ಕಾಶಿಯನ್ನು ತಮ್ಮ ಲೋಕಸಭಾ ಸ್ಥಾನವಾಗಿ ಆರಿಸಿಕೊಂಡ ಪ್ರಧಾನಿ ನರೇಂದ್ರಮೋದಿ ಅವರು ಈ ಪವಿತ್ರಕ್ಷೇತ್ರಕ್ಕೆ ಸಂಬಂಧಿಸಿ ಅಭೂತಪೂರ್ವವಾದ ಕಾರ್ಯವನ್ನೇ ಮಾಡಿದ್ದಾರೆ. ಇದು ಅಕ್ಷರಶಃ ಐತಿಹಾಸಿಕವೇ ಸರಿ. ಈ ಪ್ರಾಚೀನ ನಗರ, ಅದರಲ್ಲೂ ವಿಶ್ವನಾಥ ದೇವಾಲಯದ ಪರಿಸರ ಅವ್ಯವಸ್ಥೆಯ ಗೂಡಾಗಿದ್ದು, ನೈರ್ಮಲ್ಯದ ಅಭಾವ, ಗಿಜಿಗುಟ್ಟುವ ಮುರುಕಲು ಕಟ್ಟಡಗಳು ಮುಂತಾದವು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಬಾಧಿಸುತ್ತಿದ್ದವು. ಏಕಕಾಲದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಧನೆಯನ್ನು ಮೋದಿ ಮಾಡಿದ್ದಾರೆ. ಅಹಿಲ್ಯಾಬಾಯಿ ಹೋಳ್ಕರ್, ಮಹಾರಾಜಾ ರಣಜಿತ್ಸಿಂಗ್ ಮುಂತಾದವರು ಅಲ್ಲಿ ಮಾಡಿದ ಕಾರ್ಯದೊಂದಿಗೆ ಮೋದಿ ಅವರ ಕೊಡುಗೆಯನ್ನು ಹೋಲಿಸಲಾಗುತ್ತಿದೆ. ಇದು ಓರ್ವ ಪ್ರಧಾನಿಯಾಗಿ ಅವರು ಮಾಡಿದ್ದಾದರೂ ಅವರು ವೈಯಕ್ತಿಕವಾಗಿ ನೀಡಿದ ಗಮನ ಮತ್ತು ಜಟಿಲ ಸಮಸ್ಯೆಗಳನ್ನು ಬಿಡಿಸುವಲ್ಲಿ ಅವರು ತೋರಿದ ಚಾಕಚಕ್ಯತೆಯು ದೇಶದ ಗಮನ ಸೆಳೆದಿದೆ.
ತಾಯಿಯಿಂದ ಪ್ರೇರಣೆ ಪಡೆದು ಮಹಾನ್ ವ್ಯಕ್ತಿಗಳಾದವರಲ್ಲಿ ಛತ್ರಪತಿ ಶಿವಾಜಿ ಮಹಾರಾಜರದ್ದು ತಪ್ಪದೆ ಬರುವ ಹೆಸರು. ತಾಯಿ ಜೀಜಾಬಾಯಿ ಹೇಳಿದ ಕಥೆಗಳನ್ನು, ಬುದ್ಧಿಮಾತುಗಳನ್ನು ಕೇಳಿ ಆತ ಯಾವ ರೀತಿ ಬೆಳೆದರೆಂದರೆ ಬಲಿಷ್ಠ ಮೊಘಲ್ ಸಾಮ್ರಾಜ್ಯವನ್ನೇ ಎದುರುಹಾಕಿಕೊಳ್ಳುವಷ್ಟು. ಆ ಮಹಾತಾಯಿಗೆ ಈ ಪುತ್ರರತ್ನನಲ್ಲಿ ಎಂತಹ ವಿಶ್ವಾಸವಿತ್ತು ಎಂಬುದು ಕೂಡ ಕುತೂಹಲಕಾರಿ. ಅದಕ್ಕೊಂದು ತಾಜಾ ನಿದರ್ಶನ ಇಲ್ಲಿದೆ.
ಮೊಘಲ್ ಚಕ್ರವರ್ತಿಯಾಗಿ ಭಾರತದ ಬಹುಭಾಗವನ್ನು ಸುಮಾರು ಅರ್ಧ ಶತಮಾನದಷ್ಟು ಸುದೀರ್ಘ ಕಾಲ ಆಳಿದ ಮತಾಂಧ, ಕ್ರೂರಿ ಔರಂಗಜೇಬ್ ತನ್ನ ಕೊನೆಯ ವರ್ಷಗಳನ್ನು ದಕ್ಷಿಣದಲ್ಲಿ ಮರಾಠರೊಂದಿಗೆ ಹೋರಾಡುವುದರಲ್ಲೇ ಕಳೆದ; ಅದು ಅವನ ಅವನತಿಯ ಕಾಲವೂ ಆಗಿತ್ತು ಎಂದು ನಾವು ಇತಿಹಾಸದ ಪುಟಗಳಲ್ಲಿ ಓದುತ್ತೇವೆ. ಆತ ಈ ರೀತಿ ದಕ್ಷಿಣಕ್ಕೆ ಬಂದು ಇಲ್ಲೇ ಕಾಲ ಕಳೆಯುವುದಕ್ಕೆ ಕಾರಣ ಜೀಜಾಬಾಯಿ ಒಡ್ಡಿದ ಒಂದು ಸವಾಲು ಎನ್ನುವುದು ಹೆಚ್ಚು ಜನರಿಗೆ ತಿಳಿದಿರಲಾರದು; ಆದರೆ ಅದು ಅಕ್ಷರಶಃ ಸತ್ಯ; ಮತ್ತು ಅದನ್ನು ಇತಿಹಾಸದ ಒಂದು ತಿರುವಿನ ಬಿಂದು ಎಂದು ಇತಿಹಾಸಕಾರರು ಗುರುತಿಸಿದ್ದಾರೆ.
ಔರಂಗಜೇಬನಿಗೆ ಜೀಜಾಬಾಯಿ ಸವಾಲು
ಸಂದರ್ಭ ಹೀಗಿದೆ: ಹಿಂದುಗಳಿಗೆ ಅತ್ಯಂತ ಪವಿತ್ರವಾದ ಯಾತ್ರಾಸ್ಥಳ ವಾರಾಣಸಿ ಅಥವಾ ಕಾಶಿಗೆ ಸಂಬಂಧಿಸಿ ಅದು ನಡೆಯಿತು. ಭಾರತದಲ್ಲಿ ವಿದೇಶೀಯರ ಮತ್ತು ಅನ್ಯಧರ್ಮೀಯರ ಆಕ್ರಮಣಗಳಿಗೆ ಗರಿಷ್ಠ ಸಂಖ್ಯೆಯಲ್ಲಿ ಗುರಿಯಾದ ಪವಿತ್ರಕ್ಷೇತ್ರಗಳಲ್ಲಿ ಕಾಶಿ ಒಂದು; ಮತ್ತು ಅದು ಬಹುಮುಖ್ಯವಾದದ್ದು. ಔರಂಗಜೇಬ ಯಥಾಪ್ರಕಾರ ಈ ಕ್ಷೇತ್ರದ ಪ್ರಮುಖ ದೇವಾಲಯಗಳನ್ನೆಲ್ಲ ನೆಲಸಮ ಮಾಡಿದ್ದಲ್ಲದೆ ವಾರಾಣಸಿಯ ಅಸ್ತಿತ್ವವನ್ನೇ ಅಳಿಸಿಹಾಕಲು ಉದ್ಯುಕ್ತನಾದ. ಈ ಪವಿತ್ರ ನಗರದ ಹೆಸರನ್ನು ಮುಹಮ್ಮದಾಬಾದ್ ಎಂದು ಬದಲಿಸಿದ. ಆ ಹೆಸರಿನಲ್ಲಿ ಆತ ಅಲ್ಲಿನ ವಿಶ್ವನಾಥ (ವಿಶ್ವೇಶ್ವರ) ದೇವಳವನ್ನು ನಾಶ ಮಾಡಿದ್ದರಿಂದ ಮಾತೆ ಜೀಜಾಬಾಯಿಗೆ ಎಷ್ಟು ಕೋಪ ಬಂತೆಂದರೆ ಆಕೆ ಸಾಮರ್ಥ್ಯವಿದ್ದರೆ ಔರಂಗಜೇಬ್ ತಮ್ಮ ಸಿಂಹಗಢವನ್ನು ವಶಮಾಡಿಕೊಳ್ಳಲಿ ಎಂದು ಸವಾಲು ಹಾಕಿದಳು. ಇದರಲ್ಲಿ ಆಕೆಯ ಶ್ರದ್ಧೆ, ದೇಶಪ್ರೇಮಗಳಂತೆಯೇ ಮಗ ಶಿವಾಜಿಯ ಮೇಲಿದ್ದ ಅಖಂಡ ವಿಶ್ವಾಸವೂ ವ್ಯಕ್ತವಾಗುತ್ತದೆ. ಔರಂಗಜೇಬನಿಗೆ ಈ ಸವಾಲನ್ನು ಸ್ವೀಕರಿಸದೆ ಅನ್ಯಮಾರ್ಗವಿರಲಿಲ್ಲ. ಅದರಿಂದ ಇತಿಹಾಸದ ಗತಿಯೇ ಬದಲಾಯಿತು. ಕಾಶಿ ಮತ್ತು ಅಲ್ಲಿನ ವಿಶ್ವನಾಥ ದೇವಾಲಯದ ಮೇಲೆ ದಾಳಿ ಮಾಡಿದವನು ಔರಂಗಜೇಬನೊಬ್ಬನೇ ಅಲ್ಲ. ಅಲ್ಲಿ ನಡೆದ ದಾಳಿಗಳು, ದೇವಾಲಯಗಳ ನಾಶ, ನಾಶವಾದಂತೆಲ್ಲಾ ಮತ್ತೆ ಮತ್ತೆ ತಲೆಯೆತ್ತಿ ನಿಂತ ದೇವಾಲಯಗಳು – ಈ ಸಂಗತಿಗಳು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ದೇವಸ್ಥಾನ ಸಂಕೀರ್ಣದ ಜೀರ್ಣೋದ್ಧಾರ, ನವೀಕರಣ ಮಾಡಿದ ಸಂದರ್ಭದಲ್ಲಿ ಇನ್ನೊಮ್ಮೆ ಹೆಮ್ಮೆಯಿಂದ ನೆನಪಿಸಿಕೊಳ್ಳಲು ಅರ್ಹವಾದದ್ದಾಗಿದೆ.
ಪ್ರಸಿದ್ಧ ಗಂಗಾನದಿಯ ಎಡದಂಡೆಯಲ್ಲಿರುವ ವಾರಾಣಸಿ ಅಥವಾ ಕಾಶಿ ಜಗತ್ತಿನ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದು. ವೇದ, ಉಪನಿಷತ್, ಪುರಾಣಗಳು, ಮಹಾಕಾವ್ಯಗಳು ಮತ್ತು ಬೌದ್ಧ-ಜೈನ ಸಾಹಿತ್ಯಗಳಲ್ಲೆಲ್ಲ ಕಾಶಿ ಉಲ್ಲೇಖಗೊಂಡಿದೆ. ಕ್ರಿ.ಪೂ. ೯ನೇ ಶತಮಾನದ ವೇಳೆಗಾಗಲೆ ಅದೊಂದು ನಗರದ ಸ್ವರೂಪವನ್ನು ಪಡೆದುಕೊಂಡಿತ್ತು. ಅಲ್ಲಿನ ರಾಜಘಾಟ್ ಪೀಠಭೂಮಿಯಲ್ಲಿ ನಡೆಸಿದ ಉತ್ಖನನದಲ್ಲಿ ಕ್ರಿ.ಪೂ. ೧೮ನೇ ಶತಮಾನದ ಪುರಾವೆಗಳು ಸಿಕ್ಕಿವೆ. ಕಾಶಿಯ ಪಾವಿತ್ರ್ಯವು ಅಸಂಖ್ಯ ಸಂತರನ್ನು, ಭಕ್ತರನ್ನು ತನ್ನ ಕಡೆಗೆ ಸೆಳೆದುಕೊಂಡಿದೆ. ಈಗಿನಂತಹ ವಾಹನ ಸೌಕರ್ಯಗಳು, ಅನುಕೂಲಗಳು ಇಲ್ಲದಿದ್ದಾಗಲೂ ಹಿಂದುಗಳಿಗೆ ಕಾಶೀಯಾತ್ರೆ ಜೀವನದ ಒಂದು ಧ್ಯೇಯವಾಗಿ ಅನುಷ್ಠಾನದಲ್ಲಿತ್ತು. ಆರು ತಿಂಗಳು ಹೋಗುವುದಕ್ಕೆ ಮತ್ತು ಆರು ತಿಂಗಳು ವಾಪಸು ಬರುವುದಕ್ಕೆ – ಹೀಗೆ ಒಂದು ವರ್ಷದ ಕಾರ್ಯಕ್ರಮ. ಅಲ್ಲಿಗೆಂದು ಹೋದ ಎಷ್ಟೋ ಜನ ವಾಪಸು ಬರುತ್ತಿರಲಿಲ್ಲ. ವೃದ್ಧರಾದರೆ ಶೇಷಾಯುಷ್ಯವನ್ನು ಅಲ್ಲೇ ಕಳೆದು ಗಂಗೆಯ ತಡಿಯ ಶಿವನ ಆ ಕ್ಷೇತ್ರದಲ್ಲಿ ಸಾವನ್ನು ಆಹ್ವಾನಿಸುವುದೇ ಬದುಕಿನ ಪರಮ ಗುರಿಯಾಗಿತ್ತು. ಹಾಗಲ್ಲದವರು ಕೂಡ ಎಷ್ಟೋ ಸಲ ದಾರಿಯಲ್ಲಿ ಕ್ರೂರ ಪ್ರಾಣಿಗಳು, ದರೋಡೆಕೋರರು, ಕಳ್ಳಕಾರರ ದಾಳಿಗೆ ಗುರಿಯಾಗಿ ಮರಳುತ್ತಿರಲಿಲ್ಲ. ಆದ್ದರಿಂದ ಪತಿ ಕಾಶಿಗೆ ಹೋಗುವುದಾದರೆ ಊರಿನಲ್ಲಿ ಉಳಿದ ಪತ್ನಿ ತನ್ನ ಕಿವಿಯೋಲೆಯನ್ನು ತೆಗೆದು ಇರಿಸಿಕೊಳ್ಳುತ್ತಿದ್ದಳು; ಪತಿ ವಾಪಸಾದ ಮೇಲೆ ಮತ್ತೆ ಅದನ್ನು ಹಾಕಿಕೊಳ್ಳುತ್ತಿದ್ದಳು – ಎನ್ನುವ ಸಂಪ್ರದಾಯವನ್ನು ಕೇಳಿದ್ದಿದೆ.
ಗೌತಮನು ಬುದ್ಧನಾಗಿ ತನ್ನ ಮೊದಲ ಧಾರ್ಮಿಕ ಉಪನ್ಯಾಸವನ್ನು ನೀಡಿದ್ದು ಕಾಶಿಯ ಹೊರವಲಯದ ಸಾರನಾಥದಲ್ಲಿ. ಬುದ್ಧನ ಜಾತಕಕಥೆಗಳಲ್ಲಿ ವಾರಾಣಸಿಗೆ ತುಂಬ ಮಹತ್ತ್ವದ ಸ್ಥಾನವಿದೆ. ಜೈನರ ಏಳನೇ ತೀರ್ಥಂಕರ ಸುಪಾರ್ಶ್ವ ಮತ್ತು ೨೩ನೇ ತೀರ್ಥಂಕರ ಪಾರ್ಶ್ವನಾಥ ಇಬ್ಬರೂ ಕಾಶಿಯಲ್ಲಿ ಜನಿಸಿದವರು. ಕಾಶಿಯಲ್ಲಿ ಸಿಕ್ಕಿದ ಮೊದಲ ಶೈವಮುದ್ರೆಗಳು ಕ್ರಿಶ ಶಕ ಆರಂಭದ ಕಾಲಕ್ಕೆ ಸೇರಿದಂಥವು.
ಮಹಾಭಾರತದ ತೀರ್ಥಯಾತ್ರಾ ಪರ್ವದಲ್ಲಿ ವಾರಾಣಸಿಯ ಅಂಚಿನಲ್ಲಿರುವ ಶಿವಕ್ಷೇತ್ರ ಶಿವಧ್ವಜವು ಬರುತ್ತದೆ; ಕಪಿಲಹ್ರದವು ಅಲ್ಲಿನ ಸರೋವರ. ನಾಲ್ಕರಿಂದ ಆರನೇ ಶತಮಾನದ ಅವಧಿಯ ಬಗೆಬಗೆಯ ಮುದ್ರೆಗಳು ಕಾಶಿಯಲ್ಲಿ ಸಿಕ್ಕಿವೆ. ಅವು ಹೆಚ್ಚಾಗಿ ಶೈವಕ್ಷೇತ್ರಕ್ಕೆ ಸಂಬಂಧಿಸಿದಂಥವು; ವಿಶೇಷವಾಗಿ ಅಲ್ಲಿನ ಅವಿಮುಕ್ತೇಶ್ವರ ದೇವಳದ ಉಲ್ಲೇಖ ಕಂಡುಬಂದಿದೆ.
ವೈಷ್ಣವಧರ್ಮ
ವಾರಾಣಸಿಯಲ್ಲಿ ವೈಷ್ಣವಧರ್ಮ ಕೂಡ ಇತ್ತು. ಕ್ರಿ.ಪೂ. ಒಂದನೇ ಶತಮಾನದ ಬಲರಾಮನ ಮೂರ್ತಿ ಅಲ್ಲಿ ಸಿಕ್ಕಿದೆ. ಬೆಣ್ಣೆ ಕದಿಯುವ ಬಾಲಕೃಷ್ಣನ ಆರನೇ ಶತಮಾನದ ಸಣ್ಣ ಮೂರ್ತಿಯೂ ಸಿಕ್ಕಿದೆ. ಗುಪ್ತರ ಕಾಲದ ಗೋವರ್ಧನ ಗಿರಿಧಾರಿ ಕೃಷ್ಣನ ಮೂರ್ತಿ ಕಂಡುಬಂದಿದೆ. ಅಲ್ಲಿನ ಬಕರಿಯಾ ಕುಂಡದ ಬಳಿ ದೊಡ್ಡದಾದ ವಿಷ್ಣುದೇವಾಲಯ ಇದ್ದಿರಬೇಕೆಂದು ಊಹಿಸಲಾಗಿದೆ. ಅಲ್ಲಿನ ರಾಜಘಾಟ್ ಪರಿಸರದಲ್ಲಿ ವೈಷ್ಣವ ಹೆಸರುಳ್ಳ ಗುಪ್ತರ ಹಲವು ಮುದ್ರೆಗಳು ಸಿಕ್ಕಿವೆ. ಒಂದು ಮುದ್ರೆಯಲ್ಲಿ ಗುಪ್ತರ ಕಾಲದ ಒಂದು ವೈಷ್ಣವ ದೇವಳದ ಪ್ರತಿಕೃತಿ ಕೂಡ ಇದೆ. ೭ನೇ ಶತಮಾನದ ಪ್ರಕಟಾದಿತ್ಯನ ಶಿಲಾಶಾಸನವೊಂದು ಸಾರನಾಥದಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಆತ ಒಂದು ವಿಷ್ಣು ದೇವಾಲಯವನ್ನು ಕಟ್ಟಿಸಿದ್ದು ಮತ್ತು ಅದರ ಜೀರ್ಣೋದ್ಧಾರದ ವ್ಯವಸ್ಥೆಯನ್ನು ವಿವರಿಸಿದ್ದು ಕಂಡುಬಂದಿದೆ.
