ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
‘ಅವನು’ ಆ ಗಳಿಗೆಯಿಂದ ‘ಅವರು’ ಆಗಿದ್ದು ಹೇಗೆ?
ಜೀವನದಲ್ಲಿ ಏನೆಲ್ಲವನ್ನೂ ಅನುಭವಿಸಿದ ಮೇಲೆ ಹಣ್ಣೆಲೆಗೆ ಹೇಳಿಕೊಳ್ಳಲು ಏನು ತಾನೇ ಇರುತ್ತದೆ? ಅರ್ಧ ತುಂಬಿದ ಕೊಡವಷ್ಟೇ ನೀರು ತುಂಬುವಾಗ ಶಬ್ದ ಮಾಡುವುದು. ತುಂಬಿದ ಕೊಡ ತುಳುಕುವುದಿಲ್ಲ, ಎಂದರೆ ಶಬ್ದ ಮಾಡದು. ವಿಪರ್ಯಾಸವೆಂದರೆ ಅದು ಖಾಲಿ ಕೊಡದಷ್ಟೇ ಮೌನಿ, ಶಬ್ದರಹಿತ, ಆದರೆ ಸ್ವಯಂಪೂರ್ಣ.
ಮೌನಿ ಬಾಬಾ ಇಂಥವರು. ಮೌನ ಅವರ ವ್ರತವಲ್ಲ, ಸ್ಥಿತಿ. ಉದ್ದೇಶವಲ್ಲ, ಉಳಿವು. ಗುರಿಯಲ್ಲ, ಅರಿವು.
ಅವರು ಭೂತಕಾಲದಲ್ಲಿ ಏನೆಲ್ಲವೂ ಆಗಿದ್ದವರು. ಎಲ್ಲರ ಹಾಗೆಯೇ ಬಾಲ್ಯ, ಯೌವ್ವನ, ವಾರ್ಧಕ್ಯಗಳ ಮೂಸೆಯಲ್ಲಿ ಹಾದು ಬಂದವರು. ಹಣ, ಅಧಿಕಾರ, ಯಶಸ್ಸು ಎಲ್ಲವನ್ನೂ ಗಳಿಸಿ ತಮ್ಮನ್ನೂ ತಮ್ಮ ಸುತ್ತಲವರನ್ನೂ ಸುಭಿಕ್ಷೆಯಲ್ಲಿ ಇರಿಸಿದ್ದವರು. ಲೌಕಿಕ ಮತ್ತು ಪಾರಲೌಕಿಕ ಜ್ಞಾನದಾಹವನ್ನು ತಣಿಸಿಕೊಳ್ಳಲು ಸತತವಾಗಿ ಪರಿಶ್ರಮಿಸಿದ್ದವರು. ಅವರು ಗಳಿಸಿದ್ದೂ ಉಳಿಸಿದ್ದೂ ಅಪಾರ, ಅವರೀಗ ನಿತ್ಯ ಸಂತೃಪ್ತರು.
ಅವರದೊಂದು ಆಶ್ರಮ. ಭೌಗೋಳಿಕವಾಗಿ ಭೂಮಿಯ ಮೇಲೆ ಗುರುತಿಸಬಹುದಾದಂಥ ಒಂದು ಸ್ಥಳ. ಮುಖ್ಯವಾಗಿ ಅವರು ಅದೆಲ್ಲಿರುತ್ತಾರೋ ಅಲ್ಲೇ ಒಂದು ಆಶ್ರಮ ಉದ್ಭವವಾಗುತ್ತಿತ್ತು. ಏಕೆಂದರೆ ಅಲ್ಲಿ ಯಾರಿಗೂ ಯಾವ ಬಗೆಯ ಶ್ರಮವೂ ಅನುಭವಕ್ಕೆ ಬರುತ್ತಿರಲಿಲ್ಲ. ಅವರ ಇರುವಿಕೆಯೇ ಆಶ್ರಮದ ಇರವು ಎಂದರೆ ಅಸ್ತಿತ್ವ. ಅವರ ಕಣ್ಣಿಗೆ ಬಿದ್ದ ಆಗಂತುಕ, ಅಭ್ಯಾಗತರೆಲ್ಲರೂ ಅವರಂತೆಯೇ ‘ಆಶ್ರಮ ಸ್ವಾಮಿಗಳು’. ಪವಿತ್ರರು, ಪುನೀತರು, ಪೂಜ್ಯರು. ಆಶ್ರಮದೊಳಗೆ ಕಾಲಿಟ್ಟೊಡನೆಯೇ ಎಲ್ಲರಿಗೂ ಅದೊಂದು ಬಗೆಯ ದಿವ್ಯ ಆನಂದ, ಶಾಂತಿಯ ಪ್ರಸನ್ನತೆಯುಂಟಾಗುತ್ತಿತ್ತು.
ಅಲ್ಲಿಗೆ ಬಂದವರಿಗೆ ಯಾರಿಗೂ ತಾನು ‘ಅನನ್ಯ’ ಎಂಬ ಅಹಮಿಕೆಯಿರದು. ಅವರನ್ನಾವರಿಸಿರುವ ‘ಶರೀರ ಕಾಂತಿ’ಯಲ್ಲಿ ಇತರರ ಕಣ್ಣು ಕೋರೈಸುವಂತಹ ಬೆಳಕಿಲ್ಲ. ಅವರಾರ ಸ್ವರದಲ್ಲಿಯೂ ಇತರರ ಕಿವಿಯ ತಮಟೆಯನ್ನು ಹರಿಯುವಂತಹ ಆರ್ಭಟ, ರಂಪಾಟವಿಲ್ಲ. ನಿರಭ್ರವಾದ ಆಕಾಶದಿಂದ ನಿರಾಯಾಸವಾಗಿ ತೇಲಿಬರುವ ಬೂರಗದ ಹತ್ತಿಯಂತೆ ಅನವಸರದ, ಆಪ್ಯಾಯಮಾನವಾದ ಮೃದುಲ ಸ್ಪರ್ಶನ. ಪಾರಿಜಾತದ ಪಕಳೆಗಳು ಪಾತರಗಿತ್ತಿಯ ರೆಕ್ಕೆಗಳ ತಾಡನದಿಂದ ಬುವಿಗಿಳಿದು ಭಾಗ್ಯ ಸುರಿವಂತೆ ಅಲ್ಲಿ, ಆ ಆಶ್ರಮದಲ್ಲಿ, ಬಂದು ನಿಂತವರ ಮನಃಸ್ಥಿತಿ. ಅಲ್ಲಿಗೆ ಬಂದವರು ಮೌನಿ ಬಾಬಾಗಳೋ, ಅಲ್ಲಿರುವವರು ಮೌನಿ ಬಾಬಾಗಳೋ, ಅಥವಾ ಅಲ್ಲಿಂದ ಹೊರಗೆ ಬಂದವರು ಮೌನಿ ಬಾಬಾಗಳೋ ಅವರಾರಿಗೂ ತಿಳಿಯದು;
ಶಿವ ಶಿವಯೋಗದಲಿ ಮಿಂದಿದ್ದರೆ ಆಗುವನು ಆತ್ಮಾರಾಮ!
ಯೋಗ ತಿಳಿದೆದ್ದಾಗಲೇ ಕುಣಿಯುವನು ನಲ್ನುಡಿದು ‘ರಾಮ ರಾಮ!’
– ಇದು ಮೌನಿ ಬಾಬಾರ ಪರಿಸ್ಥಿತಿ.
* * *
ಅವರು ಎಂದೆನೇ? ಹಾಗಿದ್ದರೆ ಅವರು ‘ಅವನು’ ಎಂದಾಗಿದ್ದಾಗ ಹೇಗಿದ್ದಿರಬೇಕು?
