‘ಮನಿ ಲಾಂಡರಿಂಗ್’ ಕಾಯ್ದೆ ಅಮಲುಗೊಂಡಾಗಿನಿಂದ (೨೦೦೨-೦೩) ಈಚೆಗೆ ಈವರೆಗೆ ೫೪೨೨ರಷ್ಟು ಆರ್ಥಿಕ ಪ್ರಕರಣಗಳು ದಾಖಲೆಗೊಂಡಿದ್ದು ೨೮೩೩ ‘ದಾಳಿ’ಗಳು ನಡೆದು ೪೦೧ ಮಂದಿ ಅಪರಾಧಿಗಳು ಬಂಧಿತರಾಗಿದ್ದಾರೆ. ಸರ್ಕಾರವು ಸುಮಾರು ರೂ. ೫೮,೦೦೦ ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಅದರಂತೆ ೩೦,೦೦೦ ಪ್ರಕರಣಗಳು ತನಿಖೆಗೊಳಪಟ್ಟು ೧೫,೦೦೦ ಪ್ರಕರಣಗಳು ನಿರ್ಣಯಗೊಂಡಿವೆ.
ಆರ್ಥಿಕ ಅಪರಾಧ ಪರಿಶೋಧನೆಗಾಗಿ ನಿಯುಕ್ತಿಗೊಂಡಿರುವ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟಿನ (‘ಜಾರಿ ನಿರ್ದೇಶನಾಲಯ’) ಕ್ರಮಗಳನ್ನು ವಿಪಕ್ಷಗಳು ‘ರಾಜಕೀಯ ಪ್ರೇರಿತ’ ಎಂದು ಟೀಕಿಸುವುದು ಎಷ್ಟು ಮಾಮೂಲು ವರ್ತನೆಯಾಗಿಬಿಟ್ಟಿದೆಯೆಂದರೆ ಈಗ ಅದು ಉಪೇಕ್ಷೆಗಷ್ಟೆ ಅರ್ಹವೆಂಬ ಭಾವನೆ ಮೂಡಿದೆ. ಆ ಟೀಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದರ ಕ್ರಮಗಳು ರಾಜಕೀಯಪ್ರೇರಿತವೆಂದು ವಿಪಕ್ಷಗಳು ಆಕ್ಷೇಪಿಸುವುದು ಒಂದು ಕಟ್ಟಳೆಯೇ ಆಗಿಹೋಗಿದೆ – ‘ತೋಳ ಬಂತು’ ಎಂಬ ಕಥೆಯಂತೆ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ‘ಸಿ.ಬಿ.ಐ.’ ಎಂದರೆ ‘ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್’ ಎಂಬ ವ್ಯಂಗ್ಯೋಕ್ತಿ ಪ್ರಸಿದ್ಧವಾಗಿತ್ತು. ಕಾಂಗ್ರೆಸ್ ಹಯಾಮಿನಲ್ಲಿ ಸಿ.ಬಿ.ಐ. ಪಡೆದುಕೊಂಡಿದ್ದ ಅಪಖ್ಯಾತಿ ಲಜ್ಜಾಸ್ಪದವಾಗಿಬಿಟ್ಟಿತ್ತು. ಅದು ‘ಪಂಜರದೊಳಗಿನ ಗಿಳಿಯಂತೆ ಆಗಿದೆ’ – ಎಂದು ಸರ್ವೋಚ್ಚ ನ್ಯಾಯಾಲಯವೇ ಹಾಸ್ಯ ಮಾಡಿತ್ತು. ಅಧಿಕಾರಪಾರ್ಟಿಯ ಹಿಡಿತದಿಂದ ಸಿ.ಬಿ.ಐ. ಅನ್ನು ಮುಕ್ತಗೊಳಿಸಬೇಕೆಂದೂ ನ್ಯಾಯಾಲಯ ಸೂಚಿಸಿತ್ತು. ಭ್ರಷ್ಟಾಚಾರವಿರೋಧಿ ಆಂದೋಲನದಲ್ಲಿ ಅಣ್ಣಾ ಹಜಾರೆಯವರೂ ಸಿ.ಬಿ.ಐ. ಅನ್ನು ಸರ್ಕಾರದ ನಿಯಂತ್ರಣದಿಂದ ತಪ್ಪಿಸಿ ಲೋಕಾಯುಕ್ತರಿಗೆ ಅಧೀನಗೊಳಿಸಬೇಕೆಂದು ಆಗ್ರಹಿಸಿದ್ದರು.
