ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದಾಗ ಹಲವರ ಆಸೆಗಳು ಗರಿಗೆದರಿದವು; ಹೊಸ ಸರ್ಕಾರ ಹೆಚ್ಚು ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿನೀತಿಯನ್ನು ಅನುಸರಿಸಬಹುದು ಎನ್ನುವ ನಿರೀಕ್ಷೆಯೂ ಅವುಗಳಲ್ಲೊಂದಾಗಿತ್ತು. ಆದರೆ ಅಂತಹ ಎಲ್ಲ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಯಾವ ಯತ್ನವನ್ನೂ ಅದು ಇದುವರೆಗೆ ಮಾಡಿದಂತಿಲ್ಲ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆ ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವಕ್ಕೇ ಅಪಾಯ ಒಡ್ಡುತ್ತಿದೆ. ತೋಳ ನಮ್ಮ ಬಾಗಿಲು ಬಡಿಯುತ್ತಿದೆ. ವಿಶ್ವಸಂಸ್ಥೆ ಹವಾಮಾನ ಬದಲಾವಣೆಯನ್ನು ಕುರಿತ ಅಂತರಸರ್ಕಾರ ಸಮಿತಿ(ಇಂಟರ್-ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಛೇಂಜ್ – ಐ.ಪಿ.ಸಿ.ಸಿ.)ಯನ್ನು ರಚಿಸಿದ್ದು, ಅದು ೧೯೮೮ರಷ್ಟು ಹಿಂದಿನಿಂದ ಸಕ್ರಿಯವಾಗಿದೆ. ಅದರಲ್ಲಿ ವಿವಿಧ ದೇಶಗಳ ಸರ್ಕಾರಗಳನ್ನು ಪ್ರತಿನಿಧಿಸುವ ಸುಮಾರು ೨,೫೦೦ ವಿಜ್ಞಾನಿಗಳಿದ್ದಾರೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಬಗೆಗಿನ ಹೊಸ ಬೆಳವಣಿಗೆಗಳನ್ನು ನಿರಂತರವಾಗಿ ಅಧ್ಯಯನಮಾಡುತ್ತಾ ಕಾಲಕಾಲಕ್ಕೆ ವರದಿ ಸಲ್ಲಿಸುವುದು ಈ ತಜ್ಞಸಮಿತಿಯ ಕರ್ತವ್ಯ. ಐಪಿಸಿಸಿ ಇದುವರೆಗೆ ಐದು ಸಮೀಕ್ಷಾವರದಿ (ಅಸೆಸ್ಮೆಂಟ್ ರಿಪೋರ್ಟ್ – ಎ.ಆರ್.)ಗಳನ್ನು ಸಲ್ಲಿಸಿದೆ. ಮೊದಲ ಸಮೀಕ್ಷಾವರದಿಯನ್ನು ೧೯೯೦ರಲ್ಲಿ ಸಲ್ಲಿಸಲಾಯಿತು. ಮುಂದಿನ ಎ.ಆರ್.ಗಳನ್ನು ಅನುಕ್ರಮವಾಗಿ ೧೯೯೫, ೨೦೦೧ ಮತ್ತು ೨೦೦೭ರಲ್ಲಿ ಸಲ್ಲಿಸಲಾಯಿತು. ಇತ್ತೀಚಿನ ಎ.ಆರ್.ನ್ನು ಸೆಪ್ಟೆಂಬರ್ ೨೭, ೨೦೧೩ರಂದು ಬಿಡುಗಡೆಗೊಳಿಸಲಾಯಿತು. ಈ ವರದಿ ಹಲವು ಆಘಾತಕಾರಿ ಅಂಶಗಳನ್ನು ಒಳಗೊಂಡಿದೆ. ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
- ಎಲ್ಲ ಮೂರು ದಶಕಗಳು (೧೯೮೦-೯೦, ೧೯೯೦-೨೦೦೦ ಮತ್ತು ೨೦೦೦-೨೦೧೦) ಹಿಂದಿನ ದಶಕಕ್ಕಿಂತ ಬಿಸಿಯಾದ ವಾತಾವರಣ(ತಾಪಮಾನ)ವನ್ನು ತೋರಿಸುತ್ತಾ ಬಂದಿವೆ.
- ಇಂದಿನ ವಾತಾವರಣದಲ್ಲಿರುವ ಅಂಗಾರಾಮ್ಲ, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ಗಳು (`ಹಸಿರುಮನೆ’ ಅನಿಲಗಳು – ಜಿಎಚ್ಜಿಗಳು) ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು ಕಳೆದ ಎಂಟು ಲಕ್ಷ ವರ್ಷಗಳಲ್ಲಿ ಎಂದೂ ಇಷ್ಟೊಂದು ಇರಲಿಲ್ಲ.
