ಎಲ್ರೂ `ನೀರು’ ಹೇಳಿದ ಮಾತ್ಕೇಳಿ ತುಟಿ ಪಿಟಕ್ ಅನಲಾರ್ದೆ ಗಪ್ಚುಪ್ ಆದವು.
ಭಜಿ ಮತ್ತು ಸಮೋಸ ಒಬ್ರಿಗೊಬ್ರು ಚಾಸ್ಟಿ ಮಾಡಾಕ ಹತ್ತಿದ್ರು. ನಾ ಹೆಚ್ ಅದೀನಿ…. ನಾ ಹೆಚ್ ಅದೀನಿ ಅಂತ ಇಬ್ರೂ ತಮ್ಮ ಬೆನ್ನ ತಾವss ಚಪ್ಪರಿಸಿಕೊಳ್ಳವು……
“ಏ ಡುಮ್ಮಾ…. ನಾನ್ ಬಂದ ಮ್ಯಾಗ ಬಂದವ್ನಲೇ ನೀನು…. ನಿನ್ನಾಟ ನನ್ ಮುಂದ ನಡ್ಯಾಂಗಿಲ್ಲ” ಭಜಿ ಸಮೋಸಾಕ್ಕೆ ತಿವಿದು ಹೇಳ್ತು.
“ಏ…. ಸುಮ್ ಕುಂಡ್ರಲೇ ಏಟ ಹಾರಾಡ್ತೀ…. ಬಂದವ್ರೆಲ್ಲ ನನಗss ಆರ್ಡರ್ ಕೊಡ್ತಾರ…. ಒಂದ್ ಪ್ಲೇಟ್ ಸಮೋಸಾ ಕೊಡ್ರಿ ಅಂತ.”
“ಸುಮ್ನಿರು, ನಿನ್ ಐದೇಶಿ ನನಗ ಗೊತ್ತಿಲ್ಲೇನು? ಒಳಗ ಬಟಾಟಿ ಹಾಕಿ, ಡುಮ್ಮ ಮಾಡಿ, ಎಣ್ಯಾಗ ಕರ್ದು, ಮ್ಯಾಲ ಕೆಂಪ ಚಟ್ನಿ ಹಾಕಿ ಕೊಡತಾರ. ಹೂಂ…. ಅಂತ ಡಬಲ್ ಟ್ರಿಪಲ್ ಬಿಲ್ ಹೇರ್ತಾರ. ಅದಾ… ನಾ ನೋಡು, ಏಟ್ ತಿಂದ್ರೂ ಇನೊಂದ್ ಪ್ಲೇಟ್ ಕೊಡ್ರಿ ಅಂತಾರ. ನನ್ನ ರೇಟ್ನೂ ಭಾಳ್ ಇಲ್ಲ. ಗರೀಬ್ ಇರ್ಲಿ…. ಧೌಳಂವ ಇರ್ಲಿ ನನ್ನss ಬೇಡ್ತಾರ. ಹಳ್ಳಿ ಇರ್ಲಿ… ದಿಲ್ಲಿ ಇರ್ಲಿ ಎಲ್ಲಾ ಕಡಿ ನಂದss ಹೆಸ್ರ ಐತಿ. ದೊಡ್ಡವ್ರು… ಸಣ್ಣವ್ರು ಎಲ್ಲಾರ್ಗೂ ನಾನss ಬೇಕು.”
“ಏ ನಿಂದೇನ್ ಹೇಳ್ತಿ ತಗಿಯೋ ಮಾರಾಯ. ಒಂದ್ ಸ್ವಚ್ತಾ ಇಲ್ಲ… ಶಿಸ್ತ್ ಇಲ್ಲ. ಎಲ್ಲಿ ಬೇಕಾದಲ್ಲಿ ಕುಂತಿರ್ತಿ. ರಸ್ತಾದಾಗಿನ ಧೂಳೆಲ್ಲ ನಿನ್ ಮೈ ಮ್ಯಾಲss ಇರತೈತಿ. ನಂದು ಹಂಗಲ್ಲ. ಕಾಜಿನ ಕಪಾಟದಾಗ ಕುಂತಿರ್ತೀನಿ.”
ಮಗ್ಗಲ ತಕರಾರು
ಇವ್ರಿಬ್ರೂ ಜಿದ್ದಿಗಿ ಬಿದ್ದಂಗ ಮಾತಾಡುದನ್ನು ಕೇಳಸ್ಕೊಂಡ ಚಾ… ಕಿಟ್ಲಿ ಒಳಗಿಂದ ಜಿಗದು ಹೊರಗ ಬಂತು. ನಾ ಏನ್ ಕಮ್ಮಿ ಅಂತ ಕಾಫಿನೂ ಫ್ಲಾಸ್ಕ್ನಿಂದ ಜಿಗದು ಸಮೋಸ ಮಗ್ಗಲ ಬಂದು ಕೂತ್ಕೋತು.
