ಇನ್ನೊಬ್ಬರಿಗೆ ತೊಂದರೆ ಕೊಡುವುದೇ ಜೀವನದ ಧ್ಯೇಯವೆಂಬ ಪಾತ್ರಗಳಾಗಲೀ ಅಥವಾ ತನಗಾಗುವ ಎಲ್ಲಾ ಅನ್ಯಾಯಗಳನ್ನೂ ಮೌನವಾಗಿ ಸಹಿಸಬೇಕೆಂಬ ಸಂದೇಶ ಕೊಡುವ ಪಾತ್ರಗಳಾಗಲೀ ಎರಡೂ ಬಗೆಯವು ಮಕ್ಕಳ ಮನಸ್ಸಿಗೆ ಹಾನಿ ಉಂಟುಮಾಡಬಲ್ಲವೇ ವಿನಾ ಒಳಿತನ್ನಲ್ಲ.
ದೃಶ್ಯ ಒಂದು: ಮನೆಮಂದಿಯೆಲ್ಲ ಒಟ್ಟಾಗಿ ಕೂತು ಧಾರಾವಾಹಿ ನೋಡುತ್ತಾರೆ. ಅದರಲ್ಲಿನ ಎಲ್ಲಾ ಪಾತ್ರಗಳ ಪರಿಚಯವೂ ಮನೆಯ ಪುಟ್ಟ ಕೂಸಿನಿಂದ ತೊಡಗಿ ಹಿರಿಯರವರೆಗೂ ಇದೆ. ಎಲ್ಲಾದರೂ ಅಜ್ಜನಿಗೋ ಅಜ್ಜಿಗೋ ಕಥೆಯ ಎಳೆ ತಪ್ಪಿದರೆ ಇನ್ನೂ ಐದುವರ್ಷ ತುಂಬಿರದ ಪುಟ್ಟಿ ಕಥೆ ಹೇಳುತ್ತಾಳೆ. ಮನೆಮಂದಿಗೆಲ್ಲಾ ಆಶ್ಚರ್ಯ. ಅರೇ, ಇಷ್ಟು ಚಿಕ್ಕಮಗುವಿಗೆ ಇಷ್ಟೆಲ್ಲಾ ಚೆನ್ನಾಗಿ ಕಥೆ ಹೇಳುವುದಕ್ಕೆ ಬರುತ್ತದೆಯೇ? ಏನೂ ಅರಿಯದ ವಯಸ್ಸಿನ ಕೂಸು ಧಾರಾವಾಹಿ ನೋಡಿದರೆ ಅದರಲ್ಲೇನು ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆಯೇ? – ಎಂಬ ಬೆರಗು ನೋಡಿದವರೆಲ್ಲರಿಗೆ. ಆದರೆ ಆ ಮಗುವಿನ ಮುಗ್ಧತೆ ನೋಡನೋಡುತ್ತಿದ್ದಂತೇ ಮಾಯವಾಗಿಬಿಡುವುದು ಆ ಧಾರಾವಾಹಿಪ್ರಿಯರ ಅರಿವಿಗೆ ಬರುವುದಿಲ್ಲ.