- ಜಿಎಚ್ಜಿಗಳು ಯಾವುದೇ ತಡೆ ಇಲ್ಲದೆ ಭಾರೀ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ೨೦೪೦ರ ಹೊತ್ತಿಗೆ ೨ ಡಿಗ್ರಿ ಸೆಲ್ಸಿಯಸ್ನ ಗಡಿ ದಾಟಬಹುದು ಎನಿಸುತ್ತದೆ.
- ೨೦೫೦ರ ಹೊತ್ತಿಗೆ ಭೂಮಿಯ ಧ್ರುವಪ್ರದೇಶ ಆರ್ಕ್ಟಿಕ್ ಸಂಪೂರ್ಣವಾಗಿ ಮಂಜುಗಡ್ಡೆರಹಿತವಾಗಬಹುದು.
- ಕ್ರಿ.ಶ. ೨೧೦೦ರ ವೇಳೆಗೆ ಜಾಗತಿಕ ತಾಪಮಾನದಲ್ಲಿ ೪.೮ ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಬಹುದು.
ಪರಿಣಾಮ ತೀವ್ರತೆ
ಕೈಗಾರಿಕಾ ಕ್ರಾಂತಿಗೆ ಮುನ್ನ ಸರಾಸರಿ ಜಾಗತಿಕ ತಾಪಮಾನ ೧೪ ಡಿಗ್ರಿ ಸೆಲ್ಸಿಯಸ್ ಇತ್ತು. ಲಕ್ಷಾಂತರ ವರ್ಷಗಳ ಕಾಲ ಅದು ನಿರಂತರವಾಗಿ ಅಷ್ಟೇ ಪ್ರಮಾಣದಲ್ಲಿತ್ತು. ಕ್ರಿ.ಶ. ೧೮೦೦ರ ವೇಳೆಗೆ ಕೈಗಾರಿಕಾ ಕ್ರಾಂತಿ ನಡೆದು ಅದರ ನಂತರ ಕಲ್ಲಿದ್ದಲು, ಪೆಟ್ರೋಲಿಯಂನಂತಹ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚುತ್ತಾ ಬಂತು; ಅವು ಈಗ ಇಂಧನದ ಪ್ರಾಥಮಿಕ ಮೂಲಗಳಾಗಿವೆ. ಪರಿಣಾಮವಾಗಿ ಕೈಗಾರಿಕಾ ಕ್ರಾಂತಿಗೆ ಮುನ್ನ ವಾತಾವರಣದಲ್ಲಿ ಸುಮಾರು ೨೮೦ ಪಿಪಿಎಂ(ಪಾರ್ಟ್ಸ್ ಪರ್ ಮಿಲಿಯನ್)ನಷ್ಟಿದ್ದ ಅಂಗಾರಾಮ್ಲ ಮೇ ೨೦೧೩ರ ಹೊತ್ತಿಗೆ ೪೦೦ ಪಿಪಿಎಂ ಆಗಿದೆ.
ಸರಾಸರಿ ಜಾಗತಿಕ ತಾಪಮಾನವು ಕೈಗಾರಿಕಾ ಕ್ರಾಂತಿಗೆ ಮುನ್ನ ಇದ್ದುದಕ್ಕಿಂತ (೧೪ ಡಿಗ್ರಿ ಸೆಲ್ಸಿಯಸ್) ೨ ಡಿಗ್ರಿ ಸೆಲ್ಸಿಯಸ್ನಷ್ಟು ಏರಿದರೆ ಮಾತ್ರ ಸಹ್ಯ ಎನಿಸಬಹುದು. ತಾಪಮಾನದಲ್ಲಿ ೨ ಡಿಗ್ರಿ ಸೆಂಟಿಗ್ರೇಡ್ನಷ್ಟು ಏರಿಕೆಯಾದರೂ ಕೂಡ ೨೦೫೦ರ ವೇಳೆಗೆ ಜಗತ್ತಿನ ಸುಮಾರು ೨೦೦ ಕೋಟಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಜಗತ್ತಿನಲ್ಲಿರುವ ಜೀವಿಗಳಲ್ಲಿ ಶೇ. ೨೦ರಿಂದ ೩೦ರಷ್ಟು ಜೀವಿಗಳು ಇಲ್ಲವಾಗುತ್ತವೆ.
ಆದ್ದರಿಂದ ತಾಪಮಾನದಲ್ಲಿ ೨ ಡಿಗ್ರಿ ಸೆಲ್ಸಿಯಸ್ಗಿಂತ ಏರಿಕೆ ಆಗಲೇಬಾರದೆಂದು ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಜಗತ್ತು ಈ ಬಗ್ಗೆ ಕೂಡಲೆ ಎಚ್ಚೆತ್ತುಕೊಂಡು ಅಂಗಾರಾಮ್ಲ ಮತ್ತಿತರ ಹಸಿರುಮನೆ ಅನಿಲಗಳ ಬಿಡುಗಡೆಗೆ ತಡೆಹಾಕಲೇಬೇಕು; ಮತ್ತು ಯಾವುದೇ ಕಾರಣಕ್ಕೆ ೨ ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ಏರಿಕೆ ಆಗದಂತೆ ನೋಡಿಕೊಳ್ಳಬೇಕು.