ಅವನು ಮೊದಲಿನಿಂದಲೂ ಇದ್ದದ್ದೇ ಹಾಗೆ – ನಮ್ಮ ನಿಮ್ಮಂತೆ. ಹಾಗೆಂದೇ ಯಾರಿಗೂ ಅವನು ನಮ್ಮ ನಿಮ್ಮಂತೆ ಎಲ್ಲರ ಹಾಗಿಲ್ಲ ಎಂದು ಗೊತ್ತಾಗುತ್ತಿರಲಿಲ್ಲ. ಅವನೂ ಎಲ್ಲರ ಹಾಗೆಯೇ ಸಂಸಾರವಂದಿಗನಾಗಿದ್ದ. ಮನೆ, ಮಡದಿ-ಮಕ್ಕಳು ಎಂದು ದುಡಿಯುತ್ತಿದ್ದ. ಸಂಪಾದನೆ ಎಷ್ಟೇ ಇರಲಿ, ಕುರ್ಚಿಯಿಂದ ಗಳಿಸಿದ್ದು, ತನ್ನ ದುಡಿಮೆಯಿಂದ, ನಿಷ್ಠೆಯಿಂದ ಪಡೆದಷ್ಟು ಎಂಬುದೇ ಅವನ ಆತ್ಮತೃಪ್ತಿ. ಯಾರ ಮುಂದೂ ದೈನ್ಯದಿಂದ ಕೈಯೊಡ್ಡದ ಬಾಳ್ವೆ; ಯಾರ ಮೇಲೂ ತಾನು ಅನುಗ್ರಹ ಮಾಡುತ್ತಿರುವೆನೆಂಬ ಆಗ್ರಹವಿಲ್ಲದ ಆತ್ಮಸ್ಥೈರ್ಯ. ಕೆಲಸದಲ್ಲಿ ಯಾರಾದರೂ ಹಗುರವಾಗಿ ಮಾತನಾಡಿದರೆ ಅವನ ಉತ್ತರವೊಂದು ಮುಗುಳ್ನಗೆ. ಮುಳ್ಳು ತುಂಬಿರುವ ದಾರಿಯಲ್ಲಿ ಸೆಳೆದೊಯ್ದರೆ, ಹೂವರಳಿಸಿಕೊಂಡು ಬರುವ ಜಾಯಮಾನ ಅವನದು. ಅವನ ಬಳಿ ನೆರವು ಕೋರಿಕೊಂಡು ಬಂದವರಿಗೆ ಅವನೆಂದೂ ತಿರಸ್ಕಾರ ಮಾಡುತ್ತಿರಲಿಲ್ಲ. ‘ಅಯ್ಯೋ’ ಎಂದು ಮರುಗುವಂತೆ ಮಾಡುತ್ತಿರಲಿಲ್ಲ. ನ್ಯಾಯವಾದ ಕೆಲಸವನ್ನು ಯಾರಿಂದಲೂ ಹೇಳಿಸಿಕೊಳ್ಳದೇ ಅವನು ತಾನಾಗಿಯೇ ಮಾಡುವನು. ಅನ್ಯಾಯದ ಕೆಲಸ ಅವನಿಂದ ಗಾವುದ ಗಾವುದ ದೂರ. ಅವನಿಂದ ಬೀಳ್ಕೊಂಡಾಗ ಎಂಥವರ ಎದೆಯೂ ಹಗುರವಾಗುತ್ತಿತ್ತು, ತಲೆ ತಂಪಾಗುತ್ತಿತ್ತು, ಮುಖ ಅರಳುತ್ತಿತ್ತು.
ಹಾಗೆಂದೇ ಅವನಿಗೆ ಸಂಸಾರ ಸುಖವಾಗಿತ್ತು, ಏಕೆಂದರೆ ಅವನದು ‘ಂ’ (ಶೂನ್ಯದ) ವ್ಯಕ್ತಿತ್ವ. ಆ ಶೂನ್ಯವನ್ನು – ಅದೇ ಅವನ ಹುಡುಕಾಟದ ವಸ್ತು – ಹುಡುಕಿಕೊಂಡೇ ಅವನು ದಿನಗಳೆಯುತ್ತಿದ್ದ. ಅದು ಶೂನ್ಯವೋ, ಬೃಹದ್ವಸ್ತುವೋ, ಬಹುಳತ್ವವೋ ಅವನಿಗೆ ತಿಳಿಯಬೇಕಾಗಿತ್ತು. ಅವನಿಗೆ ಬಿಡುವು ಸಿಕ್ಕಿದರೆ ಸಾಕು, ಅವನು ಆ ‘ವಸ್ತು’ವಿಗಾಗಿ ಹುಡುಕುತ್ತಾ ಹೊರಟುಬಿಡುತ್ತಿದ್ದ. ನದೀತೀರದಲ್ಲಿ, ಗಿರಿಕಂದರಗಳಲ್ಲಿ, ನಿರ್ಜನ ಪ್ರದೇಶಗಳಲ್ಲಿ, ಎಲ್ಲೆಂದರಲ್ಲಿ ಹೊರಟುಬಿಡುತ್ತಿದ್ದ. ಕೊನೆಗೂ ಅದು ಸಿಕ್ಕಿತು – ಅವನು ಊಹೆ ಮಾಡದ ರೀತಿಯಲ್ಲಿ, ಅಮ್ಮನ ಮಮತೆಯ ಮಡಿಲಲ್ಲಿ.
ಅವನು ಈ ಸರ್ತಿ ಏಕಾಂಗಿಯಾಗಿ ಚಾರಣಕ್ಕೆ ಹೊರಟಿದ್ದು ಬಿಳಿಗಿರಿರಂಗನಬೆಟ್ಟ-ಬಂಡೀಪುರ ಅರಣ್ಯಪ್ರದೇಶದತ್ತ. ಅವನಿಗೆ ಅಲ್ಲಿನ ದೇವಸ್ಥಾನದ ವರ್ಣನೆ, ದೇವರ ಸುಪ್ರಸನ್ನ ದರ್ಶನದ ಕಥೆಗಳನ್ನು ಕೇಳಿ ಕೇಳಿ ಆಕರ್ಷಣೆ ತಡೆಯದಾಗಿತ್ತು. ಅಲ್ಲಿಗೆ ಬರುವ ಭಕ್ತರನ್ನು, ಯಾತ್ರಿಕರನ್ನು ಸ್ವಾಮಿ ‘ಸೋಲಿಗ ರಂಗ’ನ ವೇಷ ಧರಿಸಿ ಕಾಡಿಸಿ, ವಂಚಿಸಿ, ಆಟವಾಡಿಸುವ ಮತ್ತು ಅನುಗ್ರಹಿಸುವ ಕತೆಗಳು ಅವನ ಮನವನ್ನು ಸೆರೆಹಿಡಿದಿದ್ದವು. ತನಗೂ ಅಂತಹ ಅನುಭವ ಉಂಟಾಗದೇ ಎಂದವನು ಕನಸು ಕಾಣುತ್ತಿದ್ದ. ಅವನ ನೆರೆಮನೆಯವರಿಂದ ಚಾಮರಾಜನಗರದಲ್ಲಿದ್ದ ಅವನ ಬಂಧುಗಳ ವಿವರ, ಪತ್ತೆ ತಿಳಿದುಕೊಂಡು ಅವನು ಕೂಡಲೇ ಪ್ರವಾಸಕ್ಕೆ ಹೊರಟುಬಿಟ್ಟಿದ್ದ. ಅವನ ಹೆಂಡತಿ, ಮಕ್ಕಳಿಗೆ ಅವನ ಈ ಸ್ವಚ್ಛಂದಬುದ್ಧಿ ಗೊತ್ತಾಗಿದ್ದರಿಂದ ಅವರಿಂದ ವಿರೋಧವೇನೂ ಬರಲಿಲ್ಲ.
ಅವನೀಗ ಬೆಟ್ಟದ ಇಳಿಜಾರಿನಲ್ಲಿ ಕಂಡ ಕಂಡ ದಾರಿಗಳಲ್ಲಿ ಇಳಿಯುತ್ತಾ ಹೊರಟ. ಅಗೋ, ಅವನ ಕಣ್ಣಳತೆಯಷ್ಟೇ ದೂರದಲ್ಲಿ ನೀಲ ಆಕಾಶ ಬೋರಲು ಹಾಕಿದ ನೀಲ ಪಾತ್ರೆಯಂತೆ ಇವನೆಡೆಗೇ ಮುಖ ಮಾಡಿದೆ. ಒಂದೆರಡು ಗೆರೆಗಳು ಬಿಳಿಮೋಡಗಳಿಂದಾಗಿದ್ದು ವಿಭೂತಿಪಟ್ಟೆಯಂತೆ ಆ ನೀಲನಭದ ಹಿನ್ನೆಲೆಯಲ್ಲಿ ಸೂರ್ಯಕಿರಣಗಳಿಂದ ಹೊಳೆಯುತ್ತಿವೆ. ಅಲ್ಲಿಂದ ಕೆಳಗೆ ಕಣ್ಣು ಹಾಯಿಸಿದಷ್ಟು ದೂರ, ದೂರ, ದಟ್ಟ ಹಸಿರಿನ ಲೇಪಮಾಡಿದಂತೆ ಕಾಡು ಕಾಣಿಸುತ್ತಿದೆ. ಅದರ ಮಧ್ಯದಲ್ಲಿ ಎಲ್ಲೆಲ್ಲೋ ಬಿಳಿಯ ರೇಶಿಮೆ ನೂಲಿನಂತೆ ಹಳ್ಳಕೊಳ್ಳಗಳು, ಕಿರು ತೊರೆ-ನದಿಗಳು ಬಿಸಿಲಿಗೆ ಥಳಥಳ ಹೊಳೆಯುತ್ತಿವೆ. ಹತ್ತಾರು ಗುಡ್ಡಗಳು ಸುತ್ತಲೂ ತಲೆಯೆತ್ತಿ ನೋಡುತ್ತಿವೆ. ಎಲ್ಲವೂ ನಿಶ್ಶಬ್ದ, ಶಾಂತ, ನಿಗೂಢ. ಅಲ್ಲಿ ನಿಂತು ನೋಡುತ್ತಿದ್ದರೆ ಯಾವುದೋ ಒಂದು ಪ್ರಶಾಂತತೆಯ ಆಳಕ್ಕೆ ಇಳಿದು ಹೋಗುತ್ತೇವೋ ಎಂಬ ಭಾವನೆ ಅಂತರಾಳದಲ್ಲಿ ಸ್ಫುರಿಸುತ್ತದೆ.