ದೃಶ್ಯ ಎರಡು: ಪಕ್ಕದ ಮನೆಯ ಪುಟ್ಟಿ ಶಾಲೆಗೆ ರಜೆಯಿದ್ದಾಗಲೆಲ್ಲ ತನ್ನ ಗೆಳತಿಯ ಮನೆಗೆ ಹೋಗುತ್ತಾಳೆ. ಅವಳೊಡನೆ ಆಡುವುದು ಒಂದು ನೆಪ ಮಾತ್ರ. ನಿಜಕ್ಕೂ ಆಕೆಗೆ ಬೇಕಿರುವುದು ಯಾವುದೇ ಲಗಾಮಿಲ್ಲದೆ ಟಿವಿ ನೋಡುವ ಅವಕಾಶ. ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನುಗಳಿಂದ ತೊಡಗಿ ಎಲ್ಲಾ ಚಾನೆಲ್ಗಳೂ ಆಕೆಗೆ ಗೊತ್ತು. ಅವರ ಮನೆಯಲ್ಲಿ ಗೋಡೆಯಗಲದ ಟಿವಿ ಇದ್ದರೂ ಅಷ್ಟೇ ನಿಯಂತ್ರಣವೂ ಇದೆ. ಈ ಗೆಳತಿಯ ಮನೆಯಲ್ಲಾದರೋ ವಯಸ್ಸಾದ ಅಜ್ಜಿ-ತಾತ ಬಿಟ್ಟರೆ ಮತ್ಯಾರೂ ಇಲ್ಲ. ಅಪ್ಪ-ಅಮ್ಮ ಕೆಲಸಕ್ಕೆ ಹೋಗಿರುತ್ತಾರೆ. ಅಜ್ಜಿಯ ಮಾತನ್ನಾಗಲೀ ತಾತನ ಗದರಿಕೆಯನ್ನಾಗಲೀ ಪುಟ್ಟಿ ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ‘ಅಪ್ಪಾ ಭಗವಂತಾ, ಒಮ್ಮೆ ಕರೆಂಟು ಹೋದರೆ ಸಾಕಿತ್ತಪ್ಪಾ’ ಎಂದು ದೇವರಿಗೆ ಕೈಮುಗಿಯುವುದರ ಹೊರತಾಗಿ ಆ ಹಿರಿಯರಿಗೆ ಮತ್ತೇನೂ ಮಾಡಲು ಸಾಧ್ಯವಿಲ್ಲ.
ಬಲೆ–ಬಂಧನ
ಟಿವಿ ಎಂಬುದು ಇಂದು ಪ್ರತಿ ಮನೆಯ ಸದಸ್ಯ. ಮನೆಯಲ್ಲಿ ಮೂರು ಹೊತ್ತಿನ ಗಂಜಿಗೆ ಗತಿಯಿದೆಯೋ ಇಲ್ಲವೋ ಗೊತ್ತಿಲ್ಲದಿದ್ದರೂ ಟಿವಿ ಅಂತೂ ಇರಲೇಬೇಕು. ಅದರಲ್ಲಿನ ಪಾತ್ರಗಳೆಲ್ಲವನ್ನೂ ನಿಜವೆಂದು ನಂಬುವ ಅನೇಕ ಮುಗ್ಧಜೀವಿಗಳಿಗೆ ಧಾರಾವಾಹಿಗಳ ಶೋಷಿತ ಪಾತ್ರಗಳ ಮೇಲೆ ಸಿಕ್ಕಾಪಟ್ಟೆ ಕರುಣೆ. ಅವರಿಗಾಗಿ ಮಿಡಿಯುವ ಭರದಲ್ಲಿ ಎದುರುಮನೆಯಲ್ಲಿ ವಾಸವಿರುವ ಕುಟುಂಬದ ಒಬ್ಬಳೇ ಮಗಳು ಅಸೌಖ್ಯದಿಂದ ವಾರಗಟ್ಟಲೆ ಮಲಗಿರುವುದು ಮುಖ್ಯವಾಗುವುದಿಲ್ಲ. ಒಪ್ಪತ್ತು ಊಟಕ್ಕೆ ಕಷ್ಟಪಡುವ ಆ ಮನೆಯವರು ಮಗಳನ್ನು ಉಳಿಸಿಕೊಳ್ಳಲು ಎಷ್ಟು ಹೆಣಗಾಡುತ್ತಿದ್ದಾರೆಂಬುದು ಗೋಚರವಾಗುವುದೂ ಇಲ್ಲ. ಹಾಗೆಂದು ನಮ್ಮ ಸುತ್ತಲಿನ ಎಲ್ಲಾ ಮನೆಗಳ ಎಲ್ಲಾ ಕಷ್ಟಗಳನ್ನೂ ನಾವು ಪರಿಹರಿಸಬಹುದೆಂದಲ್ಲ. ಆದರೆ ನಾವು ತೋರುವ ಕಿಂಚಿತ್ ಕಾಳಜಿ ಅವರಿಗೆ ಆನೆಯ ಬಲ ಕೊಡಬಲ್ಲದು.
