ಪುಟ್ಟ ಬಾಯಿಯು ಹವಳ ತುಟಿಗಳು
ದೃಷ್ಟಿ ತಾಗುವ ಚಲುವೆ ಅವಳು
ನೀಳ ನಾಸಿಕ ಹೊಳೆವ ನತ್ತು
ಕಮಲ ದಳಗಳೆ ಕಂಗಳು
ಪುಟ್ಟ ಬಾಯಿ, ಬಾಯಿಗೆ ತಕ್ಕುದಾದ ಅಂದದ ತುಟಿಗಳು, ನೀಳವಾದ ಮೂಗು, ಅರಳು ಕಂಗಳು – ಹೀಗೆ ಎಲ್ಲವೂ ಲಕ್ಷಣವಾಗಿದ್ದಾಗ ಮಾತ್ರ ಮುಖದ ಸೊಬಗು ಹೆಚ್ಚುತ್ತದೆ. ಆದ್ದರಿಂದಲೇ ದೇವರು ಕೊಟ್ಟ ಕಣ್ಣು, ಮೂಗು, ಬಾಯಿ ನೆಟ್ಟಗೆ ಇಟ್ಟುಕೊಳ್ಳಿ ಎಂದು ಹಿಂದೆ ನಮಗೆಲ್ಲ್ಲ ಹಿರಿಯರು ಹೇಳುತ್ತಿದ್ದುದುಂಟು.
ಸೌಂದರ್ಯಾಭಿಲಾಷಿಗಳು ಚಂದ ಕಾಣುವ ಆಶಯದಿಂದ ತುಸು ಸರಿಯಿಲ್ಲವೆನಿಸಿದರೂ ತಮ್ಮ ಮೂಗು, ತುಟಿ, ಬಾಯಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಅದಕ್ಕಾಗಿ ಸಾಕಷ್ಟು ತೊಂದರೆ ಹಾಗೂ ನೋವು ಅನುಭವಿಸಿರುವುದನ್ನೂ ಕೇಳುತ್ತಿರುತ್ತೇವೆ. ಹಾಗೆಯೇ ತಮ್ಮ ಸೌಂದರ್ಯದ ಬಗ್ಗೆ ಅಭಿಮಾನ ಪಡುವವರು ಅನೇಕರಿದ್ದಾರೆ. ಈ ಕೊರೋನಾದಿಂದಾಗಿ ಮೂಗು ಬಾಯಿಗೆ ದಪ್ಪ ಗವಸು ಹಾಕಿ ಕಿವಿಯಿಂದ ಕಿವಿಗೆ ಎಳೆದುಕೊಂಡರೆ ಮುಖದಲ್ಲಿ ಆ ಗವಸು ಬಿಟ್ಟು ಮತ್ತೇನು ಚಂದ ಕಂಡೀತು! ಸದ್ಯದ ಪರಿಸ್ಥಿತಿಯಲ್ಲಿ ಉಸಿರಾಡುವಂತಿದ್ದರೆ ಅಷ್ಟೇ ನಮ್ಮ ಪುಣ್ಯ. ಪ್ರಾಣ ಒಂದು ಉಳಿದುಕೊಂಡರೆ ಚಂದದ ಬಗ್ಗೆ ಮತ್ತೆ ಯೋಚಿಸಬಹುದು ಎಂಬ ಅಭಿಪ್ರಾಯ ಸರಿಯಾದದ್ದೇ. ಇದ್ದ ಸೌಂದರ್ಯವನ್ನು ತಿದ್ದಿ ತೀಡಿ ಹೋಗುವುದಾದರೂ ಎಲ್ಲಿಗೆ? ಸಾವಿನ ರಣಕೇಕೆ ನಡೆದಿರುವಾಗ ಮೂಗು-ಬಾಯಿ ಬಿಟ್ಟುಕೊಂಡು ಓಡಾಡುವುದು ಸರಿಯೆ… ಯಾವ ಮಾಯದಲ್ಲಿ ಅಂತ್ಯ ಹೇಗೆ ಬಂದು ಅಡರುತ್ತದೋ ಬಲ್ಲವರಾರು… ಆದ್ದರಿಂದ ಪಾಪದ ಬಾಯಿಯ ಬವಣೆಯನ್ನು ಕೇಳುವವರಾರು! ಆದರೂ ಬಾಯಿಯ ಮಹಿಮೆಯನ್ನು ಬಾಯಿ ತುಂಬಾ ಹೊಗಳಲೇಬೇಕು. ಬಾಯಿಗೂ ಬೇಸರವಾಗಬಾರದಲ್ಲ.