ಪ್ರಸಿದ್ಧ ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗ್ ೭ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದಾಗ ವಾರಾಣಸಿಗೂ (ಬನಾರಸ್) ಬಂದಿದ್ದ. ಆತ ಅಲ್ಲಿ ಸುಮಾರು ೧೦೦ ದೇವಾಲಯಗಳನ್ನು ಕಂಡಿರುವುದಾಗಿ ಬರೆದಿದ್ದಾನೆ. ೩೦ ಸಂಘಾರಾಮಗಳ ಸುತ್ತ ಆ ದೇವಾಲಯಗಳಿವೆ; ಅಲ್ಲಿ ಸುಮಾರು ೩,೦೦೦ ಅರ್ಚಕರಿದ್ದಾರೆ; ನಗರದ ಮಧ್ಯಭಾಗದಲ್ಲಿ ೩೦ ದೇವಾಲಯಗಳಿವೆ. ಈ ದೇವಳಗಳು, ಗೋಪುರಗಳು, ಸಭಾಂಗಣಗಳು, ವಿವಿಧ ಶಿಲ್ಪಗಳು, ಮರದ ಕೆತ್ತನೆಗಳನ್ನು ಒಳಗೊಂಡಿವೆ – ಎಂದಾತ ಹೇಳಿದ್ದಾನೆ. ನಗರದ ದೇವಳಗಳಿಂದ ಹ್ಯೂಯೆನ್ತ್ಸಾಂಗ್ ತುಂಬ ಪ್ರಭಾವಿತನಾಗಿದ್ದ. ಇಲ್ಲಿ ಹಲವು ಮಹಡಿಗಳಿರುವ, ಎತ್ತರದ ಮತ್ತು ಶ್ರೀಮಂತ ಶಿಲ್ಪಾಲಂಕಾರವಿರುವ ಕಟ್ಟಡಗಳು ನೀರಿನ (ನದಿ) ಅಂಚಿನಲ್ಲೇ ನಿಂತಿವೆ. ತುಂಬ ಮರಗಳಿರುವ ಉದ್ಯಾನಗಳಿದ್ದು ಅವು ಸ್ವ್ವಚ್ಛ ನೀರಿನ ಕೊಳಗಳಿಂದ ಸುತ್ತುವರಿಯಲ್ಪಟ್ಟಿವೆ – ಎಂದು ಕೂಡ ಈ ಚೀನೀ ಯಾತ್ರಿಕ ಬಣ್ಣಿಸಿದ್ದಾನೆ. ಕಾಶಿಯ ಸಸ್ಯಸಂಪತ್ತನ್ನು ಇತರ ಕೆಲವರು ಕೂಡ ವರ್ಣಿಸಿದ್ದಿದೆ.
ಆರಂಭದ ದಾಳಿ
ಬೇಸರದ ಸಂಗತಿಯೆಂದರೆ, ಕಾಶಿಯ ಇತಿಹಾಸದಲ್ಲಿ ಮುಖ್ಯವಾದದ್ದೆಂದರೆ ಅದರ ಮೇಲೆ ನಡೆದ ಪರಕೀಯ ದಾಳಿಗಳು. ದಾಖಲೆಗೆ ಸಿಗುವ ಮೊದಲ ದೊಡ್ಡ ಪ್ರಮಾಣದ ದಾಳಿ ಕ್ರಿ.ಶ. ೧೦೩೩ರಲ್ಲಿ ನಡೆಯಿತು. ಅದನ್ನು ನಡೆಸಿದವನು ಘಜ್ನಿ ಮಹಮ್ಮದನ ಮಗ ಮಹಮ್ಮದ್ ನಿಯಾಲ್ತಗಿನ್. ದಾಳಿಯ ಭಾಗವಾಗಿ ಆತ ಕಾಶಿ ಪಟ್ಟಣವನ್ನು ಲೂಟಿ ಮಾಡಿದನಾದರೂ ನದಿಯ ಮೂಲಕ (ದೋಣಿಯಲ್ಲಿ) ಬಂದಿದ್ದ ಕಾರಣ ಕೆಲವೇ ತಾಸುಗಳ ಕಾಲ ಇಲ್ಲಿದ್ದು ಬೇಗ ವಾಪಸಾದ. ಆ ದಾಳಿಯನ್ನು ಅಬುಲ್ ಫಜಲ್ ಅಲ್ ಬೈಹಾಕಿ ಹೀಗೆ ವಿವರಿಸಿದ್ದಾನೆ: ಸೇನೆ ಅಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ಇರಲು ಸಾಧ್ಯವಾಯಿತು. ಬಟ್ಟೆ, ಸುಗಂಧದ್ರವ್ಯ ಮತ್ತು ಆಭರಣದಂಗಡಿಗಳನ್ನು ಆತ ಲೂಟಿ ಮಾಡಿದ. ಅದರಿಂದ ಸೇನಾ ಸಿಬ್ಬಂದಿ ಶ್ರೀಮಂತರಾದರು. ಚಿನ್ನ-ಬೆಳ್ಳಿ ಆಭರಣ, ಸುಗಂಧದ್ರವ್ಯಗಳನ್ನು ದಾಳಿಕೋರರು ಸಾಗಿಸಿದರು. ಹಿಂದೂ ಪವಿತ್ರಸ್ಥಳವನ್ನು ಅವರು ಅಪವಿತ್ರಗೊಳಿಸಿದರು.
ಮುಂದೆ ದಾಳಿ ನಡೆಸಿದವನು ಘಜ್ನಿ ಮಹಮ್ಮದನ ಸೋದರಳಿಯ ಸಯ್ಯದ್ ಸಾಲಾರ್ ಮಸೂದ್. ಇಸ್ಲಾಮನ್ನು ಹಬ್ಬಿಸುವ ಉದ್ದೇಶದಿಂದ ಆತ ಅಜ್ಮೇರ್ನಿಂದ ಗೊಂಡಾದ ಕಡೆಗೆ ಹೊರಟಿದ್ದ. ಮಾರ್ಗಮಧ್ಯೆ ತನ್ನ ಬೆಂಬಲಿಗ ಮಲ್ಲಿಕ್ ಅಫಜಲ್ ಅಲಾವಿಯ ಕೆಳಗೆ ಸೇನೆಯ ಒಂದು ಭಾಗವನ್ನು ವಾರಾಣಸಿಗೆ ಕಳುಹಿಸಿದ. ನಗರದ ಗಡಿಭಾಗಕ್ಕೆ (ಇಂದಿನ ಕಾಶಿ ರೈಲು ನಿಲ್ದಾಣದವರೆಗೆ) ಆ ಸೈನ್ಯ ಬಂದಿದ್ದು, ಅಲ್ಲಿ ಘೋರ ಯುದ್ಧ ನಡೆದು ದಾಳಿಕೋರ ಸೇನೆ ಪೂರ್ತಿ ಅಳಿದಿರಬೇಕೆಂದು ನಂಬಲಾಗಿದೆ. ಯುದ್ಧ ನಡೆದ ಆ ಸ್ಥಳದಲ್ಲಿ ಮುಂದೆ ಮಸೀದಿಯೊಂದನ್ನು ಮಸ್ಜಿದ್-ಐ-ಗಂಜ್-ಐ-ಶಹೀದ್ ನಿರ್ಮಿಸಿದರು. ಆ ಸೇನೆಯೊಂದಿಗೆ ಬಂದಿದ್ದ ಮಹಿಳೆಯರು ಮತ್ತು ಮಕ್ಕಳಿಗೆ ನಗರದ ಉತ್ತರಭಾಗದ ಕಾಡಿನಲ್ಲಿ ನೆಲೆಸಲು ಅವಕಾಶ ಮಾಡಿಕೊಟ್ಟರು; ಅದೇ ಅಲಾವಿಪುರ. ಅದು ಈಗಲೂ ಇದೆ ಎಂದು ಮೀನಾಕ್ಷಿ ಜೈನ್ ತಮ್ಮ Flight of Deities and Rebirth of Temples ಪುಸ್ತಕದಲ್ಲಿ ವಿವರಿಸಿದ್ದಾರೆ.
ಇಸ್ಲಾಮೀ ಸವಾಲಿಗೆ ಉತ್ತರವಾಗಿ ೧೧ನೇ ಶತಮಾನದ ಕೊನೆಯ ಹೊತ್ತಿಗೆ ಗಢವಾಲಾಗಳು ಮೂಡಿ ಬಂದರು. ರಾಜಾ ಚಂದ್ರದೇವ ಆ ವಂಶದ ಸ್ಥಾಪಕ. ಅವರು ತಮ್ಮ ರಾಜಧಾನಿಯನ್ನು ಕನೋಜ್ನಿಂದ ವಾರಾಣಸಿಗೆ ಸ್ಥಳಾಂತರಿಸಿದರು. ಪ್ರಸ್ತುತ ಅಪಾಯವನ್ನು ಎದುರಿಸುವ ಸಲುವಾಗಿ ದೊಡ್ಡ ಸೇನೆಯನ್ನು ಇರಿಸಿಕೊಳ್ಳಬೇಕೆಂದು ಅವರು ತುರುಷ್ಕದಂಡ ಎನ್ನುವ ಹೊಸ ತೆರಿಗೆಯನ್ನು ಹೇರುತ್ತಿದ್ದರು. ತಮ್ಮ ಮೊದಲ ಶಾಸನದಲ್ಲಿ ಗಢವಾಲಾಗಳು ತಮ್ಮನ್ನು ಉತ್ತರ ಭಾರತದ ಪವಿತ್ರಕ್ಷೇತ್ರಗಳ ಸಂರಕ್ಷಕರೆಂದು ಕರೆದುಕೊಂಡಿದ್ದಾರೆ.
ರಾಜಾ ಚಂದ್ರದೇವನ ಆರು ತಾಮ್ರಶಾಸನಗಳು (ಕ್ರಿ.ಶ. ೧೧೫೦-೫೬) ಬನಾರಸ್ನ ಚಂದ್ರವಟಿಯಲ್ಲಿ ಕಂಡುಬಂದಿವೆ. ಕಾಶಿಯನ್ನು ವಶಪಡಿಸಿಕೊಂಡ ಚಂದ್ರದೇವ ಅಲ್ಲಿ ಆದಿಕೇಶವನ ಮೂರ್ತಿಯನ್ನು ಸ್ಥಾಪಿಸಿ, ಅದನ್ನು ಚಿನ್ನ-ಆಭರಣಗಳಿಂದ ಅಲಂಕರಿಸಿದ – ಎಂದು ೧೧೫೬ರ ಶಾಸನ ತಿಳಿಸುತ್ತದೆ. ರಾಜ ತನ್ನ ತೂಕದ ಚಿನ್ನ ಮತ್ತಿತರ ಅಮೂಲ್ಯ ವಸ್ತುಗಳನ್ನು ಹಾಗೂ ೧,೦೦೦ ದನಗಳನ್ನು ಆದಿಕೇಶವ ದೇವಾಲಯಕ್ಕೆ ನೀಡಿದ. ಮಹಾದೇವ ಕ್ಷೇತ್ರದ ನಿರ್ವಹಣೆಗೆ ಒಂದು ಗ್ರಾಮವನ್ನು ನೀಡಿದನೆಂದು ಇನ್ನೊಂದು ಶಾಸನ ಹೇಳುತ್ತದೆ. ಗೋವಿಂದಚಂದ್ರ ಗಢವಾಲಾನ ರಾಣಿ ಕುಮಾರದೇವಿಯ ೨೬ ಶ್ಲೋಕಗಳ ಸಾರನಾಥ ಶಾಸನವು ಆಕೆ ಒಂದು ಹೊಸ ವಿಹಾರವನ್ನು ಕಟ್ಟಿಸಿದಳೆಂದು ಹೇಳುತ್ತದೆ; ಮತ್ತು ಆಕೆ ಧರ್ಮಚಕ್ರಜಿನದ ಪುನರುಜ್ಜೀವನ ಮಾಡಿ ವಿಹಾರದಲ್ಲಿ ಅದನ್ನು ಸ್ಥಾಪಿಸಿದಳೆಂದು ಕೂಡ ಶಾಸನ ತಿಳಿಸುತ್ತದೆ.
ಘೋರಿಯ ದಾಳಿ
ಮಹಮ್ಮದ್ ಘೋರಿ ವಾರಾಣಸಿ ಮತ್ತು ಕನೋಜ್ನ ರಾಜ ಜಯಚಂದ್ರನನ್ನು ಯುದ್ಧದಲ್ಲಿ ಕೊಂದ ಬಳಿಕ ೧೧೯೪ರಲ್ಲಿ ಕಾಶಿಯ ಮೇಲೆ ಇನ್ನೊಂದು ದೊಡ್ಡ ಪ್ರಮಾಣದ ದಾಳಿ ನಡೆಯಿತು. ಘೋರಿಯ ದಂಡನಾಯಕ ಕುತ್ಬುದ್ದೀನ್ ಐಬಕ್ ಆ ದಾಳಿಯನ್ನು ನಡೆಸಿದ. ಆಗ ಕಾಶಿಯಲ್ಲಿ ಒಂದು ದೇವಾಲಯ ಕೂಡ ಉಳಿಯಲಿಲ್ಲ. ಹಸನ್ ನಿಜಾಮಿ ಐಬಕ್ ೧,೦೦೦ಕ್ಕೂ ಅಧಿಕ ದೇವಾಲಯಗಳನ್ನು ನಾಶಮಾಡಿದನೆಂದು ಹೀಗೆ ವಿವರಿಸಿದ್ದಾನೆ: “ಹಿಂದ್ ದೇಶದ ಕೇಂದ್ರವಾದ ಬನಾರಸ್ಗೆ ಸೇನೆ ಹೋಯಿತು. ಅಲ್ಲಿನ ಸುಮಾರು ೧೦೦೦ ದೇವಾಲಯಗಳನ್ನು ನಾಶ ಮಾಡಿ, ಅವುಗಳ ತಳಪಾಯಗಳ ಮೇಲೆ ಮಸೀದಿಗಳನ್ನು ಕಟ್ಟಿಸಿದರು. ಅಲ್ಲಿ ನಮ್ಮ ಕಾನೂನು ಜಾರಿಯಾಯಿತು; ನಮ್ಮ ಮತದ ತಳಹದಿಯನ್ನು ಸ್ಥಾಪಿಸಿದರು. ದೀನಾರ್ ಮತ್ತು ದಿರಂನ ಮುಖದಲ್ಲಿ ನಮ್ಮ ರಾಜರ ಹೆಸರು ಬಂತು. ಹಿಂದ್ನ ರಾ(Rai)ಗಳು ಮತ್ತು ಮುಖ್ಯಸ್ಥರು ಮುಂದೆ ಬಂದು ವಿಧೇಯತೆಯನ್ನು ಪ್ರಕಟಿಸಿದರು. ಆ ದೇಶದ ಸರ್ಕಾರದ ಮೇಲೆ ನಮ್ಮವರ ಹಿಡಿತ ಬಂತು. ಮೂರ್ತಿಪೂಜೆಯನ್ನು ತಡೆಯಬೇಕೆಂದು ಆ ರಾಜರಿಗೆ ವಿಧಿಸಲಾಯಿತು.” ಈ ರೀತಿಯಲ್ಲಿ ವ್ಯಾಪಕ ದೌರ್ಜನ್ಯ ನಡೆಯಿತು; ಮತ್ತು ಲೂಟಿ ನಡೆಸಿದ ವಸ್ತುಗಳನ್ನು ೧,೪೦೦ ಒಂಟೆಗಳ ಮೇಲೆ ಸಾಗಿಸಲಾಯಿತೆನ್ನುವ ವಿವರ ಸಿಗುತ್ತದೆ.
ಆದರೆ ಕುತ್ಬುದ್ದೀನ್ ಐಬಕ್ನ ಗೆಲವು ಹೆಚ್ಚು ಕಾಲ ನಿಲ್ಲಲಿಲ್ಲ. ಹಿಂದುಗಳು ಕಾಶಿಯನ್ನು ಮರಳಿ ವಶಪಡಿಸಿಕೊಂಡ ಕಾರಣ ೧೧೯೭ರಲ್ಲಿ ಆತ ಮತ್ತೆ ದಾಳಿ ಮಾಡಿದ; ಆದರೂ ನಿಯಂತ್ರಣ ಹೆಚ್ಚು ಕಾಲ ಉಳಿಯಲಿಲ್ಲ. ಬಂಗಾಳದ ಸೇನರಾಜ ಕಾಶಿಯನ್ನು ವಶಪಡಿಸಿಕೊಂಡ. ಕ್ರಿ.ಶ. ೧೨೧೨ರ ಶಾಸನದ ಪ್ರಕಾರ, ವಾರಾಣಸಿಯ ಮಧ್ಯಭಾಗದಲ್ಲಿ ಯೂಪ (ಬಲಿಪೀಠ) ಮತ್ತು ವಿಜಯಸ್ತಂಭಗಳನ್ನು ಸ್ಥಾಪಿಸಿದವನು ಸೇನರಾಜ ವಿಶ್ವರೂಪ. ಇದು ವಿಶ್ವೇಶ್ವರನ ಕ್ಷೇತ್ರ ಎಂಬುದಕ್ಕೆ ಈ ಯೂಪ ಮತ್ತು ವಿಜಯಸ್ತಂಭಗಳು ಸಂಕೇತವಾದವು; ಆ ರೀತಿಯಲ್ಲಿ ಆತ ಘೋಷಿಸಿದ. ಆ ಹೊತ್ತಿಗೆ ಆತನಿಗೆ ದೊಡ್ಡ ದೇವಳ ಕಟ್ಟಿಸಲು ಬೇಕಾದ ಸಂಪನ್ಮೂಲ ಮತ್ತು ಸಮಯಗಳು ಇರಲಿಲ್ಲವೆಂದು ಭಾವಿಸಲಾಗಿದೆ.
ಯಾತ್ರಿಕರಿಗೆ ಜಿಜಿಯಾ
ಇತಿಹಾಸದ ಆ ಕಾಲಘಟ್ಟದಲ್ಲಿ ಕಾಶಿಗೆ ಯಾತ್ರೆ ಕೈಗೊಳ್ಳುವವರ ಮೇಲೆ ಮುಸ್ಲಿಂ ದೊರೆಗಳು ಜಿಜಿಯಾ (ತಲೆಗಂದಾಯ) ಹೇರುತ್ತಿದ್ದರೆನ್ನುವ ಒಂದು ವಿದ್ಯಮಾನ ಗಮನಕ್ಕೆ ಬರುತ್ತದೆ. ೧೨೯೭ರಲ್ಲಿ ಹೊಯ್ಸಳರಾಜ ಮೂರನೇ ನರಸಿಂಹ ಆ ಜಿಜಿಯಾ ಪಾವತಿಗಾಗಿ ಇಡೀ ಒಂದು ಗ್ರಾಮವನ್ನು ನೀಡಿದ್ದನು. ಅದಲ್ಲದೆ ಕರ್ನಾಟಕ, ತೆಲಂಗಾಣ, ತಲ್ವಿ (ತುಳು), ತಿರ್ಹಟ್ (ಬಿಹಾರ), ಗುಜರಾತ್, ಗೌಡ(ಬಂಗಾಳ) ಪ್ರದೇಶದ ಜನರು ಕೂಡ ಈ ತಲೆಗಂದಾಯ ಪಾವತಿ ಬಗ್ಗೆ ಉದಾರ ಕೊಡುಗೆಗಳನ್ನು ನೀಡಿದ್ದರು. ವಿಶ್ವೇಶ್ವರನ ಪೂಜೆಗೆ ಗುಜರಾತ್ನ ರಾಜ ಸೇಠ್ ವಸ್ತುಪಾಲನು ಒಂದು ಲಕ್ಷ ರೂ. ಕಳುಹಿಸಿದ್ದನು. ಅಂದರೆ ಆ ಹೊತ್ತಿಗೆ ಇಡೀ ದೇಶದಲ್ಲಿ ಕಾಶಿ ವಿಶ್ವೇಶ್ವರ ಅತಿ ಮುಖ್ಯ ದೇವರೆನ್ನುವ ಭಾವನೆ ಬಂದಿದ್ದಂತೆ ಕಾಣಿಸುತ್ತದೆ.
ಕ್ರಿ.ಶ. ೧೩೫೩ರ ಹೊತ್ತಿಗೆ ವಾರಾಣಸಿಯಲ್ಲಿ ಎರಡು ದೊಡ್ಡ ದೇವಾಲಯಗಳನ್ನು ಕಟ್ಟಿಸಲಾಯಿತು. ಅವು ವಿಶ್ವೇಶ್ವರ ದೇವಳದ ಪದ್ಮೇಶ್ವರ ಮತ್ತು ಮಣಿಕರ್ಣಿಕಾ ಘಾಟ್ನ ಮಣಿಕರ್ಣಿಕೇಶ್ವರ ದೇವಾಲಯ. ಪದ್ಮೇಶ್ವರ ಶಾಸನವು ಪದ್ಮೇಶ್ವರನೆನ್ನುವ ಆ ವಿಷ್ಣುದೇವಾಲಯದ ನಿರ್ಮಾಣದ ಬಗ್ಗೆ ಹೇಳುತ್ತದೆ. ಅದು ವಿಶ್ವೇಶ್ವರ ದೇವಳದ ಉತ್ತರದ್ವಾರದ ಬಳಿ ಇದೆ. ಕಟ್ಟಿಸಿದಾತ ಪದ್ಮಸಾಧು. ಶಾಸನ ಹೀಗೆ ಹೇಳುತ್ತದೆ: ಅಯೋಧ್ಯೆಯ ಸಾಧೇಸಿಂಧು ಪುತ್ರ ಸಾಧುನಿಧಿಯ ಪುತ್ರ ಪದ್ಮಸಾಧು. ಕ್ರಿ.ಶ. ೧೩೫೩ರಲ್ಲಿ ಪದ್ಮೇಶ್ವರ ದೇವಾಲಯವನ್ನು ಕಟ್ಟಿಸಿದ. ಪದ್ಮೇಶ್ವರ ಶಾಸನವನ್ನು ಮೊಘಲ್ ಚಕ್ರವರ್ತಿ ಅಕ್ಬರನ ಕಾಲದಲ್ಲಿ ಜಾನ್ಪುರ್ನ ಲಾಲ್ ದರ್ವಾಜಾ ಮಸೀದಿಗೆ ಕೊಂಡೊಯ್ದರು.