“ನನ್ನ ಬೆನ್ನಹತ್ತಿ ನೀ ಯಾಕ್ ಬಂದೆಪಾ….?” ಚಾದ ತಕರಾರಿಗೆ “ಇಬ್ರೂ ಕೂಡೇ ಬಂದ್ವೆಲ, ಹಂಗ್ಯಾಕ ಅಂತೀ?” ಕಾಫಿ ಸಮಜಾಯಿಷಿ ನೀಡ್ತು.
“ನೀ ಸಾವ್ಕಾರ. ನನ್ನಂಥ ಗರೀಬರ ದೋಸ್ತಿ ಯಾಕ ಮಾಡ್ತೆಪಾ…. ನಿನ್ನ ಮಂದಿನss ಬ್ಯಾರೆ ಅದಾರ. ನನ್ನ ಮಂದಿನss ಬ್ಯಾರೆ ಅದಾರ.” “ನಿನಗ ಗರೀಬ್ ಅಂತ ಯಾರ್ ಹೇಳ್ತಾರೆ. ಎಲ್ಲಾ ಕಡಿ ನಿಂದss ಹೆಸ್ರ ಐತಿ. ಒಂದ್ ವ್ಯಾಳೇ ಇಲೆಕ್ಷನ್ದಾಗ ನಿಂತೆಂದ್ರ ನೀನss ಬಹುಮತದಿಂದ ಆರಿಸಿ ಬರ್ತಿ” ಚಾಕ್ಕ ಕಾಫಿ ಉಬ್ಬಸ್ತು.
“ನಿಂದೇನಪಾ… ಬರೇ ಸಾವ್ಕಾರ ಮಂದಿ ದೋಸ್ತಿನೇ ನಿಂದು. ನನಗಿಂತ ನೀನು ತುಸು ತುಟ್ಟಿನೇ. ಮಡಿ ಗಿಡಿ ಮಾಡೋ ಮಂದೀಗೆ ನೀನss ಬೇಕು. ಸೂಟ್ ಬೂಟ್ ಮಂದಿ, ಧೌಳೊವ್ರೆಲ್ಲ… ನಿನಗss ಆರ್ಡರ್ ಮಾಡತಾರ.”
“ನೀ ಬಡವ ಅಂತ ಯಾಕ ನೆಳ್ಳ್ಯಾಡ್ತಿಯೋ… ಮುಂಜಾನೆದ್ದ ಕೂಡ್ಲೇ ಕಪ್ಪಿನ್ಯಾಗ ನಿನ್ನ ಹಾಕ್ಕೊಂಡು ಉಫ್ ಉಫ್ ಅಂತ ಊದಿ ಕುಡಿಯೋದ್ರಾಗ ಎಂಥಾ ಮಜಾ ಐತಿ ಗೊತ್ತಾ… ನಿನ್ನ ರುಚೀನss ಬ್ಯಾರೆ.”
“ನಿಮ್ಮ ಮಾತಿನ ಗುಂಗನ್ಯಾಗ ನನ್ನ ಮರ್ತss ಬಿಟ್ರೇನಪಾ…?”
ಭಜಿ ನಡುವೆ ಬಾಯಿ ಹಾಕ್ತು.
“ನಿನ್ನ ಮರ್ಯಾಕ ಹೆಂಗ್ ಆಗ್ತದಪಾ… ನಿಂದು ಚಾದು ಮನಗಂಡ ಜೋಡಿ ಐತಿ. ಬಡವ್ರು ಬಡವ್ರಿಗೆ…. ಸಾವ್ಕಾರು ಸಾವ್ಕಾರಗೆ ಒಗತನ ಆಗತೈತಿ. ಪ್ಲೇಟ್ ಮ್ಯಾಲ ಪ್ಲೇಟ್ ಭಜಿ ತಿಂದವ್ರು ಚಾ ಕುಡಿಲಾರ್ದ ಹೆಂಗ್ ಇರ್ತಾರ? ಸಂಜೀ ಹೊತ್ತನ್ಯಾಗ ಎಲ್ಲಿ ನೋಡಿದ್ರೂ ಬಿಸಿ ಬಿಸಿ ಭಜೀದೇ ಭರಾಟಿ. ಕಮ್ಮಿ ಅಂದ್ರೂ ಮೂರ್ನಾಕು ಸಾವ್ರ ವ್ಯಾಪಾರ ಆಗತೈತಿ. ಭಜಿ ಜೋಡಿ ಚಾದ ಕಿಟ್ಲಿನೂ ಖಾಲಿ ಆಗತಿರ್ತಾವ.”