ಅವನು ಅದೆಷ್ಟೋ ದೂರ ಇಳಿದು ಬಂದಿರಬೇಕು. ಅವನೊಂದು ಬಿದಿರ ಕೋಲಿನಿಂದ ದಾರಿ ಮಾಡಿಕೊಂಡು ಹೋಗುತ್ತಿದ್ದ. ಆಗ ಒಮ್ಮಿಂದೊಮ್ಮೆಗೇ ಅವನು ಸಾಗಿ ಬರುತ್ತಿದ್ದ ಮರಗಿಡಪೊದೆಗಳ ಒತ್ತಡ ಮಾಯವಾಗಿ ಮರಗಳ ಸಂದಿಯಿಂದ ಒಂದು ಖಾಲಿ ಮೈದಾನ ಪ್ರದೇಶ ಕಂಡಿತು. ಅದೇನೊಂದೆರಡು ಎಕರೆಯಷ್ಟಿರಬೇಕು. ಆ ಖಾಲಿ ಜಮೀನು ಬಿರುಗಾಳಿ-ಝಂಝಾವಾತಕ್ಕೆ ಸಿಕ್ಕಿ ಹಾಳುಗೆಡವಿದಂತೆ ಕಂಡಿತು. ಅವನೀಗ ಸುತ್ತಲೂ ಎಚ್ಚರಿಕೆಯಿಂದ ನೋಡಿದ. ಅವನ ಎಡಬದಿಯಿಂದ ಅವನ ಕಣ್ಣಮುಂದೆ ಹಾದು ಬಲಬದಿಯತ್ತ ಆ ಹಾಳುಗೆಡವಿದ ಪಥ ಕಾಣಿಸಿತು. ಅದು ಕಾಡಾನೆಗಳ ‘ರಾಜಪಥ’ ಅಥವಾ ‘ಗಜಪಥ’. ಅವುಗಳು ಆ ‘ದಾರಿ’ ನಿರ್ಮಿಸಿಕೊಂಡು ಸಾಗಿದ್ದರ ಗುರುತಾಗಿ, ಸುತ್ತಲ ಮರಗಿಡಗಳು ಹತ್ತು-ಹನ್ನೆರಡು ಅಡಿಯಷ್ಟು ಎತ್ತರಕ್ಕೆ ರೆಂಬೆ-ಕೊಂಬೆಗಳನ್ನು ಕಳೆದುಕೊಂಡಿದ್ದವು. ಅವುಗಳಿಂದ ಉದುರಿಬಿದ್ದ ಟೊಂಗೆ-ಟಿಸಿಲು, ಎಲೆ-ಕಾಯಿ-ಹಣ್ಣುಗಳು ನೆಲದಷ್ಟಗಲಕ್ಕೂ ಬಿದ್ದು ಕಾಡಾನೆಗಳ ಕಾಲ್ತುಳಿತಕ್ಕೆ ಸಿಕ್ಕು ಕೊಳೆತು ರಾಡಿರಂಪವಾಗಿದ್ದವು. ಈ ಗಜಯಾತ್ರೆ ನಡೆದು ಏನೊಂದು ಎರಡು-ಮೂರು ವಾರವಾಗಿರಬೇಕು. ಈಗ ಅವುಗಳ ನಡುನಡುವೆಯೇ ಹೊಸಜೀವ ತಲೆಯೆತ್ತಿತ್ತು. ಚಿಗುರು ಹುಲ್ಲು, ಕಾಡುಗಿಡಗಳು ಮೆಲ್ಲಮೆಲ್ಲನೆ ತಲೆಯೆತ್ತುತ್ತಿದ್ದವು. ಮರಣದ ಹಿಂದೆಯೇ ಜನನ; ವಿನಾಶದ ಹಿಂದೆಯೇ ವಿಕಾಸ!
ಅವನು ಅಚ್ಚರಿ, ಸಂತಸದಿಂದ ಅಲ್ಲಿ ನೆಲದಲ್ಲಿ ಅರಳಿದ್ದೊಂದು ಚಂದವಾದ ಕೆಂಪು-ಹಳದಿ ಹೂವನ್ನು ನೋಡಲು ಬಗ್ಗಿದ. ಅವನ ಹಿಂದೆ ಯಾವುದೋ ನೆರಳು ಸುಳಿಯಿತು. ಅವನ ಹಿಂಬದಿಗೊಂದು ಭಾರಿ ಪೆಟ್ಟು ಬಿತ್ತು. ಕಣ್ಣಮುಂದೆ ಮಿಂಚಿನಬಳ್ಳಿ ಕೋರೈಸಿತು. ಮುಂದೆಲ್ಲಾ ಕತ್ತಲೋ ಕತ್ತಲು.
* * *
ಅವನಿಗೆ ಪುನಃ ಯಾವಾಗ ಎಚ್ಚರವಾಯಿತೋ, ಎಷ್ಟು ದಿನವಾದ ಮೇಲೆ ಎಚ್ಚರವಾಯಿತೋ, ಹೇಗೆ ಎಚ್ಚರವಾಯಿತೋ ಅವನಿಗೆ ತಿಳಿಯದು. ಅವನು ಎಚ್ಚರಗೊಂಡದ್ದು ಒಂದು ವಿಚಿತ್ರವಾದ ಕೋನಾಕಾರವಾದ ಶಿಖರವಿದ್ದ ಬಿದಿರ ಗುಡಿಸಲಿನಲ್ಲಿ. ಏಳೆಂಟು ಬಿದಿರುಗಳನ್ನು ಕೋನಾಕಾರವಾಗಿ ಜೋಡಿಸಿ ಒಂದು ಪುರಾತನವಾದ ಆಲದ ಮರಕ್ಕೆ ಆನಿಸಿ ಬಳ್ಳಿಬಿಳಲುಗಳಿಂದ ಕಟ್ಟಿದ್ದ ಅರೆ ತೆರೆದ ಗುಡಿಸಲದು. ಅವನು ಅದರೊಳಗೆ ಒಂದು ಬದಿಗೆ ಬಿಲ್ಲಿನಾಕಾರದಲ್ಲಿ ಬೆನ್ನು ಬಗ್ಗಿಸಿಕೊಂಡು ಬಿದ್ದುಕೊಂಡಿದ್ದ. ಅವನ ಕಣ್ಣು ತೆರೆದಾಗ ಅವನಿಗೆ ಅಸ್ಪಷ್ಟವಾಗಿ ಎರಡು ಅಗಲವಾದ ಬೃಹತ್ ಪಾದಗಳು ಕಂಡವು. ಅವಕ್ಕೆ ಅರಿಶಿನ, ಕುಂಕುಮ ಹಚ್ಚಿತ್ತು. ಹಳೆಯ ಕಾಡುಹೂಗಳ ರಾಶಿ ಪಾದಗಳ ಮಧ್ಯೆ ಕಂಡುಬಂತು. ಅವನಿಗೋ ಬರಿಯ ನಿತ್ರಾಣ. ಎಚ್ಚರವಾದದ್ದಕ್ಕೆ ಮೈನಲ್ಲಿ ತುಂಬಿಕೊಂಡಿದ್ದ ಆಯಾಸ ದ್ವಿಗುಣಗೊಂಡಂತಾಯಿತು. ಹಾಗೆಂದೇ ಆ ಪಾದಗಳ ಒಡತಿ ವಿಗ್ರಹವನ್ನು ನೋಡುವ ಉತ್ಸಾಹವೂ, ತವಕವೂ ಉಂಟಾಗಲಿಲ್ಲ. ಆದರೆ ಆ ಪಾದಗಳ ಇನ್ನೊಂದು ಬದಿಯಲ್ಲಿ ಇನ್ನೊಂದು ಜೀವ ಯಾರೋ ಮಲಗಿದ್ದಂತೆ ತೋರಿತು. ಅದು ಯಾರು, ಯಾಕೆ ಹಾಗೆ ಎನ್ನುವುದಂತೂ ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಅವನ ಆಗಿನ ನಿಶ್ಶಕ್ತಿಯಿಂದಾಗಿ ಅವನಿಗೆ ಅದರಲ್ಲೆಲ್ಲ ಕುತೂಹಲವಂತೂ ಉಂಟಾಗಲಿಲ್ಲ. ಆ ಹೊತ್ತಿಗೆ ಯಾರೋ ಮಾತನಾಡಿಕೊಂಡು ಒಳಗೆ ಬಂದದ್ದು ಗೊತ್ತಾಯಿತು. ಯಾವುದೋ ಅಜ್ಞಾತ ಭಯದಿಂದ, ಆತಂಕದಿಂದ ಅವನು ಕಣ್ಣುಮುಚ್ಚಿಕೊಂಡು ಮಲಗಿದ. ಮುಂದೇನಾದೀತೋ ಎಂಬ ಕಾತರ ಕಳವಳದಿಂದ ಮಲಗಿದಂತೆ ನಟಿಸಿದ.