ವಿಚಕ್ಷಣತೆ
ಮೂವತ್ತೆರಡು ಹಲ್ಲುಗಳ ನಡುವೆ ನಾಲಿಗೆಯನ್ನಿಟ್ಟುಕೊಂಡು ಹಲ್ಲುಗಳು ಪರಸ್ಪರ ತಾವೇ ಜಗಳ ಮಾಡಿಕೊಂಡು ಚೂರಾಗದಂತೆ, ಹಾಗೆಯೇ ನಾಲಿಗೆಯನ್ನು ಕಚ್ಚದಂತೆ, ಒಳಗೆ ತುಂಬಿಕೊಳ್ಳುವ ಜೊಲ್ಲುರಸ ಹೊರಗೆ ಚೆಲ್ಲದಂತೆ ತನ್ನ ತುಟಿ ಎಂಬ ಕವಾಟಗಳಿಂದ ಮುಚ್ಚುತ್ತಾ ಈ ಬಾದಾಮಿ ಆಕಾರದ ಬಾಯಿ ನಮ್ಮನ್ನು ಜೋಪಾನವಾಗಿ ನೋಡಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಬೇಕಾಗುವ, ದೇಹಕ್ಕಲ್ಲದಿದ್ದರೂ ಬಾಯಿಚಪಲಕ್ಕೆ ತಿನ್ನಬಯಸುವ ಎಲ್ಲ ಆಹಾರ ಪದಾರ್ಥಗಳನ್ನೂ ಈ ಬಾಯಿಯೇ ಸ್ವೀಕರಿಸಿ, ತನ್ನೊಳಗಿರುವ ಹಲ್ಲುಗಳ ಮೂಲಕ ಚೆನ್ನಾಗಿ ಅಗಿದು ನುಣ್ಣಗಾಗಿಸಿ ನಾಲಿಗೆಯ ಮೂಲಕ ನಮಗೆ ರುಚಿಯ ಅನುಭವ ಮಾಡಿಕೊಟ್ಟು ನಂತರ ಜೀರ್ಣಾಂಗಕ್ಕೆ ಕಳುಹಿಸಿಕೊಡುತ್ತದೆ. ನಾವು ಬಾಯಿಯೊಳಗೆ ಹಾಕಿಕೊಂಡು ಪಚಪಚನೆ ಅಗಿದಿದ್ದು ಬೇರೆಯವರಿಗೆ ಕಂಡು ಅಸಹ್ಯವಾಗದಂತೆ ತುಟಿಗಳನ್ನು ಮುಚ್ಚಿ ನಮ್ಮ ಗೌರವವನ್ನು ಕಾಪಾಡುತ್ತದೆ. ಆದರೆ ಉಬ್ಬು ಹಲ್ಲಿದ್ದರೆ ತುಟಿ ಮುಚ್ಚಲಾಗದೆ ಹೇಗಾದರೂ ಮುಚ್ಚಿಕೊಳ್ಳಲು ಬಾಯಿ ವ್ಯರ್ಥ ಪ್ರಯತ್ನ ನಡೆಸುತ್ತದೆ. ದಂತವೈದ್ಯರು ಮುಂದೆ ಬಂದ ಹಲ್ಲುಗಳನ್ನು ಹೇಗೋ ತಂತಿಯ ಬೇಲಿಹಾಕಿ ಆಚೀಚೆ ಮುರಿದು ಒಟ್ಟಾರೆ ತುಟಿಯೊಳಗೆ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಪಡಬಾರದ ಯಾತನೆ, ಕಿರಿಕಿರಿಯೊಂದಿಗೆ ಒಂದಿಷ್ಟು ಸಾವಿರಗಳು ಕೈ ಬಿಟ್ಟು ಹೋಗುತ್ತವಷ್ಟೆ.
ಹೀಗೆ ಬಾಯಿ ಮುಚ್ಚಿಕೊಳ್ಳಲಾಗದಿದ್ದರೆ ಹಲ್ಲಿನ ನಡುವೆ ಇರುವ ಆಹಾರ ಪದಾರ್ಥಗಳು, ಹುಳುಕು ಹಲ್ಲುಗಳು ಏನೆಲ್ಲವನ್ನೂ ನಮ್ಮೆದುರು ಬಂದವರು ನೋಡಲೇಬೇಕಿತ್ತು. ಆದರೆ ಈಗ ಬಾಯಿಬಿಟ್ಟರೆ ಬಣ್ಣಗೇಡಾಗುವುದು ತಪ್ಪುವಂತಾಗಿದೆ. ನಾವು ಹಾಕಿಕೊಳ್ಳುವ ಬಾಯಿಗವಸು ಹಲ್ಲುಗಳಿಗೆ ಪರದೆ ಹಿಡಿಯುವ ಕೆಲಸವನ್ನು ಬಲು ಅಚ್ಚುಕಟ್ಟಾಗಿ ಮಾಡುತ್ತಿದೆ. ಮುರಿದ, ಡೊಂಕಾದ, ಕಪ್ಪಾದ ಹಲ್ಲುಗಳನ್ನು, ಖಾಲಿ ಬಿದ್ದ ಹಲ್ಲುಕುಳಿಗಳನ್ನೂ ನೋಡಲೇಬೇಕಾದ ಅನಿವಾರ್ಯತೆಯಿಂದ ರಕ್ಷಿಸುತ್ತದೆ. ಬೇರೆಯವರು ನಮ್ಮ ಮಾತಿಗೆ ನಗುತ್ತಾರೋ, ತುಟಿ ಕೊಂಕಿಸುತ್ತಾರೋ, ಬಾಯಿ ಓರೆ ಮಾಡುತ್ತಾರೋ ಏನೊಂದೂ ನಮಗೆ ತಿಳಿಯುವುದೇ ಇಲ್ಲ. ಹಾಗೆಯೇ ಬೇರೆಯವರ ಮಾತಿಗೆ ಇಷ್ಟವಿರಲಿ-ಬಿಡಲಿ ನಗಲೇಬೇಕಾದ ಆಗ್ರಹ ನಮಗಿರುವುದಿಲ್ಲ. ಅದಕ್ಕಾಗಿಯೇ ಕಂಗಳಲ್ಲೇ ನಗು ತುಳುಕಿಸುವ, ವ್ಯಂಗ್ಯ ಪ್ರದರ್ಶಿಸುವ ತರಬೇತಿಯ ಕಾರ್ಯಾಗಾರ ಆನ್ಲೈನ್ನಲ್ಲೂ ಸಿದ್ಧವಾಗುತ್ತಿರಬಹುದು.
