ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು ಹಳೆಯವು. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಇವುಗಳಲ್ಲಿ ಹೆಚ್ಚಿನವು ಕೇವಲ ಸಂಶೋಧಕರಿಗೆ ಮಾತ್ರ ಪರಿಚಿತವಾಗಿವೆ ಎಂಬುದು ದುರದೃಷ್ಟದ ಸಂಗತಿ.
ಸಂಸ್ಕೃತಿಯ ಬೇರುಗಳನ್ನು ಹುಡುಕಿಕೊಂಡು ಹೋಗುವ ಮನುಷ್ಯಪ್ರಯತ್ನ ಇಂದು-ನಿನ್ನೆಯದಲ್ಲ. ತನ್ನ ಪೂರ್ವಜರ ಬದುಕು, ವಲಸೆ, ಜೀವನಕ್ರಮ, ಆಹಾರಪದ್ಧತಿ, ಉಡುಗೆ-ತೊಡುಗೆ, ನಂಬಿಕೆ, ಆರಾಧನಾಪದ್ಧತಿ, ಕಲೋಪಾಸನೆ – ಹೀಗೆ ಪ್ರತಿಯೊಂದರಲ್ಲೂ ಕುತೂಹಲವನ್ನು ತಳೆಯುತ್ತ, ಸಂಶೋಧನೆಗಳನ್ನು ಮುನ್ನಡೆಸುತ್ತ, ಎದುರಾದ ಸಂಗತಿಗಳಿಗೆ ಬೆರಗುಗೊಳ್ಳುತ್ತ ಇಂದಿನ ಮನುಷ್ಯನ ಅಧ್ಯಯನ ಸಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಮನುಷ್ಯನ ಕುತೂಹಲದ ಮನಸ್ಸು ಇತಿಹಾಸವನ್ನೂ ದಾಟಿಕೊಂಡು ಪ್ರಾಗೈತಿಹಾಸಿಕ ತಾಣಗಳ ಸಂಶೋಧನೆ, ಉತ್ಖನನ, ಕಾಲನಿರ್ಧಾರ, ತಂತ್ರಜ್ಞಾನದ ಸಹಾಯದ ಮೂಲಕ ಡಿಜಿಟಲೀಕರಣ, ಗತಿಸಿದ ಘಟನೆಗಳ ೩ಡಿ ಮರುಸೃಷ್ಟಿಯವರೆಗೆ ಮುಂದುವರಿದಿದೆ. ಪ್ರಾಗೈತಿಹಾಸಿಕ ತಾಣಗಳು ತಮ್ಮ ಗರ್ಭದಿಂದ ಎಷ್ಟೊಂದು ಅಚ್ಚರಿಯ ಸಂಗತಿಗಳನ್ನು ಹೊರಹಾಕುತ್ತಿವೆಯೆಂದರೆ ಅವುಗಳನ್ನು ಆಯ್ದುಕೊಂಡು, ವಿಂಗಡಿಸಿ, ಅಭ್ಯಸಿಸಿ ಮುಂದಿನ ತಲೆಮಾರುಗಳಿಗಾಗಿ ಕಾಪಿಟ್ಟುಕೊಳ್ಳಲು ಭಗೀರಥ ಪ್ರಯತ್ನದ ಆವಶ್ಯಕತೆಯೇ ಇದೆ.
