ಸಂನ್ಯಾಸಿಗಳು, ಮಠಾಧೀಶರು ಪಾದುಕೆ ಅಥವಾ ಹಾವುಗೆಗಳನ್ನು ಪಾದಗಳಿಗೆ ಧರಿಸಿಯೇ ಓಡಾಡುವುದು. ಚರ್ಮದಿಂದ ಮಾಡಿದವನ್ನು ಹಾಕಿ ನಡೆದಾಡಿದರೆ ಅದು ಭೂತಾಯಿಗೆ ಮಾಡುವ ಅಪಚಾರವೆಂಬ ಕಾರಣವಷ್ಟೇ ಅಲ್ಲ, ಚಪ್ಪಲಿ ತಯಾರಿಕೆಯ ಹಿಂದಿರುವ ಪ್ರಾಣಿಹತ್ಯೆಯ ಪಾಪಪ್ರಜ್ಞೆಯೂ ಇದ್ದೀತು.
ಸುಮ್ಮನೆ ಚಪ್ಪಲಿ ಎಂದರೆ ಅರ್ಥವಾಗುತ್ತಲ್ಲಾ, ಬಹುವಚನವೇಕೆ? ಆಕ್ಷೇಪಣೆಯಿದ್ದರೆ ಮುಂದೆ ಓದಿ. ರೂಢಿಗತ ಭಾಷೆಯಲ್ಲಿ ಈ ಪ್ರಯೋಗ ಸರಿಯೇ ಆದರೂ, ಚಪ್ಪಲಿ ಒಂಟಿಯಾಗಿರುವುದನ್ನು ಒಪ್ಪಿಕೊಳ್ಳಲಾಗದಷ್ಟೆ! ಪ್ರಾಯಶಃ ಒಂಟಿಕಾಲಿಗನೂ ಸಹ ಒಂದೇ ಚಪ್ಪಲಿಯನ್ನು ಕೊಳ್ಳಲಾರ. ಹಾಕಿಕೊಳ್ಳೋದು ಒಂದೇ ಕಾಲಿಗೇ ಆಗಿದ್ದರೂ ಹಣವನ್ನಂತೂ ಜೋಡಿ ಚಪ್ಪಲಿಗಳಿಗೇ ನೀಡಬೇಕು. ಜೋಡಿಯಾಗಿ ಇರುವುದರಿಂದಲೇ ಜೋಡು. ಇವುಗಳ ಕೆಲಸ ಮಾನವರ ಪಾದಸೇವೆಯೇ ಹೌದಾದ್ದರಿಂದ ಇವು ಪಾದರಕ್ಷೆಗಳು, ಪಾದುಕೆಗಳು ಎನಿಸಿಕೊಂಡಿರೋದು.
ಪಾದುಕೆ, ಪಾದರಕ್ಷೆ, ಜೋಡು, ಎಕ್ಕಡ, ಕೆರ, ಮೆಟ್ಟು ಇತ್ಯಾದಿಗಳು ಚಪ್ಪಲಿಗಳಿಗೆ ಇರುವ ಪರ್ಯಾಯ ಪದಗಳು. ಪಾದುಕೆ ಎಂಬುದು ಪಾದಕ್ಕೆ ಹಾಕಿಕೊಳ್ಳುವ ಮರದ ಚಪ್ಪಲಿ. ಇವಕ್ಕೆ ಹೆಚ್ಚಿನ ಗೌರವ ಬಂದಿರುವುದಕ್ಕೆ ಕಾರಣ ಅವು ಮರದಿಂದ ಮಾಡಲ್ಪಟ್ಟವು ಎಂಬ ಕಾರಣಕ್ಕೆ. ಅದೊಂದು ಕಾರಣವಾದರೆ, ರಾಮಾಯಣದಲ್ಲಿ ಬರುವ ಪಾದುಕಾ ಪಟ್ಟಾಭಿಷೇಕ ಪ್ರಸಂಗ ಇನ್ನೊಂದು ಕಾರಣ. ಭರತನು ತನ್ನ ಅಣ್ಣ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ಹದಿನಾಲ್ಕು ವರ್ಷಗಳ ಕಾಲ ರಾಜ್ಯ ಪರಿಪಾಲನೆ ಮಾಡಿದ. ಅಂಥ ಭ್ರ್ರಾತೃಪ್ರೇಮ ಮೆರೆದದ್ದರಿಂದಲೇ ನಮ್ಮ ಪುಣ್ಯಭೂಮಿಗೆ ಭರತವರ್ಷ ಎಂಬ ಹೆಸರು ಬರಲೂ ಒಂದು ಕಾರಣ ಇದ್ದಿರಬೇಕು. ಮತ್ತಿಬ್ಬರೆಂದರೆ ದುಶ್ಯಂತ-ಶಕುಂತಲೆಯರ ಮಗ ಭರತ ಹಾಗೂ ಬಾಹುಬಲಿ(ಗೋಮ್ಮಟೇಶ್ವರ)ಯ ಹಿರಿಯ ಸೋದರ ಭರತ. ಇರಲಿ, ಆದರೆ ಪಾದುಕೆಯ ವಿಷಯ ಆ ಇಬ್ಬರು ಭರತರಿಗೆ ಸಂಬಂಧಿಸಿಲ್ಲ.
ಸಂನ್ಯಾಸಿಗಳು, ಮಠಾಧೀಶರು ಪಾದುಕೆ ಅಥವಾ ಹಾವುಗೆಗಳನ್ನು ಪಾದಗಳಿಗೆ ಧರಿಸಿಯೇ ಓಡಾಡುವುದು. ಚರ್ಮದಿಂದ ಮಾಡಿದವನ್ನು ಹಾಕಿ ನಡೆದಾಡಿದರೆ ಅದು ಭೂತಾಯಿಗೆ ಮಾಡುವ ಅಪಚಾರವೆಂಬ ಕಾರಣವಷ್ಟೇ ಅಲ್ಲ, ಚಪ್ಪಲಿ ತಯಾರಿಕೆಯ ಹಿಂದಿರುವ ಪ್ರಾಣಿಹತ್ಯೆಯ ಪಾಪಪ್ರಜ್ಞೆಯೂ ಇದ್ದೀತು.
ಚರ್ಮದಿಂದ ಮಾಡಿದ ಚಪ್ಪಲಿಗಳನ್ನು ಚಮ್ಮಾವುಗೆ ಎನ್ನುವರು.
ಕುವೆಂಪು ಅವರ ನಾಡ ಪ್ರೇಮದ ಗೀತೆಯೊಂದರಲ್ಲಿ ನೀ ಮೆಟ್ಟುವ ನೆಲ ಅದು ಕರ್ನಾಟಕ ಎಂದಿದ್ದಾರೆ. ಇಲ್ಲಿ ಮೆಟ್ಟು ಎಂಬುದಕ್ಕೆ ತುಳಿ ಎಂಬ ಅರ್ಥವಿರುವುದನ್ನು ಗಮನಿಸಿ. ನಾವು ನಡೆಯುವ ಹಾದಿಯಲ್ಲಿ ಕಲ್ಲು, ಮುಳ್ಳುಗಳನ್ನು ಮೆಟ್ಟುತ್ತೇವಾದ್ದರಿಂದ ಅವು ಮೆಟ್ಟುಗಳು.