ಜಾರಿ ನಿರ್ದೇಶನಾಲಯದ (ಇ.ಡಿ.) ಹೆಸರು ಈಚೀಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ. ಆದರೆ ವಾಸ್ತವವಾಗಿ ಇ.ಡಿ.ಯು ಸಿ.ಬಿ.ಐ.ಗಿಂತಲೂ ಹಿಂದೆಯೇ ರಚಿತಗೊಂಡಿತ್ತು. ಸ್ವಾತಂತ್ರ್ಯಪ್ರಾಪ್ತಿಯಾದ ನಾಲ್ಕು ವರ್ಷದೊಳಗೇ (೧೯೫೦) ಆರ್ಥಿಕ ಅಪರಾಧಗಳ ಶೋಧನೆಗಾಗಿ ಅರ್ಥಖಾತೆಯ ಅಂಗವಾಗಿ ‘ಎನ್ಫೋರ್ಸ್ಮೆಂಟ್ ಯೂನಿಟ್’ ಘಟಿತವಾಗಿತ್ತು.
ಅಲ್ಲಿಂದಾಚೆಗೆ ಅಲ್ಪಕಾಲದಲ್ಲಿ ಅದನ್ನು ‘ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟ್’ ಎಂದು ಹೆಸರಿಸಿ ಅದಕ್ಕೆ ಸ್ವತಂತ್ರ ಸ್ಥಾನಮಾನ ನೀಡಲಾಗಿತ್ತು. ವಿದೇಶೀ ಹಣದ ಅಕ್ರಮ ಚಲಾವಣೆ, ಮಾದಕದ್ರವ್ಯ ವಹಿವಾಟು ಮೊದಲಾದವು ಆಗ ವಿಶೇಷ ಗಮನಸೆಳೆದಿದ್ದವು. ೧೯೯೧ರ ಉದಾರೀಕರಣ ಧೋರಣೆಗಳ ಫಲಿತವಾಗಿ ಹಣದ ಚಲಾವಣೆ ಅಧಿಕಗೊಂಡು ಅದಕ್ಕನುಗುಣವಾಗಿ ಆರ್ಥಿಕ ಅಪರಾಧಗಳು ಬಹುಪಟ್ಟು ಬೆಳೆದವು. ಸರ್ಕಾರದ ಲೆಕ್ಕದ ಕಣ್ಣು ತಪ್ಪಿಸಿ ವಿದೇಶೀ ಹಣ ಬಂದು ಹೂಡಿಕೆಯಾಗುವುದು, ಬ್ಯಾಂಕುಗಳ ವ್ಯವಹಾರದಲ್ಲಿ ಶಿಥಿಲತೆ – ಇವು ಹೆಚ್ಚಿದಂತೆ ಹೆಚ್ಚು ಬಿಗಿಯಾದ ಕಾನೂನುಗಳ ಆವಶ್ಯಕತೆ ಬೀಳತೊಡಗಿತು. ಫಾರೀನ್ ಎಕ್ಸ್ಚೇಂಜ್ ಮ್ಯಾನೇಜ್ಮೆಂಟ್ ಕಾಯ್ದೆ (೧೯೯೯), ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಕಾಯ್ದೆ (೨೦೦೨), ಫ್ಯೂಜಿಟಿವ್ ಎಕನಾಮಿಕ್ ಅಫೆಂರ್ಸ್ ಕಾಯ್ದೆ (೨೦೧೮) – ಹೀಗೆ ಕಾನೂನಿನ ಕಕ್ಷೆಯು ವ್ಯಾಪಕವೂ ನಿಶಿತವೂ ಆದಂತೆ ಎನ್ಫೋರ್ಸ್ಮೆಂಟ್ ಡೈರೆಕ್ಟೊರೇಟಿನ ಹೊಣೆಗಾರಿಕೆ ಹೆಚ್ಚಿದೆ. ಇ.ಡಿ.