ನಮ್ಮ ಬಾಯಿಯ ದುರ್ವಾಸನೆ ಬೇರೆಯವರಿಗೆ ತಟ್ಟದಂತೆ ದೂರೀಕರಿಸುವ ಈ ಮಾಸ್ಕ್ ಮಾತನಾಡುವಾಗ ಕೆಲವೊಮ್ಮೆ ಸಹಿಸಲೇಬೇಕಾಗಿದ್ದ ಎಂಜಲು ಪ್ರೋಕ್ಷಣೆಯಿಂದ ನಮ್ಮನ್ನು ರಕ್ಷಿಸುತ್ತದೆ. ಮಂತ್ರಕ್ಕಿಂತ ಉಗುಳೇ ಹೆಚ್ಚು ಎನ್ನುವವರ ಕರಕರೆ ನಮಗಿರದು. ಆದರೆ ತಾಯಿಗೆ ಬಾಯಲ್ಲಿ ಜಗವನ್ನೇ ತೋರಬಲ್ಲ ಕಂದಮ್ಮಗಳಿಗೂ ಬಾಯಿಗವಸು ಹಾಕಬೇಕೆಂದರೆ ಮನಸ್ಸು ತೀರಾ ಮುದುಡುತ್ತದೆ.
ನಿಯಂತ್ರಣ
ಬಾಯಿ ಮುಚ್ಚು ಎನ್ನುವುದು ಮೌನವಾಗಿರು ಎಂಬ ಅರ್ಥದಲ್ಲಿಯೇ ಹೆಚ್ಚು ಬಳಕೆಯಾಗುತ್ತಿದೆ. ನಾವೆಲ್ಲಾ ಚಿಕ್ಕವರಿರುವಾಗ ಶಾಲೆಯಲ್ಲಿ ಮಾಸ್ತರು, ಕೈ ಕಟ್ಟಿ ಬಾಯಿ ಮುಚ್ಚಿ ಎಂದ ಕೂಡಲೇ ತುಟಿಪಿಟಕ್ ಎನ್ನದೆ ಗಪ್ಚಿಪ್ ಆಗಿ ಕುಳಿತುಬಿಡುತ್ತಿದ್ದೆವು. ಬಾಯಿ ಬಿಟ್ಟರೆ ಬೆತ್ತದ ಸೇವೆ ಸಾಂಗವಾಗಿ ನೆರವೇರುತ್ತದೆನ್ನುವ ಭಯ. ಒಟ್ಟಾರೆ ಬಾಯಿ ಮಾತನಾಡುವ ಹಾಗೂ ತಿನ್ನುವ ತನ್ನ ಎರಡು ಕ್ರಿಯೆಗಳಿಗೂ ಪ್ರಸಿದ್ಧವಾಗಿದೆ.
ತುಂಬಾ ಮಾತನಾಡುವವರಿಗೆ, ಎಲ್ಲರ ಸುದ್ದಿಯನ್ನು ಹರಡುವವರಿಗೆ, ಅವರ ಬಾಯಿ ಬೊಂಬಾಯಿ ಎಂದು ಘೋಷಿಸಿಬಿಡುತ್ತೇವೆ. ಅವರ ಬಾಯಿಗೆ ಬಿದ್ದರೆ ಉಗಿದು ಉಪ್ಪಿನಕಾಯಿ ಹಾಕಿಬಿಡ್ತಾರೆ ಎಂದು ಪ್ರ(ಕು)ಖ್ಯಾತಿ ಹೊಂದಿರುವವರ ಬಗ್ಗೆ ಎಚ್ಚರಿಕೆಯಿಂದಿರುವುದು ನಮ್ಮ ಹಿತದೃಷ್ಟಿಯಿಂದ ಒಳ್ಳೆಯದೆನಿಸುತ್ತದೆ. ಅವರಿಗೆ ಗೊತ್ತಿದ್ದರೂ ಒಂದು ವಿಷಯವನ್ನೂ ಬಾಯಿ ಬಿಡುವುದಿಲ್ಲ ಎನ್ನುವಾಗ ಅವರು ಮತ್ತೊಬ್ಬರ ವ್ಯಕ್ತಿಗತ ವಿಷಯಗಳನ್ನು ಹೇಳಲಿಚ್ಛಿಸುವುದಿಲ್ಲ ಎಂಬ ಅರ್ಥ ಧ್ವನಿಸುತ್ತದೆ. ಬಾಯಿ ಬಿಡಿಸುವುದರಲ್ಲಿ ಆರಕ್ಷಕ ಇಲಾಖೆ ನೈಪುಣ್ಯವನ್ನು ಸಾಧಿಸಿದೆ. ವಿಮಾನ ಹತ್ತಿಸಿ, ಹೊಗೆ ಹಾಕಿ, ಕೈಕಾಲಿಗೆ ಏಟು ಕೊಟ್ಟು ಕೆಲವೊಮ್ಮೆ ನಿರಪರಾಧಿಗಳ ಬಾಯಿಯಿಂದಲೂ ತಮಗೆ ಬೇಕಾದಂತೆ ಅಪರಾಧದ ವಿಷಯಗಳನ್ನು ಹೊರಡಿಸುವುದೂ ಉಂಟು.