ಬರವಣಿಗೆಯ ಪೂರ್ವದಲ್ಲಿನ ಮಾನವ ಬದುಕಿನ ಕಾಲವನ್ನು ಪ್ರಾಗೈತಿಹಾಸಿಕ ಕಾಲವೆಂದು ಕರೆಯಲಾಗುತ್ತದೆ. ಪ್ರಾಗೈತಿಹಾಸಿಕ ತಾಣಗಳ ಸಂಶೋಧನೆ ಕಳೆದ ಸುಮಾರು ನೂರು ವರ್ಷಗಳಿಂದೀಚಿನಿಂದ ಆರಂಭವಾಗಿದೆ. ಪ್ರಾಗೈತಿಹಾಸಿಕ ಕಾಲಘಟ್ಟದ ಪ್ರಾಚೀನ ಶಿಲಾಯುಗ, ಮಧ್ಯಶಿಲಾಯುಗ ಮತ್ತು ನವಶಿಲಾಯುಗಕ್ಕೆ ಸೇರಿದ ತಾಣಗಳು ಭಾರತದ ತುಂಬೆಲ್ಲ ಹರಡಿಕೊಂಡಿವೆ. ಮಧ್ಯಪ್ರದೇಶ, ಛತ್ತೀಸ್ಗಢ್, ಒಡಿಸ್ಸಾ, ಕರ್ನಾಟಕ, ರಾಜಸ್ಥಾನ, ಕಾಶ್ಮೀರ, ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಮಣಿಪುರ ಸೇರಿದಂತೆ ಅನೇಕ ಕಡೆ ಪ್ರಾಗೈತಿಹಾಸಿಕ ಅವಧಿಯ ವಿವಿಧ ಕಾಲಘಟ್ಟಗಳ ತಾಣಗಳಿವೆ. ಇವುಗಳಲ್ಲಿ ಸಾವಿರಕ್ಕೂ ಮೇಲ್ಪಟ್ಟು ಗುಹೆಗಳು, ರೇಖಾಚಿತ್ರಗಳು, ಡಾಲ್ಮನ್ಗಳು (ಶಿಲಾಯುಗ ಕಾಲದ ಮಾನವರ ಗೋರಿಗಳು), ಬೇಟೆಯ ಸಾಮಗ್ರಿಗಳು, ಬೆಂಕಿಯ ಅವಶೇಷಗಳು ಸೇರಿದಂತೆ ಅಸಂಖ್ಯಾತ ವಸ್ತುಗಳು ಸೇರಿವೆ. ೧೯೫೭-೫೮ರಲ್ಲಿ ಖ್ಯಾತ ಸಂಶೋಧಕ ಡಾ. ವಿಷ್ಣು ಶ್ರೀಧರ ವಾಕಣಕರ್ ಅವರು ಭಿಂಬೇಟ್ಕಾ ಗುಹೆಗಳನ್ನು ಪತ್ತೆಹಚ್ಚಿದ್ದು, ಇಡೀ ವಿಶ್ವವೇ ಭಾರತದ ಪ್ರಾಗೈತಿಹಾಸಿಕ ಪರಂಪರೆಯತ್ತ ಮರು-ಅಧ್ಯಯನ ಕೈಗೊಳ್ಳುವಂತೆ ಮಾಡಿತ್ತು. ಪ್ರಾಗೈತಿಹಾಸಿಕ ಕ್ಷೇತ್ರದಲ್ಲಿ ವಾಕಣಕರ್ ಅವರ ಈ ಕೊಡುಗೆ ಅವಿಸ್ಮರಣೀಯ.
ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಮತ್ತೊಂದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು ಹಳೆಯವು. ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ಇವುಗಳಲ್ಲಿ ಹೆಚ್ಚಿನವು ಕೇವಲ ಸಂಶೋಧಕರಿಗೆ ಮಾತ್ರ ಪರಿಚಿತವಾಗಿವೆ ಎಂಬುದು ದುರದೃಷ್ಟದ ಸಂಗತಿ. ಅದರಲ್ಲೂ ಸಾಕಷ್ಟು ತಾಣಗಳು ಅವಸಾನದ ಅಂಚಿನಲ್ಲಿವೆ ಎಂಬುದು ಇನ್ನೂ ದುರದೃಷ್ಟದ ಸಂಗತಿ.