ಆದರೆ ಜಾಗತಿಕ ನಾಯಕರು ಈ ಎಚ್ಚರಿಕೆ ಗಂಟೆಯನ್ನು ಅಲಕ್ಷಿಸುತ್ತಾ ಬಂದಿದ್ದಾರೆ. ೨೦೦೭ರಲ್ಲಿ ಐಪಿಸಿಸಿಯಿಂದ ನಾಲ್ಕನೇ ಸಮೀಕ್ಷಾ ವರದಿ (ಎ.ಆರ್.) ಬಿಡುಗಡೆಗೊಂಡಿದ್ದು, ಅದಾದ ಬಳಿಕ ಕೂಡ ವಾತಾವರಣದಲ್ಲಿ ಅಂಗಾರಾಮ್ಲ ಏರುತ್ತಲೇ ಬಂದಿದೆ; ಐದನೇ ಎ.ಆರ್. ಪ್ರಕಾರ ಮುಂದಿನ ಸುಮಾರು ೨೫ ವರ್ಷಗಳಲ್ಲಿ, ಅಂದರೆ ೨೦೪೦ರ ಹೊತ್ತಿಗೆ ೨ ಡಿಗ್ರಿ ಸೆಲ್ಸಿಯಸ್ ತಾಪಮಾನದ ಗಡಿಯನ್ನು ಮೀರಬಹುದು.
ವಿಕೋಪಗಳ ಸರಮಾಲೆ
ಈ ದಿವ್ಯ ನಿರ್ಲಕ್ಷ್ಯದ ಪರಿಣಾಮಗಳು ಮುಂದೆ ಭೀಕರ ಆಗಬಹುದು. ಹವಾಮಾನ ವ್ಯತ್ಯಾಸದ ಪರಿಣಾಮಗಳು ಈಗಾಗಲೇ ಗೋಚರಿಸಲು ಆರಂಭಿಸಿವೆ. ಬಿರುಗಾಳಿ ಮತ್ತು ಸುಂಟರಗಾಳಿಗಳು ಆಗಾಗ ಬರಲಾರಂಭಿಸಿವೆ; ಅವುಗಳ ಗಾತ್ರ ಕೂಡ ದೊಡ್ಡದಾಗುತ್ತಿದೆ. `ಫಾಲಿನ್’ ಚಂಡಮಾರುತ ೨೦೧೩ರಲ್ಲಿ ಒರಿಸ್ಸಾದಲ್ಲಿ ಭಾರೀ ಅನಾಹುತ ಎಸಗಿತು. ಆಂಧ್ರದ ವಿಶಾಖಪಟ್ಣ ಮತ್ತು ಒರಿಸ್ಸಾದ ಕೆಲವು ಭಾಗಗಳನ್ನು ಧೂಳೀಪಟ ಮಾಡಿದ ‘ಹುಡ್ಹುಡ್’ ನಮ್ಮ ನೆನಪಿನಲ್ಲಿನ್ನೂ ಹಸಿರಾಗಿಯೇ ಇದೆ. ೨೦೧೪ರ ಸೆಪ್ಟೆಂಬರ್ನಲ್ಲಿ ಜಮ್ಮು-ಕಾಶ್ಮೀರ, ವಿಶೇಷವಾಗಿ ಶ್ರೀನಗರವನ್ನು ಧ್ವಂಸಗೈದ ಭೀಕರ ಪ್ರವಾಹ, ೨೦೧೨ರಲ್ಲಿ ಕೇದಾರನಾಥ ಸೇರಿದಂತೆ ಉತ್ತರಾಖಂಡ, ಹಿಮಾಚಲಪ್ರದೇಶಗಳಲ್ಲಿ ಭಾರಿ ಹಾನಿ ಎಸಗಿದ ಮೇಘಸ್ಫೋಟ-ಪ್ರವಾಹಗಳು ಮರೆಯುವಂಥವಲ್ಲ. ಮುಂದಿನ ವರ್ಷಗಳಲ್ಲಿ ಅಂತಹ ಪ್ರಾಕೃತಿಕ ವೈಪರೀತ್ಯಗಳು ಹೆಚ್ಚುಹೆಚ್ಚಾಗಿ ಉಂಟಾಗಲಿವೆ.