“ನಿಂದೇನ್ ಕಮ್ಮಿ ಐತೇನು… ಕಾಫಿ ಕಾಫಿ ಅಂತ ನಿನ್ನ ಬೆನ್ನ ಬಡಿತಿರತಾರಲ್ಲ. ಆಗ ನನ್ನ ಕಡಿ ಹೊಳ್ಳಿ ಸೈತ ನೋಡಂಗಿಲ್ಲ. ಮಕಾ ಬಿಕ್ಕೊಂಡು ಸುಮ್ಕ ಗಾಡ್ಯಾಗ ಬಿದ್ದಿರ್ತೀನಿ” ಚಾ ಕಾಫಿಗೆ ತಿವಿದು ಚಾಸ್ಟಿ ಮಾಡ್ತು.
ಹುಡುಗ್ಯಾರ ದಗದ
`ಹಳ್ಳೀಲಿಂದ ನಸುಕಿನ ಬಸ್ ಹಿಡದು ಕಾಲೇಜಿಗಿ ಬಂದ ಹುಡುಗ-ಹುಡುಗ್ಯಾರು ಹುಬ್ಬ ಹಾರಸಕೋತ ಕಾಫಿ ಕೊಡಪಾ ಅಂತಾರ. ಹುಡುಗರ ಕಡಿ ವಾರಿನೋಟ ಬೀರಿ ಕಾಫಿ ಕುಡಿಯೋ ಹುಡುಗ್ಯಾರ ವಯ್ಯಾರ ನೀ ನೋಡಬೇಕು… ಒಬ್ಬಾಕಿ `ನನಗ ಚಾ ಮಾಡಾಕೂ ಬರಂಗಿಲ್ಲ… ನಮ್ಮವ್ವನss ಮಾಡಬೇಕು’
ಅಂದ್ರ… ಇನ್ನೊಬ್ಬಾಕಿ `ಚಾನss ಮಾಡಾಕ ಬರೂದಿಲ್ಲಂದ್ರ… ಇನ್ನ ರೊಟ್ಟಿ ಮಾಡೂದ್ರಾಗ ಅಷ್ಟss ಐತಿ ಬಿಡು’ ಅಂತಾಳೆ. `ಅಯ್ಯ… ದೌಡ ಎದ್ದು ಕಾಲೇಜಕ್ಕ ಬರೂದss ರಗಡ ಆಗಿರತೈತಿ. ಇನ್ನ ರೊಟ್ಟಿದೊಂದು ರಗಾಡ’ ಅಂತ ಕೈ ತೊಳಕೋತಾರ ಈಗಿನ ಹುಡುಗ್ಯಾರು. ನೀ ಏನss ಹೇಳು. ಈಗಿನ ಹುಡುಗ್ಯಾರಿಗೆ ದಗದ ನೀಗೂದಿಲ್ಲ” ಚಾ ಮಾತ್ ಮುಂದವರಸ್ತು.
ಇದನ್ನ ಕೇಳಿದ ಕಾಫಿ –
“ಅವ್ರು ಹಳ್ಳ್ಯಾಗ ಇರಾಕ ಒಲ್ಲೆ ಅಂತಾರಪಾ. ಸಿಟಿ ಬೇಡ್ತಾರ. ಬೈಕ್, ಸ್ಕೂಟರ್ ಬೇಡತಾರ. ಊರ್ದೆ ಕಲ್ತು ಸೆಟ್ಲ್ ಆಗ್ತಾರ. ಎಲ್ಲಾರೂ ಸಿಟಿನss ಬೇಕಂದ್ರ ಹಳ್ಳ್ಯಾಗ ಇರವ್ರು ಯಾರು… ಅಪ್ಪ ಅವ್ವ ಇರೋ ಗೇಣ್ ಹೊಲಾ-ಮನಿ ಮಾರ್ಕೊಂಡು ಅವ್ರೂ ಸನ್ಯಾಕ ಇರೋ ಪ್ಯಾಟಿ ಸೇರಿಬಿಡ್ತಾರ. ಹಿಂಗಾಗಿ ಪ್ಯಾಟಿ ಬೆಳದ ಬಿಟ್ಟಾವ. ಕುಡ್ಯಾಕ ನೀರು, ನಿಲ್ಲಾಕ ಜಾಗ ಇಲ್ದಂಗ ಆಗೈತಿ” ಅಂತ ಬ್ಯಾಸರದಿಂದ ಹೇಳ್ತು.