ಕರ್ನಾಟಕದಲ್ಲಿ ಬಳ್ಳಾರಿಯ ಸಂಗನಕಲ್ಲು ಬೆಟ್ಟ, ಕೋಲಾರದ ಘಟ್ಟಮಾದಮಂಗಲ ಗ್ರಾಮ, ಟೇಕಲ್ ಬೆಟ್ಟ, ಪಾರಂಡಪಲ್ಲಿ, ಬಾದಾಮಿ ಸುತ್ತಮುತ್ತಲಿರುವ ಆನೆಪಡಿ, ಸಿಡಿಲಪಡಿ, ಕುಟಕನಕೆರೆ, ರಂಗನಾಥ ಗುಡ್ಡ, ಶಿವಾರಘಟ್ಟ, ಐಹೊಳೆ ಸಮೀಪದ ಮೇಗುತಿ, ಚಿತ್ರದುರ್ಗದ ಸಂಗೇನಹಳ್ಳಿ, ಹಂಪಿಯ ಸುತ್ತಮುತ್ತಲ ಪ್ರದೇಶಗಳು, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಲ್ಲುಸಾದರಹಳ್ಳಿ, ಶಾನೆಗೆರೆ, ಕುಂದಾಪುರದ ಬಸ್ರೂರು – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಪ್ರದೇಶಗಳಲ್ಲಿ ಶಿಲಾಶ್ರಯಗಳಲ್ಲಿನ ರೇಖಾಚಿತ್ರಗಳು, ಡಾಲ್ಮನ್ಗಳು, ಮಡಕೆ-ಕುಡಿಕೆಯ ಅವಶೇಷಗಳು ಪ್ರಮುಖವಾಗಿ ಕಂಡುಬರುತ್ತವೆ. ಈ ತಾಣಗಳು ಇಷ್ಟು ವ್ಯಾಪಕವಾಗಿದ್ದರೂ ಇವುಗಳ ಮಹತ್ತ್ವವನ್ನು ಅರಿಯುವಲ್ಲಿ ನಾವು ವಿಫಲರಾಗಿದ್ದೇವೆ ಎಂದೇ ಹೇಳಬೇಕಾಗುತ್ತದೆ. ಉದಾಹರಣೆಗೆ, ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯ ಭವ್ಯ ಗುಹಾಂತರ ದೇವಾಲಯಗಳು. ಪ್ರವಾಸಿಗರು, ವಿದೇಶಿಗರು, ವಿದ್ಯಾರ್ಥಿಗಳು, ಒಮ್ಮೊಮ್ಮೆ ಸಂಶೋಧನಾನಿರತರು ಕೂಡ ಗುಹಾ ದೇವಾಲಯಗಳನ್ನಷ್ಟೇ ಸಂದರ್ಶಿಸಿ ಮುನ್ನಡೆಯುತ್ತಾರೆ. ಆದರೆ ಬಾದಾಮಿಯ ವಾತಾಪಿ ಕೆರೆಯ ದಕ್ಷಿಣಕ್ಕಿರುವ ಕಲ್ಲುಬಂಡೆಗಳಲ್ಲಿ ಪ್ರಾಗೈತಿಹಾಸಿಕ ಕಾಲದ ರೇಖಾಚಿತ್ರಗಳಿವೆ. ಬಿಳಿ ಹಾಗೂ ಕಾವಿ ಮಣ್ಣನ್ನು ಬಳಸಿ ಮನುಷ್ಯ ಮತ್ತು ಪ್ರಾಣಿಗಳ ಚಿತ್ರಗಳನ್ನು ನಮ್ಮ ಪೂರ್ವಜರು ಅಲ್ಲಿ ಬಿಡಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರಗಳನ್ನು ಬಿಡಿಸಿರುವ ಶಿಲಾಭಿತ್ತಿಗಳು