ಮನುಷ್ಯರನ್ನು, ಮನೆಮನೆಗಳನ್ನೂ ಸೆರೆಹಿಡಿದುಕೊಂಡು ಬಿಟ್ಟಿರುವ ಟಿವಿಯಲ್ಲಿನ ಧಾರಾವಾಹಿಗಳೋ… ಒಂದು ಕೂಡುಕುಟುಂಬವನ್ನು ಹೇಗೆ ಒಡೆಯಬಹುದು ಎಂಬುದಕ್ಕೆ ನಿತ್ಯಪಾಠ. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಮನೆಮಂದಿ ಮಾಡಿದ್ದೆಲ್ಲಾ ತಪ್ಪು ಅಥವಾ ಅವರು ಅದೆಷ್ಟು ಕಷ್ಟಸಹಿಷ್ಣುಗಳೆಂದರೆ ಮನೆಯ ಇತರ ಸದಸ್ಯರಿಂದ ತಮಗೆ ಯಾವುದೇ ರೀತಿ ತೊಂದರೆ ಆಗುತ್ತಿರಲಿ ಅದನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾಗದಷ್ಟು ಒಳ್ಳೆಯತನ ಅವರಲ್ಲಿ. ಅಥವಾ ತದ್ವಿರುದ್ಧ. ಮನೆಯ ಪ್ರತಿ ಸದಸ್ಯರು ಮಾಡಿದ್ದೆಲ್ಲದರಲ್ಲೂ ತಪ್ಪುಹುಡುಕುವ ಮನೆಯ ಯಜಮಾನ ಅಥವಾ ಯಜಮಾನಿ. ಇವರ ಕೈಯ್ಯಲ್ಲಿ ಸಿಕ್ಕಿ ನಲುಗುವ ಜೀವಗಳಿಗೆ ತಮ್ಮ ಶ್ರಮದಿಂದ ಬಿಡುವೆಂಬುದೇ ಇಲ್ಲ.
ಇದು ಒಂದು ರೀತಿಯಾದರೆ ಪತಿ-ಪತ್ನಿಯರ ಸಂಬಂಧಕ್ಕೆ ಬಂದರೆ ಅಲ್ಲೊಂದು ಮೂರನೇ ಕೊಂಡಿ ಇರಲೇಬೇಕು! ಒಂದೋ ಅತ್ಯಂತ ಸಂಭಾವಿತ ಗಂಡಸೊಬ್ಬನಿಗೆ ತೀರಾ ಕೆಟ್ಟವಳಾದ ಪತ್ನಿ. ಅಥವಾ ಜಗತ್ತಿನಲ್ಲೆಲ್ಲೂ ಸಿಗದಷ್ಟು ವಿನೀತ ಹೆಣ್ಣಿಗೆ ಕ್ರೌರ್ಯವನ್ನೇ ಮೈಗೂಡಿಸಿಕೊಂಡ ಪತಿ. ಒಟ್ಟಿನಲ್ಲಿ ಸಂಬಂಧಗಳು ದಾರಿತಪ್ಪಿಯೇ ಇರಬೇಕು. ಜೊತೆಗೆ ಆ ಗಂಡ-ಹೆಂಡತಿ ರೈಲ್ವೇಹಳಿಗಳ ಹಾಗೆ ಸಮಾನಾಂತರವಾಗಿ ಎಂದೂ ಜೊತೆಯಾಗದೇ ಸಾಗುತ್ತಿರಬೇಕು. ಅಪ್ಪಿತಪ್ಪಿ ದಂಪತಿಗಳು ಅನ್ಯೋನ್ಯವಾಗಿ ಸಂತೋಷದಿಂದಿದ್ದರೆ ನಿರಂತರವಾಗಿ ಅವರಿಗೆ ಕಾಟಕೊಡುತ್ತಾ ಅವರ ಸಂಬಂಧದಲ್ಲಿ ಹುಳಿಹಿಂಡುತ್ತಾ ಅವರು ದೂರಾಗುವುದನ್ನೇ ಕಾಯುವ ಇತರ ಕುಟುಂಬ ಸದಸ್ಯರು.