ಅಡಿಯಿಂದಲೇ ಗತಿ
ಸಮಾಜಸುಧಾರಕ ಬಸವಣ್ಣನವರ ಎನಗಿಂತ ಕಿರಿಯರಿಲ್ಲ ಎಂಬ ಪ್ರಸಿದ್ಧ ವಚನದ ಹಿಂದೆ ಚಪ್ಪಲಿಗಳ ಪ್ರಸಂಗವಿದೆ ಎಂಬುದು ಬಹುಮಂದಿಗೆ ತಿಳಿದಿರಲಾರದು. ಹೀನಕುಲದ ಹರಳಯ್ಯ, ಬಸವಣ್ಣನವರಿಗೆ ತನ್ನ ತೊಡೆಯ ಚರ್ಮವನ್ನೇ ತೆಗೆದು ಚಪ್ಪಲಿ ಮಾಡಿ ಗುರುಕಾಣಿಕೆಯಾಗಿ ನೀಡುತ್ತಾನೆ. ಬಸವಣ್ಣ ಅವುಗಳನ್ನು ಪಾದಗಳಿಗೆ ಹಾಕಿಕೊಳ್ಳದೆ ತಮ್ಮ ತಲೆಯ ಮೇಲಿರಿಸಿಕೊಳ್ಳುತ್ತಾರೆ; ಎನಗಿಂತ ಕಿರಿಯರಿಲ್ಲ ಎಂದು ಉದ್ಗರಿಸಿ ಹಿರಿತನ ಮೆರೆಯುತ್ತಾರೆ. ಭಾರತೀಯ ಪರಂಪರೆಯಲ್ಲಿ ಹಿರಿಯರ ಪಾದಕ್ಕೆರಗುವುದು, ಪಾದಪೂಜೆ ಮಾಡುವುದು ಒಂದು ಸತ್ಸಂಪ್ರದಾಯ. ಆದರೆ ಪಾದರಕ್ಷೆಯ ಪ್ರಕರಣದ ಮೂಲಕ ಕೀಳರಿಮೆಯನ್ನು ಮೇಲರಿಮೆ ಮಾಡಿದುದಕ್ಕೆ ಇದು ಶ್ರೇಷ್ಠ ಉದಾಹರಣೆ.
ಅಡಿಯಿಂದ ಮುಡಿಯವರೆಗೆ ನೋಡುವುದೆಂದರೆ ವ್ಯಕ್ತಿಯೊಬ್ಬನ ಬಾಹ್ಯರೂಪವನ್ನು ಅಳೆಯುವುದು ಎಂದಾಗ, ಮಾನವದೇಹದ ಮೌಲ್ಯಮಾಪನದ ಆರಂಭವೇ ಕಾಲಿನಿಂದ ಅಲ್ಲವೇ! ಸರ್ವಜ್ಞ ಕವಿಯ ಒಂದು ತ್ರಿಪದಿ ಕರೆಯದೆ ಬರುವವನ ಬರೆಯದೆಲೆ ಓದುವವನ, ಬರಿಗಾಲಿನಿಂದ ನಡೆವವನ, ಕರೆತಂದು ಕೆರದಿ ಹೊಡೆಯೆಂದ ಎಂದು ಚಪ್ಪಲಿಯ ಅಗತ್ಯ, ಮಹತ್ತ್ವವನ್ನು ಮನದಟ್ಟು ಮಾಡುತ್ತದೆ. ನಾಗರಿಕ ಸಮಾಜದಲ್ಲಂತೂ ಬರಿಗಾಲಿನವನು ಗತಿಗೆಟ್ಟವ ಎಂದೇ ಗುರುತಿಸಲ್ಪಡುವನು. ಆದರೆ ಪ್ರಕೃತಿಚಿಕಿತ್ಸಕರ ಚಿಂತನೆ ಇದಕ್ಕೆ ವಿರುದ್ಧವಾದುದು. ಬರಿಗಾಲಲ್ಲಿ ನಡೆಯುವ ಮೂಲಕ ಪಾದಗಳು ಹೆಚ್ಚುಹೆಚ್ಚು ಭೂಸ್ಪರ್ಶ ಮಾಡುತ್ತಿದ್ದರೆಯೇ ದೇಹವು ಆರೋಗ್ಯವಾಗಿರುವುದಂತೆ. ಭೂಮಿಯಲ್ಲಿರುವ ಆಯಸ್ಕಾಂತೀಯ ಶಕ್ತಿಯು ರಕ್ತದಲ್ಲಿರುವ ಕಬ್ಬಿಣದಂಶದ ಮೂಲಕ ಶರೀರಕ್ಕೆ ಹರಿಯುವುದಂತೆ. ಅಂತೆ ಏನು, ಇದು ವೈಜ್ಞಾನಿಕ ಸತ್ಯವೂ ಹೌದೆಂದು ಪ್ರಮಾಣಿತಗೊಂಡಿದೆ.
ನನ್ನ ಪ್ರಾಥಮಿಕ ಶಾಲಾ ಪಠ್ಯದಲ್ಲಿ ಗೋವಿನ ಹಾಡು ಪದ್ಯವಿತ್ತು. ಅದರಲ್ಲಿ ಮನುಷ್ಯನಿಗೆ ಏನೆಲ್ಲವನ್ನೂ ನೀಡುವ ಹಸು ಹಾಯಿಹರಿಗೋಲಾದೆ, ರಾಯಭೇರಿಗೆಯಾದೆ, ರಾಯರ ಕಾಲಿಗೆ ಮುಳ್ಳೊತ್ತುವಾದೆ ಎಂದೆಲ್ಲ ಹೇಳಿ ಕೊನೆಯಲ್ಲಿ ನೀನಾರಿಗಾದೆಯೋ ಎಲೆ ಮಾನವ ಎಂದು ಮನುಷ್ಯನನ್ನೇ ಕೆಣಕುತ್ತದೆ! ಇಲ್ಲಿ ಕವಿಯು ಕಾಲಿಗೆ ಧರಿಸುವ ಚಪ್ಪಲಿಗಳನ್ನು ಮುಳ್ಳೊತ್ತು ಎಂಬ ಹೊಸ ಪದದಿಂದ ಗುರುತಿಸಿದ್ದಾನೆ.
ಚಪ್ಪಲಿಯು ಪಾದದ ರಕ್ಷಕ ಅಷ್ಟೇ ಅಲ್ಲ, ಅರಿ (ಮುಳ್ಳು) ಶಿಕ್ಷಕ ಕೂಡಾ ಹೌದಲ್ಲವೇ, ಮುಳ್ಳನ್ನೇ ಒತ್ತುವ ಮೂಲಕ?
