ಅತಸ್ಕರಗ್ರಾಹ್ಯಮರಾಜಕವಶಂವದಂ |
ಅದಾಯಾದವಿಭಾಗಾರ್ಹಂ ಧನಮಾರ್ಜಯ ಸುಸ್ಥಿರಮ್ ||
“ಕಳ್ಳರು ಕದ್ದುಕೊಂಡುಹೋಗಲಾಗದ, ರಾಜಭಟರು ವಶಪಡಿಸಿಕೊಳ್ಳಲಾಗದ, ದಾಯಾದಿಗಳು ಪಾಲು ಕೇಳಲಾಗದ ಸುಸ್ಥಿರವಾದ ಶ್ರೇಷ್ಠ ಧನವನ್ನು ಸಂಪಾದಿಸು.”
ವ್ಯಾವಹಾರಿಕ ಜಗತ್ತಿನಲ್ಲಿ ವ್ಯಕ್ತಿಯು ಗಳಿಸಬಹುದಾದ ಧನವೆಲ್ಲ ವ್ಯಯವಾಗುತ್ತದೆ ಇಲ್ಲವೆ ಬೇರೆಯವರ ಕೈ ಸೇರುತ್ತದೆ. ಆದರೆ ಪಾರಮಾರ್ಥಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡ ನೆಮ್ಮದಿ, ಪ್ರಶಾಂತಿ, ಭಗವದನುಗ್ರಹ – ಇವನ್ನು ಯಾರೂ ನಮ್ಮಿಂದ ಕಸಿದುಕೊಳ್ಳಲಾರರು. ಆದ್ದರಿಂದ ವಿವೇಕಿಯ ಲಕ್ಷ್ಯವು ಅಂತಹ ಸ್ಥಿರವಾದ ಐಶ್ವರ್ಯದ ಗಳಿಕೆಯ ಕಡೆಗೆ ಇರಬೇಕು.
ಅನುಪಮ ಭಗವದ್ಭಕ್ತರಾದ ಸಂತ ತುಕಾರಾಮರ ಬಾಹ್ಯ ಬದುಕು ತೀರಾ ಬಡತನದ್ದಿತ್ತು. ಆದರೆ ಸದಾ ದೈವಸಾನ್ನಿಧ್ಯದಲ್ಲಿದ್ದ ಅವರು ಲೌಕಿಕ ಬಡತನದಿಂದ ಎಂದೂ ವಿಚಲಿತರಾದವರಲ್ಲ. ಒಮ್ಮೆ ಅವರ ಸ್ಥಿತಿಯ ಬಗೆಗೆ ಕೇಳಿ ಮನನೊಂದ ಆ ಊರಿನ ರಾಜನು ಅವರ ಬದುಕಿಗೆ ನೆರವಾಗಲೆಂದು ಧನಕನಕರಾಶಿಯನ್ನು ಭಟರ ಮೂಲಕ ಸಂತರಿಗೆ ಕಳಿಸಿದ. ಸಂತರು “ಇವನ್ನೆಲ್ಲ ಕೂಡಲೆ ದಯವಿಟ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿ ಬಡವರಿಗೆ ವಿತರಣೆ ಮಾಡಿರಿ” ಎಂದರು. ರಾಜಭಟರು “ಆದರೆ ತಾವು ತೀರಾ ಬಡತನದಲ್ಲಿದ್ದು ಬವಣೆ ಪಡುತ್ತಿದ್ದೀರಲ್ಲ? ಪ್ರಭುಗಳು ಅವರಾಗಿ ಕಳುಹಿಸಿರುವುದನ್ನು ತಾವು ಸ್ವೀಕರಿಸಬಹುದಲ್ಲ?” ಎಂದರು. ಅದಕ್ಕೆ ಸಂತರು ಉತ್ತರಿಸಿದರು: “ನಾವು ಬಡವರೆಂದು ನೀವೇಕೆ ಭಾವಿಸುತ್ತಿದ್ದೀರಿ? ನಿಮ್ಮ ಪ್ರಭುಗಳಿಗೂ ಯಾರ ಕೃಪೆಯಿಂದ ಸಂಪತ್ತು ದೊರೆಯುತ್ತದೆಯೋ ಆ ಮಹಾಮಹಿಮನು ನಮ್ಮ ಯೋಗಕ್ಷೇಮವನ್ನು ವಹಿಸಿಕೊಂಡು ನಮ್ಮನ್ನು ಪಾಲಿಸುತ್ತಿದ್ದಾನೆ. ಹೀಗಿರುವಾಗ ನಾವು ಬಡವರು ಹೇಗಾದೇವು? ನೀವು ತಂದಿರುವ ಸಂಪತ್ತನ್ನು ನಾವೇಕೆ ಸ್ವೀಕರಿಸಬೇಕು? ಭಗವಂತನ ಆಸರೆಗಿಂತ ದೊಡ್ಡ ಐಶ್ವರ್ಯ ಯಾವುದಿದೆ? ಆದ್ದರಿಂದ ನಮಗೆ ಹೋಲಿಸಬಹುದಾದ ಶ್ರೀಮಂತರು ಅನ್ಯರಿಲ್ಲ.”