೧೩೭೬ರಲ್ಲಿ ಫಿರೋಜ್ಶಾ ತುಘಲಕ್ ಜಾನ್ಪುರದ ಅತಳದೇವಿ ಮಂದಿರವನ್ನು ನಾಶ ಮಾಡಿ, ಆ ಸ್ಥಳದಲ್ಲಿ ಅತಳ ಮಸೀದಿಯನ್ನು ಕಟ್ಟಿಸಿದ. ಅತಳದೇವಿ ಮಂದಿರದ ಸಾಮಗ್ರಿಗಳನ್ನು ಅರ್ಹಾಯ್, ಕಾಂಗರಾ, ಚಾಖಂಬಾ, ಗೋಲಾಘಾಟ್ ಮತ್ತು ಬಕರಿಯಾ ಕುಂಡ್ಗಳಲ್ಲಿ ಮಸೀದಿ ಕಟ್ಟಲು ಬಳಸಲಾಯಿತು. ಜಾನ್ಪುರದಲ್ಲಿ ದೇವಾಲಯವನ್ನು ನಾಶ ಮಾಡಿದ್ದಕ್ಕೆ ಕಾರಣ ಆಗ ಕಾಶಿಯಲ್ಲಿ ಯಾವುದೇ ಮಂದಿರ ಇಲ್ಲದಿದ್ದುದೆಂದು ಭಾವಿಸಲಾಗಿದೆ. ಆಗ ಆತನ ಪ್ರತಿನಿಧಿ ವಾರಾಣಸಿಯಲ್ಲಿ ದೇವಳದ ಸ್ವತ್ತುಗಳನ್ನು ಬಳಸಿಕೊಂಡು ಹಲವು ಮಸೀದಿಗಳನ್ನು ಕಟ್ಟಿಸುತ್ತಿದ್ದ. ಅಂದರೆ ಅದು ಕಾಶಿಯ ಮೂರನೇ ಸಾಮೂಹಿಕ ದೇವಾಲಯ ನಾಶವಿದ್ದಿರಬೇಕು.
ಶಾಸನವು ಮಸೀದಿಗೆ
ಕ್ರಿ.ಶ. ೧೩೯೩ರಲ್ಲಿ ರಾಜ್ಯ ಸ್ಥಾಪನೆ ಮಾಡಿದ ಶರ್ಕಿಗಳು ಗುಪ್ತರ ಕಾಲದ ದೇವಾಲಯಗಳ ಕಲ್ಲಿನ ಕಂಬಗಳನ್ನು ಮಸೀದಿ ಉದ್ಯಾನದ ಆಸನಗಳನ್ನಾಗಿ ಹಾಕಿಸಿದರು. ಪದ್ಮೇಶ್ವರ ದೇವಳದ ಕಲ್ಲುಗಳು ಮತ್ತು ಪದ್ಮೇಶ್ವರ ಶಾಸನ ಜಾನ್ಪುರದ ಲಾಲ್ ದರ್ವಾಜಾ ಮಸೀದಿಯಲ್ಲಿದ್ದವು. ಶರ್ಕಿಗಳು ಫಿರೋಜ್ಶಾ ತುಘಲಕ್ ಆರಂಭಿಸಿದ ಅತಲ ಮಸೀದಿಯನ್ನು ಮುಗಿಸಿದ್ದಲ್ಲದೆ, ಇತರ ಹಲವು ಮಸೀದಿಗಳನ್ನು ಕಟ್ಟಿಸಿದರು. ಎಲ್ಲವಕ್ಕೂ ಬಳಸಿದ್ದು ಕೆಡವಿದ ದೇವಾಲಯಗಳ ಕಲ್ಲು. ಐದರಿಂದ ೧೪ನೇ ಶತಮಾನದವರೆಗಿನ ಕಲ್ಲುಗಳು ಅಲ್ಲಿ ಕಾಣಿಸುತ್ತವೆ. ಒಟ್ಟಿನಲ್ಲಿ ಜಾನ್ಪುರದ ಮಸೀದಿಗಳನ್ನು ಕಟ್ಟಲು ಕಾಶಿ ದೇವಾಲಯಗಳ ಕಲ್ಲನ್ನು ತಂದದ್ದು ಸ್ಪಷ್ಟ.
ಕೊನೆಯ ಗಢವಾಲ ರಾಜ ಜಯಚಂದ್ರ (೧೧೭೫-೯೩) ಜಾನ್ಪುರದಲ್ಲಿ ಅತಲದೇವಿ ಮಂದಿರವನ್ನು ಕಟ್ಟಿಸಿದ. ಶರ್ಕಿ ಸುಲ್ತಾನರು ಅದನ್ನು ಮಸೀದಿಯಾಗಿ ಪರಿವರ್ತಿಸಿದರು.
ಮಸೀದಿಯಲ್ಲಿ ಕಂಡುಬಂದ ಒಂಭತ್ತು ಶಾಸನಗಳು ಹೇಳುವಂತೆ, ಫಿರೋಜ್ಶಾ ತುಘಲಕ್ ೧೩೭೬ರಲ್ಲಿ ದೇವಳವನ್ನು ಮಸೀದಿಯಾಗಿ ಬದಲಾಯಿಸಲು ಆರಂಭಿಸಿದ ಮತ್ತು ಇಬ್ರಾಹಿಂಶಾ ಶರ್ಕಿ ೧೪೦೮ರಲ್ಲಿ ಅದನ್ನು ಪೂರ್ಣಗೊಳಿಸಿದ. ವಿಜಯಚಂದ್ರ ಗಢವಾಲ ಕಟ್ಟಿಸಿದ ಅನೇಕ ದೇವಾಲಯಗಳ ಜಾಗದಲ್ಲಿ ಇಬ್ರಾಹಿಂಶಾ ಮಸೀದಿಗಳನ್ನು ನಿರ್ಮಿಸಿದ. ಅದರಲ್ಲಿ ಖಾಲಿಸ್ ಮುಖ್ಲಿಸ್ ೧೪೧೭ರಲ್ಲಿ ಕಟ್ಟಿಸಿದ ಮಸೀದಿಯೂ ಒಂದು. ಜಂಝರಿ ಮಸೀದಿ ಕೂಡ ಒಂದು ಪ್ರಸಿದ್ಧ ದೇವಾಲಯದ ಜಾಗದಲ್ಲೇ ನಿರ್ಮಿಸಿದ್ದಾಗಿತ್ತು. ಹಲವು ಸಲ ದೇವಾಲಯಗಳನ್ನು ನಾಶ ಮಾಡಿದಾಗ ಹಿಂದುಗಳು ಆ ಅವಶೇಷಗಳ ಜಾಗದಲ್ಲೇ ಪ್ರಾರ್ಥನೆ, ಪೂಜೆ ಮಾಡುತ್ತಿದ್ದರು. ಅದಕ್ಕಾಗಿ ಅದೇ ಜಾಗದಲ್ಲಿ ಮಸೀದಿ ಕಟ್ಟಿ ಶ್ರದ್ಧಾಳು ಭಕ್ತರಿಗೆ ಅಲ್ಲಿಗೆ ಪ್ರವೇಶವೇ ಇಲ್ಲದಂತೆ ಮಾಡಲಾಗುತ್ತಿತ್ತು.
ಅಲ್ಲಾವುದ್ದೀನ್ ಖಿಲ್ಜಿ ಮೊದಲಿಗೆ ಕಾಶಿಗೆ ದಾಳಿ ಮಾಡಲಿಲ್ಲ. ಮುಂದೆ ಕ್ರಮೇಣ ಹಲವು ದೇವಳಗಳನ್ನು ಕೆಡವಿ, ಅಲ್ಲಿ ಮಸೀದಿಗಳನ್ನು ಕಟ್ಟಿಸಿದ. ಅವನ ಸಾವಿನ ನಂತರ ಅವನ ಆದೇಶದಂತೆ ನಾಶ ಮಾಡಿದ ಹಲವು ದೇವಾಲಯಗಳ ಪುನರ್ನಿರ್ಮಾಣ ನಡೆಯಿತು; ಕೆಲವು ಹೊಸ ಸ್ಥಳಗಳಲ್ಲೂ ನಿರ್ಮಾಣವಾದವು. ಬಕರಿಯಾ ಕುಂಡದ ಪುನರ್ನಿರ್ಮಾಣವು ಅದೇ ಹೊತ್ತಿಗೆ ಆಯಿತು.
ಶರ್ಕಿಗಳ ಪತನದ ಅನಂತರ ಕಾಶಿಗೆ ಸ್ವಲ್ಪಮಟ್ಟಿಗೆ ಸಹಜ ಉಸಿರಾಟದ ಕಾಲ ಬಂದಂತಾಯಿತು. ದೇವಾಲಯಗಳನ್ನು ಮತ್ತೆ ಕಟ್ಟಿಸಿದರು. ಆದರೆ ಪೂರ್ತಿ ವೈಭವ ಮರಳಲಿಲ್ಲ. ಸುಂದರ ದೇವಾಲಯಗಳನ್ನು ಕಟ್ಟಿಸುವುದು ಅಪ್ರಯೋಜಕ ಎನ್ನುವುದು ಕಾಶಿಯ ಜನರಿಗೆ ಅರ್ಥವಾಗಿತ್ತು. ಏಕೆಂದರೆ ಮೂರ್ತಿಭಂಜಕರ ಇನ್ನೊಂದು ದಾಳಿ ಯಾವಾಗ ಎಂದು ಯಾರಿಗೂ ತಿಳಿದಿರಲಿಲ್ಲ. ಪದ್ಮೇಶ್ವರ ಶಾಸನವನ್ನು ಜಾನ್ಪುರದ ಲಾಲ್ ದರ್ವಾಜಾ ಮಸೀದಿಗೆ ಸಾಗಿಸಿದ್ದು ಅಕ್ಬರನ ಕಾಲದಲ್ಲಿ. ಆ ಹೊತ್ತಿಗೆ ವಿಶ್ವೇಶ್ವರ ದೇವಾಲಯವನ್ನು ನಾಶ ಮಾಡಿದ್ದರು. ಅದರ ಕಲ್ಲುಗಳನ್ನು ಬಯಸಿದ್ ಬಯಾತ್ ಬಳಸಿಕೊಂಡಿದ್ದ. ಆತ ತನ್ನ ನೆನಪಿನ ಗ್ರಂಥ ತಾಜಿರಾ-ಹುಮಾಯೂನ್-ಓ-ಅಕ್ಬರ್ನಲ್ಲಿ ಹೀಗೆ ಹೇಳಿದ್ದಾನೆ: ಆ ಹೊತ್ತಿನಲ್ಲಿ (೧೫೭೦-೭೧) ಒಂದು ವಿಗ್ರಹದ ದೇವಾಲಯವಿತ್ತು. ಕಾಲಕ್ರಮೇಣ ಅಲ್ಲಿಗೆ ಜನ ಬರುತ್ತಿರಲಿಲ್ಲ. ಅದು ಮಾರುಕಟ್ಟೆಯಾಗಿತ್ತು. ನಾನು ಆ ಜಾಗವನ್ನು ಆಕ್ರಮಿಸಿ ಅಲ್ಲಿ ವಿದ್ವಾಂಸರಿಗಾಗಿ ಒಂದು ಮದರಸಾವನ್ನು ಸ್ಥಾಪಿಸಿದೆ. ಕೆಲವು ದಿನಗಳಲ್ಲಿ ಅದು ಪೂರ್ಣವಾಯಿತು. ಅದು ಮುಗಿಯುವ ಹೊತ್ತಿಗೆ ರಾಜಾ ತೋಡರಮಲ್ಲ ನದಿಯಲ್ಲಿ ಸ್ನಾನ ಮಾಡಿ ಬಂದ. ಆ ದೇವಾಲಯದಲ್ಲಿ ೧೨ ಗಜ (೩೨ ಅಡಿ) ಎತ್ತರದ ಒಂದು ಸ್ತಂಭ ಇತ್ತು. ಅದರ ಮೇಲೆ ಹಿಂದುಗಳ ಒಂದು ಕಾಲಮಾನವನ್ನು ಕೆತ್ತಿತ್ತು. ಸುಮಾರು ೭೦೦ ವರ್ಷಗಳ ಹಿಂದೆ ಅದನ್ನು ಸ್ಥಾಪಿಸಿದ್ದೆಂದು ಹೇಳಿತ್ತು. ಬಯಸಿದ್ ಅದನ್ನು ಎರಡು ತುಂಡು ಮಾಡಿ, ಎರಡರಲ್ಲಿ ತಲಾ ನಾಲ್ಕರಂತೆ ಒಟ್ಟು ಎಂಟು ತುಂಡು ಮಾಡಿದ. ಕಂಬದ ಆರು ತುಂಡುಗಳನ್ನು ಮದರಸಾದ ಮಸೀದಿಯ ಕಂಬ ಮತ್ತು ಚಪ್ಪಡಿಗೆ ಬಳಸಿಕೊಳ್ಳಲಾಯಿತು. ಉಳಿದ ಎರಡು ತುಂಡುಗಳನ್ನು ಖ್ವಾಜಾ (ದೋಸ್ತ್) ಮುಹಮ್ಮದ್ (ಖಾನ್ ಖಾನನ್ನ ಬಕ್ಷಿ) ತೆಗೆದುಕೊಂಡು ಹೋಗಿ ಜಾನ್ಪುರ ಮಸೀದಿಯ ಬಾಗಿಲಿಗೆ ಹಾಸಿದ.
ಲಾಲ್ ದರ್ವಾಜಾ ಮಸೀದಿಯನ್ನು ಸುಲ್ತಾನ್ ಮಹಮ್ಮದ್ ಶರ್ಕಿಯ ರಾಣಿ ಬೀಬಿ ರಜಿಯಾ ಕ್ರಿ.ಶ. ೧೪೪೭ರಲ್ಲಿ ಕಟ್ಟಿಸಿದಳು; ಪದ್ಮೇಶ್ವರ ಶಾಸನವನ್ನು ಅಲ್ಲಿಗೆ ತಂದು ಹಾಕಲಾಗಿತ್ತು. ಮಣಿಕರ್ಣಿಕೇಶ್ವರ ಘಾಟ್ನ ಶಿಲಾಶಾಸನವು (ಕ್ರಿ.ಶ. ೧೩೦೩) ಇಬ್ಬರು ಸೋದರರ ಬಗ್ಗೆ ಹೇಳುತ್ತಾ ತಮ್ಮ ವೀರೇಶ್ವರ ಅಣ್ಣನ ಹಾಗೆ ಎಲ್ಲ ರಾಜರನ್ನು ಜಯಸಿದ; ಮಣಿಕರ್ಣಿಕೇಶ್ವರನ (ಶಿವ) ದೇವಸ್ಥಾನ ಕಟ್ಟಿಸಿದ್ದು ಅವನೇ ಎಂದು ತಿಳಿಸುತ್ತದೆ.
ಸಿಕಂದರ್ ಲೋದಿ ದಾಳಿ
ಕ್ರಿ.ಶ. ೧೪೯೬ರಲ್ಲಿ ಕಾಶಿ ಇನ್ನೊಬ್ಬ ಮುಸ್ಲಿಂ ದೊರೆಯಿಂದ ಆಘಾತಕ್ಕೆ ಗುರಿಯಾಯಿತು; ಆಗಿನ ದಾಳಿಕೋರ ಸಿಕಂದರ್ ಲೋದಿ. ಸಿಂಹಾಸನ ಏರುತ್ತಲೇ ಆತ ವಾರಾಣಸಿಯ ಎಲ್ಲ ಹಿಂದೂ ದೇವಾಲಯಗಳ ನಾಶಕ್ಕೆ ಆದೇಶ ಹೊರಡಿಸಿದ. ಕಾಶಿಯು ದೇವಾಲಯಗಳ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿತು. ಇನ್ನು ದೇವಾಲಯಗಳ ನಿರ್ಮಾಣ ಬೇಡವೆಂದು ಹಿಂದುಗಳು ನಿರ್ಧರಿಸಿದರು. ೮೯ ವರ್ಷಗಳಷ್ಟು ದೀರ್ಘಕಾಲ ಹಾಗೆಯೇ ಇತ್ತು. ವಿಶ್ವನಾಥ ದೇವಳ ಸೇರಿದಂತೆ ಯಾವುದೂ ಇರಲಿಲ್ಲ. ಜನ ಅವಶೇಷಗಳಿಗೇ ಪ್ರಾರ್ಥನೆ (ಗೌರವ) ಸಲ್ಲಿಸುತ್ತಿದ್ದರು.
‘ಜಾಗದ ಧರ್ಮ ಪಾಲಿಸಿ’
೧೬ನೇ ಶತಮಾನದ ವಿದ್ವಾಂಸ, ಧಾರ್ಮಿಕ ನೇತಾರ ನಾರಾಯಣಭಟ್ಟ ವಿಶ್ವನಾಥ ದೇವಾಲಯದ ಅವಶೇಷಗಳನ್ನು ಕಂಡು ನೋವಿನಿಂದ ತನ್ನ ಕೃತಿ ‘ತ್ರಿಸ್ಥಲ ಸೇತು’ವಿನಲ್ಲಿ ಶ್ರದ್ಧಾಳು ಭಕ್ತರಿಗೆ ಹೀಗೆ ಸಾಂತ್ವನ ಹೇಳಿದ: “ಇಲ್ಲಿನ ವಿಶ್ವೇಶ್ವರ ಲಿಂಗವನ್ನು (ಈ ಕಾಲದ ಕಷ್ಟದ ಕಾರಣದಿಂದ) ಯಾರಾದರೂ ಬೇರೆ ಕಡೆಗೆ ಒಯ್ದಿದ್ದರೆ, ಬೇರೆಯದನ್ನು ಇಲ್ಲಿಗೆ ತಂದು ಪ್ರತಿಷ್ಠಾಪನೆ ಮಾಡಿದ್ದರೆ, ಆ ಸ್ಥಳದಲ್ಲಿ ಏನಿದೆಯೋ ಅದನ್ನು ಪೂಜಿಸಬೇಕು; ಮತ್ತು ವಿದೇಶೀ ಆಳ್ವಿಕೆದಾರರ ಕಾರಣದಿಂದಾಗಿ ಆ ಜಾಗದಲ್ಲಿ ಲಿಂಗವೇ ಇಲ್ಲವಾಗಿದ್ದರೆ ಆ ಜಾಗದ ಧರ್ಮವನ್ನು ಪಾಲಿಸಲೇಬೇಕು; ಸುತ್ತು ಬರುವುದು, ನಿತ್ಯಯಾತ್ರೆಯನ್ನು ನಡೆಸುತ್ತಿರಬೇಕು.” ಬಹುಶಃ ಇಂತಹ ವಿಶ್ವಾಸವೇ ಕಾಶಿಯನ್ನು ಆ ಮಟ್ಟಕ್ಕೆ ಏರಿಸಿರಬೇಕು ಅನ್ನಿಸುತ್ತದೆ.
