“ಬೇಕುಗಳು” ನಮ್ಮ ಮನಃಶಾಂತಿಯನ್ನು ಭಂಗಮಾಡುವ ಸಾಮರ್ಥ್ಯ ಹೊಂದಿವೆ. ಇಂತಹ ಬೇಕುಗಳು ಫಲಿಸದಿದ್ದರೂ ನಾವು ನಮ್ಮ ಮನಸ್ಸಿನ ಸ್ತಿಮಿತ ಕಳೆದುಕೊಳ್ಳಬಾರದು. ನಾವು ಯಾವುದೇ “ಬೇಕುಗಳು” ಗುಲಾಮನಾಗದೇ ಅವುಗಳನ್ನು ನಮ್ಮ ಗುಲಾಮನಾಗಿ ಮಾಡಿಕೊಳ್ಳುವ ಮನಃಸ್ಥಿತಿ ತಲಪಲು ಪ್ರಯತ್ನಿಸಬೇಕು. “ಬೇಕುಗಳು” ಬೇಕು; ಆದರೆ ಅವು ನಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬಾರದು. ಹೌದೋ ಅಲ್ಲವೋ?
ನೀವು ಪ್ರತಿದಿನ ಮುಂಜಾನೆ ವಾಕಿಂಗ್ ಹೋಗುವದು ನೀವು ಆರೋಗ್ಯದಿಂದ ಇರಲು. ಅಲ್ಲದೇ ನಿಮ್ಮ ಸ್ನೇಹಿತರ ಜೊತೆ ಸ್ವಲ್ಪ ಸಮಯ ಕಳೆದು, ಹರಟೆ ಹೊಡೆದು ಸಾಧ್ಯವಾದರೆ ಚಹಾನೋ ಕಾಫೀನೋ ಕುಡಿದು ಬರಲು. ಕೆಲವೊಂದು ಗುಂಪುಗಳಲ್ಲಿ ೮-೧೦ ಸ್ನೇಹಿತರಿದ್ದರೆ, ಕೆಲವೊಂದರಲ್ಲಿ ೪-೫, ಕೆಲವೊಮ್ಮೆ ಇಬ್ಬರೇ ಇರಬಹುದು. ಹೀಗೆ ನಿಮ್ಮ ಗುಂಪಿನಲ್ಲಿ ಇಬ್ಬರೇ ಇದ್ದು ಒಂದು ದಿನ ನಿಮ್ಮ ಸ್ನೇಹಿತ ಏನೂ ತಿಳಿಸದೇ ಬರದಿದ್ದರೆ ನಿಮ್ಮ ಮನಸ್ಸಿಗೆ ಏನನ್ನೋ ಕಳೆದುಕೊಂಡ, ಅಪೂರ್ಣತೆಯ ಅನುಭವ. ನೀವು ಅರೆಮನಸ್ಸಿನಿಂದ ವಾಕಿಂಗ್ ಮುಗಿಸಿ ನಿರುತ್ಸಾಹದಿಂದ ಮನೆಗೆ ಮರಳುವಿರಿ. ಮನೆಗೆ ಬಂದರೂ ನಿಮ್ಮ ಮನಸ್ಸು ಏನೋ ಒಂದು ತರಹದ ವ್ಯಾಕುಲತೆಯಿಂದ ಪರಿತಪಿಸುತ್ತಿರುತ್ತದೆ. ಮನಸ್ಸಿಗೆ ಸಮಾಧಾನವೇ ಇರುವುದಿಲ್ಲ. ಅಂತಹದರಲ್ಲಿ ನೀವು ಫೋನು ಮಾಡಿದಾಗ ಆ ಸ್ನೇಹಿತನ ಫೋನು ಸ್ವಿಚ್ ಆಫ್ ಬಂದರಂತೂ ನಿಮ್ಮ ಮನಸ್ಸಿನ ವೇದನೇ ವರ್ಣಿಸಲು ಬಾರದು. ಅವನಿಗೆ ಏನಾಗಿದೆಯೋ ಏನೋ? ಆರೋಗ್ಯ ಚೆನ್ನಾಗಿದೆಯೋ ಇಲ್ಲವೋ? ನೂರಾರು ಚಿಂತೆ ನಮ್ಮನ್ನು ಮುತ್ತಿಬಿಡುತ್ತವೆ. ಅವನ ಫೋನು ಕೆಟ್ಟಿರಬಹುದು ಇತ್ಯಾದಿ ಏನೇ ಕಾರಣ ಇದ್ದರೂ ನಿಮ್ಮ ಮನಃಶಾಂತಿ ಕದಡುವುದು ಮಾತ್ರ ಶತಃಸಿದ್ಧ ಸತ್ಯ.