* * *
ಹೊರಗಡೆ ನಾಲ್ಕೈದು ಜನರಿದ್ದಿರಬೇಕು. ಅವರು ಆಡುತ್ತಿದ್ದ ಭಾಷೆ ಆಧುನಿಕ ನಾಗರಿಕ ಪ್ರಪಂಚದ್ದಲ್ಲ. ಅದರಲ್ಲಿ ಕನ್ನಡ, ತಮಿಳು, ಮಲಯಾಳಂಗಳ ವಿವಿಧ ಕಾಲಸ್ತರಗಳ ಶಬ್ದಗಳು ಚಿತ್ರವಿಚಿತ್ರವಾಗಿ ಸಂಮಿಳಿತವಾಗಿದ್ದವು. ಆ ಮಾತನಾಡುವ ಜನರು ಅಂದರೆ – ಬಿಳಿಗಿರಿರಂಗನಬೆಟ್ಟ ಪ್ರದೇಶದಿಂದ ಹಿಡಿದು ದಕ್ಷಿಣದಲ್ಲಿ ನೀಲಗಿರಿ ಪರ್ವತಗಳವರೆಗೂ ಅತ್ತ ಪಶ್ಚಿಮಕ್ಕೆ ಕೇರಳದ ವೈನಾಡು ಪ್ರದೇಶದವರೆಗೂ ಅಲ್ಲಲ್ಲಿ ಸಣ್ಣ ಸಣ್ಣ ತಂಡಗಳಲ್ಲಿ ನೆಲೆಸಿದ್ದ ಪ್ರಾಚೀನ ಬುಡಕಟ್ಟು ಜನಾಂಗದವರು. ಆ ವಿಶಾಲ ಪ್ರದೇಶದಲ್ಲಿ ಅಲ್ಲಲ್ಲಿ ತಮ್ಮ ತಮ್ಮದೇ ಆದ ಸಣ್ಣ ಸಣ್ಣ ಕುಲ-ಕುಟುಂಬಗಳನ್ನು ಕಟ್ಟಿಕೊಂಡು ನಾಗರಿಕರಿಗೆ ಅಜ್ಞಾತರಾಗಿ ವಾಸಿಸುತ್ತಿದ್ದರು. ಅವರನ್ನು ಇರುಳರ್-ತೋಡರ್-ತೋಡವರ್-ಪಾಲ್ಗುಟ್ಟಿಯವರ್ ಎಂದು ಸ್ಥಳೀಯವಾಗಿ ಕರೆಯುವರು. ಅವರು ಭೂಮಿ ಹುಟ್ಟಿದಾಗ ಹೇಗಿತ್ತೋ, ಇತರ ಕಾಡುಪ್ರಾಣಿ ಪಕ್ಷಿಗಳು, ಸರೀಸೃಪಗಳು ಹೇಗಿದ್ದವೋ ಹಾಗೆಯೇ ಇದ್ದವರು. ಆ ಪ್ರಾಣಿಗಳ ಹಾಗೆಯೇ ಅವರದೂ ಜೀವನಕ್ರಮ. ಹೊತ್ತು ಹೊತ್ತಿನ ಆಹಾರವನ್ನು ಆಗಿಂದಾಗಲೇ ಸಂಪಾದಿಸಬೇಕು. ಪ್ರಾಣಿಜೀವನಕ್ಕಿಂತಲೂ ಕೇವಲ ತುಸು ಮಾತ್ರ ಭಿನ್ನ.
ಅವರದು ಬೇಟೆ(ನೆಲದ ಮೇಲೆ, ಆಕಾಶಕ್ಕೆ ಗುರಿ ಹೊಡೆದು, ನೀರಿನಲ್ಲಿ)ಯ ಜೀವನ. ಸಿಕ್ಕಿದಾಗ ಊಟ, ಸಿಗದಾಗ ಉಪವಾಸ. ಅವರಿಗೆ ಉತ್ತು, ಬಿತ್ತಿ, ಬೇಸಾಯ ಮಾಡುವುದು ಗೊತ್ತಿಲ್ಲ. ಬಿದಿರುಗಳವನ್ನು ಮರಕ್ಕೆ ಆನಿಸಿ ಕಟ್ಟುವವರೆಗೆ ಅವರ ಕಟ್ಟಡ ನಿರ್ಮಾಣ ಕಲೆ. ತೀರ ಇತ್ತೀಚೆಗೆ ಉಡುಪಿನ ಮಹತ್ತ್ವ ಅವರಿಗಾಗಿದೆ. ಕಾರಣ ಸ್ಪಷ್ಟ – ತಮ್ಮ ಸುತ್ತಲೂ ಹಳ್ಳಿ, ನಗರಗಳನ್ನು ಕಟ್ಟಿಕೊಂಡ, ವಾಹನಗಳಲ್ಲಿ ಸಂಚಾರ ಮಾಡುವ, ಕತ್ತಿ, ಮಚ್ಚು, ಬಂದೂಕ ಮುಂತಾದ ಅಸ್ತ್ರಗಳಿಂದ ತಮ್ಮ ಅಧಿಕಾರದರ್ಪವನ್ನು ಇತರರ ಮೇಲೆ ಹೇರುವ ‘ನಾಗರಿಕ’ ಜನರನ್ನು ನೋಡಿ ನೋಡಿ ಅವರಿಗೂ ತಮ್ಮ ಪ್ರಾಣಿಮಟ್ಟದ ನೈಸರ್ಗಿಕ ಬದುಕಿನಿಂದ ಮೇಲೇರುವ ಉಮೇದು ಆಗೀಗ ಉಂಟಾಗುತ್ತದೆ. ಅವರಿಗೆ ‘ಬೆಂಕಿ ಪೊಟ್ಟಣ’ವೆಂದರೆ ಒಂದು ಮಹದದ್ಭುತ. ನಾಗರಿಕರ ಬಟ್ಟೆಬರೆ ಅವರಿಗೆ ಆಕರ್ಷಕವಾದರೂ ಬೆಚ್ಚಿಬೀಳಿಸುವಂತಹ ವಸ್ತು. ಹೀಗಾಗಿ ಅವರು ಕಾಡಿನೊಳಗಣ ತಮ್ಮ ಬಿಲಗಳಿಂದ ಹೊರಬಂದು ಹತ್ತಿರದ ‘ನಾಗರಿಕ’ರ ಹಳ್ಳಿ, ಪಟ್ಟಣಗಳ ಹೊರವಲಯಗಳಲ್ಲಿ ಹೊಂಚುಹಾಕಿ ಕಾಯ್ದು ನೋಡಿ ಹಳ್ಳಿಗರು ಒಣಗಲು ಹಾಕಿದ ಬಟ್ಟೆಬರೆ, ಮರೆತು ಬಿಟ್ಟು ಹೋಗಿರುವ ಹಾರೆ, ಕುಡುಗೋಲು, ಕಬ್ಬಿಣದ ಸರಳು ಮುಂತಾದವನ್ನು ಕದ್ದೊಯ್ಯುತ್ತಿದ್ದರು. ಹಾಗೂ ಅಕಸ್ಮಾತ್ತಾಗಿ ಅವರನ್ನು ಹಳ್ಳಿಗರಾರಾದರೂ ಒಲಿಸಿ, ಸ್ನೇಹ ಮಾಡಿಕೊಂಡರೆಂದರೂ, ಹಳ್ಳಿಗರಿಂದ ಅವರಿಗೆ ಮೋಸವಾಗದೆ ಇರುತ್ತಿರಲಿಲ್ಲ. ಏಕೆಂದರೆ ‘ಹಳ್ಳಿಗರು-ನಾಗರಿಕರು’ ಅವರನ್ನು ತಮ್ಮ ಸಾಮಾನು ಹೊರುವ, ತಮ್ಮ ಬೇಟೆಗೆ ಮೃಗಗಳನ್ನು ತೋರಿಸಿಕೊಡುವ, ಜೀತದಾಳುಗಳನ್ನಾಗಿ ಮಾಡಿಕೊಳ್ಳುವುದು ಸಹಜವಾಗಿತ್ತು.