ದಂತವೈದ್ಯರ ಬಳಿ ಬಾಯಿಕಳೆದುಕೊಂಡೇ ಇರುವ ಆ ಶಿಕ್ಷೆ… ಅಬ್ಬಬ್ಬ… ಒಮ್ಮೆ ಬಾಯಿ ಮುಚ್ಚಿದರೆ ಸಾಕೆಂಬ ಆ ತಹತಹ… ಮತ್ತೆ ಬಾಯಿ ಮುಚ್ಚಲಾದೀತೆ ಎಂಬ ಆತಂಕ… ಬಾಯಿ ಮುಚ್ಚಿಕೊಂಡಿರುವುದರಲ್ಲೇ ಎಂತಹ ಆರಾಮದ ಭಾವ ಇದೆ ಎಂದು ಆ ಹೊತ್ತಿನಲ್ಲಿ ಅನ್ನಿಸಿಯೇ ಅನಿಸುತ್ತದೆ.
ಬಾಯಿಬಿಟ್ಟರೆ ಮುತ್ತು ಸುರಿದೀತು ಎಂಬಂತೆ ಮಿತವಾಗಿ ಬಾಯಿ ಬಿಡುವವರೂ ಇದ್ದಾರೆ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂಬ ದಾಸರ ಪದ, ನಾಲಿಗೆ ಬಾಯಿಯ ಅಂಕೆಯಲ್ಲಿದ್ದರೆ ಒಳ್ಳೆಯದು ಎಂಬ ಸಂದೇಶವನ್ನು ಕೊಡುತ್ತದೆ. ಕೆಲವರ ಬಾಯಿಗೆ ತಡೆಯೇ ಇಲ್ಲದಿರುವಾಗ ಅವರ ಮಾತನ್ನು ಕೇಳುತ್ತಾ ನಾವು ಬಾಯಿಗೆ ಬೀಗ ಹಾಕಿಕೊಂಡು ಇರುವ ಸ್ಥಿತಿ ಬಂದುಬಿಡುತ್ತದೆ. ಬಾಯಿ ಇದ್ದವರು ಬರಗಾಲದಲ್ಲೂ ಬದುಕಬಲ್ಲರು ಎಂದಾಗ ಬಾಯಿಗೆ ಕೃತಕೃತ್ಯತೆಯ ಅನುಭವ. ಬೇರೆಯವರ ಬಾಯಿಗೆ ನಾವು ಕಿವಿಯಾಗಬೇಕು ಎಂದರೆ ಬೇರೆಯವರ ಮಾತನ್ನು ಕೇಳುವ ಸಹನೆ ನಮ್ಮಲ್ಲಿರಬೇಕು. ಹೇಳಿದ್ದೇ ಹೇಳೋ ಕಿಸಬಾಯಿದಾಸರು ನಾವಾಗದಂತೆ ಅನಾವಶ್ಯಕವಾಗಿ ಬೇರೆಯವರಿಗೆ ಉಪದೇಶ ಮಾಡುವ ಉಸಾಬರಿಯನ್ನು ಬಿಟ್ಟುಬಿಡಬೇಕು.