ಜಾಗತಿಕ ಹವಾಮಾನವನ್ನು ನಿರ್ಧರಿಸುವಲ್ಲಿ ಆರ್ಕ್ಟಿಕ್ನದ್ದು ಅತ್ಯಂತ ಮುಖ್ಯವಾದ ಪಾತ್ರ. ಅದು ೨೦೫೦ರ ಹೊತ್ತಿಗೆ, ಅಂದರೆ ಕೇವಲ ೩೫ ವರ್ಷಗಳಲ್ಲಿ ಮಂಜುಗಡ್ಡೆರಹಿತ ಆಗುತ್ತದೆಂದರೆ ಅದರ ಪರಿಣಾಮಪರಂಪರೆಯನ್ನು ಊಹಿಸುವುದಕ್ಕಾದರೂ ಸಾಧ್ಯವೆ?
ಇಂತಹ ತುರ್ತುಪರಿಸ್ಥಿತಿಯಲ್ಲಿ, ಪ್ರತಿ ವರ್ಷವೂ ಬಹಳ ಮುಖ್ಯವೆನಿಸುತ್ತದೆ; ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪ್ರತಿ ತಿಂಗಳೂ ಆದ್ಯತೆಯನ್ನು ಬಯಸುತ್ತದೆ.
ಈ ನಿಟ್ಟಿನಲ್ಲಿ ೨೦೧೧ರಲ್ಲಿ ದಕ್ಷಿಣ ಆಫ್ರಿಕದ ದರ್ಬಾನ್ನಲ್ಲಿ ಜರಗಿದ ಅಂತರರಾಷ್ಟ್ರೀಯ ಹವಾಮಾನ ಸಮಾವೇಶವು (ಇಂಟರ್ ನ್ಯಾಶನಲ್ ಕ್ಲೈಮೇಟ್ ಕಾನ್ಫರೆನ್ಸ್) ಮಹತ್ತ್ವಪೂರ್ಣವಾದದ್ದು; ಮುಂದುವರಿದ ಮತ್ತು ಹಿಂದುಳಿದ ರಾಷ್ಟ್ರವೆಂಬ ಭೇದವಿಲ್ಲದೆ ಎಲ್ಲ ದೇಶಗಳು ಅಂಗಾರಾಮ್ಲ ಬಿಡುಗಡೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಅಲ್ಲಿ ತೀರ್ಮಾನಿಸಲಾಯಿತು. ಅದರಲ್ಲಿ ಭಾರತ ಮತ್ತು ಚೀಣಾ ಕೂಡ ಸೇರಿವೆ. ಅಂಗಾರಾಮ್ಲ ಬಿಡುಗಡೆಯನ್ನು ಶೇ. ೨೫ರಷ್ಟು ತಗ್ಗಿಸುವುದಾಗಿ ಭಾರತ ಅಲ್ಲಿ ಸ್ವಯಂಸ್ಫೂರ್ತಿಯಿಂದ ಆಶ್ವಾಸನೆ ನೀಡಿದೆ. ಪೆಟ್ರೋಲಿಯಂ ಬಳಕೆಯಲ್ಲಿ ಭಾರತ ಈಗ ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬುದನ್ನು ನೆನಪಿಡಬೇಕು; ಅನುಕ್ರಮವಾಗಿ ಅಮೆರಿಕ, ಚೀನಾ ಹಾಗೂ ಜಪಾನ್ ಮೊದಲ ಮೂರು ಸ್ಥಾನದಲ್ಲಿವೆ. ಮಾಲಿನ್ಯ ಉಂಟುಮಾಡುವುದರಲ್ಲಿ ಕೂಡ ಭಾರತಕ್ಕೆ ಜಗತ್ತಿನಲ್ಲಿ ನಾಲ್ಕನೇ ಸ್ಥಾನ ಇದೆ.
ಡಬ್ಲ್ಯುಡಬ್ಲ್ಯುಎಫ್ ವರದಿ
ವರ್ಲ್ಡ್ವೈಡ್ ಫಂಡ್ (ಡಬ್ಲ್ಯುಡಬ್ಲ್ಯುಎಫ್) ಮತ್ತು ಲಂಡನ್ ಪ್ರಾಣಿಶಾಸ್ತ್ರ ಸಂಸ್ಥೆ(ಲಂಡನ್ ಜೂಅಲಾಜಿಕಲ್ ಸೊಸೈಟಿ)ಗಳು ಜಂಟಿಯಾಗಿ ಸಂಶೋಧನೆ ನಡೆಸಿ ಸೆಪ್ಟೆಂಬರ್ ೩೦, ೨೦೧೪ರಂದು ಲಂಡನ್ನಲ್ಲಿ ಒಂದು ಗ್ರಹ ಜೀವಂತಿಕಾ ವರದಿ(ಲಿವಿಂಗ್ ಪ್ಲಾನೆಟ್ ರಿಪೋರ್ಟ್)ಯನ್ನು ಪ್ರಕಟಿಸಿದವು. ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
- ಕಳ್ಳಬೇಟೆ, ಅತಿಯಾದ ಮೀನುಗಾರಿಕೆ ಮತ್ತು ಕಾಡು ಇತ್ಯಾದಿ ವನ್ಯಮೃಗಗಳ ವಸತಿಪ್ರದೇಶ ನಾಶದಿಂದಾಗಿ ೧೯೭೦ರ ಬಳಿಕ ಜಗತ್ತಿನ ಅರ್ಧದಷ್ಟು ವನ್ಯಮೃಗಗಳು ನಾಶಹೊಂದಿವೆ.
-
ಮಾನವ ಈಗ ಜಗತ್ತಿನಲ್ಲಿ ಪ್ರಕೃತಿವಿನಾಶದಲ್ಲಿ ತೊಡಗಿದ್ದಾನೆ; ಹೇಗೆಂದರೆ ಮರಗಳು ಪುನಃ ಬೆಳೆದು ಕಾಡು ರೂಪುಗೊಳ್ಳುವುದಕ್ಕಿಂತ ವೇಗದಲ್ಲಿ ಆತ ಮರಗಳನ್ನು ಸವರುತ್ತಿದ್ದಾನೆ; ಸಾಗರದಲ್ಲಿ ಜಲಚರಗಳು ಮಾಮೂಲು ಸ್ಥಿತಿಯನ್ನು ಕಾಪಾಡಿಕೊಳ್ಳಲಾಗದ ರೀತಿಯಲ್ಲಿ ಆತ ಮೀನುಗಾರಿಕೆ ನಡೆಸುತ್ತಿದ್ದಾನೆ; ಮಳೆಗೆ ಯಥಾಸ್ಥಿತಿಯನ್ನು ಕಾಪಾಡಲು ಸಾಧ್ಯವಾಗದ ರೀತಿಯಲ್ಲಿ ನದಿಗಳು ಮತ್ತು ಅಂತರ್ಜಲವನ್ನು ಬರಿದು ಮಾಡುತ್ತಿದ್ದಾನೆ; ಅದೇ ರೀತಿ ಸಾಗರಗಳು ಮತ್ತು ಕಾಡುಗಳು ಬಳಸಿಕೊಂಡು ಖಾಲಿಮಾಡಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಅಂಗಾರಾಮ್ಲವನ್ನು ಹೊರಹಾಕುತ್ತಿದ್ದಾನೆ.
- ಜಾಗತಿಕ ಜೀವವೈವಿಧ್ಯ ಮತ್ತು ಸಂಪನ್ಮೂಲಗಳ ಬಳಕೆಯಲ್ಲಿ ಉಂಟಾದ ವೈಪರೀತ್ಯವನ್ನು ಲಿವಿಂಗ್ ಪ್ಲಾನೆಟ್ ವರದಿ ಎತ್ತಿತೋರಿಸಿದೆ.
ಐಪಿಸಿಸಿ, ಎ.ಆರ್. ಮತ್ತು ಲಿವಿಂಗ್ ಪ್ಲಾನೆಟ್ ವರದಿ ಇವೆಲ್ಲವೂ ಒತ್ತಿಹೇಳುವುದು – ಜಾಗತಿಕ ಹವಾಮಾನದಲ್ಲಿ ಹಿಂದೆಂದೂ ಇದ್ದಿರದ ಈ ರೀತಿಯ ಬಿಕ್ಕಟ್ಟು ಉಂಟಾಗಲು ಕಾರಣ ಮಾನವಕೃತ್ಯ ಎಂದು. ಈ ಮಾನವಕೃತ್ಯಗಳಿಗೆ ದುರಾಶೆಯೇ ಮೂಲ; ಕೈಗಾರಿಕೆ ಪ್ರೇರಿತ ಅಭಿವೃದ್ಧಿ ಮಾದರಿಯು ಪಾಶ್ಚಾತ್ಯ ಜಗತ್ತಿನಲ್ಲಿ ೧೮೦೦ರ ಬಳಿಕ ಆರಂಭವಾಯಿತು. ಭೂಮಿ ಎಂಬ ಗ್ರಹದಲ್ಲಿ ಜೀವಪರವಾದ ವಾತಾವರಣದ ಪರಿಸ್ಥಿತಿ ದುರ್ಭರವಾಗಲು ಅಭಿವೃದ್ಧಿಯ ಪ್ರಸ್ತುತ ಮಾದರಿಯೇ ಕಾರಣ; ೧೮೦೦ರ ನಂತರದ ಕೇವಲ ೨೦೦ ವರ್ಷಗಳಲ್ಲಿ ಪರಿಸ್ಥಿತಿ ಹೀಗೆ ಬಿಗಡಾಯಿಸಿದೆ.