ಅವರಿಗೆ ಕಾಡಿನ ಪ್ರಾಣಿಪಕ್ಷಿಗಳಿಗಿಂತಲೂ ನಾಡಿನ ನಾಗರಿಕ ಜನರೆಂದರೇ ಅತೀವ ಭಯ. ಏಕೆಂದರೆ ಈ ‘ಕಂಡವರ್’ (ಹೊಸಬರು, ಹೊರಗಿನವರು) ಅಪಾಯಕಾರಿ, ದೂರದಿಂದಲೇ ಕಿಡಿಕಾರುವ ನಳಿಗೆಯಿಂದ ಕಬ್ಬಿಣದ ಗುಂಡೆಸೆದು ಹೊಡೆದು ತಮ್ಮ ಜನರನ್ನು ಕೊಲ್ಲುತ್ತಾರೆ. ಅವರು ಪ್ರಾಣಿಗಳನ್ನು ಕೊಂದರೂ ತಮ್ಮಂತೆ ಆಹಾರಕ್ಕಾಗಿಯಲ್ಲ, ಬರಿದೇ ಮೋಜಿಗಾಗಿ. ಈ ನಾಗರಿಕ ಜನರ ಕಣ್ಣಿಗೆ ತಾವು, ತಮ್ಮವರು ಬಿದ್ದರೂ ಅಪಾಯ ತಪ್ಪಿದ್ದಲ್ಲ. ಹೇಗೆಂದರೆ ಅವರ ಕಣ್ಣಿಗೆ ಬಿದ್ದ ತಮ್ಮವರನೇಕರನ್ನು ಅವರು ಕದ್ದೊಯ್ದು ಅವರಿಗೆ ಕಾಲಿಗೆ ಸಂಕೋಲೆ ಹಾಕಿ, ಅವರನ್ನು ತಮ್ಮ ಕಲ್ಲುಗಣಿಯಲ್ಲಿ ಮುಂಜಾವಿನಿಂದ ಮುಸ್ಸಂಜೆಯವರೆಗೂ ಕಲ್ಲು ಕುಟ್ಟುವ ಕೆಲಸಕ್ಕೆ ಕಟ್ಟಿಹಾಕಿರುತ್ತಾರೆ. ಅಂಥವರನ್ನು ತಾವೇ ಮೇಲಿನಿಂದ ಮರೆಯಿಂದ ಕಂಡು ಅಸಹಾಯರಾಗಿ ಮರುಗಿದ್ದಾರೆ. ಹಾಗೆಂದೇ ಈ ತೋಡ-ಇರುಳರ್ ಜನರು ಯಾವ ನಾಗರಿಕರೂ ಬರಲು ಅಸಾಧ್ಯವಾದಂತಹ ಆ ದಟ್ಟ ಕಾಡಿನ ಮಧ್ಯೆ ಸ್ವತಂತ್ರರಾಗಿ ಕಾಡುಪ್ರಾಣಿಗಳಂತೆಯೇ ನಿನ್ನೆಯ ನೆನಪಿಲ್ಲದೆ, ನಾಳಿನ ಗೋಳಿಲ್ಲದೆ ೨೧ನೆಯ ಶತಮಾನದಿಂದ ಬಹುಹಿಂದೆಯೇ ಉಳಿದಿದ್ದಾರೆ.
ಆ ನಾಲ್ಕಾರು ಜನರು ಮಾತನಾಡಿಕೊಳ್ಳುತ್ತಿದ್ದರು. ಹಿಂದಿನ ಸಂಜೆ ಅವರಿಗೆ ಬೇಟೆಗೆ ಹೊರಟಾಗ ದೂರದ ಯಾವುದೋ ಜಾಗದಲ್ಲಿ ಸಿಕ್ಕಿದ್ದು ಬರಿದೇ ಎಂಟು-ಹತ್ತು ಇಲಿಗಳು, ಆರೆಂಟು ಕಪ್ಪೆಗಳು, ಒಂದು ಮುಂಗುಸಿ. ಅದು ಅವರ ಗುಂಪಿಗೆ ಸಾಲದಾಗಿತ್ತು. ಇವತ್ತು ಸಾಯಂಕಾಲ ಎಲ್ಲಿಗೆ ಹೋಗಿ ಪ್ರಾಣಿ-ಬೇಟೆಯಾಡುವುದೆಂದು ಅವರು ಲೆಕ್ಕಹಾಕುತ್ತಿದ್ದರು. ಅವರಲ್ಲಿ ಮಕ್ಕಳೂ ಕೂಡ ‘ಆಟ’ವೆಂಬಂತೆ ಹತ್ತಿರದ ರೈತರ ಹೊಲಗಳಲ್ಲಿ ರಾತ್ರಿ ಹೊತ್ತು ಕದ್ದುಮುಚ್ಚಿ ಹೋಗಿ ಹಾವು, ಮುಂಗುಸಿ, ಇಲಿ, ಹೆಗ್ಗಣ, ಉಡ ಮುಂತಾದವನ್ನು ಹಿಡಿದು ತರುತ್ತಿದ್ದರು. ಕಾಯಿ, ಹಣ್ಣು, ಬೆಳೆದ ತೆನೆ ಕದ್ದು ತರುತ್ತಿದ್ದರು.
ಆ ಗುಂಪಿನಲ್ಲಿದ್ದ ವಯಸ್ಸಾದ ಹೆಂಗಸು ಈಗ ‘ಗುಡಿಸಲ’ ಒಳಗೆ ಹೋದಳು. ಆ ಪಾದಗಳಿಗೆ ಮುಟ್ಟಿ ಕಣ್ಣಿಗೆ ಒತ್ತಿಕೊಂಡಳು. ಪಾದಗಳ ಎಡಬದಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಮಾತನಾಡಿಸುವ ಮೊದಲು ಈ ಬದಿಯಲ್ಲಿ ಎಂದರೆ ಬಲದ ಬದಿಯಲ್ಲಿ ಮಲಗಿಸಿದ್ದ ‘ಅವನನ್ನು’ ವಿಶೇಷವಾಗಿ ದಿಟ್ಟಿಸಿ ನೋಡಿದಳು. ಅನಂತರ ಎಡಬದಿಯಲ್ಲಿದ್ದ ವ್ಯಕ್ತಿಯ ಪಕ್ಕ ಮಲಗಿದ್ದ ‘ಗುಬ್ಬಿಮರಿ’ಯನ್ನು ಮೆಲ್ಲಗೆ ನೇವರಿಸಿ ಮುತ್ತಿಟ್ಟಳು. ಈಗ ಅವಳಿಗೆ ತಾಯಿಯನ್ನು ಮಾತನಾಡಿಸುವ ಹುರುಪು ಬಂತು. ಇವತ್ತು ಹೇಗಿದ್ದೀಯಾ, ಮಾಯಿ? ತಾಯಿ ಬಾಣಂತಿ ಅರ್ಧ ಸಮಾಧಾನ, ಅರ್ಧ ಗೆಲವಿನಿಂದ ಹೇಳಿದಳು, ಪರವಾಗಿಲ್ಲ, ಅಜ್ಜಿ! ಹಣ್ಣು ತಲೆಯ ಅಜ್ಜಿ ಆಗ ಹೇಳಿದಳು: ನನಗೆ ಗೊತ್ತಿತ್ತು, ಈ ಬನದವ್ವ, ಕಾಳವ್ವ, ಮಾಯವ್ವ ನಿನಗೆ ಶಕ್ತಿ ಕೊಡ್ತಾಳೆ, ಅಂತ. ನೀನು ಎರಡೆರಡು ಜೀವದ ಅವ್ವೆ ಆಗಿದೀಯಾ. ಅದಕ್ಕೇ ನಾನು ಇವತ್ತು ನಿನಗಾಗಿ ಬೇರೆ ಪಲ್ಯ, ಮದ್ದು ಮಾಡಿಕೊಂಡು ತಂದಿದೀನಿ. ಮೆಲ್ಲಕೆ ಮೇಲೇಳು ತಾಯಿ. ಇದನೀಗಲೇ ತಿನ್ನು. ನಾನೀಗಲೇ ಬಿಸಿನೀರೂ ತಂದಿಟ್ಟಿದೀನಿ. ಆ ಬನದವ್ವೆ ತಾಯಿ ನಿನಗೆಲ್ಲಾ ಒಳ್ಳೇದು ಮಾಡ್ತಾಳೆ.
ಅಜ್ಜಿ ಮೆಲ್ಲಗೆದ್ದು ಹೊರಗೆ ಹೋದಳು. ಅಜ್ಜಿ ಹೊರಗೆ ಬಂದುದನ್ನು ನೋಡಿ ಅಲ್ಲಿದ್ದ ನಾಲ್ವರು ಪ್ರಶ್ನೆ ಕೇಳುವಂತೆ ನೋಡಿದರು. ಅಜ್ಜಿ ಅವರಿಗೆ ಹೇಳುತ್ತಿದ್ದ ಸಮಾಧಾನದ ಮಾತು ಒಳಗೂ ಕೇಳಿಸುತ್ತಿತ್ತು. ಅವಳು ಹೇಳುತ್ತಿದ್ದಳು, ಒಳಗೆಲ್ಲಾ ಚೆನ್ನಾಗೈತೆ. ತಾಯಿ-ಕೂಸು ಚೆಂದಾಕಿದಾರೆ. ಆ ಇನ್ನೊಬ್ಬ ‘ಅಯ್ಯ’ನೂ ಹುಷಾರಾಗಿದಾನೆ. ಅವನಿಗೂ ಗ್ಯಾನ ಬಂದಿದೆ. ಮಾಯಿ ಪುಟ್ಟೀಗೆ ಅವನಿಗಿನ್ನೂ ನಾಲ್ಕಾರು ದಿನ ಮೊಲೆ ಉಣಿಸು ಅಂತ ಹೇಳಿ ಬಂದೆ. ಅವಳ ಮರಿ ಇನ್ನೂ ಎಳಸು. ಆ ಮನಷನಿಗೇ ಮಿಕ್ಕ ಹಾಲು ಕುಡಿಸಲಿ ಬಿಡು, ಅಂದೆ! ಅಜ್ಜೀ! ನೀನೋ ನಿನ್ನ ಮೊಮ್ಮಗಳೋ! ಇಬ್ಬರೂ ಗಟ್ಟಿಗಿತ್ತಿಯರೇ ಸರಿ ಬಿಡು! ಆವಯ್ಯಂದು ನಾವು ಜೀವದಾಸೆನೇ ಬಿಟ್ಟಿದ್ದೆವು. ಅವನಿಗೆ ನಾವು ಹಾಗೆ ಹೊಡೀಬಾರದಿತ್ತು. ಅವನೋ ಯಾವನೋ ತಿರುಗಾಲ ಸಂನ್ಯಾಸಿ ಅಂತ ನಮಗ್ಹೇಗೆ ಗೊತ್ತಿರಬೇಕು! ಅವನಿಗೆ ಮದ್ದು ಹಾಕಿ ನೀನವನ ಜೀವ ಉಳಿಸಿದೆ. ಅವನಿಗೆ ಮೊಲೆಹಾಲು ಕೊಡು ಅಂತ ಬಾಣಂತಿ ಮೊಮ್ಮಗಳಿಗೆ ಹೇಳಿದೆ. ನೀನೇ ಅವನಿಗೆ ಮರುಜನ್ಮ ಕೊಟ್ಟೆ. ನಮ್ಮೆಲ್ಲರನ್ನೂ ಆ ತಾಯಿ ನಮ್ಮವ್ವ, ಬನದವ್ವ, ಕಾಳವ್ವ, ಮಾಯವ್ವನ ಕೋಪದಿಂದ ಕಾಪಾಡಿದೆ. ನೀನೇ ನಮ್ಮ ದೇವ್ರು, ಕಣಜ್ಜಿ! ಎಂದು ಅವರು ಹೇಳಿದರು.