ಶಿಕ್ಷಣ, ವಿದ್ವತ್ತಿಗೆ ಪೆಟ್ಟು
ದೇವಾಲಯಗಳ ಕೇಂದ್ರವಾಗಿದ್ದಂತೆಯೇ ಕಾಶಿ ವಿದ್ವತ್ತೆ ಮತ್ತು ಶಿಕ್ಷಣವ್ಯವಸ್ಥೆಗಳ ಕೇಂದ್ರವೂ ಆಗಿತ್ತು. ಈ ದಾಳಿಗಳ ನಡುವೆ ಅಂದಿನ ಶಿಕ್ಷಣವ್ಯವಸ್ಥೆ ಏನಾಯಿತೋ ಗೊತ್ತಿಲ್ಲ. ದೇವಾಲಯ ಬಿದ್ದಾಗ ಅದಕ್ಕೆ ಪೆಟ್ಟು ಬಿದ್ದೇ ಇರುತ್ತಿತ್ತು. ಕೆಲವು ಗುರುಗಳು ದೇವಾಲಯಗಳಿಗೆ ಹೊರತಾಗಿ ಸ್ವತಃ ಕಲಿಸುತ್ತಿದ್ದರಾದರೂ ಅವರಿಗೂ ಕಷ್ಟವಾಗಿತ್ತು. ಬಹಳಷ್ಟು ವಿದ್ವಾಂಸರು ದಕ್ಷಿಣಭಾರತಕ್ಕೆ ಓಡಿಹೋದರು. ಐವತ್ತು ವರ್ಷಗಳ ಬಳಿಕ ಮಹಾರಾಷ್ಟ್ರ ಮತ್ತು ಕರ್ನಾಟಕದ ವಿದ್ವಾಂಸರು ಕಾಶಿಯಲ್ಲಿ ಸಂಸ್ಕೃತಬೋಧನೆಯ ಪುನರುಜ್ಜೀವನವನ್ನು ಮಾಡಿದರು. ಹಿಂದೆ ವಿದ್ವಾಂಸರು ಮುಸ್ಲಿಂ ಪ್ರಾಬಲ್ಯದ ಜಾಗ ಬಿಟ್ಟು ಕಾಶ್ಮೀರ ಮತ್ತು ಕಾಶಿಗೆ ಓಡಿಹೋದುದಿತ್ತು. ಈಗ ದಕ್ಷಿಣಭಾರತಕ್ಕೆ ಅಥವಾ ಹಳ್ಳಿಯ ಮೂಲೆಗಳಿಗೆ ಹೋದರು. ಇದರಿಂದ ಕಾಶಿಯಲ್ಲಿ ಶಿಕ್ಷಣ ಕುಂದಿತ್ತು. ಈ ನಡುವೆ ಮುಸ್ಲಿಂ ಅಧಿಕಾರ ದಕ್ಷಿಣಕ್ಕೂ ವಿಸ್ತರಿಸಿದ ಕಾರಣ ಕಾಶಿಯ ವಿದ್ವಾಂಸರು ದಕ್ಷಿಣಕ್ಕೆ ವಲಸೆ ಹೋಗುವುದನ್ನು ನಿಲ್ಲಿಸಬೇಕಾಯಿತು.
ಕ್ರಿ.ಶ. ೧೫೬೭ರಲ್ಲಿ ಚಕ್ರವರ್ತಿ ಅಕ್ಬರ ಕಾಶಿಯನ್ನು ಎರಡನೇ ಸಲ ಗೆದ್ದ; ಮತ್ತು ಲೂಟಿ ಮಾಡಿದ. ಮತ್ತೆ ಸ್ವಲ್ಪ ಕಾಲ ಶಾಂತಿಯಿತ್ತು. ಅಕ್ಬರನ ಆಸ್ಥಾನದಲ್ಲಿದ್ದ ರಜಪೂತ ರಾಜರಾದ ಮಾನಸಿಂಗ್ ಮತ್ತು ರಾಜಾ ತೋಡರಮಲ್ಲ ವಾರಾಣಸಿಯ ಜೀರ್ಣೋದ್ಧಾರಕ್ಕೆ ಶ್ರಮಿಸಿದರು; ದೇವಾಲಯ ಮತ್ತು ಘಾಟ್ಗಳ ದುರಸ್ತಿ, ಪುನಾರಚನೆಗಳಲ್ಲಿ ಭಾಗಿಯಾದರು. ದೇವಳದ ಸಮೀಪದ ಹಳೆಯ ಆದಿವಿಶ್ವೇಶ್ವರ ಘಾಟನ್ನು ಬುಂದಿಯ ರಾಜ ೧೫೮೦ರಲ್ಲಿ ಭಾಗಶಃ ಕಲ್ಲಿನಿಂದ ಕಟ್ಟಿಸಿದ. ಅದಕ್ಕೆ ಬುಂದಿ ಪರ್ಕೋಟಾ ಘಾಟ್ ಎಂದು ಹೆಸರಿಸಿದರು.
ಕ್ರಿ.ಶ. ೧೫೮೫ರಲ್ಲಿ ವಿಶ್ವೇಶ್ವರ ಮತ್ತು ಬಿಂದುಮಾಧವ ದೇವಾಲಯಗಳನ್ನು ಸ್ವಲ್ಪ ದೊಡ್ಡ ರೀತಿಯಲ್ಲೇ ಪುನರ್ನಿರ್ಮಾಣ ಮಾಡಲಾಯಿತು. ರಾಜಾ ತೋಡರಮಲ್ಲ ಮತ್ತು ಅಂಬರ್ನ ಮಹಾರಾಜ ಅದಕ್ಕೆ ಕೈಜೋಡಿಸಿದ್ದರೆ ಈಗಾಗಲೇ ಹೇಳಿದ ನಾರಾಯಣಭಟ್ಟನ ಸಲಹೆ ಅದಕ್ಕಿತ್ತು. ಸುಮಾರು ೧೦೦ ಮೀ. ದಕ್ಷಿಣಕ್ಕೆ ಅದನ್ನು ನಿರ್ಮಿಸಲಾಗಿತ್ತು. ಜಾನ್ಪುರ ಪ್ರದೇಶದ ಮೊಘಲ್ ಅಧಿಕಾರಿಯಾಗಿದ್ದ ತೋಡರಮಲ್ಲನ ಮಗ ಮತ್ತು ಬೀರ್ಸಿಂಗ್ ಬುಂದೇಲ ಕೂಡ ಆ ಕಾರ್ಯದಲ್ಲಿ ಭಾಗಿಯಾಗಿದ್ದರು. ಹೊಸ ದೇವಳದಲ್ಲಿ ಶಿವಲಿಂಗದ ನವೀಕರಣಕ್ಕೆ ನಾರಾಯಣಭಟ್ಟ ಒಂದು ವಿಶೇಷ ಪ್ರಯೋಗವನ್ನು ಮಾಡಿದ್ದ. ಸ್ಕಾಂದ ಪುರಾಣದ ಕಾಶೀಖಂಡದಲ್ಲಿ ಹೇಳಿದ ರೀತಿಯಲ್ಲಿ ಶಿಲುಬೆಯಂತೆ (Crucifix) ವಿನ್ಯಾಸಗೊಳಿಸಲಾಗಿತ್ತು.
ಪರಮಶತ್ರು ಔರಂಗಜೇಬ
ವಾರಾಣಸಿಯ ಕೊನೆಯ ಸುತ್ತಿನ ಅಪವಿತ್ರತೆ ಕಾರ್ಯದ ಅಧಿಪತಿ ಮೊಘಲ್ ದೊರೆ ಔರಂಗಜೇಬನೇ ಸರಿ. ೧೬೬೮ರಲ್ಲಿ ಸಿಂಹಾಸನವನ್ನು ಏರಿದ ಆತ ಮರುವರ್ಷವೇ ಕಾಶಿನಗರ ಮಧ್ಯದ ಧಾರಾನಗರದಲ್ಲಿದ್ದ ಪ್ರಾಚೀನ ಕೃತ್ತಿವಾಸೇಶ್ವರ ದೇವಾಲಯವನ್ನು ಉರುಳಿಸಿ ಅಲ್ಲಿ ಮಸೀದಿಯನ್ನು ಕಟ್ಟಿಸಿದ. ಅನಂತರದ ವರ್ಷ ವಿಶ್ವೇಶ್ವರ ದೇವಾಲಯ, ಬಿಂದುಮಾಧವ ದೇವಾಲಯಗಳನ್ನು ಉರುಳಿಸಿ ಅಲ್ಲಿ ಕೂಡ ಮಸೀದಿ ನಿರ್ಮಿಸಿದ. ಹೀಗೆ ಮೂರು ಕಡೆ ದೇವಾಲಯ ಹೋಗಿ ಮಸೀದಿಗಳು ಬಂದವು. ಬಿಂದುಮಾಧವ ದೇವಳದ ಜಾಗ ಪಂಚಗಂಗಾ ಘಾಟ್ನಲ್ಲಿ ಧಾರಾಹರ ಮಸೀದಿ ಮೇಲೆದ್ದಿತು. ಅದರ ಎರಡು ಮೀನಾರ್ಗಳು ತುಂಬ ಎತ್ತರವಿದ್ದು ಅದರ ಮೇಲೆ ಹೋಗಿ ಇಡೀ ನಗರವನ್ನು ನೋಡಬಹುದಿತ್ತು. ಕೃತ್ತಿವಾಸೇಶ್ವರದ ಜಾಗದಲ್ಲಿ ಅಲಂಗಿರ್ ಮಸೀದಿಯು ತಲೆ ಎತ್ತಿತು; ವಿಶ್ವೇಶ್ವರ ದೇವಳದ ಜಾಗದಲ್ಲಿ ಗ್ಯಾನವಾಪಿ ಮಸೀದಿ. ಇವುಗಳಿಗೆ ದೇವಾಲಯಗಳ ಕಂಬ ಮುಂತಾದ ಸಾಮಗ್ರಿಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಯಿತು. ಓಂಕಾರ, ಮಹಾದೇವ, ಮಧ್ಯಮೇಶ್ವರ, ಕಾಲಭೈರವ ಮುಂತಾದ ಅಸಂಖ್ಯ ದೇವಳಗಳನ್ನು ಔರಂಗಜೇಬ ನೆಲಸಮ ಮಾಡಿದ; ಹೆಚ್ಚಿನ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಿದ. ಕ್ಷೇತ್ರದ ಹೆಸರನ್ನು ಮಹಮ್ಮದಾಬಾದ್ ಎಂದು ಬದಲಿಸಿದ; ಆ ಹೆಸರಿನಲ್ಲಿ ನಾಣ್ಯಗಳನ್ನು ಮುದ್ರಿಸುವ ಮೂಲಕ ಕಾಶಿಯ ಅಸ್ತಿತ್ವವನ್ನೇ ಅಳಿಸಿಹಾಕಲು ಯತ್ನಿಸಿದ. ೧೮೫೨ರಿಂದ ೧೮೮೦ರಲ್ಲಿ ನಿಧನ ಹೊಂದುವ ತನಕ ಬನಾರಸ್ನಲ್ಲಿದ್ದ ರೆಶೆರ್ರಿಂಗ್ ಹೀಗೆ ಹೇಳಿದ್ದರು: ಭಾರತದಲ್ಲಿ ಮಹಮ್ಮದೀಯ ಆಳ್ವಿಕೆಯ ಎದ್ದುಕಾಣುವ ಸ್ವರೂಪವೆಂದರೆ, ಪರಿಚಿತ ಪ್ರಾಚೀನತೆ ಇರುವಂತಹ ಬನಾರಸ್ನ ಬಹುತೇಕ ಎಲ್ಲ ಕಟ್ಟಡಗಳನ್ನು ಮುಸಲ್ಮಾನರು ಆಕ್ರಮಿಸಿದರು; ಮತ್ತು ಅವುಗಳನ್ನು ಮಸೀದಿ, ಮಾಸೋಲಿಯಮ್ ಅಥವಾ ದರ್ಗಾಗಳಾಗಿ ಪರಿವರ್ತಿಸಿದರು.
ಕೃತ್ತಿವಾಸೇಶ್ವರ ದೇವಾಲಯವು ನಾಲ್ಕು ಬಾರಿ ಮರುನಿರ್ಮಾಣಗೊಂಡಿತ್ತು; ನಾಶ ಮಾಡಿದಂತೆಲ್ಲ ಜನ ತಿರುಗಿಬಿದ್ದು ಅವಕಾಶ ದೊರೆಯುತ್ತಲೇ ಮತ್ತೆ ಕಟ್ಟಿಸುತ್ತಿದ್ದರು. ಔರಂಗಜೇಬನು ಅದರ ಜಾಗದಲ್ಲಿ ಅಲಂಗಿರ್ ಮಸೀದಿಯನ್ನು ನಿರ್ಮಿಸಿದ ಒಂದು, ಎರಡು ಮತ್ತು ಮೂರನೇ ಬಾರಿ ಮರುನಿರ್ಮಾಣ ಆಗುವಾಗ ಆ ನಿವೇಶನದಲ್ಲಿ ಒಂದು ಸಣ್ಣ ಕೆರೆ ಇತ್ತು. ಮಹಾಶಿವರಾತ್ರಿಯ ದಿನ ಹಿಂದುಗಳು ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಅವರು ಅಲ್ಲಿ ಅರ್ಪಿಸಿದ್ದನ್ನು ಮಸೀದಿಯ ಮುತವಲ್ಲಿ ತೆಗೆದುಕೊಂಡು ಹೋಗುತ್ತಿದ್ದ. ಅಲ್ಲಿಂದ ಸ್ವಲ್ಪ ದೂರದಲ್ಲಿ ೧೯ನೇ ಶತಮಾನದ ಬನಾರಸ್ನ ರಾಜ ರಾಜಾ ಪತ್ನಿಮಾಲ್ ಸಣ್ಣ ಮಂದಿರವನ್ನು ಕಟ್ಟಿಸಿದ.
ಶಿಕ್ಷಣಕ್ಕಾಗಿ ಕಾಶಿಗೆ ಹೋಗದಂತೆ ಔರಂಗಜೇಬ ಆದೇಶ ಹೊರಡಿಸಿದರೂ ಮುಸ್ಲಿಮರು ಸೇರಿದಂತೆ ಜನ ಅದಕ್ಕೆ ಸೊಪ್ಪುಹಾಕುತ್ತಿರಲಿಲ್ಲ. ಸಿಟ್ಟುಗೊಂಡ ಆತ ಹಿಂದುಗಳ ಶಾಲೆ ಮತ್ತು ದೇವಸ್ಥಾನಗಳನ್ನು ಉರುಳಿಸುವಂತೆ ಪ್ರಾಂತೀಯ ಗವರ್ನರ್ಗಳಿಗೆ ಸೂಚನೆ ನೀಡಿದ. ತುಂಬ ಉತ್ಸಾಹಿತರಾದ ಅವರು ವೇಣೀಮಾಧವ ಮುಂತಾದ ದೇವಳಗಳನ್ನು ಕೆಡವಿ ಆ ಜಾಗದಲ್ಲಿ ಮಸೀದಿಗಳನ್ನು ಕಟ್ಟಿಸಿದರು.
ಮತ್ತೆ ಮತ್ತೆ ಮೇಲೆದ್ದ ವಿಶ್ವನಾಥ
ಮಹಾನ್ ವಿಶ್ವನಾಥ ದೇವಳವನ್ನು ೧೧೯೪ರಿಂದ ಆರಂಭಿಸಿ ಕನಿಷ್ಠ ಮೂರು ಬಾರಿ ಸಂಪೂರ್ಣ ನೆಲಸಮ ಮಾಡಲಾಯಿತು. ಕುತ್ಬುದ್ದೀನ್ ಐಬಕ್ ನಾಶ ಮಾಡಿದಾಗ ಕೆಲ ಸಮಯದ ಬಳಿಕ ಬೀಬಿ ರಜಿಯಾ ಅಲ್ಲೊಂದು ಮಸೀದಿಯನ್ನು ಕಟ್ಟಿಸಿದಳು. ವಿಶ್ವೇಶ್ವರ ದೇವಳದ ಮುಂದಿನ ದಾಳೀಯ ಇತಿಹಾಸವನ್ನು ದಿಟ್ಟತನ ಮತ್ತು ಮತಾಂಧತೆ(bigotry)ಯದ್ದೆಂದು ವರ್ಣಿಸಲಾಗುತ್ತದೆ. ಕಾಶಿ ವಿಶ್ವನಾಥ ದೇವಳವು ಹಿಂದೂ ಪ್ರತಿರೋಧದ ಪ್ರಮುಖ ಸಂಕೇತವಾಯಿತು. ಮುಸ್ಲಿಂ ದಾಳಿಕೋರರು ಮಂದಿರವನ್ನು ನಾಶ ಮಾಡಿದಂತೆಲ್ಲ ಮತ್ತೆ ಮತ್ತೆ ಅಲ್ಲಿ ಪುನರ್ನಿರ್ಮಾಣ ನಡೆಯಿತು.
ಬಹುಶಃ ೧೪ನೇ ಶತಮಾನದಲ್ಲಿ ರಚಿಸಿದ್ದೆಂದು ನಂಬಲಾದ ಕಾಶೀಖಂಡದಲ್ಲಿ ಶಿವ ಬಹುಕಾಲದ ಅಜ್ಞಾತವಾಸದ ಅನಂತರ ತಾನು ನಗರಕ್ಕೆ (ಕಾಶಿ) ಮರಳಿದ್ದಾಗಿ ಹೇಳುತ್ತಾನೆ. ಈ ಗ್ರಂಥವು ಕಾಶಿಯ ವಿಶ್ವೇಶ್ವರ ಲಿಂಗವನ್ನು ಲಿಂಗಗಳ ಲಿಂಗ ಎಂದು ಬಣ್ಣಿಸುತ್ತದೆ. ೧೮ನೇ ಶತಮಾನದ ಪೂರ್ವಾರ್ಧದಲ್ಲಿ ಬೀಬಿ ರಜಿಯಾ ಕಟ್ಟಿಸಿದ ಮಸೀದಿಯ ಪಕ್ಕ ಒಂದು ವಿಶ್ವನಾಥ ಮಂದಿರವನ್ನು ಕಟ್ಟಿಸಲಾಯಿತು. ಮಹಾರಾಷ್ಟ್ರದ ಓರ್ವ ಪೇಶ್ವೆ ಅಥವಾ ಅಂಬೇರ್ನ ಸವಾಯಿ ಜೈಸಿಂಗ್ ಅದನ್ನು ಕಟ್ಟಿಸಿರಬೇಕು. ಅದನ್ನು ಆದಿವಿಶ್ವೇಶ್ವರ ಮಂದಿರವೆಂದು ಕರೆದರು. ಅಂದರೆ ಅದು ಮೂಲದೇವಳದ ಜಾಗವೆಂದು ನಂಬಬಹುದು. ವಿಶ್ವೇಶ್ವರ ದೇವಳದ ಲಿಂಗ ಇರುವ ಪೀಠ ಒಬ್ಬ ರಜಪೂತ ಅರಸನಿಗೆ ಓರ್ವ ಮೊಘಲ್ ದೊರೆಯಿಂದ ಕೊಡುಗೆಯಾಗಿ ಬಂದಿತ್ತೆಂದು ಪರಂಪರೆಯಲ್ಲಿ ಉಲ್ಲೇಖವಿದೆ. ಹೊರಗಿನಿಂದ ನೋಡಿದರೆ ಆ ಮಂದಿರವು ಮುಸ್ಲಿಮರ ಗೋರಿಯಂತೆ ಕಾಣಿಸುತ್ತಿತ್ತು. ಬಹುಶಃ ರಕ್ಷಣೆಗಾಗಿ ಹಾಗೆ ಮಾಡಿದ್ದರು. ರಚನೆಯನ್ನು ನೋಡಿದರೆ ಅಲ್ಲಿ ಹಿಂದೆ ವಿಶ್ವೇಶ್ವರ ಲಿಂಗಕ್ಕೆ ಜಾಗವಿತ್ತು ಎನಿಸುತ್ತದೆ. ದೇವಳದ ಜಾಗವನ್ನು ರಜಿಯಾ ಕಟ್ಟಿಸಿದ ಮಸೀದಿ ಆಕ್ರಮಿಸಿಕೊಂಡ ಕಾರಣ ವಿಶ್ವೇಶ್ವರ ಲಿಂಗವನ್ನು ಕೆಲಕಾಲ ಅವಿಮುಕ್ತೇಶ್ವರ ದೇವಳದ ಸಂಕೀರ್ಣದಲ್ಲಿ ಇಡಲಾಯಿತು. ಆ ಸಂಕೀರ್ಣವು ವಿಶ್ವನಾಥ ದೇವಾಲಯವಿದ್ದ ಮಣ್ಣಿನರಾಶಿಯ ಪಕ್ಕದಲ್ಲೇ ಇತ್ತು. ಅವಿಮುಕ್ತೇಶ್ವರನನ್ನು ಸ್ವಲ್ಪ ಉತ್ತರಕ್ಕೆ ಸ್ಥಳಾಂತರಿಸಿ, ಹಿಂದಿನ ದೇವಳ ಮತ್ತು ಗ್ಯಾನವಾಪಿ ಬಾವಿಯ ನಡುವೆ ವಿಶ್ವೇಶ್ವರನಿಗೆ ಜಾಗ ಮಾಡಿಕೊಡಲಾಯಿತು. ಅಲ್ಲೊಂದು ದೊಡ್ಡ ಕಟ್ಟಡ ನಿರ್ಮಿಸಿದರು. ಇನ್ನೊಮ್ಮೆ ಮೂರ್ತಿಭಂಜಕರು ದಾಳಿ ನಡೆಸಿದಾಗ ಅದನ್ನು ಉರುಳಿಸಿದರು. ಅವಿಮುಕ್ತೇಶ್ವರ ಗುಡಿಯನ್ನು ನಾಶ ಮಾಡಲಾಗಿತ್ತು.