ಹೊಸ ಸರ್ಕಾರದ ನಿಲವು
ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದಾಗ ಹಲವರ ಆಸೆಗಳು ಗರಿಗೆದರಿದವು; ಹೊಸ ಸರ್ಕಾರ ಹೆಚ್ಚು ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿನೀತಿಯನ್ನು ಅನುಸರಿಸಬಹುದು ಎನ್ನುವ ನಿರೀಕ್ಷೆಯೂ ಅವುಗಳಲ್ಲೊಂದಾಗಿತ್ತು.
ಆದರೆ ಹೊಸ ಸರ್ಕಾರ ಅಂತಹ ಎಲ್ಲ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಯಾವ ಯತ್ನವನ್ನೂ ಇದುವರೆಗೆ ಮಾಡಿದಂತಿಲ್ಲ. ಕಳೆದ ೨೦೦ ವರ್ಷಗಳಲ್ಲಿ ಜಗತ್ತಿನಾದ್ಯಂತ ಹಾನಿ ಎಸಗುತ್ತಾ ಬಂದ ದುರಾಶೆ ಮೂಲದ, ಜಿ.ಡಿ.ಪಿ. (ಒಟ್ಟು ಆಂತರಿಕ ಉತ್ಪಾದನೆ) ಕೇಂದ್ರಿತ ಮತ್ತು ಪರಿಸರಕ್ಕೆ ಹಾನಿಕರವಾದ ಅಭಿವೃದ್ಧಿಯ ಮಾದರಿಯನ್ನೇ ಹೊಸ ಸರ್ಕಾರವೂ ಅನುಸರಿಸುತ್ತಿದೆ ಎನ್ನಬಹುದಷ್ಟೆ.
ತಾವು ಕೈಗೊಂಡ ಜಪಾನ್ ಮತ್ತು ಚೀನಾ ಪ್ರವಾಸಗಳಲ್ಲಿ ನೂತನ ಪ್ರಧಾನಿಯವರು ವಿದೇಶೀ ಹೂಡಿಕೆಯನ್ನು ದೇಶದೊಳಕ್ಕೆ ಹರಿಸಲು ಭಾರೀ ಪ್ರಯತ್ನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ `ಭಾರತದಲ್ಲೇ ನಿರ್ಮಾಣ’ (`ಮೇಕ್ ಇನ್ ಇಂಡಿಯ’) ಚಳವಳಿ ಅದರ ಬಹುದೊಡ್ಡ ಮುನ್ಸೂಚನೆಯಾಗಿದೆ.
ದುರ್ಬಲ ಪರಿಸರಕಾನೂನು
ಭಾರತದ ಪರಿಸರಕಾನೂನುಗಳು ಇಲ್ಲಿ ಬಂಡವಾಳ ಹೂಡಿಕೆಗೆ ಬಹುದೊಡ್ಡ ತೊಡಕೆಂದು ಭಾರತದ ಹಾಗೂ ವಿದೇಶೀ ಉದ್ಯಮಸಂಸ್ಥೆ(ಕಾರ್ಪೊರೇಟ್)ಗಳು ಹೇಳುತ್ತಾ ಬಂದಿವೆ. ಪರಿಸರ ಶಾಸನಗಳನ್ನು ದುರ್ಬಲಗೊಳಿಸಿ ಎಂದು ಅವು ಒತ್ತಾಯಿಸುತ್ತಲೇ ಇವೆ. ಕಾರ್ಪೊರೇಟ್ ಸಂಸ್ಥೆಗಳ ಈ ಮನವಿಗೆ ಹೊಸ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ದೇಶದ ಐದು ಪ್ರಮುಖ ಪರಿಸರ ಕಾನೂನುಗಳ ಪುನರ್ವಿಮರ್ಶೆ ನಡೆಸಿ ಸರ್ಕಾರಕ್ಕೆ ಸಲಹೆಗಳನ್ನು ನೀಡುವ ಬಗ್ಗೆ ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್. ಸುಬ್ರಹ್ಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿಯೊಂದನ್ನು ನೇಮಿಸಲಾಗಿದೆ; ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ೨೯ ಆಗಸ್ಟ್ ೨೦೧೪ರಂದು ಆ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ; ಆ ಕಾನೂನುಗಳೆಂದರೆ -?
- ಪರಿಸರ ಸಂರಕ್ಷಣಾ ಕಾಯ್ದೆ – ೧೯೮೬.
- ಅರಣ್ಯ ಸಂರಕ್ಷಣಾ ಕಾಯ್ದೆ – ೧೯೮೦.
- ವನ್ಯಮೃಗ ಸಂರಕ್ಷಣಾ ಕಾಯ್ದೆ – ೧೯೭೨.
- ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ)ಕಾಯ್ದೆ – ೧೯೭೪.
- ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ – ೧೯೮೧.