ಸ್ವಚ್ಛ ಮಾಡವ್ರು ಯಾರು?
“ನಿನ ಮಾತ ಖರೇ ಅದ… ಇಲ್ಲಿ ಜಾಗ ಸಾಲಲ್ದು… ಅಂತ ಈಗ ಮಂಗಳಗ್ರಹದ ಮ್ಯಾಲೂ ಮನಿ ಕಟಗೊಂಡು ಇರ್ತಾರಂತ. ನಮ್ಮನ್ನ ಕರ್ಕೊಂಡು ಹೋಗ್ತಾರಿಲ್ಲೋ ಯಾಂವಗ ಗೊತ್ತು? ಒಯ್ಲಿ, ಬ್ಯಾಡ ಅನಂಗಿಲ್ಲ. ಆದ್ರ ನಮ್ಮನ್ನ ಇಟಗೊಂಡು ಪ್ಲಾಸ್ಟಿಕ್ ಪ್ಲೇಟ್, ಕಪ್ಪ, ಚೀಲ ಅಲ್ಲಿಂದನss ಬಿಸಾಡಿದರ ಹಾರಾಡೋ ವಿಮಾನಕ, ಗಾಳೀಗಿ ತ್ರಾಸ ಆಗತೈತಿ. ಇಲ್ಲೆಲ್ಲ ಕಸ ಹ್ಯಾಂಗ ಬಿದ್ದದ ನೋಡು. ಸ್ವಚ್ಛ ಮಾಡವ್ರು ದಿಕ್ಕಿಲ್ಲ. ಇಲಿ, ಹೆಗ್ಗಣ ತುಂಬ್ಯಾವ. ಅವ್ನ ಹಿಡ್ಯಾಕಂತ ಸರಕಾರ ಕೋಟಿಗಟ್ಲೆ ರೊಕ್ಕಾ ಕೊಟ್ಟಾದಂತ. ಅವರ ಟೇಬಲ್ ಮ್ಯಾಲ ಕುಂತಾಗ ನನಗೂ ಕಿವಿಗಿ ಬಿದ್ದಾದ” ಚಾ ಹೇಳ್ತು.
“ಹಹಹ ಸರಕಾರಿ ಆಫೀಸ್ನ್ಯಾಗss ದೊಡ್ಡ ದೊಡ್ಡ ಹೆಗ್ಣನಾ ಅದಾವ. ಪೇಪರದಾಗಿನ ಎಲ್ಲಾ ರೊಕ್ಕ ಅವss ತಿಂದು ದಪ್ಪ ಆಗ್ಯಾವ. ಬೆಕ್ಕಿನ ಕೊಳ್ಳಿಗಿ ಗಂಟಿ ಕಟ್ಟಿದಂಗಾಯ್ತು ನಮ್ಮ ಕತಿ. ಸ್ವಚ್ಛ ಭಾರತ, ಸ್ವಾಸ್ಥ್ಯ ಭಾರತ ಅನಕೋತನss ಗಾಂಧೀ ಮುತ್ಯಾ ಕೈಲಾಸ ಕಂಡ್ರು. ಈಗ ಅಲ್ಲಿಂದಾನss ಎಲ್ಲಾ ನೋಡಾಕತ್ತ್ಯಾರ. ಎಲ್ಲಾ ಕಡಿ ಗಬ್ಬ ನಾರಾಕ ಹತ್ತೈತಿ. ಚರಗಿ ಹಿಡಕೊಂಡು ಬೈಲಿಗೆ ಹೋಗೂದು ಇನ್ನೂ ಬಿಟ್ಟಿಲ್ಲ. ಹೆಣ್ಮಕ್ಕಳಿಗಂತೂ ಭಾರೀ ತ್ರಾಸ. ಕತ್ತಲಾಗೂತನಕ ಕಾಯಬೇಕು” ಕಾಫಿ ಹಣಿ ಏರ್ಸಿ ಹೇಳ್ತು.
ಇದನ್ನೆಲ್ಲ ದೂರ ಕೂತ್ಕೊಂಡು ಕೇಳಿಸ್ಕೋತಿದ್ದ ರೊಟ್ಟಿ, ಚಟ್ನಿ ಜಿಗದ ಬಂದು ಮ್ಯಾಳ ಸೇರ್ಕೊಂಡ್ ಬಿಟ್ವು. ಚಾ, ಕಾಫಿ, ಭಜಿ, ಸಮೋಸ ಎಲ್ರೂ ರೊಟ್ಟಿ, ಚಟ್ನಿಗೆ ಕುರ್ಚಿ ಹಾಕಿ ಕೂಡ್ಸಿ ನಮಸ್ಕಾರ ಮಾಡದ್ವು.