ಬಿಚ್ಚಿಕೊಳ್ಳುವ ಬೊಂತೆ
ಇ ಷ್ಟು ಸಾಲದು ಅನ್ನುವ ಹಾಗೆ ಎಷ್ಟೋ ಸಂದರ್ಭಗಳಲ್ಲಿ ಮದುವೆಯೆಂಬುದು ಏರ್ಪಡುವುದೇ ವಿಚಿತ್ರ ಸನ್ನಿವೇಶಗಳಲ್ಲಿ. ಯಾರಿಗೋ ಸಹಾಯಮಾಡುವ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ತಾಳಿಕಟ್ಟುವ ಯುವಕ, ಆಟದ ಮದುವೆಯಂಥಾ ಆ ಮದುವೆಯನ್ನೇ ತನ್ನ ಪಾಲಿನ ಭಾಗ್ಯವೆಂದು ಭ್ರಮಿಸಿ ಜೀವನವನ್ನೇ ಆತನ ಶ್ರೇಯಸ್ಸಿಗಾಗಿ ಮುಡಿಪಿಟ್ಟು ಅವನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸುವ ಪತ್ನಿಯಲ್ಲದ ಪತ್ನಿ! ಕ್ಷಣಕ್ಷಣಕ್ಕೂ ಅವರು ಮುಚ್ಚಿಟ್ಟ ಗುಟ್ಟು ಬಯಲಾಗುವ ಹಾಗೆ ಸಂದರ್ಭಗಳ ಸೃಷ್ಟಿ, ಆದರೆ ಆ ಹೆಣ್ಣಿನ ಚಾಕಚಕ್ಯತೆಯಿಂದ ಅವರು ಯಾವಾಗಲೂ ತೊಂದರೆಯಿಂದ ಪಾರಾಗುವ ರೀತಿ…. ಇವಿಷ್ಟರ ನಡುವೆ ನೂರಾರು ಕಂತುಗಳು ಮುಗಿದುಹೋಗುತ್ತವೆ, ನಾಲ್ಕಾರು ವರ್ಷಗಳೇ ಧಾರಾವಾಹಿ ಓಡುತ್ತದೆ. ಈ ಬಗೆಯ ಸಿಕ್ಕುಗಳ ಹೊರತಾಗಿ ನಮ್ಮ ಧಾರಾವಾಹಿ ನಿರ್ಮಾಪಕರಿಗೆ ನಿರ್ದೇಶಕರಿಗೆ ಜೊತೆಗೆ ಚಾನೆಲ್ಗಳಲ್ಲಿನ ಮಂದಿಗೂ ಹೊಸತನದ ಆಕಾಂಕ್ಷೆಯಿಲ್ಲ. ಏನಿದ್ದರೂ ಜನರನ್ನು ಹಿಡಿದಿಡುವ ಸೆಂಟಿಮೆಂಟಲ್ ಕಥೆ ಮಾತ್ರ ಬೇಕು. ಆದರೆ ಅದು ಮೆಂಟಲ್ ಮಾತ್ರ ಆಗಿಬಿಟ್ಟರೆ ತುಂಬ ಕಷ್ಟ.
