನ್ನು ನಿರಾಧಾರವೆನ್ನುವಂತಿಲ್ಲ.
ಲೋಕಸಭೆಯಲ್ಲಿ ತೀಕ್ಷ್ಣ ವಿರೋಧ ಹೊಮ್ಮಿದ ಹಿನ್ನೆಲೆಯಲ್ಲಿ ಭಾಜಪಾ ಪಕ್ಷ ಸದಸ್ಯರ ಸಮಿತಿಯೊಂದನ್ನು ತಿದ್ದುಪಡಿಯ ಪುನರ್ವಿಮರ್ಶೆಗಾಗಿ ನೇಮಿಸಲಾಗಿದೆ.
ಉದ್ಯಮವಲಯಪಕ್ಷಪಾತಿ?
ತುಂಬಾ ದೊಡ್ಡ ಜನವರ್ಗದ ಹಿತಕ್ಕೆ ಸಂಬಂಧಿಸಿದ ಈ ಕಾನೂನು ವಿವಾದಕ್ಕೆ ಸಿಲುಕಿಕೊಂಡಿರುವುದು ದುರಂತ. ಅದಕ್ಕೂ ಮಿಗಿಲಾಗಿ ಇದು ವಾತಾವರಣವನ್ನೂ ಕಲುಷಿತಗೊಳಿಸುತ್ತಿದೆ. ಭಾಜಪಾ ಉದ್ಯಮವಲಯಪಕ್ಷಪಾತಿ ಎಂಬ ಅನಿಸಿಕೆಯನ್ನು ಉದ್ದಿಷ್ಟ ತಿದ್ದುಪಡಿ ಇನ್ನಷ್ಟು ಬಲಗೊಳಿಸುವ ಸಂಭವವಿದೆ. ಭಾಜಪಾದ ನಿಲವನ್ನು ಮಿತ್ರಪಕ್ಷಗಳೂ ವಿರೋಧಿಸಿರುವುದು ಸನ್ನಿವೇಶವನ್ನು ಹೆಚ್ಚು ಸಂಕೀರ್ಣವಾಗಿಸಿದೆ. ಇದೀಗ ಸರ್ವಪಕ್ಷ ಸಹಕಾರದ ಆವಶ್ಯಕತೆ ತುಂಬಾ ಇದೆ.
ಸಾರ್ವಜನಿಕ ವಲಯದಲ್ಲಿ ಸ್ವೀಕಾರ್ಯತೆಯ ಕೊರತೆ ಇದ್ದಲ್ಲಿ ಲೋಕಸಭೆಯಲ್ಲಿ ಸಾಂಖ್ಯಿಕ ಬಹುಮತವಿದ್ದರೂ ಹೆಚ್ಚಿನ ಪ್ರಯೋಜನವಾಗದು. ದೀರ್ಘಕಾಲೀನ ಪರಿಣಾಮದ ಸಂಭವವಿರುವ ಸುಧಾರಣೆಗಳ ಸ್ವರೂಪವನ್ನೂ ಆಶಯವನ್ನೂ ಸಾರ್ವಜನಿಕರಿಗೆ ವಿಶದಪಡಿಸಬೇಕಾದುದು ಸತ್ಸಂಪ್ರದಾಯ.
ಭಾಜಪಾ ತಾನೇ ಯು.ಪಿ.ಎ.-ಪ್ರವರ್ತಿತ ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿತ್ತು. ಈಗ ಭಾಜಪಾ ಸರ್ಕಾರವೇ ಭಿನ್ನ ನಿಲವನ್ನು ತಳೆದಿರುವುದು ವಿಸ್ಮಯಕರ. ಭಾಜಪಾ ಬೆಂಬಲದಿಂದಲೇ ಸಂಸತ್ತಿನಲ್ಲಿ ಅಂಗೀಕಾರ ಪಡೆದಿದ್ದ ಶಾಸನವೊಂದು ಕೆಲವೇ ತಿಂಗಳಲ್ಲಿ ಅಲ್ಪಕಾಲದಲ್ಲಿ ಭಾಜಪಾಕ್ಕೆ ದೋಷಪೂರ್ಣವೆನಿಸಿದುದು ಕೌತುಕ. ಇದಕ್ಕೆ ಸರ್ಕಾರ ನೀಡಿರುವ ಕಾರಣಗಳಲ್ಲಿ ಹೊಸ ಅಂಶಗಳೇನೂ ಇಲ್ಲ. ಕ್ಷಿಪ್ರ ಔದ್ಯಮಿಕ ಪ್ರಗತಿಗೆ ಅಂಗೀಕೃತ ಶಾಸನ ಪೂರಕವಾಗಿಲ್ಲವೆಂಬ ಲಾಘವದ ಧೋರಣೆ ಪರ್ಯಾಪ್ತವಲ್ಲ. ಇದರಲ್ಲಿ ಮುತ್ಸದ್ದಿತನ ಕಾಣುತ್ತಿಲ್ಲ. ಉದ್ದಿಷ್ಟ ಬದಲಾವಣೆಗಳನ್ನು ಸಾರ್ವಜನಿಕ ವಿಮರ್ಶೆಗೆ ನೀಡಿ ಗಂಭೀರ ಸಮಾಲೋಚನೆಗೆ ಅವಕಾಶ ಮಾಡುವುದು ಹಿತಕರವಾದೀತು.?