ಅಂಗಾಲಿನ ದುರಸ್ತು
ಹಳ್ಳಿಗಾಡಿನಲ್ಲಿ ಇಂದಿಗೂ ಬರಿಗಾಲ ಬಂಟರನ್ನು ಹೆಚ್ಚು ಕಾಣಬಹುದು. ಇಂಥವರು ನಡೆವಾಗ ಎಡವದಿರುತ್ತಾರೆಯೇ? ಹಾಗೆ ಕಲ್ಲಿಗೋ, ರಸ್ತೆಯ ಉಬ್ಬಿಗೋ ಎಡವಿ ಕಾಲಿನ ಉಂಗುಷ್ಟಕ್ಕೆ ಗಾಯ ಮಾಡಿಕೊಳ್ಳುವ, ಪಾದಕ್ಕೆ ಮುಳ್ಳು ಚುಚ್ಚಿಕೊಳ್ಳುವ ಅಪಾಯ ತಪ್ಪಿದ್ದಲ್ಲ. ಹಾಗೆ ಆದಾಗ ಹಳ್ಳಿಗಾಡಿನಲ್ಲಿ ಅದಾವ ವೈದ್ಯ, ದಾದಿಯರು ಬ್ಯಾಂಡೇಜು ಬಟ್ಟೆ, ಟಿಂಕ್ಚರ್, ಹತ್ತಿ ಹಿಡಿದು ಧಾವಿಸಿಯಾರು! ಗಾಯಕ್ಕಿಷ್ಟು ಅರಿಶಿನಪುಡಿ ತುಂಬಿ, ಬಟ್ಟೆಯ ತುಂಡನ್ನು ಬಿಗಿದುಕೊಂಡು ಹಾಗೆ ವಾಸಿ ಮಾಡಿಕೊಳ್ಳುವುದೇ ಹೆಚ್ಚು. ಅಂಗಾಲಿಗೆ ಜಾಲಿಮುಳ್ಳು ಚುಚ್ಚಿಕೊಂಡರಂತೂ ಅಮ್ಮಾ ಎಂದು ನೋವು ತಿಂದು ಮುಳ್ಳನ್ನು ಉಪಾಯವಾಗಿ ಕಿತ್ತು ಹಾಕುತ್ತಾರೆ. ಮುಳ್ಳು ಮುರಿದು ಅಂಗಾಲಿನಲ್ಲೇ ಉಳಿದರೆ, ಅದನ್ನು ಇನ್ನೊಂದು ದೊಡ್ಡ ಮುಳ್ಳಿನಿಂದಲೋ, ಸೂಜಿ ಅಥವಾ ಬಟ್ಟೆ ಪಿನ್ನಿನಿಂದಲೋ, ಚಿಮಟದಿಂದಲೋ ತೆಗೆಯಬೇಕಾಗುತ್ತದೆ. ತೆಗೆಯದೆ ಹಾಗೆಯೆ ಬಿಟ್ಟರಂತೂ ಒಂದೆರಡು ದಿನಗಳಲ್ಲೇ ಕೆಂಪಾಗಿ ಊದುತ್ತದೆ, ನೀರು ಸೇರಿ ಕೀತುಕೊಳ್ಳುತ್ತದೆ.
ಇಂಥ ಯಮಯಾತನೆ ಅನುಭವಿಸಿದವರಿಗಷ್ಟೆ ಚಪ್ಪಲಿಯ ಅಗತ್ಯದ ಅರಿವಾಗುವುದು.
ಈಗಂತೂ ನಡೆದಾಡುವ ವಯಸ್ಸಿಗೇ ಪಾದರಕ್ಷೆ ಬಂದಿರುತ್ತದೆ. ನನ್ನ ಶಾಲಾ ದಿನಗಳಲ್ಲಿ ಸಮವಯಸ್ಕರೆಲ್ಲ ಬರಿಗಾಲ ವಿದ್ಯಾರ್ಥಿಗಳೇ ಆಗಿರುತ್ತಿದ್ದರು. ಚಪ್ಪಲಿಯ ಅಗತ್ಯ ಇರುತ್ತಿದ್ದುದು ಹೆಂಟೆ ಹೊಲದಲ್ಲಿ ಇಲ್ಲವೆ ಮುಳ್ಳು ಕಲ್ಲು ಇರುವ ಬಯಲಲ್ಲಿ ದುಡಿಯುತ್ತಿದ್ದವರಿಗಷ್ಟೆ. ಊರಿನ ದೊಡ್ಡ ಕುಳಗಳು, ಧಣಿಗಳು, ಪಟೇಲ ಶ್ಯಾನುಭೋಗರು, ಊರಿನ ಹಟ್ಟಿಯವರು ಮಾಡಿಕೊಡುತ್ತಿದ್ದ ಚಪ್ಪಲಿಗಳನ್ನು ಮೆಟ್ಟಿಕೊಂಡು ಜರ್ ಬರ್ ಎಂದು ಜಬರದಸ್ತು ತೋರಿಸುತ್ತಿದ್ದರು. ಹೊಸ ಚಪ್ಪಲಿಗಳಿಗೆ ಹರಳೆಣ್ಣೆ ಸವರಿ ಎರಡು-ಮೂರು ದಿನ ಹದಗೊಳಿಸದೆ ಇದ್ದರೆ ಕಾಲು ಕಚ್ಚಿಸಿಕೊಳ್ಳುವ ಅಪಾಯ ತಪ್ಪಿದ್ದಲ್ಲ. ಪೇಟೆ ಅಂಗಡಿಯಿಂದ ಸೊಲ್ಲಾಪುರದ ಜರ್ ಬರ್ ಚಡಾವು ಕೊಂಡು ತಂದು ಮೆಟ್ಟಿದರಂತೂ ಅವರು ದೊಡ್ಡ ಪಾಳೆಗಾರರಿಗೆ ಸಮಾನ!
ಒಳಗು-ಹೊರಗು
ಅರಸರಾಳ್ವಿಕೆಯ ಮೈಸೂರು ಸಂಸ್ಥಾನದಲ್ಲಿ ಉನ್ನತ ಶಿಕ್ಷಣ ಎಂದರೆ ಅದು ಆಂಗ್ಲರ ಭಾಷೆಯಲ್ಲೇ ಆಗಬೇಕಿತ್ತು. ವಿಶ್ವವಿದ್ಯಾಲಯದ ಆವರಣದಲ್ಲಂತೂ ಬಿಳಿಯರ ಭಾಷೆಗೆ ಇನ್ನಿಲ್ಲದ ಗೌರವ. ಕನ್ನಡವೆಂದರೆ ತಾತ್ಸಾರ. ಅಂಥ ಸನ್ನಿವೇಶದಲ್ಲಿ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿ ಅವರು ಇಂಗ್ಲಿಷಿನ ಪಾರುಪತ್ಯವನ್ನು ಚಪ್ಪಲಿಗಳ ಸ್ಥಾನಕ್ಕೆ ಹೋಲಿಸಿದ್ದರು. ಅಂದರೆ ಹೊರಗಿನ ವ್ಯವಹಾರಕ್ಕೆ ಆ ಭಾಷೆಯನ್ನು ಎಷ್ಟೇ ಬಳಸಿದರೂ, ನಮ್ಮ ಮನೆಯಲ್ಲಿ ಮಾತ್ರ ಅದಕ್ಕೆ ಹೊಸ್ತಿಲ ಹೊರಗಿನ ಸ್ಥಾನ. ಅಂದರೆ ಕನ್ನಡ ನಮ್ಮ ಮನೆಯ ಮಾತು, ಅದರೊಳಕ್ಕೆ ಇಂಗ್ಲಿಷನ್ನು ಸೇರಿಸಲಾಗದು. ಇಂಗ್ಲಿಷ್ ಏನಿದ್ದರೂ ಉತ್ಸವಮೂರ್ತಿ. ಅದರೆ ಮಾಡರ್ನ್ ಮಮ್ಮಿ-ಆಂಟಿಗಳು ರಬ್ಬರಿನ ಸಡಿಲ ಸ್ಲಿಪ್ಪರ್ ಮೆಟ್ಟಿಕೊಂಡು ಅಡುಗೆಮನೆಯಲ್ಲೂ ಟಪ್ ಟಪ್ ಎಂದು ಓಡಾಡುವುದು ಬೇರೆ ವಿಷಯ. ಮೃದು ರಬ್ಬರಿನ ಸ್ಲಿಪ್ಪರ್ಗಳು ಅಂಗಾಲಿಗೆ ಮೆತ್ತನೆಯ ಅನುಭವ ನೀಡುತ್ತವೆ. ಆದರೂ ಅವುಗಳ ಪೆಡಸಾದ ಅಡ್ಡಪಟ್ಟಿ (ಸ್ಟ್ರಾಪು) ಪಾದದ ಮೆದು ಚರ್ಮಕ್ಕೆ ಘಾಸಿ ಮಾಡುವುದಂತೂ ದಿಟ.