ಮನೆಯಂಗಳದ ಮನರಂಜನೆಯ ಮಾಧ್ಯಮ ಎಂದು ಕರೆಸಿಕೊಂಡಿರುವುದು ಟೆಲಿವಿಷನ್. ಆದರೆ ಇದೇ ಮಾಧ್ಯಮ ಮನೆಮುರಿಯುವ ಕಥೆಗಳನ್ನೇ ನಿರಂತರವಾಗಿ ಪ್ರಸಾರ ಮಾಡುವ ಆವಶ್ಯಕತೆಯೇನಿದೆಯೋ ಅವರಿಗೇ ಗೊತ್ತಿರಲಿಕ್ಕಿಲ್ಲ. ಒಟ್ಟಿನಲ್ಲಿ ಎಲ್ಲರೂ ಮಾಡುವುದು ಟಿಆರ್ಪಿಗಾಗಿ. ಒಳ್ಳೆಯ ಟಿಆರ್ಪಿ ಬಂದರೆ ಜಾಹೀರಾತುಗಳು ಎಗ್ಗಿಲ್ಲದೇ ದೊರೆಯುತ್ತವೆ. ಚಾನೆಲ್ ನಿರಾತಂಕವಾಗಿ ಲಾಭದಿಂದ ನಡೆಯುತ್ತದೆ. ಆದರೆ ಮನೆಮಂದಿಯ ಮನಸ್ಸುಗಳು ಮಾತ್ರ ಒಡೆದ ಹಾಲು, ಒಡೆದ ಮುತ್ತು ಎಂಬಂತಾಗುತ್ತದೆ.
ಎಲ್ಲದಕ್ಕಿಂತ ಅಪಾಯಕಾರಿಯೆಂದರೆ ಹೆಚ್ಚಿನ ಧಾರಾವಾಹಿಗಳ ನಾಯಕಿ ಅತ್ಯಂತ ಒಳ್ಳೆಯವಳೇ ಆಗಿರುತ್ತಾಳೆ. ಆದರೆ ಸಮಯ ಸಂದರ್ಭ ಎಲ್ಲವೂ ಆಕೆಗೆ ವಿರುದ್ಧವಾಗಿದ್ದು ಅವಳೇನೇ ಮಾಡಹೊರಟರೂ ಸೋಲು ಅವಳದ್ದೇ ಆಗಿರುತ್ತದೆ. ಆದರೂ ತನಗೆ ಯಾರಿಂದಲೇ ಆಗಲೀ ಯಾವುದೇ ಬಗೆಯ ತೊಂದರೆಯಾದರೂ ಆಕೆ ಪ್ರತಿರೋಧಿಸುವುದಿಲ್ಲ. ಒಂದು ವೇಳೆ ಅವಳೇನಾದರೂ ತನಗೆ ತೊಂದರೆ ಉಂಟು ಮಾಡುತ್ತಿರುವ ಮೂಲವನ್ನು ಅರಿತು ತನ್ನದೇ ಆದ ಒಳ್ಳೆಯತನದಿಂದ ಅವರಿಗೆ ಪಾಠ ಕಲಿಸಹೊರಟರೂ ಅವಳ ಹೆಜ್ಜೆ ಎಲ್ಲರಿಗಿಂತ ಮೊದಲೇ ಅವಳಿಗೆ ಕಿರುಕುಳ ಕೊಡುವವರಿಗೆ ತಿಳಿದಿರುತ್ತದೆ!