ಈ ಎಲ್ಲಾ ಸಂಗತಿಯೂ, ಎಲ್ಲಾ ಮಾತುಕತೆಯೂ ಅರೆಪ್ರಜ್ಞೆಯಲ್ಲಿ ನಿದ್ದೆ-ಎಚ್ಚರದ ನಡುವೆ ಹೊಯ್ದಾಡುತ್ತಿದ್ದ ಅವನ ಅಂತರ್ಮನದಲ್ಲಿ ದಾಖಲಾಗುತ್ತಿತ್ತು.
* * *
ಅಜ್ಜಿಯ ಮಾತು ಕೇಳಿಸಿಕೊಳ್ಳುತ್ತಾ ಅವನು ಎರಡು ವಾರ ಹಿಂದಕ್ಕೆ ಕಾಲದಲ್ಲಿ ಸರಿದಿದ್ದ. ಅವನೀಗ ಜಾಗೃತಿ-ಸುಷುಪ್ತಿಯ ಸ್ಥಿತಿಲೋಕದಲ್ಲಿ ಲೋಲಕದಂತೆ ತೂಗಾಡುತ್ತಿದ್ದ. ಅವನ ಪ್ರಜ್ಞೆ ಕುಂದಿತ್ತು. ಈಗವನು ಅದೊಂದು ವಿಶಿಷ್ಟ ಕತ್ತಲೆಗೆ ಜಾರಿದ್ದ.
ಅದೊಂದು ಕತ್ತಲೆ-ಬೆಳಕಿನ ಸಂಧಿಕಾಲದ ಆಟ. ಸುತ್ತಣ ವಸ್ತುಗಳು, ಪ್ರಾಣಿ, ವನಸ್ಪತಿಗಳು ವಿವಿಧ ಆಕಾರಗಳನ್ನು ತಳೆಯುತ್ತಾ ತಮ್ಮಷ್ಟಕ್ಕೆ ತಾವೇ ಚಲಿಸಿದಂತೆ, ಸ್ತಬ್ಧವಾದಂತೆ, ಉಸಿರಾಡುವಂತೆ ಕ್ರಮಬದ್ಧವಾಗಿ ಏರಿಳಿಕೆಯಾದಂತೆ, ನಿರಂತರವಾಗಿ ಗತಿಶೀಲವಾಗಿವೆ. ಉಸಿರಾಟದ ಶಬ್ದ ಒಮ್ಮೆಗೇ ಬದಲಾಗುತ್ತ ಹೋಗಿ ಒಮ್ಮೆ ಶಂಖನಾದದಂತಾಗಿ, ಒಮ್ಮೆ ಡಮರು ನಿನಾದವಾಗಿ, ಗೆಜ್ಜೆನಾದವಾಗಿ, ಕೊಳಲಿನ ಕರೆಯಾಗಿ ವಿವಿಧ ಪ್ರಕಾರವಾಗಿ ಕೊನೆಗೆ ಭೂಕಂಪನದಂತೆ, ಪರ್ವತಶಿಖರವೇ ಕಳಚಿ ಬೀಳುವಂತಹ, ಉಲ್ಕಾಪಾತದಂತಹ ಕೆಂಡಮಳೆಯ ಶಬ್ದತುಮುಲವಾಗಿ ಕೇಳಿಬರುತ್ತಿದೆ. ಎಲ್ಲವೂ ನಿಂತು ನಿಶ್ಶಬ್ದವಾದಂತೆ. ಅವನ ‘ಮೈ’ (ಆ ಸ್ವಪ್ನಲೋಕದಲ್ಲಿನ ಕಲ್ಪಿತ ಶರೀರ) ತಣ್ಣಗೆ ಹಿಮಗಟ್ಟಿದಂತಿದ್ದುದು ಇದ್ದಕ್ಕಿದ್ದಂತೆ ಕಾವೇರಿ, ಕೆಂಪಗೆ ಕಾದ ಕಬ್ಬಿಣದುಂಡೆಯಂತಾಗುತ್ತದೆ. ‘ಮೈ’ಯೆಲ್ಲಾ ಕಂಪಿಸುತ್ತದೆ. ರಸನೇಂದ್ರಿಯದಲ್ಲಿಯೂ ಎಂತೆಂತಹದೋ ಅನುಭವ – ಕಹಿ, ಹುಳಿ, ಸಿಹಿ, ಲವಣ ರಸವಲ್ಲದ ರಸಾನುಭವದ ರುಚಿಯೇರಿ ಅವನ ‘ಮೈ’ಯೆಲ್ಲಾ ಥರಥರ ನಡುಗಿತು. ಈಗವನ ‘ಮೈ’ಯೊಳಗಿನ ‘ಜೀವ’ ಅಂಗುಷ್ಟಾಕಾರವಾಗಿ ರೂಪು ಪಡೆಯಿತು. ಅಂಗುಷ್ಟದ ಪ್ರಮಾಣ ಕಿರಿದುಕಿರಿದಾಗಿ ಅಣುಗಾತ್ರವಾಯಿತು. ಅಲ್ಲಿಯೂ ಸಂಕೋಚನ ನಿಲ್ಲಲಿಲ್ಲ. ಅಣುಗಾತ್ರದ ಜೀವ ಇನ್ನೂ ಕುಸಿದು ಕುಗ್ಗಿ ‘ತ್ರುಟಿ’ಯಷ್ಟಾಯಿತು (ತ್ರುಟಿ ಎಂದರೆ ಅದೇ ತಾನೇ ಅರಳಿದ ಸುಕೋಮಲ ಪದ್ಮಪತ್ರವನ್ನು ಅತಿ ಸೂಕ್ಷ್ಮವಾದ ಅತಿ ತೀಕ್ಷ್ಣವಾದ ಸೂಜಿಯಿಂದ ಚುಚ್ಚಿದಾಗ ಎಷ್ಟು ಗಾತ್ರವಾಗುತ್ತದೆಯೋ, ಎಷ್ಟು ಕಾಲವಾಗುತ್ತದೆಯೋ ಅಷ್ಟು). ತ್ರುಟಿಯಷ್ಟಾದ ಜೀವ ಇನ್ನೂ ಸರಿಯಾಗಿ ಮರೆಯೊಂದರಲ್ಲಿ ಕುಳಿತಿರಲಿಲ್ಲ, ಆಗಲೇ ಅದರ ಸುತ್ತಲೂ ಶಿಲಾವರ್ಷವೊಂದು ಪ್ರಾರಂಭವಾಗಿತ್ತು. ಅವನ ‘ಕಣ್ಣೆದುರೇ’ ಸಣ್ಣಸಣ್ಣ ಕಲ್ಲುಗಳಿಂದ ಆರಂಭವಾಗಿದ್ದ ಮಳೆ ದೊಡ್ಡ ದೊಡ್ಡ ಬಂಡೆಗಲ್ಲುಗಳವರೆಗೂ ತೀವ್ರಸ್ವರೂಪ ಪಡೆಯಿತು. ಅಂಗುಷ್ಟಮಾತ್ರದ ಜೀವ ‘ತ್ರುಟಿ’ಯಾಗುವ ಹೊತ್ತಿಗೆ ಶಿಲಾವರ್ಷದ ಸ್ವರೂಪವೂ ಬದಲಾಯಿಸಿತು. ಈಗ ಅದರ ಕಣ್ಣೆದುರಿಗೇ ಬಂಡೆಗಲ್ಲುಗಳ ವಿಶಾಲ ಅಡಿಪಾಯ ಉಂಟಾಯಿತು. ಅದರ ಮೇಲೆ ತರಹತರಹೆಯ ಆಕಾರದ ಬಂಡೆಗಲ್ಲುಗಳು, ಜಲಚರ ಪ್ರಾಣಿಗಳ ಅಸ್ಥಿಗಳು, ಪ್ರಾಣಿಪಕ್ಷಿಗಳ ಆಕೃತಿಗಳು ಸ್ತಂಭಗಳಾಗಿ ಗೋಡೆಗಳಾಗಿ ಮೇಲ್ಛಾವಣಿಯಾಗಿ ನಿರ್ಮಾಣವಾದವು. ಆ ಎಲ್ಲ ಕಟ್ಟಡಗಳೂ ಸಮುದ್ರದ ತೆರೆಯಂತೆ ಮೇಲಕ್ಕೆ ಕೆಳಗೆ, ಹಿಂದೆ ಮುಂದೆ ಕ್ರಮಬದ್ಧವಾಗಿ ಚಲಿಸುತ್ತಾ ಒಂದು ಅದ್ಭುತವಾದ ಪರದೆಯನ್ನು ನಿರ್ಮಾಣ ಮಾಡಿದವು. ಸೂರ್ಯ, ಚಂದ್ರರಾದಿಯಾಗಿ ಎಲ್ಲ ಆಕಾಶಕಾಯಗಳೂ ಆ ಪರದೆಯಲ್ಲಿ ಸೇರಿ ಅದೊಂದು ಅದ್ಭುತವಾದ ಮಾಯಾವಿಲಾಸವನ್ನು ರಚಿಸಿದ್ದವು.