ಸಾಮಾನ್ಯ ಎತ್ತರದ ಮನುಷ್ಯರಿಗೆ ನಿಲುಕುವುದಿಲ್ಲ. ಹಾಗಿದ್ದರೆ, ಆಗಿನ ಕಾಲದ ಮಾನವರು ಈ ಎತ್ತರವನ್ನು ತಲಪಲು ಯಾವ ವಿಧಾನ ಬಳಸಿರಬೇಕು? ಕೆಲವು ರೇಖಾಚಿತ್ರಗಳಲ್ಲಿ ಆನೆ ಮುಂತಾದ ಪ್ರಾಣಿಗಳನ್ನು ಚಿತ್ರಿಸಲಾಗಿದೆ. ವಾಸ್ತವವಾಗಿ ಈ ಚಿತ್ರಗಳ ಕುರಿತು ಇತಿಹಾಸತಜ್ಞರ ಜೊತೆಗೆ ಪ್ರಾಣಿಶಾಸ್ತ್ರಜ್ಞರೂ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಪ್ರಾಣಿಗಳ ವಾಸಸ್ಥಾನ ಮತ್ತು ವಲಸೆಯನ್ನು ಅಧ್ಯಯನ ಮಾಡಲು ಇವು ಸಹಕಾರಿ. ಆದರೆ ಈ ಎಲ್ಲ ವಿಷಯಗಳ ಕುರಿತು ಇತಿಹಾಸಕಾರರು ಮತ್ತು ಸಂಶೋಧಕರು ಮಾತ್ರ ಅಧ್ಯಯನ ಕೈಗೊಂಡಿದ್ದಾರೆ. ಜನಸಾಮಾನ್ಯರು, ಪ್ರವಾಸಿಗರು, ವಿದ್ಯಾರ್ಥಿಗಳು ಗುಹಾದೇವಾಲಯಗಳಿಗೆ ಮಾತ್ರ ಸೀಮಿತರಾಗಿದ್ದಾರೆ.
ಜನಸಾಮಾನ್ಯರಿಂದ ಇತಿಹಾಸ ದೂರವಾದಾಗಲೆಲ್ಲ ಐತಿಹಾಸಿಕ ತಾಣಗಳ ಮೇಲೆ, ಮುಖ್ಯವಾಗಿ ವಾಸ್ತುಶಿಲ್ಪ, ದೇವರ ವಿಗ್ರಹಗಳು, ಕೆತ್ತನೆ, ದೇವಾಲಯದ ಪರಿಸರ, ಆದಿಮಾನವರ ರೇಖಾಚಿತ್ರಗಳು – ಇವುಗಳ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಬಾಮಿಯಾನ್ ಬುದ್ಧನ ಪ್ರತಿಮೆಗಳನ್ನು ಸ್ಫೋಟಿಸಿದ ಆಫಘಾನಿಸ್ತಾನದ ತಾಲಿಬಾನಿಗಳಿಗೂ, ಪ್ರಾಗೈತಿಹಾಸಿಕ ಮತ್ತು ಐತಿಹಾಸಿಕ ತಾಣಗಳ ಅಂದಗೆಡಿಸುವ ಪುಂಡಪೋಕರಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲ. ಮೊದಲ ವರ್ಗದ ಜನಕ್ಕೆ ಮತಾಂಧತೆಯ ಅಮಲೇರಿದ್ದರೆ, ಎರಡನೆಯ ವರ್ಗದ ಜನ ತಮ್ಮ ಭವ್ಯ ಇತಿಹಾಸವನ್ನೇ ಮರೆತವರು. ಏನೇ ವ್ಯತ್ಯಾಸವಿದ್ದರೂ ಪರಿಣಾಮ ಮಾತ್ರ ಒಂದೇ – ವಿರೂಪತೆ, ವಿನಾಶ, ಕೊನೆಗೆ ಅಸ್ಮಿತೆಯ ವಿಸ್ಮರಣೆ.