ಇರಲಿ ನಿಯಂತ್ರಣ
ಇಲ್ಲಿ ಪ್ರಜ್ಞಾವಂತರಾಗಿ ನಾವು ನಮಗೇ ಹಾಕಿಕೊಳ್ಳಬೇಕಾದ ಪ್ರಶ್ನೆಯೊಂದೇ. ಇಂತಹ ಮನೆಮುರುಕ ತತ್ತ್ವಗಳನ್ನೇ ಆದರ್ಶವೆಂಬಂತೆ ಬಿಂಬಿಸುವ ಅಥವಾ ತಮ್ಮ ಮೇಲಾಗುವ ಎಲ್ಲಾ ದೌರ್ಜನ್ಯಗಳನ್ನೂ ತುಟಿಪಿಟಕ್ಕೆನ್ನದೇ, ಪ್ರತಿಭಟಿಸದೇ ಸಹಿಸಿಕೊಳ್ಳುವ ಗುಣವೇ ಹೆಚ್ಚುಗಾರಿಕೆಯೆಂಬಂತೆ ತೋರಿಸುವ ಇಂಥಾ ಕಥೆಗಳು ನಮ್ಮ ಮನೆಗಳಿಗೆ ನಿಜವಾಗಿಯೂ ಬೇಕೇ? ಬೇಡವೆಂದರೂ ನೋಡುವುದರಿಂದ ಮನರಂಜನೆಯ ಬದಲಾಗಿ ಮನಸ್ಸು ಕೆಡುವ ಸಾಧ್ಯತೆಗಳೇ ಹೆಚ್ಚು. ದೊಡ್ಡವರಾದರೂ ಒಂದು ವೇಳೆ ಅದರಲ್ಲಿನ ಒಳಿತುಕೆಡುಕುಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನಾದರೂ ಮಾಡಿಯಾರು. ಆದರೆ ಪುಟ್ಟಮಕ್ಕಳಿಗೆ ಆ ಅರಿವಿರುವುದಿಲ್ಲ.
ಇನ್ನೊಬ್ಬರಿಗೆ ತೊಂದರೆ ಕೊಡುವುದೇ ಜೀವನದ ಧ್ಯೇಯವೆಂಬ ಪಾತ್ರಗಳಾಗಲೀ ಅಥವಾ ತನಗಾಗುವ ಎಲ್ಲಾ ಅನ್ಯಾಯಗಳನ್ನೂ ಮೌನವಾಗಿ ಸಹಿಸಬೇಕೆಂಬ ಸಂದೇಶ ಕೊಡುವ ಪಾತ್ರಗಳಾಗಲೀ ಎರಡೂ ಬಗೆಯವು ಮಕ್ಕಳ ಮನಸ್ಸಿಗೆ ಹಾನಿ ಉಂಟುಮಾಡಬಲ್ಲವೇ ವಿನಾ ಒಳಿತನ್ನಲ್ಲ. ತಮ್ಮ ಗೆಳೆಯರೊಂದಿಗೆ ಆಟವಾಡುವಾಗಲೂ ಅವರಿಗೆ ತೊಂದರೆ ಕೊಡುವ ಮನಸ್ಸಾಗಲೀ, ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಹೆತ್ತವರಲ್ಲಿ ಗೆಳೆಯರಿಗೆ ಹೊಡೆಸುವುದಾಗಲೀ ಅಥವಾ ಆಟದ ಹೆಸರಿನಲ್ಲಿ ಇತರರು ತನಗೆ ಸಲ್ಲದ್ದನ್ನೇ ಮಾಡಿದರೂ ತೆಪ್ಪಗೆ ಕಣ್ಣೀರುಗರೆಯುತ್ತಾ ಇರುವುದಾಗಲೀ ಒಳ್ಳೆಯದಲ್ಲವೆಂಬುದು ಮಕ್ಕಳಿಗೆ ಮನವರಿಕೆಯಾಗುವಂತಿರಬೇಕು.
ಮಕ್ಕಳ ಮನಸ್ಸಿನ ಒಳಿತನ್ನು ಗಮನದಲ್ಲಿಟ್ಟುಕೊಂಡಾದರೂ ನಮ್ಮ ಮನೆಗಳ ಚಾನೆಲ್ಗಳ ಮೇಲೆ ನಮ್ಮದೇ ನಿಯಂತ್ರಣ
ಇರಲಿ!?