೨೦೦೧ ಸೆಪ್ಟೆಂಬರ್ ೧೧ರ ಮತ್ತು ಅನಂತರದ ಘಟನಾವಳಿಗಳಿಂದಲೂ ಅಮೆರಿಕದ ಸ್ವಾರ್ಥೈಕಕೇಂದ್ರಿತ ತರ್ಕಹೀನ ವಿದೇಶಾಂಗ ನೀತಿ ಬದಲಾಗುವ ಸೂಚನೆ ಕಾಣುತ್ತಿಲ್ಲ. ಉಗ್ರವಾದ ನಿಯಂತ್ರಣಾಭಿಯಾನದ ನೇತೃತ್ವವನ್ನು ಇನ್ನೂ ವ್ಯಾಪಕವೂ ದೃಢಚಿಂತನೆಗೆ ಬದ್ಧವಾದುದೂ ಆದ ಬಹುರಾಷ್ಟ್ರ ಒಕ್ಕೂಟ ವಹಿಸಿಕೊಳ್ಳಬೇಕಾಗಿದೆ.
ಈಗ್ಗೆ ಇಪ್ಪತ್ತು ವರ್ಷ ಹಿಂದೆ (೧೧-೯-೨೦೦೧) ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರಿಂದ ದಾಳಿ ನಡೆದಾಗ ಅಮೆರಿಕ ಜಗತ್ತಿನಿಂದ ಉಗ್ರವಾದವನ್ನು ಸಮೂಲ ಉಚ್ಚಾಟಿಸುವೆನೆಂದು ಘೋಷಣೆ ಮಾಡಿದುದನ್ನು ಜಗತ್ತು ಸ್ವಾಗತಿಸಿತ್ತು. ಅದು ಘೋಷಣೆಯಾಗಷ್ಟೆ ಉಳಿಯಿತೆಂಬುದಕ್ಕೆ ಇತ್ತೀಚಿನ ಸಾಕ್ಷ್ಯವೆಂದರೆ ಆಫಘಾನಿಸ್ತಾನದಿಂದ ಅಮೆರಿಕ ತರಾತುರಿಯಲ್ಲಿ ನಿರ್ಗಮಿಸಿ ತಾಲಿಬಾನಿ ಅಧಿಕಾರಗ್ರಹಣಕ್ಕೆ ದಾರಿ ಮಾಡಿರುವುದು. ಭಯೋತ್ಪಾದಕತೆಯ ನಿರ್ಮೂಲನ ಹಾಗಿರಲಿ; ಕಳೆದೆರಡು ದಶಕಗಳಲ್ಲಿ ಜಗತ್ತಿನ ಹಲವಾರೆಡೆಗಳಲ್ಲಿ ಅಭದ್ರತೆ ಹೆಚ್ಚಿದೆಯೆಂದರೂ ಅತ್ಯುಕ್ತಿಯಾಗದು. ಭಾರತದೊಳಗಡೆಯೇ ಸಂಸದ್ಭವನದ ಮೇಲೆ ಉಗ್ರರ ದಾಳಿ, ಮುಂಬಯಿ ಆಸ್ಫೋಟ ಸರಣಿ ಮೊದಲಾದ ಮರೆಯಲಾಗದ ದಾಳಿಗಳು ಘಟಿಸಿವೆ.