ಮಾರುಕಟ್ಟೆಯಲ್ಲಿ ಸ್ಯಾಂಡಲ್ಸ್ ಎಂದೇ ಗುರುತಿಸಲ್ಪಡುವ ಇವುಗಳ ಬೇಡಿಕೆಗೆ ಮುಖ್ಯ ಕಾರಣ – ಇವು ಚರ್ಮದ ಚಪ್ಪಲಿಗಿಂತ ಅಗ್ಗದ ಬೆಲೆಯವು ಎಂಬುದಷ್ಡೆ. ನಾನು ಒಮ್ಮೆ ಅಂಥ ಸ್ಯಾಂಡಲ್ಸ್ ಮೆಟ್ಟಿಕೊಂಡು ನಮ್ಮೂರಿಗೆ ಹೋಗಿದ್ದೆ. ತೊರೆಯಂಚಿನ ಮರಳಿನುದ್ದಕ್ಕೆ ನಡೆದು ಹೋದಾಗ, ಅವುಗಳ ಹಿಮ್ಮಡಿಯು ಚಿಕ್ಕ ಸಲಿಕೆಯಂತೆ ಮರಳನ್ನು ಹಿಂದಿನಿಂದ ಎತ್ತಿ ಎತ್ತಿ ಬೆನ್ನಿನೆತ್ತರಕ್ಕೆ ಚಿಮ್ಮಿಸತೊಡಗಿತು. ಅದರಿಂದ ಸ್ವಲ್ಪಮಟ್ಟಿನ ಮಾರ್ಗೋಪಾಯ ಎಂದರೆ ಹೆಜ್ಜೆಗಳನ್ನು ನಿಧಾನವಾಗಿ ಇಡುವುದಷ್ಟೆ.
ಚಪ್ಪಲಿಗಳಿಗೂ ಲಿಂಗಭೇದವುಂಟು. ಪುರುಷಚಪ್ಪಲಿಗಳಿಗೆ ಬಿರುಸು, ಸಪ್ಪಳ ಎರಡೂ ಹೆಚ್ಚು, ಕಿಮ್ಮತ್ತು ಸ್ವಲ್ಪ ಕಮ್ಮಿ. ಮಹಿಳಾ ಚಪ್ಪಲಿಗಳನ್ನು ಲೇಡೀಸ್ ಚಪ್ಪಲ್ಸ್ ಎಂದರೇನೇ ಅಂಗಡಿಯವರಿಗೆ ಅರ್ಥವಾಗುವುದು. ಅವುಗಳಿಗೆ ಚಮಕ್ಕು, ಕಿಮ್ಮತ್ತು ಜಾಸ್ತಿ. ಅತ್ಯಾಧುನಿಕ ಲಲನಾಮಣಿಯವರು ಕೇವಲ ಶೋಕಿಗಾಗಿ ಏರು-ಹಿಮ್ಮಡಿಯ ಚಪ್ಪಲಿಗಳನ್ನು ಮೆಟ್ಟಿಕೊಂಡು ನಡೆದಾಡುವಾಗ ಮಂದಗಾಮಿ ಖುರಪುಟದ ಸಪ್ಪಳವಾಗುವುದು. ಅಂಥವರ ನಡಿಗೆ ಬಹು ನಾಜೂಕು. ತಮ್ಮನ್ನು ನಾಲ್ಕು ಮಂದಿ ಗಮನಿಸುತ್ತಿದ್ದಾರೆಂದು ತಿಳಿದರಂತೂ ಅವರ ನಡಿಗೆ ಪರದೇಶಿಯೇ ಆಗಿಬಿಡುವುದು! ಅಭ್ಯಾಸವಿಲ್ಲದೆ ಇಂಥ ಏರುಹಿಮ್ಮಡಿಯ ಚಪ್ಪಲಿ ಹಾಕಿದವರು ನಯವಾದ ಗ್ರಾನೈಟು ನೆಲದ ಮೇಲೆ ಜಾರಿ ಬಿದ್ದು ಕಾಲು ಊನ ಮಾಡಿಕೊಂಡಿರುವುದು ವಿರಳವಲ್ಲ.
ಬಯ್ಗುಳಗಳಲ್ಲಿಯೂ….
ಗ್ರಾಮೀಣ ಬದುಕಿನಲ್ಲಿ ಬಯ್ಗುಳಕ್ಕೆ ವಿಶಿಷ್ಟ ಸ್ಥಾನವುಂಟು. ಅದು ಅನಕ್ಷರಸ್ಥ ಒರಟರ ಒಂದು ಆಯುಧವೆಂದರೂ ತಪ್ಪಾಗದು. ಸುಳ್ಳು-ಮೋಸ-ಕಳ್ಳತನ-ಹಾದರ ಮಾಡಿದವರ ಮರ್ಯಾದೆಯನ್ನು ಬೀದಿಯಲ್ಲಿ ತೆಗೆಯಲು ಚಪ್ಪಲಿ, ಮೆಟ್ಟು, ಕೆರ, ಜೋಡು ಮುಂತಾದವುಗಳ ವಾಕ್ಪ್ರಯೋಗ ಆಗುತ್ತಿರುತ್ತದೆ. ಮಾನ-ಮರ್ಯಾದೆ-ಗೌರವ – ಈ ಮೂರೂ ಬಿಟ್ಟವರಿಗೆ ಇವೂ ಲೆಕ್ಕಕ್ಕೆ ಬರೋದಿಲ್ಲ ಬಿಡಿ. ಮೆಟ್ನಾಗೆ ಹೊಡೀತೀನಿ, ಕೆರ ತಗೊಂಡು ಹೊಡೀತೀನಿ, ನಿನ್ನ ಯೋಗ್ಯತೆಗೆ ನನ್ನ ಜೋಡು ದಬ್ಬಾಕ, ನಿನ್ನದೇನು ನಾಲಿಗೇನಾ, ಇಲ್ಲ ಕೆರಾನಾ? ಮೊದಲಾದ ಬಯ್ಗಳು ಬರಿಗಾಲಿನವರ ಬಾಯಿಂದಲೂ ಆಯಾಚಿತವಾಗಿ ಬರುತ್ತವೆ. ಪದಬಳಕೆಯಲ್ಲಿ ಮಡಿವಂತಿಕೆ ಇರಿಸಿಕೊಂಡವರ ಬಯ್ಗಳು ಆಗಬೇಕಾ ಚಪ್ಪಲಿ ಪೂಜೆ? ಎಂಬುದಕ್ಕಷ್ಟೆ ಸೀಮಿತ. ಇಂಥ ಬಯ್ಗಳು ಸಾಮಾನ್ಯವಾಗಿ ಪುರುಷ-ಪ್ರಧಾನ ಎಂದೇ ಬಹುಮಂದಿಯ ಅಭಿಪ್ರಾಯ.