ಈ ಸಮಿತಿಯಲ್ಲಿ ಕೇವಲ ಅಧಿಕಾರಿಗಳು ಮಾತ್ರ ಇದ್ದಾರೆ. ಮಾತ್ರವಲ್ಲ, ಸಮಿತಿ ಮೂರು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ.
ದೇಶದ ಜನರು, ವಿಶೇಷವಾಗಿ ಸರ್ಕಾರದ ವಿವಿಧ ಯೋಜನೆಗಳಿಂದ ಸಂತ್ರಸ್ತರಾದ ಮಿಲಿಯಗಟ್ಟಲೆ ಜನರು ಹೋರಾಟ ನಡೆಸಿದುದರ ಫಲವಾಗಿ ಈ ಪರಿಸರ ಕಾನೂನುಗಳು ಜಾರಿಗೆ ಬಂದಿದ್ದವು ಎಂಬುದನ್ನು ನಾವು ಮರೆಯಬಾರದು.
ದೇಶದ ಪರಿಸರ ಈಗ ಕನಿಷ್ಠ ಈಗಿರುವ ಮಟ್ಟದಲ್ಲಾದರೂ ಉಳಿದಿದ್ದರೆ ಅದಕ್ಕೆ ಈ ಕಾಯ್ದೆಗಳೇ ಕಾರಣ. ವಾಸ್ತವವನ್ನು ಅರಿತು ಕಾರ್ಯಪ್ರವೃತ್ತವಾಗುವ ಒಂದು ಜವಾಬ್ದಾರಿಯುತ ಸರ್ಕಾರ ಈ ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸಬೇಕಿತ್ತು ಮತ್ತು ಅವುಗಳನ್ನು ಶಕ್ತವಾಗಿ ಅನುಷ್ಠಾನಗೊಳಿಸಬೇಕಿತ್ತು. ಆದರೆ ಅದಕ್ಕೆ ಬದಲಾಗಿ ಹೊಸ ಸರ್ಕಾರ ಈ ಶಾಸನಗಳನ್ನು ಆದಷ್ಟು ಬೇಗ ದುರ್ಬಲಗೊಳಿಸಬೇಕೆನ್ನುವ ಧಾವಂತದಲ್ಲಿದ್ದಂತಿದೆ; ವಿದೇಶೀ ಮತ್ತು ಆಂತರಿಕ ಉದ್ಯಮ ಸಂಸ್ಥೆಗಳನ್ನು ಖುಷಿಪಡಿಸುವುದು, ಅವುಗಳಿಗೆ ಅನುಕೂಲ ಕಲ್ಪಿಸಿ ಅವುಗಳ ದುರಾಶೆಯನ್ನು ಪೋಷಿಸುವುದಲ್ಲದೆ ಬೇರೆ ಯಾವುದೇ ಮಹದುದ್ದೇಶ ಆ ಧಾವಂತಕ್ಕಿರಲು ಸಾಧ್ಯವಿಲ್ಲ. ದೇಶದ ಜನರಲ್ಲಿ ಹೊಸ ಸರ್ಕಾರ ಈ ದಿಶೆಯಲ್ಲಿ ಸಾಗಬಹುದೆನ್ನುವ ಕಲ್ಪನೆ ಕೂಡ ಇರಲಿಲ್ಲ.
ಕುಲಾಂತರಿ-ಪ್ರಯೋಗಕ್ಕೆ ಅನುಮತಿ
ಹೊಸ ಸರ್ಕಾರದಿಂದ ಬಂದ ಇನ್ನೊಂದು ಆಘಾತಕಾರಿ ಸುದ್ದಿ ಎಂದರೆ ಅದು ಕುಲಾಂತರಿ ಬೀಜ-ತಳಿಗಳಿಗೆ ಸಂಬಂಧಿಸಿದ್ದು; ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ತಳಿಶಾಸ್ತ್ರೀಯ ತಂತ್ರಜ್ಞಾನ ಸಲಹಾ ಸಮಿತಿ (ಜಿ.ಇ.ಎ.ಸಿ.) ಸರ್ಕಾರಕ್ಕೆ ಸಲ್ಲಿಸಿದ ವರದಿಗೆ ನೂತನ ಸರ್ಕಾರ ಅನುಮತಿ ನೀಡಿದೆ. ಪರಿಸರ ಸಚಿವಾಲಯದ ಕೆಳಗೆ ಈ ಕಾರ್ಯ ನಡೆದಿದ್ದು ಇದರಿಂದಾಗಿ ತಳಿಶಾಸ್ತ್ರೀಯವಾಗಿ ರೂಪಿಸಿದ (ಕುಲಾಂತರಿ) ೧೫ ಬೆಳೆಗಳ ಮುಕ್ತ ಕ್ಷೇತ್ರೀಯ ಪರೀಕ್ಷೆಗೆ ಅವಕಾಶ ನೀಡಿದಂತಾಗಿದೆ. ಭತ್ತ, ಗೋಧಿ, ಕಡಲೆ, ಬದನೆ ಹಾಗೂ ಇತರ ಆಹಾರಬೆಳೆಗಳು ಅದರಲ್ಲಿ ಸೇರಿವೆ; ಕಳೆದ ಜುಲೈ ೧೮ರಂದೇ ಸರ್ಕಾರ ಅದಕ್ಕೆ ಅನುಮತಿ ನೀಡಿದೆ.