ತ್ರುಟಿಯಾಕಾರದ ಅವನ ಜೀವ ‘ನೋಡ ನೋಡುತ್ತಿರುವಂತೆಯೆ’ ಅವನೆದುರಿನ ಮಾಯಾಪರದೆಯನ್ನು ಸೀಳಿಕೊಂಡು ಒಂದು ದೇವಿಯ ನೆರಳು ಮೂಡಿತು. ಅದನ್ನು ಬೆಳಗುತ್ತಿದ್ದುದು ಅವಳ ಮಾಯಾದೇಹಕಾಂತಿ. ದಿಟ್ಟೈಸಿ ನೋಡಿದರೆ ಕಾಣದದು, ಕಣ್ಣೆವೆ ಮುಚ್ಚಿದರೆ ಪ್ರತ್ಯಕ್ಷ. ದೇವಿಯ ನೆರಳು ಬೆಳೆಯತೊಡಗುತ್ತದೆ. ಎರಡೂ ದಿಕ್ಕಿನಲ್ಲಿ – ಆಪಾದಮಸ್ತಕವಾಗಿ. ಕಣ್ಣುಗಳಲ್ಲಿ ದೈವಿಕ ತನ್ಮಯತೆ. ಆಗಸ-ಭೂಮಿಗಳನ್ನು ಜೋಡಿಸಿರುವಂತಹ ಜಟಾ ಕೇಶರಾಶಿ. ತುಟಿಗಳು ರಕ್ತವರ್ಣ. ಕೈಗಳು ಅಸಂಖ್ಯಾತ, ಎಣಿಸಲಾರದಷ್ಟು – ಏಕೆಂದರೆ ಅಷ್ಟು ಜೀವರಾಶಿಗಳನ್ನು ನೇವರಿಸಿ ಬಾಳಿಸಬೇಕು. ಅವಳ ಮೈತುಂಬಾ ಹರಿದಾಡುತ್ತಿರುವ ಅಸಂಖ್ಯ ಮಣಿಮಾಲೆಗಳು, ಹೂಮಾಲೆಗಳು, ಸಜೀವಗೊಂಡ ಕಲ್ಪವೃಕ್ಷದ ಕೊಂಬೆರೆಂಬೆಗಳು, ಅವಳ ಕಣ್ಣುಗಳಲ್ಲಿ ಸೃಷ್ಟಿ ಸಂಕಲ್ಪವೊಂದು ಅಂತರ್ಲೀನವಾಗಿದೆ. ಅವಳು ಅದೆಂಥದ್ದೋ ಕ್ರಿಯೆಯಲ್ಲಿ ಸಮಾಧಿಸ್ಥಳಾದಂತೆ ಕಾಣಿಸುತ್ತಿದ್ದಾಳೆ. ಅವಳ ಅಸಂಖ್ಯ ಕೈಗಳು ಅವಳ ತೊಡೆಯವರೆಗೆ ಉಬ್ಬರವಿಳಿತವಾಗುತ್ತಿರುವ ಸಾಗರದ ಅಲೆಗಳಂತೆ ಚಲನಶೀಲವಾಗಿವೆ. ಅಗೋ, ಅಗಣಿತ ಶಿಶುಗಳ ಆಕ್ರಂದನ ಆಕಾಶ ಬಿರಿಯುವಂತೆ ಕೇಳಿಸುತ್ತದೆ. ಅವಳ ಕೈಗಳಲ್ಲಿರುವ ಕಠಾರಿಗಳು ಮಿಂಚಿನಂತೆ ಹೊಳೆಹೊಳೆಯುತ್ತಾ ಮಿಂಚಿನಂತೆ ಚಲಿಸಿತು. ಹೊಕ್ಕಳಬಳ್ಳಿ ಕಡಿದು ಬಿತ್ತು. ನೆತ್ತರು ಲೋಕಕ್ಕೆಲ್ಲಾ ಚಿಮ್ಮಿತು. ಅದೊಂದು ನೆತ್ತರ ಹನಿ ತ್ರುಟಿರೂಪದಲ್ಲಿದ್ದ ಅವನ ಕಣ್ಣೆವೆಯ ಮೇಲೆ ಬಿತ್ತು. ಜಗನ್ಮಾತೆ ಹೊಸ ಸೃಷ್ಟಿಗೆ ಜೀವ ತುಂಬಿದ್ದಾಳೆ. ತಾಯಿ ಮಾಯೆ ತನ್ನ ಹೊಕ್ಕುಳ ಬಳ್ಳಿಯನ್ನೇ ತುಂಡರಿಸಿದ್ದಾಳೆ……
ಕೋನಾಕಾರದ ಆ ‘ಗುಡ್ಲ’ ತುಂಬಾ ಒಂದು ಶಿಶುವಿನ ಎಳಸು ಕೂಗು, ದುರ್ಬಲ ಅಳು ಒಂದು ಹೊಸ ಲೋಕವನ್ನು ಸೃಷ್ಟಿ ಮಾಡುತ್ತಿದೆ. ಅಜ್ಜಿ ‘ಲಾಲಾಲಾಲಾಲಾ’ ಎಂದು ರಾಗವಾಗಿ ಹೇಳುತ್ತಾ ಆ ಮಗುವಿಗೆ ಬೆಚ್ಚನೆಯ ನೀರಿನಲ್ಲಿ ಮೈತೊಳೆಯುತ್ತಿದ್ದಾಳೆ. ಹಸಿ ಬಾಣಂತಿ ಮೊಮ್ಮಗಳಿಗೆ ಧೈರ್ಯ ಹೇಳುತ್ತಿದ್ದಾಳೆ. ಅವಳ ಮುಖದ ಮೇಲೆ ಕಿರಿದಾಗಿ ಗೆಲವಿನ ನಗೆ ಮೂಡುತ್ತದೆ. ಅಜ್ಜಿ ಹೇಳುತ್ತಾಳೆ: ನಾನಾಗಲೇ ನಿಂಗೆ ಏಳಿದ್ನಲ್ಲಾ – ಆವಯ್ಯಂಗೆ ತುಂಬಾ ಪೆಟ್ಟಾಗಿದೆ, ನೆತ್ತರು ಓಗಿದೆ. ದೇವಿಯ ಪಾದಕ್ಕೆ ಅವನ್ನಾ ಆಕ್ಲು ನಾನೇ ಏಳಿದ್ದು. ಇತ್ತ ಕಡೆ ಆ ದೇವಿಯ ಪಾದದಿಂದ ನಿನಗೂ ಮೈಕಳೀತು. ಅವಂಗೂ ಮರುಜಲ್ಮ ಬತ್ತದೆ. ನಮ್ಮಮ್ಮ ಬನದಮ್ಮ. ಕಾಳವ್ವ, ಮಾಯವ್ವ ತನ್ನ ಪಾದಕ್ಕೆ ಬಿದ್ದೋರ್ನ ಕಾಪಾಡ್ದೇ ಇರಾಕಿಲ್ಲ. ಪುಟ್ಟೀ, ನಾನೊಂದು ಮಾತು ಏಳ್ತೀನಿ, ಕೇಳ್ತೀಯಾ? ಆವಯ್ಯಂಗೆ ಅರೆಜೀವ ಆಗ್ಯದೆ. ಅವಂಗೆ ನಾನೇನೋ ಸೊಪ್ಪುಸದೆ ಕಟ್ತೀನಿ. ಆದರೆ ಅವ್ನ ಒಟ್ಟೇಗೆ ಆಕೋದು ಏನ್ನ? ಆಕೋರು ಯಾರು? ಅವಂಗೇನ್ ನಮ್ ಜನ್ರಂಗೆ ಇಲಿ, ಕಪ್ಪೆ ತಿನಸಾಕಾಯ್ತದಾ? ಅದಕೇ, ಅದಕೇ, ನಿನ್ನಾಲು ನೀನು ಅವಂಗೆ ಕುಡಿಸವ್ವಾ, ಒಂದೆರಡು ವಾರ. ಈ ನಿನ್ನ ಕೂಸಿಗೂ ಕುಡ್ಸಿ ಮಿಕ್ಕೋವಷ್ಟೂ ಆಲು. ನನ್ನ ಮಾತು ನಡೆಸಿಕೊಡವ್ವಾ. ಒಂದು ಜೀವ ಉಳ್ಸಿದ ಪುಣ್ಯ ನಿಂಗೆ, ನಿನ್ ಮಗೀಗೆ ಬರ್ತದೆ. ಬಾಣಂತಿ ಮಾಯೆ ಅವಳ ಮಾತಿಗೆ ಇಲ್ಲವೆಂದು ಹೇಗೆ ಹೇಳಿಯಾಳು? ಅವಳು ಕೂಡಲೇ ಸಂತೋಷದಿಂದ ಒಪ್ಪಿದಳು. ಈ ಮಾತುಕತೆ ತ್ರುಟಿರೂಪದಲ್ಲಿದ್ದ ಅವನಿಗೆ ಕೇಳಿಸಿಯೂ ಕೇಳಿಸಿತು, ಅದರ ಒಳ ಅರ್ಥವೂ ಆಯಿತು. ತನ್ನ ತಾಯಿಯೇ ತನಗೆ ಮೊಲೆಯೂಡಿ ಕಾಪಾಡುತ್ತಿರುವಂತೆ ಅವನಿಗೆ ಗೋಚರವಾಯಿತು. ಅದರಲ್ಲಿದ್ದುದೇ ಅಮೃತ.