ದೆವ್ವಗಳಿಗೆ ಚಪ್ಪಲಿಯ ಭಯ ಉಂಟಂತೆ. ಅದರಿಂದಾಗಿಯೇ ರಾತ್ರಿ ಕೆಟ್ಟ ಕನಸು ಕಾಣುವ ಹೆದರುಪುಕ್ಕರು ಹಾಸಿಗೆ ಬದಿಯಲ್ಲಿ ಚಪ್ಪಲಿಯಿಟ್ಟು ಮಲಗುವರಂತೆ. ದೆವ್ವದ ಪಾದಗಳು ಹಿಂದು ಮುಂದಾಗಿರುವ ಕಾರಣ ಹಾಸಿಗೆ ಬದಿಯ ಚಪ್ಪಲಿಗಳು ಕಳುವಾಗುವ ದಿಗಿಲೂ ಇರುವುದಿಲ್ಲ. ಈ ವಿಷಯದಲ್ಲಿ ಬೀದಿನಾಯಿಗಳೇ ಅಪಾಯಕಾರಿ.
ಸಾಮಾನ್ಯವಾಗಿ ಚಪ್ಪಲಿ ಕಳುವಾಗುವ ಸ್ಥಳಗಳು ಎಂದರೆ – ದೇವಸ್ಥಾನ, ಕಲ್ಯಾಣಮಂದಿರ, ಮಠ, ಇಲ್ಲವೆ ಪೂಜಾ ಸಮಾರಂಭಗಳು. ಗರ್ಭಗುಡಿಯ ಮುಂದೆ ನಿಂತು ದೇವರನ್ನು ಪ್ರಾರ್ಥಿಸುವಾಗ – ಅರ್ಚಕರಿಂದ ತೀರ್ಥ, ಪ್ರಸಾದ, ಹೂ ಪಡೆಯುವಾಗ ನಮ್ಮ ಮನಸ್ಸಿನಲ್ಲಿ ಹೊರಗೆ ಬಿಟ್ಟಿರುವ ಚಪ್ಪಲಿಗಳ ಮೇಲಿರುತ್ತದೆಯೇ? ಹಾಗೇನಿಲ್ಲ ಎಂದು ಡಾಂಭಿಕರಂತೆ ಬೀಗುವವರು ಬಸವಣ್ಣನವರ ಒಂದು ವಚನವನ್ನು ಓದಲೇಬೇಕು. ಅದರ ಸಾಲುಗಳು ಹೀಗಿವೆ:
ಕೆರಹಿನ ಧ್ಯಾನ
..ಹಾಗದ ಕೆರಹ ಹೊರಗೆ ಕಳೆದು ದೇಗುಲಕ್ಕೆ ಹೋಗಿ ಎರಗುವವನಂತೆ, ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ! ಧನವನಿರಿಸದಿರಾ, ಇರಿಸಿದೊಡೆ ಭವ ಬಪ್ಪದು ಒಪ್ಪದು, ಕೂಡಲಸಂಗನ ಶರಣರಿಗೆ ಸವೆಸಲೇ ಬೇಕು.
ಇಂಥ ಕೆರಹಿನ ವಚನವು ಬಿ.ಆರ್. ಲಕ್ಷ್ಮಣರಾಯರ ಲೇಖನಿಗೂ ಆಹಾರವಾಗಿ ಒಂದು ಸಾದಾ ಸೀದಾ ತುಂಟು ಪದ್ಯವಾಯಿತು, ಅದು ಹೀಗಿದೆ:
…ದೇವರೆ, ನನ್ನನ್ನು ಪ್ರೀತಿಸುತ್ತಿರುವ ಹುಡುಗಿ ನನ್ನನ್ನು ಒಪ್ಪಲಿ, ಇಂದು ಕನಸಿನಲ್ಲಾದರೂ ಬಂದು ನನ್ನನ್ನು ಅಪ್ಪಲಿ. ನನ್ನಪ್ಪ ಅವಳಪ್ಪನಿಂದ ಬರಬಹುದಾದ ವಿಘ್ನಗಳು ತಪ್ಪಲಿ, ಸದ್ಯಕ್ಕೆ ಸುರಕ್ಷಿತವಾಗಿರಲಿ ಹೊರಗೆ – ನನ್ನ ಚಪ್ಪಲಿ!
ಹೀಗೆ ಹೊರಗಿನ ಧ್ಯಾನ ಮಾಡದೆಯೂ ಮೂರು ಬಾರಿ ಚಪ್ಪಲಿ ಕಳೆದುಕೊಂಡ ಅನುಭವ ನನಗುಂಟು. ಮೊದಲ ಅನುಭವ ಆದದ್ದು ನಮ್ಮ ಮನೆಗೆ ಹತ್ತಿರವೇ ಇರುವ ಪ್ರಸಿದ್ಧ ದೇವಾಲಯದ ಬಳಿ. ಅಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತ್ಯೇಕವಾದ ಪಾದರಕ್ಷಾ ಕಟ್ಟೆ ಇದೆ. ಅಲ್ಲಿ ನಮ್ಮ ಪಾದರಕ್ಷೆಗಳನ್ನು ಬಿಟ್ಟು ಗುರುತಿನ ಸಂಖ್ಯೆಯ ಚೀಟಿ (ಟೋಕನ್) ಪಡೆದುಕೊಳ್ಳಬಹುದು. ನಾನು ಅಲ್ಲಿಗೆ ಹೋದಾಗಲೆಲ್ಲ ಅಂಥ ಶಿಸ್ತನ್ನು ಪಾಲಿಸುವವನೇ ಅನ್ನಿ. ಆದರೆ ಅಂದು ವಿಶೇಷ ಪೂಜಾದಿನ ಆಗಿತ್ತಾದ್ದರಿಂದ ಸರದಿಯ ಸಾಲು ಹನುಮಪ್ಪನ ಬಾಲವಾಗಿ ಬೆಳೆದಿತ್ತು. ಸಾಲಿನಲ್ಲಿ ನಿಲ್ಲುವ ವ್ಯವಧಾನವಿಲ್ಲದ ಅನೇಕರು ಗೇಟಿನ ಒಂದು ಬದಿಯಲ್ಲಿ ಚಪ್ಪಲಿ ಬಿಡುತ್ತಿದ್ದುದನ್ನು ನೋಡಿ ನಾನೂ ಅದನ್ನೇ ಮಾಡಿದೆ. ಹನುಮಪ್ಪನ ದರ್ಶನ ಮಾಡಿಕೊಂಡು ಬಂದು ನೋಡಿದರೆ ನನ್ನ ಚಪ್ಪಲಿಗಳು ಮಾಯ! ಸಾಕಷ್ಟು ಹುಡುಕಾಡಿದರೂ ಅವು ಕಾಣದಾಗಿ ಬರಿಗಾಲಿನಲ್ಲೇ ಮನೆಗೆ ಬರಬೇಕಾಯಿತು. ಅವು ಎರಡು ತಿಂಗಳ ಹಿಂದಷ್ಟೆ ಕೊಡಂಥವು ಎಂದಾಗ ನನಗಾದ ಸಂಕಟವನ್ನು ನೀವೇ ಊಹಿಸಿಕೊಳ್ಳಿ.