ಸಾಮಾಜಿಕ ಮತ್ತು ಪಾರಿಸರಿಕ ಕಾಳಜಿ ಇರುವ ವಿಜ್ಞಾನಿಗಳು ಜಗತ್ತಿನಾದ್ಯಂತ ಕುಲಾಂತರಿ ತಳಿಗಳನ್ನು ಬೆಳೆಸುವುದರ ವಿರುದ್ಧ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಮಾನವ ಮತ್ತು ಪ್ರಾಣಿಗಳ ಆರೋಗ್ಯವಲ್ಲದೆ ಒಟ್ಟಾರೆ ಪರಿಸರದ ಮೇಲೂ ಅವು ದುಷ್ಟರಿಣಾಮ ಬೀರುತ್ತವೆ ಎಂಬುದು ಅವರ ಎಚ್ಚರಿಕೆ. ಮೊನ್ಸಾಂಟೋದಂತಹ ಬಹುರಾಷ್ಟ್ರೀಯ ಕಂಪೆನಿಗಳು ಬಹಳ ಬೃಹತ್ತಾದ ಭಾರತದ ಬಿತ್ತನೆಬೀಜ ಮಾರುಕಟ್ಟೆಯನ್ನು ಹೇಗಾದರೂ ಮಾಡಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಪ್ರಯತ್ನ ನಡೆಸುತ್ತಲೇ ಇವೆ. ೨೦೦೯ರಲ್ಲಿ ಕುಲಾಂತರಿ ಬದನೆಯ ಕ್ಷೇತ್ರೀಯ ಪರೀಕ್ಷೆಗೆ ಜಿ.ಇ.ಎ.ಸಿ. ಅನುಮತಿ ನೀಡಿದಾಗ ಇಡೀ ದೇಶ ಎದ್ದುನಿಂತು ಪ್ರತಿಭಟಿಸಿತು; ಅಂದಿನ ಪರಿಸರ ಸಚಿವ ಜೈರಾಂ ರಮೇಶ್ ಅವರು ಜನರ ಆಗ್ರಹಕ್ಕೆ ಮಣಿದು ಬಿ.ಟಿ. ಬದನೆ ಕೃಷಿಗೆ ನಿಷೇಧ ವಿಧಿಸಿದರು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಅನುಮತಿಯನ್ನು ತಡೆಹಿಡಿದರಾದರೂ ಕೇಂದ್ರ ಸರ್ಕಾರದ ಉದ್ದೇಶದ ಬಗೆಗೆ ದೇಶದ ಜನತೆಯ ಸಂಶಯವೇನೂ ದೂರವಾಗಿಲ್ಲ. ಏಕೆಂದರೆ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳಿಗೆ ತಮ್ಮ ಸಚಿವಾಲಯ ಯಾವುದೇ ತಡೆಯೊಡ್ಡುವುದಿಲ್ಲ ಮತ್ತು ಪರಿಸರಸಂಬಂಧಿ ಮಂಜೂರಾತಿಯನ್ನು ತಡವಿಲ್ಲದೆ ನೀಡಲಾಗುವುದೆಂದು ಜಾವಡೇಕರ್ ಆಗಾಗ ಹೇಳುತ್ತ ಬಂದಿದ್ದಾರೆ; ಅಂದರೆ ಅದರ ಅರ್ಥವೇನು?
ಒಟ್ಟಿನಲ್ಲಿ, ಇದುವರೆಗೆ ಬಂದ ಸಂಕೇತಗಳನ್ನು ಗಮನಿಸಿ ಹೇಳುವುದಾದರೆ, ಹೊಸ ಸರ್ಕಾರ ಪರಿಸರಸ್ನೇಹಿಯಾಗಿ ತೋರುತ್ತಿಲ್ಲ. ಇಷ್ಟು ಬೇಗ ತೀರ್ಮಾನಕ್ಕೆ ಬರುವುದು ಸರಿಯಲ್ಲದೇ ಇರಬಹುದು. ಆದರೂ ಪರಿಸರಸಹ್ಯವಾದ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಸಾಧಿಸಲು ಬಯಸುವುದಾದರೆ ನೂತನ ಸರ್ಕಾರ ತನ್ನ ದಾರಿಯನ್ನು ಬದಲಿಸಿಕೊಳ್ಳಲೇಬೇಕು.?