ಯ ಹೆಚ್ಚಿನ ಸಕ್ರಿಯತೆ ಈಚೆಗೆ ಜನರ ಗಮನಕ್ಕೆ ಬರತೊಡಗಿರುವುದು ಶಾಸನಸಂಹಿತೆಯ ಹೆಚ್ಚಿನ ದಾರ್ಢ್ಯವಂತಿಕೆಯಿಂದಲಷ್ಟೆ. ಕಪ್ಪುಹಣವನ್ನು ಸಭ್ಯಗೊಳಿಸಲು ಯತ್ನಿಸುವ (ಮನಿ ಲಾಂಡರಿಂಗ್) ಪ್ರಕರಣಗಳಲ್ಲಿ ಜಾಮೀನು ನಿರಾಕರಣೆ, ಬಂಧನಕ್ಕೆ ಅವಕಾಶ ಮೊದಲಾದ ಅಧಿಕಾರಗಳು ಈಗ ಪ್ರಾಪ್ತವಾಗಿವೆ. ಇಂತಹ ಅಪರಾಧಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳನ್ನು ಏರ್ಪಡಿಸಿ ನಿರ್ಣಯವನ್ನು ತ್ವರಿತಗೊಳಿಸಲು ಅವಕಾಶವಾಗಿದೆ. ಕಾಯ್ದೆಗಳನ್ನು ಹೆಚ್ಚು ಬಿಗಿಗೊಳಿಸುವುದರ ಆವಶ್ಯಕತೆ ಹಿಂದೆಯೂ ಅರುಣ್ ಜೇಟ್ಲಿ ಮೊದಲಾದವರಿಂದ ಪ್ರಸ್ತಾವಿತವಾಗಿದ್ದ ಸಂಸತ್ಕಲಾಪಗಳನ್ನು ಈಚೆಗೆ ಸರ್ವೋಚ್ಚ ನ್ಯಾಯಾಲಯ ಉಲ್ಲೇಖಿಸಿತ್ತು.
‘ಮನಿ ಲಾಂಡರಿಂಗ್’ ಕಾಯ್ದೆ ಅಮಲುಗೊಂಡಾಗಿನಿಂದ (೨೦೦೨-೦೩) ಈಚೆಗೆ ಈವರೆಗೆ ೫೪೨೨ರಷ್ಟು ಆರ್ಥಿಕ ಪ್ರಕರಣಗಳು ದಾಖಲೆಗೊಂಡಿದ್ದು ೨೮೩೩ ‘ದಾಳಿ’ಗಳು ನಡೆದು ೪೦೧ ಮಂದಿ ಅಪರಾಧಿಗಳು ಬಂಧಿತರಾಗಿದ್ದಾರೆ. ಸರ್ಕಾರವು ಸುಮಾರು ರೂ. ೫೮,೦೦೦ ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಅದರಂತೆ ೩೦,೦೦೦ ಪ್ರಕರಣಗಳು ತನಿಖೆಗೊಳಪಟ್ಟು ೧೫,೦೦೦ ಪ್ರಕರಣಗಳು ನಿರ್ಣಯಗೊಂಡಿವೆ.
ವಿದೇಶಸ್ಥಿತ ಧನಮೂಲಗಳನ್ನು ಆಧರಿಸಿದ ಅಕ್ರಮಗಳು, ಬ್ಯಾಂಕಿಂಗ್ ವ್ಯವಸ್ಥೆಯ ದುರುಪಯೋಗ, ಸಾರ್ವಜನಿಕ ಹಣದ ನೀತಿಬಾಹಿರ ಬಳಕೆ ಹಾಗೂ ಪ್ರಶ್ನಾರ್ಹ ಉದ್ಯಮಸಂಸ್ಥೆಗಳಲ್ಲಿ ಹೂಡಿಕೆ – ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮಗಳನ್ನು ಇನ್ನೂ ಹೆಚ್ಚು ಬಿಗಿಗೊಳಿಸಬೇಕಾದುದರ ಅನಿವರ್ಯತೆ ದಿನದಿಂದ ದಿನಕ್ಕೆ ಹೆಚ್ಚು ಸ್ಫುಟಗೊಳ್ಳುತ್ತಿದೆ.