ಇನ್ನೊಮ್ಮೆ ಹೀಗಾದದ್ದು, ಒಂದು ಮದುವೆಗೆ ಹೋಗಿದ್ದಾಗ. ಅಲ್ಲಿ ಆದದ್ದು ಮೊದಲ ನಷ್ಟಕ್ಕೆ ಅರ್ಧದಷ್ಟು ಮಾತ್ರ ಎಂದು ಸಮಾಧಾನ ಪಡಬೇಕಾಗಿಲ್ಲ. ಏಕೆಂದರೆ ಜೋಡಿಯಲ್ಲಿ ಎರಡು ಕಳೆದರೂ ಒಂದು ಕಳೆದರೂ ಶೇಕಡ ನೂರರಷ್ಟು ನಷ್ಟವೇ. ಕಣ್ಣು ಕಾಣದ ಗಾವಿಲರಾರೋ ನನ್ನ ಚಪ್ಪಲಿ ಜೋಡಿಯಲ್ಲಿ ಒಂದನ್ನು ಮಾತ್ರ ಹಾಕಿಕೊಂಡು, ಬದಲಿಗೆ ಅವರದೇ ಒಂದು ಚಪ್ಪಲಿಯನ್ನು ಬಿಟ್ಟು ಹೋಗಿದ್ದರು. ಆದರೆ ಅದರ ಉಂಗುಷ್ಟ ಕಿತ್ತುಹೋಗಿತ್ತು. ಅದಲುಬದಲು ಮಾಡಿದ ಮಹಾಶಯರು ಮತ್ತೆ ಬಂದು ಸಾರಿ ಕೇಳಬಹುದು ಎಂದು ಕೆಲ ನಿಮಿಷಗಳ ಕಾಲ ಅಲ್ಲೇ ನಿಂತೆ, ಪ್ರಯೋಜನವಾಗಲಿಲ್ಲ! ಬಯ್ದುಕೊಂಡು ಸುಸ್ಥಿತಿಯಲ್ಲಿದ್ದ ನನ್ನ ಒಂಟಿ ಚಪ್ಪಲಿಯನ್ನೂ ಅಲ್ಲೇ ಬಿಟ್ಟು ಹೊರಟೆ ಮನೆಗಲ್ಲ, ಸೀದಾ ಬಾಟಾ ಅಂಗಡಿಗೆ! ನನ್ನ ಈ ನಿಸ್ಸೂರಾತಿಯನ್ನು ಕಂಡ ಗೆಳೆಯನೊಬ್ಬ ಇಂಥ ಕಡೆಗೆಲ್ಲ ಬರುವಾಗ ಹಳೆಯ ಚಪ್ಪಲಿ ಹಾಕಿಕೊಂಡು ಬನ್ನಿ. ಒಂದು ಅವು ಕಾಣದೇ ಹೋದರೆ ಯೋಚಿಸುತ್ತ ಬಹಳ ಹೊತ್ತು ಅಲ್ಲೇ ನಿಲ್ಲಬೇಡಿ. ನಿಮ್ಮ ಪಾದಗಳಿಗೆ ಹೊಂದುವ ಬೇರೆ ಯಾವುದಾದರೂ ಜೋಡಿಯನ್ನು ಹಾಕಿಕೊಂಡು ಹೊರಟುಬಿಡಿ ಎಂಬ ಆಪದ್ಧರ್ಮದ ಉಪದೇಶವಿತ್ತರು. ಅದು ಮನಸ್ಸಿಗೆ ಹಿಡಿಸಲಿಲ್ಲ ಬಿಡಿ. ಬೇರೆಯವರ ಹಳೇ ಚಪ್ಪಲಿ ಹಾಕ್ಕೊಂಡರೆ ಶನಿ ವಕ್ಕರಿಸುತ್ತೆ ಎಂದು ನಮ್ಮಮ್ಮ ಬಹಳ ಹಿಂದೆಯೇ ಹೇಳಿದ್ದನ್ನು ನೆನೆದು ಸುಮ್ಮನಾದೆ.
ಬೆಟ್ಟದೊಡೆಯನ ಕೃಪೆ
ನನ್ನ ಪರಿಚಿತ ಪ್ರಕಾಶಕರೊಬ್ಬರು ತಿರುಪತಿ ಗಿರಿವಾಸ ಎಂಬ ಸಚಿತ್ರ ಕೃತಿಯನ್ನು ಪ್ರಕಟಿಸಿದರು. ಅದರ ಲೋಕಾರ್ಪಣೆ ಸಮಾರಂಭವು ಕೋಟೆ ವೆಂಕಟರಮಣ ದೇವಾಲಯದಲ್ಲಿ ಏರ್ಪಾಟಾಗಿತ್ತು. ಪುಸ್ತಕದಲ್ಲಿ ನನ್ನದೂ ಒಂದು ದೊಡ್ಡ ಲೇಖನವಿತ್ತು.
ಸಮಾರಂಭಕ್ಕೆ ನಾನೂ ನನ್ನಾಕೆಯೂ ಅರ್ಧ ಗಂಟೆಯಷ್ಟು ಮುಂಚೆಯೇ ಹೋಗಿದ್ದೆವು. ಚಪ್ಪಲಿ ಕೌಂಟರಿನ ಹುಡುಗ ಇನ್ನೂ ಬಂದಿರಲಿಲ್ಲ. ಹಾಗಾಗಿ ಒಳಗೆ ಹೋಗಿ ಬೇರೆಲ್ಲರೂ ಬಿಡುತ್ತಿದ್ದಂತೆ ನಾವೂ ಚಪ್ಪಲಿ ಬಿಟ್ಟು ಹೋದೆವು. ಸ್ವಲ್ಪ ಹೊತ್ತಿನ ನಂತರ ನನ್ನ ಮಗ, ಸೊಸೆ, ಮೊಮ್ಮಕ್ಕಳು ಕಾರಿನಲ್ಲಿ ಬಂದರು. ಆಗಲಾದರೂ ನಮ್ಮ ಚಪ್ಪಲಿಗಳನ್ನು ಕೌಂಟರಿನಿಂದ ತೆಗೆದು ಕಾರಿನಲ್ಲೇ ಇಡಬಹುದಿತ್ತು. ಇಲ್ಲವೇ ಆ ವೇಳೆಗೆ ಹಾಜರಿದ್ದ ಕೌಂಟರ್ ಹುಡುಗನಿಗೆ ತಿಳಿಸಿ ಟೋಕನ್ ಪಡೆಯಬಹುದಿತ್ತು. ಹಾಗೆ ಮಾಡಲಿಲ್ಲ. ಕಲ್ಯಾಣೋತ್ಸವ, ಪುಸ್ತಕ ಬಿಡುಗಡೆ, ಭಾಷಣ, ಪ್ರಸಾದ ವಿನಿಯೋಗ ಮುಗಿದ ಮೇಲೆ ಕೌಂಟರಿಗೆ ಬಂದಾಗ ಐದಾರು ಜೊತೆ ಚಪ್ಪಲಿಗಳ ಹೊರತು ಉಳಿದವೆಲ್ಲ ಖಾಲಿಯಾಗಿದ್ದವು. ನನ್ನಾಕೆಯವು ಉಳಿದಿದ್ದವು. ನನ್ನವು ಕಾಣೆಯಾಗಿದ್ದವು.