ಐತಿಹಾಸಿಕ ತಾಣಗಳಿಗೆ ಸಿಗುವಷ್ಟು ಮೌಲ್ಯ ಪ್ರಾಗೈತಿಹಾಸಿಕ ತಾಣಗಳಿಗೆ ಸಿಗುವುದಿಲ್ಲ. ಐತಿಹಾಸಿಕ ತಾಣಗಳು ಯುನೆಸ್ಕೋದಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗುರುತಿಸಲ್ಪಡುತ್ತವೆ. ಅವುಗಳ ರಕ್ಷಣೆಗೆ ಕೋಟ್ಯಂತರ ರೂಪಾಯಿ ಹರಿದು ಬರುತ್ತದೆ. ಕಾರ್ಪೊರೇಟ್ ಕಂಪೆನಿಗಳೂ ಸಿಎಸ್ಆರ್ನ (ಕಾರ್ಪೊರೇಟ್ ಸೋಷಲ್ ರೆಸ್ಪಾನ್ಸಿಬಿಲಿಟಿ) ಅಡಿಯಲ್ಲಿ ಹಣವನ್ನು ಮೀಸಲಿಡುತ್ತವೆ. ಎಫ್ಎಂಸಿಜಿ ಕಂಪೆನಿಗಳು ಅವುಗಳ ಬ್ಯಾಕ್ಗ್ರೌಂಡ್ನಲ್ಲಿ ಜಾಹೀರಾತುಗಳನ್ನು ಶೂಟ್ ಮಾಡಿ ಸಾಕಷ್ಟು ಪ್ರಚಾರ ನೀಡುತ್ತವೆ. ಟೂರಿಸಂ ವೆಬ್ಸೈಟ್ಗಳು ಇವುಗಳ ಕುರಿತು ಪುಟಗಟ್ಟಲೆ ರಂಗುರಂಗಿನ ಲೇಖನಗಳನ್ನು ಹಾಗೂ ಫೋಟೋಗಳನ್ನು ಪ್ರಕಟಿಸುತ್ತವೆ. ಪ್ರಿವೆಡ್ಡಿಂಗ್ ಶೂಟ್ಗಳು ನಡೆಯುತ್ತವೆ. ಅದಕ್ಕಾಗಿ ಇಂತಹ ಸ್ಥಳಗಳ ಸುತ್ತಮುತ್ತ ವಿವಿಧ ಬಜೆಟ್ಗಳ ಹೋಟೆಲ್ಗಳು, ಲಾಡ್ಜ್ ಮತ್ತು ರೆಸಾರ್ಟ್ಗಳು ತಲೆಯೆತ್ತುತ್ತವೆ. ಕ್ಲೋಸ್ಡ್-ಸರ್ಕ್ಯೂಟ್ ಟೆಲೆವಿಶನ್ (ಸಿಸಿಟಿವಿ), ಸೆಕ್ಯುರಿಟಿ ಗಾರ್ಡ್, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ – ಹೀಗೆ ಸಾಲುಸಾಲು ಸೌಲಭ್ಯಗಳು ನೀಡಲ್ಪಡುತ್ತವೆ. ಎಲ್ಲ ಐತಿಹಾಸಿಕ ತಾಣಗಳಿಗೆ ಈ ಭಾಗ್ಯವಿಲ್ಲದಿದ್ದರೂ ಟೂರಿಸಂ ಮಹತ್ತ್ವದ ಹೆಚ್ಚಿನ ಸ್ಥಳಗಳಲ್ಲಿ ಇವುಗಳನ್ನೆಲ್ಲ ಗಮನಿಸಬಹುದು.
ಆದರೆ ಪ್ರಾಗೈತಿಹಾಸಿಕ ತಾಣವೆಂದ ತಕ್ಷಣ ಈ ಟೂರಿಸಂ ಅಂಶಕ್ಕೆ ಹಿನ್ನಡೆಯುಂಟಾಗುತ್ತದೆ. ಯಾಕೆಂದರೆ ಪ್ರಾಗೈತಿಹಾಸಿಕ ತಾಣಗಳಲ್ಲಿ ಈ ಮೇಲೆ ಹೇಳಿದ ಯಾವುದೇ ಟೂರಿಸಂ ಅಂಶಕ್ಕೆ ಅವಕಾಶವಿಲ್ಲ. ಸಾಮಾನ್ಯ ಜನರಿಗೆ ಇದು ೧೦ ಸಾವಿರ ವರ್ಷಗಳ ಹಿಂದಿನ ರೇಖಾಚಿತ್ರ ಎಂದರೆ, ಅಷ್ಟೇನಾ? ಎಂದು ಕೇಳುವ ಮನಃಸ್ಥಿತಿಯಿದೆ. ಇದರಿಂದಾಗಿ ಇವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ.