ಅವನು ಆ ಗಳಿಗೆಯಿಂದ ‘ಅವರು’ ಆಗಿದ್ದು ಹೀಗೆ.
* * *
ಅಂದಿನಿಂದ ಅವರದು ಆನಂದ ತುಂಬಿದ ಮೌನ ಸಾಧನೆಯಾಯಿತು. ಅವರು ಹಿಂದಿನಂತೆ ಕೆಲಸಕ್ಕೆ ಹೋಗಲು ಸಾಧ್ಯವಾದರೂ, ಅವರು ಹಿಂದಿನಂತೆಯೇ ಶ್ರದ್ಧೆ-ನಿಷ್ಠೆಯಿಂದ ಕಾರ್ಯನಿರ್ವಹಿಸಿದರೂ, ಅವರೀಗ ಹಿಂದಿನಂತೆ ಲೌಕಿಕ ಪ್ರವೃತ್ತಿಗಳಿಂದ ಮಾನಸಿಕವಾಗಿ ದೂರವಾಗುತ್ತಾ ಬಂದರು. ಅವರ ಕಣ್ಣಿಗೆ ಎಲ್ಲವೂ ಎಲ್ಲರೂ ಪಾರದರ್ಶಕ ಗಾಜಿನಾಚೆಯಿಂದ ಕಾಣುವಂತಾದರು. ಎಲ್ಲರಲ್ಲಿಯೂ ಅಂತಃಸತ್ತ್ವ ಆಧ್ಯಾತ್ಮಿಕ ಉನ್ನತಿಯನ್ನೇ ಕಾಣುತ್ತಿದ್ದ ಅವರಿಗೆ ತಾನೇನು ಮಾಡುತ್ತಿದ್ದೇನೆ ಎಂಬ ಅಹಂ ಭಾವನೆಯೇ (ಎಂದರೆ ಅಭಿಮಾನ, ಗರ್ವ, ಕಳಕಳಿ, ಮೋಹ, ಇತ್ಯಾದಿ) ಇಲ್ಲವಾಯಿತು. ನಾಟಕ ರಂಗಮಂಚದ ಮೇಲೆ ಎಲ್ಲ ನಟ-ನಟಿಯರೂ, ನರ್ತಕ-ನರ್ತಕಿಯರೂ ನಟಿಸುತ್ತಾ, ನರ್ತಿಸುತ್ತಾ ಪ್ರದರ್ಶನ ನೀಡುತ್ತಿದ್ದರೆ, ತಾವೂ ಸಹ ಅದರ ನಟನಾಗಿಯೋ, ದಿಗ್ದರ್ಶಕನಾಗಿಯೋ, ಪ್ರೇಕ್ಷಕನಾಗಿಯೋ ಅದೇ ಹೊತ್ತಿನಲ್ಲಿ ಆ ರಂಗಮಂಚದ ಮೇಲೆ ಎಲ್ಲರ ಕಣ್ಣಿಗೂ ಬೀಳುವಂತಿದ್ದರೂ ಕಾಣಿಸಿಕೊಳ್ಳದಂತೆ, ನಟಿಸುತ್ತಿದ್ದರೂ ಭಾಗವಹಿಸದಿರುವಂತೆ ಈ ಲೋಕವ್ಯವಹಾರದಿಂದ ದೂರ ಉಳಿದರು. ಜಡಭರತನೆಂದರೆ ಹೀಗಿರಬಹುದೇ?
ಅಂದೊಮ್ಮೆ ವಿಶೇಷ ಸಾಧನೆ ಮಾಡಿದ್ದ ದಾರ್ಶನಿಕರೊಂದಿಗೆ ಮಾತನಾಡುತ್ತಾ ‘ಬ್ರಹ್ಮನ್’ ಮತ್ತು ‘ಓಂ’ಗಳನ್ನು ವಿವರಿಸುತ್ತಿದ್ದರು. ಬ್ರಹ್ಮನ ಬೃಹತ್ ತತ್ತ್ವ ಕಿರಿದಾಗಿ ಸಂಕೋಚನಗೊಂಡು ‘ಅಹಂ’ನ ಮಮಕಾರದಂತಹ ಲಘುತ್ವ ಉಂಟಾಗುತ್ತದೆ. ಮ ಎಂದರೆ ಮಮಕಾರ, ಮಮತೆ, ಮಾತೆ, ಮಾಯೆ. ಇದರ ಪರಿಣಾಮವೆಂದರೆ ಬ್ರಹ್ಮನೆಂಬ ಅವ್ಯಯ, ಅಪ್ರಮೇಯ, ಅನೂಹ್ಯ ಬೃಹತ್ ವಸ್ತು ‘ಮಮ’ ಎಂಬ ಮಾತೆಮಾಯೆಗೆ ಈಡಾಗುತ್ತದೆ. ಈಗ ಅದರಲ್ಲಿ ಕಾರಣ-ಕಾರ್ಯಗಳೆಂಬ ಕಾರಣೀಭೂತವಾದ ಕಾಲ-ದೇಶಗಳ ‘ಪರಿಮಿತಿ’ಗೆ ಒಳಪಟ್ಟಿರುವ ಅನಿಕೃಷ್ಟ ಕನಿಷ್ಠ ವಸ್ತುವಾಗುತ್ತದೆ. ಬ್ರಹ್ಮ ಹಿಂದೆ ಸರಿದು ಮಾಯೆ ಎಂದರೆ ಭ್ರಮೆಯ ಭಿತ್ತಿಯ ಮೇಲೆ ಕಂಡು-ಕಾಣದಂತೆ, ಇದ್ದು-ಇಲ್ಲದಂತೆ, ನಿಶ್ಚಲ-ಸ್ಪಂದನದಲ್ಲಿ, ಸ್ಥಿರ-ಅಸ್ಥಿರನಾಗಿ ಸೃಷ್ಟಿ-ಸ್ಥಿತಿ-ಲಯಗಳಿಗೆ ಸಾಕ್ಷಿಯಾಗಿ ನಿರುಪಾಧನಾಗಿರುತ್ತಾನೆ.
ಸರಳವಾಗಿ ಹೇಳಿದರೆ, ಇದೇ ಬಾಳೆಂಬ ಭ್ರಮೆ, ಬದುಕಿನ ಭ್ರಮೆ. ಭ್ರಮೆಯಲ್ಲಿ ಭರಣ. ಭ್ರಮೆಯಲ್ಲಿ ಚಾರಣ. ಹುಟ್ಟು-ಸಾವುಗಳೆಂಬ ಭ್ರಮೆ, ಮಾಯೆಯ ಆವರಣ ಕಳಚಿದ ಮೇಲೆ ‘ಬ್ರಹ್ಮ’ನಲ್ಲಿಯೇ ಒಂದಾಗಬೇಕು.
ಇನ್ನೂ ಅರ್ಥವಾಗುವಂತೆ ಅನುಭವಿಸಿ ಹೇಳಿದರೆ ‘ಮಾತೆಯ ಮಮತೆಯ ಮಡಿಲಿ’ನಿಂದ ಬ್ರಹ್ಮಾನಂದಕ್ಕೆ ಜಾರಿ ಸಾಗಬೇಕು. ಶಿವೋಹಂ ಎಂದಾಗಬೇಕು. ಶಿವೋಹಂ! ಶಿವೋಹಂ!
‘ಮಾತೆಯ ಮಮತೆಯ ಮಡಿಲಿನಿಂದ ಬ್ರಹ್ಮಾನಂದಕ್ಕೆ ಜಾರುವುದು’ ಇದು ಅವರ ಅನುಭವದ ಮಾತು. ಅವರ ಕಾಣ್ಕೆಯೇ ಲೋಕಕ್ಕೆ ಕಾಣಿಕೆ.?