ಪೆಚ್ಚಾದ ನನ್ನನ್ನು ಕಂಡ ಆ ಹುಡುಗ ನೀವು ಟೋಕನ್ ತಗೊಂಡಿದ್ದಿದ್ರೆ ಹೀಗಾಗ್ತಾ ಇರಲಿಲ್ಲ. ಇಲ್ಲೊಂದು ಜೊತೆ ಇದೆ. ನೋಡಿ, ನಿಮ್ಮ ಕಾಲಿಗೆ ಸರಿಹೋಗಬಹುದು. ಇವನ್ನೇ ಹಾಕ್ಕೊಂಡು ಹೋಗಿ ಎಂದು ಉದಾರಮನಸ್ಸಿನ ಆಹ್ವಾನವಿತ್ತ. ಅವು ಹಳೆಯವಾಗಿದ್ದರೂ ದಪ್ಪಗೂ, ಮೆತ್ತಗೂ ಇದ್ದವು. ಹಾಕಿಕೊಂಡು ಕುರುಡುಗಣ್ಣಿಗಿಂತ ಮೆಳ್ಳಗಣ್ಣು ವಾಸಿ ಎಂದು ಮನಸ್ಸಿನಲ್ಲೇ ತೃಪ್ತಿ ಪಟ್ಟುಕೊಂಡು ಕಾರು ಹತ್ತಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಅವು ಹತ್ತಿರ ಹತ್ತಿರ ಒಂದೂವರೆ ವರ್ಷ ನನ್ನ ಪಾದಸೇವೆ ಮಾಡಿದವು. ಅವುಗಳಿಗೆ ತಿರುಪತಿ ಚಪ್ಪಲಿಗಳು ಎಂಬ ಅಭಿಧಾನವನ್ನು ನಾನೇ ಕೊಟ್ಟುಕೊಂಡು ಕಾಲ ನೂಕಿದೆ. ಅವು ಸವೆಯಲಿಲ್ಲ, ಕಿತ್ತುಹೋಗಲೂ ಇಲ್ಲ, ನಾನೇ ಕಡ್ಡಾಯ ನಿವೃತ್ತಿಗೊಳಿಸಿದೆ.
ಹಾಗೆಂದ ಮಾತ್ರಕ್ಕೆ ಹೊಸ ಚಪ್ಪಲಿ ಕೊಂಡೆನೆಂದು ಅರ್ಥವಲ್ಲ. ಹೊಸ ಚಪ್ಪಲಿಗಳೇ ನನ್ನನ್ನು ಹುಡುಕಿಕೊಂಡು ಬಂದವು! ಆ ಪ್ರಸಂಗವನ್ನು ನೀವೇ ಮುಂದೆ ಓದಿ ತಿಳಿಯಿರಿ.
ಅಯಾಚಿತ ಆ-ಗಮನ
ಮದುವೆ ಸಂದರ್ಭದಲ್ಲಿ ಕಾಶೀಯಾತ್ರೆ ಎಂಬ ಪ್ರಹಸನವೊಂದು ಇರುತ್ತದಷ್ಟೆ? ವರನಿಗೆ ಕನ್ಯಾದಾನ ಮಾಡುವ ಮಾತಾಪಿತೃಗಳು ಆ ದೂರದ ಯಾತ್ರೆಗೆ ಆವಶ್ಯಕ ಎನಿಸುವ ಪೇಟ, ಬೀಸಣಿಕೆ, ಛತ್ರಿಗಳ ಜೊತೆಗೆ ಹೊಸ ಚಪ್ಪಲಿಗಳನ್ನೂ ನೀಡುವುದು ಸಂಪ್ರದಾಯ. ನನ್ನ ಮದುವೆಯಾಗಿ ಐವತ್ತು ವರ್ಷಗಳೇ ಸಂದಿವೆಯಾದ ಕಾರಣ, ಕಾಶೀಯಾತ್ರೆ ನೆಪದಲ್ಲಿ ಹೊಸ ಚಪ್ಪಲಿ ಪಡೆಯುವ ಯೋಗವಿರಲಿಲ್ಲ. ಇನ್ನು ಸಂಬಂಧಿಕರಲ್ಲಿ ಹಿರಿಯರು ಯಾರಾದರೂ ತೀರಿಕೊಂಡರೆ, ಅವರ ಆತ್ಮವನ್ನು ವೈಕುಂಠಕ್ಕೋ ಕೈಲಾಸಕ್ಕೋ ಕಳಿಸಿಕೊಡುವ ನಿಟ್ಟಿನಲ್ಲಿ ಅರ್ಹರಿಗೂ ಯೋಗ್ಯರಿಗೂ – ವಯಸ್ಸಿನ ಹಿರಿತನದ ಆದ್ಯತೆಯ ಪ್ರಕಾರ – ಕೆಲವು ವಸ್ತುಗಳನ್ನು ದಾನವಾಗಿ ಕೊಡುವುದುಂಟು. ಅಂಥ ದಾನಗಳ ಪಟ್ಟಿಯಲ್ಲಿ ಪಾದರಕ್ಷೆಯೂ ಸೇರುತ್ತದೆ.