ಮಾರಕವಲ್ಲ, ತಾರಕ
ಉತ್ತರ ಕರ್ನಾಟಕದಲ್ಲಿ ಬಾಯವರು ಎನ್ನುವುದನ್ನು ಬಾಯಿ ಹೆಚ್ಚು ಮಾಡುವವರು ಎಂಬ ವಿಶೇಷ ಅರ್ಥದಲ್ಲಿ ಕಲ್ಪಿಸಿಕೊಳ್ಳಬೇಕಾಗಿಲ್ಲ. ಹಾಗೆಯೇ ಮಾತೆಯರು ಎಂದು ಗೌರವದಿಂದ ಹೇಳುತ್ತಾರೆಯೇ ಹೊರತು ಅದಕ್ಕಾಗಿ ನಾವು ಕುಂಬಳಕಾಯಿ ಕಳ್ಳನಂತೆ ಕಸಿವಿಸಿ ಪಡಬೇಕಾಗಿಲ್ಲ. ಒಂದು ವೇಳೆ ಮಹಿಳೆಯರದ್ದು ಮಾತು ಹೆಚ್ಚು ಎಂದುಕೊಂಡರೂ ಪರಸ್ಪರ ಕಷ್ಟಸುಖಗಳ ವಿನಿಮಯವಾಗುತ್ತದೆ. ಮಾತಿನಲ್ಲೇ ಸಾಂತ್ವನ-ಸಮಾಲೋಚನೆಗಳಾಗುತ್ತವೆ. ಅದರಿಂದಾಗಿ ಮನಸ್ಸಿನಲ್ಲಿಟ್ಟುಕೊಂಡ ಚಿಂತೆ, ಕೊರಗು ಮಾಯವಾಗಿ ನಿರಾಳಭಾವ ಉಂಟಾಗುತ್ತದೆ.
ಮಹಿಳೆಯರ ಬಾಯಲ್ಲಿ ಗುಟ್ಟು ನಿಲ್ಲದು ಎಂಬ ಆಪಾದನೆಗೂ ಧರ್ಮರಾಯನ ಶಾಪವೇ ಕಾರಣವಲ್ಲವೆ? ತಾಯಿ ಕುಂತಿ, ಕರ್ಣ ತನ್ನ ಹಿರಿಯ ಮಗನೆಂದು ತಿಳಿಸದೆ ರಹಸ್ಯ ಕಾಪಾಡಿಕೊಂಡಿದ್ದಕ್ಕಾಗಿ ಇಡೀ ಸ್ತ್ರೀಕುಲದ ಬಾಯಲ್ಲಿ ಗುಟ್ಟು ನಿಲ್ಲದಿರಲಿ ಎಂದು ಯುಧಿಷ್ಠಿರನು ಕೊಟ್ಟ ಶಾಪದ ಪರಿಣಾಮವಂತೆ ಅದು.
ಅವರು ಬಾಯಿ ಬಿಟ್ಟರೆ ಮೇಲಿನ ಹಂಚು ಹಾರಿಹೋಗುತ್ತದೆ ಎಂಬ (ಅಪ)ಖ್ಯಾತಿಯೂ ಕೆಲವರಿಗೆ ಸಲ್ಲುತ್ತದೆ. ಮೌನವೇ ಲೇಸು ಎಂದು ಸುಮ್ಮನೆ ಕುಳಿತವರನ್ನು, ಬಾಯಿ ಹೊಲಿದುಕೊಂಡಿದ್ದೀಯಾ? ಎಂದು ಮೂದಲಿಸಿ ಮಾತಿಗೆಳೆಯುವವರಿಗೂ ಕಡಮೆಯಿಲ್ಲ. ಅವರಿವರ ಸುದ್ದಿ ಹೇಳಿ ಬತ್ತಿ ಇಡುವವರಿಗೆ, ಬಾಯಿ ತುರಿಕೆಯಾ… ಕೆಸುವಿನ ಸೊಪ್ಪು ತಿಂದಿದ್ದೀರಾ? ಎಂದು ಕೇಳುವ ವಾಡಿಕೆ ನಮ್ಮ ಕಡೆಯಲ್ಲಿದೆ. ಕೆಸುವಿನ ಸೊಪ್ಪಿನ ಪತ್ರೊಡೆ ತಿನ್ನಲು ಬಲು ರುಚಿ. ಆದರೆ ತಿಂದ ಮೇಲೆ ಸ್ವಲ್ಪ ಬಾಯಿ ತುರಿಕೆಯಾಗುತ್ತದೆ.
ಕಪಾಳಕ್ಕೆ ಹೊಡೆದರೆ ಬಾಯಿ ಒಳಗಿರುವ ಹಲ್ಲೆಲ್ಲಾ ಪುಡಿಪುಡಿಯಾಗಬೇಕು ಎಂದು ಆರ್ಭಟಿಸುವವರನ್ನು ಕಂಡು, ಬಡವ… ನೀ ಮಡಗಿದ್ಹಾಂಗಿರು ಎಂಬಂತೆ ಅಂಜಿ ಸುಮ್ಮನಿದ್ದುಬಿಡುತ್ತಾರೆ. ಇಂತಹ ಪಾಪದವರನ್ನು ನೋಡಿದಾಗ ಬಾಯಿ ಜೋರಾಗಿರುವವರಿಗೇ ಈಗ ಕಾಲ ಎಂದೆನಿಸದಿರದು. ಕಿವಿಯಿಂದ ಕಿವಿಯವರೆಗೆ ದೊಡ್ಡದಾದ ಬಾಯಿ ಇದ್ದರೂ, ಕಿರುಬೆರಳಿನಷ್ಟೇ ಚಿಕ್ಕ ಗಾತ್ರದ ಬಾಯಿ ಇದ್ದರೂ ತಿನ್ನುವುದು, ಮಾತನಾಡುವುದು ಗಾತ್ರವನ್ನೇನೂ ಅವಲಂಬಿಸಿರುವುದಿಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುವುದಕ್ಕಿಂತ ಅಳೆದು, ತೂಗಿ ಮಾತನಾಡುವುದು ಒಳ್ಳೆಯದು. ಅಚ್ಚರಿಯ ಸಂಗತಿಯೆಂದರೆ ಬಾಯಿಂದ ಬಾಯಿಗೆ ನೂರಾರು ಕಥೆಗಳು, ಹಾಡುಗಳು ಇಂದಿಗೂ ಹಾಗೆಯೇ ಮುಂದುವರಿಯುತ್ತಾ ಬಂದಿವೆ.