ಇದನ್ನೆಲ್ಲ ನೆನೆಯುವಾಗ ಅಮೆರಿಕದ ವೈಫಲ್ಯವನ್ನು ಸತರ್ಕವಾಗಿ ವಿಶ್ಲೇಷಿಸುವ ಆವಶ್ಯಕತೆ ಇದೆಯೆನಿಸುತ್ತದೆ. ತಾನು ಜಗತ್ತಿನಲ್ಲಿಯೆ ಶಕ್ತಿಶಾಲಿ ಎಂದು ಹೇಳಿಕೊಳ್ಳುವ ಅಮೆರಿಕ ಅಸಹಾಯವಾದುದಕ್ಕೆ ಮೂಲ ಕಾರಣ ಏನು? – ಎಂದು ವಿಚಾರ ಮಾಡದೆ ಗತ್ಯಂತರವಿರದು. ಒಂದು ದೃಷ್ಟಿಯಿಂದ ನೋಡಿದರೆ ಅಮೆರಿಕದ ಮೂಲಧೋರಣೆಯನ್ನೇ ಪ್ರಶ್ನಾರ್ಹವೆನ್ನಬೇಕಾಗುತ್ತದೆ. ಒಂದಾದ ಮೇಲೊಂದು ಅಮೆರಿಕ ಸರ್ಕಾರಗಳು ಭಯೋತ್ಪಾದಕತೆಯನ್ನು ಪರಿಗಣಿಸುತ್ತ ಬಂದಿರುವುದು ತನ್ನ ಭೌಗೋಲಿಕ ಹಿತಾಸಕ್ತಿಗಳ ದೃಷ್ಟಿಯಿಂದಲೇ ಹೊರತು ಮಾನವಹಕ್ಕುಗಳ ಮತ್ತು ಸಾರ್ವತ್ರಿಕ ಭದ್ರತೆಯ ದೃಷ್ಟಿಯಿಂದಲ್ಲ. ಪಾಕಿಸ್ತಾನ ಮೊದಲಾದ ದೇಶಗಳ ವಿಷಯದಲ್ಲಿ ಅಮೆರಿಕ ವರ್ಷಗಳುದ್ದಕ್ಕೂ ದ್ವಿಮುಖ ನೀತಿ ತಳೆಯುತ್ತ ಬಂದಿರುವುದರ ಮೂಲವಾದರೂ ಇದೇ. ತಾನೇ ನೆಲೆಗೊಳಿಸಿದ್ದ ಆಫಘಾನಿ ಸರ್ಕಾರವನ್ನು ಅಮೆರಿಕ ನಡುನೀರಿನಲ್ಲಿ ಕೈಬಿಟ್ಟದ್ದೂ ಈ ಕಾರಣದಿಂದಲೇ. ಘೋಷಣೆಯಲ್ಲಿ ಶೌರ್ಯ, ನಡತೆಯಲ್ಲಿ ಮಾರ್ದವ – ಈ ಇಬ್ಬಂದಿತನದಿಂದ ಉಗ್ರವಾದದಂತಹ ಪಾಶವೀಯತೆಯನ್ನು ಎದುರಿಸಲಾಗುತ್ತದೆಂಬುದು ಕನಸಿನಲ್ಲೂ ಸಾಧ್ಯವಿಲ್ಲ.
ತನ್ನ ಭೌಗೋಲಿಕ ಹಿತಾಸಕ್ತಿಗಳಿಗೆ ಪ್ರಾಥಮ್ಯ ನೀಡಿ ಅಮೆರಿಕ ರಾಜಾರೋಷವಾಗಿಯೆ ಉಗ್ರವಾದಿ ಬಣಗಳನ್ನು ಪೋಷಿಸಿಕೊಂಡು ಬಂದಿದೆ. ಟ್ರಂಪ್ ಸರ್ಕಾರ, ಬೈಡೆನ್ ಸರ್ಕಾರಗಳೆರಡೂ ತಾಲಿಬಾನಿಗಳ ಅಮಾನವೀಯ ಹಿಂಸಾಪ್ರವಣತೆಯನ್ನೂ ಅನಾಗರಿಕತೆಯನ್ನೂ ಕಂಡೂ ಕಾಣದಂತೆ ಅಲಕ್ಷಿಸಿರುವುದು ಲಜ್ಜಾಸ್ಪದವೇ ಆಗಿದೆ. ಕಳೆದ ವರ್ಷ (೨೦೨೦) ಫೆಬ್ರುವರಿಯಲ್ಲಿ ದೋಹಾದಲ್ಲಿ ಅಮೆರಿಕ ತಾಲಿಬಾನಿ ಬಣಗಳೊಡನೆ ಒಪ್ಪಂದ ಮಾಡಿಕೊಳ್ಳುವಷ್ಟು ಅಮಾಯಕತೆ ತೋರಿದುದಲ್ಲದೆ ಅದನ್ನು ದೊಡ್ಡ ಸಾಧನೆ ಎಂದೇ ಮೆರೆಸಿತ್ತು. ಅದಕ್ಕೆ ಹಿಂದೆಯೂ ಅಂತಹ ಕರಾರುಗಳನ್ವಯ ತಾಲಿಬಾನಿ ಪ್ರಮುಖರನ್ನೇ ಬಂಧನದಿಂದ ಬಿಡುಗಡೆ ಮಾಡಿದುದುಂಟು (ನವೆಂಬರ್ ೨೦೧೯).