“ನಮಗ್ಯಾಕ್ರಪಾ… ಈ ಮರ್ಯಾದಿ.. ನಾವೆಲ್ಲಾ ಒಂದೇ ಲೋಕಲ್ ಗಾಡಿಯವ್ರು. ನಮ್ ಸಲುವಾಗಿ ಎಷ್ಟ ಜನ ಕಷ್ಟಪಟ್ಟು ದುಡಿತಾರ. ಒಕ್ಕಲಿಗ್ಯಾ ಚಂತನ ದುಡುದು ಹೈರಾಣ ಆಗ್ತಾನ. ಅವ್ನ ಹೆಂಡ್ರ ಮಕ್ಳ ಜಿಂವಾ ಒತ್ತೀ ಇಟ್ಟು ದುಡುದ್ರೂ ಅವ್ನಿಗಿ ಸಿಗೂದು ಅಷ್ಟಕ್ಕಷ್ಟ. ಆದ್ರೀ ಭೂಮಿತಾಯಿ ನಮ್ಮನ್ನ ಉಪಾಸ ಕೆಡವಂಗಿಲ್ಲ ಅಂತಾನ. ಈಗ ಎಲ್ಲಾರೂ ರೊಕ್ಕದ ಮಾಲ ಬೆಳಿತಾರ. ಜ್ವಾಳಾ ಯಾರೂ ಬೆಳಿವಲ್ರು. ಅಕಡಿ ಕಾಳು, ಕಾಯಿಪಲ್ಯ ಅಂತೂ ಬೆಳಿಯೋದss ಬಿಟ್ಟಾರ. ಜ್ವಾಳದ ರೊಟ್ಟಿ ಎಲ್ಲಾರ್ಗೂ ಬೇಕು. ಹೊಟ್ಟಿ ಉಬ್ಬಿದ ಬಿಸಿ ರೊಟ್ಟಿ, ಉಳ್ಳಾಗಡ್ಡಿ ಚಟ್ನಿ, ಮಸರ, ಖಾರಬ್ಯಾಳಿ ಹಾಕ್ಕೊಂಡು ಬಡತಾ ಬಡದ್ರ ಅದರ ರುಚೀನss ಬ್ಯಾರೆ. ನಾಕ ಮಂದಿ ಜೊತಿ ಮಾತಾಡಕೋತ ತಿಂದ್ರ… ಎಷ್ಟ ರೊಟ್ಟಿ ಹೊಟ್ಟಿ ಸೇರಿದವೋ ಲೆಕ್ಕ ಹತ್ತಂಗಿಲ್ಲ. ಸಣ್ಣ ಸಣ್ಣ ಪಾರಗೋಳಿಗಿ ಬಿಸಿರೊಟ್ಟಿ ನಾದಿ ಮುಟಗಿ ಮಾಡಿ ಕೊಟ್ರ ಎಷ್ಟ ಖುಷಿಲೇ ತಿಂತಾವ ಅಂತೀರಿ. ಈಗಂತೂ ಸಕ್ರಿ ಜಡ್ಡಿನವ್ರಿಗಿ ಮುಟಗೀನss ಬೇಕು. ಈ ರೊಟ್ಟಿ ಊಟ ಕೊಡೋ ಹೊಟೇಲಗಳೂ ಭಾಳ ಅದಾವ. ಬ್ಯಾರೆ ಬ್ಯಾರೆ ದೇಶಕ್ಕ ರೊಟ್ಟಿ ಪಾರ್ಸಲ್ ಆಗತಾವ. ಭಾಳ ಮಂದಿಗಿ ಇದೇ ಒಂದು ದೊಡ್ಡ ದಂಧೆ ಆಗ್ಯಾದ. ಹೆಂಗೋ ಉಪಜೀವನ ನಡದದ. ಹಸಿಮೆಣಸಿನಕಾಯಿ ಚಟ್ನ್ಯಾಗ ಒಳ್ಳೆಣ್ಣಿ ಕಲಿಸಿ ಬಡತಾ ಬಡದ್ರ ಅದರ ಮುಂದ ಸಾವ್ಕಾರಕೆ ಊಟ ನಿವಾಳಿಸಿ ಒಗಿಬೇಕು. ತೆಳ್ಳಾನ ಕಟಿರೊಟ್ಟಿ, ಹಸೀ ಉಳ್ಳಾಗಡ್ಡಿ, ಎಣ್ಣಿಗಾಯಿ, ಶೇಂಗಾದ ಹಿಂಡಿ, ಕೆನಿಮಸರ, ಮ್ಯಾಲೊಂದೀಟು ಹಾತರಕೆ ಪಲ್ಯ ಇಲ್ಲಾ… ಮೆಂತೆಪಲ್ಯ ಇದ್ರ ಏನ್ ಹೇಳಲಿ ಅದರ ರುಚಿ, ಜಡದss ನೋಡಬೇಕು. ಸಜ್ಜೀ ರೊಟ್ಟಿ, ಮುಳಗಾಯಿ, ಗಟ್ಟಿಮಸರ, ಸಿಹಿತಿನಸಕ್ಕಿಂತ ಹೆಚ್ಚು ರುಚಿ ಹತ್ತತಾವ. ಹಿಟ್ಟಿನ್ಯಾಗ ಹೆಚ್ಚಿದ ಉಳ್ಳೀಗಡ್ಡಿ, ಮೆಂತೆಪಲ್ಯ, ಕೋತಂಬ್ರಿ, ಉಪ್ಪು, ಖಾರಾ ಹಾಕಿ ತವಿಗೆ ಎಣ್ಣಿ ಹಚ್ಚಿ ಬೇಯಿಸಿದ ಥಾಲಿಪಟ್ಟ ಭಾಳ ಟೇಸ್ಟಿ ಇರ್ತದ. ಯಾವುದರ ಖುಷಿ ಸುದ್ದಿ ಹಂಚ್ಕೋಬೇಕಾದರ ಮನಿಮನಿಗೆ ಜ್ವಾಳದ ರೊಟ್ಟಿ, ಸಜ್ಜೀ ರೊಟ್ಟಿ ಬೀರತಾರ. ಭಾಳಷ್ಟು ಮಠದಾಗ, ಹಾಸ್ಟೆಲ್ದಾಗ ಈ ರೊಟ್ಟಿನss ಪ್ರಸಾದ.”
ಜಂಭಾ-ಭರಾಟಿ
ಇದನೆಲ್ಲ ಕೇಳಕೋತ ಕುಂತಿದ್ದ ಚಪಾತಿನೂ ದನಿ ಏರ್ಸಿ ಮಾತಾಡಾಕ್ ಸುರು ಮಾಡ್ತು.
“ಏ ನಿಂದೇನ್ ಹೇಳ್ತಿ ಬಿಡೋ ಮಾರಾಯ… ನಾ… ನಿನಕಿಂತ ಸಾವ್ಕಾರ ಅದೀನಿ. ಬರೇ ದೊಡ್ಡದೊಡ್ಡವರ ಮನ್ಯಾಗ ಇರಾಂವ ನಾ. ಅಪ್ಪಿತಪ್ಪಿ ಬಡವ್ರ ಮನ್ಯಾಗ ಹಣಿಕಿ ಹಾಕ್ತೀನಿ. ವರ್ಸದಾಗ್ ಬಾರಾ ತಿಂಗಳೂ ನನ್ನss ಬೇಡತಾರ. ರೊಟ್ಟಿ ನಾಯಿಗಿ ಹಾಕ್ರಿ… ಚಪಾತಿ ಇದ್ರ ನೀಡ್ರಿ ಅಂತಾರ. ಸಣ್ಣ ಹುಡುಗ್ರಂತೂ ಚಪಾತ್ಯಾಗ ಒಂದೀಟ್ ಸಕ್ರಿ, ತುಪ್ಪ ಹಾಕಿ ಸುಳ್ಳಿ ಸುತ್ತಿ ಕೊಟ್ರ ಜಿಗಿದಾಡಿ ತಿಂತಾವ. ದೂರ ಹೋಗವ್ರಿಗೆ ಚಪಾತಿನss ಬೇಕು. ಸಣ್ಣ ಡಬ್ಯಾಗ ಮೂರ್ನಾಕು ಚಪಾತಿ ಮಡಚಿ ಇಡಬಹುದು. ಭಾಳ ಹಗುರ ಮನಸ್ಯಾ ನಾನು. ನಿನ್ನಂಗ ದಪ್ಪ ಅಲ್ಲ. ಬೆಲ್ಲ, ಬಾಳಿಹಣ್ಣ, ಪುಟಾಣಿ ಹಿಟ್ಟ ಹಾಕಿ ಬಾಡಿದ ಗುಳತಳ್ಯಾ ಮ್ಯಾಲೆ ತುಪ್ಪ ಹಾಕ್ಕೊಂಡು ತಿನಬೇಕು. ಏನ್ ಹೇಳಲಿ ಅದ್ರ ರುಚಿ. ಖಾರದ ಚಪಾತಿನೂ ಮಾಡತಾರೆ.”