ಉದಾಹರಣೆಗೆ, ಬಳ್ಳಾರಿ ಜಿಲ್ಲೆಯ ಪ್ರಾಗೈತಿಹಾಸಿಕ ತಾಣಗಳು ಅದಿರು ಗಣಿಗಾರಿಕೆಯಿಂದ ಸಾಕಷ್ಟು ಹಾನಿಗೆ ಒಳಗಾಗಿವೆ ಅಥವಾ ನಾಮಾವಶೇಷವಾಗಿವೆ. ಇದೇ ಪರಿಸ್ಥಿತಿ ಕೋಲಾರದ್ದೂ ಕೂಡ. ಬಳ್ಳಾರಿಯದ್ದು ಅದಿರು ಗಣಿಗಾರಿಕೆಯಾದರೆ ಕೋಲಾರದ್ದು ಕಲ್ಲು ಗಣಿಗಾರಿಕೆ. ಈ ತಾಣಗಳ ವಿನಾಶಕ್ಕೆ ರೈಲ್ವೆ ಲೈನ್, ರೈಲು ನಿಲ್ದಾಣಗಳು, ಹೊಸ ಲೇಔಟ್ಗಳ ಕೊಡುಗೆಯೂ ಇದೆ. ಇನ್ನು ಸರ್ಕಾರದ, ಸ್ಥಳೀಯರ ಅವಜ್ಞೆಗೆ ಹಾಗೂ ಕೆಲವು ಕಿಡಿಗೇಡಿ ಪ್ರವಾಸಿಗರಿಗೆ ತುತ್ತಾಗಿ ಮತ್ತೆ ಕೆಲವು ಪ್ರಾಗೈತಿಹಾಸಿಕ ತಾಣಗಳು ವಿನಾಶದತ್ತ ಸಾಗಿವೆ. ಕೆಲ ತಿಂಗಳುಗಳ ಹಿಂದೆ ಸಂಸ್ಕಾರ ಭಾರತಿಯ ಪ್ರಾಚೀನ ಕಲಾ ವಿಭಾಗದ ತಂಡವೊಂದು ಬಾದಾಮಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಾಗೈತಿಹಾಸಿಕ ತಾಣಗಳ ಸಂಶೋಧನೆ ಹಾಗೂ ದಾಖಲೀಕರಣ ಪ್ರವಾಸ ನಡೆಸಿತ್ತು. ಸಂಸ್ಕಾರ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ ಹಾಗೂ ಖ್ಯಾತ ಇತಿಹಾಸ ತಜ್ಞ ಡಾ. ಶೀಲಕಾಂತ ಪತ್ತಾರ ಅವರ ಮಾರ್ಗದರ್ಶನದಲ್ಲಿ ಈ ತಂಡ ಕಾರ್ಯ ನಿರ್ವಹಿಸಿತು. ಈ ಪ್ರದೇಶದಲ್ಲಿನ ಪ್ರಾಗೈತಿಹಾಸಿಕ ರೇಖಾಚಿತ್ರಗಳ ಮತ್ತು ತಾಣಗಳ ಪ್ರಸ್ತುತ ಪರಿಸ್ಥಿತಿಯು ತಂಡಕ್ಕೆ ಸಖೇದಾಶ್ಚರ್ಯವನ್ನು ಉಂಟುಮಾಡಿತು. ಮೂಲಭೂತವಾಗಿ, ಸ್ಥಳೀಯರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಇವುಗಳ ಮಹತ್ತ್ವ ಅರ್ಥವೇ ಆಗದಿರುವುದು ಕಂಡುಬಂದಿತು.