ಪಾಕಿಸ್ತಾನ ಸರ್ಕಾರದ ಪ್ರಚ್ಚನ್ನ ಅಂಗವೇ ಆದ ಐ.ಎಸ್.ಐ. (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಜಗತ್ತಿನಲ್ಲಿಯೆ ಉಗ್ರವಾದದ ಅತಿದೊಡ್ಡ ಪ್ರಾಯೋಜಕ ಎಂದು ನಾಲ್ಕು ದಶಕಗಳಿಂದ ಸ್ಥಿರೀಕೃತವಾಗಿದ್ದರೂ, ಅಮೆರಿಕ ತನ್ನ ಪ್ರಬಲ ಶತ್ರುಗಳೆಂದು ಪರಿಗಣಿಸುತ್ತಿರುವುದು ಇರಾನ್, ಕ್ಯೂಬಾ, ಉತ್ತರ ಕೊರಿಯಾ, ಸಿರಿಯಾ ದೇಶಗಳನ್ನು. ಇನ್ನು ಎಲ್ಲೆಡೆ ಭಯೋತ್ಪಾದಕತೆಗೆ ಹಣ ಹರಿದುಬರುತ್ತಿರುವುದು ಸೌದಿ ಅರೇಬಿಯ ಮೊದಲಾದ ತೈಲರಾಷ್ಟ್ರಗಳಿಂದ ಎಂಬುದು ಜಗಜ್ಜಾಹೀರಾಗಿದ್ದರೂ ಆ ದೇಶಗಳೊಡನೆ ಅಮೆರಿಕಕ್ಕಿರುವ ದಾಯಾದಿ ಬಾಂಧವ್ಯ ಅಸ್ಖಲಿತ. ಪಾಕಿಸ್ತಾನದಿಂದ ತರಬೇತಿಗೊಂಡ ಆಫಘಾನಿ ತಾಲಿಬಾನಿಗಳು ಎರಡು ಸಾವಿರದಷ್ಟು ಅಮೆರಿಕನರನ್ನೇ ಬಲಿತೆಗೆದುಕೊಂಡಿದ್ದರೂ ದೇಶಾಂತರಗಳ ಭಯೋತ್ಪಾದಕ ಸಂರಚನೆಗಳಿಗೆ ಸಂಬಂಧಿಸಿದ ಅಮೆರಿಕ ಸರ್ಕಾರದ ಗೃಹಖಾತೆಯ ಯಾದಿಯಲ್ಲಿ ಈ ನರಹಂತಕರ ನಮೂದು ಕಾಣದು.