ವಿಶ್ವೇಶ್ವರ ದೇವಳದ ಜಾಗವನ್ನು ರಜಿಯಾ ಕಟ್ಟಿಸಿದ ಮಸೀದಿಯು ಆಕ್ರಮಿಸಿದ ಕಾರಣ ಅವಿಮುಕ್ತೇಶ್ವರದ ಜಾಗದಲ್ಲಿ ಹೊಸ ಮಂದಿರ ನಿರ್ಮಿಸಲು ಹಿಂದುಗಳು ನಿರ್ಧರಿಸಿದರು; ಅಲ್ಲಿಯ ದೇವರನ್ನು ವಿಶ್ವೇಶ್ವರ ಎಂದು ಕರೆದರು. ಅವಿಮುಕ್ತೇಶ್ವರ ಹೋಗಿ ಅದು ವಿಶ್ವೇಶ್ವರನ ಇನ್ನೊಂದು ಹೆಸರೆಂದು ಪರಿಗಣಿತವಾಯಿತು. ಧಾರ್ಮಿಕ ನೇತಾರರು ಕೂಡ ಅವೆರಡು ಒಂದೇ ಲಿಂಗದ ಎರಡು ಹೆಸರೆಂದು ತಿಳಿದರು. ಅನಂತರ ‘ಕಾಶೀಖಂಡ’ದ ಪ್ರಕಾರ ಎರಡು ಲಿಂಗ ಒಂದೇ ಅಲ್ಲ; ವಿಶ್ವೇಶ್ವರ ಅವಿಮುಕ್ತೇಶ್ವರನ ಪೂಜೆ ಮಾಡಿದ್ದ – ಎಂಬುದು ಅರಿವಿಗೆ ಬಂದ ಬಳಿಕ ಅವೆರಡು ಪ್ರತ್ಯೇಕವೆಂದು ತಿಳಿದು, ವಿಶ್ವನಾಥ ದೇವಳದ ಆಗ್ನೇಯ ಮೂಲೆಯಲ್ಲಿ ಅವಿಮುಕ್ತೇಶ್ವರನ ಸಣ್ಣ ಗುಡಿಯನ್ನು ಕಟ್ಟಿಸಿದರು. ಮುಂದಿನ ಏರುಪೇರುಗಳಿಂದಾಗಿ ಅವಿಮುಕ್ತೇಶ್ವರನಿಗೆ ಈಗ ಉಳಿದಿರುವುದೆಂದರೆ, ಗ್ಯಾನವಾಪಿ ಮಸೀದಿಯ ಉತ್ತರದ ಮೂರು ಮುಸ್ಲಿಂ ಗೋರಿಗಳ ನಡುವೆ ಅಡಗಿರುವ ಒಂದು ಹಳೆಯ ಕಲ್ಲಿನ ತುಂಡು ಮಾತ್ರ. ಪ್ರತಿವರ್ಷ ಶಿವರಾತ್ರಿಯ ದಿನ ಅದರ ಮೇಲೆ ಒಂದಿಷ್ಟು ಹೂಗಳನ್ನು ಅರ್ಪಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಇಂದಿನ ವಿಶ್ವನಾಥ ದೇವಾಲಯದ ಒಂದು ಮೂಲೆಯಲ್ಲಿ ಅವಿಮುಕ್ತೇಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ.
ಪುನರ್ನಿರ್ಮಾಣ ಕಾರ್ಯ
೧೫೮೫ರಲ್ಲಿ ಆರಂಭಗೊಂಡು ನಡೆದ ವಿಶ್ವನಾಥ ದೇವಾಲಯದ ಪುನರ್ನಿರ್ಮಾಣವು ಯಶಸ್ವಿಯಾಗಿದ್ದು, ಯಾತ್ರಿಕರ ಸಮಾಧಾನ-ಸಂತೋಷಗಳಿಗೆ ಕಾರಣವಾಯಿತು. ಸುಮಾರು ಅದೇ ಕಾಲದಲ್ಲಿ ಭಾರತಕ್ಕೆ ಬಂದಿದ್ದ ವಿದೇಶೀ ಯಾತ್ರಿಕ ಟಾವರ್ನಿಯರ್ “ಬನಾರಸ್ನ ಪಗೋಡವು (ಪುರಿ)ಜಗನ್ನಾಥನ ಅನಂತರದಲ್ಲಿ ಇಡೀ ದೇಶದಲ್ಲಿ ತುಂಬ ಜನಪ್ರಿಯವಾಗಿದೆ. ಈ ಕ್ಷೇತ್ರವು ಗಂಗಾನದಿಯ ದಡದಲ್ಲಿದೆ; ನಗರಕ್ಕೆ ಅದೇ (ವಿಶ್ವನಾಥ) ಹೆಸರಿದೆ ಎಂದು ದಾಖಲಿಸಿದ್ದಾನೆ.
ಮುಂದೆ ಶತಮಾನ ಕಳೆಯುವುದರೊಳಗೆ ಕಾಶಿಯ ಮೇಲೆ ಮತಾಂಧ ಔರಂಗಜೇಬನ ಕಣ್ಣು ಬಿತ್ತು. ಅವನ ಸೇನೆ ಮತ್ತು ದಶನಾಮೀ ಪಂಥದ ಸಂನ್ಯಾಸಿಗಳ ನಡುವೆ ತೀವ್ರ ಯುದ್ಧ ನಡೆದು, ದಾಳಿಕೋರರು ದೇವಾಲಯವನ್ನು ನಾಶ ಮಾಡಿದರು. ಆಗ ಮೂರ್ತಿಭಂಜಕರಿಂದ ದಾಳಿ ನಡೆದಾಗ ಸಂನ್ಯಾಸಿ ಪಂಥಿಗಳು ಶಸ್ತ್ರ ಹಿಡಿದು ‘ಆಖಾಡಾ’ ರಚಿಸಿಕೊಂಡು ಹಿಂದೂಧರ್ಮದ ರಕ್ಷಣೆಗೆ ಮುಂದಾಗುತ್ತಿದ್ದವು.
ದೇವಳದ ಒಂದು ಭಾಗವನ್ನು ಮಸೀದಿಯ ಹಿಂಭಾಗದ ಗೋಡೆಯಾಗಿ ಉದ್ದೇಶಪೂರ್ವಕವಾಗಿ ಉಳಿಸಿಕೊಂಡರು. ವ್ಯಂಗ್ಯವೆಂದರೆ ಆ ಮಸೀದಿಯ ಹೆಸರು ಗ್ಯಾನವಾಪಿ ಮಸೀದಿ; ಕಾರಣ ಅದು ನಿಂತ ನೆಲದ ಹೆಸರು.
ಔರಂಗಜೇಬನು ವಿಶ್ವನಾಥ ಮತ್ತು ಕೇಶವದೇವ ದೇವಾಲಯಗಳನ್ನು ಉರುಳಿಸಿದ ಬಗ್ಗೆ ಕಲಾ ಇತಿಹಾಸಕಾರರಾದ ಕ್ಯಾಥರೀನ್ ಆಶರ್ ಒಂದು ವಿವರಣೆಯನ್ನು ನೀಡುತ್ತಾರೆ. ಅದೆಂದರೆ, ಮೊಘಲ್ ಅಮೀರರು ದೊಡ್ಡ ದೇವಾಲಯಗಳನ್ನು ನಿರ್ಮಿಸಿದ್ದರು. ಆದರೆ ಸುಲ್ತಾನನಿಗೆ ವಿಧೇಯತೆ ತೋರುವುದನ್ನು ನಿಲ್ಲಿಸಿದ್ದರು. ಅದರಿಂದ ಕೋಪಗೊಂಡ ಔರಂಗಜೇಬ, ಹಿಂದೆ ಮೊಘಲರ ಬೆಂಬಲದಿಂದ ಇರಿಸಿಕೊಂಡಿದ್ದ ಆಸ್ತಿಗಳನ್ನು ನಾಶಮಾಡಿದ – ಎಂದಾಕೆ ಹೇಳಿದ್ದಾರೆ. ಆದರೆ ಮುಸ್ಲಿಂ ದಾಳಿಕೋರರು ದೇವಳಗಳನ್ನು ಮತ್ತೆ ಮತ್ತೆ ಏಕೆ ನಾಶ ಮಾಡಿದರೆಂದು ಹೇಳಲು ಆಕೆ ವಿಫಲರಾಗುತ್ತಾರೆ.
ಮಂದಿರ ನಾಶದ ಬಳಿಕ ವಿಶ್ವೇಶ್ವರ ಲಿಂಗವನ್ನು ಗ್ಯಾನವಾಪಿ ಬಾವಿಯ ದಕ್ಷಿಣದ ಯಾರಿಗೂ ಅಷ್ಟಾಗಿ ಕಾಣಿಸದ ಒಂದು ಮೂಲೆಯಲ್ಲಿ ಪ್ರತಿಷ್ಠಾಪಿಸಿದರು. ಅದರ ಮೇಲೆ ದೇವಳವನ್ನು ನಿರ್ಮಿಸಲಿಲ್ಲ. ಮೊಘಲ್ ಅಧಿಕಾರಿಗಳಿಗೆ ಗೊತ್ತಾಗದಂತೆ ಹಿಂದುಗಳು ಅಲ್ಲಿ ಗುಟ್ಟಾಗಿ ಪೂಜೆ ಸಲ್ಲಿಸುತ್ತಿದ್ದರು. ಗ್ಯಾನವಾಪಿಯ (ಬಾವಿ) ಮೇಲೆ ಕೂಡ ಏನನ್ನೂ ಕಟ್ಟಲಿಲ್ಲ. ಆ ಹೊತ್ತಿಗೆ ಕಾಶಿ ವಿಶ್ವನಾಥನಿಗೆ ಗುಟ್ಟಾಗಿ ಪೂಜೆ ಸಲ್ಲಿಸಿದವರಲ್ಲಿ ರಾಜ-ಮಹಾರಾಜರೇ ಇದ್ದಾರೆ. ರೇವಾದ ಮಹಾರಾಜ ಭಾವಾಸಿಂಗ್ ೧೬೭೨ರಲ್ಲಿ, ಉದಯಪುರದ ಮಹಾರಾಜ ಜಗತ್ಸಿಂಗ್ ಮತ್ತು ರೇವಾ ಮಹಾರಾಜ ಅನಿರುದ್ಧಸಿಂಗ್ ೧೬೯೫ರಲ್ಲಿ ಅಲ್ಲಿ ಪೂಜೆ ಸಲ್ಲಿಸಿದರು. ಉದಯಪುರದ ಮಹಾರಾಜ ಜವಾನ್ಸಿಂಗ್ ೧೭೩೪ರಲ್ಲಿ ವಿಶ್ವೇಶ್ವರನ ಸಮೀಪದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸಿದ; ಅದಕ್ಕೆ ಜವಾನೇಶ್ವರ ಎಂಬ ಹೆಸರು ಬಂತು. ೧೭೪೯ರಲ್ಲಿ ಉದಯಪುರದ ಮಹಾರಾಜ ಸಂಗ್ರಾಮಸಿಂಗ್ ಮತ್ತು ೧೭೬೫ರಲ್ಲಿ ಅನೀಸಿಂಗ್ ವಿಶ್ವೇಶ್ವರನಿಗೆ ಪೂಜೆ ಸಲ್ಲಿಸಿದರು.
ಅಹಿಲ್ಯಾಬಾಯಿ ಹೋಳ್ಕರ್ ಕಟ್ಟಿಸಿದ್ದು
ಔರಂಗಜೇಬನ ಸಾವಿನ ಅನಂತರ (೧೭೦೮) ವಾರಾಣಸಿಯ ನಿಜವಾದ ಪುನರ್ನಿರ್ಮಾಣವು ಆರಂಭವಾಯಿತು. ಮರಾಠರು, ರಜಪೂತರು, ಬಂಗಾಳಿಗಳು ಮತ್ತಿತರ ಶ್ರದ್ಧಾಳು ಹಿಂದುಗಳು ದೇವಾಲಯಗಳನ್ನು ಕಟ್ಟಿಸಿದರು. ಸುವರ್ಣಮಂದಿರ ಎಂದು ಕರೆಯಲಾಗುವ ಇಂದಿನ ವಿಶ್ವನಾಥ ದೇವಾಲಯವನ್ನು ಇಂದೋರ್ನ ರಾಣಿ ಅಹಿಲ್ಯಾಬಾಯಿ ಹೋಳ್ಕರ್ ೧೭೭೭ರಲ್ಲಿ ಮೊದಲೇ ಇದ್ದ ಸ್ಥಳದಲ್ಲಿ ಕಟ್ಟಿಸಿದಳು. ಆಕೆ ಇಲ್ಲಿ ಇರಿಸಿದ ಶಾಸನವು ಪ್ರತ್ಯೇಕ ಲಿಂಗವನ್ನು ಸ್ಥಾಪಿಸಿದ ಬಗ್ಗೆ ಹೇಳುವುದಿಲ್ಲ. ವಿಶ್ವೇಶ್ವರ ಲಿಂಗವು ಗರ್ಭಗುಡಿಯ ಒಂದು ಮೂಲೆಯಲ್ಲಿ ಏಕೆ ಇದೆ ಎಂಬುದಕ್ಕೆ ಇದು ಉತ್ತರವಾಗಿದೆ; ಹೊಸ ಲಿಂಗವಾಗಿದ್ದರೆ ಮಧ್ಯದಲ್ಲಿ ಇರಿಸುತ್ತಿದ್ದರು.
ಔರಂಗಜೇಬ ಕಟ್ಟಿಸಿದ ಗ್ಯಾನವಾಪಿ ಮಸೀದಿಯ ಕೆಲವು ಮೀಟರ್ ದಕ್ಷಿಣದಲ್ಲಿ ಅಹಿಲ್ಯಾಬಾಯಿ ಕಟ್ಟಿಸಿದ ದೇವಳದ ಕಟ್ಟಡಕ್ಕೆ ಭಾರತದ ಇತರ ದೊಡ್ಡ ದೇವಳಗಳ ವೈಭವವಿಲ್ಲ. ಅದು ನಗರದ ಜನಜಂಗುಳಿಯ ಮಧ್ಯದಲ್ಲೇ ಇದೆ. ಆವರಣ ಗೋಡೆಯಿಂದಾಗಿ ಅದರ ವಾಸ್ತುಶಿಲ್ಪದ ಅಂಶಗಳು ಕಾಣಿಸುವುದಿಲ್ಲ. ಸುಮಾರಾಗಿ ಅದು ಉತ್ತರಭಾರತದ ವಾಸ್ತುಶಿಲ್ಪದ ೧೮ನೇ ಶತಮಾನದ ಪುನರುಜ್ಜೀವನದಂತಿದೆ – ಏನಿದ್ದರೂ ಮಹಾರಾಜಾ ಬಲವಂತ್ಸಿಂಗ್ ವಾರಾಣಸಿಯ ಅಧಿಪತಿ ಎನಿಸಿ ಆರಂಭಿಸಿದ ದೇಗುಲಗಳ ಪುನರುಜ್ಜೀವನ, ಪುನರ್ನಿರ್ಮಾಣವು ಸಾರ್ಥಕವಾಗಿ ನಡೆಯಿತು. ಹೆಚ್ಚಿನ ದೊಡ್ಡ ದೇವಳಗಳನ್ನು ಸ್ವಲ್ಪ ದೊಡ್ಡ ರೀತಿಯಲ್ಲೇ ಕಟ್ಟಿಸಿದರು. ಅಹಿಲ್ಯಾಬಾಯಿ ಮತ್ತು ಬಂಗಾಳದ ನೇತರ್ನ ರಾಣಿ ಭವಾನಿ ಇದಕ್ಕೆ ತುಂಬ ಹಣ ಖರ್ಚು ಮಾಡಿದರು.
ವಾರಾಣಸಿಯ ಜಗತ್ಪ್ರಸಿದ್ಧ ಘಾಟ್ಗಳ ನಿರ್ಮಾಣ, ದುರಸ್ತಿ, ನವೀಕರಣಗಳು ಕೂಡ ನಡೆದು ಕಾಶಿ ಜಾಜ್ವಲ್ಯಮಾನವಾಯಿತು.
ಗವರ್ನರ್–ಜನರಲ್ ಮೆಚ್ಚುಗೆ
ಅಹಿಲ್ಯಾಬಾಯಿ ಕಟ್ಟಿಸಿದ ದೇವಳದ ಘನತೆಯಿಂದ ಪ್ರಭಾವಿತನಾದ ಬ್ರಿಟಿಷ್ ಗವರ್ನರ್-ಜನರಲ್ ವಾರನ್ ಹೇಸ್ಟಿಂಗ್ಸ್ ೧೭೮೧ರಲ್ಲಿ ಬನಾರಸ್ನ ಮ್ಯಾಜಿಸ್ಟ್ರೇಟ್ ಅಲಿ ಇಬ್ರಾಹಿಂಖಾನ್ಗೆ ದೇವಳಕ್ಕೊಂದು ಸುಂದರ ದ್ವಾರ ನಿರ್ಮಿಸಲು ಸೂಚಿಸಿದ (ಸಾಬತ್ ಖಾನಾ ಅಥವಾ ಡ್ರಮ್ಹೌಸ್). ೧೮೨೮ರಲ್ಲಿ ಮರಾಠ ರಾಜ ಗ್ವಾಲಿಯರ್ನ ದೌಲತ್ರಾವ್ ಸಿಂಧಿಯಾನ ವಿಧವೆ ಬೈಜಾಬಾಯಿ ವಿಶ್ವನಾಥ ದೇವಳದ ಉತ್ತರದಲ್ಲಿ ಗ್ಯಾನವಾಪಿಯನ್ನು ರಕ್ಷಿಸುವಂತಹ ತಗ್ಗುಮಾಡಿನ ಪೆವಿಲಿಯನ್ನಂತಹ ರಚನೆಯನ್ನು (ಆವರಣ) ಕಟ್ಟಿಸಿದಳು. ಒಂದು ಉತ್ತಮ ಘಾಟ್ ಆದ ಸಿಂಧಿಯಾಘಾಟ್ ಬಳಿ ಆಕೆ ಒಂದು ಮಂದಿರವನ್ನು ಕಟ್ಟಿಸಿದಳು. ವಿಶ್ವನಾಥ ದೇವಳದ ನಿರ್ವಹಣೆಗೆ ಹಲವು ರಾಜಮನೆತನಗಳು ದೇಣಿಗೆ ನೀಡಿದವು ೧೮೪೧ರಲ್ಲಿ ನಾಗಪುರದ ಭೋಸಲೆಗಳು ವಿಶ್ವನಾಥ ದೇವಳಕ್ಕೆ ಬೆಳ್ಳಿಯ ಸ್ವತ್ತುಗಳನ್ನು ನೀಡಿದರೆ, ೧೮೫೯ರಲ್ಲಿ ಪಂಜಾಬಿನ ಮಹಾರಾಜ ರಣಜಿತ್ ಸಿಂಗ್ ದೇವಳದ ಗೋಪುರಕ್ಕೆ ಚಿನ್ನದ ತಗಡನ್ನು ಹೊದಿಸುವ ಬಗ್ಗೆ ಒಂದು ಟನ್ ಚಿನ್ನ ನೀಡಿದ.
ವಿಶ್ವನಾಥ ದೇವಳದ ಪ್ರಾಂಗಣದಲ್ಲಿ ಕ್ರಮೇಣ ಅನೇಕ ಚಿಕ್ಕಪುಟ್ಟ ಗುಡಿಗಳು ಬಂದವು. ದೇವಾಲಯದ ಪ್ರವೇಶದ ಎಡದಲ್ಲಿ ವಿಷ್ಣುವಿನ ವಿಗ್ರಹವಿದ್ದು, ಅದನ್ನು ವಿಶ್ವನಾಥನ ಜೊತೆಗೆ ಪೂಜಿಸಬೇಕೆನ್ನುವ ನಂಬಿಕೆಯಿದೆ. ವಿಷ್ಣುವಿನ ಸಮೀಪ ಅವಿಮುಕ್ತ ವಿನಾಯಕ ಮೂರ್ತಿಯಿದೆ; ಅದು ಹಿಂದಿನ ಅವಿಮುಕ್ತೇಶ್ವರ ದೇವಾಲಯದ ಮೂರ್ತಿಯಾಗಿದೆ. ದೇವಳದ ತೀರಾ ಬಲಭಾಗದ ಗುಡಿಯಲ್ಲಿ ಅವಿಮುಕ್ತೇಶ್ವರ ಲಿಂಗವಿದೆ.