ಈ ಪ್ರದೇಶಗಳಲ್ಲಿ ಐತಿಹಾಸಿಕ ದೇವಾಲಯಗಳ ಪ್ರಾಂಗಣಗಳು ಮನೆಯ ಬಟ್ಟೆ ಹರವಲು ಬಳಸಲ್ಪಡುತ್ತಿವೆ, ಕೆಲವು ದೇವಾಲಯಗಳು ಸ್ಟೋರ್ ರೂಮ್ಗಳಾಗಿವೆ ಹಾಗೂ ದೇವಸ್ಥಾನದ ಪ್ರಾಕಾರದ ಕಲ್ಲುಗಳು ಬಟ್ಟೆ ಒಗೆಯುವ ಹಾಸುಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾಗೈತಿಹಾಸಿಕ ತಾಣಗಳ ಪರಿಸ್ಥಿತಿಯನ್ನಂತೂ ಊಹಿಸುವುದೇ ಅಸಾಧ್ಯ. ಹೆಸರಿಗೆ ಮಾತ್ರ ಈ ತಾಣಗಳು ಸಂರಕ್ಷಿತ ಪಟ್ಟಿಯಲ್ಲಿ ಸೇರಿದ್ದರೂ, ಅಲ್ಲಿ ಕನಿಷ್ಠ ರಕ್ಷಣೆಗೆಂದು ಓರ್ವ ಸಿಬ್ಬಂದಿಯೂ ಇಲ್ಲ. ಕೆಲವು ತಾಣಗಳಂತೂ ಅನೈತಿಕ ಚಟುವಟಿಕೆಗಳ ಕೇಂದ್ರಗಳಾಗಿವೆ. ಇನ್ನು, ಬಿಸಿಲು ಮಳೆಯಿಂದ ಕೆಲವು ರೇಖಾಚಿತ್ರಗಳು ಮಾಸಿದ್ದರೆ, ಕಿಡಿಗೇಡಿಗಳ ಗೀಚುವಿಕೆಯಿಂದ ಮತ್ತೆ ಕೆಲವು ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡಿವೆ. ಕೆಲವರಿಗೆ ಪ್ರಾಗೈತಿಹಾಸಿಕ ತಾಣಗಳ ಮಹತ್ತ್ವ ಅರಿವಿಗೆ ಬಾರದಿದ್ದರೂ, ಹಣದ ಮಹತ್ತ್ವ ಚೆನ್ನಾಗಿ ಗೊತ್ತು. ಹಾಗಾಗಿ, ನಿಧಿಶೋಧದಂತಹ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ. ಡಾಲ್ಮನ್ಗಳ ಕೆಳಗೆ ಅಪಾರ ಪ್ರಮಾಣದ ಸಂಪತ್ತಿದೆ ಎಂದು ಯಾರೋ ಸುಳ್ಳುಸುದ್ದಿ ಹಬ್ಬಿಸಿದ್ದರಿಂದ ನೂರಾರು ಡಾಲ್ಮನ್ಗಳು ಈಗಾಗಲೇ ನೆಲಕಚ್ಚಿವೆ.