ಹಿಂಗ್ ಜಂಭಾ ಕೊಚ್ಕೋತಿದ್ದ ಚಪಾತಿಗೆ ಅಡ್ಡ ಬಂದ ಪುರೆ “ಈಗ ನಿನ್ನ ಆಟ ನಿಂತೈತಿ… ಎಲ್ಲಾ ಕಡೀನೂ ಬಿಸಿ ಬಿಸಿ ಪುರೇದೇ ಭರಾಟಿ ನಡದಾದ. ಖಾರಾ-ಸಿಹಿ ಎರಡಕ್ಕೂ ಸೈ. ನಾಸ್ಟಾಕೂ ಸೈ. ಊಟಕ್ಕೂ ಸೈ.”
ಅಲ್ಲೇ ಪಕ್ಕದಲ್ಲಿ ಕೂತಿದ್ದ ಸೌತೆಕಾಯಿಯೂ ಸುಮ್ನಿರ್ಲಿಲ್ಲ. ಹುರುಪು ಬಂದು “ನೀವೆಲ್ಲ ಕೂಡಿ ನನ್ನ ಮರ್ತೆಬಿಟ್ಟಿರೇನು? ನಾ ಅಂದ್ರ ಏನಾ… ನನ್ನ ಪವರ್ ಏನು ಅಂತ ನಿಮಗ ಗೊತ್ತಿಲ್ಲ. ನಾ… ಬಡವ್ರ ಜತಿಗೂ ಇರ್ತೀನಿ… ಸಾವ್ಕಾರ ಜತಿಗೂ ಇರ್ತೀನಿ. ಎಲ್ಲಾರೂ ನನ್ನ ಪ್ರೀತಿ ಮಾಡ್ತಾರ. ಎಳಿಗಾಯಿ ಇದ್ರಂತೂ ಕೂಸಿನ ಗಲ್ಲ ಕಡಿದ್ಹಾಂಗ ಕಟಕಟ ಕಡಿತಾರ. ರೊಟ್ಟಿದು ನಂದು ಭಾಳ ದೋಸ್ತಿ. ರೇಲ್ವೆ, ಬಸ್, ಮಾರ್ಕೆಟ್ನ್ಯಾಗ ಉಪ್ಪು ಖಾರ ಹಚ್ಚಿ ಮಾರಿದ್ರ ಭಾರೀ ಲಾಭ. ಡಾಕ್ಟರ್ ಕೂಡಾ ಸೌತಿಕಾಯಿ ತಿನ್ರಿ ಆರೋಗ್ಯಕ್ಕೆ ಛೊಲೋ ಅಂತ ಹೇಳತಾರ. ವಿದೇಶಿ ಮಂದಿನೂ ನನ್ನನ್ನ ಇಷ್ಟಪಡತಾರ. ಕಾಂಡ ಕತ್ತರಿಸಿ ಕಣ್ಣಿನ ಮ್ಯಾಲ ಇಟಗೊಂಡ್ರ… ಕಾಲಿಗಿ ತಿಕ್ಕೊಂಡ್ರ… ಮುಖಕ್ಕೆ ಹಚಗೊಂಡ್ರ ಜಿಂವಾ ತಂಪ ಅನಸತೈತಿ. ಲಗ್ಣ, ಮುಂಜಿ, ಬ್ಯಾರೆ ಬ್ಯಾರೆ ಟೈಂನ್ಯಾಗ ಕೋಸಂಬ್ರಿ ಮಾಡಾಕ ನಾನss ಬೇಕು.”
ಇವ್ರದೆಲ್ಲ ಕೇಳಿಸ್ಕೊಂಡ ಮ್ಯಾಲ `ನೀರು’ ಸುಮ್ನಿರ್ತದಾ… ಅದೂ ಟಂಗ್ ಅಂತ ಜಿಗಿದು ಬಂದು ಸೌತೀಕಾಯಿ ಪಕ್ಕ ಕೂತ್ಕೋತು.
ಯಾವುದು ಹೆಚ್ಚು…..?