ಲಾಟ್ನ ಯುದ್ಧ
ಮುಂದೆ ಕೂಡ ಗ್ಯಾನವಾಪಿ ಮಸೀದಿಯ ಜಾಗ ಸಾಕಷ್ಟು ಆತಂಕದ ಸ್ಥಳವಾಯಿತು. ೧೮೦೯ರಲ್ಲಿ ಅಲ್ಲಿ ದೊಡ್ಡ ಕೋಮುಗಲಭೆಯು ಸ್ಫೋಟಗೊಂಡಿತು. ಕಾರಣ ಮಸೀದಿ ಮತ್ತು ದೇವಳದ ನಡುವಣ ಕಿರಿದಾದ ಜಾಗದಲ್ಲಿ ಹಿಂದುಗಳು ಒಂದು ಪುಟ್ಟ ಗುಡಿಯನ್ನು ಕಟ್ಟಿಸಲು ಯತ್ನಿಸಿದ್ದು, ಲಾಟ್ನ ಯುದ್ಧದಲ್ಲಿ (ಘರ್ಷಣೆ) ವಿಶ್ವನಾಥ ದೇವಾಲಯ, ಕಪಾಲಮೋಚನ ಕೆರೆ ಮತ್ತು ಗ್ಯಾನವಾಪಿ ಮಸೀದಿ – ಈ ಮೂರು ಸ್ಥಳಗಳು ಮುಖ್ಯವಾಗಿ ಭಾಗಿಯಾಗಿದ್ದವು. ಅಲ್ಲಿ ಲಾಟ್ (ಎಲ್ಎಟಿ) ಭೈರವ್ ಸ್ತಂಭ ತುಂಬ ಹಳೆಯದು. ಕ್ರಿ.ಶ. ೬೩೬ರಲ್ಲಿ ಹ್ಯೂಯೆನ್ತ್ಸಾಂಗ್ ಅದನ್ನು ಒಂದು ಬೌದ್ಧಸ್ತೂಪದ ಬಳಿ ಕಂಡಿದ್ದ. ಅಶೋಕಸ್ತಂಭ ಇರಬಹುದೆಂಬುದು ಆತನ ಊಹೆಯಾದರೆ, ಕ್ಷೇತ್ರದ ಮಾಹಾತ್ಮ್ಯಗಳು ಮಹಾಸ್ಮಶಾನ ಸ್ತಂಭದ ಬಗ್ಗೆ ಹೇಳುತ್ತವೆ. ಆ ಸ್ತಂಭದ ಸುತ್ತಲಿನ ಜಾಗ ಕಾಪಾಲಿಕರು ಮತ್ತು ಪಾಶುಪತರಿಗೆ ಮುಖ್ಯವಾಗಿತ್ತು. ಕ್ರಮೇಣ ಅದು ನಾಥರು ಮತ್ತು ಗೋಸಾಯಿ ಸಂಪ್ರದಾಯಗಳವರ ವಶಕ್ಕೆ ಸೇರಿತ್ತು.
ಲಾಟ್ ಭೈರವ್ ಸ್ತಂಭ ಇದ್ದ ದೇವಳ ಸಂಕೀರ್ಣವನ್ನು ಔರಂಗಜೇಬ ನಾಶ ಮಾಡಿ ಅದನ್ನು ಮಸೀದಿ ಮತ್ತು ಗೋರಿ ನಿವೇಶನವಾಗಿ ಪರಿವರ್ತಿಸಿದ್ದನಷ್ಟೆ. ಸ್ತಂಭವನ್ನು ಹಾಗೆಯೆ ಬಿಡಲಾಗಿತ್ತು. ಸಣ್ಣ ಇಟ್ಟಿಗೆ ಗೋಡೆಯ ಮೂಲಕ ಸ್ತಂಭವನ್ನು ಈದ್ಗಾದಿಂದ ಪ್ರತ್ಯೇಕಿಸಲಾಗಿತ್ತು. ಗೋಡೆಯ ಹೊರಗೆ ಮತ್ತು ಉತ್ತರದಲ್ಲಿ ಭರತಕೂಪವಿದೆ; ದಕ್ಷಿಣದಲ್ಲಿ ಕಪಾಲಮೋಚನ ಸರೋವರವಿದ್ದು ಅಲ್ಲಿ ಹಿಂದುಗಳು ಸ್ನಾನ ಮಾಡುತ್ತಿದ್ದರು. ದೇವಳಗಳು ಭಾಗಶಃ ಅಥವಾ ಇಡಿಯಾಗಿ ನಾಶವಾಗಿದ್ದರೂ ಮತ್ತು ತಮ್ಮ ಜಾಗ ಮಸೀದಿ ಅಥವಾ ಗೋರಿಯ ಮಧ್ಯಭಾಗದಲ್ಲಿದ್ದರೂ, ಹಿಂದುಗಳು ಅದರ ಬಗ್ಗೆ ಸಾಮಾನ್ಯವಾಗಿ ಪೂಜ್ಯಭಾವನೆ ಇರಿಸಿಕೊಂಡಿರುತ್ತಾರೆ. ಆ ಸ್ತಂಭದ ಬಳಿಗೆ ಹೋಗಲು ಹಿಂದುಗಳಿಗೆ ಮುಸ್ಲಿಮರು ಬಿಡುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅವರಿಗೆ ಅರ್ಪಣೆಯ ವಸ್ತುಗಳಲ್ಲಿ ಪಾಲು ಕೊಡಬೇಕಿತ್ತು. ೧೮೦೯ರಲ್ಲಿ ಬ್ರಿಟಿಷ್ ಅಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಅದು ಕಾಣಿಸುತ್ತದೆ: ಕೆಲವು ವರ್ಷ ಹಿಂದುಗಳು ಮತ್ತು ಮುಸ್ಲಿಮರ ಕೆಳವರ್ಗದ ಜನ ಪ್ರತಿವರ್ಷ ಲಾಟ್ನ ಪೂಜೆ ಮಾಡಿ ಅರ್ಪಣೆಯ ವಸ್ತುಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನುವ ವಿವರವಿದೆ.
೧೮೦೯ರಲ್ಲಿ ಅಲ್ಲಿ ಮೂರು ದಿನಗಳ ಕಾಲ ಹಿಂಸಾಚಾರ ನಡೆಯಿತು; ಸಣ್ಣ ಘಟನೆಯಿಂದ ಅದು ಆರಂಭವಾಗಿತ್ತು. ಒಬ್ಬ ನಾಗರ ಹಿಂದು ಕಾಯಿಲೆ ಗುಣವಾದಾಗ ಹರಕೆಯ ಭಾಗವಾಗಿ ಈದ್ಗಾ ಮತ್ತು ಲಾಟ್ನ ನಡುವಣ ತಕರಾರಿನ ಜಾಗದಲ್ಲಿದ್ದ ಹನುಮಂತನ ತಾತ್ಕಾಲಿಕ ಮಣ್ಣಿನ ಆವರಣಕ್ಕೆ ಬದಲಾಗಿ ಕಲ್ಲಿನ ಆವರಣವನ್ನು ಮಾಡಲು ಯತ್ನಿಸಿದ್ದ. ಈದ್ಗಾವನ್ನು ಬಳಸುತ್ತಿದ್ದ ನೇಕಾರರು ಆ ರಚನೆಯು ತಮ್ಮ ಜಾಗದ ಮೇಲಿನ ಶಾಶ್ವತ ಆಕ್ರಮಣವೆಂದು ಅದನ್ನು ವಿರೋಧಿಸಿದರು; ಕಲ್ಲಿನ ನಿರ್ಮಾಣವನ್ನು ಒಡೆದುಹಾಕಿದರು. ಆಗ ನಗರದ ರಜಪೂತರು ಸಮೀಪವಿದ್ದ ಇಮಾಂಬರದ ಮೇಲೆ ದಾಳಿ ಮಾಡಿದರು. ಅದಕ್ಕೆ ಪ್ರತಿಯಾಗಿ ಶಸ್ತ್ರಧಾರಿ ನೇಕಾರರ ಗುಂಪು ವಿಶ್ವನಾಥ ದೇವಳದತ್ತ ಹೋಯಿತು. ಆಗ ಗುಂಪನ್ನು ಶಸ್ತ್ರಧಾರಿಗಳ ಇನ್ನೊಂದು ಗುಂಪು ಅಡ್ಡಗಟ್ಟಿತು. ಕೆಲವರು ಪ್ರಾಣ ಕಳೆದುಕೊಂಡರು. ಹಿಂಜರಿದ ನೇಕಾರರು ಅದೇ ದಿನ ಲಾಟ್ ಭೈರವ್ ಸ್ತಂಭದ ನಾಶಕ್ಕೆ ನಿರ್ಧರಿಸಿದರು. ಮರುದಿನ ರಜಪೂತರು ನೆರೆಯ ನೇಕಾರರ ಮೇಲೆ ಸಮೀಪದ ಫಾತಿಮಾ ನಿವೇಶನದ ಮೇಲೂ ದಾಳಿ ನಡೆಸಿದರು; ಹಾಗೂ ಗೋಸಾಯಿಗಳು ಗ್ಯಾನವಾಪಿ ಮಸೀದಿಯ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರಿಗೆ ಸಾಕಷ್ಟು ಹಾನಿಯಾಯಿತು.
ಕೆಲವು ವರ್ಷಗಳ ಅನಂತರ ಬಿಷಪ್ ಹೆಬರ್ ಬನಾರಸ್ಗೆ ಭೇಟಿ ನೀಡಿದಾಗ ಮ್ಯಾಜಿಸ್ಟ್ರೇಟ್ ಬರ್ಡ್ ಘಟನೆಯ ಬಗ್ಗೆ ಅವರಿಗೆ ಈ ವಿವರವನ್ನು ನೀಡಿದರು: ಜನಸಂಖ್ಯೆಯ ಅರ್ಧಭಾಗ ಇನ್ನೊಂದು ಅರ್ಧಭಾಗದ ವಿರುದ್ಧ ಶಸ್ತ್ರಧಾರಿಗಳಾದರು. ಇಬ್ಬರ ನಡುವಣ ಸಿಟ್ಟು ಜೋರಾಗಿಯೇ ಇತ್ತು. ಹಿಂದುಗಳಿಗೆ ತುಂಬ ಪೂಜ್ಯವಾಗಿದ್ದ ಶಿವನ ಸ್ತಂಭವನ್ನು ಮುಸ್ಲಿಮರು ಮುರಿಯುವುದರೊಂದಿಗೆ ಘಟನೆ ಶುರುವಾಯಿತು. ಈಚೆಯವರು ಪ್ರತೀಕಾರವಾಗಿ ಮಸೀದಿ ಒಡೆದು ಬೆಂಕಿ ಹಚ್ಚಿದರು. ಆಗ ಮುಸ್ಲಿಮರು ದನವನ್ನು ಕೊಂದು ಅದರ ರಕ್ತವನ್ನು ಪವಿತ್ರ ಬಾವಿಗೆ ಹಾಕಿದರು. ಪರಿಣಾಮವಾಗಿ ಶಸ್ತ್ರ ಹಿಡಿಯುವ ಶಕ್ತಿ ಇದ್ದ ಎಲ್ಲ ಹಿಂದುಗಳು ಶಸ್ತ್ರಧಾರಿಗಳಾದರು; ಇತರರು ಅವರಿಗೆ ಶಸ್ತ್ರ ಒದಗಿಸಿದರು. ಶತ್ರುಗಳು ಸಿಕ್ಕಿದಲ್ಲಿ ಅವರನ್ನು ಬಲಿಹಾಕಿದರು. ಇವರ ಸಂಖ್ಯೆ ಜಾಸ್ತಿಯಿದ್ದ ಕಾರಣ ಮುಸ್ಲಿಮರು ಇಲ್ಲವಾಗುವ ಸ್ಥಿತಿ ಬಂತು. ಸೈನಿಕರನ್ನು ಕರೆಯದಿದ್ದರೆ ೨೪ ತಾಸಿನೊಳಗೆ ಆ ಭಾಗದ ಎಲ್ಲ ಮಸೀದಿಗಳು ಬೆಂಕಿಗೆ ಆಹುತಿಯಾಗುತ್ತಿದ್ದವು ಇದು ಲಾಟ್ ಯುದ್ಧ ನಡೆದ ಬಗೆ. ಈ ಘಟನೆಯಿಂದ ಹಿಂದುಗಳ ಸ್ಥಿತಿ ಉತ್ತಮವಾದಂತೆ ಕಂಡುಬರುತ್ತದೆ. ಅದೇ ಹೊತ್ತಿಗೆ ಹಿಂದುಗಳು ಗ್ಯಾನವಾಪಿಗೊಂದು ವೇದಿಕೆ ನಿರ್ಮಿಸಿದರು. ಕ್ರಮೇಣ ಮಸೀದಿಯ ಸುತ್ತಲಿನ ಪೂರ್ತಿ ಜಾಗದಲ್ಲಿ ಹಿಂದೂ ಚಟುವಟಿಕೆಗಳೇ ತುಂಬಿಕೊಂಡವು.
ಓಂಕಾರ ದೇವಳ
ಸಾವಿರ ವರ್ಷಗಳ ಹಿಂದೆ ಕಾಶಿಯ ಅತ್ಯಂತ ಮುಖ್ಯ ಶಿವಲಿಂಗವು ಓಂಕಾರ ದೇವಾಲಯದಲ್ಲಿತ್ತು. ಆ ಮಂದಿರವು ಅಲ್ಲಿನ ಇಡೀ ಬೆಟ್ಟದ ತುದಿಯನ್ನು ಆವರಿಸಿತ್ತು. ಮುಸ್ಲಿಮರು ಇಡೀ ಪ್ರದೇಶವನ್ನು ವಶಪಡಿಸಿಕೊಂಡು ಅಲ್ಲಿ ಗೋರಿ, ಓರ್ವ ಮುಸ್ಲಿಂ ಸಂತನ ಪವಿತ್ರಸ್ಥಳ (ದರ್ಗಾ) ಇತ್ಯಾದಿ ಮಾಡಿದರು. ಓಂಕಾರ ದೇವಸ್ಥಾನದ ಗಾತ್ರ ಸಣ್ಣ ಕಟ್ಟಡಕ್ಕೆ ಇಳಿದಿತ್ತು. ಅದನ್ನು ೧೮ನೇ ಶತಮಾನದಲ್ಲಿ ಬಂಗಾಳದ ರಾಣಿ ಭವಾನಿ ಪುನರ್ನಿರ್ಮಾಣ ಮಾಡಿ, ಬನಾರಸ್ನ ಒಂದು ಅರ್ಚಕ ಕುಟುಂಬಕ್ಕೆ ನೀಡಿದಳು. ಆ ಕುಟುಂಬ ದೇವಳದ ದಿನದ ಪೂಜೆಯನ್ನು ಒಬ್ಬ ಪೂಜಾರಿಗೆ ವಹಿಸಿತ್ತು. ಶತಮಾನಗಳ ಕಾಲ ಅಲ್ಲಿ ಸುತ್ತೆಲ್ಲ ಮುಸ್ಲಿಮರಿದ್ದು, ಹಿಂದುಗಳು ಯಾರೂ ದೇವಳಕ್ಕೆ ಹೋಗುತ್ತಿರಲಿಲ್ಲ. ಸುತ್ತ ಇದ್ದ ಕೆಲವೇ ಹಿಂದುಗಳು ಬಡವರಾಗಿದ್ದು, ದೇವಾಲಯಕ್ಕೆ ಅವರ ಬೆಂಬಲವನ್ನು ನಿರೀಕ್ಷಿಸುವಂತಿರಲಿಲ್ಲವೆಂದು ಮೀನಾಕ್ಷಿ ಜೈನ್ ವಿವರಿಸಿದ್ದಾರೆ.
ಕಾಲಭೈರವ, ಕೇದಾರ
ಕಾಶಿಯ ಕಾಲಭೈರವ ಮೂರ್ತಿಯು ಮೊದಲು ಓಂಕಾರ ದೇವಳದಲ್ಲಿತ್ತು. ೧೩ನೇ ಶತಮಾನದಲ್ಲಿ ಅದನ್ನು ಈಗಿನ ನಿವೇಶನದಲ್ಲಿದ್ದ ಹುಲ್ಲುಮಾಡಿನ ಗುಡಿಸಲಿನಲ್ಲಿಟ್ಟರು; ಮತ್ತೆ ಮಾಡಿಗೆ ನಾಡಹಂಚನ್ನು ಹೊದಿಸಿದರು. ಮುಂದಿನ ದಾಳಿಗಳ ಕಾರಣದಿಂದ ಮೂರ್ತಿ ಅಲ್ಲಿ ಉಳಿಯಲಿಲ್ಲ. ಆದರೆ ಇದ್ದ ಸ್ಥಳ ಹಿಂದುಗಳಿಗೆ ಗೊತ್ತಿತ್ತು. ಸುಮಾರು ೬೦೦ ವರ್ಷಗಳ ಕಾಲ ಅದು ಮೂರ್ತಿಭಂಜಕರ ಗಮನಕ್ಕೆ ಬಂದಿರಲಿಲ್ಲ. ಈಗಿನ ದೇವಾಲಯವನ್ನು ಪೇಶ್ವೆಗಳ ದಂಡನಾಯಕ ವಿಂಚೂರ್ಕರ್ ೧೮೨೫ರ ಹೊತ್ತಿಗೆ ನಿರ್ಮಿಸಿದ.
ಕಾಶಿಯ ಆರಂಭದ ದೇವಳಗಳಲ್ಲಿ ಕೇದಾರವೂ ಒಂದು. ಪುರಾಣಗಳ ಮಾಹಾತ್ಮ್ಯದಲ್ಲಿ ಅದರ ಉಲ್ಲೇಖವಿದೆ. ಭಕ್ತರ ಪ್ರಕಾರ ಕೇದಾರ ವಿಶ್ವೇಶ್ವರನ ಅಣ್ಣ ಮತ್ತು ಅದು ಕಾಶಿಯ ಅತ್ಯಂತ ಪ್ರಾಚೀನ ಲಿಂಗ. ಔರಂಗಜೇಬ ದಾಳಿ ಮಾಡಿದಾಗ ಕೇದಾರ ಉಳಿದುಕೊಂಡನೆಂದು ಸ್ಥಳೀಯರು ಹೇಳುತ್ತಾರೆ. ಆ ಕಾರಣದಿಂದ ಈಗಿನ ಕೇದಾರ ದೇಗುಲವು ವಿಶ್ವನಾಥ ದೇವಾಲಯಕ್ಕಿಂತ ಪ್ರಾಚೀನ ಎಂದಾಗುತ್ತದೆ. ಈಗ ಗಂಗಾನದಿ ದಂಡೆಯ ಕೇದಾರ ಘಾಟ್ನಲ್ಲಿ ಕೇದಾರೇಶ್ವರ ದೇವಾಲಯವಿದೆ. ಔರಂಗಜೇಬನ ಸೈನ್ಯ ಈ ದೇವಳದ ಸಮೀಪ ಬಂದಾಗ ಒಬ್ಬ ಮುಸ್ಲಿಂ ಸಂತರು ವಾಪಸು ಹೋಗುವಂತೆ ಹೇಳಿದರೆಂದು ಕಥೆಯಿದೆ.
ಇನ್ನೂ ಅಸಂಖ್ಯ ಮೂರ್ತಿಗಳನ್ನು ದಾಳಿಕೋರರು ನಾಮಾವಶೇಷಗೊಳಿಸಿದರು. ಆತ್ಮವೀರೇಶ್ವರ ಎನ್ನುವ ವೀರೇಶ್ವರ ಒಂದು ಪ್ರಮುಖ ದೇವರಾಗಿದ್ದು, ಮೂಲತಃ ರಾಜಘಾಟ್ ಸಮೀಪದಲ್ಲಿತ್ತು. ಕಾಶಿಯ ೬೮ ಸಾಂಕೇತಿಕ ಶಿವಲಿಂಗಗಳಲ್ಲಿ ಒಂದಾದ ತ್ರಿಲೋಚನೇಶ್ವರ ಲಿಂಗವು ಹಲವು ಶತಮಾನಗಳ ಕಾಲ ಜೀರ್ಣಾವಸ್ಥೆಯಲ್ಲಿತ್ತು. ಅದು ದೇಶದ ಪ್ರಮುಖ ಶಿವಲಿಂಗಗಳಲ್ಲಿ ಒಂದು. ನಾಥು ಬಾಲ ಎಂಬಾತ ತ್ರಿಲೋಚನೇಶ್ವರನಿಗೆ ಹೊಸ ದೇವಸ್ಥಾನವನ್ನು ಕಟ್ಟಿಸಿದ್ದ.