ರುಚಿಯ ಬೆನ್ನೇರಿ…
ಬಾಯಿ ಚಪಲದ ವಿಷಯಕ್ಕೆ ಬಂದರೆ ಬಾಯಿರುಚಿಗಾಗಿ ನಾವು ಏನೆಲ್ಲ ಪಾಡುಪಡುತ್ತಿದ್ದೇವೆ. ಅದಕ್ಕಾಗಿ ಹುಟ್ಟಿಕೊಂಡಿರುವ ವಿಭಿನ್ನ ಉದ್ಯಮಗಳು, ಮುಖ್ಯವಾಗಿ ಹೋಟೆಲುಗಳು, ವೈವಿಧ್ಯಮಯ ತಿಂಡಿ, ಊಟ…
ಕೆಲವರಂತೂ ತಿನ್ನುವುದಕ್ಕೇ ಹುಟ್ಟಿದ್ದಾರೇನೋ ಎನ್ನುವಂತಹ ತಿಂಡಿಪೋತರಾಗಿದ್ದರೆ, ಕೋಳಿ ಕೆದಕಿದಂತೆ ಬೆರಳಿನಿಂದ ಕೆದಕುತ್ತಾ ಇಷ್ಟಿಷ್ಟೇ ತಿನ್ನುವವರು ಕೆಲವರು. ಈಗಂತೂ ಬಾಯಿರುಚಿಯನ್ನು ತಣಿಸಲು ಫೇಸ್ಬುಕ್ನಲ್ಲಿ, ಯೂಟ್ಯೂಬ್ನಲ್ಲಿ ಬೇಕಾದಷ್ಟು ಅಡಿಗೆ-ತಿಂಡಿಗಳ ಮಾಹಿತಿಗಳು ಪುಂಖಾನುಪುಂಖವಾಗಿ ಸಿಗುತ್ತವೆ. ಬೇಸರವಿಲ್ಲದೆ ರುಚಿಕಟ್ಟಾದ, ಆರೋಗ್ಯಕರವಾದ ಅಡುಗೆಯನ್ನು ಮಾಡಿಕೊಂಡು ತೃಪ್ತಿಯಿಂದ ಸವಿಯುವವರಿಗಾಗಿಯೇ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯನ್ನು ಹೆಣೆದಂತಿದೆ. ಬಾಯಿ ಕಟ್ಟುವುದಕ್ಕಾಗದೆ ಚಪಲಕ್ಕೆ ಒಳಗಾಗುವವರಿಗೆ ರೋಗ ತಪ್ಪಿದ್ದಲ್ಲ. ಬಾಯಿ ಕಟ್ಟುವುದು ಎಂದು ಯೋಚಿಸುವಾಗ ಕುದುರೆಯ ಬಾಯಿಗೆ ಕಟ್ಟಿದ ಹುರುಳಿಯ ಚೀಲ ನೆನಪಿಗೆ ಬರುತ್ತದೆ.
ಟಿ.ವಿ. ನೋಡುತ್ತಾ ಪಕ್ಕದಲ್ಲಿ ಕುರುಕಲು ತಿಂಡಿಯನ್ನಿಟ್ಟುಕೊಂಡು ಬಾಯಾಡಿಸುತ್ತಲೇ ಇದ್ದರೆ ಎಷ್ಟು ತಿಂದಿದ್ದೇವೆ, ಏನು ತಿಂದಿದ್ದೇವೆ ಎಂಬುದು ನಮಗೇ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಬಲು ನಾಜೂಕಾದ ಸನ್ನಿವೇಶವನ್ನು ಎದುರಿಸುವಾಗ ಹೇಗೆ ನಡೆದುಕೊಳ್ಳಬೇಕೆನ್ನುವ ದ್ವಂದ್ವ ಕಾಡುತ್ತದೆ.
ಬಿಸಿತುಪ್ಪ ಬಾಯಲ್ಲಿದ್ದಾಗ ನುಂಗಲೂ ಆಗದ ಉಗುಳಲೂ ಆಗದ ಸ್ಥಿತಿ.