ವಾಕಿಂಗ್ ಮುಗಿಸಿ ನೀವು ತಿರುಗಿ ಬಂದಾಗ ಪತ್ರಿಕೆ ನಿಮ್ಮ ದಾರಿಯನ್ನು ಬಾಗಿಲಲ್ಲಿ ಕಾಯುತ್ತಿರುತ್ತದೆ. ಅದನ್ನು ತೆಗೆದುಕೊಂಡು ಒಳಗೆ ಬಂದು ಚಹಾದ ಸವಿಯನ್ನು ಸವಿಯುತ್ತ ಅದನ್ನು ಓದುವ ಮಜವೇ ಬೇರೆ ಅಲ್ಲವಾ? ಆದರೆ ಎಂದಾದರೂ ಒಂದು ದಿನ ಆ ಪತ್ರಿಕೆ ನೀವು ವಾಕಿಂಗ್ನಿಂದ ತಿರುಗಿ ಬಂದಾಗ ಅಲ್ಲಿ ಕಾಣಿಸಲಿಲ್ಲ ಅಂದ್ರೆ ನಿಮಗೆ ಜೀವನವೇ ಅರ್ಥಹೀನ ಅನಿಸಿಬಿಡುತ್ತದೆ. ಆ ಮನಸ್ಸಿನ ಚಡಪಡಿಕೆಯಲ್ಲಿ ನೀವು ಪತ್ರಿಕೆ ಹಾಕುವವನನ್ನು ಬಯ್ದದ್ದೇ ಬಯ್ದದ್ದು. ಅವನ ಇಡೀ ಮನೆತನವನ್ನೇ ಜಾಲಾಡಿಬಿಡುತ್ತೇವೆ. ಅಷ್ಟು ಮನಸ್ಸು ಅಸಮಾಧಾನದಿಂದ ಕುದ್ದು ಹೋಗುತ್ತದೆ. ಆ ದಿನ ನಿಮಗೆ ಪತ್ರಿಕೆ ಸಿಗಲಿಲ್ಲವೆಂದರೆ ಏನೋ ಕಳೆದುಕೊಂಡವರ ಮನಸ್ಥಿತಿ. ಕೆಲವೊಮ್ಮೆ ಬಾಲ ಸುಟ್ಟ ಬೆಕ್ಕಿನ ತರಹ ಬಾಗಿಲ ಕಡೆಗೆ ಅಡ್ಡಾಡುವುದನ್ನು ನೋಡಿ ನಿಮ್ಮ ಹೆಂಡತಿಯೋ, ಮಗ/ಸೊಸೆಯೋ ನಿಮಗೆ ನೆನಪಿಸುತ್ತಾರೆ – ಇಂದು ಪತ್ರಿಕೆಗೆ ರಜೆ ಎಂದು. ಅಂದೂ ಕೂಡ ನಿಮಗೆ ಏನೋ ಅಸಮಾಧಾನ ಕಾಡುತ್ತಿರುತ್ತದೆ. ಅಲ್ಲವೆ?

ಮೇಲಿನ ಎರಡೂ ಘಟನೆಗಳು, ಸ್ನೇಹಿತನ ವಾಕಿಂಗ್ಗೆ ಗೈರುಹಾಜರಿ ಮತ್ತು ಪತ್ರಿಕೆ ಓದಲು ಸಿಗದ್ದು, ಸಾಮಾನ್ಯ ಮತ್ತು ಅಂತಹ ಮುಖ್ಯ ಘಟನೆಗಳಲ್ಲ. ಆದರೂ ಅಂದಿನ ನಿಮ್ಮ ಮನಸ್ಸಿನ ಶಾಂತತೆಯನ್ನು ತಿಂದುಹಾಕಿ, ಅಂದಿನ ಸುಖ ಸಂತೋಷವನ್ನು ಹಾಳುಗೆಡುತ್ತವೆ. ಸ್ನೇಹಿತ ನಿಮ್ಮನ್ನು ಭೇಟಿ ಆಗಿ ತನ್ನ ದುಃಖ ಹಂಚಿಕೊಂಡರೆ ನಿಮ್ಮ ಮನಸ್ಸು ಇನ್ನಷ್ಟು ಕುಗ್ಗಬಹುದು. ಅಂದರೆ ಅವನ ಭೇಟಿ ನಿಮ್ಮ ಜೀವನದ ಅಂತಹ ಮಹತ್ತ್ವದ ಘಟನೆಯೇನೂ ಅಲ್ಲ. ಅದರಂತೆ ಪತ್ರಿಕೆ ಓದದಿದ್ದರೂ ನಿಮಗೇನೂ ಹಾನಿಯಿಲ್ಲ. ಅದರಲ್ಲಿರುವುದು ಏನು”? ರಾಜಕೀಯ ಕೆಸ(ಕೆರ)ಚಾಟ, ಕಳವು, ದರೋಡೆ, ಮೋಸದ ಸುದ್ದಿಗಳು… ಯಾವುದೇ ಸುದ್ದಿ ನಿಮಗೆ ಸಂತೋಷವನ್ನು ಕೊಡುವುದಿಲ್ಲ.
ಸ್ನೇಹಿತನ ಭೇಟಿ ಮತ್ತು ಪತ್ರಿಕೆ ಓದಬೇಕೆಂಬ ಸಾಮಾನ್ಯ “ಬೇಕುಗಳು” ನಮ್ಮ ಮನಃಶಾಂತಿಯನ್ನು ಭಂಗಮಾಡುವ ಸಾಮರ್ಥ್ಯ ಹೊಂದಿವೆ. ಇಂತಹ ಬೇಕುಗಳು ಫಲಿಸದಿದ್ದರೂ ನಾವು ನಮ್ಮ ಮನಸ್ಸಿನ ಸ್ತಿಮಿತ ಕಳೆದುಕೊಳ್ಳಬಾರದು. ನಾವು ಯಾವುದೇ “ಬೇಕುಗಳ” ಗುಲಾಮನಾಗದೇ ಅವುಗಳನ್ನು ನಮ್ಮ ಗುಲಾಮನಾಗಿ ಮಾಡಿಕೊಳ್ಳುವ ಮನಃಸ್ಥಿತಿ ತಲಪಲು ಪ್ರಯತ್ನಿಸಬೇಕು. “ಬೇಕುಗಳು” ಬೇಕು; ಆದರೆ ಅವು ನಮ್ಮ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಡಬಾರದು. ಹೌದೋ? ಅಲ್ಲವೋ?