ಮಹಾಭಾರತದೊಂದಿಗೆ ವಾರಾಣಸಿಯ ಸಂಬಂಧವನ್ನು ಹೇಳುವ ಏಕೈಕ ಲಿಂಗ ವೃಷಭಧ್ವಜನನ್ನು ಜನ ಈಗಲೂ ಪೂಜಿಸುತ್ತಾರೆ. ಪಂಚಕೋಸೀ ಯಾತ್ರೆ ಮಾಡಲು ಎಲ್ಲರೂ ಅಲ್ಲಿಗೆ ಹೋಗುತ್ತಾರೆ.
ವಿಷ್ಣು ದೇವಳಗಳು
ಹಿಂದೆ ಕೇಶವ ಎಂದು ಕರೆಯುತ್ತಿದ್ದ ಆದಿಕೇಶವ ಗಢವಾಲ ವಂಶದವರ ಪ್ರಮುಖ ದೇವರು. ೧೧೯೪ರಲ್ಲಿ ಐಬಕ್ ರಾಜಘಾಟ್ ಕೋಟೆಯನ್ನು ನಾಶಮಾಡಿದ ಅನಂತರ ಹಲವು ಶತಮಾನಗಳ ಕಾಲ ಈ ದೇವಳ ಅವಶೇಷಗಳ ಸ್ಥಿತಿಯಲ್ಲಿತ್ತು. ೧೮ನೇ ಶತಮಾನದಲ್ಲಿ ಪುನರ್ನಿರ್ಮಾಣ, ಪ್ರತಿಷ್ಠೆಗಳು ನಡೆದರೂ ಕೂಡ ಹಿಂದಿನ ವೈಭವ ಮರಳಲಿಲ್ಲ. ೧೮೫೭ರಲ್ಲಿ ಮೊದಲ ಸ್ವಾತಂತ್ರ್ಯಸಂಗ್ರಾಮದ ವೇಳೆ ರಾಜಘಾಟ್ನ ಕೋಟೆಯನ್ನು ಬ್ರಿಟಿಷರು ಸೇನೆಯ ಪ್ರಧಾನ ಕಛೇರಿಯಾಗಿ ಬಳಸಿಕೊಂಡರು; ಬಳಿಕ ಹಲವು ವರ್ಷ ದೇವಳ ಮುಚ್ಚಿಕೊಂಡಿತ್ತು.
ಬಿಂದುಮಾಧವ ದೇವಾಲಯವು ೫ನೇ ಶತಮಾನದಿಂದಲೂ ಕಾಶಿಯ ಪ್ರಮುಖ ವಿಷ್ಣು ಮಂದಿರವಾಗಿತ್ತು. ಮತ್ಸ್ಯಪುರಾಣದಲ್ಲಿ ಇದರ ಹೆಸರಿದ್ದು, ಇದು ವಾರಾಣಸಿಯ ಐದು ಮುಖ್ಯ ತೀರ್ಥಗಳಲ್ಲೊಂದು. ೧೨-೧೬ನೇ ಶತಮಾನಗಳ ಅವಧಿಯಲ್ಲಿ ಇದು ಹಲವು ಸಲ ದಾಳಿಗೀಡಾಯಿತು. ರಾಜಾ ಮಾನ್ಸಿಂಗ್ ೧೫೮೫ರಲ್ಲಿ ಬಿಂದುಮಾಧವ ದೇವಳದ ಪುನರ್ನಿರ್ಮಾಣ ಮಾಡಿದ. ಅದು ಪಂಚಗಂಗಾ ಘಾಟ್ ಮೇಲಿನ ಅತ ಎತ್ತರದ ಮತ್ತು ಅತಿ ಸುಂದರ ಕಟ್ಟಡ ಎನಿಸಿತ್ತು. ಇದು ಬನಾರಸ್ನ ನದೀತೀರದ ಅತಿಭವ್ಯ ಕಟ್ಟಡವೆಂದು ಫ್ರೆಂಚ್ ಯಾತ್ರಿಕ ಟಾವರ್ನಿಯರ್ ಬರೆದಿದ್ದಾನೆ. ಅದಕ್ಕೆ ತಾಗಿಕೊಂಡು ಒಂದು ರಾಮಚಂದ್ರ ದೇವಸ್ಥಾನ ಹಾಗೂ ಒಂದು ವೈದಿಕ ಪಾಠಶಾಲೆಯನ್ನು ಕಟ್ಟಿಸಿದ್ದರು. ದೇವಳದ ಆವರಣ ಗೋಡೆಯ ಒಳಭಾಗದಲ್ಲಿ ಮಂಗಳಗೌರಿ ದೇವಸ್ಥಾನವಿತ್ತು.
ಔರಂಗಜೇಬ ಬಿಂದುಮಾಧವ ದೇವಳವನ್ನು ಒಡೆದು ಹಾಕಿ ಆ ಜಾಗದಲ್ಲಿ ಎತ್ತರದ ಎರಡು ಮೀನಾರ್ಗಳಿದ್ದ ದೊಡ್ಡ ಮಸೀದಿಯನ್ನು ಕಟ್ಟಿಸಿದನಷ್ಟೆ. ಆಗ ಪವಾಡಸದೃಶವಾಗಿ ರಾಮಚಂದ್ರ ದೇವಸ್ಥಾನ ಉಳಿದುಕೊಂಡಿತ್ತು. ಮಸೀದಿಯ ಆ ಮೀನಾರ್ಗಳನ್ನು ಹಿಂದುಗಳು ಮಾಧವರಾವ್ ಕಾ ಧರಾಹರ್ ಎಂದು ಕರೆಯುತ್ತಿದ್ದರು. ೧೮೬೮ರಲ್ಲಿ ರೆಶೆರ್ರಿಂಗ್ ದಾಖಲಿಸುವ ಹೊತ್ತಿಗೆ ಅಭದ್ರವೆನಿಸಿದ ಕಾರಣ ಮೀನಾರ್ಗಳನ್ನು ೫೦ ಅಡಿ ಗಿಡ್ಡ ಮಾಡಿದ್ದರು. ಅನಂತರ ಅವುಗಳಲ್ಲಿ ಒಂದು ಬಿತ್ತು. ಮತ್ತೊಂದನ್ನು ಇನ್ನಷ್ಟು ಗಿಡ್ಡ ಮಾಡಿದರು; ಅಂತಿಮವಾಗಿ ಅವು ಇರಲೇ ಇಲ್ಲ.
ಬಿಂದುಮಾಧವನ (ವಿಷ್ಣು) ಮೂರ್ತಿಯನ್ನು ಯಾವುದೋ ಮನೆಯಲ್ಲಿ ಇಟ್ಟಿದ್ದರು. ೧೪ ಅಥವಾ ೧೫ನೇ ಶತಮಾನದ ಮೂರ್ತಿಯನ್ನು ಈಗಲೂ ಕಾಲಭೈರವ ದೇವಳದ ಬಿಂದುಮಾಧವನ ಹೆಸರಿನ ಒಂದು ಮಂದಿರವು ಮಸೀದಿಯ ಪಕ್ಕ ಹೆಸರಿಲ್ಲದ ಒಂದು ಕಟ್ಟಡದಲ್ಲಿದೆ.
ಬಕರಿಯಾ ಕುಂಡ್
ಉತ್ತರ ಬನಾರಸ್ನಲ್ಲಿರುವ ವಿಷ್ಣು ದೇವಳ ನಿವೇಶನ ಬಕರಿಯಾ ಕುಂಡ್ ಗುಪ್ತರ ಕಾಲದ್ದು. ಗೋವರ್ಧನಗಿರಿಯನ್ನೆತ್ತಿದ ಕೃಷ್ಣನ ಮಾನವ ಗಾತ್ರಕ್ಕಿಂತಲೂ ದೊಡ್ಡದಾದ ಮೂರ್ತಿ ಅಲ್ಲಿದೆ. ಆ ದೇವಳದ ಮೇಲೂ ದಾಳಿ ನಡೆದಿದೆ. ದೇವಳ ಹಿಂದೆ ದೊಡ್ಡದಿದ್ದು, ಅದು ಕೃಷ್ಣಪಂಥದ ಸ್ಥಳ ಆಗಿದ್ದಿರಬೇಕು. ದೇವಳದ ತಳಪಾಯದ ಮೇಲೆ ಕಟ್ಟಿಸಿದ ಮಸೀದಿ ಈಗಲೂ ಇದೆ; ಸುತ್ತ ಮುಸ್ಲಿಂ ಗೋರಿಗಳಿವೆ.
ಬಹಳ ಹಿಂದೆ ಕಾಶಿಯ ಮುಕ್ತಿಮಂಟಪದಲ್ಲಿ ಒಂದು ವಿಷ್ಣುಮೂರ್ತಿಯನ್ನು ಸ್ಥಾಪಿಸಲಾಗಿತ್ತು. ೧೬೬೯ರಲ್ಲಿ ಅದಕ್ಕೆ ತುಂಬ ಪಾವಿತ್ರ್ಯವಿತ್ತು. ಮುಕ್ತಿಮಂಟಪವನ್ನು ನಾಶಮಾಡಿದ ಅನಂತರ ಪೂಜೆ ನಿಂತಿತು. ವಿಷ್ಣುವಿನ ಮೂರ್ತಿಯನ್ನು ಬಳಸಿಕೊಂಡಿದ್ದು, ಮುಂದೆ ವಿಶ್ವೇಶ್ವರ ದೇಗುಲ ಸಂಕೀರ್ಣದ ಎಡಮೂಲೆಯಲ್ಲಿ ಇಡಲಾಯಿತು.
ಭೈರವ ಪೀಠಗಳು
ಕಾಶಿಯ ಭೈರವ ಪೀಠಗಳಿಗೂ ಮಹತ್ತ್ವವಿದ್ದು, ಅಲ್ಲಿನ ಅಸಿತಾಂಗ ಭೈರವ ಮೂಲತಃ ಇದ್ದದ್ದು ಕೃತ್ತಿವಾಸೇಶ್ವರನ ಬಳಿಯಲ್ಲಿ. ಮುಂದೆ ಅದನ್ನು ವೃದ್ಧಕಾಲ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಕಾಶಿಯ ಕಪಾಲಭೈರವ ಮಂದಿರವು ನಾಗಕುಂವಾ ಭಾಗದಲ್ಲಿದೆ. ಸಂಹಾರ ಭೈರವ ಮೊದಲು ರಾಜಘಾಟ್ನ ಖರ್ವ ವಿನಾಯಕನ ಪೂರ್ವಕ್ಕಿದ್ದರೆ, ಮುಂದೆ ಪಂಟಾನ್ ದರ್ವಾಜಾ ಬಳಿ ಪ್ರತಿಷ್ಠಾಪಿಸಿದರು.
ದೇವೀ ಮಂದಿರಗಳು
ಕಾಶೀ ಖಂಡದಲ್ಲಿ ಹಲವು ದೇವೀ ಮಂದಿರಗಳ ಬಗ್ಗೆ ಹೇಳಿದ್ದರೂ ಕೂಡ ಈಗ ಅವು ಇಲ್ಲ. ೧೬ನೇ ಶತಮಾನದವರೆಗೆ ಭವಾನಿಗೌರಿಯನ್ನು ಅನ್ನಪೂರ್ಣೆಯಾಗಿ ಪೂಜಿಸುತ್ತಿದ್ದರು. ಈಗ ಅನ್ನಪೂರ್ಣೆ ಇರುವ ದೇವಳದ ದೇವತೆಯನ್ನು ಭುವನೇಶ್ವರಿ ಎಂದು ಪೂಜಿಸುತ್ತಾರೆ. ೧೪೯೬ರಲ್ಲಿ ಲೋದಿ ಎರಡೂ ದೇವಾಲಯಗಳನ್ನು ಒಡೆದು ಹಾಕಿದ. ಭವಾನಿಗೌರಿ ದೇವಳವು ಈಗಲೂ ಅವಶೇಷವಾಗಿಯೇ ಮುಂದುವರಿದಿದೆ. ಭುವನೇಶ್ವರಿ ದೇವಳದ ನಿವೇಶನದಲ್ಲಿ ಅನ್ನಪೂರ್ಣೆಯ ಹೆಸರಿನಲ್ಲಿ ಹೊಸ ಮಂದಿರವನ್ನು ಕಟ್ಟಿಸಲಾಗಿದೆ. ಭವಾನಿಗೌರಿ ಮೂರ್ತಿಯನ್ನು ಮುಂದೆ ಒಂದು ಸಣ್ಣ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಹೊಸ ಅನ್ನಪೂರ್ಣೆಯನ್ನು ಭವಾನಿಗೌರಿಯ ರೀತಿಯಲ್ಲಿ ಪೂಜಿಸಲು ಆರಂಭಿಸಿದರು. ಇತರ ಹಲವು ದೇವೀ ಮಂದಿರಗಳಿದ್ದು, ಅವುಗಳನ್ನು ಸ್ಥಳಾಂತರಿಸಿದ್ದು, ಕಿರಿದು ಮಾಡಿದರು ಅಥವಾ ಇಲ್ಲವಾಗಿಸಿದರು. ೧೮ನೇ ಶತಮಾನದಲ್ಲಿ ಪುನರ್ನಿರ್ಮಾಣಗೊಂಡ ಬನಾರಸ್ ನಾಶಗೊಂಡ ಬನಾರಸ್ಗಿಂತ ಪೂರ್ತಿ ಭಿನ್ನವಾಗಿತ್ತು; ಅಲ್ಲಿನ ಪವಿತ್ರ ಭೂಗೋಳವು ಗುರುತಿಸಲಾಗದಷ್ಟು ಬದಲಾಗಿತ್ತು.
ಕೆಲವು ಸಮಯದ ಹಿಂದೆ ೧೮ನೇ ಶತಮಾನದ ತಾಯಿ ಅನ್ನಪೂರ್ಣೆಯ ಒಂದು ಮೂರ್ತಿ ಕೆನಡಾದಲ್ಲಿ ಪತ್ತೆಯಾಯಿತು. ೧೦೮ ವರ್ಷಗಳ ಹಿಂದೆ ಕಾಶಿಯಿಂದ ಕಳುವಾಗಿದ್ದ ಅದನ್ನು ಕೆನಡಾದ ಒಂದು ವಸ್ತುಸಂಗ್ರಹಾಲಯಕ್ಕೆ ನೀಡಲಾಗಿತ್ತು. ಭಾರತ ಸರ್ಕಾರದ ಪ್ರಯತ್ನದ ಫಲವಾಗಿ ಅದು ನಮಗೆ ಮತ್ತೆ ಸಿಗುವಂತಾಯಿತು.
* * *
ಮೋದಿ ಐತಿಹಾಸಿಕ ಕಾರ್ಯ
ಕಾಶಿಯನ್ನು ತಮ್ಮ ಲೋಕಸಭಾ ಸ್ಥಾನವಾಗಿ ಆರಿಸಿಕೊಂಡ ಪ್ರಧಾನಿ ನರೇಂದ್ರಮೋದಿ ಅವರು ಈ ಪವಿತ್ರಕ್ಷೇತ್ರಕ್ಕೆ ಸಂಬಂಧಿಸಿ ಐತಿಹಾಸಿಕವಾದ ಕಾರ್ಯವನ್ನೇ ಮಾಡಿದ್ದಾರೆ. ಇದು ಅಕ್ಷರಶಃ ಐತಿಹಾಸಿಕವೇ ಸರಿ. ಈ ಪ್ರಾಚೀನ ನಗರ, ಅದರಲ್ಲೂ ವಿಶ್ವನಾಥ ದೇವಾಲಯದ ಪರಿಸರ ಅವ್ಯವಸ್ಥೆಯ ಗೂಡಾಗಿದ್ದು, ನೈರ್ಮಲ್ಯದ ಅಭಾವ, ಗಿಜಿಗುಟ್ಟುವ ಮುರುಕಲು ಕಟ್ಟಡಗಳು ಮುಂತಾದವು ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರನ್ನು ಬಾಧಿಸುತ್ತಿದ್ದವು. ಏಕಕಾಲದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವ ಸಾಧನೆಯನ್ನು ಮೋದಿ ಮಾಡಿದ್ದಾರೆ. ಅಹಿಲ್ಯಾಬಾಯಿ ಹೋಳ್ಕರ್, ಮಹಾರಾಜಾ ರಣಜಿತ್ಸಿಂಗ್ ಮುಂತಾದವರು ಅಲ್ಲಿ ಮಾಡಿದ ಕಾರ್ಯದೊಂದಿಗೆ ಮೋದಿ ಅವರ ಕೊಡುಗೆಯನ್ನು ಹೋಲಿಸಲಾಗುತ್ತಿದೆ. ಇದು ಓರ್ವ ಪ್ರಧಾನಿಯಾಗಿ ಅವರು ಮಾಡಿದ್ದಾದರೂ ಅವರು ವೈಯಕ್ತಿಕವಾಗಿ ನೀಡಿದ ಗಮನ ಮತ್ತು ಜಟಿಲ ಸಮಸ್ಯೆಗಳನ್ನು ಬಿಡಿಸುವಲ್ಲಿ ಅವರು ತೋರಿದ ಚಾಕಚಕ್ಯತೆಯು ದೇಶದ ಗಮನ ಸೆಳೆದಿದೆ. ವಿಶ್ವನಾಥ ದೇವಳದ ಮುಂಭಾಗದ ಜಾಗ ಕೇವಲ ೩೦೦೦ ಚದರ ಅಡಿಗೆ ಬಂದಿದ್ದು, ವಿಶ್ವನಾಥನಿಗೆ ಗಂಗೆ ಕಾಣಿಸುತ್ತಿರಲಿಲ್ಲ. ಹೊಸ ಕಾರಿಡಾರ್ ೫ ಲಕ್ಷ ಚದರ ಅಡಿ ಜಾಗವನ್ನು ಹೊಂದಿದ್ದು, ದೇವಳ ಮತ್ತು ನದಿ ಮುಖಾಮುಖಿಯಾಗಿವೆ. ವಿಶ್ವನಾಥ ಎಲ್ಲೋ, ಎದುರಿಗೆ ಇರಬೇಕಾದ ನಂದಿ ಎಲ್ಲೋ – ಎಂಬಂತಾಗಿತ್ತು. ಈಗ ೩೫೨ ವರ್ಷಗಳ ಬಳಿಕ ನಂದಿವಿಗ್ರಹ ಮತ್ತು ಗ್ಯಾನವಾಪಿಗಳು ದೇವಳ ಸಂಕೀರ್ಣದ ಭಾಗವಾಗಿವೆ. ಇನ್ನೂ ತುಂಬಾ ಕೆಲಸಗಳಾಗಬೇಕು; ಗಂಗಾಮಾತೆಯ ಶುದ್ಧೀಕರಣ ಪೂರ್ಣವಾಗಬೇಕು ಎಂಬುದೆಲ್ಲ ಪ್ರಧಾನಿಯವರ ಮುಂದಿವೆ.
* * *
ಒಟ್ಟಿನಲ್ಲಿ ಕಾಶಿಯ ಶತಮಾನಗಳ ಏಳುಬೀಳುಗಳನ್ನು ಗಮನಿಸುವಾಗ ಹಿಂದುಗಳ ಕೆಲವು ಗುಣವಿಶೇಷಗಳು ಕೂಡ ಗಮನಕ್ಕೆ ಬರುತ್ತವೆ. ತಮ್ಮ ಶ್ರದ್ಧಾಕೇಂದ್ರಗಳ ಮೇಲೆ ಅನ್ಯಮತೀಯರಿಂದ ನಿರಂತರವಾಗಿ ಆಘಾತಕಾರಿ ದಾಳಿಗಳು ನಡೆದರೂ ಕೂಡ ದೇಶದಲ್ಲಿ ಅವರ ಧಾರ್ಮಿಕ ನಂಬಿಕೆಯ ಮೇಲೆ ಅದರಿಂದ ಪರಿಣಾಮವಾಗಲಿಲ್ಲ. ಎದುರಾದ ತೊಡಕನ್ನು ಅವರು ಸಹಜವೆಂಬಂತೆ ಸ್ವೀಕರಿಸಿ ಅದನ್ನು ಬದಿಗೆ ಸರಿಸಿ ಮುಂದುವರಿಯುತ್ತಾರೆ; ಎಂದಿಗೂ ಮುಂದಿನ ಪಯಣವನ್ನು ಕೈಬಿಡುವುದಿಲ್ಲ. ಇನ್ನು ವಾರಾಣಸಿಯ ಶಾಶ್ವತ ಕಥೆಯೆಂದರೆ ಅದು ವಿನಾಶವನ್ನು ಮೀರಿದ್ದು. ಸಾಮೂಹಿಕ ಪ್ರಯತ್ನ ಮತ್ತು ಇಡೀ ಜಗತ್ತಿನ ಹಿಂದುಗಳ ಶ್ರದ್ಧೆಗೆ ಸೇರಿದ್ದು. ವಿಶ್ವನಾಥನಂತೆ ಬೇರೆ ಯಾವುದೇ ದೇವಳ ಈ ಬಗೆಯ ಸಾಮೂಹಿಕ ಏಕತೆ, ಶ್ರದ್ಧೆಗಳಿಗೆ ಪಾತ್ರವಾಗಿರುವುದು ದುರ್ಲಭ. ಈ ರೀತಿಯಲ್ಲಿ ಕಾಶಿ ಹಿಂದುಗಳ ಶ್ರದ್ಧೆ ಮತ್ತು ಸಂಸ್ಕೃತಿಯ ರೂಪಕವಾಗಿ ನಿಂತಿದೆ.