ತುಂಬಾ ಹಸಿವಾದಾಗ ಅಡುಗೆಮನೆಯಿಂದ ಒಗ್ಗರಣೆಯ ಘಮಲು ಹಿತವಾಗಿ ಮೂಗಿಗೆ ಅಡರಿದಾಗ ಬಾಯಿಯಿಂದ ಜೊಲ್ಲುರಸ ಸುರಿಯುವುದೊಂದು ಬಾಕಿ. ಆದರೆ ಬಾಯಿಯಲ್ಲಿ ಜೊಲ್ಲು ಸುರಿಸಿಕೊಂಡು ನೋಡುತ್ತಾ ಇದ್ದರು ಎಂದು ಮತ್ತೊಂದು ಅರ್ಥದಲ್ಲಿ ಬಳಸುವುದೂ ಉಂಟು.
ಭಕ್ಷ್ಯವೋ, ಶಿಕ್ಷೆಯೋ?
ನೀವು ಸ್ವಲ್ಪ ಕಾಫಿ ಕುಡಿಯಬಹುದಿತ್ತು. ಇವತ್ತೇ ಹಾಲು ಒಡೆದುಹೋಗಬೇಕಾ? ಊಟಮಾಡಿಕೊಂಡೇ ಹೋಗಬಹುದಿತ್ತು. ನಾನು ಈಗ ಅರ್ಜೆಂಟಾಗಿ ಹೊರಗೆ ಹೋಗಬೇಕು – ಎನ್ನುವಂತಹ ಬಾಯುಪಚಾರಕ್ಕೆ ಬೇಸರಿಸಿಕೊಂಡರೆ ಪ್ರಯೋಜನವೇನೂ ಇರದು. ವೃಥಾ ಬೇರೆಯವರ ಬಗ್ಗೆ ಮಾತನಾಡಿ ನಾವು ಬಾಯಿ ಹೊಲಸು ಮಾಡಿಕೊಳ್ಳಬಾರದಲ್ಲ. ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ ಎಂಬಂತಾಗಬಾರದಲ್ಲ.
ಮದುವೆ, ಗೃಹಪ್ರವೇಶದಂತಹ ಸಮಾರಂಭಗಳಿಗೆ ಹೋಗಿ ಹೇಗೋ ಮೊದಲನೇ ಬ್ಯಾಚ್ನಲ್ಲೆ ಸ್ಥಳ ಗಿಟ್ಟಿಸಿಕೊಂಡು ಊಟ ಮಾಡುತ್ತಿರುತ್ತೇವೆ. ನೂರಾರು ಮಂದಿ ತಮ್ಮ ಸರದಿಗಾಗಿ ಊಟಕ್ಕೆ ಕಾಯುತ್ತಾ ಬಾಗಿಲು ಪಕ್ಕದಲ್ಲಿ, ಅಥವಾ ನಾವು ಕುಳಿತ ಕುರ್ಚಿಯ ಹಿಂದೆಯೇ ನಿಂತಿರುವ ಅನುಭವವಂತೂ ಸಾಮಾನ್ಯ. ಆ ಸಮಾರಂಭದ ಕರ್ತೃಗಳು ಊಟಕ್ಕೆ ಕುಳಿತಿರುವವರನ್ನು, ನಿಧಾನವಾಗಿ ಊಟ ಮಾಡಿ; ತುಂಬಾ ಹೊತ್ತಾಗಿ ಹೋಗಿದೆ ಎನ್ನುವ ಬಾಯಿ ಉಪಚಾರ ಮಾಡಿ ಹೋಗುತ್ತಾರೆ. ನಮ್ಮ ಹಿಂದೆ ನಿಂತಿರುವವರ ದೃಷ್ಟಿ ನಮ್ಮ ಎಲೆಯ ಕಡೆಯೇ ಇರುತ್ತದೆ. ಅಷ್ಟೇ ಏಕೆ… ನಾವು ಸ್ವಲ್ಪ ತಡ ಮಾಡಿದರೂ ಸ್ವಚ್ಛಗೊಳಿಸುವವರು ಯಾವ ಮುಲಾಜೂ ಇಲ್ಲದೆ ಎಲೆಯನ್ನು ಎತ್ತಿಯೇಬಿಡುತ್ತಾರೆ. ಈ ವಿಷಯದಲ್ಲಿ ಮನೆಯವರದು ಅಸಹಾಯಕ ಸ್ಥಿತಿ. ಬಾಯುಪಚಾರ ಅವರ ಕರ್ತವ್ಯ.
ದೊಡ್ಡ ಕುಡಿಬಾಳೆ ಎಲೆಯಲ್ಲಿ ಅನ್ನದ ಕಟ್ಟೆ ಕಟ್ಟಿ ನಡುವೆ ಸಾರನ್ನು ಧಾರಾಳವಾಗಿ ಹಾಕಿಕೊಂಡು ಕೈಯಿಂದ ತೆಗೆತೆಗೆದು ಬಾಯಿಯಿಂದ ಸೊರಸೊರನೆ ಶಬ್ದ ಮಾಡುತ್ತಾ ಸುರಿದು ಊಟ ಮಾಡುವವರ ಆ ಸಂಭ್ರಮವನ್ನು ನೋಡಿಯೇ ಆನಂದಿಸಬೇಕು. ಪಾಯಸವನ್ನೂ ಹಾಗೆಯೇ ಸವಿಯುವವರಿದ್ದಾರೆ. ಸುರಿದು ಉಣ್ಣು; ಗೊರೆದು ನಿದ್ದೆ ಮಾಡು ಎಂಬ ಗಾದೆಯೇ ಇದೆಯಲ್ಲ.