ಕೆಲವು ವರ್ಷಗಳ ಹಿಂದೆ ನನ್ನ ಷಡ್ಡಕನ ಬೀಗರೊಬ್ಬರು ತೀರಿಕೊಂಡರು. ಮಾಸಿಕದ ಸಂದರ್ಭದಲ್ಲಿ ಒಂದು ದಾನ ಪಡೆಯಲು ನನ್ನ ಹೆಸರೂ ಕೇಳಿಬಂತು. ಹಿಂದೆಂದೂ ನಾನು ಮೃತರ ಮನೆಯಿಂದ ದಾನವಸ್ತು ಪಡೆದಿದ್ದವನಲ್ಲ. ಆ ವ್ರತದಂತೆ ಈಗಲೂ ನಿರಾಕರಿಸಿದೆ. ವಯಸ್ಸಿನಿಂದ ಹಿರಿಯನಾಗಿದ್ದ ಕಾರಣದಿಂದ, ಮೃತಪುತ್ರ ಒಂದು ಜೊತೆ ಚಪ್ಪಲಿಯಿದ್ದ ಕಾಗದದ ಪೆಟ್ಟಿಗೆಯನ್ನು ಪಾಲಿಥೀನ್ ಚೀಲದಲ್ಲಿರಿಸಿ ನನ್ನ ಕಾಲ ಬಳಿ ತಂದಿಟ್ಟ. ನನ್ನಾಕೆ ಆ ಪೆಟ್ಟಿಗೆಯಲ್ಲಿದ್ದುದನ್ನು ನನಗಿಂತ ಮೊದಲೇ ನೋಡಿ ಬೇಡ ಅನ್ನಬೇಡಿ. ನಿಮಗೆ ಬೇಕಾದ್ದೇ ಬಂದಿದೆ ಎಂದು ಕೆಣಕು ನಕ್ಕಳು! ಜೊತೆಗೆ ನನ್ನ ಷಡ್ಡಕನ ಮಗಳು ನಿಮ್ಮ ಕಾಲಿನ ಸೈಜು ಏಳನೇ ನಂಬರ್ ಅಂತ ನಾನೇ ನಮ್ಮವರಿಗೆ ಹೇಳಿದೆ. ಸರಿ ತಾನೇ? ಇರೋದ್ರಲ್ಲಿ ಒಳ್ಳೆ ಕ್ವಾಲಿಟೀದನ್ನೇ ಸೆಲೆಕ್ಟ್ ಮಾಡಿ ತಂದಿದ್ದೀವಿ ಎಂದು ಒಪ್ಪಿಸಿದಳು. ಕೋಟೆ ವೆಂಕಟರಮಣ ದಯಪಾಲಿಸಿದ್ದ ತಿರುಪತಿ ಚಪ್ಪಲಿಗಳಿಗೆ ಸೇವಾ ನಿವೃತ್ತಿ ಸಿಕ್ಕಿದ್ದು ಹೀಗೆ. ಇಂಥ ಸೊಗಸಾದ ಚಪ್ಪಲಿಗಳು ಎರಡು ವರ್ಷ ಸುರಕ್ಷಿತವಾಗಿಯೆ ಸೇವೆ ಮಾಡಿಕೊಂಡಿದ್ದವು.
ಮತ್ತೆ ಧಾರ್ಮಿಕ ಸಮಾರಂಭವೊಂದರಲ್ಲಿ ನಾನು ಚಪ್ಪಲಿ ಬಿಟ್ಟು ಓಡಾಡಿದ್ದೇ ಬಂತು, ಹಸಿರುವಾಣಿ ಚಪ್ಪರ ಹಾಕಲು ಬಂದಿದ್ದವರಲ್ಲಿ ಯಾರೋ ಒಬ್ಬ ಅವುಗಳ ಹೊಸ ಮಾಲೀಕನಾದ! ಇಂಥ ಅನುಭವಗಳ ಪಾಠದಿಂದಾಗಿ ನಾನು ಸಾಮಾನ್ಯ ಚಪ್ಪಲಿ ಬದಲು ಪಟ್ಟಿ (ಬೆಲ್ಟ್) ಚಪ್ಪಲಿ ಕೊಂಡುತಂದು ಈಗ ನಿರಾತಂಕದಿಂದ ಇದ್ದೀನಿ.
* * *
ನಾನು ಜಯನಗರ ವಾಣಿಜ್ಯ ಸಂಕೀರ್ಣವನ್ನು ಕಳೆದ ಮೂವತ್ತೈದು ವರ್ಷಗಳಿಂದ ನೋಡುತ್ತ ಬಂದಿದ್ದೇನೆ.
ಹಿಂದೆಲ್ಲ ಅದು ಸುಶಿಕ್ಷಿತ ಮಧ್ಯಮವರ್ಗದ ನಾಗರಿಕರಿಗೆ ಹಿತವೆನಿಸುವ ತಾಣವಾಗಿತ್ತು,
ಶಾಪಿಂಗಿಗೆ ಮಾತ್ರವಲ್ಲ ಸಂಜೆಯ ಹೊತ್ತು ಕಳೆಯುವವರಿಗೂ ಸಹ. ಬರುಬರುತ್ತ ಇದೂ ಸಹ ಕೃಷ್ಣರಾಜೇಂದ್ರ ಮಾರುಕಟ್ಟೆಯಂತೆ ಆಗಿಬಿಟ್ಟಿತು. ಸಂಕೀರ್ಣದಲ್ಲಿ ಢಾಳಾಗಿ ಕಾಣಿಸುವುದು ಚಪ್ಪಲಿ ಅಂಗಡಿಗಳೇ! ಒಳಾಯದಲ್ಲಿ ಇರಬೇಕಾದ ಚಪ್ಪಲಿ ಶೂಗಳು ಅಂಗಡಿ ಮುಂಭಾಗಕ್ಕೂ ವಿಸ್ತರಿಸಿ ಓಡಾಡುವವರಿಗೆ ಅಪಶಕುನದಂತೆ ನೇತಾಡುತ್ತಿರುತ್ತವೆ. ಸಂಚಾರಿ ಪೊಲೀಸರಿಗೆ ಇಂತಿಷ್ಟು ಅಂತ ಮಾಮೂಲು ಕೊಟ್ಟರಾಯಿತು, ಪಾದಪಥ (ಫುಟ್ಪಾತ್), ಪಾವಟಿಕೆ, ರಸ್ತೆ ಬದಿ, ಶಾಲೆ ಕಾಲೇಜು ಅಂಗಳ – ಹೀಗೆ ಬೇಕಾದ ಕಡೆ ನೆಲದಂಗಡಿ ತೆಗೆಯಬಹುದು! ಕಾನೂನು ಕಟ್ಟಳೆಗಿಂತ ಬೀದಿಬದಿಯ ವ್ಯಾಪಾರಿಗಳ ಹೊಟ್ಟೆಪಾಡು ಮುಖ್ಯ ತಾನೆ? ಇಂಥ ಹೊಟ್ಟೆಪಾಡಿನವರಲ್ಲಿ ಅದೆಷ್ಟು ಮಂದಿ ದೇಶದ ಗಡಿಯಾಚೆಯಿಂದ ಬಂದವರೋ!
ಏನಾದರಿರಲಿ, ನಾಗರಿಕರ ನಿತ್ಯ ಬದುಕಿಗೆ ಚಪ್ಪಲಿಗಳು ಅಗತ್ಯವಷ್ಟೇ ಅಲ್ಲ, ಅತ್ಯಾವಶ್ಯಕ ವಸ್ತುಗಳು. ಮಾಂಸಾಹಾರಿಗಳ ಸಂಖ್ಯೆ ಹೆಚ್ಚಿದಂತೆ ಚಪ್ಪಲಿ ತಯಾರಿಕೆ ಮತ್ತು ಮಾರಾಟವೂ ಹೆಚ್ಚುವುದು ಸಹಜ ಕ್ರಿಯೆ.
ಚಪ್ಪಲಿ ಕಾಲಾತೀತ, ದೇಶಾತೀತ, ಹಾಗೂ ಜಾತ್ಯತೀತ ಎಂಬುದನ್ನು ಯಾರೂ ಅಲ್ಲಗಳೆಯಲಾರರು.