ವಾಸ್ತವ ನೆಲಗಟ್ಟಿನಲ್ಲಿ ಯೋಚಿಸಿದರೆ ಪ್ರಾಗೈತಿಹಾಸಿಕ ತಾಣಗಳಿಗಿರುವಷ್ಟು ಮಹತ್ತ್ವ ಬೇರೆ ಯಾವುದಕ್ಕೂ ಇಲ್ಲ. ನಿಮಗೆಲ್ಲ ಇತಿಹಾಸವಿಲ್ಲ, ಆರ್ಯರ ಆಕ್ರಮಣ ಎಂಬಂತಹ ಟೊಳ್ಳುವಾದಗಳಿಗೆ ಉತ್ತರ ನೀಡಬೇಕೆಂದರೆ ಈ ಪ್ರಾಗೈತಿಹಾಸಿಕ ತಾಣಗಳ, ಚಿತ್ರಗಳ ನೆರವು ಬೇಕೇಬೇಕು. ನಮ್ಮ ಪೂರ್ವಜರ ಬಗೆಗಿನ ಅಧ್ಯಯನ ಗಾಢವಾದಷ್ಟೂ, ವಸ್ತುನಿಷ್ಠವಾದಷ್ಟೂ ಸತ್ಯದ ಬೆಳಕು ಪ್ರಖರವಾಗುತ್ತದೆ. ಇವುಗಳಿಗೆ ಟೂರಿಸಂ ಮಹತ್ತ್ವ ಕೂಡ ಇದೆ. ಆದರೆ ಆ ಮಹತ್ತ್ವ ಅರಿವಾಗಬೇಕಾದರೆ ಮೊದಲು ನಮ್ಮ ಅಸ್ಮಿತೆಯ ಬಗ್ಗೆ, ಪೂರ್ವಜರ ಬಗ್ಗೆ ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೆಮ್ಮೆ ಮೂಡಿಸುವ ಕೆಲಸವಾಗಬೇಕು. ಇತಿಹಾಸವನ್ನು ತಿಳಿಯದೆ ವರ್ತಮಾನವನ್ನು ತಿಳಿಯುವುದು ಸಾಧ್ಯವಿಲ್ಲ.
ಹಾಗೆಯೇ ಪ್ರಾಗೈತಿಹಾಸಿಕವನ್ನು ಅಧ್ಯಯನ ಮಾಡದೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಪೂರ್ವಜರ ಕುರಿತು ನಮ್ಮ ಜ್ಞಾನ ಹೆಚ್ಚಾಗುತ್ತ ಹೋದಂತೆ ಸ್ವಾಭಾವಿಕವಾಗಿಯೇ ಸಂಸ್ಕೃತಿಯ ಪರಿಜ್ಞಾನ ಪ್ರಬಲವೂ, ಸ್ಪಷ್ಟವೂ ಆಗುತ್ತದೆ. ಹೀಗಾಗಿ, ಪ್ರಾಗೈತಿಹಾಸಿಕ ತಾಣಗಳು, ರೇಖಾಚಿತ್ರಗಳು, ಅವಶೇಷಗಳು ಕೇವಲ ನಿರ್ಜೀವ ವಸ್ತುಗಳಾಗಿರದೆ ಲಕ್ಷಾಂತರ ವರ್ಷಗಳ ನಮ್ಮ ಅವಿಚ್ಛಿನ್ನ ಪರಂಪರೆಯ ಕೊಂಡಿಗಳಾಗಿವೆ. ಕೊಂಡಿ ದುರ್ಬಲವಾದರೆ ಸೂತ್ರವೇ ತುಂಡರಿಸುವ ಅಪಾಯವಿದೆ.
ಈಗಲೂ ಕಾಲ ಮಿಂಚಿಲ್ಲ. ಪ್ರಾಗೈತಿಹಾಸಿಕ ಕ್ಷೇತ್ರದಲ್ಲಿ ಉಳಿಸಿ, ಬೆಳೆಸಬೇಕಾಗಿರುವುದು ತುಂಬಾ ಇದೆ. ಆ ಜವಾಬ್ದಾರಿಯನ್ನು ಕೇವಲ ಸರ್ಕಾರದ ಮೇಲೆ ಬಿಡಲು ಸಾಧ್ಯವಿಲ್ಲ. ಸಂಶೋಧಕರು, ವಿದ್ಯಾರ್ಥಿಗಳು, ಸ್ಥಳೀಯರು, ಜನಸಾಮಾನ್ಯರು ಎಲ್ಲರೂ ಈ ಪರಂಪರಾ ರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಆಗ ಮಾತ್ರ ಪ್ರಾಗೈತಿಹಾಸಿಕ ತಾಣಗಳ ಪುನರುಜ್ಜೀವನ ಸಾಧ್ಯ. ಆ ಮೂಲಕ ನಮ್ಮ ಅಸ್ಮಿತೆಯದ್ದು ಕೂಡ.