ಲಭ್ಯವಿರಬೇಕು!
ಬಾಯಲ್ಲಿ ಆಡಿದ್ದನ್ನು ಕೃತಿಯಲ್ಲಿ ಮಾಡದಿದ್ದರೆ ಅಂತಹವರ ಮಾತಿಗೆ ಬೆಲೆಯಿದ್ದೀತೆ? ಮಹಾಭಾರತದಲ್ಲಿ ಬರುವ ಭೂಲಿಂಗ ಪಕ್ಷಿಯ ಕಥೆ ಇದಕ್ಕೆ ಒಂದು ಒಳ್ಳೆಯ ಉದಾಹರಣೆಯಾದೀತು. ಪಾಂಡವರು ರಾಜಸೂಯ ಯಾಗ ಮಾಡಿದ ಸಂದರ್ಭದಲ್ಲಿ ಶಿಶುಪಾಲ ಹೇಳುವ ಕಥೆಯಿದು. ಆ ಪಕ್ಷಿ ಸತತವಾಗಿ ಮಾ ಸಾಹಸಂ ಎಂದರೆ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂದು ಉಪದೇಶ ಮಾಡುತ್ತಲೇ ಇರುತ್ತದೆ. ಸ್ವತಃ ತಾನು ಸಿಂಹದ ಬಾಯಿಯಲ್ಲಿ ಕುಳಿತು ಅದರ ಹಲ್ಲಿನ ಸಂದಿಯ ಮಾಂಸದ ಚೂರುಗಳನ್ನು ಹೆಕ್ಕಿ ತಿನ್ನುತ್ತಿರುತ್ತದೆ. ಒಂದು ವೇಳೆ ಸಿಂಹವೇನಾದರೂ ಬಾಯಿ ಮುಚ್ಚಿದರೆ ಭೂಲಿಂಗ ಪಕ್ಷಿಯ ಕಥೆ ಮುಗಿದಂತೆ. ಬೇರೆಯವರಿಗೆ ಉಪದೇಶಿಸಿದ್ದನ್ನು ತನಗೆ ಅನ್ವಯಿಸಿಕೊಳ್ಳದೆ ಅಪಾಯದಲ್ಲೇ ಇರುತ್ತದೆ ಹಕ್ಕಿ.
ಬಾಯಿ ಬೇಡಿದ್ದನ್ನು ಮಾಡಿ ತಿನ್ನೋಕೂ ಅವರು ಪಡೆದುಕೊಂಡು ಬಂದಿಲ್ಲ. ಸಿಕ್ಕ ಸಿಕ್ಕ ಸೊಪ್ಪುಸೊದೆ ತಿಂದ್ಕೊಂಡು ಕಾಲ ಹಾಕುತ್ತಾರೆ ಎಂಬ ಮಾತನ್ನು ಕೇಳಿದಾಗ ಹೇಳಿದವರ ಬಗ್ಗೆ ಮರುಕವೇ ಉಂಟಾಗುತ್ತದೆ. ಏಕೆಂದರೆ ಮಲೆನಾಡಿನವರು ನೂರಾರು ಬಗೆಯಲ್ಲಿ ಸೊಪ್ಪಿನ ತಂಬಳಿ, ಚಟ್ನಿ, ಗೊಜ್ಜು, ಚಟ್ಟಿ ಎಂದು ಮಾಡಿ ಸವಿಯುವಾಗ ಅದರ ರುಚಿ ಗೊತ್ತಿಲ್ಲದೆ ಬಾಯಿ ಸಡಿಲ ಬಿಟ್ಟರೆ ಸುಮ್ಮನಿದ್ದುಬಿಡುವುದೇ ಒಳ್ಳೆಯದೇನೋ…
ಇದೀಗ ಬಾಯಿ ಬಡಾಯಿ ಅತಿಯಾಯಿತೇನೋ ಎಂದೆನಿಸುತ್ತಿದೆ.
ಅಬ್ಬಬ್ಬಾ… ನಮ್ಮೆಲ್ಲರ ಬಾಯಿರುಚಿ ಹೀಗೆಯೆ ಇರಲಿ. ಇನ್ನೊಬ್ಬರ ಮನೆಯಿಂದ ಅಡುಗೆಯ ಘಮಲು ನಮ್ಮ ಬಾಯಿ ನೀರೂರಿಸಲಿ. ಬಾಯಿ ರುಚಿಯೇ ಇಲ್ಲದಂತಾದರೆ… ಅದೇ ಕೆಟ್ಟ ಕೊರೋನಾದ ಲಕ್ಷಣವಲ್ಲವೆ. ನಡುವೆ ಬಾಯಿ ಹಾಕುವವರಿಲ್ಲದಿದ್ದರೆ ಬಾಯಿ ಪಟಾಕಿ ಹೀಗೆ ಮುಂದುವರಿಯುತ್ತಲೇ ಹೋಗುತ್ತದೆ.