ವ್ಯಾವಹಾರಿಕ ಸೌಮ್ಯತೆಯ ಕಾರಣದಿಂದಲೋ ಕೂದಲೆಳೆ ತಾಂತ್ರಿಕ ಕಾರಣಗಳಿಂದಲೋ ವರ್ಷಾನುಗಟ್ಟಲೆ ದೀರ್ಘಸೂತ್ರತೆ ಮೆರೆದಿರುವುದು ನ್ಯಾಯಾಂಗದಲ್ಲಿಯ ಜನತೆಯ ವಿಶ್ವಾಸ ವೇಕುಂಠಿತಗೊಳ್ಳಲು ಕಾರಣವಾಗಿದೆ. ಈ ಪ್ರಕರಣಗಳಲ್ಲೆಲ್ಲ ಪ್ರಮುಖ ಪಾತ್ರಧಾರಿಗಳಾಗಿರುವವರು ರಾಜಕಾರಣದಲ್ಲಿ ಪ್ರಭಾವಿಗಳಾದವರು. ಆಂಧ್ರದ ಈಗಿನ ಮುಖ್ಯಮಂತ್ರಿ ಜಗನ್ಮೋಹನ್ರೆಡ್ಡಿ ಅಕ್ರಮ ಆಸ್ತಿಯ ಒಡೆಯರಾಗಿದ್ದು ಹಿಂದೆ ಬಂಧಿತರಾಗಿದ್ದುದು ಇ.ಡಿ. ಕಾರ್ಯಾಚರಣೆಯ ಫಲವಾಗಿಯೇ. ಲಾಲೂಪ್ರಸಾದ್ ಯಾದವ್, ಅಖಿಲೇಶ್ ಯಾದವ್, ಮಾಯಾವತಿ ಮೊದಲಾದವರ ವಿರುದ್ಧ ಎಷ್ಟು ಆರೋಪಗಳಿವೆಯೋ ಲೆಕ್ಕವಿಲ್ಲ. ಸೋನಿಯಾಗಾಂಧಿ, ರಾಹುಲ್ಗಾಂಧಿ ಮೊದಲಾದವರನ್ನೊಳಗೊಂಡ ಸಾವಿರಾರು ಕೋಟಿ ದುರ್ವ್ಯವಹಾರದ ‘ನ್ಯಾಶನಲ್ ಹೆರಾಲ್ಡ್’ ಪ್ರಕರಣವಾಗಲಿ ಪಿ. ಚಿದಂಬರಂ ಕುಮ್ಮಕ್ಕಿನಿಂದ ಅವರ ಮಗ ಕಾರ್ತಿ ನಡೆಸಿಕೊಂಡು ಬಂದ ಮನಿ ಲಾಂಡರಿಂಗ್ ಪ್ರಕರಣವಾಗಲಿ ಎಂದಿಗಾದರೂ ದಂಡನೆಗೊಳಗಾದಾವೆಂಬ ಭರವಸೆಯನ್ನೇ ಜನತೆ ಕಳೆದುಕೊಳ್ಳುವಂತಾಗಿರುವುದು ರಾಜ್ಯಾಂಗ ವ್ಯವಸ್ಥೆಗೇ ಕಲಂಕಪ್ರಾಯವಾಗಿದೆ.
೨೦೦೨ರ ‘ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್’ ಶಾಸನವನ್ನು ಪ್ರಶ್ನಿಸಿದ್ದ ಹತ್ತಾರು ಮೊಕದ್ದಮೆಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷದ ನಡುಭಾಗದಲ್ಲಿ ಆ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿಯಿತು. ನಮ್ಮ ದೇಶದಲ್ಲಿ ಕಾನೂನುಗಳಿಗೆ ಕೊರತೆಯಿಲ್ಲ. ತೀವ್ರ ಆವಶ್ಯಕತೆಯೆಂದರೆ ಶಾಸನಗಳ ಅನುಷ್ಠಾನ ಬಿಗಿಗೊಳ್ಳಬೇಕಾಗಿರುವುದು.