ಹಿಂದುಗಳು ಕಾಶಿಯಲ್ಲಿ ಶ್ರದ್ಧೆಯ ಬೆಳಕು ನಿರಂತರವಾಗಿ ಉರಿಯುವಂತೆ ನೋಡಿಕೊಂಡಿದ್ದಾರೆ. ಕಾಶಿ ವಿಶ್ವನಾಥ ದೇವಳವು ನಮಗೆ ಹಿಂದೂ ಪುನರುಜ್ಜೀವನವನ್ನು ನಮ್ಮದೇ ರೀತಿಯಲ್ಲಿ ಆಚರಿಸಲು ಶಕ್ತಿ ನೀಡಿದೆ. ವಾರಾಣಸಿಯು ಕೇವಲ ಒಂದು ನಗರವಲ್ಲ; ಅದು ಹಿಂದೂ ಆಧ್ಯಾತ್ಮಿಕ ಕಾಲಾತೀತ ಸಂಕೇತವಾಗಿದೆ.
ಕಾಶಿ: ಸತ್ಯಂ ಶಿವಂ ಸುಂದರಂ
ಅಹಂ ಕಾಶೀಂ ಗಮಿಷ್ಯಾಮಿ ತತ್ರೈವ ನಿವಸಾಮ್ಯಹಂ |
ಇತಿ ಬ್ರುವಾಣಃ ಸತತಂ ಕಾಶೀವಾಸಫಲಂ ಲಭೇತ್ ||
(ನಾನು ಕಾಶಿಗೆ ಹೋಗುತ್ತೇನೆ; ಮತ್ತು ಅಲ್ಲಿಯೇ ವಾಸಿಸುತ್ತೇನೆ ಎಂದು ಯಾವಾಗಲೂ ಹೇಳುವವನು ಕಾಶೀವಾಸದ ಫಲವನ್ನು ಹೊಂದುತ್ತಾನೆ.)
– ಎಂದು ಸಂಸ್ಕೃತದ ಒಂದು ಶ್ಲೋಕವು ಹೇಳುತ್ತದೆ. ಶ್ರದ್ಧಾಳು ಜನರು ಇದನ್ನು ಪ್ರತಿದಿನ ಬೆಳಗಿನ ಹೊತ್ತು ಹೇಳಿಕೊಳ್ಳುತ್ತಾರೆ. ಬಹುಶಃ ಇಂತಹ ಒಂದು ಶ್ರದ್ಧೆ ಕೇವಲ ಕಾಶಿಗೆ ಮೀಸಲಾದುದಿರಬೇಕು. ಗಂಗಾನದಿಯ ತಟದಲ್ಲಿರುವ ಈ ಶಿವನ ಕ್ಷೇತ್ರಕ್ಕೆ ಅಂತಹ ಒಂದು ಮನ್ನಣೆ ಸಂದಿದೆ. ದೇಶದಾದ್ಯಂತದಿಂದ ಅಲ್ಲಿಗೆ ಯಾತ್ರೆ ಹೋಗುವಂತೆಯೇ ಬಹಳಷ್ಟು ವೃದ್ಧರು ವೃದ್ಧೆಯರೂ ಕೂಡ ತಮ್ಮ ಕೊನೆಯ ದಿನಗಳನ್ನು ಅಲ್ಲೇ ಕಳೆಯುವ ಪ್ರಯತ್ನ ಮಾಡುವುದನ್ನು ಈಗಲೂ ಕಾಣಬಹುದು. ಈ ಪವಿತ್ರ ನಗರದ ಪ್ರಾಚೀನತೆ ೬೦೦೦ ವರ್ಷಗಳ ಹಿಂದಿನವರೆಗೂ ಹೋಗುತ್ತದೆ ಮತ್ತು ಜಗತ್ತಿನಲ್ಲಿ ನಿರಂತರವಾಗಿ ಜನವಸತಿಯಿದ್ದ ಅತ್ಯಂತ ಪ್ರಾಚೀನ ನಗರಗಳಲ್ಲಿ ಕಾಶಿ ಅಥವಾ ವಾರಾಣಸಿಗೆ ಮೊದಲ ಸ್ಥಾನವಿದೆಯೆಂದು ಅಭಿಪ್ರಾಯಪಡಲಾಗಿದೆ. ಇದು ಪರಂಪರೆಗಿಂತ, ದಂತಕಥೆಗಳಿಗಿಂತಲೂ ಹಳೆಯ ನಗರ ಎಂದು ಹೇಳಿದವನು ಮಾರ್ಕ್ ಟ್ವೈನ್.
ಕಾಶಿಗೆ ಹಲವು ಸಾವಿರ ವರ್ಷಗಳ ಇತಿಹಾಸವಿದೆ
ಋಗ್ವೇದ, ಸ್ಕಾಂದಪುರಾಣ, ರಾಮಾಯಣ, ಮಹಾಭಾರತ ಮುಂತಾದ ಬಹಳಷ್ಟು ಪ್ರಾಚೀನ ಗ್ರಂಥಗಳಲ್ಲಿ ಕಾಶಿಯ ಉಲ್ಲೇಖಗಳಿವೆ. ಬಹಳಷ್ಟು ಲೇಖಕರು, ಸಂಶೋಧಕರು, ಇತಿಹಾಸಕಾರರು ವಾರಾಣಸಿ ನಗರ ಮತ್ತು ಕಾಶಿ ವಿಶ್ವನಾಥ ಧಾಮ್ ಬಗ್ಗೆ ಕೆಲಸ ಮಾಡಿದ್ದಾರೆ. ಬನಾರಸ್ ಹಿಂದೂ ಯೂನಿವರ್ಸಿಟಿಯ (ಬಿಎಚ್ಯು) ಪ್ರಾಧ್ಯಾಪಕ-ಸಂಶೋಧಕ ಪ್ರೊ|| ರಾಣಾ ಪಿ.ಬಿ. ಸಿಂಗ್ ಅವರು ಕಾಶಿ ವಿಶ್ವನಾಥ ದೇವಾಲಯದ ಸಾವಿರ ವರ್ಷಗಳ ಇತಿಹಾಸವನ್ನು ದಾಖಲಿಸಿದ್ದು, ಇದು ಕ್ರಿ.ಪೂ. ೯ನೇ ಶತಮಾನದ ಕಾಲದ ದೇವಳ ಎಂದಿದ್ದಾರೆ. ಕಾಶಿಯ ರಾಜಘಾಟ್ ಬಳಿ ಉತ್ಖನನ ನಡೆಸಿದಾಗ ಸಂಶೋಧಕರಿಗೆ ಸಿಕ್ಕಿದ ಅವಿಮುಕ್ತೇಶ್ವರ ಮುದ್ರೆಗಳು ಆ ಕಾಲದವು. ಕನಿಷ್ಠ ಕ್ರಿ.ಪೂ. ೧೦೦೦ ವರ್ಷದಿಂದ ಇಲ್ಲಿ ನಿರಂತರವಾಗಿ ಜನವಸತಿ ಇತ್ತು ಎಂದವರು ಹೇಳಿದ್ದಾರೆ.
ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗ್ ಮೆಚ್ಚುಗೆ
ಜೈನರ ತೀರ್ಥಂಕರ ಪಾರ್ಶ್ವನಾಥ ಕ್ರಿ.ಪೂ. ೮ನೇ ಶತಮಾನದಲ್ಲಿ ಕಾಶಿಯಲ್ಲಿ ಜನಿಸಿದ. ಕ್ರಿ.ಪೂ. ೭-೮ನೇ ಶತಮಾನದ ಬುದ್ಧನ ಜಾತಕ ಕಥೆಗಳು ಇದು ಹಿಂದೆ ಬೌದ್ಧರ ಸ್ಥಳವಾಗಿತ್ತು ಎಂದು ಹೇಳುತ್ತವೆ. ಗುಪ್ತರ ಕಾಲದಲ್ಲಿ (ಕ್ರಿ.ಶ. ೩೨೦-೫೫) ವಾರಾಣಸಿ ನಗರದಲ್ಲಿ ತುಂಬ ಬದಲಾವಣೆಗಳಾದವು; ಆಗಲೇ ವಿಶ್ವನಾಥ ದೇವಾಲಯವನ್ನು ಕಟ್ಟಿಸಲಾಗಿತ್ತು. ಅದಲ್ಲದೆ ಅಲ್ಲಿ ನೂರಾರು ಪ್ರಮುಖ ದೇವಾಲಯಗಳಿದ್ದವು. ಕ್ರಿ.ಶ. ೬೩೫ರಲ್ಲಿ ಭಾರತಕ್ಕೆ ಬಂದ ಚೀನೀ ಯಾತ್ರಿಕ ಹ್ಯೂಯೆನ್ತ್ಸಾಂಗ್ ಕಾಶಿ ವಿಶ್ವನಾಥ ಧಾಮ್ ಬಗ್ಗೆ ದಾಖಲಿಸಿದ್ದಾನೆ: ನಗರದಲ್ಲಿ ತುಂಬ ಜನರಿದ್ದಾರೆ; ವಿದ್ಯೆಗೂ ಈ ನಗರ ಮುಖ್ಯ; ಅಲ್ಲಿ ಸುಮಾರು ಇಪ್ಪತ್ತು ಪ್ರಮುಖ ದೇವಾಲಯಗಳಿವೆ ಎಂದಾತ ಮೆಚ್ಚಿ ನುಡಿದಿದ್ದಾನೆ.
ಸ್ಕಾಂದಪುರಾಣದ ಕಾಶಿ
ಸ್ಕಾಂದಪುರಾಣದ ಕಾಶೀಖಂಡವು ಮುಖ್ಯವಾಗಿ ಕಾಶಿಯ ಬಗೆಗೇ ಇದೆ. ವ್ಯಕ್ತಿಗಳು ನಿರ್ವಾಣ ಪಡೆಯುವ ಸ್ಥಳವಾದ್ದರಿಂದ ಕಾಶಿ ಎನ್ನುವ ಹೆಸರು ಎನ್ನುವ ವಿವರಣೆ ಬರುತ್ತದೆ. ಶಿವನು ಈ ನಗರವನ್ನು ಬಿಡುವುದೇ ಇಲ್ಲ ಎಂಬುದಕ್ಕಾಗಿ ಇದು ಅವಿಮುಕ್ತೇಶ್ವರ ಕ್ಷೇತ್ರ. ಇಲ್ಲಿನ ಗ್ಯಾನವಾಪಿ (ಜ್ಞಾನವಾಪಿ) ಬಗ್ಗೆ ಸ್ಕಂದನು ಅಗಸ್ತ್ಯರಿಗೆ ಹೇಳುತ್ತಾನೆ. ಸನಾತನಿಗಳಿಗೆ ಅವೆಲ್ಲ ಮುಖ್ಯವಲ್ಲ. ಸತ್ಯಯುಗದಲ್ಲಿ ಈಶಾನ (ಶಿವ) ಅಲೆಯುತ್ತಿದ್ದ. ಮಹಾಸ್ಮಶಾನವಾದ ಕಾಶಿಗೆ ಬಂದಾಗ ಅವನಿಗೆ ಸ್ವಯಂಭೂ ಶಿವಲಿಂಗದ ದರ್ಶನವಾಯಿತು; ತಾನೇ ನಿರ್ಮಿಸಿದ ಈ ಬಾವಿಯಲ್ಲಿ ಶಿವನು ಜ್ಞಾನದ ರೂಪದಲ್ಲಿರುತ್ತಾನೆ ಎನ್ನುವ ಸ್ಕಂದ ಜ್ಞಾನವಾಪಿ ಶಿವನದೇ ರೂಪವಾಗಿದ್ದು, ಇದಕ್ಕೆ ಸಮಾನವಾದ ಬೇರೆ ತೀರ್ಥವಿಲ್ಲ ಎಂದು ವಿವರಿಸಿದ್ದಾನೆ.
ಇದು ವಿಶ್ವೇಶ್ವರನ ಊರು
ಹಿಂದೆ ವಿಶ್ವನಾಥ ದೇವಳದಲ್ಲಿದ್ದ ಶಿವಲಿಂಗವೇ ಈಗ ಗ್ಯಾನವಾಪಿಯ ತಳದಲ್ಲಿದೆ ಎನ್ನುವ ಒಂದು ನಂಬಿಕೆ ಇದೆ. ಔರಂಗಜೇಬನ ಸೇನೆ ಬಂದಾಗ ದೇವಳದ ಅರ್ಚಕ ಶಿವಲಿಂಗದೊಡನೆ ಬಾವಿಗೆ ಹಾರಿದ ಎನ್ನುತ್ತಾರೆ.
ಇದು ವಿಶ್ವೇಶ್ವರನ ಊರು. ಜ್ಞಾನವಾಪಿ ಮತ್ತು ತಾಯಿ ಗಂಗೆಯಿಂದ ಶುದ್ಧವಾದದ್ದು. ಮಹಾಸ್ಮಶಾನ ಮತ್ತು ತಾಯಿ ಅನ್ನಪೂರ್ಣೆಯ ಊರು. ಸತ್ಯಹರಿಶ್ಚಂದ್ರ ಇಲ್ಲಿ ಸ್ಮಶಾನದ ಕಾವಲು ನಡೆಸಿದ ಎಂಬುದೊಂದು ಐತಿಹ್ಯ. ಬೌದ್ಧ, ಜೈನ, ಸಿಕ್ಖರಿಗೂ ಇದು ಪವಿತ್ರ ನಗರ. ಇಲ್ಲಿನ ಸಾರನಾಥದಲ್ಲಿ ಬುದ್ಧನು ಉತ್ಸಾಹದಿಂದ ತನ್ನ ಮೊದಲ ಪ್ರವಚನವನ್ನು ಮಾಡಿದ. ಗುರುನಾನಕ್ ಇಲ್ಲಿಗೆ ಎರಡು ಬಾರಿ ಭೇಟಿ ನೀಡಿ ಶಿಕ್ಷಣ, ಅಧ್ಯಾತ್ಮಗಳ ಬಗ್ಗೆ ಚರ್ಚಿಸಿದ್ದರು. ಇದು ಆಯುರ್ವೇದ, ಯೋಗ, ಜ್ಯೌತಿಷಗಳ ಕೇಂದ್ರ ಕೂಡ ಹೌದು.
ಕಾಶಿ: ಇದು ಬೆಳಕಿನ ನಗರ
ಪ್ರಾಚೀನ ಕಾಲದ ಏಳು ಮೋಕ್ಷದಾಯಿನಿ ಪವಿತ್ರನಗರಗಳಲ್ಲಿ ಕಾಶಿಯೂ ಒಂದು. (ಅಯೋಧ್ಯೆ, ಮಥುರೆ, ಹರಿದ್ವಾರ, ಕಾಂಚಿ, ಉಜ್ಜಯಿನಿ, ಪುರಿ-ದ್ವಾರಕಾ ಇತರ ಆರು). ವಿದ್ವಾಂಸರ ಪ್ರಕಾರ ಕಾಶಿ ಅನಂತರದ ಹೆಸರು. ವಾರಣಾವತಿ ಹಿಂದಿನ ಹೆಸರು. ಅದು ಮುಂದೆ ವಾರಾಣಸಿ ಆಯಿತು; ಬ್ರಿಟಿಷರು ಅದನ್ನು ಬನಾರಸ್ ಮಾಡಿದರು. ಈ ಪ್ರಾಚೀನ ನಗರವು ವಾರಣ ಮತ್ತು ಅಸಿ ನದಿಗಳ ನಡುವಣ ಜಾಗವನ್ನು ಹೊಂದಿದೆ. ವಾರಣವು ಪ್ರಯಾಗ (ಅಲಹಾಬಾದ್)ದ ಉತ್ತರದಲ್ಲಿ ಹುಟ್ಟಿ ಸುಮಾರು ೧೬೦ ಕಿ.ಮೀ. ಹರಿದು ಇಲ್ಲಿಗೆ ಬರುತ್ತದೆ; ಅಸಿ ಕೇವಲ ತೋಡು ಅಥವಾ ಹಳ್ಳದ ಗಾತ್ರದ್ದು. ವಾರಣವು ಕಾಶಿಯ ಉತ್ತರದಲ್ಲಿ ಗಂಗೆಗೆ ಸೇರಿದರೆ ಅಸಿ ದಕ್ಷಿಣದಲ್ಲಿ ಸೇರುತ್ತದೆ. ಈ ಸಂಗಮಗಳ ನಡುವಣ ಜಾಗದ ಉದ್ದ ಸುಮಾರು ೬ ಕಿ.ಮೀ. ಇಲ್ಲಿ ಸುತ್ತು ಹಾಕುವುದನ್ನು ಪಂಚಕೋಸೀ ಯಾತ್ರೆ ಎನ್ನುತ್ತಾರೆ. ಇನ್ನು ಕಾಶಿ ಪದವು ಕಶ್ ಶಬ್ದದಿಂದ ಬಂದಿದೆ. ಕಶ್ ಅಂದರೆ ಬೆಳಕು; ಇದು ಬೆಳಕಿನ ನಗರ. ರಾತ್ರಿ ಹೊತ್ತು ಗಂಗಾನದಿಯಲ್ಲಿ ದೋಣಿಯಲ್ಲಿ ಸಾಗುವಾಗ ಇದು ಬೆಳಕಿನ ಪುಂಜವಾಗಿ ಕಾಣಿಸುತ್ತದೆ.
ಕಾಶಿಯ ಸೌಂದರ್ಯ
ಗಂಗಾನದಿಯ ಉತ್ತರ ದಂಡೆಯಲ್ಲಿರುವ ಕಾಶಿ ನದಿಯ ಹೊರಬಾಗುವಿಕೆಯ ಬದಿಯಲ್ಲಿದೆ. ಇದರಿಂದ ನಗರಕ್ಕೆ ಅರ್ಧಚಂದ್ರನಂತಹ ಜಾಗ ಸಿಕ್ಕಿದೆ. ಎದುರಿನ ನದಿ ದಂಡೆಗಿಂತ ಇದು ಎತ್ತರದಲ್ಲಿದ್ದು ಪ್ರವಾಹ ಸಾಮಾನ್ಯವಾಗಿ ಬಾಧಿಸುವುದಿಲ್ಲ. ನಗರದ ನದೀಮುಖವನ್ನು ಗಂಗೆಯಿಂದ ಅಥವಾ ಕೆಳಗಿನಿಂದ ಕಂಡರೆ ಸಾಲು ಸಾಲು ಘಾಟ್ಗಳು ಕಾಣಿಸುತ್ತವೆ. ಕಾಶಿಯ ಸೌಂದರ್ಯದಲ್ಲಿ ಅವುಗಳದ್ದು ಸಿಂಹಪಾಲು.
ಕಲಾವಿದರು, ಮುಖ್ಯವಾಗಿ ಹಲವು ಬ್ರಿಟಿಷ್ ಚಿತ್ರಕಲಾವಿದರು ಕಾಶಿಯ ಸೌಂದರ್ಯಕ್ಕೆ ಪೂರ್ತಿ ಮನಸೋತು ಕಲಾಕೃತಿಗಳನ್ನು ರಚಿಸಿದ್ದಾರೆ. ನದಿಯಲ್ಲಿ ದೋಣಿಯಲ್ಲಿ ಸಂಚರಿಸುತ್ತಿದ್ದ ಅವರಿಗೆ ಇದು ಅದ್ಭುತ ದೃಶ್ಯವಾಗಿತ್ತು. ಇದು ಜಗತ್ತಿನ ಅತ್ಯಂತ ಪ್ರೀತಿಪಾತ್ರ ದಿಗಂತ (ಸ್ಕೈಲೈನ್)ಗಳಲ್ಲೊಂದು; ಯಾವನೇ ಪೈಂಟರ್ ಇದನ್ನು ತಪ್ಪಿಸಿಕೊಳ್ಳುವುದಿಲ್ಲ ಎಂದು ಓರ್ವ ಚಿತ್ರಕಾರ ಉದ್ಗರಿಸಿದ್ದ.