ಅದೆಲ್ಲ ಇರಲಿ. ಇದೀಗ ದುರಾಕ್ರಮಣ ನಡೆಸಿ ತಾಲಿಬಾನಿಗಳು ಅಧಿಕಾರಾಧಿಷ್ಠಿತರಾಗಿರುವುದರ ಬಗೆಗಾಗಲಿ ಇದಕ್ಕೆ ಪಾಕಿಸ್ತಾನ ಪ್ರಚೋದನೆ ನೀಡಿರುವುದರ ಬಗೆಗಾಗಲಿ ತೀಕ್ಷ್ಣ ಖಂಡನೆಯನ್ನು ವ್ಯಕ್ತಪಡಿಸಲೂ ಮಾತು ಒದಗದೆ ಅಮೆರಿಕ ಮೂಕವಾಗಿಬಿಟ್ಟಿದೆ. ಪಾಕಿಸ್ತಾನಕ್ಕೆ ತನ್ನ ಸಹಕಾರಿ ದೇಶವೆಂಬ ಬಿರುದನ್ನು ನೀಡಿರುವುದನ್ನು ರದ್ದುಪಡಿಸಬೇಕೆಂಬ ಯೋಚನೆಯೂ ಆಮೆರಿಕದ ಮನಃಪಟಲದಲ್ಲಿ ಸುಳಿದುಹೋಗಿಲ್ಲ. ಇಂತಹ ನಿಸ್ಸತ್ತ್ವ ದೇಶವು ಜಗತ್ತಿನಿಂದ ಉಗ್ರವಾದವನ್ನು ನಿರ್ಮೂಲ ಮಾಡಬಲ್ಲದೆಂಬ ಭರವಸೆಗೆ ಆಧಾರ ಉಳಿದಿದೆಯೆ? ಅಮೆರಿಕ ಸರ್ಕಾರದ ಪ್ರಾಕಾರದಲ್ಲಿ ಪಾಕಿಸ್ತಾನಕ್ಕೆ ನೀಡಿರುವ (Non-NATO Ally) ವಿಶೇಷ ಸ್ಥಾನಮಾನವನ್ನು ಪುನರ್ವಿಮರ್ಶಿಸಬೇಕಾಗಿದೆಯೆಂಬ ಸೊಲ್ಲು ಕೂಡಾ ಇದುವರೆಗೆ ಅಧ್ಯಕ್ಷ ಬೈಡೆನ್ರಿಂದ ಹೊಮ್ಮಿಲ್ಲ.
ತಾತ್ಪರ್ಯ: ೨೦೦೧ ಸೆಪ್ಟೆಂಬರ್ ೧೧ರ ಮತ್ತು ಅನಂತರದ ಘಟನಾವಳಿಗಳಿಂದಲೂ ಅಮೆರಿಕದ ಸ್ವಾರ್ಥೈಕಕೇಂದ್ರಿತ ತರ್ಕಹೀನ ವಿದೇಶಾಂಗ ನೀತಿ ಬದಲಾಗುವ ಸೂಚನೆ ಕಾಣುತ್ತಿಲ್ಲ. ಉಗ್ರವಾದ ನಿಯಂತ್ರಣಾಭಿಯಾನದ ನೇತೃತ್ವವನ್ನು ಇನ್ನೂ ವ್ಯಾಪಕವೂ ದೃಢಚಿಂತನೆಗೆ ಬದ್ಧವಾದುದೂ ಆದ ಬಹುರಾಷ್ಟ್ರ ಒಕ್ಕೂಟ ವಹಿಸಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವಾನುಗುಣ ಪದ್ಧತಿಯನ್ನೂ ಉದಾರ ನೀತಿಯನ್ನೂ ಮಾನವಹಕ್ಕುಗಳ ಅನುಲ್ಲಂಘ್ಯತೆಯನ್ನೂ ಧಿಕ್ಕರಿಸುವ ಶಕ್ತಿಗಳಿಗೆ ಇಪ್ಪತ್ತೊಂದನೇ ಶತಮಾನದಲ್ಲಿ ಆಸ್ಪದವಿರಬಾರದು. ಅಮೆರಿಕ ಈಗಲಾದರೂ ತನ್ನ ಭ್ರಮೆಯ ಆವರಣದಿಂದ ಹೊರಬಂದೀತೆ?