“ಇಲ್ಲಿ ಯಾರೂ ಹೆಚ್ಚು-ಕಮ್ಮಿ ಇಲ್ಲ. ನಾವು ಎಲ್ಲಾರ್ಗೂ ಬೇಕು. ನಾನು ಎಲ್ಲೋ ಹುಟ್ಟಿ, ಎಲ್ಲೋ ಹರಿತಿನಿ. ಹಿಮಾಲಯದಿಂದ, ಹಳ್ಳ, ಕೊಳ್ಳ, ನದಿ, ಸಾಗರದವರೆಗೂ ನನ್ನ ಹೆಸ್ರು ಐತಿ. ನಾನು ಎಲ್ಲಾರ್ಗೂ ಬೇಕು. ನಾನು ಎಲ್ಲರಲ್ಲೂ ಇದ್ದೀನಿ. ಸಾಗರದಲ್ಲಿ ವಿಶಾಲವಾಗಿ ಹೂ ಪಕಳೆಗಳಲ್ಲಿ ಹನಿ ಮುತ್ತಾಗುವ ನನ್ನೊಳಗ ವಿದ್ಯುತ್ ಆಗುವ ಶಕ್ತಿನೂ ಅದ. ನಾ ಸಮಾಧಾನವಾಗಿದ್ರ ಶಾಂತಿ. ಸಿಟ್ಟಿಗೆದ್ರ ಜಲಪ್ರಳಯ. ಮನುಷ್ಯನ ದುರಾಸೆ ಹೆಚ್ಚಿದ್ರ ನಾನು ಬತ್ತಿ ಹೋಗ್ತೀನಿ. ದೈವದತ್ತವಾದ ನಿಸರ್ಗವನ್ನ ಯಾರೂ ಹಾಳು ಮಾಡಬಾರದು. ಮನುಷ್ಯನ ದುರಾಸೆಯಿಂದ ಋತುಗಳೇ ಬದಲಾಗ್ಯಾವ. ಮೊದ್ಲ ಬಾಟಲ್ಯಾಗ ನೀರ ತುಂಬಿ ಮಾರಾಟ ಮಾಡಿದ್ದೇ ವಿಚಿತ್ರ ಅನಸ್ತಿತ್ತು. ಈಗ ಪಾಕೇಟ್ದಾಗೂ ನೀರು ತುಂಬಿ ಮಾರಾಟ ಮಾಡೋ ಕಾಲ ಬಂದದ. ಹಿಂದ್ಕ ಕರಣಿ ಬೆಲ್ಲ ಕೊಟ್ಟು ಕುಡ್ಯಾಕ ನೀರು ಕೊಡೋ ಕಾಲ ಇತ್ತು. ಈಗ ಎಲ್ಲಾದಕ್ಕೂ ರೊಕ್ಕ. ಶುದ್ಧ ನೀರಿಗೂ ರೊಕ್ಕ, ಗಾಳಿಗೂ ರೊಕ್ಕ, ದೇವರ ದರ್ಶನಕ್ಕೂ ರೊಕ್ಕ, ತೀರ್ಥ-ಪ್ರಸಾದಕ್ಕೂ ರೊಕ್ಕ, ಬರೀ ರೊಕ್ಕ ರೊಕ್ಕ… ಎಲ್ಲಾನೂ ವ್ಯಾಪಾರ ಆಗ್ಯಾದ. ಮನಸ್ಯಾ ಮನಸ್ಯಾನ್ನ ನಂಬದಿದ್ರ… ದೇವ್ರು ಕೊಟ್ಟ ನಿಸರ್ಗ ಹಾಳ್ ಮಾಡಿದ್ರ ತ್ವಾಸೆ ವರ್ಸದಾಗ ಜಗತ್ ಪ್ರಳಯ ಆಗಿ ಹೋಗ್ತಾದ. ಪ್ರಕೃತಿ ಸಿಟ್ಟಿಗೆದ್ರ… ಯಾರ ಹೇಳಿದ್ರೂ ಕೇಳಂಗಿಲ್ಲ… ಈ ಭೂಮಿ ಮ್ಯಾಲ ಹುಟ್ಟಿದ ಪ್ರತಿ ಜೀವಿಯೂ ಶ್ರೇಷ್ಠ ಅದ. ಯಾವುದೂ ಹೆಚ್ಚಲ್ಲ… ಯಾವುದೂ ಕಮ್ಮಿ ಅಲ್ಲ…”
ಅಷ್ಟು ಹೊತ್ತಿನವರೆಗೂ ನಾ ಹೆಚ್ಚ… ನಾ ಹೆಚ್ಚ… ಅಂತ ಹಾರ್ಯಾಡ್ತಿದ್ದ ಭಜಿ, ಸಮೋಸ, ಚಹಾ, ಕಾಫಿ, ಪುರೆ, ರೊಟ್ಟಿ, ಚಟ್ನಿ, ಚಪಾತಿ, ಸೌತಿಕಾಯಿ ಎಲ್ರೂ `ನೀರು’ ಹೇಳಿದ ಮಾತ್ಕೇಳಿ ತುಟಿ ಪಿಟಕ್ ಅನಲಾರ್ದೆ ಗಪ್ಚುಪ್ ಆದವು.?